Tag: ಇಸ್ರೇಲ್ ಕಂಪನಿ

  • ಬಿಯರ್ ಬಾಟಲಿ ಮೇಲೆ ಗಾಂಧೀಜಿ- ತಪ್ಪಿಗೆ ಕ್ಷಮೆಯಾಚಿಸಿದ ಇಸ್ರೇಲ್ ಕಂಪನಿ

    ಬಿಯರ್ ಬಾಟಲಿ ಮೇಲೆ ಗಾಂಧೀಜಿ- ತಪ್ಪಿಗೆ ಕ್ಷಮೆಯಾಚಿಸಿದ ಇಸ್ರೇಲ್ ಕಂಪನಿ

    ನವದೆಹಲಿ: ಇಸ್ರೇಲ್ ಮೂಲದ ಬಿಯರ್ ತಯಾರಿಕೆ ಕಂಪನಿಯೊಂದು ತನ್ನ ಬಾಟಲಿಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹಾಕಿ ವಿವಾದಕ್ಕೆ ಸಿಲುಕಿತ್ತು. ಆದರೆ ಈಗ ತನ್ನ ತಪ್ಪಿಗೆ ಭಾರತೀಯರಲ್ಲಿ ಕಂಪನಿ ಕ್ಷಮೆಯಾಚಿಸಿದೆ.

    ಇಸ್ರೇಲ್‍ನ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೇ 8 ಹಾಗೂ 9ರಂದು ಆಚರಿಸಲಾಗಿತ್ತು. ಈ ಸಂಭ್ರಮಾಚರಣೆಗಾಗಿ ವಿಶೇಷ ಚಿತ್ರಗಳಿರುವ ಸ್ಟಿಕ್ಕರ್ ತಯಾರಿಸಿ ಬಿಯರ್ ಬಾಟಲಿ ಮೇಲೆ ಅಂಟಿಸಲಾಗಿತ್ತು. ಇಸ್ರೇಲ್‍ನ ಮಾಲ್ಕಾ ಬಿಯರ್ ಕಂಪನಿ ತಮ್ಮಲ್ಲಿ ತಯಾರಾದ ಬಿಯರ್ ಬಾಟಲಿಗಳ ಮೇಲೆ ವಿಧವಿಧವಾದ ಸ್ಟಿಕ್ಕರ್ ಅಂಟಿಸಿತ್ತು. ಅದರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಹೋಲುವ ಕಾರ್ಟೂನ್ ಚಿತ್ರ ಕೂಡ ಇತ್ತು.

    ಗಾಂಧೀಜಿ ಚಿತ್ರವಿರುವ ಬಿಯರ್ ಬಾಟಲಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಗಾಂಧೀಜಿಗೆ ಇಸ್ರೇಲ್ ಅವಮಾನ ಮಾಡಿದೆ ಎಂದು ರೊಚ್ಚಿಗೆದ್ದ ಭಾರತೀಯರು ಮಾಲ್ಕಾ ಬಿಯರ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಗ್ಗೆ ರಾಜ್ಯ ಸಭೆಯಲ್ಲೂ ಕೂಡ ಮಂಗಳವಾರ ಚರ್ಚೆ ನಡೆದಿತ್ತು. ಈ ವೇಳೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡ ವಿರೋಧ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

    ಭಾರತದಲ್ಲಿ ಅಸಮಾಧಾನ ಭುಗಿಲೆದ್ದ ಹಿನ್ನೆಲೆ ಎಚ್ಚೆತ್ತುಕೊಂಡ ಕಂಪನಿ ಬ್ರಾಂಡ್ ಮ್ಯಾನೇಜರ್ ಭಾರತೀಯರಲ್ಲಿ ಹಾಗೂ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿದ್ದಾರೆ. ಗಾಂಧೀಜಿ ಅವರ ಚಿತ್ರವನ್ನು ಬಿಯರ್ ಬಾಟಲಿ ಮೇಲೆ ಹಾಕಿದ್ದು ತಪ್ಪಾಯಿತು. ಇದರಿಂದ ಭಾರತೀಯರ ಭಾವನೆಗಳಿಗೆ ದಕ್ಕೆ ಉಂಟಾಗಿದೆ. ಮಹಾತ್ಮ ಗಾಂಧೀಜಿ ಅವರಿಗೆ ಜಾಗತಿಕ ಮಟ್ಟದಲ್ಲಿ ಗೌರವಿಸಲಾಗುತ್ತದೆ. ನಾವು ನಮ್ಮ ಕಂಪನಿ ಬಿಯರ್ ಬಾಟಲಿಗಳ ಮೇಲೆ ಇರುವ ಗಾಂಧೀಜಿ ಅವರ ಚಿತ್ರವನ್ನು ತೆಗೆಯುತ್ತೇವೆ ಕ್ಷಮಿಸಿ ಎಂದಿದ್ದಾರೆ.

    ಅಚಾತುರ್ಯದಿಂದ ಬಾಟಲಿಗಳ ಮೇಲೆ ಅವರ ಚಿತ್ರ ಮುದ್ರಿತಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಹಿನ್ನೆಲೆ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲು ಬಿಯರ್ ಬಾಟಲಿ ಮೇಲೆ ಅವರ ಚಿತ್ರ ಬಳಸಲಾಯಿತು. ಗಾಂಧೀಜಿ ಮಾತ್ರವಲ್ಲ ಬಾಟಲಿಯ ಮೇಲೆ ಇಸ್ರೇಲ್‍ನ ಮೂವರು ಮಾಜಿ ಪ್ರಧಾನಿಗಳ ಜತೆ ಚಿತ್ರವನ್ನೂ ಗೌರವ ಸಲ್ಲಿಸಲು ಬಳಸಲಾಗಿತ್ತು ಎಂದು ತಿಳಿಸಿದ್ದಾರೆ.

    ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವಿರೋಧ ವ್ಯಕ್ತವಾದ ಬಳಿಕ ನಾವು ಗಾಂಧೀಜಿ ಚಿತ್ರ ಮುದ್ರಿತ ಬಿಯರ್ ಬಾಟಲಿಗಳ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಅಲ್ಲದೆ ಇದು ಲಿಮಿಟೆಡ್ ಎಡಿಷನ್ ಆಗಿದೆ. ಜೊತೆಗೆ ನಾವು ಮಾರುಕಟ್ಟೆಯಲ್ಲಿ ಈಗಾಗಲೇ ಹಂಚಿಕೆಯಾಗಿರುವ ಬಾಟಲಿಗಳ ಮಾರಟಕ್ಕೆ ತಡೆಯೊಡ್ಡಲು ಪ್ರಯತ್ನಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ.