ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಉಡುಗೊರೆಯಾಗಿ (Gifts) ದೊರಕಿದ 1,300ಕ್ಕೂ ಹೆಚ್ಚು ವಸ್ತುಗಳನ್ನು ಬುಧವಾರ ಪ್ರಾರಂಭಗೊಂಡ ಇ-ಹರಾಜಿನಲ್ಲಿ (E-Auction) ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯಾ ರಾಮ ಮಂದಿರ ಮಾದರಿ, ಭವಾನಿ ದೇವಿಯ ವಿಗ್ರಹ, 2024ರ ಒಲಿಂಪಿಕ್ಸ್ ಕ್ರೀಡಾಕೂಟದ ಸ್ಮರಣಿಕೆಗಳು ಸೇರಿದಂತೆ 1,300ಕ್ಕೂ ಹೆಚ್ಚು ಉಡುಗೊರೆಗಳನ್ನು ಹರಾಜಿಗಿಡಲಾಗಿದೆ. ಮೋದಿಯವರ ಜನ್ಮದಿನವಾದ ಇಂದು (ಸೆ.17) ಇ-ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಅ.2ರವರೆಗೆ ಹರಾಜು ನಡೆಯಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ 75ರ ಸಂಭ್ರಮ – ಫೋನ್ ಕರೆ ಮಾಡಿ ಬರ್ತ್‌ಡೇ ವಿಶ್ ಮಾಡಿದ ಟ್ರಂಪ್

ಪಿಎಂ ಮೊಮೆಂಟೋಸ್ ವೆಬ್‌ಸೈಟ್ ಪ್ರಕಾರ, ಭವಾನಿ ದೇವಿಯ ಪ್ರತಿಮೆಯ ಬೆಲೆ 1,03,95,000 ರೂ. ಆಗಿದ್ದು, ರಾಮ ಮಂದಿರ ದೇವಾಲಯದ ಮಾದರಿ 5.5 ಲಕ್ಷ ರೂ. ಮೌಲ್ಯವನ್ನು ಹೊಂದಿದೆ. ಇನ್ನು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಮೂರು ಜೊತೆ ಶೂಗಳನ್ನು ಕೂಡ ಹರಾಜಿಗಿಡಲಾಗಿದ್ದು, ಪ್ರತಿ ಶೂ ಬೆಲೆ 7.7 ಲಕ್ಷ ರೂ. ಇರಲಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 2019ರ ಜನವರಿಯಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿಯವರಿಗೆ ನೀಡಿದ್ದ ಉಡುಗೊರೆಗಳ ಇ-ಹರಾಜನ್ನು ನಡೆಸಲಾಗಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್ ಫಿಕ್ಸ್ ಮಾಡಿದ ಡಿಸಿಎಂ ಡಿಕೆಶಿ

ಜಮ್ಮು ಮತ್ತು ಕಾಶ್ಮೀರದ ಕಸೂತಿ ಮಾಡಿದ ಪಶ್ಮಿನಾ ಶಾಲು, ರಾಮ ದರ್ಬಾರ್‌ನ ತಂಜೂರಿನ ಚಿತ್ರಕಲೆ, ಲೋಹದ ನಟರಾಜ ಪ್ರತಿಮೆ, ಗುಜರಾತ್‌ನ ರೋಗನ್ ಕಲೆ ಮತ್ತು ಕೈಯಿಂದ ನೇಯ್ದ ನಾಗಾ ಶಾಲು ಕೂಡ ಇ-ಹರಾಜಿನಲ್ಲಿ ಇಡಲಾಗಿದೆ. ಈವರೆಗೂ ಹರಾಜಿನಲ್ಲಿ 50 ಕೋಟಿ. ರೂಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಈ ಹಣವನ್ನು ನಮಾಮಿ ಗಂಗೆ ಯೋಜನೆಗೆ ವಿನಿಯೋಗಿಸಲಾಗುತ್ತದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ – ಆರ್.ಅಶೋಕ್








