Tag: ಉಗ್ರರ ನೆಲೆ

  • “ಬಾಲಕೋಟ್‍ನಲ್ಲಿ ಉಗ್ರರ ನೆಲೆ ಪುನಾರಂಭಿಸಲು ಪಾಕ್ ಯತ್ನ”

    “ಬಾಲಕೋಟ್‍ನಲ್ಲಿ ಉಗ್ರರ ನೆಲೆ ಪುನಾರಂಭಿಸಲು ಪಾಕ್ ಯತ್ನ”

    ನವದೆಹಲಿ: ಪಾಕಿಸ್ತಾನ ಮತ್ತೆ ನನ್ನ ಕುತಂತ್ರ ಬುದ್ಧಿ ಪ್ರದರ್ಶಿಸುತ್ತಿದ್ದು, ಭಾರತೀಯ ವಾಯು ಪಡೆ ಏರ್‌ಸ್ಟ್ರೈಕ್ ಮಾಡಿ ನೆಲಸಮ ಮಾಡಿದ್ದ ಬಾಲಕೋಟ್ ಉಗ್ರರ ನೆಲೆಗಳನ್ನು ಮತ್ತೆ ಪುನಾರಂಭಿಸಲು ಯತ್ನಿಸುತ್ತಿದೆ ಎಂದು ವರದಿಯಾಗಿದೆ.

    ಬುಧವಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ರಾಜ್ಯಸಭೆಯಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಭಾರತವು ಏರ್‌ಸ್ಟ್ರೈಕ್ ನಡೆಸಿ ಉಗ್ರರ ತಾಣಗಳನ್ನು ನಾಶಗೊಳಿಸಿತ್ತು. ಆದರೆ ಈ ಶಿಬಿರಗಳನ್ನು ಮತ್ತೆ ಮರುಸ್ಥಾಪಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ದೇಶದ ಗಡಿ ರಕ್ಷಿಸಿ, ಸಾರ್ವಭೌಮತೆ ಹಾಗೂ ಏಕತೆ ಕಾಯ್ದುಕೊಳ್ಳುವ ಸಕಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

    ಪಾಕಿಸ್ತಾನದ ಜೈಷ್-ಇ-ಮೊಹ್ಮಮದ್ ಉಗ್ರ ಸಂಘಟನೆಯ ತರಬೇತಿ ನೆಲೆಗಳನ್ನು ಭಾರತ ನಾಶಗೊಳಿಸಿತ್ತು. ಆದರೆ ಬಾಲಕೋಟ್‍ನಲ್ಲಿ ಉಗ್ರ ನೆಲೆ ಮರುಸ್ಥಾಪಿಸುವ ಯತ್ನ ನಡೆಯುತ್ತಿದೆ ಎಂಬ ಮಾಹಿತಿ ದೊರಕಿದೆ. ಅಲ್ಲದೆ ಅಲ್ಲಿ ಭಾರತದ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ಹೀಗಾಗಿ ಭಾರತದ ವಿರುದ್ಧ ಯುವಕರ ಮನ ಪರಿವರ್ತಿಸಲು ಜಿಹಾದಿ ಹಾಗೂ ಧಾರ್ಮಿಕ ಕೋರ್ಸುಗಳನ್ನು ಆರಂಭಿಸುತ್ತಿರುವ ಬಗ್ಗೆಯೂ ತಿಳಿದು ಬಂದಿದೆ ಎಂದು ಹೇಳಿದರು.

    ಭಾರತ ಉಗ್ರರು ಹಾಗೂ ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ಅನುಸರಿಸುತ್ತಿದೆ. ಕಾಶ್ಮೀರದಲ್ಲಿ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಪರಿಣಾಮ ಭಾರೀ ಸಂಖ್ಯೆಯ ಉಗ್ರರು ಭದ್ರತಾ ಪಡೆಯಿಂದ ಹತರಾಗಿದ್ದಾರೆ. ಭಾರತ ಗಡಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

    ಫೆ. 14ರಂದು ಭಾರತೀಯ ಯೋಧರು ತೆರಳುತ್ತಿದ್ದ ವಾಹನದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರ ಪರಿಣಾಮ 40ಕ್ಕೂ ಹೆಚ್ಚು ಯೋಧರು ವೀರಮರಣ ಅಪ್ಪಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಫೆ. 26ರಂದು ಭಾರತೀಯ ವಾಯು ಪಡೆ ಏರ್‌ಸ್ಟ್ರೈಕ್ ನಡೆಸಿ ಬಾಲಕೋಟ್‍ನಲ್ಲಿದ್ದ ಜೈಶ್ ಉಗ್ರ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ ನೆಲೆಗಳನ್ನು ನೆಲಸಮ ಮಾಡಿತ್ತು.