Tag: ಉಡುಪಿ

  • ನವೆಂಬರ್‍ನಲ್ಲಿ ಉಡುಪಿಯಲ್ಲಿ ರಾಮಮಂದಿರಕ್ಕೆ ಮುಹೂರ್ತ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

    ನವೆಂಬರ್‍ನಲ್ಲಿ ಉಡುಪಿಯಲ್ಲಿ ರಾಮಮಂದಿರಕ್ಕೆ ಮುಹೂರ್ತ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

    ಲಕ್ನೋ: ರಾಮಮಂದಿರ ನಿರ್ಮಾಣ ಸಂಬಂಧವಾಗಿ ಉಡುಪಿಯಲ್ಲಿ ಸಾಧು ಸಂತರು ಮುಹೂರ್ತ ನಿಗದಿ ಮಾಡಲು ಮುಂದಾಗಿದ್ದಾರೆ.

    ನವೆಂಬರ್‍ನಲ್ಲಿ ಉಡುಪಿಯಲ್ಲಿ ಸಾಧು ಸಂತರ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ರಾಮ ಮಂದಿರ ನಿರ್ಮಾಣದ ದಿನಾಂಕವನ್ನು ನಿರ್ಧಾರ ಮಾಡಲಾಗುವುದು ಎಂದು ಉತ್ತರ ಪ್ರದೇಶದ ಉನೌನ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಉಡುಪಿ ಸಮ್ಮೇಳನದಲ್ಲಿ ದೇಶದ ನಾನಾ ಭಾಗದ ಸಾಧು ಸಂತರು ಭಾಗಿಯಾಗಿದ್ದಾರೆ. ಈ ವೇಳೆ ರಾಮಮಂದಿರ ನಿರ್ಮಾಣ ಸಂಬಂಧ ದೀರ್ಘ ಚರ್ಚೆ ನಡೆಯಲಿದೆ ಎಂದು ಹೇಳಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಹೆಚ್ಚು ವಿಳಂಬ ಮಾಡದೇ ದೇಶದ ಸಂತರು ಒಮ್ಮತಾಭಿಪ್ರಾಯ ಹೊಂದಿದ್ದಾರೆ ಎಂದು ಅವರು ತಿಳಿಸಿದರು.

  • ಕೃಷ್ಣಮಠದಲ್ಲಿ ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ: ಮುತಾಲಿಕ್

    ಕೃಷ್ಣಮಠದಲ್ಲಿ ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ: ಮುತಾಲಿಕ್

    ಉಡುಪಿ: ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಶ್ರೀಕೃಷ್ಣಮಠದಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳನ್ನು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಇಂದು ಭೇಟಿ ಮಾಡಿದರು.

    ಇದೇ ವೇಳೆ ಮಾತನಾಡಿದ ಮುತಾಲಿಕ್, ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ. ಈ ಬಗ್ಗೆ ಪೇಜಾವರ ಸ್ವಾಮೀಜಿ ಜೊತೆ ಚರ್ಚಿಸಲು ಉಡುಪಿಗೆ ಬಂದಿದ್ದೇನೆ. ಗೋ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಆದ್ರೆ ಗೋ ಭಕ್ಷಕರಿಗೆ ಮಠದ ಆವರಣದಲ್ಲಿ ನಮಾಜ್ ಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಹೇಳಿದರು.

    ಪೇಜಾವರ ಸ್ವಾಮೀಜಿಯವರು ಈ ಬಗ್ಗೆ ಸಮರ್ಥನೆ ಮಾಡುತ್ತಿದ್ದಾರೆ. ಸ್ವಾಮೀಜಿ ಸಮರ್ಥನೆಯಿಂದ ನಮಗೆ ತೃಪ್ತಿಯಾಗಿಲ್ಲ. ಈ ಬಗ್ಗೆ ಮುಂದೇನು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ. ಸಂಘಟನೆಯ ಒಳಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿ ಮಠದಿಂದ ಮುತಾಲಿಕ್ ತೆರಳಿದರು.

    ಇದೇ ವಿಚಾರವಾಗಿ ಪೇಜಾವರಶ್ರೀ ಪ್ರತಿಕ್ರಿಯೆ ನೀಡಿದ್ದು, ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ಇದು ನನ್ನ ತತ್ವ. 1955ರಿಂದ ಸ್ನೇಹ ಸೌಹಾರ್ಧಕ್ಕೆ ಪ್ರಯತ್ನಿಸುತ್ತಾ ಬಂದಿದ್ದೇನೆ. ಹಿಂದೂ ಧರ್ಮಕ್ಕೆ ಯಾವುದೇ ಹಾನಿ ಮಾಡಿಲ್ಲ. ಇಫ್ತಾರ್ ಕೂಟದಿಂದ ಹಿಂದೂಗಳು ಉದಾರಿಗಳು ಎಂಬ ಸಂದೇಶ ಹೋಗುತ್ತೆ. ಕೃಷ್ಣಮಠದ ಒಳಗೆ ನಮಾಜು ಮಾಡಿಲ್ಲ. ಸಾರ್ವಜನಿಕ ಭೋಜನ ಶಾಲೆಯಲ್ಲಿ ನಮಾಜು ನಡೆದಿದೆ. ಮಧ್ವಾಚಾರ್ಯರ ಕಾಲದಿಂದ ಮುಸ್ಲಿಮರ ಜೊತೆ ಉತ್ತಮ ಭಾಂದವ್ಯವಿದೆ. ಉಡುಪಿ ಚಲೋ ಸಂದರ್ಭದಲ್ಲಿ ಮುಸ್ಲಿಮರು ಮಠಕ್ಕೆ ಸಹಕಾರ ನೀಡಿದ್ದಾರೆ ಅಂದ್ರು.

    ಜನರ ಮನಸ್ಸು ಕದಡಿಸುವ ಕೆಲಸ ಯಾರೂ ಮಾಡಬೇಡಿ. ನನ್ನದು ಸ್ವತಂತ್ರ ವ್ಯಕ್ತಿತ್ವ. ಹಿಂದೂ ಧರ್ಮ ಏನು ಎಂಬುದು ಚೆನ್ನಾಗಿ ನನಗೆ ಗೊತ್ತು. ಇದೊಂದು ಸಹಜ ಕಾರ್ಯಕ್ರಮ. ಇದನ್ನು ದೊಡ್ಡ ವಿಷಯ ಮಾಡಬೇಡಿ ಅಂತ ಹೇಳಿದ್ರು.

  • ಸಿಎಂ ಸಿದ್ದರಾಮಯ್ಯ ಓತ್ಲಾ ರೈತ, ಮೀರಾ ಕುಮಾರ್‍ಗೆ ನಮ್ಮ ಬೆಂಬಲ- ಉಡುಪಿಯಲ್ಲಿ ಎಚ್‍ಡಿಕೆ

    ಸಿಎಂ ಸಿದ್ದರಾಮಯ್ಯ ಓತ್ಲಾ ರೈತ, ಮೀರಾ ಕುಮಾರ್‍ಗೆ ನಮ್ಮ ಬೆಂಬಲ- ಉಡುಪಿಯಲ್ಲಿ ಎಚ್‍ಡಿಕೆ

    ಉಡುಪಿ: ರೈತರ ಬಗ್ಗೆ ಮಾತನಾಡೋ ನೈತಿಕತೆ ಕುಮಾರಸ್ವಾಮಿಗೆ ಇಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಉಡುಪಿಯಲ್ಲಿ ಎಚ್‍ಡಿಕೆ ತಿರುಗೇಟು ನೀಡಿದ್ದಾರೆ. ಸಿಎಂ ಅವರನ್ನು ಓತ್ಲಾ ರೈತ ಅಂತ ಲೇವಡಿ ಮಾಡಿದ್ದಾರೆ. ಸಾಲ ಮನ್ನಾದ ಕಥೆ ಒಂದು ತಿಂಗಳೊಳಗೆ ಬಯಲಾಗಲಿದೆ ಎಂದಿದ್ದಾರೆ.

    ಉಡುಪಿ ಶ್ರೀಕೃಷ್ಣಮಠಕ್ಕೆ ಭಾನುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಕುಟುಂಬ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಪರ್ಯಾಯ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿದ ಕುಮಾರಸ್ವಾಮಿ ಸ್ವಾಮೀಜಿಯನ್ನು ಗೌರವಿಸಿದರು. ಇದೇ ಸಂದರ್ಭ ಕೃಷ್ಣಮಠದ ಕಡೆಯಿಂದ ಎಚ್‍ಡಿಕೆ ಕುಟುಂಬವನ್ನು ಗೌರವಿಸಲಾಯ್ತು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಎಚ್‍ಡಿಕೆ ಸಿದ್ದರಾಮಯ್ಯ ಓತ್ಲಾ ರೈತ ಅಂತ ಜರಿದರು.

    ನಾವು ನಿಜವಾದ ರೈತರು, ರೈತರ ಮಕ್ಕಳು. ರಾಜಕೀಯಕ್ಕೆ ಬರುವವರೆಗೂ ಬೇಸಾಯ ಮಾಡುತ್ತಿದ್ದೆವು. ತಿಪ್ಪೆ ಗುಂಡಿಯಿಂದ ಗೊಬ್ಬರ ಎತ್ತಿದ್ದೇನೆ. 50 ಸಾವಿರ ರೂಪಾಯಿ ಸಾಲ ಮನ್ನಾದ ಕಥೆ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತೆ ಎಂದರು.

    ರಾಷ್ಟ್ರಪತಿಗಳು ಕೃಷ್ಣಮಠಕ್ಕೆ ಬಂದಾಗ ಸಿಎಂ ಬರಬೇಕಿತ್ತು. ಸಿಎಂ ಬಾರದಿರುವುದರಿಂದ ಕೃಷ್ಣಮಠಕ್ಕೆ, ಸ್ವಾಮೀಜಿಗಳಿಗೆ ನಷ್ಟವಿಲ್ಲ. ನಷ್ಟ ಆಗಿರೋದು ಸಿಎಂ ಸಿದ್ದರಾಮಯ್ಯಗೆ. ಅವರ ಇಂತಹ ಉದ್ಧಟತನದಿಂದಲೇ ರಾಜ್ಯ ಈ ಪರಿಸ್ಥಿತಿಯಲ್ಲಿದೆ. ಈ ಬಾರಿಯೂ ಮಳೆಯಾಗದಿರುವುದಕ್ಕೂ ಇದೇ ಕಾರಣ ಎಂದು ಸಿಎಂರನ್ನು ಕೆಣಕಿದರು.

    ಗುಲಾಂ ನಬಿ ಆಜಾದ್ ಫೋನ್ ಮಾಡಿದ್ದರು. ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್‍ಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದು, ಮೀರಾರನ್ನು ಬೆಂಬಲಿಸುವುದಾಗಿ ಹೇಳಿದರು. ಕುಮಾರಸ್ವಾಮಿ ಕರಾವಳಿ ದೇಗುಲಗಳ ದರ್ಶನ ನಡೆಸುತ್ತಿದ್ದು ಪತ್ನಿ ಅನಿತಾಕುಮಾರಸ್ವಾಮಿ, ಪುತ್ರ ನಿಖಿಲ್ ಜೊತೆಗಿದ್ದರು.

  • ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    – ಮುಸ್ಲಿಮರಿಗೆ ಇಫ್ತಾರ್ ಕೂಟ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಸದಾ ಶ್ರೀಕೃಷ್ಣನ ಪೂಜೆ-ಭಜನೆ ನಡೆಯುವ ಉಡುಪಿ ಮಠದಲ್ಲಿ ಶನಿವಾರ ರಂಜಾನ್ ಹಬ್ಬದ ಕಾರ್ಯಕ್ರಮ ನಡೆಯಿತು. ಒಂದು ತಿಂಗಳು ಉಪವಾಸ ಮಾಡಿದ್ದ ಮುಸ್ಲಿಮರು ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳಿಂದ ಕರ್ಜೂರ ಪಡೆದು ತಿಂಗಳ ಉಪವಾಸಕ್ಕೆ ತೆರೆ ಎಳೆದರು.

    ಉಡುಪಿ ಶ್ರೀಕೃಷ್ಣ ಮಠದಲ್ಲಿ 800 ವರ್ಷಗಳಿಂದ ನಿರಂತರ ಕೃಷ್ಣನ ಪೂಜೆ-ಭಜನೆ ಆರಾಧನೆ ನಡೆಯುತ್ತಾನೆ ಬಂದಿದೆ. ಆದ್ರೆ ಇಂದು ಕೃಷ್ಣನ ಪೂಜೆಯ ಜೊತೆ ಅಲ್ಲಾಹ್‍ನ ಆರಾಧನೆಯೂ ನಡೆಯಿತು. ರಂಜಾನ್ ತಿಂಗಳ ಉಪವಾಸ ಮುಗಿಸಿದ ಮುಸ್ಲಿಮರು ಕೃಷ್ಣಮಠದ ಅನ್ನಬ್ರಹ್ಮ ಛತ್ರದಲ್ಲಿ ಕೊನೆಯ ನಮಾಜ್ ಮಾಡಿ ಉಪವಾಸ ಅಂತ್ಯ ಮಾಡಿದರು. ಕೃಷ್ಣ ಮಠದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ಪೇಜಾವರಶ್ರೀ ಆಯೋಜನೆ ಮಾಡಿದ್ದರು.

    ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಹಿಂದೂ- ಮುಸಲ್ಮಾನರು ಸೌಹಾರ್ದವಾಗಿ ಬಾಳಬೇಕು, ಬದುಕಬೇಕು. ಆದ್ರೆ ಇತ್ತೀಚೆಗೆ ಹಿಂಸೆಯ ಮಾರ್ಗದಲ್ಲಿ ಸಮಾಜ ನಡೆಯುತ್ತಿದೆ. ಹೀಗಾಗಿ ಸೌಹಾರ್ದದ ಕಾರ್ಯಕ್ರಮವನ್ನು ಮಠದಲ್ಲಿ ಇಟ್ಟುಕೊಳ್ಳಲಾಗಿದೆ. ಮಂಗಳೂರು- ಕಾಸರಗೋಡು- ಭಟ್ಕಳದಲ್ಲಿ ನಡೆದ ಇಸ್ಲಾಂ ಸಮ್ಮೇಳನಗಳಲ್ಲಿ ಕರೆಸಿ ನನ್ನನ್ನು ಆತ್ಮೀಯತೆಯಿಂದ ನೋಡಿಕೊಂಡಿದ್ದಾರೆ. ಪರ್ಯಾಯ ಸಂದರ್ಭ ಹೊರೆಕಾಣಿಕೆ ನೀಡಿದ್ದರು. ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲು ಬರುತ್ತೇವೆ ಎಂದಾಗ ಅದಕ್ಕೆ ವಿರುದ್ಧ ನಿಂತವರಲ್ಲಿ ಮುಸ್ಲಿಮರೂ ಇದ್ದರು. ಹಿಂದೂಗಳಿಗೆ ಹಿಂಸೆಯಾದಾಗ ಮುಸ್ಲಿಮರು- ಮುಸ್ಲಿಮರಿಗೆ ಸಮಸ್ಯೆಯಾದಾಗ ಹಿಂದೂಗಳು ಸಹಾಯಕ್ಕೆ ಮುಂದಾಗಬೇಕು ಎಂದು ಕರೆ ನಿಡಿದರು. ಭಾರತ ಶಾಂತಿಯ- ಸೌಹಾರ್ದತೆಯ ತಾಣವಾಗಬೇಕು. ಕರಾವಳಿಯಲ್ಲಿ ಶಾಂತಿ ಬೆಳೆಯುವ-ಬೆಳೆಸುವ ಅಗತ್ಯವಿದೆ. ನಮಃ- ನಮಾಜ್ ಒಂದೇ ಎಂದು ಶ್ರೀಗಳು ಹೇಳಿದರು.

    ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉಪವಾಸವಿದ್ದ ಮುಸ್ಲಿಮರಿಗೆ ಕರ್ಜೂರ ನೀಡಿ ಉಪವಾಸ ಬಿಡಿಸಿದರು. ನಂತರ ಸ್ವತಃ ಸ್ವಾಮೀಜಿ ಫಲಾಹಾರವನ್ನ ಬಡಿಸಿದರು. ಅನ್ನಬ್ರಹ್ಮ ಛತ್ರದಲ್ಲಿ ಹಣ್ನು ಹಂಪಲು-ಸಮೋಸ ನೀಡಿ ಉಪವಾಸ ಬಿಡುವ ಕ್ರಮ ನಡೆಯಿತು. ಇದಾಗಿ ಎಲ್ಲಾ ಮುಸ್ಲಿಮರಿಗೆ ಛತ್ರದಲ್ಲೇ ಸಾಮೂಹಿಕ ನಮಾಜ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಛತ್ರದಲ್ಲೇ ಸಾಮೂಹಿಕ ನಮಾಜ್ ಮಾಡಿದ ಮುಸ್ಲಿಂ ಧರ್ಮೀಯರಿಗೆ ಆದೇಶ ಬಂದಿತ್ತು. ಕಾರವಾರ ಜಿಲ್ಲೆಯ ಭಟ್ಕಳದಲ್ಲಿ ಚಂದ್ರ ಕಾಣಿಸಿಕೊಂಡ ಕಾರಣ ನಾಳೆಯೇ ಈದುಲ್ ಫಿತ್ರ್ ಎಂದು ಖಾಜಿಯವರು ಘೋಷಿಸಿದ್ದಾರೆ. ಈ ಎರಡು ಸಂತಸಗಳು ಒಟ್ಟೊಟ್ಟಿಗೆ ಆದವು.

    ಮುಸ್ಲಿಂ ಸಮುದಾಯದ ಮುಖಂಡ ರಹೀಂ ಉಚ್ಚಿಲ ಮಾತನಾಡಿ, ಪೇಜಾವರಶ್ರೀ ಇಡೀ ವಿಶ್ವಕ್ಕೆ ಸ್ವಾಮೀಜಿ, ಇದು ಉಡುಪಿ ಕೃಷ್ಣಮಠದಿಂದ ವಿಶ್ವಕ್ಕೆ ಸಂದೇಶ ರವಾನೆಯಾಗಿದೆ. ಇಂದಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಇಫ್ತಾರ್‍ಗಳಿಗೆ ರಾಜಕೀಯ ಬಣ್ಣ ಬರುತ್ತಿದೆ. ಆದ್ರೆ ಮಠದಲ್ಲಿ ನಡೆದ ಇಫ್ತಾರ್ ವಿಭಿನ್ನ. ಮಾನವ ಜನಾಂಗ ಬೆಸೆಯುವ ಕೆಲಸ ಉಡುಪಿ ಮಠದಲ್ಲಿ ಆಗಿದೆ. ಸ್ವಾಮೀಜಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ದೇಶ ಮೂಲೆ ಮೂಲೆಗೆ ಇಂತಹ ಶಾಂತಿ ಸಂದೇಶ ತಲುಪಬೇಕು. ರಂಜಾನ್ ತಿಂಗಳ ಉಪವಾಸದ ಕೊನೆಯ ಉಪವಾಸವನ್ನು ಮಠದಲ್ಲಿ ಬಿಟ್ಟಿದ್ದೇವೆ ಎಂಬೂದು ದೈವೇಚ್ಛೆ. ಸಮಸ್ತ ಮುಸಲ್ಮಾನ ಸಮುದಾಯದಿಂದ ಪೇಜಾವರ ಮಠಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

    ದಲಿತ ಕೇರಿಗೆ ಭೇಟಿ ಕೊಡುವುದನ್ನು ಆರಂಭಿಸಿದ ಪೇಜಾವರಶ್ರೀಗೆ ತಮ್ಮದೇ ಸಮಾಜದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ರೆ ಹಿರಿಯ ಗುರುಗಳು ಅಂತ ಯಾರೂ ಬಹಿರಂಗವಾಗಿ ಈ ಬಗ್ಗೆ ಚಕಾರ ಎತ್ತಲ್ಲ. ಇದೀಗ ಪೇಜಾವರಶ್ರೀಗಳು ಕೃಷ್ಣಮಠದಲ್ಲೇ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ. ಈ ಬಗ್ಗೆ ಹಿಂದೂ-ಮುಸ್ಲಿಂ ಸಮುದಾಯದಲ್ಲಿ ಏನೆಲ್ಲಾ ಅಭಿಪ್ರಾಯ ಬರುತ್ತೋ,..!? ಪ್ರಗತಿಪರರು ಈ ಬಗ್ಗೆ ಏನೆಂದು ಟೀಕಿಸುತ್ತಾರೋ ಎಂಬ ಕುತೂಹಲವಿದೆ.

     

  • ಉಡುಪಿಯಲ್ಲಿ ರಾಷ್ಟ್ರ ಪಕ್ಷಿಯ ಸಾವು- ಕಾನೂನು ಗೌರವದೊಂದಿಗೆ ಅಂತ್ಯಸಂಸ್ಕಾರ

    ಉಡುಪಿಯಲ್ಲಿ ರಾಷ್ಟ್ರ ಪಕ್ಷಿಯ ಸಾವು- ಕಾನೂನು ಗೌರವದೊಂದಿಗೆ ಅಂತ್ಯಸಂಸ್ಕಾರ

    ಉಡುಪಿ: ನಗರದ ಹೊರವಲಯದಲ್ಲಿರುವ ಮಂಚಿ ಮೂಲ ಸ್ಥಾನದ ಸಮೀಪ ಮನೆ ಕಂಪೌಂಡಿನ ಆವರಣದೊಳಗೆ ಬಿದ್ದುಕೊಂಡಿದ್ದ ರಾಷ್ಟ್ರಪಕ್ಷಿ ನವಿಲನ್ನು ಸಾಮಾಜಿಕ ಕಾರ್ಯಕರ್ತರು ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

    ರಾತ್ರಿ 8 ಗಂಟೆ ಸುಮಾರಿಗೆ ಮಂಚಿ ಸಮೀಪ ಎಮ್.ಎಮ್ ಗೌಸ್ ಅವರ ಮನೆ ಕಂಪೌಂಡಿನ ಆವರಣದೊಳಗೆ ಗಂಡು ನವಿಲು ಬಿದ್ದುಕೊಂಡಿದೆ ಎನ್ನುವ ಮಾಹಿತಿ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ದೊರೆಯಿತು.

    ವಿಶು ಶೆಟ್ಟಿ ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಜೊತೆಗೂಡಿ ವಾಹನದಲ್ಲಿ ಜಾಗರೂಕತೆಯಿಂದ ತಂದು ಚಿಕಿತ್ಸೆಗಾಗಿ ಪಶು ವೈದ್ಯ ಡಾ. ಸಂದೀಪ್ ಶೆಟ್ಟಿ ಅವರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದರು. ಆ ಸಮಯದಲ್ಲಿ ನವಿಲಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ನವಿಲು ಮೃತಪಟ್ಟಿತು. ಅದೇ ದಿನ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಮೃತ ನವಿಲನ್ನು ಅರಣ್ಯರಕ್ಷಕ ಡಿ. ದೇವರಾಜ್ ಪಾಣ ಅವರಿಗೆ ಹಸ್ತಾಂತರಿಸಲಾಯಿತು.

    ಉಡುಪಿ ಅರಣ್ಯ ಇಲಾಖೆಯ ವಠಾರದಲ್ಲಿ ನವಿಲಿನ ಶವ ಪರೀಕ್ಷೆಯನ್ನು ಪಶು ವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ ನೆಡೆಸಿದರು. ನವಿಲಿನ ಯಕೃತ್ (ಲಿವರ್) ಭಾಗ ಘಾಸಿಗೊಂಡಿದ್ದು, ಕೆಲವು ಅಂಗಾಗಗಳಿಂದ ರಕ್ತಸ್ತ್ರಾವಗೊಂಡಿದ್ದವು. ಕೆಲವು ದಿನಗಳಿಂದ ಆಹಾರ ಸೇವನೆ ಮಾಡದೆ ಇರುವುದೇ ನವಿಲಿನ ಸಾವಿಗೆ ಕಾರಣ ಅಂತಾ ಶವಪರೀಕ್ಷೆಯಿಂದ ದೃಢಪಟ್ಟಿದೆ.

    ಶವಪರೀಕ್ಷೆ ಹಾಗೂ ಕಾನೂನು ಪ್ರಕ್ರಿಯೆಗಳು ನಡೆದ ನಂತರ ಆದಿ-ಉಡುಪಿ ಅರಣ್ಯ ಇಲಾಖೆಯ ಆಶ್ರಯದಲ್ಲಿರುವ ಪ್ರಾಣಿಗಳ ಕಳೇಬರ ದಹನ ಭೂಮಿಯಲ್ಲಿ ಅರಣ್ಯವಿಕ್ಷಕ ಸಿಬ್ಬಂದಿಯ ಸಮಕ್ಷಮದಲ್ಲಿ ಕಾನೂನು ಗೌರವದೊಂದಿಗೆ ದಹನ ಮಾಡುವ ಮುಖಾಂತರ ಅಂತ್ಯಸಂಸ್ಕಾರ ನಡೆಸಲಾಯಿತು. ವಿಶು ಶೆಟ್ಟಿ ಮತ್ತು ತಾರಾನಾಥ್ ಮೇಸ್ತರು ನವಿಲಿನ ಕಳೇಬರಕ್ಕೆ ಬಿಳಿ ಬಟ್ಟೆ ಹೊದಿಸಿ, ಹೂಹಾರ ಸಮರ್ಪಿಸಿ ರಾಷ್ಟ್ರಪಕ್ಷಿಗೆ ಅಂತಿಮ ಗೌರವ ಸಲ್ಲಿಸಿದರು.

  • ಉಡುಪಿಯ ಕಡಿಯಾಳಿಯಲ್ಲಿ ಸರಣಿ ಅಪಘಾತ- ಪವಾಡ ಸದೃಶವಾಗಿ ವ್ಯಕ್ತಿ ಪಾರು

    ಉಡುಪಿಯ ಕಡಿಯಾಳಿಯಲ್ಲಿ ಸರಣಿ ಅಪಘಾತ- ಪವಾಡ ಸದೃಶವಾಗಿ ವ್ಯಕ್ತಿ ಪಾರು

    ಉಡುಪಿ: ಜಿಲ್ಲೆಯ ಕಡಿಯಾಳಿಯಲ್ಲಿ ಸರಣಿ ಅಪಘಾತ ನಡೆದಿದೆ. ವೇಗವಾಗಿ ಬಂದ ಇಕೋ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಕಾರು ಒಂದು ಬೈಕ್‍ಗೆ ಡಿಕ್ಕಿಯಾಗಿದೆ.

    ಬೈಕ್ ಹತ್ತಿ ಹೊರಟಿದ್ದ ವ್ಯಕ್ತಿಯ ಮೇಲೆ ಹರಿದು ಬಂದ ಕಾರು ಪಕ್ಕದಲ್ಲೇ ನಿಲ್ಲಿಸಿದ್ದ ಮತ್ತೊಂದು ಕಾರನ್ನು ತಳ್ಳಿ ಬಿಸಾಕಿದೆ. ಏನಾಗುತ್ತಿದೆ ಅಂತ ನೋಡುಷ್ಟರಲ್ಲಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಈ ದೃಶ್ಯ ಪಕ್ಕದಲ್ಲಿದ್ದ ಬಿಲ್ಡಿಂಗಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಣಿಪಾಲ ಕಡೆಯಿಂದ ಇಕೋ ಕಾರು ವೇಗವಾಗಿ ಉಡುಪಿಗೆ ಬರುತ್ತಿತ್ತು. ಕಡಿಯಾಳಿ ಸಮೀಪ ಕಾರಿನ ಮುಂಭಾಗದ ಟಯರ್ ಪಂಕ್ಚರ್ ಆಗಿದೆ. ವೇಗವಾಗಿ ಬಂದ ಕಾರು ಬಲಭಾಗದಲ್ಲಿದ್ದ ಕಾರು ಒಂದೇ ಬಾರಿಗೆ ಎಡಕ್ಕೆ ತಿರುಗಿದೆ. ಚಾಲಕನ ನಿಯಂತ್ರಣ ತಪ್ಪಿ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತ ನಡೆಯುತ್ತಿದ್ದಂತೆ ಕಡಿಯಾಳಿ ಜಂಕ್ಷನ್‍ನಲ್ಲಿ ಸಂಚಾರ ಅಸ್ತವ್ಯಸ್ಥವಾಗಿತ್ತು. ಉಡುಪಿ ನಗರ ಠಾಣಾ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.

    ಘಟನೆಯಿಂದಾಗಿ ಇಕೋ ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಮುಂಭಾಗ ಬೈಕ್ ಹತ್ತಿದ್ದ ವ್ಯಕ್ತಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಕಾರಿನೊಳಗಿದ್ದ ಮಕ್ಕಳು ಕೂಡ ಈ ಅಪಘಾತದಿಂದ ಬೆಚ್ಚಿಬಿದ್ದಿದ್ದಾರೆ ಅಂತಾ ಸ್ಥಳೀಯರು ಹೇಳಿದ್ದಾರೆ.

    https://www.youtube.com/watch?v=ah06_ke1x6Y&feature=youtu.be

  • ಹಡಗಿನಲ್ಲಿ ತೇಲಾಡುತ್ತಾ ಲವ್ವಾಯ್ತು: ಭಾರತದ ಭರತ್ ಜರ್ಮನ್ ಬ್ಯೂಟಿಗೆ ಉಡುಪಿಯಲ್ಲಿ ತಾಳಿ ಕಟ್ಟಿದ್ರು

    ಹಡಗಿನಲ್ಲಿ ತೇಲಾಡುತ್ತಾ ಲವ್ವಾಯ್ತು: ಭಾರತದ ಭರತ್ ಜರ್ಮನ್ ಬ್ಯೂಟಿಗೆ ಉಡುಪಿಯಲ್ಲಿ ತಾಳಿ ಕಟ್ಟಿದ್ರು

    ಉಡುಪಿ: ಆಕೆ ಜರ್ಮನ್ ಮೂಲದ ಸುಂದರಾಂಗ ಚೆಲುವೆ. ಆತ ಪಕ್ಕಾ ಇಂಡಿಯನ್. ಬಣ್ಣದಲ್ಲಿ ವ್ಯತ್ಯಾಸವಿದ್ದರೂ ಇಬ್ಬರ ಮನಸ್ಸುಗಳು ಮಾತ್ರ ಹೊಂದಾಣಿಕೆಯಾಗಿದೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ. ಸಮುದ್ರದಲ್ಲಿ ಒಪ್ಪಿಗೆಯಾಗಿ, ಭೂಮಿ ಮೇಲೆ ನಡೆದಿದೆ.

    ರೆಬೆಕಾ ಮರಿಯಾ ಜರ್ಮನಿ ಮೂಲದ ಸ್ಪುರದ್ರೂಪಿ ಚೆಲುವೆ. ಭರತ್ ಕುಮಾರ್ ಇಂಡಿಯನ್ ಜಂಟಲ್ ಮ್ಯಾನ್. ದೇಶ, ಭಾಷೆ, ಸಂಸ್ಕೃತಿಗೆ ಸಂಬಂಧವೇ ಇಲ್ಲದ ಇವರಿಬ್ಬರು ಉಡುಪಿಯಲ್ಲಿ ಮದುವೆಯಾಗಿದ್ದಾರೆ. ಜರ್ಮನಿಯ ಐಡಾ ಕಂಪನಿ ಬೆಲ್ಲಾ ಹಡಗಿನಲ್ಲಿ ಭರತ್ ಕುಮಾರ್ ಫುಡ್ ಆಂಡ್ ಬೇವರೇಜ್ ವಿಭಾದಲ್ಲಿ ಉದ್ಯೋಗಿ. ರೆಬೆಕಾ ಆರ್ಟ್ ಗ್ಯಾಲರಿಯಲ್ಲಿ ಕೆಲಸ ಮಾಡುವಾಕೆ. ಒಂದೇ ಹಡಗಿನಲ್ಲಿ ತೇಲಾಡುತ್ತಾ, ಓಡಾಡುತ್ತಾ ಇವರಿಬ್ಬರಿಗೂ ಲವ್ವಾಗಿದೆ.

    ಇಬ್ಬರೂ ತಮ್ಮ ತಮ್ಮ ಮನೆಯವರಲ್ಲಿ ವಿಷಯ ತಿಳಿಸಿದ್ದಾರೆ. ನಿಮಗೊಪ್ಪಿಗೆಯಾದರೆ ನಮಗೇನೂ ಸಮಸ್ಯೆಯಿಲ್ಲ ಅಂತ ಹೇಳಿದ ಇಬ್ಬರ ಪೋಷಕರು ಅಕ್ಷತೆ ಕಾಳು ಹಾಕಲು ಒಪ್ಪಿದ್ದಾರೆ. ಇಬ್ಬರ ಮದುವೆ ಭಾರತೀಯ ಸಂಸ್ಕೃತಿಯಂತೆ ನಡೆಯಿತು.

    ನಮ್ಮದು ಮೂರು ವರ್ಷದಿಂದ ಲವ್. ಶಿಪ್‍ನಲ್ಲಿ ಮೀಟಾಗಿದ್ದೆವು. ಡೇಟಿಂಗ್ ಹೋಗಿದ್ದೆವು. ಇಬ್ಬರಿಗೂ ನಾವಿಬ್ಬರು ಒಳ್ಳೆ ಜೋಡಿಯಾಗ್ತೇವೆ ಅಂತ ಅನ್ನಿಸ್ತು. ಇಬ್ಬರಿಗೂ ಎಂತ ಸಮಸ್ಯೆಯೂ ಇರಲಿಲ್ಲ. ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದೆ. ಆರ್ಟ್ ಗ್ಯಾಲರಿಸ್ಟ್ ಆಗಿ ರೆಬೆಕಾ ಕೆಲಸ ಮಾಡುತ್ತಿದ್ದರು. ಪ್ಯಾಕೇಜ್ ಟೂರ್ ತರ ಸಮುದ್ರಯಾನ ಮಾಡುತ್ತೇವೆ. ಇನ್ನೊಂದು ಮೂರ್ನಾಲ್ಕು ವರ್ಷ ಕೆಲಸ ಮಾಡಿ ಭಾರತದಲ್ಲೇ ನೆಲೆಸುವ ಆಲೋಚನೆಯಿದೆ ಎಂದು ಭರತ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.

    ಎರಡು ವರ್ಷದ ಹಿಂದೆ ರೆಬೆಕಾ ಉಡುಪಿಯ ಪಡುಬಿದ್ರೆಯ ಭರತ್ ಮನೆಗೆ ಬಂದಿದ್ದರು. ಆಗ ವಿಷಯ ಪ್ರಸ್ತಾಪವಾಗಿದೆ. ವರ್ಷದ ಹಿಂದೆ ಇಬ್ಬರಿಗೂ ಎಂಗೇಜ್‍ಮೆಂಟ್ ಆಗಿದೆ. ಈಗ ಮದುವೆಯೂ ಮುಗಿದಿದೆ. ಎರಡೂ ಕುಟುಂಬದವರು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಜರ್ಮನಿಯಿಂದ ರೆಬೆಕಾ ಪೋಷಕರು, ಸಂಬಂಧಿಕರು, ಗೆಳೆಯರು ಬಂದಿದ್ದರು. ಭಾರತೀಯ ಸಂಸ್ಕೃತಿಯ ಮದುವೆಯಲ್ಲಿ ಪಾಲ್ಗೊಂಡ ಜರ್ಮನ್ ನೆಂಟರು ಭಾರತೀಯ ಸಂಪ್ರದಾಯದ ಧಿರಿಸು ತೊಟ್ಟಿದ್ದರು. ಇಲ್ಲಿನ ಊಟ, ಹವಾಮಾನದ ಬಗ್ಗೆ ಮೆಚ್ಚಿಕೊಂಡರು.

    ಈ ಸಂದರ್ಭ ವಧುವಿನ ಸಂಬಂಧಿ ಇಯಾಗ ಮಾತನಾಡಿ, 10 ದಿನದ ಹಿಂದೆ ಇಲ್ಲಿಗೆ ಬಂದಾಗ ಜೋರು ಬಿಸಿಲಿತ್ತು. ಈಗ ಜೋರು ಮಳೆ ಬರ್ತಾಯಿದೆ. ಇಲ್ಲಿನ ವೆದರ್ ಗೆ ಅಡ್ಜಸ್ಟ್ ಆಗೋದಕ್ಕೆ ಕಷ್ಟ ಆಗ್ತಾಯಿದೆ. ಊಟ ಕೂಡಾ ಸಿಕ್ಕಾಪಟ್ಟೆ ಸ್ಪೈಸಿ. ಆದ್ರೂ ಇಷ್ಟ ಆಗ್ತಾಯಿದೆ ಎಂದು ಹೇಳಿದರು. ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ಬಹಳ ಖುಷಿಯಾಗಿದೆ. ಇಲ್ಲಿನ ಡೆಕೋರೇಷನ್, ಉಡುಗೆ ತೊಡುಗೆಯೆಲ್ಲಾ ಜರ್ಮನಿ ಮದುವೆಗಿಂತ ಡಿಫರೆಂಟ್ ಇದೆ ಅಂತ ಹೇಳಿದರು.

    ಭಾರತದ ಸಂಸ್ಕೃತಿಯನ್ನು ನೋಡಿ ಇಷ್ಟಪಟ್ಟು ಭಾರತದ ಹುಡುಗನನ್ನು ರೆಬೆಕಾ ಆಯ್ಕೆ ಮಾಡಿದರಂತೆ. ಭರತ್ ಕುಮಾರ್ ರೆಬೆಕಾಗೆ ತುಳು ಭಾಷೆ ಕಲಿಸುತ್ತಿದ್ದಾರೆ. ಮೂರ್ನಾಲ್ಕು ವರ್ಷ ಜರ್ಮನಿಯಲ್ಲೇ ಕೆಲಸ ಮಾಡಿ ಮತ್ತೆ ಭಾರತದಲ್ಲಿ ಸೆಟೆಲ್ ಆಗೋ ಆಲೋಚನೆ ಇಟ್ಟುಕೊಂಡಿದ್ದಾರೆ.

  • ಸಿಎಂ ಗೈರು, ಉಡುಪಿಗೆ ರಾಷ್ಟ್ರಪತಿ ಭೇಟಿ: ಫೋಟೋಗಳಲ್ಲಿ ಐಬಿಯ 40 ಲಕ್ಷ ರೂ. ಸೂಟ್ ರೂಂ ನೋಡಿ

    ಸಿಎಂ ಗೈರು, ಉಡುಪಿಗೆ ರಾಷ್ಟ್ರಪತಿ ಭೇಟಿ: ಫೋಟೋಗಳಲ್ಲಿ ಐಬಿಯ 40 ಲಕ್ಷ ರೂ. ಸೂಟ್ ರೂಂ ನೋಡಿ

    ಉಡುಪಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತನ್ನ ಅಧಿಕಾರಾವಧಿಯ ಕರ್ನಾಟಕದ ಕೊನೆಯ ಪ್ರವಾಸ ಕೈಗೊಂಡರು. ದೇವಾಲಯಗಳ ನಗರಿಗೆ ಭೇಟಿಕೊಡುವ ಮೂಲಕ ತಾನೊಬ್ಬ ಪರಮ ದೈವಭಕ್ತ ಎಂಬೂದನ್ನು ತೋರಿಸಿದರು. ಪೇಜಾವರ ಸ್ವಾಮೀಜಿಗಳ ಐತಿಹಾಸಿಕ ಪಂಚಮ ಪರ್ಯಾಯ ಸಂದರ್ಭ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು. ಆದ್ರೆ ಶಿಷ್ಟಾಚಾರ ಮುರಿದ ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳ ಕಾರ್ಯಕ್ರಮದಿಂದ ದೂರ ಉಳಿದು ತನ್ನ ಸಿದ್ಧಾಂತವನ್ನು ಕಾಪಾಡುವುದರಲ್ಲಿ ಯಶಸ್ವಿಯಾದರು.

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರು ಪ್ರವಾಸ ಮುಗಿಸಿ ಕರಾವಳಿ ಜಿಲ್ಲೆ ಉಡುಪಿಗೆ ಆಗಮಿಸಿದರು. ಆದ್ರೆ ದೇಶದ ಪ್ರಥಮ ಪ್ರಜೆಯ ಜೊತೆ ಸಿಎಂ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಬರಲೇ ಇಲ್ಲ. ಹಲವು ಬಾರಿ ಆಹ್ವಾನ ನೀಡಿದ ಹೊರತಾಗಿಯೂ ಕೃಷ್ಣಮಠಕ್ಕೆ ಬಾರದ ಸಿಎಂ ಅನಿವಾರ್ಯ ಸಂದರ್ಭದಿಂದಲೂ ನುಣುಚಿಕೊಂಡರು. ಸಚಿವರಾದ ಕೆ.ಜೆ ಜಾರ್ಜ್ ಮತ್ತು ಪ್ರಮೋದ್ ಮಧ್ವರಾಜ್ ಅವರಿಗೆ ಜವಾಬ್ದಾರಿವಹಿಸಿಕೊಟ್ಟು ತಾನು ರಾಜಧಾನಿಯಲ್ಲೇ ಉಳಿದುಬಿಟ್ಟರು. ರಾಷ್ಟ್ರಪತಿಗಳ ಉಡುಪಿ ಪ್ರವಾಸದ ವೇಳೆ ಶಿಷ್ಟಾಚಾರದಂತೆ ಸಿಎಂ ಬರುತ್ತಾರೆ ಎಂದೇ ಭಾವಿಸಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದರೂ, ತೆಲೆ ಕೆಡಿಸಿಕೊಳ್ಳದ ಸಿಎಂ, ರಾಷ್ಟ್ರಪತಿಗಳ ಎರಡನೇ ದಿನದ ರಾಜ್ಯಪ್ರವಾಸದಿಂದ ಸಂಪೂರ್ಣ ದೂರ ಉಳಿದರು.

    ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಬಂದ ರಾಷ್ಟ್ರಪತಿಗಳನ್ನು ಆದಿ ಉಡುಪಿ ಹೆಲಿಪ್ಯಾಡ್ ನಲ್ಲಿ ಸಚಿವ ಜಾರ್ಜ್ ಮತ್ತು ಪ್ರಮೋದ್ ಮಧ್ವರಾಜ್ ಬರಮಾಡಿಕೊಂಡರು.

    ಪೇಜಾವರ ಶ್ರೀಗಳ ಐದನೇ ಐತಿಹಾಸಿಕ ಪರ್ಯಾಯ ಅವಧಿಯಲ್ಲಿ ರಾಷ್ಟ್ರದ ಪ್ರಥಮ ಪ್ರಜೆ ಮಠಕ್ಕೆ ಭೇಟಿ ನೀಡಿದರು. ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನವನ್ನು ಕೈಗೊಂಡ ರಾಷ್ಟ್ರಪತಿಗಳಿಗೆ ಅಷ್ಟಮಠಾಧೀಶರು ಸೇರಿ ಸನ್ಮಾನಿಸಿದ್ದು ವಿಶೇಷವಾಗಿತ್ತು.

    ಹಾಜಿ ಅಬ್ದುಲ್ಲಾ ಸಾಹೇಬ್ ತನ್ನ ಜಮೀನನ್ನು ಸರ್ಕಾರಕ್ಕೆ ದಾನ ಮಾಡಿದ್ದರು. ಸರ್ಕಾರ ಬಿಆರ್ ಶೆಟ್ಟರ ಸದುದ್ದೇಶದ ಆಸ್ಪತ್ರೆಗೆಂದು ಜಮೀನು ನೀಡಿದೆ. ಬಡ, ಅಶಕ್ತ ಜನರ ಸೇವೆ ಈ ಆಸ್ಪತ್ರೆಯಲ್ಲಿ ಆಗಲಿ. ಆ ಕೆಲಸವನ್ನು ಶೆಟ್ಟರ ಆಸ್ಪತ್ರೆಯ ವೈದ್ಯರು- ಆಡಳಿತವರ್ಗ- ಸಿಬ್ಬಂದಿಗಳು ಮಾಡುತ್ತಾರೆಂಬ ನಂಬಿಕೆ ನನಗೆ ಇದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

    ಇದೇ ವೇಳೆ ಉಡುಪಿಯ ಬಹುಚರ್ಚಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜಾಂಗಣದಲ್ಲಿ ರಾಷ್ಟ್ರಪತಿಗಳು ಶಂಕುಸ್ಥಾಪನೆ ಮಾಡಿದರು. ದುಬೈನ ಉದ್ಯಮಿ ಬಿ.ಆರ್. ಶೆಟ್ಟಿ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಂಡಿದೆ. ಆದರೆ ಸರ್ಕಾರಿ ಭೂಮಿಯನ್ನು ಖಾಸಗಿ ಕಂಪೆನಿಗೆ ನೀಡಿದ ಬಗ್ಗೆ ಸಾಕಷ್ಟು ಆಕ್ಷೇಪಗಳಿವೆ. ಈ ಬಗ್ಗೆ ಕಾನೂನು ಸಮರವನ್ನೂ ನಡೆಸಲಾಗುತ್ತಿದೆ. ಈ ನಡುವೆ ಇಂದು ರಾಷ್ಟ್ರಪತಿಗಳು ಈ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ.

    ಈ ಸಂದರ್ಭ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತನಾಡಿ, ರೈತರಿಗೆ ಮತ್ತು ವೈದ್ಯರಿಗೆ ಗೌರವ ಕೊಡುವುದನ್ನು ಸಮಾಜ ಕಲಿತುಕೊಳ್ಳಬೇಕು. ವೈದ್ಯರ ಮೇಲಿನ ಹಲ್ಲೆ ನಾಗರೀಕ ಸಮಾಜದ ಲಕ್ಷಣವಲ್ಲ. ತಪ್ಪುಗಳು ಎಲ್ಲರಿಂದ ಆಗುತ್ತದೆ, ಮನುಷ್ಯ ತಪ್ಪು ಮಡದೆ ಮತ್ಯಾರು ಮಾಡಲು ಸಾಧ್ಯ ಎಂದರು.

    40 ಲಕ್ಷದ ಸೂಟ್ ರೂಂ.: ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಐಬಿಯ ಕೊಠಡಿಯನ್ನು ಸೂಟ್ ರೂಂ ಆಗಿ ಪರಿವರ್ತಿಸಲಾಗಿತ್ತು. ಸುಮಾರು 40 ಲಕ್ಷ ಖರ್ಚು ಮಾಡಿ ಪ್ರವಾಸಿ ಬಂಗಲೆಯನ್ನು ಪರ್ಮನೆಂಟ್ ಸಿಂಗಾರ ಮಾಡಲಾಗಿತ್ತು. ಉಡುಪಿ ಕ್ಷೇತ್ರ ಸಂದರ್ಶನದ ಬಳಿಕ ರಾಷ್ಟ್ರಪತಿಗಳು ಕೊಲ್ಲೂರು ಮುಕಾಂಬಿಕಾ ಕ್ಷೇತ್ರದ ಸಂದರ್ಶಿಸಿದರು. ರಾಷ್ಟ್ರಪತಿಯಾಗಿ ತಮ್ಮ ಅವಧಿ ಪೂರೈಸುವ ಮುನ್ನ ದಕ್ಷಿಣ ಭಾರತದ ಎರಡು ಪ್ರಸಿದ್ಧ ಕ್ಷೇತ್ರಗಳನ್ನು ಸಂದರ್ಶಿಸಿದ್ದು ವಿಶೇಷವಾಗಿತ್ತು.

     

  • ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಅನ್ನೋದು ಸುಳ್ಳು: ನಿರ್ಮಲಾ ಸೀತಾರಾಮನ್

    ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಅನ್ನೋದು ಸುಳ್ಳು: ನಿರ್ಮಲಾ ಸೀತಾರಾಮನ್

    ಉಡುಪಿ: ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಎನ್ನುವುದು ಸುಳ್ಳು ಆರೋಪ ಎಂದು ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಇದೊಂದು ತಪ್ಪು ಕಲ್ಪನೆ. ಬೀಫ್ ಅಂದ್ರೆ ದನದ ಮಾಂಸ. ದನದ ಮಾಂಸ ರಫ್ತು ಮಾಡೋದು ನಿಷೇಧವಾಗಿದೆ. ಆದ್ರೆ ನಮ್ಮಿಂದ ರಫ್ತಾಗುತ್ತಿರುವುದು ಖಾರ ಬೀಫ್ ಎಂದು ತಿಳಿಸಿದರು.

    ಖಾರ ಬೀಫ್ ಅಂದ್ರೆ ಎಮ್ಮೆ ಮತ್ತು ಕೋಣದ ಮಾಂಸ. ಖಾರ ಬೀಫ್ ರಫ್ತು ನಿಷೇಧವಾಗಿಲ್ಲ. ಇಷ್ಟಾದ್ರೂ ಗೊಂದಲ ಸೃಷ್ಟಿಸಲಾಗುತ್ತಿದೆ. ಹಲವು ಬಾರಿ ಸ್ಪಷ್ಟೀಕರಣ ನೀಡಿದರೂ ಕೆಲವರು ಖಾರ ಪದವನ್ನು ಬಳಸದೇ ಕೇವಲ ಬೀಫ್ ಪದವನ್ನು ಮಾತ್ರ ಬಳಸುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

     

  • ಸಿಎಂ ಸಿದ್ದರಾಮಯ್ಯನವರಿಗೆ ಯಾಕೆ ಕೋಪ ಗೊತ್ತಿಲ್ಲ: ಪೇಜಾವರ ಶ್ರೀ

    ಸಿಎಂ ಸಿದ್ದರಾಮಯ್ಯನವರಿಗೆ ಯಾಕೆ ಕೋಪ ಗೊತ್ತಿಲ್ಲ: ಪೇಜಾವರ ಶ್ರೀ

    ಉಡುಪಿ: ನಾವು ಯಾರಿಗೂ ಕೋಪ ಬರುವ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಅವರಿಗೆ ಯಾಕೆ ಕೋಪ ಇದೆ ಎನ್ನುವುದು ಗೊತ್ತಿಲ್ಲ. ಅವರು ಕೃಷ್ಣ ಮಠಕ್ಕೆ ಬರುತ್ತಾರೋ ಇಲ್ಲವೋ ಎನ್ನುವುದು ಭಾನುವಾರ ತಿಳಿಯಲಿದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ.

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾನುವಾರ ಕೃಷ್ಣ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಗೈರಾಗುತ್ತಿದ್ದಾರೆ ಎನ್ನುವ ವರದಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಅವರಿಗೆ ಕೃಷ್ಣಮಠದ ಪ್ರತಿನಿಧಿಗಳ ಮೂಲಕ ಆಹ್ವಾನ ನೀಡಿದ್ದೇವೆ. ಆದರೆ ಕಾರ್ಯದರ್ಶಿಗಳು ಉಡುಪಿ ಕಾರ್ಯಕ್ರಮಕ್ಕೆ ಸಿಎಂ ಬರುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮಠಕ್ಕೆ ಬರುತ್ತಾರೋ ಇಲ್ಲವೋ ಭಾನುವಾರ ತಿಳಿಯಲಿದೆ ಎಂದರು.

    ನನ್ನ ಪರ್ಯಾಯದ ಸಂದರ್ಭದಲ್ಲಿ ಅವರಿಗೆ ಆಹ್ವಾನ ಮಾಡಿದ್ದೆ. ಹಲವು ಬಾರೀ ಮಠಕ್ಕೆ ಆಹ್ವಾನ ನೀಡಲಾಗಿದೆ. ನಾನು ಬರುವುದಿಲ್ಲ ಎಂದು ಸಿಎಂ ಅವರು ಹೇಳಿಲ್ಲ. ಆದರೆ ಒಂದು ಬಾರಿಯೂ ಮಠಕ್ಕೆ ಬಂದಿಲ್ಲ. ಮೊನ್ನೆ ಪರ್ಯಾಯದ ನಂತರ ಕೃಷ್ಣನಿಗೆ ಕಾಣಿಕೆ ಕಳುಹಿಸಿದ್ದರು. ಸಿಎಂ ಅವರ ಶ್ರೀಮತಿ ಫೋನ್‍ನಲ್ಲಿ ಮಾತನಾಡಿದ್ದರು ಎಂದು ಪೇಜಾವರ ಶ್ರೀ ತಿಳಿಸಿದರು.

    ನಾನು ಸಿಎಂ ಅವರನ್ನು ಮಂಗಳೂರು, ಬೆಂಗಳೂರು, ಮೈಸೂರಲ್ಲಿ ಹಲವು ಬಾರಿ ಭೇಟಿಯಾಗಿದ್ದೇನೆ. ವರುಣಾ ಉಪಚುನಾವಣೆ ಸಂದರ್ಭ ಪ್ರಸಾದ ತೆಗೆದುಕೊಂಡು ಹೋಗಿದ್ದಾರೆ. ಸುತ್ತೂರು ಶ್ರೀಗಳು ಕೃಷ್ಣಮಠಕ್ಕೆ ಬರುವುದಾಗಿ ಹೇಳಿದ್ದರು. ಸಿಎಂ ಅವರನ್ನೂ ಜೊತೆ ಕರೆತರುವುದಾಗಿ ಹೇಳಿದ್ದಾರೆ ಎಂದು ಶ್ರೀಗಳು ಹೇಳಿದರು.

    ಇದನ್ನೂ ಓದಿ:  ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ: ಕೃಷ್ಣ ಮಠಕ್ಕೆ ಹೋಗಲು ಹಿಂದೇಟು, 3 ಸಚಿವರಿಗೆ ರಾಷ್ಟ್ರಪತಿ ಕಾರ್ಯಕ್ರಮದ ಜವಾಬ್ದಾರಿ