Tag: ಉಚಿತ ಕೊಡುಗೆ

  • ಸಾಲವೆಂಬ ಪರ್ವತಗಳ ಸುಳಿಯಲ್ಲಿ ಹಿಮಾಚಲ – ಆರ್ಥಿಕ ಅಪಾಯದಲ್ಲಿರುವ ರಾಜ್ಯಗಳು ಯಾವುವು? ತಜ್ಞರು ಸೂಚಿಸುವ ಪರಿಹಾರವೇನು?

    ಸಾಲವೆಂಬ ಪರ್ವತಗಳ ಸುಳಿಯಲ್ಲಿ ಹಿಮಾಚಲ – ಆರ್ಥಿಕ ಅಪಾಯದಲ್ಲಿರುವ ರಾಜ್ಯಗಳು ಯಾವುವು? ತಜ್ಞರು ಸೂಚಿಸುವ ಪರಿಹಾರವೇನು?

    ಕರ್ನಾಟಕಕ್ಕಿಂತ ಮೊದಲು ಹಲವು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದ ಕಾಂಗ್ರೆಸ್‌ ಆಳ್ವಿಕೆಯ ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಸ್ಥಿತಿ (Himachal Economic Crisis) ವಿಷಮಿಸಿದೆ. ಪರ್ವತಗಳಿಂದ ಸುತ್ತುವರಿದಿರುವ ಹಿಮಾಚಲ ಪ್ರದೇಶದಲ್ಲಿ ಸಾಲದ ಪರ್ವತ ಹೆಚ್ಚಾಗುತ್ತಿದೆ. ಹಾಗಾಗಿ ಇತ್ತೀಚಿನ ಬೆಳವಣಿಗೆಯಲ್ಲಿ ರಾಜ್ಯದ ಮಂತ್ರಿಗಳು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಮುಂದಿನ ಎರಡು ತಿಂಗಳು ವೇತನ, ಭತ್ಯೆಗಳನ್ನು ಸರ್ಕಾರ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.

    ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಸಚಿವರು ಹಾಗೂ ಕ್ಯಾಬಿನೆಟ್‌ (Himachal Pradesh Cabinet) ಸದಸ್ಯರಿಗೆ 2 ತಿಂಗಳ ವೇತನ ಕಡಿತಗೊಳಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಆದ್ದರಿಂದ ಕ್ಯಾಬಿನೆಟ್‌ನ ಎಲ್ಲ ಸದಸ್ಯರು 2 ತಿಂಗಳ ವೇತನ ಬಿಟ್ಟುಕೊಡಲು ನಿರ್ಧರಿಸಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರು ಪ್ರಕಟಿಸಿದ್ದರು.

    ಭಾರತೀಯ ರಿಸರ್ವ್‌ ಬ್ಯಾಂಕ್‌ನ ಇತ್ತೀಚಿನ ವರದಿಯ ಪ್ರಕಾರ, ಹಿಮಾಚಲದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಅಂದ್ರೆ 2022ರ ಮಾರ್ಚ್‌ ವರೆಗೆ ಸಾಲದ ಪ್ರಮಾಣ 69 ಸಾವಿರ ಕೋಟಿ ರೂ.ಗಳಷ್ಟಿತ್ತು. ಆದ್ರೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2024ರ ಮಾರ್ಚ್‌ ವೇಳೆಗೆ ಸಾಲದ ಹೊರೆ 86,600 ಕೋಟಿ ರೂ.ಗಿಂತಲೂ ಹೆಚ್ಚಾಗಿದೆ. 2025ರ ಮಾರ್ಚ್‌ ವೇಳೆಗೆ ಇದು 95,000 ದಿಂದ 1 ಲಕ್ಷ ಕೋಟಿ ರೂ.ಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದಕ್ಕೆ ವಿಧಾನಸಭಾ ಚುನಾವಣೆ ವೇಳೆ ಸರ್ಕಾರ ಘೋಷಣೆ ಮಾಡಿದ ಉಚಿತ ಭರವಸೆಗಳೇ ಕಾರಣ. ಉಚಿತ ಗ್ಯಾರಂಟಿಗಳನ್ನು ಈಡೇರಿಸಲು ಮುಂದಾಗಿ ಸಾಲದ ಹೊರೆ ಮತ್ತಷ್ಟು ಹೆಚ್ಚಳವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ಹಿಮಾಚಲ ರಾಜ್ಯ ಸರ್ಕಾರ ನೀಡಿರುವ ಭರವಸೆಗಳು ಏನು? ಸಾಲದ ಹೊರೆ ಎಷ್ಟಿದೆ? ಮುಂದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿರೋ ರಾಜ್ಯಗಳಾವುವು? ಆರ್ಥಿಕ ನಷ್ಟದ ಬಗ್ಗೆ ಆರ್‌ಬಿಐ ವರದಿಗಳು ಏನು ಹೇಳಿವೆ? ಎಂಬುದರ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಹಿಮಾಚಲ ಸರ್ಕಾರದ ಉಚಿತ ಭರವಸೆಗಳೇನು?

    2022ರ ವಿಧಾನಸಭಾ ಚುನಾವಣೆ ವೇಳೆ ಹಿಮಾಚಲ ಸರ್ಕಾರ ಹಲವು ಉಚಿತ ಭರವಸೆಗಳನ್ನು ನೀಡಿದೆ.
    * ರಾಜ್ಯದ ಎಲ್ಲ ಮನೆಗಳಿಗೆ 125 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಕೆ
    * 10, 12ನೇ ತರಗತಿ ವಿದ್ಯಾರ್ಥಿಗಳಿಗೆ 20,000 ಉಚಿತ ಲ್ಯಾಪ್‌ಟಾಪ್‌
    * 10 ಲಕ್ಷ ರೂ. ಮೌಲ್ಯದ ಟ್ಯಾಕ್ಸಿ ಖರೀದಿಸುವವರಿಗೆ 5 ಲಕ್ಷ ರೂ. ಸಹಾಯಧನ
    * 1 ಕೋಟಿ ರೂ. ಮೌಲ್ಯದ ಬಸ್‌ ಖರೀದಿ ಮಾಡಿದರೆ 50 ಲಕ್ಷ ರೂ. ಸಹಾಯಧನ
    * ಹಿಮಾಚಲ ಪ್ರದೇಶದ ಮಹಿಳೆಯರಿಗೆ 1,500 ರೂ. ಮಾಸಿಕ ಸಹಾಯಧನ
    * ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು, ಹಳೇ ಪಿಂಚಣಿ ಯೋಜನೆ ಜಾರಿ

    ಖರ್ಚು ವೆಚ್ಚ ಹೇಗಿದೆ?

    2022ರಲ್ಲಿ ಹಿಮಾಚಲದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂದು ಪಣ ತೊಟ್ಟಿದ್ದ ಕಾಂಗ್ರೆಸ್‌ ಹಲವು ಉಚಿತ ಭರವಸೆಗಳನ್ನು ನೀಡಿತ್ತು. ಇದೀಗ ಈ ಉಚಿತ ಗ್ಯಾರಂಟಿಗಳೇ ಸರ್ಕಾರಕ್ಕೆ ಮುಳುವಾದಂತೆ ಕಾಣುತ್ತಿದೆ. ಏಕೆಂದರೆ ಹಿಮಾಚಲ ಸರ್ಕಾರದ ಬಜೆಟ್‌ನ 40 ಪ್ರತಿಶತದಷ್ಟು ವೇತನ ಮತ್ತು ಪಿಂಚಣಿ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿದೆ. ಶೇ.20 ರಷ್ಟು ಸಾಲ ಮತ್ತು ಬಡ್ಡಿ ಮರುಪಾವತಿಗೆ ಖರ್ಚಾಗುತ್ತಿದೆ. ಇದನ್ನು ಹೊರತುಪಡಿಸಿ ಸುಖ್ವಿಂದರ್‌ ಸರ್ಕಾರವು ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ. ನೀಡುವ ಭರವಸೆ ನೀಡಿದ್ದು, ಇದಕ್ಕೆ ವಾರ್ಷಿಕ 800 ಕೋಟಿ ರೂ. ಖರ್ಚು ಮಾಡುತ್ತಿದೆ. ಜೊತೆಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ 1,000 ಕೋಟಿ ರೂ., ಉಚಿತ ವಿದ್ಯುತ್‌ ಯೋಜನೆಗೆ ವಾರ್ಷಿಕ 18,000 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈ ಮೂರು ಯೋಜನೆಗಳಿಗೆ ಸರ್ಕಾರ ಅಂದಾಜು 20 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ.

    ಈ ನಡುವೆ ಕೇಂದ್ರ ಸರ್ಕಾರ ಸಾಲದ ಮಿತಿಯನ್ನು ಕಡಿತಗೊಳಿಸಿರುವುದು ಹಿಮಾಚಲ ಸರ್ಕಾರಕ್ಕೆ ಮತ್ತೊಂದು ಹೊಡೆತ ಬಿದ್ದಂತೆ ಆಗಿದೆ. ಈ ಹಿಂದೆ ಹಿಮಾಚಲ ಸರ್ಕಾರವು ತನ್ನ ಜಿಡಿಪಿಯ ಶೇ.5 ರಷ್ಟು ಸಾಲ ಪಡೆಯಬಹುದಿತ್ತು. ಆದರೀಗ ಶೇ.35ಕ್ಕೆ ಕೇಂದ್ರ ಮಿತಿಗೊಳಿಸಿದೆ. ಅಂದ್ರೆ 14,500 ಕೋಟಿ ರೂ. ಗಳಷ್ಟು ಸಾಲದ ಮಿತಿಯನ್ನು 9,000 ಕೋಟಿ ರೂ.ಗಳಿಗೆ ಕಡಿವಾಣ ಹಾಕಿದೆ. ಈ ಎಲ್ಲ ಕಾರಣಗಳಿಂದಾಗಿ ಕಳೆದ 5 ವರ್ಷಗಳಲ್ಲಿ ಹಿಮಾಚಲ ಸರ್ಕಾರದ ಸಾಲದ ಪ್ರಮಾಣವು ಕಳೆದ 5 ವರ್ಷಗಳಲ್ಲಿ 30,000 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ಆರ್‌ಬಿಐ ವರದಿ ತೋರಿಸಿದೆ. ಸದ್ಯ ಹಿಮಾಚಲ ಪ್ರದೇಶ ರಾಜ್ಯವು 86 ಸಾವಿರ ಕೋಟಿ ರೂ. ಸಾಲ ಹೊಂದಿದ್ದು, ಪ್ರತಿಯೊಬ್ಬರ ತಲಾದಾಯದ ಮೇಲೆ 1.17 ಲಕ್ಷ ರೂ. ಸಾಲ ಹೊಂದಿರುವುದಾಗಿ ತೋರಿಸಿದೆ.

    2 ತಿಂಗಳ ವೇತನ ಕಡಿತದಿಂದ ಚೇತರಿಕೆ ಸಾಧ್ಯವೇ?

    ರಾಜ್ಯದ ಆರ್ಥಿಕ ಚೇತರಿಕೆ ಕಾಣಬೇಕೆಂಬ ಸದುದ್ದೇಶದಿಂದ ಹಿಮಾಚಲ ಸರ್ಕಾರವು ಕ್ಯಾಬಿನೆಟ್‌ ಸದಸ್ಯರಿಗೆ 2 ತಿಂಗಳ ವೇತನ ಕಡಿತಗೊಳಿಸಿದೆ. ಆದ್ರೆ ಇದು ಒಂಟೆ ಬಾಯಿಗೆ ಜೀರಿಗೆಯಿಟ್ಟಂತೆ ಅಂತ ಆರ್ಥಿಕ ತಜ್ಞರು ಹೋಲಿಕೆ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಸದ್ಯ ಹಿಮಾಚಲ ಮುಖ್ಯಮಂತ್ರಿಗಳು ಸದ್ಯ 2.5 ಲಕ್ಷ ರೂ. ವೇತನ ಪಡೆಯುತ್ತಿದ್ದು, 2 ತಿಂಗಳಲ್ಲಿ 5 ಲಕ್ಷ ರೂ. ಉಳಿತಾಯವಾಗಲಿದೆ. ಇನ್ನೂ 10 ಮಂದಿ ಸಚಿವರು ಹಾಗೂ ಸಂಸದೀಯ ಕಾರ್ಯದರ್ಶಿಗಳು ತಲಾ 2.5 ಲಕ್ಷ ರೂ. ವೇತನ ಪಡೆಯುತ್ತಿದ್ದು, ಸಚಿವರಿಂದ 50 ಲಕ್ಷ ರೂ. ಹಾಗೂ 6 ಸಂಸದೀಯ ಕಾರ್ಯದರ್ಶಿಗಳಿಂದ 30 ಲಕ್ಷ ರೂ. ಉಳಿತಾಯವಾಗಲಿದೆ. ಒಟ್ಟಾರೆ 2 ತಿಂಗಳ ವೇತನ ಕಡಿಗೊಳಿಸಿದರೆ 85 ಲಕ್ಷ ರೂ. ಉಳಿತಾಯವಾಗಲಿದೆ. ಆದ್ದರಿಂದಲೇ ಸಾಲದ ಹೊರೆಯನ್ನೂ ನೋಡಿದಾಗ ಇದು ಒಂಟೆ ಬಾಯಿಗೆ ಜೀರಿಗೆಯಿಟ್ಟಂತೆ ಆಗುತ್ತದೆ ಎಂದು ಆರ್ಥಿಕ ತಜ್ಞರು ವ್ಯಂಗ್ಯವಾಡಿದ್ದಾರೆ.

    ಉಚಿತ ಕೊಡುಗೆಗಳೇ ಮುಳುವಾಯ್ತಾ?

    ಸಾಮಾನ್ಯವಾಗಿ ಆದಾಯ ಕಡಿಮೆಯಿದ್ದು ವೆಚ್ಚಗಳು ಅಧಿಕವಾಗುತ್ತಿದ್ದಂತೆ ಸಾಲದ ಹೊರೆ ಹೆಚ್ಚಾಗುತ್ತಾ ಹೋಗುತ್ತದೆ. ಖರ್ಚು ಮತ್ತು ಸಾಲವನ್ನು ಸರಿಯಾಗಿ ನಿರ್ವಹಿಸದೇ ಇದ್ದಾಗ ಸಾಲ ಪಡೆಯುವುದಕ್ಕೂ ಅರ್ಹರಾಗುತ್ತೇವೆ. ಅದೇ ರೀತಿ ಇತ್ತೀಗೆ ಕೆಲ ರಾಜ್ಯಗಳ ಮೇಲಿನ ಸಾಲ ನಿರಂತರವಾಗಿ ಹೆಚ್ಚಾಗುತ್ತಿದೆ. ಸರ್ಕಾರಗಳು ಸಬ್ಸಿಡಿ ಹೆಸರಿನಲ್ಲಿ ಉಚಿತ ಕೊಡುಗೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಿವೆ. ಇದರಿಂದ ರಾಜ್ಯ ಸರ್ಕಾರಗಳ ವೆಚ್ಚ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಆರ್‌ಬಿಐನ ಇತ್ತೀಚಿನ ವರದಿಯೊಂದು ತೋರಿಸುತ್ತದೆ.

    ಆರ್‌ಬಿಐ ತನ್ನ ವರದಿಯಲ್ಲಿ ಏನು ಹೇಳಿದೆ?

    2021-22ರಲ್ಲಿ ರಾಜ್ಯಗಳ ಒಟ್ಟು ಶೇ.12.9 ರಷ್ಟು ವೆಚ್ಚದಲ್ಲಿ ಶೇ.11.2 ರಷ್ಟು ಸಬ್ಸಿಡಿಗಳಿಗಾಗಿಯೇ‌ ಖರ್ಚು ಮಾಡಿವೆ. 2022ರ ಜೂನ್‌ ತಿಂಗಳಲ್ಲಿ ಬಿಡುಗಡೆಯಾದ ʻಸ್ಟೇಟ್ ಫೈನಾನ್ಸ್: ಎ ರಿಸ್ಕ್ ಅನಾಲಿಸಿಸ್ʼ ಎಂಬ ಆರ್‌ಬಿಐ ವರದಿಯಲ್ಲಿ, ಈಗ ರಾಜ್ಯ ಸರ್ಕಾರಗಳು ಸಬ್ಸಿಡಿಗಳ ಬದಲಿಗೆ ಉಚಿತ ಕೊಡುಗೆ ನೀಡುತ್ತಿವೆ ಎಂದು ಉಲ್ಲೇಖಿಸಿದೆ. ಸರ್ಕಾರಗಳು ಅಂತಹ ಸ್ಥಳಗಳಲ್ಲಿ ಖರ್ಚು ಮಾಡುತ್ತಿವೆ, ಇದರಿಂದ ಯಾವುದೇ ಆದಾಯ ಉತ್ಪತ್ತಿಯಾಗುವುದಿಲ್ಲ ಎಂದು ವರದಿ ತಿಳಿಸಿದೆ.

    ಆರ್‌ಬಿಐ ಪ್ರಕಾರ, 2018-19ರಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಸಬ್ಸಿಡಿಗಾಗಿ 1.87 ಲಕ್ಷ ಕೋಟಿ ರೂ. ಈ ವೆಚ್ಚ ಮಾಡಿದ್ದು, 2022-23ರಲ್ಲಿ 3 ಲಕ್ಷ ಕೋಟಿ ರೂ. ಆಗಿದೆ. ಅದೇ ರೀತಿ, ಮಾರ್ಚ್ 2019ರ ವರೆಗೆ ಎಲ್ಲಾ ರಾಜ್ಯ ಸರ್ಕಾರಗಳು 47.86 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದ್ದು, ಮಾರ್ಚ್ 2024ರ ವೇಳೆಗೆ 75 ಲಕ್ಷ ಕೋಟಿ ರೂ. ತಲುಪಿದೆ. 2025ರ ಮಾರ್ಚ್‌ ವೇಳೆಗೆ ಎಲ್ಲಾ ರಾಜ್ಯಗಳ ಒಟ್ಟು ಸಾಲ 83 ಲಕ್ಷ ಕೋಟಿ ರೂ.ಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

    ಆರ್ಥಿಕ ಅಪಾಯದಲ್ಲಿರುವ ರಾಜ್ಯಗಳು ಯಾವುವು?

    ಉಚಿತ ಸಂಸ್ಕೃತಿಯು ಹಿಮಾಚಲದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಬಹುದು. ಜೊತೆಗೆ ಅನಗತ್ಯ ವಸ್ತುಗಳ ಮೇಲೆ ಖರ್ಚು ಮಾಡುವುದರಿಂದ ರಾಜ್ಯಗಳ ಆರ್ಥಿಕ ಸ್ಥಿತಿ ಹದಗೆಡಬಹುದು ಅಂತ ಕಳೆದ ವರ್ಷವೇ ಆರ್‌ಬಿಐ ಎಚ್ಚರಿಸಿತ್ತು. ತನ್ನ ವರದಿಯಲ್ಲಿ ಅರುಣಾಚಲ ಪ್ರದೇಶ, ಬಿಹಾರ, ಗೋವಾ, ಹಿಮಾಚಲ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳೂ ಆರ್ಥಿಕ ಅಪಾಯದಲ್ಲಿದೆ ಎಂದು ಆರ್‌ಬಿಐ ಎಚ್ಚರಿಸಿದೆ. ಅಲ್ಲದೇ 2026-27ರ ವೇಳೆಗೆ ಜಿಎಸ್‌ಡಿಪಿಯ ಶೇ.30ಕ್ಕಿಂತ ಹೆಚ್ಚು ಸಾಲ ಹೊಂದುವ ಸಾಧ್ಯತೆಗಳಿರುವ ಕೆಲವು ರಾಜ್ಯಗಳನ್ನು ಪಟ್ಟಿ ಮಾಡಿದೆ. ಈ ಪೈಕಿ ಪಂಜಾಬ್‌ನ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. 2026-27ರ ವೇಳೆಗೆ, ಪಂಜಾಬ್ ಸರ್ಕಾರದ ಸಾಲವು GSDP ಯ (ರಾಜ್ಯದ ಒಟ್ಟು ದೇಶೀಯ ಉತ್ಪನ್ನ) 45% ಮೀರಬಹುದು. ಏಕೆಂದರೆ ಪಂಜಾಬ್‌ ತನ್ನ ಒಟ್ಟು ವಾರ್ಷಿಕ ವೆಚ್ಚದ ಶೇ.22ಕ್ಕಿಂತ ಹೆಚ್ಚು ಹಣವನ್ನು ಬಡ್ಡಿ ಪಾವತಿಸಲು ಖರ್ಚು ಮಾಡುತ್ತಿದೆ. ಅದೇ ಸಮಯದಲ್ಲಿ, ರಾಜಸ್ಥಾನ, ಕೇರಳ ಮತ್ತು ಪಶ್ಚಿಮ ಬಂಗಾಳದ ಸಾಲವು GSDP ಯ 35% ರಷ್ಟು ಏರಿಕೆಯಾಗಬಹುದು ಎಂದು ಆರ್‌ಬಿಐ ಎಚ್ಚರಿಸಿದೆ.

    ಆರ್ಥಿಕ ತಜ್ಞರು ಸೂಚಿಸುವ ಪರಿಹಾರವೇನು?

    ರಾಜ್ಯಗಳಲ್ಲಿ ಇಳಿಮುಖವಾಗುತ್ತಿರುವ ಆದಾಯ ಹೆಚ್ಚಿಸಲು ಆರ್ಥಿಕ ತಜ್ಞ ಎನ್‌.ಕೆ ಸಿಂಗ್‌ ನೇತೃತ್ವದ ಸಮಿತಿಯು ಕೆಲವು ಶಿಫಾರಸುಗಳನ್ನು ಮಾಡಿದೆ.
    * ಆಸ್ತಿ ತೆರಿಗೆಯಲ್ಲಿ ಕ್ರಮೇಣ ಹೆಚ್ಚಳ ಮಾಡುವುದು
    * ಕುಡಿಯುವ ನೀರು ಮತ್ತು ವಿವಿಧ ಸರ್ಕಾರಿ ಸೇವೆಗಳಿಗೆ ನಿಯಮಿತವಾಗಿ ಶುಲ್ಕ ಹೆಚ್ಚಿಸುವುದು
    * ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸುವುದು, ಜೊತೆಗೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಸುಧಾರಣೆ ತರುವುದು.
    * ಉಚಿತ ಕೊಡುಗೆಗಳನ್ನು ಪರಿಷ್ಕರಿಸುವುದು.

  • ಯಾವುದನ್ನೂ ಉಚಿತವಾಗಿ ನೀಡಬಾರದು: ಇನ್ಫಿ ನಾರಾಯಣ ಮೂರ್ತಿ

    ಯಾವುದನ್ನೂ ಉಚಿತವಾಗಿ ನೀಡಬಾರದು: ಇನ್ಫಿ ನಾರಾಯಣ ಮೂರ್ತಿ

    ನವದೆಹಲಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು ಎಂಬ ಇನ್ಫೋಸಿಸ್‌ (Infosys) ಸಂಸ್ಥಾಪಕ ಎನ್.ಆರ್‌.ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಮತ್ತೊಂದು ಹೇಳಿಕೆ ಮೂಲಕ ನಾರಾಯಣ ಮೂರ್ತಿ (Narayana Murthy) ಅವರು ಚರ್ಚೆ ಹುಟ್ಟುಹಾಕಿದ್ದಾರೆ.

    ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ (Bengaluru Tech Summit 2023) ಝಿರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಫೈರ್‌ಸೈಡ್ ಚಾಟ್‌ನಲ್ಲಿ ನಾರಾಯಣ ಮೂರ್ತಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಉಚಿತ ಕೊಡುಗೆಗಳನ್ನು ನೀಡಬಾರದು ಎಂದು ತಿಳಿಸಿದ್ದಾರೆ. ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಸೇವೆಗಳನ್ನು ಪಡೆದ ನಂತರ ಸಮಾಜಕ್ಕೆ ಮರಳಿ ನೀಡುವಂತೆ ಜನರನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ

    ಉಚಿತ ಸೇವೆ ಒದಗಿಸುವುದನ್ನು ನಾನು ವಿರೋಧಿಸುವುದಿಲ್ಲ. ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಏಕೆಂದರೆ ನಾನು ಒಂದು ಕಾಲದಲ್ಲಿ ಬಡತನದ ಹಿನ್ನೆಲೆಯಿಂದ ಬಂದವನು. ಆದರೆ ಆ ಉಚಿತ ಸಬ್ಸಿಡಿಗಳನ್ನು ಪಡೆದ ಜನರಿಂದ ಏನನ್ನಾದರೂ ನಿರೀಕ್ಷಿಸಬೇಕು ಎಂದು ತಿಳಿಸಿದ್ದಾರೆ.

    ಸರ್ಕಾರವು ಮೂಲಸೌಕರ್ಯ ಯೋಜನೆಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕಾಗಿದೆ. ಹೀಗಾಗಿ ಒಂದರ ಬದಲಿಗೆ ಮೂರು ಕೆಲಸದ ಶಿಫ್ಟ್‌ಗಳ ಅಗತ್ಯ ಎಂದು ನಾರಾಯಣ ಮೂರ್ತಿ ಅವರು ಒತ್ತಿ ಹೇಳಿದ್ದಾರೆ. ಮುಂದಿನ 5-10 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಯ ಅಗತ್ಯತೆ ಕುರಿತು ಚರ್ಚಿಸುವಾಗ, ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋವನ್ನು ಪೂರ್ಣಗೊಳಿಸಲು ಮತ್ತು ಸಾಕಷ್ಟು ಕಂಪನಿಗಳಿರುವ ಇತರ ಪ್ರದೇಶಗಳಿಗೆ ವಿಸ್ತರಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾರಾಯಣ ಮೂರ್ತಿ ವಾರಕ್ಕೆ 80 ರಿಂದ 90 ಗಂಟೆ ಕೆಲಸ ಮಾಡಿದ್ದಾರೆ : ಪತಿಯ ಸಲಹೆಗೆ ಸುಧಾ ಮೂರ್ತಿ ಸಮರ್ಥನೆ

    ಮೂಲಸೌಕರ್ಯ ಉದ್ಯಮವು ಸಾಂಪ್ರದಾಯಿಕ ಒಂದು ಶಿಫ್ಟ್‌ಗೆ ಸೀಮಿತವಾಗಿ ಇರಬಾರದು. ಬೆಳಗ್ಗೆ 11 ಗಂಟೆಗೆ ಬಂದು ಸಂಜೆ 5 ಗಂಟೆಗೆ ಹೋಗಬೇಕು. ಉದ್ಯೋಗಿಗಳು ಕೇವಲ ಒಂದು ಪಾಳಿಯಲ್ಲಿ ಕೆಲಸ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

    ಮಹತ್ವಾಕಾಂಕ್ಷೆ ಹೊಂದಿರುವ ರಾಷ್ಟ್ರಗಳಲ್ಲಿನ ಜನರು ಸಾಮಾನ್ಯವಾಗಿ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಭಾರತವು ಇದೇ ವಿಧಾನವನ್ನು ಅಳವಡಿಸಿಕೊಂಡರೆ, ಚೀನಾದ ಬೆಳವಣಿಗೆಯನ್ನು ಮೀರಿಸಬಹುದು. ಬೇರೆ ರಾಷ್ಟ್ರಗಳಲ್ಲಿ ಹೆಚ್ಚಿನ ಆಕಾಂಕ್ಷೆಗಳೊಂದಿಗೆ ಜನರು ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತ – ಇನ್ಫಿ ನಾರಾಯಣ ಮೂರ್ತಿ

  • ಫ್ರೀ ಕೊಡುಗೆಗಳಿಗೆ ಕಡಿವಾಣ ಹಾಕಿ: ರಾಜ್ಯಗಳಿಗೆ ತಜ್ಞರ ಎಚ್ಚರಿಕೆ

    ಫ್ರೀ ಕೊಡುಗೆಗಳಿಗೆ ಕಡಿವಾಣ ಹಾಕಿ: ರಾಜ್ಯಗಳಿಗೆ ತಜ್ಞರ ಎಚ್ಚರಿಕೆ

    ಮುಂಬೈ: ಕೇಂದ್ರ ಸರ್ಕಾರ ಜೂನ್‌ನಲ್ಲಿ ಜಿಎಸ್‌ಟಿ ಪರಿಹಾರವನ್ನು ಸ್ಥಗಿತಗೊಳಿಸಲಿದೆ. ರಾಜ್ಯ ಸರ್ಕಾರಗಳು ತಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಮಾಡಿಕೊಂಡು ಹೋಗದಿದ್ದರೆ, ಮುಂದೆ ಕಷ್ಟವನ್ನು ಎದುರಿಸಬೇಕಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

    ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾದಂತಹ ಯೋಜನೆ ಹಾಗೂ ಉಚಿತ ಕೊಡುಗೆಗಳನ್ನು ನೀಡುವುದಕ್ಕೆ ಕಡಿವಾಣ ಹಾಕಬೇಕು. ಕೇಂದ್ರ ಸರ್ಕಾರ ಜೂನ್‌ನಲ್ಲಿ ಜಿಎಸ್‌ಟಿ ಪರಿಹಾರ ಸ್ಥಗಿತಗೊಳಿಸುವುದರಿಂದ ರಾಜ್ಯಗಳು ಖರ್ಚುಗಳನ್ನು ಆದ್ಯತೆಯ ಮೇರೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಫ್ರೀಂ ಸ್ಕೀಂಗಳನ್ನು ನಿಲ್ಲಿಸಿ, ಇಲ್ಲದಿದ್ದರೆ ರಾಜ್ಯಗಳು ಶ್ರೀಲಂಕಾ ಆಗಬಹುದು: ಮೋದಿಗೆ ಅಧಿಕಾರಿಗಳ ಸಲಹೆ

    ಇತ್ತೀಚೆಗೆ ಕೆಲ ಆರ್ಥಿಕ ತಜ್ಞರು ಉಚಿತ ಕೊಡುಗೆ ಹಾಗೂ ಸಬ್ಸಿಡಿಗಳಿಗೆ ಕಡಿವಾಣ ಹಾಕದಿದ್ದರೆ ಭಾರತಕ್ಕೂ ಶ್ರೀಲಂಕಾದ ಸ್ಥಿತಿ ಬರಬಹುದು ಎಂದು ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ಎಸ್‌ಬಿಐ ಮುಖ್ಯ ಆರ್ಥಿಕ ಸಲಹೆಗಾರರ ಸಮಿತಿಯೊಂದು ಅಧ್ಯಯನ ನಡೆಸಿ ರಾಜ್ಯಗಳಿಗೂ ವರದಿ ನೀಡಿದೆ. ಇದನ್ನೂ ಓದಿ: ಮಠಗಳಿಂದ 30% ಕಮಿಷನ್ ಆರಂಭವಾಗಿದ್ದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ: ಆಂದೋಲ ಶ್ರೀ

    ಕೇಂದ್ರ ಸರ್ಕಾರ ನೀಡುವ ಜಿಎಸ್‌ಟಿ ತೆರಿಗೆಯ ಪಾಲು ರಾಜ್ಯಗಳ ಒಟ್ಟು ಆದಾಯದಲ್ಲಿ 5ನೇ ಒಂದರಷ್ಟು ಮಾತ್ರ ಆಗುತ್ತದೆ. ತೆಲಂಗಾಣ ರಾಜ್ಯ ತನ್ನ ಒಟ್ಟು ಆದಾಯದ ಶೇ.35 ರಷ್ಟು, ರಾಜಸ್ಥಾನ, ಛತ್ತೀಸ್‌ಗಢ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಕೇರಳ ರಾಜ್ಯಗಳು ಶೇ.5 ರಿಂದ ಶೇ.19 ರಷ್ಟು ಆದಾಯವನ್ನು ಇಂತಹ ಜನಪ್ರಿಯ ಯೋಜನೆಗಳಿಗೆ ವಿನಿಯೋಗಿಸುತ್ತಿದೆ. ರಾಜ್ಯಗಳು ತಮ್ಮ ಆದಾಯವನ್ನು ಮೀರಿ ಖರ್ಚು ಮಾಡುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.