Tag: ಇಯರ್ ಫೋನ್

  • ಹಾಡು ಕೇಳುತ್ತಾ ಹಳಿ ದಾಟುವಾಗ ರೈಲು ಡಿಕ್ಕಿ- ಯುವಕ ಸಾವು

    ಹಾಡು ಕೇಳುತ್ತಾ ಹಳಿ ದಾಟುವಾಗ ರೈಲು ಡಿಕ್ಕಿ- ಯುವಕ ಸಾವು

    –  ಕೂದಲೆಳೆ ಅಂತರದಲ್ಲಿ ಪೋಷಕರು ಪಾರು

    ರಾಯಚೂರು: ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಕರ್ನೂಲ್ ಜಿಲ್ಲೆ ಕೊಸಗಿ ಮಂಡಲದ ಸಾತನೂರ್ ಗ್ರಾಮದ ಶರಣಬಸವ (18) ಮೃತ ಯುವಕ. ತಂದೆ-ತಾಯಿ ಮತ್ತು ಮಗ ಮೂವರು ಹಳಿ ದಾಟುವಾಗ ಈ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ತಂದೆ-ತಾಯಿ ಪಾರಾಗಿದ್ದಾರೆ.

    ಮೂವರು ಬೆಂಗಳೂರಿನಿಂದ ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದು ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದು, ಹಳಿ ದಾಟುತ್ತಿದ್ದಾಗ  ಈ ಘಟನೆ ನಡೆದಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ಶರಣಬಸವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ಮೃತ ಯುವಕ ಕಿವಿಗೆ ಇಯರ್ ಫೋನ್ ಬಳಸಿ ಹಾಡು ಕೇಳುತ್ತಿದ್ದನು. ಹೀಗಾಗಿ ರೈಲಿನ ಶಬ್ದ ಕೇಳದೆ ಹಳಿ ಮೇಲೆ ಹೋಗಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಅವನ ಹಿಂದೆಯೇ ಇದ್ದ ತಂದೆ ತಾಯಿ ಪಾರಾಗಿದ್ದಾರೆ. ಮಂತ್ರಾಲಯ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಇಯರ್ ಫೋನ್ ಹಾಕಿಕೊಂಡಿದ್ದರಿಂದ ರೈಲು ಡಿಕ್ಕಿ- ಯುವಕ ದುರ್ಮರಣ

    ಇಯರ್ ಫೋನ್ ಹಾಕಿಕೊಂಡಿದ್ದರಿಂದ ರೈಲು ಡಿಕ್ಕಿ- ಯುವಕ ದುರ್ಮರಣ

    ಕಾರವಾರ: ಇಯರ್ ಫೋನ್ ಹಾಕಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಾ ರೈಲು ಹಳಿಯ ಮೇಲೆ ಹೋಗುತ್ತಿದ್ದ ಪರಿಣಾಮ ರೈಲು ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಡೆದಿದೆ.

    ಬಾವಿಕೇರಿ ನಿವಾಸಿ ಗಣೇಶ್ ನಾಯ್ಕ (24) ಮೃತಪಟ್ಟ ಯುವಕ. ತಾಲೂಕಿನ ಅಮದಳ್ಳಿಯ ರೈಲು ಹಳಿಯಲ್ಲಿ ಈ ಘಟನೆ ನಡೆದಿದೆ. ಗಣೇಶ್ ಕಿವಿಗೆ ಇಯರ್ ಫೋನ್ ಹಾಕಿಕೊಂಡು ರೈಲ್ವೆ ಹಳಿಯ ಮೇಲೆ ಮಾತನಾಡುತ್ತಾ ಹೋಗುತ್ತಿದ್ದನು. ಇದೇ ವೇಳೆ ಆ ಮಾರ್ಗದಲ್ಲಿ ಮಡಗಾವ್ – ಮಂಗಳೂರು ಇಂಟರ್ ಸಿಟಿ ರೈಲು ಬರುತ್ತಿತ್ತು.

    ಗಣೇಶ್ ಕಿವಿಗೆ ಇಯರ್ ಫೋನ್ ಹಾಕಿದ್ದ ಪರಿಣಾಮ ರೈಲು ಬರುವ ಶಬ್ದ ಕೇಳಿಸಲಿಲ್ಲ. ಕೊನೆಗೆ ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೊನೆಗೆ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿಸಿದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದ ನಂತರ ಆತನ ಮೃತ ದೇಹದಲ್ಲಿ ಇಯರ್ ಫೋನ್ ಹಾಗೆಯೇ ಕಿವಿಯಲ್ಲಿ ಇರುವುದು ಕಂಡು ಬಂದಿದೆ.

    ಈ ಘಟನೆ ಸಂಬಂಧ ಕಾರವಾರ ಪೊಲೀಸ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಗಮನಿಸಿ, ರಾತ್ರಿ ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವ ಮೊದಲು ಈ ಸ್ಟೋರಿ ಓದಿ!

    ಗಮನಿಸಿ, ರಾತ್ರಿ ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವ ಮೊದಲು ಈ ಸ್ಟೋರಿ ಓದಿ!

    ಚೆನ್ನೈ: 46 ವರ್ಷದ ಮಹಿಳೆಯೊಬ್ಬರು ರಾತ್ರಿ ಮಲಗುವ ವೇಳೆ ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊಂಡು ನಿದ್ದೆಗೆ ಜಾರಿದ್ದು, ಪರಿಣಾಮ ಮಹಿಳೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕಾತನೂರ್ ನಲ್ಲಿ ನಡೆದಿದೆ.

    ಫಾತಿಮಾ(49) ಮೃತ ದುರ್ದೈವಿ. ಈಕೆಯ ಪತಿ ಅಬ್ದುಲ್ ಕಲಾಂ ಭಾನುವಾರ ಬೆಳಗ್ಗೆ ಪತ್ನಿಯನ್ನ ಎಬ್ಬಿಸಲು ಹೋಗಿದ್ದಾರೆ. ಆದರೆ ಫಾತಿಮಾ ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಅವರು ಮಿಸುಕಾಡಲಿಲ್ಲ. ಬಳಿಕ ಗಾಬರಿಗೊಂಡ ಪತಿ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಫಾತಿಮಾ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಕಾತನೂರ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಆಸ್ಪತ್ರೆಗೆ ಬಂದು ಪೊಲೀಸರು ಫಾತಿಮಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ರಾಯಪೆಟ್ಟಾ ಆಸ್ಪತ್ರೆಗೆ ರವಾನಿಸಿದ್ದರು.

    ವೈದ್ಯರು ಫಾತಿಮಾ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಬಳಿಕ ನಾವು ಈ ಘಟನೆ ಬಗ್ಗೆ ಐಪಿಸಿ ಸೆಕ್ಷನ್ 174 (ಅಸ್ವಾಭಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಫಾತಿಮಾ ಅವರು ಪ್ರತಿದಿನ ಮಲಗುವ ವೇಳೆ ಕಿವಿಗೆ ಇಯರ್‍ಫೋನ್ ಹಾಕಿಕೊಂಡು ಸಂಗೀತ ಕೇಳುತ್ತಾ ಮಲಗುವ ರೂಢಿ ಮಾಡಿಕೊಂಡಿದ್ದರು. ಅದೇ ರೀತಿ ಶನಿವಾರ ರಾತ್ರಿ ಕೂಡ ಇಯರ್ ಫೋನ್ ಹಾಕಿಕೊಂಡು ಮಲಗಿದ್ದಾರೆ. ಆಗ ಶಾರ್ಟ್ ಸರ್ಕ್ಯೂಟ್‍ನಿಂದ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಅಂತ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ದಯವಿಟ್ಟು ಗಮನಿಸಿ, ಸಣ್ಣ ಮಕ್ಕಳ ಕೈಗೆ ಸಿಗುವಂತೆ ಇಯರ್ ಫೋನ್ ಇಡಬೇಡಿ

    ದಯವಿಟ್ಟು ಗಮನಿಸಿ, ಸಣ್ಣ ಮಕ್ಕಳ ಕೈಗೆ ಸಿಗುವಂತೆ ಇಯರ್ ಫೋನ್ ಇಡಬೇಡಿ

    ಹೈದರಾಬಾದ್: ಹನ್ನೊಂದು ತಿಂಗಳ ಹೆಣ್ಣು ಶಿಶು ಆಕಸ್ಮಿಕವಾಗಿ ಇಯರ್ ಫೋನ್ ನುಂಗಿ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಪೂರ್ವ ಗೋದಾವರಿ ಜಿಲ್ಲೆಯ ಪರ್ಸಲಾಪುದಿ ಗ್ರಾಮದಲ್ಲಿ ಈ ಘಟನೆ ನಡೆದೆ. ಶಸ್ತ್ರ ಚಿಕಿತ್ಸೆಯ ಮೂಲಕ ಇಯರ್ ಫೋನನ್ನು ದೇಹದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

    ಆಗಿದ್ದು ಏನು?
    ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಇಯರ್ ಫೋನ್ ನುಂಗಿದ ಬಳಿಕ ಮಗು ಒಂದೇ ಸಮನೆ ಅಳುತ್ತಿದ್ದಳು. ಏನು ಮಾಡಬೇಕೆಂದು ತೋಚದ ಹೆತ್ತವರು ಮಗಳನ್ನು ಅಮಲಾಪುರಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಪ್ರಾಥಮಿಕ ಪರೀಕ್ಷೆಯ ವೇಳೆ ವೈದ್ಯರು ದೇಹದ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೂ ಮಗು ಆಳುತ್ತಿದ್ದ ಕಾರಣ ಎಕ್ಸ್-ರೇ ಮಾಡಿಸಿದ್ದಾರೆ. ಈ ವೇಳೆ ಮೊಬೈಲ್ ಇಯರ್ ಫೋನ್ ಇರುವುದು ಪತ್ತೆಯಾಗಿದೆ.

    ಕೂಡಲೇ ನಮ್ಮ ತಂಡ ಶಸ್ತ್ರಚಿಕಿತ್ಸೆ ನಡೆಸಿ ದೇಹದಿಂದ ಇಯರ್ ಫೋನ್ ಹೊರ ತೆಗೆದಿದ್ದೇವೆ. ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ಅಮಲಾಪುರಂ ಆಸ್ಪತ್ರೆಯ ವೈದ್ಯ ಚಕ್ರವರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!