Tag: ಉಡುಪಿ

  • ರಾಜಕಾರಣಿಗಳಿಗೆ ಸೀಟು ಬಿಡಲು ಇಷ್ಟವಿರಲ್ಲ, ನಾವು ಸಂಪ್ರದಾಯಬದ್ಧವಾಗಿ ಅಧಿಕಾರದಿಂದ ದೂರವಾಗ್ತಿದ್ದೀವಿ- ಪೇಜಾವರಶ್ರೀ ಮನದ ಮಾತು

    ರಾಜಕಾರಣಿಗಳಿಗೆ ಸೀಟು ಬಿಡಲು ಇಷ್ಟವಿರಲ್ಲ, ನಾವು ಸಂಪ್ರದಾಯಬದ್ಧವಾಗಿ ಅಧಿಕಾರದಿಂದ ದೂರವಾಗ್ತಿದ್ದೀವಿ- ಪೇಜಾವರಶ್ರೀ ಮನದ ಮಾತು

    ಉಡುಪಿ: ಶ್ರೀಕೃಷ್ಣಮಠದ ಪೂಜಾಧಿಕಾರವನ್ನು ಪಲಿಮಾರು ಸ್ವಾಮೀಜಿಗಳಿಗೆ ಇಂದು ಪೇಜಾವರಶ್ರೀ ಬಿಟ್ಟುಕೊಡಲಿದ್ದಾರೆ. ಎರಡು ವರ್ಷದ ತಮ್ಮ ಪರ್ಯಾಯ ಅಧಿಕಾರಾವಧಿ ಬಗ್ಗೆ ಪಬ್ಲಿಕ್ ಟಿವಿ ಜತೆ ಮನಬಿಚ್ಚಿ ಮಾತನಾಡಿದ್ದಾರೆ.

    ತಮ್ಮ ಅಧಿಕಾರಾವಧಿ ಮುಗಿಯುವಾಗ ರಾಜಕಾರಣಿಗಳು ಮನಸ್ಸಿಲ್ಲದೆ ತಮ್ಮ ಸೀಟು ಬಿಟ್ಟುಕೊಡುತ್ತಾರೆ. ಆದ್ರೆ ನಾವು ಸಂಪ್ರದಾಯಕ್ಕೆ ಬದ್ಧರು. ಮೊದಲೇ ನಿಶ್ಚಿತವಾದ ಅಧಿಕಾರ ಇದು. ರಾಜಕಾರಣಿಗಳಿಗಾದ್ರೆ ಬೇಸರವಾಗ್ತದೆ. ನಾವು ಯಾವುದೇ ಬೇಸರವಿಲ್ಲದೆ ಪೂಜಾಧಿಕಾರ ಬಿಟ್ಟುಕೊಡುತ್ತಿದ್ದೇವೆ. ರಾಜಕಾರಣಿಗಳಿಗೆ ಅಧಿಕಾರ ಬಿಡುವಾಗ ದುಃಖವಾಗುತ್ತದೆ. ನಾವು ಖುಷಿಯಿಂದ ಪೀಠಾಧಿಕಾರ ಬಿಟ್ಟು ಕೊಡುತ್ತಿದ್ದೇವೆ ಅಂತ ಹೇಳಿದ್ರು.

    ಎರಡು ವರ್ಷದ ಪರ್ಯಾಯ ತೃಪ್ತಿಯಿದೆಯೇ?
    ನಮಗೆ ಮಹಾತ್ವಾಕಾಂಕ್ಷೆ ಬಹಳ ಇತ್ತು. ಅದರಲ್ಲಿ ಕೆಲವು ಮಹತ್ವದ ಕೆಲಸಗಳು ಆಗಿದೆ. ಕನಸು ಬಹಳ ಇತ್ತು. ಮಠಕ್ಕೆ ಜಮೀನು ಖರೀದಿಸುವ ಆಸೆ ಇತ್ತು. ಆದ್ರೆ ಸಂತೃಪ್ತಿಯಿಲ್ಲ, ತೃಪ್ತಿ ಇದೆ. ಮುಂದಿನ ಸ್ವಾಮೀಜಿಗಳು ನನ್ನೆಲ್ಲಾ ಉಳಿದ ಆಕಾಂಕ್ಷೆಗಳನ್ನು, ಅವರ ಕನಸುಗಳನ್ನು ಈಡೆರಿಸುತ್ತಾರೆ ಎಂಬ ನಂಬಿಕೆಯಿದೆ ಅಂದ್ರು.

    ವಿಚಾರಗಳು ವಿವಾದವಾಯ್ತು- ಪ್ರಚಾರವಾಯ್ತು:
    ನಮ್ಮ ಅಧಿಕಾರಾವಧಿಯಲ್ಲಿ ಕೆಲ ವಿಚಾರಗಳು ವಿವಾದವಾಗಿದೆ. ವಿವಾದವಾದಾಗಲೇ ವಿಚಾರಗಳು ಪ್ರಚಾರವಾಗಿ ಮಹತ್ವ ಪಡೆದುಕೊಳ್ಳುವುದು. ನಮ್ಮ ನಿಲುಮೆಗಳು ಇಂತಹ ಘಟನೆಗಳಾದಾಗ ಸಮಾಜಕ್ಕೆ ಅದು ಅರ್ಥವಾಗುತ್ತದೆ. ಸಮಾಜದ ಎಲ್ಲಾ ವರ್ಗದ ಮೇಲೆ ನಮಗೆ ಪ್ರೀತಿಯಿದೆ. ಯಾರ ಮೇಲೂ ದ್ವೇಷ ಇಲ್ಲ. ಸಂವಿಧಾನ ರಚನೆ ವಿಚಾರದಲ್ಲಿ ವಿರೋಧವಿಲ್ಲ. ಅಲ್ಪಸಂಖ್ಯಾತರು, ಬಹುಸಂಖ್ಯಾತರ ನಡುವೆ ದೇಶದಲ್ಲಿ ವ್ಯತ್ಯಾಸಗಳನ್ನು ಸರ್ಕಾರಗಳು ಮಾಡುತ್ತಿದೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗೆ ಸಾಕಷ್ಟು ಅನುದಾನ ಇದೆ. ದಲಿತರಿಗೆ ಸರಿಯಾಗಿ ಅನುದಾನ ಸಿಗ್ತಾಯಿಲ್ಲ. ದಲಿತರ ಶಿಕ್ಷಣಕ್ಕೆ ಸರ್ಕಾರಗಳು ಒತ್ತು ಕೊಡುತ್ತಿಲ್ಲ. ಇದನ್ನು ನಾನು ಹೇಳಲು ಹೊರಟಿದ್ದೇನೆ. ನನ್ನ ವಾದ ಇಲ್ಲಿಗೆ ನಿಲ್ಲಲ್ಲ. ಜಾತಿಯ ಆಧಾರದಲ್ಲಿ ಸರ್ಕಾರ ಪಕ್ಷಪಾತ ಮಾಡುವುದು ಸರಿಯಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ

    ಮೋದಿ ಕಿವಿ ಹಿಂಡಿದ ಪೇಜಾವರಶ್ರೀ:
    ರಾಮಮಂದಿರ ವಿಚಾರದಲ್ಲಿ ಪೇಜಾವರರು ಮೋದಿ ಕಿವಿ ಹಿಂಡಿದ್ದಾರೆ. ರಾಜಕಾರಣಿಗಳು ಎಡವಿದಾಗ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ರಾಮಮಂದಿರ ವಿಚಾರದಲ್ಲಿ ಕೋರ್ಟ್ ಹೊರಗೆ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರಬೇಕು. ಲೋಕಸಭೆ, ರಾಜ್ಯಸಭೆಯಲ್ಲಿ ವಿಧೇಯಕ ತರಬೇಕು. ಸರ್ಕಾರದ ಅಧಿಕಾರದ ಪರಿಮಿತಿಯಲ್ಲಿ ವಿಶೇಷ ಪ್ರಯತ್ನ ಮಾಡಬೇಕು. ಕೇಂದ್ರ ಪ್ರಯತ್ನ ಮಾಡುತ್ತಿಲ್ಲ ಅಂತ ಜನ ಹೇಳುತ್ತಾರೆ. ಕೇಂದ್ರ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಒತ್ತಡ ತಂದು ಮಂದಿರ ನಿರ್ಮಾಣವಾಗಬೇಕು ಎಂದರು.

    ಪೇಜಾವರಶ್ರೀಗಳಿಗೆ ರಾಜಕೀಯ ಯಾಕೆ ಇಷ್ಟ?
    ರಾಜಕಾರಣಿಗಳು ಧರ್ಮದ ವಿಚಾರದಲ್ಲಿ ಯಾಕೆ ಮೂಗು ತೂರಿಸಬೇಕು? ಸ್ವಾಮೀಜಿಗಳು ಧರ್ಮದ ಕೆಲಸ ಮಾಡುತ್ತೇವೆ. ಅವರು ಧರ್ಮದ ವಿಚಾರದಲ್ಲಿ ಮೂಗು ತೂರಿಸಿದಾಗ ನಾವು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತೇವೆ. ಧರ್ಮದ, ಮಠದ ಬಗ್ಗೆ ಮಾತನಾಡುವ ರಾಜಕಾರಣಿಗಳು ರಾಜಕೀಯದಲ್ಲಿ ತಪ್ಪು ಮಾಡಿದಾಗ ನಾವು ನಮ್ಮ ಅಭಿಪ್ರಾಯ ಹೇಳುತ್ತೇವೆ. ಪೀಠಾಧಿಪತಿಗಳು ಚುನಾವಣೆಗೆ ನಿಲ್ಲಲ್ಲ. ಹೀಗಾಗಿ ನಮಗೆ ಆಕಾಂಕ್ಷೆಗಳಿಲ್ಲ. ಆಳುವವರು ತಪ್ಪು ಮಾಡಿದಾಗ ನಾನು ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

    ವಯಸ್ಸಾಯ್ತು, ದೇಹದಲ್ಲಿ ಶಕ್ತಿಯಿಲ್ಲ:
    ನನಗೆ ವಯಸ್ಸಾಯ್ತು, ಅದು ನನ್ನ ಗಮನಕ್ಕೆ ಬರುತ್ತಿದೆ. ಓಡಾಡಲು ಶಕ್ತಿ ಸಾಲದು ಎಂದು ಪೇಜಾವರಶ್ರೀ ಹೇಳಿದರು. ದೇಹದಲ್ಲಿ ದೋಷವಿದೆ, ನಡೆದಾಡಲು ಆಗುವುದಿಲ್ಲ. ಕಾರಿನಲ್ಲಿ ಓಡಾಟ ಮಾಡಿ ನನ್ನ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆ ಮುಂದುವರೆಸುತ್ತೇನೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ರು.

    ಪೇಜಾವರ ಶ್ರೀಗಳು ಜನವರಿ 18ರಂದು ಪರ್ಯಾಯ ಪೀಠಾವರೋಹಣ ಮಾಡಲಿದ್ದಾರೆ. ಎರಡು ವರ್ಷಗಳ ಕಾಲ ಕಡೆಗೋಲು ಶ್ರೀಕೃಷ್ಣನ ಪೂಜೆ ಮಾಡಿದ್ದ ಪೇಜಾವರಶ್ರೀಗಳ ಪೂಜಾಧಿಕಾರ ಇಂದಿಗೆ ಮುಗಿದಿದ್ದು, ಐತಿಹಾಸಿಕ ಐದು ಪರ್ಯಾಯಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ.

  • ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ

    ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ

    ಉಡುಪಿ: ದಾಖಲೆಯ ಪಂಚಮ ಪರ್ಯಾಯ ಮಹೋತ್ಸವದ ಸಂಭ್ರಮ ಶುರುವಾಗಿದ್ದು, ಪೇಜಾವರಶ್ರೀಗಳು ದಾಖಲೆಯ ಪರ್ಯಾಯವನ್ನು ಮುಗಿಸುತ್ತಿದ್ದಾರೆ.

    ಪೇಜಾವರ ಶ್ರೀಗಳು ಜನವರಿ 18ರಂದು ಪರ್ಯಾಯ ಪೀಠಾವರೋಹಣ ಮಾಡಲಿದ್ದಾರೆ. ಎರಡು ವರ್ಷಗಳ ಕಾಲ ಕಡೆಗೋಲು ಶ್ರೀಕೃಷ್ಣನ ಪೂಜೆ ಮಾಡಿದ್ದ ಪೇಜಾವರಶ್ರೀಗಳ ಪೂಜಾಧಿಕಾರ ಮುಗಿದಿದ್ದು, ಐತಿಹಾಸಿಕ ಐದು ಪರ್ಯಾಯಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ.

    ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಕಡೆಗೋಲು ಶ್ರೀಕೃಷ್ಣನಿಗೆ ತನ್ನ ಅಧಿಕಾರಾವಧಿಯ ಕೊನೆಯ ಎರಡು ಪೂಜೆಗಳನ್ನು ಇಂದು ಮಾಡಲಿದ್ದಾರೆ. ನಾಳೆಯಿಂದ ಉಡುಪಿ ಕೃಷ್ಣನಿಗೆ ಪೂಜೆ ಮಾಡುವ ಅಧಿಕಾರ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯ ಪಾಲಾಗಲಿದೆ.

    ಜನವರಿ 17ರ ಮಧ್ಯರಾತ್ರಿ 3 ಗಂಟೆಯಿಂದ ಬೆಳಗ್ಗಿನ ಜಾವ 7 ಗಂಟೆಯವರೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಈ ಸಂದರ್ಭದಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರು ವಿದ್ಯಾಧೀಶ ಸ್ವಾಮೀಜಿಯವರಿಗೆ ಪೂಜಾಧಿಕಾರ ಮತ್ತು ಕೃಷ್ಣಮಠದ ಎಲ್ಲಾ ಅಧಿಕಾರಗಳನ್ನು ಹಸ್ತಾಂತರ ಮಾಡಲಿದ್ದಾರೆ. ಹೀಗಾಗಿ ಪಲಿಮಾರು ಶ್ರೀಗಳ ಪರ್ಯಾಯಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಪಲಿಮಾರು ಪರ್ಯಾಯ ಚೆನ್ನಾಗಿ ನಡೆಯಲಿ ಎಂದು ವಿಶ್ವೇಶತೀರ್ಥ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಮುಂದಿನ ಪರ್ಯಾಯ ಸ್ವಾಮೀಜಿಗೆ ಹಿರಿಯ ಯತಿಗಳು ಶುಭಕೋರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ, ನನ್ನ ಪರ್ಯಾಯ ನನಗೆ ಸಂತೃಪ್ತಿ ತಂದಿಲ್ಲ. ಸಂತೋಷವಿದೆ. ಹಲವಾರು ಸಾಮಾಜಿಕ ಕಾರ್ಯಗಳನ್ನುಮಾಡಿದ್ದ ಖುಷಿಯಿದೆ. ವಿರೋಧಗಳು ಬಂತು, ಚರ್ಚೆಗಳು ಆಗಿದೆ. ಹೀಗಾದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಸ್ವಾಮೀಜಿ ಹೇಳಿದರು. ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯ ವೈಭವದ ಪುರಪ್ರವೇಶ ನಡೆದಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸ್ವಾಮೀಜಿಯವರನ್ನು ವಿಶೇಷ ಟ್ಯಾಬ್ಲೋದ ಮೂಲಕ ಮೆರವಣಿಗೆ ಮಾಡಿ ಉಡುಪಿ ಪುರದೊಳಗೆ ಕರೆದುಕೊಂಡು ಬರಲಾಗಿದೆ. ಮುಂದಿನ ಪರ್ಯಾಯ ಚೆನ್ನಾಗಿ ನಡೆಯುತ್ತದೆ ಎಂದು ಶುಭ ಹಾರೈಸಿದರು.

    ಪರ್ಯಾಯ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಹೊರೆ ಕಾಣಿಕೆಗಳು ಬಂದಿದೆ. ಧಾರ್ಮಿಕ ವಿಧಿವಿಧಾನಗಳು ರಾತ್ರಿ ಆರಂಭವಾಗಲಿದ್ದು ಜನವರಿ 18ರ ಬೆಳಗ್ಗಿನ ಜಾವ ಆರು ಗಂಟೆಗೆ ಅನ್ನದ ಸಟ್ಟುಗ ಮತ್ತು ಅಕ್ಷಯ ಪಾತ್ರೆಯನ್ನು ಪೇಜಾವರ ಸ್ವಾಮೀಜಿ ಹಸ್ತಾಂತರ ಮಾಡುತ್ತಾರೆ. ಈ ಮೂಲಕ ಎರಡು ವರ್ಷದ ಪರ್ಯಾಯ ಮುಗಿಸಲಿದ್ದಾರೆ. ಪಲಿಮಾರು ಸ್ವಾಮೀಜಿ ತಮ್ಮ ಸನ್ಯಾಸ ಜೀವನದ ಎರಡನೇ ಪರ್ಯಾಯ ಆರಂಭ ಮಾಡಲಿದ್ದಾರೆ.

    ಒಂದು ಬಾರಿ ಪರ್ಯಾಯ ಪೂಜಾಧಿಕಾರ ಸಿಕ್ಕರೆ ಮತ್ತೆ ಆ ಮಠಕ್ಕೆ ಕೃಷ್ಣನ ಪೂಜಾಧಿಕಾರ ಸಿಗೋದು 14 ವರ್ಷದ ನಂತರ. ಕೃಷ್ಣಮಠಕ್ಕೆ ಸಂಬಂಧಪಟ್ಟ ಒಟ್ಟು 8 ಮಠಗಳಿದ್ದು, ಪಲಿಮಾರು ಮಠ ತನ್ನ ಪರ್ಯಾಯವನ್ನು ಜನವರಿ 18 2018 ರಿಂದ 2020ರವರೆಗೆ ನಡೆಸಲಿದೆ. ಪೇಜಾವರಶ್ರೀಗಳಿಗೆ 8ನೇ ವಯಸ್ಸಿನಲ್ಲಿ ಸನ್ಯಾಸತ್ವ ಪಡೆದುದ್ದರಿಂದ ಈವರೆಗಿನ ಎಲ್ಲಾ ಸ್ವಾಮೀಜಿಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಮತ್ಯಾರೂ ಮಾಡಲು ಅಸಾಧ್ಯವಾದ ದಾಖಲೆಯನ್ನು ತನ್ನ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ.

  • ಉಡುಪಿಯ ಕೊರಗಜ್ಜನ ಮಹಿಮೆ ಮತ್ತೊಮ್ಮೆ ಸಾಬೀತು- ಕದ್ದ ಬೆಳ್ಳಿ ಆಭರಣಗಳನ್ನು ಹಿಂದುರಿಗಿಸಿದ ಖದೀಮರು

    ಉಡುಪಿಯ ಕೊರಗಜ್ಜನ ಮಹಿಮೆ ಮತ್ತೊಮ್ಮೆ ಸಾಬೀತು- ಕದ್ದ ಬೆಳ್ಳಿ ಆಭರಣಗಳನ್ನು ಹಿಂದುರಿಗಿಸಿದ ಖದೀಮರು

    ಉಡುಪಿ: ಕರಾವಳಿಯಲ್ಲಿ ದೈವ ಮತ್ತೆ ಕಾರಣಿಕ ತೋರಿದೆ. ದೈವಸ್ಥಾನದಿಂದ ಕದ್ದ ಆಭರಣಗಳನ್ನು ಕಳ್ಳರು ವಾಪಾಸ್ ತಂದಿಟ್ಟಿದ್ದಾರೆ. ಉಡುಪಿ ಜಿಲ್ಲೆ ಕಟಪಾಡಿಯಲ್ಲಿ ಈ ಕೌತುಕ ನಡೆದಿದೆ.

    ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ. ಇಂತಹ ದೈವಸ್ಥಾನದ ಮುಂದೆ ಎಂತವನೂ ಕೇಡು ಬಗೆಯಲು ಮುಂದಾಗೋದಿಲ್ಲ. ಆದ್ರೆ ಏನಾದ್ರೂ ಕೇಡು ಬಗೆದಲ್ಲಿ ದೈವ ಶಕ್ತಿಗಳು ಆತನನ್ನು ಮಟ್ಟ ಹಾಕುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇದನ್ನೂ ಓದಿ:   ದೈವಕ್ಕೆ ಬೈಯ್ದಿದ್ದಕ್ಕೆ ಇಡೀ ಕುಟುಂಬಕ್ಕೆ ಅನಾರೋಗ್ಯ – ಕೊರಗಜ್ಜನಲ್ಲಿ ಯುವಕನಿಂದ ಕ್ಷಮೆಯಾಚನೆ

    ಉಡುಪಿಯ ಕಟಪಾಡಿಯ ಏಣಗುಡ್ಡೆ ಎಂಬಲ್ಲಿರೋ ನೀಚ ದೈವ ಅಥವಾ ಕರಾವಳಿಯಾದ್ಯಂತ ಅಜ್ಜ ಎಂದೇ ಗುರುತಿಸಿಕೊಂಡಿರುವ ಸ್ವಾಮಿ ಕೊರಗಜ್ಜನ ಆಭರಣಗಳನ್ನು ಕದ್ದೊಯ್ದಿದ್ದ ಕಳ್ಳನೊಬ್ಬ ತಾನಾಗಿಯೇ ಮಕರ ಸಂಕ್ರಮಣ ದಿನದಂದು ಕೆಲವೊಂದು ಬೆಳ್ಳಿ ಆಭರಣಗಳನ್ನು ತಂದು ದೈವಸ್ಥಾನದ ಬಾಗಿಲ ಬಳಿ ಇಟ್ಟು ಹೋಗಿದ್ದಾನೆ. ಪವಾಡ ಅಂದ್ರೆ, ಕಳೆದ ವರುಷ ಅಕ್ಟೋಬರ್ 2 ರ ರಾತ್ರಿ ಇಲ್ಲಿ ಕಳವು ನಡೆದಿತ್ತು. ಆಗ ಅಷ್ಟಮಂಗಲ ಪ್ರಶ್ನೆ ಇಟ್ಟಾಗ ಮುಂದಿನ ಮಕರ ಸಂಕ್ರಮಣದೊಳಗಾಗಿ ಕದ್ದ ಆಭರಣ ದೈವಸ್ಥಾನ ಸೇರಲಿದೆ ಎನ್ನು ವಿಶ್ವಾಸ ವ್ಯಕ್ತವಾಗಿತ್ತು. ಇದೀಗ ಆ ಮಾತು ನಿಜವಾಗಿದೆ.

    ಸೋಮವಾರ ಮಕರ ಸಂಕ್ರಮಣದ ದಿನ ಕದ್ದ ಕೆಲವು ಬೆಳ್ಳಿ ಆಭರಣಗಳು ದೈವಸ್ಥಾನ ಸೇರಿವೆ. ನಿನ್ನೆ ಖದೀಮರು ದೈವಸ್ಥಾನದ ಬಾಗಿಲ ಬಳಿ ತಂದಿಟ್ಟು ಹೋಗಿದ್ದು, ಕೊರಗಜ್ಜನ ಮಹಿಮೆಗೆ ಕೈ ಗನ್ನಡಿ ಹಿಡಿದಂತಾಗಿದೆ. ಸದ್ಯ ತಂದಿಟ್ಟ ಬೆಳ್ಳಿಯ ಪರಿಕರಗಳು ಕಾಪು ಠಾಣಾ ಪೊಲೀಸರ ವಶದಲ್ಲಿದೆ. ಇನ್ನೂ ಒಂದಿಷ್ಟು ಆಭರಣಗಳು ಬಾಕಿ ಇದ್ದು ಅದನ್ನೂ ಕದ್ದೊಯ್ದ ಕಳ್ಳರು ತಂದಿಡುವ ವಿಶ್ವಾಸವನ್ನು ಗ್ರಾಮಸ್ಥರು ಹೊಂದಿದ್ದಾರೆ.

    ನಾರಾಯಣ ಕಟಪಾಡಿ ಆನಂದ ಮಾಬೆನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ನಮ್ಮ ದೈವ ಬಹಳ ಕಾರಣಿಕದ್ದು. ದರ್ಶನದಲ್ಲೂ ಕದ್ದ ನಗನಾಣ್ಯ ಸಿಗುತ್ತದೆ ಎಂದು ಬಂದಿತ್ತು. ಹಾಗೆಯೇ ಆಗಿದೆ. ನಂಬಿದ ದೈವ ಕೈ ಬಿಡಲಿಲ್ಲ ಎಂದು ಹೇಳಿದ್ದಾರೆ.

  • ದೇವಸ್ಥಾನಕ್ಕೆ ಬಂದ್ರು, ಸಭಾಂಗಣಕ್ಕೆ ಬರಲಿಲ್ಲ- ಕರಾವಳಿಯ ಬಿಲ್ಲವರಿಂದ ಸಿಎಂ ವಿರುದ್ಧ ಆಕ್ರೋಶ

    ದೇವಸ್ಥಾನಕ್ಕೆ ಬಂದ್ರು, ಸಭಾಂಗಣಕ್ಕೆ ಬರಲಿಲ್ಲ- ಕರಾವಳಿಯ ಬಿಲ್ಲವರಿಂದ ಸಿಎಂ ವಿರುದ್ಧ ಆಕ್ರೋಶ

    ಉಡುಪಿ: ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಅಂತ ರಾಜ್ಯದಲ್ಲಿ ಬಿಂಬಿತವಾಗುತ್ತಿದೆ ಎನ್ನಲಾಗುತ್ತಿದೆ. ವಿಪಕ್ಷದ ಜೊತೆ ಜನರೂ ಹೀಗೆ ಆರೋಪ ಮಾಡ್ತಾಯಿದ್ದಾರೆ. ಹೀಗೆ ಮುಂದುವರೆದರೆ ಮುಂದಿನ ಚುನಾವಣೆ ಗೆಲ್ಲೋದು ಕಷ್ಟ ಅಂತ ಸಿಎಂ ಕರಾವಳಿಯಲ್ಲಿ ಟೆಂಪಲ್ ರನ್ ಮಾಡಿದ್ರು. ಗಂಟೆಯೊಳಗೆ ಎರಡು ದೇವಸ್ಥಾನಕ್ಕೆ ಹೋದ್ರು. ಇಷ್ಟೆಲ್ಲಾ ಮಾಡಿದ್ರೂ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯವನ್ನು ಸಿಎಂ ಎದುರು ಹಾಕಿಕೊಂಡಂತಾಗಿದೆ.

    ಸಿಎಂ ಸಿದ್ದರಾಮಯ್ಯ ಕಾಲಿಗೆ ಚಕ್ರ ಕಟ್ಟಿಕೊಂಡು ದಿನಕ್ಕೆ ಮೂರು ಸಮಾವೇಶ ಮಾಡುತ್ತಿದ್ದಾರೆ. ಹೆಲಿಕಾಪ್ಟರ್ ಹತ್ತಿ, ಹಾರಿ ಇಡೀ ರಾಜ್ಯ ಸುತ್ತುತ್ತಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಅಂತ ಬಿಜೆಪಿ ಬಿಂಬಿಸುವುದರಲ್ಲಿ ಯಶಸ್ವಿಯಾಗುತ್ತಿದೆ. ಅದ್ರಲ್ಲೂ ಕರಾವಳಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಭಿಪ್ರಾಯ ಕೂಡಾ ಸಮೀಕ್ಷೆಗಳಲ್ಲಿ ಬಂದಿದೆ. ಈ ನಡುವೆ ಸಿಎಂ ಈ ಆರೋಪದಿಂದ ಮುಕ್ತರಾಗಲು ಉಡುಪಿಯಲ್ಲಿ ಎರಡು ದೇವಸ್ಥಾನಗಳಿಗೆ ವಾರದ ಹಿಂದೆ ಭೇಟಿ ಕೊಟ್ಟಿದ್ದರು. ತಾನು ದೈವ ಭಕ್ತ ಅಂತ ಪ್ರೂವ್ ಮಾಡಲು ಮುಂದಾಗಿದ್ದರು. ಎಲ್ಲಾ ಕಡೆ ನಾನೂ ಹಿಂದು ಎಂದು ಹೇಳಿಯೇಬಿಟ್ಟರು. ಬೈಂದೂರು, ಬ್ರಹ್ಮಾವರ, ಕಾಪುವಿನಲ್ಲಿ ನಾನು ಹಿಂದೂ ಅನ್ನುತ್ತಾ ಯುಪಿ ಸಿಎಂ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

    ಸಿಎಂ ಕಾಪು ಜನಾರ್ದನ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಹೋಗಿ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯ ಆರಾಧಿಸುವ ನಾರಾಯಣ ಗುರುಗಳ ಸನ್ನಿಧಿಯಲ್ಲಿ ಪೂಜೆಯಲ್ಲಿ ಪಾಲ್ಗೊಂಡರು. ಆರತಿ ಪಡೆದು-ಗುರುಗಳ ಮುಂದೆ ನಿಂತು ಕ್ಷೇತ್ರದ ಬಗ್ಗೆ ಅರಿತುಕೊಂಡರು. ನಂತರ ಸಮುದಾಯ ಭವನದ ಹೊರಭಾಗದಲ್ಲಿ ಕಟ್ಟಡದ ಉದ್ಘಾಟನೆ ಮಾಡಿದರು. ಇಷ್ಟಾಗಿ ಸಿಎಂ ಹೊರಟು ಹೋಗಿದ್ದರು.

    ಸಭಾಂಗಣದಲ್ಲಿ ಸಿಎಂ ಬರ್ತಾರೆ ಅಂತ ಒಂದೂವರೆ ಸಾವಿರ ಜನ ಕಾಯ್ತಾಯಿದ್ದರು. ಸಭಾಂಗಣದ ಉದ್ಘಾಟನೆಗೆ ದೀಪಸ್ತಂಭ ಸಿದ್ಧವಾಗಿತ್ತು, ವೇದಿಕೆ ರೆಡಿಯಾಗಿತ್ತು. ಆದ್ರೆ ಸಿಎಂ ಸಭಾಂಗಣಕ್ಕೆ ಬಾರದೆ ವಾಪಾಸ್ ಉಡುಪಿ ಕಾಂಗ್ರೆಸ್ ಕಚೇರಿಗೆ ಹೋದರು. ಸಚಿವ ಪ್ರಮೋದ್ ಮಧ್ವರಾಜ್ ಕೈ ಮುಗಿದು ಸಿಎಂ ಅವರನ್ನು ಕರೆದರು. ಸ್ಥಳೀಯ ಶಾಸಕ ವಿನಯಕುಮಾರ್ ಸೊರಕೆ ಸಿಎಂ ಅವರನ್ನು ನಿವೇದನೆ ಮಾಡಿಕೊಂಡರು. ಬಿಲ್ಲವ ಸಮಾಜದ ಪ್ರಮುಖರು ಸಿಎಂ ಸಭಾಂಗಣಕ್ಕೆ ಬಂದು ನೋಡುವಂತೆ, ಸಣ್ಣ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದರು. ಆದ್ರೆ ಈ ಯಾವುದೇ ಬೇಡಿಕೆಗಳಿಗೆ ಮಣಿಯದೆ ಸಿಎಂ ಕೈ ಮುಗಿದು ಅಲ್ಲಿಂದ ಹೊರಟುಬಿಟ್ಟರು. ಇದನ್ನೂ ಓದಿ: ಎಲೆಕ್ಷನ್ ಹೊತ್ತಲ್ಲೇ ಶಿವಭಕ್ತರಾದ ಸಿಎಂ- ಮಹದೇಶ್ವರನಿಗೆ ಬೆಳ್ಳಿ ಉಡುಗೊರೆಗಳ ಕಾಣಿಕೆ, ತಿರುಪತಿಗಿಂತಲೂ ಅದ್ಭುತವಾದ ಚಿನ್ನದ ರಥ ನಿರ್ಮಿಸಲು ಸೂಚನೆ

    ಸಿಎಂ ದೇವಸ್ಥಾನಕ್ಕೆ ಬಂದ್ರು, ಖುಷಿಯಾಗಿದೆ. ಆದ್ರೆ ಗಂಟೆಗಟ್ಟಲೆ 1500 ಜನ ಕಾಯ್ತಾಯಿದ್ದರು. ಮೇಲೆ ಸಭಾಂಗಣಕ್ಕೆ ಬಾರದೆ ಹೋದದ್ದು ತಪ್ಪು. ಬಿಲ್ಲವರನ್ನು ಕಡೆಗಣಿಸಿದ್ರು, ಇದು ಉಡಾಫೆ ಎಂದು ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯ ರವಿ ಕೋಟ್ಯಾನ್ ದೂರಿದ್ದಾರೆ.

    ಸಿಎಂಗಾಗಿ ಸಭಾಂಗಣಕ್ಕೆ ಬಾರದೆ ಬಿಲ್ಲವರಿಗೆ ಅವಮಾನ ಮಾಡಿದ್ರು. ಕೇವಲ ಓಟಿಗಾಗಿ ವಿಶ್ವನಾಥ ಕ್ಷೇತ್ರಕ್ಕೆ ಬಂದು ಹೋದರು. ನಾವು ಕಾಯುತ್ತಿದ್ದರೂ ನಮ್ಮನ್ನು ಲೆಕ್ಕಿಸದೆ ಅವಮಾನ ಮಾಡಿದರು. ಇದು ಎರಡು ಜಿಲ್ಲೆಯ ಸಾವಿರಾರು ಬಿಲ್ಲವರಿಗೆ ಮಾಡಿದ ಅವಮಾನ ಅಂತ ಜನ ದೂರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗ್ತಾಯಿದೆ. ವಾಟ್ಸಪ್, ಫೇಸ್‍ಬುಕ್ ನಲ್ಲಿ ಸಿಎಂ ಬಿಲ್ಲವ ವಿರೋಧಿ ಎಂದು ಬಿಂಬಿಸಲಾಗುತ್ತಿದೆ.

    ಬಿಲ್ಲವ ಯುವ ನಾಯಕ ಸಂತೋಷ್ ಬೊಳ್ಜೆ ಮಾತನಾಡಿ, ಬೇರೆ ಧರ್ಮದ ಕಾರ್ಯಕ್ರಮಗಳಲ್ಲಿ ಗಂಟೆಗಟ್ಟಲೆ ಭಾಗವಹಿಸುವ ಸಿಎಂ ಹಿಂದೂಗಳ ಬಗ್ಗೆ ತಾತ್ಸಾರ ಹೊಂದಿದ್ದಾರೆ. ಬಿಲ್ಲವರಿಗೆ ಇದರಿಂದ ನೋವಾಗಿದೆ ಎಂದರು.

    ಸಿಎಂ ಸಿದ್ದರಾಮಯ್ಯ ಎರಡೆರಡು ದೇವಸ್ಥಾನಕ್ಕೆ ಭೇಟಿ ಕೊಡುವುದೇ ವಿಶೇಷ. ಇಷ್ಟು ಮಾಡಿದ್ರೂ ಬಿಜೆಪಿಗರಿಗೆ ಮಾಡೋದಕ್ಕೆ ಬೇರೆ ಕೆಲಸವಿಲ್ಲ. ಎಲ್ಲದರಲ್ಲೂ ಕಾಂಟ್ರವರ್ಸಿ ಮಾಡ್ತಾರೆ ಎಂಬ ಆರೋಪ ಕಾಂಗ್ರೆಸ್ ನಿಂದ ಕೇಳಿಬಂದಿದೆ. ಹೋದ್ರೂ ತಪ್ಪು, ಹೋಗದಿದ್ರೂ ತಪ್ಪು, ಮಾಡಿದ್ರೂ ತಪ್ಪು, ಮಾಡದಿದ್ರೂ ತಪ್ಪು ಅನ್ನೋ ಹಾಗಾಗಿದೆ. ಒಟ್ಟಿನಲ್ಲಿ ಚುನವಾಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಮೇಲಾಟಗಳು ಜೋರಾಗಿದೆ. ಸಿಎಂ ಬಂದು ಹೋದ್ರೂ ಸಾಮಾಜಿಕ ಜಾಲತಾಣಗಳು ವಿಷಯವನ್ನು ಜೀವಂತವಾಗಿಟ್ಟಿದೆ.

  • ಕಾರು ಗುದ್ದಿದ ರಭಸಕ್ಕೆ ಮೇಲಕ್ಕೆ ಚಿಮ್ಮಿದ್ರು ಸವಾರರು: ಉಡುಪಿಯ ಭಯಾನಕ ಅಪಘಾತ ಸಿಸಿಟಿವಿಯಲ್ಲಿ ಸೆರೆ

    ಕಾರು ಗುದ್ದಿದ ರಭಸಕ್ಕೆ ಮೇಲಕ್ಕೆ ಚಿಮ್ಮಿದ್ರು ಸವಾರರು: ಉಡುಪಿಯ ಭಯಾನಕ ಅಪಘಾತ ಸಿಸಿಟಿವಿಯಲ್ಲಿ ಸೆರೆ

    ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರಿನಲ್ಲಿ ಇನ್ನೋವಾ ಕಾರೊಂದು ಬೈಕಿಗೆ ಗುದ್ದಿದ ಪರಿಣಾಮ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಭಾನುವಾರ ಬೆಳಗ್ಗೆ 10.30 ರ ವೇಳೆಗೆ ಬೈಕಿನಲ್ಲಿ ಮೂವರು ಸವಾರರು ನಿಟ್ಟೂರಿನ ಬಾಳಿಗಾ ಫಿಶ್‍ನೆಟ್ ಎದುರಿನಿಂದ ಕೊಡಂಕೂರು ಕಡೆಗೆ ಬಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುತ್ತಿದ್ದಾಗ, ವೇಗವಾಗಿ ಬಂದ ಇನ್ನೋವಾ ಕಾರು ಬೈಕ್‍ ಗೆ ಡಿಕ್ಕಿ ಹೊಡೆದಿದೆ. ವೇಗದ ರಭಸಕ್ಕೆ ಬೈಕ್‍ ನಲ್ಲಿದ್ದ ಮೂವರು ಏಕಾಏಕಿ ಎಸೆಯಲ್ಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಾರು ಚಾಲಕ ಅಪಘಾತ ತಪ್ಪಿಸಲು ಪ್ರಯತ್ನಿಸಿದ್ದು, ಬೈಕ್‍ಗೆ ಡಿಕ್ಕಿಯಾದ ನಂತರ ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಬೈಕ್ ನಲ್ಲಿದ್ದವರು ಕೊಡಂಕೂರು ನಿವಾಸಿಗಳಾಗಿದ್ದು ದೀಪಕ್, ಬಾಲು, ಅವಿನಾಶ್ ಎಂದು ಗುರುತಿಸಲಾಗಿದೆ.

    ಈ ಬಗ್ಗೆ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಡುಪಿಯಲ್ಲಿ ವಿಜೃಂಭಣೆಯಿಂದ ನಡೆಯಿತು ಮಕರ ಸಂಕ್ರಾಂತಿ ತೇರುಗಳ ಉತ್ಸವ

    ಉಡುಪಿಯಲ್ಲಿ ವಿಜೃಂಭಣೆಯಿಂದ ನಡೆಯಿತು ಮಕರ ಸಂಕ್ರಾಂತಿ ತೇರುಗಳ ಉತ್ಸವ

    ಉಡುಪಿ: 800 ವರ್ಷಗಳ ಹಿಂದೆ ಮಧ್ವಾಚಾರ್ಯ ರಿಂದ ಸ್ಥಾಪನೆಯಾದ ಶ್ರೀಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ದಿನದಂದು ಸಂಭ್ರ ಏಕಕಾಲದಲ್ಲಿ ಮೂರು ತೇರುಗಳ ಉತ್ಸವ ನಡೆಯಿತು.

    ಆರಂಭದಲ್ಲಿ ತೆಪ್ಪೋತ್ಸವ, ನಂತರ ಪಲ್ಲಕ್ಕಿಯಲ್ಲಿ ದೇವರನ್ನು ತಂದು ಮೂರು ರಥಗಳಲ್ಲಿ ಉತ್ಸವ ಮಾಡಲಾಯ್ತು. ಸಾವಿರಾರು ಮಂದಿ ಈ ದಿನದ ಆಚರಣೆಗೆ ಸಾಕ್ಷಿಯಾದರು. ಎಂಟು ಮಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ವಿದ್ಯುದ್ದೀಪಾಲಂಕಾರ, ಸಾಂಪ್ರದಾಯಿಕ ಪಟಾಕಿ, ವೈಭವದ ಮೆರವಣಿಗೆ ಸಂಕ್ರಾಂತಿಯ ವಿಶೇಷವಾಗಿತ್ತು.

    ಈ ಬಾರಿ ತೆಪ್ಪವನ್ನು ರಥದ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಸಂಕ್ರಾಂತಿ ಸಂದರ್ಭದಲ್ಲಿ ನಡೆದ ತೆಪ್ಪೋತ್ಸವದಲ್ಲಿ ಸ್ವಾಮೀಜಿಗಳು ತೆಪ್ಪ ನಡೆಸಿದ್ದು ವಿಶೇಷವಾಗಿತ್ತು. ಪರ್ಯಾಯ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಮಧ್ವ ಸರೋವರದಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿದರು. ಮಧ್ವ ಸರೋವರದಲ್ಲಿ ನಡೆದ ದೇವರ ತೆಪ್ಪೋತ್ಸವಕ್ಕೆ ಸ್ವಾಮೀಜಿಗಳೇ ದೋಣಿ ಚಲಾಯಿಸಿದ್ದು ವಿಶೇಷವಾಗಿತ್ತು.

    ಶ್ರೀ ಕೃಷ್ಣ ಮಠದಲ್ಲಿ ನಡೆದ ಮಕರ ಸಂಕ್ರಮಣದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶಿರೂರು ಮಠಾಧೀಶರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಮಂತ್ರಾಲಯದ ಮಠಾಧೀಶರಾದ ಶ್ರೀ ವಿಬುಧೇಂದ್ರ ತೀರ್ಥ ಶ್ರೀಪಾದರು, ರಾಮೋಹಳ್ಳಿಯ ಶ್ರೀ ವಿಶ್ವಭೂಷಣ ಶ್ರೀಪಾದರು ಉಪಸ್ಥಿತರಿದ್ದರು.

  • ಕರ್ನಾಟಕಕ್ಕೆ ಬಂತು ಮೋಡಿಫೈಯಿಂಗ್ ಆಂದೋಲನ

    ಕರ್ನಾಟಕಕ್ಕೆ ಬಂತು ಮೋಡಿಫೈಯಿಂಗ್ ಆಂದೋಲನ

    ಉಡುಪಿ: ಗುಜರಾತ್ ಸಿಎಂ ಮೋದಿಯನ್ನು ಪ್ರಧಾನಿ ಮಾಡಿದ ಮೋಡಿಫೈಯಿಂಗ್ ಸಂಸ್ಥೆ ಕರ್ನಾಟಕಕ್ಕೂ ಕಾಲಿಟ್ಟಿದೆ. ಉಡುಪಿಯಲ್ಲಿ ಮೋಡಿಫೈಯಿಂಗ್ ಉದಯವಾಗಿದೆ. ಕಟಪಾಡಿಯ ಮಹೇಶ್ ಶೆಣೈ ಕರ್ನಾಟಕದ ಉಸ್ತುವಾರಿಯಾಗಿದ್ದಾರೆ.

    ಉಡುಪಿಯಲ್ಲಿ ಮೈಸೂರು ಸಂಸದ, ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಈ ಸಂಸ್ಥೆಯ ಉದ್ಘಾಟನೆ ಮಾಡಿದ್ದಾರೆ. 7 ವರ್ಷದ ಹಿಂದೆ ದೆಹಲಿಯ ತೇಜೇಂದ್ರಪಾಲ್ ಸಿಂಗ್ ಭಾಗ್ ಅವರು ಮೋಡಿಫೈಯಿಂಗ್ ಆಂದೋಲನ ಶುರು ಮಾಡಿದ್ದರು. ಇದೀಗ ಆಂದೋಲನ ಕರ್ನಾಟಕಕ್ಕೆ ವಿಸ್ತರಿಸಿದೆ.

    ಚಾಯ್ ಪೆ ಚರ್ಚಾ, ಚಹಾ ವಿತರಣೆ, ರನ್ ಫಾರ್ ಯೂನಿಟಿ ಮತ್ತಿತರ ಕಾರ್ಯಕ್ರಮ ವನ್ನು ತೇಜ್ ಪಾಲ್ ಮಾಡಿದ್ದರು. ಚುನಾವಣೆವರೆಗೂ ನಿರಂತರವಾಗಿ ಮೋಡಿಫೈಯಿಂಗ್ ಕ್ಯಾಂಪೇನ್ ಇರಲಿದೆ. ಸಿದ್ದರಾಮಯ್ಯ ಸರ್ಕಾರದ ವೈಫಲ್ಯ, ಮೋದಿ ಸರ್ಕಾರದ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವ ಕೆಲಸವನ್ನು ಮೋಡಿಫೈಯಿಂಗ್ ಮಾಡುತ್ತದೆ. ರಾಜಕೀಯ ರಹಿತವಾಗಿರುವ, ಮೋದಿ ಅಭಿಮಾನಿಗಳನ್ನು, ಕೇಂದ್ರ ಸರ್ಕಾರವನ್ನು ಒಪ್ಪುವ ಜನರನ್ನು ಒಗ್ಗೂಡಿಸುವುದು ಮೋಡಿಫೈಯಿಂಗ್ ಕೆಲಸ.

    ದೇಶಕ್ಕೆ ಮೋದಿ ಸಮರ್ಥ ಪ್ರಧಾನಿಯಾಗಿದ್ದರೆ ರಾಜ್ಯಕ್ಕೊಬ್ಬ ಸಮರ್ಥ ಮುಖ್ಯಮಂತ್ರಿ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇವೆ. ಮೋದಿ ಸಾಧನೆ ಜನಕ್ಕೆ ಮುಟ್ಟಿಸುವ ಗುರಿಯಿದೆ. ದಕ್ಷಿಣ ಭಾರತದಲ್ಲಿ ಮೋದಿ ಹವಾ ಕ್ರಿಯೇಟ್ ಮಾಡುವ ಅಭಿಲಾಷೆಯಿದೆ. ಕರ್ನಾಟಕಕ್ಕೂ ಬಿಜೆಪಿ ಆಡಳಿತ ಬೇಕು ಅಂತ ಕರ್ನಾಟಕ ಉಸ್ತುವಾರಿ, ಉಡುಪಿ ಸಂಚಾಲಕ ಮಹೇಶ್ ಶೆಣೈ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

  • ಉಡುಪಿಯಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸೇರಿತು ವಂದೇ ಮಾತರಂ

    ಉಡುಪಿಯಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸೇರಿತು ವಂದೇ ಮಾತರಂ

    ಉಡುಪಿ: ವಿಶ್ವಾದ್ಯಂತ ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಸರ್ಕಾರವೂ ಸ್ವಾಮೀಜಿಯ 155ನೇ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿದೆ. ಉಡುಪಿಯಲ್ಲಿ ಈ ದಿನ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸಾಕ್ಷಿಯಾಯ್ತು. 5000 ಮಂದಿ ವಂದೇ ಮಾತರಂ ಹಾಡುವ ಮೂಲಕ ತಮ್ಮ ಹೆಸರುಗಳನ್ನು ವಿದ್ಯಾರ್ಥಿಗಳು ದಾಖಲೆ ಪುಸ್ತಕದಲ್ಲಿ ಬರೆಸಿದ್ದಾರೆ.

    ಭಾರತ್ ಮಾತಾಕಿ ಜೈ.., ಸ್ವಾಮೀ ವಿವೇಕಾನಂದರಿಗೆ ಜೈ.., ವಂದೇ ಮಾತರಂ.., ವಂದೇ ಮಾತರಂ. ಇವಿಷ್ಟು ಘೋಷ ವಾಕ್ಯಗಳನ್ನು ಬಿಟ್ಟು ಉಡುಪಿಯ ಮಲ್ಪೆಯಲ್ಲಿ ಬೇರೇನೂ ಇರಲೇ ಇಲ್ಲ. ಬರೀ ವಂದೇ ಮಾತರಂ ಘೋಷವಾಕ್ಯವಷ್ಟೆ ಕಿವಿಗಪ್ಪಳಿಸುತ್ತಿತ್ತು. ಕಣ್ಣಮುಂದೆ ತಿರಂಗ ಪಟಪಟಿಸುತ್ತಿತ್ತು.

    ಸ್ವಾಮಿ ವಿವೇಕಾನಂದರ 155ನೇ ಜನ್ಮದಿನೋತ್ಸವವನ್ನು ಉಡುಪಿಯಲ್ಲಿ ವಿಭಿನ್ನವಾಗಿ ಆಚರಿಸಲಾಯ್ತು. ಇಳಿ ಸಂಜೆಯಲ್ಲಿ ಮಲ್ಪೆ ಕಡಲ ತೀರದಲ್ಲಿ ಐದು ಸಾವಿರ ಮಂದಿ ವಿದ್ಯಾರ್ಥಿಗಳು ವಂದೇ ಮಾತರಂ ಹಾಡಿನ ಗಾಯನ ಮಾಡಿದ್ರು. `ಸೇವ್ ನೇಚರ್ ಫಾರ್ ಫ್ಯೂಚರ್’ ಎಂಬ ಲೋಗೋವನ್ನು ಹಾಡಿದ ಎಲ್ಲಾ ವಿದ್ಯಾರ್ಥಿಗಳು ಧರಿಸಿದ್ದರು. ಇದೇ ಮೊದಲ ಬಾರಿಗೆ ಸಂಪೂರ್ಣ ಹಾಡನ್ನು ಇಷ್ಟು ದೊಡ್ಡ ಗುಂಪಿನಲ್ಲಿ ಹಾಡಲಾಯ್ತು.

    ಹಿನ್ನೆಲೆ ಸಂಗೀತಕ್ಕೆ ವಿದ್ಯಾರ್ಥಿಗಳು, ಕಲಾವಿದರು ಸುಶ್ರಾವ್ಯವಾಗಿ ಹಾಡಿದರು. ಸೇರಿದ್ದ ಜನ- ಗಣ್ಯರು ಎದ್ದು ನಿಂತು ವಂದೇ ಮಾತರಂಗೆ ಗೌರವ ಕೊಟ್ಟರು. ಸಾಮೂಹಿಕ ವಂದೇ ಮಾತರಂ ಮತ್ತು ಒಂದೇ ರೀತಿಯ ಲೋಗೋ ಧರಿಸಿದ್ದು ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಯಾಗಲು ಕಾರಣವಾಯಿತು.

    ಈ ವಿಭಿನ್ನ ಕಾರ್ಯಕ್ರಮದಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ 24 ಕಾಲೇಜಿನ 5000 ವಿದ್ಯಾರ್ಥಿಗಳು ಪಾಲ್ಗೊಂಡರು. ಸುಮಾರು 15 ಸಾವಿರ ಮಂದಿ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದೊಂದು ಅವಿಸ್ಮರಣೀಯ ದಿನ ಅನ್ನೋದು ಪಾಲ್ಗೊಂಡ ವಿದ್ಯಾರ್ಥಿಗಳ ಖುಷಿಯ ಮಾತು.

    ವಿದ್ಯಾರ್ಥಿನಿ ಮಧುಮತಿ ಮತ್ತು ಮಮತಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ದಿನ ನಮ್ಮ ಜೀವನದಲ್ಲಿ ಎಂದೂ ಮರೆಯಲಾಗದ ದಿನ. ಕರಾವಳಿಯಲ್ಲಿ ಕೋಮು ಸಂಘರ್ಷ ಹೆಚ್ಚಾಗಿದ್ದು, ಪರಸ್ಪರ ಆತ್ಮೀಯತೆಯ ಭಾವನೆ ಕ್ಷೀಣಿಸಿದೆ. ದೇಶಭಕ್ತಿ ಇಲ್ಲವಾಗಿದ್ದು ಘರ್ಷಣೆ ಹೆಚ್ಚಾಗಿದೆ. ವಂದೇ ಮಾತರಂ ಹಾಡನ್ನು ಎಂದೂ ಸಂಪೂರ್ಣವಾಗಿ ನಾನು ಕೇಳಿಲ್ಲ. ಮೊದಲ ಬಾರಿ ಈ ಅನುಭವವಾಗಿದೆ. ವಂದೇ ಮಾತರಂ ಹಾಡುವಾಗ ತನ್ಮಯತೆ ಬರುತ್ತದೆ. ವಿಶೇಷ ದಿನದಂದು ವಂದೇ ಮಾತರಂ ಹಾಡಿದ್ರೆ ಯುವ ಜನರಲ್ಲಿ ದೇಶ ಭಕ್ತಿಯ ಜಾಗೃತಿ ಬರುತ್ತದೆ ಎಂದರು.

    ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಸಂವೇದನಾ ಫೌಂಡೇಶನ್‍ಗೆ ಸರ್ಟಿಫಿಕೇಟನ್ನು ಹಸ್ತಾಂತರ ಮಾಡಿದರು. ಸಂಸ್ಥೆಯ ಅಧಿಕಾರಿ ಸಂತೋಷ್ ಅಗರ್ವಾಲ್ ಮಾತನಾಡಿ, ಇದೊಂದು ಅಭೂತಪೂರ್ವ ಆಯೋಜನೆ. ವಿಶೇಷ ರೀತಿಯ ಸಾಧನೆ ಕೂಡಾ. ನಮ್ಮ ಸಂಸ್ಥೆಯಿಂದ ಗೌರವವನ್ನು ಕೊಡುತ್ತಿದ್ದೇವೆ. ಸಂವೇದನಾ ಸಂಸ್ಥೆಗೆ ಮಾತ್ರವಲ್ಲ, ಇದೊಂದು ದೇಶಕ್ಕೆ ಸಂದ ಗೌರವ ಎಂದು ಹೇಳಿದರು.

    ರಮೇಶ್ ಚಂದ್ರ, ಸುಹಾನಾ ಸೈಯ್ಯದ್, ಯಶವಂತ್, ಸೇರಿದಂತೆ ಸರಿಗಮಪ ಮತ್ತು ರಿಯಾಲಿಟಿ ಶೋನ ಹಾಡುಗಾರರು ಈ ರೆಕಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಳೆದ ಒಂದು ತಿಂಗಳಿಂದ ಸಂವೇದನಾ ಸಂಸ್ಥೆ ಮತ್ತು ಹಿರಿಯ ಸಂಗೀತ ಕಲಾವಿದರು ವಿದ್ಯಾರ್ಥಿಗಳಿಗೆ ಹಾಡು ಕಲಿಸಿಕೊಟ್ಟಿದ್ದರು.

    ಕಾರ್ಯಕ್ರಮದ ಆಯೋಜನೆ ಮಾಡಿದ ಪ್ರಕಾಶ್ ಮಲ್ಪೆ ಮಾತನಾಡಿ, ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಲು ಕಾರಣಕರ್ತರಾದ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಧನ್ಯವಾದ ಸಲ್ಲಿಸಿದ್ರು.

    ಕಾರ್ಯಕ್ರಮಕ್ಕೆ ಮೊದಲು ನಾಲ್ಕು ಕಿಲೋಮೀಟರ್ ಶೋಭಾಯಾತ್ರೆ ಮಾಡಲಾಯ್ತು. 40ಕ್ಕೂ ಹೆಚ್ಚು ಭಜನಾ ತಂಡಗಳು, ಟ್ಯಾಬ್ಲೋ, 1750 ಅಡಿ ಉದ್ದದ ತಿರಂಗವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯ್ತು. ಸಾವಿರಾರು ವಿದ್ಯಾರ್ಥಿಗಳು ಅರ್ಧ ಕಿಲೋಮೀಟರ್ ಉದ್ದದ ತಿರಂಗ ಹೊತ್ತು ಸಾಗಿದ್ದು ರಾಷ್ಟ್ರಧ್ವಜ ನದಿ ರೂಪದಲ್ಲಿ ಹರಿದಂತಾಯ್ತು.

    ಯುವಕರಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮತ್ತು ವಿವೇಕಾನಂದರ ಆಶಯಗಳನ್ನು ಭಿತ್ತರಿಸುವ ವಿಭಿನ್ನ ಕಾರ್ಯಕ್ರಮ ಉಡುಪಿಯಲ್ಲಿ ಎಲ್ಲರ ಗಮನ ಸೆಳೆದಿದೆ. ವಂದೇ ಮಾತರಂ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

  • ಒಂದೇ ವೇದಿಕೆಯಲ್ಲಿ 4,500 ಮಂದಿ ‘ವಂದೇ ಮಾತರಂ’ ಗೀತೆ ಗಾಯನ- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ನಿರ್ಮಿಸಲು ಸಿದ್ಧತೆ

    ಒಂದೇ ವೇದಿಕೆಯಲ್ಲಿ 4,500 ಮಂದಿ ‘ವಂದೇ ಮಾತರಂ’ ಗೀತೆ ಗಾಯನ- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ನಿರ್ಮಿಸಲು ಸಿದ್ಧತೆ

    ಉಡುಪಿ: ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಉಡುಪಿಯಲ್ಲಿ ಇಂದು ವಿಶ್ವದಾಖಲೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಒಂದೇ ವೇದಿಕೆಯಲ್ಲಿ 4500 ಮಂದಿ ಸಂಪೂರ್ಣ ವಂದೇ ಮಾತರಂ ಹಾಡನ್ನು ಗಾಯನ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡುವ ಹಾದಿಯಲ್ಲಿದ್ದಾರೆ.

    ಜಿಲ್ಲೆಯ ಸಂವೇದನಾ ಫೌಂಡೇಶನ್ಸ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಮಲ್ಪೆ ಪೊಲೀಸ್ ಸ್ಟೇಷನ್ ಮೈದಾನದಿಂದ ಬೃಹತ್ ಮೆರವಣಿಗೆಯಲ್ಲಿ 1,750 ಅಡಿ ಉದ್ದದ ತಿರಂಗವನ್ನು ಸುಮಾರು ಒಂದು ಸಾವಿರ ಮಕ್ಕಳು ಹೊತ್ತು ಸಾಗುತ್ತಾರೆ. ಸುಮಾರು 10 ಸಾವಿರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ರಾಷ್ಟ್ರ ಧ್ವಜಕ್ಕೆ ಹೂವು ಹಾಕಿ ಗೌರವ ವಂದನೆ ಸಲ್ಲಿಸಲಿದ್ದಾರೆ.

    ಮಲ್ಪೆ ಬೀಚ್‍ವರೆಗೆ ಮೆರವಣಿಗೆ ಸಾಗಿ ಅಲ್ಲಿ 4500 ವಿದ್ಯಾರ್ಥಿಗಳು ಒಂದೇ ಬಾರಿ ವಂದೇ ಮಾತರಂ ಹಾಡುತ್ತಾರೆ. ಸಾಮೂಹಿಕ ಹಾಡಿಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಅಧಿಕಾರಿಗಳು ಸಾಕ್ಷಿಯಾಗಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕಾಗಿ ಆಂಧ್ರಪ್ರದೇಶದಿಂದ ಅರ್ಧ ಕಿಲೋಮೀಟರ್ ಉದ್ದದ ತಿರಂಗವನ್ನು ತರಿಸಿಕೊಳ್ಳಲಾಗಿದೆ.

    ಕಾರ್ಯಕ್ರಮದಲ್ಲಿ 40 ಭಜನಾ ಮಂಡಳಿ, ವಿವಿಧ ಸಂಘ ಸಂಸ್ಥೆಗಳು, 24 ಪದವಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸೇವ್ ನೇಚರ್ ಎಂಬ ಬ್ಯಾಡ್ಜ್, ಸಮವಸ್ತ್ರ ತೊಟ್ಟು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30 ರಿಂದ ಸಂಜೆ ಆರು ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ.

    ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ 25 ಸಾವಿರ ಜನ ಪಾಲ್ಗೊಳ್ಳಲಿದ್ದು, ಸಿನೆಮಾ ಕ್ಷೇತ್ರದ 20 ಹಿನ್ನೆಲೆ ಗಾಯಕರು ವಂದೇ ಮಾತರಂ ಹಾಡಿಗೆ ಧನಿಗೂಡಿಸಲಿದ್ದಾರೆ. ಮೂವರು ವಿದೇಶಿಗರು ವಂದೇ ಮಾತರಂ ಹಾಡೋದು ಮತ್ತೊಂದು ವಿಶೇಷ. ಟ್ಯಾಬ್ಲೋಗಳು, ಸಾಂಸ್ಕೃತಿಕ ತಂಡಗಳು, ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ.

    ಸಾಂಧರ್ಬಿಕ ಚಿತ್ರ

  • ಅಂಚೆ ಚೀಟಿಯಲ್ಲಿ ಸಂತ ಲಾರೆನ್ಸರು- ಅತ್ತೂರು ಚರ್ಚ್ ಗೆ ಕೇಂದ್ರ ಸರ್ಕಾರದ ಗೌರವ

    ಅಂಚೆ ಚೀಟಿಯಲ್ಲಿ ಸಂತ ಲಾರೆನ್ಸರು- ಅತ್ತೂರು ಚರ್ಚ್ ಗೆ ಕೇಂದ್ರ ಸರ್ಕಾರದ ಗೌರವ

    ಉಡುಪಿ: ಜಿಲ್ಲೆಯ ಕಾರ್ಕಳದ ವಿಶ್ವ ಪ್ರಸಿದ್ಧ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರವನ್ನು ಮೈನರ್ ಬಾಸಿಲಿಕಾ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಇದೀಗ ಅತ್ತೂರು ಚರ್ಚ್ ಗೆ ಮತ್ತೊಂದು ಗರಿಮೆ ಒಲಿದಿದೆ.

    ಭಾರತೀಯ ಅಂಚೆ ಇಲಾಖೆ ಸಂತ ಲಾರೆನ್ಸರ ಭಾವಚಿತ್ರವಿರುವ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಜನವರಿ 18ರಂದು ಮಧ್ಯಾಹ್ನ 12 ಗಂಟೆಗೆ ಕಾರ್ಕಳದಲ್ಲಿ ಅಂಚೆ ಚೀಟಿ ಬಿಡುಗಡೆ ಆಗಲಿದೆ. ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾ, ಪವಾಡ ಮೂರ್ತಿಯ ಭಾವಚಿತ್ರವಿರುವ ವಿಶೇಷ ಕವರ್, ಹಾಗೂ ಬಾಸಿಲಿಕಾ ಲಾಂಛನದ ಕ್ಯಾನ್ಸಲೇಶನ್ (ಮೊಹರು) ಬಿಡುಗಡೆಯಾಗಲಿದ್ದು, ಅಂಚೆ ಕಚೇರಿಗಳಲ್ಲಿ ಲಭ್ಯವಾಗಲಿದೆ. ಅಂಚೆ ಲಕೋಟೆಗೆ ಬಳಸಬಹುದಾದ ಸಂತ ಲಾರೆನ್ಸ್ ಬಾಸಿಲಿಕಾ ಮತ್ತು ಪವಾಡ ಮೂರ್ತಿಯ ಭಾವಚಿತ್ರವುಳ್ಳ ಮೈ ಸ್ಟ್ಯಾಂಪ್ 5 ರೂಪಾಯಿ ಮುಖಬೆಲೆಯನ್ನು ಹೊಂದಿದೆ.

    ಕ್ರೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಅತ್ತೂರು ಸಂತ ಲಾರೆನ್ಸ್ ದೇವಾಲಯವನ್ನು 2016 ಎಪ್ರಿಲ್ 26ರಂದು ಮಹಾದೇವಾಲಯವಾಗಿ ಉನ್ನತಿಗೆ ಏರಿಸಿದ್ದರು. 2019, ಅಗಸ್ಟ್ 1 ರಂದು ಇದರ ಅಧಿಕೃತ ಘೋಷಣೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆದಿತ್ತು. ಬಾಸಿಲಿಕಾ ಎಂದು ಘೋಷಣೆಯಾದ ಸವಿನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ಇಂತದ್ದೊಂದು ಗೌರವವನ್ನು ಸಲ್ಲಿಸಿದೆ. ಮುಂದಿನ ಜನಾಂಗಕ್ಕೆ ಈ ಚರ್ಚಿನ ಇತಿಹಾಸ ತಿಳಿಯಲು, ಅಧ್ಯಯನ ನಡೆಸಲು ಪೂರಕವಾಗಲಿದೆ ಎಂದು ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಪ್ರಾಚೀನ ವಸ್ತು ಸಂಗ್ರಹಾಲಯದ ಎಂ.ಕೆ. ಕೃಷ್ಣಯ್ಯ ಹೇಳುತ್ತಾರೆ.

    ಜನವರಿ 18ರಂದು ಮಧ್ಯಾಹ್ನ 12 ಗಂಟೆಗೆ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ಸಮಾರಂಭ ನಡೆಯಲಿದೆ. ಈ ವೇಳೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರ ಉಪಸ್ಥಿತಿಯಲ್ಲಿ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಬಿಡುಗಡೆ ಮಾಡಲಿದೆ.