Tag: ಉಡುಪಿ

  • ಉಡುಪಿಗೆ ಬನ್ನಿ, ಅರಬ್ಬೀ ಸಮುದ್ರದಲ್ಲಿ ವಾಕ್ ಮಾಡಿ!

    ಉಡುಪಿಗೆ ಬನ್ನಿ, ಅರಬ್ಬೀ ಸಮುದ್ರದಲ್ಲಿ ವಾಕ್ ಮಾಡಿ!

    ಉಡುಪಿ: ಸುತ್ತಾಟ ಮಾಡ್ಬೇಕು, ಟೆನ್ಶನ್ ಫ್ರೀ ಮಾಡ್ಕೋಬೇಕು ಅಂತ ಉಡುಪಿಗೆ ಬರೋ ಐಡಿಯಾ ಮಾಡಿರೋರಿಗೆ ಇದು ಶುಭಸುದ್ದಿ. ಇಷ್ಟು ದಿನ ಉಡುಪಿಗೆ ಬರೋ ಪ್ರವಾಸಿಗರು ಸಮುದ್ರ ನೋಡಿ- ಬೋಟಿಂಗ್ ಮಾಡಿ ಖುಷಿ ಪಡ್ತಾಯಿದ್ರು. ಇನ್ಮುಂದೆ ಮಲ್ಪೆಗೆ ಬರೋ ಪ್ರವಾಸಿಗರು ಸಮುದ್ರದ ನಡುವೆ ವಾಕ್ ಮಾಡ್ಬಹುದು. ಸುತ್ತಲೂ ಸಮುದ್ರ ಕಾಣೋ ಥರ ಸೆಲ್ಫೀ ತೆಗೆದು ಎಂಜಾಯ್ ಮಾಡ್ಬಹುದು.

    ಮಲ್ಪೆ ಕಡಲ ತೀರ ಭಾರತದಲ್ಲೇ ಸೇಫೆಸ್ಟ್ ಕಡಲತೀರ. ಅರಬ್ಬೀ ಸಮುದ್ರದ ಸೌಂದರ್ಯ ನೋಡಲು ಜನ ಎಲ್ಲೆಲ್ಲಿಂದಲೋ ಉಡುಪಿಗೆ ಬರ್ತಾರೆ. ಉಡುಪಿಯಲ್ಲಿರೋ ಪ್ರವಾಸಿ ತಾಣಗಳ ಪಟ್ಟಿಗೆ ಹೊಸಾ ಸೇರ್ಪಡೆಯಾಗಿದೆ. ಅದೇ ಸೀ ವಾಕ್..!

    ಸಿಂಪಲ್ಲಾಗಿ ಹೇಳೋದಾದ್ರೆ ಸೀ ವಾಕ್ ಅಂದ್ರೆ ಸಮುದ್ರದ ಮೇಲೆ ನಡೆದಾಡೋದು. ಇಂತದ್ದೊಂದು ಅವಕಾಶ ಮಲ್ಪೆಯಲ್ಲಿ ಶುರುವಾಗಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಜನರನ್ನು ಹೆಚ್ಚು ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಸೀ ವಾಕ್ ಆರಂಭಿಸಲಾಗಿದೆ. ಮಲ್ಪೆ ಬಂದರು ಸಮೀಪದಲ್ಲಿ ಸೀ ವಾಕ್ ಟ್ರ್ಯಾಕ್ ಮಾಡಲಾಗಿದೆ. ಸಮುದ್ರದ ನಡುವೆ ಸುಮಾರು ಮುಕ್ಕಾಲು ಕಿಲೋಮೀಟರ್ ನಡ್ಕೊಂಡು ಹೋಗಿ ಸಮುದ್ರದ ಸೌಂದರ್ಯವನ್ನು ಆಸ್ವಾದಿಸಬಹುದು.

    ಈ ಹಿಂದೆ ಮೀನುಗಾರಿಕಾ ಬೋಟ್ ಓಡಾಡಲು ಇಲ್ಲಿ ಉದ್ದಕ್ಕೆ ಕಲ್ಲನ್ನು ಹಾಕಿ ಅಲೆಗಳನ್ನು ತಡೆಯಲಾಗಿತ್ತು. ಇದೀಗ ಅದರ ಮೇಲೆ ಟ್ರ್ಯಾಕ್ ಮಾಡಿ ಸೀ ವಾಕ್ ಗೆ ಅವಕಾಶ ಮಾಡಿಕೊಡಲಾಗಿದೆ. ಸುಮಾರು 53 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಗೋಡೆ, ವಾಕಿಂಗ್ ಟ್ರ್ಯಾಕ್- ದೀಪಸ್ತಂಭ, ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಇಂಟರ್ಲಾಕ್ ಟೈಲ್ಸ್ ಹಾಕಿ ಪಕ್ಕಾ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಜನ ಸಮುದ್ರದ ನಡುವೆ ಸಲೀಸಾಗಿ ಓಡಾಡೋ ಅವಕಾಶ ಇದು. ಸಮುದ್ರದ ಅಲೆಗಳಿಂದ ಏಳೋ ರಭಸ ಗಾಳಿಗೆ ಮೈಯ್ಯೊಡ್ಡುವ ಅವಕಾಶ ಜನರಿಗೆ ಸಿಕ್ಕಿದೆ.

    ಸಚಿವ ಪ್ರಮೋದ್ ಮಧ್ವರಾಜ್ ರಾಜ್ಯದ ಮೊಟ್ಟ ಮೊದಲ ಸೀ ವಾಕ್ ಗೆ ಚಾಲನೆ ನೀಡಿದ್ದಾರೆ. ಕಡಲಿನ ಜೊತೆ ಕಡಲಾಳವನ್ನು ಕಂಡ ಜನರಿಗೆ ವಿಭಿನ್ನ ಅನುಭವವಾಗಿದೆ. ಕಡಲಿನಲ್ಲಿ ಓಡುವ ಬೋಟ್ಗಳನ್ನು ಪಕ್ಕದಲ್ಲೇ ನಿಂತು ನೋಡುವ ಅವಕಾಶ ಜನರಿಗೆ ಸಿಕ್ಕಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಸ್ಥಳೀಯ ನವೀನ್ ಕೊಳಲಗಿರಿ ಮಾತನಾಡಿ, ಉಡುಪಿಯಲ್ಲೇ ಇರುವವರು ನಾವು. ಆದ್ರೆ ಯಾವತ್ತೂ ಸೀ ವಾಕ್ ಮಾಡಿರಲಿಲ್ಲ. ಈ ಪ್ಲೇಸ್ ಡೇಂಜರಸ್ ಆಗಿತ್ತು. ಆದ್ರೆ ಈಗ ಪ್ರವಾಸಿ ತಾಣ ಆಗಿರೋದು ಬಹಳ ಸಂತಸವಾಗುತ್ತಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

    ಕೇರಳದಲ್ಲಿ ಒಂದು ಕಡೆ ಸೀ ವಾಕ್ ಇದೆ. ರಾಜ್ಯದಲ್ಲಿ ಮಲ್ಪೆ ಕಡಲ ತೀರದಲ್ಲಿ ಮೊದಲ ಸೀ ವಾಕ್ ನಿರ್ಮಾಣವಾಗಿದೆ. ಹುಣಸೂರಿನ ಅನಿತಾ ಮತ್ತು ಅನುಶಾ ಮಲ್ಪೆ ಸೀ ವಾಕ್ ಗೆ ಫುಲ್ ಫಿದಾ ಆಗಿದ್ರು. ಸಮುದ್ರದ ಆಳಕ್ಕೆ ಹೋಗಿ ಬಂದ ಅನುಭವ ಆಯ್ತು, ಮೀನು ಅಲೆಗಳ ನಡುವೆ ಹಾರೋದನ್ನು ನೋಡಿದೆವು. ಸಮುದ್ರದ ಮೇಲೆ ವಾಕ್ ಮಾಡಿದ ಅನುಭವ ಆಯ್ತು. ಮತ್ತೆ ಮತ್ತೆ ಬರಬೇಕು ಅಂತ ಡಿಸೈಡ್ ಮಾಡಿದ್ದೇವೆ, ಇದೊಂದು ಮರೆಯಲಾಗದ ಪ್ರವಾಸ ಅಂತ ಹೇಳಿದ್ರು.

    ಮಲ್ಪೆ ಅಭಿವೃದ್ಧಿ ಸಮಿತಿ ಸೀ ವಾಕ್ ನ ಮೇಲ್ವಿಚಾರಣೆ ನೋಡಿಕೊಳ್ಳಲಿದೆ. ಸಮುದ್ರದ ಮೇಲೆ ಒಂದು ವಾಕ್ ಮಾಡೋ ಅನುಭವ ನಿಮ್ಗೂ ಆಗ್ಬೇಕೂಂದ್ರೆ ಉಡುಪಿಗೆ ಒಂದು ಸಾರಿ ಬನ್ನಿ. ಫ್ರೀಯಾಗಿ ಸೀ ಮೇಲೆ ವಾಕ್ ಮಾಡ್ಬಹುದು.

  • ದಾಯಿರ ನುಡಿಸುತ್ತಾ ಬಂದ ಕಳ್ಳ ಫಕೀರ- ಮಂಕುಬೂದಿ ಎರಚಿ ಚಿನ್ನಕ್ಕೆ ಕನ್ನವಿಟ್ಟ

    ದಾಯಿರ ನುಡಿಸುತ್ತಾ ಬಂದ ಕಳ್ಳ ಫಕೀರ- ಮಂಕುಬೂದಿ ಎರಚಿ ಚಿನ್ನಕ್ಕೆ ಕನ್ನವಿಟ್ಟ

    ಉಡುಪಿ: ಅಸಲಿ ಫಕೀರನಂತೆ ದಾಯಿರ ಬಾರಿಸಿಕೊಂಡು ಮನೆಗೆ ಬಂದ ಅಪರಿಚಿತ ವ್ಯಕ್ತಿ ಮಹಿಳೆಯೊಬ್ಬರಿಗೆ ವಂಚಿಸಿರೋ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

    ಸ್ಥಳೀಯ ನಿವಾಸಿ ನಯಾಝ್ ಎಂಬವರ ಪತ್ನಿ ಆಯಿಷಾ ಮೋಸಕ್ಕೊಳಗಾದ ಮಹಿಳೆ. ಫಕೀರನ ವೇಷದಲ್ಲಿ ಹಣ ಬೇಡುತ್ತಾ ಮನೆಯಿಂದ ಮನೆಗೆ ಹೋದ ವಂಚಕ, ಆಯಿಷಾರನ್ನು ಮಾತಿನ ಮೋಡಿಗೆ ಸಿಲುಕಿಸಿ 8 ಪವನ್ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾನೆ.

    ತಲೆಗೆ ಪೇಟ ತೊಟ್ಟು ಮನೆಗೆ ಫಕೀರನಂತೆ ಬಟ್ಟೆ ಧರಿಸಿ ದಾಯಿರ ಬಾರಿಸಿ ಕೊಂಡು ಬಂದ ಅಪರಿಚಿತ ವ್ಯಕ್ತಿಗೆ ಆಯಿಷಾ 20 ರೂ ನೀಡಲು ಹೋಗಿದ್ದಾರೆ. ಆ ವೇಳೆ ಆತ ನೀವು ತುಂಬಾ ಕಷ್ಟದಲ್ಲಿದ್ದೀರಿ. ನಿಮಗೆ ಮತ್ತು ನಿಮ್ಮ ಗಂಡನಿಗೆ ಯಾರೋ ಮಾಟ ಮಾಡಿದ್ದಾರೆ. ಯಾರೋ ನಿಮ್ಮ ಕುಟುಂಬಕ್ಕೆ ಕೇಡು ಬಯಸಿದ್ದಾರೆ. ನಾನು ಮನೆಯ ಒಳಗೆ ಬಂದು ಆ ಕೇಡು ಬಯಸಿದವರು ಯಾರೆಂದು ತೋರಿಸುತ್ತೇನೆ ಅಂತ ಹೇಳುತ್ತಾ ಡೈಲಾಗ್ ಬಿಟ್ಟಿದ್ದಾನೆ. ಈತನ ನಾಟಕದ ಮಾತಿಗೆ ಮನೆಯೊಡತಿ ಮರುಳಾಗಿದ್ದಾರೆ.

    ಮನೆಯೊಳಗೆ ಬಂದ ವ್ಯಕ್ತಿ, ನಿಮ್ಮಲ್ಲಿರುವ ಚಿನ್ನವನ್ನು ನೋಡೋಣ ಅಂತ ಹೇಳಿದ್ದಾನೆ. ಮನೆಯಲ್ಲಿದ್ದ ಎಂಟು ಪವನ್ ಚಿನ್ನವನ್ನು ಆಯಿಷಾ ತಂದಿದ್ದಾರೆ. ಬಳಿಕ ಆತ ಆಯಿಷಾರ ಮುಖಕ್ಕೆ ನೀರು ಚಿಮುಕಿಸಿದ್ದಾನೆ. ಚಿನ್ನವನ್ನು ಮಡಕೆಯಲ್ಲಿ ಇಟ್ಟಿರುತ್ತೇನೆ ಎಂದು ಹೇಳಿ ಮಡಕೆಗೆ ಕೆಂಪು ನೂಲನ್ನು ಸುತ್ತಿದ್ದಾನೆ. ಮಡಕೆ ವಾಪಾಸ್ ಕೊಟ್ಟು ಮನೆಯಿಂದ ಹೋಗಿದ್ದಾನೆ.

    ಸ್ವಲ್ಪಹೊತ್ತಿನ ನಂತರ ಆಯಿಷಾ ಮಡಿಕೆಯನ್ನು ನೋಡುವಾಗ ಅದರಲ್ಲಿ ಚಿನ್ನ ಮಾಯವಾಗಿದೆ. ಕೂಡಲೇ ಅವರು ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇಲೆ ಪೊಲೀಸರು ಸಿಸಿಟಿವಿ ಪರಿಶೀಲಿಸಿ ವಂಚಿಸಿದ ಫಕೀರನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

  • ಶಾಸಕ ಸುನೀಲ್ ಕುಮಾರ್ ಒಬ್ಬ ಉಗ್ರಗಾಮಿ – ಕಾರ್ಕಳದಲ್ಲೇ ರಮಾನಾಥ ರೈ ವಾಗ್ದಾಳಿ

    ಶಾಸಕ ಸುನೀಲ್ ಕುಮಾರ್ ಒಬ್ಬ ಉಗ್ರಗಾಮಿ – ಕಾರ್ಕಳದಲ್ಲೇ ರಮಾನಾಥ ರೈ ವಾಗ್ದಾಳಿ

    ಉಡುಪಿ: ಶಾಸಕ, ವಿಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ಒಬ್ಬ ಉಗ್ರಗಾಮಿ ಎಂದು ಸಚಿವ ರಮಾನಾಥ ರೈ ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಕಾರ್ಕಳದ ಅತ್ತೂರು ಚರ್ಚ್‍ಗೆ ಬಂದಿದ್ದ ಸಚಿವ ರಮಾನಾಥ ರೈ ಅವರು, ಶಾಸಕ ಸುನೀಲ್ ಒಬ್ಬ ರ್ಯಾಡಿಕಲ್ ವ್ಯಕ್ತಿತ್ವದ ಶಾಸಕ ಎಂದು ಸುನೀಲ್ ಕುಮಾರ್ ಅವರ ಸ್ವ-ಕ್ಷೇತ್ರದಲ್ಲೇ ವಾಗ್ದಾಳಿ ನಡೆಸಿದರು.

    ನನ್ನ ಕ್ಷೇತ್ರಕ್ಕೆ ಬಂದು ಸುನೀಲ್ ಕುಮಾರ್ ವೃಥಾರೋಪ ಮಾಡಿದ್ದಾರೆ. ಎಷ್ಟೇ ಮಾತನಾಡಿದರೂ ನನ್ನನ್ನು ಸುನೀಲ್ ಕುಮಾರ್ ಗೆ ಏನೂ ಮಾಡಲು ಆಗಲ್ಲ. ಅವನ ಮಾತುಗಳಲ್ಲಿ ಎಲ್ಲವೂ ಸುಳ್ಳೇ ಇತ್ತು. ಸತ್ಯ ಕಾಣುವುದಿಲ್ಲ. ಸುನೀಲ್ ಗೆ ಕನಿಷ್ಠ ಜ್ಞಾನವೂ ಇಲ್ಲ. ಜನಪ್ರತಿನಿಧಿಯಾಗಿ ಹೇಗೆ ವರ್ತಿಸಬೇಕು ಎಂದು ಅವನಿಗೆ ಗೊತ್ತೇ ಇಲ್ಲ ಎಂದು ಏಕವಚನದಲ್ಲಿ ಬೈಗುಳಗಳ ಸುರಿಮಳೆಗೈದರು.

    ದೇವರೊಬ್ಬನೇ ಎಂದು ನಾನು ತಿಳಿದುಕೊಂಡಿದ್ದೇನೆ. ನನಗೆ ಬೇಧಭಾವ ಇಲ್ಲ. ದೇವರ ಮೇಲೆ ನಂಬಿಕೆ, ಗೌರವ ಇದ್ದವರು ಇಂತಹ ಸಣ್ಣತನದ ಮಾತುಗಳನ್ನು ಹೇಳಬಾರದು. ನನಗೆ ನನ್ನ ತಂದೆ ರಾಮೇಶ್ವರದಲ್ಲಿ ರಮಾನಾಥ ಎಂದು ಹೆಸರಿಟ್ಟಿದ್ದಾರೆ. ನಾನೇನೂ ಹಿಂದೂ ವಿರೋಧಿಯಲ್ಲ. ಕೋಮು ಸೂಕ್ಷ್ಮ ಪ್ರದೇಶವಾದ ಬಂಟ್ವಾಳದಲ್ಲಿ ಪ್ರಚೋದನಾತ್ಮಕ ಭಾಷಣ ಸರಿಯಲ್ಲ ಎಂದು ಹೇಳಿದರು.

    ಸುನೀಲ್ ಕುಮಾರ್ ಮನಸ್ಸಲ್ಲಿ ಬರೀ ಮತೀಯವಾದ ತುಂಬಿಕೊಂಡಿದೆ. ಮನಸ್ಸಲ್ಲಿ ಇದ್ದದ್ದು ಮಾತಿನ ಮೂಲಕ ಬಾಯಲ್ಲಿ ಬಂದಿದೆ. ಈ ಬಾರಿ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನ ಇದಕ್ಕೆ ಸರಿಯಾಗಿಯೇ ಉತ್ತರ ಕೊಡುತ್ತಾರೆ ಎಂದು ಹೇಳಿದರು. ಅಲ್ಲದೇ ಹುಲಿ ಯೋಜನೆಯ ಭಯ ಹುಟ್ಟಿಸಿ ಸುನೀಲ್ ಕಾರ್ಕಳದಲ್ಲಿ ಶಾಸಕರಾದರು. ಜೋಳಿಗೆ ಹಿಡಿದು ಬಂದಿದ್ದ ಸುನೀಲ್ ಇಂದು ಎಷ್ಟು ಸಂಪತ್ತು ಮಾಡಿದ್ದಾರೆ ಎಂದು ಗೊತ್ತಿದೆ ಎಂದು ಮಾತಿನ ಚಾಟಿ ಬೀಸಿದರು.

    ನನ್ನ ಜಾತ್ಯಾತೀತ ನಿಲುವನ್ನು ಸುನೀಲ್ ಕುಮಾರ್ ಪ್ರಶ್ನಿಸಬಾರದು. ಆರು ಬಾರಿ ಒಬ್ಬ ಒಂದು ಕ್ಷೇತ್ರದಿಂದ ಗೆದ್ದಿದ್ದಾನೆ ಎಂದರೆ ಆ ವ್ಯಕ್ತಿಯನ್ನು ಜನ ಮತ್ತೆ ಮತ್ತೆ ಯಾಕೆ ಆರಿಸುತ್ತಾರೆ ಎಂದು ತಿಳಿದುಕೊಳ್ಳುವ ಸಾಮಾನ್ಯ ಪರಿಜ್ಞಾನವೂ ಶಾಸಕರಿಗೆ ಇಲ್ಲ ಎಂದರು.

  • ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ ತಲುಪಿದೆ: ಸುನಿಲ್ ಕುಮಾರ್

    ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ ತಲುಪಿದೆ: ಸುನಿಲ್ ಕುಮಾರ್

    ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ಪರಾಕಾಷ್ಠೆ ತಲುಪಿದೆ. ವಿನಾಶ ಕಾಲೇ ವಿಪರೀತ ಬುದ್ಧಿ ಇದು ಎಂದು ವಿಪಕ್ಷ ಮುಖ್ಯ ಸಚೇತಕ, ಕಾರ್ಕಳ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

    ಕಾರ್ಕಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ವಿವಾದಾತ್ಮಕ ಸುತ್ತೋಲೆ ಹೊರಡಿಸಿದೆ. ಇದು ಮುಸ್ಲೀಮರ ತುಷ್ಟೀಕರಣದ ಪರಾಕಾಷ್ಠೆ ತಲುಪಿದ ವರ್ತನೆ. ಈ ಬೆಳವಣಿಗೆ ವಿಷಾದನೀಯ ಮತ್ತು ಖಂಡನೀಯ. ಹಿಂದೂ ಹತ್ಯೆಯ ಆರೋಪಿಗಳಿಗೆ ಸರ್ಕಾರ ಈ ಮೂಲಕ ಕುಮ್ಮಕ್ಕು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಸಿಕ್ತು ಕ್ಲೀನ್‍ಚಿಟ್ ಭಾಗ್ಯ- ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಕೆಲಸ

    ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ ಮಾಡುತ್ತಲೇ ಬಂದಿದೆ. ಈಗ ಸರ್ಕಾರ ಸುತ್ತೋಲೆ ಹೊರಡಿಸುವ ಮೂಲಕ ನಮ್ಮ ಆರೋಪವನ್ನು ಕಾಂಗ್ರೆಸ್ ಸಾಬೀತು ಮಾಡಿದೆ ಎಂದರು. ಚುನಾವಣೆ ಸಂದರ್ಭದಲ್ಲಿ ಮತ್ತೊಂದು ಗಲಭೆ ಸೃಷ್ಟಿಸಲು ಸರ್ಕಾರ ಯೋಜನೆ ಹಾಕಿದೆ. ಹಿಂದೂ ಯುವಕರ ಹತ್ಯೆಯ ಆರೋಪಿಗಳನ್ನು ರಕ್ಷಿಸುವ ಕೆಲಸ ಸರ್ಕಾರ ಮಾಡುತ್ತಿದೆ. ನೆನ್ನೆ ಸರ್ಕಾರಿ ಪ್ರಾಯೋಜಿತ ಬಂದ್ ಆಗಿದೆ. ಇದೀಗ ಸರ್ಕಾರಿ ಪ್ರಾಯೋಜಿತ ಗಲಭೆ ಮಾಡಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ದೂರಿದರು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ಭಾಗ್ಯ- ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಕೊಟ್ಟಿದ್ದು ಹೀಗೆ

    ರಾಜ್ಯದ ಜನ ಈ ಬೆಳವಣಿಗೆ ಸಹಿಸಲ್ಲ. ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ಕೊಡುತ್ತಾರೆ. ಸರ್ಕಾರ ಕೂಡಲೇ ವಿವಾದಿತ ಸುತ್ತೋಲೆ ವಾಪಾಸ್ ಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡಲು ಬಿಜೆಪಿ ಸಿದ್ಧತೆ ಮಾಡುತ್ತದೆ ಎಂದರು.  ಇದನ್ನೂ ಓದಿ: 20% ವೋಟ್ ಬ್ಯಾಂಕಿಗೆ ಕೇಸ್ ವಾಪಸ್: ಸಿಎಂ ವಿರುದ್ಧ ಡಿವಿಎಸ್ ಕಿಡಿ

  • ಸರ್ಕಾರ ಹೊರಡಿಸಿರುವ ಮೊದಲ ಸುತ್ತೋಲೆ- ಯಾರೂ ಗಡಿಬಿಡಿ ಮಾಡ್ಬೇಡಿ: ಸಚಿವ ಮಧ್ವರಾಜ್

    ಸರ್ಕಾರ ಹೊರಡಿಸಿರುವ ಮೊದಲ ಸುತ್ತೋಲೆ- ಯಾರೂ ಗಡಿಬಿಡಿ ಮಾಡ್ಬೇಡಿ: ಸಚಿವ ಮಧ್ವರಾಜ್

    ಉಡುಪಿ: ಅಲ್ಪಸಂಖ್ಯಾತ ಮುಗ್ಧರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಸರ್ಕಾರ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದೆ. ರಾಜ್ಯ ಸರ್ಕಾರ ಹಿಂದೂ ವಿರೋಧಿತನವನ್ನು ಮತ್ತೆ ಪ್ರದರ್ಶನ ಮಾಡುತ್ತಿದೆ ಎಂದು ಕಿಡಿಕಾರುತ್ತಿದೆ.

    ಈ ಬಗ್ಗೆ ಉಡುಪಿಯ ಮಲ್ಪೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್, ಮುಗ್ಧ ಹಿಂದೂಗಳ ಮೇಲಿನ ಕೇಸ್ ವಾಪಸ್ ಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ವಿಪಕ್ಷಗಳು ಹಾಗೂ ರಾಜ್ಯದ ಜನರು ಗೊಂದಲ ಮಾಡಿಕೊಳ್ಳುವುದು ಬೇಡ ಅಂತ ಹೇಳಿದರು.

    ನೂರು ಮಂದಿ ಅಪರಾಧಿಗಳನ್ನು ಬಿಟ್ಟರೂ ತೊಂದ್ರೆ ಇಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು. ಖಂಡಿತವಾಗಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದನೆ ಮಾಡುತ್ತದೆ. ಪೊಲೀಸ್ ಇಲಾಖೆ, ಸರ್ಕಾರ ತನ್ನ ವಿವೇಚನೆಗೆ ಅನುಗುಣವಾಗಿ ಸುತ್ತೋಲೆ ಹೊರಡಿಸಿದೆ. ಪ್ರಕರಣಗಳಲ್ಲಿ ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಮುಗ್ಧರಾಗಿದ್ದರೆ ಅವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಈ ಬಗ್ಗೆ ಸಿಎಂಗೆ ಒತ್ತಾಯಿಸುವುದಾಗಿ ಹೇಳಿದರು.

    ಮುಗ್ಧ ಹಿಂದೂಗಳ ಮೇಲಿನ ಕೇಸನ್ನು ಹಿಂಪಡೆಯುವ ಸುತ್ತೋಲೆ ಬರಬಹುದು, ಇದು ಮೊದಲ ಸುತ್ತೋಲೆ ಯಾರೂ ಗಡಿಬಿಡಿ ಮಾಡಬೇಡಿ. ಈ ವಿಚಾರದಲ್ಲಿ ಸರ್ಕಾರ ಬೇಧ ಭಾವ ಮಾಡಬಾರದು. ಅಲ್ಪಸಂಖ್ಯಾತರಿಂದ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಮನವಿ ಬಂದಿರಬಹುದು. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಸುತ್ತೋಲೆ ಬಂದಿರುತ್ತದೆ. ಹಿಂದೂಗಳೂ ಸರ್ಕಾರವನ್ನು ಮನವಿ ಮಾಡಬೇಕು. ಈ ಬಗ್ಗೆ ನಾನೇ ಖುದ್ದಾಗಿ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಇಲಾಖೆ ಕಳುಹಿಸಿರುವ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿ ಕೂಡಾ ಇದೆ ಎಂದು ಹೇಳಿದರು.

  • ಪ್ರಧಾನಿ ಪತ್ನಿ ತೊರೆದ ವಿರುದ್ಧ ಅನುಪಮಾ ಶೆಣೈ ಸ್ಟೇಟಸ್- ಮೋದಿ ಅಭಿಮಾನಿಗಳು ಗರಂ

    ಪ್ರಧಾನಿ ಪತ್ನಿ ತೊರೆದ ವಿರುದ್ಧ ಅನುಪಮಾ ಶೆಣೈ ಸ್ಟೇಟಸ್- ಮೋದಿ ಅಭಿಮಾನಿಗಳು ಗರಂ

    ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ಸ್ಟೇಟಸ್ ಮೂಲಕ ಬಳ್ಳಾರಿಯಲ್ಲಿ ಸಮರ ಸಾರಿ ಪರಮೇಶ್ವರ್ ನಾಯ್ಕ್ ಅವರ ಸಚಿವ ಸ್ಥಾನ ಕಿತ್ತುಕೊಂಡು ಕೊನೆಗೆ ಸೇವೆಗೆ ರಾಜೀನಾಮೆ ನೀಡಿದ ಮಾಜಿ ಡಿವೈ ಎಸ್ ಪಿ, ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಸಂಸ್ಥಾಪಕಿ ಅನುಪಮಾ ಶೆಣೈ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್ ಬುಕ್ ವಾರ್ ಶುರು ಮಾಡಿದ್ದಾರೆ.

    ಮೋದಿ ಆಡಳಿತದ ಬಗ್ಗೆ ಈವರೆಗೆ ವಿಡಂಬನೆ ಮಾಡುತ್ತಿದ್ದ ಅನುಪಮಾ ಶೆಣೈ, ಈ ಬಾರಿ ಮೋದಿ ಪತ್ನಿ ಯಶೋಧ ಬೆನ್ ಬೆನ್ನು ಬಿದ್ದಿದ್ದಾರೆ. ಮೋದಿಯವರು ಪತ್ನಿಯನ್ನು ತೊರೆದಿದ್ದಾರೆ. ಅವರ ಪತ್ನಿ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದಾರಾ? ಅವರಿಗೂ ಮೋದಿಯ ಭಯ ಇರಬೇಕು. ಹಾಗಾಗಿ ಜೀವನಾಂಶ ಕೇಳಲೂ ಕೋರ್ಟಿಗೆ ಹೋಗಿಲ್ಲ ಅಂತ ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ.

    ಇದಕ್ಕೂ ಮೊದಲು ಅನುಪಮಾ ಶೆಣೈ ಮತ್ತೊಂದು ಸ್ಟೇಟಸ್ ಹಾಕಿದ್ದು, ತ್ರಿವಳಿ ತಲಾಖ್ ರದ್ದುಗೊಳಿಸಲು ಹಗಲಿರುಳು ಶ್ರಮಿಸುವ ಮೋದಿಯವರು ತನ್ನ ಮಡದಿಯನ್ನು ದೂರ ಮಾಡಿದ್ದಾರೆ. ಈ ವಿಷಯವೂ ಸಂಸತ್ತಿನಲ್ಲಿ ಚರ್ಚೆಯಾಗಲಿ ಅಂತ ಸವಾಲು ಹಾಕಿದ್ದಾರೆ.

    ಶೆಣೈ ಹಾಕಿರುವ ಸ್ಟೇಟಸ್ ಗೆ ಪರ ಮತ್ತು ವಿರೋಧ ಕಮೆಂಟ್ ಗಳು ಬರುತ್ತಿದೆ. ಮೋದಿ ಅಭಿಮಾನಿಗಳು ಶೆಣೈ ವಿರುದ್ಧ ಫೇಸ್ ಬುಕ್ ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಖಾಸಗಿ ಜೀವನದ ಚರ್ಚೆ ಬೇಡ. ಅವರ ಸಂಸಾರದ ವಿಚಾರ ನಿಮಗೆ ಬೇಡ. ಮೊದಲು ನೀವು ನಿಮ್ಮ ಹೊಸ ಪಕ್ಷ ಕಟ್ಟಿ, ಪಕ್ಷ ಸಂಘಟನೆ ಬಗ್ಗೆ ಚಿಂತೆ ಮಾಡಿ. ಪ್ರಧಾನಿ ಕುಟುಂಬದ ಬಗ್ಗೆ ನಿಮಗ್ಯಾಕೆ ಚಿಂತೆ ಅಂತ ಪ್ರಶ್ನೆ ಮಾಡಿದ್ದಾರೆ.

    ಒಟ್ಟಿನಲ್ಲಿ ಮುಂದಿನ ವಾರ ಪ್ರಧಾನಿ ಮೋದಿ ರಾಜ್ಯ ರಾಜಧಾನಿಗೆ ಬರುತ್ತಿರುವುದರಿಂದ ಈ ಸ್ಟೇಟಸ್ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

  • ರಾಜ್ಯ ಸರ್ಕಾರಕ್ಕೆ ಉಡುಪಿಯ ನರ್ಮ್ ಬಸ್ ಪ್ರಯಾಣಿಕರಿಂದ ಹಿಡಿಶಾಪ

    ರಾಜ್ಯ ಸರ್ಕಾರಕ್ಕೆ ಉಡುಪಿಯ ನರ್ಮ್ ಬಸ್ ಪ್ರಯಾಣಿಕರಿಂದ ಹಿಡಿಶಾಪ

    ಉಡುಪಿ: ಮಹಾದಾಯಿ ವಿಚಾರದಲ್ಲಿ ಕರ್ನಾಟಕ ಬಂದ್ ರಾಜ್ಯ ಸರ್ಕಾರಿ ಪ್ರೇರಿತ ಎಂಬುದು ಸಾಬೀತಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಬಂದ್ ಮಾಡುವಂತೆ ಕನ್ನಡಪರ ಅಥವಾ ರೈತ ಸಂಘಟನೆಗಳು ಕರೆ ನೀಡಿಲ್ಲ. ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆ, ಅಹಿತಕರ ಘಟನೆ ನಡೆದಿಲ್ಲ. ಆದ್ರೆ ಸರ್ಕಾರಿ ನರ್ಮ್ ಬಸ್ಸನ್ನು ಏಕಾಏಕಿ ಬಂದ್ ಮಾಡಲಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಬಸ್ ಇಲ್ಲದೆ ಪರದಾಡುವಂತಾಯ್ತು.

    ಉಡುಪಿ ನಗರದಲ್ಲಿ ಬೆಳಗ್ಗೆ ಒಂದು ಟ್ರಿಪ್ ಮಾಡಿದ ನರ್ಮ್ ಬಸ್ಸುಗಳು 11 ಗಂಟೆಯಾಗುತ್ತಿದ್ದಂತೆ ಸೇವೆ ನಿಲ್ಲಿಸಿವೆ. ಇದರಿಂದ ನರ್ಮ್ ಬಸ್ ನೆಚ್ಚಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಬಸ್ ಓಡಾಟ ಸ್ಥಗಿತ ಮಾಡುವಂತೆ ಆರ್‍ಟಿಸಿ ಮಂಗಳೂರು ವಿಭಾಗದಿಂದ ಆದೇಶ ಬಂದಿದೆ ಎನ್ನಲಾಗಿದೆ. ಸರ್ಕಾರಿ ಬಸ್ಸನ್ನು ಅವಲಂಬಿಸಿದ್ದ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಇದರಿಂದ ಸಮಸ್ಯೆಯಾಗಿದೆ.

    ಉಡುಪಿಯಲ್ಲಿ ಖಾಸಗಿ ಬಸ್ ಗಳ ಅಟ್ಟಹಾಸ ಜೋರಾದಾಗ ಸಚಿವ ಪ್ರಮೋದ್ ಮಧ್ವರಾಜ್ ವಿಶೇಷ ಮುತುವರ್ಜಿಯಿಂದ ನರ್ಮ್ ಬಸ್ ಗಳು ರಸ್ತೆಗೆ ಇಳಿದಿದ್ದವು. ಖಾಸಗಿ ಬಸ್ ಗಳ ವಿರುದ್ಧ ಸಚಿವರೇ ಸಮರ ಸಾರಿದ್ದರು. ಆದ್ರೆ ಇದೀಗ ಉಡುಪಿ ಬಂದ್ ಇಲ್ಲದಿದ್ದರೂ ಸರ್ಕಾರಿ ಬಸ್ ಬಂದ್ ಮಾಡಿರುವುದು ರಾಜ್ಯ ಸರ್ಕಾರ ತನ್ನ ಅಭಿಪ್ರಾಯ ಹೇರಿದೆ ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

    ನರ್ಮ್ ಬಸ್ ಉಡುಪಿಯಲ್ಲಿ ಓಡಾಡಿದ್ದರಿಂದ ಹಿರಿಯ ನಾಗರೀಕರಿಗೆ, ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿತ್ತು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹಿರಿಯ ನಾಗರೀಕ ಗೋವಿಂದ, ಖಾಸಗಿ ಸಿಟಿ ಬಸ್ ಕಂಡಕ್ಟರ್ ಗಳು ಪ್ರಯಾಣಿಕರ ಬಗ್ಗೆ ಅಗೌರವವಾಗಿ ವರ್ತಿಸುತ್ತಾರೆ. ನಾನು ಯಾವಾಗಲೂ ನರ್ಮ್ ಬಸ್ಸಲ್ಲೇ ಪ್ರಯಾಣ ಮಾಡುವುದು. ಇವತ್ತು ಬಸ್ ಇಲ್ಲ ಅಂತ ಮುನ್ಸೂಚನೆ ಇರಲಿಲ್ಲ. ಮೊದಲೇ ಗೊತ್ತಿದ್ದರೆ ನಾನು ಮನೆಯಿಂದ ಹೊರಗೆ ಬರ್ತಾಯಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ದೀಕ್ಷೆ ಕೊಟ್ಟ ಗುರುವಿನ ಆರೋಗ್ಯ ವಿಚಾರಿಸಿದ ಉಮಾಭಾರತಿ

    ದೀಕ್ಷೆ ಕೊಟ್ಟ ಗುರುವಿನ ಆರೋಗ್ಯ ವಿಚಾರಿಸಿದ ಉಮಾಭಾರತಿ

    ಉಡುಪಿ: ದೀಕ್ಷೆ ಕೊಟ್ಟ ಗುರುವಿಗೆ ಅಪಘಾತದ ಸುದ್ದಿ ಕೇಳಿ ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಉಮಾಭಾರತಿ ಮೊದಲು ಪೇಜಾವರ ಮಠಕ್ಕೆ ಆಗಮಿಸಿ ಪೇಜಾವರಶ್ರೀಗೆ ಗೌರವ ಸಲ್ಲಿಸಿದರು. ನಂತರ ಸ್ವಾಮೀಜಿಯನ್ನು ಕಂಡು ಮಾತನಾಡಿಸಿ ನಿಟ್ಟುಸಿರು ಬಿಟ್ಟು ಅಪಘಾತ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ತಾವು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕೆಂದು ಸ್ವಾಮೀಜಿಗೆ ಕಿವಿಮಾತು ಹೇಳಿದರು.

    ಪೇಜಾವರ ಶ್ರೀ ಶಿಷ್ಯೆಯಾಗಿರುವ ಉಮಾಭಾರತಿ ಕಳೆದ ಎರಡು ವರ್ಷದಲ್ಲಿ ಉಡುಪಿಗೆ ಮೂರು ಬಾರಿ ಭೇಟಿ ನೀಡಿದ್ದಾರೆ. ಇದೇ ಸಂದರ್ಭ ಪಂಚಮ ಪರ್ಯಾಯ ಮುಗಿಸಿ ಸರ್ವಜ್ಞ ಪೀಠದಿಂದ ಏಳುವ ಸಂದರ್ಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಕ್ಷಮೆಯನ್ನು ಕೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಉಮಾಭಾರತಿ, ಸ್ವಾಮೀಜಿಗೆ ಅಪಘಾತ ಸುದ್ದಿ ಕೇಳಿ ಆಘಾತವಾಯ್ತು. ಕೆಲಸವನ್ನೆಲ್ಲ ಬದಿಗೊತ್ತಿ ಉಡುಪಿಗೆ ಓಡೋಡಿ ಬಂದೆ. ಸ್ವಾಮೀಜಿಯವರನ್ನು ಭೇಟಿ ಮಾಡಿ ಈಗ ನಿರಾಳವಾಗಿದ್ದೇನೆ. ಸ್ವಾಮೀಜಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಬೆನ್ನಿಗೆ ಹೊಡೆತ ಬಿದ್ದಿದ್ದರಿಂದ ಹೆಚ್ವಿನ ವಿಶ್ರಾಂತಿ ಅವಶ್ಯಕತೆ ಇದೆ. ವೈದ್ಯರ ಸೂಚನೆಯನ್ನು ಪಾಲಿಸಬೇಕು ಎಂದು ಸ್ವಾಮೀಜಿ ಬಳಿ ಉಮಾಭಾರತಿ ನಿವೇದಿಸಿರುವುದಾಗಿ ಹೇಳಿದರು.

    ಪೇಜಾವರಶ್ರೀ ಪಂಚಮ ಪರ್ಯಾಯ ಮುಗಿಸಿದ್ದಾರೆ. ಗುರೂಜಿ ಪಂಚಮ ಪರ್ಯಾಯ ಐತಿಹಾಸಿಕವಾದದ್ದು, ಅವರು ಗುಣಮುಖರಾದ ಕೂಡಲೇ ಉಡುಪಿಯಲ್ಲೇ ದೊಡ್ಡ ಸಂಭ್ರಮಾಚರಣೆ ಮಾಡುತ್ತೇನೆ. ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಪಡಿಸಿಲ್ಲ. ಒಟ್ಟಿನಲ್ಲಿ ಕಾರ್ಯಕ್ರಮ ರಾಜಕೀಯೇತರವಾಗಿ ಇರುತ್ತದೆ. ಆಮಂತ್ರಣ ಮಾಡಿಸಲ್ಲ, ಪುಣ್ಯವಂತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ರಾಜ್ಯ ಮತ್ತು ಕೇಂದ್ರದ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದು ಉಮಾಭಾರತಿ ಹೇಳಿದರು.

    1992ರ ನವೆಂಬರ್ 17ರಂದು ಉಮಾ ಭಾರತಿ ಅವರಿಗೆ ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆ ಕೊಟ್ಟಿದ್ದರು.

  • ಲವ್ ಜಿಹಾದ್ ವಿರುದ್ಧ ಅಭಿಯಾನ- ಹಿಂದೂ ಸಂಘಟನೆ ಮುಖಂಡರ ಮೇಲೆ ಕೇಸ್

    ಲವ್ ಜಿಹಾದ್ ವಿರುದ್ಧ ಅಭಿಯಾನ- ಹಿಂದೂ ಸಂಘಟನೆ ಮುಖಂಡರ ಮೇಲೆ ಕೇಸ್

    ಉಡುಪಿ: ಹಿಂದೂಪರ ಸಂಘಟನೆಗಳ ಲವ್ ಜಿಹಾದ್ ವಿರುದ್ಧದ ಅಭಿಯಾನಕ್ಕೆ ರಾಜ್ಯ ಸರ್ಕಾರ ಆರಂಭವೇ ಆಘಾತ ನೀಡಿದ್ದು, ಅಭಿಯಾನ ಮತ್ತು ಸಹಿ ಸಂಗ್ರಹ ಮಾಡಿದ್ದ ಹಿಂದೂಪರ ಮುಖಂಡರ ವಿರುದ್ಧ ಪ್ರಕರಣ ದಾಖಲು ಮಾಡಿದೆ.

    ಲವ್ ಜಿಹಾದ್ ವಿರುದ್ಧ ಅಭಿಯಾನ ಮಾಡಿದ್ದ ಹಿಂದೂ ಪರ ಸಂಘಟನೆಯ ಮೇಲೆ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ವಿಶ್ವಹಿಂದೂ ಪರಿಷದ್, ಭಜರಂಗದಳ ಮತ್ತು ದುರ್ಗಾವಾಹಿನಿ ಸದಸ್ಯರು ಉಡುಪಿಯಲ್ಲಿ ಲವ್ ಜಿಹಾದ್ ವಿರುದ್ಧದ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದರು. ಆದರೆ ಪೊಲೀಸರ ಅನುಮತಿ ಪಡೆದುಕೊಂಡಿರಲಿಲ್ಲ. ಇದರಿಂದ ಐಪಿಎಸ್ ಸೆಕ್ಷನ್ 143, 149, 290 ನಿಯಮದಡಿ ಉಡುಪಿ ನಗರ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.

    ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿ, ರಾಜ್ಯ ಸರ್ಕಾರ ಹಿಂದೂ ಧಮನ ನೀತಿಯನ್ನು ಅನುಸರಿಸಿದೆ. ಸರ್ಕಾರ ಪೊಲೀಸರ ಕೈಯಲ್ಲಿ ಕೇಸು ಹಾಕಿಸಿದೆ. ಇದು ಪೊಲಿಟಿಕಲ್ ಪೊಲೀಸ್ ಗಿರಿ. ಇನ್ನು ಎರಡು ದಿನಗಳ ಒಳಗೆ ಪ್ರಕರಣವನ್ನು ವಾಪಾಸ್ ಪಡೆಯದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

    ಉಡುಪಿ ಎಂಜಿಎಂ ಕಾಲೇಜು ಬಳಿ ಲವ್ ಜಿಹಾದ್ ವಿರುದ್ಧ ಜನವರಿ 22 ರಂದು ವಿಶ್ವಹಿಂದೂ ಪರಿಷದ್, ಭಜರಂಗದಳ, ದುರ್ಗಾವಾಹಿನಿ ಸಂಘಟನೆ ಮುಖಂಡರು ಕಾಲೇಜು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳ ಬಳಿ ಸಹಿ ಸಂಗ್ರಹಿಸಿ ಲವ್ ಜಿಹಾದ್ ವಿರುದ್ಧ ಪಾಠ ಮಾಡಿದ್ದರು. ಕರ ಪೊಲೀಸರಿಗೆ ಮಾಹಿತಿ ನೀಡದೆ ಗುಂಪು ಸೇರಿದ್ದು, ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿ ಮಾಡಿದ್ದರಿಂದ ಕೇಸು ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಅಭಿಯಾನ ಮುಂದುವರೆಸಲಿದ್ದು, ದೇವಸ್ಥಾನ, ಶಾಲಾ ಕಾಲೇಜು, ಹಾಸ್ಟೆಲ್ ಮತ್ತಿತರ ಕಡೆ ತೆರಳಿ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ವಿಶ್ವಹಿಂದೂ ಪರಿಷದ್ ಹೇಳಿದೆ. ಇದನ್ನು ಓದಿ: ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳಿಂದ ಕಾಲೇಜುಗಳ ಮುಂದೆ ಅಭಿಯಾನ