Tag: ಇರುಳಿಗರು

  • ಗ್ರಾಮ ಸೇವೆಯಲ್ಲಿ ಇರುಳಿಗರಿಗೆ ಕ್ಷೌರ- ಶುಚಿತ್ವದ ಪಾಠ, ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ

    ಗ್ರಾಮ ಸೇವೆಯಲ್ಲಿ ಇರುಳಿಗರಿಗೆ ಕ್ಷೌರ- ಶುಚಿತ್ವದ ಪಾಠ, ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ

    ರಾಮನಗರ: ರಾಜ್ಯದಲ್ಲೇ ಪ್ರಥಮ ಬಾರಿಗೆ ರಾಮನಗರ ಜಿಲ್ಲಾ ವಾರ್ತಾ ಇಲಾಖೆ ಅಳವಡಿಸಿಕೊಂಡ ‘ಗ್ರಾಮ ಸೇವೆ’ ಕಾರ್ಯಕ್ರಮದ ಅಡಿ ಇರುಳಿಗರ ಕ್ಷೌರ ಮಾಡಿಸಿ, ಶುಭ್ರವಾಗಿಸುವ ಮೂಲಕ ಶುಚಿತ್ವದ ಪಾಠ, ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಮಾಡಲಾಯಿತು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮದಲ್ಲಿ ರಾಮದೇವರ ಬೆಟ್ಟದ ಇರುಳಿಗರ ಕಾಲೊನಿನಲ್ಲಿ ಶಿಬಿರ ನಡೆಸಲಾಯಿತು. ಈ ವೇಳೆ ಹಲವು ತಿಂಗಳಿಂದ ತಲೆ ಕೂದಲು ಬೆಳೆಸಿಕೊಂಡು ಶುಚಿತ್ವವನ್ನು ಕಾಪಾಡದ ಹತ್ತಾರು ಮಕ್ಕಳು, ಕಾಲೊನಿಯ ನಿವಾಸಿಗಳಿಗೆ ಕ್ಷೌರ ಮಾಡಿಸಲಾಯಿತು. ಜೊತೆಗೆ ಸ್ನಾನ ಮಾಡಿಸಿ ಶುಭ್ರವಾಗಿರುವಂತೆ ಜಾಗೃತಿ ಮೂಡಿಸಲಾಯಿತು.

    ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಕಾಲೊನಿಯ ಎಲ್ಲ ನಿವಾಸಿಗಳ ತಪಾಸಣೆ ಮಾಡಿ ಚಿಕಿತ್ಸೆ ಸಹ ನೀಡಲಾಯಿತು. ರಾತ್ರಿಯಿಡೀ ಗ್ರಾಮದಲ್ಲೇ ಉಳಿದ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್.ಶಂಕರಪ್ಪ ನೇತೃತ್ವದ ತಂಡ ಸ್ಥಳೀಯರೊಂದಿಗೆ ಬೆರೆತು ಅವರಲ್ಲಿ ಮಾಹಿತಿ ಹಂಚಿಕೊಳ್ಳುವ ಜೊತೆಗೆ ಜಾಗೃತಿ ಮೂಡಿಸಿದರು. ಇದರೊಂದಿಗೆ ಶ್ರೀನಿವಾಸ್ ಹಾಗೂ ಮುತ್ತು ತಂಡದವರಿಂದ ಬೀದಿ ನಾಟಕ, ಗಾಯನ ಕಾರ್ಯಕ್ರಮ ಆಯೋಜಿಸಿ ಸರ್ಕಾರದ ಕಾರ್ಯಕ್ರಮಗಳ ಅರಿವು ಹಾಗೂ ಜಾಗೃತಿ ಮೂಡಿಸಲಾಯಿತು.

    ಜಿಲ್ಲೆಯಲ್ಲಿನ ಇರುಳಿಗರ ಕಾಲೊನಿಗಳ ಮೂಲಸೌಕರ್ಯ ಒದಗಿಸಲು ಸಂಬಂಧಿಸಿದ ಇಲಾಖೆಗಳಿಗೆ ವಸ್ತುಸ್ಥಿತಿಯ ವರದಿ ನೀಡುವುದು. ಪರಿಶಿಷ್ಟ ಜಾತಿ, ಪಂಗಡಗಳ ಕಾಯ್ದೆ ಅಡಿ ಹಲವು ಸವಲತ್ತುಗಳಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರದಿಂದ ವಿವಿಧ ಸಲವತ್ತುಗಳನ್ನು ನೀಡಲಾಗುತ್ತಿದೆ ಎಂದು ವಾರ್ತಾ ಇಲಾಖೆ ಅಧಿಕಾರಿ ಶಂಕರಪ್ಪ ತಿಳಿಸಿದರು.

    ಇತ್ತೀಚಿಗೆ ಇರುಳಿಗರಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ. 12 ವರ್ಷದ ಆಸುಪಾಸಿನ ಮಕ್ಕಳಿಗೆ ಮದುವೆ ಮಾಡುವುದರಿಂದ ಹುಟ್ಟುವ ಮಕ್ಕಳು, ಅಂಗವಿಕಲತೆಗೆ ಒಳಗಾಗುತ್ತವೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದರು.

    ಇದೇ ವೇಳೆ ಶೈಕ್ಷಣಿಕ ಜಾಗೃತಿ ಮೂಡಿಸುವುದರ ಮೂಲಕ ಕಾರ್ಯಕ್ರಮದಲ್ಲಿ ಶಾಲೆಗೆ ತೆರಳುತ್ತಿರುವ ಇರುಳಿಗ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಲಾಯಿತು.