ಬೆಂಗಳೂರು: ವನ್ಯಜೀವಿ ಸಪ್ತಾಹದ ಆರಂಭದ ದಿನವೇ ಮಲೆ ಮಹದೇಶ್ವರ ಬೆಟ್ಟ ಕಾನನದ ಹನೂರು ವಲಯದಲ್ಲಿ ಮತ್ತೊಂದು ಹುಲಿ ಹತ್ಯೆ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಿದ್ದಾರೆ.
ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಗೆ ಲಿಖಿತ ಆದೇಶ ನೀಡಿರುವ ಅವರು, ಮಲೆ ಮಹದೇಶ್ವರ ಬೆಟ್ಟದ ಕಾನನದ ಹನೂರು ವಲಯದ, ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಬಳಿ ನಿನ್ನೆ ಸತ್ತ ಹುಲಿಯ ಅರ್ಧ ಕಳೇಬರ ಪತ್ತೆಯಾಗಿರುವ ಬಗ್ಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಆದೇಶಿಸುವಂತೆ ಸೂಚಿಸಿದ್ದಾರೆ.
ಈ ಕಾನನದಲ್ಲಿ ಕಳೆದ 3 ವರ್ಷದಲ್ಲಿ ದಾಖಲಾಗಿರುವ ಕಳ್ಳಬೇಟೆ ಪ್ರಕರಣಗಳ ಬಗ್ಗೆಯೂ ಗಮನಹರಿಸಿ, ಹಿಂದಿನ ತನಿಖಾ ವರದಿಗಳನ್ನೂ ಪರಾಮರ್ಶಿಸಿ ಮುಂದೆ ಈ ಭಾಗದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸಲು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ ಸೂಕ್ತ ಕ್ರಮದ ಶಿಫಾರಸಿನೊಂದಿಗೆ 8 ದಿನಗಳಲ್ಲಿ ವರದಿ ಸಲ್ಲಿಸಿ. ಹುಲಿ ಹಂತಕರನ್ನು ಪತ್ತೆ ಮಾಡಿ ಅವರಿಗೆ ಕಾನೂನು ರೀತ್ಯ ದಂಡನೆ ಕೊಡಿಸಲು ತುರ್ತು ಕ್ರಮ ವಹಿಸಲು ಆದೇಶ ಹೊರಡಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಈ ಘಟನೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮದಲ್ಲಿ ನಿರಂತರವಾಗಿ ವನ್ಯಜೀವಿಗಳ ಕಳ್ಳಬೇಟೆ ನಡೆಯುತ್ತಿರುವುದನ್ನು ದೃಢಪಡಿಸುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಬೆಂಗಳೂರು: ಅರಣ್ಯ ಇಲಾಖೆಯಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸಲಾಗಿದ್ದು, ಈಗಾಗಲೇ 310 ಅರಣ್ಯ ವೀಕ್ಷಕರ ನೇಮಕಾತಿ ಮಾಡಲಾಗಿದೆ. ಈಗ 540 ಅರಣ್ಯ ರಕ್ಷಕರ (ಗಾರ್ಡ್) ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕೇಶವ್ ಪ್ರಸ್ತಾಪ ಪ್ರಶ್ನೆ ಕೇಳಿದರು. ಆನೆ ತುಳಿತದಿಂದ ಸತ್ತವರಿಗೆ 20 ಲಕ್ಷ ಪರಿಹಾರ ಕೊಡ್ತೀರಾ. ಅದೇ ರೀತಿ ಬೇರೆ ಪ್ರಾಣಿಯಿಂದ ಸತ್ತವರಿಗೆ 20 ಲಕ್ಷ ಪರಿಹಾರ ಕೊಡಿ. ಹುಲಿಗಳ ಸಾವು ಆಯ್ತು. ಅದರ ಬಗ್ಗೆ ಕ್ರಮ ಮಾಡಬೇಕು. ಹಾವು ಕಡಿತದಿಂದ ಸತ್ತವರಿಗೂ ಸರ್ಕಾರ ಪರಿಹಾರ ಕೊಡಬೇಕು. ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಅಪಪ್ರಚಾರಕರ ವಿರುದ್ಧ ಸ್ವಯಂಪ್ರೇರಿತ ಕೇಸ್ ಹಾಕಿ: ಅಶ್ವಥ್ ನಾರಾಯಣ್ ಆಗ್ರಹ
ಇದಕ್ಕೆ ಸಚಿವ ಈಶ್ವರ್ ಖಂಡ್ರೆ ಉತ್ತರ ನೀಡಿ, ಕಾಡಾನೆ ದಾಳಿ, ಹುಲಿ ದಾಳಿ ಸೇರಿದಂತೆ ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ ಪ್ರಸ್ತುತ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯ ವತಿಯಿಂದ 2 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸರ್ಕಾರ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಆನೆ ಕಾರ್ಯಪಡೆಯನ್ನು ಮಂಜೂರು ಮಾಡಲು ಸೂಚಿಸಲಾಗಿದ್ದು, 2-3 ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಈ ಪಡೆಯಲ್ಲಿ 32 ಸಿಬ್ಬಂದಿ ಇರುತ್ತಾರೆ. ಅವರು ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯದ ಜೊತೆಗೆ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲೂ ಸಹಕರಿಸಲಿದ್ದಾರೆ ಎಂದರು.
ಆನೆಪಥ (ಕಾರಿಡಾರ್) ಮತ್ತು ಆವಾಸಸ್ಥಾನ ಸಂರಕ್ಷಣೆಗಾಗಿ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರೊ. ಆರ್.ಸುಕುಮಾರ್ ಅವರ ತಂಡ ಅಧ್ಯಯನ ಆರಂಭಿಸಿದೆ ಎಂದು ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟಿದ್ದು, ಅತ್ಯಂತ ನೋವಿನ ಸಂಗತಿ. ಈಗಾಗಲೇ ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ.
ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವಲ್ಲಿ ವಿಫಲರಾದ ಉಪ ವಲಯ ಅರಣ್ಯಾಧಿಕಾರಿ ಸೇರಿ ಅಧಿಕಾರಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ತನಿಖೆ ಮುಂದಿನ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಅರಣ್ಯ ಪ್ರದೇಶದೊಳಗೆ (Forest) ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳು ಸಾಕು ಪ್ರಾಣಿಗಳಿಗೆ ಆಹಾರವಾಗಿ, ಅರಣ್ಯದಲ್ಲಿ ಹೊಸ ಗಿಡಗಳು ಬೆಳೆಯದೇ ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ ಎಂದು ಪರಿಸರಪ್ರೇಮಿಗಳು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯ – ಆದೇಶ ಎತ್ತಿ ಹಿಡಿದ ಸುಪ್ರೀಂ
ದೊಡ್ಡ ಸಂಖ್ಯೆಯ ಸಾಕುಪ್ರಾಣಿಗಳು ಕಾಡಿನಲ್ಲಿ ಮೇಯುವುದರಿಂದ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತದೆ. ಮಿಗಿಲಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ. ಅರಣ್ಯ ಸಂವರ್ಧನೆಯಾಗದಿದ್ದರೆ ಅದು ಆ ಅರಣ್ಯದಲ್ಲಿ ಹರಿಯುವ ನದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುತ್ತದೆ. ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಕೂಡಲೇ ಅಭಯಾರಣ್ಯಗಳಲ್ಲಿ ಮೇಕೆ, ಕುರಿ, ದನಕರುಗಳನ್ನು ಮೇಯಿಸುವುದನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ಕಾನೂನು ರೀತಿಯ ಕ್ರಮವಹಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದ ಮೂರು ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಆಗಮನ
ಕಾಡಿನಲ್ಲಿರುವ ವನ್ಯಜೀವಿಗಳು ಮೇಯಲು ಹೋದ ದನಕರುಗಳನ್ನು ಕೊಂದಾಗ, ಆಕ್ರೋಶಗೊಂಡು ಕೆಲವರು ಮೃತ ಜಾನುವಾರುಗಳಿಗೆ ವಿಷಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇದಕ್ಕೆ ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಾವಿಗೀಡಾಗಿರುವುದೇ ಸಾಕ್ಷಿಯಾಗಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿರುತ್ತಾರೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಣ್ಣ ಬುದ್ಧಿ ಹೇಳಿದ್ದಕ್ಕೆ ಮಗುವನ್ನು ಬರ್ಬರವಾಗಿ ಕೊಂದ ಚಿಕ್ಕಪ್ಪ
ಮಿಗಿಲಾಗಿ ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ಅರಣ್ಯದೊಳಗೆ ಸಾಕು ಪ್ರಾಣಿಗಳನ್ನು ಮೇಯಿಸುವುದರ ವಿರುದ್ಧ ನೀಡಿದ ತೀರ್ಪಿನ ಬಳಿಕ, ನೆರೆಯ ರಾಜ್ಯದಿಂದಲೂ ನಮ್ಮ ರಾಜ್ಯಕ್ಕೆ ದನಕರುಗಳನ್ನು ತಂದು ಕಾಡಿನಲ್ಲಿ ಮೇಯಿಸಲಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದ ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅರಣ್ಯ ಪ್ರದೇಶದೊಳಗೆ ಸಾಕು ಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: ಶೀಘ್ರವೇ ಧರ್ಮಸ್ಥಳ ಪ್ರಕರಣಗಳ ತನಿಖೆ ಆರಂಭ; ಎಸ್‌ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ: ಪರಮೇಶ್ವರ್
ಬೆಂಗಳೂರು/ಬಳ್ಳಾರಿ: ಮಾಜಿ ಉಪಸಭಾಪತಿ, ಹಿರಿಯ ವಕೀಲರು, ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಹಿರಿಯ ಮುತ್ಸದ್ದಿ ಎನ್.ತಿಪ್ಪಣ್ಣ (N.Thippanna) ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು (ಜು.11) ಬೆಳಿಗ್ಗೆ 5 ಗಂಟೆ ಸುಮಾರಿಗೆ ಬಳ್ಳಾರಿಯ (Ballary) ಗಾಂಧಿನಗರದ (Gandhi Nagar) ನಿವಾಸದಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಎರಡು ಬಾರಿ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಅನುಭವಿ ಹಿರಿಯ ನ್ಯಾಯವಾದಿ, ಸಮಾಜ ಸೇವಕರಾಗಿ ಸಾಕಷ್ಟು ಹೆಸರು ಮಾಡಿದ್ದರು. ಇಂದು ಬಳ್ಳಾರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶನಿವಾರ ತಿಪ್ಪಣ್ಣ ಅವರ ಸ್ವಗ್ರಾಮ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಬಸ್ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ
-ಡಾ.ಎನ್.ತಿಪ್ಪಣ್ಣ ನಿಧನಕ್ಕೆ ಈಶ್ವರ ಖಂಡ್ರೆ ಸಂತಾಪ:
ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದ ತಿಪ್ಪಣ್ಣನವರು ನಮ್ಮ ತಂದೆ ಶತಾಯುಷಿ ಭೀಮಣ್ಣ ಖಂಡ್ರೆ ಅವರೊಂದಿಗೆ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ್ದರು. ಬಸವಾದಿ ಪ್ರಮಥರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪಾಲಿಸುತ್ತಿದ್ದ ಅವರು ಸಾವಿರಾರು ವಿದ್ಯಾರ್ಥಿಗಳ ಅನ್ನದಾಸೋಹ, ಜ್ಞಾನದಾಸೋಹಕ್ಕೆ ನೆರವಾಗಿದ್ದರು ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ನಮ್ಮ ಮಾರ್ಗದರ್ಶಕರೂ, ವೀರಶೈವ ಲಿಂಗಾಯತ ಸಮುದಾಯದ ಹಿರಿಯರಾಗಿದ್ದ ಶ್ರೀ ಎನ್. ತಿಪ್ಪಣ್ಣನವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ನಮ್ಮ ತಂದೆ ಶತಾಯುಷಿ ಶ್ರೀ ಭೀಮಣ್ಣ ಖಂಡ್ರೆ ಅವರೊಂದಿಗೆ ತಿಪ್ಪಣ್ಣನವರು ಸಮಾಜದ ಅಭ್ಯುದಯಕ್ಕೆ ನೀಡಿರುವ ಕೊಡುಗೆ ಅಪಾರವಾದ್ದು.
ಹಿರಿಯ ನ್ಯಾಯವಾದಿಗಳಾಗಿ, ಸಾರ್ವಜನಿಕ ಅಭಿಯೋಜಕರಾಗಿ, ವಕೀಲರ ಪರಿಷತ್ತಿನ… pic.twitter.com/Jjaw69NyG5
ಹಿರಿಯ ನ್ಯಾಯವಾದಿಗಳಾಗಿ, ಸಾರ್ವಜನಿಕ ಅಭಿಯೋಜಕರಾಗಿ, ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ, ಉಪಸಭಾಪತಿಗಳಾಗಿ ನಾನಾ ಕ್ಷೇತ್ರದಲ್ಲಿ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅನುಪಮವಾದ್ದು. ಎಲ್ಲ ಕ್ಷೇತ್ರದಲ್ಲೂ ಅವರು ತಮ್ಮದೇ ಛಾಪು ಮೂಡಿಸಿದ್ದರು. ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಾಗಿದ್ದ ತಿಪ್ಪಣ್ಣನವರ ಆತ್ಮಕ್ಕೆ ಈಶ್ವರ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಂಧು ಮಿತ್ರರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪದಲ್ಲಿ ಸೂಚಿಸಿದ್ದಾರೆ.ಇದನ್ನೂ ಓದಿ: ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್ ರಾಯ್ಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಕನ್ನಡತಿ
ಬೆಂಗಳೂರು: ಆಧುನಿಕ ಕರ್ನಾಟಕ, ಆಧುನಿಕ ಭಾರತ ನಿರ್ಮಾಣಕ್ಕೆ ವೀರಶೈವ ಲಿಂಗಾಯತ ಸಮುದಾಯದ ಕೊಡುಗೆ ಅಪಾರವಾದದ್ದು ಎಂದು ಅರಣ್ಯ, ಜೀವಿಶಾಸ್ತ್ರಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿಂದು ಕರ್ನಾಟಕ ವೀರಶೈವ ಲಿಂಗಾಯತ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಜಾತಿ, ಧರ್ಮದವರಿಗೂ ಆಶ್ರಯ, ಅನ್ನ, ಅಕ್ಷರದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ವೀರಶೈವ ಲಿಂಗಾಯತ ಮಠ ಮಾನ್ಯಗಳಿಗೆ ಸಲ್ಲುತ್ತದೆ ಎಂದರು.ಇದನ್ನೂ ಓದಿ: ಮಕ್ಕಳ ಕಾಲೇಜು ಫೀಸ್‌ಗೆ ಸಾಲ ಮಾಡಿ ತಂದಿಟ್ಟ ಹಣವನ್ನೇ ದೋಚಿದ ಖದೀಮರು
ವಿದ್ಯಾವಂತ ಮತ್ತು ಗುಣವಂತ ನಾಗರಿಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ನಮ್ಮ ಸಮಾಜದ ಮಠ, ಮಾನ್ಯಗಳ ಕೊಡುಗೆಯಿಂದ ಇಂದು ಕೋಟ್ಯಂತರ ಜನರು ವಿದ್ಯಾವಂತರಾಗಿದ್ದಾರೆ. ಉನ್ನತ ಹುದ್ದೆ ಅಲಂಕರಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಮೇಲ್ವರ್ಗದ ಸಮುದಾಯವಾದರೂ ನಮ್ಮಲ್ಲಿಯೂ ಕಡು ಬಡವರಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅವರೆಲ್ಲರೂ ಸಬಲರಾಗಬೇಕು. ಬಡತನದಿಂದ ಹೊರಬರಬೇಕು ಇದಕ್ಕಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶ್ರಮಿಸುತ್ತಿದೆ ಎಂದರು.
ನಮ್ಮ ರಾಜ್ಯದಲ್ಲಿ 7 ಕೋಟಿಗೂ ಅಧಿಕ ಜನರಿದ್ದಾರೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಇಡೀ ರಾಜ್ಯದಲ್ಲಿ 6.5 ಲಕ್ಷ ಸರ್ಕಾರಿ, ಅರೆಸರ್ಕಾರಿ ಸಿಬ್ಬಂದಿ ಇರಬಹುದು. ನೀವು ಅದೃಷ್ಟವಂತರು. ನೀವೆಲ್ಲರೂ ಸಮಾಜದ ಪ್ರತಿಭಾವಂತರ ಉನ್ನತ ವ್ಯಾಸಂಗಕ್ಕೆ ಶೇ.1ರಷ್ಟು ನಿಮ್ಮ ಆದಾಯ ವಿನಿಯೋಗಿಸಿ ಎಂದು ಕಿವಿ ಮಾತು ಹೇಳಿದರು.
ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು ದೇಶ ನಿನಗೇನು ಕೊಟ್ಟಿದೆ ಎಂದು ಕೇಳಬೇಡ. ದೇಶಕ್ಕೆ ನೀನು ಏನು ಕೊಟ್ಟಿದ್ದೀಯಾ ಎಂದು ನಿನ್ನನ್ನೇ ಕೇಳಿಕೋ ಎಂದು ಹೇಳುತ್ತಿದ್ದರು. ಅದೇ ರೀತಿ ಸಮಾಜ ನಿಮಗೆ ಎಲ್ಲ ನೀಡಿದೆ. ನೀವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಎಂದು ತಿಳಿಸಿದರು. ಸಮಾರಂಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಘದ ರವಿ ತಿರ್ಲಾಪುರ ಮತ್ತಿತರರು ಪಾಲ್ಗೊಂಡಿದ್ದರು.ಇದನ್ನೂ ಓದಿ: ಹೊಸ ದಾಖಲೆಗೆ ಸಿದ್ಧವಾಗ್ತಿದೆ ಕೆಆರ್‌ಎಸ್ – ಡ್ಯಾಂ ಸಂಪೂರ್ಣ ಭರ್ತಿಗೆ 5 ಅಡಿ ಬಾಕಿ
ಬೆಂಗಳೂರು: ಗಾಳಿ, ಮಳೆಗ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿಹಾನಿ ಆಗುತ್ತಿದೆ. ಹೀಗಾಗಿ ಅಪಾಯಕಾರಿ ವೃಕ್ಷಗಳನ್ನು ಗುರುತಿಸಿ ಕೊಂಬೆಗಳನ್ನು ಕತ್ತರಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಮಳೆ, ಗಾಳಿಗೆ ಟೊಳ್ಳು ಮರಗಳು ಮತ್ತು ಬೇರು ಕಚ್ಚದ ಮರಗಳು ಧರಾಶಾಯಿ ಆಗುತ್ತವೆ. ಇದಕ್ಕೆ ಕಾರಣ ಬೇರಿಗೆ ನೀರು ಇಳಿಯದಂತೆ ಹಾಕಲಾಗಿರುವ ಕಾಂಕ್ರೀಟ್, ಕಲ್ಲಿನ ಚಪ್ಪಡಿ, ಟೈಲ್ಸ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವೂ ತೀರ್ಪು ನೀಡಿದ್ದು, ಸರ್ಕಾರ ಈ ಸಂಬಂಧ ಅಧಿಕೃತ ಆದೇಶವನ್ನೇ ಹೊರಡಿಸಿದೆ. ಗುರುವಾರ ಬಿಬಿಎಂಪಿ ವಿಶೇಷ ಆಯುಕ್ತರು ಮರದ ಸುತ್ತ ಇರುವ ಕಾಂಕ್ರೀಟ್ ತೆರವಿಗೆ ಆದೇಶ ಮಾಡಿದ್ದು, ಇನ್ನು ಮುಂದೆ ರಸ್ತೆಬದಿ ಸಸಿ ನೆಡುವಾಗ ಒಂದು ಮೀಟರ್ ಸುತ್ತಳತೆಯಲ್ಲಿ ಮಣ್ಣು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಬಿಎಂಪಿ ಮತ್ತು ರಾಜ್ಯದ ಎಲ್ಲ ನಗರಗಳ ಸ್ಥಳೀಯ ಸಂಸ್ಥೆಗಳು ಮತ್ತು ಹೆದ್ದಾರಿ ಪ್ರಾಧಿಕಾರ, ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಈಗಾಗಲೇ ನೆಟ್ಟಿರುವ ಗಿಡ, ಮರಗಳ ಸುತ್ತ ಇರುವ ಕಾಂಕ್ರೀಟ್, ಡಾಂಬರು ತೆರವಿಗೆ ಕ್ರಮ ವಹಿಸಬೇಕು. ವೃಕ್ಷ ಪ್ರಾಧಿಕಾರ (ಟ್ರಿ-ಅಥಾರಿಟಿ) ಸಭೆಗಳನ್ನು ನಿಯಮಿತವಾಗಿ ನಡೆಸಿ, ಅಪಾಯಕಾರಿ ಮರಗಳನ್ನು ಗುರುತಿಸಿ, ಅವುಗಳ ರೆಂಬೆ, ಕೊಂಬೆ ತೆರವಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಒಬ್ಬ ಮನುಷ್ಯ ನೆಮ್ಮದಿಯಿಂದ ಉಸಿರಾಡಲು 7 ಮರ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಇಂದು ಬೆಂಗಳೂರು ಕಾಂಕ್ರೀಟ್ ಕಾಡಾಗಿದ್ದು, ಇಲ್ಲಿ 7 ಜನರಿಗೆ 1 ಮರವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ವೃಕ್ಷ ಸಂರಕ್ಷಣೆ ಮತ್ತು ಸಂವರ್ಧನೆಗೆ ಮುಂದಾಗಬೇಕು ಎಂದರು.ಇದನ್ನೂ ಓದಿ: ಒಂದೇ ದಿನ 8 ಏರ್ ಇಂಡಿಯಾ ವಿಮಾನ ಹಾರಾಟ ರದ್ದು, 16 ಅಂತಾರಾಷ್ಟ್ರೀಯ ಮಾರ್ಗಗಳು ಬಂದ್
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್‌ನ ಪ್ರಾಯೋಗಿಕ ಸಂಚಾರಕ್ಕೆ ವಿಕಾಸಸೌಧದಿಂದ ವರ್ಚುವಲ್ ಮೂಲಕ ಚಾಲನೆ ನೀಡಲಾಯಿತು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಮುಂದಿನ 4-5 ತಿಂಗಳಲ್ಲಿ ಹಂಟಿಂಗ್ ಚೀತಾ, ಕ್ಯಾಪಚಿನ್ ಕೋತಿಯನ್ನು ದಕ್ಷಿಣ ಅಮೆರಿಕದಿಂದ ವಿನಿಮಯ ಮಾಡಿಕೊಳ್ಳಲಾಗುವುದು. ಮುಂದಿನ ವರ್ಷ ಚಿಂಪಾಂಜಿ, ಜಾಗ್ವಾರ್, ಪೂಮಾ (ಉತ್ತರ ಅಮೆರಿಕ ಸಿಂಹ) ಸೇರಿದಂತೆ ಒಟ್ಟು 10 ವಿದೇಶಿ ವನ್ಯಜೀವಿಗಳು ಬನ್ನೇರುಘಟ್ಟಕ್ಕೆ ಆಗಮಿಸಲಿವೆ ಎಂದು ತಿಳಿಸಿದರು.
ಬನ್ನೇರುಘಟ್ಟದಲ್ಲಿ ಸೀಮಿತ ಆವರಣ ಪ್ರದೇಶದೊಳಗೆ ರೂಪಿಸಿರುವ ವನ್ಯಜೀವಿ ಸಫಾರಿಯಲ್ಲಿ ಹುಲಿ, ಚಿರತೆ, ಸಿಂಹ, ಕರಡಿಗಳ ದರ್ಶನ ಪ್ರವಾಸಿಗರಿಗೆ ನಿಶ್ಚಿತವಾಗಿ ಆಗುತ್ತದೆ. ಈ ಸಫಾರಿಗಳಿಗೆ ಪ್ರಸ್ತುತ ಡೀಸೆಲ್ ವಾಹನಗಳನ್ನು ಬಳಸಲಾಗುತ್ತಿದ್ದು, ಈ ವಾಹನಗಳಿಂದ ಹೊರಹೊಮ್ಮುವ ಇಂಗಾಲದ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ದೇಶದಲ್ಲೇ ವಿದ್ಯುತ್ ಚಾಲಿತ ವಾಹನ ಪರಿಚಯಿಸಲಾಗುತ್ತಿದೆ ಎಂದರು.
ಬಸ್ ವಿಶೇಷತೆ ಏನು?
ವಿದ್ಯುತ್ ಚಾಲಿತ ಬಸ್, 22 ಆಸನಗಳನ್ನು ಹೊಂದಿದ್ದು, 100 ಕೆ.ವಿ. ಬ್ಯಾಟರಿ ಸಾಮರ್ಥ್ಯದ್ದಾಗಿದೆ. 2 ಗಂಟೆ ಚಾರ್ಜ್ ಮಾಡಿದರೆ 160 ಕಿ.ಮೀ. ಅಂದರೆ 8 ಟ್ರಿಪ್ ಸಂಚರಿಸಲಿದೆ. ಹಾಲಿ ಒಂದು ಬಸ್ ಮಾತ್ರವೇ ಕಾರ್ಯಾರಂಭ ಮಾಡಲಿದ್ದು, 2027 ರೊಳಗೆ ಬನ್ನೇರುಘಟ್ಟ ಉದ್ಯಾನವನ್ನು (ಟ್ರ್ಯಾಕ್ಟರ್ ಇತ್ಯಾದಿ ಉಪಯೋಗಿ ವಾಹನ ಹೊರತುಪಡಿಸಿ) ಪಳೆಯುಳಿಕೆ ಇಂಧನ ರಹಿತ ವಾಹನ ವಲಯವಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಬನ್ನೇರುಘಟ್ಟ ಮೃಗಾಲಯ ಮತ್ತು ಸಫಾರಿ ವೀಕ್ಷಣೆಗೆ ವಾರಂತ್ಯದಲ್ಲಿ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿ ಪ್ರಿಯರು ಮತ್ತು ಪ್ರವಾಸಿಗರು ಆಗಮಿಸುವ ಕಾರಣ, ಇಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ದಾಖಲೆಯ ಪ್ರವಾಸಿಗರ ಆಗಮನ
ಕಳೆದ ತಿಂಗಳು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸುಮಾರು 2,85,000 ಪ್ರವಾಸಿಗರು ಆಗಮಿಸಿದ್ದು, ಇದು ದಾಖಲೆಯಾಗಿದೆ. ಚಿರತೆ ಸಫಾರಿ ಈಗ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ ಎಂದರು. ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಇನ್ನು ಕೆಲವೇ ತಿಂಗಳುಗಳಲ್ಲಿ ಚಿಂಪಾಜಿ, ಬೇಟೆ ಚೀತಾ, ಜಾಗ್ವಾರ್ ಸೇರಿದಂತೆ 10 ವಿದೇಶೀ ವನ್ಯಜೀವಿಗಳ ಸೇರ್ಪಡೆ ಆಗಲಿದೆ ಎಂದು ತಿಳಿಸಿದರು.
ಬೃಹತ್ ಮತ್ಯಾಗಾರ ನಿರ್ಮಾಣ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೊಂದು ಆಕರ್ಷಣೆಯಾಗಿ ಬೃಹತ್ ಮತ್ಸ್ಯಾಗಾರ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಟೆಂಡರ್ ಕರೆಯಲಾಗುವುದು. ಬನ್ನೇರುಘಟ್ಟ ಉದ್ಯಾನದ ವ್ಯಾಪ್ತಿಯಲ್ಲಿ 7 ಕೆರೆಗಳಿವೆ. ಜೊತೆಗೆ ಈಗ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಪ್ರಾಣಿಗಳಿಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದಲೂ ನೀರು ಪಡೆಯಲಾಗುತ್ತಿದ್ದು, ಮತ್ಯಾಗಾರಕ್ಕೆ ನೀರಿನ ಕೊರತೆ ಇರುವುದಿಲ್ಲ ಎಂದೂ ತಿಳಿಸಿದರು.
ಜೀಬ್ರಾ ಸಾವಿನ ಬಗ್ಗೆ ತನಿಖೆಗೆ ಆದೇಶ
ಇತ್ತೀಚೆಗೆ ಬನ್ನೇರುಘಟ್ಟ ಉದ್ಯಾನದಲ್ಲಿ ಜೀಬ್ರಾ ಮತ್ತು ನೀಲಗಾಯ್ ಸಾವಿಗೀಡಾಗಿರುವುದು ಅತ್ಯಂತ ನೋವಿನ ಸಂಗತಿ. ಈ ಬಗ್ಗೆ ತನಿಖೆ ಮಾಡಿ ವರದಿ ನೀಡಲು ಸಿಸಿಎಫ್ ಅವರಿಗೆ ತಿಳಿಸಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇನ್ಮುಂದೆ ಮೃಗಾಲಯದಲ್ಲಿ ಮತ್ತು ಜೈವಿಕವನದಲ್ಲಿ ಯಾವುದೇ ವನ್ಯಜೀವಿ ಅಸಹಜವಾಗಿ ಸಾವನ್ನಪ್ಪದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗ ಗುಲ್ಬರ್ಗಾದಲ್ಲಿ ನೂತನವಾಗಿ ಮೃಗಾಲಯ ನಿರ್ಮಿಸಲಾಗುತ್ತಿದ್ದು, ಬರುವ ಡಿಸೆಂಬರ್ ಹೊತ್ತಿಗೆ ಸಿದ್ಧವಾಗಲಿದೆ ಎಂದರು.
ಕಲಬುರಗಿ: ಅಹಮದಾಬಾದ್ ವಿಮಾನ ದುರಂತ (Ahmedabad Plane Crash) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಮಾನಯಾನ ಖಾತೆ ಸಚಿವ ರಾಮ ಮೋಹನ್ ನಾಯ್ಡು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಚಿವ ಈಶ್ವರ ಖಂಡ್ರೆ (Eshwara Khandre) ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಮಾನ ದುರಂತಕ್ಕೆ ಕೇಂದ್ರ ಸರ್ಕಾರ ಹೊಣೆ ಹೊತ್ತು ಕೂಡಲೇ ಕೇಂದ್ರ ವಿಮಾನಯಾನ ಸಚಿವರು ರಾಜೀನಾಮೆ ನೀಡಬೇಕು. ಇದು ಒಂದು ಅತಿದೊಡ್ಡ ದುರಂತವಾಗಿದೆ. ಅತ್ಯಂತ ನೋವಿನ ಸಂಗತಿಯಾಗಿದೆ. ಇಂತಹ ದುರಂತ ನಡೆಯದಂತೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ವಿಮಾನ ದುರಂತ ಬೆನ್ನಲ್ಲೇ ಥೈಲ್ಯಾಂಡಲ್ಲಿ ಏರ್ ಇಂಡಿಯಾ ತುರ್ತು ಭೂಸ್ಪರ್ಶ
ಈ ದುರಂತದ ಬಗ್ಗೆ ನಿಷ್ಪಕ್ಷಪಾತ ತನಿಖೆ ಕೈಗೊಂಡು ವರದಿ ಜನರ ಮುಂದೆ ಇಡಬೇಕು. ಆರ್‌ಸಿಬಿ ಗೆಲುವಿನ ಸಂಭ್ರಮದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೇಳುವವರು ಕುಂಭಮೇಳದ ಕಾಲ್ತುಳಿತಕ್ಕೂ ರಾಜೀನಾಮೆ ಕೇಳಬೇಕು. ಸಾವಿನಲ್ಲಿ ರಾಜಕೀಯ ಮಾಡಬಾರದು ಬಿಜೆಪಿಗೆ ಟಾಂಗ್ ಕೊಟ್ಟರು.
ದುರಂತದ ಬೆನ್ನಲ್ಲೇ ಟಾಟಾ ಸಮೂಹ ಪ್ರತಿ ಮೃತ ವ್ಯಕ್ತಿಯ ಸಂತ್ರಸ್ತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದೆ. ಹಾಗಂತ ಸಂತ್ರಸ್ತ ಕುಟುಂಬಗಳಿಗೆ ಇಂತಹ ದುರಂತದ ಬಳಿಕ ಎಷ್ಟೇ ಕೋಟಿ ಕೊಟ್ಟರೂ ಕಡಿಮೆ ಎಂದರು. ಇದನ್ನೂ ಓದಿ:
ಬೆಂಗಳೂರು: ಚಾಮರಾಜನಗರ (Chamarajanagar) ತಾಲೂಕು ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ (55) ಮೃತಪಟ್ಟಿರುವ ಬಗ್ಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwara Khandre) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ ಇದೇ ಹಾಡಿಯಲ್ಲಿ ರವಿ ಎಂಬುವವರ ಮೇಲೆ ಹುಲಿ (Tiger) ದಾಳಿ ಮಾಡಿತ್ತು, ರವಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಇಂದು ಬೆಳಗ್ಗೆ ಮಹಿಳೆ ರಂಗಮ್ಮ ಬಹಿರ್ದೆಸೆಗೆ ಹೋಗಿದ್ದಾಗ ಹುಲಿ ದಾಳಿ ಮಾಡಿದ್ದು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಮನುಷ್ಯರ ರಕ್ತದ ರುಚಿ ಕಂಡ ಹುಲಿ ಅಪಾಯಕಾರಿ, ಹೀಗಾಗಿ ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸುವಂತೆ ಸೂಚಿಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹುಲಿಯನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಜನಸಂಖ್ಯೆ 146 ಕೋಟಿ – ಮಹಿಳೆಯರಲ್ಲಿ ಕುಸಿಯುತ್ತಿದೆ ಸಂತಾನೋತ್ಪತ್ತಿ
ಹುಲಿ ದಾಳಿಯಿಂದ ಗಾಯಗೊಂಡಿರುವ ರವಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿರುವ ಸಚಿವರು, ಮೃತ ರಂಗಮ್ಮ ಅವರ ಕುಟುಂಬದ ಸದಸ್ಯರಿಗೆ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ, ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
ರವಿ ಅವರ ಚಿಕಿತ್ಸಾ ವೆಚ್ಚ ಭರಿಸಲು ಮತ್ತು ಮೃತರ ಹತ್ತಿರದ ಬಂಧುಗಳಿಗೆ ಪರಿಹಾರದ ಮೊತ್ತ ವಿತರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿರುವ ಈಶ್ವರ ಖಂಡ್ರೆ, ಕಾಡಿನಂಚಿನ ಜನರು ರಾತ್ರಿಯ ವೇಳೆ ಮತ್ತು ಮುಂಜಾನೆ ವನ ಪ್ರದೇಶದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು: ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು (Plastic Water Bottles) ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ (Eshwar Khandre), ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ನೀರಿನ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಸೂಚನೆ ನೀಡಿದ್ದಾರೆ.
ತತ್ಸಂಬಂಧ ನಿಯಮ ರೂಪಿಸಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಅವರು, ಬಾಟಲಿಗಳ ಮೂಲಕ ಕುಡಿಯುವ ನೀರನ್ನು ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಯ ಜವಾಬ್ದಾರಿಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ಕನಿಷ್ಠ ದರ ನೀಡಿ ಮರಳಿ ಖರೀದಿಸುವಂತೆ ನಿಯಮ ರೂಪಿಸಿದಲ್ಲಿ ಪ್ಲಾಸ್ಟಿಕ್ ಬಾಟಲಿಯ ಹಾವಳಿ ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಐಪಿಎಲ್ 10 ಸೆಕೆಂಡ್ ಜಾಹೀರಾತಿಗೆ ಲಕ್ಷ ಲಕ್ಷ – 4,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಜಿಯೋಸ್ಟಾರ್
ಮಣ್ಣಲ್ಲಿ ಮಣ್ಣಾಗದ, ನೀರಿನಲ್ಲಿ ಕರಗದ, ಸುಟ್ಟರೆ ಪ್ರಾಣವಾಯುವಿಗೆ ವಿಷಕಾರಿ ಅಂಶಗಳನ್ನು ಸೇರ್ಪಡೆ ಮಾಡುವ ಪ್ಲಾಸ್ಟಿಕ್ ಪ್ರಕೃತಿ ಪರಿಸರಕ್ಕೆ ಅಷ್ಟೇ ಅಲ್ಲದೆ ಜನ, ಜಾನುವಾರಗಳ ಆರೋಗ್ಯಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ, ಬಳಕೆಯನ್ನು ನಿಷೇಧಿಸಿದ್ದು, ರಾಜ್ಯ ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ರೂಪಿಸಿದೆ. ಆದಾಗ್ಯೂ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಪರಿಸರಕ್ಕೆ ಹಾನಿ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Karnataka Bandh| ಮೈಸೂರಲ್ಲಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ
ಮೊದಲಿಗೆ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದು ಪರಿಸರ ಹಾಳು ಮಾಡುತ್ತಿರುವ, ಖನಿಜಯುಕ್ತ ನೀರಿನ ಬಾಟಲಿಗೆ (Mineral Water Bottles) ಕಡಿವಾಣ ಹಾಕಬೇಕಾಗಿದೆ. ಹೊಸ ನೀರಿನ ಬಾಟಲಿ ಖರೀದಿಸಲು ಬರುವ ಗ್ರಾಹಕರಿಂದ ಬಾಟಲಿ ನೀರು ಮಾರುವ ಚಿಲ್ಲರೆ ಮಳಿಗೆಗಳು ಯಾವುದೇ ಕಂಪನಿಯ ನೀರಿನ ಬಾಟಲಿ ನೀಡಿದರೂ ಅದಕ್ಕೆ ಕನಿಷ್ಠ ಬೆಲೆ ನೀಡಿ/ಅಷ್ಟು ದರ ಕಡಿತ ಮಾಡಿ ಹೊಸ ಬಾಟಲಿ ಮಾರಾಟ ಮಾಡುವಂತೆ ಮತ್ತು ಈ ರೀತಿ ಸಂಗ್ರಹಿಸಲಾದ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್ ಕೃತಜ್ಞತೆ
ಉತ್ಪಾದಕರ ವಿಸ್ತರಿತ ಜವಾಬ್ದಾರಿಯಂತೆ ಯಾವುದೇ ಉತ್ಪನ್ನವನ್ನು ತಯಾರಿಸುವವರು, ತಮ್ಮ ಉತ್ಪನ್ನಗಳಿಂದ ಪರಿಸರ ಮೇಲಾಗುವ ಪರಿಣಾಮಗಳನ್ನು ಉತ್ಪನ್ನವು ಗ್ರಾಹಕರ ಕೈಸೇರಿದ ನಂತರವೂ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಮರು ಖರೀದಿ ಮಾಡಿ ವಿಲೇವಾರಿ ಮಾಡಿದಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸಬಹುದು ಎಂಬುದು ಈಶ್ವರ ಖಂಡ್ರೆ ಅವರ ಅಭಿಮತವಾಗಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಎಫೆಕ್ಟ್ – ಸ್ಯಾಟಲೈಟ್, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ