Tag: ಉಚಿತ ಊಟ

  • ನೀರಜ್ ಹೆಸರಿನವರಿಗೆ ಭಟ್ಕಳ ಹೋಟೆಲ್‍ನಲ್ಲಿ ಫ್ರೀ ಮೀಲ್ಸ್!

    ನೀರಜ್ ಹೆಸರಿನವರಿಗೆ ಭಟ್ಕಳ ಹೋಟೆಲ್‍ನಲ್ಲಿ ಫ್ರೀ ಮೀಲ್ಸ್!

    ಕಾರವಾರ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಹೆಸರು ಈಗ ಫೇಮಸ್. ಅವರ ಹೆಸರಿಟ್ಟುಕೊಂಡವರಿಗೂ ಇದೀಗ ಅದೃಷ್ಟ ಖುಲಾಯಿಸಿದ್ದು, ನೀರಜ್ ಎಂಬ ಹೆಸರಿನವರಿಗೆ ಈ ಹೋಟೆಲಿನಲ್ಲಿ ಫ್ರೀ ಆಹಾರ ನೀಡಲಾಗುತ್ತಿದೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್‍ನಲ್ಲಿ ಈ ವಿಶೇಷ ಆಫರ್ ನೀಡಲಾಗಿದೆ. ನೀರಜ್ ಎಂಬ ಹೆಸರಿನ ಯಾರೇ ಬಂದರೂ ಉಚಿತವಾಗಿ ಊಟ ನೀಡಲಾಗುತ್ತಿದೆ. ಅಲ್ಲದೆ ಈ ಹೋಟೆಲ್‍ ನಲ್ಲಿ ಸಿಗುವ ಯಾವ ಪದಾರ್ಥಗಳನ್ನು ಆರ್ಡರ್ ಮಾಡಿದರೂ ಉಚಿತವಾಗಿ ತಿಂದು ಹೋಗಬಹುದಾಗಿದೆ. ಈ ಆಫರ್ ಆಗಸ್ಟ್ 15ರ ವರೆಗೂ ಇರಲಿದೆ.

    ಇತ್ತೀಚೆಗೆ ಆರಂಭಗೊಂಡ ತ್ರಾಮ ಹೋಟೆಲ್‍ ಮಾಲೀಕ ಆಶೀಶ್ ನಾಯಕ ಮಾತನಾಡಿ, ಭಾರತಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಗಸ್ಟ್ 15ರ ವರೆಗೆ ಈ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದೇವೆ. ಚಿನ್ನ ಗೆದ್ದಿರುವ ನೀರಜ್ ಅದ್ವಿತೀಯ ಸಾಧನೆಗೆ ಮನಸೋತಿದ್ದೇನೆ. ನೀರಜ್ ಹೆಸರಿನ ಗ್ರಾಹಕರು ನಮ್ಮ ಹೋಟೆಲ್‍ಗೆ ಬಂದು ಅವರಿಗೆ ಇಷ್ಟವಾದ ಯಾವುದೇ ಆಹಾರ ಪಡೆದರೂ ಉಚಿತವಾಗಿದೆ. ಇದು ನಮ್ಮ ಜಿಲ್ಲೆಯಿಂದ ಕ್ರೀಡಾಪಟುವಿಗೆ ಸಲ್ಲಿಸುವ ಗೌರವ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ನೀರಜ್ ಹೆಸರಿನವರಿಗೆ ಉಚಿತ ಪೆಟ್ರೋಲ್ ಕೊಟ್ಟ ಬಂಕ್ ಮಾಲೀಕ!

    ಈ ಹಿಂದೆ ಹರಿದ್ವಾರದ ಚಂಡಿದೇವಿ ದೇವಸ್ಥಾನಕ್ಕೆ ತೆರಳುವ ರೋಪ್ ವೇನಲ್ಲಿ ಕೂಡ ನೀರಜ್ ಹೆಸರಿನವರಿಗೆ ಉಚಿತವಾಗಿ ಪ್ರಯಾಣಿಸಬಹುದಾದ ವಿಶೇಷ ಆಫರ್ ನೀಡಲಾಗಿತ್ತು. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಮತ್ತು ಹಾಕಿಯಲ್ಲಿ ಹ್ಯಾಟ್ರಿಕ್ ಗೋಲ್ ಮಾಡಿದ ವಂದನಾ ಕಟಾರಿಯಾ ಅವರಿಗೆ ರೋಪ್ ವೇ ನಿರ್ವಹಣಾ ಕಂಪನಿ ವಿಶೇಷವಾಗಿ ಗೌರವ ಸಲ್ಲಿಸಿದೆ. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ

    ಇತ್ತ ಗುಜರಾತ್ ನ ಭರೂಚ್‍ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್ ಅವರು ಕೂಡ ವಿಶೇಷ ಆಫರ್ ನೀಡಿ ಸುದ್ದಿಯಾಗಿದ್ದರು. ನೀರಜ್ ಹೆಸರಿನವರಿಗೆ 500ರೂ. ವರೆಗೆ ಉಚಿತ ಪೆಟ್ರೋಲ್- ಡೀಸೆಲ್ ನೀಡುವ ಮೂಲಕ ನೀರಜ್ ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದ್ದರು. ಇದನ್ನೂ ಓದಿ: ನಿಮ್ಮ ಹೆಸರು ನೀರಜ್, ವಂದನಾ ಆಗಿದ್ರೆ ರೋಪ್ ವೇ ಸೇವೆ ಉಚಿತ

  • ಕೋವಿಡ್ ಸೋಂಕಿತ ಸಂಬಂಧಿಕರಿಗೆ ಕೊಡಗು ರಕ್ಷಣಾ ವೇದಿಕೆಯಿಂದ ಉಚಿತ ಊಟ

    ಕೋವಿಡ್ ಸೋಂಕಿತ ಸಂಬಂಧಿಕರಿಗೆ ಕೊಡಗು ರಕ್ಷಣಾ ವೇದಿಕೆಯಿಂದ ಉಚಿತ ಊಟ

    ಮಡಿಕೇರಿ: ಕೋವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಸಂಬಂಧಿಕರಿಗೆ ಕೊಡಗು ರಕ್ಷಣಾ ವೇದಿಕೆ ಉಚಿತ ಊಟ, ತಿಂಡಿ ನೀಡುತ್ತಿದೆ.

    ಕೊಡಗಿನಲ್ಲಿ ಕೋವಿಡ್ ಸೋಂಕು ಮತ್ತಷ್ಟು ಹರಡದಂತೆ ಜಿಲ್ಲಾಡಳಿತ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ. ಮೂರು ದಿನಗಳು ಅಗತ್ಯ ವಸ್ತುಗಳನ್ನು ಕೊಳ್ಳುವುದಕ್ಕೆ ನಾಲ್ಕು ಗಂಟೆಗಳ ಕಾಲ ಅವಕಾಶ ನೀಡಿದೆ. ಹೀಗಾಗಿ ಬಹುತೇಕ ಲೌಕ್ ಡೌನ್‍ನಲ್ಲಿರುವ ಕೊಡಗು ಜಿಲ್ಲೆಯಲ್ಲಿ ಹೋಟೆಲ್, ಕ್ಯಾಂಟಿನ್‍ಗಳು ಪಾರ್ಸಲ್ ಸೇವೆಯನ್ನು ಒದಿಗಿಸುತ್ತಿಲ್ಲ.

    ಸೋಂಕಿನಿಂದ ಗಂಭೀರ ಸಮಸ್ಯೆ ಎದುರಿಸುತ್ತಿರುವರೊಂದಿಗೆ ಆಸ್ಪತ್ರೆಗೆ ಬರುತ್ತಿರುವ ಮತ್ತು ಹಳ್ಳಿ ಹಳ್ಳಿಗಳಿಂದ ಕೋವಿಡ್ ಪರೀಕ್ಷೆಗೆ ಬರುತ್ತಿರುವ ನೂರಾರು ಜನರು ತಿಂಡಿ ಊಟಗಳಿಲ್ಲದೆ, ಹಸಿವಿನಿಂದ ಪರದಾಡುವಂತಾಗಿದೆ. ಇಂತಹ ಸ್ಥಿತಿಯನ್ನು ಸ್ವತಃ ಅನುಭವಿಸಿದ್ದ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ತಮ್ಮ ಸಂಘಟನೆಯ ಸದಸ್ಯರೊಂದಿಗೆ ಚರ್ಚಿಸಿ ಜನರು ಹಸಿವಿನಿಂದ ಬಳಲದಂತೆ ಮಾಡಲು ಪ್ರತಿದಿನ `ನಮ್ಮವರಿಗಾಗಿ ನಾವು’ ಹೆಸರಿನಲ್ಲಿ ಉಚಿತ ಊಟ ತಿಂಡಿ ವ್ಯವಸ್ಥೆ ಮಾಡುತ್ತಿದ್ದಾರೆ.

    ಲಾಕ್ ಡೌನ್‍ಗೂ ಕೆಲವೇ ದಿನಗಳ ಮುನ್ನವಷ್ಟೇ ಪವನ್ ಪೆಮ್ಮಯ್ಯ ಮತ್ತು ಅವರ ನಾಲ್ಕು ವರ್ಷದ ಮಗುವಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಈ ಸಂದರ್ಭದಲ್ಲಿ ವಿವಿಧ ಪರೀಕ್ಷೆಗಳಿಗೆಂದು ತೆರಳಿದ್ದ ಪವನ್ ಪೆಮ್ಮಯ್ಯ ಮತ್ತವರ ಮಗ ಇಡೀ ದಿನ ಊಟವಿಲ್ಲದೆ ಪರದಾಡಿದ್ದರಂತೆ. ಕೋವಿಡ್‍ನಿಂದ ಗುಣಮುಖರಾಗುತ್ತಿದ್ದಂತೆ ಪವನ್ ಪೆಮ್ಮಯ್ಯ ಮತ್ತು ಅವರ ತಂಡ ದಾನಿಗಳ ಸಹಾಯ ಪಡೆದು ಪ್ರತಿ ದಿನ ಕನಿಷ್ಠ 300 ಜನರಿಗೆ ತಿಂಡಿ ಊಟವನ್ನು ಒದಗಿಸುತ್ತಿದೆ. ವೃತ್ತಿಯಲ್ಲಿ ವಕೀಲರಾಗಿರುವ ಪವನ್ ಪೆಮ್ಮಯ್ಯ ತಮ್ಮ ತಂಡದವರ ಸಹಾಯದಿಂದ ತಮ್ಮ ಮನೆಯ ಬಳಿಯೇ ಊಟ ತಿಂಡಿ ತಯಾರಿಸಿ ಪ್ಯಾಕ್ ಮಾಡಿ ಬಳಿಕ ಮಡಿಕೇರಿ ಕೋವಿಡ್ ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.

    ಇವರ ಈ ಕಾರ್ಯಕ್ಕೆ ಕೊಡಗು ಹೊರ ಜಿಲ್ಲೆ ಮತ್ತು ದುಬೈನ ಕನ್ನಡ ಸಂಘಟನೆಗಳ ಸಾಕಷ್ಟು ದಾನಿಗಳು ಸಹಾಯ ಹಸ್ತ ನೀಡಿದ್ದಾರೆ. ನಮ್ಮ ಕಾರ್ಯಕ್ಕೆ ಇನ್ನಷ್ಟು ಬೆಂಬಲ ದೊರೆತಲ್ಲಿ ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡಲು ಚಿಂತಿಸಿರುವ ಕೊಡಗು ರಕ್ಷಣಾ ವೇದಿಕೆ, ಲಾಕ್‍ಡೌನ್ ಮುಗಿಯುವವರೆಗೂ ಊಟ ತಿಂಡಿಯ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

  • ಆಸ್ಪತ್ರೆಯಲ್ಲಿನ ರೋಗಿಗಳಿಗೆ ಊಟದ ಸಮಸ್ಯೆ- ಬಿಸ್ಕೆಟ್ ತಿಂದು ದಿನ ದೂಡುತ್ತಿರುವ ಸಹಾಯಕರು

    ಆಸ್ಪತ್ರೆಯಲ್ಲಿನ ರೋಗಿಗಳಿಗೆ ಊಟದ ಸಮಸ್ಯೆ- ಬಿಸ್ಕೆಟ್ ತಿಂದು ದಿನ ದೂಡುತ್ತಿರುವ ಸಹಾಯಕರು

    – ರಾಯಚೂರಿನಲ್ಲಿ ಉಚಿತವಾಗಿ ಊಟ ನೀಡಲು ಮುಂದಾದ ಸಂಘ-ಸಂಸ್ಥೆಗಳು

    ರಾಯಚೂರು: ಇಡೀ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಬಹಳಷ್ಟು ಜನರಿಗೆ ಊಟದ ಸಮಸ್ಯೆ ಎದುರಾಗಿದೆ. ಹೀಗಾಗಿ ರಾಯಚೂರಿನಲ್ಲಿ ಕೆಲ ಯುವಕರು ಹಾಗೂ ಕೆಲ ಸಂಘ ಸಂಸ್ಥೆಗಳು ಉಚಿತವಾಗಿ ಊಟವನ್ನು ನೀಡಲು ಮುಂದಾಗಿವೆ.

    ರಸ್ತೆ ಬದಿಯ ಭಿಕ್ಷುಕರು, ನಿರ್ಗತಿಕರಿಗೆ ಊಟ ನೀಡಲಾಗುತ್ತಿದೆ. ಅಲ್ಲದೆ ಕರ್ತವ್ಯದ ಹಿನ್ನೆಲೆ ಸದಾ ಹೊರಗಡೆಯಿರುವ ಪೊಲೀಸ್ ಸಿಬ್ಬಂದಿ, ಆಸ್ಪತ್ರೆ ರೋಗಿಗಳಿಗು ಊಟವನ್ನು ಪ್ಯಾಕೇಟ್ ಮೂಲಕ ನೀಡಲಾಗುತ್ತಿದೆ. ಕೆಲ ಹೋಟೆಲ್ ಮಾಲೀಕರು, ಯುವಕರು ಕೈ ಜೋಡಿಸಿ ಊಟವನ್ನು ನೀಡುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಯ್ದುಕೊಂಡು ಊಟದ ಪ್ಯಾಕೇಟ್‍ಗಳನ್ನ ವಿತರಿಸಲಾಗುತ್ತಿದೆ.

    ಹೀಗಿರುವಾಗ ಜಿಲ್ಲೆಯ ಕೆಲ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ರೋಗಿಗಳ ಜೊತೆಗೆ ಬಂದ ಸಹಾಯಕರು ಊಟದ ಸಮಸ್ಯೆ ಎದುರಿಸುತ್ತಿದ್ದಾರೆ. ಊಟವಿಲ್ಲದೆ ಬಿಸ್ಕೆಟ್ ತಿಂದು ದಿನ ಕಳೆಯುತ್ತಿದ್ದಾರೆ. ಲಾಕ್‍ಡೌನ್ ಇರುವುದರಿಂದ ಊಟಕ್ಕೆ ಜಿಲ್ಲಾಡಳಿತವೇ ವ್ಯವಸ್ಥೆ ಮಾಡಬೇಕು ಎಂದು ರೋಗಿಗಳ ಕಡೆಯವರು ಕೇಳುತ್ತಿದ್ದಾರೆ. ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತೆ ಎಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.

  • ದೇಶದ ಮೊದಲ ‘ಗಾರ್ಬೇಜ್ ಕೆಫೆ’- ಪ್ಲಾಸ್ಟಿಕ್ ತ್ಯಾಜ್ಯ ಕೊಟ್ರೆ ಊಟ ಫ್ರೀ

    ದೇಶದ ಮೊದಲ ‘ಗಾರ್ಬೇಜ್ ಕೆಫೆ’- ಪ್ಲಾಸ್ಟಿಕ್ ತ್ಯಾಜ್ಯ ಕೊಟ್ರೆ ಊಟ ಫ್ರೀ

    ರಾಯ್ಪುರ್: ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಆಗುವ ಹಾನಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು ಆಗದಿದ್ದರೂ ಅಲ್ಪ ಪ್ರಮಾಣದಲ್ಲಿ ಪರಿಸರವನ್ನು ಉಳಿಸಲು ಛತ್ತೀಸ್‍ಗಢದ ಅಂಬಿಕಾಪುರ ಮಹಾನಗರ ಪಾಲಿಕೆ ಹೊಸ ಉಪಾಯ ಮಾಡಿದೆ.

    ಅಂಬಿಕಾಪುರ ಮಹಾನಗರ ಪಾಲಿಕೆ ಸ್ವಚ್ಛ ಭಾರತ ಅಭಿಯಾನದಡಿ ಗಾರ್ಬೇಜ್ ಕೆಫೆ ತೆರೆಯುವ ಪ್ರಯತ್ನಕ್ಕೆ ಕೈಹಾಕಿದೆ. ಪ್ಲಾಸ್ಟಿಕ್ ಚಿಂದಿ ಆಯುವ ನಿರಾಶ್ರಿತರಿಗೆ ‘ಗಾರ್ಬೇಜ್ ಕೆಫೆ’ ಹೆಸರಿನಲ್ಲಿ ಹೋಟೆಲ್ ತೆರೆಯಲು ಅಂಬಿಕಾಪುರ ಮಹಾನಗರ ಪಾಲಿಕೆ ನಿರ್ಧರಿಸಿದೆ.

    ಈ ಹೋಟೆಲ್ ಬಡ ಜನರಿಗೆ ಕೂಡ ಅನುಕೂಲವಾಗಲಿದೆ. ಅಲ್ಲದೆ ಈ ಹೋಟೆಲ್‍ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಂದುಕೊಟ್ಟರೆ ಉಪಹಾರ, ಊಟವನ್ನು ಉಚಿತವಾಗಿ ಕೊಡಲಾಗುತ್ತದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ಕೂಡ ಒಂದೆಡೆ ಸಂಗ್ರಹವಾಗುತ್ತದೆ. ಇದರಿಂದ ನಗರದ ರಸ್ತೆಗಳು ಪ್ಲಾಸ್ಟಿಕ್ ಮುಕ್ತ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ‘ಪ್ಲಾಸ್ಟಿಕ್ ಶುಲ್ಕ’ ಕಟ್ಟಿ ಉಚಿತವಾಗಿ ಓದಿ – ಶಾಲೆಯ ತಂತ್ರಕ್ಕೆ ಭಾರೀ ಮೆಚ್ಚುಗೆ

    ಗಾರ್ಬೇಜ್ ಕೆಫೆಯಲ್ಲಿ ಒಂದು ಕೆ.ಜಿ. ಪ್ಲಾಸ್ಟಿಕ್ ತಂದುಕೊಟ್ಟರೆ ಊಟ ಹಾಗೂ ಅರ್ಧ ಕೆ.ಜಿ. ಪ್ಲಾಸ್ಟಿಕ್ ತಂದುಕೊಟ್ಟರೆ ಉಪಾಹಾರ ನೀಡಲಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಈ ಗಾರ್ಬೆಜ್ ಕೆಫೆ ಒಂದು ವಿನೂತನ ಪ್ರಯತ್ನವಾಗಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಈ ರೀತಿ ಗಾರ್ಬೆಜ್ ಕೆಫೆ ನಿರ್ಮಾಣವಾಗಲಿದೆ.

    ಚಿಂದಿ ಆಯುವವರ ಹೊಟ್ಟೆ ತುಂಬಿಸುವುದೇ ಈ ವಿನೂತನ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ತಂದುಕೊಟ್ಟರೆ ಪಾಲಿಕೆ ವತಿಯಿಂದ ಉಚಿತ ಊಟ, ಉಪಾಹಾರ ನೀಡಲಾಗುತ್ತದೆ. ಕೆಫೆಯಲ್ಲಿ ಸಂಗ್ರಹಿಸಲಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣ ಕಾರ್ಯಕ್ಕೆ ಬಳಸಲು ಪಾಲಿಕೆ ಚಿಂತನೆ ನಡೆಸಿದೆ.

    ಈ ‘ಗಾರ್ಬೇಜ್ ಕೆಫೆ’ ಯೋಜನೆಗಾಗಿ ಅಂಬಿಕಾಪುರ ಮಹಾನಗರ ಪಾಲಿಕೆ ಕಡೆಯಿಂದ ವರ್ಷಕ್ಕೆ 5 ಲಕ್ಷ ರೂ. ಅನುದಾನವನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಅಲ್ಲದೆ ಈ ಯೋಜನೆಯನ್ನು ವಿಸ್ತರಿಸಲು ಪಾಲಿಕೆ ಯೋಚಿಸುತ್ತಿದೆ. ಮುಂದೆ ಅದು ಕಾರ್ಯರೂಪಕ್ಕೆ ಬಂದರೆ ಪ್ಲಾಸ್ಟಿಕ್ ಸಂಗ್ರಹಿಸಿ ತಂದು ಕೊಟ್ಟರೆ ಪಾಲಿಕೆ ವತಿಯಿಂದ ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಡುವುದಾಗಿ ತೀಳಿಸಿದೆ.

    ಸದ್ಯ ಸ್ವಚ್ಛತಾ ಅಭಿಯಾನದ ಪಟ್ಟಿಯಲ್ಲಿ ಇಂಧೋರ್ ಬಳಿಕ ಛತ್ತೀಸ್‍ಗಢದ ಅಂಬಿಕಾನಗರ ಈಗ 2ನೇ ಸ್ವಚ್ಛ ನಗರವಾಗಿದೆ. ಅಲ್ಲದೆ ಈಗಾಗಲೇ ನಗರದ ಕೆಲವು ರಸ್ತೆಗಳನ್ನು ಡಾಂಬರು ಹಾಗೂ 8 ಲಕ್ಷ ಪ್ಲಾಸ್ಟಿಕ್ ಚೀಲಗಳ ಮೂಲಕ ನಿರ್ಮಿಸಲಾಗಿದೆ.