Tag: ಉಡುಪಿ

  • ಕಾರ್ಕಳದ ಮದೀನಾ ಮಸೀದಿಯಿಂದ 32 ವಿದ್ಯಾರ್ಥಿಗಳ ಜೊತೆ ಧರ್ಮಗುರು ಎಸ್ಕೇಪ್!

    ಕಾರ್ಕಳದ ಮದೀನಾ ಮಸೀದಿಯಿಂದ 32 ವಿದ್ಯಾರ್ಥಿಗಳ ಜೊತೆ ಧರ್ಮಗುರು ಎಸ್ಕೇಪ್!

    ಉಡುಪಿ: ವಿದ್ಯಾರ್ಥಿಗಳ ಜೊತೆ ಧರ್ಮಗುರು ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮದೀನಾ ಮಸೀದಿಯಲ್ಲಿ ನಡೆದಿದೆ.

    ಧಾರ್ಮಿಕ ವಿದ್ಯಾಭ್ಯಾಸಕ್ಕೆ ಬಿಹಾರದಿಂದ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಮೂವತ್ತೆರಡು ವಿದ್ಯಾರ್ಥಿಗಳು ಬಂದಿದ್ದರು. ಧರ್ಮಗುರು ತೈಯ್ಯಬ್ ಕೂಡಾ ಮೂಲತಃ ಬಿಹಾರ ರಾಜ್ಯದವನು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮದೀನಾ ಮಸೀದಿಯಲ್ಲಿ ಈ ಘಟನೆ ನಡೆದಿದೆ.

    ಬಿಹಾರ ಮೂಲದ ತೈಯ್ಯಬ್ ಐದು ವರ್ಷದ ಹಿಂದೆ ಮದೀನ ಮಸೀದಿಗೆ ಸಹಾಯಕ ಧರ್ಮಗುರುವಾಗಿ ನೇಮಕವಾಗಿದ್ದ. ಕಳೆದ ಐದು ವರ್ಷದಿಂದ ಹಂತ ಹಂತವಾಗಿ ಸುಮಾರು ಮೂವತ್ತು ಮಂದಿ ಬಿಹಾರ ಮೂಲದ ಮಕ್ಕಳನ್ನು ಧಾರ್ಮಿಕ ಶಿಕ್ಷಣಕ್ಕಾಗಿ ಉಡುಪಿಗೆ ಕರೆ ತಂದಿದ್ದ. ಕೆಲ ದಿನಗಳಿಂದ ಮಸೀದಿಯ ಆಡಳಿತ ಮಂಡಳಿ ಮತ್ತು ತೈಯಬ್ ನಡುವೆ ಆಂತರಿಕ ಕಲಹ ಏರ್ಪಟ್ಟಿತ್ತು. ಕಮಿಟಿಯ ಜೊತೆ ವೈಮನಸ್ಸು ನಡೆದಿತ್ತು. ಕಳೆದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಟೆಂಪೋ ಟ್ರಾವೆಲ್ಲರ್ ಮೂಲಕ 32 ಮಂದಿ ವಿದ್ಯಾರ್ಥಿಗಳನ್ನು ತೈಯ್ಯಬ್ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

    ಟಿಟಿ ವಾಹನ ಕಾರ್ಕಳದಿಂದ ಹೊರಟು ಕುಂದಾಪುರ ಕಡೆಗೆ ತೆರಳಿತ್ತು ಎಂಬ ಮಾಹಿತಿ ಇದೆ. ಮೂವತ್ತೆರಡು ಮಂದಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ಕೊಡುವುದರ ಜೊತೆಗೆ ಪಕ್ಕದಲ್ಲಿರುವ ಸಭಾಂಗಣದ ಮೇಲ್ವಿಚಾರಣೆಯನ್ನು ನೋಡುತ್ತಿದ್ದನು. ಇದರ ಜೊತೆ ಮದೀನಾ ಮಸೀದಿಯಲ್ಲಿ ಐದು ಬಾರಿ ಧ್ವನಿವರ್ಧಕದಲ್ಲಿ ನಮಾಜ್ ಮಾಡುವ ಕೆಲಸಕ್ಕೂ ನೇಮಕಗೊಂಡಿದ್ದ.

    ಮಸೀದಿ ಆಡಳಿತ ಮಂಡಳಿ ಕಾರ್ಕಳ ನಗರ ಠಾಣೆಗೆ ಪ್ರಕರಣವನ್ನು ಗಮನಕ್ಕೆ ತಂದಿದೆ. ತೈಯ್ಯಬ್ ವಿರುದ್ಧ ದೂರು ದಾಖಲಾಗಿದೆ.

  • ಸರ್ಕಾರಿ ಆಸ್ಪತ್ರೆಯಿಂದ್ಲೂ ರೋಗಿಗಳು ಶಿಫ್ಟ್- ಕೆಎಂಸಿಯಲ್ಲಿ ಮಾತ್ರ ಎಮರ್ಜೆನ್ಸಿ ಟ್ರೀಟ್‍ಮೆಂಟ್

    ಸರ್ಕಾರಿ ಆಸ್ಪತ್ರೆಯಿಂದ್ಲೂ ರೋಗಿಗಳು ಶಿಫ್ಟ್- ಕೆಎಂಸಿಯಲ್ಲಿ ಮಾತ್ರ ಎಮರ್ಜೆನ್ಸಿ ಟ್ರೀಟ್‍ಮೆಂಟ್

    ಉಡುಪಿ: ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಉಡುಪಿ ಜಿಲ್ಲೆಯ 35ಕ್ಕೆ ಹೆಚ್ಚು ಪ್ರಮುಖ ಖಾಸಗಿ ಆಸ್ಪತ್ರೆಗಳು ಎಮರ್ಜೆನ್ಸಿಯನ್ನೂ ಬಂದ್ ಮಾಡಿದೆ. ಒಪಿಡಿಗಳಲ್ಲೂ ಟ್ರೀಟ್‍ಮೆಂಟ್ ಸಿಗುತ್ತಿಲ್ಲ. ಸಾವಿರಕ್ಕೂ ಮಿಕ್ಕಿ ಕ್ಲಿನಿಕ್‍ಗಳು ಮುಚ್ಚಿದೆ. ಈ ನಡುವೆ ಮಣಿಪಾಲ ಕೆಎಂಸಿ ಆಸ್ಪತ್ರೆ ರೋಗಿಗಳಿಗೆ ತುರ್ತು ಚಿಕಿಕಿತ್ಸೆ ಮಾಡುತ್ತಿದೆ.

    ಹೊರ ಜಿಲ್ಲೆ- ಹೊರ ರಾಜ್ಯಗಳಿಂದ ಬರುವ ಪೇಷಂಟ್‍ಗಳಿಗೆ ಕೆಎಂಸಿಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಿಂದಲೂ ಗಂಭೀರವಾಗಿರುವ ರೋಗಿಗಳನ್ನು ಕೆಎಂಸಿಗೆ ರವಾನೆ ಮಾಡಲಾಗುತ್ತಿದೆ. ಆಸ್ಪತ್ರೆಯ ಒಪಿಡಿ ಮಾತ್ರ ಇಂದು ರೋಗಿಗಳು ಇಲ್ಲದೆ ಖಾಲಿಯಾಗಿತ್ತು. ಹೊರ ರಾಜ್ಯದಿಂದ ಬರುವ ಪೇಷಂಟ್‍ಗಳು ಮಾಹಿತಿಯಿಲ್ಲದೆ ಪರದಾಡುವಂತಾಗಿದೆ.

    ಮುಷ್ಕರದಲ್ಲಿ ನಾವೂ ಪಾಲ್ಗೊಂಡಿದ್ದೇವೆ. ತುರ್ತು ಮತ್ತು ಅಪಘಾತ ಚಿಕಿತ್ಸೆ ಕೊಡುತ್ತಿದ್ದೇವೆ. ಬೆಳಗ್ಗೆಯಿಂದ ತುಂಬಾ ರೋಗಿಗಳು ಆಸ್ಪತ್ರ¬ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನ ಹಿಂದೆಯೇ ಆಸ್ಪತ್ರೆಯಲ್ಲಿ, ಬಸ್ಸುಗಳಲ್ಲಿ, ಎಲ್ಲಾ ಜಿಲ್ಲೆಗಳ ಇನ್ಫಾರ್ಮೆಷನ್ ಸೆಂಟರ್‍ಗಳಲ್ಲಿ ಕೆಎಂಸಿ ಬಂದ್ ಇರುವ ಬಗ್ಗೆ ಮಾಹಿತಿ ಪ್ರಚಾರ ಮಾಡಿದ್ದೆವು. ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರ ಮೂಲಕ ಬಂದ್ ಇರುವ ಬಗ್ಗೆ ಪ್ರಚಾರ ಕೊಟ್ಟಿದ್ದೆವು. ಈ ಹಿಂದೆ ಅಡ್ಮಿಟಾದ- ಪೇಷಂಟ್‍ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವರ್ಷಪೂರ್ತಿ ನಾವು ಸೇವೆ ಮಾಡುತ್ತೇವೆ. ನಮ್ಮ ನೋವನ್ನು ಸರ್ಕಾರ ಕೇಳಬೇಕು, ಎಂದು ಕೆಎಂಸಿ ಮಣಿಪಾಲ್ ಹಿರಿಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹೇಳಿದರು.

    ಮಣಿಪಾಲ ಕೆಎಂಸಿಯ ಒಪಿಡಿ ಕೂಡಾ ಬಿಕೋ ಅನ್ನುತ್ತಿತ್ತು. ಪ್ರತಿಭಟನೆಯ ಮಾಹಿತಿಯಿಲ್ಲದವರು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದು ಹೋಗಿದ್ದಾರೆ. ಕೇರಳದಿಂದ ಕೂಡಾ ರೋಗಿಗಳು ಒಪಿಡಿಗೆ ಬಂದಿದ್ದರು. ನಾಳೆ ಬೆಳಗ್ಗೆ ಚಿಕಿತ್ಸೆ ನೀಡುವುದಾಗಿ ಹೇಳಿ ವೈದ್ಯರು ಸೆಕ್ಯೂರಿಟಿ ಗಾರ್ಡ್‍ಗಳನ್ನು ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಣಿಪಾಲ ಕೆಎಂಸಿ ಹಿರಿಯ ವೈದ್ಯ ಡಾ. ಪದ್ಮರಾಜ ಹೆಗ್ಡೆ, ಎಲ್ಲರಿಗೂ ಎಮರ್ಜೆನ್ಸಿ ಟ್ರೀಟ್ ಮೆಂಟ್ ಕೊಟ್ಟಿದ್ದೇವೆ. ಎರಡ್ಮೂರು ಪೇಷಂಟ್ ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದಾರೆ. ಬೈಂದೂರು- ಕುಂದಾಪುರದಿಂದ ಅಪಘಾತದ ಪ್ರಕರಣಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. 24 ಗಂಟೆಯೂ ಆಸ್ಪತ್ರೆಯ ಎಮರ್ಜೆನ್ಸಿ ಓಪನ್ ಇರ್ತದೆ. ಹೆಚ್ಚುವರಿ ವೈದ್ಯರು- ನರ್ಸ್- ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

  • ಒಂದೇ ದೇವರಿಗೆ 2 ಹೆಸರು, ವಿವಾದ ಹುಟ್ಟುಹಾಕಿದ ಉಡುಪಿಯ ದೇಗುಲ!

    ಒಂದೇ ದೇವರಿಗೆ 2 ಹೆಸರು, ವಿವಾದ ಹುಟ್ಟುಹಾಕಿದ ಉಡುಪಿಯ ದೇಗುಲ!

    ಉಡುಪಿ: ದೇವನೊಬ್ಬ ನಾಮ ಹಲವು ಎಂಬ ಮಾತಿದೆ. ಆದರೆ ಉಡುಪಿಯ ಇತಿಹಾಸ ಪ್ರಸಿದ್ಧ ದೇಗುಲ ಇದೀಗ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದೆ.

    ಉಡುಪಿಯ ಶ್ರೀಕೃಷ್ಣಮಠದ ರಥಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ದೇವಸ್ಥಾನ ಈಗ ವೈಷ್ಣವರು ಮತ್ತು ಶೈವರ ಕಿತ್ತಾಟಕ್ಕೆ ಕಾರಣವಾಗಿದೆ. ದೇಗುಲದ ಹೊರಗೆ ಅನಂತೇಶ್ವರ ದೇಗುಲ ಎಂದು ಬೋರ್ಡ್ ಇದ್ದರೆ, ಒಳಗೆ ಅನಂತಾಸನ ದೇಗುಲ ಎಂಬ ಬೋರ್ಡ್ ಇದೆ. ಅನಂತೇಶ್ವರ ಅಂದರೆ ಶಿವ. ಅನಂತಾಸನ ಅಂದರೆ ವಿಷ್ಣು. ಹೀಗಾಗಿ ಗರ್ಭಗುಡಿಯಲ್ಲಿರೋದು ಶಿವನ ವಿಗ್ರಹ ಅಂತಾ ಶೈವರು ವಾದಿಸಿದರೆ, ವೈಷ್ಣವರು ವಿಷ್ಣು ವಿಗ್ರಹ ಎಂದು ಹೇಳುತ್ತಿದ್ದಾರೆ.

    800 ವರ್ಷಗಳ ಹಿಂದೆ ತುಳುನಾಡು ಸೃಷ್ಟಿಸಿದ ಪರಶುರಾಮರನ್ನು ಲಿಂಗರೂಪಿಯಾಗಿ ರಜತಪೀಠದಲ್ಲಿ ಸ್ಥಾಪಿಸಿ ದೇವಸ್ಥಾನ ಕಟ್ಟಿಸಲಾಗಿತ್ತು. ನಂತರದಲ್ಲಿ ಮಧ್ವಾಚಾರ್ಯರ ತಂದೆ-ತಾಯಿ ಈ ದೇವಸ್ಥಾನದಲ್ಲಿ ವಿಷ್ಣುವಿನ ಸಾನಿಧ್ಯವಿದೆ ಎಂದು ಪೂಜೆ ಮಾಡಿದ್ದರು. ದ್ವೈತ ಮತದ ಸ್ಥಾಪಕ ಮಧ್ವಾಚಾರ್ಯರೂ ಅದನ್ನೇ ಮುಂದುವರೆಸಿದ್ದರು.

    ಅಷ್ಠಮಠಗಳ ಪೈಕಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ದೇವಸ್ಥಾನದ ಆಡಳಿತ ಮುಕ್ತೇಸರರಾಗಿರುವುದರಿಂದ ಪುತ್ತಿಗೆ ಶ್ರೀಗಳಿಗೆ ಈ ವಿವಾದ ಸುತ್ತಿಕೊಂಡಿದೆ.

  • ಶಾನುಭಾಗ್ ಹೇಳುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡಲು ಸಾಧ್ಯವಿಲ್ಲ: ಸಚಿವ ಪ್ರಮೋದ್ ಮಧ್ವರಾಜ್

    ಶಾನುಭಾಗ್ ಹೇಳುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡಲು ಸಾಧ್ಯವಿಲ್ಲ: ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ಕನ್ನಡ ರಾಜೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ ಸಮಾಜ ಸೇವಕ- ಮಾನವ ಹಕ್ಕುಗಳ ಹೋರಾಟಗಾರ, ಪಬ್ಲಿಕ್ ಹೀರೋ ಡಾ. ರವೀಂದ್ರನಾಥ ಶಾನುಭಾಗ್ ಅವರ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಲಘುವಾಗಿ ಮಾತನಾಡಿದ್ದಾರೆ.

    ಶಾನುಭಾಗ್ ಅವರು ತಮ್ಮ ಸಮಾಜ ಸೇವ ಕಾರ್ಯಗಳು ನಿರಿಕ್ಷೀತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಮಕ್ಕಳೂ ಹಿರಿಯ ನಾಗರೀಕರು ಇಂದಿಗೂ ತಮ್ಮ ಅಸಹಾಯಕತೆಯಿಂದ ನನ್ನ ಬಳಿ ಬರುತ್ತಾರೆ. ಸರ್ಕಾರವು ತನ್ನ ಕಾರ್ಯವನ್ನು ಸರಿಯಾಗಿ ನಡೆಸಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ರಾಜ್ಯಸರ್ಕಾರದ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.

    ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು, ಶಾನುಭಾಗ್ ಹೇಳುವ ಕೆಲಸಗಳನ್ನೆಲ್ಲ ಮಾಡಲು ಸಾಧ್ಯವಿಲ್ಲ. ಶಾನುಭಾಗ್ ಅವರ ವೇಗಕ್ಕೆ ಕೆಲಸ ಮಾಡುವಷ್ಟು ಸ್ಪೀಡ್ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಇಲ್ಲ ಅಂತ ಹೇಳುವ ಮೂಲಕ ಸರ್ಕಾರದ ಕೆಲಸ ತುಂಬಾ ನಿಧಾನ ಅಂತ ಒಪ್ಪಿಕೊಂಡರು.

    ಅಲ್ಲದೇ ಸರ್ಕಾರ ಕೊಟ್ಟ ಪ್ರಶಸ್ತಿಯನ್ನು ತಿರಸ್ಕರಿಸಿದ್ದು ಅವರ ಗುಣದ ಪ್ರತಿಬಿಂಬ. ಡಾ. ರವೀಂದ್ರನಾಥ್ ಶಾನುಭಾಗ್ ಅವರು ಸ್ವಲ್ಪ ತಾಳ್ಮೆಯನ್ನು ರೂಢಿಸಿಕೊಳ್ಳಬೇಕು ಸಚಿವ ಪ್ರಮೋದ್ ಮಧ್ವರಾಜ್ ಸಲಹೆ ನೀಡಿದರು.

     

  • ಲೈವ್ ಸೂಸೈಡ್: ಹಾಲು ಕುಡ್ದ ಮಕ್ಕಳೇ ಬದುಕಲ್ಲ ಎಂದು ಹಾಡಿ ಕಂಠಪೂರ್ತಿ ಕುಡಿದು ನದಿಗೆ ಹಾರಿದ

    ಲೈವ್ ಸೂಸೈಡ್: ಹಾಲು ಕುಡ್ದ ಮಕ್ಕಳೇ ಬದುಕಲ್ಲ ಎಂದು ಹಾಡಿ ಕಂಠಪೂರ್ತಿ ಕುಡಿದು ನದಿಗೆ ಹಾರಿದ

    ಉಡುಪಿ: ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಕುಡ್ದೋರ್ ಉಳಿತಾರಾ… ಎಂಬ ಸಾಂಗ್ ಹಾಡಿಕೊಂಡು ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ರೈಲ್ವೆ ಬ್ರಿಡ್ಜ್ ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಕ್ಕುಂಜೆಯ ಪೆರಂಪಳ್ಳಿ ರೈಲ್ವೆ ಸೇತುವೆ ಬಳಿ ನಡೆದಿದೆ.

    ಹುಬ್ಬಳ್ಳಿ ಮೂಲದ ಕಾಪು ನಿವಾಸಿ ಸಾದಿಕ್, ಎಣ್ಣೆ ಹಾಡು ಹಾಡುತ್ತಲೇ ಸ್ವರ್ಣ ನದಿಗೆ ಜಿಗಿದು ಕುಡಿದ ಮತ್ತಿನಲ್ಲಿ ಈಜಲಾಗದೇ ಸಾವನ್ನಪ್ಪಿದ ಯುವಕ.

    ಪೆರಂಪಳ್ಳಿ ರೈಲ್ವೇ ಪಟ್ಟಿಯ ಕೆಳಗೆ ಇರುವ ಪಿಲ್ಲರ್ ನ ಮೇಲೆ ಯುವಕರ ತಂಡವೊಂದು ಕುಳಿತು ಪಾರ್ಟಿ ಮಾಡುತ್ತಿದ್ದರು. ಮನಸೋ ಇಚ್ಛೆ ಬಂದಂತೆ ಕುಡಿದು ಮೋಜು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಾದಿಕ್ ಎಂಬ ಯುವಕ ಕಂಠಪೂರ್ತಿ ಕುಡಿದು ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಕುಡ್ದೋರ್ ಉಳಿತಾರಾ ಎಂಬ ಹಾಡು ಹಾಡ್ತಾ ಹಾಡ್ತಾ ನೋಡ ನೋಡುತ್ತಿದ್ದಂತೆ ಸ್ವರ್ಣ ನದಿಗೆ ಜಿಗಿದಿದ್ದಾನೆ.

    ಸಾದಿಕ್‍ನನ್ನು ರಕ್ಷಿಸಲು ಜೊತೆಗಿದ್ದ ಸಿಯಾನ್ ಎಂಬ ಯುವಕ ತಕ್ಷಣ ನದಿಗೆ ಹಾರಿದ್ದಾನೆ. ಆದರೆ ಸಾದಿಕ್‍ನನ್ನು ರಕ್ಷಿಸಲು ಸಾಧ್ಯವಾಗದೇ ಅಸ್ವಸ್ಥಗೊಂಡಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಗೆಳೆಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಈ ಸಂಬಂಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯುವಕರ ಮೋಜುಮಸ್ತಿ ಮಿತಿ ಮೀರಿದ್ದು, ಕುಡಿತ ಮತ್ತು ಗಾಂಜಾ ಸೇವಿಸಲು ಬಂದಿರಬಹುದು ಎಂದು ಶಂಕಿಸಲಾಗಿದೆ. ಅಷ್ಟೇ ಅಲ್ಲದೇ ಸಾದಿಕ್ ನದಿಗೆ ಹಾರುವ ಮೊದಲು ಹಗ್ಗಕಟ್ಟಿ ಸೇತುವೆಯಿಂದ ಕೆಳಗಿಳಿಯುವ ಯೋಚನೆಯನ್ನು ಕೂಡ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಸ್ವರ್ಗ ಕೊಟ್ರೂ ನನಗೆ ಬೇಡ: ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದ ಡಾ. ರವೀಂದ್ರನಾಥ ಶಾನುಭಾಗ್

    ಸ್ವರ್ಗ ಕೊಟ್ರೂ ನನಗೆ ಬೇಡ: ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದ ಡಾ. ರವೀಂದ್ರನಾಥ ಶಾನುಭಾಗ್

    ಉಡುಪಿ: ನಾನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಉಡುಪಿಯ ಸಮಾಜಸೇವಕ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

    ಕಳೆದ ರಾತ್ರಿ ನನಗೆ ಅಧಿಕೃತವಾಗಿರಲಿಲ್ಲ. ಇಂದು ಅಧಿಕೃತವಾಗಿದೆ. ನನಗೆ ನನ್ನ ಸಮಾಜಸೇವೆ ತೃಪ್ತಿ ಆಗಿಲ್ಲ. ನೊಂದ ಜೀವಗಳ ಕಣ್ಣೀರು ಕಣ್ಣಮುಂದೆ ಸುರಿಯುತ್ತಿರುವಾಗ ನಾನು ಯಾವ ಪುರುಷಾರ್ಥಕ್ಕೆ ಪ್ರಶಸ್ತಿ ಸ್ವೀಕರಿಸಲಿ? ಎಂದು ಸರ್ಕಾರಕ್ಕೆ ಡಾ. ಶಾನುಭಾಗ್ ಪ್ರಶ್ನೆ ಮಾಡಿದ್ದಾರೆ.

    ಕರಾವಳಿಯ ಮೂರು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ನೂರಾರು ಮಕ್ಕಳ ನೊಂದಣಿ ಕೂಡಾ ಆಗಿಲ್ಲ. ಉಡುಪಿ ಜಿಲ್ಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಡೇ ಕೇರ್ ಸೆಂಟರ್ ಕೂಡಾ ನಿರ್ಮಾಣವಾಗಿಲ್ಲ. ಎಂಡೋಸಲ್ಫಾನ್ ಪೀಡಿತರು ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವಾಗ ಹಾಗೂ ಹಿರಿಯ ನಾಗರೀಕರು ಪ್ರತಿನಿತ್ಯ ಕಣ್ಣೀರಿಡುತ್ತಿರುವಾಗ ನಾನು ಈ ಪ್ರಶಸ್ತಿ ಸ್ವೀಕರಿಸಿದರೆ ಅವರ ಮುಖದಲ್ಲಿ ನಗು ಕಾಣಲು ಹೇಗೆ ಸಾಧ್ಯ ಎಂದು ಉತ್ತರಿಸಲಾಗದ ಪ್ರಶ್ನೆ ಹಾಕಿದ್ದಾರೆ.

    ಜನ ಹಗ್ಗ ತೆಗೆದುಕೊಳ್ಳುವಾಗ ನಾನು ಪ್ರಶಸ್ತಿ ತೆಗೆದುಕೊಳ್ಳಲೇ?: ನಾನು ಎಷ್ಟು ಸಮಾಜಸೇವೆ ಮಾಡಿದ್ದೇನೆ ಎಂಬುದು ಮುಖ್ಯವಲ್ಲ. ಹಿರಿಯ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ನನ್ನ ಬಳಿ ಬರುತ್ತಾ ಇದ್ದಾರೆ. ಕೈಹಿಡಿದು ಕಣ್ಣೀರಿಡುತ್ತಿದ್ದಾರೆ. ಯಾರಿಗಾಗಿ, ಏತಕ್ಕಾಗಿ ಈ ಪ್ರಶಸ್ತಿ ಸ್ವೀಕಾರ ಮಾಡಲಿ? ಅಸಂಖ್ಯ ಅರ್ಜಿಗಳು ಬರುತ್ತಿದೆ. ಈ ನಡುವೆ ಪ್ರಶಸ್ತಿ ನನಗೆ ಬೇಕಾ? ಸರ್ಕಾರ ಹಿರಿಯ ನಾಗರೀಕರ ಕಾನೂನನ್ನು ಪಾಲಿಸದೆ ಗಾಳಿಗೆ ತೂರಿದೆ. ಎಂಟು ಜನ ಹಿರಿಯ ನಾಗರೀಕರು ನ್ಯಾಯ ಸಿಗುವ ಮೊದಲೇ ಸತ್ತು ಹೋಗಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ನಾನು ಅವರ ಆತ್ಮಕ್ಕೆ ಅವಮಾನ ಮಾಡಬೇಕಾ ಎಂದು ಪ್ರಶ್ನೆ ಮಾಡಿದರು.

    ಐಎಎಸ್ ಅಧಿಕಾರಿಗಳ ಉದ್ಧಟತನ: ರಾಜ್ಯದಲ್ಲಿ ಜಗದೀಶ್, ಡಾ. ವಿಶಾಲ್ ನಂತಹ ಉದ್ಧಟತನದ ಐಎಎಸ್ ಅಧಿಕಾರಿಗಳ ನಡುವೆ ನನಗೆ ಯಾವ ಪ್ರಶಸ್ತಿಯೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆ ಉಮಾಶ್ರೀ ನನ್ನ ಒಂದು ಪತ್ರಕ್ಕೂ ಉತ್ತರಿಸುವುದು ಬೇಡ. ನೊಂದ ಸಂತ್ರಸ್ಥರಿಗಾದರೂ ಉತ್ತರಿಸುವ ಕನಿಷ್ಟ ಸೌಜನ್ಯವನ್ನೂ ಇಟ್ಟುಕೊಂಡಿಲ್ಲವಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿನಿತ್ಯ ಹೆಣ್ಣುಮಕ್ಕಳ ಮಾನವಕಳ್ಳಸಾಗಣೆ ನಡೆಯುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರಗಳ ಸರಮಾಲೆ ಬರೆದು ವರ್ಷ ಕಳೆಯಿತು. ಉತ್ತರವೂ ಇಲ್ಲ, ಸಮಸ್ಯೆಯೂ ಪರಿಹಾರವಾಗಿಲ್ಲ. ಎಂಡೋಸಲ್ಫಾನ್ ವಿಚಾರದಲ್ಲಿ ಉಡುಪಿಯ ಡಿಸಿಯಾಗಿದ್ದ ಆರ್ ವಿಶಾಲ್ ನಿಮಗೆಲ್ಲ ಈ ಉಸಾಬರಿ ಯಾಕೆ ಎಂದು ಪ್ರಶ್ನೆ ಮಾಡಿದರು.

    ಟೈಂ ವೇಸ್ಟ್ ಮಾಡಬೇಡಿ: ಯಾರೂ ನನ್ನ ಮನವೊಲಿಸಬೇಡಿ. ಸಂತ್ರಸ್ಥರ ಕಣ್ಣೀರು ಒರೆಸಲು ಸಾಧ್ಯವಾದ್ರೆ ಅದನ್ನು ಮಾಡಿ. ಮಾನವ ಕಳ್ಳಸಾಗಣೆ ನಿಲ್ಲಿಸಿ, ಎಂಡೋಸಲ್ಫಾನ್ ಸಂತ್ರಸ್ಥರ ಕಣ್ಣೀರು ಒರೆಸಿ, ಹಿರಿಯ ನಾಗರೀಕರನ್ನು ಸಾಯುವ ತನಕ ಬದುಕಲು ಬಿಡಿ. ಅಧಿಕಾರಿಗಳಿಗೆ, ಮಂತ್ರಿಗಳಿಗೆ ಕಾನೂನು ಪಾಲಿಸಲೂ ಗೊತ್ತಿಲ್ಲ. ಮಾನವೀಯತೆ ಅಂತೂ ಇಲ್ಲವೇ ಇಲ್ಲ. ನನ್ನದು ಉದ್ಧಟತನವೂ ಅಲ್ಲ, ಪ್ರಶಸ್ತಿಗೆ ಮಾಡುತ್ತಿರುವ ಅಗೌರವವೂ ಅಲ್ಲ. ಸಂತ್ರಸ್ಥರ ಕಣ್ಣೀರೊರೆಸುವ ಕೆಲಸದಲ್ಲೇ ನಾನು ಪ್ರಶಸ್ತಿಯ ಖುಷಿಯನ್ನು ಪಡೆಯುತ್ತೇನೆ ಎಂದು ಡಾ. ರವೀಂದ್ರನಾಥ ಶಾನುಭಾಗ್ ಸ್ಪಷ್ಟಪಡಿಸಿದರು.

    ಸ್ವರ್ಗ ಕೊಟ್ಟರೂ ಬೇಡ: ಪ್ರಶಸ್ತಿ ಜೊತೆ ಒಂದು ಲಕ್ಷ, ಒಂದು ಕೋಟಿ, ಬಂಗಾರದ ಪದಕ ಬೇಡ. ನನಗೆ ಸ್ವರ್ಗ ಕೊಟ್ಟರೂ ಬೇಡ. ನನಗೆ ಒಂದು ನ್ಯಾಯ ಕೊಡಿ. ನನ್ನ ಸಮಾಜ ಸೇವೆ ಪೂರ್ತಿಯಾಗಿಲ್ಲ. ಪೂರ್ತಿಯಾಗಲು ಜನಪ್ರತಿನಿಧಿಗಳು ಬಿಡುವುದಿಲ್ಲ. ಓಟು ಬೇಡಿದವರ ಬಳಿ ಜನ ನ್ಯಾಯ ಬೇಡುತ್ತಿದ್ದಾರೆ. ಇಂತಹ ಪರಿಸ್ಥಿತಿ ದೇಶದಲ್ಲಿ, ರಾಜ್ಯದಲ್ಲಿ ಇದೆ ಅನ್ನೋದು ನಾಚಿಕೆಗೇಡಿನ ವಿಚಾರ ಎಂದು ಖೇದ ವ್ಯಕ್ತಪಡಿಸಿದ್ರು.

    ಪ್ರಚಾರದ ಅಗತ್ಯವಿಲ್ಲ: ನನಗೆ ಪ್ರಶಸ್ತಿ ತಿರಸ್ಕಾರ ಮಾಡುವ ಮೂಲಕ ಭಾರೀ ಪ್ರಚಾರ ಸಿಗುತ್ತದೆ ಎಂಬ ಉದ್ದೇಶವಂತೂ ಇಲ್ಲವೇ ಇಲ್ಲ. ಹೆಸರು ಮಾಡಬೇಕೆಂದು ಹೀಗೆ ಮಾಡುತ್ತಿಲ್ಲ. ಈ ಮೂಲಕವಾದರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜ್ಞಾನೋದಯ ಆದ್ರೆ ಆಗಲಿ. ಜಾಗೃತಿ ಮೂಡಿದ್ರೆ ಮೂಡಲಿ. ಸಾಗರದಲ್ಲಿ ಒಂದೂವರೆ ಸಾವಿರ ಎಕ್ರೆ ಕಾಡನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ನಾಶ ಮಾಡುತ್ತಿದ್ದಾರೆ. ಇಂತದ್ದೆಲ್ಲ ಘಟನೆ ಕಣ್ಣಮುಂದೆ ನಡೆಯುತ್ತಿರುವಾಗ ನಾನು ಪ್ರಶಸ್ತಿ ಸ್ವೀಕರಿಸುವುದರಲ್ಲಿ ಏನು ಅರ್ಥವಿದೆ ಎಂದು ತನ್ನ ನಿಲುವನ್ನು ವ್ಯಕ್ತಪಡಿಸಿದರು.

    https://www.youtube.com/watch?v=mUP-1N8wHHE

  • ವಾಟ್ಸಪ್ ಅಡ್ಮಿನ್‍ಗಳೇ ಹುಷಾರ್! ನೀವು ಅಡ್ಮಿನ್‍ಗಳಾಗಿರುವ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದ್ರೆ ಈ ಸ್ಟೋರಿ ಓದಿ

    ವಾಟ್ಸಪ್ ಅಡ್ಮಿನ್‍ಗಳೇ ಹುಷಾರ್! ನೀವು ಅಡ್ಮಿನ್‍ಗಳಾಗಿರುವ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದ್ರೆ ಈ ಸ್ಟೋರಿ ಓದಿ

    ಉಡುಪಿ: ವಾಟ್ಸಪ್ ಅಡ್ಮಿನ್‍ಗಳೇ ನಿಮ್ಮ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದೆಯಾ, ನೀವು ಸ್ವಲ್ಪ ಜಾಗ್ರತೆ ವಹಿಸೋದು ಒಳ್ಳೆಯದು. ಸ್ವಲ್ಪ ಯಾಮಾರಿದ್ರೂ ನಿಮಗೆ ಏಟು ಬೀಳುತ್ತೆ ಹುಷಾರು.

    ಹೌದು. ಉಡುಪಿ ಜಿಲ್ಲೆ ಕಾರ್ಕಳದಲ್ಲಿ ವಾಟ್ಸಪ್ ಕಲಹ ಬೀದಿ ರಂಪಾಟದಲ್ಲಿ ಅಂತ್ಯವಾಗಿದೆ. ಸಮಾನ ಮನಸ್ಕರು ಸೇರಿಕೊಂಡು `ಹೆಲ್ಪಿಂಗ್ ಫ್ರೆಂಡ್ಸ್’ ಅನ್ನೋ ವಾಟ್ಸಪ್ ಗ್ರೂಪ್ ಮಾಡಿದ್ರು. ನಂತರ ಕ್ರಮೇಣ ಎಲ್ಲಾ ಮನೋಧರ್ಮದವರೂ ಅದರಲ್ಲಿ ಸೇರಿಕೊಂಡಿದ್ದಾರೆ. ಈ ನಡುವೆ ಗ್ರೂಪ್‍ನಲ್ಲಿ ಪ್ರಸ್ತುತ ರಾಜಕೀಯ ವಿಷಯಗಳ ಬಗ್ಗೆ ಭಾರೀ ಚರ್ಚೆ ನಡೆದಿದೆ. ಕಾಲ ಕಳೆದಂತೆ ಈ ಗ್ರೂಪ್‍ನಲ್ಲಿ ಕಾಂಗ್ರೆಸ್-ಬಿಜೆಪಿ ಅಂತ ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ ಗ್ರೂಪ್ ಹೆಸರನ್ನು `ಹೆಲ್ಪಿಂಗ್ ಫ್ರೆಂಡ್ಸ್’ ನಿಂದ `ಪೋಲಿಟಿಕಲ್ ಫೈಟರ್ಸ್’ ಅಂತ ಬದಲಾವಣೆ ಮಾಡಲಾಗಿದೆ.

    ಗ್ರೂಪ್ ನಲ್ಲಿ ಇತ್ತೀಚಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧಾಂತಗಳ ಕುರಿತು ಹಲವು ಬಾರಿ ಬಿರುಸಿನ ಚರ್ಚೆ ನಡೆದಿದೆ. ಗ್ರೂಪ್‍ನ ಸದಸ್ಯರಾಗಿರುವ ವಿಖ್ಯಾತ್ ಶೆಟ್ಟಿ ಅವರ ತಂದೆ ಬಗ್ಗೆ ಈ ಗ್ರೂಪ್‍ನಲ್ಲಿ ಕಾಂಗ್ರೆಸ್ ಒಲವಿನ ಕೆಲವು ಸದಸ್ಯರು ಟೀಕೆ ಮಾಡಿದ್ದಾರೆ. ಇದರಿಂದ ವೈಯ್ಯಕ್ತಿಕ ಚರ್ಚೆ ಆರಂಭವಾಗಿದೆ. ಮಾತಿನ ಚಕಮಕಿ ಜೋರಾಗಿ ವಿಖ್ಯಾತ್ ಶೆಟ್ಟಿ ಮತ್ತು ಕೃಷ್ಣ ಶೆಟ್ಟಿ ಎಂಬವರ ನಡುವೆ ಬಿಸಿಬಿಸಿ ಚ್ಯಾಟಿಂಗ್ ನಡೆದಿದ್ದು, ಕೊನೆಗೆ ಗಲಾಟೆ ಜೋರಾಗಿ ಹಲ್ಲೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದೆ.

    ವ್ಯಾಟ್ಸಪ್ ನಲ್ಲಿ ಆರಂಭವಾದ ಚರ್ಚೆಯಿಂದ ಕಾರ್ಕಳದ ಗುಮ್ಮಟ ಬೆಟ್ಟದ ಬಳಿ ಎರಡೂ ತಂಡ ಸೇರಿ ಹೊಡೆದಾಟ ಆರಂಭಿಸಿದೆ. ವಿಷಯ ತಿಳಿದು ಗಲಾಟೆ ತಪ್ಪಿಸಲು ಹೋದ ಗ್ರೂಪ್ ಅಡ್ಮಿನ್ ಅಮೃತೇಶ್ ಶೆಟ್ಟಿಗೆ, ವಿಖ್ಯಾತ್ ಮತ್ತು ತಂಡದವರು ಹಲ್ಲೆ ಮಾಡಿದ್ದಾರೆ. ಪ್ರಸ್ತುತ ಈ ಎರಡೂ ತಂಡಗಳು ಕಾರ್ಕಳ ಠಾಣೆಯಲ್ಲಿ ಪರಸ್ಪರ ದೂರು ನೀಡಿವೆ.

  • ವಿವಾದಿತ ಮೆರ್ಸೆಲ್ ಪರ ನಿಂತ ಖಳನಟ ಸಂಪತ್ ರಾಜ್

    ವಿವಾದಿತ ಮೆರ್ಸೆಲ್ ಪರ ನಿಂತ ಖಳನಟ ಸಂಪತ್ ರಾಜ್

    ಉಡುಪಿ: ತಮಿಳು ನಟ ಇಳಯ ದಳಪತಿ ವಿಜಯ್ ಅಭಿನಯದ ಮೆರ್ಸೆಲ್ ಚಿತ್ರ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ನಟನ ವಿಚಾರದಲ್ಲಿ ಜಾತಿ ಧರ್ಮ ಕೂಡಾ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜಕೀಯ ನುಸುಳಿ ದೊಡ್ಡ ಸುದ್ದಿಯಾಗಿದೆ. ಈ ನಡುವೆ ಬಹುಭಾಷಾ ಖಳನಟ ಸಂಪತ್ ರಾಜ್ ನಟ ವಿಜಯ್ ಪರ ಬ್ಯಾಟ್ ಬೀಸಿದ್ದಾರೆ.

    ಕ್ರಿಯೇಟಿವ್ ಫೀಲ್ಡ್ ಸಿನೆಮಾವನ್ನು ಸಿನಿಮಾವಾಗಿ ಸ್ವೀಕರಿಸಬೇಕು. ಚಿತ್ರಕಥೆಯನ್ನು ನಿಜ ಜೀವನಕ್ಕೆ ಅಳವಡಿಸಿದರೆ ತೊಂದರೆ ಹೆಚ್ಚು ಎಂದರು. ಬಣ್ಣ ಹಚ್ಚುವ ಕಲಾವಿದನಿಗೆ ಜಾತಿ ಇಲ್ಲ, ನಾನು ಉತ್ತರ ಪ್ರದೇಶದಲ್ಲಿ ಹುಟ್ಟಿದವನು. ದೆಹಲಿಯಲ್ಲಿ ಬೆಳೆದು ಬೆಂಗಳೂರಲ್ಲಿ ನೆಲೆಸಿದ್ದೇನೆ. ಮದ್ರಾಸಿನಲ್ಲಿ ನಾನು ಹೆಚ್ಚು ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ಈವರೆಗೆ ಯಾರೂ ನನ್ನ ಜಾತಿ ಕೇಳಿಲ್ಲ. ಟೀಕೆಯನ್ನು ಹೇಗೆ ಸ್ವೀಕಾರ ಮಾಡುತ್ತೀರಿ ಅನ್ನೋದು ಮುಖ್ಯ. ಅದನ್ನು ಚಾಲೆಂಜಾಗಿ ಯಾಕೆ ತೆಗೆದುಕೊಳ್ಳಬಾರದು ಎಂದು ಪ್ರಶ್ನೆ ಮಾಡಿ ಮೋದಿ ಪರ ಬ್ಯಾಟ್ ಬೀಸಿ ತಮಿಳುನಾಡಿನ ಹೋರಾಟಗಾರರಿಗೆ ಟಾಂಗ್ ಕೊಟ್ಟರು.

    ಅನುಕ್ತ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರಕಥೆ ಹಿಡಿಸಿದ್ದರಿಂದ ನಾನು ಒಪ್ಪಿಕೊಂಡೆ. ಉಡುಪಿಯಲ್ಲೇ ಬಂದು ಸೆಟಲ್ ಆಗುವ ಮನಸ್ಸಿದೆ. ಇಲ್ಲಿ ಟ್ರಾಫಿಕ್ಕೂ ಇಲ್ಲ, ಡರ್ಟಿ ವೆದರೂ ಇಲ್ಲ, ಕರಾವಳಿಯ ವಾತಾವರಣ- ಫುಡ್ ನಂಗೆ ಇಷ್ಟ. ನನ್ನ ಅಪ್ಪ ಅಮ್ಮನ ಪುಣ್ಯದ ಫಲ, ಹೀಗಾಗಿ ಶ್ರೀಕೃಷ್ಣನ ದರ್ಶನ ಆಗಿದೆ.  ಎಲ್ಲರಿಗೂ ಒಳಿತು ಮಾಡು ಭಗವಂತನಲ್ಲಿ ಪ್ರಾರ್ಥಿಸಿದೆ ಎಂದು ಹೇಳಿದರು.

  • ಮನುಷ್ಯತ್ವವನ್ನೇ ಮರೆತ ಜನ- 20 ಕ್ಕೂ ಹೆಚ್ಚು ಮಂಗಗಳ ಮಾರಣಹೋಮ

    ಮನುಷ್ಯತ್ವವನ್ನೇ ಮರೆತ ಜನ- 20 ಕ್ಕೂ ಹೆಚ್ಚು ಮಂಗಗಳ ಮಾರಣಹೋಮ

    ಉಡುಪಿ: 20 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಿರುವ ಹೃದಯವಿದ್ರವಾಕ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೋಮೇಶ್ವರ ಬಳಿ ನಡೆದಿದೆ.

    ಬೇರೆ ಪ್ರದೇಶದಲ್ಲಿ ಮಂಗಗಳಿಗೆ ವಿಷಪ್ರಾಶನ ಮಾಡಿರುವ ದುಷ್ಕರ್ಮಿಗಳು, ನಾಲ್ಕು ಮೂಟೆಗಳಲ್ಲಿ ಮಂಗಗಳನ್ನು ತಂದು ಆಗುಂಬೆ ಘಾಟ್ ಎರಡನೇ ಸುತ್ತಿನಲ್ಲಿ ಎಸೆದು ಹೋಗಿದ್ದಾರೆ.

    ಮೂಕಪ್ರಾಣಿಗಳ ನರಳಾಟ ಕಂಡು ಮರುಗಿದ ಪ್ರವಾಸಿಗರು ತಕ್ಷಣ ಅವುಗಳಿಗೆ ನೀರು ಕುಡಿಸಿ ಆರೈಕೆ ಮಾಡಿದರಾದ್ರೂ, ಸ್ವಲ್ಪ ಸಮಯದಲ್ಲಿಯೇ ಮಂಗಗಳು ನರಳಿ ನರಳಿ ಸಾವನ್ನಪ್ಪಿವೆ.

    ಮಂಗಗಳು ತೋಟಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತವೆ ಎಂಬ ಕಾರಣದಿಂದ ತೋಟದ ಮಾಲೀಕರು ಮಂಗಗಳಿಗೆ ವಿಷಪ್ರಾಶನ ಮಾಡಿ ಇಲ್ಲಿ ತಂದು ಎಸೆದಿರಬಹುದು ಎಂಬ ಶಂಕೆ ಸ್ಥಳೀಯರಲ್ಲಿ ಮೂಡಿದೆ.

  • ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಗುಜರಿ ಅಂಗಡಿ

    ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಗುಜರಿ ಅಂಗಡಿ

    ಉಡುಪಿ: ಗುಜರಿ ಅಂಗಡಿಗೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ನಡೆದಿದೆ.

    ಕಳೆದ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ ಸಂಪೂರ್ಣ ಅಂಗಡಿಗೆ ಹತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿ ಸಂಪೂರ್ಣ ಅಂಗಡಿ ಹೊತ್ತಿ ಉರಿದಿದೆ. ಮಹಮ್ಮದ್ ಮೂಸ ಮತ್ತು ಅವರ ಮಗ ಸಮೀರ್ ಗುಜರಿ ವ್ಯವಹಾರವನ್ನು ನಡೆಸುತ್ತಿದ್ದರು.

    ಬುಧವಾರ ಸಂಜೆ ವ್ಯಾಪಾರ ಮುಗಿಸಿ ಹೋಗಿದ್ದರು. ರಾತ್ರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಎರಡು ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಪಟ್ಟರು ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ.

    ಅಂಗಡಿಯೊಳಗಿದ್ದ ಪ್ಲಾಸ್ಟಿಕ್, ಪೇಪರು- ಸಾವಿರಾರು ರಟ್ಟುಗಳಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯ್ತು. ಲಕ್ಷಾಂತರ ಮೌಲ್ಯದ ಗುಜರಿ ವಸ್ತುಗಳು ಅಂಗಡಿಯಲ್ಲಿದ್ದವು ಎಂಬ ಮಾಹಿತಿಯಿದೆ. ಬ್ರಹ್ಮಾವರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.