Tag: ಈರುಳ್ಳಿ

  • ಲಾರಿ ಪಲ್ಟಿಯಾಗಿ ಜನ ಈರುಳ್ಳಿ ಹೊತ್ತೊಯ್ದರು ಎಂದ- 7.16 ಲಕ್ಷ ಮೌಲ್ಯದ ಈರುಳ್ಳಿ ಕದ್ದ ಚಾಲಕ

    ಲಾರಿ ಪಲ್ಟಿಯಾಗಿ ಜನ ಈರುಳ್ಳಿ ಹೊತ್ತೊಯ್ದರು ಎಂದ- 7.16 ಲಕ್ಷ ಮೌಲ್ಯದ ಈರುಳ್ಳಿ ಕದ್ದ ಚಾಲಕ

    ತುಮಕೂರು: ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು ಅದನ್ನು ಕದಿಯುವ ಕಳ್ಳರ ಹಾವಳಿ ಕೂಡ ಹೆಚ್ಚಾಗುತ್ತಿದೆ. ತುಮಕೂರಿನಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಚಾಲಕನೇ ಮಾಲೀಕನಿಗೆ ಯಾಮಾರಿಸಿ ಈರುಳ್ಳಿ ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.

    ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯ ಯರಗುಂಟೇಶ್ವರ ನಗರದ ಬಳಿ ಈ ಘಟನೆ ನಡೆದಿದೆ. ಆನಂದಕುಮಾರ್ ಎಂಬವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಚ್ಚವನಹಳ್ಳಿಯಿಂದ ಸುಮಾರು 10 ಕ್ವಿಂಟಾಲ್ ಈರುಳ್ಳಿಯನ್ನು ಚೆನ್ನೈನ ಮೋರ್ ವೆಲ್ ಕಂಪನಿಗೆ ಲಾರಿಯಲ್ಲಿ ಲೋಡ್ ಮಾಡಿ ಕಳುಹಿಸಿದ್ದರು. ಈ ಈರುಳ್ಳಿಗಳನ್ನು 183 ಚೀಲಗಳಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಇದನ್ನೂ ಓದಿ: ಈರುಳ್ಳಿ ತುಂಬಿದ್ದ ಲಾರಿಯೇ ಮಾಯ – ಬರೋಬ್ಬರಿ 20 ಲಕ್ಷ ರೂ. ಈರುಳ್ಳಿ ಲೂಟಿ

    ಯರಗುಂಟೇಶ್ವರ ನಗರದ ಬಳಿ ಲಾರಿ ಅಪಘಾತಕ್ಕೀಡಾಗಿ ಮುಗುಚಿ ಬಿದ್ದು ಈರುಳ್ಳಿಯನ್ನ ಜನರು ಹೊತ್ತೋಯ್ದಿದ್ದಾರೆ. ನನಗೂ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಲಾರಿ ಚಾಲಕ ಚೇತನ್ ತನ್ನ ಮಾಲೀಕನಿಗೆ ಕರೆ ಮಾಡಿ ಬೇಗ ಸ್ಥಳಕ್ಕೆ ಬನ್ನಿ ಎಂದು ಸುಳ್ಳು ಹೇಳಿದ್ದಾನೆ. ಬಳಿಕ ಹಿರಿಯೂರು ತಾಲೂಕಿನ ಕಸ್ತೂರಿರಂಗನ್ ಬಳಿಯ ಗೊಲ್ಲಡಕು ಬಳಿ ಮಾರ್ಗ ಮಧ್ಯೆಯೇ 80 ಚೀಲ ಈರುಳ್ಳಿಯನ್ನು ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ಜಮೀನಿನಲ್ಲಿ ಬೆಳೆದಿದ್ದ ಸುಮಾರು 40 ಮೂಟೆಯಷ್ಟು ಈರುಳ್ಳಿ ರಾತ್ರೋರಾತ್ರಿ ಕಳ್ಳತನ

    ಆದರೆ ಈರುಳ್ಳಿ ಮಾಲೀಕ ಆನಂದ್‍ಕುಮಾರ್ ಸ್ಥಳಕ್ಕೆ ಬಂದು ನೋಡಿದಾಗ ಲಾರಿಯನ್ನ ಉದ್ದೇಶಪೂರ್ವಕವಾಗಿ ಪಲ್ಟಿ ಮಾಡಿದ ರೀತಿ ಕಂಡುಬಂತು. ಹಾಗಾಗಿ ತಾವರೆಕೆರೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಕ್ಷಣ ಕಾರ್ಯ ಪ್ರವರ್ತರಾದ ಪೊಲೀಸರು ಖತರ್ನಾಕ್ ಪ್ಲಾನ್ ಮಾಡಿ ಈರುಳ್ಳಿ ಕದ್ದಿದ್ದ ಚಾಲಕ ಹಾಗೂ ಆತನ ಜೊತೆಗಿದ್ದ ಕ್ಲೀನರ್ ಸಂತೋಷ್, ಕದ್ದ ಮಾಲನ್ನು ಪಡೆದುಕೊಂಡಿದ್ದ ಬುಡೆನ್ ಸಾಬ್, ದಾದಾಫೀರ್ ಹಾಗೂ ಶೇಖ್ ಅಲಿಖಾನ್ ಅನ್ನು ಬಂಧಿಸಿದ್ದಾರೆ.

    ಸದ್ಯ ಈ ಕುರಿತು ಶಿರಾದ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾರಿ ಚಾಲಕ ಸೇರಿ ಒಟ್ಟು ಐವರನ್ನು ಬಂಧಿಸಿದ್ದಾರೆ. ಅಲ್ಲದೆ ಖದೀಮರು ಕದ್ದ ಈರುಳ್ಳಿಗಳನ್ನು ವಶಕ್ಕೆ ಪಡೆದುಕೊಂಡು ಮಾಲೀಕನಿಗೆ ತಲುಪಿಸಿದ್ದಾರೆ.

  • ಇನ್ನೂ ಎರಡು ತಿಂಗಳು ಕಣ್ಣೀರು ತರಿಸಲಿದೆ ಈರುಳ್ಳಿ

    ಇನ್ನೂ ಎರಡು ತಿಂಗಳು ಕಣ್ಣೀರು ತರಿಸಲಿದೆ ಈರುಳ್ಳಿ

    ಮಂಗಳೂರು: ಈರುಳ್ಳಿ ದರ ಏರಿಕೆಯಿಂದಾಗಿ ಜನ ಈಗಾಗಲೇ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಇನ್ನೂ ಎರಡು ತಿಂಗಳ ಕಾಲ ಇದೇ ರೀತಿ ಈರುಳ್ಳಿ ಖರೀದಿಸುವಾಗ ಗ್ರಾಹಕರು ಕಣ್ಣೀರು ಸುರಿಸಬೇಕಾಗ ಅನಿವಾರ್ಯತೆ ಎದುರಾಗಿದೆ.

    ಈರುಳ್ಳಿ ದರ ಇಳಿಯೋದಿಲ್ವಾ ಎಂದು ಕರಾವಳಿ ಜನ ಟೆನ್ಷನ್ ಆಗಿದ್ದಾರೆ. ಮಂಗಳೂರಿನಲ್ಲಿ ಈರುಳ್ಳಿ ದರ ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರತಿ ಕೇಜಿಗೆ 120 ಇದ್ದ ಈರುಳ್ಳಿ ದರ ಇದೀಗ 140ರಿಂದ 150 ರೂ.ಗೆ ಬಂದು ನಿಂತಿದೆ. ಈ ದರ ಇನ್ನೂ ಎರಡು ತಿಂಗಳ ಕಾಲ ಮುಂದುವರಿಯುತ್ತದೆ ಎನ್ನುವುದೇ ಕರಾವಳಿಗರಿಗೆ ತಲೆ ನೋವಾಗಿದೆ. ಇದನ್ನೂ ಓದಿ: ‘ಈರುಳ್ಳಿ ದರ ಏರಿಕೆ ಬಗ್ಗೆ ಯೋಚಿಸಿದ ಕೊಹ್ಲಿ, ಪೋಲಾರ್ಡ್’

    ಸಗಟು ವ್ಯಾಪಾರಿಗಳಿಗೆ ಈರುಳ್ಳಿ ಸಾಕಷ್ಟು ಪೂರೈಕೆಯಾಗದೆ ದರ ಹೆಚ್ಚಿದ್ದರೂ ಗ್ರಾಹಕರಿಗೆ ಬೇಕಾದಷ್ಟು ಈರುಳ್ಳಿ ಪೂರೈಸಲು ಸಾಧ್ಯವಾಗುತ್ತಿಲ್ಲ. ನಾನ್‍ವೆಜ್ ಪ್ರಿಯರಾದ ಕರಾವಳಿ ಮಂದಿಗೆ ನಿತ್ಯದ ಬಳಕೆಗೆ ಈರುಳ್ಳಿ ಅನಿವಾರ್ಯ ಆಗಿದ್ದು, ಪೂರೈಕೆ ಕಡಿಮೆಯಾದರೂ ಬಳಕೆ ಮಾಡದೇ ಬಿಡಲ್ಲ. ಹೀಗಾಗಿ ಬೆಲೆ ಜಾಸ್ತಿಯಾಗಿದ್ದರಿಂದ ಈರುಳ್ಳಿ ಖರೀದಿಯನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಕಳೆದ ವಾರದ ಹಿಂದೆ ಒಂದು ಕೆಜಿ ಈರುಳ್ಳಿಗೆ 100 ರೂಪಾಯಿ ಇತ್ತು. ಬಳಿಕ ಮೂರು ದಿನಗಳ ಹಿಂದೆ ಈರುಳ್ಳಿ ದರ, 120 ರೂ. ಆಗಿದ್ದು ಈಗ 140ಕ್ಕೆ ಏರಿಕೆಯಾಗಿದೆ. ಇದೇ ರೀತಿ ದಿನದಿಂದ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಇನ್ನೂ ಎರಡು ತಿಂಗಳ ಕಾಲ ಇದೇ ರೀತಿ ಇರಲಿದೆ ಎಂದು ಮಂಗಳೂರಿನ ಈರುಳ್ಳಿ ವ್ಯಾಪಾರಸ್ಥ ಸುರೇಶ್ ಹೇಳಿದ್ದಾರೆ.

    ಮಂಗಳೂರಿಗೆ ಮಹಾರಾಷ್ಟ್ರದ ಪೂನಾ, ಬೆಂಗಳೂರು, ಹಾಸನದಿಂದ ಈರುಳ್ಳಿ ಪೂರೈಕೆಯಾಗುತ್ತಿದ್ದು, ಇದನ್ನೇ ಅವಲಂಬಿಸಿ ವ್ಯಾಪಾರ ಮಾಡಬೇಕಾಗಿದೆ. ಇದೀಗ ಪೂರೈಕೆ ಕಡಿಮೆಯಾಗಿದ್ದರಿಂದ ವ್ಯಾಪಾರಸ್ಥರು ಈರುಳ್ಳಿ ಬೆಲೆ ಕಡಿಮೆ ಮಾಡುತ್ತಿಲ್ಲ.

    https://www.youtube.com/watch?v=bcPxJ_UqTCg

  • ಏಕಾಏಕಿ ಈರುಳ್ಳಿ ವ್ಯಾಪಾರ ಸ್ಥಗಿತ- ರೈತರಿಂದ ಪ್ರತಿಭಟನೆ

    ಏಕಾಏಕಿ ಈರುಳ್ಳಿ ವ್ಯಾಪಾರ ಸ್ಥಗಿತ- ರೈತರಿಂದ ಪ್ರತಿಭಟನೆ

    ರಾಯಚೂರು: ಈರುಳ್ಳಿ ಬೆಲೆ ಗೊಂದಲದಿಂದ ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು ಏಕಾಏಕಿ ವ್ಯಾಪಾರ ಸ್ಥಗಿತಗೊಂಡಿದೆ.

    ಮುನ್ಸೂಚನೆ ಇಲ್ಲದೆ ಏಕಾಏಕಿ ಈರುಳ್ಳಿ ಖರೀದಿ ಸ್ಥಗಿತಗೊಳಿಸಿದ್ದರಿಂದ ನೂರಾರು ರೈತರು ಎಪಿಎಂಸಿ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

    ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ಖರೀದಿದಾರರು ಟೆಂಡರ್ ಹಾಕಲು ಬಾರದೇ ಇರುವುದರಿಂದ ರೊಚ್ಚಿಗೆದ್ದ ಈರುಳ್ಳಿ ಬೆಳೆಗಾರರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈರುಳ್ಳಿ ಮಾರಾಟ ಮಾಡಲು ಬಂದ ರೈತರು ವಾಪಸ್ಸು ಹೋಗಲು ನಿರಾಕರಿಸಿ ಖರೀದಿದಾರರು ಟೆಂಡರ್ ಹಾಕುವವರೆಗೂ ಪ್ರತಿಭಟನೆ ಮಾಡುವುದಾಗಿ ಪಟ್ಟುಹಿಡಿದರು. ಕೊನೆಗೆ ಹೋರಾಟಕ್ಕೆ ಮಣಿದಿರುವ ಅಧಿಕಾರಿಗಳು ನಾಳೆ ಬೆಳಗ್ಗೆ 10 ಗಂಟೆಯಿಂದ ವ್ಯಾಪಾರ ಆರಂಭಿಸಲು ಖರೀದಿದಾರರಿಗೆ ಸೂಚಿಸಿದ್ದು, ವ್ಯಾಪಾರಕ್ಕೆ ಖರೀದಿದಾರರು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ

    ಶುಕ್ರವಾರ ಕ್ವಿಂಟಾಲ್ ಈರುಳ್ಳಿ 15 ಸಾವಿರ ರೂಪಾಯಿವರೆಗೆ ಮಾರಾಟವಾಗಿತ್ತು. ಈಗ ಬೆಲೆ ಇಳಿಕೆಯ ಲಕ್ಷಣಗಳು ಕಂಡಿದ್ದು ವ್ಯಾಪಾರಸ್ಥರು ಖರೀದಿಯಿಂದಲೇ ದೂರ ಉಳಿದಿದ್ದಾರೆ. ರಾಯಚೂರು ಎಪಿಎಂಸಿಯಿಂದ ಹೈದರಾಬಾದ್ ಹಾಗೂ ಚೆನೈಗೆ ಹೋದ ಲೋಡ್ ಗಳು ಬೇಡಿಕೆ ಕುಸಿದು ದಾರಿಯಲ್ಲೇ ನಿಂತಿರುವ ಕಾರಣ ಗೊಂದಲದಲ್ಲಿರುವ ವ್ಯಾಪಾರಸ್ಥರು ಖರೀದಿಗೆ ಹಿಂದೇಟು ಹಾಕಿದ್ದಾರೆ. ಅಲ್ಲದೆ ಹೊರದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ ಅಂತ ಭಾವಿಸಿ ವ್ಯಾಪಾರ ಸ್ಥಗಿತಗೊಳಿಸಿದ್ದರು.

    ನಾಳೆಯಿಂದ ಖರೀದಿ ಪ್ರಕ್ರಿಯೇ ಆರಂಭವಾಗುತ್ತೆ ಅಂತ ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಂಗನಾಥ್ ತಿಳಿಸಿದ್ದಾರೆ. ಅಧಿಕಾರಿಗಳ ಮನವೊಲಿಕೆಯಿಂದ ರೈತರು ಹೋರಾಟವನ್ನ ಹಿಂಪಡೆದಿದ್ದಾರೆ.

  • ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ

    ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ

    – ಬೆಂಗ್ಳೂರಿಗೆ ಬಂತು ಈಜಿಪ್ಟ್ ಈರುಳ್ಳಿ

    ಬೆಂಗಳೂರು: ದಿನೇ ದಿನೇ ದುಬಾರಿ ಆಗ್ತಿರೋ ಈರುಳ್ಳಿಯ ರೇಟ್ ಕೇಳಿ ಜನ ಸುಸ್ತಾಗಿದ್ದು, ಮುಂಬರುವ ದಿನಗಳಲ್ಲಿ ಕೆ.ಜಿ ಈರುಳ್ಳಿಗೆ 200 ರೂ.ದಾಟಲಿದೆ.

    ಹಾಪ್ ಕಾಮ್ಸ್ ನಲ್ಲಿ ಕೆ.ಜಿ ಈರುಳ್ಳಿಗೆ 160 ರೂಪಾಯಿ ಇದ್ದರೆ, ಶುಕ್ರವಾರದವರೆಗೂ ಕೆ.ಜಿ ಈರುಳ್ಳಿಗೆ 142 ರೂ ಇತ್ತು. ಎಪಿಎಂಸಿ ಯಾರ್ಡ್‍ನಲ್ಲೇ ಕೆ.ಜಿ ಫೈನ್ ಈರುಳ್ಳಿಗೆ 180 ರೂಪಾಯಿಗೆ ಏರಿಕೆಯಾಗಿದೆ.

    ಗದಗ, ಬಾಗಲಕೋಟೆಯಿಂದ ಟನ್ ಗಟ್ಟಲೆ ಈರುಳ್ಳಿಯನ್ನ ಲಾರಿಗೆ ರೈತರು ತುಂಬಿಸಿಕೊಂಡು ಬರುತ್ತಿದ್ದಾರೆ. ಆದರೆ ರೈತರಿಗೆ ಕ್ವಿಂಟಾಲ್ ಈರುಳ್ಳಿಗೆ ಸಿಗೋದು 8 ರಿಂದ 14 ಸಾವಿರ ಮಾತ್ರ. ಮಧ್ಯವರ್ತಿಗಳ ಹಾವಳಿಯಿಂದ ಅಂಗಡಿಗಳಲ್ಲಿ ಈರುಳ್ಳಿ ದರ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ.

    ಈರುಳ್ಳಿ ದರ ಏರಿಕೆಯಿಂದಾಗಿ ಜನರಲ್ಲಿ ಆತಂಕ ಮೂಡಿದ್ದು, 1-2 ಕೆ.ಜಿ ಈರುಳ್ಳಿ ತೆಗೆದುಕೊಳ್ಳುತ್ತಿರುವವರು, ಈಗ ಕಾಲು ಕೆಜಿ ಖರೀದಿಸುವ ಪರಸ್ಥಿತಿ ನಿರ್ಮಾಣವಾಗಿದೆ. ಈ ದರ ಹೆಚ್ಚಳ, ಹೋಟೆಲ್ ಉದ್ಯಮದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಸಣ್ಣ-ಪುಟ್ಟ ಹೋಟೆಲ್‍ಗಳು ಈಗಾಗಲೇ ನಷ್ಟ ಅನುಭವಿಸುತ್ತಿವೆ. ಬೆಂಗಳೂರು ನಗರಕ್ಕೆ ಈರುಳ್ಳಿ ಪೂರೈಕೆಯಲ್ಲಿ ಗಣನೀಯ ಕಡಿತವಾಗಿದೆ. ದಾವಣಗೆರೆ, ಗದಗ, ಹುಬ್ಬಳ್ಳಿಯಿಂದ ಈರುಳ್ಳಿ ಬರುತ್ತಿಲ್ಲ. ಇದರಿಂದ ನಗರದಲ್ಲಿ ಮುಂದಿನ ವಾರ ಈರುಳ್ಳಿ ಬೆಲೆ 200 ರೂ. ಗಡಿ ದಾಟಿದರೂ ಅಚ್ಚರಿ ಪಡಬೇಕಿಲ್ಲ. ಇದನ್ನೂ ಓದಿ: 500 ರೂ. ಫುಡ್ ಆರ್ಡರ್ ಮಾಡಿದ್ರೆ 1 ಕೆ.ಜಿ ಈರುಳ್ಳಿ ಉಚಿತ

    ಬೆಲೆ ಏರಿಕೆಗೆ ಕಾರಣಗಳೇನು?
    ನೆರೆಯಿಂದಾಗಿ ಕೆಲವು ಕಡೆಗಳಲ್ಲಿ ಈರುಳ್ಳಿ ಕೊಚ್ಚಿ ಹೋಗಿದೆ. ಮತ್ತೆ ಹಲವು ಕಡೆ ಮಳೆ ಕಡಿಮೆಯಾಗಿ ಈರುಳ್ಳಿ ಬೆಳೆ ಚೆನ್ನಾಗಿ ಬೆಳೆದಿಲ್ಲ. ಕರ್ನಾಟಕದ ಮಾರುಕಟ್ಟೆಗೆ ಇನ್ನೂ ಹೊಸ ಈರುಳ್ಳಿ ಎಂಟ್ರಿ ಕೊಟ್ಟಿಲ್ಲ. ಇದಲ್ಲದೆ ಈರುಳ್ಳಿ ಬೆಲೆ ಏರಿಕೆ ಡಿಸೆಂಬರ್ ಕೊನೆಯವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಬೆಂಗಳೂರಿಗೆ ಈಜಿಪ್ಟ್ ಈರುಳ್ಳಿ:
    ಅತ್ತ ಮಂಗಳೂರಿಗೆ ಟರ್ಕಿ ಈರುಳ್ಳಿ ಬಂದಿಳಿದಿದ್ದರೆ ಇತ್ತ ಸಿಲಿಕಾನ್ ಸಿಟಿಗೆ ಈಜಿಪ್ಟ್ ದೇಶದ ಈರುಳ್ಳಿ ಲಗ್ಗೆಯಿಟ್ಟಿದೆ. ನಗರದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈಜಿಪ್ಟ್ ನಿಂದ ಬೆಂಗಳೂರಿಗೆ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಕಡಲ ನಗರಿ ಮಂಗ್ಳೂರಿಗೆ ಬಂದಿಳಿಯಿತು ಟರ್ಕಿ ಈರುಳ್ಳಿ

    ಮುಂಜಾನೆಯೇ ಯಶವಂತಪುರದ ಈರುಳ್ಳಿ ಮಂಡಿಗೆ ಆಮದಾಗಿದ್ದು, ಈಜಿಪ್ಟ್ ಈರುಳ್ಳಿಗೆ ರೇಟ್ ಫಿಕ್ಸ್ ಮಾಡೋದಷ್ಟೇ ಬಾಕಿ ಇದೆ. ವಿದೇಶದ ಈರುಳ್ಳಿ ನೋಡಲು ವ್ಯಾಪಾರಿಗಳು ಮುಗಿಬಿದ್ದ ಪ್ರಸಂಗವೂ ನಡೆದಿದೆ. 50 ಟನ್ ಈರುಳ್ಳಿ ಆಮದಾಗಿದೆ. 110-120 ರೂಪಾಯಿ ಬೆಲೆ ಬಾಳುವ ಈರುಳ್ಳಿ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈರುಳ್ಳಿ ರೇಟ್‍ನಲ್ಲಿ ಇಳಿಕೆಯಾಗುವ ಸಾಧ್ಯತೆಗಳೂ ಇವೆ. ಇದನ್ನೂ ಓದಿ:  ಈರುಳ್ಳಿ ಬೆಲೆ ಏರಿಕೆಯಿಂದ ಸಾಲ ಮುಕ್ತರಾದ ರೈತರು

    https://www.youtube.com/watch?v=bcPxJ_UqTCg

  • ದರ ನಿಯಂತ್ರಣಕ್ಕೆ ಒತ್ತಾಯಿಸಿ ಹಗ್ಗಕ್ಕೆ ಈರುಳ್ಳಿ ಕಟ್ಟಿ ಪ್ರತಿಭಟನೆ

    ದರ ನಿಯಂತ್ರಣಕ್ಕೆ ಒತ್ತಾಯಿಸಿ ಹಗ್ಗಕ್ಕೆ ಈರುಳ್ಳಿ ಕಟ್ಟಿ ಪ್ರತಿಭಟನೆ

    ಮಂಗಳೂರು: ದುಬಾರಿ ಆಗುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಒತ್ತಾಯಿಸಿ ಹಳೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ನೇಣು ಹಗ್ಗಕ್ಕೆ ಈರುಳ್ಳಿ ಕಟ್ಟಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.

    ಈರುಳ್ಳಿ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಕಳೆದ ಒಂದು ತಿಂಗಳಿನಿಂದ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಪ್ರತಿನಿತ್ಯ 300ಟನ್ ಈರುಳ್ಳಿ ವಹಿವಾಟು ನಡೆಯುತ್ತಿದ್ದ ಮಂಗಳೂರು ಮಾರುಕಟ್ಟೆಯಲ್ಲಿ 10ಟನ್ ಈರುಳ್ಳಿ ಕೂಡ ವ್ಯಾಪಾರ ಆಗುತ್ತಿಲ್ಲ. ಇದು ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದೆ ಹೀಗಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಇದಕ್ಕೊಂದು ಪರಿಹಾರ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್ ಮಾತನಾಡುತ್ತ ದೇಶದಲ್ಲಿ ಮಾರುಕಟ್ಟೆ ಭಯೋತ್ಪಾದನೆ ಹೆಚ್ಚಾಗಿದೆ. ದಲ್ಲಾಳಿಗಳ ಲಾಭ ಕೋರತನದ ಕ್ರೌರ್ಯಕ್ಕೆ ದೇಶದ ಜನ ತತ್ತರಿಸಿ ಹೋಗುತ್ತಿದ್ದಾರೆ. ದೇಶವನ್ನು ಆಳುವ ಸರ್ಕಾರಕ್ಕೆ ಆಮದು ಮತ್ತು ರಫ್ತು ವಹಿವಾಟಿನ ಮೇಲೆ ನಿಯಂತ್ರಣ ಕಳೆದುಕೊಂಡಿರುವ ಪರಿಣಾಮವಾಗಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದನ್ನೂ ಓದಿ: ಕಡಲ ನಗರಿ ಮಂಗ್ಳೂರಿಗೆ ಬಂದಿಳಿಯಿತು ಟರ್ಕಿ ಈರುಳ್ಳಿ

    ಮಂಗಳೂರು ಮಾರುಕಟ್ಟೆಯಲ್ಲಿ ಗಂಟೆಗೊಂದು ಬೆಲೆಗೆ ಈರುಳ್ಳಿ ಮಾರಾಟ ಆಗುತ್ತಿದೆ. ಟರ್ಕಿ ಮತ್ತು ಈಜಿಪ್ಟ್ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಈರುಳ್ಳಿಯನ್ನು ದಲ್ಲಾಳಿಗಳು ಬೇಕಾಬಿಟ್ಟಿ ದರ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

  • ಈರುಳ್ಳಿ ಬೆಲೆ ಏರಿಕೆಯಿಂದ ಸಾಲ ಮುಕ್ತರಾದ ರೈತರು

    ಈರುಳ್ಳಿ ಬೆಲೆ ಏರಿಕೆಯಿಂದ ಸಾಲ ಮುಕ್ತರಾದ ರೈತರು

    ರಾಯಚೂರು: ಈಗ ಎಲ್ಲಿ ನೋಡಿದರೂ ಈರುಳ್ಳಿಯದ್ದೆ ಮಾತು. ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದು ಗ್ರಾಹಕರಿಗೆ ಹೊರೆಯಾಗುತ್ತಿದೆ. ಆದರೆ ಅದೆಷ್ಟೋ ವರ್ಷಗಳಿಂದ ಸಾಲಗಾರರಾಗಿದ್ದ ರೈತರು ಈಗ ಸಾಲ ಮುಕ್ತರಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಕೇಳಿರದ ಬೆಲೆ ಈರುಳ್ಳಿಗೆ ಬಂದಿರುವುದು ರಾಯಚೂರಿನ ನೂರಾರು ರೈತರ ಬದುಕು ಬಂಗಾರವಾಗಿಸಿದೆ.

    ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ 30 ವರ್ಷಗಳಲ್ಲಿ ಕೇಳರಿಯದ ಭರ್ಜರಿ ಬೆಲೆಯಲ್ಲಿ ಈರುಳ್ಳಿ ಮಾರಾಟವಾಗುತ್ತಿದೆ. ಇದರಿಂದ ಈರುಳ್ಳಿ ಬೆಳೆಗಾರರ ನೀರಿಕ್ಷೆಗೂ ಮೀರಿ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ. ಸದ್ಯ ಈರುಳ್ಳಿ ಬೆಲೆ ಕ್ವಿಂಟಾಲ್‍ಗೆ 12,200 ರೂ.ಗೆ ಮಾರಾಟವಾಗುತ್ತಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

    ಮೊದಲೆಲ್ಲಾ ಬರೀ ನಷ್ಟವನ್ನೇ ಅನುಭವಿಸುತ್ತಿದ್ದ ಈರುಳ್ಳಿ ಬೆಳೆಗಾರರು ಮೊದಲ ಬಾರಿಗೆ ಲಕ್ಷ, ಲಕ್ಷ ರೂಪಾಯಿ ಎಣಿಸುವಂತಾಗಿದೆ. ಅದೆಷ್ಟೋ ವರ್ಷಗಳಿಂದ ಸಾಲವನ್ನು ಮಾಡಿಕೊಂಡೇ ಕೃಷಿ ಮಾಡುತ್ತಿದ್ದ ರೈತರ ಮುಖದಲ್ಲಿ ಈಗ ಸಂತೋಷ ಮೂಡಿದೆ. ಅತೀವೃಷ್ಠಿ, ಪ್ರವಾಹದ ಪರಿಣಾಮ ಈರುಳ್ಳಿ ಕೊರತೆ ಉಂಟಾಗಿದ್ದು, ರಾಯಚೂರಿನಿಂದ ಆಂಧ್ರ ಪ್ರದೇಶ, ತೆಲಂಗಾಣಕ್ಕೂ ಈರುಳ್ಳಿ ಹೋಗುತ್ತಿದೆ. ಹೀಗಾಗಿ ಇಲ್ಲಿನ ರೈತರ ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಿಂಗಸುಗೂರಿನ ರೈತ ಮಹಾಂತೇಶ್, ನಾನು 11 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದೇನೆ. ಪ್ರತಿ ವರ್ಷ ನಾವು ವೆಚ್ಚ ಮಾಡುತ್ತಿದ್ದ ಹಣ ಕೂಡ ವಾಪಸ್ ಬರುತ್ತಿರಲಿಲ್ಲ. ಈ ವರ್ಷ 5 ಲಕ್ಷ ರೂ. ಆದಾಯ ಬಂದಿದೆ. ಹೀಗಾಗಿ ಬ್ಯಾಂಕ್ ಸಾಲವನ್ನು ಪಾವತಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಈರುಳ್ಳಿ ಬೆಲೆ ಏರಿಕೆಯಿಂದ ಅನೇಕ ರೈತರಿಗೆ ಅನುಕೂಲವಾಗಿದೆ. ಅಪರೂಪಕ್ಕೆ ಬಂದಿರುವ ಉತ್ತಮ ಬೆಲೆ ಬಗ್ಗೆ ಬದುಕಲು ಕಷ್ಟ ಎನ್ನುವ ರೀತಿ ನೌಕರಿದಾರರು ಮಾತನಾಡುವುದು ಎಷ್ಟು ಸರಿ ಎಂದು ಮಹಾಂತೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

    ಈರುಳ್ಳಿ ಬೆಲೆ ಏರಿಕೆಯಿಂದ ರೈತರ ಕಷ್ಟಗಳು ತೀರಿ ಬದುಕು ಹಸನಾಗುತ್ತಿರುವುದು ಒಂದೆಡೆಯಾದರೆ, ಬಡ, ಮಧ್ಯಮವರ್ಗದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಒಂದು ಕೆ.ಜಿ.ಗೆ 140 ರೂಪಾಯಿಯಂತೆ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟವಾಗುತ್ತಿದೆ. ಇದರಿಂದ ಅಡುಗೆಯಲ್ಲಿ ಈರುಳ್ಳಿಯನ್ನ ಬಳಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.ಆದ್ರೆ ತರಕಾರಿ ವ್ಯಾಪಾರಿಗಳು ಮಾತ್ರ ಯಾವಾಗ ಬೆಲೆ ಹೆಚ್ಚಾಗುತ್ತೋ, ಯಾವಾಗ ಕಡಿಮೆಯಾಗುತ್ತೋ ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿ ಹೆಚ್ಚು ಈರುಳ್ಳಿಯನ್ನ ಖರೀದಿಸಿ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದೇವೆ ಅಂತ ತರಕಾರಿ ವ್ಯಾಪಾರಿ ಮಹಾವೀರ್ ಆತಂಕ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=bcPxJ_UqTCg

  • ಕಡಲ ನಗರಿ ಮಂಗ್ಳೂರಿಗೆ ಬಂದಿಳಿಯಿತು ಟರ್ಕಿ ಈರುಳ್ಳಿ

    ಕಡಲ ನಗರಿ ಮಂಗ್ಳೂರಿಗೆ ಬಂದಿಳಿಯಿತು ಟರ್ಕಿ ಈರುಳ್ಳಿ

    ಮಂಗಳೂರು: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚುತ್ತಿದ್ದು, ಪೂರೈಕೆ ಇಲ್ಲದಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಇದೀಗ ಈರುಳ್ಳಿ ಕೊರತೆಯನ್ನು ನೀಗಿಸುವುದಕ್ಕೆ ಕಡಲ ನಗರಿ ಮಂಗಳೂರಿಗೆ ಟರ್ಕಿ ದೇಶದ ಈರುಳ್ಳಿಯನ್ನು ಆಮದು ಮಾಡಲಾಗಿದೆ.

    ಟರ್ಕಿ ಮೂಲದ ಈರುಳ್ಳಿ ಈಗಾಗಲೇ ಮಂಗಳೂರು ಮಾರುಕಟ್ಟೆಗೆ ಆಗಮಿಸಿದ್ದು ಬೆಲೆ ಕೆ.ಜಿಗೆ 130 ರಿಂದ 140 ರೂ.ನಂತೆ ಮಾರಾಟವಾಗುತ್ತಿದೆ. ಗಾತ್ರದಲ್ಲಿ ದೊಡ್ಡದಾಗಿದ್ದು, ಕೆಜಿ ಗೆ 3 ರಿಂದ 4 ಈರುಳ್ಳಿ ಮಾತ್ರ ತೂಗುತ್ತಿದೆ.

    ಕೇಂದ್ರ ಸರ್ಕಾರ ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿದ್ದು, ಹಡಗಿನ ಮೂಲಕ ಮುಂಬೈನ ಮಾರುಕಟ್ಟೆಗೆ ಬಂದಿತ್ತು. ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ವಿತರಣೆಯಾಗುತ್ತಿದೆ. ಮಂಗಳೂರಿಗೆ ಟ್ರಕ್ ಮೂಲಕ ಗೋಣಿಗಳಲ್ಲಿ ಹೇರಿಕೊಂಡು ತರಲಾಗಿದೆ.

    ಈರುಳ್ಳಿ ದರ ಏರಿಕೆಯಿಂದಾಗಿ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದ್ದು, ಈಗ ನಮಗೆ ಕೆಲಸವೇ ಇಲ್ಲದಂತಾಗಿದೆ ಎಂದು ಬಂದರ್ ನ ತಲೆ ಹೊರೆ ಕಾರ್ಮಿಕ ಹಮೀದ್ ಹೇಳುತ್ತಾರೆ. ಸದ್ಯ ಈರುಳ್ಳಿಯು ಗ್ರಾಹಕರ ಕಣ್ಣಲ್ಲಿ ಮತ್ತಷ್ಟು ಕಣ್ಣೀರು ತರಿಸಿದ್ದು, ಆಮದು ಈರುಳ್ಳಿಯೂ ಜನರ ಕಣ್ಣೀರನ್ನು ಒರಸದಿರುವುದೇ ವಿಪರ್ಯಾಸವಾಗಿದೆ.

    ಹೋಟೇಲ್ ಗಳಲ್ಲಿ ಸಿಗ್ತಿಲ್ಲ ಈರುಳ್ಳಿ ತಿಂಡಿಗಳು:
    ಈರುಳ್ಳಿ ಬೆಲೆ ಏರಿಕೆ ಆಗಿರುವುದರಿಂದ ಎಲ್ಲಾ ಹೋಟೆಲ್ ಗಳಲ್ಲಿ ಈರುಳ್ಳಿ ಬಜೆ, ಈರುಳ್ಳಿ ದೋಸೆಗಳನ್ನು ತಯಾರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಜೊತೆಗೆ ತರಕಾರಿ ಹೋಟೆಲ್ ಗಳಲ್ಲಿ ಬಾಜಿ ತಯಾರಿಕೆಯನ್ನೂ ಸದ್ಯದ ಮಟ್ಟಿಗೆ ನಿಲ್ಲಿಸಿದ್ದೇವೆ. ಮಾಂಸಾಹಾರಿ ಹೋಟೇಲ್ ಗಳಲ್ಲಿ ಮಾಮೂಲಿಯಂತೆ ಈರುಳ್ಳಿ ಬಳಕೆಯಾಗುತ್ತಿದೆ ಎಂದು ದಕ್ಷಿಣ ಕನ್ನಡ ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅಭಿಪ್ರಾಯಪಟ್ಟಿದ್ದಾರೆ.

    ಕೊರತೆ ಯಾಕೆ?
    ಈ ವರ್ಷ ಈರುಳ್ಳಿ ಬೆಳೆಯುವ ರಾಜ್ಯಗಳಾದ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾದ ಪರಿಣಾಮ ಬೆಳೆ ಹಾಳಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ಸರಿಯಾಗಿ ಈರುಳ್ಳಿ ಪೂರೈಕೆ ಆಗದ ಪರಿಣಾಮ ಬೆಲೆ ದಿನೇ ದಿನೇ ಜಾಸ್ತಿಯಾಗುತ್ತಿದೆ.

  • 500 ರೂ. ಫುಡ್ ಆರ್ಡರ್ ಮಾಡಿದ್ರೆ 1 ಕೆ.ಜಿ ಈರುಳ್ಳಿ ಉಚಿತ

    500 ರೂ. ಫುಡ್ ಆರ್ಡರ್ ಮಾಡಿದ್ರೆ 1 ಕೆ.ಜಿ ಈರುಳ್ಳಿ ಉಚಿತ

    ಬಾಗಲಕೋಟೆ: ವ್ಯಾಪಾರ ವೃದ್ಧಿಗೆ ಉಚಿತ ಈರುಳ್ಳಿ ಅಸ್ತ್ರ ಪ್ರಯೋಗಿಸಿದ ಬಾಗಲಕೋಟೆಯ ಹೋಟೆಲ್‍ವೊಂದು ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ. 500 ರೂ. ಫುಡ್ ಆರ್ಡರ್ ಮಾಡಿದರೆ 1 ಕೆಜಿ ಈರುಳ್ಳಿ ಉಚಿತವೆಂದು ಗ್ರಾಹಕರನ್ನು ಸೆಳೆಯುವ ಹೊಸ ಪ್ರಯತ್ನಕ್ಕೆ ಕೈಹಾಕಿದೆ.

    ಗಗನಕ್ಕೇರಿದ ಈರುಳ್ಳಿ ಬೆಲೆಯಿಂದ ಜನರು ಕಂಗಾಲಾಗಿದ್ದಾರೆ. ಹೀಗಾಗಿ ಹೋಟೆಲ್ ಪಕ್ವಾನ್‍ನಲ್ಲಿ ಗ್ರಾಹಕರಿಗೆ ಈರುಳ್ಳಿ ಕೊಡುಗೆ ನೀಡಲಾಗುತ್ತಿದೆ. ಮನೆ ಮನೆಗೆ ಆಹಾರ ಪೂರೈಕೆ ಮಾಡುವ ಪಕ್ವಾನ್ ಹೋಟೆಲ್, ವ್ಯಾಪಾರ ವೃದ್ಧಿಗೆ ಈ ಪ್ಲಾನ್ ಮಾಡಿದೆ. 500 ರೂ. ಫುಡ್ ಆರ್ಡರ್ ಮಾಡಿದರೆ 1 ಕೆಜಿ ಈರುಳ್ಳಿ ಉಚಿತ ಎಂಬ ಆಫರ್ ನೀಡುತ್ತಿದೆ.

    ಪಕ್ವಾನ್ ಹೋಟೆಲ್‍ನಲ್ಲಿ 500 ರೂ. ಅಥವಾ ಅದಕ್ಕಿಂತ ಹೆಚ್ಚು ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಮನೆಗೆ ಆಹಾರದ ಜೊತೆ ಈರುಳ್ಳಿ ಪ್ಯಾಕೇಟ್ ಸಹ ಹೊಟೇಲ್ ಸಿಬ್ಬಂದಿ ತಲುಪಿಸುತ್ತಾರೆ. ಇದರ ಜೊತೆಗೆ ಹೋಟೆಲ್‍ಗೆ ಬಂದವರಿಗೆ ಒಂದು ಉಚಿತ ಸಸಿ ಗಿಫ್ಟ್ ಕೂಡ ಕೊಡುತ್ತಾ ಸಿಬ್ಬಂದಿ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.

  • ಈರುಳ್ಳಿಗೆ ಅನ್ನದಾತನ ಟೈಟ್ ಸೆಕ್ಯೂರಿಟಿ

    ಈರುಳ್ಳಿಗೆ ಅನ್ನದಾತನ ಟೈಟ್ ಸೆಕ್ಯೂರಿಟಿ

    ಬೆಂಗಳೂರು: ಎಪಿಎಂಸಿಗೆ ಮೂಟೆಗಟ್ಟಲೇ ಈರುಳ್ಳಿಯನ್ನು ಹಿಡಿದುಕೊಂಡು ಬರುತ್ತಿದ್ದ ರೈತ ಅಲ್ಲೆಲ್ಲೂ ಲೋಡ್ ಮಾಡಿ ಹಾಯಾಗಿ ಕಾಫೀ, ಟೀ ಎಂದು ಹೋಗುತ್ತಿದ್ದರು. ಆದರೆ ಈಗ ರೈತ ತಾನು ತಂದಿರುವ ಈರುಳ್ಳಿ ಮೂಟೆಯನ್ನು ಬಿಟ್ಟು ಕದಲುತ್ತಿಲ್ಲ. ಹೆಚ್ಚು ಮೂಟೆಗಳನ್ನು ತಂದ್ರೆ ಜೊತೆಯಲ್ಲಿ ನಾಲ್ಕು ಜನರನ್ನು ಕರೆದುಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಜಮೀನಿನಲ್ಲಿ ಬೆಳೆದಿದ್ದ ಸುಮಾರು 40 ಮೂಟೆಯಷ್ಟು ಈರುಳ್ಳಿ ರಾತ್ರೋರಾತ್ರಿ ಕಳ್ಳತನ

    ಜಮೀನಿನಲ್ಲಿದ್ದ ಈರುಳ್ಳಿ ಬೆಳೆಯನ್ನು ಕಳ್ಳರು ಕದ್ದಿದ್ದರು. ಚಿನ್ನದ ಬೆಲೆಯಾಗಿರುವ ಈರುಳ್ಳಿಗೆ ರೈತರು ಫುಲ್ ಭದ್ರತೆಯನ್ನ ನೀಡಿ ಕಾಪಾಡಿಕೊಳ್ಳುತ್ತಿದ್ದರು. ಒಂದು ಕ್ಷಣ ಮೈಮರೆತರೂ ಈರುಳ್ಳಿ ಕಳ್ಳತನವಾಗುವ ಸಾಧ್ಯತೆಗಳಿವೆ. ಹಾಗಾಗಿ ಒಂದು ಕೆಜಿ ಹೋದರು ನಮಗೆ ನಷ್ಟ ಎಂದು ಅರಿತಿರುವ ರೈತರು ಈರುಳ್ಳಿಗೆ ವಿಶೇಷ ಭದ್ರತೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಈರುಳ್ಳಿ ತುಂಬಿದ್ದ ಲಾರಿಯೇ ಮಾಯ – ಬರೋಬ್ಬರಿ 20 ಲಕ್ಷ ರೂ. ಈರುಳ್ಳಿ ಲೂಟಿ

    ಈರುಳ್ಳಿ ಕಳ್ಳತನ ಪ್ರಕರಣ ಹೆಚ್ಚಾಗಿದ್ದರಿಂದ ರೈತರಿಗೆ ಪೊಲೀಸರು ನಿಮ್ಮ ಈರುಳ್ಳಿ ಕಳ್ಳತನವಾದ್ರೆ ನೀವೇ ಜವಾಬ್ದಾರರು. ನಮ್ಮ ಹತ್ತಿರ ಬರಬೇಡಿ ಎಂದು ಮೌಖಿಕವಾಗಿ ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಹರಾಜು ಪ್ರಕ್ರಿಯೆ ಮುಗಿದು, ಈರುಳ್ಳಿ ದುಡ್ಡು ಕೈಗೆ ಬರುವ ತನಕವೂ ರೈತರು ಮೈಯೆಲ್ಲ ಕಣ್ಣಾಗಿ ತಮ್ಮ ಉತ್ಪನ್ನಕ್ಕೆ ಟೈಟ್ ಸೆಕ್ಯೂರಿಟಿಯನ್ನು ನೀಡುತ್ತಿದ್ದಾರೆ.  ಇದನ್ನೂ ಓದಿ: ಖದೀಮರ ಈರುಳ್ಳಿ ಮೋಹ- ಪೆಟ್ಟಿಗೆ ತುಂಬಾ ಹಣವಿದ್ದರೂ ಕದ್ದಿದ್ದು ಈರುಳ್ಳಿ ಮಾತ್ರ

  • ಈರುಳ್ಳಿ ತುಂಬಿದ್ದ ಲಾರಿಯೇ ಮಾಯ – ಬರೋಬ್ಬರಿ 20 ಲಕ್ಷ ರೂ. ಈರುಳ್ಳಿ ಲೂಟಿ

    ಈರುಳ್ಳಿ ತುಂಬಿದ್ದ ಲಾರಿಯೇ ಮಾಯ – ಬರೋಬ್ಬರಿ 20 ಲಕ್ಷ ರೂ. ಈರುಳ್ಳಿ ಲೂಟಿ

    ಭೋಪಾಲ್: ಈರುಳ್ಳಿ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಕಣ್ಣಿರು ತರಿಸಿದೆ. ಆದರೆ ಖದೀಮರು ಮಾತ್ರ ಇದನ್ನೇ ಲಾಭ ಮಾಡಿಕೊಂಡು ಮಧ್ಯಪ್ರದೇಶದಲ್ಲಿ ಈರುಳ್ಳಿ ಲೋಡ್ ಆಗಿದ್ದ ಲಾರಿಯನ್ನೇ ಕದ್ದಿದ್ದಾರೆ.

    ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ಈರುಳ್ಳಿಯನ್ನು ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ನಾಸಿಕ್ ಮೂಲದ ವ್ಯಾಪಾರಿ ಪ್ರೇಮ್ ಚಂದ್ ಶುಕ್ಲಾ ಅವರು ಈರುಳ್ಳಿ ತುಂಬಿದ್ದ ಲಾರಿ ಕಳುವಾಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಶುಕ್ಲಾ ಅವರು ಶಿವಪುರಿ ಮೂಲದ ಟ್ರಕ್‍ನಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ ಈರುಳ್ಳಿಯನ್ನು ನಾಸಿಕ್‍ನಿಂದ ಲೋಡ್ ಮಾಡಿಸಿ ಗೋರಖ್‍ಪುರಕ್ಕೆ ಕಳುಹಿಸಿದ್ದರು. ಇದನ್ನೂ ಓದಿ: ಖದೀಮರ ಈರುಳ್ಳಿ ಮೋಹ- ಪೆಟ್ಟಿಗೆ ತುಂಬಾ ಹಣವಿದ್ದರೂ ಕದ್ದಿದ್ದು ಈರುಳ್ಳಿ ಮಾತ್ರ

    ಈರುಳ್ಳಿ ತುಂಬಿದ ಲಾರಿ ನವೆಂಬರ್ 22ರಂದು ಗೋರಖ್‍ಪುರಕ್ಕೆ ತಲುಪಬೇಕಿತ್ತು. ಆದರೆ ಈವರೆಗೂ ಈರುಳ್ಳಿ ಮಾತ್ರ ಗೋರಖ್‍ಪುರಕ್ಕೆ ತಲುಪಿಲ್ಲ. ಹೀಗಾಗಿ ಶುಕ್ಲಾ ಅವರು ಈ ಸಂಬಂಧ ಟ್ರಕ್ ಮಾಲೀಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರು ತನಿಖೆ ಕೈಗೊಂಡಾಗ ಈರುಳ್ಳಿ ತುಂಬಿದ್ದ ಲಾರಿ ಶಿವಪುರಿಯಲ್ಲಿ ಪತ್ತೆಯಾಗಿದೆ. ಆದರೆ ಅದರಲ್ಲಿ ಈರುಳ್ಳಿ ಮಾತ್ರ ಇರಲಿಲ್ಲ. ಇತ್ತ ಲಾರಿಯನ್ನು ಬಿಟ್ಟು ಚಾಲಕ ಹಾಗೂ ಆತನ ಸಹಾಯಕ ಕೂಡ ನಾಪತ್ತೆಯಾಗಿದ್ದಾರೆ. ಗಗನಕ್ಕೇರಿದ ಈರುಳ್ಳಿ ಬೆಲೆಯಿಂದಾಗಿ ಲಾಭ ಪಡೆಯಲು ಖದೀಮರು ಈರುಳ್ಳಿ ಕದ್ದು ಎಸ್ಕೇಪ್ ಆಗಿರಬಹುದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಈರುಳ್ಳಿ ಕೇಳಬೇಡಿ- ಬೋರ್ಡ್ ಹಾಕಿದ ಹೋಟೆಲ್ ಮಾಲೀಕರು

    ಈ ಹಿಂದೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿದ್ದ ತರಕಾರಿ ವ್ಯಾಪಾರಿ ಅಕ್ಷಯ್ ದಾಸ್ ಅವರ ಮಳಿಗೆಯಲ್ಲಿ ಈರುಳ್ಳಿ ಕಳ್ಳತನವಾಗಿತ್ತು. ಸೋಮವಾರ ರಾತ್ರಿ ಮಳಿಗೆಗೆ ನುಗ್ಗಿದ್ದ ಕಳ್ಳರು ಗಲ್ಲಾ ಪೆಟ್ಟಿಯಲ್ಲಿನ ಹಣವನ್ನು ದೋಚದೆ, ಮಳಿಗೆಯಲ್ಲಿದ್ದ ಈರುಳ್ಳಿಯನ್ನು ಹೊತ್ತೊಯ್ದಿದ್ದರು. ಸುಮಾರು 50 ಸಾವಿರ ರೂ. ಮೌಲ್ಯದ ಈರುಳ್ಳಿ ಜೊತೆಗೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಳ್ಳರು ಹೊತ್ತೊಯ್ದಿದ್ದರು.

    ಅಷ್ಟೇ ಅಲ್ಲದೆ ಇತ್ತ ಕರ್ನಾಟಕದಲ್ಲೂ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನೇ ರಾತ್ರೋರಾತ್ರಿ ಕಳ್ಳರು ಕಿತ್ತು ಪರಾರಿಯಾಗಿದ್ದಾರೆ.

    ನರೇಗಲ್ ಗ್ರಾಮದ ರೈತ ಗುರುಬಸಯ್ಯ ಪ್ರಭುಸ್ವಾಮಿ ಮಠ ಅವರು ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಆದರೆ ಖದೀಮರು ಸುಮಾರು 34 ರಿಂದ 40 ಮೂಟೆಯಷ್ಟು ಈರುಳ್ಳಿ ಬೆಳೆಯನ್ನು ಕಳ್ಳತನ ಮಾಡಿದ್ದರು. ಗುರುಬಸಯ್ಯ ಅವರು 1.5 ಎಕರೆ ನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಇನ್ನು ಎರಡು ದಿನದಲ್ಲಿ ಫಸಲು ಕಟಾವು ಮಾಡಬೇಕು ಎಂದು ರೈತ ಎಂದುಕೊಂಡಿದ್ದರು. ಆದರೆ ಫಸಲು ಕೈಗೆ ಬರುವ ಮುನ್ನವೇ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದು, ಈರುಳ್ಳಿ ಜೊತೆ ಸುಮಾರು 25 ಕೆಜಿಯಷ್ಟು ಮೆಣಸಿನಕಾಯಿ ಸಹ ಕಳ್ಳತನ ಮಾಡಿದ್ದಾರೆ.