Tag: ಉಚಿತ ಪ್ರಯಾಣ

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕಾರ್ಮಿಕರಿಗೆ 3 ದಿನ ಉಚಿತ ಪ್ರಯಾಣ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕಾರ್ಮಿಕರಿಗೆ 3 ದಿನ ಉಚಿತ ಪ್ರಯಾಣ

    – ಕಾರ್ಮಿಕರು ಯಾವುದೇ ದಾಖಲೆ ತೋರಿಸು ಅಗತ್ಯವಿಲ್ಲ

    ಬೆಂಗಳೂರು: ತಮ್ಮ ಊರಿಗಳಿಗೆ ಹೋಗುತ್ತಿದ್ದ ವಲಸೆ ಕಾರ್ಮಿಕರಿಂದ ಹಣ ಪಡೆಯುತ್ತಿದ್ದ ಸರ್ಕಾರ ಈಗ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

    ಕೆಎಸ್‌ಆರ್‌ಟಿಸಿ ಶನಿವಾರ ಕಾರ್ಮಿಕರಿಂದ ದುಪ್ಪಟ್ಟು ಹಣವನ್ನು ಪಡೆಯುವ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದರಿಂದ  ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ಹಳೇ ದರವನ್ನು ಪಡೆಯುವಂತೆ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಸರ್ಕಾರ ಇಂದು ಪ್ರಯಾಣಿಕರ ಬಳಿಯಿಂದ ಯಾವುದೇ ಹಣವನ್ನು ಪಡೆಯುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ ಬಿಗ್ ಶಾಕ್- ಬೆಂಗ್ಳೂರಿನಿಂದ ಹೊರಟವ್ರಿಗೆ ಡಬಲ್ ದರದ ಬಿಸಿ 

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್, ಸಾರಿಗೆ ನಿಗಮದಿಂದ ಕಾರ್ಮಿಕರಿಗೆ ಇಂದಿನಿಂದ 3 (ಮಂಗಳವಾರ) ದಿನಗಳವರೆಗೆ ಮೂರು ದಿನಗಳ ಕಾಲ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಹುಷಾರಾಗಿ ಹೋಗಿ, ಪುಟ್ಟ ಮಗುವಿದೆ- ಧೈರ್ಯ ತುಂಬಿದ ಪೊಲೀಸ್

    ಬಸ್‍ಗಳಲ್ಲಿ ಸಂಚರಿಸುವ ಎಲ್ಲರೂ ಕಾರ್ಮಿಕರೆಂದು ನಾವು ಭಾವಿಸಿದ್ದೇವೆ. ಉಚಿತ ಪ್ರಯಾಣ ನೀಡಿರುವುದು ಸಿಹಿ ಸುದ್ದಿಯಾಗಿದೆ. ಕಾರ್ಮಿಕರು ಯಾವುದೇ ಆತಂಕವಿಲ್ಲದೆ ಸುಖಕರವಾಗಿ ಪ್ರಯಾಣಿಸಬಹುದು. ಈಗಾಗಲೇ ಹಣ ಪಾವತಿಸಿ ಪ್ರಯಾಣಿಸುತ್ತಿರುವ ಕಾರ್ಮಿಕರಿಗೆ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ಕಳಸದ್ ತಿಳಿಸಿದರು.

    ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?:
    ಕಾರ್ಮಿಕರು ಮತ್ತು ಬಡ ಕೂಲಿ ಕಾರ್ಮಿಕರ ಪರಿಸ್ಥಿತಿಯನ್ನು ಗಮನಿಸಿ ಇಂದಿನಿಂದ 3 (ಮಂಗಳವಾರ) ದಿನಗಳವರೆಗೆ ಜಿಲ್ಲಾ ಕೇಂದ್ರಗಳಿಂದ ಮತ್ತು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದಲ್ಲಿನ ತಮ್ಮ ತಮ್ಮ ಊರುಗಳಿಗೆ ಹೋಗುವ ಎಲ್ಲರಿಗೂ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನನ್ನ ಕಳಕಳಿಯ ಮನವಿ ಯಾವುದೇ ಬಸ್ ನಿಲ್ದಾಣಗಳಲ್ಲಿ ಯಾರು ನೂಕುನುಗ್ಗಲು ಮಾಡಬಾರದು. ಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ.

    ಮೆಜೆಸ್ಟಿಕ್‍ನಲ್ಲಿ ಸಾವಿರಾರೂ ಕಾರ್ಮಿಕರು ಜಮಾಯಿಸಿದ್ದಾರೆ. ಹೀಗಾಗಿ ಕೆಎಸ್‌ಆರ್‌ಟಿಸಿ 200ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಧಿಕಾರಿಗಳು ಮುಂದೆ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಬಸ್ ನಿಲ್ದಾಣದಲ್ಲಿ ಸೇರಿರುವ ಎಲ್ಲರನ್ನೂ ತಮ್ಮ ಜಿಲ್ಲೆಗಳಿಗೆ ಕಳಿಸಿಕೊಡಲು ಸಿದ್ಧತೆ ನಡೆದಿದೆ. ಅಷ್ಟೇ ಅಲ್ಲದೆ ದಾಖಲೆಗಳನ್ನು ತೋರಿಸಲೇ ಬೇಕು ಎಂದು ಸರ್ಕಾರ ಈ ಹಿಂದೆ ಸೂಚನೆ ನೀಡಿತ್ತು. ಆದರೆ ಈಗ ಯಾವುದೇ ದಾಖಲೆ ತೋರಿಸು ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಸೋಮವಾರದಿಂದ 12 ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭ

    ಈ ಮೊದಲು ಎಲ್ಲಿಗೆ, ಎಷ್ಟು ದರ ಇತ್ತು?
    ಬಾಗಲಕೋಟೆಗೆ ಈ ಹಿಂದೆ ನಿಗದಿಯಾಗಿದ್ದ 700 ರೂ. ಬದಲು 1,311 ರೂ. ಪಡೆಯಲಾಗುತ್ತಿದೆ. ಅಂತೆಯೇ ಬಳ್ಳಾರಿಗೆ ತೆರಳಲು 450 ರೂ. ಬದಲು 884 ರೂ., ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ವಸೂಲಿ ಮಾಡಲಾಗುತ್ತಿದೆ. ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ಚಿತ್ರದುರ್ಗಕ್ಕೆ ತೆರಳಲು 300 ರೂ. ಬದಲು 602 ರೂ., ಕೊಪ್ಪಳಕ್ಕೆ ತೆರಳಲು 600 ರೂಪಾಯಿ ಬದಲು 1,000 ರೂ., ಕಲಬುರಗಿಗೆ ತೆರಳಲು 900 ರೂಪಾಯಿ ಬದಲು 1,619 ರೂ. ಪಡೆಯಲಾಗುತ್ತಿದೆ. ಹೀಗೆ ವಿವಿಧ ಪ್ರದೇಶಗಳಿಗೆ ಹೋಗಲು ಸಿದ್ಧರಾದ ವಲಸೆ ಕಾರ್ಮಿಕರಿಗೆ ಬಸ್ ಟಿಕೆಟ್ ದರ ಆಘಾತ ನೀಡಿದೆ.

  • ಲುಧಿಯಾನಾ ಪೊಲೀಸರಿಂದ ಮಹಿಳೆಯರಿಗೆ ರಾತ್ರಿಯಿಡೀ ಉಚಿತ ಪ್ರಯಾಣ

    ಲುಧಿಯಾನಾ ಪೊಲೀಸರಿಂದ ಮಹಿಳೆಯರಿಗೆ ರಾತ್ರಿಯಿಡೀ ಉಚಿತ ಪ್ರಯಾಣ

    ಚಂಢೀಗಡ್: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಈ ನಡುವೆ ಪಂಜಾಬ್‍ನ ಲುಧಿಯಾನಾ ಪೊಲೀಸರು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಶುರು ಮಾಡಿದ್ದಾರೆ.

    ಲುಧಿಯಾನಾ ಪೊಲೀಸರು ಮಹಿಳೆಯರಿಗಾಗಿ ಉಚಿತ ಪ್ರಯಾಣ ಯೋಜನೆಯನ್ನು ಶುರು ಮಾಡಿದ್ದಾರೆ. ಇದರಿಂದ ತಡರಾತ್ರಿ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಮನೆಗೆ ಹೋಗಲು ಯಾವುದೇ ವಾಹನ ಸಿಗದಿದ್ದರೆ, ಅವರು ನೇರವಾಗಿ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ ಕ್ಯಾಬ್‍ಗಾಗಿ ಅವರು ಪೊಲೀಸರನ್ನು ಕೇಳಬಹುದು.

    ಭಾನುವಾರ ಪೊಲೀಸ್ ಕಮಿಶನರ್ ರಾಜೇಶ್ ಅಗರ್‌ವಾಲ್ ಅವರು ಮಾತನಾಡಿ, ಮಹಿಳೆಯರು ಎಲ್ಲಿಂದ ಕರೆ ಮಾಡುತ್ತಾರೋ, ಅಲ್ಲಿ ಹತ್ತಿರದ ಪೊಲೀಸರ ನಿಯಂತ್ರಣ ಕೊಠಡಿ ಅಥವಾ ಮಹಿಳೆಯರು ಹೋಗಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವುದು ಪೊಲೀಸರ ಜವಾಬ್ದಾರಿ. ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಈ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    ಮಹಿಳೆಯರಿಗಾಗಿ 1091 ಹಾಗೂ 78370 18555 ಸಹಾಯವಾಣಿ ಸಂಖ್ಯೆ ಲಭ್ಯವಿರುತ್ತದೆ. ಈ ನಂಬರ್ 24 ಗಂಟೆ ಚಾಲ್ತಿಯಲ್ಲಿರುತ್ತದೆ. ಮಹಿಳೆಯರು ಯಾವುದೇ ತೊಂದರೆ ಅನುಭವಿಸಬಾರದು ಎಂದು ಪೊಲೀಸ್ ಕಮಿಶನರ್ ರಾಜೇಶ್ ಅಗರ್‌ವಾಲ್ ಈ ಯೋಜನೆಯನ್ನು ಶುರು ಮಾಡಿದ್ದಾರೆ.

  • ಅಕ್ಟೋಬರ್‌ನಿಂದ ಮೆಟ್ರೋ, ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ – ಕೇಜ್ರಿವಾಲ್ ಗಿಫ್ಟ್

    ಅಕ್ಟೋಬರ್‌ನಿಂದ ಮೆಟ್ರೋ, ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ – ಕೇಜ್ರಿವಾಲ್ ಗಿಫ್ಟ್

    ನವದೆಹಲಿ: ರಕ್ಷಾ ಬಂಧನ ಹಬ್ಬದ ಅಂಗವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ದೆಹಲಿ ಮೆಟ್ರೋ, ದೆಹಲಿ ನಗರ ಸಾರಿಗೆ ಹಾಗೂ ಸ್ಥಳೀಯ ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಯೋಜನೆಯನ್ನು ಘೋಷಿಸಿದ್ದಾರೆ.

    ಅಕ್ಟೋಬರ್ 29ರಿಂದ ಈ ಕಾರ್ಯಕ್ರಮ ಜಾರಿಗೆ ಬರಲಿದ್ದು, ಇದಕ್ಕೆ ‘ಭಾಯ್ ದೂಜ್’ ಎಂದು ಹೆಸರಿಡಲಾಗಿದೆ. ಇಂದು ನಡೆದ ಸ್ವಾತಂತ್ರ್ಯ ದಿನಾಚಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಈ ಯೋಜನೆಯನ್ನು ಕೇಜ್ರಿವಾಲ್ ಘೋಷಿಸಿದ್ದಾರೆ. ದೆಹಲಿ ಮೆಟ್ರೋ, ದೆಹಲಿ ಸಾರಿಗೆ ಸಂಸ್ಥೆ ಹಾಗೂ ಸ್ಥಳೀಯ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಯೋಜನೆಯನ್ನು ಕೇಜ್ರಿವಾಲ್ ಅವರು 2 ತಿಂಗಳ ಹಿಂದೆಯೇ ಘೋಷಿಸಿದ್ದರು. ಆದರೆ, ಇದೀಗ ಅಧಿಕೃತವಾಗಿ ತಿಳಿಸಿದ್ದಾರೆ.

    ರಕ್ಷಾ ಬಂಧನದ ನಿಮಿತ್ತ ನನ್ನ ಸಹೋದರಿಯರಿಗೆ ಅದ್ಭುತ ಉಡುಗೊರೆ ನೀಡುತ್ತಿದ್ದೇನೆ. ಅದುವೇ ಉಚಿತ ಪ್ರಯಾಣದ ವ್ಯವಸ್ಥೆ. ದೆಹಲಿ ಮೆಟ್ರೋ, ದೆಹಲಿ ಸಾರಿಗೆ ಸಂಸ್ಥೆ ಹಾಗೂ ಸ್ಥಳೀಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಅಕ್ಟೋಬರ್ 29ರಿಂದ ಮಹಿಳೆಯರು ಉಚಿತವಾಗಿ ಪ್ರಯಣಿಸಬಹುದಾಗಿದೆ. ಮಹಿಳೆಯರ ಭದ್ರತೆಗಾಗಿ ಈ ಯೋಜನೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮುಂದಿನ ವರ್ಷ ಜೂನ್ ತಿಂಗಳಲ್ಲಿ ದೆಹಲಿಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದರ ಭಾಗವಾಗಿ ಈ ಜನಪ್ರಿಯ ಯೋಜನೆಯನ್ನು ಘೋಷಿಸಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಈ ಕುರಿತು ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿ, ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡುವ ಮೂಲಕ ಸಾರ್ವಜನಿಕ ಸಾರಿಗೆಯನ್ನು ಬಳಸಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವುದು ಹಾಗೂ ಮಹಿಳೆಯರ ಭದ್ರತೆಯ ದೃಷ್ಟಯಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

    2019ರ ಲೋಕಸಭಾ ಚುನಾವಣೆ ನಂತರ ಈ ಘೋಷಣೆ ಹೊರ ಬಿದ್ದಿದ್ದು, ಎಎಪಿ 2015ರಿಂದ ಆಡಳಿತ ನಡೆಸುತ್ತಿದ್ದರೂ ಸಹ ಲೋಕಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ ಒಂದೂ ಕ್ಷೇತ್ರದಲ್ಲಿ ಆಪ್ ಜಯಗಳಿಸಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕೇಜ್ರಿವಾಲ್ ಈಗ ಈ ಆಫರ್ ಪ್ರಕಟಿಸಿದ್ದಾರೆ.

    ಯೋಜನೆಯಿಂದಾಗಿ ಕೇಜ್ರಿವಾಲ್ ಸರ್ಕಾರಕ್ಕೆ ಸುಮಾರು 700 ಕೋಟಿ ರೂ.ಗಳಷ್ಟು ಹೊರೆಯಾಗಲಿದ್ದು, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಯನ್ನು ಘೋಷಿಸಿದ ನಂತರ ಬಿಜೆಪಿ ಕೇಜ್ರಿವಾಲ್ ಅವರನ್ನು ಕಟುವಾಗಿ ಟೀಕಿಸಿದ್ದು, ಮುಖ್ಯಮಂತ್ರಿಗಳು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂದು ದೂರಿದೆ.

    ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ. ಇದೇ ರೀತಿ ಮೆಟ್ರೋದಲ್ಲೂ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದರಿಂದ ಮೆಟ್ರೋ ನಿರ್ವಹಣೆ ಅಸಾಧ್ಯ ಎಂದು ತಿಳಿಸಿದ್ದಾರೆ. ಅಲ್ಲದೆ, ಮೆಟ್ರೋ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವವಿದೆ. ಒಂದು ವೇಳೆ ಹಣಕಾಸಿನ ವಿಚಾರವಾಗಿ ಕೇಂದ್ರ ಸರ್ಕಾರ ಒಪ್ಪಂದವನ್ನು ಹಿಂಪಡೆದರೆ ರಾಜ್ಯ ಸರ್ಕಾರಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಡಸಿದ್ದಾರೆ. ರಕ್ಷಾ ಬಂಧನ ಹಿನ್ನೆಲೆ ಇಂದೂ ಸಹ ಮಹಿಳೆಯರು ದೆಹಲಿಯ ಬಸ್ ಹಾಗೂ ಮೆಟ್ರೋಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

  • ಉಚಿತ ಸಂಚಾರ – ‘ಮೆಟ್ರೋ ಮ್ಯಾನ್’ ಶ್ರೀಧರನ್‍ರಿಂದ ಪ್ರಧಾನಿಗೆ ಪತ್ರ

    ಉಚಿತ ಸಂಚಾರ – ‘ಮೆಟ್ರೋ ಮ್ಯಾನ್’ ಶ್ರೀಧರನ್‍ರಿಂದ ಪ್ರಧಾನಿಗೆ ಪತ್ರ

    ನವದೆಹಲಿ: ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಉಚಿತ ಸಂಚಾರಕ್ಕೆ ಸಿಎಂ ಕೇಜ್ರಿವಾಲ್ ಅನುವು ಮಾಡಿಕೊಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಮೆಟ್ರೋ ಮ್ಯಾನ್ ಖ್ಯಾತಿಯ ಇ ಶ್ರೀಧರನ್ ತಗಾದೆ ತೆಗೆದು, ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

    ದೆಹಲಿಯ ಕೇಜ್ರಿವಾಲ್ ನೇತೃತ್ವದ ಸರ್ಕಾರ, ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದೆ. ಆದರೆ ಇದಕ್ಕೆ ಬೇರೆ ಸಲಹೆ ನೀಡಿರುವ ಅವರು ಮಹಿಳೆಯರ ಪ್ರಯಾಣ ವೆಚ್ಚವನ್ನು ನೇರವಾಗಿ ಮಹಿಳೆಯರ ಖಾತೆಗೆ ವರ್ಗಾಯಿಸಲಿ ಎಂದು ಆಗ್ರಹಿಸಿದ್ದಾರೆ.

    ಒಂದೊಮ್ಮೆ ಮೆಟ್ರೋ ಪ್ರಯಾಣದಲ್ಲಿ ಉಚಿತ ಸಂಚಾರ ಆರಂಭಿಸಿದರೆ ಸಂಸ್ಥೆಗಳು ದಿವಾಳಿ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 1995 ರಿಂದ 2012ರ ವರೆಗೂ ದೆಹಲಿ ಮೆಟ್ರೋ ಮುಖ್ಯಸ್ಥರಾಗಿದ್ದ ಅವರು ಮೆಟ್ರೋ ಸಿಬ್ಬಂದಿ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕೂಡ ಟಿಕೆಟ್ ಖರೀದಿ ಮಾಡಿಯೆ ಪ್ರಯಾಣ ನಡೆಸಬೇಕು ಎಂದು ಹೇಳಿದ್ದರು.

    ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ದೆಹಲಿ ಸರ್ಕಾರದ ಯೋಜನೆಗೆ ಒಪ್ಪಿಗೆ ನೀಡದಂತೆ ಮನವಿ ಮಾಡಿದ್ದಾರೆ. ಅಂದಹಾಗೇ ದೆಹಲಿ ಮೆಟ್ರೋ ರೈಲು ನಿಗಮದಲ್ಲಿ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಮಾನ ಪಾಲುದಾರಿಕೆ ಹೊಂದಿದೆ.

  • ಓಲಾ ಕ್ಯಾಬ್‍ನಲ್ಲೇ ಹೆರಿಗೆ- ತಾಯಿ ಮಗುವಿಗೆ 5 ವರ್ಷ ಫ್ರೀ ರೈಡ್!

    ಓಲಾ ಕ್ಯಾಬ್‍ನಲ್ಲೇ ಹೆರಿಗೆ- ತಾಯಿ ಮಗುವಿಗೆ 5 ವರ್ಷ ಫ್ರೀ ರೈಡ್!

    ಪುಣೆ: ಮಹಿಳೆಯೊಬ್ಬರು ಓಲಾ ಕ್ಯಾಬ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗುವಿಗೆ ಮುಂದಿನ 5 ವರ್ಷಗಳವರೆಗೆ ಉಚಿತವಾಗಿ ಓಲಾದಲ್ಲಿ ಪ್ರಯಾಣಿಸುವ ಅವಕಾಶವನ್ನು ಕಂಪನಿ ನೀಡಿದೆ.

    ಹೌದು. ಪುಣೆಯ ರಮೇಶ್ ಸಿಂಗ್ ಹಾಗೂ ಈಶ್ವರಿ ಸಿಂಗ್ ವಿಶ್ವಕರ್ಮ ಎಂಬ ದಂಪತಿ ಓಲಾ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈಶ್ವರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಈಶ್ವರಿಗೆ ಅಕ್ಟೋಬರ್ 24ರಂದು ಹೆರಿಗೆ ದಿನಾಂಕ ನಿಗದಿಯಾಗಿತ್ತು. ಆದ್ರೆ ಅಕ್ಟೋಬರ್ 2ರಂದು ಈಶ್ವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ದಂಪತಿ ಪುಣೆಯಿಂದ 12 ಕಿಮೀ ದೂರದಲ್ಲಿರೋ ಕಮಲ ನೆಹರು ಆಸ್ಪತ್ರೆಗೆ ತೆರಳಲೆಂದು ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ 5 ಕಿಮಿ ದೂರ ಕ್ರಮಿಸುವ ವೇಳೆಗೆ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಈಶ್ವರಿ ಜೊತೆಗಿದ್ದ ಸಂಬಂಧಿಕರೊಬ್ಬರ ಸಹಾಯದಿಂದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಕ್ಯಾಬ್ ಚಾಲಕ ತಾಯಿ-ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

    ಗುರುವಾರದಂದು ತಾಯಿ- ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಆರೋಗ್ಯವಾಗಿದ್ದಾರೆ ಎಂಬುವುದಾಗಿ ವರದಿಯಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಓಲಾ ಕಂಪನಿಯವರು ಈ ಉಚಿತ ರೈಡ್‍ನ ಉಡುಗೊರೆಯನ್ನು ನೀಡಿದ್ದಾರೆ. ಮಗುವಿನ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿರುವ ವಿಶೇಷ ಕೂಪನ್ ಮೂಲಕ ಅವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

    ಈಶ್ವರಿ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋದ ಚಾಲಕ ಗಲಾಂಡೆ ಡಿಸ್ಚಾರ್ಜ್ ಆದ ತಾಯಿ ಹಾಗೂ ಮಗುವನ್ನು ಅದೇ ಕ್ಯಾಬ್‍ನಲ್ಲಿ ಉಚಿತವಾಗಿಯೇ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಮಹಿಳೆಗೆ ಸಹಾಯ ಮಾಡಿದ್ದಕ್ಕೆ ಕ್ಯಾಬ್ ಚಾಲಕ ಗಲಾಂಡೆ ಅವರಿಗೂ ಕೂಡ ಕಂಪನಿ ಸನ್ಮಾನಿಸಿದೆ.