Tag: ಈಜುಗಾರ್ತಿ

  • 16ರ ಹರೆಯದ ರಾಷ್ಟ್ರ ಮಟ್ಟದ ಈಜುಗಾರ್ತಿ ನೇಣಿಗೆ ಶರಣು!

    16ರ ಹರೆಯದ ರಾಷ್ಟ್ರ ಮಟ್ಟದ ಈಜುಗಾರ್ತಿ ನೇಣಿಗೆ ಶರಣು!

    ಕೋಲ್ಕತ್ತಾ: 16 ವರ್ಷದ ರಾಷ್ಟ್ರೀಯ ಮಟ್ಟದ ಈಜುಗಾರ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.

    ಮೌಪ್ರಿಯಾ ಮಿತ್ರಾ (16) ಆತ್ಮಹತ್ಯೆಗೆ ಶರಣಾದ ಆಟಗಾರ್ತಿ. ಈಕೆ ಪಶ್ಚಿಮ ಬಂಗಾಳದ ಗರ್ಲ್ಸ್ ಹೈಸ್ಕೂಲ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಹೂಗ್ಲಿಯ ತಮ್ಮ ನಿವಾಸದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಚಿನ್ಸುರಾ ಇಮಾಂಬರಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮಿತ್ರಾ ನಿವಾಸದಿಂದ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಮಿತ್ರಾ ಕೊಲಂಬೊದಲ್ಲಿ ನಡೆದ 2016 ರ ದಕ್ಷಿಣ ಏಷ್ಯಾದ ಅಕ್ವಾಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಗೆದ್ದಿದ್ದರು. ಜೂನ್ ತಿಂಗಳಲ್ಲಿ ನಡೆಯುವ ಪುಣೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು.

    ಮಿತ್ರಾ ಸೋಮವಾರ ಬೆಳಗ್ಗೆ ಚಿನ್ಸುರಾದಲ್ಲಿ ಈಜು ಅಭ್ಯಾಸಕ್ಕೆ ಹೋಗಿದ್ದರು. ಸುಮಾರು 11 ಗಂಟೆಗೆ ಮಳೆ ಬರುತ್ತಿದ್ದು, ಆ ಸಂದರ್ಭದಲ್ಲಿ ಅವರು ಮನೆಗೆ ಹಿಂದಿರುಗಿದ್ದರು. ಮನೆಗೆ ಬಂದ ನಂತರ  ತನ್ನ ರೂಮಿಗೆ ಹೋಗಿ ಲಾಕ್ ಮಾಡಿಕೊಂಡಿದ್ದಾರೆ. ಈ ವೇಳೆ ಮಿತ್ರಾ ಪೋಷಕರು 1ನೇ ಮಹಡಿಯಲ್ಲಿದ್ದರು.

    ಮಿತ್ರಾ 2016ರ ಸೌತ್ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಹೈಬೋರ್ಡ್ ಚಿನ್ನದ ಪದಕ ಮತ್ತು 3 ಎಮ್ ಸ್ಪ್ರಿಂಗ್ ಬೋರ್ಡ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 16 ರ ವಯಸ್ಸಿಲ್ಲಿಯೇ 2016 ಜೂನಿಯರ್ ನ್ಯಾಷನಲ್ ಆಕ್ವಾಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಉನ್ನತ ಬೋರ್ಡ್ ಚಿನ್ನ, 3ಎಮ್ ಸ್ಪ್ರಿಂಗ್ ಬೋರ್ಡ್ ಬೆಳ್ಳಿ ಮತ್ತು 1 ಎಮ್ ಸ್ಪ್ರಿಂಗ್ ಬೋರ್ಡ್ ಕಂಚಿನ ಪದಕವನ್ನು ಗೆದ್ದಿದ್ದಾರೆ.

    ಈ ಘಟನೆ ಸಂಬಂಧ ಕುಟುಂಬ ದೂರು ದಾಖಲಿಸಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣವನ್ನು ತಿಳಿದು ಬರುತ್ತದೆ. ನಂತರ ತನಿಖೆಯನ್ನು ಮುಂದುವರೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.