Tag: ಉಡುಗೊರೆ

  • ಮದ್ವೆಗೆ ಬಂದ ಅತಿಥಿಗಳಿಗೆ ನವಜೋಡಿಯಿಂದ ಹೆಲ್ಮೆಟ್ ಗಿಫ್ಟ್

    ಮದ್ವೆಗೆ ಬಂದ ಅತಿಥಿಗಳಿಗೆ ನವಜೋಡಿಯಿಂದ ಹೆಲ್ಮೆಟ್ ಗಿಫ್ಟ್

    – ನಿಮ್ಮ ಜೀವ ನಿಮ್ಮದಲ್ಲ, ನಿಮ್ಮ ಕುಟುಂಬಸ್ಥರದು

    ಭೋಪಾಲ್: ಮದುವೆಗೆ ಬಂದ ಅತಿಥಿಗಳಿಗೆ ನವಜೋಡಿ ಹೆಲ್ಮೆಟ್ ಉಡುಗೊರೆಯಾಗಿ ನೀಡಿದ ಅಪರೂಪದ ದೃಶ್ಯ ಮಧ್ಯಪ್ರದೇಶದ ಇಂದೋರ್‌‌ನಲ್ಲಿ ಕಂಡು ಬಂದಿದೆ.

    ಸಾರಂಗ್ ಪಾರಾಶರ್ ಹಾಗೂ ವರ್ಷ ಶರ್ಮಾ ತಮ್ಮ ಮದುವೆಯಲ್ಲಿ ಹೆಲ್ಮೆಟ್ ಹಂಚಿದ್ದಾರೆ. ತಂದೆಯೊಬ್ಬರು ಟ್ರಾಫಿಕ್ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸುವ ಮೂಲಕ ಮಗನ ಮದುವೆಯಲ್ಲಿ ಹೊಸ ಪ್ರಯತ್ನವನ್ನು ಕೈಗೊಂಡರು.

    ಲಾಸುಡಿಯಾ ಮೋರಿಯಲ್ಲಿ ನಡೆದ ಮದುವೆಯಲ್ಲಿ ಸಾರಂಗ್ ಹಾಗೂ ವರ್ಷ ಅತಿಥಿಗಳಿಗೆ ಹೆಲ್ಮೆಟ್ ಹಂಚಿದ್ದಾರೆ. ಟ್ರಾಫಿಕ್‍ನಲ್ಲಿ ಇಂದೋರ್ ವನ್ನು ನಂ. 1 ಮಾಡಲು ಈ ನಿರ್ಧಾರ ಕೈಗೊಂಡ ನವಜೋಡಿಗೆ ಅತಿಥಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೆಲ್ಮೆಟ್ ನೀಡುವ ಸಂದರ್ಭದಲ್ಲಿ ನವಜೋಡಿ ನಿಮ್ಮ ಜೀವ ನಿಮ್ಮದಲ್ಲ, ನಿಮ್ಮ ಕುಟುಂಬಸ್ಥರದು. ರಸ್ತೆಯಲ್ಲಿ ಸಂಚರಿಸುವಾಗ ಸುರಕ್ಷಿತವಾಗಿರಿ ಎಂದು ಸಂದೇಶ ನೀಡಿದರು. ರಸ್ತೆ ಸುರಕ್ಷತೆಗಾಗಿ ಹೆಲ್ಮೆಟ್ ಬಳಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ನವಜೋಡಿ ಹೆಲ್ಮೆಟ್ ಉಡುಗೊರೆಯಾಗಿ ನೀಡಿದ್ದಾರೆ.

    ಈ ಬಗ್ಗೆ ವಧು ವರ್ಷ ಪ್ರತಿಕ್ರಿಯಿಸಿ, ಈ ಮದುವೆಯೊಂದಿಗೆ ಕುಟುಂಬವನ್ನು ಹೊಂದಲಿದ್ದೇವೆ. ನಿಮ್ಮ ಜೀವ ಕೇವಲ ನಿಮ್ಮದ್ದಲ್ಲ, ಬದಲಾಗಿ ನಿಮ್ಮ ಇಡೀ ಕುಟುಂಬದ್ದು. ಹಾಗಾ ನೀವು ಯಾವಾಗಲೂ ಸುರಕ್ಷಿತವಾಗಿರಿ. ನಿಮ್ಮ ಕುಟುಂಬಸ್ಥರು ನಿಮಗಾಗಿ ಕಾಯುತ್ತಿದ್ದಾರೆ ಎಂಬ ಸಂದೇಶವನ್ನು ಹೆಲ್ಮೆಟ್ ನೀಡುವ ಮೂಲಕ ತಿಳಿಸತ್ತಿದ್ದೇವೆ. ನೀವು ಅನೇಕ ಜನರಿಗೆ ಬಹಳ ಮುಖ್ಯ. ನಮ್ಮನ್ನು ನಾವು ಸುರಕ್ಷಿತವಾಗಿರಿಸಿಕೊಂಡು ಇತರರನ್ನು ಸುರಕ್ಷಿತವಾಗಿರಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸಬೇಕು ಎಂದರು.

  • ಅಕ್ಷಯ್‍ರಿಂದ ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್

    ಅಕ್ಷಯ್‍ರಿಂದ ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್

    ಮುಂಬೈ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ತಮ್ಮ ಪತ್ನಿ, ನಟಿ ಟ್ವಿಂಕಲ್ ಖನ್ನಾ ಅವರಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ.

    ಅಕ್ಷಯ್ ತಮ್ಮ ಮುಂಬರುವ ‘ಗುಡ್ ನ್ಯೂಸ್’ ಚಿತ್ರದ ಪ್ರಮೋಶನ್‍ಗಾಗಿ ‘ದಿ ಕಪಿಲ್ ಶರ್ಮಾ ಶೋ’ಗೆ ಹೋಗಿದ್ದರು. ಈರುಳ್ಳಿ ಕಿವಿಯೋಲೆಯನ್ನು ಅಕ್ಷಯ್ ಮೊದಲು ನಟಿ ಕರೀನಾ ಕಪೂರ್ ಅವರಿಗೆ ನೀಡಲು ಮುಂದಾದರು. ಆದರೆ ಕರೀನಾ ಅದನ್ನು ಸ್ವೀಕರಿಸಲಿಲ್ಲ. ನಂತರ ಅಕ್ಷಯ್ ತಮ್ಮ ಪತ್ನಿಗೆ ಆ ಕಿವಿಯೋಲೆ ನೀಡಿದ್ದಾರೆ. ಅಕ್ಷಯ್ ತಮ್ಮ ಪತ್ನಿ ಟ್ವಿಂಕಲ್ ಅವರಿಗೆ ಈರುಳ್ಳಿ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಟ್ವಿಂಕಲ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಆ ಈರುಳ್ಳಿಯ ಕಿವಿಯೋಲೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ನನ್ನ ಸಂಗಾತಿ ‘ದಿ ಕಪಿಲ್ ಶರ್ಮಾ ಶೋ’ ಕಾರ್ಯಕ್ರಮದಿಂದ ಬಂದರು. ಈ ವೇಳೆ ಅವರು ಈರುಳ್ಳಿ ಕಿವಿಯೋಲೆ ತೋರಿಸಿ, ನಾನು ಇದನ್ನು ಕರೀನಾಗೆ ತೋರಿಸಿದೆ. ಆದರೆ ಅವರು ಆಕರ್ಷಿತರಾಗಿಲ್ಲ. ಇದು ನಿನಗೆ ಇಷ್ಟವಾಗಬಹುದು ಎಂದು ನನಗನಿಸಿತು. ಹಾಗಾಗಿ ನಿನಗೆ ನೀಡುತ್ತಿದ್ದೇನೆ. ಕೆಲವು ಬಾರಿ ಚಿಕ್ಕ ಹಾಗೂ ಸಾಧಾರಣಾ ವಸ್ತು ನಮ್ಮ ಮನಸ್ಸು ಗೆಲ್ಲುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಸದ್ಯ ಅಕ್ಷಯ್ ಕುಮಾರ್ ಅವರು ತಮ್ಮ ‘ಗುಡ್ ನ್ಯೂಸ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಅವರಿಗೆ ನಾಯಕಿಯಾಗಿ ನಟಿ ಕರೀನಾ ಕಪೂರ್ ನಟಿಸಿದ್ದಾರೆ. ಅಲ್ಲದೆ ದಿಲ್‍ಜಿತ್ ದೋಸನ್‍ಜ್ ಹಾಗೂ ಕಿಯಾರಾ ಅಡ್ವಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 27ರಂದು ಈ ಚಿತ್ರ ಬಿಡುಗಡೆಯಾಗಲಿದೆ.

  • ಹೋಟೆಲಿನಲ್ಲಿ ತಿಂಡಿ ಸರ್ವ್ ಮಾಡಿದ್ದ ಮಹಿಳೆಗೆ ದಂಪತಿ ಕಾರ್ ಗಿಫ್ಟ್

    ಹೋಟೆಲಿನಲ್ಲಿ ತಿಂಡಿ ಸರ್ವ್ ಮಾಡಿದ್ದ ಮಹಿಳೆಗೆ ದಂಪತಿ ಕಾರ್ ಗಿಫ್ಟ್

    – ಪ್ರತಿ ದಿನ 22.5 ಕಿ.ಮೀ ನಡ್ಕೊಂಡೇ ಬರ್ತಿದ್ದ ಮಹಿಳಾ ವೇಟರ್
    – ಕಾರು ಗಿಫ್ಟ್ ನೀಡಿದ್ದರ ಕಾರಣ ಇಲ್ಲಿದೆ

    ಟೆಕ್ಸಾಸ್: ಧನ್ಯವಾದ ಹೇಳುವ ರೂಪದಲ್ಲಿ ಇಲ್ಲೊಂದು ಜೋಡಿ ಹೋಟೆಲಿನ ಮಹಿಳಾ ವೇಟರ್ ನ್ನು ನಿಬ್ಬೆರಗಾಗುವಂತೆ ಮಾಡಿದ್ದು, ಕಾರ್ ಉಡುಗೊರೆಯಾಗಿ ನೀಡಿದ್ದಾರೆ.

    ಅಮೆರಿಕದ ಟೆಕ್ಸಾಸ್‍ನ ಗ್ಯಾಲ್ವೆಸ್ಟನ್‍ನಲ್ಲಿ ಘಟನೆ ನಡೆದಿದ್ದು, ಆಟ್ರಿಯಾನ್ನಾ ಎಡ್ವರ್ಡ್ಸ್ ಅವರು ಅಮೆರಿಕನ್ ರೆಸ್ಟೋರೆಂಟ್ ಚೈನ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೋಟೆಲಿಗೆ ತಿಂಡಿ ತಿನ್ನಲು ದಂಪತಿ ಬರುತ್ತಾರೆ. ಆಗ ಎಡ್ವರ್ಡ್ಸ್ ಅವರು ದಂಪತಿಗೆ ತಿಂಡಿಯನ್ನು ಸರ್ವ್ ಮಾಡುತ್ತಾರೆ. ಆದರೆ ರಾತ್ರಿ ಊಟದ ಹೊತ್ತಿಗೆ ಈ ದಂಪತಿ ಎಡ್ವರ್ಡ್ಸ್ ಅವರಿಗೆ ಕಾರ್ ಗಿಫ್ಟ್ ನೀಡಿ ಆಶ್ಚರ್ಯವಾಗುವಂತೆ ಮಾಡುತ್ತಾರೆ.

    ಅಷ್ಟಕ್ಕೂ ದಂಪತಿ ಏಕೆ ಎಡ್ವರ್ಡ್ಸ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದರು ಎಂಬ ಕಥೆ ಇಲ್ಲಿದೆ. ಹೋಟೆಲಿನಲ್ಲಿ ತಿಂಡಿ ತಿನ್ನುವ ವೇಳೆ ದಂಪತಿ ತಮಗೆ ಆಹಾರ ಸರ್ವ್ ಮಾಡಿದ ಮಹಿಳೆ ಎಡ್ವರ್ಡ್ಸ್ ಅವರ ಬಗ್ಗೆ ತಿಳಿಯುತ್ತಾರೆ. ಈ ವೇಳೆ ಎಡ್ವರ್ಡ್ಸ್ ಅವರು ಕೆಲಸಕ್ಕಾಗಿ ಪ್ರತಿ ನಿತ್ಯ 14 ಮೈಲಿ(22.5 ಕಿ.ಮೀ.) ನಡೆಯುತ್ತಾರೆ. ಇವರು ಇಷ್ಟು ನಡೆಯಲು ಕಾರಣ ತಾವೂ ಕಾರುಕೊಳ್ಳಬೇಕೆಂಬ ಮಹದಾಸೆ. ಇದಕ್ಕಾಗಿ ಹಣ ಉಳಿಸಲು ನಿತ್ಯ 14 ಮೈಲಿ ನಡೆದುಕೊಂಡೇ ಕೆಲಸಕ್ಕೆ ಬರುತ್ತಾರೆ ಎಂಬುದು ದಂಪತಿ ಅರಿವಿಗೆ ಬರುತ್ತದೆ.

    ತಕ್ಷಣವೇ ದಂಪತಿ ಬ್ರೋಡ್ ವೇ ರಸ್ತೆಯಲ್ಲಿರುವ ಕ್ಲಾಸಿಕ್ ಗ್ಯಾಲ್ವೆಸ್ಟನ್ ಆಟೋ ಗ್ರೂಪ್‍ಗೆ ತೆರಳಿ ಅಡ್ವಡ್ರ್ಸ್‍ಗಾಗಿ ಕಾರು ಖರೀದಿಸುತ್ತಾರೆ. ಹಲವು ಗಂಟೆಗಳ ನಂತರ ದಂಪತಿ ಡೆನ್ನೀಸ್ ಹೋಟೆಲ್‍ಗೆ ಆಗಮಿಸಿ ಅಡ್ವಡ್ರ್ಸ್ ಅವರಿಗೆ 2011 ನಿಸ್ಸಾನ್ ಸೆಂಟ್ರಾ ಕಾರನ್ನು ಉಡುಗೊರೆಯಾಗಿ ನೀಡುತ್ತಾರೆ.

    ಎಡ್ವರ್ಡ್ಸ್ ತುಂಬಾ ಅಳುತ್ತಿದ್ದಳು, ಇದನ್ನು ನನಗೆ ಸಹಿಸಲಾಗಲಿಲ್ಲ. ಹೀಗಾಗಿ ಕಾರ್ ಉಡುಗೊರೆಯಾಗಿ ನೀಡಿದೆ ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಕಾರು ಖರೀದಿಸಿ ಉಡುಗೊರೆಯಾಗಿ ನೀಡಿದ ಮಹಿಳೆ ತಿಳಿಸಿದ್ದಾರೆ.

    ಈ ಉಡುಗೊರೆಯಿಂದಾಗಿ ಎಡ್ವರ್ಡ್ಸ್ ಅವರ ಪ್ರಯಾಣ 5 ಗಂಟೆಯಿಂದ 30 ನಿಮಿಷಕ್ಕೆ ಇಳಿದಿದೆ. ಯಾವುದೇ ಸಂಬಂಧವಿಲ್ಲದಿದ್ದರೂ, ಅವರು ಕೇಳದಿದ್ದರೂ ಸಹ ಅವಳ ಒಳ್ಳೆಯ ಗುಣವನ್ನು ಹಾಗೂ ಆಕೆಯ ಛಲವನ್ನು ನೋಡಿ ದಂಪತಿ ಈ ಉಡುಗೊರೆಯನ್ನು ನೀಡಿದ್ದಾರೆ. ಎಡ್ವರ್ಡ್ಸ್ ನಮಗೆ ಆಭಾರಿಯಾಗಿದ್ದರೆ ಅಷ್ಟೇ ಸಾಕು ಎಂದು ದಂಪತಿ ತಿಳಿಸಿದ್ದಾರೆ.

    ನಾನಿನ್ನೂ ಕನಸು ಕಾಣುತ್ತಿದ್ದೇನೆ ಎಂದು ನನಗನ್ನಿಸುತ್ತಿದೆ. ಯಾರಿಗಾದರೂ ಸಹಾಯ ಮಾಡುವುದು ನನ್ನ ಸ್ವಭಾವ. ಸಹಾಯ ಮಾಡಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಎಡ್ವರ್ಡ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.

    ಕಳೆದ ವರ್ಷ ಅಲಬಾಮಾ ವ್ಯಕ್ತಿಯೊಬ್ಬ ಕೆಲಸದ ಮೊದಲ ದಿನದಂದು ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು 32 ಕಿ.ಮೀ.ನಡೆದಿದ್ದ. ಕೆಲಸದ ಮೊದಲ ದಿನವೇ ಕಂಪನಿ ಮಾಲೀಕ ಅವನಿಗೆ ಕಾರ್ ಉಡುಗೊರೆಯಾಗಿ ನೀಡಿದ್ದ.

  • ಮಗ್ಳ ಮದ್ವೆಗೆ ಅತಿಥಿಗಳಿಗೆ ಪರಿಸರವಾದಿಯಿಂದ 5,000ಕ್ಕೂ ಹೆಚ್ಚು ಸಸಿಗಳ ಉಡುಗೊರೆ

    ಮಗ್ಳ ಮದ್ವೆಗೆ ಅತಿಥಿಗಳಿಗೆ ಪರಿಸರವಾದಿಯಿಂದ 5,000ಕ್ಕೂ ಹೆಚ್ಚು ಸಸಿಗಳ ಉಡುಗೊರೆ

    ಚಾಮರಾಜನಗರ: ಸಾಮಾನ್ಯವಾಗಿ ಮದುವೆಯಲ್ಲಿ ಬಂದ ಅತಿಥಿಗಳಿಗೆ ತಾಂಬೂಲದ ಜೊತೆ ಉಡುಗೊರೆಗಳನ್ನು ಕೊಡುವುದು ವಾಡಿಕೆ. ಆದರೆ ಕೊಳ್ಳೇಗಾಲದಲ್ಲಿ ಮದುವೆಯಲ್ಲಿ ಬಂದ ಅತಿಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಗಿಡಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ಹಸಿರೇ ಉಸಿರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪರಿಸರವಾದಿ ಕೃಷ್ಣಮೂರ್ತಿ ಅವರು ಕಳೆದ ಒಂದು ದಶಕದಿಂದ ಪರಿಸರ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಮರಗಳ ಹನನ, ಅಕ್ರಮ ಮರಳು ಸಾಗಾಣಿಕೆ, ಪ್ರಾಣಿಗಳ ಬೇಟೆ, ಮರಗಳ್ಳತನ ವಿರುದ್ಧ ಹೋರಾಟ ನಡೆಸುತ್ತಿರುವ ಇವರು ತಮ್ಮ ಮಗಳ ಮದುವೆಯಲ್ಲೂ ಪರಿಸರ ಕಾಳಜಿ ಮೆರೆದಿದ್ದಾರೆ.

    ಕೃಷ್ಣಮೂರ್ತಿ ತಮ್ಮ ಮಗಳ ಮದುವೆಗೆ ಬಂದ ಅತಿಥಿಗಳಿಗೆ ಹಾಗು ಬಂಧು- ಬಾಂಧವರಿಗೆ ತಟ್ಟೆ, ಲೋಟ ಮತ್ತಿತರ ಉಡುಗೊರೆ ಬದಲಿಗೆ ಗಿಡಗಳನ್ನು ನೀಡಿದರೆ ಹೇಗೆ ಎಂದು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

    ಕೊಳ್ಳೇಗಾಲದಲ್ಲಿ ನಡೆದ ತಮ್ಮ ಮಗಳು ಕಾವೇರಿಯ ಮದುವೆಗೆ ಬಂದ ಅತಿಥಿಗಳಿಗೆಲ್ಲಾ ಐದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೀಡುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ಮಾವು, ಬೇವು, ನೇರಳೆ, ಸೀಬೆ, ನಿಂಬೆ, ಸಪೋಟ, ಹೊಂಗೆ ಮತ್ತಿತರ ಜಾತಿಯ ಗಿಡಗಳನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.

    ಕೃಷ್ಣಮೂರ್ತಿ ಅವರ ಈ ಕಾಳಜಿಗೆ ಅರಣ್ಯ ಇಲಾಖೆಯೂ ಕೈಜೋಡಿಸಿತ್ತು. ಜೊತೆಗೆ ಮದುವೆಯಲ್ಲಿ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ರೋಲ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳಿಗೆ ಕಡಿವಾಣ ಹಾಕಲಾಗಿತ್ತು. ಈ ವಿವಾಹ ಮಹೋತ್ಸವಕ್ಕೆ ಬಂದ ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಇದೊಂದು ವಿಭಿನ್ನ ಪ್ರಯತ್ನವಾಗಿತ್ತು.

  • ನಟಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬಕ್ಕೆ ಸಿಕ್ತು ದೊಡ್ಡ ಗಿಫ್ಟ್

    ನಟಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬಕ್ಕೆ ಸಿಕ್ತು ದೊಡ್ಡ ಗಿಫ್ಟ್

    ಹೈದರಾಬಾದ್: ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಇಂದು 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ ಅನುಷ್ಕಾ ಅವರಿಗೆ ದೊಡ್ಡ ಗಿಫ್ಟ್‌ವೊಂದು ದೊರೆತಿದೆ.

    ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸಿದ ‘ನಿಶಬ್ದಂ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅನುಷ್ಕಾ ಮಾತು ಬಾರದ ಯುವತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅನುಷ್ಕಾ ಕೇವಲ ಮೂಕಾಭಿನಯದಲ್ಲಿ ನಟಿಸಿದ್ದಾರೆ.

    ನಿಶಬ್ದಂ ಹಾರರ್ ಚಿತ್ರವಾಗಿದ್ದು, ಟೀಸರ್‌ನಲ್ಲಿ ಅನುಷ್ಕಾಗೆ ಜೋಡಿಯಾಗಿ ನಟ ಮಾಧವನ್ ಕಾಣಿಸಿಕೊಂಡಿದ್ದಾರೆ. ಒಂದು ನಿಮಿಷ 14 ಸೆಕೆಂಡ್ ಇರುವ ಈ ವಿಡಿಯೋ ನೋಡಿ ಅನುಷ್ಕಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಟೀಸರಿನಲ್ಲಿ ಅನುಷ್ಕಾ ತುಂಬಾನೇ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಈ ಹಿಂದೆ ಅನುಷ್ಕಾ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದರು. ಚೇರ್ ಮೇಲೆ ಕುಳಿತುಕೊಂಡು ಪೇಂಟಿಂಗ್ ಮಾಡುತ್ತಿರುವ ಪೋಸ್ಟರನ್ನು ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಈ ಪೋಸ್ಟರ್ ಐದು ಭಾಷೆಯಲ್ಲಿ ರಿಲೀಸ್ ಆಗಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.

    ಈ ಸಿನಿಮಾ ಸುಮಾರು 30 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ನಿಶಬ್ದಂ’ ಸಿನಿಮಾದ ಮೂಲಕ 13 ವರ್ಷಗಳ ನಂತರ ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಕಾಣಿಸುತ್ತಿರುವುದು ವಿಶೇಷವಾಗಿದೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಶಾಲಿನಿ ಪಾಂಡೆ, ಸುಬ್ಬರಾಜು, ಮತ್ತು ಶ್ರೀನಿವಾಸ ಅವಸರಲಾ ತಾರಾಬಳಗವೇ ಸಿನಿಮಾದಲ್ಲಿದೆ.

  • ‘ಬಿಂದಾಸ್’ ಬೆಡಗಿಗೆ 11 ಕೋಟಿ ಮೌಲ್ಯದ ಕಾರ್ ಗಿಫ್ಟ್

    ‘ಬಿಂದಾಸ್’ ಬೆಡಗಿಗೆ 11 ಕೋಟಿ ಮೌಲ್ಯದ ಕಾರ್ ಗಿಫ್ಟ್

    ಹೈದರಾಬಾದ್: ಟಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ದೀಪಾವಳಿ ಹಬ್ಬಕ್ಕೆ ಬರೋಬ್ಬರಿ 11 ಕೋಟಿ ಮೌಲ್ಯದ ಕಾರನ್ನು ಗಿಫ್ಟ್ ಆಗಿ ಪಡೆದಿದ್ದಾರೆ.

    ನಟಿ ಹನ್ಸಿಕಾ ಬಹುದಿನಗಳಿಂದ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರನ್ನು ಖರೀದಿಸಬೇಕೆಂದು ಕನಸು ಕಂಡಿದ್ದರು. ಹೀಗಾಗಿ ಖ್ಯಾತ ಚರ್ಮರೋಗ ವೈದ್ಯೆಯಾಗಿರುವ ಹನ್ಸಿಕಾ ತಾಯಿ ಮೋನಾ ಮೋಟ್ವಾನಿ ತಮ್ಮ ಮಗಳಿಗೆ ಈ ಕಾರು ಗಿಫ್ಟ್ ನೀಡುವ ಮೂಲಕ ಅವರ ಆಸೆಯನ್ನು ನೆರವೇರಿಸಿದ್ದಾರೆ.

    ತನ್ನ ತಾಯಿ ಉಡುಗೊರೆಯಾಗಿ ನೀಡಿದ ದುಬಾರಿ ಬೆಲೆಯ ಕಾರನ್ನು ನೋಡಿ ಹನ್ಸಿಕಾ ತುಂಬಾ ಖುಷಿ ಆಗಿದ್ದಾರೆ. ಮೋನಾ ಮೋಟ್ವಾನಿ ಅವರು ಖರೀದಿಸಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್‍ನ ಬೆಲೆ ಸುಮಾರು 11 ಕೋಟಿ ಎಂದು ಹೇಳಲಾಗಿದೆ.

    ಈ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಬೆಲೆಗೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯ ಪ್ರೇರಿತ ಫೀಚರ್ಸ್ ಗಳನ್ನು ಈ ಕಾರಿನಲ್ಲಿ ಜೋಡಣೆ ಮಾಡಲಾಗಿದೆ. ಕಾರಿನ ಪ್ರತಿ ಭಾಗವು ಕೂಡ ಹ್ಯಾಂಡ್ ಮೆಡ್ ಕೌಶಲ್ಯತೆಗಳೊಂದಿಗೆ ಸಿದ್ಧಗೊಂಡಿದೆ.

    ಹನ್ಸಿಕಾ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರಗಳಲ್ಲಿ ಹನ್ಸಿಕಾ ಹೆಚ್ಚು ನಟಿಸಿದ್ದಾರೆ. ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ‘ಬಿಂದಾಸ್’ ಚಿತ್ರದಲ್ಲಿ ಹನ್ಸಿಕಾ ನಾಯಕಿಯಾಗಿ ನಟಿಸಿದ್ದಾರೆ.

  • ಯಶ್ ಮನೆ ಮುಂದೆ ಜಮಾಯಿಸಿದ ಕೇರಳ ಅಭಿಮಾನಿಗಳು

    ಯಶ್ ಮನೆ ಮುಂದೆ ಜಮಾಯಿಸಿದ ಕೇರಳ ಅಭಿಮಾನಿಗಳು

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಮನೆ ಮುಂದೆ ಕೇರಳ ಅಭಿಮಾನಿಗಳು ಜಮಾಯಿಸಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಿ ಖುಷಿಯಾಗಿದ್ದಾರೆ.

    ಕೇರಳ ಅಭಿಮಾನಿಗಳು ತಮ್ಮ ಮನೆಗೆ ಬಂದಿರುವುದನ್ನು ತಿಳಿದ ಯಶ್ ಖುಷಿಪಟ್ಟಿದ್ದಾರೆ. ಅಲ್ಲದೆ ಮನೆಯಿಂದ ಹೊರಬಂದು ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಅವರ ಜೊತೆ ಕೆಲ ಹೊತ್ತು ಸಮಯ ಕಳೆದಿದ್ದಾರೆ.

    ಯಶ್ ಮನೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಯಶ್ ಎಂಬ ಹೆಸರು ಇರುವ ಟಿ-ಶರ್ಟ್ ಅನ್ನು ಅವರಿಗೆ ನೀಡಿ ಖುಷಿ ವ್ಯಕ್ತಪಡಿಸಿದರು. ಅಭಿಮಾನಿಗಳ ಪ್ರೀತಿ ಕಂಡು ಯಶ್ ಸಂತಸಪಟ್ಟರು.

    ಅಭಿಮಾನಿಗಳು ಒಬ್ಬೊಬ್ಬರಾಗಿ ಯಶ್ ಅವರನ್ನು ಭೇಟಿ ಮಾಡಿ ಉಡುಗೊರೆಗಳನ್ನು ನೀಡಿದ್ದಾರೆ. ಈ ವೇಳೆ ಯಶ್ ‘ಕೆಜಿಎಫ್’ ಚಿತ್ರದ ‘ಪವರ್ ಫುಲ್ ಪೀಪಲ್ ಕಮ್ ಫ್ರಂ ಪವರ್ ಫುಲ್ ಪ್ಲೇಸಸ್’ ಎಂಬ ಡೈಲಾಗ್ ಹೊಡೆದಿದ್ದಾರೆ. ಸದ್ಯ ಯಶ್ ಅಭಿಮಾನಿಗಳನ್ನು ಭೇಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕೆಲವು ದಿನಗಳ ಹಿಂದೆ ಯಶ್ ಅವರ ಮನೆ ಮುಂದೆ ತೆಲುಗು ಹಾಗೂ ತಮಿಳು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿದ್ದರು. ಈಗ ಕೇರಳ ಅಭಿಮಾನಿಗಳು ಭೇಟಿ ಮಾಡಿರುವುದರಿಂದ ಯಶ್ ಮತ್ತಷ್ಟು ಖುಷಿಯಾಗಿದ್ದಾರೆ.

  • ಕಸ ಎತ್ತುವ ಮಹಿಳೆಯರಿಗೆ ಆಯುಷ್ಮಾನ್ ಸಹಾಯ – ಹಣತೆ ಖರೀದಿಸಿ ಸಂಬಂಧಿಕರಿಗೆ ಗಿಫ್ಟ್

    ಕಸ ಎತ್ತುವ ಮಹಿಳೆಯರಿಗೆ ಆಯುಷ್ಮಾನ್ ಸಹಾಯ – ಹಣತೆ ಖರೀದಿಸಿ ಸಂಬಂಧಿಕರಿಗೆ ಗಿಫ್ಟ್

    ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು ಕಸ ಎತ್ತುವ ಮಹಿಳೆಯರಿಂದ ಹಣತೆ ಖರೀದಿಸುವ ಮೂಲಕ ಸಹಾಯ ಮಾಡಿದ್ದಾರೆ.

    ಆಯುಷ್ಮಾನ್ ಹಾಗೂ ಅವರ ಪತ್ನಿ ತಾಹಿರಾ ಕಶ್ಯಪ್ ಅವರು ದೀಪಾವಳಿಗಾಗಿ ಕಸ ಎತ್ತುವ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವುದಕ್ಕಾಗಿ ಹಾಗೂ ಕೌಶಲ್ಯ ವಿಕಾಸಕ್ಕಾಗಿ ಅವರ ಬಳಿ ದೀಪಗಳು ಹಾಗೂ ಮೇಣದಬತ್ತಿಯನ್ನು ಖರೀದಿಸಿದ್ದಾರೆ. ಈ ವರ್ಷ ದೀಪಾವಳಿಗೆ ತಮ್ಮ ಸಂಬಂಧಿಕರಿಗೆ ಉಡುಗೊರೆಯನ್ನು ಕಳುಹಿಸಿಕೊಡುತ್ತಿದ್ದಾರೆ. ಉಡುಗೊರೆಯಲ್ಲಿ ಈ ಮಹಿಳೆಯರು ತಯಾರಿಸಿದ ದೀಪಗಳನ್ನು ಹಾಗೂ ಮೇಣದಬತ್ತಿಯನ್ನು ಕೂಡ ನೀಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್ಮಾನ್, ದೀಪಾವಳಿ ಎಂದರೆ ಬೇರೊಬ್ಬರ ಜೀವನದಲ್ಲಿ ಖುಷಿ ತರುವುದು. ನಾವು ಈ ಹಬ್ಬವನ್ನು ನಮ್ಮ ನಮ್ಮ ಕುಟುಂಬಸ್ಥರ ಜೊತೆ ಆಚರಿಸುತ್ತೇವೆ. ಆದರೆ ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಈಗಲೂ ಹಲವು ಜನರಿಗೆ ನಮ್ಮ ಬೆಂಬಲ ಬೇಕಾಗಿದೆ. ನಾವು ಅವರ ಮುಖದಲ್ಲಿ ನಗುವನ್ನು ತರಬಹುದು. ನಾವು ಈ ಉಡುಗೊರೆಗಳ ಮೂಲಕ ಅವರ ಜೀವನದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೆವೆ ಎಂದು ಹೇಳಿದ್ದಾರೆ.

    ಆಯುಷ್ಮಾನ್ ಪತ್ನಿ ತಾಹಿರಾ ಕೂಡ, ನಾವು ಈ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೆವೆ. ಏಕೆಂದರೆ ಅವರ ಅದ್ಭುತ ಕೆಲಸ ಹಾಗೂ ಕಠಿಣ ಪರಿಶ್ರಮವನ್ನು ಜಗತ್ತಿನ ಮುಂದೆ ತರಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೆವೆ. ನಾವೆಲ್ಲರೂ ಈ ರೀತಿಯ ಮಹಿಳೆಯರ ಭವಿಷ್ಯವನ್ನು ಸುರಕ್ಷಿತ ಮಾಡಬೇಕು. ಅಲ್ಲದೆ ಸಾಕಷ್ಟು ಮಂದಿ ಅವರ ಕೆಲಸವನ್ನು ತಿಳಿದು ಅವರಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ವರ್ಷ ದೀಪಾವಳಿ ಹಬ್ಬವನ್ನು ಆಯುಷ್ಮಾನ್ ತಮ್ಮ ಪತ್ನಿ ಮಕ್ಕಳ ಜೊತೆ ಜಾರ್ಖಂಡ್‍ನಲ್ಲಿ ಆಚರಿಸುತ್ತಿದ್ದಾರೆ. ಇಡೀ ಖುರಾನಾ ಕುಟುಂಬ ಒಟ್ಟಿಗೆ ಹಬ್ಬ ಆಚರಿಸಲಿದೆ ಎಂದು ವರದಿಯಾಗಿದೆ.

  • ಯಶ್‍ಗೆ ಸಿಕ್ತು ಅಭಿಮಾನಿಯಿಂದ ಉಡುಗೊರೆ

    ಯಶ್‍ಗೆ ಸಿಕ್ತು ಅಭಿಮಾನಿಯಿಂದ ಉಡುಗೊರೆ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಅಭಿಮಾನಿಯಿಂದ ವಿಶೇಷ ಉಡುಗೊರೆಯನ್ನು ಪಡೆದಿದ್ದಾರೆ.

    ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಹುಟ್ಟುಹಬ್ಬದ ದಿನ ಮಾತ್ರವಲ್ಲದೇ ಯಾವಾಗಲೂ ಉಡುಗೊರೆಯನ್ನು ನೀಡುತ್ತಿರುತ್ತಾರೆ. ಇದೀಗ ಅಭಿಮಾನಿಯೊಬ್ಬರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮಗಳು ಐರಾ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಅಭಿಮಾನಿ ನಟ ಯಶ್‍ಗೆ ಉಡುಗೊರೆ ನೀಡುತ್ತಿರುವ ಫೋಟೋವನ್ನು ಅಭಿಮಾನಿಗಳು ತಮ್ಮ ಫ್ಯಾನ್ಸ್ ಪೇಜ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ “ನಮ್ಮ ರಾಕಿಂಗ್ ದಂಪತಿಯ ಮುದ್ದಿನ ಮಗಳು ಐರಾ ಅವರ ಸುಂದರ ಕಲಾಕೃತಿಯೊಂದಿಗೆ ನಮ್ಮ ಯಶ್ ಅವರನ್ನು ಭೇಟಿಯಾದ ಅಭಿಮಾನಿ” ಎಂದು ಬರೆದುಕೊಂಡಿದ್ದಾರೆ.

    ಕೃಷ್ಣ ಜನ್ಮಾಷ್ಟಮಿ ದಿನದಂದು ರಾಧಿಕಾ, ಐರಾಳಿಗೆ ಕೃಷ್ಣನಂತೆ ಉಡುಪು ಹಾಕಿ ಮೇಕಪ್ ಮಾಡಿದ್ದರು. ಈ ವೇಳೆ ಐರಾಳ ಫೋಟೋಗಳನ್ನು ಕ್ಲಿಕ್ಕಿಸಿ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೋವನ್ನು ನೋಡಿ ಅಭಿಮಾನಿ ಕಲಾಕೃತಿ ಬಿಡಿಸಿದ್ದಾರೆ. ನಂತರ ಅದಕ್ಕೆ ಫ್ರೇಮ್ ಹಾಕಿಸಿ ಯಶ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

    ಯಶ್ ಮಗಳಿಗೆ ಈಗ 10 ತಿಂಗಳಾಗಿದ್ದು, ಶೀಘ್ರದಲ್ಲೇ ರಾಧಿಕಾ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ. ಭಾನುವಾರ ರಾಧಿಕಾ ತಮ್ಮ ಸ್ನೇಹಿತರ ಜೊತೆ ಸೀಮಂತ ಕಾರ್ಯಕ್ರಮವನ್ನು ಆಚರಿಸಿಕೊಂಡಿದ್ದರು. ಮಂಗಳವಾರ ಫೋಟೋವೊಂದನ್ನು ಹಂಚಿಕೊಂಡ ರಾಧಿಕಾ, ಬುಧವಾರ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು.

    ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು.

  • ತಾಯಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸ್ದ

    ತಾಯಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸ್ದ

    ಜೈಪುರ: ಮಗನೊಬ್ಬ 12 ವರ್ಷದಿಂದ ನಾಣ್ಯಗಳನ್ನು ಸಂಗ್ರಹ ಮಾಡಿ 13,500 ರೂ. ಜೋಡಿಸಿ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ ಅಪರೂಪದ ಘಟನೆಯೊಂದು ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ.

    17 ವರ್ಷದ ರಾಮ್ ಸಿಂಗ್ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸಿದ್ದಾನೆ. ರಾಮ್ 13,500 ರೂ. ಸಂಗ್ರಹಿಸಿದ್ದು, ಅದು ಒಟ್ಟು 35 ಕೆ.ಜಿ ಇತ್ತು. ಈ ನಾಣ್ಯಗಳಿಂದ ರಾಮ್ ತನ್ನ ತಾಯಿಗಾಗಿ ಫ್ರಿಡ್ಜ್ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ.

    ರಾಮ್ ಮನೆಯಲ್ಲಿದ್ದ ಫ್ರಿಡ್ಜ್ ತುಂಬಾ ಹಳೆಯದಾಗಿತ್ತು. ಅಲ್ಲದೆ ಆತನ ತಾಯಿ ಹೊಸ ಫ್ರಿಡ್ಜ್ ಖರೀದಿಸಬೇಕು ಎಂದು ಪದೇಪದೇ ಹೇಳುತ್ತಿದ್ದರು. ಇದನ್ನು ತಿಳಿದ ರಾಮ್, ತನ್ನ ತಾಯಿಗೆ ಫ್ರಿಡ್ಜ್ ನೀಡಲು ನಿರ್ಧರಿಸಿದ್ದನು. ಇದೇ ವೇಳೆ ಪತ್ರಿಕೆಯಲ್ಲಿ ಜಾಹೀರಾತು ನೋಡಿದ ರಾಮ್, ಶೋರೂಮಿಗೆ ಕರೆ ಮಾಡಿ ನನ್ನ ತಾಯಿಯ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ನೀಡಬೇಕೆಂದು ನಿರ್ಧರಿಸಿದ್ದೇನೆ. ಆದರೆ ನಾನು ಹಣವನ್ನು ನಾಣ್ಯದ ರೂಪದಲ್ಲಿ ನೀಡುತ್ತೇನೆ ಎಂದು ಹೇಳಿದ್ದಾನೆ. ಶೋರೂಂ ಮಾಲೀಕ ಹರಿಕಿಶಿನ್ ಈ ಬಗ್ಗೆ ಚರ್ಚಿಸಿ ನಂತರ ಒಪ್ಪಿಕೊಂಡಿದ್ದಾರೆ.

    ಮಾಲೀಕ ಒಪ್ಪಿಗೆ ನೀಡುತ್ತಿದ್ದಂತೆ ರಾಮ್ 35 ಕೆಜಿಯಿದ್ದ ನಾಣ್ಯದ ಬ್ಯಾಗನ್ನು ಶೋರೂಮಿಗೆ ತೆಗೆದುಕೊಂಡು ಹೋಗಿದ್ದಾನೆ. ಬ್ಯಾಗಿನಲ್ಲಿ ಒಂದು, ಎರಡು, ಐದು ಹಾಗೂ ಹತ್ತು ರೂ. ನಾಣ್ಯಗಳಿದ್ದು, ಇದನ್ನು ಎಣಿಸಲು 4 ಗಂಟೆ ಬೇಕಾಯಿತು. ಶಿವಶಕ್ತಿನಗರದ ಎಲೆಕ್ಟ್ರಾನಿಕ್ಸ್ ಶೋರೂಮಿನ ಮಾಲೀಕ ಹಣವನ್ನು ಎಣಿಸಿದಾಗ ಅದರಲ್ಲಿ 2 ಸಾವಿರ ರೂ. ಕಡಿಮೆ ಇತ್ತು. ಬಳಿಕ ರಾಮ್ ಭಾವನೆಯನ್ನು ತಿಳಿದ ಮಾಲೀಕ 2 ಸಾವಿರ ರೂ.ಯ ಡಿಸ್ಕೌಂಟ್ ಹಾಗೂ ಒಂದು ಉಡುಗೊರೆಯನ್ನು ನೀಡಿದ್ದಾರೆ.

    ಬಾಲ್ಯದಿಂದಲೂ ರಾಮ್ ಸಿಂಗ್‍ಗೆ ಹುಂಡಿಯಲ್ಲಿ ಹಣ ಸಂಗ್ರಹಿಸುವ ಆಸಕ್ತಿ ಇತ್ತು. ಹುಂಡಿ ತುಂಬುತ್ತಿದ್ದಂತೆ ರಾಮ್ ಅದರಲ್ಲಿದ್ದ ನೋಟು ತೆಗೆದು ತನ್ನ ತಾಯಿ ಪಪ್ಪುದೇವಿಗೆ ನೀಡುತ್ತಿದ್ದನು ಹಾಗೂ ನಾಣ್ಯಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದನು. ರಾಮ್ 12 ವರ್ಷದಿಂದ ಈ ರೀತಿ ಮಾಡುತ್ತಿರುವುದರಿಂದ 13,500 ಹಣ ಸಂಗ್ರಹಿಸಿದ್ದಾನೆ. ರಾಮ್ ತನಗೆ ಫ್ರಿಡ್ಜ್ ಉಡುಗೊರೆಯನ್ನಾಗಿ ನೀಡಿದ್ದನ್ನು ನೋಡಿದ ತಾಯಿ ಖುಷಿ ಆಗಿದ್ದಾರೆ. ಅಲ್ಲದೆ ದೇವರು ಎಲ್ಲರಿಗೂ ಇಂತಹ ಮಗ ನೀಡಲಿ ಎಂದು ಹೇಳಿದ್ದಾರೆ.