Tag: ಉಡುಪಿ

  • ಕಚ್ಚಿದ ಹೆಬ್ಬಾವಿನೊಂದಿಗೇ ಆಸ್ಪತ್ರೆಗೆ ಬಂದ ಸ್ನೇಕ್ ಮಾಸ್ಟರ್!

    ಕಚ್ಚಿದ ಹೆಬ್ಬಾವಿನೊಂದಿಗೇ ಆಸ್ಪತ್ರೆಗೆ ಬಂದ ಸ್ನೇಕ್ ಮಾಸ್ಟರ್!

    ಉಡುಪಿ: ಹೆಬ್ಬಾವಿನಿಂದ ಕಚ್ಚಿಸಿಕೊಂಡು ಹೆಬ್ಬಾವಿನ ಜೊತೆಗೇ ವ್ಯಕ್ತಿ ಆಸ್ಪತ್ರೆಗೆ ಬಂದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನ ಕೋಟೆಬಾಗಿಲು ಪಾರ್ತಿಕಟ್ಟೆಯ ಬಳಿಯ ಮನೆಯೊಂದರಲ್ಲಿ ಬೃಹತ್ ಗಾತ್ರದ ಹಾವನ್ನು ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಹಿಡಿಯಲು ಯತ್ನಿಸಿದ್ದರು. ಈ ಸಂದರ್ಭ ಅವರ ಬಲಗೈಗೆ ಹಾವು ಕಚ್ಚಿದ್ದು, ಅದೇ ಹಾವಿನ ಸಮೇತ ಜೋಸೆಫ್ ಆಸ್ಪತ್ರೆಗೆ ತೆರಳಿ ವೈದ್ಯರ ಮುಂದೆ ನಿಂತಿದ್ದಾರೆ.

    ಪಾರ್ತಿಕಟ್ಟೆಯ ನಿವಾಸಿಯೋರ್ವರ ಮನೆಯ ಹಿತ್ತಲಲ್ಲಿ ಕೊಳಕು ಮಂಡಲ ಇದೆಯೆಂದು ಫೋನ್ ಮಾಡಿದ್ದರು. ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಸ್ಥಳಕ್ಕೆ ತೆರಳಿ ಹಾವು ಹಿಡಿಯಲು ಮುಂದಾಗಿದ್ದಾರೆ. ಸಂಪೂರ್ಣ ಹಾವು ಪೊದೆಯೊಳಗಿದ್ದು, ಪೊದೆಗಳನ್ನು ಬಿಡಿಸುತ್ತಿರುವಾಗ ಬೆದರಿದ ಹಾವು ಸ್ನೇಕ್ ಮಾಸ್ಟರ್ ಜೋಸೆಫ್ ಅವರ ಬಲಗೈಗೆ ಕಚ್ಚಿದೆ.

    ಕಚ್ಚಿದ ತಕ್ಷಣ ಶಾಕ್ ಆಗಿ ಜೋಸೆಫ್ ಹಾವನ್ನು ಬಿಟ್ಟಿದ್ದರು. ಬಳಿಕ ತಡಮಾಡದೆ ಕೈಗೊಂದು ಬಟ್ಟೆ ಕಟ್ಟಿಕೊಂಡು ಹಾವನ್ನು ಹಿಡಿದಿದ್ದಾರೆ. ಹಾವಿನೊಂದಿಗೆ ಸ್ಥಳೀಯರ ಸಹಕಾರದಿಂದ ಕುಂದಾಪುರ ಆಸ್ಪತ್ರೆಗೆ ಧಾವಿಸಿದ್ರು. ವೈದ್ಯರು ಚಿಕಿತ್ಸೆ ನೀಡಿದ ನಂತರ ಜೋಸೆಫ್ ಮನೆಗೆ ವಾಪಾಸ್ಸಾಗಿದ್ದಾರೆ.

    ಕೆಲವು ವರ್ಷಗಳಿಂದ ಹೆಮ್ಮಾಡಿಯಲ್ಲಿ ರಿಕ್ಷಾ ಚಾಲನೆ ವೃತ್ತಿಯ ಜೊತೆಗೆ ಹಾವು ಹಿಡಿಯುವ ಕಲೆ ಕರಗತ ಮಾಡಿಕೊಂಡಿದ್ದ ಜೋಸೆಫ್, ತಾಲೂಕಿನಲ್ಲಿ 2 ಸಾವಿರಕ್ಕೂ ಮಿಕ್ಕಿ ವಿಷಪೂರಿತ ಹಾವುಗಳನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

  • ಉಡುಪಿಯಲ್ಲಿ ಬಕ್ರೀದ್ ಆಚರಣೆ – ನೂರಾನಿ ಮಸೀದಿಯಲ್ಲಿ ನಮಾಜ್

    ಉಡುಪಿಯಲ್ಲಿ ಬಕ್ರೀದ್ ಆಚರಣೆ – ನೂರಾನಿ ಮಸೀದಿಯಲ್ಲಿ ನಮಾಜ್

    ಉಡುಪಿ: ಮುಸ್ಲಿಂ ಧರ್ಮೀಯರ ಪವಿತ್ರ ಬಕ್ರೀದ್ ಹಬ್ಬವನ್ನು ಉಡುಪಿಯಲ್ಲಿ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ನಾಳೆ ಬಕ್ರೀದ್ ಆಚರಿಸಲಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಇಂದು ಹಬ್ಬವನ್ನು ಆಚರಿಸಲಾಗುತ್ತಿದೆ.

    ರಂಜಾನ್ ಸಂದರ್ಭ ಕರಾವಳಿ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದಲ್ಲೂ ಚಂದ್ರದರ್ಶನಕ್ಕೆ ಅನುಸಾರವಾಗಿ ಹಬ್ಬ ಆಚರಿಸಲಾಗಿತ್ತು. ಕೇರಳದಲ್ಲಿ ಆಗಸ್ಟ್ 22ರಂದು ಚಂದ್ರದರ್ಶನ ಆದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಇಂದು ಬಕ್ರೀದ್ ಆಚರಿಸಲಾಗುತ್ತಿದೆ. ಇಂದು ಬೆಳ್ಳಂಬೆಳಗ್ಗೆ ಮುಸ್ಲಿಂ ಬಾಂಧವರು ಮಸೀದಿಗಳಿಗೆ ಬಂದು ಸಾಮೂಹಿಕ ನಮಾಜ್ ಸಲ್ಲಿಸಿದರು. ಧರ್ಮಗುರುಗಳ ಆಣತಿಯ ಮೇರೆಗೆ ಧಾರ್ಮಿಕ ವಿದಿ-ವಿಧಾನದಲ್ಲಿ ಪಾಲ್ಗೊಂಡರು. ನಂತರ, ಧರ್ಮಪ್ರವಚನ ನೆರವೇರಿತು.

    ಆಚರಣೆ ಏಕೆ?: ಪ್ರವಾದಿ ಇಬ್ರಾಹಿಂ ತನ್ನ ಮಗ ಇಸ್ಮಾಯಿಲ್‍ನನ್ನು ಅಲ್ಲಾಹುನಿಗೆ ತ್ಯಾಗದ ಸಂಕೇತವಾಗಿ ಬಲಿ ನೀಡಲು ಮುಂದಾಗಿದ್ದರು. ಈ ಸಂದರ್ಭ ದೇವದೂತ ಪ್ರತ್ಯಕ್ಷವಾಗಿ ಮಗನ ಬದಲಾಗಿ ಕುರಿಯನ್ನು ಬಲಿ ಕೊಡಲು ಆದೇಶಿಸಿದ್ದ. ಈ ದಿನವನ್ನು ಬಕ್ರೀದ್ ಎಂದು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ನಮಾಜ್ ನಂತರ ಮನೆಯಲ್ಲಿ ಕುರುಬಾನಿ ಮಾಡಿ ಬಂಧುಗಳಿಗೆ- ಗೆಳೆಯರಿಗೆ ಕುರಿ ಮಾಂಸವನ್ನು ಹಂಚಲಾಗುತ್ತದೆ. ಮಸೀದಿ ಆವರಣದಲ್ಲೂ ನಿರ್ಗತಿಕರಿಗೆ ನಮಾಜ್ ನಂತರ ಧನಸಹಾಯ ಮಾಡಲಾಯ್ತು.

    ಇಂದ್ರಾಣಿ ನೂರಾನಿ ಮಸೀದಿ ಧರ್ಮಗುರು ಮುಸೀಯುಲ್ಲಾ ಖಾನ್ ಮಾತನಾಡಿ, ಇದು ಸೌಹಾರ್ದದ ಹಬ್ಬ. ಹಿಂದೂ-ಮುಸ್ಲೀಮರು ಅಣ್ಣ-ತಮ್ಮಂದಿರಂತೆ ಜೀವಿಸೋಣ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯ, ಇಬ್ಬರೂ ಜೊತೆಯಾಗಿದ್ದರೆ ಪ್ರಪಂಚದಲ್ಲಿ ಮಿಂಚಲಿದೆ. ನಮಾಜ್ ಪಠಿಸಿದೆವು. ಪ್ರತಿಯೊಬ್ಬರು ಶುಭಾಶಯ ಹಂಚಿಕೊಂಡೆವು. ಮನೆಗೆ ಹೋಗಿ ಆಡು ಅಥವಾ ಕುರಿಯನ್ನು ಬಲಿಕೊಟ್ಟು ಹಬ್ಬದೂಟ ಮಾಡುತ್ತೇವೆ. ಬಡ ಬಗ್ಗರಿಗೂ ನಾವು ಇಂದು ಸಹಾಯ ಮಾಡಬೇಕು ಎಂದು ಖುರಾನ್ ನಲ್ಲಿ ಉಲ್ಲೇಖವಿದೆ ಅದರಂತೆ ಬಕ್ರೀದ್ ಆಚರಣೆ ಮಾಡುತ್ತೇವೆ ಎಂದರು.

    ಜಾಮಿಯಾ ಮಸೀದಿ ಅಧ್ಯಕ್ಷ ಶಬ್ಬೀರ್ ಅಹಮ್ಮದ್ ಮಾತನಾಡಿ, ಇಂದು ಕರಾವಳಿಯಲ್ಲಿ ಹಬ್ಬ ಆಚರಿಸುತ್ತೇವೆ. ನಮ್ಮ ಧರ್ಮಗುರುಗಳ ಆದೇಶದಂತೆ ಕುರಿಯನ್ನು ದೇವರಿಗೆ ಬಲಿಕೊಡುತ್ತೇವೆ. ದೇಶದ ಎಲ್ಲಾ ವಾಸಿಗಳಿಗೆ ಹಬ್ಬದ ಶುಭಾಶಯ. ಅಲ್ಲಾಹು ಎಲ್ಲರಿಗೆ ಒಳ್ಳೇದು ಮಾಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.

  • ಮಗಳನ್ನು ಬಾವಿಗೆ ತಳ್ಳಿ, ತಾನು ಆತ್ಮಹತ್ಯೆಗೆ ಶರಣಾದ ತಂದೆ

    ಮಗಳನ್ನು ಬಾವಿಗೆ ತಳ್ಳಿ, ತಾನು ಆತ್ಮಹತ್ಯೆಗೆ ಶರಣಾದ ತಂದೆ

    ಉಡುಪಿ: 8 ವರ್ಷದ ಮಗಳನ್ನು ಬಾವಿಗೆ ತಳ್ಳಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ.

    ಮಲ್ಪೆಯ ಕೊಡವೂರು ನಿವಾಸಿಯಾದ ಶರತ್ ತಮ್ಮದೇ ಮನೆಯ ಬಾವಿಗೆ ಮಗಳು ಕನ್ನಿಕಾಳನ್ನು ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರತ್ ಮತ್ತು ಕನ್ನಿಕಾ ಮಂಗಳವಾರ ರಾತ್ರಿ 12.30ರ ವೇಳೆಯಲ್ಲಿ ಮನೆಯಿಂದ ಕಾಣಿಯಾಗಿದ್ದರು. ಮನೆಯವರು ಸುತ್ತಮುತ್ತ ಹುಡುಕಾಟ ನಡೆಸಿ ಎಲ್ಲಾದರೂ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು.

    ಬುಧವಾರವೂ ಬಾರದೇ ಇದ್ದಾಗ ಮಲ್ಪೆ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದರು. ಆದರೆ ಇಂದು ಮನೆಯ ತೋಟದಲ್ಲಿದ್ದ ಬಾವಿಯಲ್ಲಿ ಇಬ್ಬರ ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದೆ. ಮಗಳನ್ನು ಬಾವಿಗೆ ತಳ್ಳಿ ನಂತರ ತಂದೆಯೂ ಹಾರಿರುವ ಶಂಕೆ ವ್ಯಕ್ತವಾಗಿದೆ.

    ಮುಂಚೆ ಅದೇ ಬಾವಿ ಸೇರಿದಂತೆ ಎಲ್ಲಾ ಕಡೆ ಹುಟುಕಾಟ ನಡೆಸಲಾಗಿತ್ತು. ಆದರೆ ಬಾವಿಗೆ ಹಾರಿರುವ ಬಗ್ಗೆ ಯಾವುದೇ ಕುರುಹುಗಳು ಇರಲಿಲ್ಲ. ಸದ್ಯ ಶವಗಳನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಶರತ್ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ವೃತ್ತಿಯನ್ನು ಮಾಡಿಕೊಂಡು ಬಂದಿದ್ದರು. ಮಂಗಳವಾರ ರಾತ್ರಿ ಕುಟುಂಬ ಸಮೇತರಾಗಿ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಾರಣಗಳೇ ಇಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಯಾವುದೇ ಜಗಳ-ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ತಂದೆ ಶರತ್ ಮಗಳ ಬಗ್ಗೆ ಬಹಳ ಕಾಳಜಿ ಮಾಡುತ್ತಿದ್ದರು. ಒಂದು ದಿನವೂ ಬಿಟ್ಟು ಇರುತ್ತಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹಾಗಾದ್ರೆ ಆತ್ಮಹತ್ಯೆಗೆ ಕಾರಣ ಏನೆಂಬುದು ನಿಗೂಢವಾಗಿಯೇ ಉಳಿದಿದೆ.

    ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಡುಪಿಯಲ್ಲಿ ಒಂದೇ ಕಡೆ ಕಾಣಿಸ್ತು ರಾಶಿ ರಾಶಿ ಹಾವು!- ಈ ರೀತಿಯ ಹಾವುಗಳು ಕಂಡ್ರೆ ಏನು ಮಾಡ್ಬೇಕು?

    ಉಡುಪಿಯಲ್ಲಿ ಒಂದೇ ಕಡೆ ಕಾಣಿಸ್ತು ರಾಶಿ ರಾಶಿ ಹಾವು!- ಈ ರೀತಿಯ ಹಾವುಗಳು ಕಂಡ್ರೆ ಏನು ಮಾಡ್ಬೇಕು?

    ಉಡುಪಿ: ಹಾವುಗಳು ಅಂದ್ರೆನೇ ಎಲ್ಲರಿಗೂ ಕುತೂಹಲ. ಅದ್ರಲ್ಲೂ ರಾಶಿ ರಾಶಿ ಹಾವುಗಳು ಒಂದೇ ಕಡೆ ಕಾಣಿಸಿಕೊಂಡ್ರೆ! ಇಂತಹದೊಂದು ದೃಶ್ಯ ಜಿಲ್ಲೆಯ ಅಂಬಾಗಿಲು ಸಮೀಪದ ಪುತ್ತೂರಿನಲ್ಲಿ ಕಂಡುಬಂದಿದೆ.

    ಈ ದೃಶ್ಯದಲ್ಲಿರೋದು ವಿಷರಹಿತ ಹಾವುಗಳು. ಕೋಮಲವಾಗಿ ಹಿಡಿದರೆ ಕಚ್ಚುವುದೂ ಇಲ್ಲ. ಸಾಮಾನ್ಯವಾಗಿ ಹಸಿರು ತೋಟ, ಹೊಲ-ಗದ್ದೆ ಮತ್ತು ಮನೆಯಂಗಳದ ಆಸುಪಾಸುಗಳಲ್ಲಿ ಹೆಚ್ಚಾಗಿ ಈ ಹಾವುಗಳು ವಾಸಿಸುತ್ತವೆ. ಈ ಹಾವಿಗೆ ಹಳದಿ ರೇಖೆಯ ಹುಲ್ಲು ಹಾವು, ಹಗಲಮರಿ, ನೈಬಾ, ತೊಡಂಬಳಕ ಅನ್ನೋ ಹೆಸರುಗಳಿವೆ. ಇಂಗ್ಲಿಷ್‍ನಲ್ಲಿ ಬಫ್ ಸ್ಟ್ರೈಪ್ಡ್ ಕೀಲ್ ಬ್ಯಾಕ್ ಅನ್ನೋ ಹೆಸರಿದೆ.

    ವಿಶೇಷ ಏನೆಂದರೆ ಈ ಹಾವೊಂದು ಹಾನಿಗೊಂಡ ಅಥವಾ ಘಾಸಿಗೊಂಡ ತಕ್ಷಣ “ಫೆರೋಮೋನ್” ಎಂಬ ವಾಸನಾದ್ರವ್ಯವನ್ನು ಸ್ರವಿಸುತ್ತದೆ. ಆಗ ಆ ವಾಸನೆಗೆ ಆಕರ್ಷಿತವಾಗಿ ಅದೇ ಜಾತಿಯ ನೂರಾರು ಹಾವುಗಳು ಆ ಜಾಗಕ್ಕೆ ಬಂದು ಮುತ್ತಿಕೊಳ್ಳುತ್ತದೆ. ಆದರೆ ಯಾರಿಗೂ ಹಾನಿ ಮಾಡುವುದಿಲ್ಲ. ಮಾರ್ಚ್ ನಿಂದ ನವೆಂಬರ್ ವರೆಗೆ ಇವುಗಳ ವಂಶೋತ್ಪತ್ತಿಯಕಾಲ. ಒಂದು ಹೆಣ್ಣು ಹಾವಿನೊಂದಿಗೆ ಹಲವು ಗಂಡುಹಾವುಗಳು ಕಂಡುಬರುತ್ತವೆ. ಆದ್ದರಿಂದ ಅವನ್ನು ಕಂಡು ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಮಾಹಿತಿ ನೀಡಿದ್ದಾರೆ.

    ಆಕಸ್ಮಾತಾಗಿ ಇಂತಹ ಜಾತಿಯ ಹಾವುಗಳನ್ನು ಕಂಡಲ್ಲಿ ಅವುಗಳ ಕ್ರಿಯೆಗೆ ತೊಂದರೆ ಮಾಡದೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ. ಈ ಹಾವುಗಳು ನಮ್ಮ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ವಾಸಿಸುವುದರಿಂದ ಆಯಾ ಪರಿಸರದ ಸೂಕ್ಷ್ಮ ಜೀವರಾಶಿಗಳ ವಂಶೋತ್ಪತ್ತಿ ಹತೋಟಿಯಲ್ಲಿರುತ್ತದೆ. ಆ ಮೂಲಕ ಮಾನವರಿಗೆ ಸೋಕುವ ಅನೇಕ ರೋಗಗಳಿಂದ ಈ ಹಾವುಗಳು ನಮ್ಮನ್ನು ಸದಾ ರಕ್ಷಿಸುತ್ತಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

    https://www.youtube.com/watch?v=gb7C2f8PHN8

  • ಬಾಲಿವುಡ್ ನಟಿ ಪೂಜಾ ಹೆಗ್ಡೆ ಉಡುಪಿಗೆ- ಮದುವೆ ಬಗ್ಗೆ ಮಾತನಾಡಿದ್ರೆ ಮಾರುದ್ದ ಓಡಿದ್ರು

    ಬಾಲಿವುಡ್ ನಟಿ ಪೂಜಾ ಹೆಗ್ಡೆ ಉಡುಪಿಗೆ- ಮದುವೆ ಬಗ್ಗೆ ಮಾತನಾಡಿದ್ರೆ ಮಾರುದ್ದ ಓಡಿದ್ರು

    – ಕಾಪು ಮಾರಿಯಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಉಡುಪಿ: ಬಾಲಿವುಡ್ ನಟಿ ಪೂಜಾ ಹೆಗ್ಡೆ ಉಡುಪಿಗೆ ಆಗಮಿಸಿದ್ದರು. ತನ್ನ ಕುಟುಂಬದ ಮನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವುದರಿಂದ ಪೂಜಾ ಜಿಲ್ಲೆಗೆ ಆಗಮಿಸಿದ್ದರು. ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇವರ ಜೊತೆ ಕುಟುಂಬಸ್ಥರೂ ಇದ್ದರು.

    ಬಾಲಿವುಡ್‍ನ ಹೃತಿಕ್ ರೋಷನ್ ಅಭಿನಯದ ಮೊಹೆಂಜೋದಾರೋ ಮತ್ತು ಟಾಲಿವುಡ್‍ನ ಅಲ್ಲು ಅರ್ಜುನ್ ಅಭಿನಯದ ದುವ್ವಾಡ ಜಗನ್ನಾಥಮ್ ಚಿತ್ರದಲ್ಲಿ ಪೂಜಾ ಹೆಗ್ಡೆ ಅಭಿನಯಿಸಿದ್ದು, ಎರಡೂ ಚಿತ್ರಗಳು ಒಳ್ಳೆ ಹೆಸರು ಮಾಡಿವೆ.

    ಒಂದು ತೆಲುಗು ಚಿತ್ರ ಕೈಯ್ಯಲ್ಲಿದ್ದು, ಹಿಂದಿಯ ಮೂರು ಸ್ಕ್ರಿಪ್ಟ್‍ಗಳನ್ನು ಓದುತ್ತಿದ್ದೇನೆ. ಇಷ್ಟವಾದರೆ ಅದಕ್ಕೆ ಸಹಿ ಮಾಡುತ್ತೇನೆ ಎಂದು ಹೇಳಿರುವ ಪೂಜಾ, ಮದುವೆ ಸುದ್ದಿ ತೆಗೆದ ಕೂಡಲೇ ಮಾರು ದೂರ ಓಡಿದರು. ಮದುವೆ ಬಗ್ಗೆ ಮಾತನಾಡಲು ನಾನು ಇನ್ನೂ ಚಿಕ್ಕವಳು. ನನ್ನ ಮುಂದೆ ದೊಡ್ಡ ದೊಡ್ಡ ಕನಸಿದೆ. ಚಿತ್ರರಂಗದಲ್ಲಿ ಹೆಸರು ಮಾಡಿದ ನಂತರ ಆ ಬಗ್ಗೆ ಯೋಚನೆ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

    ಕನ್ನಡದಲ್ಲಿ ನಟಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಒಳ್ಳೆಯ ಡೈರೆಕ್ಟರ್ ಮತ್ತು ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಸ್ಯಾಂಡಲ್‍ವುಡ್‍ನಲ್ಲಿಯೂ ನಟಿಸೋಕೆ ರೆಡಿ ಎಂದರು. ಟಾಲಿವುಡ್ ಚಿತ್ರದಲ್ಲಿ ಬ್ಯುಸಿ ಇರುವ ಪೂಜಾ ಹೆಗ್ಡೆ, ಒಂದು ದಿನದ ಮಟ್ಟಿಗೆ ಉಡುಪಿಗೆ ಆಗಮಿಸಿದ್ದರು.

    ಸಾರ್ವಜನಿಕ ಗಣೇಶೋತ್ಸವ ಹಾಗೂ ಸಂಬಂಧಿಕರ ಮನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪೂಜಾ ಫುಲ್ ಖುಷಿಯಾಗಿದ್ದರು. ಕಾಪು ಮಾರಿಯಮ್ಮ ದೇವಸ್ಥಾನ ಸಮೀಪದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಕಾಪುವಿನಲ್ಲಿದ್ದ ವೇಷಗಳೆಲ್ಲಾ ನಟಿ ಪೂಜಾ ಹೆಗ್ಡೆ ಅವರಿಗೆ ಮುತ್ತಿಗೆ ಹಾಕಿದವು. ಹಬ್ಬದ ಖುಷಿಗೆ ಹಣ ಕೊಡಲು ಬೇಡಿಕೆಯಿಟ್ಟರು. ನಟಿ ಪೂಜಾ ತಂದೆಯ ಪರ್ಸಿಂದ ಬಂದ ಎಲ್ಲಾ ವೇಷಧಾರಿಗಳಿಗೆ ಹಣ ಕೊಟ್ಟರು.

  • ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಉಡುಪಿ: ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಭಾನುವಾರದ ಉಡುಪಿ ಪ್ರವಾಸ ರದ್ದಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಲಂಕಾ ಪ್ರಧಾನಿಯವರ ಪ್ರವಾಸ ರದ್ದಾಗಿದೆ.

    ಬೆಂಗಳೂರಿನಲ್ಲಿ ಶನಿವಾರದಿಂದ ತಂಗಿರುವ ರಾನಿಲ್ ವಿಕ್ರಮಸಿಂಘೆ ಅವರು ಇಂದು ಕೊಲ್ಲೂರು ದೇವಿಯ ದರ್ಶನ ಮಾಡಿ, ನವಚಂಡಿ ಮಹಾಯಾಗದಲ್ಲಿ ಪಾಲ್ಗೊಳ್ಳಬೇಕಿತ್ತು. ಕಳೆದ ರಾತ್ರಿ ನವಚಂಡಿಯಾಗಕ್ಕೆ ದೇವಳದ ಅರ್ಚಕರು ಸಿದ್ಧತೆ ಮಾಡಿದ್ದು ಪಾರಾಯಣ- ಹೋಮಗಳನ್ನು ತಯಾರಿ ಮಾಡಿದ್ದರು.

    ಇಂದು ಪೂರ್ಣಾಹುತಿಗೆ ಎಲ್ಲಾ ಸಿದ್ಧತೆ ನಡೆದಿತ್ತು. ಹೆಲಿಪ್ಯಾಡ್‍ನಿಂದ 15 ಕಿಮೀ ದೂರದ ಕೊಲ್ಲೂರಿನವರೆಗೆ ಹೈ ಸೆಕ್ಯೂರಿಟಿ ನೀಡಲಾಗಿತ್ತು. ಆದರೆ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಕುಂದಾಪುರದ ಅರೆ ಶಿರೂರಿನಲ್ಲಿ ಹೆಲಿಕಾಪ್ಟರ್ ಇಳಿಯಲು ಏರ್ ಫೋರ್ಸ್ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಟೇಕ್ ಆಫ್ ಆಗಿರಲಿಲ್ಲ.

    ಇತ್ತ ಕೊಲ್ಲೂರಿನಲ್ಲಿ ಪ್ರಧಾನ ಅರ್ಚಕರೇ ಶ್ರೀಲಂಕಾ ಪ್ರಧಾನಿಗಳ ಹೆಸರಿನಲ್ಲಿ ಪೂರ್ಣಾಹುತಿ ಮಾಡಿದರು. ರಾನಿಲ್ ವಿಕ್ರಮ್‍ಸಿಂಘೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದು ಸೋಮವಾರ ಕೊಲ್ಲೂರಿಗೆ ಬರುವ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಳಿದ್ದಾರೆ ಎನ್ನಲಾಗಿದೆ.

    ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಕಳೆದೆರಡು ದಿನಗಳಿಂದ ಸಿದ್ಧತೆ ಮಾಡಿ ಇಂದು ಮಧ್ಯಾಹ್ನದವರೆಗೆ ಕಾದು ವಾಪಸ್ ಆದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ನಾವು ಎಲ್ಲಾ ಭದ್ರತಾ ವ್ಯವಸ್ಥೆ ಮಾಡಿದ್ದೆವು. ಮೋಡ, ಮಳೆಯ ಕಾರಣ ಏರ್ ಫೋರ್ಸ್ ಅಧಿಕಾರಿಗಳು ಸಮ್ಮತಿ ಸೂಚಿಸಲಿಲ್ಲ ಎಂದರು.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಉಪ್ಪುಂದ ಮಾತನಾಡಿ, ಪ್ರಧಾನಿಗಳ ಪರವಾಗಿ ಹೋಮ, ನವಚಂಡಿ ಮಹಾಯಾಗ ದೇವಿಗೆ ಸಲ್ಲಿಕೆಯಾಗಿದೆ. ವಿಶೇಷ ಪೂಜೆಯನ್ನೂ ಸಮರ್ಪಿಸಲಾಗಿದೆ ಎಂದು ಹೇಳಿದರು.

  • ಆಸ್ಪತ್ರೆ ಕಾಮಗಾರಿಗೆ ಪೇಜಾವರ ಶ್ರೀಗಳು ಓದಿದ ಶಾಲೆಯ ಕಟ್ಟಡದಲ್ಲಿ ಬಿರುಕು- ಬಿಆರ್ ಶೆಟ್ಟಿಗೆ ತಲೆಬಾಗ್ತಿದೆಯಾ ಸರ್ಕಾರ?

    ಆಸ್ಪತ್ರೆ ಕಾಮಗಾರಿಗೆ ಪೇಜಾವರ ಶ್ರೀಗಳು ಓದಿದ ಶಾಲೆಯ ಕಟ್ಟಡದಲ್ಲಿ ಬಿರುಕು- ಬಿಆರ್ ಶೆಟ್ಟಿಗೆ ತಲೆಬಾಗ್ತಿದೆಯಾ ಸರ್ಕಾರ?

    ಉಡುಪಿ: ಇದು 131 ವರ್ಷಗಳ ಹಳೆಯ ಐತಿಹಾಸಿಕ ಶಾಲೆ. ಪೇಜಾವರ ಶ್ರೀಗಳಂತಹ ಹಿರಿಯರು ಇಲ್ಲಿ ಕಲಿತಿದ್ದಾರೆ. ಆದ್ರೆ ಖಾಸಗಿ ಆಸ್ಪತ್ರೆಯ ಲಾಬಿಗೆ ಆ ಶಾಲೆಯ ಸ್ಥಳಾಂತರಕ್ಕರ ಹುನ್ನಾರ ನಡೀತಿದೆ. ಶಾಲೆಯನ್ನ ಅಭಿವೃದ್ಧಿಗೊಳಸಬೇಕಾದವ್ರೇ ಈಗ ಶಿಫ್ಟ್ ಮಾಡೋಕೆ ನಿರ್ಧರಿಸಿದ್ದಾರೆ.

    ಹೌದು. ಉಡುಪಿ ನಗರದಲ್ಲಿರೋ ಮಹಾತ್ಮಗಾಂಧಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು 1885ರಲ್ಲಿ ಸ್ಥಾಪನೆಯಾಗಿದೆ. ಈ ಶಾಲೆಯಲ್ಲಿ ಸದ್ಯ 60ಕ್ಕೂ ಅಧಿಕ ಮಕ್ಕಳು ಕಲೀತಿದ್ದಾರೆ. ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದಿರೋ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರ ಮಕ್ಕಳೇ ಇಲ್ಲಿ ಹೆಚ್ಚಾಗಿದ್ದಾರೆ.

    ಈ ಶಾಲೆಯ ಹಿಂಭಾಗದಲ್ಲಿ ಉಡುಪಿ ಮೂಲದ ದುಬೈ ಉದ್ಯಮಿ ಬಿಆರ್ ಶೆಟ್ಟಿ ಎರಡು ಆಸ್ಪತ್ರೆ ನಿರ್ಮಿಸುತ್ತಿದ್ದಾರೆ. ಆಸ್ಪತ್ರೆ ಕಾಮಗಾರಿಯಿಂದ ಶಾಲಾ ಕಟ್ಟಡ ಈಗಾಗಲೇ ಬಿರುಕು ಬಿಟ್ಟಿದೆ. ರಸ್ತೆಗೆ ಆಸ್ಪತ್ರೆ ಕಾಣುವುದಕ್ಕೆ ಅಡ್ಡಲಾಗಿರೋ ಈ ಶಾಲೆಯನ್ನೇ ಸ್ಥಳಾಂತರ ಮಾಡಲಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

    ನಗರಸಭೆಯ ಮುಂಭಾಗದಲ್ಲೇ ಇರೋ ಈ ಶಾಲೆಯ ಅಭಿವೃದ್ಧಿಗೆ ಯಾರೂ ಮುಂದಾಗಿಲ್ಲ. ಆದರೆ ಶಾಲೆಯನ್ನು ಇದೇ ಜಾಗದಲ್ಲಿ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿರುವ ವಿದ್ಯಾರ್ಥಿಗಳು ಶಾಲೆಯ ಸಮಸ್ಯೆ ಬಗ್ಗೆ ಬಾಲ ನ್ಯಾಯ ಮಂಡಳಿಗೂ ದೂರು ಕೊಟ್ಟಿದ್ದಾರೆ. ಕೊನೆಗೆ ಉದ್ಯಮಿಯ ಆಸೆ ಈಡೇರಿಸಲು ಸರ್ಕಾರ ಶಾಲೆಗೆ ಎಳ್ಳುನೀರು ಬಿಟ್ಟಿದೆ. ಶಿಕ್ಷಣಾಧಿಕಾರಿಯನ್ನ ಕೇಳಿದ್ರೆ, ಇದು ತಾತ್ಕಾಲಿಕ ಸ್ಥಳಾಂತರ, ಮಕ್ಕಳ ಹಿತದೃಷ್ಟಿಯಿಂದ ಮಾಡಿದ್ದೇವೆ ಅಂತ ಹೇಳುತ್ತಿದ್ದಾರೆ.

    ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಿಡಿದು ಉಡುಪಿ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಸ್ವಾತಂತ್ರ್ಯ ದಿನಾಚರಣೆಯಂದು ಶಾಲಾ ವಿದ್ಯಾರ್ಥಿಗಳು ಸ್ಥಳಾಂತರ ವಿರೋಧಿಸಿ ಪ್ರತಿಭಟಿಸಿದ್ದರು. ನಮ್ಮ ಸಿಎಂ ಸಿದ್ದರಾಮಯ್ಯ ಸರ್ಕಾರಿ ಶಾಲೆ, ಕನ್ನಡ ವ್ಯಾಕರಣ ಅಂತೆಲ್ಲಾ ಮಾತಾಡ್ತಾನೇ ಇರ್ತಾರೆ. ಆದ್ರೆ ಈ ಶಾಲೆಯ ಅಭಿವೃದ್ಧಿಗೆ ಮುಂದಾಗದ ಶಿಕ್ಷಣ ಇಲಾಖೆ, ಈಗ ಸ್ಥಳಾಂತರಕ್ಕೆ ಆಸಕ್ತಿ ವಹಿಸಿದೆ.

  • ಉಡುಪಿಯಲ್ಲಿ ಆಸ್ಕರ್ ಫರ್ನಾಂಡಿಸ್ ಹುಲಿವೇಷ ಕುಣಿತ

    ಉಡುಪಿಯಲ್ಲಿ ಆಸ್ಕರ್ ಫರ್ನಾಂಡಿಸ್ ಹುಲಿವೇಷ ಕುಣಿತ

    ಉಡುಪಿ: ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಗಣೇಶ ಚತುರ್ಥಿಯ ಸಂದರ್ಭ ಹುಲಿವೇಷದ ತಂಡದೊಂದಿಗೆ ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದ್ದಾರೆ.

    ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರು ಗಣೇಶ ಚತುರ್ಥಿಯ ಪ್ರಯುಕ್ತ ಹುಲಿವೇಷದೊಂದಿಗೆ ಉಡುಪಿ ಪ್ರವಾಸಿ ಮಂದಿರದಲ್ಲಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ಶುಭಾಶಯ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಹುಲಿವೇಷ ತಂಡದವರು ಆಸ್ಕರ್ ಅವರಿಗೆ ತಮ್ಮ ಪ್ರದರ್ಶನ ನೀಡುತ್ತಿದ್ದಾಗ ಸ್ವಲ್ಪ ಹೊತ್ತು ವೀಕ್ಷಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಹುಲಿವೇಷದ ಜೊತೆಯಲ್ಲಿ ಮೊದಲು ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದರು. ನಂತರ ಆಸ್ಕರ್ ಫರ್ನಾಂಡಿಸ್ ಕೂಡಾ ಹುಲಿ ವೇಷಕ್ಕೆ ತಮ್ಮದೇ ಶೈಲಿಯಲ್ಲಿ ಹೆಜ್ಜೆ ಹಾಕಿದರು.

    ಸ್ವತಃ ಹಲವಾರು ಪ್ರತಿಭೆಗಳನ್ನು ಹೊಂದಿರುವ ಆಸ್ಕರ್ ಫರ್ನಾಂಡಿಸ್ ಉತ್ತಮ ಯೋಗಪಟುವಾಗಿದ್ದು, ಓರ್ವ ಈಜುಗಾರರು ಕೂಡ ಹೌದು. ಅಲ್ಲದೆ ರಾಜ್ಯಸಭೆಯಲ್ಲಿ ಇತ್ತೀಚೆಗೆ ತುಳು ಪದ್ಯವೊಂದನ್ನು ಹಾಡುವುದರ ಮೂಲಕ ಸದಸ್ಯರ ಗಮನ ಸೆಳೆದಿದ್ದರು. ಇದೀಗ ಹುಲಿವೇಷ ಕುಣಿದು ಮತ್ತೆ ಗಮನ ಸೆಳೆದಿದ್ದಾರೆ.

    ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂಎ ಗಫೂರ್, ಕಾಂಗ್ರೆಸ್ ನಾಯಕರಾದ ದಿನೇಶ್ ಪುತ್ರನ್, ನಾಗೇಶ್ ಉದ್ಯಾವರ, ವೀರ ಮಾರುತಿ ತಂಡದ ಅನಿಲ್ ಪಾಲನ್, ಪ್ರಸಾದ್ ಪಾಲನ್ ಹಾಗೂ ಇತರರು ಇದ್ದರು.

  • ಮಲ್ಪೆ ಬೀಚ್‍ನಲ್ಲಿ ಸ್ಯಾಂಡ್ ಗಣಪ- ವೀಚಿ ಮೋಟರ್ಸ್‍ನಲ್ಲಿ ಬಿಸ್ಕೆಟ್ ಗಣಪ

    ಮಲ್ಪೆ ಬೀಚ್‍ನಲ್ಲಿ ಸ್ಯಾಂಡ್ ಗಣಪ- ವೀಚಿ ಮೋಟರ್ಸ್‍ನಲ್ಲಿ ಬಿಸ್ಕೆಟ್ ಗಣಪ

    ಉಡುಪಿ: ದೇಶದೆಲ್ಲೆಡೆ ಸಂಭ್ರಮದ ಗೌರಿ ಗಣೇಶ ಹಬ್ಬದ ಆಚರಣೆ ನಡೆಯುತ್ತಿದೆ. ಚೌತಿ ಹಬ್ಬ ಅಂದ್ರೆ ಎಲ್ಲೆಡೆ ಸಂಭ್ರಮ. ಇಂದು ಬೀದಿಬೀದಿಯಲ್ಲಿ ಗಣೇಶ ವೈಭವದಿಂದ ರಾರಾಜಿಸುತ್ತಾನೆ. ಈ ನಡುವೆ ಉಡುಪಿಯ ಸಮುದ್ರ ತೀರದಲ್ಲಿ ಮರಳು ಗಣಪ- ನಗರದಲ್ಲಿ ಬಿಸ್ಕೆಟ್ ಗಣಪ ಎಲ್ಲರನ್ನು ಸೆಳೆಯುತ್ತಿದ್ದಾನೆ.

    ಮಲ್ಪೆಯ ಕಡಲ ತಡಿಯಲ್ಲಿ ಮರಳಿನಲ್ಲಿ ಗಣೇಶ ಮೈತಳೆದು ನಿಂತ್ರೆ ಉಡುಪಿ ಹೃದಯ ಭಾಗದಲ್ಲಿ ಇರುವ ವಿಚೀ ಮೋಟಾರ್ಸ್ ನಲ್ಲಿ ಬಿಸ್ಕೆಟ್ ಗಣೇಶ ಗಮನ ಸೆಳೆದ. ಮಲ್ಪೆ ಬೀಚ್‍ನಲ್ಲಿ ಮರಳುಶಿಲ್ಪ ಕಲಾವಿದ ಹರೀಶ್ ಸಾಗ ಮರಳಿನಲ್ಲಿ ಗಣೇಶನ ಕಲಾಕೃತಿಯನ್ನು ರಚಿಸಿದರು. ಅವರ ವಿಧ್ಯಾರ್ಥಿಗಳಾದ ನಾಗರಾಜ್, ಪೃಥ್ವಿ, ರೂಪೇಶ್ ಇದಕ್ಕೆ ಸಾಥ್ ನೀಡಿದರು.

    ಭೂಗರ್ಭದಿಂದ ಉದ್ಭವವಾದ ಗಣಪ ಪ್ರವಾಸಿಗರಿಗೆ ಶುಭಾಶಯ ಕೋರುವ ಕಾಲ್ಪನಿಕ ಮರಳಿನ ಮೂರ್ತಿಯನ್ನು ಇಲ್ಲಿ ರಚಿಸಲಾಗಿದೆ. ಮಾಲಿನ್ಯವನ್ನು ತಡೆಯಿರಿ ಎನ್ನುವ ಸಂದೇಶ ಸಾರುವ ಗಣೇಶ ಶಿಲ್ಪವನ್ನು ಮರಳಿನಲ್ಲಿ ರಚಿಲಾಗಿದೆ. 6 ಗಂಟೆಗಳ ಸತತ ಪರಿಶ್ರಮದಿಂದ ಹರೀಶ ಸಾಗ ಅವರ ತಂಡ ಸುಂದರ ಗಣೇಶನನ್ನು ಮಲ್ಪೆ ಬೀಚ್ ಮರಳಿನಲ್ಲಿ ಮೂಡಿಸಿ ಎಲ್ಲರ ಗಮನ ಸೆಳೆದರು.

    ಬೀಚ್‍ಗೆ ಬಂದ ಪ್ರವಾಸಿಗರು ಕ್ಯಾಮೆರಾದಲ್ಲಿ ಗಣಪನ ಫೋಟೋ ಕ್ಲಿಕ್ಕಿಸುತ್ತಾ ಸೆಲ್ಫೀ ಕೂಡ ತೆಗೆದುಕೊಂಡರು. ಬೆಳಗ್ಗೆಯಿಂದ ಸುರಿದ ತುಂತುರು ಮಳೆ ಮರಳಿನ ಶಿಲ್ಪ ರಚಿಸಲು ಅಡ್ಡಿಯನ್ನುಂಟು ಮಾಡಿದ್ರೂ ಕೂಡ ಕೊನೆಗೂ ಉದ್ಭವ ಗಣಪನಿಗೆ ಅಂತಿಮ ಕಲಾ ಸ್ಪರ್ಶವನ್ನು ನೀಡೋದ್ರಲ್ಲಿ ಯಶಸ್ವಿಯಾದರು.

    ಉಡುಪಿಯ ವೀಚಿ ಮೊಟಾರ್ಸ್‍ನಲ್ಲಿ ಮತ್ತೊಂದು ವಿಶಿಷ್ಟ ಗಣಪ ಮೂಡಿ ಬಂದ. ಸುಮಾರು 9 ಅಡಿ ಎತ್ತರದ ಗಣಪ ಇಲ್ಲಿ ಎದ್ದು ನಿಂತಿದ್ದಾನೆ. ಮಣ್ಣು, ಚಿನ್ನ ಬೆಳ್ಳಿಯಿಂದ ಮಾಡಿದ ಗಣಪನ ಮೂರ್ತಿಯಲ್ಲ ಇದು. ಕಲಾವಿದ ಶ್ರೀನಾಥ್ ಮೂರು ದಿನಗಳ ಸತತ ಪ್ರಯತ್ನದಿಂದ ಈ ಮುದ್ದು ಗಣೇಶನ ಕಲಾಕೃತಿಯನ್ನು ರಚನೆ ಮಾಡಿದ್ದಾರೆ.

    ಈ ಗಣೇಶನ ಮೂರ್ತಿ ರಚನೆಗೆ ಸುಮಾರು 15 ಕೆಜಿ ಬಿಸ್ಕೆಟ್ ಉಪಯೋಗಿಸಿ ಗಣೇಶನ ಕಲಾಕೃತಿ ರಚನೆ ಮಾಡಿದ್ದಾರೆ. ಪ್ರತಿ ಬಾರಿಯೂ ಚೌತಿಗೆ ಹೊಸ ಹೊಸ ಪರಿಸರ ಸ್ನೇಹಿ ಗಣೇಶನ ಕಲಾಕೃತಿ ಮೂಡಿಸುವ ಈ ಕಲಾವಿದ ಈ ಬಾರಿ ಬಿಸ್ಕೆಟ್ ಗಣೇಶನ ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.

    ಬಿಸ್ಕೆಟ್ ಗಣೇಶನ ಮುಂದೆ ನಿಂತು ಜನ ಅಚ್ಚರಿಯಿಂದ ನೋಡಿದ್ದು ಮಾತ್ರವಲ್ಲದೇ ಸೆಲ್ಫೀ ಕಿಕ್ಲಿಸಿಕೊಂಡು ಖುಷಿಪಟ್ಟರು.

     

  • ಆಸ್ಪತ್ರೆಯಿಂದ ಪೇಜಾವರ ಶ್ರೀ ಡಿಸ್ಚಾರ್ಜ್-ವೈದ್ಯರು ಶ್ರೀಗಳಿಗೆ ಸೂಚಿಸಿದ್ದು ಏನು?

    ಆಸ್ಪತ್ರೆಯಿಂದ ಪೇಜಾವರ ಶ್ರೀ ಡಿಸ್ಚಾರ್ಜ್-ವೈದ್ಯರು ಶ್ರೀಗಳಿಗೆ ಸೂಚಿಸಿದ್ದು ಏನು?

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಕೆಎಂಸಿ ಆಸ್ಪತ್ರೆಗೆ ಭಾನುವಾರ ದಾಖಲಾಗಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸ್ವಾಮೀಜಿ ಅವರಿಗೆ ಆಪರೇಷನ್ ಮಾಡಲಾಗಿತ್ತು. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೆ ವಿಶ್ರಾಂತಿ ಪಡೆದ ಸ್ವಾಮೀಜಿ ಇಂದು ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದಾರೆ.

    ಶಿಷ್ಯಂದಿರ ಜೊತೆ ಕಾರಿನಲ್ಲಿ ಆಗಮಿಸಿದ ಸ್ವಾಮೀಜಿ ಮಠದ ಬಡಗು ಮಾಳಿಗೆಯ ಪಕ್ಕದ ಗೆಸ್ಟ್ ಹೌಸಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಆರೋಗ್ಯವಾಗಿದ್ದೇನೆ. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಂಡರು. ಹೆಚ್ಚು ಮಾತನಾಡಬಾರದೆಂದು ವೈದ್ಯರು ಸೂಚನೆ ನೀಡಿದ್ದಾರೆ. ಸೋಮವಾರದ ನಂತರ ಮಾತನಾಡಬಹುದು ಎಂದು ಸಲಹೆ ನೀಡಿದ್ದಾರೆ ಎಂದು ಹೇಳಿದರು.

    ಸ್ವಾಮೀಜಿ ಆಪ್ತ ಸಹಾಯಕ, ವಿಷ್ಣು ಮಾತನಾಡಿ, ಇನ್ಫೆಕ್ಷನ್ ಆಗುವ ಸಾಧ್ಯತೆಯಿರುವುದರಿಂದ ಒಂದು ವಾರಗಳ ಕಾಲ ಸ್ವಾಮೀಜಿ ಭಕ್ತರನ್ನು ಕೂಡಾ ಭೇಟಿಯಾಗುವುದಿಲ್ಲ. ಎರಡು ದಿನಕ್ಕೊಮ್ಮೆ ಕೆಎಂಸಿ ವೈದ್ಯರೇ ಮಠಕ್ಕೆ ಆಗಮಿಸಿ ಸ್ವಾಮೀಜಿಯ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಎಂದು ಹೇಳಿದರು.

    ಇಂದು ಸಂಜೆಯ ಮಹಾಪೂಜೆಯಲ್ಲಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಗಂಜಿ ಮತ್ತು ಹಾಲು ಸೇವನೆ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ. ಆಪರೇಷನ್ ನಂತರ ಎರಡು ಬಗೆಯ ಮಾತ್ರೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.