Tag: ಇಲಿಜ್ವರ

  • ಉಡುಪಿಯಲ್ಲಿ 85 ಮಂದಿಗೆ ಇಲಿ ಜ್ವರ – ಏನಿದರ ಲಕ್ಷಣ?

    ಉಡುಪಿಯಲ್ಲಿ 85 ಮಂದಿಗೆ ಇಲಿ ಜ್ವರ – ಏನಿದರ ಲಕ್ಷಣ?

    ಉಡುಪಿ: ದೇಶಕ್ಕೂ ಕಾಲಿಟ್ಟು ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಜ್ವರದ ಭೀತಿ ಮಾಸುವ ಮುನ್ನವೇ ಉಡುಪಿ ಜಿಲ್ಲೆಯಲ್ಲಿ ಅಪರೂಪದ ಇಲಿ ಜ್ವರ ಪತ್ತೆಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

    ಜಿಲ್ಲೆಯ 85 ಮಂದಿಯಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲಿ ಜ್ವರ ಕಾಣಿಸಿಕೊಂಡಿದ್ದು, ಇದು ಇಲಿಗಳ ಮಲಮೂತ್ರದಿಂದ ಹರಡುವ ಸೋಂಕಾಗಿದೆ. ಮಲೆನಾಡಿನ ತಪ್ಪಲಿನಲ್ಲಿ ಹೆಚ್ಚು ಜನಕ್ಕೆ ಇಲಿಜ್ವರ ಕಾಣಿಸಿಕೊಂಡಿದೆ. ಕುಂದಾಪುರ 40, ಉಡುಪಿ 32, ಕಾರ್ಕಳ 13 ಪ್ರಕರಣ ವರದಿಯಾಗಿದೆ. ಮಳೆಗಾಲದಲ್ಲಿ ಈ ಜ್ವರ ಕಾಣಿಸಿಕೊಳ್ಳಲಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏಷ್ಯಾದಲ್ಲಿ ಭಾರತ ಹೊರತು ಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    ಏನಿದು ಇಲಿ ಜ್ವರ?
    ವೈಜ್ಞಾನಿಕವಾಗಿ ಲೆಪ್ಟೊಸ್ಪೈರೋಸಿಸ್ ಎಂದು ಕರೆಸಿಕೊಳ್ಳುವ ಈ ಇಲಿ ಜ್ವರ ಬರುವುದು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯ ರೋಗಾಣುಗಳಿಂದ. ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳಲ್ಲಿ ಇದೂ ಒಂದು. ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿ ಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ. ಇದನ್ನೂ ಓದಿ: ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು

    ರೋಗ ಹೇಗೆ ಹರಡುತ್ತದೆ?
    ಹೆಚ್ಚಾಗಿ ಇಲಿ, ಹೆಗ್ಗಣಗಳೇ ರೋಗಾಣುಗಳ ವಾಹಕಗಳು. ಈ ರೋಗ ಇಲಿಗಳನ್ನು ಬಾಧಿಸದಿದ್ದರೂ ಇವು ತಮ್ಮ ಜೀವನ ಪರ್ಯಂತ ಮೂತ್ರದಲ್ಲಿ ರೋಗಾಣುಗಳನ್ನು ವಿಸರ್ಜಿಸುತ್ತಿರುತ್ತವೆ. ಇಂತಹ ಇಲಿಗಳ ಮೂತ್ರದ ಸಂಪರ್ಕಕ್ಕೆ ಬರುವ ಮನುಷ್ಯ, ಪ್ರಾಣಿಗಳಿಗೆ ಸೋಂಕು ತಗಲುತ್ತದೆ. ಹಾಗೆಯೇ ರೋಗಪೀಡಿತ ಪ್ರಾಣಿಗಳ ಮೂತ್ರದ ಮೂಲಕವೂ ಈ ಕಾಯಿಲೆ ಹರಡುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಅಂಟುವುದಿಲ್ಲ.

    ಮಣ್ಣಿಗೆ ಸೇರಿದ ರೋಗಾಣುಗಳು ಸುಮಾರು ಆರು ಗಂಟೆವರೆಗೆ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು. ಹಾಗಾಗಿ ಮಳೆಗಾಲದಲ್ಲಿ, ನೆರೆ ಬಂದಾಗ ಈ ರೋಗದ ಹಾವಳಿ ಜಾಸ್ತಿ. ಪಾದದ ಚರ್ಮದಲ್ಲಿನ ಬಿರುಕುಗಳು, ಒಡೆದ ಹಿಮ್ಮಡಿ, ಗಾಯಗಳ ಮೂಲಕ ರೋಗಾಣುಗಳು ದೇಹ ಪ್ರವೇಶಿಸಬಹುದು. ಇಲಿಮೂತ್ರದಿಂದ ಕಲುಷಿತ ನೀರು, ಆಹಾರದ ಮೂಲಕವೂ ದೇಹ ಸೇರುವ ಕ್ರಿಮಿಗಳು ಬಾಯಿ, ಗಂಟಲು, ಅನ್ನನಾಳದ ಮೂಲಕ ಒಳ ಪ್ರವೇಶಿಸುತ್ತವೆ. ಕಣ್ಣು, ಕಿವಿಯ ಮೂಲಕವೂ ರೋಗಾಣುಗಳು ಶರೀರ ಸೇರಬಹುದು. ಸಾಮಾನ್ಯವಾಗಿ ಸೋಂಕು ತಗುಲಿದ ಎರಡು ದಿನಗಳಿಂದ ಎರಡು ಮೂರು ವಾರಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇಲಿಜ್ವರ – 39 ಪ್ರಕರಣಗಳು ಪತ್ತೆ

    ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇಲಿಜ್ವರ – 39 ಪ್ರಕರಣಗಳು ಪತ್ತೆ

    – ವೈದ್ಯರ ಸಲಹೆಯೇನು..?

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ. ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವಾಗಲೇ ಸದಿಲ್ಲದೆ ಇಲಿ ಜ್ವರದ ಆತಂಕ ಜಿಲ್ಲೆಯಲ್ಲಿ ಎದುರಾಗಿದೆ.

    ಹೌದು. ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 39 ಇಲಿ ಜ್ವರದ ಪ್ರಕರಣಗಳು ಪತ್ತೆಯಾಗಿದೆ. ಮಹಿಳೆಯೊಬ್ಬರು ಇಲಿಜ್ವರದಿಂದ ಮೃತಪಟ್ಟಿದ್ದರು. ಜಿಲ್ಲಾಡಳಿತ ಆರೋಗ್ಯ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪದಿಂದ ಹಿಡಿದು ಕೊರೊನಾ ವೈರಸ್‍ವರೆಗೂ ಜಿಲ್ಲೆಯ ಜನರು ಒಂದಲ್ಲ ಒಂದು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈ ನಡುವೆ ಇದೀಗ ಕೊಡಗಿನಲ್ಲಿ ಇಲಿ ಜ್ವರದ ಸಮಸ್ಯೆ ಹೆಚ್ಚು ಕಾಡುತ್ತಿದೆ. ಅದರಲ್ಲೂ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲೇ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಆತಂಕದ ವಿಷಯವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ

    ಮಡಿಕೇರಿಯಲ್ಲಿ 21, ವಿರಾಜ ಪೇಟೆಯಲ್ಲಿ 9, ಸೋಮವಾರ ಪೇಟೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಮಡಿಕೇರಿ ತಾಲೂಕಿನ ಕರ್ಣಂಗೇರಿಯ ಚಂದ್ರಿಕಾ ಎನ್ನುವ 40 ವರ್ಷದ ಮಹಿಳೆ ಇಲಿಜ್ವರಕ್ಕೆ ಪ್ರಾಣ ಬಿಟ್ಟಿದ್ದಾರೆ. ಇದರಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಇಲಿಜ್ವರಕ್ಕೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡದೆ ಇರುವುದರಿಂದ ರೋಗಿಗಳು ಮಂಗಳೂರು, ಸುಳ್ಯ ಮೈಸೂರು ಜಿಲ್ಲೆಯ ಅಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಈ ಬಗ್ಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವನ್ನು ಕೇಳಿದ್ರೆ, ಇಲಿಜ್ವರದ ಮಾಹಿತಿ ಇದುವರೆಗೂ ಇಲ್ಲ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮಡಿಕೇರಿಯಲ್ಲೇ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಈಗಾಗಲೇ 39 ಇಲಿಜ್ವರದ ಪ್ರಕರಣಗಳು ಪತ್ತೆಯಾಗಿದೆ. ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯ ಆರಂಭ ಮಾಡಿದ್ದಾರೆ.

    ಇಲಿ ಜ್ವರ ಹೇಗೆ ಬರುತ್ತೆ?

    ಅಷ್ಟಕ್ಕೂ ಇಲಿನಜ್ವರ ಬರೋದಾದ್ರು ಹೇಗೆ ಎಂದು ನೋಡಿದ್ರೆ ಮಳೆ ಸುರಿಯುತ್ತಿರುವುದರಿಂದ ಇಲಿಗಳು ಬಿಲದೊಳೊಗಿಂದ ಹೊರಬಂದು ಓಡಾಡುತ್ತವೆ. ಈ ವೇಳೆ ಅವುಗಳು ಭೂಮಿ ಮೇಲೆ ಮಾಡಿದ ಮೂತ್ರ ವಿಸರ್ಜನೆಯನ್ನು ತುಳಿದಲ್ಲಿ ಅದರಲ್ಲಿರುವ ಬ್ಯಾಕ್ಟೀರಿಯಾಗಳಿಂದ ಈ ಇಲಿ ಜ್ವರ ಬರುತ್ತದೆ. ಇಲಿ ಮೂತ್ರ ನೀರಿನಲ್ಲಿ ಬೆರೆತು ಅಂತಹ ನೀರಿನ ಸೇವನೆ ಆದಾಗಲೂ ಜ್ವರ ಬರಬಹುದು. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದಲ್ಲಿ ದೇಹದಲ್ಲಿ ಬಹು ಅಂಗಾಗ ವೈಫಲ್ಯಗೊಂಡು ಮಾನವ ಸಾವನ್ನಪ್ಪುತ್ತಾನೆ. ಹೀಗಾಗಿ ಜನರು ಬರಿಗಾಲಿನಲ್ಲಿ ನಡೆದಾಡಬಾರದು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಡ್ರೋನ್ – ಕ್ರಿಮಿನಾಶಕ್ಕೆ ಡ್ರೋನ್ ಬಳಕೆ

    ಕೊಡಗು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣಗಳು ಪತ್ತೆಯಾಗಿರುವ ಏರಿಯಾಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಏನೇ ಆಗಲಿ ಕೋವಿಡ್ ಕಡಿಮೆ ಆಗಿದೆ ಅನ್ನೋ ಹೊತ್ತಿನಲ್ಲಿ ಇಲಿಜ್ವರ ಪ್ರಕರಣಗಳು ಕೊಡಗಿನಲ್ಲಿ ಜಾಸ್ತಿ ಆಗುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಈ ಹಿನ್ನೆಲೆ ಜಿಲ್ಲೆಯ ಜನರು ಜಾಗೃತಿಯಿಂದ ಇರಬೇಕು.