Tag: ಈರುಳ್ಳಿ

  • ರೈತ ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ಸುರೇಶ್ ನಾಯ್ಕ್- ಚಿತ್ರದುರ್ಗದ ಈರುಳ್ಳಿಗೆ ಉಡುಪಿಯಲ್ಲಿ ಬೆಲೆ

    ರೈತ ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ಸುರೇಶ್ ನಾಯ್ಕ್- ಚಿತ್ರದುರ್ಗದ ಈರುಳ್ಳಿಗೆ ಉಡುಪಿಯಲ್ಲಿ ಬೆಲೆ

    ಉಡುಪಿ: ಈರುಳ್ಳಿ ಬೆಳೆದು ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದ ಚಿತ್ರದುರ್ಗದ ರೈತ ಮಹಿಳೆಗೆ ನ್ಯಾಯ ಸಿಕ್ಕಿದೆ. ಉಡುಪಿಯ ಪ್ರಗತಿಪರ ರೈತ ಸುರೇಶ್ ನಾಯ್ಕ್ ಅವರು ಕಷ್ಟದಲ್ಲಿರುವ ರೈತ ಕುಟುಂಬದ ನೋವಿಗೆ ಸ್ಪಂದಿಸಿದ್ದಾರೆ.

    ರೈತ ಮಹಿಳೆ ಹಿರಿಯೂರಿನ ಕಾಟನಾಯಕಹಳ್ಳಿ ಗ್ರಾಮದ ವಸಂತ ಕುಮಾರಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಫೋನ್ ಮಾಡಿ ಆತ್ಮಸ್ಥೈರ್ಯ ತುಂಬಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಮಹಿಳೆಯ ಕಷ್ಟಕ್ಕೆ ಉಡುಪಿಯ ರೈತ ಸುರೇಶ ನಾಯ್ಕ್ ಸ್ಪಂದಿಸಿ ಅವರು ಬೆಳೆದ ಈರುಳ್ಳಿಗೆ ಉತ್ತಮ ದರ ನೀಡಿ ಎಲ್ಲವನ್ನೂ ಖರೀದಿಸಿದ್ದಾರೆ.

    ಪತಿ ಪ್ರತಾಪ್ ಜೊತೆಗೂಡಿ ವಸಂತಕುಮಾರಿ ಸುಮಾರು ಮೂರೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಇವರಿಗೆ 130 ಚೀಲ ಇಳುವರಿ ಬಂದಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಸರಿಯಾದ ಬೆಲೆ ಸಿಗದೆ ಮಾರಾಟ ಮಾಡಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಈ ಗ್ರಾಮದ ಬಹುತೇಕ ರೈತರು ಕೂಡ ಕಟಾವು ಮಾಡಿ ಬೆಲೆ ಸಿಗದೇ ಕಂಗಾಲಾಗಿದ್ದರು.

    ಖರೀದಿದಾರರು ಕ್ವಿಂಟಾಲ್‍ಗೆ ಕೇವಲ 150ರಿಂದ 250 ರೂ.ಗೆ ಕೇಳುತ್ತಿದ್ದರು. ಅವರ ಗ್ರಾಮದ ರೈತನೊಬ್ಬ ತಾನು ಬೆಳೆದ 80 ಗೋಣಿ 40 ಚೀಲ ಕೊಳೆತಿತ್ತು. ಮಹಿಳೆ ರೈತರ ನಿಜವಾದ ತೊಂದರೆಯನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದರು. 70 ಸಾವಿರ ರೂ. ವೆಚ್ಚ ಮಾಡಿದ್ದೇವೆ. ಈಗ ನೋಡಿದರೆ 200 ರಿಂದ 300 ರೂ. ರೇಟಿಗೆ ಕೇಳುತ್ತಿದ್ದಾರೆ. ಹೀಗಾದರೆ ವೆಚ್ಚಕ್ಕೂ ಸಾಲುವುದಿಲ್ಲ. ಇದನ್ನೇ ನಂಬಿ ಸಾಲ ಸೂಲ ಮಾಡಿದ್ದೇವೆ. ಆದರೆ ಈ ಬೆಲೆಗೆ ನಮ್ಮ ಸಾಲ ಕೂಡ ತೀರುವುದಿಲ್ಲ. ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ವಸಂತ ಕುಮಾರಿ ಒಂದು ವಿಡಿಯೋ ಮಾಡಿ ಬಿಟ್ಟಿದ್ದರು. ಈ ವಿಡಿಯೋ ಸಿಎಂ ಗಮನವನ್ನೂ ಸೆಳೆದಿತ್ತು.

    ಸಿಎಂ ಸೂಚನೆಯಂತೆ ತೋಟಗಾರಿಕಾ ಅಧಿಕಾರಿಗಳು ಕ್ರಮ ಕೈಗೊಂಡು ಉಡುಪಿಯ ಸುರೇಶ್ ನಾಯ್ಕ್ ಅವರಲ್ಲಿ ಈರುಳ್ಳಿ ಮಾರಿಕೊಡುವಂತೆ ವಿನಂತಿಸಿದ್ದಾರೆ. ಸುರೇಶ್ ನಾಯ್ಕ್ ಅವರು ಲಾಕ್‍ಡೌನ್ ನಡುವೆಯೂ ಟನ್‍ಗಟ್ಟಲೆ ತರಕಾರಿ ಹಣ್ಣು ಹಂಪಲು ಮಾರಾಟ ಮಾಡಿ ಸೈ ಎನಿಸಿ ಕೊಂಡಿದ್ದರು. ಸುರೇಶ್ ನಾಯ್ಕ್ ಅವರು 172 ಚೀಲ ಈರುಳ್ಳಿಯನ್ನು ಚೀಲಕ್ಕೆ 550 ರೂಪಾಯಿಯಂತೆ ಕೊಟ್ಟು ಖರೀದಿಸಿದ್ದಾರೆ. ನೂರೈವತ್ತು ಇನ್ನೂರಕ್ಕೂ ಬೇಡವಾಗಿದ್ದ ಈರುಳ್ಳಿ 550 ರೂ.ಗೆ ಮಾರಾಟ ಆಗಿರೋದ್ರಿಂದ ರೈತ ಮಹಿಳೆಗೆ ನ್ಯಾಯ ಸಿಕ್ಕಂತಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಸುರೇಶ್ ನಾಯ್ಕ್ ಅವರು, ಮಾಧ್ಯಮಗಳಲ್ಲಿ ಈರುಳ್ಳಿ ಬೆಳೆದ ರೈತ ಮಹಿಳೆಯ ನೋವು ನೋಡಿ ಬಹಳ ಬೇಸರವಾಯಿತು. ಕೆವಿಕೆಯಿಂದ ಮಾಹಿತಿ ಕೂಡ ಬಂತು. ಒಬ್ಬ ರೈತರ ಈರುಳ್ಳಿ ಖರೀದಿಸಿದ್ದೇನೆ. ರಾಜ್ಯದ ಕೆಲವರು ಈ ರೀತಿ ಖರೀದಿ ಮಾಡಿದರೆ ಮಣ್ಣನ್ನು ನಂಬಿದವರಿಗೆ ಶಕ್ತಿ ಬರುತ್ತದೆ ಎಂದರು.

    ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಕುಮಾರ್ ಮಾತನಾಡಿ, ಕೊರೋನಾ ಸಮಯದಲ್ಲಿ ಮಾರುಕಟ್ಟೆಯನ್ನು, ದಲ್ಲಾಳಿಗಳನ್ನು ನಂಬಿ ಕೂತರೆ ಕಷ್ಟ. ಸಂದಿಗ್ಧ ಸ್ಥಿತಿಯನ್ನು ನಿಭಾಯಿಸಬೇಕು. ಅದಕ್ಕೇನಾದರು ಹೊಸ ಹೊಸ ಐಡಿಯಾಗಳನ್ನು ಮಾಡಬೇಕು ಎಂದು ಹೇಳಿದರು.

  • ಈರುಳ್ಳಿಗೆ ಬೆಲೆ ಸಿಗ್ತಿಲ್ಲವೆಂದು ವಿಡಿಯೋ ಮಾಡಿದ್ದ ರೈತ ಮಹಿಳೆ – ಫೋನ್ ಮಾಡಿ ಧೈರ್ಯ ಹೇಳಿದ ಸಿಎಂ

    ಈರುಳ್ಳಿಗೆ ಬೆಲೆ ಸಿಗ್ತಿಲ್ಲವೆಂದು ವಿಡಿಯೋ ಮಾಡಿದ್ದ ರೈತ ಮಹಿಳೆ – ಫೋನ್ ಮಾಡಿ ಧೈರ್ಯ ಹೇಳಿದ ಸಿಎಂ

    ಚಿತ್ರದುರ್ಗ: ಕೊರೊನಾ ಹರಡದಂತೆ ಭಾರತ ಲಾಕ್‍ಡೌನ್ ಆಗಿದೆ. ಇದರಿಂದ ಅನೇಕರು ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತ ಮಹಿಳೆ ಸರಿಯಾಗಿ ಬೆಲೆ ಸಿಗುತ್ತಿಲ್ಲ ಎಂದು ವಿಡಿಯೋ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಇದೀಗ ರೈತ ಮಹಿಳೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಧೈರ್ಯ ಹೇಳಿದ್ದಾರೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯನಕನಹಳ್ಳಿ ರೈತ ಮಹಿಳೆ ವಸಂತಕುಮಾರಿ ವಿಡಿಯೋ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ. ಇಡೀ ದೇಶವೇ ಲಾಕ್‍ಡೌನ್ ಆದರೂ ರೈತ ಮಾತ್ರ ಕೆಲಸ ಮಾಡುತ್ತಿದ್ದಾನೆ. ದೇಶ ಆಳುವ ಪ್ರಧಾನಿಯಿಂದ, ದೇಶ ಕಾಯೋ ಸೈನಿಕ ಕೂಡ ತಿನ್ನೋದು ರೈತ ಬೆಳೆದ ಬೆಳೆಯನ್ನೇ. ಆದರೆ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಲೆ ಇಲ್ಲ ಎಂದು ರೈತರ ಕಷ್ಟದ ಬಗ್ಗೆ ತಿಳಿಸಿದ್ದಾರೆ.

    ಈರುಳ್ಳಿ ಬೆಳೆಗೆ ಬೆಲೆ ಇಲ್ಲ. ಚೀಲ ಈರುಳ್ಳಿಗೆ 250-300 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ಆದರೆ ಈರುಳ್ಳಿ ಬಿತ್ತನೆ, ಕೊಯ್ಯೋದಕ್ಕೆ ಮತ್ತು ಕೂಲಿ ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಹೀಗಾಗಿ ಒಂದು ಚೀಲ ಈರುಳ್ಳಿ ಬೆಳೆಯೋದಕ್ಕೆ ಕನಿಷ್ಠ 500-600 ರೂಪಾಯಿ ಖರ್ಚಾಗತ್ತೆ. ಆದರೆ ಮಾರುಕಟ್ಟೆಯಲ್ಲಿ ನಮ್ಮ ಬೆಳೆಗೆ ಬೆಲೆಯೇ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಸರ್ಕಾರಕ್ಕೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.

    ಈ ವಿಡಿಯೋ ನೋಡಿದ ಸಿಎಂ ಯಡಿಯೂರಪ್ಪ ಚಿತ್ರದುರ್ಗ ಜಿಲ್ಲೆಯ ರೈತ ಮಹಿಳೆಗೆ ಅಭಯ ನೀಡಿದ್ದಾರೆ. ರೈತ ಮಹಿಳೆಗೆ ಫೋನ್ ಮಾಡಿ ಆಕೆಯ ಜಾಣತನಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿಕೊಡುತ್ತೇನೆ ಸಿಎಂ ಧೈರ್ಯ ತುಂಬಿದ್ದಾರೆ.

    ಸಿಎಂ ಫೋನ್ ಮಾಡಿದ್ದಾಗ ರೈತ ಮಹಿಳೆ, ಸುಮಾರು ರೈತರು ಈರುಳ್ಳಿ ಬೆಳೆದಿದ್ದೇವೆ. ಗ್ರೀನ್ ಪಾಸ್ ಕೊಡಿಸಿದ್ದೀರಿ. ಆದರೆ ಹೆಚ್ಚು ಅಂದರೂ 1 ಚೀಲಕ್ಕೆ 400 ರೂ. ಕೊಡುತ್ತಾರೆ ಅಷ್ಟೆ. ಸರ್ಕಾರದ ಸೌಲಭ್ಯ ಯಾವುದು ರೈತರಿಗೆ ತಲುಪುತ್ತಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿಎಂ, ಬೆಲೆ ಕಡಿಮೆ ಇದೆ ಅಲ್ವಾ? ಡಿಸಿ ಜೊತೆ ಮಾತನಾಡುತ್ತೀನಿ. ಏನು ವ್ಯವಸ್ಥೆ ಮಾಡಬೇಕು ಮಾಡಿಸುತ್ತೀನಿ. ಬಹಳ ಬುದ್ಧಿವಂತೆ ಇದ್ದೀಯಾ ಕಣ್ಣಮ್ಮ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಅಲ್ಲದೇ ಸಿಎಂ ಯಡಿಯೂರಪ್ಪ ಕೂಡಲೇ ಡಿಸಿಗೆ ಕರೆ ಮಾಡಿ, ಆ ಹಳ್ಳಿಗೆ ಭೇಟಿ ನೀಡಿ ಮಹಿಳೆಯ ಕಷ್ಟ ಆಲಿಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಮಹಿಳೆ ಬೆಳೆದ ಈರುಳ್ಳಿ ಮತ್ತು ಇತರ ರೈತರು ಅಲ್ಲಿ ಈರುಳ್ಳಿ ಬೆಳೆದು ತೊಂದರೆಗೀಡಾಗಿದ್ದರೆ ಕೂಡಲೇ ಸರ್ಕಾರದ ವತಿಯಿಂದ ಖರೀದಿ ಮಾಡುವಂತೆ ಸೂಚನೆ ನೀಡಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್ – ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು

    ಲಾಕ್‍ಡೌನ್ ಎಫೆಕ್ಟ್ – ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ರಾಯಚೂರಿನಲ್ಲಿ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಎಷ್ಟೇ ಎಚ್ವರಿಕೆ ನೀಡಿದರೂ ಜನ ಹೆಚ್ಚು ಸಂಖ್ಯೆಯಲ್ಲಿ ಸೇರುತ್ತಿದ್ದರಿಂದ ಎಪಿಎಂಸಿ ಬಂದ್ ಆಗಿದೆ. ಹೀಗಾಗಿ ಭತ್ತವನ್ನ ನೇರವಾಗಿ ಮಿಲ್ ಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ ಈರುಳ್ಳಿ ಬೆಳೆಗೆ ಮಾರುಕಟ್ಟೆ ಇಲ್ಲವಾಗಿದ್ದು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.

    ಲಿಂಗಸುಗೂರು ತಾಲೂಕಿನ ಬೈಯ್ಯಾಪುರ ತಾಂಡದ ರೈತ ಮಹಾಂತೇಶ್ ರಾಥೋಡ್ ತನ್ನ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಮಾರುಕಟ್ಟೆಯಿಲ್ಲದೆ ಹಾಳಾಗುತ್ತಿದೆ. ಸುಮಾರು 800 ಚೀಲಗಳಷ್ಟು ಈರುಳ್ಳಿ ಈಗ ಹಾಳಾಗುವ ಭೀತಿಯಲ್ಲಿದೆ.

    ಲಾಕ್‍ಡೌನ್ ಗೆ ಮುಂಚೆ 2,500 ರೂ.ಗೆ ಕ್ವಿಂಟಾಲ್ ಇದ್ದ ಈರುಳ್ಳಿ ಈಗ 1,000 ರಿಂದ 1,200 ರೂಪಾಯಿಗೆ ಕ್ವಿಂಟಾಲ್ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಈರುಳ್ಳಿಗೆ ಮಾರುಕಟ್ಟೆ ಒದಗಿಸಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

  • ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಬೆಳಗಾವಿ: ಈರುಳ್ಳಿ ವ್ಯಾಪಾರಿ ಸೇರಿದಂತೆ ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಆತನ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ ಇದೀಗ ಎದುರಾಗಿದೆ.

    ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮ ಹಾಗೂ ಜಿಲ್ಲೆಯಾದ್ಯಂತ ಆತಂಕ ತೀವ್ರಗೊಂಡಿದ್ದು, ಸೋಂಕಿತ ಸಂಖ್ಯೆ 128 ಸೇರಿದಂತೆ ತಂದೆ, ತಾಯಿ ಹಾಗೂ ಸಹೋದರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪೇಷಂಟ್ ನಂ. 128 ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಉತ್ತರ ಪ್ರದೇಶದ ಚೇಕಡಾ ಗ್ರಾಮದಲ್ಲಿ ಸಹ ಧಾರ್ಮಿಕ ಪ್ರಚಾರ ನಡೆಸಿ, ಮಾರ್ಚ್ 22 ರಂದು ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮಕ್ಕೆ ಆಗಮಿದ್ದಾರೆ.

    ಗ್ರಾಮಕ್ಕೆ ಮರಳಿದ ನಂತರ ಈರುಳ್ಳಿ ವ್ಯಾಪರದಲ್ಲಿ ತೊಡಗಿದ್ದು, ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆ ಸೇರಿದಂತೆ ವಿವಿಧೆಡೆ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ. ತಂದೆ ಹಾಗೂ ಮಕ್ಕಳಿಬ್ಬರು ಈರುಳ್ಳಿ ವ್ಯಾಪರ ಮಾಡುತ್ತಾರೆ. ಈ ಮೂರು ಗ್ರಾಮಗಳಲ್ಲಿ ನಡೆಯುವ ಸಂತೆಗೆ 10ಕ್ಕೂ ಹೆಚ್ಚು ಗ್ರಾಮಗಳ ಜನ ಭಾಗಿಯಾಗುತ್ತಾರೆ. ಸದ್ಯ ಸೋಂಕಿತ ಕುಟುಂಬ ಬಳಿ ಯಾರೆಲ್ಲ ಈರುಳ್ಳಿ ಖರೀಸಿದ್ದಾರೆ, ಅವರೆಲ್ಲ ಆಂತಕದಲ್ಲಿದ್ದಾರೆ. ನಮಗೂ ಎಲ್ಲಿ ಸೋಂಕು ತಗುಲಿದೆಯೋ ಎಂಬ ದುಗುಡದಲ್ಲಿದ್ದಾರೆ.

  • ಈರುಳ್ಳಿ ಬೆಲೆ ಭಾರೀ ಇಳಿಕೆ – 1 ಕೆಜಿಗೆ 20 ರೂಪಾಯಿ

    ಈರುಳ್ಳಿ ಬೆಲೆ ಭಾರೀ ಇಳಿಕೆ – 1 ಕೆಜಿಗೆ 20 ರೂಪಾಯಿ

    ಬೆಂಗಳೂರು: ಡಿಸೆಂಬರ್ ತಿಂಗಳಲ್ಲಿ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಈಗ ಭಾರೀ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸದ್ಯ 1 ಕೆ.ಜಿ ಈರುಳ್ಳಿ 20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

    ರೈತರ ಎರಡನೇ ಬೆಳೆ ಮಾರುಕಟ್ಟೆಗೆ ಬಂದಿರುವುದರಿಂದ ಈರುಳ್ಳಿ ಬೆಲೆ ಕಡಿಮೆಯಾಗಿದೆ. ಆದರೆ ಈ ನಡುವೆ ಕೇಂದ್ರ ಸರ್ಕಾರ ನಮ್ಮ ದೇಶದ ಈರುಳ್ಳಿ ರಫ್ತನ್ನು ಬ್ಯಾನ್ ಮಾಡಿರುವುದರಿಂದ ರೈತರಿಗೆ ಅನಾನುಕೂಲವಾಗಿದೆ. ಸದ್ಯಕ್ಕೆ ಈಗ ಮಹಾರಾಷ್ಟ್ರ ರಾಜ್ಯದ ಸೋಲಾಪುರ, ನಾಸಿಕ್, ಅಹ್ಮದ್‍ನಗರ್ ಹಾಗೂ ರಾಜ್ಯದ ಬಿಜಾಪುರದಿಂದ ಈರುಳ್ಳಿಯ ಎರಡನೇ ಬೆಳೆ ಬರುತ್ತಿದೆ. ಇದರಿಂದ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

    ಕೇಂದ್ರ ಸರ್ಕಾರ ರೈತರಿಗಾಗುವ ನಷ್ಟ ತಡೆಯಲು ರಫ್ತು ಆರಂಭಿಸಿದರೆ ಒಳಿತಾಗುತ್ತೆ. ಹೀಗಾಗಿ ರಫ್ತನ್ನು ಕೂಡಲೇ ಆರಂಭಿಸಬೇಕಿದೆ ಎಂದು ರೈತರು ಒತ್ತಾಯಿಸುತ್ತಿದ್ದಾರೆ.

    ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 20 ರಿಂದ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರಿಗೂ ನಷ್ಟವಾಗುತ್ತಿದೆ. ಸಾರಿಗೆ ವೆಚ್ಚ, ಕೂಲಿ ವೆಚ್ಚಗಳು ಹೆಚ್ಚಾಗಿರುವುದರಿಂದ ರೈತರಿಗೆ ಈರುಳ್ಳಿ ಬೆಲೆ ಇಳಿದಿರೋದು ನಷ್ಟ ಉಂಟುಮಾಡುತ್ತಿದೆ. ರಫ್ತು ಆರಂಭಿಸುವುದರಿಂದ 1 ಕೆ.ಜಿ ಈರುಳ್ಳಿಗೆ 40-50 ರೂಪಾಯಿಗೆ ಬಂದರೆ ರೈತರಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಚಾರಗಳು ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.

  • ಈರುಳ್ಳಿ ದರ ಕುಸಿತ – ಗ್ರಾಹಕರ ಮೊಗದಲ್ಲಿ ಮಂದಹಾಸ

    ಈರುಳ್ಳಿ ದರ ಕುಸಿತ – ಗ್ರಾಹಕರ ಮೊಗದಲ್ಲಿ ಮಂದಹಾಸ

    ಬೆಂಗಳೂರು: ಇಷ್ಟು ದಿನ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ದರ ಇಳಿಕೆಯಾಗಿದೆ. ಈರುಳ್ಳಿ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸುಗ್ಗಿ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿ ಸಿಕ್ಕಂತಾಗಿದೆ. ಈರುಳ್ಳಿ ದರ ಈಗ ಕುಸಿತ ಕಂಡಿದ್ದು, ಗ್ರಾಹಕರ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಿದೆ.

    ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದರಿಂದ ದರ ಇಳಿಕೆಯಾಗಿದೆ. ಪ್ರತಿ ಕೆಜಿಗೆ ಸೋಮವಾರ ಕೆ.ಆರ್. ಮಾರುಕಟ್ಟೆಯಲ್ಲಿ ಈರುಳ್ಳಿ 40ರಿಂದ 50 ರೂ.ಗೆ ಮಾರಾಟವಾಯಿತು. ಉತ್ತಮ ಗುಣಮಟ್ಟದ ಈರುಳ್ಳಿ 60ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ. ಹಾಪ್‍ಕಾಮ್ಸ್ ಮಳಿಗೆಗಳಲ್ಲಿ ಪ್ರತಿ ಕೆ.ಜಿ.ಗೆ 70 ರೂ.ನಂತೆ ಮಾರಾಟವಾಯಿತು. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ 20 ರೂ.ಗೆ ಮಾರಾಟವಾದ್ರೆ, ಉತ್ತಮ ಗುಣಮಟ್ಟದ ಈರುಳ್ಳಿ 40ರಿಂದ 42 ರೂ. ಹಾಗೂ ಟರ್ಕಿ ಈರುಳ್ಳಿ 10 ರಿಂದ 20 ರೂ.ಗೆ ಮಾರಾಟವಾಯಿತು.

    ನವೆಂಬರ್‍ನಿಂದ ಈರುಳ್ಳಿ ದರದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡು, ಪ್ರತಿ ಕೆಜಿಗೆ 150 ರಿಂದ 200 ರೂ. ರವರೆಗೂ ತಲುಪಿತ್ತು. ಹೀಗಾಗಿ ದಾಸ್ತಾನು ಕೊರತೆ ನೀಗಿಸಲು ವಿದೇಶಗಳಿಂದಲೂ ಈರುಳ್ಳಿಯನ್ನ ಆಮದು ಮಾಡಿಕೊಳ್ಳಲಾಗಿತ್ತು. ಟರ್ಕಿ, ಈಜಿಪ್ಟ್‍ನಿಂದ ಆಮದು ಬಳಿಕವೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. ಕರ್ನಾಟಕ, ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ದರ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

    ಎರಡು ದಿನಗಳಿಂದ ಈರುಳ್ಳಿ ಪೂರೈಕೆ ಹೆಚ್ಚಿದೆ. ಸೋಮವಾರ 215 ಟ್ರಕ್‍ಗಳಲ್ಲಿ ಈರುಳ್ಳಿ ನಗರಕ್ಕೆ ಬಂದಿದೆ. ಪ್ರತಿ ಕ್ವಿಂಟಲ್‍ಗೆ 4 ಸಾವಿರದಿಂದ 4.2 ಸಾವಿರ ರೂ.ವರೆಗೆ ಮಾರಾಟ ಆಗುತ್ತಿದೆ.

  • ಈರುಳ್ಳಿ ಬೆಲೆ ಕುಸಿತ – ನಿಟ್ಟುಸಿರು ಬಿಟ್ಟ ಗ್ರಾಹಕರು

    ಈರುಳ್ಳಿ ಬೆಲೆ ಕುಸಿತ – ನಿಟ್ಟುಸಿರು ಬಿಟ್ಟ ಗ್ರಾಹಕರು

    ಬೆಂಗಳೂರು: ಈರುಳ್ಳಿ ಬೆಲೆ ಕುಸಿದ ಹಿನ್ನೆಲೆಯಲ್ಲಿ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

    ಕಳೆದ ಎರಡು ತಿಂಗಳಿಂದ ಈರುಳ್ಳಿ ಚಿಕನ್‍ಗೆ ಕಾಂಪಿಟೇಷನ್ ಕೊಡುತ್ತಿತ್ತು. ಈರುಳ್ಳಿ ದೋಸೆ, ಈರುಳ್ಳಿ ಪಕೋಡಾ, ಈರುಳ್ಳಿ ಪಲ್ಯೆ ಹೀಗೆ ಯಾವುದೇ ಈರುಳ್ಳಿ ಖಾದ್ಯಗಳು ಹೋಟೆಲ್‍ಗಳಲ್ಲಿ ಸಿಗುತ್ತಿರಲಿಲ್ಲ. ಆದರೆ ಈಗ ಈರುಳ್ಳಿ ಬೆಲೆ ಕಡಿಮೆ ಆಗುವುದರ ಮೂಲಕ ಗ್ರಾಹಕರಿಗೆ ಸಂತಸದ ಸುದ್ದಿ ದೊರೆತಿದೆ.

    ಕಳೆದ ಎರಡು ತಿಂಗಳಿಂದ ಈರುಳ್ಳಿ ದರ ಗಗನಕ್ಕೇರಿದ್ದು, ಕೆ.ಜಿಗೆ 120-150 ರೂ ಆಗಿತ್ತು. ಕೆಲ ಸಮಯದಲ್ಲಿ 200 ರೂ. ಗಡಿ ದಾಟಿತ್ತು. ಈಗ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ 60 ರಿಂದ 70 ರೂ.ಗೆ ಮಾರಟ ಮಾಡಲಾಗುತ್ತಿದೆ. ಹಾಗೆಯೇ ಕಡಿಮೆ ಗುಣಮಟ್ಟದ ಈರುಳ್ಳಿ ಒಂದು ಕೆ.ಜಿಗೆ 30 ರಿಂದ 40 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ.

    ಈರುಳ್ಳಿ ಬೆಲೆ ದಿಢೀರ್ ಇಳಿಕೆಯಾದ್ದರಿಂದ ಗ್ರಾಹಕರು ಖುಷಿಯಾಗಿದ್ದಾರೆ. ಹುಬ್ಬಳ್ಳಿ, ಬಳ್ಳಾರಿ, ಮಹಾರಾಷ್ಟ್ರ ಸೇರಿದಂತೆ ಹಲವೆಡೆಗಳಿಂದ ಹೊಸ ಈರುಳ್ಳಿ ಬರುತ್ತಿರುವುದೇ ಬೆಲೆ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

  • ಸಿಮ್ ಖರೀದಿಸಿದ್ರೆ ಕೆಜಿ ಈರುಳ್ಳಿ ಫ್ರಿ!

    ಸಿಮ್ ಖರೀದಿಸಿದ್ರೆ ಕೆಜಿ ಈರುಳ್ಳಿ ಫ್ರಿ!

    ಶಿವಮೊಗ್ಗ: ಆಫರ್‌ಗಳ ಮೇಲೆ ಆಫರ್‌ಗಳನ್ನು ಕೊಡುತ್ತಾ ಬರುತ್ತಿರುವ, ಅಗ್ಗದ ದರದಲ್ಲಿ (ಉಚಿತವಾಗಿ) ಕರೆ ಸೌಲಭ್ಯವನ್ನು ನೀಡಿದ ಜಿಯೋ ಸಂಸ್ಥೆ ಈಗ ದಿನಬಳಕೆ ವಸ್ತುಗಳ ಮೇಲೂ ಆಫರ್ ನೀಡಲು ಮುಂದಾಗಿದೆ.

    ಈರುಳ್ಳಿ ಬೆಲೆ ಶತಕ ಬಾರಿಸಿದ್ದೇ ತಡ ಈರುಳ್ಳಿ ಕೇಂದ್ರಿತ ಭಿನ್ನ ಭಿನ್ನ ಆಫರ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಈರುಳ್ಳಿಯನ್ನು ಜಿಯೋ ಸಂಸ್ಥೆ ಆಫರ್‌ನಲ್ಲಿ ನೀಡುತ್ತಿದೆ. ಸಿಮ್ ಖರೀದಿಸಿದರೆ ಒಂದು ಕೆಜಿ ಈರುಳ್ಳಿ ಉಚಿತವಾಗಿ ನೀಡುತ್ತಿದೆ. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮಕ್ಕೆ ಟೆಲಿಕಾಂ ಸಂಸ್ಥೆ ತಂಡ ಆಗಮಿಸಿದೆ. ಗ್ರಾಹಕರು 300 ರೂ. ಕೊಟ್ಟು ಸಿಮ್ ಖರೀದಿಸಿದರೆ, ಅವರಿಗೆ 120 ರೂ. ಬೆಲೆಯಿರುವ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮೂಲಕ ಟೆಲಿಕಾಂ ಸಂಸ್ಥೆ ಗ್ರಾಹಕರ ಗಮನವನ್ನು ಸೆಳೆಯುತ್ತಿದೆ.

  • ಪ್ರವಾಹ ಎಫೆಕ್ಟ್ – ಬಾಗಲಕೋಟೆಯಲ್ಲಿ ಶೇ. 60 ರಿಂದ 70 ಬೆಳೆ ಹಾನಿ

    ಪ್ರವಾಹ ಎಫೆಕ್ಟ್ – ಬಾಗಲಕೋಟೆಯಲ್ಲಿ ಶೇ. 60 ರಿಂದ 70 ಬೆಳೆ ಹಾನಿ

    -3 ಲಕ್ಷ ಕ್ವಿಂಟಲ್ ಈರುಳ್ಳಿ ಲಾಸ್

    ಬಾಗಲಕೋಟೆ: ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹದಿಂದ ಬಾಗಲಕೋಟೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಪ್ರವಾಹದ ಎಫೆಕ್ಟ್ ನಿಂದ ಬಾಗಲಕೋಟೆ ಜಿಲ್ಲೆಯ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.

    ಜಿಲ್ಲೆಯಲ್ಲಿ ಈ ವರ್ಷ ಅಂದಾಜು 3 ಲಕ್ಷ ಕ್ವಿಂಟಾಲ್ ಈರುಳ್ಳಿ ಬೆಳೆ ಹಾನಿಯಾಗಿದೆ. ಇದಕ್ಕೆ ಮಾರುಕಟ್ಟೆ ಅಂಕಿ ಅಂಶಗಳೇ ಜೀವಂತ ಸಾಕ್ಷಿಯಾಗಿದ್ದು, ಪ್ರತಿ ವರ್ಷ ಏಪ್ರಿಲ್‍ನಿಂದ ಡಿಸೆಂಬರ್ ವರೆಗೂ ಬರುತ್ತಿದ್ದ ಈರುಳ್ಳಿ ಈ ಬಾರಿ ಭಾರೀ ಕುಸಿತ ಕಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ.

    ಪ್ರತಿ ವರ್ಷ ಏಪ್ರಿಲ್‍ನಿಂದ ಡಿಸೆಂಬರ್ ವರೆಗೂ 4 ರಿಂದ 4.5 ಲಕ್ಷ ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ವರ್ಷ ಕೇವಲ 1.50 ಲಕ್ಷ ಕ್ವಿಂಟಾಲ್ ಈರುಳ್ಳಿ ಮಾತ್ರ ಮಾರುಕಟ್ಟೆಗೆ ಬಂದಿದೆ. ಸದ್ಯ ರೈತರ ಬಳಿಯಿದ್ದ ಈರುಳ್ಳಿ ಖಾಲಿ ಆಗಿದೆ. ಆದರೆ ಬೆಲೆ ಗಗನಕ್ಕೇರಿದೆ.

    ಪ್ರತಿ ಶನಿವಾರ ಹಾಗೂ ಗುರುವಾರ ಬಾಗಲಕೋಟೆ ಮಾರುಕಟ್ಟೆಗೆ ಕೇವಲ 458 ಕ್ವಿಂಟಾಲ್ ಈರುಳ್ಳಿ ಮಾತ್ರ ಮಾರಾಟಕ್ಕೆ ಬರುತ್ತಿದೆ. ಹೀಗಾಗಿ ಈರುಳ್ಳಿ ಕ್ವಿಂಟಾಲ್‍ಗೆ ಕನಿಷ್ಟ ಒಂದು ಸಾವಿರದಿಂದ ಗರಿಷ್ಠ 8 ಸಾವಿರ ರೂ.ವರೆಗೂ ಹರಾಜಾಗುತ್ತಿದೆ.

    ಈ ವರ್ಷ ಬಾಗಲಕೋಟೆ ಜಿಲ್ಲೆಯ ಮಾರುಕಟ್ಟೆಯಲ್ಲಿ ಈರುಳ್ಳಿ ಗರಿಷ್ಠ 12 ಸಾವಿರದ ವರೆಗೂ ಮಾರಾಟ ಆಗಿದೆ. ಆದರೆ ಕಳೆದ ವರ್ಷ ಈರುಳ್ಳಿಗೆ ಭಾರೀ ಪ್ರಮಾಣದಲ್ಲಿ ಇದ್ದ ಕಾರಣ ಕ್ವಿಂಟಲ್‍ಗೆ ಕನಿಷ್ಠ 300 ರಿಂದ ಗರಿಷ್ಠ 1350 ರೂ. ಬೆಲೆ ಸಿಕ್ಕಿತ್ತು. ಈಗ ಬೆಲೆ ಇದೆ, ಆದರೆ ಬೆಳೆ ಇಲ್ಲ ಎಂದು ರೈತರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಪೇಚಾಡುವಂತಾಗಿದೆ. ಪ್ರವಾಹದಿಂದ ಈರುಳ್ಳಿ ಬೆಳೆ ಲಾಸ್ ಆಗಿದ್ದು ವರ್ತಕರಿಗೂ ವ್ಯಾಪಾರ, ವಹಿವಾಟಿನ ಮೇಲೂ ಪರಿಣಾಮ ಬೀರಿದೆ.

  • ಆಸ್ತಿ ಕಲಹಕ್ಕೆ ಬಂಗಾರದಂತಹ ಈರುಳ್ಳಿ ನಾಶ- ಸಂಕಷ್ಟದಲ್ಲಿ ಅನ್ನದಾತ

    ಆಸ್ತಿ ಕಲಹಕ್ಕೆ ಬಂಗಾರದಂತಹ ಈರುಳ್ಳಿ ನಾಶ- ಸಂಕಷ್ಟದಲ್ಲಿ ಅನ್ನದಾತ

    ಚಿತ್ರದುರ್ಗ: ಈರುಳ್ಳಿಗೆ ಬಂಗಾರದ ಬೆಲೆ ಬಂದಿದೆ. ಹೀಗಾಗಿ ಗ್ರಾಹಕರ ಕಣ್ಣಲ್ಲಿ ನೀರು ಬಂದರೂ ಸಹ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಬರದನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ವಿಡಪನಕುಂಟೆ ಗ್ರಾಮದಲ್ಲಿ ನಿಂಗೇಗೌಡ ಎಂಬ ರೈತನೋರ್ವ ಕಷ್ಟಪಟ್ಟು ಬೆಳೆದ ಬಂಗಾರದಂತಹ ಈರುಳ್ಳಿಗೆ ಆತನ ಮೇಲಿನ ವೈಯಕ್ತಿಕ ದ್ವೇಷ ಹಾಗೂ ಆಸ್ತಿ ವಿವಾದದಿಂದಾಗಿ ಶತೃಗಳು ಕಳೆನಾಶಕವನ್ನು ಸಿಂಪಡಿಸಿ ಬೆಳೆಯನ್ನು ನಾಶಗೊಳಿಸಿದ್ದಾರೆ. ಹೀಗಾಗಿ ರೈತನ ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಾಗಿದೆ.

    ಮಾರುಕಟ್ಟೆಯಲ್ಲಿ ಇಂದು ನೂರು ರೂಪಾಯಿ ದುಡ್ಡು ಕೊಟ್ಟರೂ ಸಹ ಒಂದು ಕೆಜಿ ಈರುಳ್ಳಿ ಸಿಗುತ್ತಿಲ್ಲ. ಅಗತ್ಯವಿರುವಷ್ಟು ಈರುಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೀಗಾಗಿ ಈರುಳ್ಳಿ ಬೆಳೆ ಬೆಳೆಯುತ್ತಿರೋ ರೈತನ ಮೊಗದಲ್ಲಿ ಚಿಕ್ಕ ಮಂದಹಾಸ ಮೂಡುತ್ತಿದ್ದೂ, ಇನ್ನು ಕೆಲವೇ ದಿನಗಳಲ್ಲಿ ಕೈಗೆ ಬರುವ ಈರುಳ್ಳಿಗೆ ಬಹಳ ವರ್ಷಗಳ ನಂತರ ಬಂಗಾರದ ಬೆಲೆ ಬಂದಿದೆ. ಹೀಗಾಗಿ ಈ ಬಾರಿ ಸಾಲದ ಸುಳಿಯಿಂದ ಬಚಾವ್ ಆಗುವ ಕನಸು ಮನದಲ್ಲಿ ಮೂಡಿದೆ.

    ವಿಡಪನಕುಂಟೆಯ ನಿಂಗೇಗೌಡ ಎಂಬ ರೈತ ಬೆಳೆದಿದ್ದ 3 ಎಕರೆ ಈರುಳ್ಳಿ ಮಾತ್ರ ಸಂಪೂರ್ಣ ನಾಶವಾಗಿದೆ. ಈ ಬಾರಿ ಮಳೆ ಉತ್ತಮವಾಗಿ ಬಂದಿದ್ದೂ, ರೈತನ ಬದುಕಿಗೆ ಭರವಸೆ ಮೂಡಿಸಿದ್ದ ಈರುಳ್ಳಿ ತನ್ನ ಮೇಲಿನ ದ್ವೇಷಕ್ಕೆ ಬಲಿಯಾಗಿದೆ. ಸಂಪಾಗಿ ಬೆಳೆದು, ಕೆಲವೇ ದಿನಗಳಲ್ಲಿ ಕೀಳಬೇಕಿದ್ದ ಈರುಳ್ಳಿಗೆ ಆತನ ದ್ವೇಷಿಗಳು ಕಳೆ ನಾಶಕ ರೂಪದ ವಿಷ ಸಿಂಪಡಿಸಿದ್ದಾರೆ.

    ಮೂರು ಎಕರೆ ಜಮೀನನಲ್ಲಿ ಈ ಬಾರಿ ಇಳುವರಿ ಸಹ ಚೆನ್ನಾಗಿ ಬಂದಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಸುಮಾರು 10 ರಿಂದ 15 ಲಕ್ಷ ಬೆಲೆಗೆ ಈರುಳ್ಳಿ ಮಾರಾಟವಾಗುವ ನಿರೀಕ್ಷೆ ಇಟ್ಟುಕೊಂಡಿದ್ದ ರೈತ ನಿಂಗೇಗೌಡ, ಪಕ್ಕದ ಹೊಲಕ್ಕೆ ದಾರಿ ನೀಡಿಲ್ಲ ಎನ್ನುವ ಕ್ಷುಲ್ಲಕ ಕಾರಣ ಹಾಗು ಜಮೀನಿನಲ್ಲಿ ಪಾಲುದಾರಿಕೆ ನೀಡಿಲ್ಲವೆಂಬ ದ್ವೇಷಕ್ಕೆ ಸತೀಶ್ ಕುಟುಂಬದವರು ಹೀಗೆ ಬೆಳೆ ಹಾನಿ ಮಾಡಿದ್ದಾರೆಂದು ಆರೋಪಿಸಿದ್ದಾರೆ.

    ನಿಂಗೇಗೌಡನ ಆರೋಪವನ್ನು ರೈತ ಸತೀಶ್ ಅಲ್ಲಗಳೆದಿದ್ದಾರೆ. ಇದು ಯಾವುದೋ ರೋಗ ಇರಬಹುದು ಆದ್ರೆ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡಿದ್ದಾರೆ ಅಂತ ನಿಂಗೇಗೌಡನ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.