Tag: ಇರಿತ

  • ಪತ್ನಿ, ಮಗಳಿಗೆ ಚಾಕುವಿನಿಂದ ಇರಿದು ವ್ಯಕ್ತಿ ಆತ್ಮಹತ್ಯೆ

    ಪತ್ನಿ, ಮಗಳಿಗೆ ಚಾಕುವಿನಿಂದ ಇರಿದು ವ್ಯಕ್ತಿ ಆತ್ಮಹತ್ಯೆ

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗಳಿಗೆ ಚಾಕುವಿನಿಂದ ಇರಿದು ಬಳಿಕ ತಾನೂ ಇರಿದುಕೊಂಡಿರುವ ಘಟನೆ ದೆಹಲಿಯ ಸಂಗಮ್ ವಿಹಾರ್‍ನಲ್ಲಿ ಶುಕ್ರವಾರದಂದು ನಡೆದಿದೆ.

    ಜಿತೇಂದರ್ ಹಣಕಾಸಿನ ಸಮಸ್ಯೆಯಿಂದಾಗಿ ಈ ಕೃತ್ಯವೆಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪತ್ನಿ ಹಾಗೂ ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಬಳಿಕ ತಾನು ಇರಿದುಕೊಂಡಿದ್ದಾನೆ. ತೀವ್ರವಾದ ಗಾಯಗಳಿಂದ ಜಿತೇಂದರ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ.

    ಅದೇ ಆಸ್ಪತ್ರೆಯಲ್ಲಿ ಜಿತೇಂದರ್‍ನ ಪತ್ನಿ ಹಾಗೂ ಮಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸುಧಾರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     

  • 10ಕ್ಕೂ ಹೆಚ್ಚು ಬೈಕ್‍ಗಳಲ್ಲಿ ಬಂದು ಯುವಕನಿಗೆ 50 ಬಾರಿ ಇರಿದು, ರಾಡ್‍ನಿಂದ ಹೊಡೆದ್ರು

    10ಕ್ಕೂ ಹೆಚ್ಚು ಬೈಕ್‍ಗಳಲ್ಲಿ ಬಂದು ಯುವಕನಿಗೆ 50 ಬಾರಿ ಇರಿದು, ರಾಡ್‍ನಿಂದ ಹೊಡೆದ್ರು

    ನವದೆಹಲಿ: ಸುಮಾರು 20 ವರ್ಷ ಅಸಾಪಾಸಿನ ಯುವಕನಿಗೆ ಹಾಡಹಗಲೇ 50 ಬಾರಿ ಇರಿದು, ರಾಡ್‍ನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ದೆಹಲಿಯ ಖಾನ್‍ಪುರ್ ಪ್ರದೇಶದಲ್ಲಿ ನಡೆದಿದೆ.

    ಆಶಿಶ್ ಹಲ್ಲೆಗೊಳಗಾದ ಯುವಕ. ಗುರುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಆಶಿಶ್ ಜಿಮ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಬೈಕ್‍ಗಳಲ್ಲಿ ಬಂದ ಸುಮಾರು 20 ಯುವಕರು ದುಗ್ಗಲ್ ಕಾಲೋನಿಯ ಬೀದಿಯಲ್ಲಿ ಆಶಿಶ್ ಮೇಲೆ ದಾಳಿ ನಡೆಸಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪರಿಚತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ಆಶಿಶ್‍ನನ್ನು ಇಬ್ಬರು ವ್ಯಕ್ತಿಗಳು ತಡೆದಿದ್ದಾರೆ. ಕೆಲವೇ ಕ್ಷಣಗಳಲ್ಲಿ 10ಕ್ಕೂ ಹೆಚ್ಚು ಬೈಕ್‍ಗಳು ಒಂದರ ಹಿಂದೆ ಒಂದು ಬಂದಿದ್ದು, ಆಶಿಶ್‍ನನ್ನು ಸುತ್ತುವರೆದಿದ್ದಾರೆ. ನಂತರ ಆಶಿಶ್‍ಗೆ ಸುಮಾರು 50 ಬಾರಿ ಇರಿದಿದ್ದು, ರಾಡ್‍ಗಳಿಂದ ಹೊಡೆದಿದ್ದಾರೆ. ಈ ವೇಳೆ ನೆರೆಹೊರೆಯವರು ಇದನ್ನ ತಡೆಯಲು ಮುಂದಾಗಲಿಲ್ಲ. ಆಶಿಶ್ ರಸ್ತೆ ಮೇಲೆ ಬಿದ್ದಿದ್ದು, ದುಷ್ಕರ್ಮಿಗಳು ಬೈಕ್‍ಗಳಲ್ಲಿ ಚಾಕು ಹಾಗೂ ರಾಡ್‍ಗಳನ್ನ ಹಿಡಿದು ಪರಾರಿಯಾಗೋದನ್ನ ವಿಡಿಯೋದಲ್ಲಿ ಕಾಣಬಹುದು.

    ದಾಳಿ ಮಾಡಿದ ತಂಡ ಸ್ಥಳದಿಂದ ಕಾಲ್ಕಿತ್ತ ನಂತರ ಸ್ಥಳೀಯರು ಆಶಿಶ್‍ನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ಆಶಿಶ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕನಿಷ್ಟ 50 ಇರಿತದ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಘಟನೆ ಬಗ್ಗೆ ವಿಷಯ ತಿಳಿಸಿದ 1 ಗಂಟೆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

    ಆಶಿಶ್ ಮೇಲೆ ದಾಳಿ ನಡೆದಿದ್ದು ಯಾಕೆ ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ ಸ್ಥಳಿಯ ನಿವಾಸಿಗಳು ಹೇಳುವ ಪ್ರಕಾರ ಗುರುವಾರ ಬೆಳಗ್ಗೆ ನಡೆದ ಜಗಳದ ನಂತರ ಯುವಕರ ಗುಂಪು ಆಶಿಶ್ ಮೇಲೆ ದಾಳಿ ಮಾಡಿದೆ. ಬಾಲಕನೊಬ್ಬ ಹೋಳಿ ಪ್ರಯುಕ್ತ ನೀರಿನ ಬಲೂನ್‍ಗಳನ್ನ ಎಸೆದಿದ್ದಕ್ಕೆ ಯುವಕರು ಆತನಿಗೆ ಹೊಡೆಯುತ್ತಿದ್ದರು. ಈ ವೇಳೆ ಆಶಿಶ್ ಮಧ್ಯಪ್ರವೇಶಿಸಿ ಬಾಲಕನಿಗೆ ಹೊಡೆಯೋದನ್ನ ತಡೆದಿದ್ದ ಎಂದು ಹೇಳಲಾಗಿದೆ.

  • ಗಂಡನಿಂದ ಇರಿತಕ್ಕೊಳಗಾದ ಮಹಿಳೆ ನೋವಿನಿಂದ ನರಳುತ್ತಿದ್ರೆ ನೆರೆಹೊರೆಯವರು ವಿಡಿಯೋ ಮಾಡ್ತಿದ್ರು!

    ಗಂಡನಿಂದ ಇರಿತಕ್ಕೊಳಗಾದ ಮಹಿಳೆ ನೋವಿನಿಂದ ನರಳುತ್ತಿದ್ರೆ ನೆರೆಹೊರೆಯವರು ವಿಡಿಯೋ ಮಾಡ್ತಿದ್ರು!

     

    ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನ ಮರ ಕಡಿಯುವ ಸಾಧನದಿಂದ ಇರಿದಿದ್ದು, ಆಕೆ ನೋವಿನಿಂದ ನರಳುತ್ತಿದ್ದರೆ ಅಕ್ಕಪಕ್ಕದ ಮನೆಯವರು ಆಕೆಯ ರಕ್ಷಣೆಗೆ ಬಾರದೆ ವಿಡಿಯೋ ಮಾಡುತ್ತಿದ್ದ ಅಮಾನವೀಯ ಘಟನೆ ಹರಿಯಾಣಾದಲ್ಲಿ ನಡೆದಿದೆ.

    ಇಲ್ಲಿನ ಜಿಂದ್ ಜಿಲ್ಲೆಯಲ್ಲಿ ಜೂನ್ 30ರಂದು ಈ ಘಟನೆ ನಡೆದಿದೆ. ಮಹಿಳೆ ನೋವಿನಿಂದ ನರಳಾಡುತ್ತಿದ್ದರೆ ನೆರೆಹೊರೆಯವರು ವಿಡಿಯೋ ಮಾಡಿದ್ದಾರೆ. ಇರಿತಕ್ಕೊಳಗಾದ ಮಹಿಳೆಯನ್ನು ಇಲ್ಲಿನ ಬರೋಲಿ ಗ್ರಾಮದ ನಿವಾಸಿಯಾದ ಸಂಜು ಎಂದು ಗುರುತಿಸಲಾಗಿದೆ. ಸಂಜು ಅನೈತಿಕ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಆಕೆಯ ಗಂಡ ನರೇಶ್ ಮರ ಕಡಿಯುವ ಸಾಧನ(ಆರಿ)ಯಿಂದ ಹೊಟ್ಟೆ, ಭುಜ ಹಾಗೂ ಮಣಕಾಲಿಗೆ ಇರಿದಿದ್ದಾನೆ.

    ಅಂದು ನರೇಶ್ ಕುಡಿದು ಮನೆಗೆ ಬಂದಿದ್ದ. ಹೆಂಡತಿಯ ಕಣ್ಣಿಗೆ ಖಾರದ ಪುಡಿ ಎರಚಿ, ಮರ ಕಡಿಯುವ ಸಾಧನದಿಂದ ಪತ್ನಿ ಮೇಲೆ ದಾಳಿ ಮಾಡಿದ್ದಾನೆ. ಪತ್ನಿ ಸಂಜು ನೋವಿನಿಂದ ಕಿರುಚಾಡಿದಾಗ ನೆರೆಹೊರೆಯವರು ಮನೆಯ ಮುಂದೆ ಜಮಾಯಿಸಿದ್ದಾರೆ. ಈ ವೇಳೆ ನರೇಶ್, ಮತ್ತೊಂದು ಅವಕಾಶ ಸಿಕ್ಕರೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ .

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಸಬ್ ಇನ್ಸ್ ಪೆಕ್ಟರ್ ರಾಮ್ ಮೆಹರ್, ಓರ್ವ ಮಹಿಳೆಗೆ ಇರಿಯಲಾಗಿದೆ ಎಂದು ಕರೆ ಬಂತು. ನಾನು ಕೂಡಲೇ ನನ್ನ ಬೈಕ್‍ನಲ್ಲಿ ಗ್ರಾಮಕ್ಕೆ ತೆರಳಿದೆ. ಮಹಿಳೆ ನೋವಿನಿಂದ ನರಳುತ್ತಿರುವುದನ್ನು ನೋಡಿದೆ. ಈ ವೇಳೆ ನೆರೆಮನೆಯ ವ್ಯಕ್ತಿಯೊಬ್ಬ ವಿಡಿಯೋ ಮಾಡುತ್ತಿದ್ದ. ನಾನು ಆತನಿಗೆ ವಿಡಿಯೋ ಮಾಡುವುದನ್ನು ನಿಲ್ಲಿಸುವಂತೆ ಹೇಳಿದೆ ಎಂದಿದ್ದಾರೆ.

    ನಂತರ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೋನಿಪತ್‍ನ ಖಾನ್ಪುರ್ ಕಲನ್‍ನಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರಗೆ ದಾಖಲಿಸಲಾಗಿದೆ. ಸದ್ಯ ಆಕೆ ಚೇತರಿಸಿಕೊಂಡಿದ್ದು, ಡಿಸ್ಚಾರ್ಚ್ ಮಾಡಲಾಗಿದೆ ಎಂದು ವರದಿಯಾಗಿದೆ.

    ಆರೋಪಿ ಪತಿಯನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 323, 324 ಹಾಗೂ 506ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಅಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.