Tag: ಉಡುಪಿ

  • ಎಲ್ಲವನ್ನು ನೋಡಿಕೊಂಡು ಸುಮ್ಮನಿರುವ ಹೇಡಿಯಲ್ಲ: ಪ್ರಕಾಶ್ ರೈ ಘರ್ಜನೆ

    ಎಲ್ಲವನ್ನು ನೋಡಿಕೊಂಡು ಸುಮ್ಮನಿರುವ ಹೇಡಿಯಲ್ಲ: ಪ್ರಕಾಶ್ ರೈ ಘರ್ಜನೆ

    ಉಡುಪಿ: ಎಲ್ಲವನ್ನೂ ನೋಡಿಕೊಂಡು ಸುಮ್ಮನಿರುವ ಹೇಡಿ ನಾನಲ್ಲ ಎಂದು ನಟ ಪ್ರಕಾಶ್ ರೈ ಗುಡುಗಿದ್ದಾರೆ.

    ಉಡುಪಿಯಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾವು – ನಮ್ಮ ಮಕ್ಕಳು ನೆಮ್ಮದಿಯಿಂದ ಬದುಕುವ ಸಮಾಜ ಬೇಕು ಎಂದರು.

    ಧೈರ್ಯದಿಂದ ಬದುಕುವ ಹಕ್ಕಿನ ಸಮಾಜ ಬೇಕು. ಕಳೆದ ಒಂದು ವಾರದಿಂದ ನಡೆದ ಬೆಳವಣಿಗೆ ನೋಡಿ ವಿದೇಶದಲ್ಲಿರುವ ಗೆಳೆಯರು ನನ್ನ ವಿರುದ್ಧದ ಟೀಕೆಗೆ ಹೆದರಿದರು. ನನ್ನ ಅಮ್ಮ ದೇವರ ಕೋಣೆಯಲ್ಲಿ ಕುಳಿತು ಹೆದರಿದರು. ನಟನಾಗಿ- ಚಿತ್ರಕಾರನಾಗಿ ಮಾತನಾಡಲೇಬಾರದಾ ಎಂದು ಪ್ರಕಾಶ್ ರೈ ಪ್ರಶ್ನೆ ಮಾಡಿದರು.

    ಸಮಾಜದಿಂದ ಬೆಳೆದ ನಮಗೆ ಸಮಾಜದ ಒಳಿತಿನ ಹಕ್ಕಿದೆ. ನಾನು ಸುಮ್ಮನೆ ಕುಳಿತುಕೊಳ್ಳುವ ಹೇಡಿಯಲ್ಲ. ಬಾಯಿ ಮುಚ್ಚಿಸೋದು ಕೊಲೆ ನಡೆಸಿದಂತೆಯೇ ಎಂದು ಆಕ್ರೋಶದಿಂದ ಹೇಳಿದರು.

    ಕಾರಂತ ಪ್ರಶಸ್ತಿ ಪಡೆದು ಬಹಳ ಸಂತೋಷವಾಯ್ತು. ಒಟ್ಟಿನಲ್ಲಿ ಯಾರು ಗೆದ್ದರು? ಯಾರು ಸೋತರೂ ಅನ್ನೋದು ಮುಖ್ಯವಲ್ಲ. ಪ್ರಶಸ್ತಿ ಪ್ರಧಾನ ಆಗ್ಬೇಕಿತ್ತು. ನಾನು ಪ್ರಶಸ್ತಿಗೆ ಅರ್ಹನಾಗಿದ್ದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಅನ್ನಬಹುದು. ಕರ್ನಾಟಕದಲ್ಲಿ ನನ್ನ ಹಾಗೆ ಮಾತಾಡೋರು ಒಂಟಿಯಲ್ಲ. ಅವರಿಗೂ ಸ್ವಾತಂತ್ರ್ಯ ಇದೆ. ವೈಯಕ್ತಿಕ ವಿಚಾರ ಹೇಳಿ ಹಣಿಯುವ ಕೃತ್ಯ ನಡೆಯುತ್ತಿದೆ. ಇದು ಕನ್ನಡ ನಾಡಲ್ಲಿ ನಡೆಯೋದಿಲ್ಲ ಎಂದರು.

    ನನ್ನ ಜೀವನ ನೋಡಿದೋರಿಗೆ ನಾನೇನು ಅಂತ ಗೊತ್ತು. ಆಯಾಯ ಕ್ಷಣದಲ್ಲಿ ಕೇಳಿದೊರಿಗೆ ನಾನು ಸೆಲೆಕ್ಟಿವ್ ಅನಿಸುತ್ತದೆ. ಬಿಜೆಪಿ ಬಹಿಷ್ಕರಿಸಿದ ಬಗ್ಗೆ ಏನೂ ಹೇಳಲ್ಲ. ಅಭಿಪ್ರಾಯ ಸ್ವಾತಂತ್ರ್ಯ ಬೇಕು ಅನ್ನೋದಷ್ಟೇ ನನ್ನ ನಿಲುವು ಎಂದು ಹೇಳಿದರು.

    ಕಾರಂತ ಥೀಂ ಪಾರ್ಕ್‍ಗೆ ಪ್ರಕಾಶ್ ರೈ ಆಗಮಿಸುತ್ತಿದ್ದಂತೆ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ರು. ಪೊಲೀಸರು ಸುಮಾರು 20 ಮಂದಿಯನ್ನ ಅರೆಸ್ಟ್ ಮಾಡಿದ್ರು. ಕಪ್ಪು ಅಂಗಿ ಧರಿಸಿ ಬಂದಿದ್ದ ವ್ಯಕ್ತಿಯನ್ನ ಗೇಟ್ ಬಳಿ ತಡೆದ ಪೊಲೀಸರು ಅಂಗಿ ತೆಗೆಸಿದ್ರು.

    ಇದನ್ನೂ ಓದಿ: ನನ್ನಿಂದ ನೋವಾಗಿದ್ದರೆ ಕ್ಷಮಿಸಿ – ಕ್ಷಮೆ ಕೋರಿದ ಪ್ರಕಾಶ್ ರೈ

    https://youtu.be/NcUXZL5iH5s

  • ನನ್ನಿಂದ ನೋವಾಗಿದ್ದರೆ ಕ್ಷಮಿಸಿ – ಕ್ಷಮೆ ಕೋರಿದ ಪ್ರಕಾಶ್ ರೈ

    ನನ್ನಿಂದ ನೋವಾಗಿದ್ದರೆ ಕ್ಷಮಿಸಿ – ಕ್ಷಮೆ ಕೋರಿದ ಪ್ರಕಾಶ್ ರೈ

    ಉಡುಪಿ: ನನ್ನಿಂದ ನೋವಾಗಿದ್ದರೆ ಕ್ಷಮಿಸಿ. ನಿಮ್ಮಲ್ಲಿ ಆತಂಕ ಸೃಷ್ಟಿಸಿದ್ದಕ್ಕೆ ಕ್ಷಮೆ ಇರಲಿ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

    ಇಂದು ಉಡುಪಿಯಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಬ್ಬಬ್ಬಾ ಕೆಲ ದಿನಗಳಿಂದ ಏನೇನೋ ಆಯ್ತು. ನೋವಾದವರು ನನ್ನನ್ನು ಕ್ಷಮಿಸಿಬಿಡಿ ಅಂದ್ರು.

    ಅಜ್ಜನ ಮನೆಗೆ ಬಂದ ಮೊಮ್ಮಗ ನಾನು. ಬರೆದಂತೆ ಜೀವಿಸಿದವರು, ಜೀವಿಸಿದ್ದನ್ನು ಬರೆದವರು ಕಾರಂತರು. ಕಾರಂತರು ಅಘಾದವಾದ ಮರ. ಇಡೀ ಸಮಾಜದ ಸ್ವಾಸ್ತ್ಯಕ್ಕಾಗಿದ್ದ ಮರ. ಶಿವರಾಮ ಕಾರಂತರು ಕೈಗಾ ವಿರೋಧಿಯಾಗಿದ್ದರು. ಅವರಿಗೆ ಸುಳ್ಳು ಇಷ್ಟವಾಗ್ತಿರಲಿಲ್ಲ. ನಾನು ನಿಷ್ಠುರವಾಗಿ ಮಾತನಾಡಿದ್ರೆ ನನ್ನ ತಪ್ಪಲ್ಲ. ಕಾರಂತ, ತೇಜಸ್ವಿ, ಲಂಕೇಶರನ್ನು ಬೈಯ್ಯಿರಿ. ವಿರೋಧವಿದ್ದರೂ ಇಲ್ಲಿಗೆ ಬರಲು ಕಾರಣ ನೀವು. ಕಾರಂತರ ಅಭಿಮಾನಿಗಳಿಗಾಗಿ ಪ್ರಶಸ್ತಿ ಸ್ವೀಕರಿಸಿದೆ ಅಂತ ಹೇಳಿದ್ರು.

    ಗೋಮಾಂಸ ತಿನ್ನುವವರು ತಿನ್ತಾರೆ, ಅಡ್ಡಿ ಮಾಡಬೇಡಿ. ಹಿಂಸೆ ಮಾಡದೆ ಕೊಲ್ಲಿ ಅಂದಿದ್ರು ಕಾರಂತರು. ವಿರೋಧದ ನಡುವೆಯೂ ನಾನು ಬರಲು ಕಾರಣ ಏನು ಗೊತ್ತಾ? ಅವರ ಊರಿನ ಸಂಭ್ರಮದಲ್ಲಿ ಭಾಗಿಯಾಗುವ ಆಸೆ. ಒಮ್ಮೆ ನಿರ್ಧಾರ ತಗೊಂಡ್ರೆ ನಾನು ಹಿಂದೆ ಸರಿಯಲ್ಲ. ಉಡುಪಿ ದಕ್ಷಿಣ ಕನ್ನಡದಲ್ಲಿ ಸಿಕ್ಕ ಸ್ವಾಗತ ನೋಡಿ ಸಂತೋಷವಾಗಿದೆ ಅಂದ್ರು.

    ಕೆರೆಗಳ ಪುನರುಜ್ಜೀವನಕ್ಕೆ ಹೊರಟಿದ್ದೇನೆ. 10 ಜಲತಜ್ಞರನ್ನು ಸೇರಿಸಿ ಸಭೆಗಳು ಆಗಿದೆ. 3 ತಿಂಗಳಿಂದ ಕೆಲಸ ಕಾರ್ಯ ನಡೆಯುತ್ತಿದೆ. ನಾನು ಕಾರಣನಲ್ಲದಿದ್ದರೂ ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ. ನಿಮ್ಮ ಪ್ರೀತಿಯ ಅಂತಃಕರಣ ಕಸಿವಿಸಿ ಮಾಡಿದ್ದರೆ ಕ್ಷಮಿಸಿ ಅಂದ್ರು.

    ಕರಾವಳಿಯ ಜನ ವಿರೋಧಿಸಿದರು. ಕೆಲವರು ಅಪ್ಪಿಕೊಂಡು ಸ್ವಾಗತಿಸಿದರು. ವ್ಯವಸ್ಥಿತವಾಗಿ ಹೆದರಿಸುವ ಕೆಲಸ ನಡೆದಿದೆ. ಇದು ಬಹಳ ಅಪಾಯಕಾರಿ. ಎಂಡಪಂಥ- ಬಲಪಂಥದ ನಡುವೆ ನಾವು ಬದುಕುವ ಭಯ ಅಡಗಿದೆ. ನನ್ನ ಮಗಳಿಗೆ ಭಯ ಆವರಿಸಿದೆ. ವಾಕ್ ಸ್ವಾತಂತ್ರ್ಯ ಇಲ್ಲವಾಗಿ ಹೋಯ್ತಾ? ಮಾತಿಗೆ ಮಾತು ಉತ್ತರವಾಗಬೇಕು, ಕ್ರೌರ್ಯ- ಕೊಲೆ ಉತ್ತರವಲ್ಲ. ಬಾಯಿ ಮುಚ್ಚಿಸುವುದು ಕೊಲೆಯೇ ಅಲ್ಲವೇ? ಪರಿಸರಕ್ಕೆ ವಿರೋಧವಾಗದೆ ಮಾತನಾಡಿದರೆ ತಪ್ಪೇನು. ನಾನು ನನಗಾಗಿ ಮಾತನಾಡುತ್ತೇನೆ ಅಂತ ಪ್ರಕಾಶ್ ರೈ ಹೇಳಿದ್ರು.

    ಉಡುಪಿಯ ಕುಂದಾಪುರದ ಕೋಟದಲ್ಲಿ ನಡೆದ ಸಮಾರಂಭದಲ್ಲಿ ಪ್ರಕಾಶ್ ರೈಗೆ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಹಾರ, ಹಣ್ಣು-ಹಂಪಲು, ಬೆಳ್ಳಿ ಫಲಕ ನೀಡಿ ಗೌರವ ನೀಡಲಾಯ್ತು. ಎಳನೀರು ಕುಡಿಯುತ್ತಾ ಡೈಲಾಗ್ ಹೊಡೆದ ಪ್ರಕಾಶ್ ರೈ, ಕಾರಂತರು ಸ್ಟ್ರಾ ಉಪಯೋಗಿಸ್ತಾ ಇರಲಿಲ್ಲ. ನಾನೂ ಕಾರಂತರ ಕ್ಷೇತ್ರದಲ್ಲಿ ಸ್ಟ್ರಾ ಉಪಯೋಗಿಸಲ್ಲ ಅಂದ್ರು.

    ಕಾರಂತ ಥೀಂ ಪಾರ್ಕ್‍ಗೆ ಪ್ರಕಾಶ್ ರೈ ಆಗಮಿಸುತ್ತಿದ್ದಂತೆ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ಪ್ರಕಾಶ್ ರೈಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ರು. ಪೊಲೀಸರು ಸುಮಾರು 20 ಮಂದಿಯನ್ನ ಅರೆಸ್ಟ್ ಮಾಡಿದ್ರು. ಕಪ್ಪು ಅಂಗಿ ಧರಿಸಿ ಬಂದಿದ್ದ ವ್ಯಕ್ತಿಯನ್ನ ಗೇಟ್ ಬಳಿ ತಡೆದ ಪೊಲೀಸರು ಅಂಗಿ ತೆಗೆಸಿದ್ರು.

  • ಪ್ರಕಾಶ್ ರೈಗೆ ಪ್ರಶಸ್ತಿ ನೀಡದಂತೆ ಹಿಂದೂ ಸಂಘಟನೆ ಪ್ರತಿಭಟನೆ- ರೈ ಪ್ರತಿಕ್ರಿಯಿಸಿದ್ದು ಹೀಗೆ

    ಪ್ರಕಾಶ್ ರೈಗೆ ಪ್ರಶಸ್ತಿ ನೀಡದಂತೆ ಹಿಂದೂ ಸಂಘಟನೆ ಪ್ರತಿಭಟನೆ- ರೈ ಪ್ರತಿಕ್ರಿಯಿಸಿದ್ದು ಹೀಗೆ

    ಮಂಗಳೂರು, ಉಡುಪಿ: ಕಳೆದ 12 ವರ್ಷಗಳಿಂದ ವಿವಾದವೇ ಇಲ್ಲದೆ, ತಣ್ಣಗೆ ನಡೆಯುತ್ತಿದ್ದ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಈ ಬಾರಿ ಭಾರೀ ವಿವಾದಕ್ಕೆ ಕಾರಣವಾಗಿದೆ.

    ಬಿಜೆಪಿಯ ಭಾರೀ ವಿರೋಧದ ನಡುವೆ ಡಾ. ಕೋಟ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ಬಹುಭಾಷಾ ನಟ ಪ್ರಕಾಶ್ ರೈ ಬಂದಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಡಿವೈಎಫ್‍ಐ ಕಾರ್ಯಕರ್ತರು ಸ್ವಾಗತಿಸಿದ್ರು.

    ಇದೇ ವೇಳೆ ಮಾತನಾಡಿದ ಪ್ರಕಾಶ್ ರೈ, ಪ್ರತಿಭಟಿಸುವುದು ಅವರವರ ಹಕ್ಕು. ಪ್ರತಿಭಟಿಸಲಿ ಬೇಡ ಅನ್ನುವುದಿಲ್ಲ. ಕಾರಂತ ನನಗೆ ಅಜ್ಜ. ತುಂಬಾ ಆತ್ಮೀಯರಾಗಿದ್ದರು. ಅವರ ಹೆಸರಲ್ಲಿ ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯಿದೆ ಅಂತ ಹೇಳಿದರು. ಬಳಿಕ ಉಡುಪಿ ಮೂಲಕ ಕುಂದಾಪುರಕ್ಕೆ ತೆರಳಿದ್ರು. ಹಲವರ ಆಕ್ಷೇಪದ ನಡುವೆಯೂ ಇಂದು ಕುಂದಾಪುರದ ಕೋಟದಲ್ಲಿ ಪ್ರಕಾಶ ರೈಗೆ ಕಾರಂತ ಪ್ರಶಸ್ತಿ ಪ್ರದಾನ ನಡೆಯಲಿದೆ.

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ಪ್ರಕಾಶ್ ರೈಗೆ ನೀಡಬಾರದು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದ ಬೆನ್ನಲ್ಲೇ ಬಿಜೆಪಿಯೂ ಅಸಮಾಧಾನ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್, ಶಿವರಾಮ ಕಾರಂತ ಟ್ರಸ್ಟ್, ಶಿವರಾಮಕಾರಂತ ಹುಟ್ಟೂರ ಪ್ರತಿಷ್ಠಾನ ಜಂಟಿಯಾಗಿ ಕಳೆದ ಹದಿಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಖ್ಯಾತ ನಟ ಪ್ರಕಾಶ್ ರೈಗೆ ಈ ಬಾರಿಯ ಸನ್ಮಾನವನ್ನು ಮಾಡಬೇಕು ಎಂದು ಪ್ರತಿಷ್ಠಾನ ಮೂರು ತಿಂಗಳ ಹಿಂದೆ ನಿರ್ಧಾರ ಮಾಡಿತ್ತು. ಆಯ್ಕೆ ಸಮಿತಿ, ಪಂಚಾಯತ್ ಮತ್ತು ಪ್ರತಿಷ್ಠಾನ ಹತ್ತು ದಿನಗಳ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು.

    ಇದನ್ನೂ ಓದಿ: `ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

    ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಪ್ರಕಾಶ್ ರೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ರೈ ಗೆ ಪ್ರಶಸ್ತಿ ನೀಡಬಾರದು ಎಂಬ ದೊಡ್ಡ ಕೂಗು ಎದ್ದಿದೆ. ಪ್ರಕಾಶ್ ರೈ ಕಾವೇರಿ ನದಿ ವಿಚಾರದಲ್ಲಿ ಕರ್ನಾಟಕಕ್ಕೆ ವಿರುದ್ಧವೆಂಬಂತಹ ಹೇಳಿಕೆಗಳನ್ನ ನೀಡಿದ್ದರು. ಗೌರಿ ಲಂಕೇಶ್ ಹತ್ಯೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದರು. ಡಿವೈಎಫ್‍ಐ ರಾಜ್ಯ ಸಮ್ಮೇಳನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಒಳ್ಳೆ ನಟ ಅಂತ ಲೇವಡಿ ಮಾಡಿದ್ದರು. ಈ ಎಲ್ಲಾ ವಿಚಾರವನ್ನಿಟ್ಟು ಸಾಮಾಜಿಕ ಜಾಲತಾಣದಲ್ಲಿ ರೈಗೆ ಪ್ರಶಸ್ತಿ ನೀಡೋದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

    ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಕೊಡಲಾಗುವ ಪ್ರಶಸ್ತಿಯನ್ನು ಸ್ವೀಕರಿಸಲು ಪ್ರಕಾಶ್ ರೈ ಅವರಿಗೆ ನೈತಿಕತೆ ಇಲ್ಲ ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿ ಶೇರ್ ಆಗ್ತಾ ಇದೆ. ಆದ್ರೆ ಪ್ರಶಸ್ತಿ ನೀಡುವ ಸಂಸ್ಥೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈ ಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.

    ಸಂಜೆ ನಾಲ್ಕು ಗಂಟೆಗೆ ಕುಂದಾಪುರ ತಾಲೂಕಿನ ಕೋಟ ಕಾರಂತ ಥೀಂ ಪಾರ್ಕಿನಲ್ಲಿ ತಂಬೆಲರು ಎಂಬ 10 ದಿನದ ಕಾರ್ಯಕ್ರಮದ ಸಮಾರೋಪ ನಡೆಯಲಿದೆ. ಜೈ ಭಾರ್ಗವ ಸಂಘಟನೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸುವ ಸೂಚನೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಪಂಥದ ಜೋಗಿ ಮಠದ ಭಕ್ತರು ಕಪ್ಪು ಅಂಗಿ ಧರಿಸಿ ಕಾರ್ಯಕ್ರಮದಲ್ಲೇ ಕುಳಿತು ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಪ್ರತಿಭಟನೆ ಮಾಡೋದಾಗಿ ಬಿಜೆಪಿ ಕೂಡ ಎಚ್ಚರಿಕೆ ನೀಡಿದೆ.

  • ರಸ್ತೆಯ ಗುಂಡಿಗೆ ಬಿದ್ದು ಮಗು ಸಾವನ್ನಪ್ಪಿದ್ದಕ್ಕೆ ತಂದೆಯ ಮೇಲೆಯೇ ಕೇಸ್!

    ರಸ್ತೆಯ ಗುಂಡಿಗೆ ಬಿದ್ದು ಮಗು ಸಾವನ್ನಪ್ಪಿದ್ದಕ್ಕೆ ತಂದೆಯ ಮೇಲೆಯೇ ಕೇಸ್!

    ಉಡುಪಿ: ಯಾರೋ ಮಾಡಿದ್ದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅನ್ನೋದು ಇದಕ್ಕೇ ಅನ್ಸುತ್ತೆ. ರೋಡಿನಲ್ಲಿದ್ದ ಹೊಂಡಕ್ಕೆ ಬೈಕ್ ಬಿದ್ದು ಮಗು ಸತ್ತಿರೋದಕ್ಕೆ ತಂದೆ ಮೇಲೆಯೇ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಮೊದಲೇ ಮಗುವನ್ನು ಕಳೆದುಕೊಂಡ ದುಃಖದಲ್ಲಿರುವ ತಂದೆ ತಾಯಿಯ ನೋವಿನ ಮೇಲೆ ಬರೆ ಎಳೆದಿದ್ದಾರೆ.

    ಉಡುಪಿಯ ಉದ್ಯಾವರದ ಉಮೇಶ್ ಪೂಜಾರಿ ಮತ್ತು ಪ್ರಮೋದ ದಂಪತಿಯ ಒಂದು ವರ್ಷ ಎಂಟು ತಿಂಗಳ ಪುತ್ರ ಚಿರಾಗ್ ಪರ್ಕಳದಲ್ಲಿ ಅಕ್ಟೋಬರ್ 2ಕ್ಕೆ ರಸ್ತೆಯ ಹೊಂಡಕ್ಕೆ ಬೈಕ್ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದ. ಆದ್ರೆ ಮಣಿಪಾಲ ಪೊಲೀಸರು ಪುಟ್ಟ ಮಗುವಿನ ತಂದೆಯ ಮೇಲೆಯೇ ಕೇಸು ದಾಖಲು ಮಾಡಿದ್ದಾರೆ.

    ವಿಪರೀತ ವೇಗ ಮತ್ತು ಅಜಾಗರೂಕತೆ, ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗಿರುವ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮಗುವನ್ನು ಕಳೆದುಕೊಂಡ ನೋವಿನಲ್ಲಿರುವ ತಂದೆ ತಾಯಿಗೆ ಮತ್ತೆ ಪೊಲೀಸರು ಕೇಸ್ ಹಾಕುವ ಮೂಲಕ ಶಾಕ್ ಕೊಟ್ಟಿದ್ದಾರೆ.

    ಮೃತ ಮಗುನಿನ ತಂದೆ ಉಮೇಶ್ ಪೂಜಾರಿ ಮಾತನಾಡಿ, ನಾನೇ ಮಗುವನ್ನು ಕೊಂದ ರೀತಿಯಲ್ಲಿ ನನ್ನ ಮೇಲೆ ಕೇಸ್ ಮಾಡಿದ್ದಾರೆ. ನನ್ನ ಮಗುವನ್ನು ನಾನೇ ಕೊಲ್ತೇನಾ..? ರಸ್ತೆ ಗುಂಡಿ ಇದ್ದದ್ದು ನನ್ನ ತಪ್ಪಾ..? ಸಂಬಂಧ ಪಟ್ಟ ಇಲಾಖೆ ಮೇಲೆ ಯಾವುದೇ ಕ್ರಮ ಇಲ್ವಾ ಅಂತ ಕಣ್ಣೀರಿಟ್ಟಿದ್ದಾರೆ.

    ನಾವು ಬೈಕಿನಲ್ಲಿ ತುಂಬಾ ನಿಧಾನವಾಗಿ ಹೋಗುತ್ತಿದ್ದೆವು. ಮೂರ ತಿಂಗಳ ಮಗುನಿನಿಂದ ಇಲ್ಲಿಯವರೆಗೆ ನಾವು ಬೈಕಿನಲ್ಲೇ ಓಡಾಡುತ್ತಿದ್ದೆವು. ದೊಡ್ಡ ಹೊಂಡಕ್ಕೆ ಬೈಕ್ ಬಿದ್ದ ಕೂಡಲೇ ಕೈಯ್ಯಲ್ಲಿದ್ದ ಮಗು ನಾನು ಕೆಳಗೆ ಬಿದ್ದೆವು. ನನ್ನ ಕೈ ಮೂಳೆ ಮುರಿದಿದೆ. ಮಗು ಗಾಯಗೊಂಡಿದ್ದರಿಂದ ಸಾವನ್ನಪ್ಪಿದೆ. ಮೊದಲೇ ನಾವು ನೋವಿನಲ್ಲಿದ್ದೇವೆ ಈಗ ಮತ್ತೆ ನಮಗೆ ಪೊಲೀಸರು ಕಷ್ಟ ಕೊಡುತ್ತಿದ್ದಾರೆ ಎಂದು ಮಗುವಿನ ತಾಯಿ ಪ್ರಮೋದಾ ಬಿಕ್ಕಿ ಬಿಕ್ಕಿ ಅಳುತ್ತಾರೆ.

    ಇಷ್ಟಕ್ಕೂ ಅಪಘಾತ ನಡೆದ ಸ್ಥಳದಲ್ಲಿ ನಾಲ್ಕು ವರ್ಷದಿಂದ ಹೊಂಡಗುಂಡಿಗಳ ನಡುವೆ ರಸ್ತೆಯಿದ್ದರೂ ಹೆದ್ದಾರಿ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ. ಮಣಿಪಾಲ ಕೆಎಂಸಿ ಆಸ್ಪತ್ರೆಯ ಮುಂಭಾಗವಂತೂ ಸಮಸ್ಯೆಗಳನ್ನೇ ಹೊತ್ತುಕೊಂಡಿದೆ. ದಿನಕ್ಕೆ ನೂರಾರು ಆಂಬುಲೆನ್ಸ್ ಓಡಾಡುವ ರಸ್ತೆಯಾದ್ರೂ ಈ ರಸ್ತೆಯ ಗುಂಡಿ ಮುಚ್ಚುವ ಕೆಲಸವಾಗಿಲ್ಲ. ಘಟನೆ ನಡೆದು 10 ದಿನಗಳಾಗುತ್ತಾ ಬಂದರೂ ಸಂಸದೆ ಶೋಭಾ ಕರಂದ್ಲಾಜೆ- ಸಚಿವ ಪ್ರಮೋದ್ ಮಧ್ವರಾಜ್ ಈ ಬಗ್ಗೆ ಚಕಾರ ಎತ್ತಿಲ್ಲ. ಪರಿಹಾರ ರೂಪದಲ್ಲಿ ಒಂದು ರೂಪಾಯಿಯನ್ನೂ ಕೊಟ್ಟಿಲ್ಲದ್ದಕ್ಕೆ ಸ್ಥಳೀಯರು ಅಸಮಾಧನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಅಪಘಾತದಲ್ಲಿ 1 ವರ್ಷದ ಮಗು ಬಲಿ: ಕೇಂದ್ರ-ರಾಜ್ಯ ಸರ್ಕಾರಗಳ ಕೊಳಕು ರಾಜಕೀಯದ ವಿರುದ್ಧ ಸ್ಥಳೀಯರ ಆಕ್ರೋಶ

     

  • `ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

    `ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

    ಉಡುಪಿ: ನಟ ಪ್ರಕಾಶ್ ರೈಗೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.

    ಕುಂದಾಪುರ ತಾಲೂಕಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ರೈ ಆಯ್ಕೆಯನ್ನು ವಿರೋಧ ಮಾಡೋದು ಸರಿಯಲ್ಲ. ಕೋಟತಟ್ಟು ಗ್ರಾ.ಪಂ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಕೊಡುವ ಪ್ರಶಸ್ತಿ ಇದು. ಕಳೆದ 13 ವರ್ಷಗಳಿಂದ ಕೊಡುತ್ತಿರುವ ಪ್ರಶಸ್ತಿ ಈ ಬಾರಿ ನಟ ಪ್ರಕಾಶ್ ರೈಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ರು.

    ಪ್ರಕಾಶ್ ರೈ ಈ ಪ್ರಶಸ್ತಿಗೆ ನಿಜವಾಗಿಯೂ ಅರ್ಹರು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ವೈಯುಕ್ತಿಕ ಹೇಳಿಕೆಗೂ ಪ್ರಶಸ್ತಿಗೂ ಸಂಬಂಧವಿಲ್ಲ. ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಅವರು ಹೇಳಿದ್ರು.

    ಪ್ರಶಸ್ತಿ ಆಯ್ಕೆಗೆ ಐದು ಮಂದಿ ಆಯ್ಕೆ ಮಂಡಳಿ ನೇಮಕ ಮಾಡಲಾಗಿತ್ತು. ಆಯ್ಕೆ ಮಂಡಳಿ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ಸಾಧಕರಿಗೆ ನೀಡುತ್ತಾ ಬಂದಂತೆಯೇ ಈ ಬಾರಿ ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬರುತ್ತಾರೆ. ಕಾರಂತರ ಹೆಸರಿಗೆ ಚ್ಯುತಿ ಬರಬಾರದು. ಪ್ರಶಸ್ತಿ ನೀಡಿಕೆ ವಿಚಾರದಲ್ಲಿ ರಾಜಕೀಯ ಬೇಡ ಅಂದ್ರು.

    ಈ ಹಿಂದೆ ಕಾರಂತ ಪ್ರಶಸ್ತಿಗೆ ಪಾತ್ರರಾದವರು ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪತ್ರಕರ್ತ ರವಿ ಬೆಳಗೆರೆ, ಸಾಹಿತಿ ಜಯಂತ್ ಕಾಯ್ಕಿಣಿ, ದಿ. ರಾಮಚಂದ್ರ ಚಿಟ್ಟಾಣಿ, ಡಾ. ಬಿ.ಎಮ್ ಹೆಗ್ಡೆ, ಸಾಲುಮರದ ತಿಮ್ಮಕ್ಕ, ಡಾ. ಎಂ ಮೋಹನ್ ಆಳ್ವ, ನಾಟಕಕಾರ ಸದಾನಂದ ಸುವರ್ಣ, ಬಿ. ಜಯಶ್ರೀ, ಗಿರೀಶ್ ಕಾಸರವಳ್ಳಿ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಕೆ.ಆರ್ ಹಂದೆ ಇವರುಗಳಿಗೆ ಕಾರಂತ ಹುಟ್ಟೂರ ಸನ್ಮಾನ ಲಭಿಸಿತ್ತು. ಈ ಬಾರಿ ನಟ ಪ್ರಕಾಶ್ ರೈ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.

     

  • ಸಿಎಂ ಎಸಿಬಿಯನ್ನ ಛೂಬಿಡುತ್ತಿದ್ದಾರೆ: ಶೋಭಾ ಕರಂದ್ಲಾಜೆ

    ಸಿಎಂ ಎಸಿಬಿಯನ್ನ ಛೂಬಿಡುತ್ತಿದ್ದಾರೆ: ಶೋಭಾ ಕರಂದ್ಲಾಜೆ

    ಉಡುಪಿ: ದೇಶದಲ್ಲೇ ಮೊದಲಬಾರಿಗೆ ಐಟಿ ಅಧಿಕಾರಿಗಳ ಮೇಲೆ ಎಸಿಬಿ ಯನ್ನು ಛೂಬಿಡಲಾಗ್ತಿದೆ. ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ಸಿಎಂ ಸಿದ್ದರಾಮಯ್ಯ ವರ್ತನೆ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಮಾಡುತ್ತದೆ ಎಂಬ ವಿಚಾರ ಮಾಧ್ಯಮದಲ್ಲಿ ಸುದ್ದಿಯಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಉಳಿಗಾಲವಿಲ್ಲ ರಾಜ್ಯದ ಐಟಿ ಅಧಿಕಾರಿಗಳು ಭಯ ಪಡಲ್ಲ. ಐಟಿ ಮೇಲೆ ಸಂಶಯ ಇದ್ದರೆ ಸಿಬಿಐ ಗೆ ದೂರು ನೀಡಲಿ ಎಂದು ಸವಾಲು ಹಾಕಿದರು.

    ರಾಜ್ಯ ಸರ್ಕಾರ ದಿಂದ ಪರಿಮಿತಿ ಮೀರಿ ಅಧಿಕಾರ ಪ್ರಯೋಗ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಭಂಡ ಸರ್ಕಾರ ಎಂದು ಸಾಬೀತಾಗಿದೆ. ನೋಟ್ ಬ್ಯಾನ್ ನಂತರ ಹಲವು ಕಡೆ ಐಟಿ ದಾಳಿಗಳು ನಡೆದಿದೆ. ಕರ್ನಾಟಕದಲ್ಲೂ ಸಹಜ ದಾಳಿಗಳು ನಡೆದಿವೆ. ಇದು ಕರ್ನಾಟಕ ರಾಜ್ಯಕ್ಕೆ ಅವಮಾನ ರಾಜ್ಯದಲ್ಲಿ ಅಧಿಕಾರಿಗಳ ದುರ್ಬಳಕೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಚಿಟ್ಟಾಣಿ ರಂಗದ ಮೇಲೆ ಪಾತ್ರಧಾರಿಯಲ್ಲ, ಒಬ್ಬ ಚಿತ್ರಕಾರ: ಎಂ.ಎಲ್ ಸಾಮಗ

    ಚಿಟ್ಟಾಣಿ ರಂಗದ ಮೇಲೆ ಪಾತ್ರಧಾರಿಯಲ್ಲ, ಒಬ್ಬ ಚಿತ್ರಕಾರ: ಎಂ.ಎಲ್ ಸಾಮಗ

    ಉಡುಪಿ: ಚಿಟ್ಟಾಣಿ ರಂಗದ ಮೇಲೆ ಪಾತ್ರಧಾರಿಯಲ್ಲ. ಅವರೊಬ್ಬರ ಒಬ್ಬ ಚಿತ್ರಕಾರ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ ಎಂ.ಎಲ್ ಸಾಮಗ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಭಿಮಾನಿಯೂ ಹೌದು ಅವರ ಜೊತೆ ರಂಗಸ್ಥಳದಲ್ಲಿ ಸಹ ಕಲಾವಿದನಾಗಿ ಕೆಲಸವನ್ನು ಕೂಡ ಮಾಡಿದ್ದೇನೆ. ಬರೀ ಯಕ್ಷರಂಗದಲ್ಲಿ ಮಾತ್ರವಲ್ಲದೇ ಆ ನಂತರ ಕೂಡ ನನ್ನದು ಮತ್ತು ಚಿಟ್ಟಾಣಿ ಅವರದ್ದು ಅವಿನಾಭಾವ ಸಂಬಂಧ ಎಂದರು.

    ಪದ್ಮಶ್ರೀ ಚಿಟ್ಟಾಣಿ ಯಕ್ಷಗಾನಕ್ಕೆ ಕೊಟ್ಟಂತಹ ಕೊಡುಗೆ ಈ ಹಿಂದೆ ಮತ್ತು ಮುಂದೆ ಯಾರೂ ಕೊಡುವುದು ಕಷ್ಟಸಾಧ್ಯ. ನಲವತ್ತು ವರ್ಷಗಳ ಹಿಂದೆ ಅವರು ಮಾಡಿದ ಕೀಚಕ, ಭಸ್ಮಾಸುರನ ಪಾತ್ರ ಕರಾವಳಿ ಕರ್ನಾಟಕದ ಯಕ್ಷ ಪ್ರೇಮಿಗಳಲ್ಲಿ ಹೊಸದೊಂದು ಅನುಭವವನ್ನು ಸೃಷ್ಟಿ ಮಾಡಿತ್ತು. ರಾತ್ರಿಯಿಂದ ಬೆಳಗಿನ ಜಾವದ ತನಕ ಕೂಡ ವೇಷ ಮಾಡಿದರೂ ಎಲ್ಲೂ ಕೂಡ ಆಯಾಸವಾಗದೇ ಚಿಟ್ಟಾಣಿ ಪಾತ್ರಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.

    ಜೀವನದಲ್ಲಿ ಎಷ್ಟೇ ನೋವು ಸಂಕಟ ಇದ್ದರೂ ಕೂಡ ರಂಗ ಪ್ರವೇಶದ ನಂತರ ಅದು ಯಾವುದನ್ನು ಕೂಡ ತೋರ್ಪಡಿಸದ ದೊಡ್ಡ ಕಲಾವಿದ ಚಿಟ್ಟಾಣಿ. ಪರಂಪರೆಯ ಪಾತ್ರಗಳಿಗೆ ಅದೂ ಕೂಡ ಗದಾಯುದ್ಧದ ಕೌರವ ಪಾತ್ರಕ್ಕೆ ವಿಶಿಷ್ಟವಾದ ಒಂದು ಆಯಾಮವನ್ನು ಕೊಟ್ಟಂತಹ ಕಲಾವಿದ. ಚಿಟ್ಟಾಣಿ ಅವರು ರಂಗದ ಮೇಲೆ ವೇಷ ಮತ್ತು ಪಾತ್ರವನ್ನು ಮಾಡುತ್ತಿದ್ದು ದಲ್ಲ ಅವರು ರಂಗ ಸ್ಥಳದಲ್ಲಿ ಒಂದು ಪಾತ್ರವನ್ನು ಚಿತ್ರಿಸುತ್ತಿದ್ದರು. ಆ ಚಿತ್ರವನ್ನು ಮತ್ತ್ಯಾರಿಗೂ ಮಾಡಲು ಸಾಧ್ಯವಿಲ್ಲ. ಪ್ರಬುದ್ಧ ಯಕ್ಷ ಪ್ರೇಕ್ಷಕರ ಮೇಲೆ ಚಿಟ್ಟಾಣಿ ಬೀರಿದಷ್ಟು ಪ್ರಭಾವ ಈ ಹಿಂದೆ ಯಾರೂ ಮೀರಿದ್ದಲ್ಲಿ ಮುಂದೆ ಬೀರುವಂತಹ ಲಕ್ಷಣಗಳು ಕೂಡ ಈಗಿನ ಯಕ್ಷಗಾನ ಕ್ಷೇತ್ರದಲ್ಲಿ ನನಗೆ ಕಾಣಿಸುತ್ತಿಲ್ಲ ಎಂದು ಅವರು ತಿಳಿಸಿದರು.

    ಅವರಂತಹ ಮತ್ತೊಬ್ಬ ಕಲಾವಿದ ಯಕ್ಷರಂಗದಲ್ಲಿ ಹುಟ್ಟಿ ಬರುತ್ತಾನೆ ಅನ್ನುವಂತದ್ದು ನಮ್ಮ ಕಲ್ಪನೆಗೂ ಮೀರಿದ್ದು. ಚಿಟ್ಟಾಣಿ ಅವರ ಅಗಲುವಿಕೆ ಯಕ್ಷಗಾನ ಕ್ಷೇತ್ರಕ್ಕೆ ಎಂದೂ ತುಂಬಲಾರದ ನಷ್ಟ ಅಂತ ಹೇಳಿ ನಾನು ಪರಿಭಾವಿಸುತ್ತೇನೆ ಎಂದು ದುಃಖ ವ್ಯಕ್ತಪಡಿಸಿದರು.

    ಅಂತಿಮ ದರ್ಶನ: ಮಂಗಳವಾರ ರಾತ್ರಿ ನಿಧನರಾದ ಹಿರಿಯ ಕಲಾವಿದ ರಾಮಚಂದ್ರ ಚಿಟ್ಟಾಣಿ ಅವರ ಅಂತಿಮ ದರ್ಶನ ಕಾರ್ಯಕ್ರಮ ಉಡುಪಿಯ ಮಣಿಪಾಲದಲ್ಲಿ ನಡೆಯಿತು. ಮಣಿಪಾಲ ಆಸ್ಪತ್ರೆಯಿಂದ ಹೊನ್ನಾವರಕ್ಕೆ ಮೃತದೇಹವನ್ನು ರವಾನೆ ಮಾಡಲಾಯಿತು. ಇದಕ್ಕೂ ಮುನ್ನ ಮಣಿಪಾಲದಲ್ಲಿ ಚಿಟ್ಟಾಣಿ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದನಿಗೆ ಅಂತಿಮ ನಮನವನ್ನು ಸಲ್ಲಿಸಿದರು. ಹೂವಿನ ಹಾರ ಹಾಕಿ ಯಕ್ಷ ಕ್ಷೇತ್ರದಲ್ಲಿ ಚಿಟ್ಟಾಣಿ ಮಾಡಿದ ಸಾಧನೆಗಳ ಬಗ್ಗೆ ಗುಣಗಾನವನ್ನು ಮಾಡಿದರು. ನೂರಾರು ಮಂದಿ ಚಿಟ್ಟಾಣಿ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

    ಮಣಿಪಾಲ ಯುನಿವರ್ಸಿಟಿ ಆವರಣದಲ್ಲಿ ಈ ಅಂತಿಮ ಸಂಸ್ಕಾರ ವಿಧಿ ವಿಧಾನ ನಡೆಯಿತು. ನಂತರ ತೆರೆದ ವಾಹನದಲ್ಲಿ ಚಿಟ್ಟಾಣಿಯವರ ಮೃತದೇಹವನ್ನು ಶವಯಾತ್ರೆ ಮಾಡಲಾಯಿತು. ಉಡುಪಿಯ ಬ್ರಹ್ಮಾವರ, ಕೋಟ, ಸಾಲಿಗ್ರಾಮ ಕುಂದಾಪುರ, ಬೈಂದೂರು ಶಿರೂರು ಭಾಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ.

    ಹೊನ್ನಾವರದ ಸ್ವಗ್ರಹದಲ್ಲಿ ಚಿಟ್ಟಾಣಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲೂ ಅಭಿಮಾನಿಗಳಿಗೆ- ಕುಟುಂಬಸ್ಥರಿಗೆ ಅಂತಿಮ ದರ್ಶನ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ.

    ರಾಜ್ ನಂಟು: ಚಿಟ್ಟಾಣಿ ರಾಮಚಂದ್ರರಿಗೂ ವರನಟ ಡಾ. ರಾಜ್ ಕುಮಾರ್ ಅವರಿಗೂ ಬಹಳ ನಂಟಿತ್ತು. ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು. ನೀವು ಯಕ್ಷಗಾನದ ನಟ ಅಂತ ರಾಜ್ ಕುಮಾರ್ ಹಾಡಿ ಹೊಗಳುತ್ತಿದ್ದರು. ಹಾಡು ಮತ್ತು ನಾಟ್ಯದ ಮೇಲಾಟದ ನಡುವೆ ನಟನೆ ತಂದು ಚಿಟ್ಟಾಣಿ ತಮ್ಮದೇ ಶೈಲಿಯನ್ನು ಯಕ್ಷರಂಗದಲ್ಲಿ ಬೆಳೆಸಿದ್ದರು. ಕೌರವ, ಕೀಚಕ- ದುಷ್ಟಬುದ್ಧಿ ಪಾತ್ರಗಳಲ್ಲಿ ಚಿಟ್ಟಾಣಿ ಎತ್ತಿದ ಕೈ. ನಿರಂತರ ಯಕ್ಷಗಾನಕ್ಕೆ ಜೀವನ ಮುಡಿಪಾಗಿಟ್ಟಿದ್ದಕ್ಕೆ ಚಿಟ್ಟಾಣಿಗೆ ಪದ್ಮಶ್ರೀ ಗೌರವ ದಕ್ಕಿತ್ತು.

    ವಯೋಸಹಜ ಮತ್ತು ನಿಮೋನಿಯಾ ಕಾಯಿಲೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಮೂರು ದಿನ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ 84 ವರ್ಷದ ಚಿಟ್ಟಾಣಿ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದರು.

    ಚಿಟ್ಟಾಣಿಯವರು ನ್ಯೂಮೋನಿಯಾ ಹಾಗೂ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು. ನವರಾತ್ರಿ ಅಂಗವಾಗಿ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚಿಟ್ಟಾಣಿ ಪಾತ್ರ ನಿರ್ವಹಿಸಿದ್ದರು. ಸೆಪ್ಟೆಂಬರ್ 25ರಂದು ವಸುವರಾಂಗಿ ಪ್ರಸಂಗದಲ್ಲಿ ಭೀಷ್ಮನ ತಂದೆ ಶಂತನು ಪಾತ್ರ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೆಲ ಪಾತ್ರವನ್ನು ಅವರು ಅರ್ಧವಷ್ಟೇ ಮಾಡುತ್ತಿದ್ದು, ಬಳಿಕ ಬೇರೆ ಬೇರೆ ಕಲಾವಿದರು ಮುಂದುವರಿಸುತ್ತಿದ್ದರು.

    ಸೆ.25 ರಂದು ಶಂತನು ಪಾತ್ರವನ್ನು ಅವರೊಬ್ಬರೇ ಮಾಡಿದ್ದರು. ಬಳಿಕ ಆರೋಗ್ಯ ಕೈಕೊಟ್ಟಿದ್ದು, ಸುಧಾರಿಸಿಕೊಳ್ಳಲಿಲ್ಲ. ಮೂಲತಃ ಉತ್ತರ ಕನ್ನಡದವರಾದರೂ ಚಿಟ್ಟಾಣಿ ಅವರಿಗೆ ಉಡುಪಿಯಲ್ಲೂ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಪ್ರತೀ ವರ್ಷ ಚಿಟ್ಟಾಣಿ ಸಪ್ತಾಹ ಉಡುಪಿಯಲ್ಲಿ ನಡೆಯುತ್ತಾ ಬಂದಿದೆ.

    ಕಳೆದ 7 ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಚಿಟ್ಟಾಣಿ ತಮ್ಮ 14ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿದ್ದರು. ಅವರ ಇಬ್ಬರೂ ಮಕ್ಕಳು ಹಾಗೂ ಮೊಮ್ಮಗ ಕೂಡಾ ಯಕ್ಷಗಾನ ಕ್ಷೇತ್ರದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ಪತ್ನಿ, ಮಕ್ಕಳು ಮತ್ತು ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಅಗಲಿದ್ದಾರೆ.

  • ಚಿರನಿದ್ರೆಗೆ ಜಾರಿದ ಚಿಟ್ಟಾಣಿ ರಾಮಚಂದ್ರ ಹೆಗಡೆ

    ಚಿರನಿದ್ರೆಗೆ ಜಾರಿದ ಚಿಟ್ಟಾಣಿ ರಾಮಚಂದ್ರ ಹೆಗಡೆ

    ಉಡುಪಿ: ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ ಪದ್ಮಶ್ರೀ ಪುರಸ್ಕತ ಚಿಟ್ಟಾಣಿ ರಾಮಚಂದ್ರ ಹೆಗಡೆ ವಿಧಿವಶರಾಗಿದ್ದಾರೆ. ನ್ಯೂಮೋನಿಯಾ ಹಾಗೂ ಪಾರ್ಶ್ವ ವಾಯುವಿನಿಂದ ಬಳಲುತ್ತಿದ್ದ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ನವರಾತ್ರಿ ಅಂಗವಾಗಿ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚಿಟ್ಟಾಣಿ ಪಾತ್ರ ನಿರ್ವಹಿಸಿದ್ದರು. ಸೆ.25ರಂದು ವಸುವರಾಂಗಿ ಪ್ರಸಂಗದಲ್ಲಿ ಭೀಷ್ಮನ ತಂದೆ ಶಂತನು ಪಾತ್ರ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೆಲ ಪಾತ್ರವನ್ನು ಅವರು ಅರ್ಧವಷ್ಟೇ ಮಾಡುತ್ತಿದ್ದು, ಬಳಿಕ ಬೇರೆ ಬೇರೆ ಕಲಾವಿದರು ಮುಂದುವರಿಸುತ್ತಿದ್ದರು.

    ಆದರೆ ಸೆ.25ರಂದು ಶಂತನು ಪಾತ್ರವನ್ನು ಅವರೊಬ್ಬರೇ ಮಾಡಿದ್ದರು. ಬಳಿಕ ಆರೋಗ್ಯ ಕೈಕೊಟ್ಟಿದ್ದು, ಸುಧಾರಿಸಿಕೊಳ್ಳಲಿಲ್ಲ. ಅವರಿಗೆ ಮೊದಲು ಹೊನ್ನಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಸೆ.29ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 7 ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಚಿಟ್ಟಾಣಿ ಅವರ ಇಬ್ಬರೂ ಮಕ್ಕಳು ಹಾಗೂ ಮೊಮ್ಮಗ ಕೂಡಾ ಯಕ್ಷಗಾನ ಕ್ಷೇತ್ರದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ.

    ನೇತ್ರದಾನ: ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿಯವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಕುಟುಂಬದ ಸದಸ್ಯರ ಬಳಿ ಅವರು ನೇತ್ರದಾನ ಮಾಡಲು ಹೇಳಿಕೊಂಡಿದ್ದರು. ಚಿಟ್ಟಾಣಿಯವರು ಯಕ್ಷಗಾನಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ತಂದುಕೊಟ್ಟವರು. ಡಾ.ರಾಜ್ ಕುಮಾರ್ ಅವರಿಂದ ಹೊಗಳಿಸಿಕೊಂಡಿದ್ದ ಚಿಟ್ಟಾಣಿ ಅವರು ಕೌರವ, ಕೀಚಕ ಪಾತ್ರದಲ್ಲಿ ಮಿಂಚುತ್ತಿದ್ದರು. ನವರಸಗಳನ್ನು ರಂಗದ ಮೇಲೆ ತರುತ್ತಿದ್ದ ಮೇರು ಕಲಾವಿದ ಎಂಬ ಖ್ಯಾತಿಗೂ ಚಿಟ್ಟಾಣಿಯವರು ಪಾತ್ರರಾಗಿದ್ದರು. ಚಿಟ್ಟಾಣಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೆರೆಅಂಗಡಿ ಗ್ರಾಮದವರು.

     

  • “ಪೊಲೀಸ್ ಆಗಿದ್ದಾಗ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದ್ರು, ಈಗ ರಾಜಕಾರಣಿಗಳ ಮೇಲೆ ಪೊಲೀಸಿಂಗ್ ಪ್ರಯೋಗ ಮಾಡಲು ಹೊರಟಿದ್ದೇನೆ”

    “ಪೊಲೀಸ್ ಆಗಿದ್ದಾಗ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದ್ರು, ಈಗ ರಾಜಕಾರಣಿಗಳ ಮೇಲೆ ಪೊಲೀಸಿಂಗ್ ಪ್ರಯೋಗ ಮಾಡಲು ಹೊರಟಿದ್ದೇನೆ”

    ಉಡುಪಿ: ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಹೊಸ ರಾಜಕೀಯ ಪಕ್ಷವನ್ನು ಕಟ್ಟುವ ಘೋಷಣೆಯನ್ನು ಮಾಡಿದ್ದಾರೆ. ಭಷ್ಟ ರಾಜಕೀಯ ವ್ಯವಸ್ಥೆಯ ಒಳಗೆ ಹೊಕ್ಕಿ ಪೊಲೀಸಿಂಗ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನುಪಮಾ ಶೆಣೈ, ಸಮಾನ ಮನಸ್ಕರೊಂದಿಗೆ ಒಂದು ಸುತ್ತಿನ ಮಾತುಕತೆ ಮಾಡಿದ್ದೇನೆ. ಒಂದು ತಿಂಗಳೊಳಗೆ ಅಭಿಪ್ರಾಯಗಳನ್ನು ಪಡೆದುಕೊಂಡು ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದರು.

    ಪೊಲೀಸಿಂಗ್ ಕೆಲಸ ಮಾಡುವಾಗ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದರು. ಈಗ ರಾಜಕಾರಣಿಗಳ ಮೇಲೆ ಪೊಲೀಸಿಂಗ್ ಪ್ರಯೋಗ ಮಾಡೋಣ ಎಂದು ಹೊರಟಿದ್ದೇನೆ. ಮೂರು ಧ್ಯೇಯಗಳಿವೆ. ಎಂಎಲ್‍ಎಗಳ ಗ್ರೂಪನ್ನು ತಯಾರು ಮಾಡಬೇಕೆಂದಿದ್ದೇನೆ. ರಾಜಕಾರಣಿಗಳು ವಿಧಾನಸೌಧದ ಒಳಗೆ ಪೊಲೀಸರ ಥರ ಕೆಲಸ ಮಾಡಬೇಕಾಗಿದೆ. ಒಂದಷ್ಟು ಎಂಎಲ್‍ಎ ಗಳು ಸರ್ಕಾರ ರಚಿಸುವ ಮತ್ತು ಉರುಳಿಸಲು ಶಕ್ತಿಯಿರುವವರಾಗಬೇಕು ಎಂದು ಹೇಳಿದರು.

    ಕಿಂಗ್ ಮೇಕರ್ಸ್ ಪಾರ್ಟಿಗಳು ಆಗಬಾರದು. ಜನರು ಆ ಶಕ್ತಿಯನ್ನು ಹೊಂದಬೇಕು. ಬೇರೆ ರಾಜಕೀಯ ಪಕ್ಷದ ಜೊತೆ ಸೇರಲ್ಲ. ಕೆಲವು ಸೀಟುಗಳು ಚುನಾವಣೆಯಲ್ಲಿ ಬಂದರೆ ಯಾರಿಗೆ ಬೆಂಬಲಿಸುತ್ತೇವೆಂದು ಆಮೇಲೆ ಹೇಳುತ್ತೇವೆ ಎಂದರು. ಎಲ್ಲಾ ಅಂದುಕೊಂಡಂತೆ ಆದ್ರೆ ಬಳ್ಳಾರಿಯಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಅಲ್ಲೇ ನನಗೆ ಹೆಚ್ಚು ಜನರ ಬೆಂಬಲವಿದೆ ಎಂದು ಹೇಳಿದರು.

    ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಭೇಟಿ ಮಾಡಿ ಮಾತನಾಡದ್ದೇನೆ. ರಾಜ್‍ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕೆಲ ದೂರು ನೀಡಿದ್ದೇನೆ. ಜನರ ದನಿಯಾಗುವ ಪಕ್ಷ ರಾಜ್ಯದಲ್ಲಿ ಇಲ್ಲ. ಅಧಿಕಾರಕ್ಕೆ ಬೆಂಬಲಿಸುವ- ಬೆಂಬಲ ವಾಪಾಸ್ ಪಡೆದರೆ ಸರ್ಕಾರ ಬೀಳುವ ರೀತಿಯ ಪಕ್ಷ ಕಟ್ಟುವ ಕನಸಿದೆ ಎಂದು ಅನುಪಮಾ ಶೆಣೈ ಹೇಳಿದರು. ಕೇಜ್ರಿವಾಲ್ ಅವರ ಹೆಸರನ್ನು ಎರಡು ಪಕ್ಷಗಳು ಕೆಡಿಸಿದೆ. ಆಪ್‍ಗೆ ಸೇರುವ ಸಾಧ್ಯತೆ ಕಮ್ಮಿ ಅಂದ್ರು.

    ರಾಜೀನಾಮೆ ನೀಡಿದ ನಂತರ ಹಲವಾರು ಮಂದಿ ಭೇಟಿ ಮಾಡಿದ್ದರು. ಫೋನ್ ಮೂಲಕ ಮಾತನಾಡಿದ್ದರು ಹೊಸ ಪಕ್ಷದ ಬಗ್ಗೆಯೂ ಜನರೇ ಐಡಿಯಾ ಕೊಟ್ಟದ್ದು. ಗಾಂಧಿ ಜಯಂತಿ ದಿನವೇ ಮೊದಲ ಮೀಟಿಂಗ್ ಮಾಡಿದ್ದೇವೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಕನಸು ನನ್ನದು ಎಂದರು. ಪರಮೇಶ್ವರ್ ನಾಯ್ಕ್ ವಿರುದ್ಧ ಸ್ಪರ್ಧೆ ಮಾಡುತ್ತೇನೆ. ಜನ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದರ ಮೇಲೆ ನಿರ್ಧಾರ ನಿಂತಿದೆ ಎಂದು ಹೇಳಿದರು. ಪತ್ರಕರ್ತರನ್ನು ಕೂಡಾ ಆಹ್ವಾನ ಮಾಡುತ್ತೇನೆ. ಮಾಧ್ಯಮ ಪ್ರಬಲವಾಗಿದೆ. ಮಾಧ್ಯಮದ ಮಂದಿಗೂ ಶಕ್ತಿ ತುಂಬುವ ಅವಶ್ಯಕತೆಯಿದೆ ಎಂದು ಹೇಳಿದರು.

  • ಅಪಘಾತದಲ್ಲಿ 1 ವರ್ಷದ ಮಗು ಬಲಿ: ಕೇಂದ್ರ-ರಾಜ್ಯ ಸರ್ಕಾರಗಳ ಕೊಳಕು ರಾಜಕೀಯದ ವಿರುದ್ಧ ಸ್ಥಳೀಯರ ಆಕ್ರೋಶ

    ಅಪಘಾತದಲ್ಲಿ 1 ವರ್ಷದ ಮಗು ಬಲಿ: ಕೇಂದ್ರ-ರಾಜ್ಯ ಸರ್ಕಾರಗಳ ಕೊಳಕು ರಾಜಕೀಯದ ವಿರುದ್ಧ ಸ್ಥಳೀಯರ ಆಕ್ರೋಶ

    ಉಡುಪಿ: ಮಣಿಪಾಲ ಹಾಗೂ ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬಳಿ ಸೋಮವಾರ ಅಪಘಾತವೊಂದು ಸಂಭವಿಸಿದ್ದು, ಅಪಘಾತದಲ್ಲಿ ಒಂದು ವರ್ಷದ ಮಗು ಸಾವನ್ನಪ್ಪಿದೆ.

    ಮಣಿಪಾಲದಿಂದ ಹಿರಿಯಡ್ಕಗೆ ದಂಪತಿ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ರಸ್ತೆಯಲ್ಲಿದ್ದ ಗುಂಡಿಗಳನ್ನು ತಪ್ಪಿಸಲು ಹೋದಾಗ ಬೈಕ್‍ನಲ್ಲಿದ್ದ ಮಗು ಕೆಳಕ್ಕೆ ಎಸೆಯಲ್ಪಟ್ಟಿದೆ. ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ಒಂದು ವರ್ಷದ ಚಿರಾಗ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಮಣಿಪಾಲ ಹಾಗೂ ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಮಾರ್ಗವು ತೀರ ಕಿರಿದಾಗಿದ್ದು, ಕಳೆದ 10 ವರ್ಷಗಳಿಂದ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಇದರಿಂದ ರಸ್ತೆಯಲ್ಲಿ ದೊಡ್ಡ ಹಳ್ಳಗಳು ನಿರ್ಮಾಣವಾಗಿದೆ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸ್ಥಳೀಯ ಸಂಘಟನೆಗಳು ಹೋರಾಟಗಳನ್ನು ಮಾಡಿ ಒತ್ತಾಯ ಮಾಡಿದ್ದರು. ಆದ್ರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಳಕು ರಾಜಕೀಯದಿಂದ ಯೋಜನೆ ಹಳ್ಳ ಹಿಡಿದಿತ್ತು.

    ಅಪಘಾತ ನಡೆದ ಸ್ಥಳದಲ್ಲಿ ಸ್ಥಳೀಯ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಪ್ರತಿಭಟನೆ ನಡೆಸಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಈ ಸಾವು ಸಂಭವಿಸಿದೆ. ಇದೊಂದು ಸರ್ಕಾರದ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ವಾರದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಕೇಂದ್ರ ಸರ್ಕಾರದ ಅಡಳಿತಕ್ಕೆ ಒಳಪಟ್ಟಿದ್ದು. ರಸ್ತೆಯ ಎರಡೂ ಬದಿ ಇರುವ ಅಂಗಡಿಗಳನ್ನು ತೆರವು ಮಾಡಿಸಲು ಕೇಂದ್ರ ಸರ್ಕಾರ ಪರಿಹಾರ ಕೊಡಬೇಕು. ಆ ಮೊತ್ತವನ್ನು ಡೆಪಾಸಿಟ್ ಮಾಡಬೇಕು. ಆ ನಂತರ ರಾಜ್ಯ ಸರ್ಕಾರ ತೆರವು ಮಾಡಿಸಿಕೊಡುತ್ತದೆ ಎಂದು ಹೇಳಿದ್ದರು.

    ಈ ಹಿಂದೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮಳೆ ಬರುತ್ತಿದೆ. ಈಗ ಡಾಂಬರು ಮಾಡಲು ಸಾಧ್ಯವಿಲ್ಲ. ಮಳೆ ನಿಂತ ಮೇಲೆ ಕಾಮಗಾರಿ ಮುಂದುವರೆಸುತ್ತೇವೆ ಎಂದು ಹೇಳಿದಿದ್ದರು.

    ರಸ್ತೆಯ ಅಗಲೀಕರಣದ ಕುರಿತು ಸ್ಥಳೀಯ ಸಮಾಜ ಸೇವಕ- ಪಬ್ಲಿಕ್ ಹೀರೋ ನಿತ್ಯಾನಂದ ಎಂಬುವರು ಮುರ್ನಾಲ್ಕು ಬಾರಿ ವಿಭಿನ್ನ ಪ್ರತಿಭಟನೆಯನ್ನು ನಡೆಸಿ ಸರ್ಕಾರ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

    ಇದನ್ನೂ ಓದಿ :

    https://publictv.in/udupi-road-like-swimming-pool-nithyananda-olakadu-different-protest/