Tag: ಈರುಳ್ಳಿ

  • ಈರುಳ್ಳಿ ಆಯ್ತು, ಈಗ ಮೊಟ್ಟೆ ಸರದಿ- 2 ತಿಂಗ್ಳಿಂದ ಏರಿಕೆಯಾಗ್ತಲೇ ಇದೆ ರೇಟ್

    ಈರುಳ್ಳಿ ಆಯ್ತು, ಈಗ ಮೊಟ್ಟೆ ಸರದಿ- 2 ತಿಂಗ್ಳಿಂದ ಏರಿಕೆಯಾಗ್ತಲೇ ಇದೆ ರೇಟ್

    ಬೆಂಗಳೂರು: ದೇಶದ ಹಲವೆಡೆ ಈಗಾಗಲೇ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಈರುಳ್ಳಿ ದರವಂತೂ ದಿನೇ ದಿನೇ ಗಗನಮುಖಿಯಾಗಿದ್ದು ಗ್ರಾಹಕರು ಈರುಳ್ಳಿ ಮನೆಗೆ ತರೋದನ್ನೇ ಬಿಟ್ಟಿದ್ದರು. ಈರುಳ್ಳಿ ಬಳಿಕ ಇದೀಗ ಮೊಟ್ಟೆ ಬೆಲೆಯೂ ದುಬಾರಿಯಾಗಿದೆ.

    ಚಳಿಗಾಲದಲ್ಲಿ ಮೊಟ್ಟೆ ತಿನ್ನುವವರ ಸಂಖ್ಯೆ ಹೆಚ್ಚು. ಬಿಸಿಬಿಸಿ ಆಮ್ಲೆಟ್ ಹಾಕೋಣ ಅನ್ನೋರು ಈರುಳ್ಳಿ ಜೊತೆಗೆ ಮೊಟ್ಟೆ ರೇಟ್ ನೋಡಿ ಸಪ್ಪೆ ಮೋರೆ ಹಾಕುವಂತಾಗಿದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದರ ಜೊತೆಗೆ ದೇಹದ ಇಮ್ಯುನಿಟಿ ಶಕ್ತಿ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಮೊಟ್ಟೆಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಮತ್ತೊಂದೆಡೆ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಯೂ ಹತ್ತಿರವಾಗಿದೆ. ಕೇಕ್ ಸೇರಿದಂತೆ ಇತರೇ ಖಾದ್ಯಗಳ ತಯಾರಿಕೆಗೆ ಅಗತ್ಯವಾಗಿ ಮೊಟ್ಟೆ ಬೇಕೇಬೇಕಾಗಿದೆ. ಹೀಗಾಗಿ ಕಳೆದ ಎರಡು ವಾರಗಳಿಂದ ಕೋಳಿಮೊಟ್ಟೆ ದರ ದಿನಂಪ್ರತಿ 5 ರಿಂದ 10 ಪೈಸೆಯಂತೆ ಹೆಚ್ಚಾಗಿದೆ.

    ಸಗಟು ದರದಲ್ಲಿ ಒಂದು ಮೊಟ್ಟೆಗೆ 5 ರೂಪಾಯಿ ಇದೆ. ಚಿಲ್ಲರೆ ದರದಲ್ಲಿ ಫಾರಂ ಕೋಳಿ ಮೊಟ್ಟೆ 6 ರೂ.ವರೆಗೆ ಮಾರಾಟವಾಗುತ್ತಿದೆ. ನಾಟಿ ಕೋಳಿ ಮೊಟ್ಟೆ 7-8 ರೂ.ವರೆಗೆ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರವಲ್ಲದೆ ನೆರೆಯ ರಾಜ್ಯ ಆಂಧ್ರಪ್ರದೇಶ, ತೆಲಂಗಾಣ, ಸೇರಿದಂತೆ ಇತರೇ ರಾಜ್ಯಗಳ ಮಾರುಕಟ್ಟೆಗಳಲ್ಲೂ ಮೊಟ್ಟೆ ದರ ಏರಿಕೆಯಾಗಿದೆ. ಈ ದರಗಳು ಜನವರಿವರೆಗೂ ಕಡಿಮೆಯಾಗಲ್ಲ ಅಂತಲೇ ಹೇಳಲಾಗುತ್ತಿದೆ.

  • ಈರುಳ್ಳಿ ಹಾರ ಬದಲಿಸಿದ ವಧು, ವರರು

    ಈರುಳ್ಳಿ ಹಾರ ಬದಲಿಸಿದ ವಧು, ವರರು

    – ವಿಶೇಷ ಮದುವೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯದ್ದೇ ಕಾರುಬಾರು

    ಲಕ್ನೋ: ದೇಶಾದ್ಯಂತ ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಲೇ ಇದೆ. ಸಾರ್ವಜನಿಕರು ಸಹ ಈರುಳ್ಳಿ ಬಂಗಾರಕ್ಕಿಂತಲೂ ಬೆಲೆ ಬಾಳುವಂತಹದ್ದು ಎಂದು ಭಾವಿಸಿ ಸಮಾರಂಭಗಳಲ್ಲಿ ಇದರದ್ದೇ ಹಾರ, ಆಭರಣಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

    ಈರುಳ್ಳಿ ಬಂಗಾರದಷ್ಟೇ ಅಮೂಲ್ಯವಾದದ್ದು ಎಂದು ಭಾವಿಸಿ, ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮದುವೆ ವೇಳೆ ದಂಪತಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾರಗಳನ್ನೇ ಬದಲಾಯಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಉಡುಗೊರೆ ನೀಡುವವರೂ ಸಹ ಹೂವಿನ ಬೊಕ್ಕೆಗಳನ್ನು ನೀಡುವ ಬದಲು ಈರುಳ್ಳಿ ಬುಟ್ಟಿಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಅಕ್ಷಯ್‍ರಿಂದ ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್

    ಈರುಳ್ಳಿ ಹಾಗೂ ತರಕಾರಿ ಬೆಲೆ ಹೆಚ್ಚಿರುವುದನ್ನು ಎತ್ತಿ ತೋರಿಸಲು ದಂಪತಿ ಈ ರೀತಿ ಮಾಡಿದ್ದು, ವಿಶೇಷವೆಂದರೆ ಮದುವೆಗೆ ಆಗಮಿಸಿದ ಸಂಬಂಧಿಕರು, ಕುಟುಂಬಸ್ಥರು ಸ್ನೇಹಿತರೂ ಈರುಳ್ಳಿ ಬುಟ್ಟಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕಳೆದ 15 ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೆ ತಲುಪಿದ್ದು, ಹೀಗಾಗಿ ಜನತೆ ಈರುಳ್ಳಿಯನ್ನು ಚಿನ್ನದಷ್ಟೇ ಅಮೂಲ್ಯ ಎಂದು ಪರಿಗಣಿಸಿದ್ದಾರೆ. ಅದೇ ರೀತಿ ಮದುವೆ ಮನೆಗಳಲ್ಲಿ ಸಹ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಆಭರಣಗಳನ್ನೇ ಧರಿಸಿ ಗಮನ ಸೆಳೆಯುತ್ತಿದ್ದಾರೆ. ಈ ದಂಪತಿ ಸಹ ಇದೇ ರೀತಿ ಮಾಡಿದ್ದು, ಹಾರ, ಗಿಫ್ಟ್ ಎಲ್ಲವನ್ನೂ ಈರುಳ್ಳಿ ಮಯವಾಗಿಸಿದ್ದಾರೆ.

    ದೇಶದ ಬಹುತೇಕ ಭಾಗಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 100-150 ರೂ.ಗೆ ತಲುಪಿದೆ. ಬೆಲೆಯ ಕುರಿತು ತಿಳಿಸಲು ಜನತೆ ವಿವಿಧ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡಿಲ್ಲಿ ಸಹ ಇದೇ ರೀತಿಯ ಘಟನೆ ನಡೆದಿತ್ತು. ಮದುವೆಗೆ ತೆರಳಿದ್ದ ಸ್ನೇಹಿತರು ಈರಳ್ಳಿ ಬಕೆಟ್ ಉಡುಗೊರೆ ನೀಡುವ ಮೂಲಕ ವಿಭಿನ್ನ ಉಡುಗೊರೆ ನೀಡಿದ್ದರು. 2.5 ಕೆ.ಜಿ.ಈರುಳ್ಳಿ ನೀಡುವ ಮೂಲಕ ಮದುವೆಯಲ್ಲಿ ನೆರೆದಿದ್ದ ಜನರ ಗಮನ ಸೆಳೆದಿದ್ದರು. ಅಲ್ಲದೆ ತಮಿಳು ನಾಡಿನಲ್ಲಿ ಇನ್ನೂ ಕೆಲವೆಡೆ ಹಲವು ವ್ಯಾಪಾರಿಗಳು ಸರಕು ಕೊಂಡರೆ 1 ಕೆ.ಜಿ. ಈರುಳ್ಳಿ ಉಚಿತ ಎಂದು ಆಫರ್ ನೀಡಿದ್ದರು.

  • ಈರುಳ್ಳಿ ಹಾರ ಧರಿಸಿ ಪ್ರತಿಭಟಿಸಿದ ಧಾರವಾಡದ ಮಹಿಳೆಯರು

    ಈರುಳ್ಳಿ ಹಾರ ಧರಿಸಿ ಪ್ರತಿಭಟಿಸಿದ ಧಾರವಾಡದ ಮಹಿಳೆಯರು

    ಧಾರವಾಡ: ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಧಾರವಾಡದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಈರುಳ್ಳಿ ಹಾರ ಹಾಕಿಕೊಂಡು ವಿನೂತನವಾಗಿ ಪ್ರತಿಭಟಿಸಿದರು.

    ನಗರದ ವಿವೇಕಾನಂದ ವೃತ್ತದಲ್ಲಿ ಖಾಲಿ ಸಿಲಿಂಡರ್ ಇಟ್ಟುಕೊಂಡು, ಕೊರಳಲ್ಲಿ ಈರುಳ್ಳಿ ಹಾರ ಹಾಕಿಕೊಂಡು ಕುಳಿತು ಪ್ರತಿಭಟನೆ ನಡೆಸಲಾಯ್ತು. ಈರುಳ್ಳಿ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಹೈರಾಣಾಗಿ ಹೋಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.

    ಮತ್ತೊಂದೆಡೆ ಉಜ್ವಲಾ ಯೋಜನೆಯಡಿಯಲ್ಲಿ ಸಿಲಿಂಡರ್ ಪಡೆದ ಬಡವರಗೆ ಕಳೆದ ಮೂರು ವರ್ಷಗಳಿಂದ ಸಬ್ಸಿಡಿ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇನ್ನು ಇದೇ ವೇಳೆ ಮಹಿಳಾ ಕಾರ್ಯಕರ್ತೆಯರ ಪ್ರತಿಭಟನೆಗೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು

  • ಈರುಳ್ಳಿ ಬೆಳೆಗಾರರ ಬಳಿಕ ನಿರಾಶೆಯಲ್ಲಿ ಮುಳುಗಿದ ಭತ್ತ ಬೆಳೆದ ರೈತರು

    ಈರುಳ್ಳಿ ಬೆಳೆಗಾರರ ಬಳಿಕ ನಿರಾಶೆಯಲ್ಲಿ ಮುಳುಗಿದ ಭತ್ತ ಬೆಳೆದ ರೈತರು

    – ಬೆಳೆಗೆ ಖರ್ಚು ಮಾಡಿದ ಹಣವೂ ಸಿಗದ ಸ್ಥಿತಿಯಲ್ಲಿ ಅನ್ನದಾತ
    – ಮುಕ್ತ ಮಾರುಕಟ್ಟೆಯಲ್ಲಿ ಕುಸಿದ ಭತ್ತದ ಬೆಲೆ

    ರಾಯಚೂರು: ಉತ್ತಮ ಲಾಭದ ನಿರೀಕ್ಷೆಯಿಂದ ನಷ್ಟದ ವರ್ತಮಾನ ಕಾಣುತ್ತಿರುವವರ ಸಾಲಿನಲ್ಲಿ ಈರುಳ್ಳಿ ಬೆಳೆಗಾರರ ಬಳಿಕ ಈಗ ಭತ್ತ ಬೆಳೆದ ರೈತರು ನಿಂತಿದ್ದಾರೆ. ಒಳ್ಳೆಯ ಗುಣಮಟ್ಟದ ಭತ್ತ ಬೆಳೆದಿದ್ದರೂ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ರಾಯಚೂರಿನಲ್ಲಂತೂ ಸಾವಿರಾರು ರೈತರು ಕೃಷಿ ಉತ್ಪನ್ನ ಮಾರುಕಟ್ಟಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

    ಕೃಷಿ ಕೂಡ ಒಂದು ರೀತಿಯಲ್ಲಿ ಜೂಜಾಟವಾಗಿದೆ ಎಂದು ನೊಂದ ರೈತರೇ ಹೇಳುತ್ತಿದ್ದಾರೆ. ಮೂರು ದಶಕಗಳಲ್ಲಿ ಕೇಳರಿಯದ ಬೆಲೆ ಕಂಡಿದ್ದ ಈರುಳ್ಳಿ ಬೆಳೆಗಾರರು ಈಗ ಪುನಃ ನಿರಾಶೆಗೆ ಮರಳಿದ್ದಾರೆ. ಅವರ ಜೊತೆ ಈಗ ಭತ್ತದ ಬೆಳೆಗಾರರು ಸೇರಿಕೊಳ್ಳಬೇಕಾದ ಅನಿವಾರ್ಯ ಪತಿಸ್ಥಿತಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿದೆ.

    ಟಿಎಲ್‍ಬಿಸಿ, ಎನ್‌ಆರ್‌ಬಿಸಿ ಕಾಲುವೆ ಆಶ್ರಿತ ರಾಯಚೂರಿನ ಸಾವಿರಾರು ರೈತರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನ ಬೆಳೆದಿದ್ದಾರೆ. ಎಕರೆಗೆ ಏನಿಲ್ಲವೆಂದರೂ 30ರಿಂದ 40 ಸಾವಿರ ರೂಪಾಯಿ ಖರ್ಚುಮಾಡಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಭತ್ತ 1,200ರಿಂದ 1,800 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಬೆಳೆಗೆ ಮಾಡಿದ ಖರ್ಚು ಕೂಡ ವಾಪಸ್ ಬರುತ್ತಿಲ್ಲವೆಂದು ರೈತರು ಕಂಗಾಲಾಗಿದ್ದಾರೆ. ಇನ್ನೂ ವ್ಯಾಪಾರಿಗಳು ಅಕ್ಕಿ ಬೆಲೆ ಹೆಚ್ಚಾದರೆ ಭತ್ತದ ಬೆಲೆ ಹೆಚ್ಚಾಗಬಹುದು ಎನ್ನುತ್ತಿದ್ದಾರೆ.

    ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ದಾವಣಗೆರೆ ಜಿಲ್ಲೆಯಲ್ಲಿ ರೈತರು ಭತ್ತವನ್ನು ಕಟಾವು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಉತ್ತಮ ಗುಣಮಟ್ಟದ ಭತ್ತ ಕೈಗೆ ಬಂದ ಹೊತ್ತಲ್ಲೇ ಬೆಲೆ ಕುಸಿತವಾಗಿದೆ. ಸದ್ಯದ ಬೆಲೆಗೆ ಭತ್ತ ಮಾರಾಟ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರ ಪ್ರೋತ್ಸಾಹಧನ ಸೇರಿಸಿ ಕ್ವಿಂಟಾಲ್‍ಗೆ 2,500 ರೂಪಾಯಿಯಂತೆ ಖರೀದಿಸಬೇಕಾಗುತ್ತದೆ.

    ಕೊಪ್ಪಳದ ಕಾರಟಗಿಯಲ್ಲಿ ಹಿಂದಿನ ಸರ್ಕಾರ ಘೋಷಿಸಿದ್ದ 27 ಕೋಟಿ ರೂ. ವೆಚ್ಚದ ರೈಸ್ ಟೆಕ್ನಾಲಜಿ ಪಾರ್ಕ್ ಅನ್ನು ಕೂಡಲೇ ನಿರ್ಮಿಸಬೇಕು. ಶುದ್ಧೀಕರಣ, ಸಂಸ್ಕರಣ, ಶೇಖರಣೆ, ಮಾರುಕಟ್ಟೆ ವ್ಯವಸ್ಥೆಗೆ ಹಣ ಖರ್ಚಾಗಿದೆ. ಆದರೆ ಪಾರ್ಕ್ ಮಾತ್ರ ನಿರ್ಮಾಣವಾಗಿಲ್ಲ. ಸರ್ಕಾರ ಭತ್ತ ಬೆಳೆಗಾರ ರೈತರನ್ನು ರಕ್ಷಿಸಲು ರೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಒತ್ತಾಯಿಸಿದ್ದಾರೆ.

    ಅತೀವೃಷ್ಠಿ ಅನಾವೃಷ್ಠಿಗಳನ್ನು ಎದುರಿಸಿ ಉತ್ತಮ ಗುಣಮಟ್ಟದ ಭತ್ತದ ಬೆಳೆಯನ್ನು ಬೆಳೆದ ರೈತರು ಒಳ್ಳೆಯ ಬೆಲೆಯಿಲ್ಲದೆ ಕಂಗೆಟ್ಟಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತು ರೈತರಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಿದೆ. ಪ್ರೋತ್ಸಾಹ ಧನ ನೀಡಿ ರೈತರ ಕೈಹಿಡಿಯಬೇಕಿದೆ ಎಂದು ಚಾಮರಸ ಮಾಲೀಪಾಟೀಲ್ ಆಗ್ರಹಿಸಿದ್ದಾರೆ.

  • ಮಧ್ಯರಾತ್ರಿ 30 ಸಾವಿರ ಮೌಲ್ಯದ ಈರುಳ್ಳಿ ಕದ್ದ

    ಮಧ್ಯರಾತ್ರಿ 30 ಸಾವಿರ ಮೌಲ್ಯದ ಈರುಳ್ಳಿ ಕದ್ದ

    ಬೆಂಗಳೂರು: ಚಿನ್ನ ಕಳ್ಳರು, ಮನೆ ದರೋಡೆ ಮಾಡೋರೆಲ್ಲ ಫಾರ್ ಎ ಚೇಂಚ್ ಅಂತ ಈರುಳ್ಳಿ ಕಳ್ಳತನಕ್ಕೆ ಶಿಫ್ಟ್ ಆಗಿದ್ದಾರೆ ಅನಿಸುತ್ತಿದೆ. ಈಗ ರಾಜ್ಯದಲ್ಲಿ ಈರುಳ್ಳಿ ಕಳ್ಳರದ್ದೇ ಕಾರುಬಾರು.

    ಬೆಂಗಳೂರಿನ ಎಪಿಎಂಸಿಯಲ್ಲಿ ಮಧ್ಯರಾತ್ರಿ ಕಂಬಳಿ ಹೊದ್ದು ಬಂದ ವ್ಯಕ್ತಿಯೊಬ್ಬ ಮೂಟೆ ಮೂಟೆ ಈರುಳ್ಳಿಯನ್ನು ಕಳ್ಳತನ ಮಾಡಿಕೊಂಡು ಹೋದ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.

    ಮೂವತ್ತು ಸಾವಿರ ಬೆಲೆಯ ಈರುಳ್ಳಿಯನ್ನು ಕಳವು ಮಾಡಿದ್ದಾನೆ. ಮರುದಿನ ಕಳ್ಳತನಕ್ಕೆ ಬಂದಾಗ ಮಾತ್ರ ಅಲರ್ಟ್ ಆಗಿದ್ದ ಮಾಲೀಕ, ಈ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಕಳ್ಳ, ಬಿಟ್ಟು ಬಿಡಿ ತಪ್ಪಾಯ್ತು ಎಂದು ಗೊಳೋ ಅಂತ ಅತ್ತು ಕರೆದು ರಂಪಾಟ ಮಾಡಿದ್ದಾನೆ.

    ಕೊನೆಗೆ ಈರುಳ್ಳಿ ಕಳ್ಳನನ್ನು ಎಪಿಎಂಸಿ ವರ್ತಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಈರುಳ್ಳಿ ಬೆಲೆ ಇಳಿಕೆಯಿಂದ ಖರೀದಿ ಸ್ಥಗಿತ, ರೈತರಿಂದ ಪ್ರತಿಭಟನೆ

    ಈರುಳ್ಳಿ ಬೆಲೆ ಇಳಿಕೆಯಿಂದ ಖರೀದಿ ಸ್ಥಗಿತ, ರೈತರಿಂದ ಪ್ರತಿಭಟನೆ

    ರಾಯಚೂರು: ದಿನೇ ದಿನೇ ಈರುಳ್ಳಿ ಬೆಲೆ ಇಳಿಕೆಯಿಂದಾಗಿ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಜೆ ವೇಳೆಗೆ ದಿಢೀರ್ ಈರುಳ್ಳಿ ಖರೀದಿ ಸ್ಥಗಿತಗೊಳಿಸಲಾಯಿತು. ಇದರಿಂದ ಆಕ್ರೋಶಗೊಂಡ ರೈತರು ಈರುಳ್ಳಿ ಖರೀದಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

    ಪ್ರತಿ ಕ್ವಿಂಟಾಲ್‍ಗೆ 15 ಸಾವಿರ ರೂ. ಇದ್ದ ಈರುಳ್ಳಿ ದರ ಈಗ 5 ಸಾವಿರ ರೂಪಾಯಿವರೆಗೆ ಇಳಿದಿದೆ. ಹೀಗಾಗಿ ಖರೀದಿದಾರರು ಈರುಳ್ಳಿ ಖರೀದಿಯನ್ನು ಏಕಾಏಕಿ ಸ್ಥಗಿತಗೊಳಿಸಿದರು. ಇದರಿಂದ ಆತಂಕಕ್ಕೊಳಗಾದ ಈರುಳ್ಳಿ ಬೆಳೆಗಾರರು ಎಪಿಎಂಸಿ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆ ಮಾಡಿದರು.

    ರೈತರ ಪ್ರತಿಭಟನೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ರಾಯಚೂರು ಎಸ್‍ಪಿ ಡಾ.ಸಿ.ಬಿ.ವೇದಮೂರ್ತಿ, ಎಪಿಎಂಸಿ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿದರು. ರೈತರು ತಾವು ತಂದಿರುವ ಎಲ್ಲಾ ಈರುಳ್ಳಿ ಖರೀದಿ ಮಾಡುವಂತೆ ಆಗ್ರಹಿಸಿದರು. ಕೊನೆಗೆ ಬುಧವಾರದಿಂದ ಖರೀದಿ ಮುಂದುವರಿಸುವುದಾಗಿ ಎಪಿಎಂಸಿ ಅಧಿಕಾರಿಗಳು ಹಾಗೂ ಖರೀದಿದಾರರು ಒಪ್ಪಿಕೊಂಡಿದ್ದರಿಂದ ರೈತರು ಹೋರಾಟ ಹಿಂಪಡೆದಿದ್ದಾರೆ.

  • ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡಿದ್ರೆ ಹುಷಾರ್!

    ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡಿದ್ರೆ ಹುಷಾರ್!

    ಮೈಸೂರು: ಈರುಳ್ಳಿ ಬೆಲೆ ದುಬಾರಿ ಆಗಿರುವ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಈರುಳ್ಳಿ ಮಾರಾಟಕ್ಕೆ ಲೈಸನ್ಸ್ ಪಡೆಯುವುದು ಕಡ್ಡಾಯವಾಗಿದ್ದು, ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡುವವರ ವಿರುದ್ಧ ಕ್ರಮ ತೆಗದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಮೈಸೂರು ಜಿಲ್ಲಾಧಿಕಾರಿಗಳು ಈರುಳ್ಳಿ ಮಾರಾಟಕ್ಕೆ ಲೈಸನ್ಸ್ ಪಡೆಯುವುದು ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ. ಅಗತ್ಯ ವಸ್ತುಗಳ ಪರವಾನಗಿಗೆ ಆದೇಶ 1986ರ(ತಿದ್ದುಪಡಿ 2019) ಪ್ರಕಾರ, ನಗರದಲ್ಲಿ ಈರುಳ್ಳಿ ವ್ಯಾಪಾರಿಗಳು ಜಿಲ್ಲಾಧಿಕಾರಿಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯ. ತಾಲೂಕಿನಲ್ಲಿನ ಮಾರಾಟಗಾರರು ಆಯಾ ತಾಲೂಕಿನ ತಹಶಿಲ್ದಾರರ್‍ರಿಂದ ಲೈಸೆನ್ಸ್ ಪಡೆದು ಈರುಳ್ಳಿ ಮಾರಾಟ ಮಾಡಬೇಕು ಎಂದು ಆದೇಶಿಸಲಾಗಿದೆ.

    ಸರ್ಕಾರದ ಆದೇಶದಂತೆ ಈರುಳ್ಳಿ ಸಗಟು ವ್ಯಾಪಾರಿಗಳು 250 ಕ್ವಿಂಟಾಲ್ ದಾಸ್ತಾನು ಮಾಡಬೇಕು. ಚಿಲ್ಲರೆ ವ್ಯಾಪಾರಿಗಳು 50 ಕ್ವಿಂಟಾಲ್ ದಾಸ್ತಾನು ಮಾಡಬೇಕು. ಲೈಸೆನ್ಸ್ ಇಲ್ಲದೆ ಅದಕ್ಕಿಂತ ಹೆಚ್ಚಿನ ಈರುಳ್ಳಿ ದಾಸ್ತಾನು ಮಾಡಿದರೆ, ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಈ ಆದೇಶದಿಂದ ಈರುಳ್ಳಿಗೆ ಅಕ್ರಮ ದಾಸ್ತಾನು ಮಾಡಿಕೊಂಡವರಲ್ಲಿ ಆತಂಕ ಸೃಷ್ಟಿಯಾಗಿದೆ. ಇಂದಿನಿಂದ ಈರುಳ್ಳಿ ಅಂಗಡಿಗಳ ಮೇಲೂ ಆಹಾರ ಇಲಾಖೆ ಪರಿಶೀಲನೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಈರುಳ್ಳಿ ಖರೀದಿಗೆ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಸಾವು

    ಈರುಳ್ಳಿ ಖರೀದಿಗೆ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಸಾವು

    ಹೈದರಾಬಾದ್: ಈರುಳ್ಳಿ ಖರೀದಿಸಲು ಸರತಿಯಲ್ಲಿ ನಿಂತಿದ್ದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.

    ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡದ ಸಂಬಯ್ಯ(55) ಮೃತಪಟ್ಟ ವ್ಯಕ್ತಿಯಾಗಿದ್ದು, ರಾಜ್ಯ ಸರ್ಕಾರ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿರುವ ರೈತರ ಮಾರುಕಟ್ಟೆಯಲ್ಲಿ ಘಟನೆ ನಡೆದಿದೆ. ಸರ್ಕಾರ ಪ್ರತಿ ಕೆ.ಜಿ.ಗೆ 25 ರೂ.ನಂತೆ ಈರುಳ್ಳಿಯನ್ನು ಮಾರಾಟ ಮಾಡುತ್ತಿದೆ. ರಿಯಾಯ್ತಿ ಈರುಳ್ಳಿ ಖರೀದಿಸಲು ರೈತರ ಮಾರುಕಟ್ಟೆಗೆ ಸಂಬಯ್ಯ ಬಂದಿದ್ದರು. ಆಗ ಸರತಿಯಲ್ಲಿ ನಿಂತಾಗ ಕುಸಿದು ಬಿದ್ದಿದ್ದಾರೆ.

    ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ್ಯೆಯೇ ಸಂಬಯ್ಯ ಅವರು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಕುರಿತು ವೈದ್ಯರು ದೃಢಪಡಿಸಿದ್ದಾರೆ.

    ಘಟನೆ ನಂತರ ತೆಲುಗು ದೇಶಂ ಪಕ್ಷ(ಟಿಡಿಪಿ) ವಿಧಾನಸಭೆಯಲ್ಲಿ ಚರ್ಚಿಸಲು ಮುಂದಾಗಿತ್ತು. ಆದರೆ ಸ್ಪೀಕರ್ ಇದಕ್ಕೆ ಅವಕಾಶ ನೀಡಲಿಲ್ಲ. ವ್ಯಕ್ತಿ ಸಾವನ್ನಪ್ಪಿರುವ ಕುರಿತು ಸರ್ಕಾರ ಯಾಕೆ ಸ್ಪಷ್ಟನೆ ನೀಡಿಲ್ಲ ಎಂದು ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪ್ರಶ್ನಿಸಿದರು.

    ಸರ್ಕಾರ ಸಬ್ಸಿಡಿ ದರದಲ್ಲಿ ಈರುಳ್ಳಿ ನೀಡುತ್ತಿದ್ದ ಮಾರಿಕಟ್ಟೆಯಲ್ಲಿ ಸರತಿಯಲ್ಲಿ ನಿಂತಿದ್ದಾಗ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಕುರಿತು ಸರ್ಕಾರ ಏಕೆ ಹೇಳಿಕೆ ಬಿಡುಗಡೆ ಮಾಡಿಲ್ಲ. ಸರ್ಕಾರ ಈರುಳ್ಳಿ ತಲುಪಿಸಲು ಗ್ರಾಮದ ಸ್ವಯಂ ಸೇವಕರನ್ನೇ ಏಕೆ ಆಯ್ಕೆ ಮಾಡಿಕೊಂಡಿತು? ಮನೆ ಮನೆಗೆ ಈರುಳ್ಳಿ ತಲುಪಿಸಲು ಸರ್ಕಾರದಿಂದಲೇ ಏಕೆ ಸ್ವಯಂ ಸೇವಕರನ್ನು ನೇಮಿಸಲಿಲ್ಲ? ಈರುಳ್ಳಿಯನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸೋನಿಯಾ ಗಾಂಧಿ ಹುಟ್ಟುಹಬ್ಬ- ಈರುಳ್ಳಿ ಉಡುಗೊರೆ ನೀಡಿದ ಪುದುಚೇರಿ ಸಿಎಂ

    ಸೋನಿಯಾ ಗಾಂಧಿ ಹುಟ್ಟುಹಬ್ಬ- ಈರುಳ್ಳಿ ಉಡುಗೊರೆ ನೀಡಿದ ಪುದುಚೇರಿ ಸಿಎಂ

    ಪುದುಚೇರಿ: ಈರುಳ್ಳಿ ಬೆಲೆ ಹೆಚ್ಚಳದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.

    ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬವನ್ನು ಕಾರ್ಯಕರ್ತರು ಆಚರಿಸಿದ್ದಾರೆ. ಆದರೆ ನಾರಾಯಣಸ್ವಾಮಿಯವರು ಸೋನಿಯಾ ಅವರ ಹುಟ್ಟುಹಬ್ಬದ ಅಂಗವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮಹಿಳೆಯರಿಗೆ ಈರುಳ್ಳಿ ಹಂಚಿದ್ದಾರೆ.

    ಪುದುಚೇರಿಯ ಕಾಂಗ್ರೆಸ್ ಕೇಂದ್ರ ಕಚೇರಿ ಬಳಿ ಸೋನಿಯಾ ಗಾಂಧಿಯವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಪಕ್ಷದ ಮುಖ್ಯಸ್ಥ ನಮಶಿವಾಯಂ ಅವರು ನಾರಾಯಣಸ್ವಾಮಿಯವರೊಂದಿಗೆ ಮಹಿಳೆಯರಿಗೆ ಈರುಳ್ಳಿ ಹಂಚಿದ್ದಾರೆ. ಈರುಳ್ಳಿ ಬೆಲೆ ಹೆಚ್ಚಾದ ಹಿನ್ನೆಲೆ ಸೋನಿಯಾ ಗಾಂಧಿಯವರ ಹುಟ್ಟುಹಬ್ಬದ ಅಂಗವಾಗಿ ಮಹಿಳಾ ಕಾರ್ಯಕರ್ತರಿಗೆ ಸಿಎಂ ಈರುಳ್ಳಿ ಉಡುಗೊರೆ ನೀಡಿ, ಪ್ರತಿಭಟಿಸಿದ್ದಾರೆ.

    ಈರುಳ್ಳಿ ಬೆಲೆ ಹೆಚ್ಚಳವಾಗಿರುವ ಕುರಿತು ನಿನ್ನೆಯಷ್ಟೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದು, ಈರುಳ್ಳಿ ಬೆಲೆ ಗಗನಕ್ಕೆ ತಲುಪುತ್ತಿದ್ದರೂ ಕೇಂದ್ರ ಸರ್ಕಾರ ಇನ್ನೂ ನಿದ್ರಾವಸ್ಥೆಯಲ್ಲಿದೆ. ಈರುಳ್ಳಿ ಪ್ರತಿ ಕೆ.ಜಿ.ಗೆ 200 ರೂ., ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 75 ರೂ.ಗೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆರಸಿದ್ದರು.

    ಶನಿವಾರ ಗೋವಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೋಟಗಾರಿಕಾ ಮಂಡಳಿ ಬಳಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಈರುಳ್ಳಿ ಬೆಲೆ ಕಡಿಮೆ ಮಾಡಬೇಕು ಇಲ್ಲವೇ ಸರ್ಕಾರ ಸಬ್ಸೀಡಿ ಘೋಷಿಸಬೇಕು. ಆಹಾರ ತಯಾರಿಸಲು ಈರುಳ್ಳಿ ಅಗತ್ಯವಾಗಿದ್ದು, ಬೆಲೆ ಹೆಚ್ಚಾಗಿದ್ದರಿಂದ ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದರು.

    https://www.facebook.com/publictv/videos/804055176712336/

  • ಬೆಲೆ ಹೆಚ್ಚಿದ್ದರೂ ಈಜಿಪ್ಟ್ ಈರುಳ್ಳಿಗಿಲ್ಲ ಡಿಮ್ಯಾಂಡ್

    ಬೆಲೆ ಹೆಚ್ಚಿದ್ದರೂ ಈಜಿಪ್ಟ್ ಈರುಳ್ಳಿಗಿಲ್ಲ ಡಿಮ್ಯಾಂಡ್

    ಬೆಂಗಳೂರು: ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಅಮದು ಮಾಡಿಕೊಳ್ಳಲಾದ ಈಜಿಪ್ಟ್ ಈರುಳ್ಳಿಗೆ ಮಾತ್ರ ಡಿಮ್ಯಾಂಡ್ ಇಲ್ಲವಾಗಿದೆ.

    ದೇಶದ ಇತಿಹಾಸದಲ್ಲೇ ಈರುಳ್ಳಿಯ ಬೆಲೆ ದಾಖಲೆ ಬರೆದಿದೆ. ದರ ಏರಿಕೆಯ ಮಾಸ್ಟರ್ ಸ್ಟ್ರೋಕ್ ಕೊಟ್ಟಿರುವ ಈರುಳ್ಳಿಗೆ ಫುಲ್ ಡಿಮ್ಯಾಂಡು. ಹಾಗಾಗಿ ರಾಜಧಾನಿಯಲ್ಲಿ ಈರುಳ್ಳಿ ಬೆಲೆ ಏರಿಕೆ ಕಂಡ ಹಿನ್ನೆಲೆ, ನಗರಕ್ಕೆ ಈಜಿಪ್ಟ್ ಈರುಳ್ಳಿ ಲಗ್ಗೆಯಿಟ್ಟಿದೆ. ಆದರೆ ಗ್ರಾಹಕರು ಮಾತ್ರ ಈಜಿಪ್ಟ್ ಈರುಳ್ಳಿಯನ್ನು ಖರೀದಿಸೋಕೆ ಮನಸ್ಸು ಮಾಡುತ್ತಿಲ್ಲ.

    ಮಾರುಕಟ್ಟೆಯಲ್ಲಿ ಕೆಜಿಗೆ 110-120 ರೂಪಾಯಿ ಇರುವ ಈ ಈರುಳ್ಳಿಗೆ ಅಷ್ಟೇನೂ ಬೇಡಿಕೆಯಿಲ್ಲ. ಈ ಕೆಂಪು ಈರುಳ್ಳಿ, ಹೆಚ್ಚು ಘಾಟು, ನೀರಿನಾಂಶ ಹೊಂದಿದ್ದು, ಹೇಳಿಕೊಳ್ಳುವಷ್ಟು ರುಚಿನೇ ಇಲ್ಲ ಎಂದು ಗ್ರಾಹಕರು ಈಜಿಪ್ಟ್ ಈರುಳ್ಳಿಯನ್ನು ಕೊಂಡುಕೊಳ್ಳುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯ ನಿರೀಕ್ಷೆಯನ್ನು ಈಜಿಪ್ಟ್ ಈರುಳ್ಳಿ ಹುಸಿಗೊಳಿಸಿದೆ.

    ಜನ ಅಷ್ಟೇ ಅಲ್ಲದೇ ಹೊಟೇಲ್, ರೆಸ್ಟೋರೆಂಟ್ ಮಾಲೀಕರು ಕೂಡ ಈಜಿಪ್ಟ್ ಈರುಳ್ಳಿಯನ್ನು ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ. ಈರುಳ್ಳಿಯ ಬೇಡಿಕೆ ಕೊರತೆಯನ್ನು ನೀಗಿಸಲು ಈಜಿಪ್ಟ್ ಈರುಳ್ಳಿಯನ್ನ ಅಮದು ಮಾಡಿಕೊಂಡರು ಕೂಡ ದೇಸಿ ಈರುಳ್ಳಿಗೆ ಮಾತ್ರ ಬೇಡಿಕೆ ಕಮ್ಮಿಯಾಗಿಲ್ಲ.