Tag: ಉಗ್ರರ ದಾಳಿ

  • 2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ, ಓರ್ವ ಖುಲಾಸೆ

    2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ, ಓರ್ವ ಖುಲಾಸೆ

    ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2005ರಂದು ನಡೆದ ಉಗ್ರರ ದಾಳಿ ಪ್ರಕರಣ ತೀರ್ಪು ಹೊರಬಂದಿದ್ದು, ನಾಲ್ವರು ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

    ಅಲಹಾಬಾದ್ ಜಿಲ್ಲೆಯ ಪ್ರಯಾಗ್‍ರಾಜ್ ವಿಶೇಷ ನ್ಯಾಯಾಲಯವು ಇಂದು ತೀರ್ಪು ನೀಡಿದೆ. ಈ ಮೂಲಕ ಹದಿನಾಲ್ಕು ವರ್ಷಗಳ ಬಳಿಕ ಆರೋಪಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣ ಐದು ಜನರ ಪೈಕಿ ಮೊಹಮ್ಮದ್ ಅಜೀಜ್ ವಿರುದ್ಧದ ಆರೋಪವನ್ನು ಖುಲಾಸೆಗೊಳಿಸಿ ಕೋರ್ಟ್ ತೀರ್ಪು ನೀಡಿದೆ.

    ಇರ್ಫಾನ್, ಆಶೀಖ್ ಇಕ್ಬಾಲ್ ಅಲಿಯಾಸ್ ಫಾರೂಕ್, ಶಕೀಲ್ ಅಹ್ಮದ್ ಹಾಗೂ ಮೊಹಮ್ಮದ್ ನಸೀಂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ದಿನೇಶ್ ಚಂದ್ರ ಅವರು ಆರೋಪಿಗಳಿಗೆ ತಲಾ 2.40 ಲಕ್ಷ ರೂ. ದಂಡ ವಿಧಿಸಿದ್ದಾರೆ.

    ಏನಿದು ಪ್ರಕರಣ?:
    ಅಯೋಧ್ಯೆಯಲ್ಲಿ 2005, ಜುಲೈ 5 ರಂದು ಲಷ್ಕರ್ ಎ- ತೋಯ್ಬಾ ಉಗ್ರ ಸಂಘಟನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಬ್ಬರು ಸಾರ್ವಜನಿಕರು ಸಾವನ್ನಪ್ಪಿದ್ದರು. ನಮ್ಮ ಭದ್ರತಾ ಪಡೆಯ ಸಿಬ್ಬಂದಿ ಐವರು ಉಗ್ರರರನ್ನು ಹೊಡೆದುರಳಿಸಿದ್ದರು. ಅಷ್ಟೇ ಅಲ್ಲದೆ 7 ಮಂದಿ ಸಿಆರ್‍ಪಿಎಫ್ ಯೋಧರು ಗಾಯಗೊಂಡಿದ್ದರು.

    ಉಗ್ರನ ಕೈನಲ್ಲಿ ಸಿಕ್ಕ ಮೊಬೈಲ್ ಆಧಾರದ ಮೇಲೆ 14 ವರ್ಷಗಳ ಹಿಂದೆಯೇ ಐವರನ್ನು ಪೊಲೀಸರು ಬಂಧಿಸಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ಕುರಿತು ಜೂನ್ 11ರಂದು ವಿಚಾರಣೆ ಪೂರ್ಣಗೊಳಿಸಿದ್ದ ಪ್ರಯಾಗ್‍ರಾಜ್ ವಿಶೇಷ ನ್ಯಾಯಾಲಯವು ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.

  • ಉಗ್ರರ ದಾಳಿಗೆ ಗಾಯಗೊಂಡಿದ್ದ ಹಾವೇರಿಯ ಯೋಧ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮ

    ಉಗ್ರರ ದಾಳಿಗೆ ಗಾಯಗೊಂಡಿದ್ದ ಹಾವೇರಿಯ ಯೋಧ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮ

    ಹಾವೇರಿ: ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಯೋಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ವಿರುದ್ಧ ಸರ್ಚ್ ಆಪರೇಷನ್ ನಡೆಸಲಾಗಿತ್ತು. ಈ ಕಾರ್ಯಾಚರಣೆ ವೇಳೆ ಉಗ್ರರ ದಾಳಿಗೆ ಯೋಧ ಶಿವಲಿಂಗೇಶ್ವರ ಪಾಟೀಲ(26) ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಯೋಧ ದೆಹಲಿಯ ಆರ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ತಮ್ಮ ಕೊನೆಯುಸಿರು ಎಳೆದಿದ್ದಾರೆ.

    2012ರಲ್ಲಿ ಭಾರತೀಯ ಸೇನೆಗೆ ಶಿವಲಿಂಗೇಶ್ವರ ಪಾಟೀಲ ಅವರು ಸೇರಿದ್ದರು. 6 ವರ್ಷದಿಂದ ಭಾರತೀಯ ಸೇನೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸಿ ಇಂದು ದೇಶಕ್ಕಾಗಿ ಜೀವವನ್ನು ಬಿಟ್ಟು ವೀರ ಯೋಧ ಎನಿಸಿಕೊಂಡಿದ್ದಾರೆ. ಯೋಧ ಹುತಾತ್ಮರಾದ ವಿಷಯ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಸೋಮವಾರದಂದು ಹುತಾತ್ಮ ಯೋಧರ ಪಾರ್ಥೀವ ಶರೀರ ಅವರ ಸ್ವಗ್ರಾಮ ಗುಂಡೇನಹಳ್ಳಿ ಆಗಮಿಸಲಿದ್ದು, ಸಕಲ ಸರಕಾರಿ ಗೌರವ ಹಾಗೂ ಸೇನಾ ಗೌರವಗಳೊಂದಿಗೆ ಶಿವಲಿಂಗೇಶ್ವರ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ಇಂಡಿಯನ್ಸ್ ಮೈಯಾಗ್ ಎಷ್ಟ್ ಪೊಗರ್ ಐತೆ ಅಂತ ಚೆಕ್ ಮಾಡಾಕ್  ಬರ್ಬೇಡಾ: ಧ್ರುವ ಸರ್ಜಾ

    ಇಂಡಿಯನ್ಸ್ ಮೈಯಾಗ್ ಎಷ್ಟ್ ಪೊಗರ್ ಐತೆ ಅಂತ ಚೆಕ್ ಮಾಡಾಕ್ ಬರ್ಬೇಡಾ: ಧ್ರುವ ಸರ್ಜಾ

    ಬೆಂಗಳೂರು: ಭಾರತೀಯ ಯೋಧರನ್ನು ಬಲಿಪಡೆದಿದ್ದ ಪಾಕಿಸ್ತಾನದ ವಿರುದ್ಧ ಭಾರತ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಸಿನಿಮಾ ಸ್ಟಾರ್ಸ್ ಸೇರಿದಂತೆ ದೇಶಾದ್ಯಂತ ಭಾರತೀಯ ವಾಯುಸೇನೆಯ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಹೌದು..ಸ್ಯಾಂಡಲ್‍ವುಡ್ ನಟರು ಮಾತ್ರವಲ್ಲದೇ ಬಾಲಿವುಡ್ ನಟರು ಕೂಡ ಸೇನೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟ ಧ್ರವಾ ಸರ್ಜಾ ಅವರು, “ಭಾರತೀಯರ ಮೈಯಾಗ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕ್ ಬರಬೇಡಾ..ಮಕ್ಳಾ ಬ್ಲಾಸ್ಟ್ ಆಗೋಯ್ತಿರಾ. ಭೋಲೋ ಭಾರತ್ ಮಾತಾ ಕಿ ಜೈ.. ಜೈ ಆಂಜನೇಯ” ಎಂದು ಟ್ವೀಟ್ ಮಾಡಿ ಪಾಕಿಸ್ತಾನದವರಿಗೆ ಭಾರತೀಯರ ಪೊಗರಿನ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

    ನಟ ಗಣೇಶ್ ಅವರು, “ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದಕರ ಕ್ಯಾಂಪಸ್‍ಗಳನ್ನು ನಾಶ ಮಾಡಿದೆ. ನಮ್ಮ ಭಾರತೀಯ ವಾಯುಸೇನೆಯ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನೂ ನಟಿ ಕಾಜಲ್, “ಪಾಕಿಸ್ತಾನಕ್ಕೆ ಭಾರತ ಹಿಂತಿರುಗಿಸಿ ಉತ್ತರ ಕೊಟ್ಟಿದೆ. ನಮ್ಮ ಧೈರ್ಯವಂತ ಹೀರೋಗಳಾದ ಭಾರತೀಯ ವಾಯುಪಡೆಗೆ ದೊಡ್ಡ ಸೆಲ್ಯೂಟ್” ಎಂದು ಹೇಳಿದ್ದಾರೆ. “ನಮ್ಮ ದೇಶ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಟ್ಟಿದೆ. ಭಾರತೀಯ ವಾಯುಪಡೆಗೆ ಸೆಲ್ಯೂಟ್” ಎಂದು ಜೂ.ಎನ್.ಟಿ.ಆರ್ ಹೇಳಿದ್ದಾರೆ.

    ಭಾರತೀಯ ವಾಯುಪಡೆಯ ಕಾರ್ಯಕ್ಕೆ ಮೆಚ್ಚಿ ನಟ ಅಕ್ಷಯ್ ಕುಮಾರ್, ನಟಿ ಕಾಜಲ್ ಅಗರ್ವಾಲ್, ಮಹೇಶ್ ಬಾಬು, ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಟಾಕಿ ಸಿಡಿಸಿ, ಸಿಹಿ ಹಂಚಿ ರಾಜ್ಯದ ಜನತೆಯಿಂದ ಸಂಭ್ರಮವೋ ಸಂಭ್ರಮ

    ಪಟಾಕಿ ಸಿಡಿಸಿ, ಸಿಹಿ ಹಂಚಿ ರಾಜ್ಯದ ಜನತೆಯಿಂದ ಸಂಭ್ರಮವೋ ಸಂಭ್ರಮ

    ಬೆಂಗಳೂರು: ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆ ಇಂದು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಮೇಲೆ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿ 200ಕ್ಕೂ ಹೆಚ್ಚು ಉಗ್ರರನ್ನು ಉಡೀಸ್ ಮಾಡಿದೆ. ಈ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ವಿದ್ಯಾರ್ಥಿಗಳಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು.

    ಗಂಗಾವತಿಯ ಶ್ರೀ ರಾಘವೇಂದ್ರ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆ ಮುಖಾಂತರ ವಿಜಯದ ಘೊಷಣೆ ಕೂಗುತ್ತ ಸಾಗಿದ್ದಾರೆ. ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ ಪಟಾಕಿ ಸಿಡಿಸಿ ಉಗ್ರರ ದಾಳಿಗೆ ಪ್ರತಿಕಾರ ತಿರೀಸಿಕೊಂಡಿದಕ್ಕೆ ಹರ್ಷೊದ್ಘಾರ ವ್ಯಕ್ತಪಡಿಸಿದ್ದಾರೆ. ಇನ್ನೂ ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸವನ್ನು ಹಂಚಿಕೊಂಡರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡನೇ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪಾಕಿಸ್ತಾನವನ್ನು ಬಗ್ಗು ಬಡೆದಿದ್ದಾರೆ. ಕೂಡಲೇ ಮೋದಿ ಯುದ್ಧ ಘೋಷಿಸಿ ಪಾಕಿಸ್ತಾನ ಉಗ್ರರ ತಾಣಗಳನ್ನು ಉಡೀಸ್ ಮಾಡಿ ತಕ್ಕ ಉತ್ತರ ನೀಡ ಬೇಕು ಎಂದಿದ್ದಾರೆ. ಎರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇತ್ತ ಬೆಳಗಾವಿ ಕಪಿಲೇಶ್ವರ ದೇವಸ್ಥಾನದ ಆಡಳಿತ ವತಿಯಿಂದ ಉಗ್ರರ ಮೇಲೆ ಭಾರತೀಯ ಸೈನ್ಯ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಸ್ಥಳೀಯ ಜನರು, ಆಟೋ ಚಾಲಕರು ದೇವಸ್ಥಾನದ ಮುಂಭಾಗದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಮೈಸೂರು ಪ್ರಜ್ಞಾವಂತ ನಾಗರೀಕ ವೇದಿಕೆಯವರು ಅವರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.

    ಮೈಸೂರಿನ ಅಗ್ರಹಾರ ವೃತ್ತದಲ್ಲಿ ತ್ರಿವಣ ಧ್ವಜ ಹಿಡಿದು ಯೋಧರ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಮೋದಿ ಭಾವಚಿತ್ರ ಹಿಡಿದು ಪ್ರಜ್ಞಾವಂತ ಕಾರ್ಯಕರ್ತರು ಸಂಭ್ರಮಿಸಿದ್ದು, ಕಾಶ್ಮೀರ ನಮ್ಮದು ನಮ್ಮದು ಎಂದು ಘೋಷಣೆ ಕೂಗಿದ್ದಾರೆ. ಮಂಗಳೂರಿನ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಭಾರತೀಯ ಸೇನೆಗೆ ಶಕ್ತಿ ತುಂಬುವಂತೆ ದೇವರಲ್ಲಿ ಪ್ರಾರ್ಥಿನೆ ಮಾಡಿಕೊಂಡಿದ್ದು, ಉಗ್ರರ ಮೇಲಿನ ದಾಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

    ಹಿಂದೂ ಪರ ಸಂಘಟನೆಗಳು ಕೋಲಾರ ನಗರದ ಹೊಸ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತ್ರಿವಣ ಧ್ವಜ ಹಿಡಿದು ದೇಶದ ಯೋಧರ ಪರ ಘೋಷಣೆ ಕೂಗಿದ್ದು, ಭಾರತ ಮಾತೆಗೆ ಹೂ ಹಾಕಿ, ಪಾಕಿಸ್ತಾನಕ್ಕೆ ಬಾಂಬ್ ಎಂದು ಘೋಷಣೆ ಕೂಗಿದ್ದಾರೆ.

    ಇನ್ನೂ ಉತ್ತರ ಕನ್ನಡದ ಶಿರಸಿಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಉಗ್ರವಾದದ ವಿರುದ್ಧ ಭಾರತದ ದಿಟ್ಟ ಪ್ರತಿಕಾರಕ್ಕೆ ಶಿರಸಿ ನಗರದ ಪ್ರಮುಖ ಬೀದಿಗಳಲ್ಲಿ ವಿಜಯ ಮೆರವಣಿಗೆ ಮಾಡಿದ್ದಾರೆ.

    https://www.youtube.com/watch?v=zmcs1r70Pls

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರ ದಾಳಿಯನ್ನ ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ: ಗುಂಡೂರಾವ್

    ಉಗ್ರರ ದಾಳಿಯನ್ನ ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ: ಗುಂಡೂರಾವ್

    – ದೇಶಪ್ರೇಮವನ್ನ ಕೆಲ ಸಂಘಟನೆಗಳು ಗುತ್ತಿಗೆಗೆ ಪಡೆದಿವೆ
    – ಪಾಕಿಸ್ತಾನಕ್ಕೆ ಹೋಗಿ ಚಹಾ ಕುಡಿದು ಬರುವ ಅಗತ್ಯ ಏನಿತ್ತು?
    – ಶರೀಫ್ ಭೇಟಿ ಮಾಡಿದ್ದ ಮೋದಿಗೆ ಖಾದರ್ ಪ್ರಶ್ನೆ

    ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಬಿಜೆಪಿಯವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಗಮನ ಲೋಕಸಭಾ ಚುನಾವಣೆ ಮೇಲಿದೆ. ಮತವನ್ನು ಹೇಗೆ ಪಡೆಯಬೇಕು ಎನ್ನುವ ಸವಾಲು ಅವರ ಮುಂದಿದೆ. ಹೀಗಾಗಿಯೇ ದಾಳಿಯನ್ನ ತಮಗೆ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ದೂರಿದರು.

    ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಾತನಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರಚಾರ ಪಡೆದುಕೊಂಡಿದ್ದಾರೆ ಅಷ್ಟೇ. ಅವರೇನು ಪಾಕಿಸ್ತಾನವನ್ನ ಮಟ್ಟ ಹಾಕಿದ್ದರಾ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ಅವರ ಸರ್ಕಾರದ ಅವಧಿಯಲ್ಲೇ ಆತಂಕಕಾರಿ ಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿವೆ ಎಂದು ಆರೋಪಿಸಿದರು.

    ದೇಶದಲ್ಲಿರುವ ಪ್ರತಿಯೊಬ್ಬರೂ ದೇಶ ಪ್ರೇಮಿಗಳೇ. ಆದರೆ, ಬಿಜೆಪಿಯವರು ಮಾತು ಆರಂಭಿಸಿದರೆ ನಾವೇ ದೇಶ ಪ್ರೇಮಿಗಳೆಂದು ಹೇಳಿಕೊಳ್ಳುತ್ತಾರೆ. ದೇಶಪ್ರೇಮದ ಬಗ್ಗೆ ಯಾರೇ ಮಾತನಾಡಿದರೂ ಅವರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಕೆಲ ಸಂಘಟನೆಗಳಂತೂ ದೇಶಪ್ರೇಮವನ್ನ ಗುತ್ತಿಗೆಗೆ ತೆಗೆದುಕೊಂಡತೆ ವರ್ತಿಸುತ್ತಿವೆ. ಈ ಮೂಲಕ ದೇಶದಲ್ಲಿ ದ್ವೇಷದ ವಾತಾವರಣ ಮೂಡಿಸುತ್ತಿದೆ ಎಂದು ಕಿಡಿಕಾರಿದರು.

    ಇದೇ ವೇಳೆ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಪಾಕಿಸ್ತಾನಕ್ಕೆ ಹೋಗಿ ಚಹಾ ಕುಡಿದು ಬರುವ ಅಗತ್ಯವಿತ್ತೇ? ವಿರೋಧಿಗಳ ಜೊತೆ ಸ್ನೇಹ ಬಯಸಬೇಕಿತ್ತಾ? ವಿರೋಧಿಗಳು ಎನ್ನುವುದು ಗೊತ್ತಿದ್ದರೂ ಅಲ್ಲಿಗೆ ಹೋಗಿದ್ದು ಸರಿಯಲ್ಲ. ಅಲ್ಲಿಂದ ಇಲ್ಲಿಗೆ ಬಂದು ಸೀರೆ ಕೊಡುವುದೂ ಬೇಕಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದರು.

    ಪುಲ್ವಾಮಾದಲ್ಲಿ ದಾಳಿ ಉಗ್ರರ ವಿರುದ್ಧ ಕ್ರಮಕೈಗೊಳ್ಳುವ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ದೇಶದ ಅಖಂಡತೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಕೇಂದ್ರ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕಿದೆ ಎಂದು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾಳಿ ನಡೆಸಿದಕ್ಕೆ ಪಾಕಿಗೆ ಬೈಯ್ಯದೆ ಇನ್ನೇನು ಲಂಡನ್, ರಷ್ಯಾದವರಿಗೆ ಬೈಯ್ಯೊಕ್ಕಾಗುತ್ತಾ: ಯತ್ನಾಳ್ ಕಿಡಿ

    ದಾಳಿ ನಡೆಸಿದಕ್ಕೆ ಪಾಕಿಗೆ ಬೈಯ್ಯದೆ ಇನ್ನೇನು ಲಂಡನ್, ರಷ್ಯಾದವರಿಗೆ ಬೈಯ್ಯೊಕ್ಕಾಗುತ್ತಾ: ಯತ್ನಾಳ್ ಕಿಡಿ

    ವಿಜಯಪುರ: ಅಟ್ಟಹಾಸ ಮೆರೆಯುತ್ತಿರೋ ಪಾಕಿಸ್ತಾನದವರಿಗೆ ಬೈಯ್ಯದೆ ಇನ್ನೇನು ಲಂಡನ್, ರಷ್ಯಾದವರಿಗೆ ಬೈಯಲು ಆಗುತ್ತಾ ಎಂದು ಪ್ರಶ್ನಿಸಿ ಕಾಂಗ್ರೆಸ್ ವಕ್ತಾರ ಎಸ್.ಎಂ ಪಾಟೀಲ್ ಗಣಿಹಾರ್ ವಿರುದ್ಧ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

    ಇವತ್ತು ವಿಜಯಪುರದಲ್ಲೂ ದೇಶದ್ರೋಹಿಗಳು ಇದ್ದಾರೆ. ಅವರ ಪ್ರಕಾರ ಪಾಕಿಸ್ತಾನಕ್ಕೆ ಬೈಯ್ಯಬಾರದು, ಮುಸ್ಲಿಮರಿಗೆ ಬೈಯಬಾರದು. ಈ ದೇಶದಲ್ಲಿ ಭಯೋತ್ಪಾದಕರು ಅಂತ ಇರೋದು ಯಾರು? ಹಿಂದೂಗಳು ಇದ್ದರಾ? ಪಾಕಿಸ್ತಾನದ ಮೂಲದವರೇ ಇದ್ದಾರೆ. ಅಟ್ಟಹಾಸ ಮಾಡುತ್ತಿರುವ ಪಾಕಿಸ್ತಾನದವರಿಗೆ ಬೈಯ್ಯದೆ ಇನ್ನೇನು ಲಂಡನ್, ರಷ್ಯಾದವರಿಗೆ ಬೈಯ್ಯಲು ಆಗುತ್ತಾ ಎಂದು ಪ್ರಶ್ನಿಸಿದರು.

    ಇಬ್ಬರು ಉಗ್ರರ ಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಾರತೀಯ ಸೈನಿಕರು ಉಗ್ರರನ್ನು ನೇರವಾಗಿ ನರಕಕ್ಕೆ ಕಳುಹಿಸಿದ್ದಾರೆ. ಕಾಶ್ಮೀರದ ಸಮಸ್ಯೆಯನ್ನ ಬುಡದಿಂದ ತೆಗೆದು ಹಾಕಲು ಮೋದಿಯವರು ಮುಂದಾಗಬೇಕು. ಮೊದಲು ಕಾಶ್ಮೀರ ನೀಡಿರುವ ಕಾಲಂ 370 ಅನ್ನು ತೆಗೆದು ಹಾಕಬೇಕು. ಲೋಕಸಭೆ ಚುನಾವಣೆ ನಡೆಯಲಿ, ಬಿಡಲಿ ಅದು ಸದ್ಯ ಮುಖ್ಯವಲ್ಲ. ದೇಶ ಉಳಿಯುವುದು ಮುಖ್ಯ. ಆದರಿಂದ ವಿಶೇಷ ಲೋಕಸಭಾ ಅಧಿವೇಶನ ಕರೆದು 370 ಕಲಂ ಅನ್ನ ರದ್ದುಗೊಳಿಸಬೇಕು. ಅದಕ್ಕೆ ಯಾರು ವಿರೋಧ ಮಾಡುತ್ತಾರೋ ಅವರಿಗೆ ಜನರು ಸರಿಯಾಗಿ ಬುದ್ಧಿ ಕಲಿಸುತ್ತಾರೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

    370 ಕಲಂ ಅನ್ನು ಸಂವಿಧಾನದಿಂದ ತೆಗೆಯುವುದು ವಾಜಪೇಯಿಯವರ ಆಸೆ ಕೂಡ ಆಗಿತ್ತು. ಲೋಕಸಭೆ ಚುನಾವಣೆ ಈಗ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿದ್ದು ಶಾಂತಿ, ನಮ್ಮ ಹುತಾತ್ಮ ಸೈನಿಕರ ಪ್ರತೀಕಾರ. ಮೋದಿಯವರ ಸರ್ಕಾರ ಬಂದ ಮೇಲೆ ಪುಲ್ವಾಮ ಘಟನೆ ಬಿಟ್ಟರೆ ಮುಂಬೈ ಬ್ಲಾಸ್ಟ್, ಹೈದ್ರಾಬಾದ್ ಬ್ಲಾಸ್ಟ್ ಆಗಿಲ್ಲ. ಇಡೀ ಭಾರತದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಶಾಂತಿ ನೆಲೆಸಿದೆ ಎಂದರು.

    ಈ ರೀತಿಯಾಗಿ ಹೇಳಿಕೆ ನೀಡಿದ ಅಯೋಗ್ಯ ಗಣಿಹಾರ್ ಮೇಲೆ ಕ್ರಮ ತಗೆದುಕೊಳ್ಳಬೇಕು. ಗೃಹ ಮಂತ್ರಿಗಳು ನಿನ್ನೆ ಹೇಳಿದ್ದಾರೆ ನಾವು ಯಾರೇ ದೇಶದ್ರೋಹಿ ಹೇಳಿಕೆ ಕೊಟ್ಟರೂ ಬಿಡಲ್ಲ ಅಂತ. ಈಗ ನಿಮ್ಮ ಪಕ್ಷದವನೇ ಈ ರೀತಿ ದೇಶ ವಿರೋಧಿ ಹೇಳಿಕೆಯನ್ನು ಕೊಟ್ಟಿದ್ದಾನೆ. ಅವನ ವಿರುದ್ಧ ನಿಷ್ಪಕ್ಷಪಾತವಾದ ತನಿಖೆ ನಡೆಸಿ ಎಂದು ಗೃಹ ಸಚಿವರಿಗೆ ಯತ್ನಾಳ್ ಅವರು ಆಗ್ರಹಿಸಿದ್ದಾರೆ.

    ಈ ವಿಚಾರವಾಗಿ ಪೊಲೀಸರಿಗೆ ಮುಕ್ತವಾದ ಅಧಿಕಾರ ನೀಡಬೇಕು. ಕರ್ನಾಟಕ ಗೃಹಮಂತ್ರಿಗಳು ಕೂಡ ಆ ಧೈರ್ಯ ಮಾಡಬೇಕು. ಯತ್ನಾಳ್ ವಿರುದ್ಧ ಕೇಸ್ ಹಾಕಿದರೆ ಏನು ಅಗಲ್ಲ. ಯತ್ನಾಳ್‍ಗೆ ಯಾರು ಏನು ಮಾಡಲು ಆಗಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಾಂಕಾಗೆ ಟಾಂಗ್ ಕೊಟ್ಟ ಡಿಜಿಪಿ ರೂಪಾ – ಅಭಿಮಾನಿಗಳಿಂದ ಅಪಾರ ಮೆಚ್ಚುಗೆ

    ಪ್ರಿಯಾಂಕಾಗೆ ಟಾಂಗ್ ಕೊಟ್ಟ ಡಿಜಿಪಿ ರೂಪಾ – ಅಭಿಮಾನಿಗಳಿಂದ ಅಪಾರ ಮೆಚ್ಚುಗೆ

    ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದರು. ಅವರ ಟ್ವೀಟ್ ಗೆ ಡಿಜಿಪಿ ಡಿ. ರೂಪಾ ಅವರು ಗರಂ ಆಗಿ ಉತ್ತರಿಸಿದ್ದರು. ಆದರೆ ಈಗ ಇವರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ರೂಪಾ ಅವರ ಅಭಿಮಾನಿಗಳು ಅಪಾರ ಮೆಚ್ಚಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಫೆ.14 ರಂದು ನಡೆದಿದ್ದ ಉಗ್ರರ ದಾಳಿಗೆ ಅಂದು ನಟಿ ಪ್ರಿಯಾಂಕಾ ಚೋಪ್ರಾ ಅವರು, “ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ ನಿಜಕ್ಕೂ ಶಾಕ್ ಆಗಿದೆ. ಆದರೆ ದ್ವೇಷಿಸುವುದು ಉತ್ತರವಲ್ಲ. ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಹಾಗೂ ಗಾಯಾಳು ಯೋಧರಿಗೆ ಶಕ್ತಿ ನೀಡಲಿ” ಎಂದು ಟ್ವೀಟ್ ಮಾಡಿದ್ದರು.

    ಪ್ರಿಯಾಂಕಾ ಅವರು ಟ್ವೀಟ್‍ಗೆ ಸಾಮಾಜಿಕ ಜಾಲತಾಣಗಲ್ಲಿ ಅಪಾರ ಟೀಕೆ ವ್ಯಕ್ತವಾಗುತ್ತಿತ್ತು. ಈ ಟ್ವೀಟ್ ಗೆ ಡಿಜಿಪಿ ರೂಪಾ ಅವರು, “ಯೋಧರ ಮೇಲಿನ ದಾಳಿ ಕೇವಲ ಪ್ರೀತಿ-ದ್ವೇಷದ ಕಥೆಯಲ್ಲ. ಇದೊಂದು ರಾಷ್ಟ್ರದ ಮೇಲಿನ ದಾಳಿಯಾಗಿದೆ. ರಾಷ್ಟ್ರದ ಹಕ್ಕಿನ ಅಧಿಕಾರ ವರ್ಸಸ್ ಶಾಂತಿಯುತ ದೇಶವನ್ನು ವಿಘಟನೆಗೊಳಿಸಲು ಅಕ್ರಮ ಶಕ್ತಿಗಳು ನಡೆಸುವ ದಾಳಿಯಾಗಿದೆ. ಇದೊಂದು ಅಧಿಕಾರದ ಸಮೀಕರಣ” ಎಂದು ರೀಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಡಿಜಿಪಿ ರೂಪಾ ಅವರು ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದುವರೆಗೂ 16.4 ಸಾವಿರ ಮಂದಿ ಲೈಕ್ಸ್ ಮಾಡಿದ್ದಾರೆ. ಇನ್ನೂ ರೂಪಾ ಅವರ ಟ್ವೀಟ್ ಗೆ 7 ಸಾವಿರ ನೆಟ್ಟಿಗರು ರೀಟ್ವೀಟ್ ಮಾಡುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಇಲ್ಲಿಯವರೆಗೆ ಕಲಾವಿದರ ಟ್ವೀಟ್ ಗಳನ್ನು ಖಂಡಿಸಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಆದರೆ ಈ ಬಾರಿ ಐಪಿಎಸ್ ಅಧಿಕಾರಿಯೇ ಪ್ರಿಯಾಂಕಾ ಅವರನ್ನು ಟ್ರೋಲ್ ಮಾಡಿ ದೇಶಪ್ರೇಮ ತೋರಿದಿದ್ದಾರೆ ಎಂದು ಹೇಳಿ ಜನ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದಲು ದೇಶ ನಂತರ ವ್ಯಾಪಾರ- ಪಾಕ್‍ಗೆ ಚಹಾ ರಫ್ತು ನಿಲ್ಲಿಸಲು ಸಿದ್ಧ ಎಂದ ಚಹಾ ರಫ್ತುದಾರರು

    ಮೊದಲು ದೇಶ ನಂತರ ವ್ಯಾಪಾರ- ಪಾಕ್‍ಗೆ ಚಹಾ ರಫ್ತು ನಿಲ್ಲಿಸಲು ಸಿದ್ಧ ಎಂದ ಚಹಾ ರಫ್ತುದಾರರು

    ನವದೆಹಲಿ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಿಂದ ಯೋಧರು ಹುತಾತ್ಮರಾಗಿರುವುದಕ್ಕೆ ಸಿಡಿದೆದ್ದಿರುವ ಭಾರತ ಸರ್ಕಾರ, ಪಾಕಿಸ್ತಾನವನ್ನು ಅತ್ಯಾಪ್ತ ರಾಷ್ಟ್ರ ಸ್ಥಾನದಿಂದ ಕಿತ್ತೊಗೆದಿದೆ. ಇದರಿಂದ ಉಭಯ ರಾಷ್ಟ್ರಗಳ ನಡುವೆ ಇದ್ದ ಹಲವು ರೀತಿ ವ್ಯವಹಾರ ಸಂಬಂಧಗಳು ಮುರಿದು ಬಿದ್ದಿದ್ದು, ಪಾಕಿಸ್ತಾನಕ್ಕೆ ಚಹಾ ರಫ್ತು ನಿಲ್ಲಿಸಲು ಸಿದ್ಧ ಎಂದು ಭಾರತೀಯ ಚಹಾ ಪೂರೈಕೆದಾರರ ಒಕ್ಕೂಟ (ಐಟಿಇಎ) ಮುಖ್ಯಸ್ಥ ಅನ್ಶುಮನ್ ಕನೋರಿಯಾ ತಿಳಿಸಿದ್ದಾರೆ.

    ಭಾರತದಿಂದ ಪಾಕಿಸ್ತಾನಕ್ಕೆ ಪ್ರತಿವರ್ಷ ಸುಮಾರು 150 ಕೋಟಿ ರೂ. ಮೌಲ್ಯದ ಚಹಾವನ್ನು ರಫ್ತು ಮಾಡಲಾಗುತ್ತಿತ್ತು. ಚಹಾ ಮಂಡಳಿಯ ವರದಿ ಪ್ರಕಾರ 2018ರಲ್ಲಿ ಸುಮಾರು 154.71 ಕೋಟಿ ರೂ. ಮೌಲ್ಯದ 1.58 ಕೋಟಿ ಕೆ.ಜಿ ಚಹಾವನ್ನು ಪಾಕಿಸ್ತಾನಕ್ಕೆ ಪೂರೈಕೆ ಮಾಡಲಾಗಿತ್ತು. ಆದ್ರೆ ಪುಲ್ವಾಮ ಉಗ್ರರ ದಾಳಿಯಿಂದ ಉಭಯ ರಾಷ್ಟ್ರಗಳ ನಡುವೆ ಭಾರಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರನ್ನು ಬೆಂಬಲಿಸುತ್ತೇವೆ ಎಂದು ಚಹಾ ಪೂರೈಕೆದಾರರ ಒಕ್ಕೂಟ ಹೇಳಿದೆ. ಅಲ್ಲದೆ ನಮಗೆ ನಷ್ಟವಾದರೂ ಸರಿ ನಾವು ಮಾತ್ರ ಪಾಕಿಸ್ತಾನಕ್ಕೆ ಚಹಾ ರಫ್ತು ಮಾಡಲ್ಲ. ದೇಶ ಮೊದಲು ನಂತರ ವ್ಯಪಾರ ಎಂದು ಕೇಂದ್ರ ಸರ್ಕಾರಕ್ಕೆ ಸಾಥ್ ನೀಡಿದ್ದಾರೆ.

    ಕೇಂದ್ರ ಸರ್ಕಾರ ಪಾಕಿಸ್ತಾನದ ಜೊತೆ ಭಾರತದ ಎಲ್ಲಾ ವ್ಯಾಪಾರಿ ಸಂಬಂಧಗಳನ್ನು ಸ್ಥಗಿತಗೊಳಿಸಿದರೆ ಚಹಾ ಪೂರೈಕೆ ಮಾಡುವುದನ್ನು ನಿಲ್ಲಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಐಟಿಇಎ ಮುಖ್ಯಸ್ಥ ಅನ್ಶುಮನ್ ಕನೋರಿಯಾ ಖಂಡಿತ ನಿಲ್ಲಿಸುತ್ತೇವೆ. ದೇಶಕ್ಕಾಗಿ ಏನನ್ನಾದರೂ ಮಾಡಲು ನಾವು ಸಿದ್ಧರಿದ್ದೇವೆ. ಮೊದಲು ರಾಷ್ಟ್ರ ನಂತರ ವ್ಯಾಪಾರ ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೆ ಪುಲ್ವಾಮ ಉಗ್ರರ ದಾಳಿ ವಿರುದ್ಧವಾಗಿ ಕೇಂದ್ರ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಚಹಾ ರಫ್ತುದಾರರ ಬೆಂಬಲವಿದೆ. 1989ರಿಂದ ಭಾರತೀಯ ಸೇನೆಗೆ ಪಾಕಿಸ್ತಾನ ತೊಂದರೆ ಕೊಡುತ್ತಿದೆ ಎಂದು ಕನೋರಿಯಾ ಹೇಳಿದ್ದಾರೆ.

    ಅಲ್ಲದೇ ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧ ಸ್ಥಗಿತಗೊಂಡರೆ ನಮಗೆ ನಷ್ಟವಾಗುತ್ತದೆ ಎಂಬುದರ ಕುರಿತು ಯೋಚನೆಯನ್ನೇ ಮಾಡಿಲ್ಲ. ಇಂತಹ ದುರ್ಘಟನೆಗಳು ನಡೆದಾಗ ನಮಗೆ ದೇಶ ಮೊದಲಾಗುತ್ತದೆ. ನಾವು ಕೇಂದ್ರ ಸರ್ಕಾರದ ಸೂಚನೆಗಳಿಗೆ ಕಾಯುತ್ತಿದ್ದೇವೆ. ಇದರಿಂದ ಮಾರುಕಟ್ಟೆ ಮೇಲೆ ಆಗುವ ಪರಿಣಾಮ ಸೆಕೆಂಡರಿ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧ ಗುರು ಕುಟುಂಬಕ್ಕೆ ಗ್ರಾಮ ಪಂಚಾಯ್ತಿಯಿಂದ 10 ಲಕ್ಷ ರೂ. ಧನಸಹಾಯ!

    ಹುತಾತ್ಮ ಯೋಧ ಗುರು ಕುಟುಂಬಕ್ಕೆ ಗ್ರಾಮ ಪಂಚಾಯ್ತಿಯಿಂದ 10 ಲಕ್ಷ ರೂ. ಧನಸಹಾಯ!

    ಚಿಕ್ಕಬಳ್ಳಾಪುರ: ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯ್ತಿಯಿಂದ ಧನಸಹಾಯ ನೀಡಲು ನಿರ್ಧರಿಸಲಾಗಿದೆ.

    ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯ ಗುಡಿಗೆರೆ ಗ್ರಾಮದ ವೀರ ಯೋಧ ಗುರು ಅವರು ಪುಲ್ವಮಾ ಉಗ್ರರ ದಾಳಿಯಲ್ಲಿ ವೀರಮರಣವನ್ನಪ್ಪಿದ್ದಾರೆ. ಆದ್ದರಿಂದ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಅಣ್ಣೇಶ್ವರ ಗ್ರಾಮ ಪಂಚಾಯ್ತಿ 10 ಲಕ್ಷ ರೂ. ಹಣ ನೀಡಲು ಮುಂದಾಗಿದೆ. ಪರಿಹಾರಧನ ನೀಡಲು ಸರ್ಕಾರ ಸಹ ಅನುಮೋದನೆ ನೀಡುವಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ ಮನವಿ ಮಾಡಿದ್ದಾರೆ. ಅಲ್ಲದೆ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಧನಸಹಾಯ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

    ಅಣ್ಣೇಶ್ವರ ಗ್ರಾಮ ಪಂಚಾಯ್ತಿ ಸದಸ್ಯರು ಅನ್ಯಾಯವಾಗಿ ಪಾಪಿ ಉಗ್ರರ ದಾಳಿಗೆ ಬಲಿಯಾದ ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕರ್ನಾಟಕದ ಹುತಾತ್ಮ ಯೋಧನ ಕುಟುಂಬಕ್ಕೆ 10 ಲಕ್ಷ ಧನಸಹಾಯ ಮಾಡಲು ಸಿದ್ಧ ಎಂದು ಹೇಳಿ ದೇಶಭಕ್ತಿ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾದಲ್ಲಿ ಉಗ್ರರ ದಾಳಿ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸಂದೇಶ ರವಾನೆ

    ಪುಲ್ವಾಮಾದಲ್ಲಿ ಉಗ್ರರ ದಾಳಿ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸಂದೇಶ ರವಾನೆ

    ಬೆಂಗಳೂರು: ಪುಲ್ವಾಮಾದಲ್ಲಿ ಉಗ್ರ ಆತ್ಮಾಹುತಿ ದಾಳಿ ವಿಚಾರವಾಗಿ ರಾಜಕೀಯ ಹೇಳಿಕೆ ನೀಡದಂತೆ ತನ್ನ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಕುರಿತು ತಮ್ಮ ಸಂಸದರಿಗೆ ಮತ್ತು ವಕ್ತಾರರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆಯಂತೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪುಲ್ವಾಮಾದಲ್ಲಿ ಉಗ್ರರ ದಾಳಿ ವಿಚಾರವಾಗಿ ರಾಜಕೀಯ ಮಾಡುವುದಿಲ್ಲ. ಕೇಂದ್ರ ಸರ್ಕಾರದ ನಿರ್ಣಯಗಳಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಹೇಳಿಕೆಗಳು ಬಿಜೆಪಿಗೆ ವಿರುದ್ಧವಾಗುವ ಸಾಧ್ಯತೆಗಳಿವೆ. ಹಾಗಾಗಿ ಪುಲ್ವಾಮಾ ವಿಚಾರದಲ್ಲಿ ರಾಜಕೀಯವಾಗಿ ಮಾತನಾಡದಂತೆ ಬಿಜೆಪಿ ಸ್ವಪಕ್ಷೀಯರಿಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.

    ಒಂದು ವೇಳೆ ವಕ್ತಾರರ ಆತುರದ ಹೇಳಿಕೆಗಳು ಸ್ಥಳೀಯವಾಗಿ ಪಕ್ಷಕ್ಕೆ ಡ್ಯಾಮೇಜ್ ಉಂಟು ಮಾಡಬಹುದು. ದೇಶ-ಸೈನ್ಯದ ಹೆಸರಿನಲ್ಲೂ ರಾಜಕಾರಣ ಮಾಡುತ್ತಾರೆ ಎಂಬ ಅಪಖ್ಯಾತಿ ಪಕ್ಷಕ್ಕೆ ಬರಬಹುದು. ಬಿಜೆಪಿ ಸಿಎಂಗಳಿಗೆ ಯೋಧರ ಪಾರ್ಥೀವ ಶರೀರ ಸ್ವೀಕರಿಸುವಂತೆ ಸೂಚಿಸಿದ್ದು, ಪರಿಸ್ಥಿತಿಯನ್ನು ಸರ್ಮಥವಾಗಿ ನಿಭಾಯಿಸುವಂತೆ ಮುಖಂಡರಿಗೆ ಪಕ್ಷ ಸಂದೇಶ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    https://www.youtube.com/watch?v=vxN4YG2ENAc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv