Tag: ಈಕ್ವೇಡಾರ್

  • ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

    ನವದೆಹಲಿ: ಸ್ವಯಂ ಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದನ ಕುರಿತು ವಿದೇಶಗಳಲ್ಲೂ ಅಪಸ್ವರ ಎದ್ದಿದ್ದು, ಇದರ ಬೆನ್ನಲ್ಲೇ ಇದೀಗ ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ.

    ಅಜ್ಞಾತ ಸ್ಥಳದಿಂದ ನಿತ್ಯಾನಂದ ಈ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಾನು ಪರಮಶಿವ ಯಾರಿಂದಲೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ನಿತ್ಯಾನಂದನ ವಿಡಿಯೋದಲ್ಲಿ ದಿನಾಂಕ ಸ್ಪಷ್ಟವಾಗಿಲ್ಲ, ನವೆಂಬರ್ 22ರಂದು ಟ್ವಿಟ್ಟರಿನಲ್ಲಿ ಈ ವಿಡಿಯೋ ಹಾಕಲಾಗಿದೆ.

    ಯಾವ ನ್ಯಾಯಾಲಯವೂ ನನ್ನನ್ನು ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ. ಅಲ್ಲದೆ ಸತ್ಯವೇನೆಂಬುದನ್ನು ನಾನು ಜಗತ್ತಿಗೆ ತೋರಿಸುತ್ತೇನೆ. ಈ ಮೂಲಕ ನನ್ನ ಅಂತರತ್ವವನ್ನು ತೋರಿಸುತ್ತೇನೆ. ಈಗ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಾನು ನಿಮಗೆ ನಿಜವನ್ನು ಹೇಳುತ್ತೇನೆ. ನಾನು ಪರಮಶಿವ- ಅರ್ಥವಾಯಿತೇ? ನಿಜವನ್ನು ಬಾಯ್ಬಿಡಿಸಲು ಯಾವುದೇ ಮೂರ್ಖ ನ್ಯಾಯಾಲಯ ನನ್ನನ್ನು ವಿಚಾರಣೆಗೊಳಪಡಿಸಬೇಕಿಲ್ಲ ಎಂದು ವಿಡಿಯೋದಲ್ಲಿ ನಿತ್ಯಾನಂದ ಹೇಳಿಕೊಂಡಿದ್ದಾನೆ.

    https://twitter.com/YippeekiYay_DH/status/1197818470349463552?

    ಇಲ್ಲಿರುವ ಮೂಲಕ ನೀವು ನಿಮ್ಮ ಸಮಗ್ರತೆ ಹಾಗೂ ನಿಷ್ಠೆಯನ್ನು ಪ್ರದರ್ಶಿಸಿದ್ದೀರಿ. ನಿಮ್ಮೆಲ್ಲರಿಗೂ ಇನ್ನು ಸಾವು ಸಂಭವಿಸುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ತನ್ನ ಅನುಯಾಯಿಗಳಿಗೆ ಸಂದೇಶ ತಿಳಿಸಿದ್ದಾನೆ.

    ನಿತ್ಯಾನಂದನ ವೀಸಾ ಅವಧಿ ಮುಕ್ತಾಯವಾಗಿದ್ದು, ನವೀಕರಿಸುವ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇದರ ನಡುವೆಯೂ ನಿತ್ಯಾನಂದ ಈಕ್ವೇಡಾರ್ ನಲ್ಲಿ ಅವಿತುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಅಲ್ಲಿಯೇ ದೇಶವನ್ನೂ ನಿರ್ಮಿಸಲು ಸಿದ್ಧತೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಈ ಕುರಿತು ಈಕ್ವೇಡಾರ್ ಸರ್ಕಾರ ಸ್ಪಷ್ಟಪಡಿಸಿದ್ದು, ನಿತ್ಯಾನಂದ ಹಾಗೂ ನಮ್ಮ ದೇಶಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

    ಈಕ್ವೇಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿ, ಇದು ತನ್ನ ದೇಶ ಎಂಬಂತೆ ನಿತ್ಯಾನಂದ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್‍ಪೋರ್ಟ್‍ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿತ್ತು.

    ಚಿತ್ರ ಕೃಪೆ: ರಿಪಬ್ಲಿಕ್ ಟಿವಿ

    ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿಕೊಂಡಿದ್ದ.

    ಇದಕ್ಕಾಗಿ www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನು ಸಹ ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಿದ್ದಾನೆ. ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಭುದ್ಧ ನಾಗರೀಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದ್ದಾನೆ.

    ಚಿತ್ರ ಕೃಪೆ: ರಿಪಬ್ಲಿಕ್ ಟಿವಿ

    ಯುವತಿಯರಿಗೆ ಚಿತ್ರ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನಿಗಾಗಿ ಗುಜರಾತ್ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಬೆಂಗಳೂರಿನ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿತ್ಯಾನಂದನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದು, ನಿತ್ಯಾನಂದನ ಆಶ್ರಮದ ಅಹಮದಾಬಾದ್ ಶಾಖೆಯಲ್ಲಿದ್ದ ಹೆಣ್ಣುಮಕ್ಕಳನ್ನು ಹಿಂಸಿಸುತ್ತಿದ್ದ ಎಂದು ದಂಪತಿ ದೂರು ನೀಡಿದ್ದಾರೆ.

    ಅಹ್ಮದಾಬಾದ್ ಜಿಲ್ಲೆಯ ಹಿರಾಪುರ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ನಿತ್ಯಾನಂದನ ಆಶ್ರಮವಿದೆ. ಅಲ್ಲದೆ ಬೆಂಗಳೂರಿನ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಹೆಸರಿನ ವಿಶಾಲವಾದ ಆಶ್ರಮವನ್ನು ಸಹ ನಡೆಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಶಿಷ್ಯೆ ಮೇಲೆಯೇ ಅತ್ಯಾಚಾರ ಎಸಗಿರುವ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಒಂದು ವರ್ಷದಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ.

    ಸೆಪ್ಟೆಂಬರ್ 2018ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಮುಗಿದ ಕಾರಣ ಅವರು ಅಕ್ರಮವಾಗಿ ದೇಶವನ್ನು ತೊರೆದಿರಬಹುದು ಎಂದು ಗುಜರಾತ್ ಪೊಲೀಸರು ಶಂಕಿಸಿದ್ದಾರೆ. ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‍ಪೋರ್ಟ್ ನವೀಕರಿಸುವ ಕುರಿತ ಅರ್ಜಿಯನ್ನು ತಿರಸ್ಕರಿಸಲಾಗಿದೆ.

  • ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?

    ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?

    ನವದೆಹಲಿ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಎಲ್ಲಿದ್ದಾನೆ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ನಿತ್ಯಾನಂದ ದೇಶದಲ್ಲಿ ಅಡಗಿ ಕುಳಿತಿರಬಹುದು ಅಥವಾ ನೇಪಾಳ ಮೂಲಕ ಭಾರತವನ್ನು ತೊರೆದಿರಬಹುದು ಎಂದು ವರದಿಗಳು ತಿಳಿಸಿವೆ.

    ನಿತ್ಯಾನಂದನಿಗೆ ಸೇರಿದ ಅಹಮದಾಬಾದ್‍ನ ಆಶ್ರಮದಿಂದ ಇಬ್ಬರು ಬಾಲಕಿಯರು ಸೇರಿದಂತೆ ಮೂವರು ಅಪ್ರಾಪ್ತ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಮಕ್ಕಳ ಪೋಷಕರು ಗುಜರಾತ್ ಪೊಲೀಸರು ದೂರು ನೀಡಿದ್ದಾರೆ. ಈ ಸಂಬಂಧ ನಿತ್ಯಾನಂದನ ವಿರುದ್ಧ ಮಕ್ಕಳ ಮೇಲೆ ದೌರ್ಜನ್ಯ ಮತ್ತು ಅಪಹರಣ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.  ಇದನ್ನೂ ಓದಿ: ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ಇದು ನನ್ನ ಬದುಕು – ತಂದೆಗೆ ಮಗಳ ಖಡಕ್ ಉತ್ತರ

    2010ರಲ್ಲಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಪ್ರಕರಣದ ಸಂಬಂಧ 2011ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ವಶಕ್ಕೆ ಪಡೆಯಲಾಗಿತ್ತು. ಆದಾಗ್ಯೂ, ಧ್ಯಾನ ಮತ್ತು ಯೋಗ ಶಿಬಿರಗಳನ್ನು ನಡೆಸಲು ಮಾನಸರೋವರ್ ಹಾಗೂ ಇತರ ಸ್ಥಳಗಳಿಗೆ ಪ್ರಯಾಣಿಸಲು ನಿತ್ಯಾನಂದ ತನ್ನ ಪಾಸ್‍ಪೋರ್ಟ್ ಕೇಳಿದ್ದ. ಇದರಿಂದಾಗಿ ಪಾಸ್‍ಪೋರ್ಟ್ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ನಾನು ಹೇಳಿದ್ದಕ್ಕೆ ತಡವಾಗಿ ಉದಯಿಸಿದ – ಸೂರ್ಯನಿಗೆ ನಿತ್ಯಾನಂದ ಆರ್ಡರ್

    ವರದಿಗಳ ಪ್ರಕಾರ, ನಿತ್ಯಾನಂದ 2018ರ ಆಗಸ್ಟ್  ನಿಂದ ಯಾವುದೇ ಆಶ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ನೇಪಾಳದ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಸೆಪ್ಟೆಂಬರ್ 2018ರಲ್ಲಿ ಮುಕ್ತಾಯಗೊಂಡಿದ್ದು, ಅತ್ಯಾಚಾರ ಪ್ರಕರಣದಿಂದಾಗಿ ನವೀಕರಿಸಲಾಗಿಲ್ಲ. ಹೀಗಾಗಿ ನೇಪಾಳದ ಮೂಲಕ ಈಕ್ವೆಡಾರ್‍ಗೆ ತೆರಳಿರಬಹುದು ಎಂದು ಶಂಕಿಸಲಾಗಿದೆ. ಈ ಮಧ್ಯೆ ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಕಾಣಿಸಿಕೊಂಡ ನಿತ್ಯಾನಂದ, ಭಾರತದಲ್ಲಿಯೇ ಇದ್ದೇನೆ ಎಂದು ಹೇಳಿದ್ದಾನೆ. ಆದರೆ ಸ್ಥಳದ ಬಗ್ಗೆ ಸ್ಪಷ್ಟನೆ ನೀಡಿಲ್ಲ.

    2010ರಲ್ಲಿ ನಿತ್ಯಾನಂದನನ್ನು ಒಳಗೊಂಡ ಸೆಕ್ಸ್ ಟೇಪ್ ಬಿಡುಗಡೆಯಾದಾಗ ಆತನು ಪರಾರಿಯಾಗಿದ್ದ. ಆದರೆ ಕೆಲ ದಿನಗಳ ಬಳಿಕ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪತ್ತೆಯಾಗಿದ್ದ. ಹೀಗಾಗಿ ಈಗಲೂ ಭಾರತದಲ್ಲಿರಬಹುದು ಎಂಬ ಊಹಾಪೋಹಗಳಿಗೆ ಕೇಳಿ ಬರುತ್ತಿವೆ.

    ನಿತ್ಯಾನಂದನ ಆಶ್ರಮಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಇದೇ ಮೊದಲಲ್ಲ. 2008ರಲ್ಲಿ ಅಪ್ರಾಪ್ತ ಬಾಲಕನೊಬ್ಬ ಅನಾರೋಗ್ಯಕ್ಕೆ ಬಳಲುತ್ತಿದ್ದಾಗ ಆತನನ್ನು ನಿತ್ಯಾನಂದನ ಅನುಯಾಯಿಗಳು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬಾಲಕ, ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ವೈದ್ಯರಿಗೆ ಮಾಹಿತಿ ನೀಡಿದ್ದ.

    ನಿತ್ಯಾನಂದ ಪ್ರಸ್ತುತ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ಗುರುವಾರ ವಿದೇಶಾಂಗ ಸಚಿವಾಲಯ ಹೇಳಿದೆ. ಆತನ ಬಗ್ಗೆ ಗುಜರಾತ್ ಪೊಲೀಸರಿಂದ ಹಾಗೂ ಗೃಹ ವ್ಯವಹಾರ ಸಚಿವಾಲಯದಿಂದ (ಎಂಎಚ್‍ಎ) ಯಾವುದೇ ಮಾಹಿತಿ ಬಂದಿಲ್ಲ. ಅಹಮದಾಬಾದ್‍ನ ಹೊರವಲಯದಲ್ಲಿರುವ ನಿತ್ಯಾನಂದನ ಹಿರಾಪುರ ಆಶ್ರಮದಿಂದ ಮೂವರು ಅಪ್ರಾಪ್ತ ಮಕ್ಕಳನ್ನು (ಒಬ್ಬ ಹುಡುಗ ಮತ್ತು ಇಬ್ಬರು ಹುಡುಗಿಯರು) ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ನಿತ್ಯಾನಂದ ವಿರುದ್ಧ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.