Tag: ಉಡುಪಿ

  • ಅಪಘಾತವಾಗಿ ಮೃತಪಟ್ಟ ತಾಯಿಮಂಗದ ಹೊಟ್ಟೆಯಿಂದ ಹೊರಬಂದ ಮರಿ- ಕರುಳ ಬಳ್ಳಿ ಕತ್ತರಿಸಿ ರಕ್ಷಣೆ

    ಅಪಘಾತವಾಗಿ ಮೃತಪಟ್ಟ ತಾಯಿಮಂಗದ ಹೊಟ್ಟೆಯಿಂದ ಹೊರಬಂದ ಮರಿ- ಕರುಳ ಬಳ್ಳಿ ಕತ್ತರಿಸಿ ರಕ್ಷಣೆ

    ಉಡುಪಿ: ಅಪಘಾತದಲ್ಲಿ ಮೃತಪಟ್ಟಿದ್ದ ತಾಯಿ ಮಂಗನ ಹೊಟ್ಟೆಯಿಂದ ಹೊರಬಂದಿದ್ದ ಮರಿಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಅಲೆವೂರು ಪಂಚಾಯತ್ ವ್ಯಾಪ್ತಿಯ ಕರ್ವಾಲಿನಲ್ಲಿ ನಡೆದಿದೆ.

    ಉಡುಪಿ ಸಮೀಪದ ಅಲೆವೂರು ಪಂಚಾಯತ್ ವ್ಯಾಪ್ತಿಯ ಕರ್ವಾಲಿನಲ್ಲಿ ಅಪರಿಚಿತ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿದ ಮಂಗ ಸಾವನ್ನಪ್ಪಿತ್ತು. ಈ ವೇಳೆ ಗರ್ಭಿಣಿ ಮಂಗದ ಹೊಟ್ಟೆಯಲ್ಲಿದ್ದ ಮರಿ ಹೊರಗೆ ಎಸೆಯಲ್ಪಟ್ಟು ಸಾವಿನಂಚಿನಲ್ಲಿ ಸಿಲುಕಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಮಂಗದ ಮರಿಯ ಕರುಳ ಬಳ್ಳಿಯನ್ನು ಕತ್ತರಿಸಿ ಮರಿಯನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಅಲೆವೂರು ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ಹಾಗೂ ರಂಜಿತ್ ಎಂಬವರಿಬ್ಬರು ಮರಿ ಮಂಗದ ರಕ್ಷಣೆ ಮಾಡಿದ್ದಾರೆ. ನಂತರ ತಾಯಿ ಮಂಗವನ್ನು ಅಲ್ಲೇ ಸಮೀಪ ಮಣ್ಣು ಮಾಡಿದ್ದಾರೆ. ಮರಿ ಮಂಗವನ್ನು ರಂಜಿತ್ ತಮ್ಮ ಮನೆಗೆ ಕೊಂಡೊಯ್ದು ಆರೈಕೆ ಮಾಡಿದ್ದಾರೆ. ನಂತರ ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಪಂಚಾಯತ್ ಅಧ್ಯಕ್ಷರು ಹಾಗೂ ಸ್ಥಳೀಯ ವ್ಯಕ್ತಿ ಮೂಕ ಪ್ರಾಣಿಯ ಪ್ರಾಣ ಉಳಿಸಿದ್ದಕ್ಕೆ ಶ್ಲಾಘನೆಗೆ ವ್ಯಕ್ತವಾಗಿದೆ.

  • ಪ್ರಧಾನಿಯವರದ್ದು ಸಣ್ಣತನ, ಸಿಎಂರನ್ನು ಆಹ್ವಾನಿಸಿ ಶಿಷ್ಟಾಚಾರ ಪಾಲಿಸಲು ಆಗಲ್ವಾ- ದಿನೇಶ್ ಗುಂಡೂರಾವ್ ವಾಗ್ದಾಳಿ

    ಪ್ರಧಾನಿಯವರದ್ದು ಸಣ್ಣತನ, ಸಿಎಂರನ್ನು ಆಹ್ವಾನಿಸಿ ಶಿಷ್ಟಾಚಾರ ಪಾಲಿಸಲು ಆಗಲ್ವಾ- ದಿನೇಶ್ ಗುಂಡೂರಾವ್ ವಾಗ್ದಾಳಿ

    ಉಡುಪಿ: ಮೈಸೂರು ಕಾರ್ಯಕ್ರಮಕ್ಕೆ ಸಿಎಂ ಗೆ ಆಹ್ವಾನ ನೀಡದೇ ಇರುವುದು ಮೋದಿಯವರ ಸಣ್ಣತನ. ಶಿಷ್ಟಾಚಾರ ಪಾಲಿಸುವುದು ಕೇಂದ್ರದ ಜವಾಬ್ದಾರಿ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯವರಿಗೆ ಆಹ್ವಾನ ನೀಡದಿರುವುದು ಪ್ರಧಾನಿ ಮೋದಿಯವರ ಸಣ್ಣತನ ತೋರಿಸುತ್ತದೆ ಅಂತ ಹೇಳಿದ್ರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಅಮಿತ್ ಶಾ ಅವರು ಮೂರ್ನಾಲ್ಕು ಬಾರಿ ರಾಜ್ಯಕ್ಕೆ ಬಂದಿದ್ದಾರೆ. ಈ ಬಾರಿಯಾದರೂ ಸತ್ಯ ಮಾತನಾಡಲಿ. ಶಾ ಮಾತು ಕೋಮು ಭಾವನೆ ಕೆರಳಿಸದಿರಲಿ. ಜನರ ಮನಸ್ಸಲ್ಲಿ ವಿಷ ಬೀಜ ಬಿತ್ತಬೇಡಿ. ನಮ್ಮ ಸರ್ಕಾರದ ಬಗ್ಗೆ ಸುಳ್ಳು ಆರೋಪ ಬೇಡ. ಅಮಿತ್ ಶಾ ಜವಾಬ್ದಾರಿಯುತವಾಗಿ ಮಾತನಾಡಲಿ ಎಂದರು.

     

    ಹೆದರಿಸಿ ಬೆದರಿಸುವ ರಾಜಕಾರಣ ರಾಜ್ಯಕ್ಕೆ ಬೇಡ. ರಾಜ್ಯ-ದೇಶದ ಹಿತದೃಷ್ಟಿಯಿಂದ ಮಾತನಾಡಲಿ. ರಾಹುಲ್ ಗಾಂಧಿ ಪ್ರವಾಸ ಯಶಸ್ವಿಯಾಗಿದೆ. ದೇವಸ್ಥಾನಕ್ಕೆ ಹೋಗಲು ಯಾರ ಪರವಾನಿಗೆ ಬೇಕಾಗಿಲ್ಲ. ದೇವಸ್ಥಾನ, ಮಸೀದಿ ಬಿಜೆಪಿಯವರಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ. ಹಿಂದೆಯೂ ಕಾಂಗ್ರೆಸ್ ನಾಯಕರು ದೇವಸ್ಥಾನಕ್ಕೆ ಭೇಟಿ ಮಾಡಿದ್ದಾರೆ. ಹಿಂದೂ ಧರ್ಮವನ್ನು ಬಿಜೆಪಿಗೆ ಗುತ್ತಿಗೆ ನೀಡಿಲ್ಲ. ಕೇದರನಾಥಕ್ಕೂ ರಾಹುಲ್ ಪಾದಯಾತ್ರೆ ಮಾಡಿದ್ದಾರೆ. ಹಿಂದೂ ಧರ್ಮ ಬಿಜೆಪಿಗೆ ಮಾತ್ರ ಅಂತ ಭಾವಿಸಿದ್ದಾರೆ. ಬೇರೆ ಪಕ್ಷಕ್ಕೆ ಹಿಂದೂ ಧರ್ಮ ಸಂಬಂಧವಿಲ್ಲದಂತೆ ಮಾತನಾಡ್ತಾರೆ ಅಂತ ಗುಂಡೂರಾವ್ ಕಿಡಿಕಾರಿದ್ರು.

    ಕರಾವಳಿ ಪ್ರವಾಸದ ವೇಳೆ ಅಮಿತ್ ಶಾ ಮಸೀದಿಗೂ ಭೇಟಿ ಕೊಡಲಿ. ಚರ್ಚ್, ದರ್ಗಾಕ್ಕೂ ಶಾ ಹೋಗಲಿ ಎಂದರು. ಮೃತರ ಮನೆಗೆ ಅಮಿತ್ ಶಾ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, ಬರೀ ಹಿಂದೂಗಳ ಮನೆಗೆ ಯಾಕೆ ಹೋಗಬೇಕು. ಮೃತ ಮುಸಲ್ಮಾನರ ಮನೆಗೂ ಶಾ ಹೋಗಲಿ. ಸತ್ತವರ ವಿಚಾರದಲ್ಲಿ ಜಾತಿ-ಧರ್ಮ ನೋಡಬೇಡಿ ಅಂತ ಸಿಡಿಮಿಡಿಗೊಂಡರು.

     

  • ರಾಹುಲ್ ಗಾಂಧಿ ಪ್ರವಾಸ ಮಾಡಿದ್ರೆ ಬಿಜೆಪಿಗೆ ಟೆನ್ಶನ್ ಯಾಕೆ- ಆಸ್ಕರ್ ಫೆರ್ನಾಂಡಿಸ್ ಪ್ರಶ್ನೆ

    ರಾಹುಲ್ ಗಾಂಧಿ ಪ್ರವಾಸ ಮಾಡಿದ್ರೆ ಬಿಜೆಪಿಗೆ ಟೆನ್ಶನ್ ಯಾಕೆ- ಆಸ್ಕರ್ ಫೆರ್ನಾಂಡಿಸ್ ಪ್ರಶ್ನೆ

    ಉಡುಪಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಕೊಟ್ಟಲ್ಲೆಲ್ಲಾ ಬಿಜೆಪಿಗೆ ಲಾಭ ಅಂತ ಹೇಳುತ್ತಾರೆ. ಹಾಗಾದ್ರೆ ರಾಹುಲ್ ಪ್ರವಾಸ ಮಾಡಿದ್ರೆ ಬಿಜೆಪಿಗೆ ಟೆನ್ಶನ್ ಯಾಕೆ ಅಂತ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಪ್ರವಾಸದ ವೇಳೆ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಸರ್ಕಾರದ ಕೆಲಸ ಜನರ ಮನಸ್ಸು, ಹೃದಯ, ಕರುಳನ್ನು ತಲುಪಿದೆ. ರಾಹುಲ್ ರಾಜ್ಯಕ್ಕೆ ಬಂದ್ರೆ ಬಿಜೆಪಿಗೆ ಲಾಭ ಆಗೋದಾದ್ರೆ ಪ್ರಧಾನಿ ಮೋದಿ, ಅಮಿತ್ ಶಾ ಬಂದ್ರೆ ಕಾಂಗ್ರೆಸ್ಸಿಗೆ ಲಾಭವಾಗುತ್ತಾ? ಅಂತ ಆಸ್ಕರ್ ಪ್ರಶ್ನೆ ಮಾಡಿದರು.

    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೀನುಗಾರರ ಸಮಾವೇಶ ಮಾಡುತ್ತಾರೆ. ಕರಾವಳಿ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಸಮಾವೇಶ ಮಾಡುವ ಜೊತೆ ಮೀನುಗಾರರಿಗೆ ಎಲ್ಲಾ ವಿಚಾರದಲ್ಲೂ ಸಂಪೂರ್ಣ ಸಹಕಾರ ಕೊಡಿ ಎಂದು ಹೇಳಿದರು.

    ರಾಹುಲ್ ಗಾಂಧಿ ದೇವಸ್ಥಾನ ಭೇಟಿ ವಿಚಾರದಲ್ಲಿ ವಿಪಕ್ಷಗಳು ಟೀಕಿಸುತ್ತವೆ. ಟೀಕೆ ಮಾಡುವುದು ಅವರ ಕೆಲಸ ಎಂದು ಹೇಳಿದರು.

  • ದೇವರೇ ನನ್ನ ಗಂಡ ಅಂತಾಳೆ- ಕೃಷ್ಣನನ್ನು ಹುಡುಕುತ್ತಾ ದೆಹಲಿಯಿಂದ ಉಡುಪಿಗೆ ಬಂದ ಮಹಿಳೆ!

    ದೇವರೇ ನನ್ನ ಗಂಡ ಅಂತಾಳೆ- ಕೃಷ್ಣನನ್ನು ಹುಡುಕುತ್ತಾ ದೆಹಲಿಯಿಂದ ಉಡುಪಿಗೆ ಬಂದ ಮಹಿಳೆ!

    ಉಡುಪಿ: ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಅನ್ನೋದು ಪ್ರಸಿದ್ಧ ಹಾಡೊಂದರ ಸಾಲುಗಳು. ಇಲ್ಲೊಬ್ಬರು ದೇವರನ್ನು ಹುಡುಕುತ್ತಾ ದೆಹಲಿಯಿಂದ ಬಂದಿದ್ದಾಳೆ. ಉಡುಪಿಗೆ ಬಂದು ಶ್ರೀಕೃಷ್ಣ ನನ್ನ ಗಂಡ ಎಂದಿದ್ದಾಳೆ.

    ನನ್ನ ಸ್ವಾಮಿಯನ್ನು ಹುಡುಕಿಕೊಂಡು ಇಲ್ಲಿಯವರೆಗೆ ಬಂದಿದ್ದೇನೆ. ನನ್ನ ಬಳಿ ತುಂಬಾ ಫೋಟೋಗಳಿವೆ. ಇವರೆಲ್ಲರೂ ನನ್ನ ಸ್ವಾಮಿಯವರು ಅಂತ ಹೇಳುತ್ತಾ ಉಡುಪಿ ನಗರದಲ್ಲೆಲ್ಲಾ ಈ ಮಹಿಳೆ ಓಡಾಡಿದ್ದಾಳೆ. ಕೃಷ್ಣ ಎಲ್ಲಿ..? ಕೃಷ್ಣ ನನ್ನ ಗಂಡ ಅಂತ ಅಡ್ರೆಸ್ ಕೇಳಿದ್ದಾಳೆ. ಹೀಗಾಗಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರು ಬಂದು ವಿಚಾರಣೆ ಮಾಡಿದಾಗ, ನಾನು ದೇವರ ಪ್ರಿಯತಮೆ ಅಂತ ಹೇಳಿದ್ದಾಳೆ. ಹೆಸರೇನು? ಎಲ್ಲಿಯವಳು? ಎಂದಿದ್ದಕ್ಕೆ ಪಾನ್ ಕಾರ್ಡ್ ಕೊಡುತ್ತಾಳೆ. ಅದರಲ್ಲಿ ನಮೂದಿಸಿದಂತೆ ಈಕೆ ರಿಂಕೂ ದೇವಿ. ಮೂಲತಃ ದೆಹಲಿಯವಳು. ರಾಮ್ ಸುರಿತ್ ಸಿಂಗ್ ಅವರ ಪತ್ನಿ. ನಾನು ದೇವರ ಮಡದಿ. ನನ್ನನ್ನು ದೇವರು ದೂರ ಮಾಡಿ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ದಾಳೆ.

    ಮಾಧ್ಯಮಗಳೆದುರು ಕೂಡಾ ರಿಂಕೂಳದ್ದು ಇದೇ ದೂರು. ನಾನು ದೇವರನ್ನು, ನನ್ನ ಸ್ವಾಮಿಯನ್ನು ಹುಡುಕುತ್ತಾ ಹೊರಟಿದ್ದೇನೆ ಎನ್ನುತ್ತಾಳೆ. ಬಳಿಕ ಉಡುಪಿಯ ಬೈಲೂರಿನಲ್ಲಿರುವ ವೃದ್ಧಾಶ್ರಮಕ್ಕೆ ಈಕೆಯನ್ನು ಕರೆದುಕೊಂಡು ಹೋಗಲಾಗಿದೆ.

    ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ, ತಾರಾನಾಥ ಮೇಸ್ತ ಅವರು ಕೇರಳದ ಮಹಿಳಾ ಆಶ್ರಮವನ್ನು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದ್ದಾರೆ. ಆಶ್ರಮದ ಆಡಳಿತ ಮಂಡಳಿಯವರು ಮಹಿಳೆಯನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಸದ್ಯ ದೆಹಲಿಯಿಂದ ಕೃಷ್ಣನನ್ನು ಹುಡುಕಿಕೊಂಡು ಬಂದ ರಿಂಕೂ ದೇವರ ನಾಡು ಕೇರಳವನ್ನು ಸೇರಿದ್ದಾಳೆ.

    ಪೊಲೀಸರ ಸಹಾಯದಿಂದ ಮಂಜೇಶ್ವರಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದೇವೆ. ರಸ್ತೆಯಲ್ಲಿ ಓಡಾಡುವ ಮಹಿಳೆಗೆ ಸಾರ್ವಜನಿಕರಿಂದ ಸಮಸ್ಯೆಯಾಗಬಹುದು. ದುರುಪಯೋಗ ಆಗುವ ಸಾಧ್ಯತೆಯೂ ಇದೆ. ಮಹಿಳೆ ಮಾನಸಿಕವಾಗಿ ನೊಂದವಳಂತೆ ಕಾಣುತ್ತಾಳೆ. ದೇವರ ನಂಬಿಕೆಯ ಬಗ್ಗೆ ಬಹಳವಾಗಿ ಆಳಕ್ಕೆ ಹೋಗುತ್ತಾಳೆ. ದೇವರ ಬಗ್ಗೆ ಮಾತ್ರ ಮಾತನಾಡುತ್ತಾಳೆ. ಮನನೊಂದು ದೈವತ್ವದ ಕಡೆ ವಾಲಿರುವ ಸಾಧ್ಯತೆಯೂ ಇದೆ. ರಿಂಕೂ ದೇವಿಗೆ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸಿದರೆ ಒಳ್ಳೆಯದು ಅಂತ ವಿಶು ಶೆಟ್ಟಿ ಹೇಳಿದ್ದಾರೆ.

     

  • ಬಹುಮನಿ ಸುಲ್ತಾನರು ಯಾರು?- ಕಾಗೋಡು ತಿಮ್ಮಪ್ಪ

    ಬಹುಮನಿ ಸುಲ್ತಾನರು ಯಾರು?- ಕಾಗೋಡು ತಿಮ್ಮಪ್ಪ

    ಉಡುಪಿ: ರಾಜ್ಯ ಸರ್ಕಾರದ ಬಹುಮನಿ ಸುಲ್ತಾನ್ ಜಯಂತಿ ಬಗ್ಗೆ ರಾಜ್ಯಾದ್ಯಂತ ಹೋರಾಟ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ಮತ್ತು ಬಿಜೆಪಿ ಇದನ್ನು ವಿರೋಧಿಸಿದೆ. ಈ ನಡುವೆ ಬಹುಮನಿ ಸುಲ್ತಾನ್ ಯಾರು? ಬಹುಮನಿ ಸುಲ್ತಾನ್ ಬಗ್ಗೆ ನನಗೆ ಗೊತ್ತಿಲ್ಲ ಅಂತ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ರಾಜ್ಯ ಸರ್ಕಾರದ ಈ ಆಚರಣೆ ಬಗ್ಗೆ ಪಕ್ಷದೊಳಗೆ ಅಸಮಾಧಾನ ಇದೆಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ.

    ಉಡುಪಿಯ ಬ್ರಹ್ಮಾವರ ತಾಲೂಕು ಉದ್ಘಾಟಿಸಿ ಮಾತನಾಡಿದ ಕಾಗೋಡು, ಆ ಕಾಲದಲ್ಲಿ ನಾನು, ನೀವು ಯಾರು ಹುಟ್ಟಿರಲಿಲ್ಲ. ಯಾವನು ಏನು ಚರಿತ್ರೆ ಬರೆದನೋ ಗೊತ್ತಿಲ್ಲ. ಚರಿತ್ರೆ ಬರೆದವ ಅವನ ಆಲೋಚನೆ ಮತ್ತು ಮಾನಸಿಕ ಸ್ಥಿತಿಗೆ ಅನುಗುಣವಾಗಿ ಚರಿತ್ರೆ ಬರೆದಿರುತ್ತಾನೆ ಎಂದು ಹೇಳಿದರು.

    ಆಯಾಯ ಕಾಲದಲ್ಲಿ ಏನೇನು ಆಗಿದೆ ಅದು ಸರಿ. ರಾಜ ಮಹಾರಾಜರು ಸಾಮ್ರಾಜ್ಯ ವಿಸ್ತರಣೆ ಮಾಡುತ್ತಾ ಬಂದವರು. ಆಗ ಆಳ್ವಿಕೆ ಮಾಡಿದ ರಾಜರಿಗೆ ಜನರ ಬಗ್ಗೆ ಕಾಳಜಿ ಇರುತ್ತಿರಲಿಲ್ಲ. ಸಾಮ್ರಾಜ್ಯ ವಿಸ್ತರಣೆ ಮಾತ್ರ ಆಗಿನ ರಾಜರ ಗುರಿಯಾಗಿತ್ತು. ಜನರಿಗೆ ಸ್ವಂತದ್ದೊಂದು ಭೂಮಿ ಕೊಡುವ ಕೆಲಸವನ್ನೂ ಆಗಿನ ರಾಜ ಮಹಾರಾಜರು ಮಾಡಿಲ್ಲ ಎಂದು ಕಾಗೋಡು ಟೀಕೆ ಮಾಡಿದರು.

    ಕುವೆಂಪು ಅವರು ಬರೆದ ಹಾಡು ನಾಡಗೀತೆ ಆಯ್ತು. ಆ ಸಂದರ್ಭ ವಿರೋಧ ಬಂದಿದ್ದರೆ ಅದೂ ಆಗ್ತಾ ಇರಲಿಲ್ಲವೇನೋ ಅಂತ ಕಾಗೋಡು ತಿಮ್ಮಪ್ಪ ಹೇಳಿದ್ರು.

  • ದೇವರ ಟಾರ್ಗೆಟ್ ಬಿಟ್ಟು ಮತ್ಯಾರ ಟಾರ್ಗೆಟ್ಟಿಗೂ ನಾನು ತಲೆ ಕೆಡಿಸಿಕೊಳ್ಳಲ್ಲ- ಸಚಿವ ಪ್ರಮೋದ್ ಮಧ್ವರಾಜ್

    ದೇವರ ಟಾರ್ಗೆಟ್ ಬಿಟ್ಟು ಮತ್ಯಾರ ಟಾರ್ಗೆಟ್ಟಿಗೂ ನಾನು ತಲೆ ಕೆಡಿಸಿಕೊಳ್ಳಲ್ಲ- ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ನನ್ನನ್ನು ದೇವರು ಮಾತ್ರ ಟಾರ್ಗೆಟ್ ಮಾಡಬಹುದು. ಅದನ್ನು ಹೊರತಾಗಿ ನಾನು ಯಾವುದೇ ಟಾರ್ಗೆಟ್ಟಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಮೀನುಗಾರಿಕಾ- ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಉಡುಪಿಯಲ್ಲಿ ಐಟಿ ಅಧಿಕಾರಿಗಳು ಮತ್ಸ ಘಟಕಗಳ ಮೇಲೆ ಐಟಿ ದಾಳಿ ಮಾಡಿದ ವಿಚಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

    ನಾನು ಚುನಾವಣೆಗೆ ಯಾರ ಫಂಡ್ ತೆಗೆದುಕೊಂಡಿಲ್ಲ. ಕಳುಹಿಸಿದ ಫಂಡನ್ನು ಹಿಂದೆ ಕಳುಹಿಸಿದ್ದೆ. ಚುನಾವಣೆಗೆ ಫಂಡಿಂಗ್ ಮಾಡುವವರೇ ನನಗೆ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತೇನೆ- ದೇಶದ ಕಾನೂನಿನಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಮತ್ಸೋದ್ಯಮಿಗಳ ಐಟಿ ಟಾರ್ಗೆಟ್ ವಿಚಾರಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ. ಪ್ರತಿಕ್ರಿಯೆ ಕೊಡದಿರುವುದಕ್ಕೂ ನಾನು ಕಾರಣ ಕೊಡಲ್ಲ ಅಂತ ಹೇಳಿದ್ರು.

    ನಾನು ಬಿಜೆಪಿ ಸೇರುತ್ತೇನೆ ಅಂತ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ನ ಕಾರ್ಯಕರ್ತರೂ ಹೇಳಿಲ್ಲ. ಇದು ಪತ್ರಕರ್ತರ ಸದಾ ಫೇವರೇಟ್ ಪ್ರಶ್ನೆ. ನಿಮಗೆ ಪ್ರಶ್ನೆ ಕೇಳುವ ಮತ್ತು ವಿಮರ್ಶಿಸುವ ಅಧಿಕಾರ ಇದೆ. ನೀವು ಪ್ರಶ್ನೆ ಮಾಡಬಹುದು. ಆದ್ರೆ ನನಗ್ಯಾರೂ ಆಫರ್ ಕೊಟ್ಟಿಲ್ಲ. ನಾನೂ ಬಿಜೆಪಿ ಸೇರುತ್ತೇನೆ ಎಂದು ಹೇಳಿಲ್ಲ ಅಂದ್ರು.

    ಹಾರ್ಡ್ ಹಿಂದುತ್ವ ಅಂದ್ರೆ ಏನು? ಸಾಫ್ಟ್ ಹಿಂದುತ್ವ ಅಂದ್ರೆ ಏನು? ಕೊಲೆ ಮಾಡಿ ಪ್ರತಿಭಟನೆ ಮಾಡಿ ರಾಜಕೀಯ ಮಾಡುವುದು ಹಾರ್ಡ್ ಹಿಂದುತ್ವನಾ? ಕಾಂಗ್ರೆಸ್ಸಿಗರು ದೇವಸ್ಥಾನಕ್ಕೆ ಹೋಗ್ಬಾರ್ದಾ- ನಾವೇನು ಅಸ್ಪೃಶ್ಯರಾ? ಕಾಂಗ್ರೆಸ್ ನವರು ಹಿಂದೂಗಳಲ್ವಾ? ಕೇವಲ ಬಿಜೆಪಿಯವರು ಮಾತ್ರ ದೇವಸ್ಥಾನಗಳಿಗೆ ಹೋಗ್ಬೇಕಾ ಅಂತ ಪ್ರಮೋದ್ ಮಧ್ವರಾಜ್ ಪ್ರಶ್ನೆ ಮಾಡಿದರು. ಈ ಮೂಲಕ ರಾಹುಲ್ ಗಾಂಧಿ ಟೆಂಪಲ್ ರನ್ ಸಮರ್ಥಿಸಿಕೊಂಡರು.

    ಐಪಿಎಸ್ ಅಂದ್ರೆ ಪಕೋಡ ಸರ್ವಿಸ್ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದು ವಿವಾದವಾಗಿದೆ. ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರಮೋದ್ ಮಧ್ವರಾಜ್, ಶಾರ್ಟ್ ಫಾರ್ಮ್ ಗೆ ಹಲವಾರು ಅರ್ಥಗಳನ್ನು ಕಲ್ಪಿಸಬಹುದು. ಐಟಿ ಅನ್ನೋ ಶಬ್ದಕ್ಕೆ ಹಲವಾರು ಅರ್ಥ ಕಲ್ಪಿಸಬಹುದು. ಹಾಗಾಗಿ ಐಪಿಎಸ್‍ಗಳು ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಹೇಳಿದರು.

  • ನಾಲ್ಕು ಕ್ಷೇತ್ರಕ್ಕೆ ಅವಿರೋಧವಾಗಿ ಬಂತು ಹೆಸರುಗಳು- ಕಾರ್ಕಳದಲ್ಲಿ ಮೂವರ ನಡುವೆ ಫೈಟ್

    ನಾಲ್ಕು ಕ್ಷೇತ್ರಕ್ಕೆ ಅವಿರೋಧವಾಗಿ ಬಂತು ಹೆಸರುಗಳು- ಕಾರ್ಕಳದಲ್ಲಿ ಮೂವರ ನಡುವೆ ಫೈಟ್

    – ಉಡುಪಿಗೆ ಬಂದ ಕೆಪಿಸಿಸಿ ವೀಕ್ಷಕರ ಮುಂದೆ ಕೈ ನಾಯಕರ ಶಕ್ತಿ ಪ್ರದರ್ಶನ

    ಉಡುಪಿ: 2018 ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಸಿದ್ಧ ಮಾಡುತ್ತಿದೆ. ರಾಜ್ಯಾದ್ಯಂತ ಪ್ರವಾಸ ಹೊರಟಿರುವ ವೀಕ್ಷಕರ ಟೀಂ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಈ ನಡುವೆ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಿಗೆ ಅವಿರೋಧವಾಗಿ ಒಂದೊಂದೇ ಹೆಸರು ಬಂದಿದ್ದು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಕ್ಷದಿಂದ ಮೂವರು ಜಿದ್ದಿಗೆ ಬಿದ್ದಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು ನಾಲ್ಕು ಕ್ಷೇತ್ರಗಳಲ್ಲಿ ತಲಾ ಒಬ್ಬೊಬ್ಬ ಅಭ್ಯರ್ಥಿಯ ಹೆಸರು ಮಾತ್ರ ಇದೆ. ಕೆಪಿಸಿಸಿ ವೀಕ್ಷಕರು ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿದ್ದು, ಕಾರ್ಕಳ ಮಾತ್ರ ಪಕ್ಷಕ್ಕೆ ಕಗ್ಗಂಟಾಗಿದೆ. ಮಾಜಿ ಸಿಎಂ ವೀರಪ್ಪ ಮೋಯ್ಲಿ ಪುತ್ರ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡಿದ್ದೆ ಇದಕ್ಕೆ ಕಾರಣ.

    ಮಾಜಿ ಸಿಎಂ- ಹಾಲಿ ಸಂಸದ ಡಾ. ವೀರಪ್ಪ ಮೋಯ್ಲಿ ಪುತ್ರ ಹರ್ಷ ಮೋಯ್ಲಿ ರಾಜಕೀಯಕ್ಕೆ ಎಂಟ್ರಿ ಕೊಡೋದು ಪಕ್ಕಾ ಆದಂತಿದೆ. ಕೆಪಿಸಿಸಿಯ ವೀಕ್ಷಕರ ಟೀಂ ಉಡುಪಿಗೆ ಬಂದಿದ್ದು ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಎಂಎಲ್ ಎ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ರೆಡಿ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಈ ಚಟುವಟಿಕೆಯಲ್ಲಿ ಉಡುಪಿ, ಕಾಪು, ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಿದೆ. ಆದ್ರೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮೂವರು ಟಿಕೆಟ್‍ಗಾಗಿ ಹಗ್ಗ ಜಗ್ಗಾಟ ಮಾಡುತ್ತಿದ್ದಾರೆ.

    ಮಾಜಿ ಶಾಸಕ ಗೋಪಾಲ ಭಂಡಾರಿ ಮತ್ತು ಮುನಿಯಾಲು ಉದಯಕುಮಾರ್ ಶೆಟ್ಟಿ ಜೊತೆ ಹರ್ಷ ಮೋಯ್ಲಿ ಹೆಸರು ಕೆಪಿಸಿಸಿ ವೀಕ್ಷಕರ ಪಟ್ಟಿಯಲ್ಲಿ ದಾಖಲಾಗಿದೆ. ಹರ್ಷ ಮೋಯ್ಲಿಗೆ ಟಿಕೆಟ್ ಕೊಡಬೇಕೆಂದು ಕಾರ್ಕಳದ ಜನರು ಅಭಿಪ್ರಾಯ ಮಂಡಿಸಿದ್ದಾರೆ. ಗೋಪಾಲ ಭಂಡಾರಿಗೆ ಟಿಕೆಟ್ ಕೊಡಿ, ಭಂಡಾರಿ ಹಿರಿಯ ರಾಜಕಾರಣಿ- ಕ್ಲೀನ್ ಹ್ಯಾಂಡ್ ಪೊಲಿಟೀಷಿಯನ್ ಅಂತ ಜನ ಭಂಡಾರಿ ಪರ ಬ್ಯಾಟ್ ಬೀಸಿದರು.

    ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ವೀಕ್ಷಕರ ಮುಂದೆ ಶಕ್ತಿಪ್ರದರ್ಶನ ಮಾಡಿದರು. ಸುಮಾರು ಒಂದು ಸಾವಿರದಷ್ಟು ಮಂದಿ ಉದಯ ಕುಮಾರ್ ಶೆಟ್ಟಿಗೆ ಟಿಕೆಟ್ ಕೊಡಿ ಎಂದು ಅರ್ಜಿ ಬರೆದು ಕೊಟ್ಟರು. ಈ ಬಾರಿ ಯುವಕರಿಗೆ ಅವಕಾಶ ಕೊಡಬೇಕೆಂದು ಉಗ್ರಪ್ಪ ಮುಂದೆ ಒತ್ತಾಯಿಸಿದರು.

    ಕೆಪಿಸಿಸಿ ಪ್ರಮುಖರ ಮುಂದೆ ಬಂದ ಜನಾಭಿಪ್ರಾಯದಲ್ಲಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಅವರಿಗೆ ಅತೀ ಹೆಚ್ಚು ಜನ ಬೆಂಬಲಿಸಿದ್ದಾರೆ. ಈ ಸಂದರ್ಭ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮುನಿಯಾಲು ಉದಯಕುಮಾರ್ ಶೆಟ್ಟಿ, ತಮ್ಮ ಅಭ್ಯರ್ಥಿ ಯಾರಾಗಬಹುದೆಂದು ಆಯ್ಕೆ ಮಾಡಲು ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕೊಡಲಾಗಿತ್ತು. ಪ್ರತೀ ಬೂತ್ ನಿಂದ 8-10 ಮಂದಿ ಬಂದು ಅರ್ಜಿ ಸಲ್ಲಿಸಿದ್ದಾರೆ. ನನ್ನ ಪರ ಹೆಚ್ಚು ಅಭಿಪ್ರಾಯ ಸಂಗ್ರಹವಾಗಿದೆ. ನನ್ನ ಉಮೇದುವಾರಿಕೆಯನ್ನು ಪಕ್ಷ ಪರಿಗಣಿಸುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

    ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ನಾನೂ ಆಕಾಂಕ್ಷಿ. ಕಾಂಗ್ರೆಸ್ ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಸಾಮಾಜಿಕ ನ್ಯಾಯ ಎಂಬ ಘೋಷವಾಕ್ಯದಲ್ಲಿ ಕೆಲಸ ಮಾಡುತ್ತೇನೆ. ಕಳೆದ ಬಾರಿ ಸೋತಿದ್ದು ಈ ಬಾರಿ ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಡಿಸಿದರು. ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗುತ್ತೇನೆ. ಹಿಂದೆಯೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದರು.

    ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ವೀರಪ್ಪ ಮೋಯ್ಲಿಯೇ ಹೈಕಮಾಂಡ್. ಅವರು ಹೇಳಿದ್ದೇ ಅಂತಿಮ ಅನ್ನೋ ಲೆಕ್ಕಾಚಾರವಿದೆ. ಕೆಪಿಸಿಸಿಗಿಂತ ಎಐಸಿಸಿಯಲ್ಲೇ ಮೋಯ್ಲಿ ಹೆಚ್ಚು ಪ್ರಭಾವಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಆಪ್ತ. ಡೆಲ್ಲಿಯಲ್ಲಿ ಪ್ರಭಾವ ಹೊಂದಿದವರು. ಅಲ್ಲೇ ಲಾಭಿ ಮಾಡಿ ಪುತ್ರನಿಗೊಂದು ರಾಜಕೀಯ ದಾರಿ ತೋರಿಸ್ತಾರಾ? ಈ ಮೂಲಕ ಮೋಯ್ಲಿ ಪುತ್ರ ವಾತ್ಸಲ್ಯಕ್ಕೆ ಕಾಂಗ್ರೆಸ್ ಮಣೆ ಹಾಕುತ್ತಾ..? ಅಥವಾ ಜನಾಭಿಪ್ರಾಯಕ್ಕೆ ತಲೆ ಬಾಗುತ್ತೋ? ಕ್ಷೇತ್ರದ ಮತದಾರರಲ್ಲಿ ಕುತೂಹಲವಿದೆ. ಒಟ್ಟಿನಲ್ಲಿ ಮೊದಲ ಸುತ್ತಿನ ಜನಾಭಿಪ್ರಾಯವನ್ನು ಕಾಂಗ್ರೆಸ್ ತೆಗೆದುಕೊಂಡು ಹೋಗಿದ್ದು ಮುಂದೆ ಪಕ್ಷದ ಹೈಕಮಾಂಡ್ ಈ ಬಗ್ಗೆ ಚರ್ಚೆ ನಡೆಸಲಿದೆ.

    ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪರಿಷತ್ ಸದಸ್ಯ, ಕೆಪಿಸಿಸಿ ವೀಕ್ಷಕ ವಿ.ಎಸ್ ಉಗ್ರಪ್ಪ, ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಸೀಟುಗಳನ್ನು ಗೆಲ್ಲುವ ವಿಶ್ವಾಸ ಕಾಂಗ್ರೆಸ್‍ಗೆ ಇದೆ. ಯುವಕರಲ್ಲಿರುವ ಉತ್ಸಾಹ ನೋಡಿದ್ರೆ ಈ ಅಭಿಪ್ರಾಯ ಮೂಡುತ್ತದೆ ಎಂದರು. ನಾಲ್ಕು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆಯಬಹುದು. ಕಾರ್ಕಳ ವಿಧಾನಸಾಭ ಕ್ಷೇತ್ರದ ಮೂವರ ನಡುವೆ ಆರೋಗ್ಯಕರ ಸ್ಪರ್ಧೆಯಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

  • ಚುನಾವಣೆ ಹತ್ತಿರ ಬಂದಾಗ ಹಿಂದೂ ದೇವರು ನೆನಪಾದ್ರಾ: ರಾಹುಲ್‍ಗೆ ಶೋಭಾ ಪ್ರಶ್ನೆ

    ಚುನಾವಣೆ ಹತ್ತಿರ ಬಂದಾಗ ಹಿಂದೂ ದೇವರು ನೆನಪಾದ್ರಾ: ರಾಹುಲ್‍ಗೆ ಶೋಭಾ ಪ್ರಶ್ನೆ

    ಉಡುಪಿ: ಚುನಾವಣಾ ಯಾತ್ರೆಯನ್ನು ಬಳ್ಳಾರಿಯಿಂದ ಆರಂಭಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಜೈಲಿಗೆ ಹೋದವರಲ್ವಾ ಅಂತ ಸಿಎಂ ಹೇಳಿಕೆಗಳ ವಿರುದ್ಧ ಲೇವಡಿ ಮಾಡಿದ್ದಾರೆ. ರಾಹುಲ್ ಗಾಂಧಿ ಹೊಸಪೇಟೆಯಿಂದ ಯಾತ್ರೆ ಆರಂಭಿಸಿದ್ದಾರೆ. ಶಾಸಕ ಆನಂದ್ ಸಿಂಗ್ ಜೈಲಿಗೆ ಹೋದವರು ಅಂತ ಸಿಎಂ ಸಿದ್ದರಾಮಯ್ಯನೇ ಹೇಳ್ತಾ ಇದ್ರು. ಈಗ ಇದಕ್ಕೇನು ಹೇಳುತ್ತಾರೆ? ಜೈಲಿಗೆ ಹೋದವರ ಕ್ಷೇತ್ರದಿಂದ ಪ್ರವಾಸ ಆರಂಭಿಸಿದ್ದಾರಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಚಾಟಿ ಬೀಸಿದರು.

    ರಾಹುಲ್ ಟೆಂಪಲ್ ರನ್ ಮಾಡಲು ಹೊರಟಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ, ಸಿಎಂ ಗೆ ಕೂಡಾ ದೇವರು ಒಳ್ಳೆ ಬುದ್ಧಿ ಕೊಡಲಿ. ಕೆಟ್ಟಬುದ್ಧಿ ಸಿಎಂ ತಲೆಯಿಂದ ನಾಶ ಮಾಡಲಿ ಎಂದು ಹಾರೈಸಿದರು.

    ಸಿಎಂ ಮಠ ಮಂದಿರ ವಶಪಡಿಸಿಕೊಳ್ಳುವ ಹುನ್ನಾರ ಮಾಡಿದ್ದಾರೆ. ರಾಹುಲ್ ಗಾಂಧಿಯವರೇ ಇಷ್ಟು ದಿನ ನಿಮ್ಮ ಧ್ವನಿ ಎಲ್ಲಿ ಅಡಗಿತ್ತು? ಹಿಂದೂ ಯುವಕರ ಹತ್ಯೆಯಾದಾಗ ರಾಹುಲ್ ಗಾಂಧಿ ಮಾತಾಡಿಲ್ಲ. ಚುನಾವಣೆ ಹತ್ತಿರ ಬಂದಾಗ ಹಿಂದೂಗಳ ದೇವರು ನೆನಪಾದ್ರಾ ಅಂತ ಚಾಟಿ ಬೀಸಿದರು.

    ಬಿಜೆಪಿ ಕಾರ್ಯಕರ್ತ ಸಂತೋಷ್ ಬೆಂಗಳೂರಲ್ಲಿ ಕೊಲೆಯಾಗಿದ್ದರು. ಕೊಲೆಯಾದಾಗ ಪಕ್ಕದ ಮನೆಗೆ ಹೋಗಿ ಸಿಎಂ ಪಾರ್ಟಿ ಮಾಡಿದ್ದಾರೆ. ಖಾದರ್ ಮನೆಯಲ್ಲೇ ಮುಸ್ಲಿಂ ಧರ್ಮಗುರುಗಳ ಸಭೆಯಲ್ಲಿ ಸಿಎಂ ಚುನಾವಣೆ ಸಂದರ್ಭ ಬೆಂಬಲ ಕೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಾರ್ಪೋರೇಟರ್ ಪ್ರತಿಭಾ ಕುಳಾಯಿಗೆ ತಿರುಗೇಟು ನೀಡಿದ ಸಂಸದರು, ಸಂಘ ಪರಿವಾರ ಯಾವತ್ತೂ ದೇಶದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದೆ. ಸಂಘದ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಜನ ಪಾಠ ಕಲಿಸುತ್ತಾರೆ. ಲೋಕಸಭೆಯಲ್ಲಿ ಹಿಂದೆ 400 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈಗ 40 ಕ್ಕೆ ಇಳಿಯಲು ಇದೇ ಕಾರಣ ಅಂತ ವಾಗ್ದಾಳಿ ನಡೆಸಿದರು.

    ನಾನು ಸಂಸದೆಯಾಗಿ ಆರಾಮವಾಗಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬರುವ ಆಲೋಚನೆ ಸದ್ಯಕ್ಕಿಲ್ಲ. ವಿದ್ಯಾರ್ಥಿಯಾಗಿ ದೆಹಲಿ ರಾಜಕಾರಣ ಕಲಿಯುತ್ತಿದ್ದೇನೆ. ಈಗ ನನಗೇನೂ ಅರ್ಜೆಂಟಿಲ್ಲ ಅಂತ ಶೋಭಾ ಕರಂದ್ಲಾಜೆ ಹೇಳಿದ್ರು.

  • ಈಜಿ..ಈಜಿ.. ಬಾವಿಯಲ್ಲಿ ಮುಳುಗಿ ಸತ್ತ ಚಿರತೆ

    ಈಜಿ..ಈಜಿ.. ಬಾವಿಯಲ್ಲಿ ಮುಳುಗಿ ಸತ್ತ ಚಿರತೆ

    ಉಡುಪಿ: ಆಹಾರ ಅರಸುತ್ತಾ ಕಾಡಿಂದ ನಾಡಿಗೆ ಬಂದ ಚಿರತೆ ಕತ್ತಲಲ್ಲಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಮಂದಾರ್ತಿಯಲ್ಲಿ ನಡೆದಿದೆ.

    ಕಳೆದ ರಾತ್ರಿ ಕತ್ತಲಿನಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಇಂದು ಬೆಳಗ್ಗೆ ಸ್ಥಳೀಯರು ನೋಡಿದ್ದಾರೆ. ಬೆಳಗ್ಗಿನ ಜಾವದವರೆಗೆ ಪ್ರಾಣ ಉಳಿಸಿಕೊಳ್ಳಲು ಈಜಾಡಿದ ಚಿರತೆ ಬಳಿಕ ಸಾವನ್ನಪ್ಪಿದೆ.

    ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಚಿರತೆಯನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಸಂದರ್ಭದಲ್ಲಿ ಚಿರತೆ ಸಾವನ್ನಪ್ಪಿದೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಅಧಿಕಾರಿಗಳು ಶವವನ್ನು ಮೇಲಕ್ಕೆತ್ತಿದ್ದಾರೆ. ಬೇಗ ಕಾರ್ಯಾಚರಣೆ ನಡೆಸಿದ್ರೆ ಚಿರತೆಯನ್ನು ಉಳಿಸಬಹುದಿತ್ತು ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸ್ಥಳೀಯ ಯುವಕ ಗಣೇಶ ಸಾಯ್ಬರಕಟ್ಟೆ ಮಾತನಾಡಿ, ಅರಣ್ಯಾಧಿಕಾರಿ ಗಳ ಬಳಿ ಸರಿಯಾದ ಸಲಕರಣೆಗಳು ಇಲ್ಲ. ಕೂಡಲೇ ಬಾವಿಗೆ ಏಣಿ ಇಳಿಸಿದ್ದರೆ ಚಿರತೆ ಅದನ್ನು ಹತ್ತಿ ಕುಳಿತುಕೊಂಡು ಪ್ರಾಣ ಉಳಿಸುತ್ತಿತ್ತು. ಕಾಡು ನಾಶವೇ ಇದಕ್ಕೆಲ್ಲ ಕಾರಣ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

    ಶಂಕರನಾರಯಣ ಅರಣ್ಯ ಇಲಾಖಾ ಸಿಬ್ಬಂದಿ ಚಿರತೆಯ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು, ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಸಹಾಯ ಮಾಡಿದ್ದರು.

  • ಸಾಯಲು ಮನಸ್ಸಿರುವವರು ಸಂಘ ಪರಿವಾರ ಸೇರಿ- ಪ್ರತಿಭಾ ಕುಳಾಯಿ ವಿವಾದಾತ್ಮಕ ಹೇಳಿಕೆ

    ಸಾಯಲು ಮನಸ್ಸಿರುವವರು ಸಂಘ ಪರಿವಾರ ಸೇರಿ- ಪ್ರತಿಭಾ ಕುಳಾಯಿ ವಿವಾದಾತ್ಮಕ ಹೇಳಿಕೆ

    ಉಡುಪಿ: ಸಾಯಲು ಮನಸ್ಸಿರುವವರು ಸಂಘ ಪರಿವಾರ ಸೇರಿ ಎಂದು ಮಂಗಳೂರಿನ ಸುರತ್ಕಲ್ ಕಾಂಗ್ರೆಸ್ ಕಾರ್ಪೋರೇಟರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

    ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಉಡುಪಿಯ ಕಾರ್ಕಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತುಳುವಿನಲ್ಲಿ ಮಾಡಿರುವ ಭಾಷಣ ಈಗ ವೈರಲ್ ಆಗಿದೆ.

    ಯಾರಿಗೆಲ್ಲ ಸಾಯಲು ಮನಸ್ಸಿದೆ ಅವರು ಸಂಘ ಪರಿವಾರ ಸೇರಿ. ದುಡಿಯಲು ಮನಸ್ಸಿಲ್ಲದವರೂ ಸಂಘ ಪರಿವಾರ ಸೇರಿ. ಮರ್ಡರ್ ಮಾಡಿ ಬಂದ್ರೆ ಸಾಕು ಜೈಲಿನಲ್ಲಿ ನಿಮಗೆ ಎಷ್ಟು ಬೇಕಾದ್ರೂ ಅನ್ನ ಸಿಗುತ್ತದೆ ಅಂತ ಹೇಳಿಕೆ ನೀಡಿದ್ದಾರೆ.

    ಧರ್ಮಾರ್ಥ ನಿಮಗೆ ಜೈಲಿನಲ್ಲಿ ಅನ್ನ ಸಿಗುತ್ತದೆ. ಕೊಲೆ ಮಾಡಿಸಿದ ಸಂಘ ಪರಿವಾರದವರು ಜೈಲಿಗೆ ಇಣುಕಿ ನೋಡಲು ಹೋಗುವುದಿಲ್ಲ. ಯಾರಾದ್ರೂ ಹಿಂದುಗಳು ಸತ್ತರೆ ಸಾಕು ವಾಟ್ಸಪ್, ಫೇಸ್ ಬುಕ್ ನಲ್ಲಿ ಸತ್ತವರ ಬಗ್ಗೆ ಪ್ರಚಾರ ಮಾಡ್ತಾರೆ. ಇಷ್ಟು ಕೋಟಿ ಸಂಗ್ರಹ ಆಯ್ತು, ಅಷ್ಟು ಕೋಟಿ ಸಂಗ್ರಹ ಆಯ್ತು ಅಂತ ಪ್ರಚಾರ ಮಾಡುತ್ತಾರೆ. ಆದ್ರೆ ಸಂತ್ರಸ್ತ ಮನೆಯವರಿಗೆ ಒಂದು ರುಪಾಯಿ ಈವರೆಗೆ ಸಿಕ್ಕಿಲ್ಲ. ಎಲ್ಲರೂ ಬಂದು ಹೋದ್ರು, ಯಾರೂ ಏನೂ ಮಾಡಿಲ್ಲ ಅಂತ ಶರತ್ ಮಡಿವಾಳ ತಂದೆ ಹೇಳಿಕೆ ಕೊಟ್ಟಿದ್ದರು. ದೀಪಕ್ ರಾವ್ ಕೊಲೆಯಾದಾಗ್ಲೂ ಕೋಟಿಗಟ್ಟಲೆ ಸಂಗ್ರಹ ಮಾಡಿದ್ದಾರೆ. ದೀಪಕ್ ರಾವ್ ಮನೆಯವರಿಗೆ ಇವತ್ತಿನವರೆಗೂ ಒಂದು ರೂಪಾಯಿ ಸಿಕ್ಕಿಲ್ಲ ಅಂತ ಹೇಳಿದ್ರು.

    ಹಿಂದೂ ಯುವಕರು ಸತ್ತರೆ ಹಿಂದೂಪರ ಸಂಘಟನೆಗಳು ಸಂಭ್ರಮಿಸುತ್ತವೆ. ಹಲವಾರು ಹಿಂದೂಗಳನ್ನು ಇವರೇ ಕೊಂದಿದ್ದಾರೆ. ನಾನು ಕೂಡಾ ಒಬ್ಬಳು ಹಿಂದೂ. ನನ್ನ ಬಣ್ಣ ಕೂಡಾ ಕೇಸರಿಯೇ. ಆದರೆ ಬಿಜೆಪಿಯವರು ಕೇಸರಿಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

    ಭಾಷಣದ ಕೊನೆಗೆ ಪ್ರತಿಭಾ ಕುಳಾಯಿ ವಂದೇ ಮಾತರಂ.. ವಂದೇ ಮಾತರಂ… ಅಂತ ಘೋಷಣೆ ಕೂಗಿದ್ದಾರೆ. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಂದೇ ಮಾತರಂ ಜೈಘೋಷ ಹಾಕಿಸಿದ್ದಾರೆ. ಪ್ರತಿಭಾ ಮಂಗಳೂರಿನ ಸುರತ್ಕಲ್ ವ್ಯಾಪ್ತಿಯ ಕಾರ್ಪೋರೇಟರ್ ಆಗಿದ್ದು, ದೀಪಕ್ ರಾವ್ ಮೃತಪಟ್ಟಾಗ ಬಹಳ ಆಕ್ರೋಶಕ್ಕೆ ಒಳಗಾಗಿದ್ದರು. ಪ್ರತಿಭಾ ಕುಳಾಯಿ ವಿವಾದಾತ್ಮಕ ಭಾಷಣ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.