Tag: ಉಗ್ರ ಸಹಾಯಕ

  • ಪುಲ್ವಾಮಾ ದಾಳಿ ನಡೆಸಿದ್ದ ಪಾಕ್ ಉಗ್ರರಿಗೆ ಆಶ್ರಯ ನೀಡಿದ್ದ ವ್ಯಕ್ತಿ ಅರೆಸ್ಟ್

    ಪುಲ್ವಾಮಾ ದಾಳಿ ನಡೆಸಿದ್ದ ಪಾಕ್ ಉಗ್ರರಿಗೆ ಆಶ್ರಯ ನೀಡಿದ್ದ ವ್ಯಕ್ತಿ ಅರೆಸ್ಟ್

    ನವದೆಹಲಿ: ಕಳೆದ ವರ್ಷ ಫೆ. 14ರಂದು ನಡೆದ ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲಕ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ಉಗ್ರರಿಗೆ ಆಶ್ರಯ ನೀಡಿ, ದಾಳಿಗೆ ಸಹಕರಿಸಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

    ಪುಲ್ವಾಮಾದಲ್ಲಿ ಫರ್ನಿಚರ್ ಅಂಗಡಿ ಇಟ್ಟುಕೊಂಡಿದ್ದ ಶಾಕೀರ್ ಬಶೀರ್(22) ಪುಲ್ವಾಮಾ ದಾಳಿಯ ಸುಸೈಡ್ ಬಾಂಬರ್ ಆದಿಲ್ ಅಹ್ಮದ್ ದಾರ್ ಗೆ ಆಶ್ರಯ ಕೊಟ್ಟು, ಸಿಆರ್‌ಪಿಎಫ್ ಯೋಧರ ಕನ್ವಾಯ್ ಮೇಲೆ ದಾಳಿ ನಡೆಸಲು ಸಹಕರಿಸಿದ್ದನು. ಈ ಬಗ್ಗೆ ಮಾಹಿತಿ ತಿಳಿದ ಎನ್‍ಐಎ ಶಾಕೀರ್ ನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದೆ.

    ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಶಾಕೀರ್ ಬಾಯಿಬಿಟ್ಟಿದ್ದು, ಸುಸೈಡ್ ಬಾಂಬರ್ ಆದಿಲ್‍ನನ್ನು ತನ್ನ ಬಳಿ ಪಾಕ್ ಉಗ್ರ ಮೊಹ್ಮದ್ ಉಮರ್ ಫಾರೂಕ್ ಕರೆತಂದಿದ್ದನು ಎಂದು ಹೇಳಿದ್ದಾನೆ. 2018ರ ಅಂತ್ಯದಿಂದ 2019ರ ಫೆ. 14ರವರೆಗೆ ಉಗ್ರರಿಗೆ ನನ್ನ ಮನೆಯಲ್ಲಿ ಜಾಗಕೊಟ್ಟಿದ್ದೆ. ಅಲ್ಲಿ ಅವರು ಐಇಡಿ ಬಾಂಬ್‍ಗಳನ್ನು ತಯಾರಿಸಿದ್ದರು. ಅದನ್ನು ಮಾರುತಿ ಇಕೋ ಕಾರಿನಲ್ಲಿ ಫಿಕ್ಸ್ ಮಾಡಲು ಅವರಿಗೆ ನಾನು ಸಹಾಯ ಮಾಡಿದ್ದೆ. ಕಾರನ್ನು ಮಾಡಿಫೈ ಮಾಡಿ ಬಾಂಬ್ ಫಿಕ್ಸ್ ಮಾಡಲು ಸಹಕರಿಸಿದ್ದೆ ಎನ್ನುವುದನ್ನ ಶಾಕೀರ್ ತಪ್ಪೊಪ್ಪಿಕೊಂಡಿದ್ದಾನೆ.

    ಈ ದಾಳಿಯಲ್ಲಿ ಭಾಗಿಯಾಗಿದ್ದ ಮುದಸೀರ್ ಅಹ್ಮದ್ ಖಾನ್ ಹಾಗೂ ಜೆಇಎಂ ಉಗ್ರರ ಕಮಾಂಡರ್ ನನ್ನು ಭಾರತೀಯ ಭದ್ರತಾ ಪಡೆ ಮಾರ್ಚ್ 11ರಂದು ಗುಂಡಿಕ್ಕಿ ಕೊಂದಿತ್ತು. ಆ ಬಳಿಕ ಉಗ್ರ ಮೊಹ್ಮದ್ ಫಾರೂಕ್‍ನನ್ನು ಮಾರ್ಚ್ 29ರಂದು, ದಾಳಿ ಬಳಿದ ಕಾರ್ ಮಾಲೀಕ ಸಜ್ಜಿದ್ ಅಹ್ಮದ್‍ನನ್ನು ಜೂನ್ 16ರಂದು ಹಾಗೂ ಜೆಇಎಂನ ಕಾಶ್ಮೀರಿ ಕಮಾಂಡರ್ ಯಸ್ಸಿರ್ ನನ್ನು ಈ ವರ್ಷದ ಜ. 25ರಂದು ಭದ್ರತಾ ಪಡೆ ಹೊಡೆದುರುಳಿಸಿತ್ತು.

    ಕಳೆದ ವರ್ಷ ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಆತ್ಮಾಹುತಿ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಜೈಷ್ ಎ ಮೊಹಮ್ಮದ್ ಸಂಘಟನೆ ಉಗ್ರ ಆದಿಲ್ ಅಹ್ಮದ್ ದಾರ್ ಮಾರುತಿ ಇಕೋ ಕಾರ್ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಸೈನಿಕರಿದ್ದ ಬಸ್ ಮೇಲೆ ದಾಳಿ ಮಾಡಿದ್ದ. ಘಟನೆಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು.

    ವ್ಯವಸ್ಥಿತವಾಗಿ ದಾಳಿಗೆ ಸ್ಕೆಚ್ ಹಾಕಿದ್ದ ಆದಿಲ್ ದಾರ್ ಕಾರಿನಲ್ಲಿ 300 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ತುಂಬಿಕೊಂಡು ಬಸ್ ಮೇಲೆ ದಾಳಿ ಮಾಡಿದ್ದ ಎಂದು ಆರಂಭಿಕ ತನಿಖೆಯಲ್ಲಿ ಗೊತ್ತಾಗಿತ್ತು.