Tag: ಇಮರತಿ ದೇವಿ

  • 27 ಸೆಕೆಂಡ್‍ನಲ್ಲಿ 17 ಪದ – ಸಚಿವೆಯ ಗಣರಾಜ್ಯೋತ್ಸವದ ಭಾಷಣ ವೈರಲ್

    27 ಸೆಕೆಂಡ್‍ನಲ್ಲಿ 17 ಪದ – ಸಚಿವೆಯ ಗಣರಾಜ್ಯೋತ್ಸವದ ಭಾಷಣ ವೈರಲ್

    ಭೋಪಾಲ್: ಮಧ್ಯಪ್ರದೇಶದ ನೂತನ ಸರ್ಕಾರದ ಸಚಿವೆಯೊಬ್ಬರು ಕೇವಲ 27 ಸೆಕೆಂಡ್‍ನಲ್ಲಿ 17 ಪದ ಬಳಸಿ ತಮ್ಮ ಗಣರಾಜ್ಯೋತ್ಸವದ ಭಾಷಣವನ್ನು ಮುಗಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ವೈರಲ್ ಆಗಿದ್ದು ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.

    ಕಮಲ್‍ನಾಥ್ ಸರ್ಕಾರದ ಸಚಿವೆ ಇಮರತಿ ದೇವಿ ಅವರು ಗ್ವಾಲಿಯರ್ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಬೇಕಿತ್ತು. ಭಾಷಣದ ಪ್ರತಿ ಮೊದಲೇ ಇಮರತಿ ಅವರ ಕೈ ತಲುಪಿತ್ತು. ಬರೆದುಕೊಟ್ಟ ಭಾಷಣವನ್ನು ತಪ್ಪು ತಪ್ಪಾಗಿ ಓದುವ ಮೂಲಕ ಸಾರ್ವಜನಿಕವಾಗಿ ಪೇಚಿಗೆ ಸಿಲುಕಿದ್ದಾರೆ. ಕೂಡಲೇ ವೇದಿಕೆಯಿಂದ ಹಿಂದೆ ಸರಿದ ಸಚಿವರು ಪಕ್ಕದಲ್ಲಿಯೇ ನಿಂತಿದ್ದ ಜಿಲ್ಲಾಧಿಕಾರಿಗಳು ಪೂರ್ಣವಾಗಿ ಓದುವಂತೆ ಮನವಿ ಮಾಡಿಕೊಂಡರು.

    ತಮ್ಮ ಭಾಷಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸಚಿವೆ, ಕಳೆದ ಕೆಲ ದಿನಗಳಿಂದ ನನ್ನ ಆರೋಗ್ಯ ಸರಿ ಇರಲಿಲ್ಲ. ವೇದಿಕೆಯ ಮೇಲೆ ಪೂರ್ಣ ಭಾಷಣ ಓದಲು ನನ್ನಿಂದ ಸಾಧ್ಯವಾಗಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ನನ್ನ ಪರವಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದರು. ಬೇಕಾದ್ರೆ ನಮ್ಮ ವೈದ್ಯರನ್ನು ಸಂಪರ್ಕಿಸಿ ನನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಸ್ಪಷ್ಟನೆ ನೀಡಿದರು.

    ಇಮರತಿ ದೇವಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾರೆ. 12ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಇಮರತಿ ದೇವಿ ಅವರಿಗೆ ಹಿಂದಿ ಸಹ ಓದಲು ಬರಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv