Tag: ಉಡುಪಿ

  • ರಾಹುಲ್ ಗಾಂಧಿ ಕರ್ನಾಟಕ ಗೆಲ್ಲೋದು ಬಿಗ್ ಜೋಕ್- ಮುರಳೀಧರ್ ರಾವ್

    ರಾಹುಲ್ ಗಾಂಧಿ ಕರ್ನಾಟಕ ಗೆಲ್ಲೋದು ಬಿಗ್ ಜೋಕ್- ಮುರಳೀಧರ್ ರಾವ್

    ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಜೊತೆ ಸೇರಿ ಕರ್ನಾಟಕ ಗೆಲ್ತಾರಂತೆ. ರಾಹುಲ್ ಯುಗದಲ್ಲಿ ಅಮೇಥಿ ಗೆಲ್ಲೋದೂ ಕಷ್ಟ ಇದೆ. ಅಮೇಥಿಯಲ್ಲೇ ಜೀರೋ ಆದವರು ಈಗ ಕರ್ನಾಟಕ ಗೆಲ್ತಾರಂತೆ. ಇದೊಂದು ಬಿಗ್ ಜೋಕ್ ಅಂತ ಬಿಜೆಪಿ ವರಿಷ್ಠ ಮುರಳೀಧರ್ ರಾವ್ ವ್ಯಂಗ್ಯವಾಡಿದ್ದಾರೆ.

    ಜನ ಸುರಕ್ಷಾ ಯಾತ್ರೆ ಸಂದರ್ಭದಲ್ಲಿ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ಮಾತನಾಡಿದ ಅವರು, ರಾಹುಲ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಶೀಘ್ರ ಪಾತಾಳಕ್ಕೆ ಹೋಗ್ತದೆ. ಕಾಂಗ್ರೆಸ್ ಪಿಎಫ್ ಐ, ಎಸ್‍ಡಿಪಿಐ ಜೊತೆ ಕೈ ಜೋಡಿಸಿದ್ರೂ ಚುನಾವಣೆ ಗೆಲ್ಲೋಕಾಗಲ್ಲ ಅಂದ್ರು. ಇದನ್ನೂ ಓದಿ: ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದ್ರೆ ಬಡಿಗೆ ತಗೊಳ್ಳಿ: ಶೋಭಾ ಕರಂದ್ಲಾಜೆ

    ಸಿಎಂ ಅವರ ನಂ.1 ಜಾಹೀರಾತು ನೋಡಿದ್ರೆ ನಗು ಬರುತ್ತದೆ. ನನಗೆ ತೆಲುಗು ಸಿನಿಮಾ ನೆನಪಾಗುತ್ತದೆ. ಖೈದಿ ನಂ.1, ರೌಡಿ ನಂ.1, ಕೇಡಿ ನಂ.1, ಗೂಂಡಾ ನಂ.1 ನೋಡಿದ ಹಾಗಾಗುತ್ತದೆ. ಇದು ಮಾಫಿಯಾ ಸರ್ಕಾರ. ಇವರಿಂದ ಅಭಿವೃದ್ದಿ ಅಸಾಧ್ಯ. ಕಾಂಗ್ರೆಸ್ ಲೆಕ್ಕಾಚಾರ ಮುಗಿದಿದೆ. ಇದು ಭೃಷ್ಟಾಚಾರಿಗಳ ಪಾರ್ಟಿ. ಸಿದ್ದರಾಮಯ್ಯ ಜೈಲಿಗೆ ಹೋಗುವ ದಿನವೂ ದೂರವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಉಪೇಂದ್ರ ಮಾತ್ರವಲ್ಲ, ಸೋನಿಯಾ ಗಾಂಧಿ ಬಿಜೆಪಿಗೆ ಬಂದ್ರೂ ಸ್ವಾಗತ- ಈಶ್ವರಪ್ಪ

    40 ಲಕ್ಷದ ವಾಚ್ ಕಟ್ಟಿ ನಾಚಿಕೆ ಬಿಟ್ಟು ವೇದಿಕೆಯಲ್ಲಿ ಕೂರ್ತಾರೆ. ನಾನು ಭೃಷ್ಟ ಅಲ್ಲ ಅಂತಾರೆ. ಸಿದ್ದರಾಮಯ್ಯ ಡಾನ್ ಮಾತ್ರವಲ್ಲ ಭ್ರಷ್ಟಾಚಾರಿನೂ ಹೌದು ಎಂದು ಟೀಕಿಸಿದ ಅವರು, ಕಾಂಗ್ರೆಸ್ ಫೇಲ್, ಸಿದ್ದರಾಮಯ್ಯ ಫೇಲ್ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ತಾಯಿ ಸೋನಿಯಾಗಾಂಧಿ, ಸಿಎಂ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ರಕ್ತ: ಈಶ್ವರಪ್ಪ

    ಸಿಎಂ ಗೆ ಪಿಎಫ್‍ಐ ಜೊತೆ ಪಾರ್ಟ್‍ನರ್ ಶಿಪ್ ಇದೆ. ಜನಸಂಘ ಅಂದ್ರೆ ಜೋಕ್ ಅಂದವರು ಈಗ ದೇಶದಲ್ಲಿ ಬಿಜೆಪಿ ಬೆಳವಣಿಗೆ ನೋಡಿ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 21 ರಾಜ್ಯಗಳಲ್ಲಿ ಬಿಜೆಪಿ ಇದೆ. ಮುಂದೆ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಸಿಲುಕಿದ ಗರ್ಭಿಣಿ – ಪೊಲೀಸರ ವಿರುದ್ಧ ಜನಾಕ್ರೋಶ

  • ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದ್ರೆ ಬಡಿಗೆ ತಗೊಳ್ಳಿ: ಶೋಭಾ ಕರಂದ್ಲಾಜೆ

    ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದ್ರೆ ಬಡಿಗೆ ತಗೊಳ್ಳಿ: ಶೋಭಾ ಕರಂದ್ಲಾಜೆ

    ಉಡುಪಿ: ಚುನಾವಣೆ ಬಂದರೆ ರಾಹುಲ್ ಗಾಂಧಿ ದೇವಸ್ಥಾನ ಸುತ್ತುತ್ತಾರೆ. ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಹಿಂಬಾಲಿಸ್ತಾರೆ. ಆರು ಬಾರಿ ಉಡುಪಿಗೆ ಬಂದರೂ ಕೃಷ್ಣಮಠಕ್ಕೆ ಬಾರದ ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದರೆ ಜನ ಬಡಿಗೆ ತೆಗೆದುಕೊಳ್ಳಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಉಡುಪಿಯಲ್ಲಿ ಜನಸುರಕ್ಷಾ ಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಇಳಿವಯಸ್ಸಿನ ಪೇಜಾವರ ಸ್ವಾಮೀಜಿ ಹಲವು ಬಾರಿ ಆಮಂತ್ರಣ ಕೊಟ್ಟರೂ ಸಿಎಂ ಮಠಕ್ಕೆ ಬರಲಿಲ್ಲ. ಕನಕನಿಗೆ ಒಲಿದ ಕೃಷ್ಣನ ದರ್ಶನ ಮಾಡದೆ ಹಠಕ್ಕೆ ಬಿದ್ದರು. ರಾಹುಲ್ ಗಾಂಧಿ ಬಂದಾಗ ಕೃಷ್ಣ ಮಠಕ್ಕೆ ಬರುತ್ತೀರಾ ಸಿದ್ದರಾಮಯ್ಯ? ಎಂದು ಪ್ರಶ್ನಿಸಿದರು.

    ಓಟ್ ನ ಸಂದರ್ಭದಲ್ಲಿ ಉಡುಪಿ ಮಠಕ್ಕೆ ಬಂದರೆ ಇಲ್ಲಿನ ಜನ ಬಡಿಗೆ ತಗೊಳ್ಳಿ ಎಂದು ಶೋಭಾ ಕರಂದ್ಲಾಜೆ ಕರೆ ನೀಡಿದ್ರು. ಇವರು ಚುನಾವಣೆ ಬಂದಾಗ ಬರುವುದು ದೇವರ ಮೇಲಿನ ಭಕ್ತಿಯಿಂದಲ್ಲ, ಕೃಷ್ಣಮಠವನ್ನು ವಶಪಡಿಸುವ ಷಡ್ಯಂತ್ರದಿಂದ. ಇಷ್ಟೆಲ್ಲಾ ಮಾಡಿದ ನಿಮ್ಮನ್ನು ರಾಜ್ಯದ ಜನ ಕ್ಷಮಿಸಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗುತ್ತಾರೆ. ಶುದ್ಧವಾಗಿರಬೇಕು ಎಂಬ ನಂಬಿಕೆಗೆ ಇದರಿಂದ ಧಕ್ಕೆಯಾಗಿದೆ. ಇದರಿಂದ ಜನರ ಧಾರ್ಮಿಕ ಭಾವನೆಗೆ ಹಿನ್ನಡೆಯಾಗಿದೆ. ಸಿಎಂ ಗೋಮಾಂಸ ತಿಂತೇನೆ ಅಂತಾರೆ. ಈಗ ಯಾಕೆ ದೇವಸ್ಥಾನಕ್ಕೆ ಹೋಗುತ್ತೀರಾ ಎಂದು ಸಿಎಂಗೆ ಪ್ರಶ್ನೆ ಕೇಳಿ ಗರಂ ಆದ್ರು.

  • ಉಪೇಂದ್ರ ಮಾತ್ರವಲ್ಲ, ಸೋನಿಯಾ ಗಾಂಧಿ ಬಿಜೆಪಿಗೆ ಬಂದ್ರೂ ಸ್ವಾಗತ- ಈಶ್ವರಪ್ಪ

    ಉಪೇಂದ್ರ ಮಾತ್ರವಲ್ಲ, ಸೋನಿಯಾ ಗಾಂಧಿ ಬಿಜೆಪಿಗೆ ಬಂದ್ರೂ ಸ್ವಾಗತ- ಈಶ್ವರಪ್ಪ

    ಉಡುಪಿ: ನಟ ಉಪೇಂದ್ರ ಮಾತ್ರವಲ್ಲ, ಸೋನಿಯಾ ಗಾಂಧಿ ಬಿಜೆಪಿಗೆ ಬಂದ್ರೂ ಸ್ವಾಗತ ಅಂತ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಉಪೇಂದ್ರ ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮಾಧ್ಯಮಗಳಲ್ಲಿ ಸೇರುತ್ತಾರೆ ಅನ್ನೋದಾಗಿ ನೋಡಿದ್ದೇನೆ. ಬಿಜೆಪಿ ಪಕ್ಷ ಗಂಗೆ ಇದ್ದಂತೆ, ಯಾರೂ ಬೇಕಾದ್ರೂ ಬರಬಹುದು. ಸೋನಿಯಾ ಗಾಂಧಿ ಬಂದ್ರೂ ಕರ್ಕೋತೀವಿ ಅಂದ್ರು.

    ಹಿಂದೆ ಸಿದ್ದರಾಮಯ್ಯನವರೇ ಬಿಜೆಪಿ ಗೆ ಬರೋದಕ್ಕೆ ಪ್ರಯತ್ನಿಸಿದ್ದರು. ಸಿಎಂ ಪಟ್ಟ ಸಿಗ್ಬೇಕು ಅನ್ನೋ ಅಪೇಕ್ಷೆ ಅವರದ್ದಾಗಿತ್ತು. ಅದಾಗಿಲ್ಲ ಅಂತ ಜೆಡಿಎಸ್ ಗೆ ಟೋಪಿ ಹಾಕಿ ಕಾಂಗ್ರೆಸ್ ಸೇರಿ ಸಿಎಂ ಆಗಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೂ ಮಡಿಯಿಲ್ಲ. ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಬಂದಲ್ಲಿ ಸ್ವಾಗತಿಸುವೆವು ಎಂದು ಈಶ್ವರಪ್ಪ ಹೇಳಿದರು.ಇದನ್ನೂ ಓದಿ: ಪಕ್ಷ ಕಟ್ಟಿದ ಉಪ್ಪಿಗೆ ಕೆಪಿಜೆಪಿಯಿಂದ ಗೇಟ್‍ಪಾಸ್?

    ಉಪೇಂದ್ರ ಬಿಜೆಪಿಗೆ ಬಂದ್ರೆ ಸ್ವಾಗತ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ರು. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಭಾರತೀಯ ಜನತಾ ಪಾರ್ಟಿ ಒಂದು ಸಮುದ್ರ. ಈ ಸಮುದ್ರಕ್ಕೆ ಯಾವುದೇ ನೀರು ಹರಿದು ಬಂದ್ರೂ ಸ್ವೀಕಾರ ಮಾಡುತ್ತದೆ. ಕರ್ನಾಟಕ ರಾಜ್ಯ ಚುನಾವಣೆ ಹತ್ತಿರ ಬರ್ತಾ ಇದೆ. ರಾಜ್ಯದ ಯಾವುದೇ ಕಲಾವಿದರು, ಮುಖಂಡರು ಬಂದರೆ ಸ್ವಾಗತ. ಕ್ರಿಮಿನಲ್ ಹಿನ್ನಲೆ ಇಲ್ಲದೆ ಇರುವವರನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಹೇಳಿದ್ರು.

    ಉಪೇಂದ್ರ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ. ಪಕ್ಷ ಮುಂದುವರಿಸುತ್ತಾರೋ? ಬಿ.ಜೆ.ಪಿ ಜೊತೆ ಮರ್ಜ್ ಮಾಡಿಕೊಳ್ಳುತ್ತಾರೋ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಇದನ್ನೂ ಓದಿ: ಕೆಪಿಜೆಪಿಯಲ್ಲಿ ಏನ್ ಆಗ್ತಿದೆ? ಗೊಂದಲ ಆಗಿದ್ದು ಎಲ್ಲಿ? – ಉಪ್ಪಿ ಮಾತಲ್ಲಿ ಕೇಳಿ

  • ಸಿದ್ದರಾಮಯ್ಯ ತಾಯಿ ಸೋನಿಯಾಗಾಂಧಿ, ಸಿಎಂ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ರಕ್ತ: ಈಶ್ವರಪ್ಪ

    ಸಿದ್ದರಾಮಯ್ಯ ತಾಯಿ ಸೋನಿಯಾಗಾಂಧಿ, ಸಿಎಂ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ರಕ್ತ: ಈಶ್ವರಪ್ಪ

    ಉಡುಪಿ: ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ, ಪ್ರಧಾನಿ ಮೋದಿಯನ್ನು ಟೀಕಿಸುವ ಬದಲು ನೋಡಿ ಕಲಿಯಿರಿ ಅಂತ ಬಿಜೆಪಿ ನಾಯಕ ಈಶ್ವರಪ್ಪ ವಾಗ್ದಾಳಿ ನಡೆಸಿದರು.

    ಜಿಲ್ಲೆಯ ಬೈಂದೂರಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯಲ್ಲಿ ಭಾಗಿಯಾದ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ. ಸಿಎಂ ನಡವಳಿಕೆಯೇ ಸರಿಯಿಲ್ಲ. ಸಿದ್ದರಾಮಯ್ಯ ಮೈಮೇಲೆ ಟಿಪ್ಪು ರಕ್ತ ಹರಿಯುತ್ತಿದೆ. ಇದೇ ಕಾರಣಕ್ಕೆ ಟಿಪ್ಪು ಜಯಂತಿ ಆಚರಣೆ ಮಾಡಿದ್ರು ಅಂತ ಕಿಡಿ ಕಾರಿದ್ದಾರೆ.

    ಮುಸಲ್ಮಾನರ ಓಟು ಗಟ್ಟಿ ಮಾಡಲು ಟಿಪ್ಪು ಜಯಂತಿ ಆಚರಿಸಿದ್ರು, ಹಿಂದೂ ಕಾರ್ಯಕರ್ತರ ಕೊಲೆಗೆ ಸಿಎಂ ಪ್ರತಿಕ್ರಿಯಿಸಲ್ಲ. ಇಂದಿರಾಗಾಂಧಿ, ಅವರಪ್ಪನ ಕೈಯ್ಯಲ್ಲೇ ಆರ್‍ಎಸ್‍ಎಸ್ ಬ್ಯಾನ್ ಮಾಡಲು ಸಾಧ್ಯವಾಗಿಲ್ಲ. ಆರ್‍ಎಸ್‍ಎಸ್ ಅನ್ನು ಸಿದ್ದರಾಮಯ್ಯ ಏನು ಮಾಡಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಸಿಲುಕಿದ ಗರ್ಭಿಣಿ – ಪೊಲೀಸರ ವಿರುದ್ಧ ಜನಾಕ್ರೋಶ

    ಅಂದು ಕಾಂಗ್ರೆಸ್ ಸೇರದಿದ್ದರೆ ಸಿದ್ದರಾಮಯ್ಯನದ್ದು ನಾಯಿಪಾಡಾಗುತ್ತಿತ್ತು ಎಂದು ಲೇವಡಿ ಮಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವನ್ನು ಸಿಎಂ ತಂದರು, ಈಗ ಸಿಎಂ ಕುರ್ಚಿ ಅಲ್ಲಾಡುತ್ತಿದೆ. ಓಟಿಗಾಗಿ ಜಾತಿ ಧರ್ಮಕ್ಕೆ ಬೆಂಕಿ ಇಡೋದು ಸುಲಭವಾಗಿದ್ಯಾ ಅಂತ ಪ್ರಶ್ನಿಸಿದರು.

    ಹಿಂದೂ ಮಠ ಮಂದಿರ ಸರ್ಕಾರ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಬೇರೆ ಧರ್ಮದ ಧಾರ್ಮಿಕ ಕೇಂದ್ರ ಯಾಕೆ ಮುಟ್ಟಿ ನೋಡಲ್ಲ? ಸಿದ್ದರಾಮಯ್ಯ ನ ಗಂಡಸ್ತನ ಎಲ್ಲೋಗಿತ್ತು? ಹಿಂದೂ ಮಠ ಮಂದಿರ ವಶಕ್ಕೆ ಪಡೆದ್ರೆ ಜನ ಸುಮ್ಮನಿರಲ್ಲ ಅಂದ್ರು. ಸೋನಿಯಾಗಾಂಧಿ ಸಿದ್ದರಾಮಯ್ಯನ ತಾಯಿ, ಸಿದ್ದು ತಾಯಿಯೇ ಮಹದಾಯಿ ವಿವಾದಕ್ಕೆ ಕಾರಣ ಅಂದ್ರು.

    ಮೋದಿಯನ್ನು ನೋಡಿ ಸಿದ್ದರಾಮಯ್ಯ ಕಲಿಯಿರಿ. ಪರಮೇಶ್ವರ್ ಸೋಲಿಗೆ ನಾನು ಕಾರಣ ಅಲ್ಲ ಹೇಳಿ ಸಿಎಂ ದೇವಿ ಚಾಮುಂಡಿ ಮೇಲೆ ಪ್ರಮಾಣ ಮಾಡಲಿ. ಪರಮೇಶ್ವರ್ ಸೋಲಿಸಿದ್ದು ಇದೇ ಸಿದ್ದರಾಮಯ್ಯ. ನೀವು ಹೇಳಿದಂತೆ ನಾನು ಕೇಳ್ತೇನೆ ಎಂದು ಸವಾಲು ಹಾಕಿದ್ರು.

  • ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಸಿಲುಕಿದ ಗರ್ಭಿಣಿ – ಪೊಲೀಸರ ವಿರುದ್ಧ ಜನಾಕ್ರೋಶ

    ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಸಿಲುಕಿದ ಗರ್ಭಿಣಿ – ಪೊಲೀಸರ ವಿರುದ್ಧ ಜನಾಕ್ರೋಶ

    ಉಡುಪಿ: ಬಿಜೆಪಿ ಜನ ಸುರಕ್ಷಾ ಯಾತ್ರೆ ಕುಂದಾಪುರಕ್ಕೆ ಆಗಮಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಕುಂದಾಪುರ ಮುಖ್ಯ ಪೇಟೆಯ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರಿಂದ ಗರ್ಭಿಣಿ ಮಹಿಳೆ ಸಿಲುಕಿ ನರಳಾಡುವಂತಾಗಿತ್ತು.

    ರಸ್ತೆ ಬಂದ್ ವಿರುದ್ಧ ಸ್ಥಳೀಯ ವಾಹನ ಸವಾರರು ಅಕ್ರೋಶ ವ್ಯಕ್ತಗೊಳಿಸಿದ್ರು. ಆಸ್ಪತ್ರೆಯ ಪಕ್ಕದಲ್ಲೇ ಟ್ರಾಫಿಕ್ ಜಾಮ್ ಆಗಿದ್ದರಿಂದ, ಬಿಸಿಲಿನ ಝಳಕ್ಕೆ ಬಸವಳಿದ ಗರ್ಭಿಣಿಯನ್ನು ಗಮನಿಸಿದ ಆಟೋ ಚಾಲಕರು ಪೊಲೀಸರ ವಿರುದ್ಧ ಕೆಂಡಾಮಂಡಲರಾದರು. ಸ್ಥಳೀಯ ಆಟೋ ಚಾಲಕರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೇರೆ ರಿಕ್ಷಾದಲ್ಲಿ ಆಸ್ಪತ್ರೆಗೆ ಮಹಿಳೆಯನ್ನು ಕರೆದುಕೊಂಡು ಹೋದರು.

    ಪಾದಯಾತ್ರೆ ಬರುವ ಒಂದು ಗಂಟೆ ಮುಂಚೆ ರಸ್ತೆ ತಡೆ ಮಾಡಿದ್ದಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

  • ಮಣಿಪಾಲದಲ್ಲಿ ಮಾಡರ್ನ್ ಹೋಳಿ- ಬ್ರಹ್ಮಾವರದಲ್ಲಿ ಸಾಂಪ್ರದಾಯಿಕ ಹೋಳಿ

    ಮಣಿಪಾಲದಲ್ಲಿ ಮಾಡರ್ನ್ ಹೋಳಿ- ಬ್ರಹ್ಮಾವರದಲ್ಲಿ ಸಾಂಪ್ರದಾಯಿಕ ಹೋಳಿ

    ಉಡುಪಿ: ಇಂದು ದೇಶಾದ್ಯಂತ ಹೋಳಿ ಹಬ್ಬದ ಆಚರಣೆ ನಡೆದಿದೆ. ಉಡುಪಿ ಜಿಲ್ಲೆ ಮಣಿಪಾಲ ವಿವಿಯ ವಿದ್ಯಾರ್ಥಿಗಳು ಎಂಐಟಿ ಕಾಲೇಜಿನ ಮೈದಾನದಲ್ಲಿ ಹೋಳಿ ಹಬ್ಬ ಆಚರಿಸಿದರು. ಇವತ್ತು ಕಾಲೇಜಿಗೆ ರಜೆ ನೀಡಲಾಗಿದ್ದು ಸಾವಿರಾರು ಮಂದಿ ಹೋಳಿ ಸೆಲೆಬ್ರೇಷನ್‍ನಲ್ಲಿ ಪಾಲ್ಗೊಂಡರು.

    ಮೂರು ದಿನಗಳ ಕಾಲ ಹೋಳಿ ಆಚರಣೆ ಮಣಿಪಾಲದಲ್ಲಿ ಇರುತ್ತದೆ. ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಯುವಕ ಯುವತಿಯರು ಸಂಭ್ರಮಿಸಿದರು. ಹಾಡಿಗೆ ಹೆಜ್ಜೆ ಹಾಕಿದ್ರು. ಉತ್ತರ ಭಾರತ ಮೂಲದವರೇ ಹೆಚ್ಚಾಗಿರುವ ಮಣಿಪಾಲದಲ್ಲಿ ಪ್ರತೀ ವರ್ಷ ಹೋಳಿ ಸೆಲೆಬ್ರೆಷನ್ ಜೋರಾಗಿಯೇ ಇರುತ್ತದೆ. ಈ ಬಾರಿ ವಿದೇಶದ ವಿದ್ಯಾರ್ಥಿಗಳೂ ಹೋಳಿಯಲ್ಲಿ ಪಾಲ್ಗೊಂಡು ಖುಷಿಪಟ್ಟರು.

    ಸಾಂಪ್ರದಾಯಿಕ ಹೋಳಿ: ಇದು ಮಾಡರ್ನ್ ಹೋಳಿಯಾದ್ರೆ ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆಯೂ ನಡೆಯುತ್ತದೆ. ಶತಮಾನದ ಹಿಂದೆ ಮಹಾರಾಷ್ಟ್ರದಿಂದ ಬಂದ ಮರಾಠಿಗರು ಇವರು. ಉಡುಪಿ ಜಿಲ್ಲೆಯ ಬ್ರಹ್ಮಾವರ, ಪರ್ಕಳ, ಸರಳೇಬೆಟ್ಟು-ಹಿರೇಬೆಟ್ಟು, ಕಂಚಿಬೈಲು ಮಣಿಪಾಲ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ.

    ಶಿವಾಜಿ ಮಹಾರಾಜನ ವಂಶದವರೆಂದು ಕರೆಸಿಕೊಳ್ಳುವ ನಾಯಕ್ ಜನ ಇವರು ಪ್ರತೀ ಕುಟುಂಬದಿಂದ ಒಬ್ಬ ಈ ಆಚರಣೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮನೆ ಮನೆಗೆ ತೆರಳಿ ಗುಮ್ಟೆ ಮತ್ತು ತಾಳ ನುಡಿಸಿ, ಜನಪದ ಹಾಡುಗಳನ್ನು ಹಾಡಿ ಕುಣಿಯುತ್ತಾರೆ. ಕಲಾವಿದರು ದೇವಿ ತುಳಜಾ ಭವಾನಿಯ ಆರಾಧನೆಯ ಪದಗಳನ್ನು ಹಾಡುತ್ತಾರೆ.

    ಮನೆಯ ಯಜಮಾನರು ಅಕ್ಕಿ, ಕಾಯಿ, ವೀಳ್ಯ ಕೊಟ್ಟು ಬಂದವರನ್ನು ಸನ್ಮಾನಿಸುತ್ತಾರೆ. ಹೋಳಿ ಕುಣಿಯುವ ಕಲಾವಿದರು ಮಕ್ಕಳನ್ನ ಹಿಡಿದು ಕುಣಿದರೆ ಅವರ ರೋಗ ರುಜಿನಗಳೆಲ್ಲಾ ಕಳೆದು ಹೋಗುತ್ತದೆ ಎಂಬ ನಂಬಿಕೆ ಕೂಡ ಇದೆ.

  • ಉಡುಪಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ – ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ನವೀನ್ ಕೊಲೆ

    ಉಡುಪಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ – ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ನವೀನ್ ಕೊಲೆ

    ಉಡುಪಿ: ರೌಡಿ ಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ನಡೆದಿದೆ.

    ಪಡುಬಿದ್ರೆಯಲ್ಲಿ ನವೀನ್ ಡಿಸೋಜಾ ಕೊಲೆಯಾದ ರೌಡಿಶೀಟರ್. ಪಡುಬಿದ್ರೆ ಸಮೀಪದ ಇನ್ನಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ಲೋರಿಯಾ ಬಾರ್ ನ ಹೊರಗೆ ನವೀನ್ ಡಿಸೋಜಾನ ಮೇಲೆ ದಾಳಿ ನಡೆದಿದ್ದು, ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಬುಧವಾರ ರಾತ್ರಿ ಸುಮಾರು 8 ಗಂಟೆಗೆ ನವೀನ್ ಬಾರ್ ಗೆ ಬಂದಿದ್ದನು. ಎಂದಿನಂತೆ ಮದ್ಯ ಸೇವಿಸಿದ್ದನು. ನಂತರ ಹೊರ ಬಂದಿದ್ದಾನೆ. ಆದರೆ ನವೀನ್ ಹೊರಗೆ ಬರುವುದನ್ನೇ ಮೂರ್ನಾಲ್ಕು ಜನರ ತಂಡ ಹೊಂಚು ಹಾಕಿ ಕುಳಿತ್ತಿತ್ತು ಎಂಬ ಮಾಹಿತಿ ಪೊಲೀಸರಿಂದ ಸಿಕ್ಕಿದೆ. ನಂತರ ಏಕಾಏಕಿ ಎಲ್ಲರೂ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಪರಿಣಾಮ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

    ನವೀನ್ ಡಿಸೋಜಾ ಮೇಲೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಹೊಡೆದಾಟ, ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದು, ಎಸ್.ಪಿ. ಲಕ್ಷ್ಮಣ್ ನಿಂಬರ್ಗಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

    ಈ ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ನೋಟಕ್ಕೆ ಹಿಂದಿನ ದ್ವೇಷದ ಕೊಲೆ ಎನ್ನಲಾಗುತ್ತಿದೆ. ನವೀನ್ ಡಿಸೋಜಾ ವಿರೋಧಿಗಳು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸ್ಥಳದಲ್ಲಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಅಪ್‍ಡೇಟ್ ಸುದ್ದಿ
    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಆರೋಪಿಗಳ ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಪಡುಬಿದ್ರೆ ಸಮೀಪದ ಇನ್ನಾ ಗ್ರಾಮದಲ್ಲಿರುವ ಗ್ಲೋರಿಯಾ ಬಾರಿನಲ್ಲಿ ನವೀನ್ ಡಿಸೋಜಾ, ಗಿರೀಶ್ ಮತ್ತು ನಾಗೇಶ್ ಡ್ರಿಂಕ್ಸ್ ಮಾಡೋದಕ್ಕೆ ಸಂಜೆಯೇ ಬಂದಿದ್ದರು. ಮದ್ಯಪಾನ ಮಾಡಿ ಮಧ್ಯರಾತ್ರಿ ಹೊರಬಂದ ಮೂರು ಜನ ಬೈಕ್ ಏರಿ ಮನೆಗೆ ಹೊರಟಿದ್ದರು. ಈ ಸಂದರ್ಭ ಕಾರಿನಲ್ಲಿ ಬಂದು ಹೊಂಚು ಹಾಕುತ್ತಿದ್ದ ದುಷ್ಕರ್ಮಿಗಳು ಬೈಕಿಗೆ ಡಿಕ್ಕಿ ಹೊಡೆಸಿದ್ದಾರೆ. ಮೂರು ಜನ ನೆಲಕ್ಕುರುಳಿದ್ದಾರೆ.

    ನವೀನ್ ಮತ್ತು ಗೆಳೆಯರು ಕೆಳಕ್ಕೆ ಬಿದ್ದೊಡನೆ ಕಾರಿನಿಂದ ಇಳಿದ ದುಷ್ಕರ್ಮಿಗಳು ತಲವಾರಿಂದ ದಾಳಿ ನಡೆಸಿದ್ದಾರೆ. ಭಯಗೊಂಡ ಗಿರೀಶ್ – ನಾಗೇಶ್ ಸ್ಥಳದಿಂದ ಭಯಗೊಂಡು ಓಡಿದ್ದಾರೆ. ನವೀನ್ ಡಿಸೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಡುಪಿ ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ತಕ್ಷಣ ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ನಡೆಸಲಾಗುತ್ತಿದೆ.

    ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ನವೀನ್ ಡಿಸೋಜಾ ಭಾಗಿಯಾಗಿದ್ದು ಹಲವು ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿತ್ತು. ಆರೋಪಿಗಳ ಬಗ್ಗೆ ಕೆಲ ಸಾಕ್ಷ್ಯಗಳು ದೊರೆತಿದ್ದು ಶೀಘ್ರ ಬಂಧಿಸುವುದಾಗಿ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ಹೇಳಿದ್ದಾರೆ.

    ಬಿಳಿ ಸ್ವಿಫ್ಟ್ ಕಾರಿನಲ್ಲಿ ದುಷ್ಕರ್ಮಿಗಳು ಬಂದಿದ್ದರು. ಬೈಕ್ ಹತ್ತಿ ಯು ಟರ್ನ್ ಮಾಡಿ ಹೊರಟಾಗ ಕಣ್ಣಿಗೆ ಲೈಟ್ ಹಾಕಿದ್ದಾರೆ. ಕಾರನ್ನು ಬೈಕಿಗೆ ಗುದ್ದಿ ಬೀಳಿಸಿದ್ದಾರೆ. ತಲ್ವಾರ್ ಬಳಸಿಕೊಂಡು ಹಲ್ಲೆ ಮಾಡಿದ್ದಾರೆ. ಹೊಡೆತದಿಂದ ತಪ್ಪಿಸಿಕೊಳ್ಳಲು ನವೀನ್ ಎರಡು ಕೈಗಳನ್ನು ಮುಂದೆ ತಂದಾಗ ಆದಂತಹ ಗಾಯಗಳು ದೇಹದ ಮೇಲೆ ಇದೆ. ತಲೆಗೆ ಗಂಭೀರ ಗಾಯವಾಗಿದೆ. ಮಣಿಪಾಲ ಕೆಎಂಸಿಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳನ್ನು ಕೂಡಲೇ ಪತ್ತೆ ಮಾಡುತ್ತೇವೆ ಎಂದು ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

  • ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು!

    ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು!

    ಉಡುಪಿ: ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.

    ಕಾಪು ತಾಲೂಕಿನ ನಗರದೊಳಗೆ ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ದಾಸಪ್ಪ ಮತ್ತು ಉಮೇಶ್ ಎಂಬ ಚಿತ್ರದುರ್ಗ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಪುರಸಭೆಗೆ ಒಳಪಟ್ಟ ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

    ಸುಮಾರು 13 ಅಡಿ ಮಣ್ಣು ಅಗಿಯುತ್ತಿದ್ದಾಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ಘನ ವಾಹನಗಳಿಗೆ ಭೂಮಿ ಅದುರಿ ಮಣ್ಣು ಕುಸಿದಿದೆ ಎನ್ನಲಾಗಿದೆ. ಮೇಲಿನಿಂದ ಬಿದ್ದ ಭಾರೀ ಗಾತ್ರದ ಮಣ್ಣಿಗೆ ಕಾರ್ಮಿಕರು ಮೇಲೆ ಬರಲು ಸಾಧ್ಯವಾಗಲಿಲ್ಲ.

    ವಾಸುದೇವ ಶೆಟ್ಟಿ ಕಾಮಗಾರಿಯ ಗುತ್ತಿಗೆದಾರನಾಗಿದ್ದು ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರ್ಮಿಕರನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

    ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕೊಲ್ಲೂರಿಗೆ ಮಲಯಾಳಂ ಸೂಪರ್ ಸ್ಟಾರ್- ಮೂಕಾಂಬಿಕೆಯ ದರ್ಶನ ಪಡೆದ ಮೋಹನ್ ಲಾಲ್

    ಕೊಲ್ಲೂರಿಗೆ ಮಲಯಾಳಂ ಸೂಪರ್ ಸ್ಟಾರ್- ಮೂಕಾಂಬಿಕೆಯ ದರ್ಶನ ಪಡೆದ ಮೋಹನ್ ಲಾಲ್

    ಉಡುಪಿ: ಮಲಯಾಳಂ ಸೂಪರ್ ಸ್ಟಾರ್, ನಿರ್ದೇಶಕ ಮೋಹನ್‍ಲಾಲ್ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ಉಡುಪಿ ಜಿಲ್ಲೆ ಕುಂದಾಪುರದ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ದೇವಸ್ಥಾನಕ್ಕೆ ಭೇಟಿಕೊಟ್ಟು ದೇವಿಯ ಸನ್ನಿಧಿಯಲ್ಲಿ ಕೆಲಕಾಲ ಧ್ಯಾನ ಮಾಡಿದರು. ದೇವಿಗೆ ಮುಂಜಾನೆ ನಡೆಯುವ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು.

    ದೇವಸ್ಥಾನದ ಪ್ರಾಂಗಣದಲ್ಲಿ ಗಣಪತಿ, ವೀರಭದ್ರ ಗುಡಿಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಮೋಹನ್ ಲಾಲ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು, ವೀಡಿಯೋ ಮಾಡಲು ನೂರಾರು ಜನ ಮುಗಿಬಿದ್ದರು. ಇದನ್ನೂ ಓದಿ: ಸಾಮಾನ್ಯರಂತೆ ಸುಳ್ಯದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ

    ಸುಬ್ರಹ್ಮಣ್ಯಕ್ಕೆ ಭೇಟಿ: ಇದೇ ತಿಂಗಳ 15ರಂದು ಇವರು ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು. ನಟ ಮೋಹನ್ ಲಾಲ್ ಗುರುವಾರ ಮುಂಜಾನೆ ದೇವರ ದರ್ಶನ ಪಡೆದು ಬಳಿಕ ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಮಲಯಾಳಂ ಕಾಯಂಕುಳಂ ಕೊಚ್ಚುನ್ನಿ ಚಿತ್ರದ ಚಿತ್ರೀಕರಣ ಪುತ್ತೂರು ತಾಲೂಕಿನ ಕಡಬದ ಬಲ್ಯ ಹಾಗೂ ಪದವು ನಲ್ಲಿ ನಡೆಯುತ್ತಿತ್ತು. ಕೊಚ್ಚುನ್ನಿ ಸಿನಿಮಾದಲ್ಲಿ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

    ನಿವಿನ್ ಪೌಲ್, ಪ್ರಿಯಾ ಆನಂದ್ ಸೇರಿದಂತೆ ಇತರ ಸಹ ನಟರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ಬಹುಕೋಟಿ ವೆಚ್ಚದ ಮಮ್ಮುಟ್ಟಿ ನಟನೆಯ ಮಾಮಾಂಗಂ ಚಿತ್ರದ ಚಿತ್ರೀಕರಣ ಕೂಡಾ ಕಡಬದ ಕೊಯಿಲ ಫಾರ್ಮ್‍ನಲ್ಲಿ ನಡೆದಿತ್ತು. ಎರಡೂ ಚಿತ್ರದ ನಟರಿಗೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

  • ಉಡುಪಿ ಶೀರೂರು ಮಠದಿಂದ ಹಸು ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

    ಉಡುಪಿ ಶೀರೂರು ಮಠದಿಂದ ಹಸು ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಒಳಪಟ್ಟ ಶೀರೂರು ಮೂಲಮಠದ ಹಟ್ಟಿಯಿಂದ ಗಬ್ಬದ (ಗರ್ಭಿಣಿ) ಹಸುವಿನ ಕಳ್ಳತನವಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕನೇ ಬಾರಿಗೆ ಗೋಶಾಲೆಗೆ ನುಗ್ಗಿದ್ದಾರೆ.

    ಉಡುಪಿ ಶ್ರೀಕೃಷ್ಣ ಮಠಕ್ಕೆ ಒಳಪಟ್ಟ ಶೀರೂರು ಮಠದ ಮೂಲ ಸಂಸ್ಥಾನ ಉಡುಪಿಯ ಹೊರವಲಯದಲ್ಲಿರುವ ಹಿರಿಯಡ್ಕದಲ್ಲಿದೆ. ಇಲ್ಲಿಗೆ ಭಾನುವಾರ ರಾತ್ರಿ ನಾಲ್ಕು ಮಂದಿ ಕಳ್ಳರು ಕಾರಿನಲ್ಲಿ ಬಂದಿದ್ದಾರೆ. ಟಾರ್ಚ್ ಹಿಡಿದು ಮಠದ ಕಡೆ ಬಂದ ಇಬ್ಬರು ಗೋಶಾಲೆಗೆ ನುಗ್ಗಿದ್ದಾರೆ.

    ಕೆಲವೇ ಕ್ಷಣಗಳಲ್ಲಿ ಒಂದು ಹಸುವನ್ನು ಹಗ್ಗ ಹಾಕಿ ಎಳೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಠದ ಸಿಬ್ಬಂದಿಗೆ ಕಳ್ಳತನದ ಶಬ್ದ ಕೇಳಿ ಎದ್ದು ಬಂದಿದ್ದಾರೆ. ಅಷ್ಟರಲ್ಲಿ ಒಂದು ಹಸುವನ್ನು ಕಾರಿಗೆ ತುಂಬಿಕೊಂಡಾಗಿತ್ತು. ಸಿಬ್ಬಂದಿ ತಕ್ಷಣ ಸೈರನ್ ಮೊಳಗಿಸಿದ್ದಾರೆ. ಬಂದ ದುಷ್ಟರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಶೀರೂರು ಮಠದಲ್ಲಿ ಇದು ಮೂರನೇ ಬಾರಿ ಕಳ್ಳತನ ಆಗುತ್ತಿರೋದು. ಒಂದು ಬಾರಿ ಖಾಲಿ ಕೈಯಲ್ಲಿ ಪರಾರಿಯಾದ ಕಳ್ಳರು, ಮತ್ತೊಮ್ಮೆ ವಾಹನವನ್ನು ಮರಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಇದೀಗ ಮೂರನೇ ಬಾರಿ ಒಂದು ಹಸುವನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹಿರಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಹಿಂದೆ ಒಮ್ಮೆ ಕಳ್ಳತನ ಮಾಡುತ್ತಿದ್ದ ವಾಹನವನ್ನು ಸ್ವತಃ ಶೀರೂರು ಸ್ವಾಮೀಜಿಯೆ ಕಾರಿನಲ್ಲಿ ಬೆನ್ನಟ್ಟಿ ಹೋಗಿದ್ದರು. ಈ ಸಂದರ್ಭ ಸ್ವಾಮೀಜಿಯ ಕಾರು ಅಪಘಾತಕ್ಕೊಳಗಾಗಿತ್ತು. ಈ ಸಂದರ್ಭ ಕೂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.