Tag: ಉಚಿತ ಬಸ್

  • ಕರ್ನಾಟಕದಂತೆ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

    ಕರ್ನಾಟಕದಂತೆ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

    – ರಾಜ್ಯಾದ್ಯಂತ ಆ.15ರಿಂದ ಜಾರಿ

    ಅಮರಾವತಿ: ಕರ್ನಾಟಕದ (Karnataka)`ಶಕ್ತಿ ಯೋಜನೆ’ಯಂತೆ ಆಂಧ್ರಪ್ರದೇಶದಲ್ಲಿಯೂ (Andhra Pradesh) ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ (Free Bus Scheme) ಯೋಜನೆಯನ್ನು ಜಾರಿಗೊಳಿಸಲು ಚಂದ್ರಬಾಬು ನಾಯ್ಡು ಸರ್ಕಾರ ನಿರ್ಧರಿಸಿದೆ.

    2024ರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಚಂದ್ರಬಾಬು ನಾಯ್ಡು (Chandrababu Naidu Govt) ಸರ್ಕಾರ ಇದೇ ಆ.15ರಿಂದ `ಸ್ತ್ರೀ ಶಕ್ತಿ’ ಯೋಜನೆ ಆರಂಭಿಸಲಿದೆ. ಈ ಯೋಜನೆಯಡಿ ಎಲ್ಲ ಬಾಲಕಿಯರು, ಮಂಗಳಮುಖಿಯರು ಉಚಿತ ಬಸ್ ಪ್ರಯಾಣ ಮಾಡಬಹುದು. ಆಂಧ್ರದಲ್ಲಿ ವಾಸಿಸುವ ಪ್ರಮಾಣೀಕೃತ ದಾಖಲೆ ತೋರಿಸಿ ಆಂಧ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (APSRTC) ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು.ಇದನ್ನೂ ಓದಿ: ನಿಲ್ದಾಣದಲ್ಲಿ ನಿಂತಿದ್ದ ಫ್ಲೈಟ್‌ಗೆ ಡಿಕ್ಕಿ ಹೊಡೆದು ವಿಮಾನ ಪತನ

    ಈ ಕುರಿತು ರಾಜ್ಯ ಸಾರಿಗೆ, ರಸ್ತೆಗಳು ಮತ್ತು ಕಟ್ಟಡಗಳು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾಂತಿಲಾಲ್ ದಂಡೆ ಸೋಮವಾರ (ಆ.11) ತಿಳಿಸಿದ್ದಾರೆ. ಈ ಯೋಜನೆ ರಾಜ್ಯಾದ್ಯಂತ ಆ.15ರಂದು ಜಾರಿಯಾಗಲಿದ್ದು, ಎಪಿಎಸ್‌ಆರ್‌ಟಿಸಿಯ ಸಾಮಾನ್ಯ ಬಸ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಎಸಿ ಸೇರಿ ವಿವಿಧ ಐಷಾರಾಮಿ ಬಸ್ಸುಗಳಿಗೆ ಅನ್ವಯ ಆಗುವುದಿಲ್ಲ ಎಂದಿದ್ದಾರೆ.

    ಇನ್ನೂ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಜೊತೆಗೆ ಬಸ್ ಸಿಬ್ಬಂದಿಯು ತಮ್ಮ ಬಟ್ಟೆಯ ಮೇಲೆ ಹಾಕಿಕೊಳ್ಳಬಹುದಾದಂತಹ ಕ್ಯಾಮೆರಾವನ್ನು ಅಳವಡಿಸಲು ಯೋಚಿಸಿದೆ. ಅದಲ್ಲದೇ ಬಸ್ ನಿಲ್ದಾಣಗಳಲ್ಲಿ ಫ್ಯಾನ್, ಕುರ್ಚಿ, ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯ ದೊರೆಯಲಿದೆ.

    ಈ ಯೋಜನೆಗೆ ವಾರ್ಷಿಕವಾಗಿ 1,942 ಕೋಟಿ ರೂ. ಹಾಗೂ ತಿಂಗಳಿಗೆ ಸುಮಾರು 162 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.ಇದನ್ನೂ ಓದಿ: 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟ – ಮಂತ್ರಾಲಯ ರಾಜಬೀದಿಯಲ್ಲಿಂದು ಮಹಾರಥೋತ್ಸವ

  • ತಡವಾಗಿ ಬಂದ ಬಸ್ ಅಡ್ಡಗಟ್ಟಿ ಡ್ರೈವರ್‌ಗೆ ಕ್ಲಾಸ್‌ ತೆಗೆದುಕೊಂಡ ಮಹಿಳೆಯರು

    ತಡವಾಗಿ ಬಂದ ಬಸ್ ಅಡ್ಡಗಟ್ಟಿ ಡ್ರೈವರ್‌ಗೆ ಕ್ಲಾಸ್‌ ತೆಗೆದುಕೊಂಡ ಮಹಿಳೆಯರು

    ಚಿಕ್ಕಮಗಳೂರು: ತಡವಾಗಿ ಬಂದ ಸರ್ಕಾರಿ ಬಸ್ಸನ್ನ (Bus) ರಸ್ತೆ ಮಧ್ಯದಲ್ಲೇ ಅಡ್ಡಗಟ್ಟಿದ ಕಾರ್ಮಿಕ ಮಹಿಳೆಯರು ಡ್ರೈವರ್‌ಗೆ ಕ್ಲಾಸ್‌ ತೆಗೆದುಕೊಂಡ ಘಟನೆ ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆ ತಾಲೂಕಿನಲ್ಲಿ ತಡರಾತ್ರಿ ನಡೆದಿದೆ.

    ಹೌದು.. ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನಿಂದ ನೂರಾರು ಮಹಿಳೆಯರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಫಿ ತೋಟಗಳಿಗೆ ಕೆಲಸಕ್ಕೆ ಬಂದಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಊರಿಗೆ ತೆರಳಲು ಸಂಜೆ 4:30ರ ವೇಳೆಗೆ ಮೂಡಿಗೆರೆ ತಾಲೂಕಿನ ಹ್ಯಾಂಡ್‍ಪೋಸ್ಟ್‌ಗೆ ಬಂದರು. ಆದ್ರೆ ಬಸ್ ಬರುವ ಹೊತ್ತಿಗೆ ರಾತ್ರಿ 8:30 ಆಗಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆಯರು ರಸ್ತೆ ಮಧ್ಯದಲ್ಲೇ ಬಸ್‍ಗೆ ಅಡ್ಡಗಟ್ಟಿ ಡ್ರೈವರ್‌ಗೆ (Bus Driver) ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ದೇವರ ದರ್ಶನ ಮುಗಿಸಿ ಬರುತ್ತಿದ್ದಾಗ ಭೀಕರ ರಸ್ತೆ ಅಪಘಾತ – 6 ಸಾವು, 10 ಜನರಿಗೆ ಗಂಭೀರ ಗಾಯ

    ಹೆಚ್ಚುವರಿ ಬಸ್‌ ಸೌಲಭ್ಯವಿಲ್ಲದ್ದರಿಂದ ಸಕಲೇಶಪುರ ಬಸ್‌ನಲ್ಲಿ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದವರೆಗೆ ಒಂದು ಬಸ್ಸಿನಲ್ಲಿ ಹೋಗಿ, ಅಲ್ಲಿಂದ ಮತ್ತೊಂದು ಬಸ್ ಹಿಡಿದು ಬೇಲೂರು ತಲುಪಿದ್ದಾರೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಸರ್ಕಾರಿ ಬಸ್ ನಿಲ್ಲಿಸಿಲ್ಲ ಎಂದು ಮಹಿಳೆಯರು ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಮಗಾರಿ ಮುಗಿಯುವವರೆಗೆ ಎಕ್ಸ್‌ಪ್ರೆಸ್‌ವೇ ಟೋಲ್ ಸಂಗ್ರಹ ತಡೆಯಿರಿ – ಸಿಎಂಗೆ ಮಂಡ್ಯ ಶಾಸಕರ ಮನವಿ

    ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಉತ್ತರ ಕರ್ನಾಟಕದ ಗದಗ ಹಾಗೂ ಬಾಗಲಕೋಟೆಯಿಂದ 40ಕ್ಕೂ ಹೆಚ್ಚು ಮಹಿಳೆಯರು ಫ್ರೀ ಬಸ್ಸಿನಲ್ಲಿ ಪ್ರವಾಸಕ್ಕೆ ಬಂದಿದ್ದರು. ಕಳಸದವರೆಗೆ ಖಾಸಗಿ ಬಸ್‍ನಲ್ಲಿ ಬಂದ ಮಹಿಳೆಯರು ಹೊರನಾಡಿಗೆ ಹೋಗಲು ಸರ್ಕಾರಿ ಬಸ್ ಕಾಯುತ್ತಿದ್ದರು. ಆದರೆ, ರಾತ್ರಿ 8.30ಕ್ಕೆ ಬಂದ ಸರ್ಕಾರಿ ಬಸ್ ನಿಲ್ಲಿಸದೇ ಹೋಗಿದ್ದರಿಂದ ಮಹಿಳೆಯರು ಸರ್ಕಾರಿ ಚಾಲಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆ ಕಂಡಕ್ಟರ್ ಬರೀ ಸುಳ್ಳು ಹೇಳಿಕೊಂಡು ಬಸ್ ನಿಲ್ಲಿಸದೇ ಹೋಗಿದ್ದಾನೆ. ಆ ಕಂಡಕ್ಟರನ್ನ ಹಿಡ್ಕೊಂಡು ನಾಲ್ಕು ಬಡೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

    ನಾವು ಬರೀ ಹೆಣ್ಣು ಮಕ್ಕಳೇ ಬಂದಿದ್ದೇವೆ, ಮಕ್ಕಳು-ಮರಿ ಇದ್ದಾವೆ. ಇಲ್ಲಿ ಊಟಕ್ಕೂ ಏನೂ ಇಲ್ಲ. ಕುಡಿಯೋಕೆ ನೀರಿಲ್ಲ. ಆದ್ರೂ ಅವನು ಬಸ್‌ ನಿಲ್ಲಿಸದೇ ಹೋಗಿದ್ದಾನೆ ಎಂದು ಕಿಡಿಕಾರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಾಕ್ಲೇಟ್ ತಿಂದ ದುಡ್ಡು ಕೊಡಲ್ಲವೆಂದ ಅಪ್ಪ- ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಬಾಲಕಿಯರು!

    ಚಾಕ್ಲೇಟ್ ತಿಂದ ದುಡ್ಡು ಕೊಡಲ್ಲವೆಂದ ಅಪ್ಪ- ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಬಾಲಕಿಯರು!

    ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ‌ (Shakti Scheme) ಯ ಅವಾಂತರ ಒಂದಲ್ಲ ಎರಡಲ್ಲ. ಬಸ್ಸಿನಲ್ಲಿ ಸೀಟಿಗಾಗಿ ನಾರಿಯರ ಗಲಾಟೆ ಒಂದೆಡೆಯಾದರೆ ಇನ್ನೊಂದೆಡೆ ಚಿಕ್ಕಪುಟ್ಟ ವಿಷಯಕ್ಕೆಲ್ಲ ಬೇಜಾರ್ ಮಾಡಿಕೊಂಡು ಮಕ್ಕಳು ಬಸ್ ಏರುತ್ತಿದ್ದಾರೆ.

    ಹೌದು. ಉಚಿತ ಬಸ್ ವ್ಯವಸ್ಥೆಯು ಹೆಣ್ಮಕ್ಕಳ ಪೋಷಕರಲ್ಲಿ ಕೊಂಚ ತಲೆನೋವು ತಂದಿದೆ. ಇದೀಗ ಕ್ಷುಲ್ಲಕ ಕಾರಣಕ್ಕೆ ಹೈಸ್ಕೂಲ್ ವಿದ್ಯಾರ್ಥಿನಿಯರು ಕಣ್ಮರೆಯಾಗಿದ್ದ ಪೋಷಕರಿಗೆ ಆತಂಕ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ನನ್ನ ಲಿವರ್ ಏನು ಕಬ್ಬಿಣದ್ದಾ? ಹಗಲು ರಾತ್ರಿ ಮದ್ಯಪಾನ ಆರೋಪಕ್ಕೆ ಭಗವಂತ್ ಮಾನ್ ತಿರುಗೇಟು

    ಏನಿದು ಅವಾಂತರ..?: ಎರಡು ದಿನಗಳ ಹಿಂದೆ ಅಂಗಡಿಗೆ ಹೋಗಿದ್ದ ಬಾಲಕಿಯರಿಬ್ಬರು ನಾಪತ್ತೆ ಆಗಿದ್ದರು. ಬಾಲಕಿಯರು ದಿಢೀರ್ ಕಣ್ಮರೆ ಆಗಿದ್ದರಿಂದ ಆತಂಕಗೊಂಡ ಪೋಷಕರು ಕೋಣನಕುಂಟೆ ಪೊಲೀಸ್ ಠಾಣೆ ( Police Station in Konanakunte) ಗೆ ದೂರು ನೀಡಿದ್ದಾರೆ. ಈ ವೇಳೆ ನಾಪತ್ತೆ ಪ್ರಕರಣ (Girls Missing Case) ದಾಖಲಿಸಿಕೊಂಡ ಪೊಲೀಸರು ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

    ಅಂತೆಯೇ ಪೊಲೀಸ್ ತನಿಖೆಯ ವೇಳೆ ನಾಪತ್ತೆ ಆಗಿರೋ ಬಾಲಕಿಯರು ಧರ್ಮಾಸ್ಥಳದಲ್ಲಿರೋ ಮಾಹಿತಿ ಲಭಿಸುತ್ತದೆ. ಧರ್ಮಸ್ಥಳಕ್ಕೆ ಹೋದ ಕೋಣನಕುಂಟೆ ಪೊಲೀಸರು ಬಾಲಕಿಯರನ್ನು ಪತ್ತೆ ಮಾಡಿದ್ದಾರೆ. ಇದೀಗ ಬಾಲಕಿಯರ ಪತ್ತೆ ಬಳಿಕ ವಿಚಾರಿಸಿದಾಗ ನಾಪತ್ತೆ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

    ಅಸಲಿ ಸತ್ಯ ಏನು..?: ಒಬ್ಬಳು 10ನೇ ತರಗತಿ ಇನ್ನೊಬ್ಬಳು 9 ನೇ ತರಗತಿ ಓದುತ್ತಿದ್ದು, ಇಬ್ಬರು ಸಹೋದರಿಯರಾಗಿದ್ದಾರೆ. ಈ ಇಬ್ಬರು ಅಂಗಡಿಗೆ ತೆರಳಿ ಚಾಕ್ಲೇಟ್ (Chocolates) ಖರೀದಿಸಿ ತೀಮದಿದ್ದಾರೆ. ನಂತರ ತಂದೆಗೆ ಕರೆ ಮಾಡಿ ಅಂಗಡಿಯಿಂದ ಚಾಕ್ಲೇಟ್ ಖರೀದಿಸಿ ತಿಂದಿದ್ದೇವೆ. ಅಂಗಡಿಯವರಿಗೆ ಚಾಕ್ಲೇಟ್ ಹಣ ಕೊಡಿ ಎಂದು ಹೇಳಿದ್ದಾರೆ. ಈ ವೇಳೆ ತಂದೆ, ತಮ್ಮ ಅನುಮತಿಯಿಲ್ಲದೇ ಅಂಗಡಿಗೆ ಹೋಗಿದ್ದಕ್ಕೆ ಮಕ್ಕಳಿಗೆ ಬೈದಿದ್ದಾರೆ. ಅಲ್ಲದೆ ನಾನು ಹಣ ಕೊಡಲ್ಲ ಎಂದು ಸಿಟ್ಟು ಮಾಡಿಕೊಂಡಿದ್ದಾರೆ.

    ತಂದೆ ಕೋಪದಿಂದ ಬೆದರಿದ ಬಾಲಕಿಯರು ತಮ್ಮ ಕೈಯಲ್ಲಿ ಹಣವಿಲ್ಲದಿದ್ದರೂ ಫ್ರೀ ಬಸ್ ಹತ್ತಿ ಧರ್ಮಸ್ಥಳ (Dharmasthala) ಕ್ಕೆ ತೆರಳಿದ್ದಾರೆ. ಸದ್ಯ ನಾಪತ್ತೆ ಆಗಿದ್ದ ಬಾಲಕಿಯರನ್ನು ಹಿಡಿದು ಪೊಲೀಸರು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್

    ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್

    – ಧರ್ಮಸ್ಥಳ, ಮೈಸೂರು, ಮಹದೇಶ್ವರ ಬೆಟ್ಟಕ್ಕೆ ಮಹಿಳೆಯರ ದಂಡು

    ಬೆಂಗಳೂರು: ಕರ್ನಾಟಕದ (Karnataka) ಈಗಿನ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ (Govt Bus) ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು (Shakti Scheme) ಜಾರಿಗೊಳಿಸಿ ಒಂದು ವಾರವಾಗಿದ್ದು, ಇಂದು ಮೊದಲ ವೀಕೆಂಡ್. ಈ ಹಿನ್ನೆಲೆ ದೂರದೂರುಗಳಿಗೆ, ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ದಂಡು ಸಾಗುತ್ತಿದೆ. ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಂತೂ (KSRTC Bus) ಕಾಲಿಡಲು ಸಾಧ್ಯವಾಗದಷ್ಟು ಫುಲ್ ರಶ್ ಆಗಿದೆ.

    ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಕ್ರ್ಯಾಶ್:
    ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಮಹಿಳೆಯರು ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ ಫ್ರೀ ಟಿಕೆಟ್ ರಿಸರ್ವೇಶನ್ ಕೆಎಸ್‌ಆರ್‌ಟಿಸಿಯ ವೆಬ್‌ಸೈಟ್ ಕ್ರ್ಯಾಶ್ ಆಗಿದೆ. ಧಾರ್ಮಿಕ ಸ್ಥಳಗಳಿಗೆ ಹೆಚ್ಚಾಗಿ ಮಹಿಳೆಯರೇ ಪ್ರಯಾಣ ಮಾಡುತ್ತಿದ್ದು, ಈ ಹಿನ್ನೆಲೆ 20 ರೂ. ನೀಡಿ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಏಕಕಾಲಕ್ಕೆ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ಆಗುತ್ತಿರುವುದರಿಂದ ಸರ್ವರ್ ಡೌನ್ ಆಗಲು ಕಾರಣವಾಗುತ್ತಿದೆ. ಹಣ ಕಡಿತವಾದರೂ ಟಿಕೆಟ್ ಬುಕ್ ಆಗುತ್ತಿಲ್ಲ ಎಂದು ಹಲವು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆ ಸಾಮಾನ್ಯ ಬಸ್‌ಗಳಿಗೆ ಕೆಎಸ್‌ಆರ್‌ಟಿಸಿ ಆ್ಯಪ್ ಅಥವಾ ವೆಬ್‌ನಲ್ಲಿ ರಿಸರ್ವೇಶನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

    ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ದಂಡು:
    ರಾಜ್ಯದ ವಿವಿಧ ಭಾಗಗಳಿಗೆ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಒಂದು ಬಸ್‌ನಲ್ಲಿ ಸೀಟ್ ಭರ್ತಿಯಾದರೆ ಅದರಿಂದ ಇಳಿದು ಇನ್ನೊಂದು ಬಸ್ ಹತ್ತುತ್ತಿದ್ದಾರೆ. ಮಹಿಳಾ ಪ್ರಯಾಣಿಕರು ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಕುಳಿತಿದ್ದು, ಇವರಲ್ಲಿ ಹೆಚ್ಚಿನವರು ಸಿಗಂದೂರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳುವವರು ಇದ್ದಾರೆ. ನಾಳೆ ಭಾನುವಾರ ಆಗಿರುವುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಪ್ರಯಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ – ಬಿಬಿಎಂಪಿಯಿಂದ ಆಪರೇಷನ್‌ ರಾಜಕಾಲುವೆ

    ಧರ್ಮಸ್ಥಳಕ್ಕೆ 10 ನಿಮಿಷಕ್ಕೊಂದು ಬಸ್ ವ್ಯವಸ್ಥೆ:
    ಬೆಂಗಳೂರು ಬಸ್ ಡಿಪೋದಿಂದ ಧರ್ಮಸ್ಥಳಕ್ಕೆ 10 ನಿಮಿಷಕ್ಕೆ ಒಂದರಂತೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವ 5:30ರಿಂದಲೇ ಸಾವಿರಾರು ಪ್ರಯಾಣಿಕರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹಾಸನ, ಕುಣಿಗಲ್, ಮಾಗಡಿ, ಚಿಕ್ಕಮಗಳೂರು, ಮಂಗಳೂರು ಡಿಪೋ ಸೇರಿದಂತೆ ರಾಜ್ಯಾದ್ಯಂತ 15ಕ್ಕೂ ಹೆಚ್ಚು ಡಿಪೋ ಬಸ್‌ಗಳು ಧರ್ಮಸ್ಥಳಕ್ಕೆ ತೆರಳಿವೆ.

    ಚಿಕ್ಕಬಳ್ಳಾಪುರ, ಮೈಸೂರಿಗೂ ಪ್ರಯಾಣಿಕರ ಸಾಗರ:
    ಫ್ರೀ ಬಸ್ ಹಿನ್ನೆಲೆ ಆದಿಯೋಗಿ ಶಿವನ ಪ್ರತಿಮೆ ನೋಡಲು ಪ್ರವಾಸಿಗರ ದಂಡು ಚಿಕ್ಕಬಳ್ಳಾಪುರಕ್ಕೆ ಹರಿದಿದೆ. ವೀಕೆಂಡ್ ಹಿನ್ನೆಲೆ ಮೈಸೂರಿನ ಕಡೆಗೂ ಹೋಗುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಬಸ್‌ಗಳಲ್ಲಿ ಮಹಿಳೆಯರೇ ಹೆಚ್ಚಾಗಿದ್ದರೂ ಅದರಲ್ಲೂ ಹೆಚ್ಚಿನ ವಿದ್ಯಾರ್ಥಿಗಳೇ ತೆರಳುತ್ತಿದ್ದಾರೆ. ಮೈಸೂರು, ನಂಜನಗೂಡು, ಮಲೆಮಹದೇಶ್ವರ ದೇವಾಲಯದ ಕಡೆಗೆ ಮಹಿಳಾ ಪ್ರಯಾಣಿಕರು ಹೆಚ್ಚಾಗಿದ್ದಾರೆ.

    ಫ್ರೀ ಬಸ್ ಹಿನ್ನೆಲೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಜನಸಾಗರವೇ ಹರಿದಿದೆ. ಟಿಕೆಟ್ ಕೌಂಟರ್ ಬಳಿ ಮಹಿಳೆಯರು, ಯುವತಿಯರು ಉಚಿತ ಬಸ್ ಟಿಕೆಟ್‌ಗಾಗಿ ಆಧಾರ್ ಕಾರ್ಡ್ ಹಿಡಿದು ನಿಂತಿದ್ದಾರೆ. ಇದೀಗ ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ಮೈಸೂರಿಗೆ 15 ನಾನ್‌ಸ್ಟಾಪ್ ಬಸ್‌ಗಳು ತೆರಳಿವೆ. ಮಲೆಮಹದೇಶ್ವರ ದೇವಾಲಯಕ್ಕೂ 9 ಬಸ್‌ಗಳು ತೆರಳಿವೆ. ಇದನ್ನೂ ಓದಿ: ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

  • ಫ್ರೀ ಬಸ್‍ನಿಂದ ನೂರೆಂಟು ಪ್ರಾಬ್ಲಂ- ಮಹಿಳೆಯರ ಮೇಲೆ ಬಸ್ ಹತ್ತಿಸಲು ಮುಂದಾದ ಚಾಲಕ

    ಫ್ರೀ ಬಸ್‍ನಿಂದ ನೂರೆಂಟು ಪ್ರಾಬ್ಲಂ- ಮಹಿಳೆಯರ ಮೇಲೆ ಬಸ್ ಹತ್ತಿಸಲು ಮುಂದಾದ ಚಾಲಕ

    ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ (Free bus Ticket) ಪಯಣಕ್ಕೆ ಅವಕಾಶ ನೀಡಿರುವ ಶಕ್ತಿ ಯೋಜನೆಯಿಂದ ಅನುಕೂಲಗಳ ಜೊತೆ ನಾನಾ ಸಮಸ್ಯೆಗಳು ಸೃಷ್ಟಿಯಾಗ್ತಿವೆ.

    ಬಹುತೇಕ ಮಹಿಳೆಯರು ಸರ್ಕಾರಿ ಬಸ್‍ಗಳನ್ನೇ ಆಶ್ರಯಿಸಿರುವ ಕಾರಣ ಎಲ್ಲಾ ಕಡೆ ಬಸ್‍ಗಳು ಫುಲ್ ರಶ್ ಆಗ್ತಿವೆ. ಎಷ್ಟರ ಮಟ್ಟಿಗೆ ಅಂದ್ರೆ ಕೆಲವೊಂದು ರೂಟ್‍ಗಳಲ್ಲಿ ಹಲವು ಹಳ್ಳಿಗಳಲ್ಲಿ ನಿಲುಗಡೆ ಮಾಡದಿರುವ ಮಟ್ಟಿಗೆ ರಶ್ ಆಗ್ತಿವೆ. ಸಾರಿಗೆ ಸಿಬ್ಬಂದಿಗೆ ಬಸ್ ನಿಲ್ಲಿಸುವಂತೆಯೂ ಇಲ್ಲ, ನಿಲ್ಲಿಸದೇ ಇರುವಂತೆಯೂ ಇಲ್ಲ. ಒಟ್ಟಿನಲ್ಲಿ ಜನಾಕ್ರೋಶಕ್ಕೆ ತುತ್ತಾಗ್ತಿದ್ದಾರೆ.

    ಗುರುವಾರ ಕೊರಟಗೆರೆಯ ಗೊರವನಹಳ್ಳಿ ಗೇಟ್‍ನಲ್ಲಿ ಬಸ್ ತಡೆಯಲು ಮುಂದಾದ ಮಹಿಳೆಯರ ಮೇಲೆಯೇ ಚಾಲಕನೊಬ್ಬ ಹತ್ತಿಸಲು ನೋಡಿದ್ದಾನೆ. ಅದೃಷ್ಟವಶಾತ್ ಮಹಿಳೆಯರು ಎಚ್ಚೆತ್ತ ಕಾರಣ ಸಾವು-ನೋವು ತಪ್ಪಿದೆ. ಕಲೆಕ್ಷನ್ ಆಗಲ್ಲ, ಅನ್ನೋ ಕಾರಣಕ್ಕೆ ಬಸ್ ನಿಲ್ಲಿಸದೇ ಹೋಗ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಕುಸ್ತಿಪಟುಗಳ ಪ್ರಕರಣದಲ್ಲಿ ಪ್ರಧಾನಿ ಮೋದಿ ಕೂಡ ಶಿಕ್ಷಾರ್ಹ : ನಟ ಕಿಶೋರ್

    ಕೊನೆಗೆ ತಹಶೀಲ್ದಾರ್ (Tehshildar) ಆಗಮಿಸಿ ಕೊಳ್ಳೆಗಾಲ ಮೂಲದ ಮಹಿಳೆಯರನ್ನು ಬಸ್ ಹತ್ತಿಸಿ ಕಳಿಸಿದ್ದಾರೆ. ಸಾರಿಗೆ ಸಿಬ್ಬಂದಿ ವರ್ತನೆಗೆ ಆಕ್ರೋಶವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಮಂತ್ರಿಗಳು, ವರದಿ ತರಿಸಿಕೊಂಡು, ತಪ್ಪು ಕಂಡುಬಂದ್ರೆ ಕ್ರಮ ತಗೋತೀವಿ ಎಂಬ ಭರವಸೆ ನೀಡಿದ್ದಾರೆ.

  • ರಕ್ಷಾಬಂಧನ ಪ್ರಯುಕ್ತ ಮಹಿಳೆಯರಿಗೆ ಬಂಪರ್ ಆಫರ್ ಕೊಟ್ಟ ಸಿಎಂ ಯೋಗಿ

    ರಕ್ಷಾಬಂಧನ ಪ್ರಯುಕ್ತ ಮಹಿಳೆಯರಿಗೆ ಬಂಪರ್ ಆಫರ್ ಕೊಟ್ಟ ಸಿಎಂ ಯೋಗಿ

    ಲಕ್ನೋ: ರಕ್ಷಾಬಂಧನ ಹಿನ್ನೆಲೆ ಈ ಬಾರಿ ರಾಜ್ಯದ ಮಹಿಳೆಯರಿಗೆ 48 ಗಂಟೆಗಳ ಕಾಲ ಉಚಿತ ಬಸ್ ಪ್ರಯಾಣ ಸೇವೆಯನ್ನು ಒದಗಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

    ರಕ್ಷಾಬಂಧನ ಸಮಯದಲ್ಲಿ ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲಾ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಬಸ್‍ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರ ಕಚೇರಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ರಾಮ ಭಕ್ತರನ್ನು ಅಪಮಾನಿಸಲೆಂದೇ ಕಾಂಗ್ರೆಸ್ ಪ್ರತಿಭಟಿಸಿದೆ – ರಾಮಮಂದಿರಕ್ಕೆ ನಂಟು ಕಲ್ಪಿಸಿದ ಅಮಿತ್ ಶಾ, ಯೋಗಿ

    ಆಗಸ್ಟ್ 10ರ ಮಧ್ಯರಾತ್ರಿಯಿಂದ ಆಗಸ್ಟ್ 12ರ ಮಧ್ಯರಾತ್ರಿಯವರೆಗೆ ಮಹಿಳೆಯರು 48 ಗಂಟೆಗಳ ಕಾಲ ಉಚಿತವಾಗಿ ಪ್ರಯಾಣಿಸಬಹುದು ಎಂದು ರಾಜ್ಯದ ಮುಖ್ಯಸ್ಥರು ತಿಳಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಗುರುತಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು 48 ಗಂಟೆಗಳ ಅವಧಿಗೆ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಲಭ್ಯವಿರುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆಯಬ್ಬರ- ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆ

    Live Tv
    [brid partner=56869869 player=32851 video=960834 autoplay=true]

  • ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ – KSRTC  ಬಸ್ ಪ್ರಯಾಣ‌ ಉಚಿತ

    ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ – KSRTC ಬಸ್ ಪ್ರಯಾಣ‌ ಉಚಿತ

    ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಕಲ್ಪಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಹತ್ವದ ನಿರ್ಧಾರ ಕೈಗೊಂಡಿದೆ.

    ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯಾದ್ಯಂತ ಉಚಿತ ಬಸ್ ವ್ಯವಸ್ಥೆಯನ್ನು ಕರ್ನಾಟಕ ಸಾರಿಗೆ ಇಲಾಖೆ ಕಲ್ಪಿಸಿದೆ. ಈ ಮೂಲಕ ವಿದ್ಯಾರ್ಥಿಗಳು ನಿಗಮದ ಸಾಮಾನ್ಯ ಹಾಗೂ ವೇಗದೂತ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

    ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್ 25ರಿಂದ ಜುಲೈ 4ರವರಗೂ ನಡೆಯಲಿವೆ. ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟ ಪರೀಕ್ಷೆಗೆ ತೆರಳುವುದು ವಿದ್ಯಾರ್ಥಿಗಳ ಪಾಲಿಗೆ ಸಮಸ್ಯೆಯಾಗಿತ್ತು. ಆದರೆ ಈಗ ಸಾರಿಗೆ ನಿಗಮವು ವಿದ್ಯಾರ್ಥಿಗಳಿಗೆ ಅಭಯ ನೀಡಿದೆ.

    ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪತ್ರ (ಹಾಲ್ ಟಿಕೆಟ್)ಅನ್ನು ಬಸ್ ಸಿಬ್ಬಂದಿಗೆ ತೋರಿಸಿ ಉಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಬಹುದು. ಪರೀಕ್ಷೆ ಮುಗಿಸಿ ಮನೆಗೆ ತೆರಳಲು ಉಚಿತವಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

  • ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಕಂಡಕ್ಟರ್ ಮಾಡಿದ ಕೊರೊನಾ

    ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಕಂಡಕ್ಟರ್ ಮಾಡಿದ ಕೊರೊನಾ

    ಉಡುಪಿ: ಕಿಡಿಗೇಡಿ ಕೊರೊನಾ ವಿಶ್ವದಲ್ಲಿ ಏನೇನೋ ಅವಾಂತರ ಸೃಷ್ಟಿ ಮಾಡಿದೆ. ಉಡುಪಿಯ ಕ್ಯಾಬಿನೆಟ್ ದರ್ಜೆಯ ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಇದೇ ಕೊರೊನಾ ಕಂಡಕ್ಟರ್ ಮಾಡಿದೆ.

    ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಉಡುಪಿ ನಗರದಲ್ಲಿ ಸಿಟಿ ಬಸ್ಸಿನಲ್ಲಿ ಕಂಡಕ್ಟರ್ ಆಗಿ ರೈಟ್ ರೈಟ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಾಸಕ ರಘುಪತಿ ಭಟ್ ನೇತೃತ್ವದ ಕಡಿಯಾಳಿ ಗಣೇಶೋತ್ಸವ ಸಮಿತಿ ಖಾಸಗಿ ಬಸ್ ಮಾಲೀಕರೊಂದಿಗೆ ಸೇರಿ ಏಳು ದಿನಗಳ ಕಾಲ ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಂಡಕ್ಟರ್ ಆಗಿರುತ್ತಾರೆ. ಹೀಗೆ ಕಾರ್ಯಕರ್ತರ ಸೇವೆ ನಡುವೆ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಸಹ ಕಂಡಕ್ಟರ್ ಆಗಿ ಗಮನ ಸೆಳೆದಿದ್ದಾರೆ.

    ಸಾರ್ವಜನಿಕರಿಗೆ ಸ್ಯಾನಿಟೈಸ್ ಮಾಡುವುದು, ಬಸ್ ಡ್ರೈವರಿಗೆ ರೈಟ್‍ರೈಟ್ ಹೇಳಿ ಸೂಚನೆ ನೀಡುವ ಕಾರ್ಯ ಮಾಡಿದ್ದಾರೆ. ಪಂಚಾಯತ್ ಅಧ್ಯಕ್ಷರಾಗುವ ಮೊದಲು ಸರ್ಕಾರಿ ವಾಹನಕ್ಕೆ ಚಾಲಕರಾಗಿ ಸೇವೆ ಸಲ್ಲಿಸಿದ ದಿನಕರ್ ಬಾಬು ಅಧ್ಯಕ್ಷರಾದ ಬಳಿಕವೂ ಸಾಮಾನ್ಯರಂತೆ ಓಡಾಡುತ್ತಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದಿನಕರ ಬಾಬು, ಕೊರೊನಾ ಸಮಯದಲ್ಲಿ ಹಲವಾರು ಸೇವೆ ಮಾಡಿದ್ದೇವೆ. ಇದು ಉಚಿತ ಬಸ್ ವ್ಯವಸ್ಥೆ. ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಒಂದು ವಾರ ಫ್ರೀ ಬಸ್ ಓಡುತ್ತಿದೆ. ಪ್ರಯಾಣಿಕರಿಗೆ ಸ್ಯಾನಿಟೈಸರ್ ಕೊಡುವುದು, ಪ್ರಯಾಣಿಕರಿಗೆ ಊರುಗಳ ಮಾಹಿತಿ ಕೊಡುವುದನ್ನು ಮಾಡಿದ್ದೇನೆ. ಇದೊಂದು ಹೊಸ ಅನುಭವ. ಚಿಕ್ಕಂದಿನಲ್ಲಿ ಡ್ರೈವರ್ ಆಗಬೇಕೆಂಬ ಆಸೆ ಇತ್ತು. ಮುಂದೆ ಚಾಲಕನಾದೆ, ಈಗ ಜಿಲ್ಲಾ ಪಂಚಾಯತ್ ಅಧ್ಯಕ್ಷನಾದೆ ಎಂದು ಹೇಳಿದರು.

  • ಕಾರ್ಮಿಕರಿಗೆ ಮತ್ತೆ ಗುಡ್‍ನ್ಯೂಸ್ – ಉಚಿತ ಬಸ್ ಪ್ರಯಾಣ 2 ದಿನ ವಿಸ್ತರಣೆ

    ಕಾರ್ಮಿಕರಿಗೆ ಮತ್ತೆ ಗುಡ್‍ನ್ಯೂಸ್ – ಉಚಿತ ಬಸ್ ಪ್ರಯಾಣ 2 ದಿನ ವಿಸ್ತರಣೆ

    ಬೆಂಗಳೂರು: ಕೆಎಸ್‌ಆರ್‌ಟಿಸಿ ಕಾರ್ಮಿಕರಿಂದ ದುಪ್ಪಟ್ಟು ಹಣವನ್ನು ಪಡೆಯುತ್ತಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ, ಕಾರ್ಮಿಕರಿಗೆ ಮೂರು ದಿನಗಳ ಕಾಲ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೆ ಸರ್ಕಾರ ಉಚಿತ ಬಸ್ ಪ್ರಯಾಣವನ್ನು ಎರಡು ದಿನ ವಿಸ್ತರಣೆ ಮಾಡಿದೆ.

    ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್ ಅವರು, ಸಾರಿಗೆ ನಿಗಮದಿಂದ ಕಾರ್ಮಿಕರಿಗೆ ಭಾನುವಾರದಿಂದ ಮಂಗಳವಾರದವರೆಗೆ ಉಚಿತವಾಗಿ ತೆರಳಲು ಮೂರು ದಿನಗಳ ಕಾಲ ಅವಕಾಶ ಕೊಡಲಾಗಿತ್ತು. ಈಗ ಮತ್ತೆ ಎರಡು ದಿನ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಗುರುವಾರದವರೆಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕಾರ್ಮಿಕರು ಉಚಿತವಾಗಿ ಸಂಚಾರ ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

    ಪತ್ರಿಕಾ ಪ್ರಕಟಣೆ:
    ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು, ಅದನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ. ಮಂಗಳವಾರ ಈ ಸೌಲಭ್ಯ ಕೊನೆಗೊಳ್ಳುತ್ತಿತ್ತು. ಆದರೆ ಕಾರ್ಮಿಕರ ಮತ್ತು ಜನರ ಅನುಕೂಲಕ್ಕಾಗಿ ಉಚಿತ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕರು ಮತ್ತು ಜನರು ಬಸ್ ನಿಲ್ದಾಣಗಳಲ್ಲಿ ಜಮಾವಣೆಯಾಗದೆ ನೆಮ್ಮದಿಯಿಂದ ತಮ್ಮ ಊರುಗಳಿಗೆ ತೆರಳಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಭಾನುವಾರ 951 ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ 30,000 ಜನ ಪ್ರಯಾಣ ಮಾಡಿದ್ದಾರೆ. ಇಂದು 50 ಬಸ್ಸುಗಳಲ್ಲಿ ಈಗಾಗಲೇ 1,500 ಜನರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ 550 ಬಸ್ಸುಗಳು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ 400 ಬಸ್ಸುಗಳನ್ನು ಈ ಸೌಲಭ್ಯಗೋಸ್ಕರ ಕಾಯ್ದಿರಿಸಲಾಗಿದೆ. ಶನಿವಾರ 550 ಬಸ್ಸುಗಳಲ್ಲಿ 16,500 ಪ್ರಯಾಣಿಕರು ತೆರಳಿದ್ದರು.

    ಭಾನುವಾರ ಎರಡು ರೈಲುಗಳು ಬಿಹಾರದ ಪಾಟ್ನಾ ಮತ್ತು ರಾಂಚಿಗೆ ತೆರಳಿವೆ. ಇದೇ ಸಮಯದಲ್ಲಿ ಒಡಿಸ್ಸಾದ ಭುವನೇಶ್ವರಕ್ಕೆ ಒಂದು ರೈಲು ಕಳುಹಿಸಲಾಗಿದೆ. ಒಟ್ಟು ನಾಲ್ಕು ರೈಲುಗಳಲ್ಲಿ 4,800 ಪ್ರಯಾಣಿಕರು ಆ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಇಂದು ರಾಜಸ್ಥಾನದ ಜೈಪುರ, ಬಿಹಾರದ ಪಾಟ್ನಾಗೆ ಎರಡು ರೈಲುಗಳು ಹೊರಡಲಿವೆ. ಪ್ರಯಾಣಕ್ಕಿಂತ ಮೊದಲು ಎಲ್ಲಾ ಜನರಿಗೂ ಉಚಿತ ಊಟ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

  • ಮಫ್ತಿಯಲ್ಲಿರುವ ಪೊಲೀಸರಿಗೆ ಉಚಿತ ಪ್ರಯಾಣ – ಬಿಎಂಟಿಸಿಗೆ ಸಿಎಂ ಸೂಚನೆ

    ಮಫ್ತಿಯಲ್ಲಿರುವ ಪೊಲೀಸರಿಗೆ ಉಚಿತ ಪ್ರಯಾಣ – ಬಿಎಂಟಿಸಿಗೆ ಸಿಎಂ ಸೂಚನೆ

    ಬೆಂಗಳೂರು: ಮಫ್ತಿಯಲ್ಲಿ ಕೆಲಸ ಮಾಡುವ ಪೊಲೀಸರಿಗೆ ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.

    ವಿವಿಧ ಕೆಲಸಗಳಿಗಾಗಿ ಮಫ್ತಿಯಲ್ಲಿ ಓಡಾಡುವ ಪೊಲೀಸರು ಬಿಎಂಟಿಸಿ ಬಸ್ಸಿನಲ್ಲಿ ಓಡಾಡುವ ವೇಳೆ ಟಿಕೆಟ್ ತೆಗೆದುಕೊಳ್ಳುವಂತೆ ಕಂಡಕ್ಟರ್ ತಾಕೀತು ಮಾಡುತ್ತಾರೆ. ನಾವು ಮಫ್ತಿಯಲ್ಲಿ ಕೆಲಸ ಮಾಡುತ್ತಿದ್ದೀವಿ ಎಂದು ಐಡಿ ಕಾರ್ಡ್ ತೋರಿಸಿದರೂ ಕಂಡಕ್ಟರ್‌ಗಳು ಕೇಳುವುದಿಲ್ಲ. ಡ್ರೆಸ್‍ನಲ್ಲಿ ಇದ್ದವರಿಗೆ ಮಾತ್ರ ಉಚಿತ ಪ್ರಯಾಣ, ಉಳಿದವರು ಟೆಕೆಟ್ ತೆಗೆದುಕೊಳ್ಳಲೇಬೇಕು ಎಂದು ಗಲಾಟೆ ಮಾಡುತ್ತಾರೆ ಅಂತ ಪೊಲೀಸರು ಮೇಲಾಧಿಕಾರಿಗಳ ಮನವಿ ಮಾಡಿಕೊಂಡಿದ್ದರು.

    ಗೃಹ ಇಲಾಖೆಗೆ ಬಿಎಂಟಿಸಿ ಪ್ರತಿವರ್ಷ ಹತ್ತರಷ್ಟು ಹೆಚ್ಚುವರಿಯಾಗಿ ಹಣ ನೀಡುತ್ತೆ. ಹಾಗಾಗಿ ಗುಪ್ತಚರ, ಸಚಿವರ ಅಂಗರಕ್ಷಕರು ಸೇರಿದಂತೆ ವಿವಿಧ ಕೆಲಸಗಳಿಗೆ ಬಸ್ಸಿನಲ್ಲಿ ಓಡಾಡುವ ಪೊಲೀಸರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ಅಂತ ಹಿರಿಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು.

    ರಾಜ್ಯದ ಬೇರೆ ಬೇರೆ ನಗರಗಳಿಂದ ಕೆಲಸದ ನಿಮಿತ್ತ ಬೆಂಗಳೂರಿಗೆ ಬರುವವರಿಗೂ ಕೂಡ ಬಿಎಂಟಿಸಿ ಬಸ್ಸಿನಲ್ಲಿ ಟಿಕೆಟ್ ಖರೀದಿ ಮಾಡಬೇಕಿತ್ತು. ಆಗಲೂ ಪೊಲೀಸ್ ಸಿಬ್ಬಂದಿ ನಾವು ಅಂತ ಐಡಿ ಕಾರ್ಡ್ ತೋರಿಸಿದರೂ, ಸಮವಸ್ತ್ರದಲ್ಲಿರುವವರಿಗೆ ಮಾತ್ರ ಉಚಿತ ಸೇವೆ ಎಂದು ನಮಗೆ ಆದೇಶವಾಗಿದೆ ಅಂತ ಕಂಡಕ್ಟರ್‌ಗಳು ಹೇಳುತ್ತಿದ್ದರು.

    ಈ ಎಲ್ಲಾ ಸಮಸ್ಯೆಗಳಿಗೆ ಅಂತ್ಯವಾಡುವ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ಬಿಎಂಟಿಸಿಗೆ ಪತ್ರ ಬರೆದಿದ್ದು, ಐಡಿ ಕಾರ್ಡ್ ಹೊಂದಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕೊಡುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದ ಸ್ವಂತ ಖರ್ಚಿನಲ್ಲಿ ಓಡಾಡುತ್ತಿದ್ದ ನೂರಾರು ಪೊಲೀಸರು ನಿಟ್ಟುಸಿರುಬಿಟ್ಟಿದ್ದಾರೆ.