Tag: ಉಡುಪಿ

  • ಮತ್ತೆ ಆಸ್ಪತ್ರೆಗೆ ದಾಖಲಾದ ಪೇಜಾವರ ಶ್ರೀಗಳು

    ಮತ್ತೆ ಆಸ್ಪತ್ರೆಗೆ ದಾಖಲಾದ ಪೇಜಾವರ ಶ್ರೀಗಳು

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಗಳಿಗೆ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ರಾತ್ರಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪೇಜಾವರ ಶ್ರೀಗಳಿಗೆ ಆರೋಗ್ಯ ತಪಾಸಣೆ ಮಾಡಬೇಕೆಂದು ಮಣಿಪಾಲ ಕೆಎಂಸಿ ವೈದ್ಯರು ಸಲಹೆ ನೀಡಿದ್ದರು. ದಾಖಲಾದ ವಿಶ್ವೇಶತೀರ್ಥರನ್ನು, ಸ್ಕ್ಯಾನಿಂಗ್ ಗೆ ಒಳಪಡಿಸಲಾಯ್ತು. ತಿಂಗಳ ಹಿಂದೆ ಹರ್ನಿಯಾ ಆಪರೇಷನ್ ಗೆ ಒಳಗಾಗಿದ್ದ ಶ್ರೀಗಳು ಇದೀಗ ಕೆಎಂಸಿಗೆ ದಾಖಲಾಗಿದ್ದಾರೆ. ಎರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವ ಸಾಧ್ಯತೆಯಿದೆ. ಸ್ಕಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿರುವ ವೈದ್ಯರು ತಪಾಸಣೆ ನಡೆಸಿದ್ದಾರೆ.

    ರಾತ್ರಿಯ ಪೂಜೆ ಪೂರೈಸಿ, ಕೆಎಂಸಿ ಆಸ್ಪತ್ರೆಗೆ ತೆರಳಿರುವ ಸ್ವಾಮೀಜಿ ಅನುಷ್ಟಾನಗಳನ್ನೂ ಪೂರೈಸಿದ್ದಾರೆ. ಸ್ವಾಮೀಜಿ ಆರೋಗ್ಯವಾಗಿದ್ದಾರೆ, ಭಕ್ತರಿಗೆ ಆತಂಕ ಬೇಡ ಎಂದು ಉಡುಪಿ ಕೃಷ್ಣ ಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಪರೇಶನ್ ನಂತರ ಕೂಡಾ ಹೊಟ್ಟೆ ನೋವು ಕಾಣಿಸಿಕೊಂಡದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಉಡುಪಿಯ ಹಿರಿಯ ಪತ್ರಕರ್ತ ಜಯಂತ್ ಪಡುಬಿದ್ರೆ ಇನ್ನಿಲ್ಲ

    ಉಡುಪಿಯ ಹಿರಿಯ ಪತ್ರಕರ್ತ ಜಯಂತ್ ಪಡುಬಿದ್ರೆ ಇನ್ನಿಲ್ಲ

    ಉಡುಪಿ: ಇಲ್ಲಿನ ಹಿರಿಯ ಪತ್ರಕರ್ತ, ಪರಿಸರದ ಬಗ್ಗೆ ಕಾಳಜಿಯಿದ್ದ, ಬರಹದ ಮೂಲಕ ತೀವ್ರ ಹೋರಾಟ ನೀಡುತ್ತಿದ್ದ, ಸೃಜನಶೀಲ ಲೇಖಕ ಜಯಂತ್ ಪಡುಬಿದ್ರಿ (58) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿದ್ದ ಜಯಂತ್ ಪಡುಬಿದ್ರಿ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಉದಯವಾಣಿ ದೈನಿಕದ ಮೂಲಕ ತಮ್ಮ ಪತ್ರಕರ್ತ ವೃತ್ತಿ ಜೀವನ ಆರಂಭಿಸಿದ್ದ ಜಯಂತ್ ಪಡುಬಿದ್ರಿ ಹನ್ನೆರಡು ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಪರಿಸರ ಹೋರಾಟಕ್ಕೆ ಇಳಿದ ಬಳಿಕ ಉದಯವಾಣಿ ಪತ್ರಿಕೆಯ ಜೊತೆಗಿನ ಅವರ ವೃತ್ತಿಜೀವನ ಕೊನೆಗೊಂಡಿತ್ತು. ಬಳಿಕ ಜಯಂತ್ ಪಡುಬಿದ್ರೆ ಜನವಾಹಿನಿ, ಜಯಕಿರಣ ಪತ್ರಿಕೆಗಳಿಗಾಗಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು.

    ವಸ್ತುನಿಷ್ಟ ಮತ್ತು ನಿಷ್ಟೂರ ವರದಿಗಳಿಗೆ ಪ್ರಸಿದ್ದರಾಗಿದ್ದ ಜಯಂತ್ ಪಡುಬಿದ್ರಿ ತಮ್ಮ ವರದಿಗಳು, ಲೇಖನಗಳು ಮತ್ತು ಅಂಕಣಗಳ ಮೂಲಕ ಕರಾವಳಿ ಭಾಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ತುಳು ಭಾಷೆ, ತುಳುನಾಡ್ನ ಸಂಸ್ಕೃತಿಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡಿದ್ದ ಜಯಂತ್ ಈ ಕುರಿತು ಅಧ್ಯಯನ ನಡೆಸಿದ್ದರು.

    ಪತ್ರಕರ್ತನಾಗಿ ಉದಯವಾಣಿಯಲ್ಲಿ ಕೆಲಸ ಮಡುತ್ತಿರುವಾಗಲೆ ಜಯಂತ್ ಪರಿಸರ ಹೋರಾಟಗಳಲ್ಲಿ ತೊಡಗಿಸಿಕೊಂಡು ಕರಾವಳಿಗೆ ಲಗ್ಗೆ ಇಡುತ್ತಿದ್ದ ಕೈಗಾರಿಕೆಗಳ ವಿರುದ್ಧ ಹೋರಾಟ ರೂಪಿಸಿ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.

    ಮೂಲ್ಕಿ-ಮೂಡಬಿದಿರೆ ಪ್ರದೇಶದಲ್ಲಿ ಎಂಜಲ್ ಹಾರ್ಡ್ ಪೈಂಟ್ಸ್ ಕಾರ್ಖಾನೆ ಅಸ್ಥಿತ್ವಕ್ಕೆ ಬರುತ್ತದೆ ಎಂಬ ಸುದ್ದಿ ತಿಳಿದಾಗ ರೂಪುಗೊಂಡ ಜಯಂತ್ ಅವರ ಪರಿಸರವಾದಿ ಹೋರಾಟ ಬಳಿಕ ಇಂತಹ ಅನೇಕ ಬೃಹತ್ ಕೈಗಾರಿಕೆಗಳ ವಿರುದ್ಧವೂ ಮುಂದುವರಿಯಿತು. ಎಂಆರ್‍ಪಿಲ್, ಕೊಜೆಂಟ್ರಿಕ್ಸ್ ಯುಪಿಸಿಎಲ್ ಮುಂತಾದ ಪರಿಸರ ವಿರೋಧಿ ಕಂಪನಿ ವಿರುದ್ಧವೂ ಜಯಂತ್ ಹೋರಾಟ ಮಾಡಿದ್ದರು.

    ಜಯಂತ್ ಪಡುಬಿದ್ರೆ ಒಡನಾಡಿ, ಹಿರಿಯ ಪತ್ರಕರ್ತ ಸುಭಾಸ್ ಚಂದ್ರ ವಾಗ್ಳೆ ಕಂಬನಿ ಮಿಡಿದಿದ್ದು, 55ರ ಅಸುಪಾಸಿನ ಜಯಂತ್ ಅವರಿಗೆ ಇದು ಸಾಯುವ ವಯಸ್ಸಲ್ಲ. ಪತ್ರಕರ್ತರಲ್ಲಿ ಇರಬೇಕಾದ, ಅಗಾಧ ಅಧ್ಯಯನಶೀಲತೆ ಮತ್ತು ಅದ್ಭುತ ನೆನಪಿ ಶಕ್ತಿ ಇವು ಜಯಂತ್ ಅವರ ಹೆಗ್ಗಳಿಕೆಯಾಗಿತ್ತು. ತುಳುನಾಡಿನ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದ ಅವರು ಭೂತಾರಾಧನೆ ಮತ್ತು ತುಳು ಸಂಸ್ಕೃತಿ-ಆಚರಣೆಗಳ ಬಗ್ಗೆ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕೆಲಕಾಲ ಲಂಕೇಶ್ ಪತ್ರಿಕೆಗೂ ವರದಿಗಳನ್ನು ಬರೆಯುತ್ತಿದ್ದರು. ಒಂದೆರಡು ಸಂಜೆ ಪತ್ರಿಕೆಗಳಿಗೆ ಅಂಕಣ ಬರಹಗಳನ್ನೂ ಬರೆದಿದ್ದರು. ಪರಿಸರಪರ ಹೋರಾಟಗಾರರೂ ಅಗಿದ್ದ ಅವರು ಅದೇ ಕಾರಣಕ್ಕೆ ಉದ್ಯೋಗ ಕಳೆದುಕೊಂಡಿದ್ದರು. ಆದರ್ಶ, ವೃತ್ತಿಪರತೆ, ಅಧ್ಯಯನ ಎಲ್ಲವೂ ಹೆಚ್ಚಾಗಿದ್ದ ಅವರಲ್ಲಿ ಸ್ವಾಭಿಮಾನವೂ ಸ್ವಲ್ವ ಹೆಚ್ಚೆ ಇತ್ತು,ಕಿರಿಯ ಪತ್ರಕರ್ತರಿಗೆ ಕಾಳಜಿಯಿಂದ ಮಾರ್ಗದರ್ಶನ ಮಾಡುತ್ತಿದ್ದ ಅವರು ಅನೇಕ ಬಾರಿ ಸಹಪತ್ರಕರ್ತರನ್ನು ಟೀಕಿಸುವುದಕ್ಕೂ ಹಿಂಜರಿಯುತ್ತಿರಲಿಲ್ಲ. ನೇರ ನಿಷ್ಟುರವಾದಿಯಾಗಿದ್ದರು, ಎಂದು ಹೇಳಿದ್ದಾರೆ.

    ಕ್ರೈಮ್, ಪೊಲೀಸ್, ರೌಡಿಸಂ, ಮಾಫಿಯಾ, ಅಂಡರ್ ವರ್ಲ್ಡ್, ರಾಜಕೀಯಗಳ ಬಗ್ಗೆ ಅಘಾದ ಜ್ಞಾಪಕ ಶಕ್ತಿ ಮತ್ತು ಆಸಕ್ತಿ ಇತ್ತು ಎಂದು ಹೇಳಿದರು.

    ಜಯಂತ್ ಪಡುಬಿದ್ರಿ ಅವರ ವೃತ್ತಿ ಮತ್ತು ಹೋರಾಟಗಳಿಂದ ಅನೇಕ ಮಂದಿ ಪ್ರಭಾವಿತರಾಗಿದ್ದರು. ಅವಿವಾಹಿತರಾಗಿರುವ ಜಯಂತ್ ಪಡುಬಿದ್ರಿ ತಮ್ಮ 58ನೆಯ ವಯಸ್ಸಿನಲ್ಲಿಯೇ ನಿಧನ ಹೊಂದಿದ್ದು ಕರಾವಳಿಯ ಮಟ್ಟಿಗೆ ತುಂಬಲಾರದ ನಷ್ಟವಾಗಿದೆ.

  • ಲಿಂಗಾಯತ ಪ್ರತ್ಯೇಕ ಧರ್ಮ ಗೊಂದಲ: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚರ್ಚೆ ಮಡೋಣ- ಪೇಜಾವರಶ್ರೀ

    ಲಿಂಗಾಯತ ಪ್ರತ್ಯೇಕ ಧರ್ಮ ಗೊಂದಲ: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚರ್ಚೆ ಮಡೋಣ- ಪೇಜಾವರಶ್ರೀ

    ಉಡುಪಿ: ನಾವು ಇಷ್ಟರವರೆಗೆ ಹಿಂದೂಗಳಾಗಿಯೇ ಇರಲಿಲ್ಲ ಅಂತ ಜಾಮ್ದಾರ್ ಹೇಳುತ್ತಾರೆ. ಜಾಮ್ದಾರ್ ಅವರ ಹೇಳಿಕೆ ಸರಿಯಲ್ಲ. ಎಲ್ಲಾ ಹಿಂದೂ ಸಮಾವೇಶದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಲಿಂಗಾಯತರು, ವಿರಕ್ತಿ ಮಠಾಧೀಶರು ಪಾಲ್ಗೊಂಡಿದ್ದಾರೆ ಎಂದು ಪೇಜಾವರ ಮಠಾಧೀಶರು ಐಎಎಸ್ ಅಧಿಕಾರಿ ಜಾಮ್ದಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಐಎಸ್‍ಎಸ್ ಅಧಿಕಾರಿ ಜಾಮ್ದಾರರು ಹೇಳಿದ್ದೆಲ್ಲಾ ಸತ್ಯಕ್ಕೆ ವಿರುದ್ಧವಾದದ್ದು. ಲಿಂಗಾಯತರ ಮೇಲೆ ಪ್ರೀತಿಯಿಂದ ಇಷ್ಟೆಲ್ಲಾ ಹೇಳುತ್ತಿದ್ದೇನೆ. ಹಿಂದೂ ಧರ್ಮ ದುರ್ಬಲವಾಗಬಾರದು. ಕರ್ನಾಟಕದಲ್ಲಿ ಹಿಂದೂ ಧರ್ಮ ಉತ್ತಮ ರೀತಿಯಲ್ಲಿ ಬೆಂಬಲಿಸಿಕೊಂಡು ಬಂದಿದ್ದೀರಿ. ನನ್ನ ಕಾಳಜಿ, ಹೇಳಿಕೆಯಲ್ಲಿ ವೈಯಕ್ತಿಕ ಸ್ವಾರ್ಥ ಇಲ್ಲ, ನಾನೇನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ರು.

    ಈ ಬಗ್ಗೆ ಚರ್ಚೆಯಾಗಲಿ, ಜನವರಿ 18 ರ ನಂತರ ಆದರೆ ಬೆಂಗಳೂರಿನಲ್ಲಿ ಚರ್ಚೆಯಾಗಲಿ. ನಾನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಗೆ ಬರಲು ಸಿದ್ಧ. ಅದಕ್ಕೂ ಮೊದಲು ಚರ್ಚೆ ಆಗಬೇಕಾದರೆ ಉಡುಪಿಗೆ ಬನ್ನಿ ಅಂತ ವೀಳ್ಯ ಕೊಟ್ಟಿದ್ದಾರೆ. ಉಡುಪಿಯಲ್ಲಿ 1968 ರಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಸಮಾವೇಶ ನಡೆದಿತ್ತು. ಆ ಸಮಾವೇಶದಲ್ಲಿ ಸಿದ್ದಗಂಗಾಶ್ರೀ, ಆಗಿನ ಸುತ್ತೂರು ಶ್ರೀ ಭಾಗವಹಿಸಿದ್ದರು. ಜಾಮ್ದಾರ್ ಅವರ ಈ ಹೇಳಿಕೆಯಲ್ಲಿ ಸತ್ಯ ಇಲ್ಲ. ಹಿಂದೂ ಹೋರಾಟದಲ್ಲಿ ನಿಮ್ಮದು ಪ್ರಥಮ ಧ್ವನಿ ಅಂತ ಈವರೆಗೆ ಎಲ್ಲಾ ಮಠಾಧೀಶರು ಹೇಳಿದ್ದಾರೆ. ಈಗ ಮಾತ್ರ ಹೊಸದಾಗಿ ವಿವಾದ ಪ್ರಾರಂಭವಾಗಿದೆ. ಧರ್ಮ ಬೇರೆ ಎಂಬ ಚರ್ಚೆ ಯಾಕೆ ಆರಂಭವಾಗಿದೆ ಎಂದು ಖೇದ ವ್ಯಕ್ತಪಡಿಸಿದ್ರು.

    ಲಿಂಗಾಯತರು ಹಿಂದೂ ಧರ್ಮ ತೊರೆಯದಿರಿ ಎಂದು ನಾನು ಹೇಳುತ್ತಾ ಬಂದಿದ್ದೇನೆ. ನಾನು ಭಯದಿಂದ ಹೇಳಿದ ಹೇಳಿಕೆ ಇದಲ್ಲ. ಲಿಂಗಾಯತರ ಮೇಲೆ ಯಾವ ವಿರೋಧವೂ ಇಲ್ಲ. ಲಿಂಗಾಯತರು ನಮ್ಮವರು ಎಂಬುದಷ್ಟೇ ನನ್ನ ಕಾಳಜಿ. ಇದು ಸಲಹೆ, ಒತ್ತಡ ಅಲ್ಲ. ಕೇವಲ ನಿವೇದನೆಯಷ್ಟೇ ಎಂದು ಸ್ಪಷ್ಟಪಡಿಸಿದರು.

    ಬೌದ್ಧ-ಜೈನ ಧರ್ಮ ಪ್ರತ್ಯೇಕವಾದ ಕಾಲದಲ್ಲಿ ನಾನು ಇರಲಿಲ್ಲ. ಬಸವಣ್ಣ ಕೂಡಾ ಶಿವನೇ ಸರ್ವೋತ್ತಮ ಅಂತ ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಹಲವು ಪಂಥಗಳಿವೆ. ಆದರೆ ನಮ್ಮಲ್ಲಿ ತತ್ವ, ಆಚರಣೆ ವಿಭಿನ್ನವಾದ್ರೂ ಹಿಂದೂ ಧರ್ಮದೊಳಗೆ ಎಲ್ಲರೂ ಇದ್ದೇವೆ ಎಂದು ಹೇಳಿದರು.

    ಬಸವಣ್ಣ ಪುನರ್ಜನ್ಮವನ್ನು ಒಪ್ಪಿದ್ದಾರೆ. ಯಾರಾದರೂ ಅಪರಾಧ ಮಾಡಿದರೆ ನಾಯಿ, ಹಂದಿಯಾಗಿ ಹುಟ್ಟುತ್ತಾರೆಂದು ಶರಣರ ವಚನದಲ್ಲಿದೆ. ಶಿವ ಸರ್ವೋತ್ತಮ ಎನ್ನಲು ಬಸವಣ್ಣ ಆಗಮವನ್ನು ಉಲ್ಲೇಖಿಸಿದ್ದಾರೆ, ಉದಾಹರಿಸಿದ್ದಾರೆ. ನಮ್ಮ ಶಿವ ಅವೈದಿಕ ಎನ್ನಲು ಆಧಾರವೇನು? ಸುಮ್ಮನೆ ಏನೋ ಹೇಳುವುದಲ್ಲ ಎಂದು ಸ್ವಾಮೀಜಿ ಗರಂ ಆದ್ರು.

     

  • ಕರಾವಳಿಯ ಮೀನುಗಾರ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪ್ಲಾನ್

    ಕರಾವಳಿಯ ಮೀನುಗಾರ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪ್ಲಾನ್

    ಉಡುಪಿ: ಕರಾವಳಿಯ ಪ್ರಬಲ ಮತದಾರ ಸಮುದಾಯವಾದ ಮೀನುಗಾರರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಐಡಿಯಾ ಮಾಡಿದೆ.

    ಕರಾವಳಿಯ ಪ್ರಬಲ ಮತದಾರ ಸಮುದಾಯವಾದ ಮೀನುಗಾರರನ್ನು ತನ್ನತ್ತ ಸೆಳೆಯಲು ರಾಹುಲ್ ಗಾಂಧಿ ಅವರನ್ನ ಕುಮಟಾಕ್ಕೆ ಕರೆತಂದು ಮೊಗವೀರರ ಬೃಹತ್ ಸಮಾವೇಶ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ.

    ನವೆಂಬರ್ 21 ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಣ್ಕಿಯ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಕರ್ನಾಟಕ ಪ್ರದೇಶ ಮೀನುಗಾರ ಕಾಂಗ್ರೆಸ್ ಸಮಾವೇಶದ ಉಸ್ತುವಾರಿ ಹೊತ್ತುಕೊಂಡಿದೆ. ಉಡುಪಿಯಲ್ಲಿ ಮಾಜಿ ಶಾಸಕ ಯುಆರ್ ಸಭಾಪತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    ಒಂದು ಲಕ್ಷ ಮೀನುಗಾರರು ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ಕೇಂದ್ರ ಸಂಪುಟದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಮಂತ್ರಿ ಸ್ಥಾನ ಕೊಡಬೇಕು. ಮೀನುಗಾರರ ಸಮುದಾಯವನ್ನು ಎಸ್‍ಟಿ ಪಂಗಡಕ್ಕೆ ಸೇರಿಸಬೇಕು. ಹೀಗೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಮಾವೇಶದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಯುಆರ್ ಸಭಾಪತಿ ಹೇಳಿದ್ದಾರೆ.

  • ಮದುವೆ ಮಂಟಪದಲ್ಲೇ ಕೈ ಕೊಟ್ಟ ವರ, ಕಾದು ಕಾದು ಸುಸ್ತಾದ ವಧು – ಇದು ಲವ್ ಸೆಕ್ಸ್ ದೋಖಾ ಕಥೆ

    ಮದುವೆ ಮಂಟಪದಲ್ಲೇ ಕೈ ಕೊಟ್ಟ ವರ, ಕಾದು ಕಾದು ಸುಸ್ತಾದ ವಧು – ಇದು ಲವ್ ಸೆಕ್ಸ್ ದೋಖಾ ಕಥೆ

    ಉಡುಪಿ: ಮದುವೆಯಾಗುವುದಾಗಿ ನಂಬಿಸಿ, ದಿನಾಂಕವನ್ನು ಫಿಕ್ಸ್ ಮಾಡಿ ಎಲ್ಲರೂ ಮಂಟಪಕ್ಕೆ ಬಂದಿದ್ದಾರೆ. ಆದರೆ ಮದುವೆ ಗಂಡೇ ಬರಲಿಲ್ಲ. ಇದರಿಂದ ಮದುವೆ ಮಂಟಪದ ಮುಂದೆ ವಧು ಕಾದು ಕಾದು ಸುಸ್ತಾದ್ರೆ ಅತ್ತ ಕೊನೆಗೂ ವರ ಬರದೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

    ಲಲಿತಾ ಮದುವೆ ಸಭಾಂಗಣ ಮುಂದೆ ಕಾದು ಕಾದು ಸುಸ್ತಾದ ವಧು. ಮಂಜುನಾಥ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಪರಾರಿಯಾದವನು. ಇವರಿಬ್ಬರೂ ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಿಜಿಸ್ಟರ್ ಮದುವೆ ಕೂಡ ಮಾಡಿಕೊಂಡಿದ್ದು, ಈಗ ಕುಟುಂಬಸ್ಥರು ಸೇರಿ ಸಾಂಪ್ರದಾಯಿಕವಾಗಿ ಮದುವೆ ಮಾಡಲು ಮುಂದಾಗಿದ್ದರು. ಆದರೆ ಈ ಸಂದರ್ಭದಲ್ಲಿ ಮಂಜುನಾಥ ಕೈಕೊಟ್ಟು ಪರಾರಿಯಾಗಿದ್ದಾನೆ.

    ಲಲಿತಾ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡಿಕೊಂಡಿದ್ದರು. ಅದೇ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕೆಲಸಕ್ಕೆ ಮಂಜುನಾಥ ಬಂದಿದ್ದ. ಆಗಿನಿಂದಲೇ ಅವರ ಮಧ್ಯ ಪ್ರೀತಿ ಪ್ರಾರಂಭವಾಗಿತ್ತು. ಲಲಿತಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮನೆಯಿಂದಲೇ ಊಟವನ್ನೂ ತಂದು ಕೊಡುತ್ತಿದ್ದ. ಇವರಿಬ್ಬರೂ ದೇವಸ್ಥಾನ, ಪಾರ್ಕ್ ಮುಂತಾದ ಕಡೆಗಳಲ್ಲಿ ಸುತ್ತಾಡಿದ್ದರು. ಕೆಲವು ತಿಂಗಳ ಹಿಂದೆ ಇವರಿಬ್ಬರ ನಡುವೆ ದೈಹಿಕ ಸಂಪರ್ಕವು ಕೂಡ ನಡೆದಿತ್ತು.

    ಲಲಿತಾ ಹಾಗೂ ಮಂಜುನಾಥ್ ಒಡನಾಟ ಕುಟುಂಸ್ಥರಿಗೆ ಗೊತ್ತಾದ ನಂತರ ಅವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದು, ಸೆಪ್ಟೆಂಬರ್ 25 ರಂದು ರಿಜಿಸ್ಟರ್ ಮ್ಯಾರೇಜ್ ಮಾಡಿಸಿದ್ದರು. ರಿಜಿಸ್ಟರ್ ಮ್ಯಾರೇಜ್ ಆದ ಎರಡು ದಿನಗಳ ಬಳಿಕ ಮನೆಗೆ ಹೋಗಿ ಮಂಜುನಾಥ ತನ್ನ ಮದುವೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ್ದ. ಈ ಸಂದರ್ಭದಲ್ಲಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಇವರಿಬ್ಬರ ಕುಟುಂಬದವರು ಸೇರಿ ಅಕ್ಟೋಬರ್ 6 ರಂದು ಅಂಪಾರಿನ ಶ್ರೀ ವಾಸುಕಿ ಸುಬ್ರಹ್ಮಣ್ಯ ಮತ್ತು ನಾಗಯಕ್ಷಿ ದೇವಸ್ಥಾನದಲ್ಲಿ ಮದುವೆ ನಿಗದಿಪಡಿಸಿದ್ದರು. ಕುಟುಂಬಸ್ಥರು, ಸ್ನೇಹಿತರು ಹಾಗೂ ಲಲಿತಾ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಗಳೆಲ್ಲರೂ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು.

    ಮದುಮಗನೇ ನಾಪತ್ತೆ: ಮದುವೆಗೆ ಎಲ್ಲಾ ತಯಾರಿಯೂ ಆಗಿತ್ತು. ಆದರೆ ಮದುಮಗ ಮಂಜುನಾಥ್ ಮಾತ್ರ ಮದುವೆ ಮಂಟಪಕ್ಕೆ ಬರಲೇ ಇಲ್ಲ. ಮಂಟಪದ ಮುಂದೆ ಕಾದು ಕಾದು ಸುಸ್ತಾದ ಲಲಿತಾ ನಾನು ಕಾನೂನು ರೀತಿಯಲ್ಲಿ ಮದುವೆಯಾಗಿದ್ದೇನೆ. ನನ್ನ ಗಂಡನನ್ನು ಕರೆಸಿ ಎಂದು ಮಂಜುನಾಥನ ಮನೆ ಮುಂದೆ ಧರಣಿ ಕುಳಿತ್ತಿದ್ದಾರೆ. ನನ್ನ ಕುಟುಂಬದವರಿಗೆ ಅನ್ಯಾಯ ಆಗಿದೆ ಎಂದು ಮದುವೆಗೆಂದು ಪ್ರಿಂಟ್ ಮಾಡಿದ ಬ್ಯಾನರ್ ಮತ್ತು ಆಮಂತ್ರಣ ಪತ್ರಿಕೆ ಹಿಡಿದು ನ್ಯಾಯ ಕೊಡಿಸಿ ಎಂದು ಗಂಡನ ಮನೆಯ ಮುಂದೆ ನಿಂತು ಅಂಗಲಾಚಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಈ ಕುರಿತು ಮಾತುಕತೆ ನಡೆಸೋಣ. ಮನೆಯ ಮುಂದೆ ಗಲಾಟೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಆದರೂ ಲಲಿತಾ ಮತ್ತು ಕುಟುಂಬಸ್ಥರು ಹಠವಿಡಿದು ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥನ ಭಾವ ಚಂದ್ರ ಮತ್ತು ಲಲಿತಾ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

    ಕುಂದಾಪುರ ಠಾಣೆಯಲ್ಲಿ ಯುವತಿ ತನಗೆ ಮೋಸವಾಗಿದೆ ಎಂದು ದೂರು ನೀಡಿದ್ದಾರೆ. ಅತ್ತ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಮಂಜುನಾಥ ಕಾಣೆಯಾಗಿದ್ದಾನೆ ಎಂಬ ದೂರು ಕೂಡ ದಾಖಲಾಗಿದೆ.

  • ಉಡುಪಿ ಶ್ರೀಕೃಷ್ಣಮಠದಲ್ಲಿ ನರಕ ಚತುರ್ದಶಿ, ಎಣ್ಣೆಸ್ನಾನದ ಸಂಭ್ರಮ

    ಉಡುಪಿ ಶ್ರೀಕೃಷ್ಣಮಠದಲ್ಲಿ ನರಕ ಚತುರ್ದಶಿ, ಎಣ್ಣೆಸ್ನಾನದ ಸಂಭ್ರಮ

    ಉಡುಪಿ: ದೇಶಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಶುರುವಾಗಿದೆ. ದೀಪಾವಳಿಯ ಮೊದಲ ದಿನ ನರಕ ಚತುರ್ದಶಿ. ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ಸಿಗುತ್ತದೆ. ಕೃಷ್ಣ ಪರಮಾತ್ಮ ನರಕಾಸುರನನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ನರಕ ಚತುರ್ದಶಿ ಆಚರಿಸಲಾಗುತ್ತದೆ.

    ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗಿನಿಂದ ಆಚರಣೆ ಶುರುವಾಗಿದೆ. ಪರ್ಯಾಯ ಪೇಜಾವರ ಮಠಾಧೀಶ ವಿಶ್ವೆಶತೀರ್ಥ ಸ್ವಾಮೀಜಿ ಬೆಳಗ್ಗೆ ಪಶ್ಚಿಮ ಜಾಗರ ಪೂಜೆ ನೆರವೇರಿಸಿದರು. ನಂತರ ಕೃಷ್ಣಾಪುರ ಸ್ವಾಮೀಜಿ, ಸೋದೆ-ಕಾಣಿಯೂರು ಶ್ರೀಗಳು ಪರ್ಯಾಯ ನಡೆಸುತ್ತಿರುವ ಇಬ್ಬರೂ ಶ್ರೀಗಳು ಒಬ್ಬರಿಗೊಬ್ಬರು ಎಣ್ಣೆ ಪ್ರಸಾದ ವಿನಿಮಯ ಮಾಡಿಕೊಂಡರು.

    ಮಠದ ಚಂದ್ರಶಾಲೆಯಲ್ಲಿ ಭಕ್ತರಿಗೂ ಸ್ವಾಮೀಜಿ ದೀಪಾವಳಿಯ ಎಣ್ಣೆಪ್ರಸಾದ ನೀಡಿದರು. ಮಠದ ಭಕ್ತರು ಸ್ವಾಮೀಜಿಗೆ ಎಣ್ಣೆ ಹಚ್ಚಿದರು. ಹತ್ತಾರು ಮಂದಿ ಎಣ್ಣೆ ಮಾಲೀಶ್ ಮಾಡಿದರು. ಮಠದ ಸಿಬ್ಬಂದಿ ಪರಸ್ಪರ ಎಣ್ಣೆ ಹಚ್ಚಿಕೊಂಡು ಸಂಭ್ರಮಿಸಿದರು.

    ಇದೇ ವೇಳೆ ಮಾತನಾಡಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ನರಕಾಸುರ ವಿವಿಧ ರಾಜ್ಯದ ಮೇಲೆ ದಾಳಿ ಮಾಡಿ ಯುವತಿಯರನ್ನು ಎತ್ತಿಕೊಂಡು ಹೋಗಿ ಸೆರೆಯಲ್ಲಿ ಇರಿಸಿಕೊಂಡಿದ್ದ. ಇಂದ್ರಲೋಕದ ಮೇಲೆ ದಾಳಿ ಮಾಡಿ ಅದಿತಿ ದೇವಿಯ ಕರ್ಣ ಕುಂಡಲ ಅಪಹರಿಸಿದ್ದ. ದಾರಿ ಕಾಣದಾಗದ ದೇವೇಂದ್ರ, ಶ್ರೀಕೃಷ್ಣನಲ್ಲಿ ವಿಚಾರವನ್ನೆಲ್ಲ ಒಪ್ಪಿಸಿದ. ಶ್ರೀಕೃಷ್ಣ ಸತ್ಯಭಾಮ ಸಮೇತ ಗರಡಾರೂಢನಾಗಿ ನರಕಾಸುರನ ನಗರದ ಮೇಲೆ ದಾಳಿ ಮಾಡಿದ. ಮಂತ್ರಿಗಳ ಸಂಹಾರ ಮಾಡಿ, ನರಕಾಸುರ ವಧೆ ಮಾಡಿದ. ರಾಜಕುವರಿಯರನ್ನೆಲ್ಲಾ ಬಿಡುಗಡೆಗೊಳಿಸಿದ. ನರಕಾಸುರನ ವಧೆ ಮಾಡಿ, ಕೃಷ್ಣಪರಮಾತ್ಮ ಅಭ್ಯಂಜನ ಮಾಡಿದ ದಿನ ಇವತ್ತು. ಭಗವಂತ ಲೋಕಕ್ಕೆ ಮಾಡಿದ ಮಹಾ ಉಪಕಾರವನ್ನು ನಾವೆಲ್ಲಾ ನೆನೆಯಬೇಕು ಎಂದರು.

    ಯುವತಿಯರನ್ನು ಲೋಕ ತೊರೆದಾಗ ಮಾರ್ಗದರ್ಶನ ಮಾಡಿ, ಭಗವಂತನೇ ಅವರನ್ನು ಸ್ವೀಕರಿಸಿದ. ಸಮಾಜದಲ್ಲಿ ಗೌರವದ ಸ್ನಾನ ನೀಡಿದ ದಿನ ಇಂದು. ಭಗವಂತನನ್ನು ಪ್ರಾರ್ಥನೆ ಮಾಡಿ, ಅವನ ಪರೋಪಕಾರ ಗುಣ ಅಳವಡಿಸಿಕೊಂಡು ನಾವು ಕೂಡಾ ಅದೇ ಸನ್ಮಾರ್ಗದಲ್ಲಿ ನಡೆಯಬೇಕಿದೆ. ದಣಿವಿನ ಜೊತೆ ದುರ್ಗಂದ-ಕೊಳೆ ಕೂಡಾ ದೂರವಾಗುತ್ತದೆ. ಈ ಮೂಲಕ ಈ ದಿನ ಮನಸ್ಸಿನ ಕೊಳೆಯೂ ದೂರವಾಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡುವುದಾಗಿ ಹೇಳಿದ್ರು.

  • ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ

    ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ

    ಉಡುಪಿ: ಬಲೆಯಲ್ಲಿ ಸಿಲುಕಿದ್ದ ನಾಗರಹಾವೊಂದನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಡುಹೊಳೆ ಗ್ರಾಮದಲ್ಲಿ ನಡೆದಿದೆ.

    ಕಾರ್ಕಳದ ಹೆಬ್ರಿ ಸಮೀಪದ ಕಾಡುಹೊಳೆಯ ನಿವಾಸಿ ಜಿನ್ನಪ್ಪ ಎಂಬುವರ ಮನೆಯಲ್ಲಿ ನಾಗರ ಹಾವೊಂದು ಬಲೆಗೆ ಸಿಲುಕಿಕೊಂಡಿದ್ದು, ಆದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಉಡುಪಿಯ ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

    ಗುರುರಾಜ್ ಸನಿಲ್ ಸ್ಥಳಕ್ಕೆ ಭೇಟಿ ನೀಡಿ ನಾಗರ ಹಾವನ್ನು ಬಹಳ ಶ್ರಮವಹಿಸಿ ಬಿಡಿಸಿದ್ದಾರೆ. ನಾಗರಹಾವು ದೈಹಿಕವಾಗಿ ಬಹಳ ಮೃದು ಆಗಿರುವುದರಿಂದ ಹಾವಿಗೆ ಘಾಸಿಯಾಗದಂತೆ ಒಂದೊಂದೇ ಬಲೆಯ ಕಣಗಳನ್ನು ಕತ್ತರಿಸಿ ಹಾವನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯರೂ ಕೂಡ ಹಾವನ್ನು ಬಿಡಿಸಲು ಸಹಾಯ ಮಾಡಿದ್ದಾರೆ.

    ನಾಗರಹಾವಿನ ಹೆಡೆಯ ಭಾಗವನ್ನು ಬಿಡಿಸುವ ಸಂದರ್ಭದಲ್ಲಿ ಬಹಳ ಪ್ರಾಯಾಸಪಡಬೇಕಾಗಿ ಬಂತು. ಸುಮಾರು ಒಂದು ಗಂಟೆಗಳ ಕಾಲ ಗುರುರಾಜ್ ಸನಿಲ್ ಶ್ರಮವಹಿಸಿ ಹಾವಿನ ರಕ್ಷಣೆ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

  • ಬಿಜೆಪಿ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದು ಹೀಗೆ

    ಬಿಜೆಪಿ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದು ಹೀಗೆ

    ಉಡುಪಿ: ನನ್ನನ್ನು ಬಿಟ್ಟುಬಿಡಿ. ಕೈಮುಗಿದು ಶಿರಬಾಗಿ ಕೇಳಿಕೊಳ್ಳುತ್ತೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಜೊತೆ ಸೌಜನ್ಯದ ಭೇಟಿ ಮಾಡಿದ್ದೇನೆ. ಗಾಳಕ್ಕೆ ಬಾಯಿ ಹಾಕುವ ಜಾತಿ ನಮ್ಮದಲ್ಲ ಅಂತ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

    ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಕಡಿವಾಣ ಹಾಕಿದ ಅವರು, ನನ್ನನ್ನು ಬಿಟ್ಟುಬಿಡಿ. ಅನಂತಕುಮಾರ್ ಜೊತೆ ಸೌಜನ್ಯದ ಭೇಟಿ ಮಾಡಿದ್ದೇನೆ. ಒಂದು ವೇಳೆ ನಾನು ಅವರನ್ನು ಭೇಟಿಯಾಗದಿದ್ದರೂ ಅದೊಂದು ಸುದ್ದಿಯಾಗುತ್ತಿತ್ತು. ನಾವಿಬ್ಬರು ಕೋಣೆಯೊಳಗೆ ಕುಳಿತು ಮಾತನಾಡಲಿಲ್ಲ. ಇದಕ್ಕೆ ಅಪಾರ ಅರ್ಥ ಕಲ್ಪಿಸೋದು ಬೇಡ. ಕಾಂಗ್ರೆಸ್ ತೊರೆಯುವ ಪ್ರಸ್ತಾಪ ಇಲ್ಲ. ಈ ಕುರಿತು ಹಲವು ಬಾರಿ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಅಮಿತ್ ಷಾ ಮುಖವನ್ನೇ ನಾನು ನೋಡಿಲ್ಲ. ಯಾವ ಗಾಳವನ್ನು ಯಾರೂ ಹಾಕಿಲ್ಲ. ನಾನು ಕೂಡ ಗಾಳಕ್ಕೆ ಬಾಯಿ ಹಾಕುವ ಜಾತಿಯವನಲ್ಲ ಅಂತ ಸ್ಪಷ್ಟನೆ ನಿಡಿದ್ದಾರೆ.

    ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಅನ್ನುವ ಸುದ್ದಿ ಸಾಕಷ್ಟು ದಿನಗಳಿಂದ ಓಡಾಡುತ್ತಿದೆ. ಇದಕ್ಕೆ ಸಾಕ್ಷಿಯಂತೆ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಮಾತನಾಡುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

    ಈ ಫೋಟೋ ರಾಜಕೀಯ ವಲಯದ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಬ್ರಹ್ಮಾವರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಉಡುಪಿಗೆ ಬಂದಿದ್ದ ಅನಂತ್ ಕುಮಾರ್ ಅವರು ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ಉಳಿದಿದ್ದರು. ಆ ಸಂದರ್ಭದಲ್ಲಿಯೆ ಪ್ರಮೋದ್ ಅವರೂ ಪ್ರವಾಸಿ ಮಂದಿರಕ್ಕೆ ಹೋಗಿ ಅವರನ್ನು ಭೇಟಿ ಮಾಡಿ, ಕೆಲ ಹೊತ್ತು ಮಾತುಕತೆ ನಡೆಸಿದ್ದರು.

    ಈ ಸಂದರ್ಭ ಬಿಜೆಪಿ ಮುಖಂಡ ಆರ್. ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಮತ್ತಿತರರು ಇದ್ದರು. ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮತ್ತಷ್ಟು ಮಹತ್ವ ಪಡೆದಿತ್ತು.

  • ಗೌರಿ ಹಂತಕರ ಶಂಕಿತ ರೇಖಾಚಿತ್ರದಲ್ಲೂ ಹಿಂದೂಗಳೇ ಟಾರ್ಗೆಟ್: ವಿಶ್ವ ಹಿಂದೂ ಪರಿಷದ್

    ಗೌರಿ ಹಂತಕರ ಶಂಕಿತ ರೇಖಾಚಿತ್ರದಲ್ಲೂ ಹಿಂದೂಗಳೇ ಟಾರ್ಗೆಟ್: ವಿಶ್ವ ಹಿಂದೂ ಪರಿಷದ್

    ಉಡುಪಿ: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಹಂತಕರ ಕುಂಕುಮಧಾರಿ ಶಂಕಿತ ರೇಖಾಚಿತ್ರ ಬಿಡುಗಡೆ ಮಾಡಿರುವ ಪೊಲೀಸರು ಮತ್ತು ರಾಜ್ಯ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷದ್ ಸಂಘಟನಾ ಕಾರ್ಯದರ್ಶಿ ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಕುಂಕುಮಧಾರಿ ಶಂಕಿತನ ರೇಖಾಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಆರೋಪಿಸಿದರು.

    ಗೌರಿ ಹತ್ಯೆ ವಿಚಾರ ನನಗೂ ದುಃಖ ತಂದಿದೆ. ಆದರೆ ಕುಂಕುಮ ಪ್ರದರ್ಶನ ಹಿಂದೆ ರಾಜಕೀಯ ಇದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸಂಘ ಪರಿವಾರವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕಲ್ಬುರ್ಗಿ ಹತ್ಯೆ ನಡೆದಾಗಲೂ ಸಂಘ ಪರಿವಾರವನ್ನು ಟಾರ್ಗೆಟ್ ಮಾಡಿದ್ದರು. ಆದರೆ ಇದುವರೆಗೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಸಂಘ ಪರಿವಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ಬಜರಂಗದಳ ನಾಶದ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ತನಿಖೆ ನಡೆಸಲಿ ಸತ್ಯ ಹೊರಬರುತ್ತದೆ ಅಂತ ಹೇಳಿದರು.

    ಮೌಢ್ಯ ಪ್ರತಿಬಂಧಕ ವಿಧೇಯ ಜಾರಿ ವಿಚಾರದಲ್ಲಿಯೂ ಹಿಂದೂಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಹಿಂದೂ ಧರ್ಮದಲ್ಲಿ ಮೌಢ್ಯವಿಲ್ಲ, ಅದು ಇರೋದು ಕ್ರೈಸ್ತರಲ್ಲಿ, ಭೂಮಿ ಇಂದಿಗೂ ಗೋಲಾಕಾರವಿದೆ ಎಂದು ಕ್ರೈಸ್ತರು ನಂಬುವುದಿಲ್ಲ. ಆದರೆ ಹಿಂದೂ ಧರ್ಮದ ನಂಬಿಕೆಯನ್ನು ಮೌಢ್ಯ ಎನ್ನಲಾಗುತ್ತಿದೆ. ನಂಬಿಕೆಯನ್ನು ಮೌಢ್ಯ ಎಂದರೆ ಒಪ್ಪಲಾಗದು ಎಂದು ಸರ್ಕಾರದ ವಿರುದ್ಧ ವಾಗ್ವಾದ ನಡೆಸಿದರು.

    ಧರ್ಮ ಸಂಸತ್ತು: ನವೆಂಬರ್ 24, 25, 26ಕ್ಕೆ ಧರ್ಮ ಸಂಸತ್ತು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್, ಯೋಗಿ ಆದಿತ್ಯನಾಥ್, ಮಾತಾ ಅಮೃತಾನಂದಮಯಿ ಬರುತ್ತಾರೆ. ದೇಶ ರಾಜ್ಯದ ಧಾರ್ಮಿಕ ಪ್ರಮುಖರು ಪಾಲ್ಗೊಳ್ಳುತ್ತಾರೆ. ಅಯೋಧ್ಯಾ ರಾಮಮಂದಿರ ನಿರ್ಮಾಣದ ಚರ್ಚೆಯಾಗಲಿದೆ. ಅಸ್ಪೃಷ್ಯತೆ, ಗೋರಕ್ಷಣೆ, ಮತಾಂತರ ವಿಚಾರಗಳ ಬಗ್ಗೆ ವಿಚಾರ ಮಂಡನೆಯಾಗಲಿದೆ. ಧರ್ಮಸಂಸತ್ತಿನಲ್ಲಿ ಸಂತರೇ ಹಲವು ನಿರ್ಣಯ ಮಾಡಲಿದ್ದಾರೆ. ನ.26 ರಾಜ್ಯದ ಎಲ್ಲಾ ಜಾತಿ ಪ್ರಮುಖರು ಬರುತ್ತಾರೆ. ಈ ಕಾರ್ಯಕ್ರಮಕ್ಕೆ 3500 ಜಾತಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೂ ಧರ್ಮದ ಮೇಲಿನ ಆಕ್ರಮಣ ಹೆಚ್ಚಾಗಿದ್ದು, ಹಿಂದೂ ಧರ್ಮದ ಜನರಲ್ಲಿ ಜಾಗೃತಿ ನಡೆಯಲಿದೆ ಗೋಪಾಲ್ ತಿಳಿಸಿದರು.

    https://www.youtube.com/watch?v=9WT11xFPWIc

    https://www.youtube.com/watch?v=gMCRfdWRT8w

  • ಕುಡಿದ ಮತ್ತಿನಲ್ಲಿ ಬಿಲ್ ಕೇಳಿದ ಬಾರ್ ಮಾಲೀಕನಿಗೆ ಚಾಕುವಿನಿಂದ ಇರಿದ್ರು

    ಕುಡಿದ ಮತ್ತಿನಲ್ಲಿ ಬಿಲ್ ಕೇಳಿದ ಬಾರ್ ಮಾಲೀಕನಿಗೆ ಚಾಕುವಿನಿಂದ ಇರಿದ್ರು

    ಉಡುಪಿ: ಕುಡಿದ ಮತ್ತಿನಲ್ಲಿ ಬಾರ್ ಮಾಲೀಕನ ಜೊತೆ ಜಗಳವಾಡಿ ಚಾಕುವಿನಿಂದ ಇರಿದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ನಗರದ ಬೈಲಕೆರೆಯ ಮೂರು ಮಂದಿ ಯುವಕರು ಪಂಚರತ್ನ ಪ್ಯಾರಡೈಸ್ ಬಾರ್ ಆಂಡ್ ರೆಸ್ಟೋರೆಂಟಿಗೆ ಬಂದಿದ್ದರು. ಕಂಠಪೂರ್ತಿ ಕುಡಿದು ಬಿಲ್ ಕೊಡದೆ ಹೊರಡಲು ನಿರ್ಧರಿಸಿದಾಗ ಮ್ಯಾನೇಜರ್ ಬೈದು ಹಣ ವಸೂಲಿ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಹಣ ಕೊಟ್ಟು ಅಲ್ಲಿಂದ ಎಲ್ಲರೂ ತೆರಳಿದ್ದಾರೆ. ನಂತರ ಒಂದು ಗಂಟೆ ಬಿಟ್ಟು ಲಾಂಗ್, ತಲವಾರುಗಳೊಂದಿಗೆ ಸ್ಥಳಕ್ಕೆ ಬಂದ ಆರೋಪಿಗಳು ಬಾರ್ ಓನರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ಸಮಯದಲ್ಲಿ ಕಿರಣ್ ಎಂಬಾತ ತನ್ನ ಕೈಯ್ಯಲ್ಲಿದ್ದ ಚಾಕುವಿನಿಂದ ಬಾರ್ ಓನರ್‍ಗೆ ಇರಿದಿದ್ದಾನೆ.

    ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಬೈಲಕೆರೆಯ ಸಂತೋಷ್, ಅನ್ವರ್ ಹಾಗೂ ಆತನ ನಾಲ್ವರು ಗೆಳೆಯರು ಎಂದು ಗುರುತಿಸಲಾಗಿದೆ. ಬಾರ್ ಓನರ್ ಗೆ ಚಾಕುವಿನಿಂದ ಇರಿಯುತ್ತಿದ್ದಂತೆ, ಬಾರ್ ನಲ್ಲಿದ್ದ ಕೆಲಸಗಾರರು ಕಿರಣ್ ಮತ್ತು ಅನ್ವರ್‍ಗೆ ಮನಬಂದಂತೆ ವಿಕೆಟ್, ಹಾಕಿ ಸ್ಟಿಕ್‍ನಿಂದ ಹೊಡೆದಿದ್ದಾರೆ. ಘಟನೆಯಲ್ಲಿ ಬಾರ್ ಮಾಲೀಕ ಸಂತೋಷ್ ಶೆಟ್ಟಿ, ತಲ್ವಾರ್ ಬೀಸಿದ ಕಿರಣ್ ಮತ್ತು ಅನ್ವರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಘಟನೆಯ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.