Tag: ಉಚಿತ ನಿವೇಶನ

  • ವೋಟಿಗಾಗಿ ಫ್ರೀ ಸ್ಕೀಂಗಳ ಆಮಿಷ- ಉಚಿತ ಸೈಟ್ ನೀಡಲು ಮುಂದಾದ ಬಿಜೆಪಿ ಟಿಕೆಟ್ ಆಕಾಂಕ್ಷಿ

    ವೋಟಿಗಾಗಿ ಫ್ರೀ ಸ್ಕೀಂಗಳ ಆಮಿಷ- ಉಚಿತ ಸೈಟ್ ನೀಡಲು ಮುಂದಾದ ಬಿಜೆಪಿ ಟಿಕೆಟ್ ಆಕಾಂಕ್ಷಿ

    ರಾಮನಗರ: 2023ರ ರಾಜ್ಯ ವಿಧಾನಸಭಾ ಚುನಾವಣೆ (Karnataka Vidhanasabha Election 2023) ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹೊತ್ತಲ್ಲಿ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕುಕ್ಕರ್, ಸೀರೆ, ಹಣ, ಬಾಡೂಟದ ಪಾಲಿಟಿಕ್ಸ್ ನಡೆಯುತ್ತಿದ್ದರೆ, ಇತ್ತ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಕಾಸ್ಟ್ಲಿ ಗಿಫ್ಟ್ ನೀಡಲು ಬಿಜೆಪಿ (BJP) ಸಂಭಾವ್ಯ ಅಭ್ಯರ್ಥಿ ಮುಂದಾಗಿದ್ದಾರೆ.

    ರೇಷ್ಮೆ ನಾಡಲ್ಲಿ ಚುನಾವಣಾ ರಣಕಣ ರಂಗೇರಿದೆ. ಇತ್ತ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Congress Parajadwani Yatre) ನಡೆಯುತ್ತಿದ್ದರೆ. ಅತ್ತ ಫ್ರೀ ಸೈಟ್ (Free Site) ನೀಡಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಮುಂದಾಗಿದ್ದಾರೆ. ಮಾಗಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಸಾದ್ ಗೌಡ (Prasad Gowda) ಹೀಗೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. 1 ಸಾವಿರ ಮಹಿಳೆಯರಿಗೆ ಉಚಿತವಾಗಿ 15*20 ಅಳತೆ ಸೈಟ್ ನೀಡಲು ಸಿದ್ಧತೆ ನಡೆಸಿದ್ದು, ಬಿಡದಿ ಹೋಬಳಿಯಲ್ಲಿ 6 ಎಕರೆ ಜಾಗದಲ್ಲಿ ಫ್ರೀ ಸೈಟ್ ನೀಡಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

    ಸೈಟ್ ಹಂಚಿಕೆಯಲ್ಲಿ ಅಂಗವಿಕಲರು, ವಿಧವೆಯರು ಮತ್ತು ಅನಾಥರಿಗೆ ಮೊದಲ ಆದ್ಯತೆ ನೀಡುವುದಾಗಿ ಪ್ರಸಾದ್ ಗೌಡ ತಿಳಿಸಿದ್ದಾರೆ. ಜಮೀನು ಅಥವಾ ನಿವೇಶನ ಇಲ್ಲದವರ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಮಾಹಿತಿ ಸಂಗ್ರಹಿಸಿ ಸೈಟ್ ಹಂಚಿಕೆಗೆ ಸಿದ್ಧತೆ ನಡೆಸಿದ್ದಾರೆ. ಈ ಯೋಜನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕರೆ ಕೊಟ್ಟಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಂಚನಬೆಲೆ ಬಳಿ ಇರುವ ತಮ್ಮದೇ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ಒಟ್ಟು 3 ಸಾವಿರ ಕುಟುಂಬಗಳಿಗೆ ನಿವೇಶನ ಹಂಚುವುದಾಗಿ ಘೋಷಿಸಿದ್ದಾರೆ.

    ಒಟ್ಟಾರೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳ ಮುಖಂಡರು ನಾನಾ ಆಮಿಷಗಳನ್ನ ಒಡ್ಡುತ್ತಿದ್ದಾರೆ. ಮತದಾರರ ಗಮನಸೆಳೆಯಲು ಜಿದ್ದಿಗೆ ಬಿದ್ದಿರುವ ರಾಜಕೀಯ ಮುಖಂಡರು ಕೇವಲ ಚುನಾವಣಾ ಪ್ರಚಾರಕ್ಕೋಸ್ಕರ ಇಂತಹ ಆಮಿಷ ನೀಡದೇ ಬಡಜನರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕಿದೆ. ಮತದಾರರು ಕೂಡಾ ಆಮಿಷಗಳಿಗೆ ಬಲಿಯಾಗದೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ನಿರ್ವಹಿಸಬೇಕಿದೆ.

  • 3 ವರ್ಷ ಕಳೆದರೂ ದಾಖಲೆಗಳಲ್ಲಿಯೇ ನಿರಾಶ್ರಿತರ ಸೂರು

    3 ವರ್ಷ ಕಳೆದರೂ ದಾಖಲೆಗಳಲ್ಲಿಯೇ ನಿರಾಶ್ರಿತರ ಸೂರು

    ಕೊಪ್ಪಳ: ವಿರುಪಾಪುರ ಗಡ್ಡೆ ನಿರಾಶ್ರಿತರಿಗೆ ತಾಲೂಕು ಆಡಳಿತದ ವತಿಯಿಂದ ಉಚಿತ ನಿವೇಶನಗಳ ವಿತರಣೆ ಮಾಡಬೇಕಾದ ಕಾಯಕವು 3 ವರ್ಷಗಳು ಕಳೆದರೂ ಸಹ ದಾಖಲೆಗಳಲ್ಲಿಯೇ ಉಳಿದುಕೊಂಡಿದೆ. ಇದರಿಂದಾಗಿ ನಿರಾಶ್ರಿತರು ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಜೀವನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸಿ, ಅರಣ್ಯ ಭೂಮಿಯನ್ನು ರಕ್ಷಣೆ ಮಾಡಲಾಗಿತ್ತು. ಪರ್ಯಾಯವಾಗಿ ಗಡ್ಡೆಯ ನಿರಾಶ್ರಿತರಿಗೆ ಸೂರು ಕಲ್ಪಿಸಿಕೊಡಲಾಗುವುದು ಎಂದು ತಾಲೂಕು ಆಡಳಿತವು ಮೂರು ವರ್ಷಗಳ ಹಿಂದೆ ಆದೇಶವನ್ನು ಹೊರಡಿಸಿತ್ತು. ಆಗಿನಿಂದ ಇಲ್ಲಿಯವರೆಗೂ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಇಲಾಖೆ ಅಧಿಕಾರಿಗಳು ನಿವೇಶನಗಳನ್ನು ಗುರುತಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

    ತಾಲೂಕು ಆಡಳಿತದ ವತಿಯಿಂದ ತಾಲೂಕಿನ ಕರಿಯಮ್ಮ ಗಡ್ಡಿ ಹಾಗೂ ತಿಮ್ಮಲಾಪೂರ ಗ್ರಾಮದಲ್ಲಿ ನವೇಶನಗಳನ್ನು ಗುರುತಿಸಲಾಗಿತ್ತಿದೆ ಎಂದು ದಾಖಲೆಗಳನ್ನು ತೊರಿಸಲಾಗುತ್ತಿದೆ. ಆದರೆ ಮೂರು ವರ್ಷಗಳು ಕಳೆದರೂ ಸಹ ಇದುವರೆಗೂ ನಿರಾಶ್ರಿತರಿಗೆ ನಿವೇಶನಗಳು ಹಂಚಿಕೆಯನ್ನು ಮಾಡದೆ ಅಧಿಕಾರಿಗಳು ಕಾಲಹರಣವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪಗಳು ನಿರಾಶ್ರಿತ ಕುಟುಂಬಗಳಿಂದ ಕೇಳಿ ಬರುತ್ತಿವೆ.

    ವಿರುಪಾಪುರ ಗಡ್ಡೆಯಲ್ಲಿನ ಸರ್ವೆ ನಂಬರ್ 49ರಲ್ಲಿನ ಅರಣ್ಯ ಭೂಮಿಯಲ್ಲಿ ಮನೆಗಳನ್ನು ಹಾಗೂ ಸಣ್ಣಪುಣ್ಣ ರೆಸ್ಟೋರೆಂಟ್‍ಗಳನ್ನು ನಿರ್ಮಿಸಿಕೊಂಡು ಕೂಲಿಕಾರರ ಕುಟುಂಬಗಳು ಉಪ ಜೀವನವನ್ನು ನಡೆಸುತ್ತಿದ್ದರು. ದಾಖಲೆಗಳು ಇಲ್ಲದೆ ಅರಣ್ಯ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಕಾರಣಕ್ಕೆ ಹಂಪಿ ಪ್ರಾಧಿಕಾರ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆಯನ್ನು ನಡೆಸಿ, ಗಡ್ಡೆಯಲ್ಲಿ ವಾಸವಾಗಿದ್ದ 70 ಕುಟುಂಬಗಳನ್ನು 2016 ಮೇ 2ರಂದು ಒಕ್ಕಲೆಬ್ಬಿಸಲಾಗಿತ್ತು. ಬಡ ಕುಟುಂಬದವರು ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಿ, ನೆಲಸಮ ಮಾಡಲಾಗಿತ್ತು. ಆಗ ಈ 70 ಕುಟುಂಬಗಳು ಬೀದಿಗೆ ಬಿದ್ದಿದ್ದವು.

    ನ್ಯಾಯಕ್ಕಾಗಿ ತಾಲೂಕು ಆಡಳಿತಕ್ಕೆ ಮೊರೆ ಹೋಗಿರುವುದರಿಂದ ಮಾನವೀಯತೆ ದೃಷ್ಟಿಯಿಂದ ನಿರಾಶ್ರಿತರ 70 ಕುಟುಂಬಗಳಿಗೆ ನಿವೇಶನವನ್ನು ಕಲ್ಪಿಸಲಾಗುವುದು ಎಂದು ಆದೇಶವನ್ನು ಹೊರಡಿಸಿತ್ತು. ಆದೇಶದಂತೆ ನಿವೇಶನಗಳನ್ನು ನೀಡುತ್ತಾರೆ ಎನ್ನುವ ಭರವಸೆಯಲ್ಲಿಯೇ ನಿರಾಶ್ರಿತರು ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    70 ಬಡ ಕುಟುಂಬಗಳು ವಿರುಪಾಪುರ ಗಡ್ಡೆ ಸಮೀಪದ ಇರುವ ಬೆಟ್ಟದಲ್ಲಿ ಕೆಲ ಕುಟುಂಬಗಳು ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ಉಪ ಜೀವನವನ್ನು ನಡೆಸುತ್ತಿದ್ದಾರೆ. ಕೆಲ ಕುಟುಂಬಗಳು ಕರಿಯಮ್ಮನ ಗಡ್ಡೆಯಲ್ಲಿ ಇರುವ ಸಮೂದಾಯ ಭವನದಲ್ಲಿ ಮನೆಯ ವಸ್ತುಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಾದ ಚರಂಡಿ, ವ್ಯವಸ್ಥಿತ ರಸ್ತೆ, ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಇಲ್ಲದೆ ಇಲ್ಲಿನ ನಿರಾಶ್ರಿತ ಕುಟುಂಬಗಳು ಪ್ರತಿ ದಿನ ಸಂಕಷ್ಟವನ್ನು ಎದುರಿಸುತ್ತಿವೆ. ಯಾವ ಚುನಾಯಿತ ಪ್ರತಿನಿಧಿಯು ಸಹ ಇತ್ತ ಗಮನ ಹರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.