Tag: ಉಡುಪಿ

  • ಚಾರ್ಮಾಡಿಯಲ್ಲಿ ಹೆಚ್ಚಿದ  ಟ್ರಾಫಿಕ್ ಜಾಮ್- ಅಪಘಾತ ತಪ್ಪಿಸಲು ಪೊಲೀಸರನ್ನು ನೇಮಿಸುವಂತೆ ಸ್ಥಳೀಯರ ಆಗ್ರಹ

    ಚಾರ್ಮಾಡಿಯಲ್ಲಿ ಹೆಚ್ಚಿದ  ಟ್ರಾಫಿಕ್ ಜಾಮ್- ಅಪಘಾತ ತಪ್ಪಿಸಲು ಪೊಲೀಸರನ್ನು ನೇಮಿಸುವಂತೆ ಸ್ಥಳೀಯರ ಆಗ್ರಹ

    ಚಿಕ್ಕಮಗಳೂರು: ಶಿರಾಡಿಘಾಟ್ ರಸ್ತೆ ಬಂದ್ ಆದ ಮೇಲೆ ಬೆಂಗಳೂರು-ಮಂಗಳೂರು ಹೆದ್ದಾರಿಯ ವಾಹನಗಳು ಚಾರ್ಮಾಡಿ ಘಾಟ್‍ನಲ್ಲಿ ಸಂಚರಿಸುತ್ತಿರೋದ್ರಿಂದ ಚಾರ್ಮಾಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

    ದಿನಕ್ಕೆ ಎರಡ್ಮೂರು ಗಂಟೆ ವಾಹನ ಸವಾರರು ನಿಂತಲ್ಲೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ, ಉಡುಪಿ, ಕಾರವಾರಕ್ಕೆ ಹೋಗುವ ವಾಹನಗಳೆಲ್ಲಾ ಇಲ್ಲೇ ಸಂಚರಿಸುತ್ತಿರೋದ್ರಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸಾಕಷ್ಟು ಟ್ರಾಫಿಕ್ ಜಾಮ್ ಆಗ್ತಿದೆ.

    ಶಿರಾಡಿ ರಸ್ತೆ ದುರಸ್ಥಿಯಾಗೋವರೆಗೂ ಚಾರ್ಮಾಡಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧವಿದ್ರೂ ಕೂಡ ಭಾರೀ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ. ರಸ್ತೆಬದಿಯಲ್ಲಿ ಸಾವಿರಾರು ಅಡಿ ಆಳವಿದೆ. ಇಂತಹ ಪ್ರಪಾತದ ಕಿರಿದಾದ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುತ್ತಿದ್ದಾರೆ. ವಾಹನಗಳ ಸಂಚಾರ ಮಿತವಾಗಿದ್ದಾಗಲೇ ಇಲ್ಲಿ ಅಪಘಾತವಾಗ್ತಿತ್ತು. ಈಗ ವಾಹನಗಳ ಸಂಚಾರ ಸಂಖ್ಯೆ ಯಥೇಚ್ಛವಾಗಿದೆ. ಆದ್ದರಿಂದ ಚಾರ್ಮಾಡಿ ಘಾಟ್‍ನ ಆರಂಭ ಹಾಗೂ ಮುಕ್ತಾಯದ ಹಂತದಲ್ಲಿ ಪೊಲೀಸರನ್ನು ನೇಮಕ ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

  • ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳಿಂದ ಕಾಲೇಜುಗಳ ಮುಂದೆ ಅಭಿಯಾನ

    ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳಿಂದ ಕಾಲೇಜುಗಳ ಮುಂದೆ ಅಭಿಯಾನ

    ಉಡುಪಿ: ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ದುರ್ಗಾವಾಹಿನಿ ಸಂಘಟನೆಗಳು ಲವ್ ಜಿಹಾದ್ ವಿರುದ್ಧ ಅಭಿಯಾನ ಶುರು ಮಾಡಿದೆ. ಉಡುಪಿಯಲ್ಲಿ ಎಲ್ಲಾ ಕಾಲೇಜುಗಳ ಮುಂದೆ ನಿಂತು ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿದ್ದಾರೆ.

    ಇವತ್ತು ನಗರದ ಎಂಜಿಎಂ ಕಾಲೇಜು ಮುಂಭಾಗದಲ್ಲಿ ಹಿಂದೂಪರ ಸಂಘಟನೆಗಳು ಜಮಾಯಿಸಿದ್ದರು. ಲವ್ ಜಿಹಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನ ಕಾಲೇಜು ಬಿಡುವ ವೇಳೆ ಲವ್ ಜಿಹಾದ್ ಕುರಿತಾದ ಮಾಹಿತಿಯಿರುವ ಕರಪತ್ರ ಹಂಚಿದರು.

    ಜಿಲ್ಲೆಯಾದ್ಯಂತ ಸಂಘಟನೆಗಳು ಮಾಹಿತಿ-ಜಾಗೃತಿ ಅಭಿಯಾನ ಶುರು ಮಾಡಿವೆ. ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಮಾಡಿದ್ದು ಅದನ್ನು ಜಿಲ್ಲಾಧಿಕಾರಿಗಳಿಗೆ ನೀಡುವುದಾಗಿ ಸಂಘಟನೆ ಹೇಳಿದೆ. ದುರ್ಗಾವಾಹಿನಿ ಸಂಘಟನೆ ಮಹಿಳೆಯರು, ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ರು. ಮುಂದಿನ ದಿನಗಳಲ್ಲಿ ಮಹಿಳಾ ಸಂಘಟನೆಯ ಸದಸ್ಯೆಯರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವುದಾಗಿ ಹೇಳಿದರು. ಪೋಷಕರು ಕೂಡಾ ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಎಂದು ಕರೆ ನೀಡಿದರು.

    ವಿ.ಹಿಂ.ಪ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿ, ಲವ್ ಜಿಹಾದ್ ಮೀನಿಂಗ್ ಲೆಸ್ ಅಂತ ಕೆಲ ಬುದ್ಧಿಜೀವಿಗಳು ಹೇಳಿಕೆ ಕೊಡುತ್ತಾರೆ. ಆದ್ರೆ ಲವ್ ಜಿಹಾದ್ ಇದೆ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಹಿಂದೂ ದೇಶವನ್ನು ಇಸ್ಲಾಮೀಕರಣ ಮಾಡಲು ಜಿಹಾದಿಗಳು ಹೊರಟಿದ್ದಾರೆ. ಎಂಜಿಎಂ ಕಾಲೇಜು ಬಳಿ ಮಾಹಿತಿ ನೀಡುವ ಅಭಿಯಾನ ಮಾಡಿದ್ದೇವೆ. ಜಿಲ್ಲೆಯಾದ್ಯಂತ ಮಾಡ್ತೇವೆ. ಪ್ರೀತಿಗೆ ವಿರುದ್ಧ ಅಲ್ಲ. ಪ್ರೀತಿಯ ಹೆಸರಲ್ಲಿ ಷಡ್ಯಂತ್ರ ನಡೆದರೆ ಬಿಡಲ್ಲ. ಫೇಸ್ ಬುಕ್, ವಾಟ್ಸಪ್ ನ ಡೂಪ್ಲಿಕೇಟ್ ಪ್ರೊಫೈಲ್ ವಿರುದ್ಧ ಪೊಲೀಸರಿಗೆ ಮನವಿ ಕೊಟ್ಟಿದ್ದೇವೆ. ಹಿಂದೂ ಹುಡುಗಿಯರನ್ನು ಪಟಾಯಿಸಲೆಂದೇ ಕೆಲ ಮುಸಲ್ಮಾನ ಯುವಕರ ಗುಂಪು ಇದೆ. ಆ ಜಾಲದ ಬಗ್ಗೆ ಪೊಲೀಸರು ತನಿಖೆ ಮಾಡಬೇಕು ಎಂದು ಹೇಳಿದರು.

    ಅಮಾಯಕ ತರುಣಿಯರನ್ನು ಮುಸಲ್ಮಾನರು ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ಲವ್ ಜಿಹಾದ್ ವಿರುದ್ಧ ರಾಷ್ಟ್ರದಾದ್ಯಂತ ಆಂದೋಲನ ಶುರುವಾಗಿದೆ. ಕರ್ನಾಟಕದ ಕರಾವಳಿಯಲ್ಲೂ ಈ ಅಭಿಯಾನ ಶುರುಮಾಡಿದ್ದೇವೆ. ತಂದೆ ತಾಯಿ ಎಷ್ಟು ನಿಗಾ ವಹಿಸಿದರೂ ಕಾಲೇಜಿನಲ್ಲಿ ನಡೆಯುವ ಚಟುವಟಿಕೆ ಹೆತ್ತವರಿಗೆ ಗೊತ್ತಾಗುವುದಿಲ್ಲ. ಯುವ ಪೀಳಿಗೆಯನ್ನು ಸರಿದಾರಿಗೆ ತರಲು ಈ ಅಭಿಯಾನ ನಮ್ಮ ಪ್ರಯತ್ನ. ಹಿಂದೂ ಧರ್ಮ ಎಷ್ಟು ಶ್ರೇಷ್ಠ ಎಂಬುದನ್ನೂ ತಿಳಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷದ್ ಉಪಾಧ್ಯಕ್ಷೆ ಸುಪ್ರಭ ಆಚಾರ್ಯ ಹೇಳಿದರು. ಪ್ರಾಂತ ಮಟ್ಟದಲ್ಲಿ ಈ ಬಗ್ಗೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಭಿಯಾನ ಶುರುಮಾಡಿದ್ದೇವೆ ಎಂದರು.

  • ಹೆಲ್ಮೆಟ್ ಧರಿಸಿ ಆಸ್ಪತ್ರೆಯಲ್ಲಿ ಕಳ್ಳನ ಕರಾಮತ್ತು- ಮಹಿಳಾ ಸಿಬ್ಬಂದಿಯಿರುವಾಗ್ಲೇ 4,500 ರೂ.ನೊಂದಿಗೆ ಎಸ್ಕೇಪ್

    ಹೆಲ್ಮೆಟ್ ಧರಿಸಿ ಆಸ್ಪತ್ರೆಯಲ್ಲಿ ಕಳ್ಳನ ಕರಾಮತ್ತು- ಮಹಿಳಾ ಸಿಬ್ಬಂದಿಯಿರುವಾಗ್ಲೇ 4,500 ರೂ.ನೊಂದಿಗೆ ಎಸ್ಕೇಪ್

    ಉಡುಪಿ: ಹೆಲ್ಮೆಟ್ ಧರಿಸಿ ಆಗಂತುಕನ ಸ್ಟೈಲ್ ನಲ್ಲಿ ಬಂದ ಐನಾತಿ ಕಳ್ಳನೊಬ್ಬ ಕರಾಮತ್ತು ತೋರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಉಡುಪಿಯ ಕುಂದಾಪುರದ ವಿನಾಯಕ ಖಾಸಗಿ ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿ ಸೀದಾ ಬಿಲ್ ಕೌಂಟರ್ ಬಳಿ ಬಂದಿದ್ದಾನೆ. ಇವನ್ಯಾರೋ ಆಗಂತುಕ ಅಂತ ಆಸ್ಪತ್ರೆ ಮಹಿಳಾ ಸಿಬ್ಬಂದಿ ಓಡಿ ಹೋಗಿದ್ದಾರೆ. ಹೆಲ್ಮೆಟ್ ಧರಿಸಿ ಟೇಬಲ್ ಹಾರಿ ಬಂದ ಕಳ್ಳ ನಗದು ದೋಚಿ ಪರಾರಿಯಾಗಿದ್ದಾನೆ. ಈ ಮೂಲಕ ಖದೀಮ ಕಳ್ಳ ಕೆಲವೇ ಸೆಂಕೆಂಡುಗಳಲ್ಲಿ ಕೈಚಳಕ ತೋರಿದ್ದಾನೆ.

    ಕೌಂಟರ್ ನಲ್ಲಿದ್ದ 4,500 ರೂಪಾಯಿ ಕದ್ದ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕಳ್ಳನ ಕೈಚಳಕ ನೋಡಿ ಬೊಬ್ಬೆ ಹೊಡೆಯಲು ಯತ್ನಿಸಿದಾಗ ನಾಲ್ಕೈದು ನರ್ಸ್ ಗಳು ಬಂದಿದ್ದಾರೆ. ಅಷ್ಟರಲ್ಲಿ ಕಳ್ಳ ಓಡಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಮಹಿಳಾ ಸಿಬ್ಬಂದಿ ಇರುವಾಗಲೇ ಸಮಯ ಹೊಂಚು ಹಾಕಿ ಆಸ್ಪತ್ರೆಗೆ ನುಗ್ಗಿ ಕಳ್ಳ ದರೋಡೆ ಮಾಡಿದ್ದಾನೆ.

    ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ರಸ್ತೆಯಲ್ಲಿರುವ ಸಿಸಿಟಿವಿ ಜಾಲಾಡುತ್ತಿದ್ದಾರೆ.

    https://www.youtube.com/watch?v=YeZV1Qf5Q2E&feature=youtu.be

  • ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಬಿಜೆಪಿ ಸತ್ಯಾಗ್ರಹ

    ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಬಿಜೆಪಿ ಸತ್ಯಾಗ್ರಹ

    ಉಡುಪಿ: ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಜಿಲ್ಲೆಯ ಕಾರ್ಕಳದಲ್ಲಿ ಬಿಜೆಪಿ ಧರಣಿ ಸತ್ಯಾಗ್ರಹ ಮಾಡಿದೆ.

    ಕಾರ್ಕಳ ತಾಲೂಕಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, 24 ಗಂಟೆಗಳ ಧರಣಿ ಸತ್ಯಾಗ್ರಹ ಮಾಡಿದೆ. ಅಹೋರಾತ್ರಿ ಧರಣಿ ಕುಳಿತ ಜಿಲ್ಲಾ ಬಿಜೆಪಿ ವೀರಪ್ಪ ಮೊಯ್ಲಿ ವಿರುದ್ಧ ಹರಿಹಾಯ್ದಿದೆ.

    ಕಾರ್ಕಳ ಮೂಲದ ಮಾಜಿ ಸಿಎಂ, ಸಂಸದ ವೀರಪ್ಪ ಮೊಯ್ಲಿ 6 ಬಾರಿ ಕಾರ್ಕಳದಿಂದ ಶಾಸಕರಾಗಿ ಒಂದು ಬಾರಿ ಸಿಎಂ ಆಗಿದ್ದಾರೆ. ಆದ್ರೆ ಅಧಿಕಾರದಲ್ಲಿದ್ದಾಗ ಮೊಯ್ಲಿ ತಮ್ಮ ಕ್ಷೇತ್ರದಲ್ಲಿ ಮಾಡಿದ್ದ ಗುದ್ದಲಿ ಪೂಜೆಗಳು, ಶಿಲಾನ್ಯಾಸಗಳ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. 2014 ರಲ್ಲಿ ಶಿಲಾನ್ಯಾಸ ಮಾಡಿದ್ದ ಪುರಭವನ ಕಾಣೆಯಾಗಿದೆ. ಪುರಭವನ ಹುಡುಕಿಕೊಡಿ ಅಂತ ಬಿಜೆಪಿ ಪ್ರತಿಭಟನೆ ನಡೆಸಿತು. ಇನ್ನೂ ಕಾಮಗಾರಿಗಳು ಆರಂಭವಾಗದ ಹಿನ್ನೆಲೆಯಲ್ಲಿ ಶಾಸಕ ವಿಪಕ್ಷ ಮುಖ್ಯ ಸಚೇತಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

    ಶಂಕುಸ್ಥಾಪನೆ ಮಾಡೋದು ಸಾಧನೆಯಲ್ಲ ಅದೊಂದು ವೈಫಲ್ಯ. ಕೆಲಸ ಮಾಡದ ರಾಜಕಾರಣಿಗಳ ಬಗ್ಗೆ ಜನ ನಂಬಿಕೆ ಇಡಲ್ಲ. ಓಟು ಹಾಕಲ್ಲ ಅಂತ ಕಿಡಿಕಾರಿದರು. ಇದಕ್ಕೂ ಮೊದಲು ಕಾರ್ಕಳದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಬೈಕ್ ಯಾತ್ರೆ, ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಯಿತು. ನಗರದ ಬಂಡೀಪುರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮೊಯ್ಲಿ ವಿರುದ್ಧ ಆರೋಪಗಳ ಸುರಿಮಳೆ ಜೊತೆ ದಿನಪೂರ್ತಿ ಧಿಕ್ಕಾರ ಕೂಗಿದ್ರು.

  • ಕರ್ನೂಲು ರಸ್ತೆಯಲ್ಲಿ ಜಂಪ್ ಆಯ್ತು ಇನ್ನೋವಾ ಕಾರು- ಪೇಜಾವರಶ್ರೀ ಬೆನ್ನು ಉಳುಕು

    ಕರ್ನೂಲು ರಸ್ತೆಯಲ್ಲಿ ಜಂಪ್ ಆಯ್ತು ಇನ್ನೋವಾ ಕಾರು- ಪೇಜಾವರಶ್ರೀ ಬೆನ್ನು ಉಳುಕು

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸಂಚರಿಸುತ್ತಿದ್ದ ಕಾರು ರಸ್ತೆಯಲ್ಲಿ ಎಗರಿದೆ. ಬೆನ್ನು ಉಳುಕಿದ್ದು ವೈದ್ಯರು ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದಾರೆ.

    ಮಂತ್ರಾಲಯದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಇನ್ನೋವಾ ಕಾರಲ್ಲಿ ಪೇಜಾವರಶ್ರೀ ಅವರು ಸಂಚಾರ ಮಾಡುತ್ತಿದ್ದರು. ಕರ್ನೂಲು ವ್ಯಾಪ್ತಿಯಲ್ಲಿ ಸ್ಪೀಡ್ ಬ್ರೇಕರ್ ಅನ್ನು ಚಾಲಕ ನೋಡದ ಕಾರಣ ಕಾರು ಸುಮಾರು ಒಂದು ಅಡಿ ಹಾರಿದೆ.

    ಕಾರು ರಸ್ತೆ ತಲುಪುತ್ತಿದ್ದಂತೆ ಹೊಸದಾಗಿ ನಿರ್ಮಾಣವಾಗುತ್ತಿದ್ದ ಸೇತುವೆ ಸಿಕ್ಕಿದೆ. ಅದು ರಸ್ತೆಯ ಎತ್ತರದಿಂದ ಸ್ವಲ್ಪ ಕೆಳಗಿತ್ತು. ಈ ವೇಳೆ ಕಾರಿನಲ್ಲಿ ಮಲಗಿದ್ದ ಪೇಜಾವರಶ್ರೀ ಒಂದು ಬಾರಿ ಎಗರಿ ಸೀಟಿಗೆ ಬಿದ್ದಿದ್ದಾರೆ. ಈ ಸಂದರ್ಭ ಬೆನ್ನು ಉಳುಕಿದೆ. ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸ್ವಾಮೀಜಿಯವರನ್ನು ದಾಖಲು ಮಾಡಲಾಯ್ತು.

    ಪ್ರಥಮ ಚಿಕಿತ್ಸೆ ಪಡೆದ ಸ್ವಾಮೀಜಿ ಅಲ್ಲಿಂದ ವಿಮಾನ ಮೂಲಕ ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಓಡಾಡಲು ಆಗದ ಸ್ಥಿತಿಯಲ್ಲಿರುವ ಸ್ವಾಮೀಜಿಯನ್ನು ಎತ್ತಿಕೊಂಡೇ ತಂದೆವು. ಬೆನ್ನು ಬಹಳ ನೋವಿದೆ ಅಂತ ಹೇಳುತ್ತಾರೆ. ಪರ್ಯಾಯದಲ್ಲಿ ಎರಡು ವರ್ಷ ಬಿಡುವಿಲ್ಲದೆ ಪೂಜಾಕೈಂಕರ್ಯದಲ್ಲಿ ತೊಡಗಿದ್ದರಿಂದ ದೇಹವು ದಣಿದಿದೆ. ಅವರಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ. ಆದ್ರೆ ಸ್ವಾಮೀಜಿ ನಮ್ಮ ಮಾತು ಕೇಳುವುದಿಲ್ಲ. ಅವರು ಹೇಳಿದ್ದೆ ಅವರಿಗೆ ಆಗಬೇಕು ಎಂದು ಸ್ವಾಮೀಜಿ ಆಪ್ತ ಸುನೀಲ್ ಮುಚ್ಚಿಣ್ಣಾಯ ಹೇಳಿದರು.

    ತಜ್ಞ ವೈದ್ಯರು ವಿಶ್ವೇಶತೀರ್ಥರಿಗೆ ಚಿಕಿತ್ಸೆ ಕೊಟ್ಟಿದ್ದು, ಕುಳಿತುಕೊಳ್ಳಬಾರದು, ದೇಹಕ್ಕೆ ಸುಸ್ತು ಮಾಡಿಕೊಳ್ಳಬಾರದು. ಒಂದು ವಾರ ಎಲ್ಲೂ ಓಡಾಡ್ಬಾರ್ದು ಅಂತ ತಾಕೀತು ಮಾಡಿದ್ದಾರೆ. ಜನವರಿ 18ರಂದು ಕೃಷ್ಣನ ಪೂಜಾಧಿಕಾರ ಮುಗಿಸಿದ್ದ ಸ್ವಾಮೀಜಿ 19ರಂದು ಉಡುಪಿಯಲ್ಲಿ 3-4 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಸೋಂದ ಮಠಕ್ಕೆ ಭೇಟಿಕೊಟ್ಟಿದ್ದರು. ಅಲ್ಲಿಂದ ಗದಗ, ಅಲ್ಲಿಂದ ಮಂತ್ರಾಲಯದ ಉತ್ಸವದಲ್ಲಿ ಭಾಗಿಯಾಗಿದ್ದರು.

    ಮಂತ್ರಾಲಯದಿಂದ ಹೈದರಾಬಾದ್ ಹೋಗಿ ಮಂಗಳೂರು ಹೊರಟಿದ್ದರು. ದಾರಿಮಧ್ಯೆ ಕರ್ನೂಲಿನಲ್ಲಿ ಈ ಘಟನೆ ಸಂಭವಿಸಿದೆ. ಮೂರು ದಿನದ ಹಿಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಸ್ವಾಮೀಜಿ ತನಗೆ ಬೆನ್ನು ನೋವು, ದೇಹದಲ್ಲಿ ಶಕ್ತಿಯಿಲ್ಲ, ಓಡಾಟ ಕಷ್ಟ. ಅಂತ ಹೇಳಿಕೊಂಡಿದ್ದರು. ಆದ್ರೆ ಪೇಜಾವರ ಅಭಿಮಾನಿಗಳು- ಶಿಷ್ಯರು ದೇಶದೆಲ್ಲೆಡೆ ಇದ್ದು ಪ್ರಮುಖ ಕಾರ್ಯಕ್ರಮಗಳಾದಾಗ ಆಹ್ವಾನ ನೀಡುತ್ತಾರೆ. ಪಾದಪೂಜೆಗೆ ಬರುವಂತೆ ಒತ್ತಾಯ ಮಾಡುತ್ತಾರೆ.

  • ಜೆಸಿಬಿ ಜೊತೆ ಬಂದು ಪೇಜಾವರ ಶ್ರೀ ಆಪ್ತರ ಅಕ್ರಮದ ವಿರುದ್ಧ ಘರ್ಜಿಸಿದ ಶೀರೂರು ಶ್ರೀ

    ಜೆಸಿಬಿ ಜೊತೆ ಬಂದು ಪೇಜಾವರ ಶ್ರೀ ಆಪ್ತರ ಅಕ್ರಮದ ವಿರುದ್ಧ ಘರ್ಜಿಸಿದ ಶೀರೂರು ಶ್ರೀ

    ಉಡುಪಿ: ಪೇಜಾವರಶ್ರೀ ಆಪ್ತರು ನಡೆಸುತ್ತಿದ್ದ ಆಕ್ರಮಗಳ ಮೇಲೆ ಶೀರೂರು ಸ್ವಾಮೀಜಿ ಘರ್ಜಿಸಿದ್ದಾರೆ. ಮಠದ ಹೆಸರಲ್ಲಿ ಸಾರ್ವಜನಿಕರ ಹಣವನ್ನು ಪೇಜಾವರಶ್ರೀ ಗಳ ಆಪ್ತರು ಲೂಟಿ ಮಾಡುತ್ತಿದ್ದಾರೆ. ಪೇಜಾವರ ಶ್ರೀಗಳಿಗೆ ದಾಕ್ಷಿಣ್ಯ ಜಾಸ್ತಿ. ಆದರೆ ಅಕ್ರಮವನ್ನು ನೋಡಿಕೊಂಡು ನಾನು ಸುಮ್ಮನಿರಲ್ಲ ಎಂದು ಬುಲ್ಡೋಜರ್ ತಂದು ಅಂಗಡಿ ಮತ್ತು ಬಟ್ಟೆ ಮಳಿಗೆಯನ್ನು ಶೀರೂರು ಸ್ವಾಮೀಜಿ ನೆಲಕ್ಕುರುಳಿಸಿದ್ದಾರೆ.

    ಕಳೆದ 12 ವರ್ಷಗಳಿಂದ ಅಕ್ರಮಗಳನ್ನು ನೋಡಿಯೂ ಏನೂ ಮಾಡಲಾಗದೆ ಸುಮ್ಮನಿದ್ದ ಉಡುಪಿ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ಇದೀಗ ಅಸಮಾಧಾನ ಹೊರಹಾಕಿದ್ದಾರೆ. ಜೆಸಿಬಿ ಜೊತೆ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಬಂದ ಶೀರೂರು ಶ್ರೀ ಅಕ್ರಮ ಅಂಗಡಿ ಮಾಲೀಕರಿಗೆ ಚಳಿ ಬಿಡಿಸಿದರು.

    ಯಾತ್ರಿ ನಿವಾಸ ಲಾಡ್ಜ್ ಕಚೇರಿಗೆ ಬಂದು ಕಡತಗಳನ್ನು ಜಾಲಾಡಿ ಸಿಬ್ಬಂದಿಗೆ ಚಳಿ ಬಿಡಿಸಿದರು. ಐಟಿ ದಾಳಿಗಿಂತ ನನ್ನ ದಾಳಿ ಪರಿಣಾಮಕಾರಿ, ಈಗ ಕಾರ್ಯಾಚರಣೆ ಮಾಡಿದ್ದು 5% ನಿಂದ 95% ಅಕ್ರಮದ ವಿರುದ್ಧ ನನ್ನ ಹೋರಾಟವಿದೆ ಎಂದು ಎಚ್ಚರಿಕೆ ನೀಡಿದರು. ಈ ಮೂಲಕ ಪೇಜಾವರಶ್ರೀ ಆಪ್ತರಿಗೆ ಬಿಸಿಮುಟ್ಟಿಸಿದರು.

    ಕೃಷ್ಣಮಠದ ಸುತ್ತಮುತ್ತಲ ಅಂಗಡಿಗಳು, ಪಾರ್ಕಿಂಗ್ ನಿಂದ ಬರುವ ಹಣವನ್ನು ಕೃಷ್ಣಮಠಕ್ಕೆ ಸಲ್ಲಿಕೆ ಮಾಡಬೇಕು. ಆದರೆ ಅಷ್ಟಮಠಗಳ ಟ್ರಸ್ಟ್ ನಲ್ಲಿದ್ದವರು ಹಣವನ್ನು ಮಠಕ್ಕೆ ಕೊಡದೇ ಲೂಟಿ ಮಾಡುತ್ತಿದ್ದರು. ಅಷ್ಠಮಠಗಳ ಟ್ರಸ್ಟ್ ಗೆ ಕೆಲವರಿಂದ ಅನ್ಯಾಯವಾಗಿದೆ. ಎಲ್ಲವನ್ನು ನೋಡಿಕೊಂಡು ಕೂರುವ ಜಾಯಮಾನ ನನ್ನದಲ್ಲ. ಕೃಷ್ಣ ಮುಖ್ಯಪ್ರಾಣನಿಗೆ ಪೂಜೆ ಮಾಡಲೂ ಗೊತ್ತು ಅಕ್ರಮಕ್ಕೆ ಬ್ರೇಕ್ ಹಾಕಲೂ ಗೊತ್ತು ಎಂದು ಗುಡುಗಿದರು.

    ಪೇಜಾವರ ಪರ್ಯಾಯ ಮುಗಿಯುವುದಕ್ಕೆ ಕಾಯುತ್ತಿದ್ದೆ. ಪೇಜಾವರ ಶ್ರೀಗಳ ಆಪ್ತರು ಅಕ್ರಮ ಮಾಡಿದ್ದರೂ, ಹಿರಿಯರು ಕಣ್ಮುಂದೆ ನಡೆಯುವ ಲೂಟಿ ನೋಡಿಕೊಂಡು ಸುಮ್ಮನಿದ್ದರು. ಅಲ್ಲದೇ ಸ್ವಾಮೀಜಿ ಅವರು ಆಪ್ತ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳಲ್ಲ. ವಿಚಾರ ಗಮನಕ್ಕೆ ತಂದರೆ ನಾನು ಉಪವಾಸ ಮಾಡುತ್ತೇನೆ ಅಂತ ಬೇಸರದ ಮಾತನಾಡುತ್ತಾರೆ. ಹೀಗಾಗಿ ಅಕ್ರಮ ಮಾಡುವ ಆಪ್ತರಿಗೆ ನಾನು ಬುದ್ಧಿ ಕಲಿಸುತ್ತೇನೆ. ಇಂತವರಿಗೆ ಇದೇ ಸೂಕ್ತ ದಾರಿ ಎಂದು ನಾನು ರೇಡ್ ಮಾಡಲು ಇಳಿದಿದ್ದೇನೆ ಎಂದರು.

    ಎರಡೂವರೆ ಎಕರೆ ಜಮೀನನ್ನು ನಾನು ಹಣಕೊಟ್ಟು ಖರೀದಿ ಮಾಡಿದ್ದೇನೆ. ರಥಬೀದಿ ವಾಹನ ಮುಕ್ತ ಮಾಡಿದಾಗ ಆಟೋ, ಕಾರು ಚಾಲಕರನ್ನು ಇಲ್ಲಿಗೆ ಕರೆದುಕೊಂಡು ಬಂದು ನೆಲೆ ಕೊಟ್ಟಿದ್ದೇನೆ. ಎಂಟೂ ಮಠದ ಸ್ವಾಮೀಜಿಗಳು ಹಣ ಕೊಟ್ಟು ಒಟ್ಟು ಐದೂವರೆ ಎಕರೆ ಜಮೀನು ಖರೀದಿ ಮಾಡಿದ್ದೇವೆ. ಮಠದ ಜಮೀನಿನ ಪಾರ್ಕಿಂಗ್, ಮಳಿಗೆ ಹೆಸರಲ್ಲಿ ಅಷ್ಟ ಮಠಗಳ ಟ್ರಸ್ಟ್ ದರೋಡೆ ಮಾಡುತ್ತಿದೆ. ಪಾರ್ಕಿಂಗ್, ಅಂಗಡಿ ಹಣದಲ್ಲಿ ಕೋಟ್ಯಾಂತರ ರೂ. ಲೂಟಿ ಮಾಡಲಾಗಿದೆ. ಪ್ರವಾಸಿಗರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ತಾನು ದಾನ ಕೊಟ್ಟ ಭೂಮಿಯಲ್ಲಿ ಅಕ್ರಮ ಸಹಿಸಲ್ಲ. ಕೃಷ್ಣಮಠಕ್ಕೆ ಯಾವುದೇ ಆದಾಯ ಸಿಗುತ್ತಿಲ್ಲ ಎಂದು ಶೀರೂರು ಲಕ್ಷ್ಮೀವರತೀರ್ಥ ಶ್ರೀ ಆಕ್ರೋಶ ಹೊರ ಹಾಕಿದರು.

    ಪೇಜಾವರ ಸ್ವಾಮೀಜಿ ಜ್ಞಾನವೃದ್ಧರು, ವಯೋವೃದ್ಧರು ಅವರ ಪಕ್ಕದಲ್ಲೇ ಹೆಗ್ಗಣಗಳಿವೆ. ಅವುಗಳನ್ನು ಓಡಿಸಿದರೆ ಪೇಜಾವರಶ್ರೀ ಗಳ ಗೌರವ ಇನ್ನೂ ಹೆಚ್ಚಾಗುತ್ತದೆ. ಅವರ ಆಪ್ತರಿಂದಲೇ ಅನ್ಯಾಯವಾಗಿದೆ ಎಂದು ಶೀರೂರು ಸ್ವಾಮೀಜಿ ಆರೋಪಿಸಿದ್ದಾರೆ.

    ಯಾವುದೇ ಪೂರ್ವಸೂಚನೆ ನೀಡದೇ ಕಟ್ಟಡ ತೆರವು ಮಾಡಿದ್ದರಿಂದ ಅಂಗಡಿ ಮತ್ತು ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಕೆಲಕಾಲ ಭೂಕಂಪವಾದ ಅನುಭವವಾದಂತಿತ್ತು. ಅಷ್ಟಮಠಗಳ ಟ್ರಸ್ಟ್ ಅಕ್ರಮದಿಂದ ವ್ಯಾಪಾರಿಗಳು ನಷ್ಟ ಅನುಭವಿಸಿದಂತಾಗಿದೆ.

  • ರಾಜ್ಯದಲ್ಲೂ ಟೆಂಪಲ್ ರನ್ – ಒಂದೇ ದಿನ ಎರಡು ಮಠಕ್ಕೆ ರಾಹುಲ್ ಭೇಟಿ!

    ರಾಜ್ಯದಲ್ಲೂ ಟೆಂಪಲ್ ರನ್ – ಒಂದೇ ದಿನ ಎರಡು ಮಠಕ್ಕೆ ರಾಹುಲ್ ಭೇಟಿ!

    ಬೆಂಗಳೂರು: ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ದೇವಾಲಯ ಭೇಟಿ ಫಲಪ್ರದವಾದ ಬೆನ್ನಲ್ಲೇ ಇದೇ ತಂತ್ರವನ್ನು ಕರ್ನಾಟಕದಲ್ಲಿ ಮುಂದುವರಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಕರ್ನಾಟಕದಲ್ಲೂ ಹಿಂದುತ್ವದ ಜಪ ಮಾಡಲು ಆರಂಭಿಸಿದೆ.

    ಹೌದು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇವಾಲಯ ಪ್ರವಾಸಕ್ಕೆ ಮುಹೂರ್ತ ನಿಗದಿಯಾಗಿದ್ದು, ಒಂದೇ ದಿನ ಎರಡು ಮಠಕ್ಕೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 10 ರಿಂದ ಮೂರು ದಿನ ರಾಹುಲ್ ಗಾಂಧಿ ಮೊದಲ ಪ್ರವಾಸ ಮಾಡಲಿದ್ದು, ಫೆಬ್ರವರಿ 20ರಿಂದ ರಾಹುಲ್ ಗಾಂಧಿಯ ಎರಡನೇ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡನೇ ಪ್ರವಾಸದ ವೇಳೆ ದೇವಾಲಯ ಭೇಟಿಯ ಪಟ್ಟಿಯನ್ನು ಕೆಪಿಸಿಸಿ ತಯಾರಿಸಿದ್ದು, ಶೃಂಗೇರಿಯ ಶಾರದಾ ಮಠ ಹಾಗೂ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

    ರಾಹುಲ್ ಗಾಂಧಿಯ ಈ ಪ್ರವಾಸದ ವೇಳೆ ರಾಜ್ಯದ ಕೈ ನಾಯಕರು ಸಾಥ್ ನೀಡಲಿದ್ದು ಈ ಮೂಲಕ ಹಿಂದುತ್ವ ವಿಚಾರವನ್ನು ಪ್ರಸ್ತಾಪಿಸಿ ಜನರನ್ನು ಸೆಳೆಯಲು ಮುಂದಾಗುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಮುಂದಾಗಿದೆ.

    ವೇಳಾಪಟ್ಟಿ ಹೀಗಿದೆ:
    ಮೊದಲ ದಿನ ಶಿವಮೊಗ್ಗದಿಂದ ಆರಂಭಿಸಿ  ಭದ್ರಾವತಿ, ತರೀಕೆರೆ, ಕಡೂರು, ಸಖರಾಯಪಟ್ಟಣದ ಮೂಲಕ ಚಿಕ್ಕಮಗಳೂರಿಗೆ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಕಾಫಿ ತೋಟ ಮತ್ತು ಕಾಳುಮೆಣಸು ಬೆಳೆಗಾರರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಆ ದಿನ ಚಿಕ್ಕಮಗಳೂರಿನಲ್ಲಿ ತಂಗಲಿದ್ದಾರೆ.

    ಎರಡನೇ ದಿನ ಬೆಳಗ್ಗೆ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಂಗಳೂರಿನಿಂದ ಕುಂದಾಪುರಕ್ಕೆ ರೋಡ್ ಶೋ ನಡೆಸಲಿದ್ದಾರೆ. ಮಂಗಳೂರು, ಸುರತ್ಕಲ್, ಮೂಲ್ಕಿ, ಕಾಪು, ಉಡುಪಿ, ಬ್ರಹ್ಮವಾರ, ಕೋಟಾ, ಕುಂದಾಪುರಕ್ಕೆ ರೋಡ್ ಶೋ ಮಾಡಲಿದ್ದಾರೆ. ಸಂಜೆ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಅಂದು ಉಡುಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮೂರನೇ ದಿನ ಅರಸೀಕೆರೆ, ತಿಪಟೂರು, ಕೆ.ಬಿ. ಕ್ರಾಸ್, ಗುಬ್ಬಿ, ಮಾರ್ಗವಾಗಿ ತುಮಕೂರುವರೆಗೆ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ.

    https://youtu.be/M25PbskQK0I

  • ಇತಿಹಾಸಕಾರರು ಬ್ರಿಟಿಷ್ ಮನಸ್ಥಿತಿಯವರು- ಅನಂತ್ ಕುಮಾರ್ ಹೆಗ್ಡೆ

    ಇತಿಹಾಸಕಾರರು ಬ್ರಿಟಿಷ್ ಮನಸ್ಥಿತಿಯವರು- ಅನಂತ್ ಕುಮಾರ್ ಹೆಗ್ಡೆ

    ಉಡುಪಿ: ಭಾರತದ ಇತಿಹಾಸಕಾರರ ಮೇಲೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯ ಪಲಿಮಾರು ಪರ್ಯಾಯದ ಎರಡು ವರ್ಷದ ಜ್ಞಾನಯಜ್ಞ ಧಾರ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಮಹಾರಾಜರು ನಮ್ಮ ದೇಶ ಕಟ್ಟಿಲ್ಲ. ಬ್ರಿಟಿಷ್ ಮನಸ್ಥಿತಿಯ ಇತಿಹಾಸಕಾರರು ಸುಳ್ಳು ಬರೆದಿದ್ದಾರೆ. ನಾವೆಲ್ಲಾ ಸುಳ್ಳು ಓದುತ್ತಿದ್ದೇವೆ. ಭಾರತ ಕಾವಿ ಬಟ್ಟೆಯ ಇತಿಹಾಸ ಹೊಂದಿದೆ. ಈ ಸತ್ಯವನ್ನು ಯಾರು ಒಪ್ಪಿಕೊಳ್ಳಲ್ಲ ಎಂದರು. ಕಾವಿ ತೊಟ್ಟವರು ಹಾಕಿದ ಸನ್ಮಾರ್ಗದಲ್ಲಿ ನಾವು ಬೆಳೆಯಬೇಕು ಎಂದು ಕರೆ ನೀಡಿದರು.

    ಮಾತು ಮುಂದುವರೆಸಿದ ಹೆಗ್ಡೆ, ಧರ್ಮ ಏನೆಂದು ತಿಳಿದುಕೊಳ್ಳುವ ಯೋಗ್ಯತೆ ಕೆಲವರಿಗಿಲ್ಲ. ಕೆಲವರು ಪೂಜೆ ಮಾಡೋದನ್ನೇ ಧರ್ಮ ಅಂದ್ಕೊಂಡಿದ್ದಾರೆ. ಯೋಚಿಸುವ ಶಕ್ತಿಯಿಲ್ಲದ ಕೋಪ್ಡಿಗಳ ತಲೆಗೆ ಇದು ಅರ್ಥನೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಎಡ ಪಂಕ್ತೀಯರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಅವತ್ತೂ ದುರ್ಯೋಧನ ಇದ್ದ, ಇವತ್ತೂ ದುರ್ಯೋ’ಧನ’ ಇದ್ದಾನೆ ಎಂದು ಕಾಳಧನವನ್ನು ದುರ್ಯೋಧನನಿಗೆ ಹೋಲಿಸಿದರು. ಅವತ್ತು ದುಶ್ಯಾಸನ ಇದ್ದ, ಇವತ್ತು ದುಷ್ಟ ಶಾಸನ ಇದೆ. ಕೃಷ್ಣಮಠವನ್ನೇ ಕುಲಗೆಡಿಸಲು ಕೆಲವರು ಬಂದಿದ್ದರು ಎಂದು ಉಡುಪಿ ಚಲೋ ವಿರುದ್ಧ ಗುಡುಗಿದರು. ನಾಸ್ತಿಕರನ್ನು ಧೃತರಾಷ್ಟ್ರನಿಗೆ ಹೋಲಿಸಿದ ಅನಂತಕುಮಾರ್ ಹೆಗಡೆ, ದೇಶದಲ್ಲಿ ಸಮಾನ ನಾಗರೀಕ ಸಂಹಿತೆ ಜಾರಿಗೆ ಬರಬೇಕು. ನೂತನ ಪರ್ಯಾಯ ಪೀಠ ಅಲಂಕರಿಸಿರುವ ಪಲಿಮಾರು ಸ್ವಾಮೀಜಿ ಈ ಬಗ್ಗೆ ಸಂಕಲ್ಪ ಮಾಡಿದ್ದಾರೆ ಎಂದರು.

    ಸ್ವಾಮೀಜಿ ಆದೇಶ ಇದ್ದಂತೆ. ಎಷ್ಟೇ ಅಡ್ಡಿ ಆತಂಕ ಅಡೆ ತಡೆ ಬಂದರೂ ನಾನು ಹೆದರುವುದಿಲ್ಲ. ಗುರುವಿನ ಸಂಕಲ್ಪ ತಲೆಮೇಲೆ ಹೊತ್ತು ಕೆಲಸ ಮಾಡುತ್ತೇನೆ ಎಂದರು.

  • ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ 2ನೇ ಪರ್ಯಾಯ ಆರಂಭಿಸಿದ್ದಾರೆ.

    ಪಲಿಮಾರು ಪರ್ಯಾಯ ಉತ್ಸವದಲ್ಲಿ ಭಕ್ತಿ-ಭಾವ, ಅಭಿಮಾನ ಮನೆ ಮಾಡಿತು. ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಈ ಮೂಲಕ ದ್ವಿತೀಯ ಪರ್ಯಾಯ ಆರಂಭವಾಯಿತು. ಅದ್ಧೂರಿ ಸಮಾರಂಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅಲ್ಲದೇ ಸಂಪ್ರದಾಯದಂತೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಬಂದ ಪಲಿಮಾರು ಮಠಾಧೀಶರಿಗೆ ಭವ್ಯ ಸ್ವಾಗತ ಕೋರಲಾಯಿತು.

    ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ವೈಭವದ ಮೆರವಣಿಗೆ ರಥಬೀದಿಯಲ್ಲಿ ಸಾಗಿತು. ಮೆರವಣಿಗೆಯಲ್ಲಿ ಅಷ್ಟಮಠಾಧೀಶರು ಭಾಗಿಯಾದ್ರು. ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅಖಂಡ ಭಜನೋತ್ಸವಕ್ಕೆ ಅವರು ಚಾಲನೆ ನೀಡಿದರು. ಜೊತೆಗೆ ಎರಡು ವರ್ಷಗಳ ಕಾಲ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯವನ್ನು ಸ್ವಾಮೀಜಿ ನಿಭಾಯಿಸಲಿದ್ದಾರೆ. ಒಟ್ಟಿನಲ್ಲಿ ಪರ್ಯಾಯವನ್ನು ಜನರು ಹಬ್ಬದಂತೆ ಆಚರಿಸಿದರು.

    ಈ ಬಾರಿಯ ಪರ್ಯಾಯ ಕಾರ್ಯಕ್ರಮ ಹಿಂದೆಂದಿಗಿಂತಲೂ ವೈಭವದಿಂದ ನಡೆಯಿತು. ವಿದ್ಯುತ್ ಅಲಂಕರದಿಂದ ಉಡುಪಿ ನಗರಿ ಕಂಗೊಳಿಸಿದ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿತು. ನಗರದ ಜೋಡುಕಟ್ಟೆಯಲ್ಲಿ 3.15 ರ ಸುಮಾರಿಗೆ ಅಷ್ಟಮಠಾಧೀಶರ ಸಂಗಮವಾಯಿತು. ಪಲಿಮಾರು ಸ್ವಾಮಿಗಳ ಎರಡನೇ ಪರ್ಯಾಯ ಮಹೋತ್ಸವ ಆರಂಭಕ್ಕೆ ಮುನ್ನ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಕೆ ಮಾಡಲಾಯ್ತು. ಪಲಿಮಾರು, ಕೃಷ್ಣಾಪುರ, ಶಿರೂರು, ಕಾಣಿಯೂರು, ಸೋದೆ, ಅದಮಾರುಕಿರಿಯ ಸ್ವಾಮೀಜಿ ಪರ್ಯಾಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ರಾಷ್ಟ್ರದ ವಿವಿಧೆಡೆಯಿಂದ ಬಂದ ಸಾಂಸ್ಕೃತಿಕ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಜೋಡುಕಟ್ಟೆಯಲ್ಲಿ ಕುಳಿತು ಅಷ್ಟಮಠಾಧೀಶರು ಮೆರವಣಿಗೆ ವೀಕ್ಷಣೆ ಮಾಡಿದರು. ಜೋಡು ಕಟ್ಟೆಯಿಂದ ರಾಜ ಮಾರ್ಗದಲ್ಲಿ ಮೆರವಣಿಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದರು.

    ತಟ್ಟಿರಾಯ, ಬಿರುದಾವಳಿಗಳು, ಛತ್ರ, ಚಾಮರ, ಕೊಂಬು ಕಹಳೆ, ಚಂಡೆ, ನಾಸಿಕದ ಬ್ಯಾಂಡ್, ಭಜನಾ ತಂಡಗಳು, ಬೆಂಕಿಯ ಚೆಂಡು, ಕವಾಯತು, ವೀರಗಾಸೆ, ಕುಡುಬಿ ನೃತ್ಯ, ಪಟ್ಟದ ಕುಣಿತ ಸಹಿತ ಹತ್ತಾರು ಜನಪದ ತಂಡಗಳು, ಕೀಲುಕುದುರೆ, ಬೇತಾಳ ಡೊಳ್ಳುಕುಣಿತ, ಗೊಂಬೆ ಕುಣಿತ, ಕರಗ ಗೊಂಬೆ, ಹುಲಿ ವೇಷ ಕುಣಿತ ಎಲ್ಲರನ್ನು ಸೆಳೆಯಿತು. ಯಕ್ಷಗಾನ ತಂಡ, ಕೇರಳ ಚೆಂಡೆ, ಪೂಜಾ ಕುಣಿತ, ಮಹಿಷಾಸುರ ಟ್ಯಾಬ್ಲೋ, ದೇವಿ, ಮಧ್ವಾಚಾರ್ಯರು, ವಾದಿರಾಜ ಸ್ವಾಮೀಜಿ, ಉಡುಪಿ ಕೃಷ್ಣನ ಟ್ಯಾಬ್ಲೋ ಮೆರವಣಿಗೆಯಲ್ಲಿದ್ದವು.

    ಮೂವರು ಟ್ಯಾಬ್ಲೋ ಪಲ್ಲಕ್ಕಿಯಲ್ಲಿ- ಇಬ್ಬರು ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಪರ್ಯಾಯ ಮಹೋತ್ಸವದ ಸ್ವಾಮೀಜಿಗಳ ಪಲ್ಲಕ್ಕಿ ಮೆರವಣಿಗೆ ಮೂರು ರೀತಿಯ ಸಂಪ್ರದಾಯಗಳಿಗೆ ಸಾಕ್ಷಿಯಾಯ್ತು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯೇರಿ ಮುಂದಿನ ಪರ್ಯಾಯ ಪೀಠಾಧಿಪತಿ ಪಲಿಮಾರುಶ್ರೀ ಬಂದರು. ಒಟ್ಟು ಮೂರು ವಿಧದ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳ ಮೆರವಣಿಗೆ ನಡೆಯಿತು.

    ಪಲ್ಲಕ್ಕಿಯನ್ನು ಟ್ಯಾಬ್ಲೋದಲ್ಲಿಟ್ಟು ಹೊರಟ ಪಲಿಮಾರು ಸ್ವಾಮೀಜಿಯನ್ನು ಕೃಷ್ಣಾಪುರಶ್ರೀ, ಕಾಣಿಯೂರು ಸ್ವಾಮೀಜಿ ಟ್ಯಾಬ್ಲೋ ಪಲ್ಲಕ್ಕಿಯ ಮೂಲಕವೇ ಹಿಂಬಾಲಿಸಿದರು. ಆದ್ರೆ ಶೀರೂರು ಸ್ವಾಮೀಜಿ ವಿಭಿನ್ನತೆ ಪ್ರದರ್ಶನ ಮಾಡಿದ್ರು. ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಗಣಪತಿ ಮೂರ್ತಿಯಿಟ್ಟ ಶೀರೂರುಶ್ರೀ, ತಾನು ಟ್ಯಾಬ್ಲೋದಲ್ಲಿ ಸಾಗಿದರು. ಶೀರೂರು ಸ್ವಾಮೀಜಿ ಪೇಟ ತೊಟ್ಟು ಪುಟ್ಟ ಟ್ಯಾಬ್ಲೋದಲ್ಲಿ ಕುಳಿತು ಭಕ್ತರ ಗಮನ ಸೆಳೆದರು.

    ಸೋದೆ ಸ್ವಾಮೀಜಿ ಮತ್ತು ಅದಮಾರು ಸ್ವಾಮೀಜಿ ಮಾನವ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ಸೋದೆ ವಿಶ್ವವಲ್ಲಭ ಸ್ವಾಮೀಜಿ ಮತ್ತು ಅದಮಾರು ಕಿರಿಯಶ್ರೀ ಈಶಪ್ರಿಯರು ಸಾಂಪ್ರದಾಯಿಕತೆ ಕಾಪಾಡಿಕೊಂಡರು. ಪಲ್ಲಕ್ಕಿಯನ್ನು ಮಾನವರು ಹೊತ್ತು ಸಾಗಿದರು. ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳನ್ನು ಹೊರುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮೀಜಿ ಸಾಗಿ ಸಂಪ್ರದಾಯ ಮುಂದುವರೆಸಿದರು.

    ಟ್ಯಾಬ್ಲೋ ಪಲ್ಲಕ್ಕಿಯ ಸಲಹೆ ಎರಡು ವರ್ಷದ ಹಿಂದೆ ಪೇಜಾವರಶ್ರೀ ನೀಡಿದ್ದರು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯಿಟ್ಟು ಮಾನವರು ಹೊರುವ ಸಂಪ್ರದಾಯ ನಿಲ್ಲಿಸೋಣ ಅಂತ ಹೇಳಿ ಕಳೆದ ಪರ್ಯಾಯದಲ್ಲಿ ಬದಲಾವಣೆ ತಂದಿದ್ದರು. ಪೇಜಾವರ ಸಲಹೆಯನ್ನು ನಾಲ್ವರು ಸ್ವಾಮೀಜಿ ಒಪ್ಪಿದ್ದರು, ಇಬ್ಬರು ಒಪ್ಪಿಲ್ಲ. ಒಬ್ಬರು ಎರಡೂ ಬೇಡವೆಂದು ಪಲ್ಲಕ್ಕಿಯಲ್ಲಿ ದೇವರನ್ನು ಇಟ್ಟು, ತಾನು ಟ್ಯಾಬ್ಲೋದಲ್ಲಿ ಬಂದಿದ್ದಾರೆ.

  • ಪಾಕಶಾಲೆ ಸೂರೆಗೈದ ಭಕ್ತರು- ಉಡುಪಿ ಕೃಷ್ಣಮಠದಲ್ಲಿ ವಿಭಿನ್ನ ಆಚರಣೆ

    ಪಾಕಶಾಲೆ ಸೂರೆಗೈದ ಭಕ್ತರು- ಉಡುಪಿ ಕೃಷ್ಣಮಠದಲ್ಲಿ ವಿಭಿನ್ನ ಆಚರಣೆ

    ಉಡುಪಿ: ಇಲ್ಲಿನ ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ. ಈ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ. ಈ ಪೈಕಿ ಸೂರೆ ಬಿಡುವುದು ಕೂಡಾ ಒಂದು.

    ಇಂದು ಮಧ್ಯಾಹ್ನ ಮಠದಲ್ಲಿ ಅನ್ನದಾನ ಇತ್ತು. ಎಲ್ಲರ ಊಟದ ನಂತರ ಮಠದ ಪಾಕಶಾಲೆಯಲ್ಲಿ ಸೂರೆ ಬಿಡುವ ಆಚರಣೆ ನಡೆಯಿತು. ಸೂರೆ ಬಿಡುವ ಆಚರಣೆಗೋಸ್ಕರ ಬಹಳಷ್ಟು ಅನ್ನ, ಸಾರು, ಸಾಂಬಾರು, ಪಾಯಸ, ಸ್ವೀಟ್ ಉಳಿಸಲಾಗುತ್ತದೆ. ಮಠದಿಂದ ಭಕ್ತರೆಲ್ಲರಿಗೆ ಸೂರೆ ಮಾಡಲು ಆದೇಶವಾಗುತ್ತದೆ.

    ಸೂರೆಯನ್ನು ನೋಡುವುದೇ ಒಂದು ಕುತೂಹಲ. ಪಾಕಶಾಲೆಯಲ್ಲಿ ಬರುವ ಎಲ್ಲರೂ ಬೇಕು ಬೇಕಾದಷ್ಟು ಅನ್ನ, ಸಾರು, ಪಾಯಸ ಮನೆಗೆ ಕೊಂಡೊಯ್ದರು. ಸ್ವೀಟ್ ಗಳನ್ನು ಬಾಚಿ ಬಾಚಿ ಕೊಂಡೊಯ್ದರು. ಅನ್ನದ ರಾಶಿ- ಸಾರಿನ ಗುಡಾಣವನ್ನು ಸೂರೆಗೈದರು. ಪ್ರತೀ ಪರ್ಯಾಯ ಮುಗಿಯುವ ಹೊತ್ತಿಗೆ ಈ ಸೂರೆ ಕಾರ್ಯಕ್ರಮ ನಡೆಯುತ್ತದೆ.

    ಅನ್ನಬ್ರಹ್ಮನ ಸೇವೆಗೆ ಮುಡಿಪಾಗುವ ಮಹೂರ್ತಗಳು:
    ತಿರಪತಿಯ ಶ್ರೀನಿವಾಸನನ್ನು ಕಾಂಚನಬ್ರಹ್ಮ ಎಂದೂ, ಪಂಡಾರಪುರದ ಪಾಂಡುರಂಗನನ್ನು ನಾದಬ್ರಹ್ಮನೆಂದೂ, ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮನೆಂದೂ ಕರೆಯುತ್ತಾರೆ.

    ಭಕ್ತಿಯ ದಾಹದಿಂದ ಉಡುಪಿಗೆ ಬಂದವರು ಬರಿಯ ಹೊಟ್ಟೆಯಲ್ಲಿ ಹಿಂತಿರುಗಬಾರದು ಎಂದು ಶತಮಾನಗಳ ಹಿಂದಿನಿಂದ ಕೃಷ್ಣಮಠದಲ್ಲಿ ಅನ್ನದಾನ ನಡೆಯುತ್ತಿದೆ. ಇದೇ ಕಾರಣಕ್ಕೆ ಕೃಷ್ಣ ಅನ್ನಬ್ರಹ್ಮನೆನಸಿಕೊಂಡಿದ್ದಾನೆ. ಇಲ್ಲಿ ಪ್ರತಿನಿತ್ಯವೂ 10 ಸಾವಿರಕ್ಕೆ ಕಮ್ಮಿ ಇಲ್ಲದಂತೆ ಭಕ್ತರು ಕೃಷ್ಣನ ಪ್ರಸಾದದ ರೂಪದಲ್ಲಿ ಊಟ ಮಾಡುತ್ತಾರೆ. ಹಬ್ಬ ಹರಿದಿನಗಳಂದಂತೂ 25 ಸಾವಿರಕ್ಕೂ ಮಿಕ್ಕಿ ಜನರು ಊಟ ಮಾಡಿದ ದಾಖಲೆ ಇಲ್ಲಿದೆ.

     

    ಇಷ್ಟು ಜನರಿಗೆ ಊಟ ಹಾಕುವುದು ಅಷ್ಟು ಸುಲಭದ ಮಾತಲ್ಲ, ಪ್ರತಿ 2 ವರ್ಷಕ್ಕೊಮ್ಮೆ ಕೃಷ್ಣಮಠದ ಆಡಳಿತ (ಪರ್ಯಾಯ) ಬದಲಾಗುವುದರಿಂದ ಅನ್ನದಾನಕ್ಕೆ ಸಂಪನ್ಮೂಲ ಕ್ರೋಢಿಕರಣ ದೊಡ್ಡ ಸವಾಲು. ಅದಕ್ಕಾಗಿ ಪರ್ಯಾಯ ಪೂಜಾಧಿಕಾರವನ್ನು ಪಡೆಯುವ ಮಠವು 4 ಮುಹೂರ್ತಗಳ ರೂಪದಲ್ಲಿ ಸಿದ್ಧತೆಗಳನ್ನು ನಡೆಸುತ್ತದೆ. ಹಿಂದೆ ಮಠಗಳು ಆರ್ಥಿಕವಾಗಿ ಕಷ್ಟದಲ್ಲಿದ್ದಾಗ ಅನ್ನದಾನಕ್ಕೆ ಬೇಕಾಗಿದ್ದ ಅಕ್ಕಿ, ಕಟ್ಟಿಗೆ, ಭತ್ತಗಳನ್ನು ವಿದ್ಯುಕ್ತವಾಗಿ ಸಂಗ್ರಹಿಸುವುದಕ್ಕಾಗಿ ನಡೆಯುತ್ತಿದ್ದ ಈ ಮುಹೂರ್ತಗಳು ಇಂದ ಮಠಗಳು ಸ್ವಾವಲಂಭಿಯಾಗಿರುವಾಗ ಸಾಂಕೇತಿಕವಾಗಿ ನಡೆಯುತ್ತಿವೆ.

    ಪ್ರಥಮತಃ ಬಾಳೆ-ತುಳಸಿ ಮುಹೂರ್ತ:
    ಪರ್ಯಾಯ ಪೂಜಾ ಕಾಲದಲ್ಲಿ ಹಾಗೂ ಅನ್ನ ಸಂತರ್ಪಣೆಗೆ ಬಾಳೆ ಎಲೆ, ಬಾಳೆಹಣ್ಣು, ದಿಂಡು – ನಾರು, ತುಳಸಿ ಸಮೃದ್ಧವಾಗಿ ದೊರೆಯಲಿ ಎಂದು ಚಂದ್ರಮೌಳಿಶ್ವರ, ಅನಂತೇಶ್ವರ ಶ್ರೀಕೃಷ್ಣ ಹಾಗೂ ಮಧ್ವಚಾರ್ಯರ ಎದುರಲ್ಲಿ ಪ್ರಾರ್ಥಿಸಿ ಒಂದು ಶುಭ ದಿನದಂದು ಬಾಳೆತೋಟವನ್ನು ಬೆಳೆಸುವ ಮುಹೂರ್ತ ಇದು.

    ದ್ವಿತೀಯ ಅಕ್ಕಿ ಮುಹೂರ್ತ:
    ಎರಡು ವರ್ಷಗಳ ಪರ್ಯಾಯಾವಧಿಯಲ್ಲಿ ಲಕ್ಷೋಪಲಕ್ಷ ಭಕ್ತರಿಗೆ ಅನ್ನ ಸಂತರ್ಪಣೆಗೆ ಬೇಕಾಗುವ ಅಕ್ಕಿಯನ್ನು ಭಕ್ತರಿಂದ ಸಂಗ್ರಹಿಸುವ ಮುಹೂರ್ತ ಇದು. ಅಂದು ದೇವರಲ್ಲಿ ಚಿನ್ನದ ಪಲ್ಲಕ್ಕಿ ಯಲ್ಲಿ ಅಕ್ಕಿಯ ಮುಡಿಯನ್ನು ಇಟ್ಟು ಮೆರವಣಿಗೆ ಮಾಡಿ ಮುಹೂರ್ತ ನಡೆಸಲಾಗುತ್ತದೆ.

    ತೃತೀಯ ಕಟ್ಟಿಗೆ ಮುಹೂರ್ತ:
    ಪರ್ಯಾಯಕ್ಕೆ ಆರು ತಿಂಗಳು ಬಾಕಿ ಇರುವಾಗ ಅನ್ನ ಸಂತರ್ಪಣೆಗೆ ಅವಶ್ಯಕವಾದ ಕಟ್ಟಿಗೆಯನ್ನು ಭೋಜನಶಾಲಾ ಹಿಂಭಾಗದಲ್ಲಿ ರಥದ ಆಕೃತಿಯಲ್ಲಿ ಸಂಗ್ರಹಿಸುವ ಶುಭಾವಸರವೇ ಕಟ್ಟಿಗೆ ಮುಹೂರ್ತ.

    ಚರ್ತುರ್ಥ ಭತ್ತ ಮುಹೂರ್ತ:
    ಇದು ಕೊನೆಯ ಮುಹೂರ್ತ ಇದಾಗಿದೆ. ಅವಿರತ ಅನ್ನಯಜ್ಞಗಾಗಿ ಶ್ರೀಕೃಷ್ಣನ ಪ್ರಾರ್ಥನೆಯೊಂದಿಗೆ ಬಡಗುಮಾಳಿಗೆಯಲ್ಲಿ ಭತ್ತವನ್ನು ಚೀಲದ ಸಂಗ್ರಹವೇ ಭತ್ತ ಮುಹೂರ್ತ. ಪ್ರತಿದಿನ ರಾತ್ರಿ ದೇವರಿಗೆ ವಾಲಗಪೂಜೆಗೆ, ಯತಿಗಳ ಮಾಲಿಕಾ ಮಂಗಳಾರತಿಗೆ ಬೇಕಾಗುವ ಅರಳ ತಯಾರಿಸುವ ಭತ್ತ ಸಂಗ್ರಹವೇ ಇದರ ಉದ್ದೇಶವಾಗಿದೆ.