Tag: ಉಡುಪಿ

  • ಪರೇಶ್ ಮೇಸ್ತಾ ಸಾವು: ವೈದ್ಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಪರೇಶ್ ಮೇಸ್ತಾ ಸಾವು: ವೈದ್ಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಉಡುಪಿ: ಪರೇಶ್ ಮೇಸ್ತಾ ಸಾವಿನ ಪ್ರಕರಣದ ಪ್ರಾಥಮಿಕ ವರದಿ ನೀಡಿದ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವೈದ್ಯರ ಮೇಲೆ ಫೇಸ್ ಬುಕ್- ವಾಟ್ಸಪ್‍ನಲ್ಲಿ ಭಾರೀ ಚರ್ಚೆ ಆರಂಭವಾಗಿದೆ.

    ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಶಂಕರ್ ಬಕ್ಕಣ್ಣನವರ್ ಸುಳ್ಳು ವರದಿ ಕೊಟ್ಟಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಹಿನ್ನೆಲೆಯಲ್ಲಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವೈದ್ಯರು ರಿಪೋರ್ಟ್ ಕೊಟ್ಟ ನಂತರ ಕಾಣೆಯಾಗಿದ್ದಾರೆ. ಸರ್ಕಾರದ ಒತ್ತಡದಿಂದ ಅವರು ಈ ವರದಿ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಕೆಎಂಸಿ ವೈದ್ಯಕೀಯ ಕಾಲೇಜು ಇದನ್ನು ಅಲ್ಲಗಳೆದಿದೆ. ವೈದ್ಯರು ರಜೆಯ ಮೇಲೆ ತೆರಳಿದ್ದಾರೆ. ಈ ತಿಂಗಳಲ್ಲಿ ರಜೆ ತೆಗೆದುಕೊಳ್ಳುವುದಾಗಿ ಮೊದಲೇ ಹೇಳಿದ್ದರು. ಮನೆಗೆ ತೆರಳಿದ್ದಾರೆ. ಡಿಸೆಂಬರ್ 15ಕ್ಕೆ ಕಾಲೇಜಿಗೆ ವಾಪಾಸಾಗುತ್ತಾರೆ ಎಂದು ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಶೋಭಾ ವಾಗ್ದಾಳಿ:
    ಮೇಸ್ತ ಸಾವಿನ ಕುರಿತು ಗೃಹ ಸಚಿವರು ನೀಡಿರುವ ಹೇಳಿಕೆಗೆ ಬೇಸರ ವ್ಯಕ್ತ ಪಡಿಸಿದ ಅವರು ಯುವಕನ ಸಾವಿನ ಕುರಿತು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ ಎಂದರು. ಮಣಿಪಾಲ ಆಸ್ಪತ್ರೆಗೆ ಉತ್ತಮ ಹೆಸರಿದ್ದು, ಆಡಳಿತ ಅಧಿಕಾರಿಗಳ ಮೇಲೆ ಸರ್ಕಾರ ಒತ್ತಡ ಹಾಕಿ ಈ ವರದಿಯನ್ನು ಸಿದ್ಧಪಡಿಸಿದೆ. ಇದಕ್ಕೆ ಮುಖ್ಯ ಮಂತ್ರಿಗಳು ಹಾಗೂ ಗೃಹ ಸಚಿವರು. ನಾನು ಆಸ್ಪತ್ರೆಯ ವೈದ್ಯರ ಜೊತೆ ಚರ್ಚೆ ಮಾತನಾಡುತ್ತೇನೆ. ನಿಜಾಂಶ ವರದಿ ನೀಡಲು ಮನವಿ ಮಾಡುತ್ತೇನೆ. ಮೇಸ್ತ ಸಾವಿನ ಹಿನ್ನೆಲೆಯಲ್ಲಿ ಸರ್ಕಾರ ಬಿಜೆಪಿ ಮೇಲೆ ಗೂಬೆ ಕೂರಿಸಲು ಪ್ರಯತ್ನ ನಡೆಸುತ್ತಿದೆ, ಹತ್ಯೆ ನಡೆದ ದಿನ ಸಿಎಂ ಸಿದ್ದರಾಮಯ್ಯ ಜಿಲ್ಲೆಯಲ್ಲೇ ಇದ್ದರು. ಆದರೆ ಪೊಲೀಸರಿಗೆ ಗಲಭೆ ನಡೆದ ಮಾಹಿತಿ ಇದ್ದರೂ ಸಿಎಂ ಈ ಕುರಿತು ಸಭೆ ನಡೆಸಿ ಶಾಂತಿ ಕಾಪಾಡಲು ಕ್ರಮವನ್ನು ಕೈಗೊಳ್ಳಲು ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಆರೋಪಿಸಿದರು. ( ಇದನ್ನೂ ಓದಿ: ಬಿಜೆಪಿಯವ್ರು ಮನೆಯಲ್ಲಿದ್ರೆ ರಾಜ್ಯ ಶಾಂತವಾಗಿರುತ್ತೆ – ಸಿಎಂ )

    ಘಟನೆ ಕುರಿತು ತನಿಖೆ ನಡೆಸಲು ಇದೇ ತಿಂಗಳ 15 ರಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಸಂಸ್ಥೆಗೆ ತನಿಖೆಗೆ ನೀಡಲು ಮನವಿ ಮಾಡಿಕೊಳ್ಳುತ್ತೇನೆ. ಪೊಲೀಸರು ಮಣಿಪಾಲ ಆಸ್ಪತ್ರೆಗೆ 19 ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಈ ಪ್ರಶ್ನೆಗಳನ್ನು ಕೇಳಲು ಯಾರು ಹೇಳಿದ್ದರು? ಸರ್ಕಾರವೇ ಪೊಲೀಸರ ಮೂಲಕ ಮಾಧ್ಯಮಗಳಿಗೆ ಈ ಸುಳ್ಳು ಮಾಹಿತಿಯನ್ನು ನೀಡಿದೆ ಎಂದು ಆರೋಪಿಸಿದರು.

    ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯ ದೇಶದ್ರೋಹಿ ಸಂಘಟನೆ ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ಸಂಘಟನೆಯೇ ಕಾರಣ. ಈ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಅಗ್ರಹಿಸಿದರು.

    ಇದೇ ವೇಳೆ ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆ ಪಕ್ಷ ಕಾರಣವಲ್ಲ. ನಾವು ಶಾಂತಿಯಿಂದ ಹೋರಾಟ ನಡೆಸಲು ಮಾತ್ರ ಜಿಲ್ಲಾಡಳಿತಕ್ಕೆ ಅನುಮತಿ ಕೇಳಿ ಮನವಿ ಸಲ್ಲಿಸಿದ್ದೇವೆ. ಅನುಮತಿ ಸಿಗದೇ ಇದ್ದರೆ ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.  ( ಇದನ್ನೂ ಓದಿ: Exclusive: ವಿಷವುಣಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ – ಪರೇಶ್ ಮೇಸ್ತಾ ತಂದೆ ಹೇಳಿಕೆ )

    ಉತ್ತರ ಕನ್ನಡ ಜಿಲ್ಲೆಯಲ್ಲಿ ಗಲಭೆ ಹೆಚ್ಚಾದಾಗ ಪೊಲೀಸರು 19 ಪ್ರಶ್ನೆಗಳನ್ನು ಕೇಳಿದ್ದರು. ಆ ಎಲ್ಲಾ ಪ್ರಶ್ನೆಗಳಿಗೆ ಸಂಸ್ಥೆಯಿಂದ ಉತ್ತರ ಸಿಕ್ಕಿತ್ತು. ಉತ್ತರಗಳಿಂದ ಸಾಮಾಜಿಕ ಜಾಲತಾಣದ ನೆಟ್ಟಿಗರು ಸಂತೃಪ್ತರಾಗದ ಹಿನ್ನೆಲೆಯಲ್ಲಿ ಟ್ರೋಲ್ ಆರಂಭಿಸಿದ್ದರು. ಫೇಸ್ ಬುಕ್ ವಾಟ್ಸಪ್ ಪರೇಶ್ ಮೇಸ್ತಾ ಸಾವಿಗೆ ಸಂಬಂಧಿಸಿದ ಪ್ರಾಥಮಿಕ ವರದಿಗೆ ಆಕ್ಷೇಪಗಳು ವ್ಯಕ್ತವಾಗಿದೆ. ಆದರೆ ಕೆಎಂಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಗ್ಗೆ ಅಧಿಕೃತವಾಗಿ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

  • ಕಣ್ಣೊರೆಸಲು ಅಯ್ಯರ್ ಅಮಾನತು: ಶೋಭಾ ಕರಂದ್ಲಾಜೆ

    ಕಣ್ಣೊರೆಸಲು ಅಯ್ಯರ್ ಅಮಾನತು: ಶೋಭಾ ಕರಂದ್ಲಾಜೆ

    ಉಡುಪಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿಯನ್ನು ನೀಚ ಎಂದು ಬೈದಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶಗೊಂಡು ವಾಗ್ದಾಳಿ ಮಾಡಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಅಯ್ಯರ್ ಮಾತನಾಡಿದ್ದು, ಕಾಂಗ್ರೆಸ್‍ನ ಮಾನಸಿಕ ಮನಸ್ಥಿತಿಯನ್ನು ತೋರಿಸುತ್ತದೆ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಮಾತ್ರ ಚಡಪಡಿಕೆಯ ಮಾತು ಬರುತ್ತದೆ ಎಂದು ಕಿಡಿಕಾರಿದ್ದಾರೆ.

    ಪ್ರಧಾನಿ ಮೋದಿಯನ್ನು ಯಾಕೆ ನೀಚ ಎಂದು ಕರೆದರು ಎಂದು ಕಾಂಗ್ರೆಸ್ ಉತ್ತರ ಕೊಡಬೇಕಾಗಿದೆ. ಆದ್ದರಿಂದ ಕಣ್ಣೊರೆಸುವ ತಂತ್ರದಿಂದ ಅವರನ್ನು ಅಮಾನತು ಮಾಡಿದ್ದೀರಿ ಎಂದು ಶೋಭಾ ಕೋಪದಿಂದ ಹೇಳಿದ್ದಾರೆ.

    ಗುಜರಾತ್‍ನಲ್ಲಿ ಕಾಂಗ್ರೆಸ್‍ಗೆ ಇದು ದುಬಾರಿಯಾಗುತ್ತದೆ. ಭಾರತವನ್ನು ಕಾಂಗ್ರೆಸ್‍ನ ವಂಶಾಡಳಿತಕ್ಕೆ ಬರೆದುಕೊಟ್ಟಿಲ್ಲ. ಅಧಿಕಾರ ಇಲ್ಲದಿದ್ದಾಗ ಇವರಿಗೆ ಚಡಪಡಿಕೆ ಶುರುವಾಗುತ್ತದೆ. ಅದರ ಪ್ರತಿಫಲವೇ ನೀಚ ಎಂಬ ಶಬ್ದವನ್ನು ಬಳಸಿರುವುದು. ಗುಜರಾತಿನ ಜನರು ಕಾಂಗ್ರೆಸ್‍ಗೆ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ಹೇಳಿದರು.

    ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ಆರಂಭವಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಜನ ಐದು ವರ್ಷದ ಹಿಂದೆ ಆಶೀರ್ವಾದ ಮಾಡಿದ್ದರು. ಈಗ ಮಾಡುವುದು ಕನಸಿನ ಮಾತು. ಸಿಎಂ ಅವರು ಘೋಷಿಸಿರುವ ಎಲ್ಲಾ ಭಾಗ್ಯಗಳು ಪ್ಲಾಪ್ ಆಗಿರುವಾಗ ಜನ ಯಾಕೆ ಆಶೀರ್ವಾದ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿ ಮಾತನಾಡಿದರು.

    ಇದನ್ನು ಓದಿ: ಅಂದು ಚಾಯ್‍ವಾಲಾ, ಇಂದು ನೀಚ್ ಅಂದ್ರು: ಬಿಜೆಪಿ ಭರ್ಜರಿ ಗೆಲುವಿಗೆ ಕಾರಣವಾಗುತ್ತಾ?

  • ಉಡುಪಿ ಪೇಜಾವರ ಶ್ರೀಯನ್ನು ಭೇಟಿಯಾದ ರವಿಶಂಕರ್ ಗುರೂಜಿ

    ಉಡುಪಿ ಪೇಜಾವರ ಶ್ರೀಯನ್ನು ಭೇಟಿಯಾದ ರವಿಶಂಕರ್ ಗುರೂಜಿ

    ಉಡುಪಿ: ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ತುಂಬಿದ ದಿನದಂದೇ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಪೇಜಾವರ ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ.

    ಆರ್‍ಎಸ್‍ಎಸ್ ಮತ್ತು ವಿಶ್ವಹಿಂದೂ ಪರಿಷದ್ ನ ರಾಮ ಮಂದಿರ ನಿರ್ಮಾಣ ಕುರಿತಾದ ಏಕಪಕ್ಷೀಯ ನಿರ್ಣಯದಿಂದ ರವಿಶಂಕರ್ ಗುರೂಜಿಗೆ ಮುಖಭಂಗವಾಗಿತ್ತು. ಧರ್ಮ ಸಂಸದ್ ಮುಗಿದ ನಂತರ ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ರವಿಶಂಕರ ಗುರೂಜಿ ಶ್ರೀಕೃಷ್ಣನ ದರ್ಶನ ಮಾಡಿ ಚಂದ್ರಶಾಲೆಯಲ್ಲಿ ಕುಳಿತಿದ್ದರು.

    ಬೆಳಗ್ಗೆಯ ಪೂಜೆಯಲ್ಲಿದ್ದ ಪೇಜಾವರ ಶ್ರೀಗಳು ರವಿಶಂಕರ್ ಗುರೂಜಿಯನ್ನು ಕಂಡು ಪೂಜೆ ಮುಗಿಸಿ ಬರುವುದಾಗಿ ಹೇಳಿ ಕೃಷ್ಣಪೂಜೆಯಲ್ಲಿ ತೊಡಗಿದರು. ನಂತರ ಮಠದ ಬಡಗು ಮಾಳಿಗೆಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಪೇಜಾವರ ಶ್ರೀ ಮತ್ತು ರವಿಶಂಕರ್ ಗುರೂಜಿ ಗೌಪ್ಯ ಮಾತುಕತೆ ಮಾಡಿದರು. ಪೇಜಾವರ ಶ್ರೀಗಳು ಧರ್ಮ ಸಂಸದ್ ನಲ್ಲಿ ನಡೆದ ಗೋಷ್ಟಿಗಳ ಬಗ್ಗೆ ಪೇಜಾವರ ಮಾಹಿತಿ ನೀಡಿದ್ದಾರೆ. ರವಿಶಂಕರ್ ಗುರೂಜಿ ತನ್ನ ಮಧ್ಯಸ್ಥಿಕೆಯ ಬೆಳವಣಿಗೆ ಬಗ್ಗೆ ಮಾತುಕತೆ ಮಾಡಿದ್ದಾರೆ.

    ಗೌಪ್ಯ ಮಾತುಕತೆ ನಂತರ ಹೊರಬಂದ ಶ್ರೀರವಿಶಂಕರ್ ಗುರೂಜಿ, ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇದೆ. ಸೌಹಾರ್ದ ಪ್ರಯತ್ನ ಮುಂದುವರೆಸುತ್ತೇನೆ. ನ್ಯಾಯಾಲಯದ ಹೊರಗೆ ರಾಮಜನ್ಮಭೂಮಿ ವಿವಾದ ಬಗೆಹರಿಸಲು ನಮ್ಮ ಪರ ಯತ್ನ ಮುಂದುವರೆಯುತ್ತದೆ. ನಾನು ಭೇಟಿಯಾದ ಎಲ್ಲರೂ ಮಂದಿರ ನಿರ್ಮಾಣದ ಪರವಾಗಿದ್ದಾರೆ. ಮುಸ್ಲಿಮರೂ ಸಹಮತ ವ್ಯಕ್ತಪಡಿಸಿದ್ದಾರೆ. ಆರ್‍ಎಸ್‍ಎಸ್ ತನ್ನದೇ ಅಭಿಪ್ರಾಯ ಹೊಂದಲು ಸ್ವತಂತ್ರ ಎಂದರು.

    ಪೇಜಾವರಶ್ರೀ ಮಾತನಾಡಿ, ಗೌಪ್ಯ ಮಾತುಕತೆಯ ವಿವರಣೆಗಳನ್ನು ಹೇಳಲ್ಲ. ಧರ್ಮಸಂಸದ್‍ನಲ್ಲಿ ಗುರೂಜಿಗೆ ವಿರೋಧವಿತ್ತು ಎಂದು ಹೇಳಲಾರೆ. ನ್ಯಾಯಾಲಯದ ಹೊರಗೆ ತೀರ್ಮಾನವಾಗಬೇಕು ಎಂಬುದು ನಮ್ಮ ಅಪೇಕ್ಷೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಅನ್ನೋದು ಎಲ್ಲರ ಅಭಿಪ್ರಾಯ ಎಂದರು.

    ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಜೊತೆ ಸಂಧಾನಕ್ಕೆ ಯತ್ನಿಸದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಗೈರು ಹಾಜರಿ ಹಾಕಿದ್ದರು ಎಂದು ಹೇಳಲಾಗುತ್ತಿದೆ.

  • ಗಣಪತಿಯೇ ನಮಗೆ ಮೊದಲ ಗುರು, ಕೃಷ್ಣನ ಶಂಖನಾದವೇ ನಮ್ಮ ಸಪ್ತಸ್ವರಗಳಿಗೆ ಪ್ರೇರಣೆ: ಉಡುಪಿಯಲ್ಲಿ ಉಸ್ತಾದ್ ಮೋಡಿ

    ಗಣಪತಿಯೇ ನಮಗೆ ಮೊದಲ ಗುರು, ಕೃಷ್ಣನ ಶಂಖನಾದವೇ ನಮ್ಮ ಸಪ್ತಸ್ವರಗಳಿಗೆ ಪ್ರೇರಣೆ: ಉಡುಪಿಯಲ್ಲಿ ಉಸ್ತಾದ್ ಮೋಡಿ

    ಉಡುಪಿ: ದೇಶಾದ್ಯಂತ ಅಯೋಧ್ಯೆಯ ರಾಮ ಮಂದಿರ ಕುರಿತಾದ ಚರ್ಚೆಗಳು ನಡೆಯುತ್ತಿದೆ. ರಾಮ ಮಂದಿರ, ಬಾಬ್ರಿ ಮಸೀದಿ ಅಂತ ರಾಜಕೀಯ ಪಕ್ಷಗಳು ಕಚ್ಚಾಡುತ್ತಿದೆ. ಹಿಂದೂಗಳು ಬಾಬ್ರಿ ಮಸೀದಿ ಧ್ವಂಸವಾದ ದಿನವನ್ನು ಶೌರ್ಯ ದಿನ ಅಂತ ಆಚರಿಸುತ್ತಿದ್ದಾರೆ. ಮುಸಲ್ಮಾನರು ಡಿಸೆಂಬರ್ ಆರನ್ನು ಕರಾಳ ದಿನ ಅಂತ ಆಚರಿಸುತ್ತಿದ್ದಾರೆ. ಈ ನಡುವೆ ಉಡುಪಿಯಲ್ಲಿ ಕಲೆಗೆ – ಕಲಾವಿದನಿಗೆ ಜಾತಿ, ಧರ್ಮವಿಲ್ಲ ಎಂಬುದು ಸಾಬೀತಾಗಿದೆ.

    ತಬಲ ಮಾಂತ್ರಿಕ ಝಾಕಿರ್ ಹುಸೇನ್ ಉಡುಪಿ ಶ್ರೀಕೃಷ್ಣಮಠದಲ್ಲಿ ಸಾವಿರಾರು ಪ್ರೇಕ್ಷಕರನ್ನು ತನ್ನ ಕೈಚಳಕದ ಮೂಲಕ ಮಂತ್ರಮುಗ್ಧಗೊಳಿಸಿದ್ದಾರೆ. ಮಠದೊಳಗೆ ಆಗಮಿಸಿ ಶ್ರೀಕೃಷ್ಣನ ದರ್ಶನ ಮಾಡಿ ಕನಕ ನವಗ್ರಹ ಕಿಂಡಿಯ ಮುಂದೆ ನಿಂತು ಭಕ್ತಿಪರವಶರಾಗಿದ್ದಾರೆ. ಶ್ರೀಕೃಷ್ಣನ ಮುಂದೆ ನಿಂತು ಕೈಮುಗಿದು ಕೆಲ ನಿಮಿಷಗಳ ಕಾಲ ಧ್ಯಾನ ಮಾಡಿದ್ದಾರೆ. ಶಿರಭಾಗಿ ಭಗವಂತನಿಗೆ ವಂದಿಸಿ ತಮ್ಮ ನಿವೇದನೆ ಅರ್ಪಿಸಿದ್ದಾರೆ.

    ಕೃಷ್ಣಮಠದ ರಾಜಾಂಗಣದಲ್ಲಿ ಎರಡೂವರೆ ಗಂಟೆಗಳ ಕಾಲ ಉಸ್ತಾದ್ ಝಾಕಿರ್ ಹುಸೇನ್ ತಬಲ ನುಡಿಸಿ ರಸದೌತಣ ಬಡಿಸಿದರು. ಬೆರಳಿನ ವೇಗಕ್ಕೆ ಸಾವಿರಾರು ಮಂದಿ ಅಭಿಮಾನಿಗಳು ತಮ್ಮನ್ನೇ ತಾವು ಮರೆತರು. ವಿದ್ವಾನ್ ಕುಮಾರೇಶ್ ವಯೋಲಿನ್, ವಿದೂಷಿ ಜಯಂತಿ ಕುಮಾರೇಶ್ ವೀಣೆ ನಾದ ತಬಲ ಮಾಂತ್ರಿಕ ಝಾಕಿರ್ ಹುಸೇನ್ ಗೆ ಸಾಥ್ ನೀಡಿದರು.

    ಝಾಕಿರ್ ಹುಸೇನ್ ರಿಂದ ಗಣಪತಿ ಸ್ತುತಿ- ಶಿವನಾಮ ಜಪ: ಕಾರ್ಯಕ್ರಮದ ನಡುವೆ ಝಾಕಿರ್ ಹುಸೇನ್ ಗಣಪತಿ, ಶ್ರೀಕೃಷ್ಣ ಮತ್ತು ಶಿವನನ್ನು ನೆನಪಿಸಿಕೊಂಡರು. ಗಣಪತಿಯ ಅನುಗ್ರಹ, ಕೃಷ್ಣನ ಶಂಖನಾದ, ಶಿವನ ಅನುಗ್ರಹ ನನ್ನ ಮೇಲೆ ಇರುವುದರಿಂದ ಈ ಹಂತಕ್ಕೆ ಬಂದು ನಿಂತಿದ್ದೇನೆ ಎಂದರು. ತಬಲದಲ್ಲಿ ಢಮರುಗ ನುಡಿಸಿ ಝಾಕಿರ್ ಚಪ್ಪಾಳೆ ಶಿಳ್ಳೆ ಗಿಟ್ಟಿಸಿದರು.

    ಕಾರ್ಯಕ್ರಮದ ಕೊನೆಗೆ ಪೇಜಾವರ ಹಿರಿಯ, ಕಿರಿಯ ಶ್ರೀ, ಸೋದೆ ವಿಶ್ವವಲ್ಲಭ ಸ್ವಾಮೀಜಿಯ ಪಾದ ಮುಟ್ಟಿ ಝಾಕಿರ್ ನಮಸ್ಕರಿಸಿದರು. ಸ್ವಾಮೀಜಿಗಳು ಆತ್ಮೀಯವಾಗಿ ಕಲಾವಿದ ಝಾಕಿರ್ ಹುಸೇನ್ ರನ್ನು ಸ್ಪರ್ಶಿಸಿ, ಅನುಗ್ರಹ ಮಂತ್ರಾಕ್ಷತೆ ನೀಡಿದರು. ಶಾಲು ಹೊದಿಸಿ – ಹಾರಹಾಕಿ, ಕೃಷ್ಣನ ವಿಗ್ರಹ ನೀಡಿ ಪೇಜಾವರ ಮಠ ಗೌರವಿಸಿತು.

    ಉಸ್ತಾದ್ ಝಾಕಿರ್ ಹುಸೇನ್ ಮಾತನಾಡಿ, ಮಠದಲ್ಲಿ ಕಾರ್ಯಕ್ರಮ ನೀಡಿದ್ದು ಬಹಳ ಸಂತೋಷವಾಗಿದೆ. ಕೃಷ್ಣ ಕರೆಸಿಕೊಂಡರೆ, ಸ್ವಾಮೀಜಿಯವರ ಆಶೀರ್ವಾದ ಇದ್ದರೆ ಮತ್ತೆ ಉಡುಪಿಯಲ್ಲಿ ಕಾರ್ಯಕ್ರಮ ಕೊಡುವುದಾಗಿ ಘೋಷಣೆ ಮಾಡಿದರು. ಗಣಪತಿಯೇ ಕಲಾವಿದರಿಗೆ ಮೊದಲ ಗುರು. ಕೃಷ್ಣನ ಶಂಖನಾದವೇ ನಮ್ಮ ಸಪ್ತಸ್ವರಗಳಿಗೆ ಪ್ರೇರಣೆ, ಶಿವನ ಢಮರುಗ ನಾದವೇ ನಮಗೆ ವೈಬ್ರೇಶನ್ ಅಂತ ತಮ್ಮ ಕಾರ್ಯಕ್ರಮದ ನಡುವೆ ಹೇಳಿದರು.

    ಪೇಜಾವರ ಕಿರಿಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ದೇವತೆಗಳಿಗೆ ಲಭ್ಯವಾದದ್ದು ಒಂದು ಬಿಂದು ಅಮೃತ. ಆದ್ರೆ ಝಾಕಿರ್ ಹುಸೇನರ ಕಾರ್ಯಕ್ರಮದ ಮೂಲಕ ನಮಗೆ ಅಮೃತದ ಸುಧೆಯೇ ಲಭ್ಯವಾಯ್ತು ಅಂತ ಹೇಳಿದರು.

     

  • ಮೋದಿಯೊಬ್ಬರಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ: ಉಪೇಂದ್ರ

    ಮೋದಿಯೊಬ್ಬರಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ: ಉಪೇಂದ್ರ

    ಉಡುಪಿ: ಮೋದಿಯೊಬ್ಬರಿಂದ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ ಎಂದು ನಟ ಕೆಪಿಜೆಪಿ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಪ್ಪಿ, ನಾನು ಪ್ರಾಕ್ಟಿಕಲ್ ಇಲ್ಲ ಅಂತ ಜನ ನನ್ನನ್ನು ನೋಡಿ ನಗುತ್ತಿದ್ದಾರೆ. ಆದರೆ ರಾಜಕೀಯ ದೃಷ್ಟಿಯಲ್ಲಿ ನೋಡಿದರೆ ನಾನು ಪ್ರಾಕ್ಟಿಕಲ್ ಇಲ್ಲ. ಪ್ರಜೆಗಳು ಮಾತನಾಡುವ ಕಾಲ ಬಂದಿದೆ ಎಂದು ಉಪ್ಪಿ ಹೇಳಿದರು. ಎಂಎಲ್‍ಎ ಸೀಟು ಗೆಲ್ಲಲು 50 ಕೋಟಿ ರೂಪಾಯಿ ಬೇಕು. ನನ್ನ ಬಳಿ ಕಾಸಿಲ್ಲ. ಆದರೆ ಕನಸಿದೆ. ಅದನ್ನು ಈಡೇರಿಸಲು ಜನ ಬೆಂಬಲ ಬೇಕಾಗಿದೆ ಎಂದರು.

    ಸತ್ಯಕ್ಕೆ ಸಾವಿಲ್ಲ ಸತ್ಯ ಸಾಯೋದೇ ಇಲ್ಲ. ನನಗೆ ಶೀಘ್ರವಾಗಿ ಕೆಲಸವಾಗಬೇಕಿಲ್ಲ, ನಾನು ಸ್ಮಾರ್ಟಾಗಿ ಕೆಲಸ ಮಾಡುತ್ತೇನೆ. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್‍ಗೆ ಇತ್ತು. ಅರವಿಂದ ಕೇಜ್ರೀವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದು ಹೇಳಿದರು. ನಮ್ಮ ದೇಶದಲ್ಲಿ ಆರೋಗ್ಯ, ಶಿಕ್ಷಣ ಸರಿಯಾಗಿ ಸಿಕ್ಕಿದ್ದರೆ ಇವತ್ತು ಭ್ರಷ್ಟಾಚಾರ ಎಂಬುವುದು ಇರುತ್ತಿರಲಿಲ್ಲ ಎಂದು ತಿಳಿಸಿದರು.

    ರಾಷ್ಟ್ರೀಯ ಪಕ್ಷಗಳಿಂದ ಬೇಡಿಕೆ ಬಂದಿದೆ. 15 ವರ್ಷದಿಂದ ಆಹ್ವಾನಗಳಿದ್ದರೂ ನಾನು ನನ್ನ ಕನಸನ್ನು ಹೊತ್ತು ಈಗ ಹೊರಟಿದ್ದೇನೆ. ಬೆಕ್ಕಿಗೆ ಗಂಟೆ ಕಟ್ಟಿದ್ದೇನೆ. ಗಂಟೆ ಬಾರಿಸಲು ಜನ ಬೇಕು. 50 ಸಾವಿರ ಜನರ ಮೇಲ್ ಬಂದಿದೆ. 30 ಸಾವಿರ ಮಂದಿ ಕ್ರಿಯಾಶೀಲ ಜನ ನನ್ನ ಜೊತೆಗಿದ್ದಾರೆ ಎಂದು ಉಪೇಂದ್ರ ಹೇಳಿದರು. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನನ್ನ ಆಲೋಚನೆಯ ಜನ ತಮ್ಮ ಆಲೋಚನೆಗಳನ್ನು ಹೇಳಬೇಕಿದೆ ಎಂದು ಮನವಿ ಮಾಡಿದರು.

  • ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ – ಕರ್ನಾಟಕ ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ

    ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ – ಕರ್ನಾಟಕ ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ

    ಮಂಗಳೂರು/ಉಡುಪಿ: ದೇಶಾದ್ಯಂತ ಸದ್ದು ಮಾಡಿದ್ದ ಬಾಬ್ರಿ ಮಸೀದಿ ಧ್ವಂಸ ನಡೆದು ಇಂದಿಗೆ 25 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ದೇಶದೆಲ್ಲೆಡೆ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಲಾಗಿದೆ.

    ಅಯೋಧ್ಯೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಮು ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಂಘಟನೆಗಳು ಕರಾಳ ದಿನಾಚರಣೆ, ಸಂಭ್ರಮಾಚರಣೆ ನಡೆಸುವ ಸಾಧ್ಯತೆ ಇರುವುದರಿಂದ ಜಿಲ್ಲೆಯಾದ್ಯಂತ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ. ಬಹಿರಂಗ ಸಭೆ, ಪ್ರತಿಭಟನೆ, ರ‍್ಯಾಲಿಗೆ ನಿರ್ಬಂಧ ವಿಧಿಸಲಾಗಿದೆ.

    ಈ ನಡುವೆ ಸುಪ್ರೀಂಕೋರ್ಟ್‍ನಲ್ಲಿ ತಮಗೆ ವಿರುದ್ಧವಾಗಿ ತೀರ್ಪು ಬಂದರೂ, ರಾಮಮಂದಿರ ನಿರ್ಮಿಸಿಯೇ ತೀರುತ್ತೇವೆ ಎಂದು ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ನೃತ್ಯಗೋಪಾಲ್ ದಾಸ್ ಸ್ಪಷ್ಟಪಡಿಸಿದ್ದಾರೆ. ಇನ್ನು ಹೈದರಾಬಾದ್‍ನಲ್ಲಿ ಮಾತಾಡಿದ ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಪದ್ಮಾವತಿ ಸಿನಿಮಾ ಬಿಡುಗಡೆಯಾಗೋದನ್ನು ತಡೆದಿದ್ದೀರಾ. ಈಗ ಅಯೋಧ್ಯ ರಾಮ ಮಂದಿರ ನಿರ್ಮಾಣ ಪ್ರಕರಣದ ಅರ್ಜಿ ವಿಚಾರಣೆಯನ್ನು 2019ರಲ್ಲಿ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಉಡುಪಿ ಕೃಷ್ಣಮಠದ ಪೇಜಾವರಶ್ರೀಗಳೂ ಮಸೀದಿ ಧ್ವಂಸದ ಕರೆ ನೀಡಿದ್ದರು ಎಂಬ ಆರೋಪ ಅಂದಿನಿಂದ ಇಂದಿನವರೆಗೂ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿದ ಶ್ರೀಗಳು, ಬಾಬ್ರೀ ಮಸೀದಿ ನನ್ನ ನೇತೃತ್ವದಲ್ಲಿ ಧ್ವಂಸವಾದದ್ದಲ್ಲ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. ರಾಮಜನ್ಮಭೂಮಿ ಸ್ವಚ್ಛತಾ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೆ. ರಾಮಭೂಮಿ ಸರ್ವೋಚ್ಛ ಸಮಿತಿ ನೇತೃತ್ವವಿತ್ತು. ಆದ್ದರಿಂದ ಹೋಮ, ಹವನಗಳು, ಶುದ್ಧೀಕರಣ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನೋಡ ನೋಡುತ್ತಿದ್ದಂತೆ ಕಲ್ಲುಗಳು ಬಿದ್ದವು. ಕರಸೇವಕರು ಮಸೀದಿಯ ಗುಂಬಜ್ ಹತ್ತಿದ್ದರು. ಸಂಭ್ರಮಿಸಿದ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಬಾರಿಸಿದ್ದೆ. ಅದೊಂದು ವಿಷಾಧದ ಘಟನೆ ಎಂದು ಪೇಜಾವರಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

    ಸ್ವಾಮೀಜಿಯಾಗಿ ಹೊಡೆಯುವುದು ತಪ್ಪು ಅಂತ ಗೊತ್ತಿದೆ. ಆದರೆ ಮಸೀದಿ ಧ್ವಂಸ ಮಾಡಬೇಡಿ ಎಂದು ಕೇಳಿಕೊಂಡೆ. ಮಸೀದಿ ಇದ್ದ ಜಾಗದಲ್ಲಿ ಮಂದಿರವಿತ್ತು ಅನ್ನುವುದಕ್ಕೆ ಕುರುಹುಗಳಿವೆ, ದಾಖಲೆ ಪತ್ತೆಯಾಗಿದೆ. ಮುಸಲ್ಮಾನ ಬಂಧುಗಳು ಬೇರೆಡೆ ಬಾಬ್ರಿ ಮಸೀದಿ ನಿರ್ಮಾಣ ಮಾಡುವುದಾದರೆ ನಾನು ಆರ್ಥಿಕ ಸಹಾಯ ಮಾಡಲು ಈಗಲೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಅಶೋಕ್ ಸಿಂಘಾಲ್‍ಗೂ ಧ್ವಂಸದ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.

    ನನ್ನ ಮೇಲೆ ಕೆಲ ಬುದ್ಧಿಜೀವಿಗಳು ಮಾಡುತ್ತಿರುವ ಆರೋಪ ಶುದ್ಧ ಸುಳ್ಳು. ನನಗೆ ಅರಿವೇ ಇಲ್ಲದೆ ಮಸೀದಿ ಧ್ವಂಸವಾಯಿತು. ಈ ಘಟನೆ ನಡೆದ ಮಾರನೇ ದಿನ ವಿದಾಯಸಭೆ ಮಾಡಿದ್ದೆವು. ಸುಮ್ಮನೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪೇಜಾವರಶ್ರೀಗಳು ಪ್ರಶ್ನೆ ಮಾಡಿದ್ದಾರೆ.

  • ಹುಣ್ಣಿಮೆ ಜೊತೆ ಕೈ ಜೋಡಿಸಿದ ಓಖಿ- ಬೆಳದಿಂಗಳ ಇಂದಿನ ರಾತ್ರಿ ಏನಾಗುತ್ತೋ..?

    ಹುಣ್ಣಿಮೆ ಜೊತೆ ಕೈ ಜೋಡಿಸಿದ ಓಖಿ- ಬೆಳದಿಂಗಳ ಇಂದಿನ ರಾತ್ರಿ ಏನಾಗುತ್ತೋ..?

    – ದೀಪಕ್ ಜೈನ್
    ಉಡುಪಿ: ಓಖಿ ಚಂಡಮಾರುತ ತಮಿಳ್ನಾಡು ಮತ್ತು ಕೇರಳ ರಾಜ್ಯದ ನಿದ್ದೆಗೆಡಿಸಿದೆ. ಕರ್ನಾಟಕದ ಕರಾವಳಿಗರಿಗೆ ಚಳಿ ಹಿಡಿಸಿದೆ. ಸಮುದ್ರದಲ್ಲೆದ್ದ ಸುಳಿಗಾಳಿಗೂ ಬಾನಿನಲ್ಲಿರುವ ಚಂದ್ರನಿಗೂ ಲಿಂಕ್ ಇದೆ. ಸಮುದ್ರದ ಅಲೆಗಳನ್ನು ಫುಲ್ ಕಂಟ್ರೋಲ್ ಮಾಡೋನೇ ಆ ಚಂದ ಮಾಮ.

    ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಸಾಮಾನ್ಯವಾಗಿ ಕಡಲು ಎಂದಿನಂತೆ ಇರೋದಿಲ್ಲ. ಅಲೆಗಳ ಅಬ್ಬರ ಜಾಸ್ತಿ ಇರುತ್ತದೆ. ಈ ಬಾರಿ ಹುಣ್ಣಿಮೆ ಜೊತೆ ಓಖಿ ಚಂಡಮಾರುತ ರೌದ್ರ ನರ್ತನ ತೋರುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿರುವ ಓಖಿ ಹುಣ್ಣಿಮೆ ಸಂದರ್ಭದಲ್ಲೇ ಹುಟ್ಟಿಕೊಂಡಿರೋದರಿಂದ ಅಪಾಯ ಜಾಸ್ತಿ.

    ಓಖಿ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ತಟ್ಟಿದೆ. ಉಡುಪಿಯಲ್ಲಿ ಹುಣ್ಣಿಮೆಯ ಹಿಂದಿನ ದಿನ (ಡಿ.2) ಕಡಲು ತನ್ನ ರೌದ್ರ ನರ್ತನ ತೋರಿದೆ. ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ.

    200 ನಾಟಿಕಲ್ ಮೈಲಿ ದೂರ ಚಂಡಮಾರುತದ ಸುಂಟರಗಾಳಿ ಇದ್ದರೂ, ಹುಣ್ಣಿಮೆ ಎಫೆಕ್ಟ್ ನಿಂದ ಸಮುದ್ರ ತೀರದಲ್ಲಿ ಅಲೆಗಳು ಉಬ್ಬುಬ್ಬಿ ಬರುತ್ತಿದೆ. ಅಬ್ಬರದ ಅಲೆಗಳಿಗೆ ಹೆದರಿ ಕಡಲತೀರದ ಜನ ಬೇರೆಡೆ ಶಿಫ್ಟ್ ಆಗುತ್ತಿದ್ದಾರೆ. ಹುಣ್ಣಿಮೆಯ ಭಯವೂ ಜನರನ್ನು ಕಾಡುತ್ತಿದೆ.

    ಸಮುದ್ರಕ್ಕೂ ಚಂದ್ರನಿಗೂ ಸಂಬಂಧ!: ಸಮುದ್ರಕ್ಕೂ ಚಂದ್ರನಿಗೂ ಸಂಬಂಧವಿದೆ. ಚಂದ್ರನ ಚಲನೆಯ ಮೇಲೆಯೇ ಎಲ್ಲಾ ರಾಶಿ, ನಕ್ಷತ್ರಗಳು ನಿಂತಿರುವುದು. ತಿಂಗಳಿಗೊಂದು ಹುಣ್ಣಿಮೆ ಅಮವಾಸ್ಯೆ ಬರುತ್ತದೆ. 15 ದಿನಕ್ಕೊಮ್ಮೆ ಸಮುದ್ರದ ಮೇಲೆ ಎಫೆಕ್ಟ್ ಆಗುತ್ತದೆ. ಸಾಗರದ ನೀರು ದಡಕ್ಕೆ ಹತ್ತಿರಾಗೋದು ಈ ಎರಡು ದಿನಗಳಲ್ಲೇ ಜಾಸ್ತಿ.

    ಅಮಾವಾಸ್ಯೆಯ ಹಿಂದಿನ ಮತ್ತು ನಂತರದ ದಿನ, ಹುಣ್ಣಿಮೆ ಮತ್ತು ಎರಡು ದಿನ ಅಲೆಗಳ ಸಂಖ್ಯೆ ಮತ್ತು ಅಪ್ಪಳಿಸುವ ರಭಸ ಹೆಚ್ಚಾಗಿರುತ್ತದೆ. ಹೀಗಾಗಿ ಓಖಿ ಮತ್ತು ಹುಣ್ಣಿಮೆ ಒಟ್ಟಾಗಿದ್ದು, ಅರಬ್ಬೀ ಸಮುದ್ರದ ಅಬ್ಬರ ಹೆಚ್ಚಾಗಲು ಒಂದು ಕಾರಣವಾಗಿದೆ. ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಲಪ್ಪಾ ಎಂದು ಸಮುದ್ರ ರಾಜನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

    ಕಾಪು, ಪಡುಕೆರೆ, ಮಲ್ಪೆ, ಪಿತ್ರೋಡಿ ಆಸುಪಾಸಿನಲ್ಲಿ ಸಮುದ್ರ ತೀರದಲ್ಲಿದ್ದ ದೋಣಿಗಳನ್ನು ಮೇಲಕ್ಕೆ ಶಿಫ್ಟ್ ಮಾಡಿದ್ದೇವೆ. ಮೀನುಗಾರಿಕೆಗೆ ಹೋಗದಂತೆ ಎಚ್ಚರಿಕೆ ಕೊಟ್ಟಿರುವ ಕಾರಣ ಎರಡು ದಿನ ರಜೆ ತೆಗೆದುಕೊಂಡಿದ್ದೇವೆ ಎಂದು ಪಿತ್ರೋಡಿ ಸಂಜೀವ ಸಾಲಿಯಾನ್ ಮಾಹಿತಿ ನೀಡಿದರು.

    ಪ್ರತೀ ಅಮವಾಸ್ಯೆ – ಹುಣ್ಣಿಮೆ ದಿನ ಬರುವಾಗ ಕಡಲು ಕಪ್ಪಗೆ ಮತ್ತು ಬೆಳ್ಳಗೆ ಆಗುತ್ತದೆ. ಈ ಬಾರಿ ಹುಣ್ಣಿಮೆ ದಿನದಂದೇ ದಕ್ಷಿಣದಲ್ಲಿ ಸುಳಿಗಾಳಿ ಎದ್ದಿರುವುದರಿಂದ ನಾವು ಕಸುಬಿಗೆ ಇಳಿಯಲು ಸ್ವಲ್ಪ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

    ಹುಣ್ಣಿಮೆಯ ಹಿಂದಿನ ದಿನದ ರಾತ್ರಿ ಕೊಂಚಮಟ್ಟಿನ ರೌದ್ರಾವತಾರ ತೋರಿರುವ ಕಡಲು, ಹುಣ್ಣಿಮೆ ರಾತ್ರಿ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬ ಕುತೂಹಲ ಮತ್ತು ಆತಂಕ ಕರಾವಳಿಯ ಜನರಲ್ಲಿ ಇದೆ. ಅದರಲ್ಲೂ ಸಮುದ್ರವನ್ನೇ ಜೀವನ ಮಾಡಿಕೊಂಡಿರುವ, ತಟದಲ್ಲಿ ಮನೆ ಕಟ್ಟಿಕೊಂಡಿರುವ ಮೀನುಗಾರರಿಗೆ ಆತಂಕ ಕೊಂಚ ಹೆಚ್ಚೇ ಇದೆ.

  • ಓಖಿಗೆ ಕಡಲ ಒಡಲು ನಲುಗಿತು-ಸಮುದ್ರದ ನೀರು ರಸ್ತೆಗೆ ಬಂತು!

    ಓಖಿಗೆ ಕಡಲ ಒಡಲು ನಲುಗಿತು-ಸಮುದ್ರದ ನೀರು ರಸ್ತೆಗೆ ಬಂತು!

    ಉಡುಪಿ: ಕಡಲ ಒಡಲು ಓಖಿಗೆ ಸಿಲುಕಿ ಪ್ರಕ್ಷುಬ್ಧ ಆಗಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‍ಗಳು ಮತ್ತೆ ವಾಪಸ್ ಬಂದು ಬಂದರಿನಲ್ಲಿ ಲಂಗರು ಹಾಕುತ್ತಿದೆ. ಉಡುಪಿಯ ಮಲ್ಪೆ ಬೀಚ್‍ನಲ್ಲಿ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಹೋಗುವ ಪ್ರವಾಸಿ ಬೋಟ್ ಸಂಚಾರ ನಿಷೇಧಿಸಲಾಗಿದೆ. ಕಳೆದ ರಾತ್ರಿಯಿಂದ ರಸ್ತೆಗೆ ಕಡಲ ಅಲೆಗಳು ಅಪ್ಪಳಿಸುತ್ತಿದ್ದು ತೀರದ ಜನ ಆತಂಕಕ್ಕೀಡಾಗಿದ್ದಾರೆ.

    ಓಖಿ ಚಂಡಮಾರುತದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಓಖೀ ಚಂಡಮಾರುತ ರಾಜ್ಯದ ಕರಾವಳಿಯಲ್ಲಿ ಹಾದು ಹೋಗುತ್ತಿರುವುದರಿಂದ ರಾಜ್ಯ ಕರಾವಳಿಯಲ್ಲಿಯೂ ಬದಲಾವಣೆಯಾಗಿದೆ. ಅಲೆಗಳ ಅಬ್ಬರ ಹೆಚ್ಚಾಗಿದ್ದು ಇನ್ನೆರಡು ದಿನಗಳ ಕಾಲ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಕಳೆದ ರಾತ್ರಿ ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ. ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಮೀನುಗಾರಿಕ ಬೋಟ್‍ಗಳು ಮತ್ತೆ ಬಂದರು ಸೇರುತ್ತಿದೆ. ಕೇರಳ, ತಮಿಳುನಾಡಿನ ಬೋಟ್‍ಗಳು, ಮೀನುಗಾರರು ಆಶ್ರಯಕ್ಕಾಗಿ ಉಡುಪಿಯ ಮಲ್ಪೆ ಬಂದರಿನತ್ತ ಧಾವಿಸಿ ಬರುತ್ತಿದ್ದಾರೆ. ಮಲ್ಪೆ ಬೀಚ್‍ನಲ್ಲಿಯೂ ಪ್ರವಾಸಿಗರು ಸಮುದ್ರದಲ್ಲಿ ಬಹುದೂರ ಹೋಗಿ ನೀರಿನಲ್ಲಿ ನೀರಾಟ ಆಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.

    ಜಾಗ್ರತೆ, ಜೀವದ ಜೊತೆ ಚೆಲ್ಲಾಟ ಬೇಡ: ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಲ್ಪೆಯ ಲೈಫ್ ಗಾರ್ಡ್ ಮೋಹನ್, ಹೊರ ಜಿಲ್ಲೆಯ ಪ್ರವಾಸಿಗರನ್ನು ನಿಯಂತ್ರಿಸೋದೇ ಸವಾಲು. ಹೇಳಿದರೂ ಸಮುದ್ರಕ್ಕೆ ಇಳಿದು ಬಿಡುತ್ತಾರೆ. ಅಪಾಯ ಎಂದು ಬೋರ್ಡ್ ಹಾಕಿದ್ರೂ ಅದನ್ನು ಜನ ಗಣನೆಗೆ ತೆಗೆದುಕೊಳ್ಳಲ್ಲ ಅಂತ ಅಸಮಾಧಾನಗೊಂಡರು.

    ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುತ್ತಿರುವುದರಿಂದ ಕಸಗಳು ದಡ ಸೇರುತ್ತಿದೆ. ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್‍ಗೆ ತೆರಳುವ ಪ್ರವಾಸಿ ಬೋಟ್‍ಗಳ ಸಂಚಾರ ನಿಷೇಧಿಸಲಾಗಿದೆ. ಇಂದು ಪ್ರವಾಸಿಗರಿಗೆ ಐಲ್ಯಾಂಡ್ ನೋಡುವ ಭಾಗ್ಯ ಸಿಗುವುದಿಲ್ಲ. ನಾಳೆ ಮಧ್ಯ ರಾತ್ರಿವರೆಗೂ ಹವಾಮಾನ ಏರುಪೇರಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವುದಕ್ಕೆ ಸೂಚಿಸಲಾಗಿದೆ. ಬೀಚ್‍ನಲ್ಲಿರುವ ಲೈಫ್ ಗಾರ್ಡ್‍ಗಳು ಪ್ರವಾಸಿಗರ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿದ್ದಾರೆ. ಮೈಕ್ ಮೂಲಕ ಓಖಿ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.

    ಓಖಿ ಚಂಡಮಾರುತ ರಾಜ್ಯ ಕರಾವಳಿಯಿಂದ ಬಹುದೂರದಲ್ಲಿ ಸಾಗುತ್ತಿದ್ದು, ಲಕ್ಷದ್ವೀಪದಿಂದ ಗುಜರಾತ್ ಕಡೆಗೆ ಪಯಣಿಸಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮ್ಯಾಪ್ ಸಿದ್ಧಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹರಿಯಬಿಟ್ಟು ಗೊಂದಲ ನಿವಾರಣೆಗೆ ಯತ್ನಿಸುತ್ತಿದೆ. ಒಟ್ಟಿನಲ್ಲಿ ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ.

     

    ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    https://www.youtube.com/watch?v=QC37Q2pdg9w

  • ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಉಡುಪಿ: ಆತ ಆಕೆಯನ್ನ ಮದುವೆಯಾಗಿ ದುಡಿಮೆಗೆಂದು ವಿದೇಶಕ್ಕೆ ಹಾರಿದ್ದ. ತನ್ನ ಹೊಟ್ಟೆಯಲ್ಲೇ ಗಂಡನ ಪ್ರೀತಿ ಬೆಳೆಯುತ್ತಿದ್ದು ಆ ಮಗುವಿನಲ್ಲಿ ತನ್ನ ಗಂಡನನ್ನು ನೋಡಲು ಆಕೆ ಹಾತೊರೆಯುತ್ತಿದ್ದಳು. ಆದರೆ ರಾಕ್ಷಸ ರೂಪಿ ಗಂಡನ ಮನೆಯವರು ಆಕೆಯನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ.

    ಈಗ ಹೆಂಡತಿಗೆ ಹಿಂಸೆ ನೀಡುತ್ತಿದ್ದ ಗಂಡ, ಮಾವ, ಅತ್ತೆ ಸಹಿತ ಆರು ಮಂದಿ ಆರೋಪಿಗಳ ವಿರುದ್ಧ ಉಡುಪಿಯ ನಗರ ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗಿದೆ. ಗಂಡನ ಮನೆಯವರ ಹಿಂಸೆ ತಾಳಲಾರದೇ ಮಹಿಳೆ ತವರು ಮನೆ ಸೇರಿದ್ದಾಳೆ.

    ಏನಿದು ಪ್ರಕರಣ?
    ಮಂಗಳೂರಿನ ಮಾರ್ನಮಿಕಟ್ಟೆ ಡೈಮಂಡ್ ಸಿಟಿ ಫ್ಲಾಟ್ ನಿವಾಸಿ ಝಿಯಾನಾ ಸಲೀಂ ಚಿಸ್ಪಿ(23) ಚಿತ್ರ ಹಿಂಸೆಗೊಳಗಾದ ಮಹಿಳೆ. 2017 ಜುಲೈ 18 ರಂದು ಝಿಯಾನಾ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ ಎಂಬಾತನೊಂದಿಗೆ ಮದುವೆಯಾಗಿತ್ತು. ಮಂಗಳೂರಿನ ಕಾಂತಿ ಚರ್ಚ್ ಸಭಾಂಗಣದಲ್ಲಿ ಮದುವೆಯಾಗಿದ್ದು, ಮದುವೆಯ ವೇಳೆ ಅವರಿಗೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕೂಡಾ ಹಾಕಿದ್ದಾರೆ.

     

    ಮದುವೆಯ ಬಳಿಕ ಗಂಡ ಹೆಂಡತಿ ಒಳ್ಳೆಯ ರೀತಿಯಲ್ಲಿದ್ದರು. ಮನೆಯವರು ಕೂಡಾ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿರುತ್ತಾರೆ. ಆದರೆ ಗಂಡ ಹೊರ ದೇಶಕ್ಕೆ ಹೋದ ನಂತರ ಆರೋಪಿಗಳಾದ ಮಾವ, ಅತ್ತೆ, ನಾದಿನಿ ಹಾಗೂ ಗಂಡ ಸೇರಿಕೊಂಡು ಝಿಯಾನಾ ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು.

    40 ದಿನಗಳ ಗರ್ಭಿಣಿಯಾದಾಗ ಆಕೆಗೆ ತಿಳಿಯದಂತೆ ಆರೋಪಿಗಳು ವೈದ್ಯರು ಬರೆದುಕೊಟ್ಟ ಮಾತ್ರೆಯ ಜೊತೆಗೆ ಗರ್ಭಪಾತ ಮಾತ್ರೆಯನ್ನು ಸೇರಿಸಿ ಗರ್ಭಪಾತವಾಗುವಂತೆ ಮಾಡಿಸಿದ್ದಾರೆ. ಝಿಯಾನಾ ಇಷ್ಟೆಲ್ಲಾ ಆದ ಮೇಲೆ ಈಗ ಮಂಗಳೂರಿನಲ್ಲಿರುವ ಪೋಷಕರ ಮನೆಗೆ ಹೋಗಿದ್ದಾರೆ.

    ಗಂಡ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ, ತಾಹಿರಾ ಬಾನು, ಸಯೀದಾ, ಆಲಿಶಾ, ಸುನೈನಾ, ಗಫೂರ್ ಅಬ್ದುಲ್ ಜಬ್ಬರ್, ಅಜೀಜುನ್ನೀಸಾ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾನು ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ: ಪೇಜಾವರಶ್ರೀ

    ನಾನು ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ: ಪೇಜಾವರಶ್ರೀ

    ಉಡುಪಿ: ನಾನು ಸಂವಿಧಾನ ಬದಲಿಸಿ ಎಂದು ಧರ್ಮ ಸಂಸದ್ ನಲ್ಲಿ ಹೇಳಿಲ್ಲ. ಅಂಬೇಡ್ಕರ್ ಗೆ ಅಪಮಾನ ಮಾಡಿಲ್ಲ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕೆಂದು ನಾನು ಹೇಳಿದೆ. ಆದರೆ ದಲಿತರ ಮೀಸಲಾತಿ ವಿಚಾರ ನಾನು ಮಾತನಾಡಲೇ ಇಲ್ಲ. ದಲಿತರಿಗೆ ಮೀಸಲಾತಿ ವಿಸ್ತರಿಸಬೇಕು ಎಂದು ಹೇಳುವವರಲ್ಲಿ ನಾನು ಒಬ್ಬ. ಸಂವಿಧಾನಕ್ಕೆ ಅಪಮಾನ ಮಾಡಿದರೆ ದೇಶಕ್ಕೆ ಅಪಮಾನ ಮಾಡಿದಂತೆ ಎಂದರು.

    ವೇದಿಕೆಯಲ್ಲಿದ್ದ ಸಾಹಿತಿಗಳಿಗೂ ಇದು ಅರ್ಥವಾಗಲಿಲ್ಲವಲ್ಲ ಅನ್ನುವುದೇ ವಿಪರ್ಯಾಸ. ಸಂವಿಧಾನ ಅಂಬೇಡ್ಕರ್ ಒಬ್ಬರೇ ರಚನೆ ಮಾಡಿದ್ದಲ್ಲ. ಸಂವಿಧಾನ ರಚನಾ ಸಮಿತಿಯಲ್ಲಿ ದೇಶದ ಎಲ್ಲಾ ಪ್ರತಿನಿಧಿಗಳು ಇದ್ದರು. ಸಂವಿಧಾನ ರಚನಾ ಸಮಿತಿಯಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ, ಅಯ್ಯರ್, ಕೆ.ಎಂ ಮುನ್ಶಿ, ಬೆನಗಲ್, ಅಂಬೇಡ್ಕರ್ ಕೆಲಸಕ್ಕೆ ಕೈಜೋಡಿಸಿದ್ದ ಪ್ರಮುಖರು. ತಮ್ಮ ಹೇಳಿಕೆ ಹೋರಾಟಗಾರ ದ್ವಾರಕನಾಥ್ ರಂತ ದೊಡ್ಡ ವಕೀಲರಿಗೂ ಅರ್ಥವಾಗಲಿಲ್ಲ ಎಂಬುವುದೇ ವಿಪರ್ಯಾಸ ಎಂದು ಹೇಳಿದರು.

    ಧರ್ಮದ ಹೆಸರಲ್ಲಿ ವಿಭಜನೆ ಬೇಡ. ಚರ್ಚ್-ಮಸೀದಿಗಿರುವ ಸ್ವಾಯತ್ತತೆ ಎಲ್ಲರಿಗೂ ಬರಲಿ. ಶಾದಿಭಾಗ್ಯ ದಲಿತರಿಗೆ ಯಾಕಿಲ್ಲ, ದಲಿತರಲ್ಲಿ ಬಡವರು ಇಲ್ವಾ ಎಂದು ಇದೇ ವೇಳೆ ಪ್ರಶ್ನಿಸಿದರು.

    ಉಡುಪಿ ಧರ್ಮ ಸಂಸದ್ ಯಶಸ್ವಿಯಾಗಿದೆ. ಧರ್ಮ ಸಂಸದ್ ಯಶಸ್ವಿಯಾದದ್ದನ್ನು ಬುದ್ಧಿ ಜೀವಿಗಳಿಗೆ, ಸಾಹಿತಿಗಳಿಗೆ ಸಹಿಸಲಾಗುತ್ತಿಲ್ಲ. ಸಾಹಿತಿಗಳಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವಾಗುತ್ತಿದೆ. ಪಾಪದ ದಲಿತರನ್ನು ಇವರು ವಿವಾದವೆಂದು ಹೇಳಿ ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದರು.

    ಪೇಜಾವರ ಶ್ರೀ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಾದ್ಯಂತ ಹಲವು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.