Tag: ಉಡುಪಿ

  • ಚಿತ್ರೀಕರಣದ ವೇಳೆ 10 ಅಡಿ ಎತ್ತರದ ಮರದಿಂದ ಬಿದ್ದ ನಟ – ಇದು ಹಾರರ್ ಎಫೆಕ್ಟ್ ಅಂತಿದೆ ಚಿತ್ರತಂಡ

    ಚಿತ್ರೀಕರಣದ ವೇಳೆ 10 ಅಡಿ ಎತ್ತರದ ಮರದಿಂದ ಬಿದ್ದ ನಟ – ಇದು ಹಾರರ್ ಎಫೆಕ್ಟ್ ಅಂತಿದೆ ಚಿತ್ರತಂಡ

    ಉಡುಪಿ: ನೈಜ ಕಥೆಯನ್ನು ಆಧರಿಸಿ ಶೂಟಿಂಗ್ ನಡೆಸುತ್ತಿರುವ ‘ಕತ್ತಲೆ ಕೋಣೆ’ ಸಿನಿಮಾ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ.

    `ಕತ್ತಲೆ ಕೋಣೆ’ ಚಿತ್ರ ಕುಂದಾಪುರದ ಸಂದೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಕೇರಳ ಮತ್ತು ಮುಂಬೈ ಮೂಲದ ಕಲಾವಿದರು ಮತ್ತು ಟೆಕ್ನಿಷಿಯನ್ ಗಳು ಕೆಲಸ ಮಾಡುತ್ತಿದ್ದಾರೆ.

    ಜಿಲ್ಲೆಯ ಕುಂದಾಪುರದ ಕಾಡು, ಪಶ್ಚಿಮಘಟ್ಟದ ತಪ್ಪಲಿನ ಕಾಡುಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹಲವು ಭಯಾನಕ ಅನುಭವಗಳು ಆಗಿವೆ ಎಂದು ಚಿತ್ರತಂಡ ಹೇಳುತ್ತಿದೆ. ದಟ್ಟ ಕಾಡಿನ ನಡುವೆ ಒಂದು ಶಾಲೆ, ಶಾಲೆಯ ಮಕ್ಕಳು ಮರ ಹತ್ತಿ ಮಾವಿನ ಕಾಯಿಯನ್ನು ಕೀಳುವ ಸೀನ್ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಟ ಮರದ ಮೇಲೆ ಕುಳಿತು ಮಾವಿನ ಕಾಯಿ ಕಿತ್ತು ಕೆಳಗೆ ನಿಂತಿದ್ದ ತನ್ನ ಸಹಪಾಠಿಗಳಿಗೆ ಕೊಡುತ್ತಿದ್ದ ವೇಳೆ ಕೊಂಬೆ ಮುರಿದು ಅವಘಡ ಸಂಭವಿಸಿದೆ.

    ಸುಮಾರು 10 ಅಡಿ ಎತ್ತರದಿಂದ ವಿದ್ಯಾರ್ಥಿಯ ಪಾತ್ರಧಾರಿ ಮಂಗಳೂರು ಮೂಲದ ರವಿ ಹಠಾತ್ತನೆ ಕೆಳಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತರಚಿದ ಗಾಯಗಳಾಗಿದ್ದು, ಪ್ರಾಣಾಯದಿಂದ ಪಾರಾಗಿದ್ದಾನೆ. ಆದರೆ ಈ ಘಟನೆಯಿಂದ ಕಲಾವಿದ ವಾರಗಳ ಕಾಲ ಜ್ವರಕ್ಕೆ ತುತ್ತಾಗಿದ್ದಾನೆ. ಕತ್ತಲೆಕೋಣೆ ಹಾರರ್ ಚಿತ್ರವಾಗಿದ್ದು, ಬೆಚ್ಚಿಬೀಳುವ ಹಲವು ಘಟನೆಗಳು ನಡೆದಿದೆ ಎಂದು ಚಿತ್ರತಂಡ ತಿಳಿಸಿದೆ.

    ಈ ಹಿಂದೆ ಚಿತ್ರೀಕರಣ ಮಾಡುವಾಗ ಲೈಟ್ ಇಂಜಿನಿಯರ್ ಕಟ್ಟಿದ್ದ ಲೈಟ್ ಅವರ ತಲೆಗೆ ಬಿದ್ದು ಗಾಯವಾದ ಘಟನೆಯೂ ನಡೆದಿದೆ. ಮಧ್ಯರಾತ್ರಿಯ ಶೂಟಿಂಗ್ ನಡೆಯುತ್ತಿದ್ದಾಗ, ಜನರೇಟರ್‍ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡಿದ್ದು, ಆಶ್ಚರ್ಯದ ಜೊತೆ ಭಯವಾಗುತ್ತಿದೆ. ಮುಂದೆ ಏನೆಲ್ಲ ಕಾದಿದಿಯೋ ಎಂದು ಆತಂಕ ಶುರುವಾಗಿದೆ ಎಂದು ಚಿತ್ರ ತಂಡ ಭಯದಿಂದ ಹೇಳುತ್ತಿದೆ.

     

  • ಹಸಿವು ತಾಳಲಾಗದೇ ಮನೆಯಂಗಳದಲ್ಲಿ ಎದ್ದು ಬಿದ್ದು ಒದ್ದಾಡಿ ಚಿರತೆ ಸಾವು: ವಿಡಿಯೋ ನೋಡಿ

    ಹಸಿವು ತಾಳಲಾಗದೇ ಮನೆಯಂಗಳದಲ್ಲಿ ಎದ್ದು ಬಿದ್ದು ಒದ್ದಾಡಿ ಚಿರತೆ ಸಾವು: ವಿಡಿಯೋ ನೋಡಿ

    ಉಡುಪಿ: ಹೆಣ್ಣು ಚಿರತೆಯೊಂದು ಮನೆಯಂಗಳದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನಡೆದಿದೆ. ಈ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ತಾಲೂಕಿನ ಎರ್ಲಪ್ಪಾಡಿ ಗ್ರಾಮದ ಕಾಂತರಗೋಡಿಯ ವಿಲಿಎಂ ಎಂಬವರ ಮನೆಯ ಅಂಗಳಕ್ಕೆ ದೊಡ್ಡ ಗಾತ್ರದ ಹೆಣ್ಣು ಚಿರತೆಯೊಂದು ಏಕಾಏಕಿ ಬಂದಿದೆ. ಆದರೆ ಚಿರತೆಗೆ ಇರಬೇಕಾದ ಘರ್ಜನೆ ಮಾತ್ರ ಮನೆಗೆ ಬಂದ ಚಿರತೆಗೆ ಇರಲಿಲ್ಲ. ಬದಲಾಗಿ ಚಿರತೆ ತಲೆ ಸುತ್ತು ಬಂದವರಂತೆ ಬೀಳುತ್ತಿತ್ತು. ಮತ್ತೆ ಏಳಲು ಪ್ರಯತ್ನ ಮಾಡಿ ಮತ್ತೆ ಮತ್ತೆ ಬೀಳುತ್ತಿತ್ತು. ಸುಮಾರು 10 ರಿಂದ 15 ನಿಮಿಷಗಳ ಕಾಲ ಎಲ್ಲರ ಕಣ್ಣಮುಂದೆಯೇ ಒದ್ದಾಡಿ, ಕೊನೆಗೆ ಸತ್ತುಹೋಗಿದೆ.

    ಕೂಡಲೇ ವಿಲಿಯಂ ಅವರು ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುಷ್ಟರಲ್ಲಿ ಚಿರತೆ ಸಾವನ್ನಪ್ಪಿದೆ. ಅರಣ್ಯ ಇಲಾಖೆ ಚಿರತೆಯ ಮೃತದೇಹವನ್ನು ಪರೀಕ್ಷೆ ಮಾಡಿದ್ದು, ಚಿರತೆ ಹೊಟ್ಟೆಯಲ್ಲಿ ಹುಲ್ಲು ಕಂಡುಬಂದಿದೆ. ತೀವ್ರ ಹಸಿವಿನಿಂದ ಚಿರತೆ ಬಳಲುತ್ತಿದ್ದು, ಹಸಿವು ತಾಳಲಾರದೆ ಹುಲ್ಲನ್ನು ತಿಂದಿರಬಹುದು. ಜೊತೆಗೆ ಹಸಿವು ಜೋರಾಗಿ ಸತ್ತಿರಬಹುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

    ಇನ್ನೂ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೊಂದು ಗಂಡು ಚಿರತೆಯ ಮೃತದೇಹ ಪತ್ತೆಯಾಗಿದೆ. ಎರಡು ಚಿರತೆಗಳು ಒಟ್ಟೊಟ್ಟಿಗೆ ಸತ್ತಿರುವುದರಿಂದ ವಿಷಾಹಾರವನ್ನು ತಿಂದಿರಬಹುದು ಎಂಬ ಶಂಕೆಯಿದೆ. ಅಂತಿಮ ಮರಣೋತ್ತರ ವರದಿ ಬಂದ ಮೇಲೆ ಚಿರತೆಗಳ ಸಾವಿಗೆ ನಿಖರ ಕಾರಣ ತಿಳಿಯಬಹುದು ಎಂದು ಅರಣ್ಯಾಧಿಕಾರಿಗಳ ಹೇಳಿದ್ದಾರೆ.

    ಬೆಳೆ ನಾಶ ಮಾಡಲು ಬರುವ ಕಾಡು ಹಂದಿಗಳಿಗೆ ಹಳ್ಳಿಕಡೆ ವಿಷಾಹಾರ ಇಡಲಾಗುತ್ತದೆ. ಈ ಎರಡು ಚಿರತೆಗಳು ವಿಷಾಹಾರ ಸೇವನೆ ಮಾಡಿರಬಹುದು ಎಂಬ ಸಂಶಯ ಇದೆ. ವಿಷಾಹಾರ ತಿಂದು ಎರ್ಲಪ್ಪಾಡಿವರೆಗೆ ಚಿರತೆ ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಎರಡು ಜೊತೆಗೆ ಓಡಾಡುತ್ತಿದ್ದ ಚಿರತೆಗಳು ಒಂದೇ ಕಡೆ ವಿಷ ತಿಂದು ಸತ್ತಿರಬಹುದು ಎಂದು ಹೇಳಲಾಗುತ್ತಿದೆ.

    https://www.youtube.com/watch?v=kNIncCNQCuU

  • ಉಡುಪಿಯ ವಿದ್ಯಾರ್ಥಿನಿ ಬದುಕಿಸಲು 150 ಕಿ.ಮೀ ಝೀರೋ ಟ್ರಾಫಿಕ್ ನಿರ್ಮಿಸಿ ಬೆಂಗ್ಳೂರಿಗೆ ರವಾನೆ

    ಉಡುಪಿಯ ವಿದ್ಯಾರ್ಥಿನಿ ಬದುಕಿಸಲು 150 ಕಿ.ಮೀ ಝೀರೋ ಟ್ರಾಫಿಕ್ ನಿರ್ಮಿಸಿ ಬೆಂಗ್ಳೂರಿಗೆ ರವಾನೆ

    ಉಡುಪಿ: ರಾಜ್ಯದ ಅತೀದೊಡ್ಡ ಝೀರೋ ಟ್ರಾಫಿಕ್ ನಿರ್ಮಾಣ ಮಾಡಿ ಆರನೇ ತರಗತಿ ವಿದ್ಯಾರ್ಥಿನಿಯನ್ನು ಉಡುಪಿಯಿಂದ ಬೆಂಗಳೂರಿಗೆ ರವಾನೆ ಮಾಡಲಾಗಿದೆ.

    ಉಡುಪಿಯ ಬೈಂದೂರಿನ ಗ್ರಾಮದ ಆರನೇ ತರಗತಿ ವಿದ್ಯಾರ್ಥಿನಿ ಅನುಶಾ. ಈಕೆ ಗಂಭೀರವಾದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಹೀಗಾಗಿ ಗುರುವಾರ ಅನುಶಾಳನ್ನು ಬೈಂದೂರು ತಾಲೂಕಿನ ಅರೆಶೀರೂರಿನಿಂದ ಉಡುಪಿ-ಮಂಗಳೂರು ಮಾರ್ಗವಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಉಡುಪಿ ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ ಅನಾರೋಗ್ಯ ಪೀಡಿತೆಯನ್ನು ಬೆಂಗಳೂರಿಗೆ ರವಾನೆ ಮಾಡುವ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಸುಮಾರು 140 ಕಿಲೋ ಮೀಟರ್ ದೂರದವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಝೀರೋ ಟ್ರಾಫಿಕ್ ರಸ್ತೆಯನ್ನು ನಿರ್ಮಾಣ ಮಾಡಿದ್ದರು.

    ಒಂದು ಪೊಲೀಸ್ ವಾಹನ ಮತ್ತು ಆಂಬುಲೆನ್ಸ್ ಅತೀ ವೇಗದಲ್ಲಿ ಮಂಗಳೂರಿನ ಬಜ್ಪೆ ನಿಲ್ದಾಣಕ್ಕೆ ತಲುಪಿ ಅಲ್ಲಿಂದ 1 ಗಂಟೆಯ ಜೆಟ್ ಏರ್ ವೇಸ್ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಅನುಶಾಳನ್ನು ರವಾನೆ ಮಾಡಲಾಯಿತು. ಹೆಬ್ಬಾಳದ ಆಸ್ಟರ್ ಹಾಸ್ಪಿಟಲ್ ನಲ್ಲಿ ಆಪರೇಷನ್ ನಡೆಸಲಾಗುವುದು. ಬೆಂಗಳೂರು ವೈದ್ಯರು ಉಡುಪಿಗೆ ಬಂದು ಶಸ್ತ್ರಚಿಕಿತ್ಸೆ ಕೊಡಲು 48 ಗಂಟೆ ತಗಲುವುದರಿಂದ ವೈದ್ಯರು ಅನುಶಾಳನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

    ಮಧ್ಯಾಹ್ನ ಸುಮಾರು 2 ಗಂಟೆಗೆ ಬಂದ ಅನುಶಾಗೆ ಬೆಂಗಳೂರಿನಲ್ಲಿ ಹೆಬ್ಬಾಳದ ಆಸ್ಟರ್ ಆಸ್ಪತ್ರೆಯಲ್ಲಿ ಅನುಶಾಳಿಗೆ ಚಿಕಿತ್ಸೆ ಶುರುಮಾಡಲಾಗಿದೆ. ಅರೆಶೀರೂರು ಹೈಸ್ಕೂಲಿನ ಮುಖ್ಯ ಶಿಕ್ಷಕರ ಮಗಳು ಅನುಶಾ ಕಡು ಬಡತನದಿಂದ ಬಂದವಳು. ಆಕೆಯ ಶಸ್ತ್ರಚಿಕಿತ್ಸೆಗೆ ಹಣಕಾಸಿನ ಅವಶ್ಯಕತೆಯಿದೆ ಎಂದು ಕುಟುಂಬ ಮನವಿ ಮಾಡಿಕೊಂಡಿದೆ.

    ಬೈಂದೂರಿನಿಂದ ಕುಂದಾಪುರ- ಉಡುಪಿ, ಪಡುಬಿದ್ರೆ ಮಾರ್ಗವಾಗಿ ಮೂಲ್ಕಿವರೆಗೆ ಉಡುಪಿ ಜಿಲ್ಲಾ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಉಡುಪಿಯ ಗಡಿ ದಾಟಿ ಮಂಗಳೂರಿಗೆ ಬಂದ ಕೂಡಲೇ ಪೊಲೀಸರು ಅಸಹಾಕಾರ ತೋರಿದ್ದಾರೆ. ಮಾಮೂಲಿಯಂತೆ ಟ್ರಾಫಿಕ್ ರಸ್ತೆಯಲ್ಲಿ ಆಂಬುಲೆನ್ಸ್ ಗೆ ಕಿರಿಕಿರಿ ಮಾಡಿದೆ. ವೇಗವಾಗಿ ಮಂಗಳೂರು ವಿಮಾನ ನಿಲ್ದಾಣ ರೀಚ್ ಆಗಬೇಕಿದ್ದ  ಆಂಬುಲೆನ್ಸ್ ತಡವಾಗಿ ತಲುಪಿತು.

    ಮಂಗಳೂರು ಜಿಲ್ಲಾ ಪೊಲೀಸರು ಅನುಶಾ ಇದ್ದ ಆಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಲ್ಲ. ವಾಹನ ದಟ್ಟಣೆಯ ನಡುವೆ ನಡುವೆ ಆಂಬುಲೆನ್ಸ್ ನಿಧಾನಗತಿಯಲ್ಲಿ ವಿಮಾನ ನಿಲ್ದಾಣ ತಲುಪದ್ದು, ಸುಮಾರು 15 ನಿಮಿಷಗಳ ಕಾಲ ನಾವು ವಿಳಂಬವಾಗಿ ವಿಮಾನ ನಿಲ್ದಾಣ ತಲುಪಬೇಕಾಯಿತು. ಏರ್ ಪೋರ್ಟ್ ನಿಂದ ಹತ್ತಾರು ಫೋನ್ ಕರೆಗಳು ಬಂದವು ಎಂದು ಆಂಬುಲೆನ್ಸ್ ಜೊತೆಗಿದ್ದ ರವಿಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

     

  • ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ

    ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ

    – ರಾಹುಲ್ ಗಾಂಧಿ ರಾಜಕೀಯಕ್ಕೆ ಸೂಟ್ ಆಗಲ್ವಂತೆ

    ಉಡುಪಿ: ಡಿಸೆಂಬರ್ 18 ಎಂಬ ಸಂಖ್ಯೆಯೇ ಯುದ್ಧಭೂಮಿ. ಬೆಳಗ್ಗೆ 9 ಗಂಟೆಗೆ ಸೂರ್ಯನಿಗೂ, ಶನಿಗೂ ಯುದ್ಧ. ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಕುಸಿತ. ಬಿಜೆಪಿಗರಿಗೆ ಜೋರು ಎದೆಬಡಿತ. ಹಿಗ್ಗಿದ ಕಾಂಗ್ರೆಸಿಗರು ನಂತರ ಕುಗ್ಗುತ್ತಾರೆ. ಆದರೆ ಮೋದಿ, ಅಮಿತ್ ಷಾ ಕ್ಲೀನ್ ಸ್ವೀಪ್ ಕನಸು ನನಸಾಗುತ್ತದೆ. ಇದು ಉಡುಪಿಯ ಕಾಪುವಿನ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಅವರ ಲೆಕ್ಕಾಚಾರ. ಈ ಲೆಕ್ಕಾಚಾರ ಮಾಡಿದ್ದು ಚುನಾವಣೆಯ ಫಲಿತಾಂಶ ಬರುವ 20 ಗಂಟೆ ಮೊದಲು ಅನ್ನೋದೇ ವಿಶೇಷ.

    ಡಿಸೆಂಬರ್ 18 ಇಡೀ ದೇಶದ, ವಿಶ್ವದ ಚಿತ್ತ ಭಾರತದ ಎರಡು ರಾಜ್ಯಗಳ ಮೇಲಿತ್ತು. ಕಾರಣ ಪ್ರಧಾನಿ ಮೋದಿಯ ಪ್ರತಿಷ್ಠೆಯ ಫಲಿತಾಂಶಕ್ಕಾಗಿ ಜನ ಕಾಯುತ್ತಿದ್ದರು. ಬೆಳಗ್ಗೆ ಮೊದಲ ಸುತ್ತಿನಲ್ಲಿ ಬಿಜೆಪಿ ಮೇಲುಗೈ ಸಾಧಿಸಿದರೆ, 10 ಗಂಟೆ ಸುಮಾರಿಗೆ ಮುನ್ನಡೆ, ಹಿನ್ನಡೆ ಹಾವು-ಏಣಿ ಆಟ ಶುರುವಾಯಿತು. ಆ ಹೊತ್ತಿಗೆ ಷೇರು ಪೇಟೆ ಕುಸಿತ ಕಂಡಿತು. ಜನರ ಹೃದಯ ಬಡಿತ ಹೆಚ್ಚಾಯಿತು. ಕಾಂಗ್ರೆಸ್ ಹಿಗ್ಗಿ ಕುಣಿಯಿತು. ಆದರೆ ಲೆಕ್ಕಾಚಾರದ ಅಂತ್ಯಕ್ಕೆ ಮತ್ತೆ ಮೋದಿ ಮೋಡಿ ಮಾಡಿದರು. ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ? ನಭೋ ಮಂಡಲದಲ್ಲಿ ರವಿ ಮತ್ತು ಶನಿಗ್ರಹದ ಯುದ್ಧವಂತೆ.

    ಉಡುಪಿಯ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಡಿಸೆಂಬರ್ 18ಕ್ಕೆ ಹೀಗೆಯೇ ಆಗುತ್ತೆ ಎಂದು ಬರೆದುಕೊಟ್ಟಿದ್ದರು. ಅದು ನಿಜವಾಗಿದೆ. ಮೋದಿಯ ಮುಂದಿನ ಭವಿಷ್ಯವನ್ನೂ ಅಮ್ಮಣ್ಣಾಯರು ಜಾತಕ ಮೂಲಕ ತಿಳಿದಿದ್ದಾರೆ. ಫಲಿತಾಂಶ ಬರೋ ಮೊದಲೇ ಪ್ರಕಾಶ್ ಅಮ್ಮಣ್ಣಾಯ ಚುನಾವಣೆಯ ದಿಕ್ಕನ್ನು ಬಿಚ್ಚಿಟ್ಟಿದ್ದರು. ಪ್ರತಿ ಸೂರ್ಯೋದಯ ಒಂದೊಂದು ತತ್ವವನ್ನು ಹೊಂದಿದ್ದು, ಇದನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮೊದಲೇ ಹೇಳಿದ್ದಾರೆ.

    ಪ್ರಧಾನಿ ಮೋದಿಯ ಕುಂಡಲಿಯನ್ನು ನೋಡಿದೆ. ಇನ್ನಷ್ಟು ಅಧ್ಯಯನ ಮಾಡಿದಾಗ, ಸೂರ್ಯೋದಯ ಧನುರಾಶಿಯಲ್ಲಿ ಆಗುತ್ತಿದೆ. ಪ್ರಾರಂಭದಲ್ಲಿ ಆತಂಕ ಎಂಬುದು ಅರವಿಗೆ ಬಂತು. ವಿರೋಧ ಪಕ್ಷ ಅಂದರೆ ಶನಿ. ಒಂದು ಬಾರಿ ಶನಿಗೆ ಮೇಲುಗೈ ಆಗುತ್ತದೆ. ನಂತರ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿರುವಾಗ ಶನಿಯ ಪ್ರಭಾವ ಕಮ್ಮಿಯಾಗಿ ಅಧಿಕಾರದಲ್ಲಿರುವ ಬಿಜೆಪಿಯ ಸೀಟುಗಳ ಸಂಖ್ಯೆ ಜಾಸ್ತಿಯಾಗುತ್ತದೆ ಎಂದು ಹೇಳಿದರು.

    ಈ ಹಿಂದೆಯೂ ಹಲವು ಎಲೆಕ್ಷನ್ ಬಗ್ಗೆ ಬರೆದಿದ್ದೇನೆ. ಮಹಾರಾಷ್ಟ್ರ ಸಿಎಂ ಫಡ್ನವಿಸ್ ಗೆ ಇ-ಮೇಲ್ ಮಾಡಿ ಕೆಲವು ಸಲಹೆ ನೀಡಿದ್ದೇನೆ. ಅದನ್ನು ಅವರು ಫಾಲೋ ಮಾಡಿದ್ದಾರೆ. ವಾಪಾಸ್ ಇ-ಮೇಲ್ ಸಂದೇಶ ಕಳಿಸಿದ್ದಾರೆ ಎಂದು ಹೇಳಿದರು.

    ಸೂರ್ಯ ಉದಯವಾದಾಗ ಆಡಳಿತ ಪಕ್ಷಕ್ಕೆ ಆತಂಕದ ಸ್ಥಿತಿ ಇರುತ್ತದೆ. ರವಿ ಕೇಂದ್ರ ಸರ್ಕಾರ ಸೂಚಿಸುವವ, ಶನಿ ರಾಜಕಾರಣಿ. ಲಗ್ನದಲ್ಲಿ ಯುದ್ಧಸ್ಥಿತಿ ಇರುತ್ತದೆ. 8-9 ಗಂಟೆಯವರೆಗೆ ಶನಿಯ ಪ್ರಭಾವ ಇರುತ್ತದೆ. ನಂತರ ಸೂರ್ಯನ ಪ್ರಭಾವ ಶುರುವಾಗುತ್ತದೆ. ವಾರದ ಹಿಂದೆ ಚುನಾವಣೆ ಆಗಿದ್ದರೆ, ಲೆಕ್ಕಾಚಾರ ಮಾಡಿದ್ದರೆ ನಮ್ಮ ಲೆಕ್ಕಾಚಾರವೇ ಬೇರೆಯಾಗುತ್ತಿತ್ತು ಎಂದರು. ಜಗತ್ತಿನ ಪ್ರತಿ ಕ್ಷಣದ ನಿರ್ಧಾರಗಳು ಮುಂದಿನ ಲೆಕ್ಕಾಚಾರಕ್ಕೆ ಅಡಿಗಲ್ಲು. ಜಿಎಸ್‍ಟಿ ಮತ್ತು ನೋಟ್ ಬ್ಯಾನ್ ಮಾಡದಿದ್ದರೆ ಇನ್ನೂ ಹೆಚ್ಚಿನ ಸೀಟು ಬಿಜೆಪಿಗೆ ಬರುತ್ತಿತ್ತು. ಒಂದು ವರ್ಷದ ನಂತರ ಚುನಾವಣೆ ನಡೆದಿದ್ದರೆ 150 ಸೀಟುಗಳನ್ನು ಗಳಿಸುತ್ತಿತ್ತು. ಜಿಎಸ್‍ಟಿ ಜನೋಪಯೋಗಿ ಆಗಲು ಇನ್ನೂ ಸಮಯ ಬೇಕು ಎಂದರು.

    ಕಾಂಗ್ರೆಸ್ ನ ಚಾಲಕನ ಗ್ರಹಗತಿ ಸರಿಯಿಲ್ಲ: ರಾಹುಲ್ ಗಾಂಧಿಗೆ ಚಂದ್ರ ದೆಶೆಯಲ್ಲಿ ಶನಿಭುಕ್ತಿ ನಡೆಯುತ್ತಿದೆ. ಜೊತೆಗೆ ಪಕ್ಷದ ಅಧ್ಯಕ್ಷನ ಪಟ್ಟವೂ ಬಂತು. ಷಷ್ಟಾಷ್ಟಮದಲ್ಲಿ ರಾಹುಲ್ ಗಾಂಧಿಯ ಮಾನಸಿಕ ಸ್ಥಿತಿಗತಿ ಸರಿ ಇರುವುದಿಲ್ಲ. ಈ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರಗಳು ತಪ್ಪಾಗುತ್ತದೆ. ಅದು ರಾಹುಲ್ ಗಾಂಧಿಯ ತಪ್ಪಲ್ಲ. ಅವರ ಗ್ರಹಗತಿಯ ಸಮಸ್ಯೆ. ಮಹೂರ್ತಗಳು ಸರಿ ಇಲ್ಲದೆ ಇರುವಾಗ, ಶನಿಭುಕ್ತಿ ಇರುವಾಗ ಹಿನ್ನಡೆಗಳಾಗುತ್ತದೆ. ರಾಹುಲ್ ಗಾಂಧಿ ಚುನಾವಣಾ ರಾಜಕೀಯದಿಂದ ದೂರ ಉಳಿದರೆ ಒಳ್ಳೆಯದು. ಅವರ ಜಾತಕಕ್ಕೂ ರಾಜಕಾರಣಕ್ಕೂ ಹೊಂದಾಣಿಕೆ ಆಗುವುದಿಲ್ಲ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

    ಮೋದಿಯ ಅಗ್ನಿಪರೀಕ್ಷೆ ನಡೆಯುತ್ತಿದೆ: ಪ್ರಧಾನಿ ಮೋದಿಯ ಜಾತಕ ನೋಡಿದ್ದೇನೆ. ಚಂದ್ರದೆಶೆಯಲ್ಲಿ ಶನಿಭುಕ್ತಿ ದಾಟಿದೆ. ಎಲ್ಲರೂ ನಾಯಕ ಎಂದು ಒಪ್ಪಿಕೊಳ್ಳುವ ಜಾತಕ ಅದು. ಅವರ ಸಾಧನೆಗಳು ಇನ್ನಷ್ಟು ಪ್ರತಿಫಲಿಸಲು ಒಂದು ವರ್ಷ ಬೇಕು. ಈಗಿನ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾದರೆ, ಅದರ ಲಾಭ ಜನರನ್ನು ಮುಟ್ಟಬೇಕಾದರೆ ಇನ್ನೂ ಒಂದು ವರ್ಷ ದಾಟಬೇಕು. ಜನರಿಗೆ ಅನುಭವಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತದೆ. ಇಡೀ ಜಗತ್ತೇ ಪ್ರಧಾನಿಯನ್ನು ಪ್ರಶಂಸೆ ಮಾಡುತ್ತಿದೆ ಎಂದರೆ ಅದಕ್ಕೆ ವಿರುದ್ಧ ನುಡಿಯುವುದು ತಪ್ಪು. ಈಗಿನ ನಿರ್ಧಾರ ಕಠಿಣ ಎಂದಿದ್ದಾರೆ.

    ಜನರ ಆಯ್ಕೆಯನ್ನು ಗೌರವಿಸಿಕೊಂಡು ಮುನ್ನಡೆಯಬೇಕು. ವಿಪಕ್ಷದವರು ಮೋದಿಯನ್ನು ನೀಚ ಎಂದರು. ಇದನ್ನು ಜನರ ಮುಂದೆ ಇಟ್ಟಾಗ ಅವರಿಗೇ ಅದು ಹಿಂದೇಟಾಯಿತು. ರಾಜಕಾರಣಿಗಳ ಮೇಲೆ ಹಲವು ಕೋಟಿ ಕಣ್ಣುಗಳು ಇರುತ್ತದೆ. ಜಾಗ್ರತೆಯಿಂದ ಇರುವುದು ಉತ್ತಮ. ಪ್ರತಿ ಮಾತುಗಳು ಟೀಕೆಗೆ ಕಾರಣವಾಗುತ್ತದೆ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳುತ್ತಾರೆ. ತಪ್ಪು ಮಾತನಾಡುವುದು ಸರಿಯಲ್ಲ. ಜನ ಯಾರ ಪರ ಇದ್ದಾರೆ. ಪರಿಸ್ಥಿತಿ ಯಾರ ಪರವಾಗಿದೆ ಎಂದು ನೋಡಿಕೊಂಡು ಮಾತನಾಡಬೇಕು. ಕೆಟ್ಟ ವಚನಗಳು ಮನಸ್ಸಿಗೆ ಪರಿಣಾಮ ಬೀರುತ್ತದೆ ಎಂದರು.

  • ದೇಶಕ್ಕೇ ಮಾದರಿಯಾದ ಉಡುಪಿಯ ಬೆಳಪು ಗ್ರಾಮ ಪಂಚಾಯ್ತಿ – ರಾಜಕೀಯ ರಾಡಿಯಿಂದ ಸಂಪೂರ್ಣ ದೂರ

    ದೇಶಕ್ಕೇ ಮಾದರಿಯಾದ ಉಡುಪಿಯ ಬೆಳಪು ಗ್ರಾಮ ಪಂಚಾಯ್ತಿ – ರಾಜಕೀಯ ರಾಡಿಯಿಂದ ಸಂಪೂರ್ಣ ದೂರ

    ಉಡುಪಿ: ಹಳ್ಳಿಗಳು ದೇಶದ ಬೆನ್ನೆಲುಬು. ಗ್ರಾಮ ಉದ್ಧಾರವಾಗದೆ ದೇಶ ಉದ್ಧಾರ ಸಾಧ್ಯವಿಲ್ಲ ಅಂತ ಮಹಾತ್ಮಾ ಗಾಂಧೀಜಿ ಹೇಳಿದ್ದರು. ಅದರಂತೆ ಇವತ್ತಿನ ಪಬ್ಲಿಕ್ ಹೀರೋ ಉಡುಪಿಯ ಕಾಪು ತಾಲೂಕಿನ ಬೆಳಪು ಗ್ರಾಮ ಅಭಿವೃದ್ಧಿಯಾಗಿದೆ.

    ಉಡುಪಿಯ ಕಾಪು ತಾಲೂಕಿನ ಬೆಳಪು ಗ್ರಾಮ ಪಂಚಾಯ್ತಿ ಆಗಿದೆ. ಈ ಗ್ರಾಮ ದೇಶದಲ್ಲೇ ಮಾದರಿ ಗ್ರಾಮ ಪಂಚಾಯತ್. ಗ್ರಾಮದಲ್ಲಿ 2500 ಜನಸಂಖ್ಯೆಯಿದ್ದು ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಗೆ ಮನೆ ನಿವೇಶನ ಹಂಚಿಕೆ ಮಾಡಿದೆ. ಮೂರು ಬಡಾವಣೆಗೆ ಮೂರು ಪಕ್ಷದ ನಾಯಕರ ಹೆಸರಿಡಲಾಗಿದೆ. ಪ್ರತಿ ಮನೆಗೂ ದಿನಕ್ಕೆ 20 ಲೀಟರ್ ಕುಡಿಯುವ ನೀರು ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ 70 ಎಕರೆ ಜಮೀನನ್ನು ಸಣ್ಣ ಕೈಗಾರಿಕೆಗೆ ಮೀಸಲಿಡಲಾಗಿದೆ. ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಈಗಾಗಲೇ ಬಜೆಟ್‍ನಲ್ಲಿ ಮೊತ್ತ ಮೀಸಲಿಡಲಾಗಿದೆ.

    ಗ್ರಾಮದ ಎಲ್ಲಾ ಮನೆಗಳ ಕಸವನ್ನು ತಂದು ಪಂಚಾಯತ್ ವ್ಯಾಪ್ತಿಯಲ್ಲೇ ತ್ಯಾಜ್ಯ ನಿರ್ವಹಣಾ ಘಟಕ ಮಾಡಲಾಗಿದೆ. ಕಾಂಕ್ರಿಟ್ ರಸ್ತೆ, ವಾಣಿಜ್ಯ ಸಂಕೀರ್ಣ, ಬ್ಯಾಂಕ್, ಸಹಕಾರಿ ಸಂಘ, ಎಟಿಎಂ, ಕೆರೆಗಳ ಅಭಿವೃದ್ಧಿ, ಸ್ಮಶಾನಕ್ಕೆ ವ್ಯವಸ್ಥೆ ಎಲ್ಲ ವ್ಯವಸ್ಥೆಯನ್ನು ಬೆಳಪು ಗ್ರಾಮ ಹೊಂದಿದೆ.

    ಕಳೆದ 15 ವರ್ಷಗಳಿಂದ ಈ ಪಂಚಾಯತ್ ಸದಸ್ಯರ ಸ್ಥಾನಕ್ಕೆ ಚುನಾವಣೆಯೇ ನಡೆದಿರಲಿಲ್ಲ. ಈ ಬಾರಿ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವ ಉದ್ದೇಶದಿಂದ ಮತದಾನ ಮಾಡಲಾಯ್ತು. ಆದ್ರೂ ಎಲ್ಲಾ ಪಕ್ಷದವರು ಹೊಂದಿಕೊಂಡು ರಾಜಕೀಯ ಕೊಳಕು ಮಾಡದೆ ಗ್ರಾಮಕ್ಕಾಗಿ ಶ್ರಮಿಸುತ್ತಿದ್ದಾರೆ.

    ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಬೆಳಪುವಿನ ಸಾಧನೆ ಗುರುತಿಸಿ ಗೌರವಿಸಿದ್ರು. ಜೊತೆಗೆ ನೈರ್ಮಲ್ಯ ವಿಚಾರವಾಗಿ ರಾಜ್ಯ-ಕೇಂದ್ರ ಸರ್ಕಾರಗಳು ಕೊಡ್ತಿರೋ ಪ್ರಶಸ್ತಿಗಳಿಗೂ ಬೆಳಪು ಭಾಜನವಾಗ್ತಿದೆ. ಆರು ಭಾಷೆಗಳಲ್ಲಿ ಬೆಳಪು ಗ್ರಾಮದ ಬಗ್ಗೆ ಪಠ್ಯ ಬಂದಿದೆ. ಮತ್ತೊಂದು ವಿಶೇಷ ಅಂದ್ರೆ ಯುನೆಸ್ಕೋದಿಂದ 20 ದೇಶದ ಸದಸ್ಯರು ಬೆಳಪು ಗ್ರಾಮ ಪಂಚಾಯತ್ ಅಭಿವೃದ್ಧಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

    https://www.youtube.com/watch?v=FW2ga0o3qs0

  • ಒಂದೇ ಕಡೆ ಸಿಕ್ತು ಮೂರು ಹೆಬ್ಬಾವು- ಭಾರೀ ಹಾವುಗಳ ಮಿಲನ

    ಒಂದೇ ಕಡೆ ಸಿಕ್ತು ಮೂರು ಹೆಬ್ಬಾವು- ಭಾರೀ ಹಾವುಗಳ ಮಿಲನ

    ಉಡುಪಿ: ಒಂದು ಹೆಬ್ಬಾವನ್ನು ಕಂಡರೆ ಜನ ಬೆಚ್ಚಿ ಬೀಳುತ್ತಾರೆ. ಎರಡೆರಡು ಹೆಬ್ಬಾವೆಲ್ಲಾದರೂ ಕಾಣ ಸಿಕ್ಕಿದ್ರೆ ಎದ್ದು ಬಿದ್ದು ಜನ ಓಡಿ ಹೋಗುತ್ತಾರೆ. ಆದ್ರೆ ಉಡುಪಿಯಲ್ಲಿ ಮೂರು ಹೆಬ್ಬಾವು ಒಂದೇ ಕಡೆ ಕಾಣಿಸಿಕೊಂಡಿದ್ದು ಸುತ್ತಮುತ್ತಲ ಜನ ದಂಗಾಗಿದ್ದಾರೆ.

    ಉಡುಪಿಯ ಮಲ್ಪೆ ಸಮೀಪದ ಪಂದುಬೆಟ್ಟು ಎಂಬಲ್ಲಿ ಹೈರುನ್ನಿಸ್ಸಾ ಎಂಬವರು ಸೌದೆ ಕೂಡಿಡಲು ಒಂದು ಕೊಟ್ಟಿಗೆ ಕಟ್ಟಿಕೊಂಡಿದ್ದಾರೆ. ಒಲೆ ಉರಿಸಲು ಸೌದೆ ತರಲು ಹೋದ ಅವರಿಗೆ ದೊಡ್ಡ ಗಾತ್ರದ ಹೆಬ್ಬಾವೊಂದು ಸುತ್ತಿಕೊಂಡು ಮಲಗಿರುವುದು ಕಂಡಿದೆ. ಹಾವು ಕಂಡು ಭಯಗೊಂಡ ಅವರು ಸುತ್ತಮುತ್ತಲ ಮನೆಯವರಿಗೆ ಹೇಳಿದ್ದಾರೆ.

    ಕೆಲ ಯುವಕರು ಬಂದು ಹಾವು ಹಿಡಿಯಲು ಪ್ರಯತ್ನಿಸಿದರು. ಒಂದು ಹಾವನ್ನು ಹಿಡಿಯುವಷ್ಟರಲ್ಲಿ ಮತ್ತೊಂದು ಹಾವು ಕಾಣಿಸಿಕೊಂಡಿದೆ. ಆಗ ಸ್ಥಳೀಯ ಯುವಕರು ಉರಗ ತಜ್ಞ ಗುರುರಾಜ್ ಅವರಿಗೆ ಫೋನ್ ಮಾಡಿದ್ದಾರೆ. ಗುರುರಾಜ್ ಹಾವು ಹಿಡಿಯುವ ಹತ್ಯಾರ್ ಹಿಡಿದು ಬಂದು ತಪ್ಪಿಸಿಕೊಂಡು ಹೋಗಿದ್ದ ಮೊದಲ ಮತ್ತು ಎರಡನೇ ಹಾವನ್ನು ಹಿಡಿದಿದ್ದಾರೆ. ಅಷ್ಟೊತ್ತಿಗೆ ಮತ್ತೊಂದು ಹೆಬ್ಬಾವು ಬಿಲದೊಳಗೆ ಅವಿತು ಕುಳಿತಿರುವುದು ಕಾಣಿಸಿದೆ. ಬಿಲವನ್ನು ಮೇಲ್ಬಾಗದಿಂದ ತೆರೆದಾಗ ಹಾವು ಭೂಮಿಯೊಳಗೆ ಹೋಗಲು ಪ್ರಯತ್ನಿಸಿದೆ. ಚಾಕ ಚಕ್ಯತೆಯಿಂದ ಹಿಡಿದ ಗುರುರಾಜ್ ಸನಿಲ್ ಎಲ್ಲಾ ಮೂರು ಹಾವನ್ನು ಹೊರತಂದು ಸಾರ್ವಜನಿಕರ ಆತಂಕ ದೂರ ಮಾಡಿದ್ದಾರೆ.

    ಡಿಸೆಂಬರ್ ನಿಂದ ಫೆಬ್ರವರಿ ತಿಂಗಳವರೆಗೆ ಹಾವುಗಳದ್ದು ಮಿಲನಕಾಲ. ಒಂದಕ್ಕಿಂತ ಹೆಚ್ಚು ಹೆಬ್ಬಾವುಗಳು ಹೆಣ್ಣು ಹೆಬ್ಬಾವಿನ ಜೊತೆ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ. ಹೆಚ್ಚು ಹೆಬ್ಬಾವುಗಳು ಒಂದೆಡೆ ಕಾಣಿಸಿಕೊಂಡರೆ ಸಾರ್ವಜನಿಕರು ಭಯಪಡಬೇಡಿ ಅಂತ ಉರಗತಜ್ಞ ಗುರುರಾಜ್ ಹೇಳಿದ್ದಾರೆ. ಹೆಬ್ಬಾವುಗಳನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಡಲಾಗುವುದು ಅಂತ ಅರಣ್ಯಾಧಿಕಾರಿಗಳು ಹೇಳಿದ್ದಾರೆ.

    https://youtu.be/nEBFCQO2hQE

  • ಮಾರಿಹಬ್ಬ ಎನ್ನುವ ಮೂಲಕ ಬಲಿ ಪಡೆಯುವ ಸೂಚನೆಯಾ: ಹೆಗಡೆಗೆ ಪ್ರಮೋದ್ ಮಧ್ವರಾಜ್ ತಿರುಗೇಟು

    ಉಡುಪಿ: ಮುಂದಿದೆ ಮಾರಿಹಬ್ಬ ಎನ್ನುವ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಸ್ಟೇಟಸ್ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿರುಗೇಟು ಕೊಟ್ಟಿದ್ದಾರೆ.

    ಮಾರಿಹಬ್ಬ ಎನ್ನುವ ಮೂಲಕ ಬಲಿ ಪಡೆಯುವ ಸೂಚನೆಯಾ ಎಂದು ಪ್ರಶ್ನಿಸಿದ್ದಾರೆ. ಮುಂದಿನ ಚುನಾವಣೆ ಗೆಲುವಿಗಾಗಿ ಗಲಭೆ ಹಬ್ಬಿಸುವ ಯತ್ನ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಎಲ್ಲರೂ ಹಿಂಸಾಚಾರ ನಡೆಸಲು ಮುಂದಾಗಿದ್ದಾರೆ. ಅಮಿತ್ ಶಾ ಅವರು ಪ್ರತಾಪ್ ಸಿಂಹನಿಗೆ ಗಲಾಟೆ ಮಾಡಲು ಹೇಳಿದ್ದರು. ಆ ವೀಡಿಯೋ ವೈರಲ್ ಆಗಿತ್ತು. ಶಾ ಸೂಚನೆಯಂತೆ ರಾಜ್ಯದಲ್ಲಿ ನಡೆಯುತ್ತಿದೆ, ಕೇಂದ್ರ ಸಚಿವನಾಗಿ ಹೆಗಡೆ ಈ ರೀತಿಯ ಹೇಳಿಕೆ ಸರಿಯಲ್ಲ ಇಂತವರ ಬಗ್ಗೆ ಜನತೆಯೇ ಸರಿಯಾದ ನಿರ್ಧಾರ ತಳೆಯುತ್ತಾರೆ ಎಂದರು. ಇದನ್ನೂ ಓದಿ: ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

    ಜಾಫರ್ ಷರೀಫ್ ಕಾಂಗ್ರೆಸ್ ಮನೆಯ ಹಿರಿಯ ಅಜ್ಜ. ಕಾಂಗ್ರೆಸ್ ಮುತ್ಸದ್ಧಿ ಜಾಫರ್ ಷರೀಫ್ ಅಸಮಾಧಾನ ಇರಬಹುದು. ಎಲ್ಲಾ ಮನೆಯಲ್ಲೂ ಅಜ್ಜಂದಿರು ಸ್ವಲ್ಪ ಚರಿಪಿರಿ ಮಾಡ್ತಾರೆ. ಪಕ್ಷದ ಹಿರಿಯ ನಾಯಕರು ಅಸಮಾಧಾನ ಶಮನ ಮಾಡುತ್ತಾರೆ ಅಂದರು.

    2018ರ ರಾಜ್ಯ ಚುನಾವಣೆಗೆ ಪ್ರಧಾನಿ ಮೋದಿ-ಅಮಿತ್ ಷಾ ಕರ್ನಾಟಕ ಕ್ಕೆ ಪ್ರಚಾರಕ್ಕೆ ಬರಲಿ. ಆದ್ರೆ ರಾಜ್ಯದಲ್ಲಿ ಗಲಭೆ ಎಬ್ಬಿಸುವುದು ಬೇಡ ಎಂದು ಮಾಧ್ಯಮಗಳ ಮೂಲಕ ಟಾಂಗ್ ಕೊಟ್ಟರು. ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ಪ್ರಶ್ನೆಯೇ ಇಲ್ಲ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿರುವಲ್ಲಿ ಯಾತ್ರೆ ಹೋಗ್ತಾರೆ. ವಿಪಕ್ಷದ ಶಾಸಕರು ಇರುವಲ್ಲಿ ಜನಾಶೀರ್ವಾದ ಕೇಳಲು ಅಧ್ಯಕ್ಷ ಜಿ. ಪರಮೇಶ್ವರ್ ಹೋಗುತ್ತಾರೆ ಎಂದು ಸ್ಪಷ್ಟನೆ ನೀಡಿದರು.

  • ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜನ ಹುಟ್ಟುಹಬ್ಬ- ಉಡುಪಿಯಲ್ಲಿ ಎಸ್‍ಪಿ ಕಚೇರಿ ಪಕ್ಕದಲ್ಲೇ ಕಟೌಟ್

    ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜನ ಹುಟ್ಟುಹಬ್ಬ- ಉಡುಪಿಯಲ್ಲಿ ಎಸ್‍ಪಿ ಕಚೇರಿ ಪಕ್ಕದಲ್ಲೇ ಕಟೌಟ್

    ಉಡುಪಿ: ಇವತ್ತು ಅಂಡರ್ ವರ್ಲ್ಡ್ ಡಾನ್ ಉಡುಪಿ ಮೂಲದ ಬನ್ನಂಜೆ ರಾಜನ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಬನ್ನಂಜೆ ರಾಜನ ಅಭಿಮಾನಿ ಬಳಗ ಉಡುಪಿಯಲ್ಲಿ ‘ಅಣ್ಣ’ನ ಕಟೌಟ್ ಹಾಕಿದೆ. ಅದೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪಕ್ಕದಲ್ಲೇ ಕಟೌಟ್ ರಾರಾಜಿಸುತ್ತಿದೆ.

    ಎಸ್‍ಪಿ ಕಚೇರಿ ಜಂಕ್ಷನ್ ಗೆ ಹೋಗುವ ದಾರಿಯಲ್ಲೇ ಖತರ್ನಾಕ್ ಭೂಗತ ಪಾತಕಿಯ ಕಟೌಟ್ ಇರೋದು ವಿಪರ್ಯಾಸ. ಬಡವರ ರಕ್ಷಕ, ಸಮಾಜ ಸೇವಕ, ಮೆಚ್ಚಿನ ನಾಯಕ ಅಂತ ಬ್ಯಾನರ್ ನಲ್ಲಿ ನಮೂದಿಸಲಾಗಿದೆ. ಬನ್ನಂಜೆ ರಾಜ ಅಭಿಮಾನಿಗಳ ಬಳಗ ರಿಜಿಸ್ಟರ್ ಕೂಡಾ ಆಗಿರೋದು ಮತ್ತೊಂದು ವಿಪರ್ಯಾಸ.

    ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾ, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಅನುಭವಿಸುತ್ತಿದ್ದಾನೆ. ಈ ಕಟೌಟ್ ನೋಡಿದರೆ ಬನ್ನಂಜೆ ರಾಜ ಸಮಾಜ ಸೇವಕನಾಗಿ ರಾಜಕೀಯಕ್ಕೆ ಎಂಟ್ರಿ ಆಗ್ತಾನಾ ಅನ್ನೋ ಡೌಟ್ ಶುರುವಾಗಿದೆ.

    ಇವತ್ತು ಬೆಳಗ್ಗೆ ಬನ್ನಂಜೆ ರಾಜನ ಅಭಿಮಾನಿಗಳು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಕಂಬಳಿ ವಿತರಿಸುತ್ತಾರೆ ಎನ್ನಲಾಗಿದೆ. ಉಡುಪಿಯ ಮತ್ತು ಬೆಂಗಳೂರಿನ ಡಾನ್ ಅಭಿಮಾನಿಗಳು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅಂಡರ್ ವರ್ಲ್ಡ್ ಫೀಲ್ಡ್ ಬಿಟ್ಟು ರಾಜಕೀಯ ಕ್ಷೇತ್ರಕ್ಕೆ ಬನ್ನಂಜೆ ಎಂಟ್ರಿಗೆ ಈ ಹುಟ್ಟುಹಬ್ಬ ಆಚರಣೆ ಮೊದಲ ಹೆಜ್ಜೆ ಅನ್ನೋ ಚರ್ಚೆ ಕೂಡ ಶುರುವಾಗಿದೆ.

    ಅನಧಿಕೃತ ಬ್ಯಾನರ್-ಕಟೌಟ್ ಮೇಲೆ ಕಣ್ಣಿಡುವ, ಸಿಕ್ಕಾಪಟ್ಟೆ ಫೈನ್ ಹಾಕುವ ಉಡುಪಿ ನಗರಸಭೆ ಡಾನ್ ಕಟೌಟ್ ಗೆ ಬೆದರಿ ಸುಮ್ಮನಿದ್ಯಾ? ಅನ್ನೋದೇ ಪ್ರಶ್ನೆ. ಅದೂ ಎಸ್‍ಪಿ ಕಚೇರಿ ಪಕ್ಕದಲ್ಲೇ ಕಟೌಟ್ ಇರೋದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

  • ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಉಡುಪಿಯ ಮಹಿಳೆ

    ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಉಡುಪಿಯ ಮಹಿಳೆ

    ಉಡುಪಿ: ಎರಡು ದಿನಗಳ ಹಿಂದೆ ಜಿಲ್ಲೆಯ ಕೋಟದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಅವರ ಬಹು ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಕುಟುಂಬ ಸದಸ್ಯರ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    ಜಿಲ್ಲೆಯ ಕೋಟದಲ್ಲಿ ಎರಡು ದಿನಗಳ ಹಿಂದೆ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಪರಿಣಾಮವಾಗಿ ಸ್ಥಳದಲ್ಲೇ ತಾಯಿ-ಮಗ ಮೃತಪಟ್ಟಿದ್ದರು. ಅಲ್ಲದೇ ಭಾಸ್ಕರ್ ಮತ್ತು ಕಸ್ತೂರಿ ಎಂಬವರು ಗಂಭೀರ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಕಳೆದ ರಾತ್ರಿ ಕಸ್ತೂರಿಯವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ವೈದ್ಯರು ದೃಢಪಡಿಸಿದ್ದರು.

    ಇದರಿಂದ ಕಸ್ತೂರಿ ಅವರ ಇಬ್ಬರು ಸಹೋದರರು ಅಂಗಾಂಗ ದಾನ ಮಾಡುವ ಬಗ್ಗೆ ನಿರ್ಧರಿಸಿ ವೈದ್ಯರಿಗೆ ತಿಳಿಸಿದ್ದಾರೆ. ಕುಟುಂಬದವರ ನಿರ್ಧಾರದ ಮೇರೆಗೆ ಕೆಎಂಸಿ ವೈದ್ಯರು ಬೆಂಗಳೂರಿನ ತಜ್ಞರನ್ನು ಸಂಪರ್ಕಿಸಿ ಅಂಗಾಂಗ ದಾನ ಪಡೆಯಲು ಬೇಕಾದ ಸಿದ್ಧತೆ ನಡೆಸಿ, ಇಂದು ಬೆಳಗ್ಗೆ ಎಂಟು ಗಂಟೆಗೆ ಎರಡು ಕಿಡ್ನಿ, ಕಣ್ಣುಗಳು, ಯಕೃತ್, ಹೃದಯ ಕವಾಟವನ್ನು ದಾನ ಪಡೆದಿದ್ದಾರೆ.

    ಕಸ್ತೂರಿ ಅವರಿಂದ ಪಡೆದ ಅಂಗಾಂಗಗಳನ್ನು ಮಂಗಳೂರಿನ ಎಜೆ ಆಸ್ಪತ್ರೆ, ಫಾದರ್ ಮುಲ್ಲರ್ಸ್ ಆಸ್ಪತ್ರೆ, ಹೃದಯ ಕವಾಟವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಗಿದೆ. ಮಣಿಪಾಲ ಕೆಎಂಸಿಯ ಇಬ್ಬರು ರೋಗಿಗಳಿಗೆ ಎರಡು ಕಣ್ಣುಗಳು ಮತ್ತು ಒಬ್ಬರಿಗೆ ಕಿಡ್ನಿಯನ್ನು ಅಳವಡಿಸಲಾಗುವುದು ಎಂದು ಕೆಎಂಸಿ ಮೆಡಿಕಲ್ ಅಧಿಕಾರಿ ಮಾಹಿತಿ ನೀಡಿದರು.

    ಈ ವೇಳೆ ಮಣಿಪಾಲದಿಂದ ಮಂಗಳೂರಿನವರೆಗೆ ಟ್ರಾಫಿಕ್ ಜಾಮ್ ಆಗದಂತೆ ಸಂಚಾರಿ ಪೊಲೀಸರು ನಿಗಾವಹಿಸಿದ್ದರು. ಆರು ಮಂದಿ ರೋಗಿಗಳು ಆರೋಗ್ಯವಂತರಾಗಿ ಭಾಸ್ಕರ ಮತ್ತು ಕಸ್ತೂರಿಯ ಮಕ್ಕಳಿಗೆ ಹರಸಿದರೆ ಅದೇ ನಮಗೆ ದೊಡ್ಡ ಆಶೀರ್ವಾದ ಎಂದು ಕುಟುಂಬಸ್ಥರು ಹೇಳಿದ್ದಾರೆ. ತೀವ್ರ ದುಖಃದ ಸಮಯದಲ್ಲೂ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡು ಆರು ಜನರ ಪ್ರಾಣ ಉಳಿಯಲು ಕಾರಣರಾದ ಕಸ್ತೂರಿ ಅವರ ಕುಟುಂಬಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ಗಲಾಟೆ: ಯುವಕ-ಯುವತಿಯರಿಗೆ ಪೋಷಕರಿಂದಲೇ ಏಟು

    ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ಗಲಾಟೆ: ಯುವಕ-ಯುವತಿಯರಿಗೆ ಪೋಷಕರಿಂದಲೇ ಏಟು

    ಉಡುಪಿ: ಭಿನ್ನ ಕೋಮಿನ ಆರು ಯುವಕ-ಯುವತಿಯರಿಂದ ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ನಡೆಯುವಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿ ಪೋಷಕರೇ ಯುವಕರಿಗೆ ಏಟು ನೀಡಿದ ಘಟನೆ ಉಡುಪಿಯ ಮಲ್ಪೆಯ ಕೋಡಿಬೆಂಗ್ರೆಯಲ್ಲಿ ನಡೆದಿದೆ.

    ಬೀಚ್ ನಲ್ಲಿ ಬರ್ತ್ ಡೇ ಪಾರ್ಟಿ ನೆಪದಲ್ಲಿ ಅನುಚಿತ ವರ್ತನೆ ತೋರಿದ ಯುವಕ-ಯುವತಿಯರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಉಡುಪಿ ಮತ್ತು ಶೃಂಗೇರಿಯ ಯುವಕ-ಯುವತಿಯರು ಪಾರ್ಟಿ ಮಾಡುತ್ತಿದ್ದು, ಪೋಷಕರೇ ಏಟು ನೀಡಿದ್ದಾರೆ.

    ಈ ನಡುವೆ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಸಿದ್ದು, ಪೊಲೀಸರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಮೂವರು ಯುವಕ-ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ಮುಚ್ಚಳಿಕೆ ಬರೆಸಿ ಪೋಷಕರ ಜೊತೆ ಯುವತಿಯರನ್ನು ಮನೆಗೆ ಕಳುಹಿಸಿದ್ದಾರೆ. ಇದೇ ವೇಳೆ ಬೀಚ್ ನಲ್ಲಿ ಅನುಚಿತ ವರ್ತನೆಗೆ ಅವಕಾಶ ಕೊಡಬೇಡಿ ಎಂದು ಸ್ಥಳೀಯರು ಒತ್ತಾಯಿಸಿದ್ರು.