Tag: ಉಡುಪಿ

  • ಉಡುಪಿಯಲ್ಲಿ 70 ಮಿಲಿ ಮೀಟರ್ ಮಳೆ ದಾಖಲು

    ಉಡುಪಿಯಲ್ಲಿ 70 ಮಿಲಿ ಮೀಟರ್ ಮಳೆ ದಾಖಲು

    ಉಡುಪಿ: ಜಿಲ್ಲೆಯಾದ್ಯಂತ ಇಂದು ಬಿರುಸಿನ ಮಳೆಯಾಗುತ್ತಿದೆ. ಮಧ್ಯಾಹ್ನ ಆರಂಭವಾದ ಮಳೆ ಸಂಜೆಯವರೆಗೂ ಸುರಿಯುತ್ತಿದೆ. ಕುಂದಾಪುರ ಮತ್ತು ಬೈಂದೂರಿನಲ್ಲಿ ವಿಪರೀತ ಗಾಳಿ ಮಳೆ ಶುರುವಾಗಿದೆ. ಜನರಿಗೆ ಸಂತಸ ಮೂಡಿಸಿದೆ.

    ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿರುವ ಕಾರ್ಕಳ ತಾಲೂಕು ಹೆಬ್ರಿ ಅಜೆಕಾರು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 70 ಮಿಲಿ ಮೀಟರ್ ಮಳೆಯಾಗಿ ದಾಖಲಾಗಿದೆ.

    ಜಿಲ್ಲೆಯಾದ್ಯಂತ ಕಾರ್ಮೋಡ ಮುಸುಕಿದ ವಾತಾವರಣವಿದ್ದು ರಾತ್ರಿ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೆಜಮಾಡಿಯಿಂದ ಶಿರೂರುವರೆಗಿನ ಎಲ್ಲ ಬಂದರುಗಳಿಗೆ ಜಿಲ್ಲಾಡಳಿತ ಮತ್ತು ಮೀನುಗಾರಿಕಾ ಇಲಾಖೆಯಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

     

  • ಪೇಜಾವರ ಶ್ರೀಗಳಿಗಿಂದು ಹರ್ನಿಯಾ ಆಪರೇಷನ್- ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ

    ಪೇಜಾವರ ಶ್ರೀಗಳಿಗಿಂದು ಹರ್ನಿಯಾ ಆಪರೇಷನ್- ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ

    ಉಡುಪಿ: ಇಲ್ಲಿನ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಇಂದು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರು ಸ್ವಾಮೀಜಿಗೆ 11.30ಕ್ಕೆ ಆಪರೇಷನ್ ಮಾಡಲಿದ್ದಾರೆ.

    87 ವಯಸ್ಸಿನ ಸ್ವಾಮೀಜಿ ಮೊದಲ ಬಾರಿಗೆ ಆಪರೇಷನ್‍ಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ಯಾರೂ ಭಯ- ಆತಂಕ ಪಡುವ ಅಗತ್ಯ ಇಲ್ಲ. ನಾನು ಗಟ್ಟಿಯಾಗಿದ್ದೇನೆ. ಇದೊಂದು ಚಿಕ್ಕ ಆಪರೇಷನ್. ಇತ್ತೀಚೆಗೆ ನೋವು ಜಾಸ್ತಿಯಾಗಿದ್ದರಿಂದ ವೈದ್ಯರ ಸಲಹೆಯಂತೆ ಅದನ್ನು ಉಪಶಮನ ಮಾಡಲು ಮುಂದಾಗಿದ್ದೇನೆ ಎಂದಿದ್ದಾರೆ.

    ಪರ್ಯಾಯ ಅವಧಿಯಲ್ಲಿ ಹತ್ತಾರು ಕಾರ್ಯಕ್ರಮ ಇರೋದರಿಂದ ಅದಕ್ಕಿಂತ ಮುಂಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಆಪರೇಷನ್ ಮತ್ತು ವಿಶ್ರಾಂತಿಯ ಸಮಯದಲ್ಲಿ ಶ್ರೀಕೃಷ್ಣನ ಪೂಜೆಯನ್ನು ಕಿರಿಯಶ್ರೀ ಕೈಗೊಳ್ತಾರೆ. ನಾನು ಅನುಷ್ಠಾನಗಳನ್ನೆಲ್ಲಾ ಮಾಡುತ್ತೇನೆ ಎಂದು ಹೇಳಿದರು.

  • ಉಡುಪಿಯಲ್ಲಿ ಮುಂಗಾರು ಮಳೆ ಅಬ್ಬರ- ಬೆಳಗ್ಗೆಯಿಂದ ಸುರಿಯುತ್ತಿರುವ ಭಾರೀ ಮಳೆ

    ಉಡುಪಿಯಲ್ಲಿ ಮುಂಗಾರು ಮಳೆ ಅಬ್ಬರ- ಬೆಳಗ್ಗೆಯಿಂದ ಸುರಿಯುತ್ತಿರುವ ಭಾರೀ ಮಳೆ

    ಉಡುಪಿ: ಜಿಲ್ಲೆಯಲ್ಲಿ ಮುಂಗಾರು ತನ್ನ ಅಬ್ಬರ ತೋರಿದೆ. ಜಿಲ್ಲೆಯಾದ್ಯಂತ ಬೆಳಗ್ಗೆಯಿಂದ ಬಿರುಸಿನ ಮಳೆ ಸುರಿಯುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಮತ್ತು ಕಾರ್ಕಳ ತಾಲೂಕಿನಲ್ಲೂ ಭಾರೀ ಮಳೆಯಾಗುತ್ತಿದೆ.

    ಕಳೆದ ಒಂದು ತಿಂಗಳಿನಿಂದ ಮುಂಗಾರು ಬ್ರೇಕ್ ಕೊಟ್ಟಿತ್ತು. ಕರಾವಳಿ ಜಿಲ್ಲೆ ಉಡುಪಿ ಬೇಸಿಗೆ ಕಾಲಕ್ಕೆ ತಿರುಗಿತ್ತು. ಆದ್ರೆ ಕಳೆದ ರಾತ್ರಿ ಮತ್ತು ಇಂದು ಬೆಳಗ್ಗೆ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ವಾತಾವರಣ ಸಂಪೂರ್ಣ ತಂಪಾಗಿದೆ. ಮೋಡ ಮುಸುಕಿದ ವಾತಾವರಣವಿದ್ದು ದಿನಪೂರ್ತಿ ಮಳೆ ಮುಂದುವರೆಯುವ ಸಾಧ್ಯತೆಯಿದೆ.

    ಸಮುದ್ರದಲ್ಲಿ ತೆರೆಗಳ ಅಬ್ಬರ ಹೆಚ್ಚಾಗಿದ್ದು- ಮೀನುಗಾರರಿಗೆ ಜಿಲ್ಲಾಡಳಿತದಿಂದ ಜಾಗರೂಕರಾಗಿರುವಂತೆ ಎಚ್ಚರಿಕೆ ಸಂದೇಶ ರವಾನಿಸಿದೆ. ರಸ್ತೆಯಲ್ಲಿ ಮಳೆನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ವ್ಯತ್ಯಯವಾಗಿದೆ. ಭತ್ತದ ಬೆಳೆಗೆ ಈ ಮಳೆ ಬಹಳ ಉಪಯುಕ್ತವಾಗಿದ್ದು- ಗದ್ದೆಗೆ ನೀರು ಹಾಯಿಸುವುದರಿಂದ ರೈತರು ಪಾರಾಗಿದ್ದಾರೆ.

  • ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಿಡಿದು ಉಡುಪಿ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಿಡಿದು ಉಡುಪಿ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಉಡುಪಿ: 134 ವರ್ಷಗಳ ಇತಿಹಾಸವಿರುವ ಉಡುಪಿಯ ಸರ್ಕಾರಿ ಮುಖ್ಯ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಿದ್ದನ್ನು ವಿರೋಧಿಸಿ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿದ್ದಾರೆ.

    ಉಡುಪಿ ನಗರದ ನಡುವೆ ಇರುವ 134 ವರ್ಷಗಳ ಇತಿಹಾಸವಿರುವ ಉಡುಪಿಯ ಸರ್ಕಾರಿ ಮೈನ್ ಶಾಲೆಯನ್ನು ಬೇರೆಡೆ ಶಿಫ್ಟ್ ಮಾಡಿದ್ದನ್ನು ವಿರೋಧಿಸಿ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾ ನಾಗರೀಕ ಸಮಿತಿ ನೇತೃತ್ವದಲ್ಲಿ ವಿಭಿನ್ನವಾಗಿ ಪ್ರತಿಭಟಿಸಲಾಯ್ತು. ಕೆಂಪುಕೋಟೆಯ ಮೇಲೆ ಹಾರಿಸಲಾದ ತಿರಂಗದಷ್ಟೆ ಅಳತೆಯ ಧ್ವಜವನ್ನು ಹಿಡಿದು ಪ್ರತಿಭಟನೆ ಮಾಡಲಾಯ್ತು.

    ಇದೇ ಸಂದರ್ಭ ಮಾತನಾಡಿದ ಪಬ್ಲಿಕ್ ಹೀರೋ, ಜಿಲ್ಲಾ ನಾಗರೀಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮಾತನಾಡಿ, ಸ್ವಾತಂತ್ರ್ಯ ಪೂರ್ವ ಶಾಲೆ ಇದು. ರಾಜಕೀಯ ಕಾರಣಕ್ಕೆ ಶಾಲೆಯನ್ನು ಶಿಫ್ಟ್ ಮಾಡಲಾಗಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು.

    ಉದ್ಯಮಿ ಬಿ.ಆರ್ ಶೆಟ್ಟಿ ಒಡೆತನದ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಆಸ್ಪತ್ರೆಯ ಎದುರು ಭಾಗಕ್ಕೆ ಶಾಲೆ ಅಡ್ಡವಾಗುತ್ತದೆ ಎಂಬ ಉದ್ದೇಶದಿಂದ ಶಾಲೆಯನ್ನು ತೆರವುಗೊಳಿಸಲಾಗುತ್ತಿದೆ.

  • ಪಾಕ್ ದುರ್ಯೋಧನ, ಚೀನಾ ದುಶ್ಯಾಶನನಂತೆ ಭಾರತಾಂಬೆಯನ್ನು ಕಾಡುತ್ತಿವೆ: ಪೇಜಾವರ ಶ್ರೀ

    ಪಾಕ್ ದುರ್ಯೋಧನ, ಚೀನಾ ದುಶ್ಯಾಶನನಂತೆ ಭಾರತಾಂಬೆಯನ್ನು ಕಾಡುತ್ತಿವೆ: ಪೇಜಾವರ ಶ್ರೀ

    ಉಡುಪಿ: ನಮ್ಮ ದೇಶಕ್ಕೆ ಬಂದಿರುವ ಆಂತರಿಕ ತೊಂದರೆ ಹಾಗು ಬಾಹ್ಯ ತೊಂದರೆಯನ್ನು ನಿವಾರಿಸಲು ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಭಾರತೀಯರು ಮಾಡಬೇಕು. ಬಾಹ್ಯವಾಗಿ ಪಾಕಿಸ್ತಾನ ಹಾಗೂ ಚೈನಾ ದೇಶಗಳು ದುರ್ಯೋಧನ ಮತ್ತು ದುಶ್ಯಾಸನ ರೀತಿಯಲ್ಲಿ ವರ್ತಿಸಿ ಭಾರತ ಮಾತೆಯನ್ನು ಕಾಡುತ್ತ ಇದ್ದಾರೆ ಅಂತ ಪೇಜಾವರ ಶ್ರೀ ಹೇಳಿದ್ದಾರೆ.

    ಅವರು ಇಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದಲ್ಲಿ ಧ್ವಜಾರೋಹಣ ಮಾಡಿ ಬಳಿಕ ಮಾತನಾಡಿ, ಶ್ರೀಕೃಷ್ಣನು ಪಾಂಚಾಲಿಗೆ ಅಕ್ಷಯ ವಸ್ತ್ರ ನೀಡಿದ ಹಾಗೆ ಭಾರತ ಮಾತೆಗೆ ಅಕ್ಷಯ ಶಕ್ತಿಯನ್ನು ಕೊಟ್ಟು ದೇಶಾಭಿವೃದ್ಧಿಯಾಗಿ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯುವಂತೆ ಅನುಗ್ರಹಿಸಲಿ. ನೀರು, ಗಾಳಿ, ಮನುಷ್ಯರು, ಪ್ರಾಣಿಗಳೆಲ್ಲ ಸೇರಿ ಭಾರತ ಮಾತೆಯ ಪ್ರಕೃತಿ ನಿರ್ಮಾಣವಾಗಿದೆ. ಇದನ್ನು ಕಲುಷಿತ ಮಾಡದೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂದೇಶ ನೀಡಿದರು.

    1947ರ ಆಗಸ್ಟ್ 15ರ ಮಧ್ಯರಾತ್ರಿ ರಥಬೀದಿಯಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾಸಮುದ್ರ ತೀರ್ಥ ಸ್ವಾಮೀಜಿಯವರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಮಾನ್ಯ ತೀರ್ಥ ಸ್ವಾಮೀಜಿಯವರು ಹಾಗೂ ಉಳಿದ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಿರುವುದನ್ನು ನೆನಪಿಸಿದರು.

    ಪೇಜಾವರ ಕಿರಿಯ ಸ್ವಾಮೀಜಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿದರು. ಕೇಸರಿ ಮುಂಡಾಸು-ಬಿಳಿ ಅಂಗಿ- ಹಸಿರು ಕಚ್ಚೆಯಲ್ಲಿ ಕಡೆಗೋಲಿನಲ್ಲಿ ಶ್ರೀಕೃಷ್ಣ ಕಂಗೊಳಿಸುತ್ತಿದ್ದಾನೆ.

  • ಮುದ್ದು ಮಾಡೋಕೂ ಸೈ-ನೀರಲ್ಲಿ ಬಿದ್ದವರ ಎತ್ತೋಕೂ ಸೈ ಈ ನಾಯಿ

    ಮುದ್ದು ಮಾಡೋಕೂ ಸೈ-ನೀರಲ್ಲಿ ಬಿದ್ದವರ ಎತ್ತೋಕೂ ಸೈ ಈ ನಾಯಿ

    ಉಡುಪಿ: ಅಪರಿಚಿತರು ಬಂದ್ರೆ ಎಚ್ಚರಿಸೋದಕ್ಕೆ ನಾಯಿಗಳನ್ನ ಮನೆಗಳಲ್ಲಿ ಸಾಕ್ತೇವೆ. ಇನ್ನು ಕೆಲವರು ಮಕ್ಕಳ ಖುಷಿಗಾಗಿ ನಾಯಿಗಳನ್ನು ಸಾಕುತ್ತಾರೆ. ಅದ್ರೆ ಕೆನಡಾದಲ್ಲಿ ಈ ನಾಯಿಗಳನ್ನು ರಕ್ಷಣೆಗಾಗಿ ಸಾಕಲಾಗುತ್ತಿದೆ. ಆ ಬ್ರೀಡನ್ನು ಕರ್ನಾಟಕದಲ್ಲಿ ಬೆಳೆಸೋ ಉದ್ದೇಶದಿಂದ ಇಬ್ಬರು ಸ್ನೇಹಿತರು ಉಡುಪಿಗೆ ಕೆನಡಾದ ನಾಯಿಗಳನ್ನ ತಂದಿದ್ದಾರೆ.

    ನ್ಯೂ ಫೌಂಡ್‍ಲ್ಯಾಂಡ್ ಎಂಬ ಜಾತಿಯ ನಾಯಿಯನ್ನು ಇದನ್ನ ಬರೀ ಮನೆ ಕಾಯೋದಕ್ಕೆ ಕೆನಡಾದ ಜನ ಬಳಸುತ್ತಿಲ್ಲ. ಮಕ್ಕಳ ಲಾಲನೆ ಪಾಲನೆ ಜೊತೆ ರಕ್ಷಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಕೋಸ್ಟ್ ಗಾರ್ಡ್‍ನ ಸಿಬ್ಬಂದಿ ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆಗೂ ಉಪಯೋಗ ಮಾಡ್ತಾರೆ. ಇದೀಗ ಕೆನಡಾದಿಂದ ಈ ಬ್ರೀಡ್ ಉಡುಪಿಗೆ ಬಂದಿದೆ. ಸಂತೆಕಟ್ಟೆ ನಿವಾಸಿ ಆಲ್ಫ್ರೆಡ್ ನಾಲ್ಕು ನಾಯಿಗಳನ್ನು ಕೊಂಡು ತಂದಿದ್ದಾರೆ.

    ನೋಡೋದಕ್ಕೆ ತುಂಬಾ ಚಂದದ ನಾಯಿ ಇದು. ದೇಹದ ತುಂಬೆಲ್ಲಾ ರೋಮ ಇರೋದ್ರಿಂದ ಎಲ್ಲರಿಗೂ ಇಷ್ಟ ಆಗ್ತದೆ. ಸದ್ಯ ಈ ನಾಯಿಗಳಿಗೆ ರಾಯಲ್ ಕೆನಲ್ ಆಹಾರ ನೀಡುತ್ತಿದ್ದಾರೆ. ದೊಡ್ಡದಾದ ಮೇಲೆ ಚಿಕನ್, ಬಿರಿಯಾನಿ, ಮೊಸರನ್ನ ಮತ್ತು ಮೀನು ಕೊಡುತ್ತಾರೆ. ದೊಡ್ಡ ತಲೆಯ ನಾಯಿ ಇದಾಗಿದ್ದು, ಮುಂದೆ ಬೆಳವಣಿಗೆ ಆದ್ಮೇಲೆ 100 ಕೆಜಿ ತೂಗುತ್ತದೆ. ರಕ್ಷಣೆಗಾಗಿ ಕೆನಡಾದಲ್ಲಿ ಈ ಬ್ರೀಡನ್ನು ಉಪಯೋಗ ಮಾಡ್ತಾರೆ. ಇಂಟರ್ ನೆಟ್‍ನಲ್ಲಿ ನೋಡಿ ಖರೀದಿ ಮಾಡಿದ್ದೇವೆ ಎಂದು ನಾಯಿಯ ಮಾಲೀಕ ಆಲ್ಫ್ರೆಡ್ ಪಬ್ಲಿಕ್ ಟಿವಿಗೆ ಹೇಳಿದರು.

    10 ಅಡಿಯಷ್ಟು ಎತ್ತರ ಬೆಳೆಯೋ ಈ ನಾಯಿ ಸುಮಾರು ನೂರು ಕೆಜಿಯವರೆಗೆ ತೂಗುತ್ತದೆ. ಸ್ವಿಮ್ಮಿಂಗ್ ಎಕ್ಸ್‍ಪರ್ಟ್ ಅಂತ ಹೆಸರು ಗಳಿಸಿರೋ ನ್ಯೂ ಫೌಂಡ್‍ಲ್ಯಾಂಡ್ ಬ್ರೀಡ್‍ನ ಒಂದೂವರೆ ತಿಂಗಳ ಮರಿನಾಯಿ 10 ರಿಂದ 12 ವರ್ಷ ಬದುಕುತ್ತದೆ. ಒಂದು ಲಕ್ಷ ರೂಪಾಯಿ ಕೊಟ್ಟು ಈ ಬ್ರೀಡ್ ನ ಮರಿಯನ್ನ ಖರೀದಿ ಮಾಡಲಾಗಿದೆ. ಬಿಸಿಯ ವಾತಾವರಣಕ್ಕೆ ಸುಸ್ತಾಗುವ ಈ ನಾಯಿಮರಿಗಳಿಗೆ ಎಸಿ, ಫ್ಯಾನ್, ಸ್ವಿಮ್ಮಿಂಗ್ ಅತ್ಯಗತ್ಯ. ತಿಂಗಳಿಗೆ 5 ರಿಂದ 15 ಸಾವಿರ ರೂಪಾಯಿಯವರೆಗೆ ಸಾಕಲು ಖರ್ಚಾಗುತ್ತದೆ.

    ಇಗ್ಲೆಂಡ್‍ನಲ್ಲಿ ಈ ಬ್ರೀಡನ್ನ ಸಾಕುತ್ತಾರೆ. ನನ್ನ ಗೆಳೆಯ ಕಂಪ್ಲೀಟ್ ಬ್ಲ್ಯಾಕ್ ಕಲ್ಲರ್ ಪಪ್ಪಿ ಖರೀದಿ ಮಾಡಿದ್ದಾನೆ. ನಾನು ಲೈಟ್ ಬ್ರೌನಿಶ್ ತೆಗೆದುಕೊಂಡಿದ್ದೇನೆ. ಇಲ್ಲಿನ ವೆದರ್ ತುಂಬಾ ಬಿಸಿ. ಅದಕ್ಕೆ ತಂಪಾದ ವಾತಾವರಣ ಬೇಕು. ಐಸ್‍ನ್ನು ಟಬ್‍ನಲ್ಲಿ ಹಾಕಿಟ್ರೆ ಅದರ ಜೊತೆ ಆಟಾಡುತ್ತೆ. ಬಹಳ ಇಷ್ಟಪಟ್ಟು ಈ ಬ್ರೀಡನ್ನು ಖರೀದಿ ಮಾಡಿರೋದಾಗಿ ಸಂತೆಕಟ್ಟೆಯ ನಿವಾಸಿ ರಂಜಿತ್ ಹೇಳುತ್ತಾರೆ.

    ಕರಾವಳಿ ಕಾವಲು ಪಡೆ ಪೊಲೀಸರು ಈ ಬ್ರೀಡ್‍ನ ನಾಯಿಯನ್ನು ಸಾಕಿದ್ರೆ ಸಮುದ್ರದ ಗಸ್ತಿನ ಸಂದರ್ಭ ಉಪಯೋಗಕ್ಕೆ ಬರುತ್ತಂತೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿದ್ರೆ ಸೆಕ್ಯೂರಿಟಿಗಾಗಿ ನ್ಯೂಫೌಂಡ್ ಲ್ಯಾಂಡ್ ಬಹಳ ಉಪಕಾರಿಯಾಗಬಹುದು.

  • ಕೃಷ್ಣಜನ್ಮಾಷ್ಟಮಿ: ಬೆಂಗ್ಳೂರಿನ ಇಸ್ಕಾನ್‍ನಲ್ಲಿ ವಿಶೇಷ ಪೂಜೆ, ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ ಇಲ್ಲ ಯಾಕೆ?

    ಕೃಷ್ಣಜನ್ಮಾಷ್ಟಮಿ: ಬೆಂಗ್ಳೂರಿನ ಇಸ್ಕಾನ್‍ನಲ್ಲಿ ವಿಶೇಷ ಪೂಜೆ, ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ ಇಲ್ಲ ಯಾಕೆ?

    ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. 5 ಸಾವಿರ ವರ್ಷಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಶ್ರೀಕೃಷ್ಣ ನಾನಾ ಅವತಾರಗಳನ್ನು ತಾಳಿದ್ದನಂತೆ. ಭೂಮಿಗೆ ಬಂದು ಭಕ್ತರನ್ನ ಹರಿಸಿ ಹೋಗಿದ್ನಂತೆ. ಇದೇ ನಂಬಿಕೆ ಮೇಲೆ ಇವತ್ತಿಗೂ ಶ್ರೀಕೃಷ್ಣನ ಜನ್ಮಾಷ್ಠಮಿಯನ್ನ ಮನೆ ಮನೆಯಲ್ಲೂ ಆಚರಿಸಲಾಗ್ತಿದೆ.

    ಇಂದು ಜನ್ಮಾಷ್ಠಮಿ ಆಗಿರೋದ್ರಿಂದ ಶ್ರೀಕೃಷ್ಣ ಮತ್ತೆ ಭೂಮಿಗೆ ಬರ್ತಾನೆ ಅನ್ನೋ ನಂಬಿಕೆಯಿದೆ. ಮನೆ ಮನೆಯಲ್ಲೂ ಪುಟ್ಟ ಪುಟ್ಟ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕಿಸಿ ಪೂಜೆ ಸಲ್ಲಿಸುವ ವಾಡಿಕೆಯಿದೆ.

    ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲೂ ಈಗಾಗಲೇ ನಾನಾ ಬಗೆಯ ಕಾರ್ಯಕ್ರಮಗಳು, ಪೂಜೆಗಳು ಜೋರಾಗಿ ನಡೆಯುತ್ತಿದೆ. ಇಸ್ಕಾನ್‍ನಲ್ಲಿ ಭಕ್ತರಿಗೆ ನೀಡಲು 2 ಲಕ್ಷ ಲಾಡುಗಳು ತಯಾರಾಗಿವೆ. ಸಾವಿರಾರು ಭಕ್ತರು ಬರೋದ್ರಿಂದ ರಾಜಾಜಿನಗರ ಸುತ್ತಾಮುತ್ತಾ ಸಂಚಾರ ವ್ಯತ್ಯಯವಾಗಲಿದ್ದು ಪೊಲೀಸರು ಬದಲಿ ಮಾರ್ಗ ಅನುಸರಿಸಲು ಸೂಚಿಸಿದ್ದಾರೆ.

    ಆದ್ರೆ ಕೃಷ್ಣನೂರು ಉಡುಪಿಯಲ್ಲಿ ಮಾತ್ರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಇಂದು ಆಚರಿಸಲಾಗುತ್ತಿಲ್ಲ. ಬದಲಾಗಿ ಸೆಪ್ಟೆಂಬರ್ 14ಕ್ಕೆ ಅಷ್ಟಮಿಯನ್ನು ಅಚರಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಕರಾವಳಿಯಲ್ಲಿ ಆಷಾಢ ಇರೋದ್ರಿಂದ ಇಲ್ಲಿ ಅಷ್ಟಮಿ ಇರೋದಿಲ್ಲ. ಹೀಗಾಗಿ ಇಂದು ಅಷ್ಟಮಿಯ ಆಚರಣೆ ಕೃಷ್ಣನೂರು ಉಡುಪಿಯಲ್ಲಿ ಇಲ್ಲ. ಶ್ರೀಕೃಷ್ಣನಿಗೆ ಜನ್ಮ ಇಲ್ಲ. ಅವನು ಅವತಾರವೆತ್ತಿದ್ದು ಎಂಬುವುದು ಭಾಗವತದಲ್ಲಿ ಉಲ್ಲೇಖವಿದೆ. ಇಂದು ಹಬ್ಬ ಆಚರಿಸುವವರು ಕೃಷ್ಣ ಜಯಂತಿಯನ್ನು ಆಚರಿಸುತ್ತಿದ್ದಾರೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

    ಕೃಷ್ಣ ಜನ್ಮಾಷ್ಟಮಿ ಆಗಬೇಕಾದ್ರೆ ಸಿಂಹ ಮಾಸದ-ರೋಹಿಣಿ ನಕ್ಷತ್ರ ಅಷ್ಟಮಿ ತಿಥಿಯಂದು ಚಂದ್ರೋದಯವಾಗುವ ಕಾಲ ಬರಬೇಕು. ಹೀಗಾಗಿ ಈ ಘಳಿಗೆ ಮುಂದಿನ ತಿಂಗಳು ಇರುವುದರಿಂದ ಕೃಷ್ಣನೂರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ.

  • ಶಾಲೆಗೆಂದು ಹೋದಾಕೆ ಮರಳಿ ಬಂದಿಲ್ಲ- ಯುವಕರಿಬ್ಬರಿಂದ ತಮಿಳ್ನಾಡಿಗೆ ಕಿಡ್ನಾಪ್ ಶಂಕೆ

    ಶಾಲೆಗೆಂದು ಹೋದಾಕೆ ಮರಳಿ ಬಂದಿಲ್ಲ- ಯುವಕರಿಬ್ಬರಿಂದ ತಮಿಳ್ನಾಡಿಗೆ ಕಿಡ್ನಾಪ್ ಶಂಕೆ

    ಉಡುಪಿ: ಶಾಲೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ 7ನೇ ತರಗತಿ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿಯ ಕುಂದಾಪುರ ತಾಲೂಕಿನ ಕಟ್ ಬೆಳ್ತೂರಿನಲ್ಲಿ ಪವಿತ್ರಾ ಎಂಬಾಕೆಯನ್ನು ಅಪಹರಿಸಲಾಗಿದೆ. ತನ್ನ ದೊಡ್ಡಪ್ಪನ ಮಗ ಮತ್ತು ಆತನ ಗೆಳೆಯನ ಜೊತೆ ಶಾಲೆಗೆ ಹೋಗುವುದಾಗಿ ಪವಿತ್ರಾ ಮನೆಯಿಂದ ಹೊರಟಿದ್ದಳು. ಆದ್ರೆ ಅತ್ತ ಶಾಲೆಗೂ ಹೋಗದೆ- ವಾಪಾಸ್ ಮನೆಗೂ ಬಾರದೆ ಪವಿತ್ರಾ ನಾಪತ್ತೆಯಾಗಿದ್ದಾಳೆ.

    ಸಂಜೆಯಾದರೂ ಮಗಳು ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಕುಂದಾಪುರ ಪೊಲೀಸ್ ಭಾನುವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನೇಪಾಳ ಮೂಲದ ಕುಂದಾಪುರದಲ್ಲಿ ಗೂರ್ಖಾ ಕೆಲಸ ಮಾಡುತ್ತಿರುವ ಭರತರಾಜ್ ಮತ್ತು ಸೋನಾರ ಎರಡನೇ ಮಗಳಾಗಿರುವ ಪವಿತ್ರಾ ಇಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಳು.

    ತನ್ನ ಅಣ್ಣನ ಮಗ ವಿಕ್ರಂ ಮತ್ತು ಆತನ ಗೆಳೆಯ ಸುನೀಲ್ ತಮಿಳುನಾಡಿನಿಂದ ವಾರದ ಹಿಂದೆ ಬಂದಿದ್ದರು. ಅವರೇ ಈಕೆಯನ್ನು ತಮಿಳುನಾಡಿಗೆ ಅಪಹರಣ ಮಾಡಿರಬಹುದು ಎಂಬುವುದು ಕುಟುಂಬದವರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ವಿಕ್ರಂಗೆ ಮೂರು ಮದುವೆಯಾಗಿದೆ. ಆತನೇ ಪವಿತ್ರಾಳನ್ನು ಅಪಹರಣ ಮಾಡಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಪೊಲೀಸರು ಅಪಹರಣ ಪ್ರಕರಣವನ್ನು ಶೀಘ್ರ ಪತ್ತೆ ಮಾಡಬೇಕೆಂದು ಪವಿತ್ರಾಳ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

    ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪವಿತ್ರಾಳ ಅಜ್ಜ, ವಿಕ್ರಂ ಈ ಹಿಂದೆ ಹಲವು ಯುವತಿಯರಿಗೆ ಮೋಸ ಮಾಡಿದ್ದಾನೆ. ಈ ಪ್ರಕರಣದಲ್ಲೂ ನಂಬಲು ಸಾಧ್ಯವಿಲ್ಲ. ಸಂಬಂಧದಲ್ಲಿ ಅಣ್ಣನಾದ್ರೂ ಆತ ಈಕೆಯನ್ನು ಕೂಡ ಮಾರಾಟ ಮಾಡಿರುವ ಸಾಧ್ಯತೆಯಿದೆ. ಈ ಬಗ್ಗೆ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಬೆಳಗ್ಗೆ 9 ಗಂಟೆಗೆ ಶಾಲೆಗೆ ಹೋಗಿದ್ದಾಳೆ. ತಂಗಿಯೂ ಜೊತೆಗೆ ಹೋಗಿದ್ದಳು. ವಿಕ್ರಂ ಮತ್ತು ಸುನೀಲ್ ಅಪಹರಿಸುವ ಸಾಧ್ಯತೆಯಿದೆ. ಸುನೀಲ್‍ಗಾಗಿ ಅಪಹರಿಸಿರುವ ಸಾಧ್ಯತೆಯಿದೆ. ಓದಿನಲ್ಲಿ ಪವಿತ್ರಾ ಮುಂದಿದ್ದಳು ಅಂತ ಪವಿತ್ರಾ ತಾಯಿ ಸೋನಾ ಹೇಳಿದ್ದಾರೆ.

  • ಜಲ್ಲಿ ಬಂಕರ್ ಕುಸಿದು ಇಬ್ಬರು ಕಾರ್ಮಿಕರ ಸಾವು

    ಜಲ್ಲಿ ಬಂಕರ್ ಕುಸಿದು ಇಬ್ಬರು ಕಾರ್ಮಿಕರ ಸಾವು

    ಉಡುಪಿ: ಜಲ್ಲಿ ಬಂಕರ್ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಶಿವಪುರದ ಮೂಕಾಂಬಿಕಾ ಕ್ರಷರ್‍ನಲ್ಲಿ ನಡೆದಿದೆ.

    ಸಂಜೀವ ಮತ್ತು ಜಗದೀಶ್ ಸಾವನ್ನಪ್ಪಿದ ಕಾರ್ಮಿಕರು. ಜಲ್ಲಿ ಪುಡಿ ತುಂಬಿಸುತ್ತಿದ್ದ ವೇಳೆ ಅವಘಡ ನಡೆದಿದ್ದು ಉಸಿರುಗಟ್ಟಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಕ್ರಷರ್‍ನಲ್ಲಿ ಬಂಡೆ ಕಲ್ಲನ್ನು ಪುಡಿ ಮಾಡಿ, ಜಲ್ಲಿ ಬಂಕರ್ ಒಳಗೆ ತುಂಬಿಸಿಡಲಾಗುತ್ತದೆ. ಬಂಕರ್‍ನಿಂದ ಟಿಪ್ಪರ್‍ಗೆ ಜಲ್ಲಿಯನ್ನು ತುಂಬಿ ಸಾಗಾಟ ಮಾಡಲಾಗುತ್ತದೆ.

    ಟಿಪ್ಪರ್‍ಗೆ ಜಲ್ಲಿ ಬಂಕರ್‍ನಿಂದ ಜಲ್ಲಿ ತುಂಬಿಸುತ್ತಿದ್ದ ವೇಳೆ ಬಂಕರ್ ತಗಡು ಶೀಟ್ ಕುಸಿದಿದೆ. ಜಲ್ಲಿ ರಾಶಿಯ ಕೆಳಗೆ ಸಿಲುಕಿಕೊಂಡ ಇಬ್ಬರೂ ಸಹ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬುಲ್ಡೋಜರ್ ಮೂಲಕ ಕುಸಿದ ಬಂಕರ್ ತೆರವುಗೊಳಿಸುವಷ್ಟರಲ್ಲಿ ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದಾರೆ.

    ಉಡುಪಿ ಎಸ್‍ಪಿ ಡಾ. ಸಂಜೀವ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ಜಾಮೀನಿಗೆ ಸುಪ್ರೀಂ ನಕಾರ

    ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ಜಾಮೀನಿಗೆ ಸುಪ್ರೀಂ ನಕಾರ

    ನವದೆಹಲಿ: ಉಡುಪಿ ಮೂಲದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

    ತನಿಖೆ ಪೂರ್ಣಗೊಳ್ಳುವ ತನಕ ಜಾಮೀನು ನೀಡಲು ಸಾಧ್ಯವಿಲ್ಲ. ಆರು ತಿಂಗಳೊಳಗೆ ತನಿಖೆ ಪುರ್ಣಗೊಳ್ಳದಿದ್ರೆ ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ನ್ಯಾ. ಎಸ್.ಎ. ಬೊಬ್ಡೆ, ನ್ಯಾ ನಾಗೇಶ್ವರ ರಾವ್ ನೇತೃತ್ವದ ದ್ವಿಸದಸ್ಯ ಪೀಠ ಆದೇಶಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡುವ ಕುರಿತು ಆರೋಪಿ ರಾಜೇಶ್ವರಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೋಟ ಇವರ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಆರೋಪಿಗಳು ಸುಪ್ರೀಂ ಕೋರ್ಟ್ ಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.

    ಏನಿದು ಪ್ರಕರಣ?: ದುಬೈನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಉಡುಪಿಯ ಭಾಸ್ಕರ್ ಶೆಟ್ಟಿ(52) ಕಳೆದ ವರ್ಷ ಜುಲೈ 28ರಿಂದ ಕಾಣೆಯಾಗಿದ್ದರು. ಈ ಕುರಿತು ಜುಲೈ 29ರಂದು ಭಾಸ್ಕರ್ ಶೆಟ್ಟಿ ತಾಯಿ ಮಣಿಪಾಲ ಪೊಲಿಸರಿಗೆ ದೂರು ನೀಡಿದ್ದರು. ಆದ್ರೆ ಪತಿ ನಾಪತ್ತೆಯಾಗರೋ ಕುರಿತು ಪತ್ನಿ ರಾಜೇಶ್ವರಿ ಹಾಗೂ ಪುತ್ರ ನವನೀತ್ ಶೆಟ್ಟಿ ಯಾವುದೇ ದೂರು ನೀಡದಿರುವುದರಿಂದ ಅನುಮಾನಗೊಂಡ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಪತ್ನಿ ಮಗ ಹಾಗೂ ಮಗನ ಸ್ನೇಹಿತ ನಿರಂಜನ್ ಕೊಲೆ ಮಾಡಿರುವ ಬಗ್ಗೆ ಬೆಳಕಿಗೆ ಬಂದಿತ್ತು.

    ಭಾಸ್ಕರ್ ಶೆಟ್ಟಿ ಅವರನ್ನು ಕೊಲೆಗೈದು ನಂದಳಿಕೆ ಎಂಬಲ್ಲಿ ಹೋಮ ಕುಂಡದಲ್ಲಿ ಹಾಕಿ ಸುಟ್ಟಿದ್ದರು.

    https://www.youtube.com/watch?v=K8JuJykqi_A

    https://www.youtube.com/watch?v=3WMLludJRRU

    https://www.youtube.com/watch?v=VUjoxc2emNs

    https://www.youtube.com/watch?v=kWyQttGrIRc

    https://www.youtube.com/watch?v=2IlEl29Jy7E

    https://www.youtube.com/watch?v=BIdqA1X-RUQ