Tag: ಇಸ್ಲಾಮಾಬಾದ್

  • ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ

    ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ

    ನವದೆಹಲಿ/ಇಸ್ಲಾಮಾಬಾದ್‌: ಭಾರತ ನಡೆಸಿದ ವಾಯು ದಾಳಿಗೆ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಭಾರತ ಪಾಕಿಸ್ತಾನದ ಹಲವು ವಾಯು ನೆಲೆಗಳ (Air Base) ಮೇಲೆ ದಾಳಿ ಮಾಡಿದೆ.

    ರಾಜಧಾನಿ ಇಸ್ಲಾಮಾಬಾದ್ (Islamabad), ದೇಶದ ಮಿಲಿಟರಿ ಪ್ರಧಾನ ಕಚೇರಿಗೆ ಹೊಂದಿಕೊಂಡಿರುವ ರಾವಲ್ಪಿಂಡಿಯಲ್ಲಿರುವ (Rawalpindi) ನೂರ್ ಖಾನ್ ವಾಯುನೆಲೆ ಸೇರಿದಂತೆ ಮೂರು ವಾಯುನೆಲೆಯ ಮೇಲೆ ಭಾರತ ದಾಳಿ ಮಾಡಿದ ಎಂದು ಪಾಕ್‌ ಸೇನೆ ಅಧಿಕೃತವಾಗಿ ತಿಳಿಸಿದೆ.

    ಇಸ್ಲಾಮಾಬಾದ್‌ನಿಂದ 10 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ವಾಯು ನೆಲೆಯ ಮೇಲೆಯೇ ಭಾರತ ದಾಳಿ ನಡೆಸಿದೆ. ಭೀಕರ ದಾಳಿಗೆ ತತ್ತರಿಸಿದ ಪಾಕಿಸ್ತಾನ ಸರ್ಕಾರವು ಎಲ್ಲಾ ನಾಗರಿಕ ಮತ್ತು ವಾಣಿಜ್ಯ ವಿಮಾನ ಸಂಚಾರವನ್ನು ಬಂದ್‌ ಮಾಡಿದೆ.

    ರಾವಲ್ಪಿಂಡಿಯ ವಾಯುನೆಲೆಯಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಳ್ಳುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹಿಂದೆ ಚಕ್ಲಾಲಾ ವಾಯುನೆಲೆ ಎಂದು ಕರೆಯಲಾಗುತ್ತಿದ್ದ ನೂರ್ ಖಾನ್ ನೆಲೆ ಪಾಕಿಸ್ತಾನದ ಅತ್ಯಂತ ಸೂಕ್ಷ್ಮ ಮಿಲಿಟರಿ ವಾಯುನೆಲೆಯಾಗಿದೆ.

  • ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್‌

    ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್‌

    – ಭಾರತದ ಕ್ರಮಗಳ ಬಳಿಕ ಪಾಕ್ ಪ್ರಧಾನಿ ನೇತೃತ್ವದಲ್ಲಿ ಸಭೆ
    – ಭಾರತದ ಜೊತೆಗಿನ ಎಲ್ಲ ಒಪ್ಪಂದಗಳಿಗೆ ಬ್ರೇಕ್ – ಶಿಮ್ಲಾ ಒಪ್ಪಂದ ಅಮಾನತು
    – ಭಾರತದಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ: ಎನ್‌ಎಸ್‌ಸಿ ಆರೋಪ

    ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) 26 ಮಂದಿ ಅಮಾಯಕರ ಸಾವಿನ ನಂತರ ಭಾರತವು ಪಾಕ್‌ ಜೊತೆಗಿನ ರಾಜತಾಂತ್ರಿಕ ಸಬಂಧವನ್ನು ಕಡಿದುಕೊಂಡಿದೆ. 1960ರ ಸಿಂಧೂ ನದಿ ಒಪ್ಪಂದ ರದ್ದು ಸೇರಿದಂತೆ ಹಲವು ಕಠಿಣ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿರುವ ಪಾಕ್‌ (Pakistan) ಪ್ರಜೆಗಳು ದೇಶ ತೊರೆಯುವಂತೆ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್‌ (Shehbaz Sharif) ಇಂದು ಮಹತ್ವದ ಭದ್ರತಾ ಸಭೆ ನಡೆಸಿದ್ದಾರೆ.

    ಇಸ್ಲಾಮಾಬಾದ್‌ನಲ್ಲಿ (Islamabad) ಪಾಕಿಸ್ತಾನದ ಮೂರು ಸೇನಾಪಡೆಗಳ ಮುಖ್ಯಸ್ಥರು, ಪ್ರಮುಖ ಸಚಿವರು, ಉನ್ನತ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳೊಂದಿಗೆ ಪಾಕ್‌ ಪ್ರಧಾನಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾಕಿಸ್ತಾನ ಪಾಲಿನ ನೀರನ್ನು ತಡೆಯಲು ಭಾರತ ಪ್ರಯತ್ನಿಸಿದ್ರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ – ಪಾಕ್‌ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ

    ಭಾರತಕ್ಕೆ ಪಾಕ್ ಏರ್‌ಸ್ಪೇಸ್ ಬಂದ್:
    ಇನ್ನೂ ಭಾರತ ಸರ್ಕಾರ (Indian Government) ಕಠಿಣ ನಿರ್ಧಾರ ಕೈಗೊಂಡಂತೆ ಪಾಕಿಸ್ತಾನ ಸಹ ಭಾರತ ವಿರೋಧಿ ನಿರ್ಧಾರಗಳನ್ನು ಇಂದಿನ ಪ್ರಮುಖ ಸಭೆಯಲ್ಲಿ ತೆಗೆದುಕೊಂಡಿದೆ. ಭಾರತದ ಒಡೆತನದ ಮತ್ತು ಭಾರತದ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ವಾಯುಸೀಮೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಜೊತೆಗೆ ಭಾರತದ ಜೊತೆಗಿನ ಎಲ್ಲಾ ಒಪ್ಪಂದಗಳನ್ನು ಕಡಿದುಕೊಳ್ಳಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ದಾಳಿ ಎಸಗಿದ ಉಗ್ರರಿಗೆ, ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿ ಶಿಕ್ಷೆ ಕೊಡುತ್ತೇವೆ: ಘರ್ಜಿಸಿದ ಮೋದಿ

    ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ:
    ಮುಂದುವರಿದು… ಭಾರತದಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಆರೋಪಿಸಿದೆ. ಭಾರತ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆಯ ಮೂಲಕ ಮುಸ್ಲಿಂ ಸಮುದಾಯವನ್ನು ಅಂಚಿನಲ್ಲಿಡುತ್ತಿದೆ. ಈ ರೀತಿ ಮಾಡಿ ರಾಜಕೀಯ ಲಾಭ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಎನ್‌ಎಸ್‌ಸಿ ಆರೋಪಿಸಿದೆ. ಅಲ್ಲದೇ ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಗೆಹರಿಯದ ವಿವಾದವಾಗಿದೆ ಎಂದು ಹೇಳಿದೆ.

    ಭಾರತದ ಕ್ರಮಗಳಿಗೆ ತತ್ತರಿಸಿದ ಪಾಕ್
    ಇನ್ನೂ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಳಿಕ ಭಾರತದ ಕ್ರಮಗಳಿಂದ ತತ್ತರಿಸಿರುವ ಪಾಕಿಸ್ತಾನ, ಭಾರತ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಭಾರತ ತೆಗೆದುಕೊಂಡ ಕ್ರಮಗಳು ಏಕಪಕ್ಷೀಯವಾಗಿದೆ, ಇದು ಅನ್ಯಾಯ, ರಾಜಕೀಯ ಪ್ರೇರಿತ, ಬೇಜವಾಬ್ದಾರಿ ಮತ್ತು ಆಧಾರರಹಿತ ಹೇಳಿದೆ. ಇದನ್ನೂ ಓದಿ: ಭಾರತದಿಂದ ದಾಳಿ ಭೀತಿ – ಕ್ಷಿಪಣಿ ಪರೀಕ್ಷೆಗೆ ಮುಂದಾದ ಪಾಕ್‌

    ಪಾಕ್‌ ಸಭೆಯ ಪ್ರಮುಖ ನಿರ್ಣಯಗಳೇನು?
    * ಸಿಂಧೂ ನದಿ ನೀರು ಒಪ್ಪಂದವನ್ನು ನಿಲ್ಲಿಸುವ ಭಾರತದ ನಿರ್ಧಾರವನ್ನು ಪಾಕಿಸ್ತಾನ ತಿರಸ್ಕರಿಸಿದೆ. ಈ ಒಪ್ಪಂದವು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಏಕಪಕ್ಷೀಯವಾಗಿ ಅಮಾನತುಗೊಳಿಸಲಾಗುವುದಿಲ್ಲ ಎಂದು NSC ಹೇಳಿದೆ.
    * ಭಾರತವು ನೀರನ್ನು ನಿಲ್ಲಿಸಲು ಅಥವಾ ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಪೂರ್ಣ ಬಲದಿಂದ ಪ್ರತಿಕ್ರಿಯಿಸಲಾಗುತ್ತದೆ ಎಂದು ಪಾಕಿಸ್ತಾನ ಹೇಳಿದೆ.
    * ಶಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ನಾವು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಪಾಕಿಸ್ತಾನ ಹೇಳಿದೆ.
    * ಜೊತೆಗೆ ಪಾಕಿಸ್ತಾನ ಸಹ ವಾಘಾ ಗಡಿಯನ್ನು ತಕ್ಷಣದಿಂದಲೇ ಮುಚ್ಚುತ್ತಿದ್ದು, ಅನುಮತಿ ಇರುವವರು ಮಾತ್ರ ಏಪ್ರಿಲ್‌ 30ರ ಒಳಗೆ ಹಿಂದಿರುಗಬಹುದು.
    * ಸಾರ್ಕ್ ವೀಸಾ ಯೋಜನೆಯಡಿಯಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳ ವೀಸಾಗಳನ್ನು ರದ್ದುಪಡಿಸಲಾಗಿದೆ. ಸಿಖ್ ಯಾತ್ರಿಕರಿಗೆ ಮಾತ್ರ ವಿನಾಯಿತಿ ನೀಡಲಾಗುವುದು. ಉಳಿದ ಭಾರತೀಯರು 48 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ಸೂಚಿಸಲಾಗಿದೆ.
    * ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಲಹೆಗಾರರಿಗೆ ಪಾಕಿಸ್ತಾನ ತೊರೆಯುವಂತೆ ಆದೇಶಿಸಲಾಗಿದೆ. ಅಲ್ಲದೆ, ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ನ ಸಿಬ್ಬಂದಿಯನ್ನ 30ಕ್ಕೆ ಇಳಿಸಲಾಗಿದೆ.
    – ಭಾರತದೊಂದಿಗಿನ ಎಲ್ಲಾ ವ್ಯಾಪಾರ ಒಪ್ಪಂದ ಬಂದ್‌ಗೆ ನಿರ್ಧಾರ ಕೈಗೊಳ್ಳಲಾಗಿದೆ.

  • ಬಾಂಗ್ಲಾ ಆಯ್ತು ಈಗ ಪಾಕ್‌ನಲ್ಲಿ ಪ್ರತಿಭಟನೆ – ಇಮ್ರಾನ್‌ ಬಿಡುಗಡೆಗೆ ಆಗ್ರಹಿಸಿ ಬೀದಿಗಿಳಿದ ಸಾವಿರಾರು ಬೆಂಬಲಿಗರು

    ಬಾಂಗ್ಲಾ ಆಯ್ತು ಈಗ ಪಾಕ್‌ನಲ್ಲಿ ಪ್ರತಿಭಟನೆ – ಇಮ್ರಾನ್‌ ಬಿಡುಗಡೆಗೆ ಆಗ್ರಹಿಸಿ ಬೀದಿಗಿಳಿದ ಸಾವಿರಾರು ಬೆಂಬಲಿಗರು

    ಇಸ್ಲಾಮಾಬಾದ್‌: ಬಾಂಗ್ಲಾದೇಶದಲ್ಲಿ ನಡೆದಂತೆ ಈಗ ಪಾಕಿಸ್ತಾನದಲ್ಲೂ (Pakistan) ಪ್ರತಿಭಟನೆ ಆರಂಭವಾಗಿದೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿ (Islamabad) ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಜನರು ಬೀದಿಗಿಳಿದಿದ್ದಾರೆ.

    ಭಾನುವಾರ ಇಮ್ರಾನ್‌ ಖಾನ್‌ ಅವರ ತೆಹ್ರೀಕ್-ಎ-ಇನ್ಸಾಫ್ (PTI) ಪಕ್ಷ ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು. ಪ್ರತಿಭಟನಾ ಸಭೆಯ ಬಳಿಕ ಇಮ್ರಾನ್‌ ಬೆಂಬಲಿಗರು ರಾಜಧಾನಿಯಲ್ಲಿ ಪ್ರತಿಭಟನೆ (Protest) ಆರಂಭಿಸಿದ್ದಾರೆ.

    ಇಮ್ರಾನ್‌ ಖಾನ್‌ ಅವರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಅವರ ಮೇಲೆ ಬಂದಿರುವ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತ.  ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿರುವ (Jail) ಅವರನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 25 ವರ್ಷಗಳ ಬಳಿಕ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಬಗ್ಗೆ ಪಾಕ್‌ ತಪ್ಪೊಪ್ಪಿಗೆ!

    ದೇಶದ ವಿವಿಧ ಭಾಗಗಳಿಂದ ಜನರು ಇಸ್ಲಾಮಾಬಾದ್‌ನತ್ತ ಆಗಮಿಸುತ್ತಿದ್ದಾರೆ. ಖಾನ್ ಜೈಲಿನಿಂದ ಬಿಡುಗಡೆಯಾಗುವವರೆಗೂ ನಾವು ವಿಶ್ರಮಿಸುವುದಿಲ್ಲ ಬೆಂಬಲಿಗರು ಘೋಷಿಸಿದ್ದಾರೆ.

    ಪ್ರತಿಭಟನಾಕಾರರಿಗೆ ಇಸ್ಲಾಮಾಬಾದ್‌ ಪ್ರವೇಶವನ್ನು ಬಂದ್‌ ಮಾಡಲಾಗಿದೆ. ಗಲಾಟೆ ನಿಯಂತ್ರಿಸಲು ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ರಸ್ತೆಯಲ್ಲಿ ಶಿಪ್ಪಿಂಗ್‌ ಕಂಟೈನರ್‌ ಇಡುವ ಮೂಲಕ ಪ್ರತಿಭಟನಾಕಾರರ ಸಂಚಾರವನ್ನು ತಡೆಯಲಾಗುತ್ತಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

     

  • ಪಾಕ್‌ನಲ್ಲಿದ್ದ ವಿಯೆಟ್ನಾಂ ರಾಯಭಾರಿಯ ಪತ್ನಿ ನಾಪತ್ತೆ

    ಪಾಕ್‌ನಲ್ಲಿದ್ದ ವಿಯೆಟ್ನಾಂ ರಾಯಭಾರಿಯ ಪತ್ನಿ ನಾಪತ್ತೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ (Pakistan) ವಿಯೆಟ್ನಾಂ ರಾಯಭಾರಿ (Vietnamese Ambassador) ನ್ಗುಯೆನ್ ಟಿಯೆನ್ ಫಾಂಗ್ ಅವರ ಪತ್ನಿ ಇಸ್ಲಾಮಾಬಾದ್‌ನಲ್ಲಿ ನಾಪತ್ತೆಯಾಗಿದ್ದಾರೆ. ಬೆಳಿಗ್ಗೆ 11 ಗಂಟೆಗೆ ತಮ್ಮ ನಿವಾಸದಿಂದ ತೆರಳಿದ್ದ ಪತ್ನಿ ಮರಳಿ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಇಸ್ಲಾಮಾಬಾದ್ ಪೊಲೀಸರು ಈಗ ಸಿಸಿಟಿವಿ ದೃಶ್ಯ ಆಧಾರಿಸಿ ಮಹಿಳೆಯ ಪತ್ತೆಗೆ ಬಲೆ ಬೀಸಿದ್ದಾರೆ.  ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆಯಲ್ಲಿ ನಾಗೇಂದ್ರ ಇದ್ದಾರೋ ಇಲ್ವೋ ಗೊತ್ತಿಲ್ಲ: ಸಚಿವ ಮಹದೇವಪ್ಪ

     
    ಕಳೆದ ವಾರ ನಕಲಿ ಪೊಲೀಸರು ಇಸ್ಲಾಮಾಬಾದ್‌ನ (Islamabad) ರಾಜತಾಂತ್ರಿಕ ಎನ್‌ಕ್ಲೇವ್‌ನ ಎಫ್ -6 ಸೂಪರ್‌ಮಾರ್ಕೆಟ್‌ನಲ್ಲಿ ವಿದೇಶಿ ಪ್ರಜೆಯನ್ನು ಲೂಟಿ ಮಾಡಿದ್ದರು.

    ಇಬ್ಬರು ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಮಹಿಳೆಯನ್ನು ತಪಾಸಣೆಗೆ ನಿಲ್ಲಿಸಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ವಿದೇಶಿ ಪ್ರಜೆ ಮಹಿಳೆಯನ್ನು ತಡೆದಾಗ ನಕಲಿ ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

  • ಪಾಕ್‍ನಲ್ಲಿ ಭಾರೀ ಮಳೆ – 37 ಮಂದಿ ಸಾವು

    ಪಾಕ್‍ನಲ್ಲಿ ಭಾರೀ ಮಳೆ – 37 ಮಂದಿ ಸಾವು

    ಇಸ್ಲಾಮಾಬಾದ್: ಕಳೆದ ಎರಡು ದಿನಗಳಿಂದ ಪಾಕಿಸ್ತಾನದಾದ್ಯಂತ (Pakistan) ಸುರಿಯುತ್ತಿರುವ ಭಾರೀ ಮಳೆಯಿಂದ (Rain) ಉಂಟಾದ ಅನಾಹುತಗಳಲ್ಲಿ ಕನಿಷ್ಠ 37 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಪಾಕ್‍ನಲ್ಲಿ ಭಾರೀ ಮಳೆಯಿಂದಾಗಿ ಕೆಲವೆಡೆ ಮನೆ ಹಾಗೂ ಭೂಕುಸಿತ ಉಂಟಾಗಿದೆ. ಅಲ್ಲದೇ ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುರುವಾರ ರಾತ್ರಿಯಿಂದ ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾರೀ ಮಳೆಯಾಗಿದೆ. ಬಜೌರ್, ಸ್ವಾತ್, ಲೋವರ್ ದಿರ್, ಮಲಕಾಂಡ್, ಖೈಬರ್, ಪೇಶಾವರ್, ವಜೀರಿಸ್ತಾನ್ ಮತ್ತು ಲಕ್ಕಿ ಮಾರ್ವತ್ ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಈ ಅನಾಹುತ ಸಂಭವಿಸಿದೆ. ಇದನ್ನೂ ಓದಿ: ಪಾಕ್‌ ಪ್ರಧಾನಿಯಾಗಿ 2 ನೇ ಬಾರಿಗೆ ಆಯ್ಕೆಯಾದ ಶೆಹಬಾಜ್‌ ಷರೀಫ್‌

    ಹಲವಾರು ಜನ ಮಳೆ ಸಂಬಂಧಿತ ಅನಾಹುತಗಳಿಂದ ಗಾಯಗೊಂಡಿದ್ದಾರೆ. ಮೃತರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಸೂಕ್ತ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಳೆ ಮತ್ತು ಹಿಮದಿಂದ ಉಂಟಾದ ಭೂಕುಸಿತದಿಂದಾಗಿ ಪಾಕಿಸ್ತಾನ ಹಾಗೂ ಚೀನಾದೊಂದಿಗೆ ಸಂಪರ್ಕಿಸುವ ಕಾರಕೋರಂ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಈ ಪ್ರದೇಶಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡದಂತೆ ಅಧಿಕಾರಿಗಳು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

    2022 ರಲ್ಲಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಪಾಕಿಸ್ತಾನದ ಹಲವು ಭಾಗಗಳಲ್ಲಿ 1,800 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಇದನ್ನೂ ಓದಿ: ಸೋಮವಾರ ಕಲಬುರಗಿಗೆ ಅಶೋಕ್ – ಹತ್ಯೆಗೊಳಗಾದ ಬಿಜೆಪಿ ಮುಖಂಡರ ಕುಟುಂಬ ಸದಸ್ಯರ ಭೇಟಿ

  • ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ 1 ಮೊಟ್ಟೆಯ ಬೆಲೆ 33 ರೂ. – ಈರುಳ್ಳಿ ಪ್ರತಿ ಕೆಜಿಗೆ 250 ರೂ.

    ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ 1 ಮೊಟ್ಟೆಯ ಬೆಲೆ 33 ರೂ. – ಈರುಳ್ಳಿ ಪ್ರತಿ ಕೆಜಿಗೆ 250 ರೂ.

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಒದ್ದಾಡುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನ (Pakistan) ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿದೆ. ನಡುವೆ ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು, ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿವೆ. ಸರ್ಕಾರ ದರ ನಿಗದಿಮಾಡಿದ್ದರೂ ಕ್ಯಾರೆ ಎನ್ನದ ವ್ಯಾಪಾರಿಗಳು ತಮ್ಮಿಷ್ಟದ ದರಗಳಿಗೆ ವಸ್ತುಗಳನ್ನ ಮಾರಾಟ ಮಾಡುತ್ತಿದ್ದಾರೆ.

    ಇಲ್ಲಿನ ಪಂಜಾಬ್‌ ಪ್ರಾಂತೀಯ ರಾಜಧಾನಿ ಲಾಹೋರ್‌ನ ಮಾರುಕಟ್ಟೆಗಳಲ್ಲಿ (Lahore Market) ಮೊಟ್ಟೆಯ ಬೆಲೆ ಪ್ರತಿ ಡಜನ್‌ಗೆ 400 ಪಾಕಿಸ್ತಾನಿ ರೂಪಾಯಿಗಳಿಗೆ (Pak Rupees) ಏರಿಕೆಯಾಗಿದೆ. ಒಂದು ಮೊಟ್ಟೆಯ ಬೆಲೆ 33 ರೂ.ಗಳಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಅಲ್ಲದೇ ಸರ್ಕಾರ ಜನರ ಮೇಲಿನ ಆರ್ಥಿಕ ದರ ಇಳಿಸಲು ಕೆಲ ವಸ್ತುಗಳಿಗೆ ನಿಗದಿತ ದರ ಸೂಚಿಸಿದೆ. ಉದಾಹರಣೆಗೆ ಪ್ರತಿ ಕೆ.ಜಿ ಈರುಳ್ಳಿಗೆ ಸರ್ಕಾರ 175 ರೂ. ನಿಗದಿಪಡಿಸಿದ್ದರೆ, ವ್ಯಾಪಾರಿಗಳು 200 ರಿಂದ 250 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಡಜನ್‌ ಮೊಟ್ಟೆಯ ಬೆಲೆ 400 ರೂ. ತಲುಪಿದ್ದರೆ, ಒಂದು ಕೆಜಿ ಚಿಕನ್‌ ಬೆಲೆ 615 ರೂ.ಗಳಿಗೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರು ಕುಟುಂಬ ನಿರ್ವಹಣೆಗೂ ಕಷ್ಟಪಡುವಂತ ಸ್ಥಿತಿ ಬಂದೊದಗಿದೆ. ಇದನ್ನೂ ಓದಿ: ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆಯನ್ನ ಹಿಂತೆಗೆದುಕೊಳ್ಳಿ: ಭಾರತಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಕರೆ

    ಕಳೆದ ತಿಂಗಳು ಆರ್ಥಿಕ ಸಮನ್ವಯ ಸಮಿತಿ ಹಾಗೂ ರಾಷ್ಟ್ರೀಯ ಬೆಲೆ ಮೇಲ್ವಿಚಾರಣಾ ಸಮಿತಿ ಬೆಲೆ ಸ್ಥಿರತೆ ಖಚಿತಪಡಿಸಿಕೊಳ್ಳಲು ಹಾಗೂ ಲಾಭ ಕಂಡುಕೊಳ್ಳಲು ಪ್ರಾಂತೀಯ ಸರ್ಕಾರಗಳೊಂದಿಗೆ ಚರ್ಚಿಸಿ ಸಮನ್ವಯ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದ್ದವು. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದು, 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಪಾಕಿಸ್ತಾನ ಮೂಲಗಳು ತಿಳಿಸಿವೆ. ಇದನ್ನೂ ಓದಿ: 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?

  • 200ಕ್ಕೂ ಹೆಚ್ಚು ಮಂದಿ ಇಮ್ರಾನ್ ಖಾನ್‌ ಬೆಂಬಲಿಗರು ಅರೆಸ್ಟ್ – ಪಾಕ್‌ನಲ್ಲಿ ಭುಗಿಲೆದ್ದ ಆಕ್ರೋಶ

    200ಕ್ಕೂ ಹೆಚ್ಚು ಮಂದಿ ಇಮ್ರಾನ್ ಖಾನ್‌ ಬೆಂಬಲಿಗರು ಅರೆಸ್ಟ್ – ಪಾಕ್‌ನಲ್ಲಿ ಭುಗಿಲೆದ್ದ ಆಕ್ರೋಶ

    ಇಸ್ಲಾಮಾಬಾದ್‌: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ತೋಶಖಾನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಖಾನ್‌ ಅವರ 200ಕ್ಕೂ ಹೆಚ್ಚು ಬೆಂಬಲಿಗರನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪಂಜಾಬ್‌ನಾದ್ಯಂತ ವಿವಿಧೆಡೆ ಇಮ್ರಾನ್‌ ಖಾನ್‌ ಬೆಂಬಲಿಗರನ್ನ ಬಂಧಿಸಿರುವುದಾಗಿ ಪೊಲೀಸರು (Pakistan Punjab Police) ತಿಳಿಸಿದ್ದಾರೆ.

    150ಕ್ಕೂ ಹೆಚ್ಚು ಕೇಸ್‌ಗಳಲ್ಲಿ ವಾಂಟೆಡ್‌ ಆಗಿರುವ ಇಮ್ರಾನ್‌ ಖಾನ್‌ ಪ್ರಧಾನಿ ಹುದ್ದೆಯಲ್ಲಿದ್ದಾಗ ತಮಗೆ ಬಂದ ಉಡುಗೊರೆಗಳನ್ನ ಅಕ್ರಮವಾಗಿ ಮಾರಾಟ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ ವಿಚಾರಣಾ ನ್ಯಾಯಾಲಯ ಖಾನ್‌ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿತು. ಜೊತೆಗೆ 5 ವರ್ಷ ಸಕ್ರಿಯ ರಾಜಕಾರಣದಿಂದಲೂ ಬ್ಯಾನ್‌ ಮಾಡಿ ಆದೇಶಿಸಿತು. ಆ ನಂತರ ಪೂರ್ವ ಪಂಜಾಬ್‌ ಪ್ರಾಂತ್ಯದ ಪೊಲೀಸರು ಲಾಹೋರ್‌ನಲ್ಲಿರುವ ಇಮ್ರಾನ್‌ ಖಾನ್‌ ಮನೆಯಲ್ಲೇ ಬಂಧಿಸಿದ್ದರು. ಈ ಬೆಳವಣಿಗೆ ಕಂಡುಬಂದ ಒಂದು ದಿನದ ನಂತರ ಇಮ್ರಾನ್‌ ಖಾನ್‌ ಅವ್ರನ್ನ ಪಿಟಿಐ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಯಿತು. ಇದನ್ನೂ ಓದಿ: ಪಾಕ್‌ನಲ್ಲಿ ರಾಜಕೀಯ ಕೋಲಾಹಲ – ಜೈಲುಪಾಲಾದ ಕ್ರಿಕೆಟ್‌ ದಂತಕಥೆಯ ಜೀವಕ್ಕೆ ಇದೆಯಾ ಆಪತ್ತು? 

    ಪಂಜಾಬ್ ಪೊಲೀಸರ ಪ್ರಕಾರ, ಖಾನ್ ಬಂಧನದ ನಂತರ ಪಂಜಾಬ್‌ನಾದ್ಯಂತ ಇಮ್ರಾನ್‌ ಖಾನ್‌ ಬೆಂಬಲಿಗರು ವ್ಯಾಪಕ ಪ್ರತಿಭಟನೆಗೆ ಮುಂದಾಗಿದ್ದರು. ಆದ್ದರಿಂದ ಪ್ರಾಂತ್ಯದ ವಿವಿಧ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ತೆಹ್ರೀಕ್-ಇ-ಇನ್ಸಾಫ್ (PTI) ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನ ಬಂಧಿಸಲಾಗಿದೆ. ಅವರಲ್ಲಿ 10ಕ್ಕೂ ಹೆಚ್ಚು ಬೆಂಬಲಿಗರ ವಿರುದ್ಧ ಭಯೋತ್ಪಾದನೆ ಆರೋಪದ ಮೇಲೆ ಕೇಸ್‌ ದಾಖಲಿಸಲಾಗಿದೆ. ಖಾನ್‌ ಬೆಂಬಲಿಗರ ದಾಳಿ ನಡೆಸಿದ ಪೊಲೀಸರು ಶಸ್ತ್ರಾಸ್ತ್ರಗಳನ್ನ ಕಸಿದು ಪ್ರತಿಭಟನೆಯನ್ನ ಹತ್ತಿಕ್ಕಿದ್ದಾರೆ ಎಂದು ತಿಳಿದುಬಂದಿದೆ.

    1992ರ ಪಾಕಿಸ್ತಾನ ವಿಶ್ವಕಪ್ ವಿಜೇತ ತಂಡದ ನಾಯಕ ಹಾಗೂ 70 ವರ್ಷದ ಹಿರಿಯ ರಾಜಕಾರಣಿ ಇಮ್ರಾನ್ ಖಾನ್, ಕೋಟ್ಯಂತರ ರೂ. ಮೌಲ್ಯದ ಉಡುಗೊರೆಯನ್ನ ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವ ಆರೋಪದ ಮೇಲೆ ಅವರನ್ನ ಬಂಧಿಸಲಾಗಿತ್ತು. ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿನ ಪ್ರಕರಣವನ್ನ ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಪಾಕಿಸ್ತಾನ ಸುಪ್ರೀಂ ಕೋರ್ಟ್ (Pakistan Supreme Court) ಇಮ್ರಾನ್ ಖಾನ್ ಮನವಿಯನ್ನ ತಿರಸ್ಕರಿಸಿತ್ತು. ಇದನ್ನೂ ಓದಿ: ಇರಾಕ್‌ನಲ್ಲಿ ಮಾರಾಟವಾದ ಭಾರತದ ಕೆಮ್ಮಿನ ಸಿರಪ್ ಅಸುರಕ್ಷಿತ – WHO ಎಚ್ಚರಿಕೆ

    ಶನಿವಾರ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು (Islamabad Trial Court) ತೋಶಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನ ತಪ್ಪಿತಸ್ಥ ಎಂದು ಘೋಷಿಸಿದೆ. ಇಸ್ಲಾಮಾಬಾದ್ ಮೂಲದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಹೆಚ್ಚುವರಿ ನ್ಯಾಯಾಧೀಶ ಹುಮಾಯೂನ್ ದಿಲಾವರ್ ಅವರು ಖಾನ್‌ಗೆ 1 ಲಕ್ಷ ರೂ. ದಂಡವನ್ನೂ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ವಿಫಲರಾದಲ್ಲಿ ಇನ್ನೂ ಹೆಚ್ಚುವರಿ 6 ತಿಂಗಳು ಜೈಲಿನಲ್ಲಿ ಇರಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಅರೆಸ್ಟ್ – ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, 5 ವರ್ಷ ರಾಜಕೀಯದಿಂದ ಬ್ಯಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನದ ಮಾಜಿ ಪ್ರಧಾನಿ ಅರೆಸ್ಟ್ – ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, 5 ವರ್ಷ ರಾಜಕೀಯದಿಂದ ಬ್ಯಾನ್

    ಪಾಕಿಸ್ತಾನದ ಮಾಜಿ ಪ್ರಧಾನಿ ಅರೆಸ್ಟ್ – ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, 5 ವರ್ಷ ರಾಜಕೀಯದಿಂದ ಬ್ಯಾನ್

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ ತೋಷಖಾನಾ ಕೇಸ್‌ನಲ್ಲಿ (Toshakhana Case) ತಪ್ಪಿತಸ್ಥನೆಂದು ಸಾಬೀತಾಗಿದ್ದು ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ರಾಜಕೀಯ ಪಕ್ಷವಾದ PTIನ ಅಧ್ಯಕ್ಷರೂ ಆಗಿದ್ದ ಇಮ್ರಾನ್ ಖಾನ್‌ರನ್ನ, ಲಾಹೋರ್‌ನಲ್ಲಿರುವ ಜಮಾನ್ ಪಾರ್ಕ್ ಮನೆಯಲ್ಲಿ ಬಂಧಿಸಲಾಗಿದೆ ಎಂದು ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಪಕ್ಷ ಟ್ವೀಟ್ ಮೂಲಕ ತಿಳಿಸಿದೆ.

    ಲಾಹೋರ್‌ನಲ್ಲಿ ಬಂಧಿಸಿದ ಬಳಿಕ ರಾಜಧಾನಿ ಇಸ್ಲಾಮಾಬಾದ್‌ಗೆ ಕರೆತರಲಾಗಿದ್ದು, ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು (Islamabad Trial Court) 5 ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿದೆ. ಈ ನಡುವೆ ಪಿಟಿಐ ಪ್ರಧಾನ ಕಾರ್ಯದರ್ಶಿ ಒಮರ್ ಅಯೂಬ್ ಖಾನ್, ಇಮ್ರಾನ್ ಖಾನ್ ಬಂಧನ ವಿರೋಧಿಸಿ ಶಾಂತಿಯುತ ಪ್ರತಿಭೆನಟಗೆ ಕರೆ ನೀಡಿದ್ದಾರೆ.

    1992ರ ಪಾಕಿಸ್ತಾನ ವಿಶ್ವಕಪ್ ವಿಜೇತ ತಂಡದ ನಾಯಕ ಹಾಗೂ 70 ವರ್ಷದ ಹಿರಿಯ ರಾಜಕಾರಣಿ ಇಮ್ರಾನ್ ಖಾನ್, ಕೋಟ್ಯಂತರ ರೂ. ಮೌಲ್ಯದ ಉಡುಗೊರೆಯನ್ನ ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವ ಆರೋಪದ ಮೇಲೆ ಅವರನ್ನ ಬಂಧಿಸಲಾಗಿತ್ತು. ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿನ ಪ್ರಕರಣವನ್ನ ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಪಾಕಿಸ್ತಾನ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್ ಮನವಿಯನ್ನ ತಿರಸ್ಕರಿಸಿತ್ತು. ಇದನ್ನೂ ಓದಿ: ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!

    ಶನಿವಾರ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ತೋಷಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನ ತಪ್ಪಿತಸ್ಥ ಎಂದು ಘೋಷಿಸಿದೆ. ಇಸ್ಲಾಮಾಬಾದ್ ಮೂಲದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಹೆಚ್ಚುವರಿ ನ್ಯಾಯಾಧೀಶ ಹುಮಾಯೂನ್ ದಿಲಾವರ್ ಅವರು ಖಾನ್‌ಗೆ 1 ಲಕ್ಷ ರೂ. ದಂಡವನ್ನೂ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ವಿಫಲರಾದಲ್ಲಿ ಇನ್ನೂ ಹೆಚ್ಚುವರಿ 6 ತಿಂಗಳು ಜೈಲಿನಲ್ಲಿ ಇರಿಸುವುದಾಗಿ ಹೇಳಿದ್ದಾರೆ.

    ಪೊಲೀಸರಿಂದ ಬಿಗಿ ಭದ್ರತೆ:
    ಇಮ್ರಾನ್ ಬಂಧನದ ನಂತರ ಅವರ ಮನೆಯ ಹೊರಗೆ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಜೊತೆಗೆ ಜಮಾನ್ ಪಾರ್ಕ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    140ಕ್ಕೂ ಹೆಚ್ಚು ಕೇಸ್‌ಗಳಲ್ಲಿ ವಾಂಟೆಡ್:
    ಮಾಜಿ ಕ್ರಿಕೆಟಿಗನೂ ಆಗಿರುವ ಇಮ್ರಾನ್ ಖಾನ್, ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದನೆ, ಭ್ರಷ್ಟಾಚಾರ ಮತ್ತು ಕೊಲೆ ಆರೋಪಗಳು ಸೇರಿದಂತೆ ದೇಶಾದ್ಯಂತ 140ಕ್ಕೂ ಹೆಚ್ಚು ಕೇಸ್‌ಗಳನ್ನ ಎದುರಿಸುತ್ತಿದ್ದಾರೆ. ಕಳೆದ ಮೇ 9ರಂದು ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸೇನಾ ರೇಂಜರ್‌ಗಳಿಂದ ಬಂಧಿಸಲ್ಪಟ್ಟ ನಂತರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು

    ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು

    ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ 2 ವಾರಗಳ ಜಾಮೀನನ್ನು (Bail) ಮಂಜೂರು ಮಾಡಿದೆ.

    ಇಮ್ರಾನ್ ಖಾನ್ ಅವರನ್ನು ಮಂಗಳವಾರ ಪ್ಯಾರಾ ಮಿಲಿಟರಿ ಪಡೆ ಬಂಧಿಸಿದ್ದು ಬಳಿಕ ಪಾಕಿಸ್ತಾನದಾದ್ಯಂತ ಭಾರೀ ಪ್ರತಿಭಟನೆ ಭುಗಿಲೆದ್ದಿತು. ಗುರುವಾರ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಅವರ ಬಂಧನವನ್ನು ಕಾನೂನು ಬಾಹಿರ ಎಂದು ಘೋಷಿಸಿ ತಕ್ಷಣವೇ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು. ಇದಾದ ಬೆನ್ನಲೇ ಇಸ್ಲಾಮಾಬಾದ್ ಹೈಕೋರ್ಟ್ ಖಾನ್ ಅವರಿಗೆ ಜಾಮೀನನ್ನು ಮಂಜೂರು ಮಾಡಿದೆ.

    ಇಮ್ರಾನ್ ಖಾನ್ ಮಂಗಳವಾರ ಪ್ರಕರಣವೊಂದರ ವಿಚಾರಣೆಗೆಂದು ಹೈಕೋರ್ಟ್‌ಗೆ ಹಾಜರಾಗಲು ತೆರಳುತ್ತಿದ್ದ ವೇಳೆ ಕೋರ್ಟ್ ಆವರಣದಲ್ಲಿಯೇ ಅವರನ್ನು ಬಂಧಿಸಲಾಗಿತ್ತು. ಇದರಿಂದ ಖಾನ್ ಬೆಂಬಲಿಗರು ಬಂಧನವನ್ನು ವಿರೋಧಿಸಿ ದೇಶಾದ್ಯಂತ ಭಾರೀ ಹಿಂಸಾಚಾರ ನಡೆಸಿದರು. ಇದನ್ನೂ ಓದಿ: ಹಾರ್ಟ್‌ ಅಟ್ಯಾಕ್ ಆಗ್ಲಿ ಅಂತ ನನಗೆ ಇಂಜೆಕ್ಷನ್ ಕೊಟ್ಟಿದ್ರು: ಇಮ್ರಾನ್ ಖಾನ್

    ದೇಶಾದ್ಯಂತ ನಡೆದಿರುವ ಘರ್ಷಣೆಯಲ್ಲಿ ಹತ್ತರು ಜನರು ಬಲಿಯಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ದೇಶಾದ್ಯಂತ ಸಾವಿರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು – ಭಾರತದ ಭೇಟಿ ಮರೆಯಲಾಗದ ನೆನಪು ಎಂದ ಇಸ್ರೇಲ್ ಅಧಿಕಾರಿ

  • ಇಮ್ರಾನ್ ಖಾನ್ ಅರೆಸ್ಟ್ – ಸೇನಾ ಕಚೇರಿ ಮೇಲೆ ಬೆಂಕಿ, ದೇಶಾದ್ಯಂತ ಇಂಟರ್‌ನೆಟ್ ಬಂದ್

    ಇಮ್ರಾನ್ ಖಾನ್ ಅರೆಸ್ಟ್ – ಸೇನಾ ಕಚೇರಿ ಮೇಲೆ ಬೆಂಕಿ, ದೇಶಾದ್ಯಂತ ಇಂಟರ್‌ನೆಟ್ ಬಂದ್

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಮಂಗಳವಾರ ಪ್ಯಾರಾ ಮಿಲಿಟರಿ ಪಡೆ ಬಂಧಿಸಿದ್ದು, ಇದರಿಂದ ಸಿಡಿದೆದ್ದಿರುವ ಅವರ ಬೆಂಬಲಿಗರು ಭಾರೀ ಪ್ರತಿಭಟನೆಯಲ್ಲಿ (Protest) ತೊಡಗಿದ್ದಾರೆ.

    ಮಂಗಳವಾರ ಪ್ರಕರಣವೊಂದರ ವಿಚಾರಣೆಗಾಗಿ ಇಸ್ಲಾಮಾಬಾದ್‌ನ ಹೈಕೋರ್ಟ್ ತೆರಳುತ್ತಿದ್ದ ವೇಳೆಯೇ ಇಮ್ರಾನ್‌ಖಾನ್ ಅವರನ್ನು ಬಂಧಿಸಲಾಗಿತ್ತು. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ಬಳಿಕ ಅವರ ಬೆಂಬಲಿಗರು ಲಾಹೋರ್‌ನಲ್ಲಿರುವ ಸೇನಾ ಕಮಾಂಡರ್‌ಗಳ ನಿವಾಸದ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ. ಪೇಶಾವರದಲ್ಲಿ ಪಾಕಿಸ್ತಾನದ ರೇಡಿಯೋ ಕಟ್ಟಡಕ್ಕೂ ಬೆಂಕಿ ಹಚ್ಚಲಾಗಿದೆ.

    ಖಾನ್ ಬಂಧನದ ಬಳಿಕ ಪಾಕಿಸ್ತಾನದಾದ್ಯಂತ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ (PTI) ಬೆಂಬಲಿಗರಿಂದ ಪ್ರತಿಭಟನೆ ಭುಗಿಲೆದ್ದಿದೆ. ಇಸ್ಲಾಮಾಬಾದ್‌ನಾದ್ಯಂತ ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 144 ಜಾರಿಯಲ್ಲಿದ್ದು, ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಇಸ್ಲಾಮಾಬಾದ್ ಮಾತ್ರವಲ್ಲದೇ ರಾವಲ್ಪಿಂಡಿ, ಲಾಹೋರ್, ಕರಾಚಿ, ಗುಜ್ರಾನ್‌ವಾಲಾ, ಫೈಸಲಾಬಾದ್, ಮುಲ್ತಾನ್, ಪೇಶಾವರ್ ಮತ್ತು ಮರ್ದಾನ್‌ನಲ್ಲಿಯೂ ಪ್ರತಿಭಟನೆಗಳು ಪ್ರಾರಂಭವಾಗಿರುವುದಾಗಿ ವರದಿಗಳು ತಿಳಿಸಿವೆ.

    ರಾವಲ್ಪಿಂಡಿಯಲ್ಲಿ ಸೇನಾ ಪ್ರಧಾನ ಕಚೇರಿಯ ಮುಖ್ಯ ಗೇಟ್ ಅನ್ನು ಪ್ರತಿಭಟನಾಕಾರರು ಒಡೆದು ಹಾಕಿದ್ದಾರೆ. ಲಾಹೋರ್‌ನಲ್ಲಿ ಕಾರ್ಪ್ಸ್ ಕಮಾಂಡರ್ ಅವರ ನಿವಾಸಕ್ಕೆ ನುಗ್ಗಿ ಗೇಟ್ ಹಾಗೂ ಕಿಟಕಿಗಳನ್ನು ಒಡೆದಿದ್ದಾರೆ. ಹಲವೆಡೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌

    ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ದೇಶಾದ್ಯಂತ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಮಾತ್ರವಲ್ಲದೇ ಟ್ವಿಟ್ಟರ್, ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗೂ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates