Tag: ಇಸ್ರೇಲ್

  • ಭಾರತೀಯರ ಹತ್ಯೆಗೆ ಈ ಸಂಘಟನೆಯೇ ಹೊಣೆ: ಲಷ್ಕರ್‌-ಎ-ತೊಯ್ಬಾ ಬ್ಯಾನ್‌ ಮಾಡಿದ ಇಸ್ರೇಲ್‌

    ಭಾರತೀಯರ ಹತ್ಯೆಗೆ ಈ ಸಂಘಟನೆಯೇ ಹೊಣೆ: ಲಷ್ಕರ್‌-ಎ-ತೊಯ್ಬಾ ಬ್ಯಾನ್‌ ಮಾಡಿದ ಇಸ್ರೇಲ್‌

    ನವದೆಹಲಿ: ಮುಂಬೈ ಭಯೋತ್ಪಾದನಾ (Mumbai Attack) ದಾಳಿಯಾಗಿ ನವೆಂಬರ್‌ಗೆ 15 ವರ್ಷ. ಈ ಕರಾಳ ದಿನದ ಸ್ಮರಣಾರ್ಥ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತೊಯ್ಬಾ ನಿಷೇಧಿಸುವುದಾಗಿ ಇಸ್ರೇಲ್‌ ಘೋಷಿಸಿದೆ. ಮುಂಬೈ ದಾಳಿ ಖಂಡನೀಯ ಎಂದು ಭಯೋತ್ಪಾದಕ ಸಂಘಟನೆ ವಿರುದ್ಧ ಹರಿಹಾಯ್ದಿದೆ.

    ಭಾರತ ಸರ್ಕಾರದ ಯಾವುದೇ ಮನವಿ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ. ಲಷ್ಕರ್-ಎ-ತೈಬಾವನ್ನು (Lashkar-e-Taiba) ಇಸ್ರೇಲಿ ಅಕ್ರಮ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ಪೂರೈಸಿದೆ ಎಂದು ಭಾರತದಲ್ಲಿನ ಇಸ್ರೇಲ್ (Israel) ರಾಯಭಾರ ಕಚೇರಿ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

    ಇಸ್ರೇಲ್ ತನ್ನ ಗಡಿಯೊಳಗೆ ಅಥವಾ ಅದರ ಸುತ್ತಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಮಾತ್ರ ಪಟ್ಟಿ ಮಾಡಿದೆ. ನೂರಾರು ಭಾರತೀಯ ನಾಗರಿಕರು ಮತ್ತು ಇತರರ ಹತ್ಯೆಗೆ ಈ ಭಯೋತ್ಪಾದಕ ಸಂಘಟನೆ ಹೊಣೆಯಾಗಿದೆ ಎಂದು ತಿಳಿಸಿದೆ.

    ಭಯೋತ್ಪಾದಕ ಸಂಘಟನೆ ದಾಳಿಯ ಸಂತ್ರಸ್ತರು, ಇಸ್ರೇಲ್‌ ಸೇರಿದಂತೆ ಮುಂಬೈ ದಾಳಿಯಲ್ಲಿ ಬದುಕುಳಿದ ಮತ್ತು ದುಃಖಿತ ಕುಟುಂಬಗಳಿಗೆ ಇಸ್ರೇಲ್‌ ಸಂತಾಪ ಸೂಚಿಸಿದೆ. ಭವಿಷ್ಯದ ಶಾಂತಿಯುತ ಸಮಾಜದ ಭರವಸೆಯಲ್ಲಿ ನಾವು ನಿಮ್ಮೊಂದಿಗೆ ಒಂದಾಗಿದ್ದೇವೆ ಎಂದು ಹೇಳಿದೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    2008 ರ ನವೆಂಬರ್‌ನಲ್ಲಿ ಮುಂಬೈನಲ್ಲಿ ಹಲವಾರು ಭಯೋತ್ಪಾದಕ ದಾಳಿಗಳು ನಡೆದಿದ್ದವು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾಗೆ ಸಂಪರ್ಕ ಹೊಂದಿದ್ದ 10 ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ಭಯೋತ್ಪಾದಕರು ಮುಂಬೈನ ದಕ್ಷಿಣ ಭಾಗದಲ್ಲಿ ಛತ್ರಪತಿ ಶಿವಾಜಿ ರೈಲು ನಿಲ್ದಾಣ, ಜನಪ್ರಿಯ ಲಿಯೋಪೋಲ್ಡ್ ಕೆಫೆ, ಎರಡು ಆಸ್ಪತ್ರೆಗಳು ಮತ್ತು ಥಿಯೇಟರ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದರು.

  • ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ಟೆಲ್ ಅವಿವ್: ಯುದ್ಧಪೀಡಿತ ಗಾಜಾ ಪಟ್ಟಿಯ (Gaza Strip) ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾವನ್ನು (Al-Shifa hospital) ಹಮಾಸ್ (Hamas) ತಮ್ಮ ಉಗ್ರ ಚಟುವಟಿಕೆಗಳ ತಾಣವಾಗಿಸಿಕೊಂಡಿರುವುದಾಗಿ ಇಸ್ರೇಲ್ (Israel) ವೀಡಿಯೋ ಸಾಕ್ಷಿ ಸಮೇತ ತಿಳಿಸಿದೆ.

    ಅಲ್ ಶಿಫಾ ಆಸ್ಪತ್ರೆಯಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನು (Hostages) ಇಟ್ಟಿರುವ ವೀಡಿಯೋವೊಂದನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ಹಮಾಸ್ ಉಗ್ರರ ಮತ್ತೊಂದು ಮುಖ ಬಯಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ನೇಪಾಳ, ಥಾಯ್ಲೆಂಡ್ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದೆ. ಆ ಒತ್ತೆಯಾಳುಗಳನ್ನು ಅಲ್ ಶಿಫಾ ಆಸ್ಪತ್ರೆಯಲ್ಲಿಯೇ ಇರಿಸಿದೆ. ಇಸ್ರೇಲ್‌ನಲ್ಲಿದ್ದ ಇವರನ್ನು ಹಮಾಸ್ ಉಗ್ರರು ಅಪಹರಿಸಿ ಅವರ ಮೇಲೆ ಹಲ್ಲೆ ನಡೆಸಿ ಗಾಜಾ ಆಸ್ಪತ್ರೆಯಲ್ಲಿ ಇರಿಸಿದೆ ಎಂದು ವೀಡಿಯೋ ಸಮೇತ ಇಸ್ರೇಲ್ ಸೇನೆ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ.

    ಇಷ್ಟು ಮಾತ್ರವಲ್ಲದೇ ಅಲ್ ಶಿಫಾ ಆಸ್ಪತ್ರೆಯಲ್ಲಿ ಸುರಂಗವೊಂದನ್ನು ಪತ್ತೆಹಚ್ಚಿರುವ ಮತ್ತೊಂದು ವೀಡಿಯೋವನ್ನು ಇಸ್ರೇಲ್ ಸೇನೆ ಹಂಚಿಕೊಂಡಿದೆ. ಅಲ್ ಶಿಫಾ ಆಸ್ಪತ್ರೆಯ ಸಂಕೀರ್ಣದ ಕೆಳಗಡೆ ಸುಮಾರು 55 ಮೀ. ಉದ್ದದ ಸುರಂಗವನ್ನು ಕಂಡುಹಿಡಿದಿರುವುದಾಗಿ ತಿಳಿಸಿದೆ. ಈ ಸುರಂಗದ ಪತ್ತೆಯಿಂದಾಗಿ ಹಮಾಸ್ ಉಗ್ರರು ಗಾಜಾ ನಿವಾಸಿಗಳನ್ನು ಹಾಗೂ ರೋಗಿಗಳನ್ನು ರಕ್ಷಾ ಕವಚವಾಗಿ ಬಳಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂಬುದನ್ನು ಒತ್ತಿ ಹೇಳಿದೆ.

    ಆದರೆ ಅಲ್ ಶಿಫಾ ಆಸ್ಪತ್ರೆಯ ಕೆಳಗಡೆ ಸುರಂಗವನ್ನು ಪತ್ತೆ ಮಾಡಿರುವ ಇಸ್ರೇಲ್‌ನ ಹೇಳಿಕೆಯನ್ನು ಹಮಾಸ್ ತಳ್ಳಿಹಾಕಿದೆ. ಇದು ಶುದ್ಧ ಸುಳ್ಳು ಎಂದಿದೆ. ಇಸ್ರೇಲಿ ಪಡೆಗಳು ಕಳೆದ 8 ದಿನಗಳಿಂದ ಆಸ್ಪತ್ರೆಯಲ್ಲಿದ್ದು, ಅವರಿಂದ ಇನ್ನೂ ಏನನ್ನೂ ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದು ಗಾಜಾ ಆರೋಗ್ಯ ಸಚಿವಾಲಯದ ನಿರ್ದೇಶಕ ಮೌನಿರ್ ಎಲ್ ಬಾರ್ಶ್ ಅಲ್ ಜಜೀರಾ ತಿಳಿಸಿದ್ದಾರೆ. ಇದನ್ನೂ ಓದಿ: ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೇಡ್‌ ಮಾತು

    ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಹಮಾಸ್ ಉಗ್ರರ ತಾಣ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸಿದ್ದು ಇದುವರೆಗೂ 11 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಶಾಖಪಟ್ಟಣಂ ಬಂದರಿನಲ್ಲಿ ಬೆಂಕಿ ಅವಘಡ- 40 ದೋಣಿಗಳು ಭಸ್ಮ

  • ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ ಮಹಿಳಾ ಯೋಧೆ‌ ದಾರುಣ ಸಾವು

    ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ ಮಹಿಳಾ ಯೋಧೆ‌ ದಾರುಣ ಸಾವು

    ಟೆಲ್‌ ಅವೀವ್‌: ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು (Hamas Terrorist) ಇಸ್ರೇಲ್‌ ಮೇಲೆ 5,000 ರಾಕೆಟ್‌ಗಳಿಂದ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅಪಹರಣಕ್ಕೊಳಗಾದ 19 ವರ್ಷದ ಮಹಿಳಾ ಯೋಧೆಯೊಬ್ಬರು (Israel Soldier) ಕೊಲೆಯಾಗಿರುವುದು ಪತ್ತೆಯಾಗಿದೆ. ಇಸ್ರೇಲ್‌ ರಕ್ಷಣಾ ಪಡೆ ಈ ಬಗ್ಗೆ ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

    ಕಾರ್ಪೋರಲ್ ನೋವಾ ಮಾರ್ಸಿಯಾನೊ (19) ಅವರ ಮೃತದೇಹವು ಗಾಜಾಪಟ್ಟಿಯಲ್ಲಿರುವ ಶಿಫಾ ಹಾಸ್ಪಿಟಲ್‌ ಪಕ್ಕದಲ್ಲಿ ಪತ್ತೆಯಾಗಿದೆ. ಹಮಾಸ್‌ ಉಗ್ರರ ಗುಂಪು ಶಸ್ತ್ರಾಸ್ತ್ರ ಸಂಗ್ರಹಣೆಗಾಗಿ ಶಾಲೆಗಳು, ಆಸ್ಪತ್ರೆಗಳಂತಹ ನಾಗರಿಕ ಕಟ್ಟಡಗಳನ್ನು ಹಮಾಸ್‌ ಬಳಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ ರಕ್ಷಣಾ ಪಡೆ (IDF) ಅನೇಕ ವೀಡಿಯೋಗಳನ್ನು ಬಿಡುಗಡೆ ಮಾಡಿದೆ. ಈ ನಡುವೆಯೇ ಇಸ್ರೇಲ್‌ ಮಹಿಳಾ ಸೈನಿಕರೊಬ್ಬರು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

    ನೋವಾ ಮಾರ್ಸಿಯಾನೊ ಅವರನ್ನ ಅಕ್ಟೋಬರ್‌ 7ರಂದು ಅಪಹರಿಸಿ ಹಮಾಸ್‌ ಉಗ್ರರು ಹತ್ಯೆಗೈದಿದ್ದಾರೆ. ಆಕೆಯ ದೇಹವನ್ನು ಗಾಜಾದ ಶಿಫಾ ಆಸ್ಪತ್ರೆ ಸಮೀಪದಲ್ಲಿ ಬಿಸಾಡಿದ್ದಾರೆ. ಇದನ್ನು ಇಸ್ರೇನ್‌ ಸೇನೆ ಪತ್ತೆಮಾಡಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ. ಅಲ್ಲದೇ ಇಂದು ಗಾಜಾ ಆಸ್ಪತ್ರೆಯ ಸಮೀಪದಲ್ಲೇ ಒತ್ತಾಯಾಳಾಗಿದ್ದ 5 ಮಕ್ಕಳ ತಾಯಿ ಹಮಾಸ್‌ ಉಗ್ರರಿಂದ ಕೊಲ್ಲಲ್ಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

    ಹಮಾಸ್‌ ತನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಆಸ್ಪತ್ರೆಗಳನ್ನು ಹಮಾಸ್ ಬಳಸುತ್ತದೆ ಎಂಬುದಕ್ಕೆ ತನ್ನ ಪಡೆಗಳು ಪುರಾವೆಗಳನ್ನು ಕಂಡುಕೊಂಡಿವೆ. ಅಲ್ ಶಿಫಾ ಆಸ್ಪತ್ರೆಯ (Al-Shifa Hospital) ಎಂಆರ್‌ಐ ಯೂನಿಟ್‌ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಇಸ್ರೇಲ್‌ ತಿಳಿಸಿದೆ. ಹಮಾಸ್‌ಗೆ ಸೇರಿದ ಬ್ಯಾಗ್‌ಗಳಲ್ಲಿ ಎಕೆ 47, ಗ್ರೆನೇಡ್ ಸೇರಿ ಹಲವು ಶಸ್ತ್ರಾಸ್ತ್ರ ಸಿಕ್ಕಿವೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಇಸ್ರೇಲ್ ಸೇನೆ (Israeli Defence Force) ಬಿಡುಗಡೆ ಮಾಡಿದೆ. ಅಲ್ ಶಿಫಾ ಆಸ್ಪತ್ರೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಇಸ್ರೇಲ್ ಸೇನೆ, ಆಸ್ಪತ್ರೆಯ ಇಂಚಿಂಚನ್ನೂ ಜಾಲಾಡುತ್ತಿದೆ. ಅಷ್ಟೇ ಅಲ್ಲ, ಅಲ್ ಶಿಫಾ ಆಸ್ಪತ್ರೆ ಮೇಲೆ ಬುಲ್ಡೋಜರ್‌ಗಳು ನುಗ್ಗಿವೆ ಎಂದು ವರದಿಯಾಗಿದೆ.

  • ಇಸ್ರೇಲ್, ಹಮಾಸ್ ಯುದ್ಧ – ಸಾವು ನೋವುಗಳನ್ನು ಖಂಡಿಸಿದ ಪ್ರಧಾನಿ ಮೋದಿ

    ಇಸ್ರೇಲ್, ಹಮಾಸ್ ಯುದ್ಧ – ಸಾವು ನೋವುಗಳನ್ನು ಖಂಡಿಸಿದ ಪ್ರಧಾನಿ ಮೋದಿ

    ನವದೆಹಲಿ: ಇಸ್ರೇಲ್ (Israel) ಮತ್ತು ಪ್ಯಾಲೆಸ್ತೀನ್ (Palestine) ಬಂಡುಕೋರ ಸಂಘಟನೆ ಹಮಾಸ್ (Hamas) ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಪಾರ ಪ್ರಮಾಣದ ಸಾವು-ನೋವುಗಳು ಸಂಭವಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಖಂಡಿಸಿದ್ದಾರೆ.

    ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಹೊಸ ಸವಾಲುಗಳ ಕುರಿತು ಮಾತನಾಡಿ, ಭಾರತವು ಸಂಘರ್ಷದಲ್ಲಿ ಸಂಯಮವನ್ನು ಅನುಸರಿಸಿದೆ ಎಂದು ಹೇಳಿದರು.

    ನಾವು ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದೇವೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಪ್ಯಾಲೆಸ್ತೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಅವರೊಂದಿಗಿನ ಮಾತುಕತೆಯ ನಂತರ ಭಾರತವು ಪ್ಯಾಲೆಸ್ತೀನಿಯರಿಗೆ ಮಾನವೀಯ ನೆರವು ಕಳುಹಿಸಿದೆ. ಇದು ಜಾಗತಿಕ ಒಳಿತಿಗಾಗಿ ಜಾಗತಿಕ ದಕ್ಷಿಣದ ದೇಶಗಳು ಒಂದಾಗಬೇಕಾದ ಸಮಯ ಎಂದು ಅವರು ತಿಳಿಸಿದರು. ಇದನ್ನೂ ಓದಿ: 68 ಸಾವಿರ ದಂಡ ಪಾವತಿಸಿದ್ದೇನೆ – ಲುಲು ಮಾಲ್‌ಗೆ ಕರೆಂಟ್‌ ಶಾಕ್‌ ಕೊಟ್ಟ ಕುಮಾರಸ್ವಾಮಿ

    ಪೂರ್ವ ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನ್ ಪ್ರಾಂತ್ಯದಲ್ಲಿ ವಸಾಹತು ಚಟುವಟಿಕೆಗಳನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದ ಬೆನ್ನಲ್ಲೇ ಅವರು ಹೇಳಿಕೆಗಳನ್ನು ನೀಡಿದ್ದಾರೆ. ನಿರ್ಣಯದ ಪರವಾಗಿ ಮತ ಚಲಾಯಿಸಿದ 145 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. 7 ದೇಶಗಳು ಇಸ್ರೇಲ್ ವಿರುದ್ಧವಾಗಿ ಮತ ಚಲಾಯಿಸಿದವು ಮತ್ತು 18 ಗೈರುಹಾಜರಾದವು. ಭಾರತವು ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ಗೆ ಎರಡು ರಾಜ್ಯ ಪರಿಹಾರಕ್ಕಾಗಿ ತನ್ನ ಕರೆಯನ್ನು ಉಳಿಸಿಕೊಂಡಿದೆ ಮತ್ತು ಇಸ್ರೇಲ್-ಹಮಾಸ್ ಯುದ್ಧದಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸಲು ಪುನರುಚ್ಚರಿಸಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವಿಶ್ವಕಪ್ ಫೈನಲ್ಸ್ ಬೆಟ್ಟಿಂಗ್ ಭರಾಟೆ – 15 ದಿನದಲ್ಲಿ 30 ಕೇಸ್, 42 ಮಂದಿ ಅರೆಸ್ಟ್

  • ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್‌ ಉಗ್ರರ ಸುರಂಗ – ಇಸ್ರೇಲ್‌ನಿಂದ ವಿಡಿಯೋ ರಿಲೀಸ್‌

    ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್‌ ಉಗ್ರರ ಸುರಂಗ – ಇಸ್ರೇಲ್‌ನಿಂದ ವಿಡಿಯೋ ರಿಲೀಸ್‌

    ಟೆಲ್‌ ಅವೀವ್‌: ಇಸ್ರೇಲ್‌ (Isreal) ಮೇಲೆ ದಾಳಿ ನಡೆಸಿದ ಬಳಿಕ ಹಮಾಸ್‌ ಉಗ್ರರು (Hamas Terrorist) ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ದೊಡ್ಡ ಸುರಂಗವೊಂದು ಗಾಜಾದ ಆಸ್ಪತ್ರೆಯಡಿ (Gaza Hospital) ಪತ್ತೆಯಾಗಿದೆ.

    ಈ ಸುರಂಗದ ವಿಡಿಯೋವನ್ನು ಇಸ್ರೇಲಿ ಸೇನೆ ಇಂದು ಬಿಡುಗಡೆ ಮಾಡುವ ಮೂಲಕ ಮೂಲಕ ಹಮಾಸ್‌ ಉಗ್ರರ ಕೃತ್ಯವನ್ನು ಬಹಿರಂಗ ಮಾಡಿದೆ.

    ಇಸ್ರೇಲ್‌ ಸೇನೆ ಆಸ್ಪತ್ರೆಯ ಮೇಲೆ ಏರ್‌ ಸ್ಟ್ರೈಕ್‌ ಮಾಡುವ ಮೂಲಕ ಮಗ್ದ ಮಕ್ಕಳನ್ನು ಹತ್ಯೆ ಮಾಡುತ್ತಿದೆ ಎಂದು ಹಮಾಸ್‌ ಹೇಳಿತ್ತು. ಆದರೆ ಇಸ್ರೇಲ್‌ ಈ ಆರೋಪವನ್ನು ತಳ್ಳಿ ಹಾಕಿ, ಹಮಾಸ್‌ ಉಗ್ರರು ಆಸ್ಪತ್ರೆಯನ್ನು ರಕ್ಷಣಾ ಕವಚವನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿತ್ತು. ಈಗ ಸುರಂಗದ ವಿಡಿಯೋವನ್ನು ಇಸ್ರೇಲ್‌ ಬಿಡುಗಡೆ ಮಾಡುವ ಮೂಲಕ ಹಮಾಸ್‌ ಉಗ್ರರ ಬಣ್ಣವನ್ನು ಬಯಲು ಮಾಡಿದೆ. ಇದನ್ನೂ ಓದಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

    ಗಾಜಾದಲ್ಲಿನ ರಾಂಟಿಸ್ಸಿ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಸಂಗ್ರಹಿಸಿಟ್ಟಿರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್‌ ಸೈನ್ಯದ ವಕ್ತಾರ ಹೇಳಿಕೊಳ್ಳುವ ವೀಡಿಯೊ ಮತ್ತು ಫೋಟೋಗಳನ್ನು ಇಸ್ರೇಲಿ ಮಿಲಿಟರಿ ರಿಲೀಸ್‌ ಮಾಡಿದೆ. ಇದನ್ನೂ ಓದಿ: ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

     

    ರಾಂಟಿಸ್ಸಿ ಆಸ್ಪತ್ರೆ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ಮಕ್ಕಳ ಆಸ್ಪತ್ರೆಯಾಗಿದ್ದು ಇಲ್ಲಿ ಗ್ರೆನೇಡ್‌ಗಳು ಮತ್ತು ಇತರ ಸ್ಫೋಟಕಗಳು ಪತ್ತೆಯಾಗಿದೆ. ಇಲ್ಲಿ ಸಣ್ಣ ಸಣ್ಣ ಅಡುಗೆಮನೆ ಇದ್ದು, ಸುರಂಗದ ಬಳಿಯಲ್ಲೇ ಹಿರಿಯ ಹಮಾಸ್ ಕಮಾಂಡರ್ ಮನೆ ಇತ್ತು.

    ಹಮಾಸ್ ಬಂದೂಕುಧಾರಿಗಳು ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್‌ಗೆ ನುಗ್ಗಿ ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದರು. ನಂತರ 240 ಬಂಧಿತರನ್ನು ಗಾಜಾಕ್ಕೆ ತಂದು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು.

  • ಇಸ್ರೇಲ್‌ ಧೋರಣೆ ಖಂಡಿಸಿದ ವಿಶ್ವಸಂಸ್ಥೆ ನಿರ್ಣಯಕ್ಕೆ ಭಾರತ ಬೆಂಬಲ

    ಇಸ್ರೇಲ್‌ ಧೋರಣೆ ಖಂಡಿಸಿದ ವಿಶ್ವಸಂಸ್ಥೆ ನಿರ್ಣಯಕ್ಕೆ ಭಾರತ ಬೆಂಬಲ

    ಟೆಲ್‌ ಅವೀವ್: ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ವಸಾಹತು ಧೋರಣೆಯನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ.

    ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರಾಂತ್ಯದಲ್ಲಿ ಮತ್ತು ಆಕ್ರಮಿತ ಸಿರಿಯನ್ ಗೋಲನ್‌ನಲ್ಲಿ ವಸಾಹತು ಚಟುವಟಿಕೆಗಳನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು. ಇದನ್ನು ವಿರೋಧಿಸಿದ ಏಳು ದೇಶಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ಸೇರಿವೆ. ಹದಿನೆಂಟು ದೇಶಗಳು ಮತದಾನದಿಂದ ದೂರ ಉಳಿದವು.

    ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ “ತಕ್ಷಣದ ಹಾಗೂ ನಿರಂತರ ಮಾನವೀಯ ಒಪ್ಪಂದಕ್ಕೆ ಕರೆ ನೀಡುವ ಯುಎನ್ ನಿರ್ಣಯದ ಮೇಲೆ ಭಾರತವು ಮತದಾನದಿಂದ ದೂರ ಉಳಿದಿತ್ತು.

    ಇಸ್ರೇಲ್ ಮೇಲೆ ಅಕ್ಟೋಬರ್ 7 ರಂದು ಹಮಾಸ್‌ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್‌ ಯುದ್ಧ ಘೋಷಿಸಿತು. ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧದಿಂದಾಗಿ ಗಾಜಾದಲ್ಲಿ 11,000 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

     

    ಗಾಜಾದಲ್ಲಿ ತೆರೆದುಕೊಳ್ಳುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಆದರೆ ಭಯೋತ್ಪದನೆ ಬಗ್ಗೆ ಯಾವುದೇ ಸಂದಿಗ್ಧತೆ ಇರಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

  • 1,000 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡ ಹಮಾಸ್ ಕಮಾಂಡರ್ ಹತ್ಯೆ: ಇಸ್ರೇಲಿ ಮಿಲಿಟರಿ

    1,000 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡ ಹಮಾಸ್ ಕಮಾಂಡರ್ ಹತ್ಯೆ: ಇಸ್ರೇಲಿ ಮಿಲಿಟರಿ

    ಟೆಲ್‍ಅವಿವ್: ಗಾಜಾ ಆಸ್ಪತ್ರೆಯಲ್ಲಿ (Gaza Hospital) ಸರಿಸುಮಾರು 1,000 ಜನರನ್ನು ಮತ್ತು ರೋಗಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡ ಹಮಾಸ್ ನ ಹಿರಿಯ ಕಮಾಂಡರ್‍ನನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಮಿಲಿಟರಿ (Israel Military) ಹೇಳಿದೆ.

    ಈ ಸಂಬಂಧ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಎನ್ನ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅಹ್ಮದ್ ಸಿಯಾಮ್ ( Ahmed Siam) ಎಂಬಾತ ಹಮಾಸ್ ನ ನಾಸೆರ್ ರಾಡ್ವಾನ್ ಕಂಪನಿಯಲ್ಲಿ ಕಮಾಂಡರ್ ಆಗಿದ್ದ. ಈತ ದಾಳಿಗಳಲ್ಲಿ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಂಡಿದ್ದಾನೆ ಎಂದು ಪೋಸ್ಟ್ ಮಾಡಿದೆ.

    ಕಳೆದ ತಿಂಗಳು ಗಾಜಾದಲ್ಲಿನ ಹಮಾಸ್ ವಿರುದ್ಧ ತನ್ನ ನೆಲದ ಕಾರ್ಯಾಚರಣೆಯನ್ನು ವಿಸ್ತರಿಸಿದ ನಂತರ,  ಪ್ಯಾಲಿಸ್ತೀನಿ ಗುಂಪು ಯಹೂದಿ ರಾಷ್ಟ್ರದ ಮೇಲೆ ದೊಡ್ಡ ದಾಳಿಯನ್ನು ಪ್ರಾರಂಭಿಸಿದಾಗ ಅಕ್ಟೋಬರ್ 7 ರ ದಾಳಿಯಲ್ಲಿ ಭಾಗಿಯಾಗಿದ್ದ ಹಲವಾರು ಹಮಾಸ್ ಕಾರ್ಯಕರ್ತರನ್ನು ಇಸ್ರೇಲ್ ಪಡೆಗಳು ಕೊಂದಿವೆ. ಈ ಯುದ್ಧದಲ್ಲಿ ಇಸ್ರೇಲ್‍ನಲ್ಲಿ ಸುಮಾರು 1,200 ಜನರನ್ನು ಕೊಂದರೆ, ಗಾಜಾದಲ್ಲಿ 10,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಫೋಟೋ ಎಡಿಟ್ ಮಾಡಿ ಬ್ಲಾಕ್‍ಮೇಲ್ – ಆರೋಪಿ ಅರೆಸ್ಟ್

    ಇಸ್ರೇಲ್-ಹಮಾಸ್ ನಡುವಿನ ಯುದ್ಧ ಪ್ರಾರಂಭವಾಗಿ ತಿಂಗಳು ಕಳೆದಿದೆ. ಅಕ್ಟೋಬರ್ 7 ರಂದು ಪ್ರಾರಂಭವಾದ ದಾಳಿಗೆ ಇಸ್ರೇಲ್ ಕೊಂಚ ವಿರಾಮಕ್ಕೆ ಒಪ್ಪಿದೆ. ದಿನಕ್ಕೆ 4 ಗಂಟೆ ಕದನ ವಿರಾಮವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೃಢಪಡಿಸಿದ್ದರು. ಗಾಜಾದ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್ ಯುದ್ಧದ ವಲಯದಲ್ಲಿ ನೆಲೆಸಿರುವ ನಾಗರಿಕರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳಲು ಅನುವುಮಾಡಿಕೊಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಯುದ್ಧಕ್ಕೆ ಸಂಪೂರ್ಣ ವಿರಾಮವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ದಿನದಲ್ಲಿ 20 ಗಂಟೆ ಯುದ್ಧ ನಡೆದರೆ 4 ಗಂಟೆ ದಾಳಿ ನಡೆಸುವುದಿಲ್ಲ ಎಂದು ನೆತನ್ಯಾಹು (Benjamin Netanyahu) ತಿಳಿಸಿದ್ದರು.

  • ದಿನಕ್ಕೆ 4 ಗಂಟೆ ಕದನ ವಿರಾಮ – ಗಾಜಾ ಮೇಲಿನ ದಾಳಿಯನ್ನು ಕೊಂಚ ಸಡಿಲಿಸಿದ ಇಸ್ರೇಲ್

    ದಿನಕ್ಕೆ 4 ಗಂಟೆ ಕದನ ವಿರಾಮ – ಗಾಜಾ ಮೇಲಿನ ದಾಳಿಯನ್ನು ಕೊಂಚ ಸಡಿಲಿಸಿದ ಇಸ್ರೇಲ್

    ಟೆಲ್ ಅವಿವ್: ಇಸ್ರೇಲ್-ಹಮಾಸ್ (Israel-Hamas) ನಡುವಿನ ಯುದ್ಧ (War) ಪ್ರಾರಂಭವಾಗಿ ತಿಂಗಳು ಕಳೆದಿದೆ. ಅಕ್ಟೋಬರ್ 7 ರಂದು ಪ್ರಾರಂಭವಾದ ದಾಳಿಗೆ ಇಸ್ರೇಲ್ ಇದೀಗ ಕೊಂಚ ವಿರಾಮಕ್ಕೆ ಒಪ್ಪಿದೆ. ದಿನಕ್ಕೆ 4 ಗಂಟೆ ಕದನ ವಿರಾಮವನ್ನು (Ceasefire) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ದೃಢಪಡಿಸಿದ್ದಾರೆ.

    ಗಾಜಾದ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್ ಯುದ್ಧದ ವಲಯದಲ್ಲಿ ನೆಲೆಸಿರುವ ನಾಗರಿಕರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳಲು ಅನುವುಮಾಡಿಕೊಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಯುದ್ಧಕ್ಕೆ ಸಂಪೂರ್ಣ ವಿರಾಮವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ದಿನದಲ್ಲಿ 20 ಗಂಟೆ ಯುದ್ಧ ನಡೆದರೆ 4 ಗಂಟೆ ದಾಳಿ ನಡೆಸುವುದಿಲ್ಲ ಎಂದು ನೆತನ್ಯಾಹು ತಿಳಿಸಿದ್ದಾರೆ.

    ಆದರೆ ಹಮಾಸ್ ಉಗ್ರರ ವಿರುದ್ಧದ ದಾಳಿ ಎಂದಿಗೂ ನಿಲ್ಲುವುದಿಲ್ಲ. ಇಸ್ರೇಲ್‌ನ ದಾಳಿಯಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಬಾರದು ಎಂದು ಪ್ರತಿ ದಿನ 4 ಗಂಟೆ ದಾಳಿ ನಿಲ್ಲಿಸಲಾಗುತ್ತದೆ. ಆದರೆ ಹಮಾಸ್ ಉಗ್ರರ ವಿರುದ್ಧ ದಾಳಿ ಮುಂದುವರಿಯುತ್ತಲೇ ಇರುತ್ತದೆ. ನಾವು ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಹಾಗೂ ಇಡೀ ನಗರದ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತಿಲ್ಲ. ಆದರೆ ಉಗ್ರರನ್ನು ಮಾತ್ರ ಸುಮ್ಮನೆ ಬಿಡಲಾಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಶ್ರೀರಂಗಪಟ್ಟಣದಲ್ಲಿ ನಿರ್ಬಂಧ – ನಿಷೇಧಾಜ್ಞೆ ಜಾರಿ

    ಇಸ್ರೇಲ್‌ನಲ್ಲಿ 1,400 ಜನರನ್ನು ಕೊಂದಿರುವ ಹಮಾಸ್ ಉಗ್ರರು ಇನ್ನು ಕೂಡಾ ಮಕ್ಕಳು, ವೃದ್ಧರು ಸೇರಿದಂತೆ 239 ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಇಸ್ರೇಲ್‌ನ ಅಧಿಕಾರಿಗಳು ಹೇಳಿದ್ದಾರೆ. ಅವರಲ್ಲಿ ಸುಮಾರು 10 ಅಮೆರಿಕನ್ನರು ಸೇರಿದ್ದಾರೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾದ ಮೇಲಿನ ದಾಳಿಗೆ ಇಲ್ಲಿಯವರೆಗೆ 10,800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ದೆಹಲಿಯಲ್ಲಿ ಮಳೆ – ವಿಷಕಾರಿಯಾಗಿದ್ದ ಗಾಳಿ ಗುಣಮಟ್ಟದಲ್ಲಿ ಸುಧಾರಣೆ

  • ಇಸ್ರೇಲಿ ಜನರಿಗೆ ಇದು ಒಳ್ಳೆಯದಲ್ಲ: ಇಸ್ರೇಲ್‌ ಪರ ನಿಂತಿದ್ದ ಅಮೆರಿಕ ಹೀಗಂದಿದ್ಯಾಕೆ?

    ಇಸ್ರೇಲಿ ಜನರಿಗೆ ಇದು ಒಳ್ಳೆಯದಲ್ಲ: ಇಸ್ರೇಲ್‌ ಪರ ನಿಂತಿದ್ದ ಅಮೆರಿಕ ಹೀಗಂದಿದ್ಯಾಕೆ?

    ವಾಷಿಂಗ್ಟನ್‌: ಗಾಜಾ ಪಟ್ಟಿಯನ್ನು (Gaza Strip) ಆಕ್ರಮಿಸುವ ಇಸ್ರೇಲ್‌ (Israel) ನಡೆಗೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಇದು ಇಸ್ರೇಲಿ ಜನರಿಗೆ ಒಳ್ಳೆಯದಲ್ಲ ಎಂದು ಅಮೆರಿಕ (America) ಎಚ್ಚರಿಕೆ ನೀಡಿದೆ.

    ಇಸ್ರೇಲಿ ಯೋಧರು ಗಾಜಾ ನಗರದ ಹೃದಯ ಭಾಗದಲ್ಲಿದ್ದಾರೆ ಎಂದು ಈಚೆಗೆ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಎಚ್ಚರಿಕೆ ಸಂದೇಶ ರವಾನಿಸಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ, ಇಸ್ರೇಲಿ ಪಡೆಗಳಿಂದ ಗಾಜಾವನ್ನು ಮರು ಆಕ್ರಮಣ ಮಾಡುವುದು ಒಳ್ಳೆಯದಲ್ಲ ಎಂದು ಅಧ್ಯಕ್ಷರು (ಜೋ ಬೈಡೆನ್‌) ಭಾವಿಸಿದ್ದಾರೆ. ಇದು ಇಸ್ರೇಲ್‌ ಹಾಗೂ ದೇಶದ ಜನತೆಗೆ ಒಳ್ಳೆಯದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪೋರ್ಚುಗಲ್‌ ಪ್ರಧಾನಿ ಸ್ಥಾನಕ್ಕೆ ಆಂಟೋನಿಯೊ ಕೋಸ್ಟಾ ರಾಜೀನಾಮೆ

    ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ಹೋರಾಟ ಮುಗಿದ ನಂತರ ಇಸ್ರೇಲ್, ಗಾಜಾ ಪಟ್ಟಿಯ ಭದ್ರತೆಯನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ನೆತನ್ಯಾಹು ಹೇಳಿಕೆ ನೀಡಿದ್ದಾರೆ. ಇದಕ್ಕೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದ್ದು, ಎಚ್ಚರಿಕೆಯ ಮಾತನ್ನಾಡಿದೆ.

    ಗಾಜಾವನ್ನು ಇಸ್ರೇಲ್‌ ಆಕ್ರಮಿಸಿಕೊಳ್ಳುವುದು ದೊಡ್ಡ ತಪ್ಪು ಎಂದು ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಭಿಪ್ರಾಯಪಟ್ಟಿದ್ದರು. ಇದೇ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಇಸ್ರೇಲಿ ರಾಯಭಾರಿ ಮೈಕೆಲ್ ಹೆರ್ಜೋಗ್, ಇಸ್ರೇಲ್ ಸಂಘರ್ಷ ಕೊನೆಗೊಂಡ ನಂತರ ಗಾಜಾವನ್ನು ವಶಪಡಿಸಿಕೊಳ್ಳಲು ಉದ್ದೇಶಿಸುವುದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣ ಕುರಿತು ವಿಲಕ್ಷಣ ಹೇಳಿಕೆ – ನಿತೀಶ್‌ ಕುಮಾರ್‌ ಅಸಭ್ಯ ನಾಯಕ ಎಂದ BJP

    US ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಕಳೆದ ವಾರ, ಪ್ಯಾಲೆಸ್ತೀನಿಯರು ಗಾಜಾವನ್ನು ಮತ್ತೆ ಪ್ರವೇಶಿಸಲು ಅನುವು ಮಾಡಿಕೊಡಬೇಕು. ಅವರಿಗೆ ಮಾನವೀಯ ನೆರವು ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಈ ಹೇಳಿಕೆಯನ್ನು ನೆತನ್ಯಾಹು ಖಂಡಿಸಿದ್ದಾರೆ. ಯುದ್ಧವು ಮುಂದುವರಿದಂತೆ ಯುಎಸ್ ಮತ್ತು ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ.

  • 90 ಸಾವಿರ ಪ್ಯಾಲೆಸ್ತೇನಿಯನ್ನರ ಬದಲು ಭಾರತೀಯರ ನೇಮಕಕ್ಕೆ ಮುಂದಾದ ಇಸ್ರೇಲ್‌

    90 ಸಾವಿರ ಪ್ಯಾಲೆಸ್ತೇನಿಯನ್ನರ ಬದಲು ಭಾರತೀಯರ ನೇಮಕಕ್ಕೆ ಮುಂದಾದ ಇಸ್ರೇಲ್‌

    ಟೆಲ್‌ ಅವೀವ್‌: ಪ್ಯಾಲೆಸ್ತೇನ್‌ (Palestine) ಕಾರ್ಮಿಕರ ಬದಲು ಭಾರತದ (India) ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್‌ (Isreal) ಈಗ ಮುಂದಾಗಿದೆ.

    ಹೌದು. ಹಮಾಸ್‌ ಜೊತೆಗಿನ ಯುದ್ಧದ ನಂತರ 90 ಸಾವಿರ ಪ್ಯಾಲೆಸ್ತೇನ್‌ ಕಾರ್ಮಿಕರ ಕೆಲಸದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈಗ ಪ್ಯಾಲೆಸ್ತೇನ್‌ ಪ್ರಜೆಗಳ ಬದಲಿಗೆ 1 ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅನುಮತಿ ನೀಡುವಂತೆ ಇಸ್ರೇಲಿ ನಿರ್ಮಾಣ (Construction) ಉದ್ಯಮವು ಸರ್ಕಾರವನ್ನು ಕೇಳಿದೆ ಎಂದು ವರದಿಯಾಗಿದೆ.

    ಇದೀಗ ನಾವು ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಬೇಡಿಕೆಗೆ ಅನುಮತಿ ನೀಡಲು ಇಸ್ರೇಲ್ ಸರ್ಕಾರದ ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ. ಇಡೀ ವಲಯವನ್ನು ನಡೆಸಲು ಮತ್ತು ಅದನ್ನು ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯವಾಗುವಂತೆ ಭಾರತದಿಂದ 50 ಸಾವಿರದಿಂದ 1 ಲಕ್ಷ ಕಾರ್ಮಿಕರನ್ನು ತೊಡಗಿಸಿಕೊಳ್ಳಲು ನಾವು ಆಶಿಸುತ್ತೇವೆ ಎಂದು ವೆಸ್ಟ್ ಬ್ಯಾಂಕ್‌ನ ವಾಯ್ಸ್ ಆಫ್ ಅಮೇರಿಕಾ ವರದಿಯು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಹೈಮ್ ಫೀಗ್ಲಿನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದನ್ನೂ ಓದಿ: ಗಾಜಾ ನಗರವನ್ನೇ ವಿಭಜಿಸಿದ ಇಸ್ರೇಲ್‌ – 2 ನಗರಗಳ ಮಧ್ಯೆ ಸಂಪರ್ಕ ಕಡಿತ

    ವರದಿಯ ಪ್ರಕಾರ, ಇಸ್ರೇಲಿ ನಿರ್ಮಾಣ ಉದ್ಯಮದಲ್ಲಿ ಉದ್ಯೋಗಿಯಾಗಿರುವ ಕಾರ್ಮಿಕರ ಪೈಕಿ ಪ್ಯಾಲೆಸ್ತೇನಿಯನ್ನರು ಸರಿಸುಮಾರು 25 ಪ್ರತಿಶತವನ್ನು ಹೊಂದಿದ್ದಾರೆ. ನಾವು ಈಗ ಯುದ್ಧದಲ್ಲಿದ್ದೇವೆ. ನಮ್ಮ ಮಾನವ ಸಂಪನ್ಮೂಲದ ಸುಮಾರು 25 ಪ್ರತಿಶತದಷ್ಟು ಇರುವ ಪ್ಯಾಲೆಸ್ತೇನ್‌ ಕೆಲಸಗಾರರು ಬರುತ್ತಿಲ್ಲ. ಇವರಿಗೆ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಅನುಮತಿ ಇಲ್ಲ ಎಂದು ಫೀಗ್ಲಿನ್ ಹೇಳಿದ್ದಾರೆ.

    ಮೇ ತಿಂಗಳಲ್ಲಿ ಇಸ್ರೇಲ್ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಸ್ರೇಲ್‌ 42 ಸಾವಿರ ಭಾರತೀಯರಿಗೆ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತದೆ. ನಿರ್ಮಾಣ ಮತ್ತು ನರ್ಸಿಂಗ್ ಕ್ಷೇತ್ರಗಳಲ್ಲಿ 42 ಸಾವಿರ ಭಾರತೀಯ ಕಾರ್ಮಿಕರಿಗೆ ಉದ್ಯೋಗಕ್ಕೆ  ಅನುಮತಿ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

    ತಮ್ಮ ದೇಶದ ಮೇಲಿನ ದಾಳಿ ದೇಶದಲ್ಲಿ ಉದ್ಯೋಗದಲ್ಲಿದ್ದ ಪ್ಯಾಲೆಸ್ತೀನ್‌ ಕಾರ್ಮಿಕರು ಕಾರಣ. ಅವರು ನಮ್ಮ ದೇಶದ ಬಗ್ಗೆ ಹಮಾಸ್‌ ಉಗ್ರರಿಗೆ ಮಾಹಿತಿ ನೀಡಿದ್ದರು ಎಂಬ ಕಾರಣ ನೀಡಿ ಇಸ್ರೇಲ್‌ ಕಳೆದ ವಾರ ಗಾಜಾಗೆ ಗಡಿಪಾರು ಮಾಡಿದೆ.

    ಪ್ಯಾಲೆಸ್ತೇನ್‌ ಜೊತೆಗಿನ ಸಂಬಂಧ ಸುಧಾರಣೆಯಾಗುತ್ತಿದ್ದಂತೆ ಇಸ್ರೇಲ್‌ ಪ್ಯಾಲೆಸ್ತೇನ್‌ ಪ್ರಜೆಗಳಿಗೆ  ಮಾನವೀಯ ದೃಷ್ಟಿಯಿಂದ ಕೆಲ ವರ್ಷಗಳಿಂದ ದೇಶದಲ್ಲಿ ಉದ್ಯೋಗ ನೀಡಿತ್ತು. ಉದ್ಯೋಗ ಪಡೆದ ಪ್ರಜೆಗಳು ಹಮಾಸ್‌ ಉಗ್ರರ ಜೊತೆ ಕೈ ಜೋಡಿಸಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅವರನ್ನು ಇಸ್ರೇಲ್‌ ಗಡಿಪಾರು ಮಾಡಿದೆ. ಮೊಬೈಲಿನಲ್ಲೇ ಲೇಟೆಸ್ಟ್‌ ಸುದ್ದಿ ಓದಲು ಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲಿಗೆ ಸೇರ್ಪಡೆಯಾಗಿಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲ್‌

    ಇಸ್ರೇಲ್‌ನ ಬೇಡಿಕೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.