Tag: ಉಡುಪಿ

  • ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು

    ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು

    ಉಡುಪಿ: ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ 75ನೇ ಸ್ಮರಣಾ ಕಾರ್ಯಕ್ರಮದಲ್ಲಿ ಸ್ವಾಮೀ ವಿವೇಕಾನಂದರ ಹಿಂದೂ ಧರ್ಮದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ನನ್ನ ಧಿಕ್ಕಾರವಿದೆ ಎಂದು ವಾಗ್ದಾಳಿ ನಡೆಸಿದರು.

    ಕರಾವಳಿಗರು ಬುದ್ಧಿವಂತರೆಂಬ ಪ್ರತೀತಿ ಇತ್ತು. ಆದರೆ ಇಂದು ಕೋಮುವಾದಿ- ತಾಲಿಬಾನಿಗಳೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಧರ್ಮಗುರುಗಳು ಮತ್ತು ಧರ್ಮಪೀಠಗಳು ಕೋಮುವಾದಿಗಳ ರಿಕ್ರೂಟ್‍ಮೆಂಟ್ ಸೆಂಟರ್ ಆಗುತ್ತಿವೆ. ಧರ್ಮಗುರುಗಳು ರಾಜಕೀಯ ಪಕ್ಷ ಸೇರಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಪೇಜಾವರಶ್ರೀಗಳು ಉಡುಪಿ ಕೃಷ್ಣಮಠದಲ್ಲಿ ನಡೆಸಿದ ಇಫ್ತಾರ್ ಕೂಟಕ್ಕೆ ಪರೋಕ್ಷ ಟಾಂಗ್ ನೀಡಿದರು.

    ಇಫ್ತರ್ ಕೂಟ ಮಾಡಿದಾಗ ನಮಗೆ ರೋಮಾಂಚನ ಆಯ್ತು. ಆದ್ರೆ ಮರುದಿನ ಉಮಾಭಾರತಿ ಬಂದು ಆಶೀರ್ವಾದ ಪಡೆಯುತ್ತಾರೆ. ರಾಮಮಂದಿರ ನಿರ್ಮಾಣದ ಬಗ್ಗೆಯೂ ಅಲ್ಲೇ ಮಾತುಕತೆಯಾಯ್ತು. ಮಾದಿಗರ ಸ್ವಾಮೀಜಿಗೆ ಪೇಜಾವರಶ್ರೀಗಳ ಸಂಪರ್ಕವಾದ ಮೇಲೆ ಅವರೂ ಬಿಜೆಪಿ ಸ್ವಾಮೀಜಿಯಾದರು ಎಂದರು.

    ನಾನು ಕಾಂಗ್ರೆಸ್ ಪಕ್ಷ ಸೇರಿಲ್ಲ. ಮುಂದೆ ಗೊತ್ತಿಲ್ಲ. ಆದ್ರೆ ಕಾಂಗ್ರೆಸ್ ಸಿದ್ಧಾಂತ ನನಗೆ ಒಪ್ಪಿಗೆ ಇದೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಂಘ ಪರಿವಾರದ ಯಾವ ನರಪಿಳ್ಳೆಯೂ ಇರಲಿಲ್ಲ. ವಾಜಪೇಯಿ ಈ ಬಗ್ಗೆ ಕ್ಷಮಾಪಣಾ ಪತ್ರ ಬರೆದಿದ್ದಾರೆ. ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಬ್ರಿಟೀಷರ ಜೊತೆ ಸೇರಿಕೊಳ್ಳಲು ತಯಾರಾಗಿದ್ದರು. ಮುಖವಾಡದ ದೇಶದ್ರೋಹಿಗಳನ್ನು ಬೆತ್ತಲು ಮಾಡಬೇಕು ಎಂದು ಅಮೀನ್ ಮಟ್ಟು ಕರೆ ನೀಡಿದರು.

    ಬಿಜೆಪಿ ಅಧಿಕಾರಕ್ಕೆ ಬರಲು ರಾಜೀವ್ ಗಾಂಧಿ ಕಾರಣ. 18ನೇ ವಯಸ್ಸಿಗೆ ಮತ ಚಲಾಯಿಸುವ ಹಕ್ಕು ನೀಡಿದರು. 21 ವಯಸ್ಸಿನ ಮಿತಿ ಇದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಪ್ರಧಾನಿ ಮೋದಿ ದೊಡ್ಡ ಜಾದೂಗಾರ. ಮೋಸ ಮಾಡುತ್ತಾರೆಂದು ಗೊತ್ತಿದ್ದರೂ ನಮಗೆ ಏನೂ ಮಾಡಲಾಗುತ್ತಿಲ್ಲ ಎಂದು ಹರಿಹಾಯ್ದರು.

     

  • ರಸ್ತೆಯ ಹೊಂಡಕ್ಕೆ ಬಿದ್ದು ಈಜಾಡಿದ್ರು: ಉಡುಪಿಯಲ್ಲಿ ನಡೀತು ವಿಭಿನ್ನ ಪ್ರತಿಭಟನೆ

    ರಸ್ತೆಯ ಹೊಂಡಕ್ಕೆ ಬಿದ್ದು ಈಜಾಡಿದ್ರು: ಉಡುಪಿಯಲ್ಲಿ ನಡೀತು ವಿಭಿನ್ನ ಪ್ರತಿಭಟನೆ

    ಉಡುಪಿ: ಮಣಿಪಾಲ ನಗರದ ಬಸ್ ನಿಲ್ದಾಣದ ರಸ್ತೆಯನ್ನು ರಸ್ತೆ ಅಂತ ಕರೆಯೋದು ಕಷ್ಟ. ಯಾಕಂದ್ರೆ ರಸ್ತೆ ಅನ್ನೋದಕ್ಕೆ ಅಲ್ಲಿ ರಸ್ತೆ ಇಲ್ಲ. ಬರೀ ಹೊಂಡ- ಗುಂಡಿಗಳಿಂದಲೇ ತುಂಬಿಕೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮತ್ತು ತಾರನಾಥ ಮೆಸ್ತಾ ಅವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಹಲವು ಮನವಿಗಳಿಂದ ಬೇಸತ್ತು ನಿತ್ಯಾನಂದ ಒಳಕಾಡು ಅವರು ರಸ್ತೆಯಲ್ಲಿರುವ ಹೊಂಡಕ್ಕೆ ಇಳಿದು ಈಜಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ರಸ್ತೆಯಲ್ಲಿರುವ ಹೊಂಡದ ಆಳ ಎಷ್ಟಿದೆ ಅಂದ್ರೆ ನಿತ್ಯಾನಂದ ಒಳಕಾಡು ಮಲಗಿದವರು ಮುಳುಗುವಷ್ಟು ಹೊಂದಿದೆ ಎಂದು ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ಖಂಡಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿತ್ಯಾನಂದ ಒಳಕಾಡು, ದೇಶದಲ್ಲೇ ಮಣಿಪಾಲಕ್ಕೆ ಒಂದು ವಿಶಿಷ್ಟ ಸ್ಥಾನಮಾನವಿದೆ. ಆದರೆ ಮಣಿಪಾಲದ ಈ ರಸ್ತೆ ಪಂಚಾಯತ್ ರಸ್ತೆಗಿಂತ ಕೀಳು ಮಟ್ಟಕ್ಕೆ ಇಳಿದಿದೆ. ವಾರದಲ್ಲಿಯೇ ಮೂರ್ನಾಲ್ಕು ಅಪಘಾತಗಳು ಆಗುತ್ತಿದೆ ಎಂದರು.

    ಇದು ಕೆಎಂಸಿ ಆಸ್ಪತ್ರೆ ಇರುವ ಪ್ರದೇಶ. ಹೀಗಾಗಿ ಇಲ್ಲಿ ಅಂಬುಲೆನ್ಸ್ ಓಡಾಟ ಇಲ್ಲಿ ಜಾಸ್ತಿ. ಆದ್ರೆ ಹೊಂಡ ಗುಂಡಿಯ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಅನಾರೋಗ್ಯ ಪೀಡಿತರಿಗೆ ಇದು ನರಕದ ರೀತಿಯಲ್ಲಿರುವ ರಸ್ತೆ ಆಗಿದೆ. ನಗರಸಭೆಗೆ ಕೇಳಿದ್ರೆ ಇದು ರಾಷ್ಟ್ರೀಯ ಹೆದ್ದಾರಿ ಅಂತ ಹೇಳುತ್ತಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕೇಳಿದ್ರೆ ಇದು ನಗರಸಭೆಯ ಜವಾಬ್ಧಾರಿ ಅಂತ ಹೇಳುತ್ತಾರೆ ಎಂದು ಹೇಳಿದರು.

    ಈ ಹಿಂದೆ ನಿತ್ಯಾನಂದರ ಸಮಾಜ ಸೇವೆಯನ್ನು ಪಬ್ಲಿಕ್ ಟಿವಿ ಗುರುತಿಸಿ, ‘ಪಬ್ಲಿಕ್ ಹಿರೋ’ ಕಾರ್ಯಕ್ರಮದಲ್ಲಿ ಸುದ್ದಿ ಪ್ರಸಾರ ಮಾಡಿತ್ತು.

    https://youtu.be/FUzwjukmN0U

  • ವಿಡಿಯೋ: ನಾಯಿ ಬೆನ್ನತ್ತಿ ಬಂದು ಬಾತ್‍ರೂಮಿನಲ್ಲಿ ಅವಿತಿದ್ದ ಚಿರತೆ ಸೆರೆ

    ವಿಡಿಯೋ: ನಾಯಿ ಬೆನ್ನತ್ತಿ ಬಂದು ಬಾತ್‍ರೂಮಿನಲ್ಲಿ ಅವಿತಿದ್ದ ಚಿರತೆ ಸೆರೆ

    ಉಡುಪಿ: ಆಹಾರವನ್ನ ಅರಸಿಕೊಂಡು ಕಾಡಿನಿಂದ ಅಲೆವೂರು ಗ್ರಾಪಂ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

    ಆಹಾರಕ್ಕಾಗಿ ನಾಯಿಯನ್ನು ಬೆನ್ನತ್ತಿ ಬಂದ ಚಿರತೆ ಬಾತ್ ರೂಮಿನಲ್ಲಿ ಅವಿತುಕೊಂಡು ಕುಳಿತ್ತಿತ್ತು. ಇಂದು ಮುಂಜಾನೆ ಮನೆಯವರು ಬಾತ್‍ರೂಮಿಗೆ ತೆರಳಿದಾಗ ಚಿರತೆ ಅವಿತು ಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮನೆಯವರು ಬಾತ್ ರೂಮಿನ ಬಾಗಿಲನ್ನು ಭದ್ರಗೊಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಈ ವಿಚಾರವನ್ನು ಮುಟ್ಟಿಸಿದ್ದರು.

    ವಿಚಾರ ತಿಳಿದು ಕುಂದಾಪುರ ವಿಭಾಗದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಾತ್ ರೂಮಿನ ಬಾಗಿಲಿನ ಹೊರಗಡೆ ಬೋನನ್ನು ಫಿಕ್ಸ್ ಮಾಡಿದ್ದರು. ಬಾಗಿಲಿನ ಎತ್ತರದಷ್ಟು ಕಬ್ಬಿಣದ ಶಟರ್ ಫಿಕ್ಸ್ ಮಾಡಿದ್ದು, ಬಾತರೂಮಿನ ಬಾಗಿಲು ತೆಗೆಯುತ್ತಿದ್ದಂತೆ ಚಿರತೆ ಓಡಿ ಬಂದು ಬೋನಿನೊಳಗೆ ಬಿದ್ದಿದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಬಾಗಿಲು ಬಂದ್ ಮಾಡಿದ್ದಾರೆ. ಈ ಚಿರತೆಯನ್ನು ಅರಣ್ಯ ಇಲಾಖೆಯವರು ತೆಗೆದುಕೊಂಡು ಹೋಗಿದ್ದಾರೆ.

    ಕಳೆದ ಒಂದು ತಿಂಗಳಲ್ಲಿ ಅಲೆವೂರು ಗ್ರಾಪಂ ವ್ಯಾಪ್ತಿಯಲ್ಲಿ ಮೂರ್ನಾಲ್ಕು ಬಾರಿ ಚಿರತೆ ಕಂಡುಬಂದಿತ್ತು. ಸಂಜೆಯಾಗುತ್ತಿದ್ದಂತೆ ಸ್ಥಳೀಯರು ಓಡಾಡಲು ಕೂಡ ಆತಂಕ ಪಡುತ್ತಿದ್ದರು. ಈ ಚಿರತೆ ಬಂಧನದ ಮೂಲಕ ಅಲೆವೂರು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

     

  • ಚಂದ್ರಗ್ರಹಣ: ಉಡುಪಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ

    ಚಂದ್ರಗ್ರಹಣ: ಉಡುಪಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ

    ಉಡುಪಿ: ಜಿಲ್ಲೆಯಲ್ಲೂ ಸೋಮವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ದರ್ಶನವಾಯಿತು. ಆಗಸದಲ್ಲಿ ನಡೆದ ಈ ಕೌತುಕವನ್ನು ಕೃಷ್ಣನೂರಿನ ಮಂದಿ ಕಣ್ತುಂಬಿಕೊಂಡರು. ಕೊಲ್ಲೂರಲ್ಲಿ ರಾತ್ರಿ 1 ಗಂಟೆಯವರೆಗೂ ಮೂಕಾಂಬಿಕೆಗೆ ವಿಶೇಷ ಪೂಜೆ ನಡೆಯಿತು.

    ಉಡುಪಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತುಳಸೀಧಾಮ ಭೂಷಿತ ಶ್ರೀಕೃಷ್ಣನಾಗಿ ಶ್ರೀಕೃಷ್ಣ ಕಂಗೊಳಿಸುತ್ತಿದ್ದನು. ತುಳಸೀದಳ ಮತ್ತು ತುಳಸಿ ಹಾರಗಳಿಂದ ಶ್ರೀಕೃಷ್ಣನಿಗೆ ಈ ಅಲಂಕಾರ ಮಾಡಲಾಗಿತ್ತು. ಕಡೆಗೋಲು ಶ್ರೀಕೃಷ್ಣನಿಗೆ ಪ್ರತಿದಿನ ಒಂದೊಂದು ಅಲಂಕಾರ ಮಾಡಲಾಗಿತ್ತು. ಚಂದ್ರಗ್ರಹಣ ಹಿನ್ನೆಲೆಯಲ್ಲಿ ತುಳಸಿ ದಳಗಳಿಂದ ಪರ್ಯಾಯ ಸ್ವಾಮೀಜಿಯವರು ಅಲಂಕಾರ ಮಾಡಿದ್ದರು.

    ಗ್ರಹಣದ ದೋಷ ದೇವರಿಗೆ- ದೇವರನ್ನು ಕಣ್ತುಂಬಿಕೊಂಡು ಆರಾಧಿಸುವ ಭಕ್ತರಿಗೆ ತಟ್ಟದಿರಲಿ ಅಂತ ತುಳಸಿದಳಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಹಣ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಸೋಮವಾರ ರಾತ್ರಿ ಊಟವನ್ನು ಭಕ್ತರಿಗೆ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು.

    ವರ್ಷದ ಮೊದಲ ಚಂದ್ರಗ್ರಹಣಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಸುಮಾರು 2 ಗಂಟೆಗಳವರೆಗೆ ಚಂದ್ರಗ್ರಹಣನಿಗೆ ಕೇತುಗ್ರಸ್ತ ಚಂದ್ರಗ್ರಹಣವಾಗಿತ್ತು. ರಾತ್ರಿ 10.52ಕ್ಕೆ ಆರಂಭವಾದ ಗ್ರಹಣ ರಾತ್ರಿ 12.48ಕ್ಕೆ ಕೊನೆಯಾಯಿತು. ನಿನ್ನೆ ಹುಣ್ಣಿಮೆಯಾಗಿತ್ತು. ಹೀಗಾಗಿ ಸೂರ್ಯ-ಚಂದ್ರನ ನಡುವೆ ಭೂಮಿ ಬಂದ ಕಾರಣ ಕೆಲ ಹೊತ್ತು ಚಂದಿರ ತನ್ನ ಪ್ರಭೆಯನ್ನೇ ಕಳೆದುಕೊಂಡು ಕತ್ತಲಲ್ಲಿ ಮರೆಯಾಗಿದ್ದನು.

    ಭಾರತೀಯ ಸಂಪ್ರದಾಯದಲ್ಲಿ ಚಂದ್ರಗ್ರಹಣಕ್ಕೆ ಸಾಕಷ್ಟು ಮಹತ್ವವವಿದೆ. ಧಾರ್ಮಿಕ ದೃಷ್ಟಿಕೋನದಲ್ಲಿ ನೋಡೋದಾದ್ರೆ, ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಹುಣ್ಣಿಮೆ ದಿನವಾದ ನಿನ್ನೆ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಿದೆ. ಈ ಹೊತ್ತಲ್ಲಿ ಉಪವಾಸ ಆಚರಣೆ ಮಾಡಲಾಯಿತು. ಹಲವಾರು ಕಡೆಗಳಲ್ಲಿ ದೇವರ ದರ್ಶನ ಇರಲಿಲ್ಲ. ಇತ್ತ ವೈಜ್ಞಾನಿಕ ಲೋಕಕ್ಕೂ ಇದು ಕೌತುಕ ಕ್ಷಣವಾಗಿತ್ತು.

    ಬಾನಿನಲ್ಲಿ ನಡೆದ ಈ ಕೌತುಕ ಉಡುಪಿಯ ಫೋಟೋಗ್ರಾಫರ್ ಪ್ರಸನ್ನ ಕೊಡವೂರು ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ:

     

  • ಬಿಜೆಪಿ ಸಚಿವರ ಮೇಲೂ ದಾಳಿ ಆಗಲಿ: ಸಚಿವ ಪ್ರಮೋದ್ ಮಧ್ವರಾಜ್

    ಬಿಜೆಪಿ ಸಚಿವರ ಮೇಲೂ ದಾಳಿ ಆಗಲಿ: ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ತಪ್ಪಲ್ಲ. ಆದ್ರೆ ಕೇವಲ ಕಾಂಗ್ರೆಸ್ ಸರ್ಕಾರವನ್ನೇ- ಕಾಂಗ್ರೆಸ್ ನ ಮಂತ್ರಿಗಳನ್ನೇ ಟಾರ್ಗೆಟ್ ಮಾಡುವುದು ಎಷ್ಟು ಸರಿ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಐಟಿ ಇಲಾಖೆಯನ್ನು ಪ್ರಶ್ನೆ ಮಾಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್, ಒಂದೆರಡು ಬಿಜೆಪಿ ಸಚಿವರ ಮೇಲೂ ದಾಳಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶ ಪೂರಿತ ದಾಳಿ ಎಂದು ಬಣ್ಣಿಸಿದರು.

    ಗುಜರಾತ್ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವುದು ಕೇಂದ್ರ ಸರ್ಕಾರಕ್ಕೆ ಇರಿಸುಮುರುಸು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ. ದಾಳಿ ಮಾಡಿದ್ದನ್ನು ವಿರೋಧಿಸಲ್ಲ. ಆದ್ರೆ ದಾಳಿ ಮಾಡಿದ ಟೈಂ ಸರಿಯಿಲ್ಲ. ಐಟಿ ದಾಳಿ ಹಿಂದೆ ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂಬ ಡಿಕೆಶಿ ತಾಯಿ ಗೌರಮ್ಮ ಗಂಭೀರ ಆರೋಪದ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರು ರಾಜಕೀಯವಾಗಿ ಎಷ್ಟು ಪರಿಪಕ್ವರು ಎಂಬುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.

    ಪ್ರಾಮಾಣಿಕ ಮಂತ್ರಿಗಳು- ಶಾಸಕರು ಸರಿಯಾಗಿ ಟ್ಯಾಕ್ಸ್ ಕಟ್ಟಿದವರು ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು. ಯಾರೂ ಚಿಂತಿಸಬೇಕಾದ ಅಗತ್ಯವೇ ಇಲ್ಲ. ನೋಟ್ ಬ್ಯಾನ್ ಆದಾಗ ನನ್ನ ಬಳಿ ಕೇವಲ ಐದು ಸಾವಿರ ರೂಪಾಯಿ ಹಳೆ ನೋಟ್ ಇತ್ತು ಎಂದರು.

     

  • ದಿನಕ್ಕೆ ಏಳು ಎಕ್ರೆ ಜಾಗದಲ್ಲಿ ನಾಟಿ ಮಾಡುತ್ತೆ ಈ ಹೈಟೆಕ್ ಕೃಷಿ ಯಂತ್ರ!

    ದಿನಕ್ಕೆ ಏಳು ಎಕ್ರೆ ಜಾಗದಲ್ಲಿ ನಾಟಿ ಮಾಡುತ್ತೆ ಈ ಹೈಟೆಕ್ ಕೃಷಿ ಯಂತ್ರ!

    ಉಡುಪಿ: ತಂತ್ರಜ್ಞಾನ ಬೆಳೆದಂತೆ ಕೃಷಿ-ಬೇಸಾಯ ನಾಶವಾಗಿ ಹೋಯ್ತು ಅನ್ನೋ ವಾದವೊಂದಿದೆ. ಜನ ಬೇಸಾಯ ಮಾಡೋದನ್ನು ಬಿಟ್ಟೇ ಬಿಟ್ಟರು ಅಂತಾರೆ. ಆದ್ರೆ ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ಕಾಲಿಟ್ಮೇಲೆ ಜನಕ್ಕೆ ಬೇಸಾಯದ ಮೇಲೆ ಮತ್ತೆ ಮನಸ್ಸಾಗಿದೆ.

    ಬೇಸಾಯ ಮಾಡೋದಕ್ಕೆ ಆಳುಗಳೇ ಸಿಗಲ್ಲ. ಕೆಲಸದಾಳು ಸಿಕ್ಕರೂ ಅವರಿಗೆ ಸಂಬಳ ಕೊಟ್ಟು ಪೂರೈಸಲ್ಲ. ಸಂಬಳ-ಖರ್ಚು ವೆಚ್ಚ ಕಳೆದ್ರೆ ನಮಗೇನೂ ಉಳಿಯಲ್ಲ. ಕರಾವಳಿಯಲ್ಲಿ ಬೇಸಾಯ ಮಾಡುವ ಮಂದಿಯ ಬಾಯಲ್ಲಿ ಬರುವ ಮಾತುಗಳಿವು. ಈ ಎಲ್ಲಾ ಕಾರಣಕ್ಕಾಗಿ ಜನ ಕೃಷಿ ಮಾಡೋದನ್ನೇ ಬಿಟ್ಟು ಬಿಟ್ಟಿದ್ದಾರೆ. ಆದರೆ ಇದೀಗ ಹೊಸ ತಂತ್ರಜ್ಞಾನ ಗದ್ದೆಗೆ ಇಳಿದಿರೋದ್ರಿಂದ ಮತ್ತೆ ಬೇಸಾಯ ಮಾಡೋ ಮನಸ್ಸು ರೈತರಿಗಾಗಿದೆ. ಜಪಾನ್ ದೇಶದ ನಾಟಿ ಮಾಡುವ ಅತ್ಯಾಧುನಿಕ ಯಂತ್ರ ಕರಾವಳಿ ಜಿಲ್ಲೆ ಉಡುಪಿಗೆ ಕಾಲಿಟ್ಟಿದೆ.

    ಹಿರಿಯಡ್ಕದ ಆನಂದ ಶೆಟ್ಟಿ ಅವರು ಈ ಬಾಡಿಗೆ ಯಂತ್ರವನ್ನು ಪಡೆದು ಸಸಿ ನೆಡುತ್ತಿದ್ದಾರೆ. ಮನುಷ್ಯ ಶಕ್ತಿಯಿಂದ ಉಳುಮೆ ಮಾಡೋದು-ನಾಟಿ ಮಾಡೋದು ಕಷ್ಟ. ಆದ್ರೆ ಈ ಯಂತ್ರ ಉತ್ತು-ನಾಟಿ ಮಾಡುತ್ತದೆ. ಕೃಷಿ ಏನಾದ್ರು ಮುಂದಿನ ದಿನಗಳಲ್ಲಿ ಉಳಿದ್ರೆ ಇಂತಹ ಯಂತ್ರಗಳಿಂದ ಮಾತ್ರ. ಈಗಿನ ಯುವಕರು ಇಂತಹ ತಂತ್ರಜ್ಞಾನ ನೋಡಿದ್ರೆ ಮತ್ತೆ ಕೃಷಿಯತ್ತ ಮುಖ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದು ಅವರು ಹೇಳುತ್ತಾರೆ.

    ದಿನವೊಂದಕ್ಕೆ ಕಡಿಮೆ ಅಂದ್ರೂ ಏಳೆಂಟು ಎಕರೆ ಜಮೀನಿನಲ್ಲಿ ನಾಟಿ ಕಾರ್ಯ ಮಾಡುವ ಸಾಮಥ್ರ್ಯವನ್ನು ಈ ಯಂತ್ರ ಹೊಂದಿದೆ. ಮನುಷ್ಯ ನೆಡುವುದಕ್ಕಿಂತ ಚೆನ್ನಾಗಿ ಪೈರನ್ನು ನಾಟಿ ಮಾಡುತ್ತದೆ. ಈ ಹಿಂದೆ ಬಂದ ಎಲ್ಲಾ ಮಷೀನ್‍ಗಳಿಗಿಂತ ಜಪಾನ್ ಮಷೀನ್ ನಡುವೆ ಅಂತರಗಳಿಲ್ಲದೆ ನಾಟಿ ಮಾಡುತ್ತದೆ. ನಾಟಿ ಯಂತ್ರದಲ್ಲೇ ಪೈರನ್ನು ಇಡೋದಕ್ಕೆ ಸ್ಥಳಾವಕಾಶ ಕೂಡಾ ಇದೆ.

    ಈ ಹೊಸ ಮಷೀನ್ ಬಂದಿರೋದ್ರಿಂದ ಉಡುಪಿಯ ಹಿರಿಯಡ್ಕದ ಯುವಕರೆಲ್ಲಾ ಸೇರಿ ನೂರು ಎಕ್ರೆ ಪಾಳುಬಿದ್ದ ಗದ್ದೆಯಲ್ಲಿ ಕೃಷಿ ಮಾಡೋದಕ್ಕೆ ಹೊರಟಿದ್ದಾರೆ. ಬಂದ ಆದಾಯವನ್ನು ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ದೇವಸ್ಥಾನ ಈ ಬಾರಿ ಜೀರ್ಣೋದ್ಧಾರ ಆಗಿದ್ದು ಕೊಯ್ಲು ಆಗುವ ಸಂದರ್ಭ ಬಂದ ಲಾಭಾಂಶದಲ್ಲಿ ಮುಂದಿನ ಬೆಳೆ ಮಾಡಲು ಹಣವನ್ನು ತೆಗೆದಿಟ್ಟು ಎಲ್ಲವನ್ನೂ ದೇವರಿಗೆ ಒಪ್ಪಿಸುವ ಹರಕೆಯನ್ನು ಹೇಳಿ ಉಳುಮೆ ಮಾಡಿಸಲಾಗಿದೆ.

    ತಂತ್ರಜ್ಞಾನ ಬಂದಮೇಲೆ ಜನ ಬೇಸಾಯ ಮರೆತ್ರು ಅನ್ನೋ ದೂರಿತ್ತು. ಆದ್ರೆ ಇದು ಆ ದೂರಿಗೊಂದು ಅಪವಾದ. ಕೃಷಿ ಕ್ಷೇತ್ರದಲ್ಲಿದು ಉತ್ತಮ ಬೆಳವಣಿಗೆ ಇಂತಹ ಬೆಳವಣಿಗೆ ಮತ್ತಷ್ಟು ಆದ್ರೆ ಒಳ್ಳೇದು.

  • ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ಉಡುಪಿ: ಮೊಮ್ಮಗನಿಗೆ ರಂಜಾನ್ ಗಿಫ್ಟ್ ಕೊಡಬೇಕು ಅಂತ ಮಹಿಳೆಯೊಬ್ಬರು ಭಟ್ಕಳದಲ್ಲಿ ಬಸ್ ಹತ್ತಿದ್ದಾರೆ. ಮಾತು ಬಾರದ ಕಿವಿ ಕೇಳದ ಅವರು ಒಂದು ಸ್ಟಾಪ್ ಮುಂದೆ ಬಸ್ಸಿಂದ ಇಳಿದಿದ್ದಾರೆ. ತಾನೆಲ್ಲಿ ಇಳಿದಿದ್ದೇನೆ ಅಂತ ತಿಳಿಯದ ಜುಲೇಖಾ ಊರೂರು ಸುತ್ತಿ ಕಣ್ಮರೆಯಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರವೂಫ್ ಇದೀಗ ಅಮ್ಮನಿಗಾಗಿ ಕೈಯ್ಯಲ್ಲಿ ಪೋಸ್ಟರ್ ಹಿಡಿದು ಊರೂರು ಸುತ್ತುತ್ತಿದ್ದಾರೆ. ಜೂನ್ 23ರಂದು ಕರಾವಳಿಯಲ್ಲಿ ರಂಜಾನ್ ಹಬ್ಬವಿತ್ತು. ಭಟ್ಕಳದ ಜುಲೆಖಾ ಕುಂದಾಪುರದ ಹೆಮ್ಮಾಡಿಗೆ ತನ್ನ ಮೊಮ್ಮಗನನ್ನು ನೋಡಲು ಬಸ್ ಹತ್ತಿದ್ದರು. ಹೆಮ್ಮಾಡಿಯಲ್ಲಿ ಇಳಿಯುವ ಬದಲು ಕುಂದಾಪುರದಲ್ಲಿ ಇಳಿದಿದ್ದರು. ತಾನೆಲ್ಲಿ ಇಳಿದ್ದೇನೆ ಎಂಬುದನ್ನು ಅರಿಯದ ಜುಲೇಖಾ ಇದೀಗ ಕಳೆದುಹೋಗಿದ್ದಾರೆ. ತನ್ನ ತಾಯಿ ಕಳೆದು ಹೋಗಿದ್ದಾರೆ ಅನ್ನೋದು ಗೊತ್ತಾಗಿ ಕತಾರ್‍ನಿಂದ ಮಗ ಬಂದಿದ್ದಾರೆ. ಮಂಗಳೂರು ಸೇರಿ ಹಲವು ಕಡೆ ಹುಡುಕಾಟ ನಡೆದಿದೆ. ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಗಲ್ಲಿ ಗಲ್ಲಿಯಲ್ಲಿ ಪೋಸ್ಟರ್- ಸ್ಟಿಕ್ಕರ್ ಅಂಟಿಸಲು ಶುರು ಮಾಡಿದ್ದಾರೆ.

    ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಪೊಲೀಸರು ಪತ್ತೆಗೆ ಪ್ರಯತ್ನ ಮಾಡುತ್ತಿಲ್ಲ ಅಂತ ಕುಟುಂಬಸ್ಥರು ದೂರಿದ್ದಾರೆ. ಭಾವಚಿತ್ರದಲ್ಲಿರುವ ಜಲೇಕಾ ಎಲ್ಲಾದ್ರು ಕಾಣಸಿಕ್ಕರೆ ಮಾಹಿತಿ ಕೊಡಿ ಅಂತ ಕೇಳಿಕೊಂಡಿದ್ದಾರೆ.

  • ರಸ್ತೆಗಾಗಿ ಪ್ರಧಾನಿಗೆ ಪತ್ರ ಬರೆದ ಉಡುಪಿಯ 85ರ ನಿವೃತ್ತ ಶಿಕ್ಷಕ- ಪ್ರಧಾನಿಯ ರಿಪ್ಲೈ ಬಂದ್ರೂ ರಾಜ್ಯಸರ್ಕಾರದಿಂದ ನೋ ರಿಪ್ಲೈ

    ರಸ್ತೆಗಾಗಿ ಪ್ರಧಾನಿಗೆ ಪತ್ರ ಬರೆದ ಉಡುಪಿಯ 85ರ ನಿವೃತ್ತ ಶಿಕ್ಷಕ- ಪ್ರಧಾನಿಯ ರಿಪ್ಲೈ ಬಂದ್ರೂ ರಾಜ್ಯಸರ್ಕಾರದಿಂದ ನೋ ರಿಪ್ಲೈ

    ಉಡುಪಿ: ಇಲ್ಲಿನ ನಿವೃತ್ತ ಶಿಕ್ಷಕರೊಬ್ಬರು ತನ್ನೂರಿಗೊಂದು ರಸ್ತೆ ಬೇಕು ಅಂತ ಕಳೆದ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾಮ ಪಂಚಾಯತ್ ಹಾಗೂ ರಾಜ್ಯ ಸರ್ಕಾರದ ಮೊರೆ ಹೋದ್ರೂ ಪ್ರಯೋಜನವಾಗದೆ ಕೊನೆಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.

    ನಿವೃತ್ತ ಶಿಕ್ಷಕರಾಗಿರೋ ಗಣಪತಿ ರಸ್ತೆಗಾಗಿ ಹೋರಾಡುತ್ತಿರುವವರು. ಉಡುಪಿಯ ಹೆಬ್ರಿ ಸಮೀಪದ ಕಳ್ತೂರಿನವರಾದ ಇವರಿಗೆ 85 ವರ್ಷ ವಯಸ್ಸು. ಊರುಗೋಲು ಹಿಡ್ಕೊಂಡು ತಿರುಗೋ ಇವರು ನಮಗೆ ಏನಾದ್ರೂ ಸೌಲಭ್ಯ ಕೊಡಿ ಅಂತಿಲ್ಲ. ಬದಲಾಗಿ ನಮ್ಮೂರಿಗೊಂದು ರಸ್ತೆ ಮಾಡಿಕೊಡಿ ಅಂತಿದ್ದಾರೆ. ಇದಕ್ಕಾಗಿ ಈ ಜೀವ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾ.ಪಂ ನಿಂದ ಹಿಡಿದು ರಾಜ್ಯ ಸರ್ಕಾರದವರೆಗೂ ಪತ್ರ ಬರೆದು ಬರೆದು ಸುಸ್ತಾದ್ರು. ಆದ್ರೂ ಕೆಲಸ ಆಗಿಲ್ಲ. ಪ್ರಯತ್ನ ಬಿಡದೇ ಕೊನೆಗೆ ಪ್ರಧಾನಿಗೂ ಪತ್ರ ಬರೆದೇ ಬಿಟ್ಟರು.

    ಪ್ರಧಾನಿ ಕಚೇರಿಗೆ ಪತ್ರ ಬರೆದು 6 ತಿಂಗಳೊಳಗೆ ಅಲ್ಲಿಂದ ರಿಪ್ಲೈ ಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಮಸ್ಯೆ ಬಗೆಹರಿಸಿಕೊಡುವಂತೆ ಪ್ರಧಾನಿ ಹೇಳಿ 6 ತಿಂಗಳು ಕಳೆದಿದೆ. ಆದ್ರೆ ರಾಜ್ಯ ಸರ್ಕಾರ ಅದರ ಬಗ್ಗೆ ಯೋಚನೆ ಮಾಡೋದ್ ಬಿಡಿ, ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ಕೊಟ್ಟಿಲ್ಲ.

    ಒಟ್ಟಿನಲ್ಲಿ ಇಳಿ ವಯಸ್ಸಿನಲ್ಲೂ ತಮ್ಮೂರಿಗೆ ಒಂದು ರಸ್ತೆ ಆಗ್ಬೇಕು ಅಂತಾ ಹೋರಾಡ್ತಿರೋ ಈ ಹಿರಿ ಜೀವದ ಪ್ರಯತ್ನವನ್ನು ಮೆಚ್ಚಲೇ ಬೇಕು. ಆದ್ರೆ ಸರ್ಕಾರ ಮಾತ್ರ ರಸ್ತೆಯಲ್ಲಿ ಓಡಾಡುವ ಭಾಗ್ಯ ಕರುಣಿಸ್ತಿಲ್ಲ. ಹೀಗಾಗಿ ಕಳ್ತೂರಿಗೆ ಗದ್ದೆಯಂತಹ ರಸ್ತೆಯೇ ಗತಿ ಆಗಿದೆ.

     

  • ಸಚಿವ ರಮಾನಾಥ ರೈಗೆ ಗೃಹ ಇಲಾಖೆ ಖಾತೆ: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಹೀಗೆ

    ಸಚಿವ ರಮಾನಾಥ ರೈಗೆ ಗೃಹ ಇಲಾಖೆ ಖಾತೆ: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಹೀಗೆ

    ಉಡುಪಿ: ಗೃಹ ಇಲಾಖೆ ಸಚಿವ ರಮಾನಾಥ ರೈ ಪಾಲಾಗಲಿದೆ ಅನ್ನೋದನ್ನು ಮಾಧ್ಯಮಗಳಲ್ಲಿ ಓದಿ ಕೇಳಿ ತಿಳಿದುಕೊಂಡಿದ್ದೇನೆ. ರೈ ಅವರಿಗೆ ಗೃಹಖಾತೆ ಸಿಕ್ಕರೆ ಅದು ಬರೀ ಹೆಸರಿಗೆ ಮಾತ್ರವಾಗಲಿದೆ. ಆದ್ರೆ ನಿಜವಾದ ಗೃಹಸಚಿವ ಕೆಂಪಯ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈ ಹೆಬ್ಬೆಟ್ಟು ಒತ್ತಲು ಮಾತ್ರ ಗೃಹಖಾತೆಗೆ ಉಪಯೋಗವಾಗುತ್ತಾರೆ. ಸಿಎಂ ಸಿದ್ದರಾಮಯ್ಯಗೆ ಕೆಂಪಯ್ಯ ಅನಿವಾರ್ಯವೆನ್ನೂದನ್ನು ಬಹಿರಂಗವಾಗಿ ತೋರ್ಪಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

    ಕರಾವಳಿಯಲ್ಲಿ ಕೋಮು ಭಾವನಾತ್ಮಕ ವಿಚಾರ ಇಟ್ಟುಕೊಂಡು ಎರಡು ರಾಜಕೀಯ ಪಕ್ಷಗಳು ಚುನಾವಣೆಗೆ ಹೋಗುತ್ತಿದೆ. ಆದ್ರೆ ಇಬ್ಬರಿಗೂ ಈ ಎರಡು ಜಿಲ್ಲೆಗಳ ಅಭಿವೃದ್ಧಿ ಬೇಕಿಲ್ಲ ಎಂದು ಆರೋಪಿಸಿದರು.

    ಇದನ್ನೂ ಓದಿ: ರಮಾನಾಥ್ ರೈ ಗೆ ಗೃಹ ಖಾತೆ ನೀಡಲು ಸಿಎಂ ಚಿಂತನೆ

    ಮೈಸೂರಿನನಲ್ಲಿ ಸಿಎಂ ಆಡಿದ ಮಾತಿಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿರುವ ಕೆರೆಗಳಿಗೆ ನೀರು ಹಾಯಿಸಲು ಆಗದಿದ್ದರೆ ನಮ್ಮಲ್ಲಿರುವ ನಾಲ್ಕು ಜಲಾಶಯಗಳು ಪಕ್ಕದ ರಾಜ್ಯಕ್ಕೆ ನೀರು ಬಿಡುವುದಕ್ಕೆ ನಿರ್ಮಾಣ ಮಾಡಿದ್ದಾ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಬಿಜೆಪಿ ದೇಶಾದ್ಯಂತ ಇತರೆ ಪಕ್ಷಗಳನ್ನು ನಿರ್ನಾಮ ಮಾಡಲು ಹೊರಟಿದೆ ಎಂದ ಕುಮಾರಸ್ವಾಮಿ, ಗುಜರಾತ್-ಬಿಹಾರದಲ್ಲಿ ಕಾಂಗ್ರೆಸ್ ಕಥೆ ಮಾಡಿದ್ದುಣ್ಣೋ ಮಹಾರಾಯನಂತಾಗಿದೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಜೆಡಿಎಸ್‍ನ 8 ಮಂದಿ ಶಾಸಕರನ್ನು ಕಾಂಗ್ರೆಸ್ ಸೆಳೆದುಕೊಂಡಿತು. ಈಗ ಅದಕ್ಕೆ ಈ ಸ್ಥಿತಿ ಎದುರಾಗಿದೆ. ಮೊದಲು ರಾಜ್ಯಕ್ಕೆ ರಕ್ಷಣೆ ಕೊಡಿ. ಆ ಮೇಲೆ ರೆಸಾರ್ಟ್ ನಲ್ಲಿರುವ ಗುಜರಾತ್ ಶಾಸಕರಿಗೆ ರಕ್ಷಣೆ ಕೊಡುವಿರಂತೆ ಎಂದು ಎಚ್‍ಡಿಕೆ ಚಾಟಿ ಬೀಸಿದರು.

  • ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಆಳ್ವಾಸ್ ಬೆನ್ನಿಗೆ ನಿಂತ ಎಚ್‍ಡಿಕೆ

    ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಆಳ್ವಾಸ್ ಬೆನ್ನಿಗೆ ನಿಂತ ಎಚ್‍ಡಿಕೆ

    ಉಡುಪಿ: ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯ ಶ್ರೀ ನಿಗೂಢ ಸಾವಿನ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹೆಸರಿಗೆ ಮಸಿ ಬಳಿಯಬೇಡಿ ಅಂತ ಹೇಳುವ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಂಸ್ಥೆಯ ಬೆನ್ನಿಗೆ ನಿಂತಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಳ್ವಾಸ್ ಕಾಲೇಜು ಮೂರು ಲಕ್ಷ ಕುಟುಂಬಕ್ಕೆ ನೆರವಾಗಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತಿದೆ. ಸಾವಿನ ಪ್ರಕರಣದ ಬಗ್ಗೆ ಚರ್ಚೆ ಆರಂಭವಾಗಿದೆ. ಸರ್ಕಾರ ಪ್ರಕರಣ ಸತ್ಯಾಸತ್ಯತೆ ಅರಿಯಬೇಕು ಅಂತ ಹೇಳಿದ್ದಾರೆ.

    ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವ ಈ ವಿಚಾರವಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. 26 ಸಾವಿರ ಮಕ್ಕಳು ಹಾಸ್ಟೆಲ್ ನಲ್ಲಿದ್ದಾರೆ. 4 ಸಾವಿರ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಕಾವ್ಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಕ್ಕೆ ಪುಕ್ಕ ಕಟ್ಟಲಾಗುತ್ತಿದೆ. ಈ ಮೂಲಕ ಸಂಸ್ಥೆಯ ಹೆಸರಿಗೆ ಮಸಿ ಬಳಿಯಬೇಡಿ. ಎಲ್ಲಾ ಸಂಘಟನೆಗಳು ರಾಜಕೀಯ ನಿಲ್ಲಿಸಬೇಕು ಅಂತಾ ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.

    ಇದನ್ನೂ ಓದಿ: ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

    ಸಿಬ್ಬಂದಿ, ವಿದ್ಯಾರ್ಥಿಗಳ ವಿಚಾರಣೆ: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಸಹಿತ 6 ವಿದ್ಯಾರ್ಥಿಗಳ ವಿಚಾರಣೆ ನಡೆಸಲಾಗುತ್ತಿದೆ.

    ಎಸಿಪಿ ರಾಜೇಂದ್ರ ನೇತೃತ್ವದ ತಂಡದಿಂದ ಹಾಸ್ಟೆಲ್ ವಾರ್ಡನ್, ಶಿಕ್ಷಕರು, ಸಹಪಾಠಿಗಳು, ಸಿಬ್ಬಂದಿ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಸಿಸಿಟಿವಿ ಫೂಟೇಜ್, ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪರಿಶೀಲನೆ ಹಾಗೂ ಫೋನ್ ಸಂಭಾಷಣೆ, ಹೆತ್ತವರು ಹೇಳಿಕೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಂತೆಯೇ ಕಾವ್ಯಾಳ ಮರಣೋತ್ತರ ವರದಿ ಕೂಡ ಇಂದು ಸಲ್ಲಿಕೆಯಾಗುವ ಸಾಧ್ಯತೆಗಳಿವೆ.

    https://www.youtube.com/watch?v=75vzrVm8Z6w

    https://www.youtube.com/watch?v=BgvrrloxXoQ

    https://www.youtube.com/watch?v=9upWi0NOWqw