Tag: ಉಡುಪಿ

  • ಉಡುಪಿಯಲ್ಲಿ ನ್ಯೂ ಇಯರ್ ಪಾರ್ಟಿ ಬಲು ಜೋರು

    ಉಡುಪಿಯಲ್ಲಿ ನ್ಯೂ ಇಯರ್ ಪಾರ್ಟಿ ಬಲು ಜೋರು

    ಉಡುಪಿ: ಉಡುಪಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿದೆ. ನಗರದ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ನ್ಯೂಇಯರ್ ಸೆಲೆಬ್ರೇಷನ್ ಶುರುವಾಗಿದೆ. ಗೋವಾದ ಡಿಜೆಗಳ ಅಬ್ಬರಕ್ಕೆ ಜನ ಹುಚ್ಚೆದ್ದು ಕುಣಿಯಲು ಶುರು ಮಾಡಿದ್ದಾರೆ.

    ಹೊಸ ವರ್ಷಾಚರಣೆಗೆಂದೇ ಹೋಟೆಲ್ ನ್ಯೂಇಯರ್ ಪ್ಯಾಕೇಜ್ ಇಟ್ಟಿದ್ದು, ಜೋಡಿಗೆ 3,999 ರೂಪಾಯಿ ಫಿಕ್ಸ್ ಮಾಡಿದೆ. ಒಬ್ಬೊಬ್ಬರಿಗೆ 2,000 ರುಪಾಯಿ ಹಾಗೂ ಒಬ್ಬ ಯುವತಿಯ ಎಂಟ್ರಿಗೆ 1,500 ರೂಪಾಯಿ ನಿಗದಿಪಡಿಸಿದೆ.

    ತಿಂಗಳ ಹಿಂದೆಯೇ ಬುಕ್ಕಿಂಗ್ ಆರಂಭವಾಗಿತ್ತು. ಕಡಿಮೆ ದರದಲ್ಲಿ ಹೆಚ್ಚು ಸಂಭ್ರಮ ಒದಗಿಸೋದು ನಮ್ಮ ಉದ್ದೇಶ, ಶುಚಿರುಚಿ ಫುಡ್ ಪ್ರಿಪರೇಷನ್ ಮಾಡಿದ್ದು, ಜನ ವೆಜ್ ಹಾಗೂ ನಾನ್ ವೆಜ್ ಇಷ್ಟಪಡುತ್ತಿದ್ದಾರೆ ಎಂದು ಹೋಟೆಲ್ ಜನರಲ್ ಮ್ಯಾನೇಜರ್ ಬಿಜು ವರ್ಗೀಸ್ ಹೇಳಿದ್ದಾರೆ.

    ಚಿಕನ್ ಕೋಳಿವಡ, ಪ್ರಾನ್ಸ್ ಕಬಾಬ್, ಗೋಬಿ, ಹರಬರ ಕಬಾಬ್, ಚಿಲ್ಲಿ ಚಿಕನ್, ಟಿಕ್ಕ, ಬ್ರೀಜರ್, ಬಿಯರ್ ಸೇರಿದಂತೆ ಎಲ್ಲಾ ತರದ ಜೂಸ್ ಐಟಮ್‍ಗಳನ್ನು ಗ್ರಾಹಕರಿಗೆ ನೀಡಿದೆ.

  • ನಾಯಿಗಳು ರಾಜಕಾರಣಿಗಳಿದ್ದಂತೆ- ಕೆಲವ್ರಿಗೆ ಇಷ್ಟ ಆಗುತ್ತೆ, ಕೆಲವ್ರಿಗೆ ಆಗಲ್ಲ: ಸಚಿವ ಪ್ರಮೋದ್ ಮಧ್ವರಾಜ್

    ನಾಯಿಗಳು ರಾಜಕಾರಣಿಗಳಿದ್ದಂತೆ- ಕೆಲವ್ರಿಗೆ ಇಷ್ಟ ಆಗುತ್ತೆ, ಕೆಲವ್ರಿಗೆ ಆಗಲ್ಲ: ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ಒಂದು ಲೆಕ್ಕದಲ್ಲಿ ನಾಯಿಗಳು ರಾಜಕಾರಣಿಗಳಂತೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ನಡೆಯುತ್ತಿರುವ ಡಾಗ್ ಶೋ ಉದ್ಘಾಟಿಸಿ ಈ ರೀತಿ ಮಾತನಾಡಿದ ಅವರು, ಬೀದಿ ನಾಯಿಗಳ ಜಾಸ್ತಿಯಾಗುತ್ತಿರುವಂತಹ ಸಂದರ್ಭದಲ್ಲಿ ಒಂದು ಕಡೆ ನಾಯಿಯನ್ನು ಪ್ರೀತಿಸುವ ವರ್ಗವಿದ್ದರೆ, ಇನ್ನೊಂದೆಡೆ ದ್ವೇಷಿಸುವ ವರ್ಗವೂ ಇದೆ. ನಾಯಿಗಳು ಒಂದು ರೀತಿಯಲ್ಲಿ ರಾಜಕಾರಣಿಗಳಿದ್ದಂತೆ. ನಮ್ಮನ್ನು ಪ್ರೀತಿಸುವವರೂ ಇದ್ದಾರೆ. ದ್ವೇಷಿಸುವ ಮಂದಿಯೂ ಇದ್ದಾರೆ ಅಂತ ಅವರು ತಿಳಿಸಿದ್ದಾರೆ.

    ಪ್ರೀತಿ, ದ್ವೇಷ ಇವರೆಡನ್ನೂ ಎಲ್ಲೊ ಒಂದು ಕಡೆ ಬ್ಯಾಲೆನ್ಸ್ ಮಾಡಬೇಕಾಗಿದೆ. ಕೆಲವು ಕಡೆ ನಮಗೆ ಜನ ಬೈತಾರೆ. ಬೀದಿ ನಾಯಿಗಳಿವೆ, ಶಾಸಕರು, ಮುನ್ಸಿಪಾಲಿಟಿಯವರು ಏನ್ ಮಾಡ್ತಾ ಇದ್ದೀರಿ?. ಒಂದು ವೇಳೆ ನಾವೇನಾದ್ರೂ ಬೀದಿನಾಯಿಗಳನ್ನು ಮುಟ್ಟಲು ಹೋದ್ರೆ ಅಲ್ಲಿ ಮನೇಕಾ ಗಾಂಧಿಯವರಿಗೆ ಕೋಪ ಬರುತ್ತದೆ. ಹೀಗಾಗಿ ನಮಗೇನು ಮಾಡಲು ಸಾಧ್ಯವಿಲ್ಲ ಅಂತ ಅವರು ಹೇಳಿದ್ರು.

    ಒಂದು ಕಡೆ ಮನೇಕಾ ಗಾಂಧಿ, ಇನ್ನೊಂದೆಡೆ ಪೇಟಾ(ಪ್ರಾಣಿ ದಯಾ ಸಂಘ). ಪೇಟಾದವರು ಮನೇಕಾ ಗಾಂಧಿಗಿಂತ ಗಟ್ಟಿಯಿದ್ದಾರೆ. ಈ ಮಧ್ಯೆ ಜನರ ದೂರುಗಳು. ಇವೆಲ್ಲದರ ಮಧ್ಯೆ ಹೇಗೆ ಬದುಕಬೇಕೆಂದು ನನಗೆ ಪತ್ರಕರ್ತರೇ ಮಾರ್ಗದರ್ಶನ ಮಾಡಬೇಕೆಂದು ಹೇಳಿದ್ರು.

    ಮನೇಕಾ ಗಾಂಧಿ ಅವರು ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು.

  • ದೇಶ ಸುತ್ತಿದ್ದೇನೆ, ಸಂವಿಧಾನ ಅರಿತಿದ್ದೇನೆ: ಶ್ರೀನಿವಾಸ ಪ್ರಸಾದ್ ಗೆ ಪೇಜಾವರ ಶ್ರೀ ಖಡಕ್ ತಿರುಗೇಟು

    ದೇಶ ಸುತ್ತಿದ್ದೇನೆ, ಸಂವಿಧಾನ ಅರಿತಿದ್ದೇನೆ: ಶ್ರೀನಿವಾಸ ಪ್ರಸಾದ್ ಗೆ ಪೇಜಾವರ ಶ್ರೀ ಖಡಕ್ ತಿರುಗೇಟು

    ಉಡುಪಿ: ನನಗೆ ಸಂವಿಧಾನ ಬಗ್ಗೆ ಅರಿವಿದೆ. ಸಂವಿಧಾನ ರಚನೆಯಾಗುವಾಗ ನನಗೆ 18 ವರ್ಷ ಆಗಿತ್ತು. ಸಂವಿಧಾನ ರಚನಾ ಸಮಿತಿಯಲ್ಲಿ ಯಾರೆಲ್ಲಾ ಸದಸ್ಯರು ಅಂತ ಗೊತ್ತಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್‍ರಿಗೆ ಪೇಜಾವರ ಶ್ರೀಗಳು ಖಡಕ್ ತಿರುಗೇಟು ನೀಡಿದ್ದಾರೆ.

    ಪತ್ರಿಕೆ ಓದಿ, ಲೋಕ ಸಂಚಾರ ಮಾಡಿದ ಅನುಭವ ನನಗಿದೆ. ನನಗೆ ಏನೂ ಗೊತ್ತಿಲ್ಲ ಅಂತ ಹೇಳುವುದು ಬೇಡ, ಸಂವಿಧಾನದಲ್ಲಿ ಹಲವು ತಿದ್ದುಪಡಿಯಾಗಿದೆ. ಈಗಲೂ ತಿದ್ದುಪಡಿಯಾದರೆ ತಪ್ಪೇನು ಎಂದು ಪೇಜಾವರ ಶ್ರೀಗಳು ಪ್ರಶ್ನೆ ಮಾಡಿದ್ದಾರೆ.

    ಮಠಾಧಿಪತಿಗಳಿಗೆ ಸಾಮಾಜಿಕ ಜವಾಬ್ದಾರಿ ಇದೆ. ಸಮಾಜದ ಬಗ್ಗೆ ನಾನು ಮಾತನಾಡಿದರೆ ತಪ್ಪೇನು? ಕೆಲ ವಿಚಾರಗಳು ಜಾತ್ಯಾತೀತತೆಗೆ ವಿರುದ್ಧವಾಗಿದೆ. ಅಲ್ಪಸಂಖ್ಯಾತ ಮತ್ತು ಬಹು ಸಂಖ್ಯಾತ ಜನರನ್ನು ಸರ್ಕಾರ ಒಂದೇ ರೀತಿಯಲ್ಲಿ ಕಾಣಬೇಕು. ಸರ್ಕಾರದ ಶಾದಿ ಭಾಗ್ಯ ಯೋಜನೆ ಹಿಂದುಳಿದವರಿಗೆ ಮತ್ತು ದಲಿತರಿಗೂ ಸಿಗಬೇಕು. ಒಂದು ವೇಳೆ ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ತಿಳಿಸಿ ಅಂತಾ ಅಂದರು. ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಬುದ್ಧಿ ಬೆಳೆದಿಲ್ಲ, ಪೇಜಾವರ ಶ್ರೀ ಎಲ್ಲದಕ್ಕೂ ಮಾತನಾಡುತ್ತಾರೆ- ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಿಡಿ

    ಶೃಂಗೇರಿ ಶ್ರೀಗಳ ವಿಚಾರ ಬೇರೆ ಇರಬಹುದು. ಹಲವು ಮಠಾಧಿಪತಿಗಳು ಜಾತ್ಯಾತೀತದ ಬಗ್ಗೆ ಮಾತನಾಡುತ್ತಾರೆ. ಮಠಾಧಿಪತಿಗಳು ಸಾಮಾಜಿಕ ಜವಬ್ದಾರಿಯನ್ನು ಹೊಂದಿದ್ದಾರೆ. ನಾವು ಧರ್ಮ ಮತ್ತು ಸಮಾಜದ ಬಗ್ಗೆಯೂ ಮಾತನಾಡುತ್ತೇವೆ, ನಮಗೇನು ಗೊತ್ತಿಲ್ಲ ಅಂತಾ ಹೇಳುವುದು ತಪ್ಪಾಗುತ್ತದೆ. ಸರ್ಕಾರ ರಾಜ್ಯದಲ್ಲಿನ ಎಲ್ಲ ಜನರನ್ನು ಒಂದೇ ಭಾವನೆಯಿಂದ ನೋಡಬೇಕು ಅಂತಾ ತಿಳಿಸಿದರು.

    https://youtu.be/8fnPGk-CNuQ

  • ಶಾಲಾ ಪ್ರವಾಸದ ವೇಳೆ ಮಲ್ಪೆ ಬೀಚ್‍ನಲ್ಲಿ ಫಿಟ್ಸ್ ಬಂದು ಬಾಲಕ ಸಾವು- ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಶಾಲಾ ಪ್ರವಾಸದ ವೇಳೆ ಮಲ್ಪೆ ಬೀಚ್‍ನಲ್ಲಿ ಫಿಟ್ಸ್ ಬಂದು ಬಾಲಕ ಸಾವು- ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಉಡುಪಿ: ಪ್ರವಾಸಕ್ಕೆಂದು ಮಲ್ಪೆ ಬೀಚ್ ಗೆ ಬಂದು ಬಾಲಕನೊಬ್ಬ ಮೃತಪಟ್ಟ ಆಘಾತಕಾರಿ ಘಟನೆಯೊಂದು ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಮಂಜುನಾಥ್(14) ಎಂದು ಗುರುತಿಸಲಾಗಿದೆ. ಈತ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಲಿವಣ ಗ್ರಾಮದ ನಿವಾಸಿ ಎಂಬುದಾಗಿ ತಿಳಿದುಬಂದಿದೆ. ಜಿಲ್ಲೆಯ ಶಾಲೆಯೊಂದರಿಂದ ಉಡಪಿಯ ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಬೀಚ್ ಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲಕನಿಗೆ ಫಿಟ್ಸ್ ಬಂದು ಏಕಾಏಕಿ ಬಿದ್ದು ಮರಳಲ್ಲಿ ಒದ್ದಾಡಿದ್ದಾನೆ.

    ಕೂಡಲೇ ಎಚ್ಚೆತ್ತ ಶಿಕ್ಷಕರು ಆತನನ್ನು ಆಸ್ಪತ್ರೆಗೆ ಕೊಂಡೊಯ್ದರಾದ್ರೂ, ಅದಾಗಲೇ ಬಾಲಕ ಮೃತಪಟ್ಟದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಬಾಲಕನ ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ. ಬಾಲಕನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

     

  • ಕಾಲಿನಿಂದ ತುಳಿದು, ಪಾಕ್ ಧ್ವಜ ಸುಟ್ಟು ಭಜರಂಗದಳ, ವಿಎಚ್‍ಪಿಯಿಂದ ಪ್ರತಿಭಟನೆ

    ಕಾಲಿನಿಂದ ತುಳಿದು, ಪಾಕ್ ಧ್ವಜ ಸುಟ್ಟು ಭಜರಂಗದಳ, ವಿಎಚ್‍ಪಿಯಿಂದ ಪ್ರತಿಭಟನೆ

    ಉಡುಪಿ: ಗಲ್ಲು ಶಿಕ್ಷೆಗೆ ಒಳಗಾದ ಕುಲಭೂಷಣ್ ಜಾಧವ್ ಕುಟುಂಬಕ್ಕೆ ಅವಮಾನ ಮಾಡಿದ ಪಾಕ್ ಸರ್ಕಾರದ ವಿರುದ್ಧ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್ ಆಕ್ರೋಷ ವ್ಯಕ್ತ ಪಡಿಸಿದೆ.

    ನಗರದ ಹುತಾತ್ಮ ಯುದ್ಧ ಸ್ಮಾಕರದ ಬಳಿ ಈ ಸಂಘಟನೆಯ ಕಾರ್ಯರ್ತರು ಪ್ರತಿಭಟನೆ ನಡೆಸಿ ಪಾಕ್ ನಡೆಯನ್ನು ಖಂಡಿಸಿದರು. ಪ್ರತಿಭಟನೆಯ ವೇಳೆ ಪಾಕಿಸ್ತಾನ ಧ್ವಜದ ಮೇಲೆ ನಿಂತು ಬಳಿಕ ಧ್ವಜವನ್ನು ಸುಟ್ಟಿದ್ದಾರೆ.

    ಭಜರಂಗದಳ ಸಂಚಾಲಕರ ಕೆ. ಆರ್ ಸುನೀಲ್ ಮಾತನಾಡಿ, ವಿಶ್ವಹಿಂದೂ ಪರಿಷದ್ ಮತ್ತು ಭಜರಂಗದಳದ ಇಂದು ಇಡೀ ರಾಜ್ಯಾದ್ಯಂತ ಪಾಕಿಸ್ತಾನದ ಧ್ವಜವನ್ನು ಸುಡುವ ಮೂಲಕ ಆಕ್ರೋಷ ವ್ಯಕ್ತಪಡಿಸುತ್ತಿದೆ. ಮೂರು ದಿನಗಳ ಹಿಂದೆ ನಮ್ಮ ದೇಶದ ತಾಯಿ, ಅವರು ಭಾರತೀಯ ಪ್ರಜೆ ಕುಲಭೂಷಣ್ ಜಾದವ್ ಸುಮಾರು 22 ತಿಂಗಳಿನಿಂದ ಪಾಕಿಸ್ತಾನದ ಬಂಧನದಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಹೋದಾಗ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.

    ಪಾಕಿಸ್ತಾನ ಸರ್ಕಾರದ ನಡೆ ಅತ್ಯಂತ ಖಂಡನೀಯವಾಗಿದ್ದು, ಈ ದೇಶದ ಪವಿತ್ರವಾಗಿರುವಂತಹ ತಾಳಿ ಮತ್ತು ಬಳೆಗಳನ್ನು ತೆಗೆಸಿ ಭೇಟಿ ಮಾಡಿಸಿದೆ. ಅಷ್ಟೇ ಅಲ್ಲದೇ ಅವರ ಪಾದರಕ್ಷೆಯಲ್ಲಿ ಚಿಪ್ ಇರಬಹುದು ಎಂದು ಅದನ್ನು ತೆಗೆಸಿದ್ದಾರೆ. ಇದು ಪಾಕ್ ಸರ್ಕಾರದಿಂದ ಆಗಿರುವ ಮಾನವ ಹಕ್ಕುಗಳ ಉಲ್ಲಂಘನೆ. ಇಡೀ ಪ್ರಪಂಚಕ್ಕೆ ಪಾಕಿಸ್ತಾನ ತಲೆನೋವು ಆಗಿದೆ. ಈ ಮೂಲಕ ಕೇಂದ್ರ ಸರ್ಕಾರ ಮತ್ತು ಸೇನೆಗೆ ಪಾಪಿ ಪಾಕಿಸ್ತಾನವನ್ನು ಇಡೀ ಜಗತ್ತಿನ ನಕ್ಷೆಯಲ್ಲಿ ಇಲ್ಲದಂತೆ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದರು. ಇದನ್ನು ಓದಿ: ಪಾಕ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರೋ ಜಾಧವ್ ಭೇಟಿ ಮಾಡಿದ ಪತ್ನಿ, ತಾಯಿ  ಇದನ್ನು ಓದಿ: ಜಾಧವ್ ಪತ್ನಿಯ ಶೂನಲ್ಲಿ ಚಿಪ್ ಇರಬಹುದು ಎಂದ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

  • ಕರ್ನಾಟಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗಲ್ಲ, ಸಮ್ಮಿಶ್ರ ಸರ್ಕಾರ ವರ್ಷದೊಳಗೆ ಬಿದ್ದೋಗುತ್ತೆ: ಉಡುಪಿ ಜ್ಯೋತಿಷಿ

    ಕರ್ನಾಟಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗಲ್ಲ, ಸಮ್ಮಿಶ್ರ ಸರ್ಕಾರ ವರ್ಷದೊಳಗೆ ಬಿದ್ದೋಗುತ್ತೆ: ಉಡುಪಿ ಜ್ಯೋತಿಷಿ

    ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಇಲ್ಲ. ಎರಡು ಪಕ್ಷಗಳು ಒಂದಾದ್ರೆ ವರ್ಷದೊಳಗೆ ದೋಸ್ತಿ ಕಡಿದು ಬೀಳುವುದು ಖಂಡಿತ. ಹೇವಿಳಂಬಿ ಸಂವತ್ಸರದಲ್ಲಿ ಕರ್ನಾಟಕ ಮತ್ತೊಂದು ಗೋದ್ರಾವಾಗುತ್ತೆ, ನಾಯಕರೆಲ್ಲ ಸೈಲೆಂಟಾಗಿದ್ರೆ ಬಚಾವ್. ಇನ್ನು ಏಳು ವರ್ಷ ನರೇಂದ್ರ ಮೋದಿಯನ್ನು ಮುಟ್ಟೋದಕ್ಕೂ ಆಗೋದಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗೋ ಕನಸು ಕಾಣೋದನ್ನು ಬಿಟ್ಟು ಬಿಡಿ ಎಂದು ಗುಜರತಾ ಫಲಿತಾಂಶ ಪ್ರಕಟವಾಘುವ ಮುನ್ನ ನಿಖರ ಭವಿಷ್ಯ ನುಡಿದಿದ್ದ ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

    ಸಿಎಂ ಮತ್ತು ಬಿಜೆಪಿಯ ಜಟಾಪಟಿಗಳ ಬಗ್ಗೆ ಶಾಸ್ತ್ರದ ಪ್ರಕಾರ ಮಾತನಾಡಿದ್ದಾರೆ. ಜೆಡಿಎಸ್ ಪಾತ್ರ ಬಿಚ್ಚಿಟ್ಟಿದ್ದಾರೆ. ಮೋದಿಯನ್ನು 7 ವರ್ಷ ಅಲುಗಾಡಿಸಲು ಅಸಾಧ್ಯ. ಮಣ್ಣಿನ ವಾಸನೆಗೆ ವಿರುದ್ಧವಾದ ಪಕ್ಷ ಮತ್ತೊಂದು ರೈತರ ಪರವಾದ ಪಕ್ಷ ರಾಜ್ಯದಲ್ಲಿ ಸಮ್ಮಿಶ್ರವಾಗಿ ಸರ್ಕಾರ ರಚಿಸುತ್ತದೆ. ಆದರೆ ಆ ಸರ್ಕಾರ ವರ್ಷದೊಳಗೆ ಕುಸಿದು ಬೀಳುತ್ತದೆ. ಭಾರತದಲ್ಲಿ ಹಿಂದುತ್ವಕ್ಕೆ ಬೆಲೆಕೊಡುವ ಪಕ್ಷಕ್ಕೆ ಭವಿಷ್ಯವಿದೆ. ರಾಜಕೀಯ ವಿಶ್ಲೇಷಕರು ರಾಜಕಾರಣಿಗಳಿಗೆ ಕಿವಿಮಾತು ಹೇಳಬೇಕು. ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ ಬೆಲೆ ಸಿಗದಿದ್ದರೆ ಬಹುಸಂಖ್ಯಾತರು ಒಂದಲ್ಲ ಒಂದು ದಿನ ತಿರುಗಿ ಬೀಳದೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

    ರಾಜ್ಯದಲ್ಲಿ ಸಣ್ಣ ಘಟನೆಗಳು ಆದಾಗ ಅದಕ್ಕೆ ಸರ್ಕಾರ ಒಂದು ಕೋಮಿಗೆ ಬೆಂಬಲ ಕೊಡುತ್ತದೆ. ಇದೇ ದೊಡ್ಡಮಟ್ಟದ ಗಲಾಟೆಗೆ ಕಾರಣವಾಗುತ್ತದೆ. ರಾಜ್ಯ ಸರ್ಕಾರ ಮಾಡಿದ ಕೆಲಸವನ್ನು ನನ್ನ ಕಾಲಾವಧಿಯಲ್ಲಿ ಆಯ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಂಡು ಬೀಗುತಿದ್ದಾರೆ. ಒಂದು ಧರ್ಮದ ಬಗ್ಗೆ ತುಷ್ಟೀಕರಣ ಮಾಡುತ್ತಿದ್ದಾರೆ. ಪ್ರೀತಿಸುವ- ಗೆಳೆತನದಿಂದ ಇರುವ ಮುಸ್ಲಿಮರನ್ನು ದ್ವೇಷಿಸುವ ಮಟ್ಟಿಗೆ ತಂದಿದ್ದು ಸಿಎಂ ಸಿದ್ದರಾಮಯ್ಯ. ಅವರಿಂದಲೇ ಸಮಾಜದ ವಿಭಜನೆ ಆಗುತ್ತಿದೆ. ಕರ್ನಾಟಕ ಮತ್ತೊಂದು ಗೋದ್ರಾ ಆದ್ರೆ ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್‍ಡಿಡಿ ವಿರುದ್ಧ ರಫ್&ಟಫ್ ವರ್ತನೆ ಬೇಡ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

    ಮಹಾದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ಇಲ್ವಾ? ಮಹಾದಾಯಿ ವಿಚಾರದಲ್ಲಿ ಬಿಜೆಪಿ ಅವಸರ ಮಾಡಿದೆ. ಒಳ್ಳೆಯ ವಾತಾವರಣವನ್ನು ಯಡಿಯೂರಪ್ಪ ಹಾಳು ಮಾಡಿಕೊಂಡಿದ್ದಾರೆ. ಈ ಎಲ್ಲಾ ರಾಜಕೀಯ ಏರುಪೇರುಗಳಿಗೆ ಕಾರಣ ವಿಳಂಬಿ ಸಂವತ್ಸರ. ಎಲ್ಲಾ ರಾಜಕೀಯ ನಾಯಕರು ಚುನಾವಣೆಗಾಗಿ- ಅಧಿಕಾರಕ್ಕಾಗಿ ಪರಿಸ್ಥಿತಿಯನ್ನು ಉಪಯೋಗ ಮಾಡಿಕೊಳ್ಳಬಾರದು. ಅದರಿಂದ ದುಷ್ಪರಿಣಾಮವೇ ಹೆಚ್ಚು. ಜನ ಬುದ್ಧಿವಂತರು ಅಂತಾ ಅಂದ್ರು. ಇದನ್ನೂ ಓದಿ: ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ

    ರಾಜಕೀಯ ಪಕ್ಷಗಳು ನಮ್ಮ ರಾಜ್ಯವನ್ನು ಮೂರು ವಿಭಾಗ ಮಾಡಿ ಜನರನ್ನು ಒಲಿಸಲು ಪ್ರಯತ್ನ ಮಾಡಬೇಕು. ಕರಾವಳಿ ಹಿಂದುತ್ವ ವಿರುದ್ಧ ಹೋಗದೆ ಸಮಸ್ಯೆಗಳ ಪರಿಹಾರ ಮಾಡಬೇಕು. ಉತ್ತರ ಕರ್ನಾಟಕದ ಲಿಂಗಾಯತ- ಮಹಾದಾಯಿ- ಗಡಿ ಸಮಸ್ಯೆ ಬಗ್ಗೆ, ಮಧ್ಯೆ ಕರ್ನಾಟಕದ ಕನ್ನಡ ಪ್ರೇಮಿಗಳು. ರೈತರು ಸ್ವಾಭಿಮಾನಿಗಳು ಹೀಗಾಗಿ ಆಯಾಯ ಭಾಗಕ್ಕೆ ತಕ್ಕುದಾದಂತೆ ಸಮಸ್ಯೆ ಬಗೆಹರಿಸಿದರೆ ಜನ ಹರಸುತ್ತಾರೆ. ಅದಕ್ಕೆ ವಿರುದ್ಧವಾಗಿ ನಡೆದರೆ ತಕ್ಕ ಪಾಠಕಲಿಸುತ್ತಾರೆ ಅಂತಾ ತಿಳಿಸಿದ್ದಾರೆ.

    ನಿಖರ ಭವಿಷ್ಯ ಹೇಳಿದ್ರು:
    ನಾಳೆಯ ಗುಜರಾತಿನಲ್ಲಿ 7.17 ಕ್ಕೆ ಧನುರ್ಲಗ್ನದಲ್ಲಿ ಸೂರ್ಯೋದಯ ಆಗಲಿದೆ. ಲಗ್ನಾಧಿಪತಿ ಲಾಭಸ್ಥಾನದಲ್ಲಿ ಪಂಚಮಾಧಿಪತಿ ಜತೆಗೆ. ಆದರೆ ಲಗ್ನದಲ್ಲಿ ರವಿ ಶನಿ ಗ್ರಹ ಯುದ್ಧ ಸ್ಥಿತಿ. ಪರಿಣಾಮ- ಬಹಳ ಯುದ್ಧಸ್ಥಿತಿ ಸುಮಾರು ಹತ್ತುಗಂಟೆಯ ವರೆಗಿದೆ. ಬಿಜೆಪಿಯ ಹಿನ್ನಡೆಗಳೇ ಎದ್ದು ಕಾಣಬಹುದು. ಹತ್ತುಗಂಟೆ ನಂತರ ಎಲ್ಲಾ ಮಾಧ್ಯಮಗಳ ಲೆಕ್ಕಾಚಾರ ಬುಡಮೇಲಾಗಬಹುದು. ಪೊರಕೆಗಳಿಗೆ ಡಿಮಾಂಡ್ ಹೆಚ್ಚಾದೀತು. ಕೊನೆಗೆ ಬಿಜೆಪಿಗೆ ಗೆಲುವು ಸಿಗಲಿದೆ ಎಂದು ಬರೆದು ಡಿಸೆಂಬರ್ 17 ರ 7 ಗಂಟೆ 59 ನಿಮಿಷಕ್ಕೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ರು.

    https://youtu.be/c3mf0ZAIGVM

    https://youtu.be/SJA_KziC9i4

  • ಉಡುಪಿಯಲ್ಲಿ ಶುರುವಾಯ್ತು ಹೆಲಿ ಟೂರಿಸಂ: 1 ಟಿಕೆಟ್ ಬೆಲೆ ಎಷ್ಟು ಗೊತ್ತೆ?

    ಉಡುಪಿಯಲ್ಲಿ ಶುರುವಾಯ್ತು ಹೆಲಿ ಟೂರಿಸಂ: 1 ಟಿಕೆಟ್ ಬೆಲೆ ಎಷ್ಟು ಗೊತ್ತೆ?

    ಉಡುಪಿ: ಧಾರ್ಮಿಕ ಪ್ರವಾಸೋದ್ಯಮದಲ್ಲಿ ಕರ್ನಾಟಕದ ಕರಾವಳಿಗೆ ಅಗ್ರಸ್ಥಾನವಿದೆ. ಪ್ರಮುಖ ಪ್ರವಾಸಿ ತಾಣಗಳು ಕೂಡಾ ಕರಾವಳಿಲ್ಲಿಯೇ ಇದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆದು ಲಾಭಗಳಿಸುವುದರಲ್ಲಿ ಉಡುಪಿ ಜಿಲ್ಲೆ ಹಿನ್ನಡೆ ಅನುಭವಿಸಿರುವ ಕಾರಣ ಕರಾವಳಿಗೆ ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಉಡುಪಿಯಲ್ಲಿ ಹೆಲಿ ಟೂರಿಸಂ ಆರಂಭವಾಗಿದೆ.

    ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮಹತ್ವಕಾಂಕ್ಷಿ ದೃಷ್ಟಿಯಿಂದ ಯೋಜನೆಯನ್ನು ಆರಂಭಿಸಿದ್ದು, 2500 ರೂ. ಪಾವತಿಸಿ 6 ಮತ್ತು 8 ನಿಮಿಷದ ಎರಡು ಪ್ಯಾಕೇಜ್ ಮೂಲಕ ಆಕಾಶ ಮಾರ್ಗವಾಗಿ ಉಡುಪಿಯ ಪ್ರಾಕೃತಿಕ ಸೌಂದರ್ಯವನ್ನು ಹೆಲಿಕಾಪ್ಟರ್ ನಲ್ಲಿ ಸವಿಯಬಹುದು.

    ಅದರಲ್ಲೂ ಸಮುದ್ರದ ಮೇಲೆ ಕಾಪ್ಟರ್ ಹಾರುವ ದೃಶ್ಯವಂತೂ ನಿಜಕ್ಕೂ ರೋಮಾಂಚನ ಎನಿಸುತ್ತದೆ. ನದಿ, ಸಮುದ್ರ, ಬೆಟ್ಟಗುಡ್ಡ, ಮಣಿಪಾಲದ ಗಗನಚುಂಬಿ ಕಟ್ಟಡಗಳನ್ನು ಮೇಲಿಂದ ನೋಡೋ ಅವಕಾಶ ಸಿಕ್ಕಿದೆ. ಉಡುಪಿಗೆ ಬರುವ ಜನರಿಗೆ ಸುಮಾರು 10 ದಿನಗಳ ಹೆಲಿಕಾಪ್ಟರ್ ಸೇವೆ ಲಭ್ಯವಿರಲಿದೆ.

    ಸಚಿವ ಪ್ರಮೋದ್ ಮಧ್ವರಾಜ್ ಪ್ರಥಮ ಬಾರಿಗೆ ಉಡುಪಿಯನ್ನು ಹೆಲಿಕಾಪ್ಟರ್ ನಲ್ಲಿ ನೋಡಿದ ಅನುಭವ ಹಂಚಿಕೊಂಡರು. ಅತ್ಯಂತ ಸುಂದರ ಉಡುಪಿಯನ್ನು ಹೆಲಿಕಾಪ್ಟರ್ ನಲ್ಲಿ ಸುತ್ತವ ಮೂಲಕ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಗೆ ಉಡುಪಿಗೆ ಬರುವ ಜನರಿಗೆ ಹೆಲಿಕಾಪ್ಟರ್ ನಲ್ಲಿ ಹಾರುವ ಅವಕಾಶ ಸಿಕ್ಕಿದೆ.

  • ಹೂ ಕೀಳಲು ಹೋದಾಗ ಬುಸ್ ಅಂತಾ ಬುಸುಗುಟ್ಟಿ ಹೆಡೆ ಎತ್ತಿದ 10 ಅಡಿಯ ಕಾಳಿಂಗ

    ಹೂ ಕೀಳಲು ಹೋದಾಗ ಬುಸ್ ಅಂತಾ ಬುಸುಗುಟ್ಟಿ ಹೆಡೆ ಎತ್ತಿದ 10 ಅಡಿಯ ಕಾಳಿಂಗ

    ಉಡುಪಿ: ವಸತಿ ಗೃಹದ ಜನರು ತೋಟದಲ್ಲಿರುವ ಹೂಗಳನ್ನು ಕೀಳಲು ಹೋದಾಗ ಅಲ್ಲಿದ್ದ ಸುಮಾರು 10 ಅಡಿಯ ಕಾಳಿಂಗ ಸರ್ಪ ಕಾರ್ಕಳ ತಾಲೂಕಿನ ಚೆನ್ನಯ ಥೀಂ ಪಾರ್ಕ್ ಪರಿಸರದ ವಸತಿಗೃಹದ ಬಳಿ ಪತ್ತೆಯಾಗಿದೆ.

    ಕಾಳಿಂಗ ಕಂಡು ಭಯಭೀತರಾದ ಜನರು ಉರಗ ತಜ್ಞ ಅನಿಲ್ ಪ್ರಭುಗೆ ತಿಳಿಸಲಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅವರು ಬರೀ ಕೈಯಲ್ಲಿ ಕಾಳಿಂಗ ಸರ್ಪ ಹಿಡಿದರು.

    ಸರ್ಪವನ್ನು ಸೆರೆಹಿಡಿದ ಬಳಿಕ ಸ್ಥಳೀಯರಿಗೆ ಕಾಳಿಂಗದ ಬಗ್ಗೆ ಮಾಹಿತಿಯನ್ನು ನೀಡಿದರು. ಸಲೀಸಾಗಿ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕುದುರೆಮುಖ ರಕ್ಷಿತಾರಣ್ಯ ಪ್ರದೇಶಕ್ಕೆ ಬಿಡಲಾಯಿತು. ಇತ್ತೀಚಿನ ದಿನಗಳಲ್ಲಿ ಆಹಾರ ಹುಡುಕಿಕೊಂಡು ನಾಡಿಗೆ ನಾಡಿಗೆ ಇಳಿಯುತ್ತಿರುವ ಉರಗಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.

  • 2ಜಿ ಕೂಪದಿಂದ ಕನಿಮೋಳಿ ಹೊರಬರಲು ಶ್ರೀಕೃಷ್ಣ, ಮುಖ್ಯಪ್ರಾಣರೇ ಕಾರಣ : ಶೀರೂರು ಶ್ರೀ

    2ಜಿ ಕೂಪದಿಂದ ಕನಿಮೋಳಿ ಹೊರಬರಲು ಶ್ರೀಕೃಷ್ಣ, ಮುಖ್ಯಪ್ರಾಣರೇ ಕಾರಣ : ಶೀರೂರು ಶ್ರೀ

    ಉಡುಪಿ: 2ಜಿ ಹಗರಣದ ಬಲೆಯಿಂದ ಕರುಣಾನಿಧಿ ಪುತ್ರಿ ಕನಿಮೋಳಿ ಹೊರಬಂದಾಗಿದೆ. ಸಿಬಿಐ ವಿಶೇಷ ಕೋರ್ಟ್ ಕನಿಮೋಳಿಯನ್ನು ಖುಲಾಸೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಗರಿಗೆದರಿದೆ. ಆದರೆ 2 ಜಿ ಭ್ರಷ್ಟಚಾರ ಆರೋಪದಿಂದ ಕನಿಮೋಳಿ ಅವರು ಹೊರ ಬರಲು ಸಾಧ್ಯವೇ ಇಲ್ಲ ಎಂದು ವಿಶ್ಲೇಷಿಸಲಾಗಿದ್ದ ಎಲ್ಲರಿಗೂ ಅಚ್ಚರಿಯಾಗಿದ್ದು, ಇದಕ್ಕೆ ಪ್ರಮುಖ ಕಾರಣ ಉಡುಪಿ ಶ್ರೀ ಕೃಷ್ಣನೇ ಎನ್ನುವ ವಾದ ಹುಟ್ಟಿಕೊಂಡಿದೆ.

    ಆದರೆ ಕನಿಮೋಳಿ ಪ್ರಕರಣಕ್ಕೂ ಉಡುಪಿ ಶ್ರೀ ಕೃಷ್ಣ ಮಠಕ್ಕೂ ಏನು ಸಂಬಂಧ ಎಂಬ ಮಾಹಿತಿ ತಿಳಿಯಬೇಕಾದರೆ ಆರು ವರ್ಷಗಳ ಹಿಂದಿನ ಘಟನೆ ತೆರೆದುಕೊಳ್ಳುತ್ತದೆ. ಆ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣನ ಪೂಜಾಧಿಕಾರವನ್ನು ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ನೋಡಿಕೊಳ್ಳುತ್ತಿದ್ದರು.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಶೀರೂರು ಶ್ರೀಗಳು, ಆರು ವರ್ಷದ ಹಿಂದೆ ಕನಿಮೋಳಿಯವರ ತಾಯಿ ರಜತಿ ಅವರು ಮಠಕ್ಕೆ ಬಂದಿದ್ದರು. ತಮ್ಮ ಕುಟುಂಬದಲ್ಲಿ ಗೊಂದಲಗಳಾಗಿದೆ. ತನ್ನ ಮಗಳಿಗೆ ಮಾಡದ ತಪ್ಪಿಗೆ ಶಿಕ್ಷೆಯಾಗಿ ಜೈಲು ಸೇರಿದ್ದಾಳೆ. ಹೀಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಕೇಳಿಕೊಂಡಿದ್ದರು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ರಜತಿ ಅವರಿಗೆ ಧೈರ್ಯ ತುಂಬಿದ್ದ ಶ್ರೀಗಳು ತಪ್ಪು ಮಾಡದಿದ್ದರೆ ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಅವರ ಮನವಿಯಂತೆ ಪೂಜೆಯ ಸಂದರ್ಭ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡಿದ್ದೆವು. ಇದೀಗ ಕನಿಮೋಳಿ ಅವರು ಆರೋಪ ಮುಕ್ತರಾಗಿದ್ದಾರೆ ಎಂದು ವಿವರಿಸಿದರು.

    ಉಡುಪಿಯಲ್ಲಿ ಶ್ರೀಕೃಷ್ಣ ಭಕ್ತರ ಕಣ್ಮಣಿ, ಆದರೂ ಮಠದೊಳಗೆ ಮುಖ್ಯಪ್ರಾಣ ಅಂದರೆ ಆಂಜನೇಯ ದೇವರು ಹೆಚ್ಚು ಶಕ್ತಿಯನ್ನು ಹೊಂದಿದ್ದಾರೆ ಎಂಬ ನಂಬಿಕೆ ಇದೆ. ಕೃಷ್ಣ ಮುಖ್ಯಪ್ರಾಣರಿಗೆ ಮಾಡಿದ ಪ್ರಾರ್ಥನೆ ಫಲ ನೀಡಿದೆ. ಕರುಣಾನಿಧಿ ಕುಟುಂಬ ಹರಕೆ ತೀರಿಸಲು ಮತ್ತೆ ಉಡುಪಿಗೆ ಬರಬಹುದು ಎಂಬ ನಿರೀಕ್ಷೆಯಿದೆ ಎಂದು ಶ್ರೀ ಶೀರೂರು ಸ್ವಾಮೀಜಿ ಹೇಳಿದರು.

    ಹರಕೆ ಹೊತ್ತಿದ್ದರೆ, ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡ ವೇಳೆ ಮತ್ತೆ ಬರುವುದಾಗಿ ಹೇಳಿಕೊಂಡಿದ್ದರೆ ಮತ್ತೆ ಉಡುಪಿಗೆ ಬಂದು ಕೃಷ್ಣಮುಖ್ಯಪ್ರಾಣರ ಸನ್ನಿಧಿಗೆ ಭೇಟಿಕೊಡಬೇಕು ಎಂಬ ನಂಬಿಕೆ ಭಕ್ತರಲ್ಲಿ ಇದೆ.

     

  • ಆಟೋ ತಪ್ಪಿಸಲು ಹೋಗಿ ಮರಕ್ಕೆ ಬಸ್ ಡಿಕ್ಕಿ- ಪ್ರವಾಸ ಬಂದಿದ್ದ 15 ಮಕ್ಕಳಿಗೆ ಗಾಯ

    ಆಟೋ ತಪ್ಪಿಸಲು ಹೋಗಿ ಮರಕ್ಕೆ ಬಸ್ ಡಿಕ್ಕಿ- ಪ್ರವಾಸ ಬಂದಿದ್ದ 15 ಮಕ್ಕಳಿಗೆ ಗಾಯ

    – ಆಟೋ ಚಾಲಕ, ಪ್ರಯಾಣಿಕರಿಗೂ ಗಾಯ

    ಉಡುಪಿ: ಶಾಲಾ ವಾರ್ಷಿಕ ಪ್ರವಾಸದ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಉಡುಪಿಯಲ್ಲಿ ನಡೆದಿದೆ.

    ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕೂಂದೂರಿನಲ್ಲಿ ಶಾಲಾ ಮಕ್ಕಳನ್ನು ಹೊತ್ತು ಸಾಗಿದ್ದ ಬಸ್, ಆಟೋ ರಿಕ್ಷಾವನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿಯಾಗಿದೆ. ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಶೈಕ್ಷಣಿಕ ಪ್ರವಾಸಕ್ಕೆ ತುಮಕೂರಿನ ಮಾರಮ್ಮ ದೇವರು ಗ್ರಾಮಾಂತರ ಶಾಲಾ ಮಕ್ಕಳನ್ನು ಕರೆತರಲಾಗಿತ್ತು.

    ಬಸ್‍ನಲ್ಲಿ 60 ಕ್ಕೂ ಅಧಿಕ ಮಕ್ಕಳಿದ್ದು, ಅದರಲ್ಲಿ 15 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಪೈಕಿ ಇಬ್ಬರು ಗಾಯಾಳು ವಿದ್ಯಾರ್ಥಿಗಳನ್ನು ಮಣಿಪಾಲ ಕೆಎಂಸಿಗೆ ದಾಖಲು ಮಾಡಲಾಗಿದೆ. ಉಳಿದ ಗಾಯಾಳುಗಳಿಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರಸ್ತೆ ಎಡಬದಿಯಿಂದ ಬಂದ ಆಟೋಗೆ ಶಾಲಾ ಪ್ರವಾಸದ ಬಸ್ ಗುದ್ದಿದೆ. ಅಟೋಗೆ ಡಿಕ್ಕಿಯಾಗಿ ನಂತರ ಮರಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಮುಂಬದಿಯಿಂದ ಬಂದಿದ್ದ ಅಟೋ ಚಾಲಕ, ಪ್ರಯಾಣಿಕರಿಗೂ ಗಾಯಗಳಾಗಿದೆ. ಮಕ್ಕಳ ಬಸ್ ಉಡುಪಿಗೆ ಬಂದು ಶ್ರೀಕೃಷ್ಣಮಠನ ದರ್ಶನ ಮಾಡಿ ಬಳಿಕ ಅಲ್ಲಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ಅಪಘಾತವಾದಾಗ ಸ್ಥಳೀಯರು ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲು ಸಹಾಯ ಮಾಡಿದ್ದಾರೆ.

    ಕಾರ್ಕಳ ನಗರ ಪೊಲೀಸರು ಸ್ಥಳಕ್ಕಾಗಮಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.