Tag: ಈಸ್ಟರ್ ಭಾನುವಾರ

  • ಬಾಂಬ್ ದಾಳಿಯ ಬಳಿಕ ಶ್ರೀಲಂಕಾಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಮೋದಿ

    ಬಾಂಬ್ ದಾಳಿಯ ಬಳಿಕ ಶ್ರೀಲಂಕಾಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಮೋದಿ

    ಕೊಲಂಬೊ: ಈಸ್ಟರ್ ಭಾನುವಾರದ ವೇಳೆ ಭಯೋತ್ಪಾದಕರು ದಾಳಿ ಮಾಡಿದ್ದ ಶ್ರೀಲಂಕಾದ ಚರ್ಚ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭೇಟಿ ನೀಡಿ ಮೃತರಿಗೆ ಗೌರವ ನಮನ ಸಲ್ಲಿಸಿದ್ದಾರೆ.

    ಚರ್ಚ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಏಪ್ರಿಲ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 11 ಭಾರತೀಯರು ಸೇರಿದಂತೆ ಸುಮಾರು 250 ಜನರು ಸಾವನ್ನಪ್ಪಿದ್ದರು. ಈ ದಾಳಿಯ ಬಳಿಕ ಶ್ರೀಲಂಕಾಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ.

    ಶ್ರೀಲಂಕಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಬಂಡಾರನಾಯಿಕೆ ಅವರು ಸಕಲ ಸರ್ಕಾರಿ ಗೌರವದೊಂದಿಗೆ ಸ್ವಾಗತಿಸಿದರು. ಅಲ್ಲಿಂದ ಕೊಚ್ಚಿಕಾಡ್‍ನ ಸೈಂಟ್ ಆಂಥೊನಿ ಚರ್ಚ್ ಗೆ ಭೇಟಿ ನೀಡುವ ಮೂಲಕ ಮೋದಿ ಅವರು ಶ್ರೀಲಂಕಾ ಪ್ರವಾಸವನ್ನು ಆರಂಭಿಸಿದ್ದಾರೆ.

    ಉಗ್ರರ ದಾಳಿಗೆ ಮೃತಪಟ್ಟ ನಾಗರಿಕರಿಗೆ ಚರ್ಚ್ ನಲ್ಲಿ ಹೂಗುಚ್ಛ ಇಟ್ಟು, ನಮನ ಸಲ್ಲಿಸಿದರು. ಟ್ವೀಟ್ ಮೂಲಕವೂ ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಬಳಿಕ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಭೇಟಿ ನೀಡಿ, ಮಾತುಕತೆ ನಡೆಸಿದರು.

    ಈ ಮಧ್ಯೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, ಮೂರು ವರ್ಷದಲ್ಲಿ ಶ್ರೀಲಂಕಾಗೆ ಇದು ನನ್ನ ಮೂರನೇ ಭೇಟಿ. ನಿಮ್ಮ ಅಭೂತಪೂರ್ವ ಸ್ವಾಗತಕ್ಕೆ ನಾನು ಮಾರುಹೋಗಿದ್ದೇನೆ. ನಿಮ್ಮ ಸ್ನೇಹವನ್ನು ಭಾರತವು ಎಂದಿಗೂ ಮರೆಯುವುದಿಲ್ಲ. ನಿಮ್ಮೊಂದಿಗೆ ಭಾರತ ಸದಾಕಾಲ ಇರುತ್ತದೆ ಎಂದು ಹೇಳಿದ್ದಾರೆ.

    ಕಳೆದ 10 ದಿನಗಳಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಜೊತೆಗಿನ ಎರಡನೇ ಭೇಟಿ ಇದಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಅವರು ಬೆಂಬಲ ನೀಡಿದ್ದಾರೆ. ಒಟ್ಟಾಗಿ ಉಗ್ರರನ್ನು ಮಟ್ಟ ಹಾಕುವ ನಿರ್ಧಾರಕ್ಕೆ ಮುಂದಾಗಿದ್ದೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

    ಶ್ರೀಲಂಕಾಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮೈತ್ರಿಪಾಲ ಸಿರಿಸೇನ ಅವರು ಮೊದಲು ಆಹ್ವಾನ ನೀಡಿದ್ದರು. ಮಾಜಿ ಅಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕ ಮಹೀಂದ್ರ ರಾಜಪಕ್ಸೆ ಅವರನ್ನು ಮೋದಿ ಭೇಟಿ ಮಾಡಿದ್ದಾರೆ.