Tag: ಉಡುಪಿ

  • ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಟ್ಟಾಣಿಗೆ ಚಿಕಿತ್ಸೆ ಮುಂದುವರಿಕೆ

    ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಟ್ಟಾಣಿಗೆ ಚಿಕಿತ್ಸೆ ಮುಂದುವರಿಕೆ

    ಉಡುಪಿ: ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ನ್ಯೂಮೋನಿಯಾ ಹಾಗೂ ಪಾಶ್ರ್ವ ವಾಯುವಿನಿಂದ ಬಳಲುತ್ತಿರುವ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನವರಾತ್ರಿ ಅಂಗವಾಗಿ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚಿಟ್ಟಾಣಿ ಪಾತ್ರ ನಿರ್ವಹಿಸಿದ್ದರು. ಸೆ.25ರಂದು ವಸುವರಾಂಗಿ ಪ್ರಸಂಗದಲ್ಲಿ ಭೀಷ್ಮನ ತಂದೆ ಶಂತನು ಪಾತ್ರ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೆಲ ಪಾತ್ರವನ್ನು ಅವರು ಅರ್ಧವಷ್ಟೇ ಮಾಡುತ್ತಿದ್ದು, ಬಳಿಕ ಬೇರೆ ಬೇರೆ ಕಲಾವಿದರು ಮುಂದುವರಿಸುತ್ತಿದ್ದರು.

    ಆದರೆ ಸೆ.25ರಂದು ಶಂತನು ಪಾತ್ರವನ್ನು ಅವರೊಬ್ಬರೇ ಮಾಡಿದ್ದರು. ಬಳಿಕ ಆರೋಗ್ಯ ಕೈಕೊಟ್ಟಿದ್ದು, ಸುಧಾರಿಸಿಕೊಳ್ಳಲಿಲ್ಲ. ಅವರಿಗೆ ಮೊದಲು ಹೊನ್ನಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಸೆ.29ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕಳೆದ 7 ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಚಿಟ್ಟಾಣಿ ಅವರ ಇಬ್ಬರೂ ಮಕ್ಕಳು ಹಾಗೂ ಮೊಮ್ಮಗ ಕೂಡಾ ಯಕ್ಷಗಾನ ಕ್ಷೇತ್ರದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ.

    ಕೆಎಂಸಿಯ ತೀವ್ರ ನಿಗಾ ಘಟಕದಲ್ಲಿ ಚಿಟ್ಟಾಣಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯರು ಹಿರಿಯ ಕಲಾವಿದರ ಆರೋಗ್ಯದ ಬಗ್ಗೆ ನಿಗಾ ವಹಿಸಿರುವುದಾಗಿ ಚಿಟ್ಟಾಣಿ ಕುಟುಂಬಸ್ಥರು ತಿಳಿಸಿದ್ದಾರೆ.

  • ಉಡುಪಿ: ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು

    ಉಡುಪಿ: ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು

    ಉಡುಪಿ: ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಎರ್ಮಾಳಿನಲ್ಲಿ ನಡೆದಿದೆ.

    ಎರ್ಮಾಳು ಗ್ರಾಮ ಸಮೀಪದ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ ಅದಮಾರು ಗ್ರಾಮದ ರವಿ ದೇವಾಡಿಗ ಎಂಬ ವ್ಯಕ್ತಿಯ ಶವ ಇದು ಎಂದು ಗುರುತಿಸಲಾಗಿದೆ. ರವಿ ದೇವಾಡಿಗ ಸೋಮವಾರ ಮಧ್ಯಾಹ್ನ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ನಂತರ ರಾತ್ರಿ ಮನೆಗೆ ವಾಪಸ್ ಬಂದಿರಲಿಲ್ಲ.

    ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಉಡುಪಿಯ ಆರ್‍ಪಿಎಫ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ. ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಅಥವಾ ರೈಲ್ವೆ ಟ್ರ್ಯಾಕ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರಾ ಎಂಬ ಬಗ್ಗೆ ಇನ್ನಷ್ಟೇ ತನಿಖೆ ಆಗಬೇಕಿದೆ. ಮೇಲ್ನೋಟಕ್ಕೆ ಗಮನಿಸಿದಾಗ ಇದೊಂದು ರೈಲು ಅಪಘಾತ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ್ರೆ ಅತ್ಯಾಚಾರ ಪ್ರಕರಣ ಬಯಲಾಯ್ತು!

    ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ್ರೆ ಅತ್ಯಾಚಾರ ಪ್ರಕರಣ ಬಯಲಾಯ್ತು!

    ಉಡುಪಿ: ಯುವತಿಯ ಮೇಲೆ ಅತ್ಯಾಚಾರ ನಡೆದ ವಿಚಾರ ಎಂಟು ತಿಂಗಳ ನಂತರ ಬೆಳಕಿಗೆ ಬಂದಿರುವ ಪ್ರಕರಣ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅತ್ಯಾಚಾರಕ್ಕೊಳಗಾದ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಯುವತಿಯನ್ನು ಕೂಡಲೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಯುವತಿ ಗರ್ಭವತಿಯಾಗಿರುವುದನ್ನು ಮನೆಯವರಿಗೆ ತಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಕುಟುಂಬಸ್ಥರು ವಿಚಾರಣೆ ಮಾಡಿದಾಗ 8 ತಿಂಗಳ ಹಿಂದೆ ಭಾಸ್ಕರ್ ಆಚಾರಿ ಎಂಬ ವ್ಯಕ್ತಿ ಅತ್ಯಾಚಾರ ನಡೆಸಿದ್ದಾಗಿ ಯುವತಿ ಹೇಳಿದ್ದಾರೆ. ಮನೆ ಕೆಲಸಕ್ಕೆ ಬರುತ್ತಿದ್ದ ಭಾಸ್ಕರ್ ಯುವತಿಯನ್ನ ಪುಸಲಾಯಿಸಿ ನಿರಂತರ ಅತ್ಯಾಚಾರ ನಡೆಸಿದ್ದು, ಇದನ್ನು ಮನೆಯವರಲ್ಲಿ ಹೇಳದಂತೆ ಜೀವಬೆದರಿಕೆ ಹಾಕಿದ್ದ.

    ಮಗುವಿಗೆ ಜನ್ಮ ನೀಡಿದ ನಂತರ ಕುಟುಂಬಸ್ಥರು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಭಾಸ್ಕರ್ ಆಚಾರಿಯನ್ನು ಗೌಪ್ಯವಾಗಿ ಕರೆಸಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ತಾನು ಅತ್ಯಾಚಾರ ಮಾಡಿರುವುದಾಗಿ ಭಾಸ್ಕರ್ ಒಪ್ಪಿಕೊಂಡಿದ್ದಾನೆ.

     

  • 14 ತಿಂಗಳು ನರಕ ಅನುಭವಿಸಿ ತವರಿಗೆ ಮರಳಿದ ಜೆಸಿಂತಾ

    14 ತಿಂಗಳು ನರಕ ಅನುಭವಿಸಿ ತವರಿಗೆ ಮರಳಿದ ಜೆಸಿಂತಾ

    ಉಡುಪಿ: ಸಂಸಾರದ ಭಾರ ಹೊತ್ತು, ಸೌದಿ ಅರೆಬಿಯಾದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ಜೆಸಿಂತಾ ಉಡುಪಿಗೆ ವಾಪಸ್ಸಾಗಿದ್ದಾರೆ. ಡಾ. ರವೀಂದ್ರನಾಥ ಶಾನುಭಾಗ್ ನೇತೃತ್ವದ ಮಾನವ ಹಕ್ಕುಗಳ ಪ್ರತಿಷ್ಟಾನದ ಹೋರಾಟಕ್ಕೆ ಜಯಗಳಿಸಿದೆ. ಕ್ರೂರಿ ಅರಬ್ಬಿಯ ಮನೆಯಲ್ಲಿ ಎಂಜಲು ತಿಂದ ದಿನಗಳನ್ನು ನೆನೆದು ಅವರು ಕಣ್ಣೀರಿಡುತ್ತಿದ್ದಾರೆ.

    ವೇದಿಕೆಯ ಮೇಲೆ ಕುಳಿತು ಕಣ್ಣೀರಿಡುತ್ತಿರುವ ಇವರು ಜೆಸಿಂತಾ. ಉಡುಪಿ ಜಿಲ್ಲೆಯ ಮುದರಂಗಡಿಯವರು. ಇವರು ಜೂನ್ 19, 2016 ರಂದು ಖತಾರ್‍ನಲ್ಲಿ ಮಕ್ಕಳ ಪೋಷಣೆಗೆಂದು ಹೋರಾಟ ಮಾಡಿದವರು. ಆದರೆ ಆರಂಭದಲ್ಲೇ ಇವರು ಮೋಸ ಹೋಗಿ ಇಳಿದದ್ದು ಸೌದಿ ಅರೆಬಿಯಾದಲ್ಲಿ. ಮಂಗಳೂರಿನ ಏಜೆಂಟ್ ಜೇಮ್ಸ್ ಡಿಮೆಲ್ಲೋ ಜೆಸಿಂತಾ ಅವರನ್ನು ಅರಬ್ಬಿಯರಿಗೆ ಮಾರಲು ಸಿದ್ಧತೆ ಮಾಡಿದ್ದರು. ಕೊನೆಗೂ ಜೀತದಾಳುವಾಗಿ 5 ಲಕ್ಷ ರೂಪಾಯಿಗೆ ಹರಾಜು ಹಾಕಿ ಅಕ್ಷರಶಃ ಮಾರಿದ್ದರು. 14 ತಿಂಗಳುಗಳ ಕಾಲ ಸರಿಯಾಗಿ ಊಟವಿಲ್ಲದೆ – ಚಿತ್ರಹಿಂಸೆಯನ್ನು ಅನುಭವಿಸಿದ್ದಾರೆ. ಟಿಬಿ, ಕಫದಲ್ಲಿ ರಕ್ತ ಕಾರುತ್ತಿದ್ದರೂ ಅವರಿಗೆ ಔಷಧಿ ನೀಡದೆ- ಮನೆಗೆ ಫೋನ್ ಮಾಡದಂತೆ ನಿರ್ಬಂಧ ಹೇರಿ ಅರಬ್ಬೀಗಳ ಮನೆಯಲ್ಲಿ ಎಂಜಲನ್ನು ಕೊಡುತ್ತಿದ್ದರು. ಮಾನವ ಹಕ್ಕುಗಳ ಹೋರಾಟಗಾರ ರವೀಂದ್ರನಾಥ ಶಾನುಭಾಗ್ ಅವಿರತ ಪ್ರಯತ್ನದಿಂದ ಇಂದು ಬದುಕಿ ತವರಿಗೆ ವಾಪಸ್ಸಾಗಿದ್ದಾರೆ.

    ಕೇಂದ್ರ ಸರ್ಕಾರ, ವಿದೇಶಾಂಗ ಸಚಿವಾಲಯ- ಅಲ್ಲಿನ ಎನ್‍ಜಿಒಗಳು, ಶಾನುಭಾಗ್ ಅವರ ಹಳೆ ವಿದ್ಯಾರ್ಥಿಗಳ ಸಹಾಯದಿಂದ ಜೆಸಿಂತಾ ಉಡುಪಿಗೆ ಮರಳಿದ್ದಾರೆ. ಸುಮಾರು 4.50 ಲಕ್ಷ ರೂಪಾಯಿಯನ್ನು ಮರು ಪಾವತಿಸುವ ಮೂಲಕ ಈಕೆಯನ್ನು ರಣಹದ್ದುಗಳ ಕೈಯಿಂದ ಬಿಡಿಸಿಕೊಂಡು ಬರಲಾಯಿತು. 65 ಸಾವಿರ ರೂಪಾಯಿ ಹಣವನ್ನು ಪೆನಾಲ್ಟಿಯಾಗಿ ನೀಡಲಾಯಿತು. ಇಲ್ಲದಿದ್ದರೆ ಅಬ್ದುಲ್ಲಾ ಅಲ್ಮುತಾಯ್ರಿ ಎಂಬ ಅರೆಬ್ಬೀಯ ಮೂರು ಮನೆ, ಮೂವರು ಹೆಂಡತಿಯರು ಮತ್ತು 28 ಮಕ್ಕಳ ಪಾಲನೆ ಪೋಷಣೆ ಮಾಡುವಾಗ ಅವರು ಅರೆ ಜೀವವಾಗಿ ಬಿಡುತ್ತಿದ್ದರು.

    ಮಂಗಳೂರು ಪೊಲೀಸರ ಉದಾಸೀನದಿಂದ ಇವರು 14 ತಿಂಗಳು ನರಕದಲ್ಲೇ ಒದ್ದಾಡುವ ಸ್ಥಿತಿ ಬಂದಿತ್ತು. ಮಾನವ ಕಳ್ಳ ಸಾಗಾಟದ ರೂವಾರಿ ಮುಂಬೈಯ ಶಾಬಾಜ್ ಖಾನ್, ಅಮೀರ್ ಭಾಯ್ ನನ್ನು ವಿಚಾರಣೆಯೂ ಮಾಡಿಲ್ಲ. ಕರಾವಳಿ ಜಿಲ್ಲೆಗಳಿಂದ ವರ್ಷಕ್ಕೆ 2000 ಮಂದಿಯ ಕಳ್ಳಸಾಗಣೆ ಆದರೆ ದೇಶದಿಂದ ಎಷ್ಟಾಗುತ್ತದೆ ಎಂಬೂದೇ ಆತಂಕಕಾರಿ ವಿಷಯವಾಗಿದೆ.

    ಸೌದಿ ಅರೇಬಿಯಾದ ನರಕ ನೋಡಿ ಬಂದ ಜೆಸಿಂತಾ ಮಾತನಾಡಿ, ನನಗೆ ಎಂಜಲು ತಿನ್ನಲು ಕೊಡುತ್ತಿದ್ದರು. ತಿಂಗಳ ಸಂಬಳವನ್ನೂ ಸರಿಯಾಗಿ ಕೊಟ್ಟಿಲ್ಲ. ಚಿತ್ರಹಿಂಸೆ ಕೊಡುತ್ತಿದ್ದರು. ಮನೆಯವರ ಜೊತೆ ಫೋನ್ ಮಾಡಿ ಮಾತನಾಡುವ ಅವಕಾಶವೂ ಇರಲಿಲ್ಲ. 40 ಮಂದಿಯ ಚಾಕರಿ ಮಾಡಿ ನಿದ್ದೆ ಮಾಡುತ್ತಿದ್ದರೆ, ಆಗಲೂ ನೀರು ಹಾಕಿ ಎಬ್ಬಿಸಿ ಕೆಲಸ ಕೊಡುತ್ತಿದ್ದರು. ಟಿಬಿ ಇದೆ ಅಂತ ಕಾಲು ಹಿಡಿದುಕೊಂಡು ಮದ್ದು ಕೊಡಿಸಿ ಅಂತ ಅಂಗಲಾಚಿದರೂ ಯಾರೂ ಕೇಳಲಿಲ್ಲ ಎಂದು ಆ ದಿನಗಳನ್ನು ನೆನೆದು ಕಣ್ಣೀರಿಟ್ಟರು.

    ಮಾನವ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ ಶಾನುಭಾಗ್ ಜೆಸಿಂತಾರನ್ನು ಸೌದಿಯಿಂದ ಊರಿಗೆ ಕರೆತರಿಸುವಲ್ಲಿ ಅವಿರತ ಶ್ರಮಪಟ್ಟದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು. 50ಕ್ಕೂ ಹೆಚ್ಚು ಮಂದಿ ಈಗಾಗಲೇ ನನ್ನನ್ನು ಸಂಪರ್ಕ ಮಾಡಿದ್ದಾರೆ. 14 ತಿಂಗಳ ಗುಲಾಮಗಿರಿಯಿಂದ ಜೆಸಿಂತಾ ಅವರು ಉಡುಪಿಗೆ ಬಂದಿದ್ದಾರೆ. ಕಾನೂನು ಪ್ರಕಾರವೇ ಅವರನ್ನು ಕರೆದುಕೊಂಡು ಬಂದಿದ್ದೇವೆ. ಮಹಿಳೆಯರು ಗಲ್ಫ್ ದೇಶಗಳಿಗೆ ಹೋಗುವಾಗ ಜಾಗೃತೆ ವಹಿಸಬೇಕು. ಕುಟುಂಬದವರಿಂದ ಮಾಹಿತಿಗಳನ್ನು ಪಡೆದುಕೊಂಡು ಕೆಲಸಕ್ಕೆ ಹೋಗಬೇಕು. ರಿಕ್ರೂಟಿಂಗ್ ಏಜನ್ಸಿಗಳು ಮಾನವ ಕಳ್ಳಸಾಗಣಾ ಕೇಂದ್ರಗಳಾಗಿದೆ. ಅಕ್ಟೋಬರ್ 5ರ ವರೆಗೆ ಕ್ಷಮಾಧಾನ ಯೋಜನೆಯನ್ನು ಮಾಡಲಾಗಿದೆ. ಕೆಲವು ಸಾವಿರ ರೂಪಾಯಿ ಪೆನಾಲ್ಟಿ ಕೊಡಬೇಕಾಗುತ್ತದೆ. ಉಡುಪಿಯ ಮಾನವಹಕ್ಕುಗಳ ಆಯೋಗಕ್ಕೆ ಬಂದು ದೂರು ನೀಡಿದರೆ ಸಮಸ್ಯೆಯಲ್ಲಿರುವವರನ್ನು ವಾಪಾಸ್ ಕರೆಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಉಡುಪಿಯ ದೊಡ್ಡಣಗುಡ್ಡೆ ಎ.ವಿ ಬಾಳಿಗಾ ಆಸ್ಪತ್ರೆಯಲ್ಲಿ ಜೆಸಿಂತಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನಸಿಕ ಸ್ಥೈರ್ಯ ಕಳೆದುಕೊಂಡಿರುವ ಅವರಿಗೆ ಮನೋವೈದ್ಯರು ಧೈರ್ಯ ತುಂಬುವ, ಹಾಗೂ ಹಿಂದಿನಂತಾಗುವ ಹಾದಿಯಲ್ಲಿದ್ದಾರೆ.

  • ಉಡುಪಿಯ ಎಂಐಟಿ ಕಾಲೇಜಿಗೆ ನಿರ್ದೇಶಕ ರಾಜಮೌಳಿ ಭೇಟಿ ನೀಡಿ ಹೀಗಂದ್ರು

    ಉಡುಪಿಯ ಎಂಐಟಿ ಕಾಲೇಜಿಗೆ ನಿರ್ದೇಶಕ ರಾಜಮೌಳಿ ಭೇಟಿ ನೀಡಿ ಹೀಗಂದ್ರು

    ಉಡುಪಿ: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಶುಕ್ರವಾರ ಉಡುಪಿಗೆ ಭೇಟಿ ನೀಡಿದ್ದಾರೆ.

    ಜಿಲ್ಲೆಯಲ್ಲಿರೋ ಮಣಿಪಾಲ್ ತಾಂತ್ರಿಕ ಶಿಕ್ಷಣ ಸಂಸ್ಥೆ (ಎಂಐಟಿ) ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾಜಮೌಳಿ ಪಾಲ್ಗೊಂಡಿದ್ದರು. ಶಿಕ್ಷಣ ಸಂಸ್ಥೆಯಿಂದ ಅವರಿಗೆ ಅದ್ಧೂರಿ ಸ್ವಾಗತವೇ ಸಿಕ್ಕಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಸಂತಸದಿಂದ ಉತ್ತರಿಸುತ್ತಾ ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನ ನಿರ್ದೇಶಕರಿಗೆ ಹೀರೋಗಳಿಗೆ ಸೂಕ್ತವಾಗುವ ಕಥೆ ಮಾಡುವ ಅನಿವಾರ್ಯತೆ ಇರುತ್ತದೆ. ಆದರೆ ಕಥೆಗೆ ತಕ್ಕಂತ ಹೀರೋಗಳನ್ನು ಆಯ್ಕೆ ಮಾಡುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಕೆಲವೇ ಕೆಲವು ಡೈರೆಕ್ಟರ್‍ಗಳಿಗೆ ಮಾತ್ರ ಅಂತಹ ಅವಕಾಶ ಸಿಗುತ್ತದೆ. ಆದರೆ ನಾನು ಅದೃಷ್ಟವಂತ ನಿರ್ದೇಶಕ ಅಂತ ಹೇಳಿದ್ರು.

    ಸಂವಾದ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಡ್ಯಾನ್ಸ್ ಪ್ರೇಕ್ಷಕರ ಗಮನ ಸೆಳೆಯಿತು.

  • ಕೋತಿ ಕೊಂದು ಉರುಳಾಡಿ, ನುಂಗಲು ಆಗದೇ ಪರದಾಡಿದ ಹೆಬ್ಬಾವು – ವಿಡಿಯೋ ನೋಡಿ

    ಕೋತಿ ಕೊಂದು ಉರುಳಾಡಿ, ನುಂಗಲು ಆಗದೇ ಪರದಾಡಿದ ಹೆಬ್ಬಾವು – ವಿಡಿಯೋ ನೋಡಿ

    ಉಡುಪಿ: ಹೆಬ್ಬಾವೊಂದು ಮಂಗನನ್ನು ಕೊಂದು ತಿನ್ನಲು ಪ್ರಯತ್ನಿಸಿದ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದ ತೋಟವೊಂದರಲ್ಲಿ ನಡೆದಿದೆ.

    ಹಸಿದ ಹೆಬ್ಬಾವು ಮಾಮೂಲಿಯಾಗಿ ನಾಯಿ, ಕೋಳಿಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಆದರೆ ವಿಚಿತ್ರವೆಂಬಂತೆ ಹೆಬ್ಬಾವು ಕೋತಿಯನ್ನು ಕೊಂದು ನಂತರ ನುಂಗಲು ಯತ್ನಿಸಿದೆ. ಆದರೆ ದೊಡ್ಡ ಮಂಗ ಹೆಬ್ಬಾವಿನ ಹೊಟ್ಟೆ ಸೇರಲಿಲ್ಲ. ಹೀಗಾಗಿ ಉರುಳಾಡಿ ಸುಸ್ತಾದ ಹೆಬ್ಬಾವು ಮಂಗನನ್ನು ಬಿಟ್ಟು ಪೊದೆಸೇರಿಕೊಂಡಿದೆ.

    ಹಸಿದ ಹೆಬ್ಬಾವುಗಳು ಸಿಕ್ಕ ಪ್ರಾಣಿಗಳನ್ನು ಕಬಳಿಸಿಬಿಡುವುದು ಸಾಮಾನ್ಯ. ಆದರೆ ಮಂಗನನ್ನು ನುಂಗಲು ಪ್ರಯತ್ನಿಸಿರುವುದು ವಿಶೇಷ ಎಂದು ಸ್ಥಳೀಯ ಉರಗತಜ್ಞ ಸಂದೇಶ್ ಆಜ್ರಿ ತಿಳಿಸಿದ್ದಾರೆ.

    ರತ್ನಾಕರ ಎಂಬವರ ತೋಟದಲ್ಲಿ ನಡೆದ ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

    https://youtu.be/Yv_IHlWTQvM

     

  • ಉಡುಪಿಯಲ್ಲೊಂದು ಇಂಟರ್‍ನ್ಯಾಶನಲ್ ಮ್ಯಾರೇಜ್!

    ಉಡುಪಿಯಲ್ಲೊಂದು ಇಂಟರ್‍ನ್ಯಾಶನಲ್ ಮ್ಯಾರೇಜ್!

    ಉಡುಪಿ: ಜಿಲ್ಲೆಯ ಕುಂದಾಪುರದ ಕೋಟದಲ್ಲಿ ಇಂಟರ್‍ನ್ಯಾಶನಲ್ ಮ್ಯಾರೇಜ್ ಆಗಿದೆ. ನೇಪಾಳದ ಯುವಕ ಉಡುಪಿಯ ಕೋಟ ಮಣೂರಿನ ಯುವತಿಯನ್ನು ಮದುವೆಯಾಗಿದ್ದಾರೆ.

    ದಲಿತ ಸಮುದಾಯದ ಯುವತಿ ದೀಪಾ ಅವರು ನೇಪಾಳದ ಉಪೇನ್ ಡೈಮಾರಿ ಅವರನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈಗ ಎರಡೂ ಮನೆಯವರನ್ನು ಒಪ್ಪಿಸಿ ಇಬ್ಬರು ಕುಟುಂಬದ ಸಮ್ಮುಖದಲ್ಲೇ ಸತಿಪತಿಗಳಾಗಿದ್ದಾರೆ.ಒ

    ಮೂರು ವರ್ಷಗಳ ಕಾಲ ಮನೆಯವರ ಒಪ್ಪಿಗೆಗಾಗಿ ಕಾದು ಕಾದು ಕೊನೆಗೂ ಕುಟುಂಬಸ್ಥರ ಒಪ್ಪಿಗೆ ಪಡೆದು ಸಪ್ತಪದಿ ತುಳಿದಿದ್ದಾರೆ. ನೇಪಾಳದಿಂದ ಉಪೇನ್ ಅವರ ಸುಮಾರು 20 ಮಂದಿ ಸಂಬಂಧಿಕರು ಬಂದಿದ್ದರು. ಯುವಕನಿಂದ ಬಿಡಿಗಾಸೂ ಪಡೆಯದೆ ಯುವತಿಯೇ ಮದುವೆಯ ಎಲ್ಲಾ ಖರ್ಚುವೆಚ್ಚವನ್ನು ಹಾಕಿರುವುದು ವಿಶೇಷ.

    ಕುಂದಾಪುರದ ರಾಜಲಕ್ಷ್ಮೀ ಸಭಾಂಗಣದಲ್ಲಿ ಸರಳವಾಗಿ ಮದುವೆಯದರು. ಇಬ್ಬರೂ ಮೀನು ಫ್ಯಾಕ್ಟರಿಯಲ್ಲಿ ದಿನಗೂಲಿ ಮಾಡುತ್ತಿದ್ದು, ಮುಂದೆಯೂ ಇಲ್ಲೇ ದುಡಿಯುವುದಾಗಿ ಹೇಳಿದ್ದಾರೆ. ಸ್ಥಳೀಯರು, ಮೀನು ಫ್ಯಾಕ್ಟರಿಯ ಸಿಬ್ಬಂದಿ ಬಂದು ನವದಂಪತಿಗಳಿಗೆ ಹಾರೈಸಿದ್ದಾರೆ.

  • ಮಣಿಪಾಲದಲ್ಲಿ ಗೂಳಿ ಮೇಲೆ ತಲ್ವಾರ್ ದಾಳಿ- ಚಿಂತಾಜನಕ ಸ್ಥಿತಿಯಲ್ಲಿ ಮೂಕ ಪ್ರಾಣಿ!

    ಮಣಿಪಾಲದಲ್ಲಿ ಗೂಳಿ ಮೇಲೆ ತಲ್ವಾರ್ ದಾಳಿ- ಚಿಂತಾಜನಕ ಸ್ಥಿತಿಯಲ್ಲಿ ಮೂಕ ಪ್ರಾಣಿ!

    ಉಡುಪಿ: ಅಕ್ರಮ ಕಸಾಯಿಖಾನೆಗೆ ಕೊಂಡೊಯ್ಯಲು ತಲವಾರಿನಿಂದ ಗೂಳಿಗೆ ಕಡಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.

    ಎರಡು ದಿನಗಳ ಹಿಂದೆ ಕಸಾಯಿಖಾನೆಯ ಗುಂಪೊಂದು ಮಣಿಪಾಲದಲ್ಲಿ ಹೊರಿಯನ್ನು ಟೆಂಪೋದೊಳಗೆ ತುಂಬಿಸಲು ಯತ್ನಿಸಿತ್ತು. ಈ ಸಂದರ್ಭ ಗೂಳಿ ಸಹಕರಿಸದಿದ್ದಾಗ ದುಷ್ಕರ್ಮಿಗಳು ತಲ್ವಾರಿನಿಂದ ಕಡಿದಿದ್ದಾರೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಗೂಳಿಯನ್ನು ಸಮಾಜ ಸೇವಕ ನಿತ್ಯಾನಂದ ರಕ್ಷಿಸಿದ್ದಾರೆ.

    ಮಣಿಪಾಲ ವಿವಿಯ ವಿದ್ಯಾರ್ಥಿಗಳು ಈ ಮಾನವೀಯ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಮಣಿಪಾಲದ ಎಂ.ಐ.ಸಿ ಬಳಿ ಗೂಳಿಯೊಂದು ಮಾರಕಾಯುಧಗಳಿಂದ ಕಡಿದ ರೀತಿಯಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲಿ ಒದ್ದಾಡುತ್ತಿತ್ತು. ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಈ ಪರಿಸರದ ನಿವಾಸಿಗಳು ಹೋರಿಗೆ ಔಷದೋಪಚಾರ ಮಾಡಿದ್ದಾರೆ.

    ಹೋರಿಯು ಚಿಂತಾಜನಕ ಸ್ಥಿತಿಗೆ ತಲುಪಿದಾಗ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿ ಹೋರಿಯನ್ನು ರಕ್ಷಿಸುವಂತೆ ಫೋನ್ ಕರೆ ಮೂಲಕ ಕಾಲೇಜು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಕರೆಗೆ ಸ್ಪಂದಿಸಿದ ನಿತ್ಯಾನಂದ, ವಿನಯಚಂದ್ರ ಹೋರಿಯ ರಕ್ಷಣೆಗೆ ಮುಂದಾದರು.

    ಹೋರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಡಾ. ಪ್ರಶಾಂತ್ ನೀಡಿದರು. ಸದ್ಯ ಬ್ರಹ್ಮಾವರದ ನೀಲಾವರ ಗೋ ಶಾಲೆಗೆ ಗೂಳಿಯನ್ನು ರವಾನಿಸಲಾಗಿದೆ. ಉಡುಪಿ ಅಗ್ನಿ ಶಾಮಕ ದಳ ಹಾಗೂ ಸಾರ್ವಜನಿಕ ನೆರವಿನಿಂದ ಹೊರಿಯನ್ನು ವಿನೋದ್ ನಾಯಕ್ ಇವರ ವಾಹನದಲ್ಲಿ ಉಚಿತವಾಗಿ ಸಾಗಿಸಲಾಯಿತು.

     

  • ಕಚೇರಿಗೆ ನುಗ್ಗಿ ಯುವತಿಗೆ ದೊಣ್ಣೆಯಿಂದ ಹೊಡೆದು 2.50 ಲಕ್ಷ ರೂ. ದರೋಡೆ

    ಕಚೇರಿಗೆ ನುಗ್ಗಿ ಯುವತಿಗೆ ದೊಣ್ಣೆಯಿಂದ ಹೊಡೆದು 2.50 ಲಕ್ಷ ರೂ. ದರೋಡೆ

    ಉಡುಪಿ: ಕುಂದಾಪುರ ತಾಲೂಕಿನ ರಟ್ಟಾಡಿ ಗ್ರಾಮದಲ್ಲಿ ಯುವತಿಯ ಮೇಲೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು 2.50 ಲಕ್ಷ ರೂ. ಹಣವನ್ನು ಕದ್ದಿದ್ದಾರೆ.

     

    ಪ್ರೀತಿ(24) ಹಲ್ಲೆಗೆ ಒಳಗಾದ ಯುವತಿ. ಹೆಲ್ಮೆಟ್ ಹಾಕಿಕೊಂಡು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಶ್ರೀಕ್ಷೇತ್ರ ಧರ್ಮಸ್ಥಳದ ಸಾಲ ಯೋಜನೆಯ ಹಣ ಸೇವಾನಿರತರ ಕಚೇರಿಯ ಒಳಗೆ ನುಗ್ಗಿ, ಸುಮಾರು 2.50 ಲಕ್ಷ ರೂಪಾಯಿಯನ್ನು ದರೋಡೆ ಮಾಡಿದ್ದಾರೆ.

    ರಟ್ಟಾಡಿ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಬ್ಬಂದಿಯಾಗಿದ್ದ ಪ್ರೀತಿ ಎರಡು ಒಕ್ಕೂಟದ ಹಣವನ್ನು ಸಂಗ್ರಹಿಸುತ್ತಿದ್ದರು. ಯುವತಿಯ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಕಾಲು ಮುರಿದಿದ್ದು, ಯುವತಿಯನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಗಾಯಾಳು ಪ್ರೀತಿ ನೀಡಿದ ದೂರನ್ನು ದಾಖಲಿಸಿಕೊಂಡು ದರೋಡೆಕೋರರಿಗೆ ಬಲೆ ಬೀಸಿದ್ದಾರೆ.

  • 3 ಕೆಜಿ ಬೆಳ್ಳಿ  ಕದ್ದಿದ್ದ 5 ನೇಪಾಳಿಗರು ಅರೆಸ್ಟ್

    3 ಕೆಜಿ ಬೆಳ್ಳಿ ಕದ್ದಿದ್ದ 5 ನೇಪಾಳಿಗರು ಅರೆಸ್ಟ್

    ಉಡುಪಿ: ಚಿನ್ನದಂಗಡಿಯಲ್ಲಿದ್ದ ಆಭರಣಗಳನ್ನು ಕಳವು ಮಾಡಿದ್ದ ಐವರು ನೇಪಾಳಿಗರನ್ನು ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಶಿವಾಸಿಂಗ್ ಬಹುದ್ದೂರ್, ಕಮರ್ ಸಿಂಗ್, ರಮೇಶ್ ಸಿಂಗ್ ಪಾರ್ಕಿ, ಹರ್ಕ್ ಬಹುದ್ದೂರ್ ಸೌದ್, ಮತ್ತು ಪ್ರೇಮ್ ಬಹುದ್ದೂರ್ ಸೌದ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಲಕ್ಷದ 80 ಸಾವಿರ ಮೌಲ್ಯದ 3 ಕೆಜಿ ಬೆಳ್ಳಿಯ ಕಾಲು ಚೈನ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬೈಂದೂರಿನ ಶೀರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲ್ಲರಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಾವು ಕಳ್ಳತನ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ.

    ಆರೋಪಿಗಳು ಗೂರ್ಖಾ ಹಾಗೂ ಫಾಸ್ಟ್ ಫುಡ್ ಕೆಲಸ ಮಾಡಿಕೊಂಡಿದ್ದರು ಎನ್ನುವ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ. ಇವರು ಬೇರೆ ಕಡೆಯೂ ಕೃತ್ಯ ಎಸಗಿದ್ದಾರಾ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.