Tag: ಉಡುಪಿ

  • ಉಡುಪಿಯಲ್ಲಿ ಶಿವರಾಜ್ ಕುಮಾರ್ ಟೈಗರ್ ಡಾನ್ಸ್: ವಿಡಿಯೋ ನೋಡಿ

    ಉಡುಪಿಯಲ್ಲಿ ಶಿವರಾಜ್ ಕುಮಾರ್ ಟೈಗರ್ ಡಾನ್ಸ್: ವಿಡಿಯೋ ನೋಡಿ

    ಉಡುಪಿ: ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಶುರುವಾಗಿದೆ. ಹುಲಿವೇಷ ಕುಣಿತ ಉಡುಪಿ ಅಷ್ಟಮಿಯಿಂದ ಸಾಂಪ್ರದಾಯಿಕ ಕುಣಿತ. ಈ ನಡುವೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಲಿ ಕುಣಿತದ ಬೀಟ್ ಗೆ ಹೆಜ್ಜೆಹಾಕಿದ್ದಾರೆ.

    ಶಿವಣ್ಣ ಹೆಜ್ಜೆ ಹಾಕಿರೋದು ಅಷ್ಟಮಿ ಹುಲಿಗಳ ಜೊತೆ ಅಲ್ಲ. ಬದಲಾಗಿ ಟಗರು ಚಿತ್ರದ ಒಂದು ದೃಶ್ಯಕ್ಕಾಗಿ. ಟಗರು ಚಿತ್ರದಲ್ಲಿ ಶಿವರಾಜ್ ಕುಮಾರ್ ಜಬರ್ದಸ್ತ್ ಆಗಿ ಕುಣಿದಿದ್ದಾರೆ.

    ಶಿವಣ್ಣ ಕುಣಿತದ ಜೊತೆ ಸೆಟ್ ನಲ್ಲಿ ಇದ್ದವರು ಕೂಡಾ ಸ್ಟೆಪ್ ಹಾಕಿದ್ದಾರೆ. ಸ್ಥಳೀಯ ಹುಲಿವೇಷ ಅಭಿಮಾನಿಗಳು ಕುಣಿದಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲವಿದೆ. ಚಿತ್ರದ ಫೈಟ್ ಕೆಲ ದೃಶ್ಯಗಳನ್ನು ಕರಾವಳಿ ತೀರದಲ್ಲಿ ಚಿತ್ರೀಕರಣ ಮಾಡಲಾಗಿದೆ.

    ಈ ಚಿತ್ರದ ಒಂದು ಭಾಗದ ಚಿತ್ರೀಕರಣ ಮಲ್ಪೆಯ ಕಡಲತೀರದಲ್ಲಿ ಕುಣಿದಿರುವ ಈ ದೃಶ್ಯಾವಳಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://youtu.be/DxqDb76FgkM

  • ಕಿರಿಕ್ ಪಾರ್ಟಿ ಸ್ಟೈಲ್‍ನಲ್ಲಿ ಕುಂದಾಪುರದಲ್ಲಿ ಪಿ.ಯು ವಿದ್ಯಾರ್ಥಿಗಳಿಂದ ಕಿರಿಕ್

    ಕಿರಿಕ್ ಪಾರ್ಟಿ ಸ್ಟೈಲ್‍ನಲ್ಲಿ ಕುಂದಾಪುರದಲ್ಲಿ ಪಿ.ಯು ವಿದ್ಯಾರ್ಥಿಗಳಿಂದ ಕಿರಿಕ್

    ಉಡುಪಿ: ಸ್ಯಾಂಡಲ್ ವುಡ್ ಸಕ್ಸಸ್ ಫುಲ್ ಮೂವಿ ಕಿರಿಕ್ ಪಾರ್ಟಿ ಎಲ್ಲರೂ ನೋಡಿದ್ದಾರೆ. ಎಂಜಿನಿಯರ್ ಸ್ಟೂಡೆಂಟ್‍ಗಳು ಮಾಡೋ ಒಂದೊಂದು ಅವಾಂತರ ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತದೆ. ಈಗ ಕುಂದಾಪುರ ತಾಲೂಕಿನ ಹಾಸ್ಟೆಲ್ ವಿದ್ಯಾರ್ಥಿಗಳು ಶಿಫ್ಟ್ ಮಾಡುವ ವಿಚಾರದಲ್ಲಿ ಕಿರಿಕ್ ಮಾಡಿ ಸುದ್ದಿಯಾಗಿದ್ದಾರೆ.

    ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಹಾಸ್ಟೆಲ್‍ನಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‍ನನ್ನು ಬೇರೆಡೆ ಶಿಫ್ಟ್ ಮಾಡುವ ಆದೇಶ ಬಂದಿತ್ತು. ಬೇರೆಡೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದರು. ಇದಕ್ಕೆ ವಿದ್ಯಾರ್ಥಿಗಳು ರೊಚ್ಚಿಗೆದ್ದು ಕೊಠಡಿಯ ಎಲ್ಲಾ ಫ್ಯಾನುಗಳಲ್ಲಿ ನೇತಾಡಿದ್ದು, ಫ್ಯಾನ್‍ಗಳೆಲ್ಲಾ ಬೆಂಡಾಗಿದೆ. ಗೋಡೆಗಳಲ್ಲಿ  ‘ಕಿರಿಕ್ ಬಾಯ್ಸ್’ ಎಂದು ಬರೆದಿದ್ದು ಮಾತ್ರವಲ್ಲದೇ  ಕಿರಿಕ್ ಪಾರ್ಟಿಯ ಕಾರಿನ ಚಿತ್ರವನ್ನು ರಚಿಸಿದ್ದಾರೆ.

    ಕೊಠಡಿಯ ಟ್ಯೂಬ್‍ಲೈಟ್, ಕುರ್ಚಿಗಳನ್ನು ಧ್ವಂಸಮಾಡಿದ್ದು ಕಬೋರ್ಡ್‍ನಲ್ಲಿದ್ದ ಪುಸ್ತಕ, ಪೇಪರ್‍ಗಳನ್ನೆಲ್ಲಾ ಕೆಡವಿ ಚಲ್ಲಾಪಿಲ್ಲಿ ಮಾಡಿದ್ದಾರೆ. ಮಕ್ಕಳು ಶಿಫ್ಟ್ ಆಗಿ ಬೇರೆ ಕೊಠಡಿಗೆ ಹೋಗುವ ಮುನ್ನ ಇಷ್ಟೆಲ್ಲಾ ಕಿರಿಕ್‍ಗಳನ್ನು ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ವಾರ್ಡನ್ ದೂರು ನೀಡಿದ್ದಾರೆ. ಇದನ್ನು ಹಾಸ್ಟೆಲ್ ಮೇಲಿನ ಪ್ರೀತಿ ಅನ್ನಬೇಕೋ ಅಥವಾ ವಿದ್ಯಾರ್ಥಿಗಳ ಹುಚ್ಚಾಟ ಅನ್ನಬೇಕೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

  • ಕಟಪಾಡಿಯಲ್ಲಿ ಬೈಕ್- ಲಾರಿ ಮುಖಾಮುಖಿ ಡಿಕ್ಕಿ ಬಾಲಕಿ ಸ್ಥಳದಲ್ಲೇ ಸಾವು

    ಕಟಪಾಡಿಯಲ್ಲಿ ಬೈಕ್- ಲಾರಿ ಮುಖಾಮುಖಿ ಡಿಕ್ಕಿ ಬಾಲಕಿ ಸ್ಥಳದಲ್ಲೇ ಸಾವು

    ಉಡುಪಿ: ಕಟಪಾಡಿಯಲ್ಲಿ ನಡೆದ ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಬೈಕ್‍ನ ಹಿಂಬದಿ ಕುಳಿತಿದ್ದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ದುರ್ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ 11 ವರ್ಷದ ಸುಶ್ಮಿತಾ ಮೃತಪಟ್ಟ ಬಾಲಕಿ.

    ಕಟೀಲಿನಿಂದ ತನ್ನ ದೊಡ್ಡಪ್ಪನ ಜೊತೆ ಬೈಕಿನಲ್ಲಿ ಉಡುಪಿಗೆ ಬರುತ್ತಿದ್ದಾಗ ಮುಂಭಾಗದಲಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಲಾರಿಯ ಬಂಪರ್ ಬೈಕಿಗೆ ಸಿಲುಕಿಕೊಂಡು ಬೈಕ್ ರಸ್ತೆಗೆ ಬಿದ್ದಿದೆ. ಮುಂಭಾಗದ ಲಾರಿಯ ಟಯರ್ ಬಾಲಕಿಯ ಮೇಲೆ ಹರಿದಿದೆ. ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಸುಶ್ಮಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಸುಶ್ಮಿತಾಳ ದೊಡ್ಡಪ್ಪ ಎಡಭಾಗಕ್ಕೆ ಬಿದ್ದಿದ್ದರಿಂದ ಪಾರಾಗಿದ್ದಾರೆ. ಕಟಪಾಡಿ ಜಂಕ್ಷನ್‍ನಲ್ಲಿ ಈ ದುರ್ಘಟನೆ ನಡೆದಿದ್ದು ಹೆದ್ದಾರಿಯಲ್ಲಿ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೇವಾಲಯಗಳ ನಗರಿಯಲ್ಲಿ ಮಾತೆ ಮೇರಿಯ ಜನ್ಮದಿನ ಸಂಭ್ರಮ

    ದೇವಾಲಯಗಳ ನಗರಿಯಲ್ಲಿ ಮಾತೆ ಮೇರಿಯ ಜನ್ಮದಿನ ಸಂಭ್ರಮ

    ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಇಂದು ಮಾತೆ ಮೇರಿಯಮ್ಮನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

    ಏಸುಕ್ರಿಸ್ತನ ತಾಯಿ ಮೇರಿಯನ್ನು ತೊಟ್ಟಿಲಿನಲ್ಲಿ ತೂಗಿ, ಬಣ್ಣ ಬಣ್ಣದ ಹೂವು ಎಸೆದು ಭೂಮಿಗೆ ಸ್ವಾಗತಿಸಲಾಯಿತು. ಮಾತೆ ಮೇರಿಯ ಜನ್ಮದಿನದ ಶುಭದಿನವನ್ನು ಕರಾವಳಿಯಲ್ಲಿ ತೆನೆ ಹಬ್ಬ ಅಂತಾನೂ ಕರೆಯುತ್ತಾರೆ.

    ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಅದ್ಧೂರಿಯಾಗಿ ಮೋತಿ ಫೆಸ್ಟ್ ನಡೆಯಿತು. ಉಡುಪಿ ಧರ್ಮಗುರುಗಳು ಮಾತೆ ಮೇರಿಯನ್ನು ತೊಟ್ಟಿಲಿನಲ್ಲಿ ಹೊತ್ತು ತರುವ ಮೆರವಣಿಗೆಯ ನೇತೃತ್ವವನ್ನ ವಹಿಸಿದ್ದರು. ಶಿಸ್ತುಬದ್ಧ ವಾದ್ಯಗೋಷ್ಠಿಯ ಹಿನ್ನೆಲೆಯಲ್ಲಿ ಪೂಜಾವಿಧಿ ನಡೆಯಿತು.

    ಚರ್ಚ್‍ಗೆ ಬರುವ ಭಕ್ತರು ಮನೆಯಲ್ಲೇ ಬೆಳೆದ ಹೂವನ್ನು ತರುತ್ತಾರೆ. ಪೂಜಾವಿಧಿ ಸಂದರ್ಭ ಭಕ್ತರು ಮಾತೆ ಮೇರಿಯನ್ನು ಮಲಗಿಸಿದ ತೊಟ್ಟಿಲಿನತ್ತ ಬಣ್ಣಬಣ್ಣದ ಹೂವು ಎಸೆಯುತ್ತಾರೆ. ವಿವಿಧ ಬಣ್ಣದ ಹೂವುಗಳು ತೊಟ್ಟಿಲಿನತ್ತ ತೂರಿಬರುವ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಚೆಂದ.

    ಮಾಂಸಪ್ರಿಯ ಕ್ರೈಸ್ತ ಸಮುದಾಯದವರು ಇಂದು ಶುದ್ಧ ಸಸ್ಯಾಹಾರಿಗಳು. ಮನೆಯಲ್ಲೇ ಬೆಳೆದ ಹೂವುಗಳನ್ನು, ತರಕಾರಿಗಳನ್ನು ಚರ್ಚ್‍ಗೆ ತಂದು ಪೂಜಿಸುತ್ತಾರೆ. ಧರ್ಮಗುರುಗಳು ಚರ್ಚ್‍ಗೆ ಬಂದ ಭಕ್ತರಿಗೆ ತೆನೆಗಳನ್ನು ವಿತರಿಸುತ್ತಾರೆ.

  • ಸಿಎಂ ಸಿದ್ದರಾಮಯ್ಯರಿಗಿಂತ ಪಂಚಾಯತ್ ಅಧ್ಯಕ್ಷನೇ ವಾಸಿ: ಡಿವಿ ಸದಾನಂದ ಗೌಡ

    ಸಿಎಂ ಸಿದ್ದರಾಮಯ್ಯರಿಗಿಂತ ಪಂಚಾಯತ್ ಅಧ್ಯಕ್ಷನೇ ವಾಸಿ: ಡಿವಿ ಸದಾನಂದ ಗೌಡ

    ಉಡುಪಿ: ಸಿಎಂ ಸಿದ್ದರಾಮಯ್ಯರಿಗಿಂತ ಗ್ರಾಮ ಪಂಚಾಯತ್ ಅಧ್ಯಕ್ಷ ಚೆನ್ನಾಗಿ ಕೆಲಸ ಮಾಡುತ್ತಾನೆ. ಸಿದ್ದರಾಮಯ್ಯ ಅವರಿಗೆ ಸಿಎಂ ಅನ್ನೋ ಪರಿಜ್ಞಾನನೇ ಇಲ್ಲ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ಸಚಿವ ಡಿವಿ ಸದಾನಂದ ಗೌಡ ಅವರು ವ್ಯಂಗ್ಯವಾಡಿದ್ದಾರೆ.

    ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಂಗಳೂರು ಚಲೋಗೆ ಸರ್ಕಾರ ಅಡ್ಡಿ ಪಡಿಸಿದ್ದು ಸರಿಯಲ್ಲ. ರಾಜ್ಯದಲ್ಲಿ ದಯನೀಯ ಪರಿಸ್ಥಿತಿ ಬಂದಿದೆ. ಪ್ರತಿಭಟನೆ ಮಾಡುವ ಹಕ್ಕು ಸರ್ಕಾರ ಕಿತ್ತುಕೊಂಡಿದೆ. ಬೆದರಿಕೆ ತಂತ್ರ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ ಎಂದರು.

    ಬಿಜೆಪಿಯ ಹೋರಾಟದಿಂದ ಸಿದ್ದರಾಮಯ್ಯ ಅವರು ತತ್ತರಿಸಿ ಹೋಗಿದ್ದಾರೆ. ಬಣ್ಣ ಬಯಲಾಗುತ್ತದೆ ಎಂದು ಭಯಗೊಂಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರದಲ್ಲಿ ಸತ್ಯಾಂಶ ಹೊರಗೆ ಬರಬೇಕು ಅಂದ್ರೆ ಈ ಪ್ರಕರಣ ಸಿಬಿಐಗೆ ಕೊಡಬೇಕು. ಕರ್ನಾಟಕ ರಾಜ್ಯದ ಪೊಲೀಸರ ಮೇಲೆ ನಮಗೆ ನಂಬಿಕೆಯಿದೆ ಆದರೆ ರಾಜ್ಯ ಸರ್ಕಾರ, ಗೃಹ ಇಲಾಖೆ ಮೇಲೆ ನಂಬಿಕೆಯಿಲ್ಲ ಎಂದು ಹೇಳಿದರು.

    ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಹಿಡಿತದಲ್ಲೇ ಸಿಎಂ ಸಿದ್ದರಾಮಯ್ಯ ಇದ್ದಾರೆ. ಕೆಂಪಯ್ಯರನ್ನು ಹೊರಗೆ ಹಾಕಲು ಇಡೀ ಲೋಕವೇ ಹೇಳುತ್ತಿದೆ ಎಂದರು.

  • ಉಡುಪಿ ಬೈಕ್ ರ‍್ಯಾಲಿಗೆ ಪೊಲೀಸರ ತಡೆ- 300 ಬೈಕ್ ವಶ

    ಉಡುಪಿ ಬೈಕ್ ರ‍್ಯಾಲಿಗೆ ಪೊಲೀಸರ ತಡೆ- 300 ಬೈಕ್ ವಶ

    ಉಡುಪಿ: ‘ಮಂಗಳೂರು ಚಲೋ’ ಬೈಕ್ ರ‍್ಯಾಲಿಗೆ ಉಡುಪಿಯಲ್ಲಿ ಹಿನ್ನಡೆಯಾಗಿದೆ. ಪೂರ್ವಯೋಜಿತ ಕಾರ್ಯಕ್ರಮದಂತೆ ಶಿವಮೊಗ್ಗ, ಹಾವೇರಿ ಭಾಗದ ಕಾರ್ಯಕರ್ತರು ಹೆಬ್ರಿ ಮೂಲಕ ಕಾರ್ಕಳ ತಲುಪಬೇಕಿತ್ತು.

    ಹುಬ್ಬಳ್ಳಿ, ಬೆಳಗಾವಿ ಭಾಗದ ಕಾರ್ಯಕರ್ತರು ಬೈಂದೂರು ಮೂಲಕ ಮಣಿಪಾಲಕ್ಕೆ ಬಂದು ತಂಗಬೇಕಿತ್ತು. ಆದರೆ ಆಯಾ ಜಿಲ್ಲೆಗಳಲ್ಲೇ ಕಾರ್ಯಕರ್ತರನ್ನು ಬಂಧಿಸಿದ ಕಾರಣ ಅನ್ಯ ಜಿಲ್ಲೆಯ ಪ್ರತಿಭಟನಾಕಾರರು ಉಡುಪಿ ಜಿಲ್ಲೆಯ ಪ್ರವೇಶ ಮಾಡಿಲ್ಲ. ಇದರ ಹೊರತಾಗಿಯೂ ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯ್ತು, ತಾಲೂಕಿನ ಐನೂರಕ್ಕೂ ಅಧಿಕ ಬೈಕ್ ಗಳು ರ‍್ಯಾಲಿಯಲ್ಲಿ ಭಾಗವಹಿಸಿದವು.

    ರ‍್ಯಾಲಿ ಪ್ರಾರಂಭವಾಗಿ ಕೆಲ ದೂರ ಸಂಚರಿಸಿದ ನಂತರ ಪೊಲೀಸರು ಅಡ್ಡಿಪಡಿಸಿದರು. ಶಾಸಕ ಸುನಿಲ್ ಕುಮಾರ್ ಸಹಿತ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುವ ಮೂಲಕ ಬೈಕ್ ರ‍್ಯಾಲಿಗೆ ಅವಕಾಶ ನೀಡಿಲ್ಲ. ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಹೆಮ್ಮಾಡಿಯಲ್ಲೂ ರ‍್ಯಾಲಿ ನಡೆಸಲು ಮುಂದಾದ 200 ಕ್ಕೂ ಅಧಿಕ ಉಡುಪಿ ಜಿಲ್ಲೆಯ ಕಾರ್ಯಕರ್ತರನ್ನು ಬಂಧಿಸಲಾಯ್ತು. ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ನನ್ನ ಎದೆಗೆ ಗುಂಡು ಹೊಡೆದಂತಾಗಿದೆ: ಸಾಹಿತಿ ವೈದೇಹಿ

    ನನ್ನ ಎದೆಗೆ ಗುಂಡು ಹೊಡೆದಂತಾಗಿದೆ: ಸಾಹಿತಿ ವೈದೇಹಿ

    ಉಡುಪಿ: ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಅವರ ಹತ್ಯೆಯ ವಿಚಾರ ಕೇಳಿ ನನ್ನ ಎದೆಗೆ ಗುಂಡು ಹೊಡೆದಂತಾಗಿದೆ. ಮನಸ್ಸಿಗೆ ಬಹಳ ಬೇಸರವಾಗುತ್ತಿದೆ ಎಂದು ಸಾಹಿತಿ ವೈದೇಹಿ ಪ್ರತಿಕ್ರಿಯೆ ನೀಡಿದ್ದಾರೆ.

    ಉಡುಪಿಯ ಮಣಿಪಾಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಶಾಕಿಂಗ್ ನ್ಯೂಸ್, ಸೈದ್ಧಾಂತಿಕ ಭಿನ್ನತೆ ಇರೋದೇ ತಪ್ಪಾ..? ಗೌರಿ ಸ್ಪಷ್ಟತೆ ಇದ್ದ ದಿಟ್ಟ ಪತ್ರಕರ್ತೆ. ನಮ್ಮ ಧನಿಯನ್ನು ನಾವು ಆಡೋದೇ ತಪ್ಪಾ ಎಂದೇ ಪ್ರಶ್ನೆ ಮಾಡಿದ್ದಾರೆ.

    ಇದು ಪ್ರಜಾಪ್ರಭುತ್ವ ದೇಶನಾ ಅಂತ ಸಂಶಯ ಬರುವಂತಾಗಿದೆ. ಗೌರಿಯನ್ನು ಕೊಂದು ನೀವು ಏನು ಸಾಧಿಸಿದ್ದೀರಿ..? ಎಲ್ಲರನ್ನೂ ಗಿಳಿಗಳನ್ನಾಗಿ ಮಾಡಿದ್ದೀರಾ..? ಗುಂಡು ಹೊಡೆದು ಎಷ್ಟು ಜನರನ್ನು ಕೊಲೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

    ಬೆಂಗಳೂರಿನಲ್ಲೇ ಘಟನೆ ಆಗಿರೋದ್ರಿಂದ ಪೊಲೀಸರು ಹೈ ಅಲರ್ಟ್ ಘೋಷಿಸಬೇಕು. ಆರೋಪಿಗಳು ರಾಜಧಾನಿಯಲ್ಲೇ ಇದ್ದಾರೆ. ಸರ್ಕಾರ ಪೊಲೀಸ್ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

    ಗೌರಿ ಲಂಕೇಶ್ ನನ್ನ ಮಗಳಂತೆ ಇದ್ದರು. ಗೌರಿಯಷ್ಟು ನೇರವಾಗಿ ಬರೆಯುವವರು ಭಾರತದಲ್ಲೇ ವಿರಳ. ಒಂದು ನಿಜವಾದ ಧೀರ ಧನಿಯನ್ನು ಕಳೆದುಕೊಂಡಿದ್ದೇವೆ. ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷವಾಯ್ತು. ಇದೀಗ ಗೌರಿಯದ್ದು, ರಾಜ್ಯದ ಜನ ನಾವು ನಾಟಕವನ್ನು ನೋಡುತ್ತಿದ್ದೇವಾ ಅನ್ನುವ ಸಂಶಯ ಮೂಡುತ್ತಿದೆ. ಇವರಿಗೆ ಅಧಿಕಾರ ಕೊಟ್ಟದ್ದು ಯಾಕೆ ಎಂದು ಪ್ರಶ್ನಿಸಿ ಅವರು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಬೇಕು. ಸರ್ಕಾರ, ಪೊಲೀಸರು ದುರ್ಬಲರಲ್ಲ ಎಂಬುದನ್ನು ತೋರಿಸಿ ಎಂದು ವೈದೇಹಿ ಹೇಳಿದರು.

  • ಈ ಕಾರಣಕ್ಕಾಗಿ ಕಣ್ಣೀರು ಸುರಿಸಿದ್ರು ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ!

    ಈ ಕಾರಣಕ್ಕಾಗಿ ಕಣ್ಣೀರು ಸುರಿಸಿದ್ರು ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ!

    ಉಡುಪಿ: ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಇಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮೂರು ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದಾರೆ.

    ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ 70 ಲಕ್ಷ ರೂಪಾಯಿಯ ಹ್ಯೂಬ್ಲೋಟ್ ವಾಚ್ ಪ್ರಕರಣ, ಜೋಗ ಜಲಪಾತವನ್ನು ಖಾಸಗಿಯವರಿಗೆ ವಹಿಸಿದ್ದು ಮತ್ತು ಉಡುಪಿ ಸರ್ಕಾರಿ ಆಸ್ಪತ್ರೆಯನ್ನು ಉದ್ಯಮಿ ಬಿ ಆರ್ ಶೆಟ್ಟಿಗೆ ಮಾರಿದ ಪ್ರಕರಣವನ್ನು ಸಿಬಿಐ ತನಿಖೆ ಮಾಡಿ ಎಂದು ಅನುಪಮಾ ಪ್ರಧಾನಿಗೆ ಪತ್ರ ಬರೆದಿದ್ದರು. ಒಂದೂವರೆ ತಿಂಗಳ ನಂತರ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಉತ್ತರ ಬಂದಿದೆ. ಮುಂದಿನ ಇಲಾಖೆಗೆ ಕಳುಹಿಸಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ ಅಂತ ಹೇಳಿದ್ರು.

    ಪ್ರಕರಣ ಸಂಬಂಧ ಸಿಎಂ, ಸಚಿವ ಅರ್. ವಿ ದೇಶಪಾಂಡೆ, ಪ್ರಮೋದ್ ಮಧ್ವರಾಜ್, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಮಹಾದೇವಪ್ಪ, ಟಿ.ಬಿ ಜಯಚಂದ್ರ, ಅಧಿಕಾರಿಗಳಾದ ರಜನೀಶ್ ಗೋಯೆಲ್, ಶಾಲಿನಿ ರಜನೀಶ್, ಉಡುಪಿಯ ಅಂದಿನ ಜಿಲ್ಲಾಧಿಕಾರಿ ವೆಂಕಟೇಶ್, ಉದ್ಯಮಿ ಡಾ. ಬಿ.ಆರ್ ಶೆಟ್ಟಿ- ವಾಚ್ ನೀಡಿದ ಡಾ. ಗಿರೀಶ್ ಚಂದ್ರ ವರ್ಮಾ ಹೆಸರನ್ನು ನಮೂದಿಸಿ ಇವರ ಮೇಲೆಲ್ಲಾ ತನಿಖೆಯಾಗಬೇಕು ಎಂದು ಅನುಪಮಾ ಒತ್ತಾಯಿಸಿದ್ದಾರೆ. ಎರಡು ತಿಂಗಳೊಳಗೆ ಪ್ರಧಾನಿ ಮೋದಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ಆದೇಶ ನೀಡದಿದ್ದರೆ ಕಾನೂನು ಹೋರಾಟದ ಮೊರೆ ಹೋಗುವುದಾಗಿ ಗಡುವು ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ ರಾಜ್ಯ ಪೊಲೀಸರನ್ನು ರಾಜಕಾರಣಿಗಳು ಪೀಡಿಸಿ- ಕಾಡಿಸುತ್ತಿರುವುದನ್ನು ನೆನೆದು ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಕಣ್ಣೀರಿಟ್ಟಿದ್ದಾರೆ. ಕಲ್ಲಪ್ಪ ಹಂಡಿಭಾಗ್ ಮತ್ತು ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆಯ ಬಗ್ಗೆ ಆಕ್ರೋಶದಿಂದ ಮಾತನಾಡಿದರು. ಸಿಐಡಿ ಇಲಾಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೆಣೈ, ನಿಮಗೆ ನಾಚಿಕೆ ಆಗೊಲ್ವಾ..? ನಿಮ್ಮ ಕುಟುಂಬದವರು ಸತ್ತಾಗ ಹೀಗೆ ಮಾಡ್ತೀರಾಂತ ಪ್ರಶ್ನೆ ಮಾಡಿದರು. ಅಲ್ಲದೇ ಈ ಬಗ್ಗೆ ಕೋರ್ಟಿಗೆ ಇನ್ನೂ ಚಾರ್ಜ್‍ಶೀಟ್ ಹಾಕದಿರುವುದನ್ನು ಖಂಡಿಸಿರು.

    ಬೈಕ್ ರ್ಯಾಲಿಗೆ ರಸ್ತೆ ಕಾಯುವ ಗತಿ ರಾಜ್ಯದ- ಪೊಲೀಸರಿಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಹ್ಯೂಬ್ಲೋಟ್ ವಾಚ್ ಪ್ರಕರಣದಲ್ಲಿ ವಾಚ್ ಮಾತ್ರ ಉಳಿದುಕೊಂಡಿದೆ. ಅದನ್ನು ಪೊಲೀಸರ್ಯಾರು ಕಾಯದಿದ್ದರೆ, ಸ್ವತಃ ಡಿಜಿಪಿಯವರೇ ಕಾದುಕೊಂಡು ಕುಳಿತುಕೊಳ್ಳಲಿ. ಪ್ರಕರಣದಲ್ಲಿ ಇರುವ ಸಾಕ್ಷಿ ಅಂದ್ರೆ ಅದು ವಾಚ್ ಮಾತ್ರ, ಅದೇನಾದ್ರು ಕಳವಾದರೆ ಸ್ಪೀಕರ್ ಕೋಳಿವಾಡ್ ಅವರನ್ನೂ ಆರೋಪಿ ಮಾಡುತ್ತೇನೆ ಎಂದು ಅನುಪಮಾ ಶೆಣೈ ಗುಡುಗಿದರು.

    ಒಟ್ಟಿನಲ್ಲಿ ಎರಡು ತಿಂಗಳ ಕಾಲ ಈ ಪ್ರಕರಣಗಳಲ್ಲಿ ಕಾದು ನೋಡುತ್ತೇನೆ. ಮುಂದೆ ಇನ್ನಷ್ಟು ಹಗರಣಗಳನ್ನು ಬಯಲಿಗೆಳೆಯುವುದಾಗಿ ಹೇಳಿದ್ದಾರೆ.

    https://www.youtube.com/watch?v=-AvarwAxOiw

  • ಬೈಕ್ ನಿಲ್ಲಿಸಿ ರಸ್ತೆ ಬದಿಯಲ್ಲಿ ಮಾತನಾಡ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಯಿತು ಇನ್ನೋವಾ! ಕಾರಿನಲ್ಲಿ ಏನಿತ್ತು ಗೊತ್ತಾ?

    ಬೈಕ್ ನಿಲ್ಲಿಸಿ ರಸ್ತೆ ಬದಿಯಲ್ಲಿ ಮಾತನಾಡ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಯಿತು ಇನ್ನೋವಾ! ಕಾರಿನಲ್ಲಿ ಏನಿತ್ತು ಗೊತ್ತಾ?

    ಉಡುಪಿ: ಟೈಂ ಕೈಕೊಟ್ಟರೆ ಹಗ್ಗವೂ ಹಾವಾಗಿ ಕಡಿಯುತ್ತಂತೆ. ಇಂತಹದ್ದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು ಬೈಕ್ ರೈಡ್ ಮಾಡ್ತಾ ಫೋನ್ ನಲ್ಲಿ ಮಾತನಾಡೋದು ತಪ್ಪು ಹಾಗಂತ ಗಾಡಿ ಸೈಡಿಗೆ ಹಾಕಿ ಮಾತನಾಡಿದ್ದೇ ಇಲ್ಲಿ ತಪ್ಪಾಗಿದೆ.

    ಉಡುಪಿಯ ಉದ್ಯಾವರ ಸಮೀಪದ ಬಲೈಪಾದೆಯ ರಸ್ತೆ ಪಕ್ಕ ಬೈಕ್ ನಿಲ್ಲಿಸಿ ಫೋನ್ ನಲ್ಲಿ ಪಣಿಯೂರಿನ ವಿಜಯ್ ಎಂಬವರು ಮಾತನಾಡುತ್ತಿದ್ದರು. ಈ ವೇಳೆ ಕುಂದಾಪುರ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಇನ್ನೋವಾ ಕಾರು ಬಂದು ಬೈಕ್ ಮೇಲೆ ಎರಗಿದೆ.

    ಅಪಘಾತದ ಬಗ್ಗೆ ಅರಿವೇ ಇಲ್ಲದ ವಿಜಯ್ ಅವರನ್ನು ಸುಮಾರು ದೂರ ಎಳೆದೊಯ್ದಿದೆ. ವಿಜಯ್ ಅವರಿಗೆ ಗಂಭೀರ ಗಾಯವಾದ್ರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಯಂತ್ರಣ ತಪ್ಪಿ ಈ ಅಪಘಾತವಾಗಿದೆ ಅಂತ ಚಾಲಕ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

    ಇನ್ನೋವಾ ಕಾರಿನಲ್ಲಿ ಮಾಂಸ ತುಂಬಿದ್ದ ಪೊಟ್ಟಣಗಳಿದ್ದವು. ಯಾವ ಮಾಂಸವನ್ನು ಎಲ್ಲಿಂದ ಯಾರಿಗೆ ಸಾಗಾಟ ಮಾಡುತ್ತಿದ್ದರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,

    ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಶನಿವಾರ ಸಂಜೆ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

  • ಕಣ್ಣಿಗೆ ಖಾರದ ಪುಡಿ ಎರಚಿ, ಕೈಕಾಲು ಕಟ್ಟಿ 50 ಸಾವಿರ ರೂ. ದರೋಡೆ ಮಾಡಿದ್ರು!

    ಕಣ್ಣಿಗೆ ಖಾರದ ಪುಡಿ ಎರಚಿ, ಕೈಕಾಲು ಕಟ್ಟಿ 50 ಸಾವಿರ ರೂ. ದರೋಡೆ ಮಾಡಿದ್ರು!

    ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು ಕೋಳಿ ಅಂಗಡಿ ಮಾಲೀಕನಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.

    ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66, ಸಾಲಿಗ್ರಾಮದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಗ್ರೇಶನ್ ಲೋಬೊ ಮಾಲೀಕತ್ವದ `ಲೋಬೊ ಚಿಕನ್ ಸೆಂಟರ್’ಗೆ ಬಂದ ದರೋಡೆಕೋರರು ಗ್ರೇಶನ್ ಲೋಬೊ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಬಳಿಕ ಅವರ ಕೈಗಳನ್ನು ಹಗ್ಗದಿಂದ ಕಟ್ಟಿಹಾಕಿ ಸುಮಾರು 50 ಸಾವಿರ ರೂ. ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

    ಗ್ರೇಶನ್ ಸಹೋದರ ಕೋಳಿಯ ತ್ಯಾಜ್ಯವನ್ನು ಹೊರಗಡೆ ಹಾಕಲು ಹೋಗಿದ್ದು, ವಾಪಾಸು ಬಂದು ನೋಡುವಾಗ ಅಣ್ಣ ಗ್ರೇಶನ್ ಲೋಬೊ ನೆಲದಲ್ಲಿ ಬಿದ್ದಿದ್ದರು. ಕೂಡಲೇ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿದರು. ಬಳಿಕ ಆಂಬುಲೆನ್ಸ್ ಮೂಲಕ ಗ್ರೇಶನ್ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಗ್ರೇಶನ್ ಅವರಿಗೆ ಪ್ರಜ್ಞೆ ಬಂದ ಬಳಿಕವಷ್ಟೇ ಎಷ್ಟು ಮಂದಿ ದರೋಡೆಕೋರರು ಇದ್ದರು ಎನ್ನುವ ಸ್ಪಷ್ಟ ಮಾಹಿತಿ ಲಭಿಸಬೇಕಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಎರಡು ಮಂದಿ ಕತ್ತಲಿನಲ್ಲಿ ಓಡಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

    ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್ ಹಾಗೂ ಕೋಟ ಪಿಎಸ್‍ಐ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.