Tag: ಉಡುಪಿ

  • ವಿವಾದ ಮಾಡೋರಿಗೆ ಒಳ್ಳೆಬುದ್ಧಿ ಕೊಡಲಿ: ಉಡುಪಿ ಶ್ರೀಕೃಷ್ಣನಲ್ಲಿ ರೋಷನ್ ಬೇಗ್ ಪ್ರಾರ್ಥನೆ

    ವಿವಾದ ಮಾಡೋರಿಗೆ ಒಳ್ಳೆಬುದ್ಧಿ ಕೊಡಲಿ: ಉಡುಪಿ ಶ್ರೀಕೃಷ್ಣನಲ್ಲಿ ರೋಷನ್ ಬೇಗ್ ಪ್ರಾರ್ಥನೆ

    ಉಡುಪಿ: ವಿವಾದ ಇರುತ್ತೆ, ವಿವಾದ ಮಾಡೋರಿಗೆ ದೇವರು ಒಳ್ಳೆಬುದ್ಧಿ ಕೊಡಲಿ ಎಂದು ಉಡುಪಿ ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.

    ಶ್ರೀಕೃಷ್ಣಮಠಕ್ಕೆ ರೋಷನ್ ಬೇಗ್ ಭೇಟಿಕೊಟ್ಟು ಶ್ರೀಕೃಷ್ಣನ ದರ್ಶನ ಪಡೆದರು. ಕೃಷ್ಣಮಠಕ್ಕೆ ಆಗಮಿಸಿದ ರೋಷನ್ ಬೇಗ್, ಕನಕ ನವಗ್ರಹ ಕಿಂಡಿಯ ಮೂಲಕ ಕಡೆಗೋಲು ಶ್ರೀಕೃಷ್ಣ ದೇವರ ದರ್ಶನ ಪಡೆದು ಕೈ ಮುಗಿದು ಪ್ರಾರ್ಥನೆ ಮಾಡಿದರು. ನಂತರ ಮುಖ್ಯಪ್ರಾಣ ದೇವರ ಗುಡಿಗೆ ಭೇಟಿಕೊಟ್ಟು ಪ್ರಾರ್ಥಿಸಿದರು.

    ಈ ಸಂದರ್ಭ ಹಿರಿಯ ಮಠಾಧೀಶ ಪೇಜಾವರ ಸ್ವಾಮೀಜಿಯವರನ್ನು ಭೇಟಿಯಾದ ಸಚಿವ ರೋಷನ್ ಬೇಗ್ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಇಫ್ತಾರ್ ಕೂಟ ನಡೆಸಿದ ಸಂದರ್ಭ ನಾನು ಪತ್ರ ಬರೆದು ಅಭಿನಂದಿಸಿದ್ದೆ. ಕೆಲಸದ ಒತ್ತಡದಿಂದ ನನಗೆ ಭೇಟಿಯಾಗಲು ಸಾಧ್ಯವಾಗಿಲ್ಲ. ಈಗ ಗೌರವ ಅರ್ಪಣೆ ಮಾಡಲು ಬಂದಿದ್ದೇನೆ ಎಂದು ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರೋಷನ್ ಬೇಗ್- ಇಫ್ತಾರ್ ಕೂಟವನ್ನು ಎಲ್ಲರೂ ಆಯೋಜನೆ ಮಾಡ್ತಾರೆ. ಅದರಲ್ಲಿ ವಿವಾದ ಆಗೋದು ಏನಿದೆ? ವಿವಾದ ಮಾಡುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಕರಾವಳಿಯಲ್ಲಿ ಕೋಮು ಸೌಹಾರ್ದ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.

    ಹಿಂದುತ್ವ ಮತ್ತು ಹಿಂದೂ ಸಂಘಟನಾ ಚಿಂತನೆ ಹತ್ತಿಕ್ಕುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವೇಣುಗೋಪಾಲ್ ಅವರಿಂದ ಬಂದದ್ದಲ್ಲ. ಈ ಹಿಂದೆಯೂ ಅಹಿಂದ ಬಗ್ಗೆ ಪ್ರೀತಿಯಿತ್ತು. ಸಿಎಂ ಆಗುವ ಮುಂಚೆಯೂ ಅದೇ ವೈಚಾರಿಕತೆ ಹೊಂದಿದ್ದರು ಎಂದು ಸಿಎಂ ಹೇಳಿಕೆಗೆ ರೋಷನ್ ಬೇಗ್ ಬೆಂಬಲ ವ್ಯಕ್ತಪಡಿಸಿದರು.

  • ರಾಜ್ಯಪಾಲನಾಗಲ್ಲ, ವಿಜ್ಞಾನಿಯಾಗಿಯೇ ಇರ್ತೀನಿ: ಕೇಂದ್ರದ ಆಫರ್ ತಿರಸ್ಕರಿಸಿದ್ದ ಯು.ಆರ್.ರಾವ್

    ರಾಜ್ಯಪಾಲನಾಗಲ್ಲ, ವಿಜ್ಞಾನಿಯಾಗಿಯೇ ಇರ್ತೀನಿ: ಕೇಂದ್ರದ ಆಫರ್ ತಿರಸ್ಕರಿಸಿದ್ದ ಯು.ಆರ್.ರಾವ್

    ಉಡುಪಿ: ಇಸ್ರೋ ಮಾಜಿ ಅಧ್ಯಕ್ಷ ಪ್ರೊ. ಯು. ಆರ್ ರಾವ್ ಅವರಿಗೆ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗುವ ಅವಕಾಶ ಸಿಕ್ಕಿತ್ತು. ಆದರೆ ನಾನು ವಿಜ್ಞಾನಿಯಾಗಿಯೇ ಮುಂದುವರೆಯುತ್ತೇನೆ. ರಾಜಕಾರಣಿಯಾಗುವುದಿಲ್ಲ ಎಂದು ಹೇಳಿ ತನಗೆ ಸಿಕ್ಕಿದ್ದ ಆಫರ್ ಅನ್ನು ಅವರು ನಯವಾಗಿ ತಿರಸ್ಕರಿಸಿದ್ದರು.

    ಯು.ಆರ್ ರಾವ್ ಉಡುಪಿ ಜಿಲ್ಲೆಯ ಅದಮಾರು ಗ್ರಾಮದವರು. ಬಾಲ್ಯದ ಶಿಕ್ಷಣ ಉಡುಪಿಯಲ್ಲಿ ಮುಗಿಸಿದ ಉಡುಪಿ ರಾಮಚಂದ್ರ ರಾವ್ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲರಾಗುವ ಅವಕಾಶ ಸಿಕ್ಕಿತ್ತು ಎನ್ನುವ ಮಾಹಿತಿಯನ್ನು ರಾವ್ ಕುಟುಂಬಸ್ಥರು ಹೊರಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಾವ್ ಸಂಬಂಧಿ ಅದಮಾರು ಶ್ರೀಪತಿ ಆಚಾರ್ಯ, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ರಾವ್ ಅವರಿಗೆ ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆಯ ಆಫರ್ ಕೊಟ್ಟಿದ್ದರು. ನಾನು ವಿಜ್ಞಾನಿ. ರಾಜಕಾರಣಿಯಾಗಲು ಬಯಸುವುದಿಲ್ಲ ಎಂದು ಪ್ರಧಾನಿಯಿಂದ ಬಂದ ನಿವೇದನೆಯನ್ನು ನಯವಾಗಿ ತಿರಸ್ಕರಿಸಿದ್ದರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ. ಪ್ರೊಫೆಸರ್ ರಾವ್ ಅವರು ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಅವರಿಂದ ದೇಶಕ್ಕೆ- ವಿಶ್ವಕ್ಕೆ ಸಿಕ್ಕ ಕೊಡುಗೆ ಮಹತ್ತರವಾದದ್ದು ಎಂದು ಅವರು ಹೇಳಿದರು.

    ಯು. ಆರ್ ರಾವ್ ಪ್ರೌಢಶಿಕ್ಷಣವನ್ನು ಉಡುಪಿಯ ಮಿಷನ್ ಕಂಪೌಡಿನ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಪೂರೈಸಿದ್ದರು. ತಾಯಿ ಕೃಷ್ಣವೇಣಿ ಅವರ ಮನೆ ಉಡುಪಿಯ ಅದಮಾರುವಿನಲ್ಲಿತ್ತು. ಅಲ್ಲೇ ರಾವ್ ಅವರ ಶಿಕ್ಷಣ ಆರಂಭವಾಗಿತ್ತು. ಅದಮಾರುವಿನ ಮನೆ ಸದ್ಯ ಬಿದ್ದು ಹೋಗಿದೆ. ರಾವ್ ಅವರ ತಂದೆ ಕಟ್ಟಿಸಿದ ಉಡುಪಿಯ ಬನ್ನಂಜೆಯ ಮನೆಯನ್ನು ಯು.ಆರ್ ರಾವ್ ಬಾವ ಖರೀದಿ ಮಾಡಿ ಸದ್ಯ ಅಲ್ಲೇ ನೆಲೆಸಿದ್ದಾರೆ.

    ಅಡುಗೆ ಭಟ್ಟನ ಮಗ ವಿಜ್ಞಾನಿ: ಯು.ಆರ್ ರಾವ್ ತಂದೆ ಲಕ್ಷ್ಮೀನಾರಾಯಣ ಅವರು ಬಹಳ ಚೆನ್ನಾಗಿ ಆಡುಗೆ ಮಾಡುತ್ತಿದ್ದರು. ಚೆನ್ನಾಗಿ ಅಡುಗೆ ಮಾಡಿ- ಅದರಲ್ಲಿ ಬಂದ ದುಡ್ಡಿನಲ್ಲಿ ಯು.ಆರ್ ರಾವ್ ಅವರಿಗೆ ಶಿಕ್ಷಣ ಕೊಡಿಸಿದ್ದರು. ಬಳ್ಳಾರಿಯಲ್ಲಿ ಕ್ಯಾಟರಿಂಗ್ ಬ್ಯುಸಿನೆಸ್ ಮಾಡುತ್ತಿದ್ದ ರಾಜ್ ತಂದೆ, ಆ ಭಾಗದಲ್ಲಿ ಅಡುಗೆ ವಿಚಾರದಲ್ಲಿ ಭಾರೀ ಹೆಸರುವಾಸಿಯಾಗಿದ್ದರು. ಕುಟುಂಬವನ್ನು ಸಾಕಿ ಸಲಹಿದ್ದು, ಮಕ್ಕಳ ವಿದ್ಯಾಭ್ಯಾಸ ಮಾಡಿಸಿದ್ದು, ಮನೆ ಕಟ್ಟಿಸಿದ್ದು ಎಲ್ಲವೂ ಬಾಣಸಿಗ ವೃತ್ತಿಯಿಂದಲೇ.

    ಭಾರತ ರತ್ನ ಸಿಗಬೇಕಿತ್ತು: ಯು.ಆರ್ ರಾವ್ ಅವರಿಗೆ ಭಾರತ ರತ್ನ ಗೌರವ ನೀಡಬೇಕಿತ್ತು. ಪದ್ಮ ಪ್ರಶಸ್ತಿ ನೀಡಿದ್ದು ಗೌರವದ ಸಂಗತಿಯೇ ಆಗಿದೆ. ಆದ್ರೆ ಇದಕ್ಕಿಂತ ಹೆಚ್ಚಿನ ಸನ್ಮಾನ ರಾವ್ ಅವರಿಗೆ ಸಿಗಬೇಕಿತ್ತು ಎಂದು ಹೇಳಿದರು. ಅವರು ಭಾರತಕ್ಕೆ ಬರುವ ಮನಸ್ಸು ಮಾಡಿದ್ದೇ ದೊಡ್ಡ ವಿಚಾರ. ಅಮೆರಿಕದಲ್ಲಿ ಇರುತ್ತಿದ್ದರೆ ಇನ್ನಷ್ಟು ಉನ್ನತ ಹುದ್ದೆಗೆ ಹೋಗುತ್ತಿದ್ದರೋ ಏನೋ..? ಎಲ್ಲವನ್ನೂ ತ್ಯಜಿಸಿ ಅವರು ತಾಯ್ನಾಡಿನ ಸೇವೆಗೆ ಬಂದಿದ್ದು ದೊಡ್ಡ ವಿಷಯ ಎಂದು ಶ್ರೀಪತಿ ಆಚಾರ್ಯ ತಿಳಿಸಿದರು.

     

    ಯು.ಆರ್.ರಾವ್ ಸೋಮವಾರ ಬೆಳಗಿನ ಜಾವ ಸುಮಾರು 2.30ರ ಸಮಯದಲ್ಲಿ ಮೃತಪಟ್ಟಿದ್ದಾರೆ. ವಿಜ್ಞಾನಿಯ ನಿಧನಕ್ಕೆ ನಾಡಿನ ಗಣ್ಯರೆಲ್ಲ ಸಂತಾಪ ಸೂಚಿಸಿದ್ದಾರೆ. ರಾವ್ ಭಾರತದ ಮೊದಲ ಕೃತಕ ಉಪಗ್ರಹ ಆರ್ಯಭಟ ದಲ್ಲಿಯೂ ಕೆಲಸ ನಿರ್ವಹಿಸಿದ್ದರು. ಇದೇ ತಿಂಗಳು ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

    1984 ಮತ್ತು 1994ರ ಅವಧಿಯಲ್ಲಿ ರಾವ್ ಇಸ್ರೋದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದಕ್ಕೂ ಮೊದಲು ಸತೀಶ್ ಧವನ್ ಸಂಸ್ಥೆಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ರಾವ್ ಉಡುಪಿ ಜಿಲ್ಲೆಯ ಆದ್ಮಾಪುರ ಗ್ರಾಮದಲ್ಲಿ ಜನಸಿದ್ದರು. ರಾವ್ ಅವರು ದೇಶದ ಶ್ರೇಷ್ಠ ವಿಜ್ಞಾನಿಗಳಾದ ಸತೀಶ್ ಧವನ್, ವಿಕ್ರಂ ಸಾರಾಭಾಯ್, ಎಂ.ಜಿ.ಕೆಮೆನನ್ ಅವರ ಅನೇಕ ಪ್ರೊಜೆಕ್ಟ್ ನಲ್ಲಿ ಭಾಗಿಯಾಗಿದ್ದರು.

    ಇದೇ ವರ್ಷ ರಾವ್ ಅವರಿಗೆ ಭಾರತ ಸರ್ಕಾರದಿಂದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಬಂದ ವೇಳೆ `ಇದು ನನಗೆ ಮರಣೋತ್ತರವಾಗಿ ನೀಡಲಾಗುತ್ತದೆ ಎಂದು ತಿಳಿದಿದ್ದೆ’ ಎಂದು ರಾವ್ ಹಾಸ್ಯ ಮಾಡಿದ್ದರು.

     

  • ಕಲ್ಲು ಕ್ವಾರಿ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಗೆ ಉಡುಪಿಯಲ್ಲಿ ಹಲ್ಲೆ

    ಕಲ್ಲು ಕ್ವಾರಿ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಗೆ ಉಡುಪಿಯಲ್ಲಿ ಹಲ್ಲೆ

    ಉಡುಪಿ: ಕಲ್ಲುಕ್ವಾರಿ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಗೆ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

    ಸಿದ್ಧಾಪುರದ ಕೆಂಪುಕಲ್ಲು ಕ್ವಾರಿಯಿಂದಾಗಿ ಪರಿಸರದ ನೂರಾರು ಕುಟುಂಬಗಳಿಗೆ ಸಮಸ್ಯೆಯಾಗುತ್ತಿತ್ತು. ಕಲ್ಲುಕ್ವಾರಿ ಸ್ಥಳೀಯರ ನಿದ್ದೆಗೆಡಿಸಿತ್ತು. ಇದರ ವಿರುದ್ಧ ಬಹಳ ಸಮಯದಿಂದ ಹೋರಾಟ ನಡೆಯುತ್ತಿತ್ತು. ಹೋರಾಟದ ಮುಂದಾಳತ್ವ ವಹಿಸಿದ್ದ ಆನಂದ ಕರೋರ್ ಮೇಲೆ, ನಾಲ್ಕೈದು ಮಂದಿ ಕ್ವಾರಿಗೆ ಸಂಬಂಧಿಸಿದ ಪುಂಡರು ಹಲ್ಲೆ ನಡೆಸಿದ್ದಾರೆ.

    ದ್ವಿಚಕ್ರ ವಾಹನದಲ್ಲಿ ಆನಂದ್ ಹೋಗುವ ವೇಳೆ ಟೆಂಪೋದಲ್ಲಿ ಡಿಕ್ಕಿ ಹೊಡೆಸಿದ್ದಾರೆ. ನಂತರ ಆರೋಪಿಗಳಾದ ಅಭಿಜಿತ್ ಶೆಟ್ಟಿ, ಅರುಣ ಗೊಲ್ಲ, ರವೀಂದ್ರ ಗಾಣಿಗ, ತಿಮ್ಮಪ್ಪ ಶೆಟ್ಟಿ, ರವಿ ಶೆಟ್ಟಿ ಹಲ್ಲೆ ನಡೆಸಿ ಮತ್ತು ನಿಂದನೆ ಮಾಡಿದರು ಎಂದು ಆನಂದ ಕರೋರ್ ದೂರಿದ್ದಾರೆ.

    ಹಲ್ಲೆಗೊಳಗಾದ ಆನಂದ್ ಕರೋರ್ ಮಾತನಾಡಿ, ಹೊಸಂಗಡಿ ಎಡಮೊಗೆ ಗ್ರಾಮದಲ್ಲಿ ಕೆಂಪುಕಲ್ಲು ಕೋರೆ ಅವ್ಯಾಹತವಾಗಿ ನಡೆಯುತ್ತಿದೆ. ಅಧಿಕಾರಿಗಳಿಗೆ ದೂರು ನೀಡಿದ್ರೂ ಅಧಿಕಾರಿಗಳು ದೂರು ದಾಖಲು ಮಾಡಿಕೊಳ್ಳುತ್ತಿಲ್ಲ. ಟೆಂಪೋ- ಲಾರಿಗಳು ಹೋಗಿ ರಸ್ತೆಗಳೆಲ್ಲಾ ಗುಂಡಿ ಬಿದ್ದಿದೆ. ಈ ಬಗ್ಗೆ ಸ್ಥಳೀಯರಿಗೆ ದೂರು ನೀಡಿದ್ದೇನೆ. ರಸ್ತೆ ರಿಪೇರಿ ಮಾಡಿ ಅಂತ ಒಂದು ಸಾರಿ ಲಾರಿ ಅಡ್ಡಗಟ್ಟಿ ಹೇಳಿದ್ದೆ. ಅದಕ್ಕೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಹೊಡೆದು- ಚೈನು, ಪರ್ಸು, ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ದೂರಿದರು.

    ಈ ಹಿಂದೆ ಸ್ಥಳೀಯ ಗ್ರಾಮ ಪಂಚಾಯತ್‍ಗೆ ಆನಂದ್ ಕಲ್ಲುಕ್ವಾರಿ ಬಗ್ಗೆ ದೂರಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಕ್ವಾರಿಯ ಮಂದಿ ಥಳಿಸಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಪರವಾನಿಗೆ ಪಡೆದು ಎಮ್ಮೆ, ಕರು ಸಾಗಿಸುತ್ತಿದ್ದವರನ್ನ ಥಳಿಸಿದ ಬಜರಂಗದಳ ಕಾರ್ಯಕರ್ತರು

    ಪರವಾನಿಗೆ ಪಡೆದು ಎಮ್ಮೆ, ಕರು ಸಾಗಿಸುತ್ತಿದ್ದವರನ್ನ ಥಳಿಸಿದ ಬಜರಂಗದಳ ಕಾರ್ಯಕರ್ತರು

    ಉಡುಪಿ: ಗೋವು ರಕ್ಷಣೆಯ ಹೆಸರಿನಲ್ಲಿ ಅಟ್ಟಹಾಸ ಸಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ಕಟು ಟೀಕೆ ಮಾಡಿದ್ದರು. ಆದ್ರೆ ಗೋರಕ್ಷಣೆಯ ನೆಪದಲ್ಲಿ ಮಾಡುವ ದಾಳಿಗಳ ಸಂಖ್ಯೆ ಕಮ್ಮಿಯಾಗಿಲ್ಲ. ಎಮ್ಮೆಗಳನ್ನು ಸಾಗಿಸುತ್ತಿದ್ದ ಇಬ್ಬರನ್ನ ಬಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿ ಮನಬಂದಂತೆ ಥಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿಯ ಬೆಳ್ಮಣ್ಣು ಸಮೀಪದ ಮುಂಡ್ಕೂರಿನಲ್ಲಿ ಎರಡು ದಿನದ ಹಿಂದೆ ಈ ಘಟನೆ ನಡೆದಿದೆ. ಸಾಧು ಪೂಜಾರಿ ಎಂಬವರು ಪಂಚಾಯತ್ ಪರವಾನಿಗೆ ಪಡೆದು, ಪಶುವೈದ್ಯರ ಸರ್ಟಿಫಿಕೇಟ್ ತೆಗೆದುಕೊಂಡು ಎಮ್ಮೆ ಮತ್ತು ಕರುವನ್ನು ಸಾಗಾಟ ಮಾಡುತ್ತಿದ್ದರು. ರಾಜೇಶ್ ಮೆಂಡೋನ್ಸ ಎಂಬವರ ಟೆಂಪೋದಲ್ಲಿ ಮೂಲ್ಕಿ ಕಡೆ ಹೋಗುತ್ತಿದ್ದಾಗ ಎಂಟತ್ತು ಮಂದಿ ಅಡ್ಡಗಟ್ಟಿದ್ದಾರೆ. ಪಂಚಾಯತ್ ಪರವಾನಿಗೆ ಇದೆ, ಇದನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿಲ್ಲ ಎಂದು ಹೇಳಿದರೂ ಇಬ್ಬರಿಗೂ ಮನಬಂದಂತೆ ಥಳಿಸಿದ್ದಾರೆ.

    ಎಮ್ಮೆ ಮತ್ತು ಕರುವನ್ನು ಮೂಲ್ಕಿಯ ಚಂದ್ರ ಶೆಟ್ಟಿ ಎಂಬವರಿಗೆ ಮಾರಾಟ ಮಾಡಲು ಸಾಧು ಪೂಜಾರಿ ಹೊರಟಿದ್ದರು. ಇದನ್ನು ಕೇಳದೆ ಅವರಿಗೆ ಥಳಿಸಿದ ಬಜರಂಗದಳ ಕಾರ್ಯಕರ್ತರು ಕಾರ್ಕಳ ಗ್ರಾಮಾಂತರ ಪೊಲೀಸರನ್ನು ಕರೆಸಿ ಒಪ್ಪಿಸಿದ್ದಾರೆ.

    ಆದ್ರೆ ಪರವಾನಿಗೆ ಇದ್ದರೂ ಸಾಧು ಪೂಜಾರಿ ಮತ್ತು ರಾಜೇಶ್ ಮೆಂಡೋನ್ಸಾ ಮೇಲೆಯೇ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಧು ಪೂಜಾರಿ ಮತ್ತು ರಾಜೇಶ್ ಮೆಂಡೋನ್ಸಾ ಮನೆಯವರು ಉಡುಪಿ ಎಸ್.ಪಿ ಕಚೇರಿಗೆ ಬಂದು ಸಂಘಟನೆಯ ಕಾರ್ಯಕರ್ತರ ವಿರುದ್ಧ ದೂರು ದಾಖಲು ಮಾಡುವಂತೆ, ನಿರಪರಾಧಿಗಳ ವಿರುದ್ಧದ ಕೇಸು ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ದೂರು ನೀಡಿದವರು ಆರೋಪ ಮಾಡಿದ್ದಾರೆ.

    ಈ ಸಂದರ್ಭ ಸ್ಥಳೀಯ ಶುಭದ್ ರಾವ್ ಎಂಬವರು ಮಾತನಾಡಿ, ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ಮಾಡಬೇಕು. ಅಮಾಯಕರ ಮೇಲೆ ದಾಖಲಿಸಿರುವ ಕೇಸನ್ನು ವಾಪಾಸ್ ಪಡೆಯಬೇಕು. ಗ್ರಾಮಪಂಚಾಯತ್ ಪರವಾನಿಗೆ ಇದ್ದರೂ ಪೊಲೀಸರು ಮತ್ತು ಸಂಘಟನೆಯ ಕಾರ್ಯಕರ್ತರು ಕಾನೂನನ್ನು ಮೀರಿದ್ದಾರೆ ಎಂದು ಆರೋಪಿಸಿದರು.

  • ಪತಿ ಮೃತಪಟ್ಟ 1 ಗಂಟೆಯಲ್ಲೇ ಪತ್ನಿಯೂ ಸಾವು- ಸಾವಿನಲ್ಲೂ ಒಂದಾದ ಉಡುಪಿ ದಂಪತಿ

    ಪತಿ ಮೃತಪಟ್ಟ 1 ಗಂಟೆಯಲ್ಲೇ ಪತ್ನಿಯೂ ಸಾವು- ಸಾವಿನಲ್ಲೂ ಒಂದಾದ ಉಡುಪಿ ದಂಪತಿ

    ಉಡುಪಿ: ತಾಳಿ ಕಟ್ಟುವಾಗ ಜೀವನದುದ್ದಕ್ಕೂ ಜೊತೆಗಿರುತ್ತೇವೆ ಎಂದು ಸಂಕಲ್ಪ ಮಾಡಿದ್ದ ದಂಪತಿಗಳು ಸಾವಿನಲ್ಲೂ ಜೊತೆಯಾಗಿ ಕೊನೆಯುಸಿರೆಳೆದ ಘಟನೆ ಉಡುಪಿಯಲ್ಲಿ ನಡೆದಿದೆ.

    ಇಲ್ಲಿನ ಅಂಬಲಪಾಡಿ ಕಪ್ಪೆಟ್ಟು ರಾಮಮಂದಿರದ ಬಳಿ ಇಂತದ್ದೊಂದು ಸಾವು ಸಂಭವಿಸಿದೆ. ಸೋಮಯ್ಯ ಶೆಟ್ಟಿಗಾರ್(85) ಹಾಗೂ ನೇತ್ರಾವತಿ ಶೆಟ್ಟಿಗಾರ್(76) ಸಾವಿನಲ್ಲೂ ಒಂದಾದ ದಂಪತಿ.

    ಮೂವರು ಹೆಣ್ಣುಮಕ್ಕಳು ಹಾಗೂ ಓರ್ವ ಮಗನನ್ನು ದಂಪತಿ ಅಗಲಿದ್ದಾರೆ. ಈ ಇಬ್ಬರೂ ಜೀವನದುದ್ದಕ್ಕೂ ಅನ್ಯೋನ್ಯ ದಾಂಪತ್ಯವನ್ನು ಕಳೆದು ವೃದ್ಧಾಪ್ಯದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮಯ್ಯ ಅಸ್ತಮಾ ಕಾಯಿಲೆ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದಾಗ ಹೆಂಡತಿ ನೇತ್ರಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮನೆಗೆ ಬಂದ ಪತಿಗೆ ಆರೋಗ್ಯ ಮತ್ತೆ ಗಂಭೀರ ಸ್ಥಿತಿಗೆ ತಲುಪಿ ಮೃತಪಟ್ಟಿದ್ದಾರೆ.

    ಒಂದು ಗಂಟೆಯ ಬಳಿಕ ಆಸ್ಪತ್ರೆಯಲ್ಲಿದ್ದ ಪತ್ನಿ ನೇತ್ರಾವತಿ ಆರೋಗ್ಯ ಏಕಾಏಕಿ ಗಂಭೀರವಾಗಿ ಅಸುನೀಗಿದ್ದಾರೆ. ಜೀವನದ ಕೊನೆಗಾಲದವರೆಗೂ ಅನ್ಯೋನ್ಯತೆ ಮೆರೆದ ದಂಪತಿಯನ್ನು ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ

    ಒಂದು ದಿನವೂ ಜಗಳವಾಡಿಕೊಂಡಿಲ್ಲ, ಮುನಿಸಿಕೊಂಡಿಲ್ಲ. ಕೊನೆಗೆ ಸಾವಿನಲ್ಲೂ ಒಬ್ಬರನ್ನೊಬ್ಬರು ಬಿಟ್ಟು ಕೊಡಲಿಲ್ಲ ಎಂದು ಮೃತ ದಂಪತಿಯ ಮಕ್ಕಳು ಹಾಗೂ ಸಂಬಂಧಿಕರು ಕಣ್ಣೀರಿಟ್ಟರು.

     

  • ಹೂವಿನ ತೊಟ್ಟಿಲಲ್ಲಿ ಅಂಬಲ್ಪಾಡಿಯ ಅಮ್ಮ- ಚಿಕ್ಕಬಳ್ಳಾಪುರದ ಭಕ್ತನಿಂದ ಸ್ಪೆಷಲ್ ಹರಕೆ

    ಹೂವಿನ ತೊಟ್ಟಿಲಲ್ಲಿ ಅಂಬಲ್ಪಾಡಿಯ ಅಮ್ಮ- ಚಿಕ್ಕಬಳ್ಳಾಪುರದ ಭಕ್ತನಿಂದ ಸ್ಪೆಷಲ್ ಹರಕೆ

    ಉಡುಪಿ: ಕಷ್ಟ ಬಂದಾಗ ದೇವರ ಮೊರೆ ಹೋಗುತ್ತೇವೆ. ಕಷ್ಟ ಬಗೆಹರಿಸು ದೇವಾ ಅಂತ ನಾನಾ ವಿಧದ ಹರಕೆಗಳನ್ನು ಹೊರುತ್ತೇವೆ. ಕಷ್ಟ ಬಗೆಹರಿದು ಸುಖ ಸಿಕ್ಕಾಗ ಹರಕೆ ತೀರಿಸುತ್ತೇವೆ. ಇಲ್ಲೊಬ್ಬ ಭಕ್ತರು ವಿಭಿನ್ನ ಹರಕೆ ಹೊತ್ತು, ಪ್ರತಿ ವರ್ಷ ದೇವರನ್ನು ನಂದನವನದಲ್ಲಿ ಕೂರಿಸುತ್ತಾರೆ.

    ಮೂಲತಃ ಚಿಕ್ಕಬಳ್ಳಾಪುರದ ನಿವಾಸಿ ರಮೇಶ್ ಬಾಬು ಎಂಬವರು ದೇವರಿಗೆ ವಿಶೇಷ ಹರಕೆ ಸಲ್ಲಿಸುತ್ತಾ ಬಂದಿದ್ದಾರೆ. 10 ವರ್ಷದ ಹಿಂದೆ ಇವರ ಬಳಿ ಒಂದು ಸೈಕಲ್ ಕೂಡ ಇರಲಿಲ್ಲ. ಆದ್ರೆ ಇವತ್ತು ಕೋಟಿಗಳ ಒಡೆಯ. ರಮೇಶ್ ಅವರ ಈ ಬೆಳವಣಿಗೆಗೆ ಉಡುಪಿಯ ಜನಾರ್ದನ ದೇವರು ಮತ್ತು ಮಹಾಕಾಳಿ ದೇವಿ ಕಾರಣ ಎಂದು ನಂಬಿದ್ದಾರೆ. ಕಷ್ಟದಲ್ಲಿದ್ದಾಗ ಕೈ ಹಿಡಿದ ದೇವರನ್ನು ಪ್ರತಿ ವರ್ಷ ಹೂವಿನ ತೊಟ್ಟಿಲಿನಲ್ಲಿಟ್ಟು ಹರಕೆ ತೀರಿಸುತ್ತಿದ್ದಾರೆ.

    ಈ ಸಂದರ್ಭದಲ್ಲಿ ರಮೇಶ್ ಬಾಬು ಮಾತನಾಡಿ, ನಾನು 20 ವರ್ಷದ ಹಿಂದೆ ಏನೂ ಆಗಿರಲಿಲ್ಲ. ದಿನಸಿ ಸಾಮಾನು ಕಟ್ಟಿಕೊಂಡಿದ್ದೆ. ಅಂಬಲ್ಪಾಡಿ ಮಹಾಕಾಳಿ- ಜನಾರ್ದನ ದೇವಸ್ಥಾನಕ್ಕೆ ಬಂದ ನಂತರ ನನ್ನ ಜೀವನವೇ ಬದಲಾಯ್ತು. ಇವತ್ತಿಗೆ ಕೋಟಿ ರೂಪಾಯಿ ಸಂಪಾದನೆ ಮಾಡಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಅಮ್ಮನ ದೇವಸ್ಥಾನವನ್ನು ಸ್ಥಾಪನೆ ಮಾಡಿದ್ದೇನೆ. ನಾಲ್ಕು ವರ್ಷದಿಂದ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಿ ಹರಕೆ ತೀರಿಸುತ್ತಿದ್ದೇನೆ. ಕೊನೆಯ ಉಸಿರು ಇರೊವರೆಗೂ ಈ ಹರಕೆ ಮುಂದುವರೆಯುತ್ತದೆ ಎಂದು ಹೇಳಿದರು.

    ಆಷಾಢದ ಕೊನೆಯ ಶುಕ್ರವಾರದಂದು 200 ಮಂದಿ ಯುವಕರ ತಂಡದ ಜೊತೆ ರಮೇಶ್ ಉಡುಪಿಗೆ ಬರ್ತಾರೆ. ಕಳೆದ ನಾಲ್ಕು ವರ್ಷದಿಂದ ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ತರುತ್ತಿದ್ದಾರೆ. ಅಂಬಲ್ಪಾಡಿ ಜನಾರ್ದನ- ಮಹಾಕಾಳಿ ದೇವಸ್ಥಾನಕ್ಕೆ ಬಂದು ಇಡೀ ದೇವಸ್ಥಾನವನ್ನು ಪುಷ್ಪಮಯ ಮಾಡುತ್ತಾರೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿಸುತ್ತಾರೆ. ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇವಳವಾಗಿ ಪರಿವರ್ತನೆಗೊಳ್ಳುತ್ತದೆ.

    ಚಿಕ್ಕಬಳ್ಳಾಪುರದಿಂದ ಉಡುಪಿಗೆ ಫ್ಲವರ್ ಡೆಕೋರೇಟ್ ಮಾಡುವ ಭೈರೇಗೌಡ ಮತ್ತು ತಂಡ ಬರುತ್ತದೆ. ದಿನಪೂರ್ತಿ ಹೂವಿನ ಅಲಂಕಾರ ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಕೂತು ಈ ಅಲಂಕಾರ ಮಾಡಿದ್ದೇವೆ. ಹೂವಿನ ದೇವಸ್ಥಾನದಂತೆ ಅಮ್ಮನ ದೇವಸ್ಥಾನ ಕಾಣಿಸುತ್ತಿದೆ. ನಮಗೆ ಇದೇ ಮನಸ್ಸಿಗೆ ಖುಷಿ. ರಮೇಶ್ ಬಾಬು ಅವರ ಈ ಹರಕೆ ನೋಡಿದ ಮೇಲೆ ನೂರಾರು ಮಂದಿ ಹೂವನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಅದನ್ನೆಲ್ಲಾ ಅಲಂಕಾರಕ್ಕೆ ಉಪಯೋಗಿಸಿದ್ದೇವೆ ಅಂತ ಭೈರೇಗೌಡ ಹೇಳಿದ್ದಾರೆ.

    ಲಕ್ಷಾಂತರ ರೂಪಾಯಿಯ ಹೂವಿನಿಂದ, ಸಾವಿರಾರು ರೂಪಾಯಿಯ ದ್ರಾಕ್ಷಿ, ಅನನಾಸು, ಜೋಳ, ಹಣ್ಣು ಹಂಪಲಿನಿಂದ ದೇವಸ್ಥಾನವನ್ನು ಈ ಯುವಕರ ತಂಡ ಸಿಂಗಾರ ಮಾಡಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಂಬಲ್ಪಾಡಿ ದೇವಸ್ಥಾನ ಹೂವಿನ ದೇವಸ್ಥಾನದಂತೆ ಕಂಗೊಳಿಸ್ತಾಯಿತ್ತು.

     

     

  • ಉಡುಪಿ: ಪಿಕಪ್ ವಾಹನದಲ್ಲಿ ಕೈಕಾಲು ಕಟ್ಟಿ ಅಕ್ರಮವಾಗಿ 27 ಹಸುಗಳ ಸಾಗಾಟ

    ಉಡುಪಿ: ಪಿಕಪ್ ವಾಹನದಲ್ಲಿ ಕೈಕಾಲು ಕಟ್ಟಿ ಅಕ್ರಮವಾಗಿ 27 ಹಸುಗಳ ಸಾಗಾಟ

    ಉಡುಪಿ: ಬೊಲೆರೋ ಪಿಕಪ್ ವಾಹನದಲ್ಲಿ ಗೋವುಗಳ ಅಕ್ರಮ ಸಾಗಾಟಕ್ಕೆ ಜಿಲ್ಲೆಯ ಕುಂದಾಪುರ ಪೊಲೀಸರು ತಡೆಯೊಡ್ಡಿದ್ದಾರೆ.

    27 ಗೋವುಗಳನ್ನು ಕುಂದಾಪುರದ ಮಾವಿನಕಟ್ಟೆಲ್ಲಿಂದ ಮಂಗಳೂರು ಕಡೆಗೆ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆ ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ಬೆಳಕಿಗೆ ಬಂದಿದೆ.

    ಪಿಕಪ್ ವಾಹನದಲ್ಲಿ ನಾಲ್ಕೈದು ಹಸುಗಳನ್ನು ಸಾಗಾಟ ಮಾಡುವುದು ಕಷ್ಟಸಾಧ್ಯ. ಆದರೆ ಹಸುಗಳ ಕೈಕಾಲು ಕಟ್ಟಿ ಅಮಾನವೀಯವಾಗಿ 27 ಹಸುಗಳನ್ನು ತುಂಬಿಸಲಾಗಿತ್ತು. ಈ ನಡುವೆ ಉಸಿರುಗಟ್ಟಿ ಒಂದು ಹಸು ಟೆಂಪೋದೊಳಗೆ ಸಾವನ್ನಪ್ಪಿದೆ. ಪೊಲೀಸರು ಆ ವಾಹನ ನಿಲ್ಲಿಸುತ್ತಿದ್ದಂತೆ ವಾಹನ ಬಿಟ್ಟು ಚಾಲಕ ಮತ್ತು ಜೊತೆಗಿದ್ದ ವ್ಯಕ್ತಿ ಪರಾರಿಯಾಗಿದ್ದಾರೆ.

    ಕುಂದಾಪುರದಿಂದ ಮಂಗಳೂರಿಗೆ ಗೋವುಗಳ ಅಕ್ರಮ ಸಾಗಾಟವಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಪಿಕಪ್ ವಾಹನ ಮಂಗಳೂರು ರಿಜಿಸ್ಟ್ರೇಷನ್‍ದಾಗಿದ್ದು, ಹುಸೇನ್ ಎಂಬವರಿಗೆ ಈ ವಾಹನ ಸೇರಿದೆ.

    ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಮಾರಾಟ ಮಾಡಿದ ಹಸುಗಳೋ ಅಥವಾ ಕದ್ದ ಹಸುಗಳೋ ಅನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸೇತುವೆ ಮೇಲೆ ಟಿ.ಟಿ ಪಲ್ಟಿ- 14 ಪ್ರಯಾಣಿಕರು ಸೇಫ್

    ಸೇತುವೆ ಮೇಲೆ ಟಿ.ಟಿ ಪಲ್ಟಿ- 14 ಪ್ರಯಾಣಿಕರು ಸೇಫ್

    ಉಡುಪಿ: ಟೆಂಪೋ ಟ್ರಾವೆಲರ್ ಪಲ್ಟಿಯಾಗಿ ಪವಾಡ ಸದೃಶ ರೀತಿಯಲ್ಲಿ 14 ಜನ ಪಾರಾದ ಘಟನೆ ಉಡುಪಿಯ ಸಂತಕಟ್ಟೆ ನಯಂಪಳ್ಳಿ ಸೇತುವೆ ಮೇಲ್ಭಾಗದಲ್ಲಿ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯ ಪೂತ್ತೂರಿನಿಂದ ಸುಮಾರು 14 ಮಂದಿ ಪ್ರಯಾಣಿಕರಿದ್ದ ಟೆಂಪೋ ಟ್ರಾವೆಲರ್ ಉಡುಪಿಯ ಸಂತೆಕಟ್ಟೆ ಸಮೀಪದ ನಯಂಪಳ್ಳಿ ಸೇತುವೆ ಸಮೀಪಿಸುತ್ತಿದ್ದಂತೆ ಉರುಳಿ ಬಿದ್ದಿದೆ. ಟಿ.ಟಿ ಒಳಗಡೆ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೆಂಪೋ ಬೀಳುತ್ತಿದ್ದಂತೆ ಒಳಗಿದ್ದವರು ತಾವೇ ಹೊರಗೆ ಬಂದಿದ್ದಾರೆ. ವಾಹನದ ಮುಂಭಾಗದ ಗಾಜು ಪುಡಿಯಾಗಿದ್ದು ಪ್ರಯಾಣಿಕರಿಗೆ ಗಾಯಗಳಾಗಿದೆ.

    ಬೆಳ್ಳಗ್ಗಿನಿಂದ ಮಳೆ ಸುರಿಯುತ್ತಿದ್ದು ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಪಲ್ಟಿಯಾಗಿದೆ ಎನ್ನಲಾಗಿದೆ. ಸೇತುವೆ ಮಧ್ಯದಲ್ಲಿಯೇ ವಾಹನ ಪಲ್ಟಿಯಾದ ಕಾರಣ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ವ್ಯತ್ಯಯವಾಯ್ತು. ಉಡುಪಿ ಮತ್ತು ಬ್ರಹ್ಮಾವರ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಟೆಂಪೋವನ್ನು ಎತ್ತಿ ಬದಿಗಿರಿಸಿದರು.

    ಕೇರಳ- ಮಂಗಳೂರು- ಉಡುಪಿ- ಕಾರವಾರ ಮಾರ್ಗವಾಗಿ ಗೋವಾ ರಾಜ್ಯಕ್ಕೆ ನೂರಾರು ಮೀನಿನ ವಾಹನ ಸಂಚಾರ ಮಾಡುತ್ತವೆ. ಮೀನಿನ ಎಣ್ಣೆ ರಸ್ತೆ ಮೇಲೆಲ್ಲಾ ಬಿದ್ದು ಜಾರುತ್ತಿರುತ್ತದೆ. ಈ ಪ್ರಕರಣದಲ್ಲಿಯೂ ಚಾಲಕನ ನಿಯಂತ್ರಣ ತಪ್ಪಲು ಮೀನಿನೆಣ್ಣೆ ರಸ್ತೆಗೆ ಬಿದ್ದಿದ್ದೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ಮತ್ತೆ ಚುರುಕಾಯ್ತು ಮುಂಗಾರು ಮಳೆ – ಜಲಾಶಯಗಳಿಗೆ ಒಳಹರಿವು ಹೆಚ್ಚಳ

    ಮತ್ತೆ ಚುರುಕಾಯ್ತು ಮುಂಗಾರು ಮಳೆ – ಜಲಾಶಯಗಳಿಗೆ ಒಳಹರಿವು ಹೆಚ್ಚಳ

    – ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ
    – ಕೇರಳದಲ್ಲಿ ಮಳೆ – ಕಬಿನಿ ಒಳ ಹರಿವು ಹೆಚ್ಚಳ

    ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಚುರುಕಾಗಿದೆ. ಕಳೆದೆರಡು ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆ ಚುರುಕಾಗಿತ್ತು. ಕಳೆದ ಎರಡು ಮೂರು ದಿನಗಳಿಂದ ಮೋಡದ ಮರೆಯಲ್ಲೇ ಮಳೆಯ ನಿರೀಕ್ಷೆಯಲ್ಲಿದ್ದ ಬೆಂಗಳೂರು ಜನರಿಗೆ ಇಂದು ಬೆಳಗ್ಗೆಯಿಂದ ಮಳೆಯ ದರ್ಶನವಾಗಿದೆ. ಪುನರ್ವಸು ಮಳೆಯ ಕೊನೆಯ ದಿನವಾಗಿರುವ ಇಂದು ಹಲವೆಡೆ ಜೋರು ಮಳೆಯಾಗುತ್ತಿದೆ.

    ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ಕೆ ಪಿ ಅಗ್ರಹಾರ, ಚಾಮರಾಜ ಪೇಟೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಬಿದ್ದಿದೆ. ಮಳೆಯಿಂದಾಗಿ ಮೆಜೆಸ್ಟಿಕ್ ಸುತ್ತಮುತ್ತ ಪ್ರತಿ ಬಾರಿಯಂತೆ ಟ್ರಾಫಿಕ್ ಜಾಮ್ ಆಗಿತ್ತು. ಇನ್ನು ಕೆಲವೆಡೆ ಮಳೆಯಿಂದಾಗಿ ಜನರು ಸಂಚಾರಕ್ಕೆ ಮೆಟ್ರೋ ರೈಲು ಹತ್ತಿದರು.

    ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಯ ತೀವ್ರತೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಸಂಗಮದ ಸ್ನಾನಘಟ್ಟ ಜಲಾವೃತವಾಗಿದೆ. ಜಿಲ್ಲೆಯ ಜನ ಜೀವನ ಅಸ್ತವ್ಯಸ್ತ, ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಜಿಲ್ಲೆಯ ಹಳ್ಳ ಕೊಳ್ಳ, ನದಿ ತೊರೆಗಳು ಉಕ್ಕಿ ಹರಿಯುತ್ತಿವೆ.

    ಕೇರಳದ ವಯನಾಡು ಪ್ರದೇಶದಲ್ಲೀ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಕಬಿನಿ ಜಲಾಶಯದ ಇಂದಿನ ಒಳಹರಿವು 7,100 ಕ್ಯೂಸೆಕ್ ಗೆ ಏರಿಕೆಯಾಗಿದ್ದು, ಜಲಾಶಯದ ಹೊರ ಹರಿವು 1,000 ಕ್ಯೂಸೆಕ್ ಇದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಇದ್ದು, ಜಲಾಶಯದ ಇಂದಿನ ನೀರಿನ ಮಟ್ಟ 2267 ಅಡಿ ಇದೆ.

    ಹಾಸನ ಜಿಲ್ಲೆಯಲ್ಲಿ ಮಳೆ ಕೊಂಚ ಬಿರುಸುಗೊಂಡಿದೆ. ಇದರಿಂದಾಗಿ ಬೆಳೆ ನಷ್ಟದ ಭೀತಿಯಲ್ಲಿದ್ದ ರೈತರ ಮೊಗದಲ್ಲಿ ಹರ್ಷ ಕಾಣಿಸಿದೆ. ಜಿಲ್ಲೆಯ ಹಲವು ಕಡೆ ಉತ್ತಮ ಮಳೆಯಾಗುತ್ತಿದೆ. ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಇಂದು ಜಲಾಶಯಕ್ಕೆ 5441 ಕ್ಯೂಸೆಕ್ ಒಳ ಹರಿವು ಇದ್ದು, ಜಲಾಶಯದ ಗರಿಷ್ಟ ಮಟ್ಟ 2922 ಅಡಿ ಇದೆ. ಜಲಾಶಯದಲ್ಲಿ ಇಂದು 2876.93 ಅಡಿ ತಲುಪಿದೆ. ಕಳೆದ ವರ್ಷ ಇದೇ ಅವಧಿಗೆ ಈ ಡ್ಯಾಂ ಅರ್ಧದಷ್ಟು ತುಂಬಿತ್ತು. ಆದರೆ ಈ ಬಾರಿ ಕಾಲು ಭಾಗದಷ್ಟೂ ಭರ್ತಿಯಾಗಿಲ್ಲ.

    ಉತ್ತರ ಕರ್ನಾಟಕ: ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ಒಳ ಹರಿವು ಹೆಚ್ಚಳವಾಗಿದೆ. ಧಾರಾಕಾರ ಮಳೆಗೆ ಬ್ರಿಜ್ ಕಂ ಬ್ಯಾರೇಜ್ ಮುಳುಗಡೆಯಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡುರ ಕಲ್ಲೊಳ ಗ್ರಾಮದ ನಡುವಿನ ಸಂಪರ್ಕ ಸೇತುವೆ ಮಳೆಗೆ ಮುಳುಗಿದೆ. ಮಳೆ ಹೀಗೆಯೇ ಮುಂದುವರಿದಲ್ಲಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಸಂಪರ್ಕ ಕಡಿತದಿಂದಾಗಿ ಜನರು 7 ಕಿ.ಮೀ. ಸುತ್ತಿ ಬಳಸಿ ಸಂಚಾರ ಮಾಡುತ್ತಿದ್ದಾರೆ.

    ರಾಮದುರ್ಗ ತಾಲೂಕಿನಲ್ಲ ಮಳೆ ಅವಾಂತರಕ್ಕೆ ಮನೆ ಕುಸಿದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಬೆಳಗಾವಿ ಜಿಲ್ಲೆ ರಾಮದುರ್ಗತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಮನೆ ಕುಸಿದ ಪರಿಣಾಮ ಮಲ್ಲಿಕಾರ್ಜುನ @ ಸಂತೋಷ ಮುದಕಪ್ಪ ಮಸ್ಕಿ (31) ಮೃತಪಟ್ಟಿದ್ದಾನೆ.

    ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಜಲಾಶಯಕ್ಕೆ 2 ಅಡಿ ನೀರು ಬಂದಿದೆ. ಜಲಾಶಯದ ಗರಿಷ್ಠ ಮಟ್ಟ 2476.50 ಅಡಿಯಾಗಿದ್ದು, ಇಂದು ನೀರಿನ ಪ್ರಮಾಣ 2464 ಅಡಿಗೆ ತಲುಪಿದೆ.

    ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲೂಕು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಭದ್ರಾ, ತುಂಗಾ, ಹೇಮಾವತಿ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ.

     

     

  • ಉಡುಪಿ: ಕೊನೆಗೂ ಬಯಲಾಯ್ತು ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಯ ರಹಸ್ಯ

    ಉಡುಪಿ: ಕೊನೆಗೂ ಬಯಲಾಯ್ತು ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಯ ರಹಸ್ಯ

    ಉಡುಪಿ: ಜಿಲ್ಲೆಯ ಪಡುಬೆಳ್ಳೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ರಹಸ್ಯ ಇದೀಗ ಬೆಳಕಿಗೆ ಬಂದಿದೆ.

    ತಾಲೂಕಿನ ಶಿರ್ವ ಗ್ರಾಮದ ಪಡುಬೆಳ್ಳೆಯ ಶಂಕರ ಆಚಾರ್ಯ (50) ನಿರ್ಮಲಾ ಆಚಾರ್ಯ( 44) ಅವರ ಮಕ್ಕಳಾದ ಶ್ರೇಯಾ( 22) ಶೃತಿ (23) ಎಂಬ ಒಂದೇ ಕುಟುಂಬದವರು ಜುಲೈ 13ರಂದು ಸೆನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಆದ್ರೆ ಇದೀಗ ನಕಲಿ ಚಿನ್ನ ಅಡವಿಟ್ಟು ಸಾಲ ತೆಗೆದಿದ್ದೇ ಸಾಮೂಹಿಕ ಆತ್ಮಹತ್ಯೆಗೆ ಕಾರಣವೆಂದು ತಿಳಿದುಬಂದಿದೆ.

    ಮೃತ ಶಂಕರ ಆಚಾರ್ಯ ಅವರು ಇನ್ನಂಜೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ನ ಕುಂಜಾರುಗಿರಿ ಶಾಖೆಯಲ್ಲಿ ಸುಮಾರು 3 ಕೆ.ಜಿಯಷ್ಟು ನಕಲಿ ಚಿನ್ನ ಅಡ ಇರಿಸಿದ್ದರು. 64 ಲಕ್ಷ ರೂಪಾಯಿ ಸಾಲ ಪಡೆಯಲೆಂದು ಈ ಚಿನ್ನವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ.

    ಶಂಕರ್ ಆಚಾರ್ಯ ಅವರು ಕಳೆದ 30 ವರ್ಷದದಿಂದ ಪಡುಬೆಳ್ಳೆಯಲ್ಲಿ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದರು. ಶ್ರೇಯಾ ಮಣಿಪಾಲದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಶೃತಿ ಮೂಡುಬಿದರೆಯಲ್ಲಿ ಎಂಬಿಎ ಪೂರ್ಣಗೊಳಿಸಿ, ಸಿಎ ಪರೀಕ್ಷೆ ಪಾಸಾಗಿದ್ದು, ಹೈದರಾಬಾದ್‍ನಲ್ಲಿ ಉದ್ಯೋಗದಲ್ಲಿರುವ ಕಾರ್ಕಳ ನಿವಾಸಿಯೊಂದಿದೆ ಆಗಸ್ಟ್ ನಲ್ಲಿ ಮದುವೆ ನಿಶ್ಚಿತವಾಗಿತ್ತು.

    ಪ್ರಕರಣ ಸಂಬಂಧ ಶಿರ್ವ ಪೊಲೀಸರು ತನಿಖೆ ಕೈಗೊಂಡಿದ್ದು, ಇದೀಗ ಸೊಸೈಟಿ ಮ್ಯಾನೇಜರ್ ಉಮೇಶ್ ಅಮೀನ್, ಸರಾಫ(ಅಸಲಿ-ನಕಲಿ ಚಿನ್ನ ಪರೀಕ್ಷಕ) ಉಮೇಶ್ ಆಚಾರ್ಯ ಬಂಧಿಸಿ ವಿಚಾರಣೆ ನಡೆಸಿದ್ದಾರೆ.