Tag: ಉಡುಪಿ

  • ಪಾದಯಾತ್ರೆ ಮೂಲಕ ಶಕ್ತಿ ಪ್ರದರ್ಶನ, ಗೋವು ಪೂಜೆ ಮಾಡಿ ಬಿಜೆಪಿಗೆ ಟಾಂಗ್- ಕಾರ್ಕಳದಲ್ಲಿ ಎಲೆಕ್ಷನ್ ಫೈಟ್ ಜೋರು

    ಪಾದಯಾತ್ರೆ ಮೂಲಕ ಶಕ್ತಿ ಪ್ರದರ್ಶನ, ಗೋವು ಪೂಜೆ ಮಾಡಿ ಬಿಜೆಪಿಗೆ ಟಾಂಗ್- ಕಾರ್ಕಳದಲ್ಲಿ ಎಲೆಕ್ಷನ್ ಫೈಟ್ ಜೋರು

    ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಲೇ ಕರಾವಳಿ ಜಿಲ್ಲೆಯ ಉಡುಪಿಯಲ್ಲಿ ಟಿಕೆಟ್ ಪಡೆಯುವ ಕಸರತ್ತು ಜೋರಾಗಿದೆ. ಉಡುಪಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾರ್ಕಳ ಈ ಬೆಳವಣಿಗೆಯಲ್ಲಿ ಹೆಚ್ಚು ಮುಂದಿದೆ. ಕಾಂಗ್ರೆಸ್‍ನೊಳಗೆ ಈವರೆಗೆ ಒಟ್ಟು ಮೂರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ.

    ಮಾಜಿ ಶಾಸಕ ಗೋಪಾಲ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ನಡುವೆ ಈವರೆಗೆ ಟಿಕೆಟ್ ಫೈಟ್ ನಡೆಯುತ್ತಿತ್ತು. ಇದೀಗ ಫೀಲ್ಡಿಗೆ ಮಾಜಿ ಸಿಎಂ ವೀರಪ್ಪ ಮೊಯಿಲಿ ಪುತ್ರ ಹರ್ಷ ಮೊಯಿಲಿ ಹೆಸರು ಎಂಟ್ರಿ ಕೊಟ್ಟಿದೆ. ವೀರಪ್ಪ ಮೊಯಿಲಿಯ ತವರು ಜಿಲ್ಲೆಯಲ್ಲಿ ಛಾಪು ಉಳಿಸಿಕೊಳ್ಳಲು ಹೊಸ ದಾಳ ಉರುಳಿಸಿದ್ದಾರೆ. ಕಾಂಗ್ರೆಸ್‍ನ ಒಳಗೆ ಮೂರು ಮಂದಿಯ ಹೆಸರಿನ ಜೊತೆ ಮೂರು ಅಭಿಪ್ರಾಯಗಳು ಓಡಾಡುತ್ತಿದೆ. ಈ ನಡುವೆ ಬಿಜೆಪಿಯಿಂದ ಸೀಟು ಫಿಕ್ಸ್ ಮಾಡಿಕೊಂಡಿರುವ ಶಾಸಕ ಸುನೀಲ್ ಕುಮಾರ್ ಪ್ರಖರ ಹಿಂದುತ್ವವಾದಿ. ಹಿಂದೂಗಳ ಮತವನ್ನೂ ಕಾಂಗ್ರೆಸ್ ಸೆಳೆಯುವ ಉದ್ದೇಶದಿಂದ ಜಿಲ್ಲಾ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ, ದಂಪತಿ ಸಮೇತ ಸಾರ್ವಜನಿಕವಾಗಿ ಗೋವು ಪೂಜೆ ಮಾಡಿದ್ದಾರೆ.

    ಹಿರಿಯ ಪುರೋಹಿತರಿಗೆ ಗೋವಿನ ದಾನ ಮಾಡಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ನಡೆದ ಈ ವಿಧಿಯಲ್ಲಿ ನಾಲ್ಕು ಹಸುಗಳಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಗೋವು ಕೇವಲ ಬಿಜೆಪಿಯ ಸ್ವತ್ತು ಅಲ್ಲ, ಕಾಂಗ್ರೆಸ್ ಕೂಡಾ ಗೋವನ್ನು ಪೂಜಿಸುತ್ತದೆ, ಆರಾಧಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ನಲ್ಲಿ ಈ ಬಾರಿಯಾದರೂ ಯುವಕರಿಗೆ ಅವಕಾಶ ಕೊಡಿ. ಈ ಮೂಲಕ ಪಕ್ಷವನ್ನು ಉಳಿಸಿ ಎಂದು ಕಾರ್ಯಕರ್ತರು ಹೈಕಮಾಂಡನ್ನು ಒತ್ತಾಯಿಸಿದ್ದಾರೆ. ಮೂರು ತಿಂಗಳಿರುವಾಗ ಮೂರು ಅಭ್ಯರ್ಥಿಗಳು ಟಿಕೆಟ್ ಜಿದ್ದಿಗೆ ಬಿದ್ದಿರುವುದು ಹೈಕಮಾಂಡ್‍ಗೆ ತಲೆನೋವಾಗಿದೆ.

    ಓರ್ವ ಟಿಕೆಟ್ ಆಕಾಂಕ್ಷಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಯಾರಿಗೂ ಸೀಟು ಕೇಳುವ ಅವಕಾಶ ಇದೆ. ಈ ಬಾರಿ ನಾನೂ ಒಬ್ಬ ಟಿಕೆಟ್ ಆಕಾಂಕ್ಷಿ. ಕಳೆದ 30 ವರ್ಷದಿಂದ ನಾನು ಸಕ್ರೀಯ ಕಾರ್ಯಕರ್ತ. ಈಗ ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಯುವ ಅಭ್ಯರ್ಥಿ ಬೇಕು ಎಂಬುದು ಪ್ರತಿ ಬೂತ್‍ಗಳಿಂದ ಕೇಳಿ ಬರುತ್ತಿರುವ ಅಭಿಪ್ರಾಯ ಈ ಹಿನ್ನೆಲೆಯಲ್ಲಿ ನಾನು ಟಿಕೆಟ್ ಕೇಳುತ್ತಿದ್ದೇನೆ. ಅವಕಾಶ ಕೊಟ್ಟರೆ ಬಿಜೆಪಿಗೆ ಪ್ರಬಲ ಸ್ಪರ್ಧೆ ಕೊಟ್ಟು ಕಾಂಗ್ರೆಸ್ ಗೆಲ್ಲಿಸುತ್ತೇನೆ ಎಂದು ಹೇಳಿದರು.

    ಎರಡು ಬಾರಿ ಗೆದ್ದು, ಎರಡು ಬಾರಿ ಸೋತ ಗೋಪಾಲ ಭಂಡಾರಿ ಈ ಬಾರಿ ಮತ್ತೆ ಸ್ಪರ್ಧೆಗಿಳಿಯಲು ಸಿದ್ಧತೆ ಮಾಡಿದ್ದಾರೆ. ಕಾರ್ಕಳದಲ್ಲಿ ಆರು ಬಾರಿ ಶಾಸಕರಾಗಿ ಸಿಎಂ ಆಗಿದ್ದ ಡಾ. ವೀರಪ್ಪ ಮೋಯಿಲಿ ಕಾರ್ಕಳದ ಮಟ್ಟಿಗೆ ಹೈಕಮಾಂಡ್ ಇದ್ದಂತೆ. ಪರಿವರ್ತನಾಯಾತ್ರೆ ವೇಳೆ ಗೋಪಾಲ ಭಂಡಾರಿಗೆ ಕೆಲಸ ಶುರು ಮಾಡಿ ಅಂತ ಸಿಎಂ ಸಿದ್ಧರಾಮಯ್ಯ ಹೇಳಿ ಹೋಗಿದ್ದರು. ವಾರದ ಹಿಂದೆ ಆದ ಬೆಳಣಿಗೆಯಲ್ಲಿ ವೀರಪ್ಪ ಮೊಯಿಲಿ ತನ್ನ ಮಗ ಕೂಡಾ ಟಿಕೆಟ್ ಆಕಾಂಕ್ಷಿ ಅಂತ ಒಂದು ದಾಳ ಉರುಳಿಸಿದ್ದಾರೆ. ಹೀಗಾಗಿ ಕಾರ್ಕಳದ ಕಣ ಈ ಬಾರಿ ಕುತೂಹಲದ ಕೇಂದ್ರವಾಗಿದೆ.

     

  • ಸರ್ಕಾರದ ನೌಕರನಾಗಿ ನಾನು ಒಂದು ಕ್ಷಣವೂ ಇರಲಾರೆ: ಉಡುಪಿಯಲ್ಲಿ ಪೇಜಾವರಶ್ರೀ

    ಸರ್ಕಾರದ ನೌಕರನಾಗಿ ನಾನು ಒಂದು ಕ್ಷಣವೂ ಇರಲಾರೆ: ಉಡುಪಿಯಲ್ಲಿ ಪೇಜಾವರಶ್ರೀ

    ಉಡುಪಿ: ರಾಜ್ಯದ ಖಾಸಗಿ ಮಠ ಮಂದಿರಗಳನ್ನು ಸರ್ಕಾರೀಕರಣಗೊಳಿಸುವ ಬಗೆಗಿನ ಸರ್ಕಾರದ ನಡೆಗೆ ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ. ಉಡುಪಿ ಶ್ರೀಕೃಷ್ಣ ಮಠವನ್ನು ಸರ್ಕಾರ ತನ್ನ ವಶಕ್ಕೆ ಪಡೆಯುವ ಪ್ರಯತ್ನ ಮಾಡಿದರೆ ನಾನು ಮಠದಿಂದ ಹೊರಬರುತ್ತೇನೆ. ಸರಕಾರದ ನೌಕರನಾಗಿ ನಾನು ಮಠದಲ್ಲಿ ಒಂದು ಕ್ಷಣವೂ ಇರಲಾರೆ ಎಂದ ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ.

     ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ದೇವಾಲಯ- ಮಠಗಳನ್ನು ಸರ್ಕಾರಿಕರಣ ಮಾಡುವ ಚಿಂತನೆ ವಿಪಕ್ಷಗಳ ಹೋರಾಟಕ್ಕೆ ಅಸ್ತ್ರ ಸಿಕ್ಕಂತಾಗುತ್ತದೆ. ಚುನಾವಣಾ ಹೊಸ್ತಿಲಲ್ಲಿ ವಿಪಕ್ಷಗಳು ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆಯಿದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನೂಲು ರಸ್ತೆಯಲ್ಲಿ ಜಂಪ್ ಆಯ್ತು ಇನ್ನೋವಾ ಕಾರು- ಪೇಜಾವರಶ್ರೀ ಬೆನ್ನು ಉಳುಕು

    ಸರ್ಕಾರದ ವಿರುದ್ಧ ನಾನು ಹೋರಾಟ ಮಾಡುವುದಿಲ್ಲ. ಸರ್ಕಾರದ ಈ ನಡೆಯ ಬಗ್ಗೆ ಜನರು, ಮಠದ ಭಕ್ತರು ಚಿಂತನೆ ನಡೆಸಲಿ. ಒಂದು ಸರಿಯಾದ ತೀರ್ಮಾನಕ್ಕೆ ಬರಲಿ ಎಂದು ಪೇಜಾವರ ಸ್ವಾಮೀಜಿ ಹೇಳಿದರು.

    ನಾವು ಜಾತ್ಯಾತೀತ ಎಂದು ಕರೆಸಿಕೊಳ್ಳುವ ಸರ್ಕಾರ ಹೀಗೆ ಮಾಡಬಾರದು. ಬಹುಸಂಖ್ಯಾತ, ಅಲ್ಪಸಂಖ್ಯಾತರನ್ನು ಒಂದಾಗಿ ಕಾಣಬೇಕು. ರಾಜ್ಯದ ಜನತೆಯ ಬಗ್ಗೆ ತಾರತಮ್ಯ ಮಾಡಬಾರದು. ಆದರೆ ಇದಕ್ಕೆ ತದ್ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಇತ್ತೀಚೆಗೆ ಅಲ್ಪಸಂಖ್ಯಾತರ ಪ್ರಕರಣಗಳನ್ನು ಕೈಬಿಡಲು ಸರ್ಕಾರ ಆದೇಶ ಪತ್ರ ಹೊರಡಿಸಿತ್ತು. ಮುಗ್ಧರೆಂದಾದರೆ ಎಲ್ಲರ ಪ್ರಕರಣಗಳನ್ನು ಸರ್ಕಾರ ಕೈಬಿಡಬೇಕು. ಇದೆಲ್ಲದಕ್ಕೆ ರಾಜ್ಯ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಇಂತಹ ಗೊಂದಲಕಾರಿ ಆದೇಶಗಳಿಂದ ಜನ ಮತ್ತಷ್ಟು ಗೋಂದಲಕ್ಕೀಡಾಗುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಮಠ, ಖಾಸಗಿ ದೇವಸ್ಥಾನಗಳನ್ನು ಸರ್ಕಾರಿಕರಣ ಮಾಡುವ ಬಗ್ಗೆ ಯಾವುದೇ ನೋಟೀಸ್ ಈವರೆಗೆ ನಮ್ಮ ಕೈ ತಲುಪಿಲ್ಲ. ಪರ್ಯಾಯ ಮಠಕ್ಕೆ ಬಂದ ಬಗ್ಗೆಯೂ ಮಾಹಿತಿಯಿಲ್ಲ. ಸರಕಾರದ ಯಾವುದೇ ಮೂಲಗಳಿಂದ ತಿಳಿದುಬಂದಿಲ್ಲ. ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಸುದ್ದಿಯ ಪ್ರಸಾರ ನೋಡಿ ನನ್ನ ಅಭಿಪ್ರಾಯ ಹೇಳುತ್ತಿದ್ದೇನೆ ಎಂದು ಪೇಜಾವರಶ್ರೀ ಹೇಳಿದರು.

    ಯೂಟರ್ನ್ ಹೊಡೆದ ಸರ್ಕಾರ: ಮಠಗಳನ್ನು, ದೇವಾಲಯಗಳನ್ನು ವಶಪಡಿಸಿಕೊಳ್ಳುವ ಸಂಬಂಧ ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗೆ ಧಾರ್ಮಿಕ ದತ್ತಿ ಇಲಾಖೆ 15 ದಿನಗಳ ಕಾಲಾವಕಾಶ ಕೊಟ್ಟು, ಜನವರಿ 29 ರಂದು ಸಾರ್ವಜನಿಕ ಪ್ರಕಟಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಕೊನೆಗೆ ಎಚ್ಚೆತ್ತು ಹಿಂದೆ ಈಗ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಸಿಎಂ ಸಿದ್ದರಾಮಯ್ಯ ನಡೆಯನ್ನ ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ವ್ಯಾಪಕ ಟೀಕೆಯಿಂದ ಎಚ್ಚೆತ್ತ ಸಚಿವ ರುದ್ರಪ್ಪ ಲಮಾಣಿ ಅಂತ ಪ್ರಸ್ತಾವನೆಯೇ ಇಲ್ಲ. ಕೋರ್ಟ್ ನಿರ್ದೇಶನದಂತೆ ನಾವು ಅಭಿಪ್ರಾಯ ಕೇಳಿದ್ದೇವೆ. ಬಿಜೆಪಿಯವರು ಜನರನ್ನ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ ಎಂದರು.

    https://www.youtube.com/watch?v=wcUoOzXNf6Y

  • ಕಾಡು ಸೇರುವ ಖುಷಿಯಲ್ಲಿದ್ದಾಳೆ 23 ವರ್ಷಗಳ ಕಾಲ ಉಡುಪಿಯಲ್ಲಿದ್ದ `ಸುಭದ್ರೆ’

    ಕಾಡು ಸೇರುವ ಖುಷಿಯಲ್ಲಿದ್ದಾಳೆ 23 ವರ್ಷಗಳ ಕಾಲ ಉಡುಪಿಯಲ್ಲಿದ್ದ `ಸುಭದ್ರೆ’

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಆನೆ ಸುಭದ್ರೆ ಬಿಸಿಲಿನಿಂದ ಮತ್ತು ಜನರ ಜಂಟಾಟದಿಂದ ಬೇಸತ್ತು ಹೋಗಿದೆಯಂತೆ. ಈ ಮೂಲಕ ಆನೆ ಕೃಷ್ಣನ ಸೇವೆಯಿಂದ ನಿವೃತ್ತಿಯಾಗಿ ಕಾಡು ಸೇರಲಿದೆ.

    23 ವರ್ಷಗಳ ಕಾಲ ಉಡುಪಿಯಲ್ಲಿದ್ದ ಸುಭದ್ರೆ ಈಗ ಸಕ್ರೆಬೈಲು ಕಾಡು ಸೇರುವ ಖುಷಿಯಲ್ಲಿದೆ. ಮೂರು ವರ್ಷದ ಹಿಂದೆ ಕಾಣಿಯೂರು ಪರ್ಯಾಯ ಸಂದರ್ಭ ಕಾಲಿನ ಗಾಯಕ್ಕೊಳಗಾಗಿದ್ದ ಆನೆಯನ್ನು ಸಕ್ರೆಬೈಲಿನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮಠದಿಂದ ಆನೆಯನ್ನು ಸುರಕ್ಷಿತವಾಗಿ ಕಳುಹಿಸಿಕೊಡಲಾಗಿತ್ತು. ಎರಡು ವರ್ಷ ಕಾಡಿನಲ್ಲೇ ಕಳೆದ ಆನೆ ಸಂಪೂರ್ಣ ಗುಣಮುಖವಾಗಿತ್ತು. ನಂತರ ಪುನಃ ಉಡುಪಿ ಕೃಷ್ಣಮಠಕ್ಕೆ ಆನೆಯನ್ನು ಕರೆತರಲಾಗಿತ್ತು. ಇಲ್ಲಿ ಆನೆಗೆ ಅನಾರೋಗ್ಯವಾದಾಗ ಮತ್ತೆ ಸಕ್ರೆಬೈಲಿಗೆ ಶಿಫ್ಟ್ ಮಾಡಲಾಗಿತ್ತು.

    ಈಗಿನ ಪಲಿಮಾರು ಪರ್ಯಾಯ ಮಹೋತ್ಸವಕ್ಕೆ ಆನೆಯನ್ನು ಕಾಡಿನಿಂದ ಮತ್ತೆ ಕರೆತರಲಾಗಿತ್ತು. ಮೆರವಣಿಗೆ, ಎರಡು ವಾರಗಳ ಉತ್ಸವದಲ್ಲಿ ಭಾಗಿಯಾಗಿತ್ತು. ಉಡುಪಿಯಲ್ಲಿ 20 ದಿನ ಕಳೆದ ಸುಭದ್ರೆಗೆ ಮತ್ತೆ ಕಾಡು ನೆನಪಾಗುತ್ತಿದೆಯಂತೆ. ನಾಡು ಕಾಡುತ್ತಿದೆ, ಕಾಡನ್ನು ಆನೆ ಬಯಸುತ್ತಿದೆ ಅಂತ ಮಠದ ಮಾವುತರಿಗೂ ಅನ್ನಿಸಿದೆ. ಮಠದ ಅಧಿಕಾರಿಗಳು ಆನೆಯನ್ನು ಮತ್ತೆ ಚಿಕಿತ್ಸೆಗಾಗಿ ಸಕ್ರೆಬೈಲಿಗೆ ಕಳುಹಿಸಲು ನಿರ್ಧರಿಸಿದ್ದಾರೆ.

    ಪಶುವೈದ್ಯರು ಮತ್ತು ವನ್ಯ ಜೀವಿ ಇಲಾಖೆ ಕೂಡಾ ಸುಭಧ್ರೆಯನ್ನು ಕಾಡಿಗೆ ಬಿಟ್ಟುಬರುವ ಚಿಂತನೆ ನಡೆಸಿದೆ. ಈ ವಾರದಲ್ಲಿ ಆನೆಯನ್ನು ಬಿಟ್ಟು ಕಳುಹಿಸುವುದಾಗಿ ಮಠ ಹೇಳಿದೆ. ಸುಭದ್ರ ಸಕ್ರೆಬೈಲು ಸೇರಿದ ನಂತರ ಬೇರೊಂದು ಆನೆಯನ್ನು ಮಠಕ್ಕೆ ತರಿಸುವ ಆಲೋಚನೆ ಮಠಕ್ಕೆ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದು ಪರ್ಯಾಯ ಪಲಿಮಾರು ಮಠ ಹೇಳಿದೆ.

    ಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ್ ಪಿ.ಆರ್ ಮಾತನಾಡಿ, ಪರ್ಯಾಯ ಸಂದರ್ಭ ಗಜಪೂಜೆಗೆ ಆನೆಯನ್ನು ಅಪೇಕ್ಷಿಸಿದ್ದೆವು. ಅದರಂತೆ ಅರಣ್ಯಾಧಿಕಾರಿಗಳು ಸುಭದ್ರೆಯನ್ನು ಕಳುಹಿಸಿಕೊಟ್ಟಿದ್ದರು. ಈಗ ಆನೆಯ ಸ್ಥಿತಿಯನ್ನು ಪತ್ರ ಮುಖೇನ ವಿವರಿಸಿದ್ದೇವೆ. ಆನೆಯನ್ನು ಈ ವಾರದಲ್ಲಿ ಸಕ್ರೆಬೈಲ್ ಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

  • ಪೊಲೀಸ್ ಠಾಣೆಯಲ್ಲಿ ಆರಂಭವಾದ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ!

    ಪೊಲೀಸ್ ಠಾಣೆಯಲ್ಲಿ ಆರಂಭವಾದ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ!

    ಉಡುಪಿ: ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ತನ್ನ ಕ್ವಾಟ್ರಸ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮತ್ತೋರ್ವ ಮಹಿಳಾ ಪೇದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಪೊಲೀಸ್ ಕಾನ್ ಸ್ಟೇಬಲ್ ನಾಗರಾಜ್ (27) ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಪ್ರೇಯಸಿ ರಮ್ಯಾ(ಹೆಸರು ಬದಲಾಯಿಸಲಾಗಿದೆ) ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಕೂಡ ಕೊಲ್ಲೂರು ಠಾಣೆಯಲ್ಲೇ ಸೇವೆಯಲ್ಲಿದ್ದರು. ಪ್ರೀತಿ ಹಾಗೂ ಮನಸ್ತಾಪವೇ ಈ ಎರಡು ದುರ್ಘಟನೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ.

    ನಾಗರಾಜ್ ಸೌಪರ್ಣಿಕ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರೆ, ರಮ್ಯಾ ಕೊಲ್ಲೂರು ಪೊಲೀಸ್ ಠಾಣೆಯಲ್ಲೇ ಇರುವ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಅದೃಷ್ಟವಶಾತ್ ರಮ್ಯಾರನ್ನು ಪೊಲೀಸರೇ ಬದುಕಿಸಿದ್ದಾರೆ.

    ನಾಗರಾಜ್ ಮೂಲತಃ ದಾವಣಗೆರೆಯ ಮಲೆಬೆನ್ನೂರಿನ ಹಿಡಗನಗಟ್ಟ ಗ್ರಾಮದ ನಿವಾಸಿ. ಕಳೆದ 2 ವರ್ಷಗಳಿಂದ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕಳೆದ ಕೆಲವು ದಿನಗಳಿಂದ ಜೋಯ್ಡಾಗೆ ಹೆಚ್ಚುವರಿ ಕೆಲಸದ ನಿಮಿತ್ತ ತೆರಳಿದ್ದರು. 2 ದಿನಗಳ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ನಾಗರಾಜ್ ಭಾನುವಾರ ಮುಂಜಾನೆ ಪೊಲೀಸ್ ವಸತಿ ಗೃಹದಲ್ಲೇ ನೇಣಿಗೆ ಶರಣಾಗಿದ್ದಾರೆ.

    ನಾಗರಾಜ್ ಅವರ ಸಾವಿನ ಸುದ್ದಿ ತಿಳಿದ ಪ್ರೇಯಸಿ ರಮ್ಯಾ ಪೊಲೀಸ್ ಠಾಣೆಯಲ್ಲೇ ಇದ್ದ ಬಾವಿಗೆ ಹಾರಿದ್ದಾರೆ. ಠಾಣೆಯಲ್ಲಿದ್ದ ಪೊಲೀಸರೇ ಬಾವಿಗೆ ಧುಮುಕಿ ಆಕೆಯನ್ನು ಬದುಕಿಸಿದ್ದಾರೆ. ಬಳಿಕ ಕುಂದಾಪುರ ಸಮೀಪದ ವಿನಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆತ್ಮಹತ್ಯೆಗೆ ಶರಣಾದ ನಾಗರಾಜ್ ಹಾಗೂ ರಮ್ಯಾ ಒಂದೇ ಬ್ಯಾಚ್ ಮೇಟ್ ಆಗಿದ್ದರು. ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಾಗರಾಜ್ ಹಾಗೂ ರಮ್ಯಾ ಅದೃಷ್ಟವೆಂಬಂತೆ ಒಂದೇ ಪೊಲೀಸ್ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಗರಾಜ್ ತನ್ನ ಪ್ರೇಮದ ಬಗ್ಗೆ ಮನೆಯಲ್ಲೂ ಹೇಳಿಕೊಂಡಿದ್ದ. ನಾಗರಾಜ್ ಹಾಗೂ ರಮ್ಯಾ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿತ್ತು.

    ದಿನ ಕಳೆದಂತೆ ಇವರಿಬ್ಬರ ನಡುವೆ ಮನಸ್ತಾಪ ಬೆಳೆದಿತ್ತು. ಚಿಕ್ಕಪುಟ್ಟ ವಿಷಯಕ್ಕೂ ಜಗಳ ನಡೆಯುತ್ತಿತ್ತು. ಈ ಬಗ್ಗೆ ಡೆತ್ ನೋಟ್ ಕೂಡ ಬರೆದ ನಾಗರಾಜ್ ತನ್ನ ಸಾವಿಗೆ ನಾನೇ ಕಾರಣ. ನನಗೆ ತುಂಬಾ ನೋವಾಗಿದೆ. ನನ್ನ ಮಾತನ್ನು ರಮ್ಯಾ ಕೇಳುತ್ತಿಲ್ಲ. ಅವಳೊಂದಿಗೆ ನೆಮ್ಮದಿಯಿಲ್ಲ. ನನ್ನನ್ನು ಕ್ಷಮಿಸಿ. ನನ್ನ ಸಾವಿಗೆ ನಾನೇ ಹೊಣೆ ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

    ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ನಾಗರಾಜ್ ಸ್ನೇಹಿತ ಫಾರುಕ್, ಕೂಲಿ ಮಾಡಿಕೊಂಡಿದ್ದ ನಾಗರಾಜ್, ಪೊಲೀಸ್ ಉದ್ಯೋಗ ಸೇರಿದ್ದ. ಆತ್ಮಹತ್ಯೆ ಮಾಡಿರುವುದು ಬೇಸರ ತಂದಿದೆ. ನಾಗರಾಜ್ ತುಂಬಾ ಸ್ನೇಹಸ್ವಭಾವ ವ್ಯಕ್ತಿಯಾಗಿದ್ದನು ಅಂತ ಹೇಳಿದ್ದಾರೆ.

    ಕೆಲಸದ ವಿಚಾರದಲ್ಲಿ ಒತ್ತಡ ತಂದುಕೊಳ್ಳುತ್ತಿದ್ದ. ಇನ್ನುಳಿದಂತೆ ಮನೆ ವಿಚಾರ ಬಂದಾಗ ಖುಷಿಯಾಗಿದ್ದ. ಪೊಲೀಸ್ ಆಗಬೇಕೆಂದು ತುಂಬ ಆಸೆಯನ್ನಿಟ್ಟುಕೊಂಡಿದ್ದ ನಾಗರಾಜ್, ಕೂಲಿ ಕೆಲಸ ಮಾಡಿ ಪೊಲೀಸ್ ಕೆಲಸಕ್ಕೆ ಸೇರಿದ್ದ. ಇನ್ನು ಪ್ರೀತಿ ವಿಚಾರವಾಗಿ ಮನೆಯಲ್ಲಿ ಯುವತಿಯ ಫೋಟೋ ತೋರಿಸಿದ್ದ. ಫೋಟೋ ನೋಡಿ ಮನೆಯಲ್ಲೂ ಒಪ್ಪಿಗೆ ನೀಡಲಾಗಿತ್ತು. ಆದರೆ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದ ಏಕೆ ಅನ್ನೋದು ಗೊತ್ತಾಗುತ್ತಿಲ್ಲ. ಡೆತ್ ನೋಟಿನಲ್ಲೂ ಕ್ಷಮಿಸಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾನೆ. ನಾಗರಾಜ್ ಸಾವು ದುಃಖ ತಂದಿದೆ ಅಂತ ಸಹೋದರ್ ಅರುಣ್ ಹೇಳಿದ್ದಾರೆ.

    ಸದ್ಯ ಮೃತ ನಾಗರಾಜ್ ಮೃತದೇಹವನ್ನು ಮಣಿಪಾಲದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.

    ಮನೆಯಲ್ಲಿ ವಿರೋಧವಿದ್ದು ಠಾಣೆಗೆ ಹಾರಿ ಬರುವ ಅದೆಷ್ಟೋ ಜೋಡಿ ಹಕ್ಕಿಗಳನ್ನು ದಂಪತಿಗಳನ್ನಾಗಿ ಮಾಡಿ ಕಳುಹಿಸಿದ ಉದಾಹರಣೆ ಸಾಕಷ್ಟಿದೆ. ಆದ್ರೆ ಈ ಪ್ರಕರಣ ಅದಕ್ಕೆ ತದ್ವಿರುದ್ಧವಾಗಿದೆ. ವರ್ಷಗಟ್ಟಲೆ ಸಾಕಿ ಸಲಹಿದ- ಮಗ ಮಗಳಿಗೆ ಬೆಟ್ಟದಷ್ಟು ಪ್ರೀತಿಕೊಟ್ಟು, ಸಿಕ್ಕಾಪಟ್ಟೆ ಕನಸನ್ನಿಟ್ಟ ಪೋಷಕರು ಈ ಪ್ರೀತಿ- ಪ್ರೇಮ- ಆತ್ಮಹತ್ಯೆಯ ಸಂದರ್ಭ ಒಂದು ಕ್ಷಣವೂ ಕಣ್ಮುಂದೆ ಬರೋದೇ ಇಲ್ವಾ ಅನ್ನೋದೆ ಉತ್ತರ ಸಿಗದ ಪ್ರಶ್ನೆಯಾಗಿದೆ.

  • ಹಿಂಬಾಗಿಲಿಂದ ಮನೆಗೆ ನುಗ್ಗಿ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಚಿನ್ನ, ನಗದು ಎಗರಿಸಿದ್ರು!

    ಹಿಂಬಾಗಿಲಿಂದ ಮನೆಗೆ ನುಗ್ಗಿ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಚಿನ್ನ, ನಗದು ಎಗರಿಸಿದ್ರು!

    ಉಡುಪಿ: ಮನೆಯ ಹಿಂಬಾಗಿಲು ಒಡೆದು ಮನೆಗೆ ನುಗ್ಗಿದ ಕಳ್ಳರು ಮಾಲೀಕ ಹಾಗೂ ಅವರ ಪತ್ನಿಯ ಮೇಲೆ ಮಾರಾಂಣಾತಿಕ ಹಲ್ಲೆ ನಡೆಸಿ ಚಿನ್ನ ಮತ್ತು ನಗದಿಗೆ ಕನ್ನ ಹಾಕಿರೋ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ನಡೆದಿದೆ.

    ಕಾರ್ಕಳ ಕಸಬಾ ಗ್ರಾಮದ ಬಂಗ್ಲಗುಡ್ಡೆ ಜಂಕ್ಷನ್ ಬಳಿ ಇರುವ ಬಿಎಸ್‍ಎನ್‍ಎಲ್ ನಲ್ಲಿ ಕೆಲಸಕ್ಕಿರುವ ಯಶೋಧ ಹಾಗೂ ವಿಜಯಾ ಬ್ಯಾಂಕ್ ನಿವೃತ್ತ ನೌಕರ ಸಂಜೀವ್ ನಾಯ್ಕ್ ಎಂಬರಿಗೆ ಸೇರಿದ ಮನೆಗೆ ತಡರಾತ್ರಿ ಮೂವರು ಕಳ್ಳರು ಬಂದಿದ್ದು, ಮನೆಯ ಹಿಂಬಾಗಿಲನ್ನು ತಟ್ಟಿದ್ದಾರೆ.

    ಮನೆಯ ಮಾಲೀಕ ಶಬ್ಧ ಕೇಳಿ ಯಾರೋ ಪರಿಚಯಸ್ಥರು ಇರಬಹುದೆಂದು ಭಾವಿಸಿ ಮನೆಯ ಬಾಗಿಲನ್ನು ತೆರೆದಾಗ ಕಳ್ಳರು ಮಾರಾಕಾಯುಧವನ್ನು ತೋರಿಸಿ ಬೆದರಿಸಿ ಮನೆಯ ಒಳಕ್ಕೆ ನುಗ್ಗಿದ್ದಾರೆ. ಬಳಿಕ ಸಂಜೀವ್ ನಾಯ್ಕ್ ಮೇಲೆ ಗಂಭೀರ ಹಲ್ಲೆ ನಡೆಸಿ ನಂತರ ಅವರ ಹೆಂಡತಿ ಯಶೋಧ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಚಿನ್ನ ಹಾಗೂ ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ.

    ಸದ್ಯ ಹಲ್ಲೆಗೊಳಗಾದ ಸಂಜೀವ್ ನಾಯ್ಕ್ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿದ್ದು, ತನಿಖೆ ಮುಂದುವರೆಸಿದ್ದಾರೆ. ಎಎಸ್‍ಪಿ ಋಷಿಕೇಷ್ ಸೋನಾವಣೆ, ಕಾರ್ಕಳ ವೃತ್ತ ನೀರಿಕ್ಷಕ ಜಾಯ್ ಅಂಥೋನಿ, ನಗರ ಪಿಎಸ್‍ಐ ನಂಜಾನಾಯ್ಕ್ ಭೇಟಿ ನೀಡಿ ಅರೋಪಿಗಳ ಶೋಧ ಕಾರ್ಯ ಮುಂದುವರೆಸಿದ್ದಾರೆ.

  • ಎರಡು ದಿನದ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ಪೇದೆ ಆತ್ಮಹತ್ಯೆಗೆ ಶರಣು!

    ಎರಡು ದಿನದ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ಪೇದೆ ಆತ್ಮಹತ್ಯೆಗೆ ಶರಣು!

    ಉಡುಪಿ: ಪೊಲೀಸ್ ಕಾನ್ಸ್ ಸ್ಟೇಬಲ್ ನೇಣಿಗೆ ಶರಣಾದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರಿನ ಸೌಪರ್ಣಿಕ ಗೆಸ್ಟ್ ಹೌಸ್ ನಲ್ಲಿ ನಡೆದಿದಿರುವ ಬಗ್ಗೆ ಬೆಳಕಿಗೆ ಬಂದಿದೆ.

    27 ವರ್ಷದ ನಾಗರಾಜ್ ಆತ್ಮಹತ್ಯೆಗೆ ಶರಣಾಗಿರೋ ಪೇದೆಯಾಗಿದ್ದು, ಇವರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

    ನಾಗರಾಜ್ ಜೊತೆ ಕೋಣೆಯಲ್ಲಿ ತಂಗುತ್ತಿದ್ದ ಇನ್ನೋರ್ವ ಪೇದೆ ಸಂದೀಪ್ ಎಂಬವರು ಕೆಲಸ ನಿಮಿತ್ತ ಶನಿವಾರ ಗಂಗೊಳ್ಳಿಗೆ ತೆರಳಿ ರಾತ್ರಿ ಪಾಳಿಯ ಬಳಿಕ ಇಂದು ಬೆಳಿಗ್ಗೆ ಕೋಣೆಗೆ ಮರಳಿದಾಗ ನಾಗರಾಜ್ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.

    ನಾಗರಾಜ್ ಅವರು ಮೂರು ವರ್ಷಗಳಿಂದ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಾವಣಗೆರೆಯ ಮಲೆಬೆನ್ನೂರು ಮೂಲದ ನಾಗರಾಜ್ ಅವರು 2014ರಲ್ಲಿ ಪೊಲೀಸ್ ಪೇದೆಯಾಗಿದ್ದು, ಅವರು ಜೋಯ್ಡಾಗೆ ವರ್ಗಾವಣೆಗೊಂಡಿದ್ದರು ಎನ್ನಲಾಗಿದೆ. ಎರಡು ದಿನಗಳ ಹಿಂದೆ ಕೊಲ್ಲೂರಿಗೆ ಬಂದಿದ್ದ ಅವರು ಇದೀಗ ದಿಢೀರ್ ಆತ್ಮಹತ್ಯೆಗೆ ಶರಣಾಗಿರುವುದು ನಿಗೂಢವಾಗಿದೆ.

    ನಾಗರಾಜ್ ಅವರ ಮದುವೆ ನಿಗದಿಯಾಗಿತ್ತು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

  • ಉಡುಪಿಯ ಚೆಲುವೆ ಈಗ ಕ್ವೀನ್ ಕರ್ನಾಟಕ

    ಉಡುಪಿಯ ಚೆಲುವೆ ಈಗ ಕ್ವೀನ್ ಕರ್ನಾಟಕ

    ಉಡುಪಿ: ಪತ್ರಿಕೋದ್ಯಮ ವಿದ್ಯಾರ್ಥಿನಿ ಶಾಸ್ತ್ರಾ ಶೆಟ್ಟಿ ಕ್ವೀನ್ ಕರ್ನಾಟಕ ಅವಾರ್ಡ್ ಗೆದ್ದಿದ್ದಾರೆ. ಕೊಚ್ಚಿಯಲ್ಲಿ ನಡೆದ ಸೌತ್ ಇಂಡಿಯನ್ ಲೆವೆಲ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ಶಾಸ್ತ್ರಾ ಶೆಟ್ಟಿಗೆ ಈ ಗೌರವ ಸಿಕ್ಕಿದೆ.

    5 ರಾಜ್ಯಗಳ ಸುಮಾರು 35 ಸ್ಪರ್ಧಿಗಳ ಪೈಕಿ ಶಾಸ್ತ್ರಾ ಅಂತಿಮ 5ರ ಘಟ್ಟಕ್ಕೆ ಬಂದಿದ್ದಾರೆ. ಕರ್ನಾಟಕದ 8 ಸ್ಪರ್ಧಿಗಳು ಈ ಕಾಂಟೆಸ್ಟ್ ನಲ್ಲಿ ಪಾಲ್ಗೊಂಡಿದ್ದರು. 8 ಮಂದಿಯಲ್ಲಿ ಒಬ್ಬರನ್ನು ತೀರ್ಪುಗಾರರು ಆಯ್ಕೆ ಮಾಡಿದ್ದು, ಶಾಸ್ತ್ರಾಗೆ ಕ್ವೀನ್ ಕರ್ನಾಟಕ ಒಲಿದಿದೆ. ಈ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

    ಬ್ಯೂಟಿಫುಲ್ ಐಸ್, ಬ್ಯೂಟಿಫುಲ್ ಸ್ಮೈಲ್, ಪರ್ಫೆಕ್ಟ್ ಪರ್ಸನಾಲಿಟಿ, ಜನರಲ್ ನಾಲೆಡ್ಜ್, ಸ್ಪೀಕಿಂಗ್ ಸ್ಟೈಲ್ ಹೀಗೆ ಹಲವು ರೌಂಡ್ ಗಳಲ್ಲಿ ಶಾಸ್ತ್ರಾ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇಂಟ್ರಡಕ್ಷನ್ ರೌಂಡ್, ಟಾಪ್ ಟೆನ್ ರೌಂಡ್, ಕಾಮನ್ ಕ್ವೆಸ್ಚನ್ ರೌಂಡ್ನಲ್ಲಿ ಈ ಸುಂದರಿ ಆಯ್ಕೆಯಾಗಿದ್ದಾರೆ.

    ಈ ಹಿಂದೆ ಮಿಸ್ ಮಂಗಳೂರು ಕಿರೀಟವನ್ನು ಶಾಸ್ತ್ರಾ ಮುಡಿಗೇರಿಸಿದ್ದಾರೆ. ಬಲ್ಗೇರಿಯಾದಲ್ಲಿ ನಡೆದ ಬ್ಯೂಟಿ ಕಾಂಟೆಸ್ಟ್ ನ ವಿನ್ನರ್ ಆಗಿರುವ ಶಾಸ್ತ್ರಾ, ಮಿಸ್ ಏಷ್ಯಾದಲ್ಲೂ ಪಾಲ್ಗೊಂಡಿದ್ದರು. ಜರ್ನಲಿಸಂ ಪದವಿ ಓದುತ್ತಿರುವ ಶಾಸ್ತ್ರಾ ಮುಂದೆ ಎಂಸಿಜೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.

    ಹಲವು ಚಲನಚಿತ್ರಗಳಲ್ಲೂ ಇವರಿಗೆ ಆಫರ್ ಬಂದಿದ್ದು, ಯಾವುದನ್ನೂ ಶಾಸ್ತ್ರ ಒಪ್ಪಿಕೊಂಡಿಲ್ಲ. ಐಎಫ್‍ಎಸ್ ಅಧಿಕಾರಿಯಾಗಬೇಕು ಅನ್ನೋ ಕನಸು ಇವರಿಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎಂಬ ಹಂಬಲ ಶಾಸ್ತ್ರಾರದ್ದು.

    ಮುಂದೆ ಪೆಗಸಸ್ ಸಂಸ್ಥೆ ಆಯೋಜಿಸುವ ಸೌತ್ ಇಂಡಿಯನ್ ಲೆವೆಲ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ನ್ಯಾಶನಲ್ ಲೆವೆಲ್ ನಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರಿನ ನಿಷ್ಪನ್ನಾ ಕ್ರಿಯೇಶನ್ಸ್ ಮೇಘನಾ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಸೀರೆಯನ್ನು ಹೆಚ್ಚು ಮೆಚ್ಚಿಕೊಳ್ಳುವ ಶಾಸ್ತ್ರಾ ಅದರಲ್ಲೇ ವಿಭಿನ್ನ ಡಿಸೈನ್ ಗಳನ್ನು ತೊಟ್ಟು ಕಾಂಟೆಸ್ಟ್ ಗೆ ಹೋಗ್ತಾರೆ.

    ಶಾಸ್ತ್ರಾ ಶೆಟ್ಟಿಗೆ ತಂದೆ-ತಾಯಿಯ ಸಂಪೂರ್ಣ ಪ್ರೋತ್ಸಾಹವಿದೆ. ಚಿಕ್ಕಂದಿನಿಂದಲೇ ಕುಟುಂಬದ ಕ್ವೀನ್ ಅಂತ ಕರೆಸಿಕೊಂಡಿದ್ದ ಇವರು, ಈಗ ಕರ್ನಾಟಕದ ಕ್ವೀನ್ ಆಗಿದ್ದಾರೆ. ತಂದೆ ತಾಯಿ ಸಂಪೂರ್ಣ ಪ್ರೋತ್ಸಾಹ ಇರೋದ್ರಿಂದ ನಾನು ಈ ಹಂತಕ್ಕೆ ತಲುಪಿದ್ದೇನೆ. ಅವರಿಗೆ ಯಾವ ನಿರೀಕ್ಷೆಯೂ ಇಲ್ಲ, ಅವರಿಂದ ಯಾವ ಅಡ್ಡಿಯೂ ಆಗಿಲ್ಲ. ಹೀಗಾಗಿ ನಾನು ಫ್ರೀ ಮೈಂಡ್ ನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ ಎಂದು ಶಾಸ್ತ್ರಾ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಭಿಪ್ರಾಯ ಹಂಚಿಕೊಂಡರು.

    ಚಿಕ್ಕ ಮಗುವಿನಿಂದ ಇಲ್ಲಿಯ ತನಕ ಮಗಳನ್ನು ಮುದ್ದಾಗಿ ಬೆಳೆಸಿದ್ದೇವೆ. ಆಕೆ ವಿದ್ಯಾಭ್ಯಾಸ, ನಡತೆ, ಕುಟುಂಬದ ಜೊತೆಗಿನ ಸಂಬಂಧದಲ್ಲಿ ಎಲ್ಲೂ ಹಿಂದೆ ಇದ್ದಾಳೆ ಅಂತ ನಮಗೆ ಅನ್ನಿಸಿಲ್ಲ. ಶಾಸ್ತ್ರಾ ನಮ್ಮ ಮಗಳು, ನಾವು ಆಕೆಯ ಹೆತ್ತವರು ಅಂತ ಹೇಳಿಕೊಳ್ಳಲು ಖುಷಿಯಾಗುತ್ತಿದೆ. ಸಿನಿಮಾ ಆಫರ್, ಮಾಡೆಲಿಂಗ್ ಗೆ ಬೇಡಿಕೆ ಬರ್ತಾನೇ ಇದೆ. ನಿರ್ಧಾರ ಆಕೆಯ ವೈಯಕ್ತಿಕ. ಅದರಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ. ಎಲ್ಲಕ್ಕಿಂತ ಆಕೆಯ ಭವಿಷ್ಯ ಮುಖ್ಯ ಎಂದು ಶಾಸ್ತ್ರಾ ತಂದೆ ಶಶಿ ಶೆಟ್ಟಿ ಮತ್ತು ತಾಯಿ ಶರ್ಮಿಳಾ ಶೆಟ್ಟಿ ಹೇಳಿದ್ರು.

    ಬ್ಯೂಟಿ ಕಾಂಟೆಸ್ಟ್, ಭಾಷಣ ಸ್ಪರ್ಧೆ, ಪೇಂಟಿಂಗ್, ಕವನ ಬರಿಯೋದ್ರಲ್ಲಿ ಹಿಡಿತವಿರುವ ಶಾಸ್ತ್ರಾ ಶೆಟ್ಟಿ, ಜರ್ನಲಿಸ್ಟ್ ಆಗ್ಬೇಕು ಅನ್ನೋ ಆಸೆಯನ್ನೂ ಹೊಂದಿದ್ದಾರಂತೆ. ವಿದ್ಯಾಭ್ಯಾಸ ಮುಗಿಸಿ ಬಾಲಿವುಡ್ ಗೆ ಹಾರೋ ಐಡಿಯಾ ಇದ್ಯಾ ಅಂತ ಕೇಳಿದ್ರೆ ಶಾಸ್ತ್ರಾ ಫುಲ್ ಸ್ಮೈಲ್ ಕೊಟ್ಟು ಸುಮ್ಮನಾದ್ರು.

  • ಸಾಬೀತಾಯ್ತು ಗೋಲ್ಮಾಲ್- ಕೃಷ್ಣಮಠದ ಪಾರ್ಕಿಂಗ್ ವ್ಯವಹಾರ ಅಧಿಕಾರ ಶೀರೂರು ಸ್ವಾಮೀಜಿಗೆ

    ಸಾಬೀತಾಯ್ತು ಗೋಲ್ಮಾಲ್- ಕೃಷ್ಣಮಠದ ಪಾರ್ಕಿಂಗ್ ವ್ಯವಹಾರ ಅಧಿಕಾರ ಶೀರೂರು ಸ್ವಾಮೀಜಿಗೆ

    ಉಡುಪಿ: ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಗೋಲ್ಮಾಲ್ ವಿರುದ್ಧ ಕಳೆದ ಕೆಲವು ದಿನಗಳ ಹಿಂದೆ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಿಡಿದೆದ್ದಿದ್ದರು. ಅಲ್ಲದೇ ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಜೆಸಿಬಿ ತಂದು ಒಡೆಸಿದ್ದರು. ಆದರೆ ಇದೀಗ ಪೇಜಾವರ ಶ್ರೀಗಳ ಆಪ್ತರು ಈ ಅಕ್ರಮದ ಹಿಂದೆ ಇದ್ದಾರೆ ಎಂದು ಸಾಬೀತಾಗಿದೆ. ಪಾರ್ಕಿಂಗ್ ಸ್ಥಳದ ಜವಾಬ್ದಾರಿ ಶೀರೂರು ಸ್ವಾಮೀಜಿ ಪಾಲಾಗಿದೆ.

    ಪೇಜಾವರ ಮಠದಲ್ಲಿ ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ ಸಭೆ ನಡೆದಿದೆ. ಅಷ್ಟಮಠಾಧೀಶರ ಅಭಿಪ್ರಾಯದಂತೆ ಶೀರೂರು ಸ್ವಾಮೀಜಿಗೆ ಪಾರ್ಕಿಂಗ್ ಸ್ಥಳದ ಜವಾಬ್ದಾರಿ ಕೊಡಲಾಗಿದೆ. ಪಾರ್ಕಿಂಗ್ ಶುಲ್ಕ ಸಂಗ್ರಹ ಹಾಗೂ ಸ್ಥಳದ ಕಟ್ಟಡಗಳ ವ್ಯವಹಾರ ಎಲ್ಲವನ್ನೂ ಶೀರೂರು ಸ್ವಾಮೀಜಿ ನೋಡಿಕೊಳ್ಳಬೇಕು ಎಂದು ಅಷ್ಟಮಠಗಳ ಸ್ವಾಮೀಜಿಗಳು ನಿರ್ಧಾರ ಮಾಡಿದ್ದಾರೆ.

    ಪಾರ್ಕಿಂಗ್ ರಸೀದಿ ಪುಸ್ತಕವನ್ನು ನಕಲು ಮಾಡಿದ್ದು, ಒಂದೇ ಸಂಖ್ಯೆ ಇರುವ ಪುಸ್ತಕಗಳು ತಪಾಸಣೆ ವೇಳೆ ಲಭ್ಯವಾಗಿದೆ. ಹೀಗಾಗಿ ಪಾರ್ಕಿಂಗ್ ನಲ್ಲಿ ನಡೆದ ಅವ್ಯವಹಾರವನ್ನು ಶೀರೂರು ಸ್ವಾಮೀಜಿ ಪೇಜಾವರ ಶ್ರೀಗಳ ಗಮನಕ್ಕೆ ತಂದಿದ್ದಾರೆ. ಆರೋಪ ಸಾಬೀತಾಗಿರುವುದರಿಂದ ಅಧಿಕಾರವನ್ನು ಶೀರೂರು ಸ್ವಾಮೀಜಿಗೆ ನೀಡಲಾಗಿದೆ. ಪಾರ್ಕಿಂಗ್ ಸ್ಥಳದ ಜವಾಬ್ದಾರಿ ಜೊತೆ ರಥಬೀದಿಯ ಆಸುಪಾಸಿನ ಅಂಗಡಿಗಳನ್ನು ಪಾರ್ಕಿಂಗ್ ಸ್ಥಳಕ್ಕೆ ಶಿಫ್ಟ್ ಮಾಡುವ ಕನಸಿದೆ ಎಂದು ಶೀರೂರು ಸ್ವಾಮೀಜಿ ಹೇಳಿದ್ದಾರೆ.

    ಶ್ರೀಕೃಷ್ಣ ಮಠದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಪೇಜಾವರ ಶ್ರೀ ಹಾಗೂ ಪರ್ಯಾಯ ಪಲಿಮಾರು ಸ್ವಾಮೀಜಿ ಸಹಿತ ಎಲ್ಲಾ ಮಠಾಧೀಶರ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಮಠ ಪರಿಸರ ಸೇವಾ ಪ್ರತಿಷ್ಠಾನದ ಸಭೆ ಪೇಜಾವರ ಮಠದ ವಿಜಯಧ್ವಜ ಛತ್ರದಲ್ಲಿ ನಡೆಯಿತು.

    ಸಭೆಯ ಬಳಿಕ ಮಾತನಾಡಿದ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ, ಟ್ರಸ್ಟ್ ವತಿಯಿಂದ ಪಾರ್ಕಿಂಗ್ ಹಣ ಸಂಗ್ರಹ ಉಸ್ತುವಾರಿಯಾಗಿ ಉದಯ ಸುಬ್ರಹ್ಮಣ್ಯ ಅವರನ್ನು ನೇಮಕ ಮಾಡಲಾಗಿತ್ತು. ಅವರು ಒಂದೇ ರೀತಿಯ ನಂಬರ್ ಇರುವ ಎರಡು ರಶೀದಿ ಪುಸ್ತಕಗಳನ್ನು ಇಟ್ಟುಕೊಂಡು ಪಾರ್ಕಿಂಗ್ ಹಣ ಸಂಗ್ರಹಿಸಿ ಅವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಶೀರೂರು ಸ್ವಾಮೀಜಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉದಯ ಅವರನ್ನು ಆ ಜವಾಬ್ದಾರಿಯಿಂದ ತೆಗೆದುಹಾಕಿದ್ದೇವೆ. ಅವರ ಬದಲು ಪಾರ್ಕಿಂಗ್ ಹಣ ಸಂಗ್ರಹದ ಜವಾಬ್ದಾರಿಯನ್ನು ಶೀರೂರು ಶ್ರೀಗಳಿಗೆ ವಹಿಸಿಕೊಡಲಾಗಿದೆ ಎಂದು ತಿಳಿಸಿದರು.

    ಪಾರ್ಕಿಂಗ್ ಪ್ರದೇಶದಲ್ಲಿರುವ ವಿಷ್ಣುಮೂರ್ತಿ ಅವರ ಎರಡು ಅಂಗಡಿಗಳಿಗೆ ಮಠಾಧೀಶರ ವಿರೋಧ ಇರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲು ಆದೇಶ ನೀಡಲಾಗಿದೆ. ಅದೇ ರೀತಿ ಬೇರೆ ಅಂಗಡಿಗಳನ್ನು ಕೂಡ ತೆರವುಗೊಳಿಸಬೇಕು ಎಂಬುದು ಶೀರೂರು ಸ್ವಾಮೀಜಿಗಳ ಅಪೇಕ್ಷೆ. ಅದಕ್ಕೆ ನಾವು ಎಲ್ಲ ಒಪ್ಪಿಗೆ ಕೊಟ್ಟಿದ್ದೇವೆ ಎಂದರು.

    ಕಳೆದ ಪರ್ಯಾಯ ಅವಧಿಯಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಮಠಕ್ಕೆ ಯಾವುದೇ ನಷ್ಟ ಆಗಿಲ್ಲ. ಅದಕ್ಕಿಂತ ಹೆಚ್ಚಿನ ಪಾಲು ಹಣವನ್ನು ನಾವು ಟ್ರಸ್ಟ್‍ಗೆ ಕೊಟ್ಟಿದ್ದೇವೆ. 50 ಲಕ್ಷ ರೂ. ಯಾತ್ರಿ ನಿವಾಸಕ್ಕೆ ಮತ್ತು 2.5 ಕೋಟಿ ರೂ. ವೆಚ್ಚದ ಯಾತ್ರಿ ನಿವಾಸ ಕಟ್ಟಡವನ್ನು ಪಾರ್ಕಿಂಗ್ ಪ್ರದೇಶದಲ್ಲಿ ಮಾಡಿದ್ದೇವೆ. ಹಾಗಾಗಿ ಟ್ರಸ್ಟ್‍ಗೆ ನಮ್ಮಿಂದ ಯಾವುದೇ ರೀತಿಯ ಅನ್ಯಾಯ ಆಗಲಿ, ನಷ್ಟ ಆಗಲಿ ಆಗಿಲ್ಲ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.

    ಇದು ಶ್ರೀ ಕೃಷ್ಣ ಮಠದ ಭಕ್ತರಿಗಾಗಿ ಮಾಡಿರುವ ಹೋರಾಟ. ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ರಥಬೀದಿ ಹಾಗೂ ಕೃಷ್ಣ ಮಠದ ಪರಿಸರ ವಾಹನ ಮುಕ್ತ ಹಾಗೂ ವಾಣಿಜ್ಯ ಮುಕ್ತ ಆಗಬೇಕು. ಆದರೆ ಕೆಲವರು ಅದನ್ನು ಹಾಳು ಮಾಡುವ ಯತ್ನ ಮಾಡುತ್ತಿದ್ದಾರೆ. ಈ ಕುರಿತು ಪೇಜಾವರ ಶ್ರೀಗಳಿಗೆ ಎಲ್ಲ ರೀತಿಯ ಆಧಾರಗಳನ್ನು ನೀಡಿದ್ದೇನೆ. ಮುಂದೆ ಪಾರ್ಕಿಂಗ್ ಪ್ರದೇಶದಲ್ಲಿ ಭಕ್ತರಿಗೆ ಬೇಕಾದ ಎಲ್ಲ ವ್ಯವಸ್ಥೆ ಹಾಗೂ ವಾಣಿಜ್ಯ ಅಂಗಡಿಗಳನ್ನು ಮಾಡಲಾಗುವುದು ಎಂದರು.

    ಮಠಗಳ ವತಿಯಿಂದ ಖರೀದಿಸಲಾದ ಐದೂವರೆ ಎಕರೆ ಜಾಗವನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ಶೀರೂರು ಶ್ರೀ ತಿಳಿಸಿದರು. ಸಭೆಯಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾಲ್ಲಭ ತೀರ್ಥ ಸ್ವಾಮೀಜಿ ಹಾಜರಿದ್ದರು.

  • ಮಣಿಪಾಲದ ಕೆಎಂಸಿ ವೈದ್ಯರಿಂದ 11 ದಿನದ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಸಕ್ಸಸ್

    ಮಣಿಪಾಲದ ಕೆಎಂಸಿ ವೈದ್ಯರಿಂದ 11 ದಿನದ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಸಕ್ಸಸ್

    ಉಡುಪಿ: ಜಿಲ್ಲೆಯ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರಿಂದ 11 ದಿನಗಳ ಹಸುಗೂಸಿಗೆ ಹೃದಯದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಹುಟ್ಟಿನಲ್ಲೇ ಇದ್ದ ಕಂಟಕದಿಂದ ಮಗುವಿನ ಪ್ರಾಣ ಉಳಿದಿದೆ.

    ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಹುಟ್ಟಿದ ಮಗುವಿನ ಉಸಿರಾಟದಲ್ಲಿ ಸಮಸ್ಯೆ ಕಾಣುತ್ತಿತ್ತು. ಹೃದಯದ ಬಡಿತ ವಿಪರೀತವಾಗಿತ್ತು. ದೇಹದ ಎಲ್ಲಾ ಭಾಗದ ಚರ್ಮ ತಣ್ಣಗಾಗಿತ್ತು. ಕೂಡಲೇ ಮಗುವನ್ನು ಕೆಎಂಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ, ದೊಡ್ಡ ರಕ್ತನಾಳ ಸ್ಥಾನ ಪಲ್ಲಟವಾಗಿದೆ. ಮಗುವಿನ ತಾಯಿ ಗರ್ಭ ಧರಿಸಿದ ಸಂದರ್ಭ ಅಸಹಜ ಬೆಳವಣಿಗೆಯಿಂದ ಈ ಸಮಸ್ಯೆ ಎದುರಾಗಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

    ಹೀಗಾಗಿ ಹೃದಯದ ಆಪರೇಶನ್ ಮಾಡಲು ನಿರ್ಧಾರ ಮಾಡಿದ್ದಾರೆ. ಪುಟ್ಟ ಮಗು ಆಗಿದ್ದರಿಂದ 10 ದಿನಗಳ ಕಾಲ ನಿಗಾ ಘಟಕದಲ್ಲಿಟ್ಟು, ಬಳಿಕ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೀಗ ಈ ಆಪರೇಷನ್ ಯಶಸ್ವಿಯಾಗಿ ನಡೆದಿದೆ. ಮಣಿಪಾಲ ಕಾರ್ಡಿಯಾಕ್ ಸರ್ಜನ್ ಡಾ. ಅರವಿಂದ ಬಿಷ್ಣೋಯ್ ಬಹಳ ಮುತುವರ್ಜಿಯಿಂದ ಆಪರೇಶನ್ ಮಾಡಿದ್ದಾರೆ.  ಇದನ್ನೂ ಓದಿ: ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ

    ಮಕ್ಕಳ ತಜ್ಞ ಡಾ, ಲೆಸ್ಲೀ ಲೂಯೀಸ್, ಹೃದ್ರೋಗ ತಜ್ಞ ಪದ್ಮಕುಮಾರ್, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮಾತನಾಡಿ, ಇದೊಂದು ಅಪರೂಪದ ಶಸ್ತ್ರಚಿಕಿತ್ಸೆ ವೈದ್ಯರು ಬಹಳ ರಿಸ್ಕ್ ತೆಗೆದುಕೊಂಡು ಮಗುವಿನ ಜೀವ ಉಳಿಸಿದ್ದಾರೆ. ಈಗ ಮಗು ಆರೋಗ್ಯಯುತವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಕ್ಕಳ ಆರೋಗ್ಯ ವಿಮೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.

    ಉಡುಪಿಯ ಆಸ್ಪತ್ರೆಯಲ್ಲಿ ಮಗು ಹುಟ್ಟಿದಾಗ ಮಗುವಿನಲ್ಲಿ ಸಮಸ್ಯೆ ಇರುವುದಾಗಿ ತಂದೆ ತಾಯಿಯವರಿಗೆ ಕಂಡು ಬಂತು. ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಸಹ ಹೆಚ್ಚಿನ ಚಿಕಿತ್ಸೆ ಸೂಚಿಸಿದರು. ಮಗು ವೇಗವಾಗಿ ಉಸಿರಾಡುತ್ತಿತ್ತು, ಕೆಲವೊಮ್ಮೆ ಉಸಿರಾಡಲು ಕಷ್ಟಪಡುತ್ತಿತ್ತು, ಹೃದಯ ಬಡಿತ ತೀವ್ರವಾಗಿತ್ತು ಮತ್ತು ಚರ್ಮ ತಣ್ಣಗಿತ್ತು. ತಕ್ಷಣ ಮಗುವಿನ ಹೆತ್ತವರು ಕಸ್ತೂರ್ಬಾ ಆಸ್ಪತ್ರೆಯ ಶಿಶುಗಳ ತೀವ್ರ ನಿಘಾ ಘಟಕದಲ್ಲಿ ಶಿಶುರೋಗ ತಜ್ಞರಾದ ಡಾ. ಲೆಸ್ಲಿ ಲೂಯಿಸ್‍ವರನ್ನು ಕಂಡರು. ಹೃದ್ರೋಗ ತಜ್ಞರಾದ ಡಾ. ಪದ್ಮಕುಮಾರ್‍ರವರು ತಪಾಸಣೆ ನಡೆಸಿ `ಮಗು ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರೀಸ್ (ಟಿಜಿಎ) ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಗಂಭೀರ ಜನ್ಮಜಾತ ಹೃದಯ ನ್ಯೂನತೆಯಿಂದ ಬಳಲುತ್ತಿದೆ’ ಎಂದು ಅಭಿಪ್ರಾಯಪಟ್ಟರು.

    ಆರಂಭಿಕ ಹಂತಗಳಲ್ಲಿ ಇದನ್ನು ಕಂಡುಕೊಳ್ಳುವ ಏಕೈಕ ಮಾರ್ಗವೆಂದರೆ ಭ್ರೂಣದ ಹೃದಯ ಎಕೋಕಾರ್ಡಿಯೋಗ್ರಫಿ, ಇದನ್ನು ಹೆಚ್ಚು ಅಪಾಯದ ಗರ್ಭಧಾರಣೆ ಹೊಂದಿರುವ ಗರ್ಭಿಣಿ ರೋಗಿಗಳಿಗೆ ಅಂದರೆ ಹೈ ರಿಸ್ಕ್ ಪ್ರೆಗ್ನೆನ್ಸಿ ಪೇಶೆಂಟುಗಳಿಗೆ ಮಾಡಲಾಗುವುದು. ಈ ಸೌಲಭ್ಯ ಮತ್ತು ತಾಂತ್ರಿಕ ಪರಿಣತಿಯನ್ನು ಹೊಂದಿರುವ ಸಿಬ್ಬಂದಿಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಾತ್ರ ಇರುವುದು ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಟಾಮ್ ಅಭಿಪ್ರಾಯಪಟ್ಟರು. ವೈದ್ಯರ ಮೀಟಿಂಗ್ ನಲ್ಲಿ ಏನು ಮಾಡಬಹುದು ಎಂಬ ಚರ್ಚೆ ಅಂದು ಆರಂಭವಾಯ್ತು.

    ಗರ್ಭ ಧರಿಸಿದ ಮೊದಲ 8 ವಾರಗಳಲ್ಲಿ ಭ್ರೂಣದ ಹೃದಯದ ಅಸಹಜ ಬೆಳವಣಿಗೆಯಿಂದಾಗಿ ಹೃದಯದಿಂದ ಶ್ವಾಸಕೋಶಗಳಿಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತವನ್ನು ಕೊಂಡೊಯ್ಯುವ ದೊಡ್ಡ ರಕ್ತನಾಳಗಳು ಅದಲು ಬದಲಾಗುತ್ತವೆ. ದೇಹದ ಭಾಗಗಳಿಗೆ ಆಮ್ಲಜನಕದ ಪೂರೈಕೆ ಸಮರ್ಪಕವಾಗಿರಲಿಲ್ಲ ಮತ್ತು ಶಿಶುಗಳ ಸುಸಜ್ಜಿತ ತೀವ್ರ ನಿಘಾ ಘಟಕದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಅವಶ್ಯಕ ಆರೈಕೆಯನ್ನು ಒದಗಿಸಿದ ನಂತರ ಮಗುವನ್ನು ಹೃದಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕಳುಹಿಸಲಾಯಿತು. ಈ ರೀತಿಯ ಪ್ರಕರಣಗಳನ್ನು ಮೊದಲು ಬೆಂಗಳೂರಿಗೆ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗುತ್ತಿತ್ತು. ಆದರೆ ಬೆಂಗಳೂರಿಗೆ ಹೋಗುವ ತನಕ ಶಿಶು ಬದುಕುಳಿಯುವ ಭರವಸೆ ಇರುತ್ತಿರಲಿಲ್ಲ. ಇದಲ್ಲದೆ, ಸಾರಿಗೆ ವ್ಯವಸ್ಥೆಗಳಿಗೆ, ವೈದ್ಯರು, ದಾದಿಯರು ಮತ್ತು ಇತರೆ ಅಗತ್ಯ ವೆಚ್ಚವು ಸುಮಾರು 60000 – ವರೆಗೆ ಆಗುತ್ತದೆ ಎಂದು ಮನಗಂಡ ವೈದ್ಯರು ಮಗುವನ್ನು ಉಳಿಸಲು ಮುಂದಾದರು.

    ತಜ್ಞರ ಪ್ರಕಾರ, ಇಂತಹ ಶಿಶುಗಳು ಒಂದು ತಿಂಗಳು ಮೀರಿ ಬದುಕುವುದಿಲ್ಲ. ಮತ್ತು ಶಿಶುಗಳ ಉಳಿವಿಗಾಗಿ ಶಸ್ತ್ರಚಿಕಿತ್ಸೆಯೊಂದೇ ಏಕೈಕ ಮಾರ್ಗವಾಗಿದೆ. ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು ಕನ್ಸಲ್ಟಂಟ್ ಕಾರ್ಡಿಯಾಕ್ ಸರ್ಜನ್ ಆಗಿರುವ ಡಾ. ಅರವಿಂದ ಬಿಷ್ಣೋಯ್‍ಯವರು ಸಾಮಾನ್ಯವಾಗಿ, ಕಡಿಮೆ ಆಮ್ಲಜನಕಯುಕ್ತ ರಕ್ತ (ನೀಲಿ) ದೇಹದ ಭಾಗಗಳಿಂದ ಬಲ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ, ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಅಲ್ಲಿಂದ ಅದನ್ನು ಹೃದಯವು ಪಲ್ಮನರಿ ಅಪಧಮನಿಗೆ ಪಂಪ್ ಮಾಡುತ್ತದೆ ಮತ್ತು ಅಲ್ಲಿ ಅದು ಶ್ವಾಸಕೋಶಗಳಿಂದ ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ. ಆಮ್ಲಜನಕದಿಂದ ಸಮೃದ್ಧವಾದ ರಕ್ತವು (ಕೆಂಪು) ಶ್ವಾಸಕೋಶಗಳಿಂದ ಎಡ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ ಮತ್ತು ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಬಳಿಕ ಹೃದಯವು ಅದನ್ನು ಅಯೋರ್ಟಾಕ್ಕೆ ಪಂಪ್ ಮಾಡಿ ದೇಹದ ಉಳಿದ ಭಾಗಗಳಿಗೆ ಕಳುಹಿಸುತ್ತದೆ. ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರಿ ಅಥವಾ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿಯಲ್ಲಿ ಅಯೋರ್ಟಾವು ಬಲ ಹೃತ್ಕುಕ್ಷಿಗೆ ಮತ್ತು ಪಲ್ಮನರಿ ಅಪಧಮನಿ ಎಡ ಹೃತ್ಕುಕ್ಷಿಗೆ ಜೋಡಣೆಯಾಗಿರುತ್ತದೆ. ಅಂದರೆ ಇದು ಹೃದಯದ ಸಾಮಾನ್ಯ ಚಟುವಟಿಕೆಗೆ ವಿರುದ್ಧವಾಗಿತ್ತು. ಅಪಧಮನಿಗಳನ್ನು ಅದಲು ಬದಲು ಮಾಡುವುದನ್ನು ಒಳಗೊಂಡಿರುವ ಬಹಳ ಸಂಕೀರ್ಣವಾದ ಟಿಜಿಎ ಶಸ್ತ್ರಚಿಕಿತ್ಸೆಗೆ ಒಳಗಾದ ಶಿಶುಗಳು ಸಹಜ ಬೆಳವಣಿಗೆ ಹೊಂದುತ್ತಾರೆ. ಎಂಬುದಾಗಿ ಡಾ. ಅರವಿಂದ ಬಿಷ್ಣೋಯ್ ಹೇಳಿದರು.

    11 ದಿನದ ಮಗುವಿನ ಶಸ್ತ್ರಚಿಕಿತ್ಸೆಯ ಬಳಿಕ ಡಾ. ಲೆಸ್ಲಿ ಲೂಯಿಸ್‍ರವರ ನೇತೃತ್ವದಲ್ಲಿ ಶಿಶುರೋಗ ತಜ್ಞರು ಮಗು ಚೇತರಿಸಿಕೊಳ್ಳಲು ಅಗತ್ಯವಿರುವ ಆರೈಕೆಯನ್ನು ಒದಗಿಸಿದರು. ಈಗ ಮಗು ಈಗ ಚೆನ್ನಾಗಿ ಚೇತರಿಸಿಕೊಂಡಿದೆ. ಆಪರೇಶನ್ ಆಗಿ ಒಂದು ವಾರ ನಿಗಾ ಘಟಕದಲ್ಲಿ ಮಗುವಿಗೆ ಶುಶ್ರೂಶೆ ನೀಡಲಾಗಿದೆ. ಈಗ ಮಗು ಶೇ. 90 ಸುಧಾರಿಸಿದೆ ದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಮಾಹಿತಿ ನೀಡಿದರು.

    ಟಿಜಿಎ ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿ ಬಹಳ ಅಪರೂಪವಾಗಿ ಸಂಭವಿಸುತ್ತದೆ. ಇಂಥ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ವಿಶೇಷ ಕೌಶಲ ಮತ್ತು ನಿಖರತೆಯ ಅವಶ್ಯಕತೆ ಇರುತ್ತದೆ. ಇಂಥ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮುಂಚೆ ಮತ್ತು ನಂತರ ನೀಡುವ ಆರೈಕೆಯು ಮಗು ಚೇತರಿಸಿಕೊಳ್ಳುವಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ ಎಂದು ಹೇಳಿದರು.

  • ಚಂದ್ರಗ್ರಹಣದ ವೇಳೆ ಏನು ಮಾಡಬಾರದು? ಅನಿಷ್ಟ ಫಲ ಏನು? – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳ್ತಾರೆ ಓದಿ

    ಚಂದ್ರಗ್ರಹಣದ ವೇಳೆ ಏನು ಮಾಡಬಾರದು? ಅನಿಷ್ಟ ಫಲ ಏನು? – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳ್ತಾರೆ ಓದಿ

    ಉಡುಪಿ: ಇಂದು ಶತಮಾನದ ಚಂದ್ರಗ್ರಹಣ ಸಂಜೆ ನಡೆಯಲಿದೆ. ದೇವಸ್ಥಾನಗಳಲ್ಲಿ ಪೂಜಾ ಸಮಯ ಬದಲಾಗಿದೆ. ಖಗೋಳ ಶಾಸ್ತ್ರಜ್ಞರು ಆಗಸದಲ್ಲಾಗುವ ಕೌತುಕದ ಬಗ್ಗೆ ನಿಗಾ ಇಟ್ಟಿದ್ದಾರೆ. ಈ ನಡುವೆ ಉಡುಪಿ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಚಂದ್ರಗ್ರಹಣದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಚಂದ್ರಗ್ರಹಣ ಬಗ್ಗೆ ಬುಧವಾರ, ಹುಣ್ಣಿಮೆಯ ದಿನ ಸಂಜೆ 5.22ಗೆ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಆಶ್ಲೇಷಾ ನಕ್ಷತ್ರದಲ್ಲಿ ಸಂಭವಿಸಲಿದೆ. ಗ್ರಹಣ ಸ್ಪರ್ಶ- 5.22 ಆದರೆ ಮಧ್ಯ ಕಾಲ 7.04, ಉನ್ಮೀಲನ 7.42, ಗ್ರಹಣ ಮೋಕ್ಷ ಕಾಲ- 8.46ಕ್ಕೆ ಆಗಲಿದೆ. ಈ ಗ್ರಹಣದಿಂದ ಕರ್ಕ, ಸಿಂಹ, ಮೇಷ, ಧನುಸ್ಸು ರಾಶಿಗಳಿಗೆ ಪುಷ್ಯ, ಆಶ್ಲೇಷ, ಮಘ, ಜ್ಯೇಷ್ಠ, ರೇವತಿ, ನಕ್ಷತ್ರದವರಿಗೂ ಅನಿಷ್ಟವಿದೆ. ಇದನ್ನೂ ಓದಿ: ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಯಾವ ರಾಶಿಯಲ್ಲಿ ಗ್ರಹಣ ಹಿಡಿಯುತ್ತೋ ಆ ರಾಶಿಗೆ,ಅದರ ಮುಂದಿನ ರಾಶಿ ಮತ್ತು ಅದರ ತ್ರಿಕೋನ(ಸಿಂಹ, ಧನು, ಮೇಷ) ರಾಶಿಗಳಿಗೆ ಪ್ರಭಾವವಿದೆ. ಯಾವ ನಕ್ಷತ್ರದಲ್ಲಿ ಗ್ರಹಣ ಹಿಡಿಯುತ್ತದೆಯೋ ಅದರ ಅಧಿಪತಿಯ ಎಲ್ಲಾ ನಕ್ಷತ್ರಗಳಿಗೆ (ಆಶ್ಲೇಷಾ, ಜ್ಯೇಷ್ಠ, ರೇವತಿ, ಬುಧ ಅಧಿಪತಿ) ಪ್ರಭಾವ ಇರುತ್ತದೆ. ಇದು ಗ್ರಹಣ ಸಿದ್ಧಾಂತ.

    ಅನಿಷ್ಟ ಫಲ ಏನು?
    ಚಂದ್ರನು ಮನೋ ಕಾರಕ ಗ್ರಹ. ಈ ಗ್ರಹಣದಿಂದಾಗಿ ಇವನ ಬೆಳಕನ್ನು ಕೆಲ ಸಮಯದವರೆಗೆ ತಡೆ ಹಿಡಿದಂತಾಗುತ್ತದೆ .ಆಗ ಚಂದ್ರನ ಪ್ರಭಾವ ಅಷ್ಟು ಹೊತ್ತು ಇಲ್ಲದಂತಾಗಿ ಮನೋ ಖಿನ್ನತೆಗಳಾಗಬಹುದು. ಎಲ್ಲರಿಗೂ ಆಗುತ್ತದೆ ಎಂದಲ್ಲ ಅನೇಕರಿಗೆ ಖಿನ್ನತೆಗಳಿದ್ದರೆ ಅದು ಉಲ್ಭಣಿಸಬಹುದು. ಆ ಖಿನ್ನತೆ ರೋಗಗಳಿಗೂ ಕಾರಣವಾಗಬಹುದು. ಇದನ್ನೂ ಓದಿ: 150 ವರ್ಷಗಳ ಬಳಿಕ ರಕ್ತಚಂದಿರ ಗ್ರಹಣ- ತಿರುಪತಿ, ಧರ್ಮಸ್ಥಳ, ಕುಕ್ಕೆಯಲ್ಲಿ ದರ್ಶನವಿಲ್ಲ

    ಮನೋ ಬಲ ಇರುವವರಿಗೂ ಬಲದ ಕುಸಿತವಾದರೂ ಅದು ಕೂಡಾ ದೋಷ ಪ್ರದವೇ ಆಗುತ್ತದೆ. ಅಲ್ಲದೆ ಗ್ರಹಣ ಸಂಭವಿಸಿದಾಗ ಇದು ಭೂಮಿಯ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ. ಭೂಮಿಯ ಮೇಲೆ ಪರಿಣಾಮ ಬಿದ್ದಾಗ ಅನುಭವಿಸುವವರು ನಾವಲ್ಲವೇ? ಅದರಲ್ಲೂ ವಿಶೇಷ ಪರಿಣಾಮ ಯಾರಿಗಂದರೆ, ಮೇಲೆ ತಿಳಿಸಿದ ರಾಶಿ, ನಕ್ಷತ್ರ ಜನಿತರಿಗೆ ಇರುತ್ತದೆ. ವಿಜ್ಞಾನಿಗಳಿಗೆ ಇದು ಕುತೂಹಲ ತರುವ ಖಗೋಳ ವೈಚಿತ್ರ್ಯ ಆದರೂ ಸಾಮಾನ್ಯರಿಗೆ ಇದು ಅನಿಷ್ಟವೇ ಆಗುತ್ತದೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗಲ್ಲ, ಸಮ್ಮಿಶ್ರ ಸರ್ಕಾರ ವರ್ಷದೊಳಗೆ ಬಿದ್ದೋಗುತ್ತೆ: ಉಡುಪಿ ಜ್ಯೋತಿಷಿ

    ಈ ಅನಿಷ್ಟವನ್ನು ಹೇಗೆ ದೂರಮಾಡಬಹುದು?
    `ಲಂಘನಂ ಪರಮೌಷಧಂ ಎಂಬಂತೆ ಆ ದಿನ ಮಧ್ಯಾಹ್ನ ಭೋಜನದ ನಂತರ ಉಪವಾಸ ಇರಬೇಕು. ಇದಕ್ಕಿಂತ ದೊಡ್ಡ ಪರಿಹಾರವಿಲ್ಲ. ಹೊಟ್ಟೆ ತುಂಬಿದ್ದರಲ್ಲವೇ ಅಧಿಕ ಪ್ರಸಂಗಕ್ಕಿಳಿಯುವುದು. ಹೊಟ್ಟೆ ಚುರು ಚುರು ಅಂದಾಗ ಮನುಷ್ಯ ಅಧಿಕ ಪ್ರಸಂಗ ಮಾಡಲು ಹೋಗುವುದಿಲ್ಲ.

    ಉಪವಾಸ ಪರಿಹಾರವೇ ಶ್ರೇಷ್ಠ
    ಗ್ರಹಣ ಕಾಲದಲ್ಲಿ ಉಪವಾಸ ಶ್ರೇಷ್ಠ. ಮಿತ ಆಹಾರ ಸೇವಿಸಿದರೆ ಉತ್ತಮ. ಇನ್ನೊಂದೆಡೆ ಜಪ, ತಪ, ಧ್ಯಾನಗಳ ಮೂಲಕ ಮನೋ ನಿಯಂತ್ರಣ ಸಾಧ್ಯವಿದೆ. ಅದನ್ನೂ ಗ್ರಹಣ ಕಾಲದಲ್ಲಿ ಮಾಡಬಹುದು. ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಯನಕಾರರು ಈ ಗ್ರಹಣ ಪರ್ವಕಾಲದಲ್ಲಿ ತಮ್ಮ ತಮ್ಮ ಕ್ರಿಯೆಗಳನ್ನು ಮಾಡಿದರೆ ಅತಿಶಯ ಫಲವಿದೆ.

    ಪ್ರಾಣಾಯಾಮ ಕ್ರಿಯೆಯೂ ಅತ್ಯುತ್ತಮ. ಲೋಕ ಕಲ್ಯಾಣಕ್ಕಾಗಿ ಗ್ರಹಣ ಶಾಂತಿಯನ್ನೂ ಮಾಡಬಹುದು. ಸ್ತ್ರೀ ಪುರುಷರು ಅಂದರೆ ಪತಿ ಪತ್ನಿಯರು ಯಾವುದೇ ವಿನೋದ ಕ್ರಿಯೆಗಳನ್ನು ಮಾಡಲೇಬಾರದು. ಇದು ಉತ್ಪಾತ ಶಿಶುವಿನ ಜನನಕ್ಕೆ ಕಾರಣವಾಗುತ್ತದೆ. ಅಂದರೆ ಸೈಕಿಕ್ ಮಕ್ಕಳಾಗಬಹುದು ಎಂದರ್ಥ. ಅಲ್ಲದೆ ಗ್ರಹಣವೂ ಇಲ್ಲ, ಗ್ರಿಹಣವೂ ಇಲ್ಲ ಎಂದು ಗ್ರಹಣ ಕಾಲದಲ್ಲಿ ನಿಷೇಧಿಸಲ್ಪಟ್ಟದ್ದನ್ನು ಮಾಡಿದರೆ ಮುಂದೆ ಶಾಶ್ವತವಾಗಿ ಎಲ್ಲವನ್ನೂ ನಿಷೇಧ ಮಾಡಲೇಬೇಕಾದೀತು. ಕೆಲ ರೋಗಗಳಿಗೆ ಪಥ್ಯ ಮಾಡಬೇಕು ಎಂದು ವೈದ್ಯರು ಹೇಳಿದಂತೆ. ಹಾಗಾಗಿ ಗ್ರಹಣಗಳು ಅಸಮಾನ್ಯ ಖಗೋಳ ವೈಚಿತ್ರ್ಯ. ಇದು ಇಡೀ ಜಗತ್ತಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಇದನ್ನೂ ಓದಿ:  ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ

    ಗ್ರಹಣದ ಫಲ
    ಧನಾಗ್ರಹ, ಧರ್ಮದ ಆಧಾರದಲ್ಲಿ ಭಯೋತ್ಪಾದನೆ ಮಾಡುವ ಆಗ್ರಹಿಗಳಿಗೆ, ಜಿಹಾದಿ ಎಂದು ಹಾರಾಡುವ ಆಗ್ರಹಿಗಳಿಗೆ ಇದು ನಿಶ್ಚಿತವಾಗಿ ತೊಂದರೆ ನೀಡುವ ಗ್ರಹಣವಾಗಿದೆ. ಈ ಗ್ರಹಣ ಒಂದೇ ಸಾಲದು ಎಂದು ಇನ್ನೊಂದು ಇಂತಹದ್ದೇ ಗ್ರಹಣ ಈ ವರ್ಷದ ಜುಲೈ 28 ರಂದು ಸಂಭವಿಸಲಿದೆ. ಒಂದೇ ವರ್ಷ ಒಂದಕ್ಕಿಂತ ಹೆಚ್ಚು ಗ್ರಹಣ ಸಂಭವಿಸಿದರೆ ಜಗತ್ತಿನಲ್ಲಿ ನಮ್ಮದೇ ಧರ್ಮ ಶ್ರೇಷ್ಠ ಎನ್ನುವ ಮತಾಂಧರಿಗೆ ಮಾರಣ ಹೋಮವನ್ನೇ ಮಾಡಿಸುತ್ತದೆ. ಅವರ ಮೇಲೆ ಈ ಗ್ರಹಣದ ಪ್ರಭಾವವೂ ಬೀರಿದರೆ ಆತ್ಮಾಹುತಿ ದಳ (ಸುಸೈಡ್ ಬಾಂಬರ್) ಗಳಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸಾಯಬಹುದು.

    ದೇವಸ್ಥಾನಗಳ ಸಂಪರ್ಕ ಇರುವವರು ಯಾರು ವೇದೋಕ್ತ ಜೀವನ ನಡೆಸುವುದಿಲ್ಲವೋ ಅವರಿಗೆ ಅಪಾಯವಿದೆ. ಗೋ ಭಕ್ಷಕರಿಗೆ, ಕಾಲ ವಿವೇಚನೆ ಇಲ್ಲದ ಕುಡುಕರಿಗೆ, ಅಕಾಲ ಭೋಜನ ಮಾಡುವವರಿಗೆ, ಕಂಡ ಕಂಡಲ್ಲಿ ತಿನ್ನುವ ಚಾಳಿ ಇರುವವರಿಗೆ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

    ಸಾಮೂಹಿಕ ನಮಾಜ್ ಮಾಡಿದ್ರೆ ಉತ್ತಮ: ಇಂದಿನ ಚಂದ್ರಗ್ರಹಣ ಮುಸ್ಲೀಮರ ಮೇಲೂ ಪ್ರಭಾವ ಬೀರುತ್ತದೆ. ಮುಸಲ್ಮಾನರು ಚಂದ್ರನ ಚಲನೆಯನ್ನು ನಂಬುವವರು. ಚಂದ್ರನನ್ನೇ ಅವಲಂಭಿಸುವವರು. ಮುಸಲ್ಮಾನರು ಎಲ್ಲರಿಗಿಂತ ಹೆಚ್ಚು ಧರ್ಮಪ್ರಿಯರು. ಹೀಗಾಗಿ ಮುಸಲ್ಮಾನರೂ ಗ್ರಹಣ ಸಂದರ್ಭ ಕುರಾನ್ ಪಠಿಸಿ ನಮಾಜ್ ಮಾಡಿದರೆ ಒಳ್ಳೆದಾಗುತ್ತದೆ. ಬೆಳಕನ್ನು ಎಲ್ಲರೂ ಗ್ರಹಣ ಮಾಡುತ್ತೇವೆ. ಚಂದ್ರ- ಸೂರ್ಯನಿಗೆ ಜಾತಿ ಧರ್ಮ ಇಲ್ಲ. ಹೀಗಾಗಿ ಚಂದ್ರನನ್ನು ಅತಿಯಾಗಿ ಇಷ್ಟಪಡುವ ವ್ಯಕ್ತಿತ್ವ ಮುಸಲ್ಮಾನರಿಗೆ ಇರುತ್ತದೆ. ಹೀಗಾಗಿ ನಮಾಜ್ ಮಾಡಬೇಕು, ಉಪವಾಸ ಮಾಡಿದ್ರೆ ಉತ್ತಮ. ಚಂದ್ರ ಮನೋಕಾರಕ ಆಗಿದ್ದಾನೆ. ಹಾಗಾಗಿ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮಗಳು ಜಾಸ್ತಿ. ಹೀಗಾಗಿ ಮುಸಲ್ಮಾನರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

    1836ರ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಪುಸ್ತಕ ಓದಿದ್ದೇನೆ. ಅದು ಗ್ರಹಣದ ಬಗ್ಗೆ ಹೆಚ್ಚು ಗಮನ ಚೆಲ್ಲುತ್ತದೆ. ಭಾರತದಿಂದಲೇ ಕಳ್ಳತನವಾದ ಗ್ರಂಥ ಅದು. 155 ವರ್ಷಗಳ ನಂತರ 3 ಗಂಟೆಗಳ ಕಾಲ ಈ ಗ್ರಹಣ ನಡೆಯುತ್ತದೆ. ಮೂರು ಗಂಟೆ ಚಂದ್ರನ ಕಿರಣ ಭೂಮಿಗೆ ಬೀಳುವುದಿಲ್ಲ. ಒಂದು ಕ್ಷಣ ಬೆಳಕು ಇಲ್ಲವಾದ್ರೂ ಬಹಳ ಸಮಸ್ಯೆ ಆಗುತ್ತದೆ. ಹೀಗಾಗಿ ಇಂದು ನಡೆಯುವ ಮೂರು ಗಂಟೆಗಳ ಗ್ರಹಣಕ್ಕೆ ಹೆಚ್ಚಿನ ಮಹತ್ವವಿದೆ.

    ಉಪವಾಸ ಮಾಡಿದಷ್ಟು ಉತ್ತಮ. ಗ್ರಹಣ ಕಾಲದಲ್ಲಿ ಭಾವನೆಗಳು ಉದ್ದೀಪನಗೊಳ್ಳುತ್ತದೆ. ಹೊಟ್ಟೆ ತುಂಬಿದರೆ ಹಲವು ವಿಚಾರಗಳು ಮನಸ್ಸಿಗೆ ಬರುತ್ತದೆ. ಆದ್ರೆ ಉಪವಾಸ ಮಾಡಿದ್ರೆ ಸಾತ್ವಿಕ ವಿಚಾರಗಳ ಚಿಂತನೆ ಬರುತ್ತದೆ. ದೇವರ ಧ್ಯಾನ- ತಪಸ್ಸು, ಭಜನೆ ಮಾಡಬೇಕು. ಹಿಂಸೆ-ಕ್ರೌರ್ಯ ಇರುವ ದೃಶ್ಯಗಳನ್ನು ನೋಡದೇ ಇರುವುದು ಒಳ್ಳೆಯದು.

    ಗ್ರಹಣಕ್ಕೆ ಯಾರೂ ಹೆದರಬೇಕಾಗಿಲ್ಲ. ಗ್ರಹಣದ ಮುನ್ಸೂಚನೆಗಳನ್ನು ಪಾಲಿಸಿದರೆ ಯಾರಿಗೂ ಸಮಸ್ಯೆಯಿಲ್ಲ. ಚಂದ್ರನನ್ನು ನೋಡುವುದೂ ತಪ್ಪಲ್ಲ. ವಿಜ್ಞಾನಿಗಳಿಗೆ ಕುತೂಹಲ ಇರುವಾಗ ಜನರೂ ಈ ಬಗ್ಗೆ ಕುತೂಹಲ ಇಟ್ಟುಕೊಳ್ಳುವುದರಲ್ಲ ತಪ್ಪಿಲ್ಲ. ಆದ್ರೆ ಚಂದ್ರಗ್ರಹಣದ ಬಗ್ಗೆ ಯಾರಲ್ಲೂ ಭಯಬೇಡ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.