Tag: ಇಡಿ ಅಧಿಕಾರಿಗಳು

  • ಕನಕಪುರದ ಬಂಡೆಗೆ ತ್ರಿಬಲ್ ಟೆನ್ಶನ್- ಇಂದೂ ಬೇಲ್ ಸಿಗೋದು ಡೌಟ್?

    ಕನಕಪುರದ ಬಂಡೆಗೆ ತ್ರಿಬಲ್ ಟೆನ್ಶನ್- ಇಂದೂ ಬೇಲ್ ಸಿಗೋದು ಡೌಟ್?

    – ಡಿಕೆಶಿ ತಾಯಿಗೆ ಇಡಿ ಡ್ರಿಲ್

    ನವದೆಹಲಿ: ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಇಂದು ಒಂದಲ್ಲ ಎರಡಲ್ಲ ತ್ರಿಬಲ್ ಟೆನ್ಶನ್. ಒಂದೆಡೆ ಜಾಮೀನು ಸಿಗದೆ ಒದ್ದಾಡುತ್ತಿರುವ ಕನಕಪುರದ ಬಂಡೆ ಸಲ್ಲಿಸಿದ್ದ ಅರ್ಜಿ ಇಂದು ದೆಹಲಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ಇದರ ಜೊತೆಗೆ ನ್ಯಾಯಾಂಗ ಬಂಧನ ಅವಧಿಯೂ ವಿಸ್ತರಣೆ ಆಗಲಿದೆ. ಇದೆರಡು ಸಾಲದು ಎಂದು ಡಿಕೆಶಿ ತಾಯಿ ಗೌರಮ್ಮ ಅವರ ವಿಚಾರಣೆಯೂ ಇಂದೇ ನಡೆಯಲಿದೆ.

    ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಗಳಿಕೆ ಆರೋಪ ಹೊತ್ತು ನ್ಯಾಯಾಂಗ ಬಂಧನದಡಿ ಜೈಲು ಸೇರಿರುವ ಡಿ.ಕೆ ಶಿವಕುಮಾರ್ ಜಾಮೀನುಗಾಗಿ ಬಲಿಷ್ಠ ಕಾನೂನು ಹೋರಾಟ ಆರಂಭಿಸಿದ್ದಾರೆ. ಇಡಿ ವಿಶೇಷ ಕೋರ್ಟಿನಲ್ಲಿ ಜಾಮೀನು ರದ್ದು ಮಾಡಿದ್ದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು ಆ ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಮಧ್ಯಾಹ್ನ 3.30ಕ್ಕೆ ವಿಚಾರಣೆ ನಡೆಸಲಿದೆ. ಸೋಮವಾರ ಬೆಳಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಡಿಕೆಶಿ ಪರ ವಕೀಲರ ಗೈರು ಹಿನ್ನೆಲೆಯಲ್ಲಿ ಇಂದಿಗೆ ವಿಚಾರಣೆ ಮುಂದೂಡಿದ್ರು. ಈ ನಡುವೆ ಇಡಿ ಅಧಿಕಾರಿಗಳು ಹೆಚ್ಚುವರಿ ತನಿಖಾ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಇಂದು ವಿಚಾರಣೆ ನಡೆಯಲಿದೆ.

    ಬಹುತೇಕ ಡಿ.ಕೆ ಶಿವಕುಮಾರ್ ಪರ ವಕೀಲರು ವಾದ ಮಂಡಿಸಲಿದ್ದು ಬಳಿಕ ಇಡಿ ವಕೀಲರು ವಾದ ಮಂಡನೆ ಸಮಯ ನಿಗಧಿ ಆಗಲಿದೆ. ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿರುವ ಇಡಿ ಅಧಿಕಾರಿಗಳು ಕೋರ್ಟಿಗೆ ಹೆಚ್ಚುವರಿ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಪ್ರಕರಣ ಸಂಬಂಧ ಸುಮಾರು 51 ಜನಕ್ಕೆ ಸಮನ್ಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಅವರ ವಿಚಾರಣೆ ಅಡ್ಡಿ ಮತ್ತು ಸಾಕ್ಷಿ ನಾಶ ಆಗುವ ಹಿನ್ನೆಲೆ ಜಾಮೀನು ನೀಡಿದಂತೆ ಇಡಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ಇಡಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೆ.ಎನ್ ನಟರಾಜ್ ವಾದ ಅಮಿತ್ ಮಹಾಜನ್ ವಾದ ಮಂಡಿಸಲು ಸಿದ್ಧವಾಗಿದ್ದಾರೆ.

    ಡಿ.ಕೆ ಶಿವಕುಮಾರ್‍ಗೆ ಎರಡನೇ ಬಾರಿ ವಿಧಿಸಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾಗುವ ಹಿನ್ನೆಲೆ ಅವರನ್ನ ದೆಹಲಿಯ ರೋಸ್ ಅವೆನ್ಯೂನಲ್ಲಿರುವ ಇಡಿ ವಿಶೇಷ ನ್ಯಾಯಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಮಧ್ಯಾಹ್ನ ಕೋರ್ಟ್ ಮುಂದೆ ಹಾಜರುಪಡಿಸಲಿದ್ದು, ಜಾಮೀನು ಸಿಗದ ಹಿನ್ನೆಲೆ ಅನಿವಾರ್ಯವಾಗಿ ನ್ಯಾಯಾಂಗ ಬಂಧನ ವಿಸ್ತರಣೆ ಆಗಲಿದೆ. ಹೀಗಾಗಿ ಬಹುತೇಕ ಬೆಳಕಿನ ಹಬ್ಬ ದೀಪಾವಳಿಯನ್ನು ಡಿ.ಕೆ ಶಿವಕುಮಾರ್ ಜೈಲಿನಲ್ಲಿ ಕಳೆಯಲಿದ್ದಾರೆ ಎನ್ನಲಾಗಿದೆ.

    ಈ ಮಧ್ಯೆ ಇಡಿ ಕುಣಿಗೆ ಡಿಕೆಶಿ ಅವರ ಇಡೀ ಕುಟುಂಬಕ್ಕೆ ವಿಸ್ತರಣೆ ಆಗುತ್ತಿದೆ. ಸಹೋದರ ಡಿ.ಕೆ ಸುರೇಶ್, ಪುತ್ರಿ ಐಶ್ವರ್ಯ ಬಳಿಕ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾಗೂ ವಿಚಾರಣೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಇಂದು ಗೌರಮ್ಮ ಅವರಿಗೆ ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದ್ದು, ಡಿ.ಕೆ ಶಿವಕುಮಾರ್ ಕುಟುಂಬದೊಳಗಿನ ಆರ್ಥಿಕ ವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

    ಐಶ್ವರ್ಯಗೆ ಅಜ್ಜಿ ಗೌರಮ್ಮ ಕೊಟ್ಟಿದ್ದ ಆಸ್ತಿ-ಹಣದ ಬಗ್ಗೆ ವಿಚಾರಣೆ, 2001ರಲ್ಲಿ ಉತ್ತರಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್ ಡೀಡ್, 2002ರಲ್ಲಿ ಹೊಸಕೆರೆಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್ ಡೀಡ್, 2018 ಜೂನ್‍ನಲ್ಲಿ ಗೌರಮ್ಮ ಅಕೌಂಟ್‍ನಿಂದ ಐಶ್ವರ್ಯ ಖಾತೆಗೆ 3 ಕೋಟಿ ರೂ. ವರ್ಗಾವಣೆ, ಸಿಂಗಲ್ ಟ್ರಾಂಜಾಕ್ಷನ್ ಮೂಲಕ 193 ಕೋಟಿ ಐಶ್ವರ್ಯ ಅಕೌಂಟಿಗೆ ಕ್ರೆಡಿಟ್ ಮಾಡಿರುವುದು. ಹಾಗೆಯೇ ಪುತ್ರ ಡಿಕೆಶಿ ಅವರಿಂದ ಎರಡು ಹಂತದಲ್ಲಿ 22.11 ಕೋಟಿ ಹಾಗೂ 15 ಕೋಟಿ ರೂ. ಸಾಲ ಪಡೆದಿರುವುದು, ಇದರ ನಡುವೆ ಡಿಕೆಶಿಗೆ 35 ಲಕ್ಷ ಸಾಲ ನೀಡಿರುವುದು, ಮತ್ತೊಬ್ಬ ಪುತ್ರ ಡಿಕೆ ಸುರೇಶ್‍ಗೆ ಗೌರಮ್ಮ 4.89 ಕೋಟಿ ಸಾಲ ಕೊಟ್ಟಿರುವುದು, ಗೌರಮ್ಮರ ಹೆಸರಲ್ಲಿ 273 ಕೋಟಿ ಬೇನಾಮಿ ಆಸ್ತಿ ಇರುವ ಬಗ್ಗೆ ಶಂಕೆ ವ್ಯಕ್ತವಾಗಿರುವ ಬಗ್ಗೆ, ಶಿವಕುಮಾರ್, ಸುರೇಶ್, ಗೌರಮ್ಮ ನಡುವೆ ಒಟ್ಟು 43 ಕೋಟಿ ಸಾಲ ವ್ಯವಹಾರ ನಡೆದಿರುವ ಬಗ್ಗೆ ಇಡಿ ವಿಚಾರಣೆ ನಡೆಸಲಿದೆ.

    2005ರಲ್ಲಿ ಹೊಸಕೆರೆಹಳ್ಳಿಯಲ್ಲಿ 1 ಕೋಟಿ 4.9 ಗುಂಟೆ ಜಮೀನುನನ್ನು ಗೌರಮ್ಮ ಹೆಸರಲ್ಲಿ ಖರೀದಿ ಮಾಡಲಾಗಿದ್ದು, ಆದರೆ ಅದಾದ 2ನೇ ವರ್ಷದಲ್ಲಿ ಅಂದರೆ 2007ರಲ್ಲಿ ಇದೇ ಜಮೀನನ್ನು 11 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಉಳಿದಂತೆ ಗೌರಮ್ಮ ಅವರ ಹೆಸರಿನಲ್ಲಿ ಯಲಹಂಕದಲ್ಲಿ 20 ಎಕರೆ 9 ಗುಂಟೆ ಜಮೀನು, ಉತ್ತರಹಳ್ಳಿಯಲ್ಲಿ 1.7 ಗುಂಟೆ ಜಮೀನು, ಕನಕಪುರದಲ್ಲಿ 3 ಕಲ್ಲಿನ ಕ್ವಾರಿ, 23 ಗ್ರಾನೈಟ್ ಬ್ಯುಸಿನೆಸ್ ಸಂಸ್ಥೆಗಳಿದ್ದು ಇದೆಲ್ಲದರ ಆರ್ಥಿಕ ಮೂಲಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಡಿ.ಕೆ ಶಿವಕುಮಾರ್ ತನ್ನ ಕೇಸ್ ಟೆನ್ಶನ್ ಮಾತ್ರವಲ್ಲದೇ ಕುಟುಂಬಸ್ಥರ ವಿಚಾರಣೆ ಕೂಡ ಭೀತಿ ಹುಟ್ಟಿಸಿದೆ. ಇಡಿ ಅಧಿಕಾರಿಗಳ ಮುಂದೆ ಗೌರಮ್ಮ ಏನ್ ಹೇಳ್ತಾರೆ ಇದರಿಂದ ಪ್ರಕರಣ ಹೇಗೆ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕು.

  • ಡಿಕೆಶಿ, ಹೆಬ್ಬಾಳ್ಕರ್‌ಗೆ ಸಂಕಷ್ಟ ತಂದಿಡುತ್ತಾ ರಾಜಣ್ಣ ವಿಚಾರಣೆ?

    ಡಿಕೆಶಿ, ಹೆಬ್ಬಾಳ್ಕರ್‌ಗೆ ಸಂಕಷ್ಟ ತಂದಿಡುತ್ತಾ ರಾಜಣ್ಣ ವಿಚಾರಣೆ?

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಮಾಜಿ ಸಚಿವ ಡಿಕೆ ಶಿವಕುಮಾರ್ ಈಗಾಗಲೇ ತಿಹಾರ್ ಜೈಲು ಸೇರಿದ್ದಾರೆ. ಈ ಬೆನ್ನಲ್ಲೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೂಡ ವಿಚಾರಣೆ ನಡೆಸಲಾಯಿತು. ಇದೀಗ ಕಾಂಗ್ರೆಸ್ಸಿನ ಮತ್ತೊಬ್ಬ ನಾಯಕನ ವಿಚಾರಣೆಗೆ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.

    ದೆಹಲಿಯ ಲೋಕನಾಯಕ್ ಭವನದ ಇಡಿ ಕಚೇರಿಯಲ್ಲಿ ಮಾಜಿ ಶಾಸಕ ಕೆ.ಎಸ್ ರಾಜಣ್ಣ ಅವರನ್ನು ಇಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರು ಈಗಾಗಲೇ ದೆಹಲಿ ತಲುಪಿದ್ದಾರೆ. ರಾಜಣ್ಣ ವಿಚಾರಣೆ ಡಿ.ಕೆ ಶಿವಕುಮಾರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಂಕಷ್ಟ ತಂದಿಡುತ್ತಾ ಅನ್ನೋ ಅನುಮಾನ ಎದ್ದಿದೆ.

    ಲಕ್ಷ್ಮಿ ಹೆಬ್ಬಾಳ್ಕರ್ ಆಸ್ತಿ ಏರಿಕೆ ಸಂಬಂಧ ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಕಂಪನಿಗಳಿಗೆ ಡಿ.ಕೆ ಶಿವಕುಮಾರ್ ಬೇನಾಮಿ ಹೂಡಿಕೆ ಅನುಮಾನದ ಹಿನ್ನೆಲೆಯಲ್ಲಿ ರಾಜಣ್ಣ ವಿಚಾರಣೆ ನಡೆಸಲಿದ್ದಾರೆ.

    ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ಗಳ ಅಧ್ಯಕ್ಷರಾಗಿದ್ದರು. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ ಕಾರ್ಖಾನೆ ಪ್ರಾರಂಭಕ್ಕೆ, ಅಲ್ಲದೆ ಅಪೆಕ್ಸ್ ಬ್ಯಾಂಕ್ ಅಡಿ ಬರುವ ಕೆಲ ಬ್ಯಾಂಕುಗಳ ಮೂಲಕ 300 ಕೋಟಿ ಸಾಲ ನೀಡಿದ್ದರು. ರಾಜಣ್ಣ ಅವರು ತುಮಕೂರು ಡಿಸಿಸಿ ಬ್ಯಾಂಕ್ ಮೂಲಕ 25 ಕೋಟಿ ಸಾಲ ಪಡೆಯಲು ನೆರವು ನೀಡಿದ್ದರು.

    ಒಟ್ಟಿನಲ್ಲಿ ಇದೀಗ ರಾಜಣ್ಣ ಅವರನ್ನು ಇಡಿ ಅಧಿಕಾರಿಗಳು 300 ಕೋಟಿ ಸಾಲಕ್ಕೆ ಶೂರಿಟಿ ಪಡೆದಿರುವ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. 300 ಕೋಟಿಯಲ್ಲಿ ಅರ್ಧ ಹಣ ಮಾತ್ರ ಹರ್ಷಾ ಶುಗರ್ಸ್ ಹೂಡಿಕೆ ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಬಾಕಿ ಹಣದ ಬೆನ್ನು ಬಿದ್ದಿದ್ದಾರೆ. ಈವರೆಗೆ ಕಾಂಗ್ರೆಸ್ಸಿನ ಸಂಸದ ಡಿ.ಕೆ ಸುರೇಶ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ನಡೆಸಲಾಗಿದೆ.

  • 2ನೇ ದಿನವೂ ಇಡಿ ಅಧಿಕಾರಿಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ 7 ಗಂಟೆ ಡ್ರಿಲ್

    2ನೇ ದಿನವೂ ಇಡಿ ಅಧಿಕಾರಿಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ 7 ಗಂಟೆ ಡ್ರಿಲ್

    ನವದೆಹಲಿ: ಇಡಿ ಅಧಿಕಾರಿಗಳ ಎದುರು 2ನೇ ದಿನ ವಿಚಾರಣೆಗೆ ಹಾಜರಾಗಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಂದು 6 ಗಂಟೆಗಳ ವಿಚಾರಣೆ ಎದುಸಿದ್ದಾರೆ.

    ಮಧ್ಯಾಹ್ನ 12 ಗಂಟೆ ವೇಳೆಗೆ ಇಡಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಗುಮುಖದೊಂದಿಗೆ ಕಂಡರು. ಆದರೆ ನಿನ್ನೆ ವಿಚಾರಣೆಗೆ ತೆರಳಿದ್ದ ವೇಳೆ ಅವರ ಮುಖದಲ್ಲಿ ಆತಂಕ ಕಂಡು ಬಂದಿತ್ತು. ನಿನ್ನೆ ವಿಚಾರಣೆಯ ಅಂತ್ಯವಾದ ಬಳಿಕ ಮತ್ತೆ ನಾಳೆ ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದರು.

    ಇಂದಿನ ವಿಚಾರಣೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಲವು ದಾಖಲೆಗಳೊಂದಿಗೆ ಹಾಜರಾಗಿದ್ದರು. ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ದಾಖಲೆ ಸಮೇತ ಮಾಹಿತಿ ಪಡೆದಿದ್ದಾರೆ. ವಿಚಾರಣೆಯ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆಸಿರುವ ಆರ್ಥಿಕ ವ್ಯವಹಾರಗಳ ಬಗ್ಗೆ ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ವಿವಿಧ ಕಂಪನಿಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೂಡಿಕೆ ಹಾಗೂ ಹೂಡಿಕೆ ಮಾಡಿರುವ ಹಣದ ಮೂಲ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂಬ ಸಂಗತಿ ಮೂಲಗಳಿಂದ ಲಭಿಸಿದೆ.

    ವಿಚಾರಣೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನಾಳೆ ಮತ್ತೆ ವಿಚಾರಣೆಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿಲ್ಲ. ಮುಂದೆ ವಿಚಾರಣೆ ಬರುವ ಬಗ್ಗೆ ಅಧಿಕಾರಿಗಳು ಏನು ಹೇಳಿಲ್ಲ. ಇಂದಿನ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ವಿಚಾರಣೆಗೆ ಸಹಕರಿಸಿದ್ದೇನೆ ಎಂದರು.

    ಡಿಕೆ ಶಿವಕುಮಾರ್ ನನ್ನ ರಾಜಕೀಯ ಗುರು ಎಂದು ಹೇಳಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನನ್ನ ರಾಜಕೀಯವಾಗಿ ಡಿಕೆಶಿ ಬೆಳೆಸಿದ್ದಾರೆ. ಆದರೆ ನನ್ನ ಮತ್ತು ಡಿಕೆಶಿ ಅವರ ನಡುವೆ ಯಾವುದೇ ಹಣ ವರ್ಗಾವಣೆ ನಡೆದಿಲ್ಲ. ನಮ್ಮ ನಡುವೆ ವ್ಯವಹಾರಿಕ ಸಂಬಂಧ ಇಲ್ಲ. ಈ ಕುರಿತು ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ದಾಖಲೆ ನೀಡಿ ಉತ್ತರಿಸಿದ್ದೇನೆ. ಈ ಸಂದರ್ಭ ವಿಚಾರಣೆಗೆ ಸಂಬಂಧ ಇಷ್ಟು ಮಾತ್ರ ಹೇಳಬಲ್ಲೆ ಎಂದು ತಿಳಿಸಿದ್ದಾರೆ.

    ತಪ್ಪದ ಸಂಕಷ್ಟ: ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಚಾರಣೆಯನ್ನು ನಡೆಸಿರುವ ಇಡಿ ಅಧಿಕಾರಿಗಳು ಕೆಲ ದಿನಗಳ ಬಳಿಕ ಮತ್ತೆ ಸಮನ್ಸ್ ನೀಡಿ ವಿಚಾರಣೆಗೆ ಕರೆಯುವ ಕುರಿತ ಮಾಹಿತಿ ಇಡಿ ಉನ್ನತ ಮೂಲಗಳಿಂದ ಲಭಿಸಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಮತ್ತಷ್ಟು ಆಳವಾದ ವಿಚಾರ ನಡೆಸಲು ಇಡಿ ಚಿಂತನೆ ನಡೆಸಿದೆ ಎನ್ನಲಾಗಿದೆ.

  • ಡಿಕೆಶಿ, ಐಶ್ವರ್ಯಗಾಗಿ ದತ್ತನ ಮೊರೆ ಹೋದ ಅಭಿಮಾನಿಗಳು

    ಡಿಕೆಶಿ, ಐಶ್ವರ್ಯಗಾಗಿ ದತ್ತನ ಮೊರೆ ಹೋದ ಅಭಿಮಾನಿಗಳು

    ಕಲಬುರಗಿ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಪುತ್ರಿ ಐಶ್ವರ್ಯಗಾಗಿ ಅಭಿಮಾನಿಗಳು ಜಿಲ್ಲೆಯ ಶ್ರೀ ಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ನಿರ್ಗುಣ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಡಿಕೆಶಿ ಹಾಗೂ ಅವರ ಪುತ್ರಿ ಇಬ್ಬರೂ ಇಡಿ ತನಿಖೆಯನ್ನು ಸಮರ್ಪಕವಾಗಿ ಎದುರಿಸಿ ಹೊರಬರಲಿ ಎಂದು ಅಭಿಮಾನಿಗಳು ದತ್ತನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಡಿಕೆಶಿ ಅವರು ಐಟಿ ದಾಳಿಗೆ ಒಳಗಾದಾಗ ರಾಜಕೀಯ ಗುರು ದ್ವಾರಕನಾಥ ಸೂಚನೆಯಂತೆ ಈ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದರು. ನಮ್ಮ ನಾಯಕ ಹಾಗೂ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಆಶಿಸಿ ಅಭಿಮಾನಿಗಳು ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ:ಮನೆಗೋ? ಜೈಲಿಗೋ? ಇಡಿ ಕಸ್ಟಡಿಗೋ? – ಇಂದು ಡಿಕೆಶಿ ಭವಿಷ್ಯ ನಿರ್ಧಾರ

    ಇನ್ನೊಂದೆಡೆ ಇಡಿ ಕಸ್ಟಡಿ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇಂದೇ ಶಿವಕುಮಾರ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಲಿದೆ.

    ಗುರುವಾರ ಒಂದು ಕಡೆ ಐಶ್ವರ್ಯ ವಿಚಾರಣೆ ನಡೆದಿದ್ದರೆ ಮಗದೊಂದು ಕಡೆ ಡಿಕೆಶಿ ವಿಚಾರಣೆ ನಡೆಯಿತು. ಆದರೆ, ವಿಚಾರಣೆ ವೇಳೆ ಡಿಕೆಶಿಗೆ ಹೈಬಿಪಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಸಂಬಂಧಿ ಶಾಸಕ, ಡಾ. ರಂಗನಾಥ್ ಅವರು ತಪಾಸಣೆ ಮಾಡಿದರು. ನಂತರ ಡಿಕೆಶಿ ಅವರನ್ನು ಹತ್ತಿರದ ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ, ಡಿಕೆ ಸುರೇಶ್ ಆಪ್ತ ವೈದ್ಯ ಜುಬಿನ್ ಸಲಹೆ ಮೇರೆಗೆ ಡಿಕೆಶಿಗೆ ಔಷಧಿ ತಂದುಕೊಟ್ಟರು. ಬಳಿಕ ಇಸಿಜಿ ಮಾಡಿದ್ದು, ಡಿಕೆಶಿ ವಿಶ್ರಾಂತಿ ಪಡೆಯುತ್ತಿದ್ದಾರೆ.

  • ಡಿಕೆಶಿ ಶೇವಿಂಗ್ ಕಿಟ್‍ಗೆ ಅವಕಾಶ ನೀಡಿದ ಕೋರ್ಟ್

    ಡಿಕೆಶಿ ಶೇವಿಂಗ್ ಕಿಟ್‍ಗೆ ಅವಕಾಶ ನೀಡಿದ ಕೋರ್ಟ್

    ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಸಲ್ಲಿಸಿದ್ದ ಕೆಲವು ಮನವಿಗಳಿಗೆ ರೋಸ್ ಅವೆನ್ಯೂ ಕೋರ್ಟ್ ಸಮ್ಮತಿ ಸೂಚಿಸಿದೆ.

    ಶೇವಿಂಗ್ ಕಿಟ್, ಪೆನ್ನು ಪೇಪರ್ ಒದಗಿಸುವಂತೆ ಡಿ.ಕೆ.ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು ರೋಸ್ ಅವೆನ್ಯೂ ಕೋರ್ಟ್ ನಲ್ಲಿ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹಾರ್ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರನ್ನು ತುಘಲಕ್ ರೋಡ್ ಠಾಣೆಯಿಂದ ಇಡಿ ಕಚೇರಿಗೆ ಕರೆತರಲಾಗಿತ್ತು.

    ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್ ಪರ ವಕೀಲ ಮಯಾಂಕ್ ಜೈನ್ ಅವರು, ಶೇವಿಂಗ್ ಕಿಟ್ ಬೇಡಿಕೆಗೆ ಕೋರ್ಟ್ ಸಮ್ಮತಿ ಸೂಚಿಸಿದೆ. ಕುಟುಂಬ ಮತ್ತು ವಕೀಲರ ಭೇಟಿ ವೇಳೆ ತನಿಖಾಧಿಕಾರಿಗಳು ಹಾಜರ ಇರಬಾರದು ಎಂದು ಮನವಿ ಮಾಡಿದ್ದೇವು. ಅದರಂತೆ ಇನ್ನುಮುಂದೆ ಇಡಿ ಅಧಿಕಾರಿಗಳು ಭೇಟಿ ವೇಳೆ ಬರುವುದಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಅವರನ್ನು ಭೇಟಿ ಮಾಡುವ ವಕೀಲರಿಗೆ ಪೆನ್ನು, ಪೇಪರ್ ಬಳಸುವ ಅವಕಾಶ ನೀಡಬೇಕು ಎಂದು ಕೇಳಿಕೊಳ್ಳಲಾಗಿತ್ತು. ಆದರೆ ಕೋರ್ಟ್, ವಕೀಲರಿಗೆ ಮಾತ್ರ ಅವಕಾಶ ನೀಡಿದ್ದು, ಮಾಜಿ ಸಚಿವರು ಪೆನ್ನು, ಪೇಪರ್ ಬಳಸುವಂತಿಲ್ಲ ಅಂತ ಕೋಟ್ ತಿಳಿಸಿದೆ ಎಂದರು.

    ವಿಚಾರಣೆ ಬಳಿಕ ಕೋರ್ಟ್ ಮೂರು ಪುಟದ ಆದೇಶ ನೀಡಿದೆ. ಈ ಆದೇಶದ ಅನ್ವಯ ಇಡಿ ಕಸ್ಟಡಿಯಲ್ಲಿ ಶೇವಿಂಗ್ ಮಾಡಿಕೊಳ್ಳಲು ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲದೆ ಕುಟುಂಬಸ್ಥರು, ವಕೀಲರು ಭೇಟಿಯಾದಾಗ ಜೊತೆಯಲ್ಲಿ ತನಿಖಾಧಿಕಾರಿ ಕುಳಿತುಕೊಳ್ಳುವಂತಿಲ್ಲ. ಡಿ.ಕೆ.ಶಿವಕುಮಾರ್ ಅವರ ಭೇಟಿ ವೇಳೆ ವಕೀಲರು ಪೆನ್ನು, ಪೇಪರ್ ಬಳಸಬಹುದು. ಆದರೆ ಪೆನ್ನು, ಪೇಪರ್ ಬಳಸಲು ಮಾಜಿ ಸಚಿವರಿಗೆ ಅವಕಾಶವಿಲ್ಲ. ಕುಟುಂಬಸ್ಥರು, ವಕೀಲರ ಭೇಟಿಗೆ 30 ನಿಮಿಷಕ್ಕಿಂತ ಹೆಚ್ಚು ಸಮಯ ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.

    ತುಘಲಕ್ ಠಾಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಸೊಳ್ಳೆ ಕಾಟ ಶುರುವಾಗಿದೆ. ಹೀಗಾಗಿ ಸಂಸದ ಡಿ.ಕೆ.ಸುರೇಶ್ ಅವರ ನಿವಾಸದಿಂದ ಸಿಬ್ಬಂದಿಯು ಭಾನುವಾರ ರಾತ್ರಿ ಊಟದ ಜೊತೆಗೆ ಬಟ್ಟೆ, ಸೊಳ್ಳೆ ಪರದೆ ತಂದಿದ್ದರು. ಆದರೆ ಊಟ, ಬಟ್ಟೆಯನ್ನು ಮಾತ್ರ ಪಡೆದ ಇಡಿ ಅಧಿಕಾರಿಗಳು ಸೊಳ್ಳೆ ಪರದೆಯನ್ನು ವಾಪಸ್ ಕಳುಹಿಸಿದ್ದಾರೆ.

  • ಮಗಳ ಹೆಸರಲ್ಲಿಟ್ಟಿದ್ದ 78 ಕೋಟಿ ಹಣವೇ ಡಿಕೆಶಿಗೆ ಮುಳುವಾಯ್ತು

    ಮಗಳ ಹೆಸರಲ್ಲಿಟ್ಟಿದ್ದ 78 ಕೋಟಿ ಹಣವೇ ಡಿಕೆಶಿಗೆ ಮುಳುವಾಯ್ತು

    ಬೆಂಗಳೂರು: ಸದ್ಯ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ತಮ್ಮ ಮಗಳ ಹೆಸರಿನಲ್ಲಿ ಇಟ್ಟಿದ್ದ ಹಣವೇ ಮುಳುವಾಗುತ್ತಿದೆ. ಮಗಳ ಹೆಸರಿನಲ್ಲಿಟ್ಟಿದ್ದ ಬರೋಬ್ಬರಿ 78 ಕೋಟಿ ಹಣದ ವಿಚಾರ ಸಂಬಂಧ ಇಡಿ ಅಧಿಕಾರಿಗಳು ಪ್ರಶ್ನೆ ಕೇಳುತ್ತಿದ್ದಾರೆ.

    ಸೋಲ್ ಅಂಡ್ ಸೇಲ್ಸ್ ಪ್ರಾಜೆಕ್ಟ್ ಗೆ ಬರೋಬ್ಬರಿ 78 ಕೋಟಿ ವ್ಯವಹಾರ ನಡೆದಿತ್ತು. ಇದನ್ನು ಪ್ರಶ್ನಿಸಿದ್ರೆ ನನ್ನ ಹಿತೈಷಿಗಳು, ಕುಟುಂಬದವರು, ಸ್ನೇಹಿತರು ಕೊಟ್ಟ ಹಣ ಎಂದು ಡಿಕೆಶಿ ಉತ್ತರಿಸಿದ್ದರು. ಆದರೆ ಇದೂ ಕೂಡ ಅಕ್ರಮ ಹಣ ವರ್ಗಾವಣೆಯಿಂದಲೇ ಬಂದಿರುವ ಹಣ ಎಂದು ಇಡಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈಗ ಈ ವಿಚಾರವನ್ನೇ ಇಟ್ಟುಕೊಂಡು ಡಿಕೆಶಿ ಅವರಿಗೆ ಇಡಿ ಡ್ರಿಲ್ ಮಾಡುತ್ತಿದೆ.

    ಬಂಧನದಲ್ಲಿರುವ ಡಿಕೆಶಿಯನ್ನು ಬುಧವಾರ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಸಂದರ್ಭದಲ್ಲಿ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಅವರು ಶಿವಕುಮಾರ್ ಅವರು 44 ಕೋಟಿ ಅಕ್ರಮ ವಹಿವಾಟು ನಡೆಸಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಸಿಕ್ಕಿದೆ. ಹೀಗಾಗಿ ಅವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಾಗಿರುವ ಕಾರಣ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ:ಬೇನಾಮಿಯಾಗಿ ಅರಮನೆ ಆಸ್ತಿ ಖರೀದಿ – ಇಡಿ ಪ್ರಕರಣಕ್ಕೆ ತಿರುವು ಕೊಟ್ಟಿದ್ದೇ ವಿಶಾಲಾಕ್ಷಿ ದೇವಿ

    2017ರ ನವೆಂಬರ್ ತಿಂಗಳಿನಲ್ಲಿ ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದರು.

    ನಿಮ್ಮ ತಂದೆ ನಿಮ್ಮ ಹೆಸರಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಅದೆಲ್ಲಾ ನನಗೆ ಗೊತ್ತಿಲ್ಲ. ಅವರು ಇದುವರೆಗೂ ಹೇಳಿಲ್ಲ ನಾನು ಕೇಳಿಲ್ಲ ಎಂದು ಐಶ್ವರ್ಯ ಹೇಳಿದ್ದರು. ಗ್ಲೋಬಲ್ ಕಾಲೇಜಿನಲ್ಲಿ ನಿಮ್ಮ ಪಾತ್ರ ಏನು? ನೀವು ಪಾಲುದಾರರಾ ಎಂದು ಕೇಳಿದ್ದಕ್ಕೆ ನಾನು ಪಾಲುದಾರಳಾಗಿ ಇಲ್ಲ. ಅಪ್ಪ ಮಾಡಿರಬಹುದು ಅದರ ಬಗ್ಗೆ ಗೊತ್ತಿಲ್ಲ ನಾನು ಅಲ್ಲಿ ಟ್ರಸ್ಟಿಯಾಗಿ ಇದ್ದೇನೆ ಎಂದು ಉತ್ತರ ನೀಡಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.

    ಟ್ರಸ್ಟಿ ಎಂದರೆ ಏನು? ನಿಮ್ಮ ಕೆಲಸ ಏನಿರುತ್ತದೆ ಎಂದಿದ್ದಕ್ಕೆ ಇಡೀ ಕಾಲೇಜಿನ ಬಗ್ಗೆ ಶಿಕ್ಷಣ ಟ್ರಸ್ಟ್ ಅಂತ ಮಾಡಲಾಗಿದೆ. ಅದರಲ್ಲಿ ನಾನು ಒಬ್ಬಳು ಟ್ರಸ್ಟಿ ಅಷ್ಟೇ. ಸಲಹೆ ಸೂಚನೆಗಳನ್ನು ಕೊಡಲಾಗುತ್ತದೆ ಎಂದು ಉತ್ತರಿಸಿದ್ದರು. ಕಾಲೇಜಿನ ಹಣಕಾಸಿನ ವ್ಯವಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಾವು ಮಾಡಿಕೊಂಡಿರುವುದು ಎಜ್ಯುಕೇಶನ್ ಟ್ರಸ್ಟ್ ಅಂತ ಅಲ್ಲಿ ಹಣಕಾಸಿನ ವ್ಯವಹಾರ ಬರುವುದಿಲ್ಲ ಎಂದು ಹೇಳಿದ್ದರು. ಕೋರ್ಸ್ ಗಳಿಗೆ ಶುಲ್ಕ ನಿಗದಿಯನ್ನು ನಿಮ್ಮ ಟ್ರಸ್ಟ್ ಮಾಡುತ್ತಾ ಎಂದು ಕೇಳಿದ್ದಕ್ಕೆ ನಾವು ಬೇರೆ ಬೇರೆ ಕಾಲೇಜಿನ ಮಾಹಿತಿ ಹೇಳ್ತೀವಿ. ಶುಲ್ಕ ನಿಗದಿ ಮಾಡುವುದು ನಿರ್ದೇಶಕರು ಎಂಬುದಾಗಿ ಉತ್ತರ ನೀಡಿದ್ದರು.

  • ಅಳುವ ಮೂಲಕ ಡಿಕೆಶಿ ಅನುಕಂಪ ಗಿಟ್ಟಿಸುವ ಕೆಲಸ ಮಾಡ್ತಿದ್ದಾರೆ- ಅಶ್ವಥ್ ನಾರಾಯಣ

    ಅಳುವ ಮೂಲಕ ಡಿಕೆಶಿ ಅನುಕಂಪ ಗಿಟ್ಟಿಸುವ ಕೆಲಸ ಮಾಡ್ತಿದ್ದಾರೆ- ಅಶ್ವಥ್ ನಾರಾಯಣ

    ಬೆಂಗಳೂರು: ಭಾವನಾತ್ಮಕವಾಗಿ ಅಳುವ ಮೂಲಕ ಅನುಕಂಪ ಗಿಟ್ಟಿಸುವ ಕೆಲಸವನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹರಿಹಾಯ್ದಿದ್ದಾರೆ.

    ಸದಾಶಿವನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುವುದನ್ನು ಬಿಡಬೇಕು. ಯಾವುದೇ ಪಕ್ಷವನ್ನು ದೂಷಿಸುವ ಕೆಲಸ ಮಾಡಬಾರದು. ಅವರು ನಡೆದುಕೊಂಡು ಬಂದಿರುವ ರೀತಿ, ಕಾನೂನು ಉಲ್ಲಂಘನೆ, ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವುದು ಇಡೀ ಸಮಾಜಕ್ಕೆ ಗೊತ್ತಿದೆ. ಕಾನೂನಿನ ರೀತಿ ಏನಾಗಬೇಕೋ ಅದು ಆಗುತ್ತದೆ ಎಂದು ತಿರುಗೇಟು ನೀಡಿದರು.

    ಕಾನೂನಿನ ಚೌಕಟ್ಟಿನಲ್ಲಿ ಅವರು ಮಾಡಿರುವ ಕೆಲಸ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಪರಿಶೀಲಿಸಬೇಕು. ಅದನ್ನು ಇಡಿ ಅಧಿಕಾರಿಗಳು ಮಾಡುತ್ತಿದ್ದಾರೆ. ಅವರು ಮಾಡಿರುವ ಕರ್ಮಗಳಿಗೆ ಎಲ್ಲವೂ ಕಾಂಪ್ರಮೈಸ್ ಆದಲ್ಲಿ ಜನ ಎಲ್ಲಿಗೆ ಹೋಗಬೇಕು. ರಾಜಕಾರಣಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ, ಉದ್ಯಮಿಗಳ ವಿರುದ್ಧ ತನಿಖೆ ಮಾಡುತ್ತಿಲ್ಲ ಎಂಬ ಆರೋಪದ ಕುರಿತು ಉತ್ತರಿಸಿದ ಅವರು, ಹಾಗಾದರೆ ನೀವು ರಾಜಕೀಯ ಯಾಕೆ ಮಾಡುತ್ತೀರಾ, ನೀವು ವ್ಯಾಪಾರಿಗಳಾಗಿರಿ ಎಂದು ತಿರುಗೇಟು ನೀಡಿದರು.

    ಈಗ ಅತ್ತು ಕರೆದು ಮಾಡಿದರೆ, ಏನೂ ಪ್ರಯೋಜನವಿಲ್ಲ. ಕಾನೂನಿನ ಅಡಿಯಲ್ಲಿ ಏನಾಗಬೇಕೋ ಅದು ಆಗುತ್ತಿದೆ. ಯಾರೇ ಉಪ್ಪು ತಿಂದವರು ನೀರು ಕುಡಿಯಲೇಬೇಕು, ಕುಡೀತಾ ಇದ್ದಾರೆ. ಕಳ್ಳಂಗೆ ಪಿಳ್ಳೆ ನೆಪ ಅನ್ನೋ ಹಾಗೆ ಮಾತಾಡುತ್ತಿದ್ದಾರೆ. ಇವರ ಭ್ರಷ್ಟಾಚಾರ, ಇಡೀ ಸಮಾಜಕ್ಕೆ ಗೊತ್ತಿದೆ. ಅದನ್ನು ನನ್ನ ಬಾಯಲ್ಲಿ ಯಾಕೆ ಹೇಳಿಸುತ್ತೀರಾ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

    ಮೂರನೇ ದಿನವಾದ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಣ್ಣಲ್ಲಿ ನೀರು ಹಾಕುತ್ತಿರೋದು ನಮ್ಮ ತಂದೆಗೆ ಪೂಜೆ ಮಾಡುವ ಅವಕಾಶವನ್ನು ನನ್ನ ಬಿಜೆಪಿ ಸ್ನೇಹಿತರು ಅಧಿಕಾರದ ಮುಖಾಂತರ ಕೊಟ್ಟಿಲ್ಲ. ನನಗೆ ದುಃಖ ಯಾಕೆ ಆಗುತ್ತಿದೆ ಎಂದರೆ ಇವತ್ತು ತಂದೆ ಹಾಗೂ ಹಿರಿಯರಿಗೆ ನಾನು, ನನ್ನ ತಮ್ಮ ಪೂಜೆ ಮಾಡಬೇಕಿತ್ತು. ಆದರೆ ಅವರಿಗೆ ಎಡೆ ಇಡಲು ಕೂಡ ಇವರು ನನಗೆ ಕೊಟ್ಟಿಲ್ಲ. ಪರವಾಗಿಲ್ಲ, ಇಡಿ ಕಚೇರಿಯಲ್ಲೇ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇನೆ ಎಂದು ಡಿಕೆಶಿ ಕಣ್ಣೀರಿಟ್ಟಿದ್ದರು.

    ಉಪ್ಪು ತಿಂದವರು ನೀರು ಕುಡಿಬೇಕು ಎಂದು ನನ್ನ ಸ್ನೇಹಿತರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದ ಜನಕ್ಕೋಸ್ಕರ ಹೋರಾಟ ಮಾಡಿಕೊಂಡು ನಾನು ಬಂದಿದ್ದೇನೆ. ಇಂದು ನಮ್ಮ ಅನೇಕ ಸ್ನೇಹಿತರು, ಕಾರ್ಯಕರ್ತರು, ನಾಯಕರು ಪಕ್ಷ ಬೆಳೆಸಿರುವುದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ಇದನ್ನೆಲ್ಲಾ ಎದುರಿಸುವಂತಹ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ, ಲಂಚದ ಆರೋಪವಿಲ್ಲ, ಅಧಿಕಾರ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿಲ್ಲ. ನೇರವಾಗಿ ನುಡಿದಂತೆ ನಡೆದಿದ್ದೇನೆ ಎಂದು ಕಿಡಿ ಕಾರಿದ್ದರು.

  • ಪ್ರತೀಕಾರದ ವರ್ತನೆ ಅಲ್ಲದೆ ಇನ್ನೇನು? – ಡಿಕೆಶಿ ಪರ ಎಚ್‍ಡಿಕೆ ಬ್ಯಾಟಿಂಗ್

    ಪ್ರತೀಕಾರದ ವರ್ತನೆ ಅಲ್ಲದೆ ಇನ್ನೇನು? – ಡಿಕೆಶಿ ಪರ ಎಚ್‍ಡಿಕೆ ಬ್ಯಾಟಿಂಗ್

    ಬೆಂಗಳೂರು: ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಎ ಶಿವಕುಮಾರ್ ಪರ ಕೊನೆಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಬ್ಯಾಟಿಂಗ್ ಮಾಡಿದ್ದಾರೆ.

    ಈ ಬಗ್ಗೆ ಟ್ವಿಟ್ ಮಾಡಿರುವ ಎಚ್‍ಡಿಕೆ, ಇಡಿ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಗೌರಿ-ಗಣೇಶ ಹಬ್ಬದ ದಿನದಲ್ಲೂ ವಿಚಾರಣೆ ನಡೆಸುತ್ತಿರುವ ಇಡಿ ವರ್ತನೆಗೆ ಕಿಡಿಕಾರಿದ್ದಾರೆ.

    ಗೌರಿ-ಗಣೇಶ ಹಿಂದೂಗಳ ಪ್ರಮುಖ ಹಬ್ಬವಾಗಿದೆ. ಡಿಕೆ ಶಿವಕುಮಾರ್ ಅವರು ಅಧಿಕಾರಿಗಳ ಬಳಿ ಒಂದು ದಿನ ವಿಚಾರಣೆಗೆ ವಿನಾಯ್ತಿ ಕೇಳಿದರೂ ಕೊಡಲಿಲ್ಲ. ಇಡಿಯವರ ಈ ವರ್ತನೆ ಪ್ರತೀಕಾರದ ವರ್ತನೆ ಅಲ್ಲದೆ ಏನು ಎಂದು ಪ್ರಶ್ನಿಸುವ ಮೂಲಕ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದಕ್ಕೂ ಮೊದಲು ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ ಅವರು, ನಾಡಿನ ಜನರಿಗೆ ಗೌರಿ-ಗಣೇಶ ಹಬ್ಬದ ಶುಭ ಕೋರಿದ್ದಾರೆ. ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗೋಣ. ವಿಘ್ನ ವಿನಾಶಕನು ಎಲ್ಲರ ಬಾಳಲ್ಲೂ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ ಎಂದು ಹೇಳಿದ್ದಾರೆ.

  • ಸತತ 5 ತಾಸು ವಿಚಾರಣೆಗೆ ಡಿಕೆಶಿ ಫುಲ್ ಟಯರ್ಡ್ -ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?

    ಸತತ 5 ತಾಸು ವಿಚಾರಣೆಗೆ ಡಿಕೆಶಿ ಫುಲ್ ಟಯರ್ಡ್ -ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?

    ನವದೆಹಲಿ: ಇಡಿ ಅಧಿಕಾರಿಗಳ ಪ್ರಶ್ನೆಗೆ ಕನಕಪುರ ಬಂಡೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಂಗಲಾಗಿದ್ದಾರೆ. ಸತತ 5 ಗಂಟೆ ವಿಚಾರಣೆ ಬಳಿಕ ಮಾತು ಕೊಟ್ಟಂತೆ ನಡೆದುಕೊಳ್ಳುವೆ, ಇಂದು ಮತ್ತೆ ವಿಚಾರಣೆಗೆ ಹಾಜರಾಗುವೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?
    ಇಡಿ: ಸುನಿಲ್ ಶರ್ಮಾ ಹೇಳಿದ್ದಾರೆ. ಆ ಫ್ಲಾಟ್ ಮಾಲೀಕರು ನೀವೇ ಅಂತಾ
    ಡಿಕೆ: ಅವರು ಯಾಕಂಗೆ ಹೇಳಿದ್ರು ಗೊತ್ತಿಲ್ಲ, ಆಶ್ಚರ್ಯ ತಂದಿದೆ
    ಇಡಿ: ಸುನಿಲ್ ಶರ್ಮಾ ಜೊತೆ ನಿಮಗೆ ವ್ಯವಹಾರಿಕ ಸಂಬಂಧ ಇದ್ಯಾ?
    ಡಿಕೆ: ಇದೆ, ನಾನು ಅವರ ಟ್ರಾವೆಲ್‍ನಲ್ಲಿ ಪಾಲುದಾರ

    ಇಡಿ: ನಿಮ್ಮ ಫ್ಲ್ಯಾಟ್‍ಗಳನ್ನು ಆಂಜನೇಯಗೆ ನೋಡಿಕೊಳ್ಳೋದಕ್ಕೆ ಬಿಟ್ಟಿದ್ದೀರಾ?
    ಡಿಕೆ: ಆಂಜನೇಯ ನನ್ನ ವಿಶೇಷ ಅಧಿಕಾರಿ, ನಾನಿಲ್ಲದಿದ್ದಾಗ ಅವರೇ ಪ್ಲ್ಯಾಟ್ ನೋಡ್ಕೋತಾರೆ
    ಇಡಿ: ನಿಮ್ಮ ಫ್ಲ್ಯಾಟ್‍ನಲ್ಲಿ ಅವರ ಕುಟುಂಬ ವಾಸ ಇದ್ಯಾ?
    ಡಿಕೆ: ಒಂದು ಪ್ಲ್ಯಾಟ್‍ನಲ್ಲಿ ಅವರ ಕುಟುಂಬ ವಾಸ ಇದೆ

    ಇಡಿ: ಈ ಹಣ ನೀವು, ನಿಮ್ಮ ಸ್ನೇಹಿತರು ಅಕ್ರಮವಾಗಿ ಸಂಗ್ರಹಿಸಿದ್ದಾ?
    ಡಿಕೆ: ಅಕ್ರಮವಾಗಿ ನಾನು ಏನನ್ನೂ ಸಂಪಾದಿಸಿಲ್ಲ
    ಇಡಿ: ಕೆಜಿ ಅನ್ನೋ ಕೋಡ್‍ವರ್ಡ್ ಅಲ್ಲಿ ಹವಾಲಾ ಮಾಡ್ತಿದ್ದೀರಾ?
    ಡಿಕೆ: ನಾನು ಯಾವತ್ತೂ ಹವಾಲಾ ಕೆಲಸವನ್ನು ಮಾಡಿಲ್ಲ

    ಇಡಿ: ಡ್ರೈವರ್ ಜೊತೆ ನಿಮಗೆ ಹಣಕಾಸಿನ ಸಂಬಂಧ ಇದ್ಯಾ..?
    ಡಿಕೆ: ಇಲ್ಲ, ಯಾವುದೇ ವ್ಯವಹಾರ ಇಲ್ಲ
    ಇಡಿ: ಡ್ರೈವರ್ ಗೆ ನೀವು ಹಣ ಕೊಟ್ಟು ಕಳುಹಿಸುವಷ್ಟು ನಂಬಿಕಸ್ತನಾ..?
    ಡಿಕೆ: ಬೇಕಾದಾಗ ಕೆಲವೊಂದು ವ್ಯವಹಾರಕ್ಕೆ ಹಣ ಕಳುಹಿಸ್ತಿದ್ದೆ

    ಇಡಿ: ಹಣ ಯಾರ್ಯಾರಿಗೆ ಕೊಡ್ಬೇಕು ಅಂತ ಡ್ರೈವರ್ ನೋಡ್ಕೋತಿದ್ರಾ..?
    ಡಿಕೆ: ನಾನು ಯಾರಿಗೂ ಆಸೆ, ಆಮಿಷಕ್ಕೆ ಹಣ ಕೊಟ್ಟಿಲ್ಲ

    ಏನಿದು ಪ್ರಕರಣ?
    2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

    ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

    ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕಾರರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.

  • ಏನ್ ವ್ಯಾಖ್ಯಾನ ಮಾಡ್ತಿರೋ ಮಾಡಿ, ನಾಳೆ ಸಿಗೋಣ: ಮಾಧ್ಯಮಗಳ ವಿರುದ್ಧ ಡಿಕೆಶಿ ಕಿಡಿ

    ಏನ್ ವ್ಯಾಖ್ಯಾನ ಮಾಡ್ತಿರೋ ಮಾಡಿ, ನಾಳೆ ಸಿಗೋಣ: ಮಾಧ್ಯಮಗಳ ವಿರುದ್ಧ ಡಿಕೆಶಿ ಕಿಡಿ

    – ನೀನ್ ಏನ್ ನನ್ನ ವಕೀಲ ಏನಪ್ಪ?

    ಬೆಂಗಳೂರು: ಎಲ್ಲರೂ ಚೆನ್ನಾಗಿ ವ್ಯಾಖ್ಯಾನ ಮಾಡುತ್ತಿದ್ದೀರಾ. ಏನ್ ವ್ಯಾಖ್ಯಾನ ಮಾಡ್ತಿರೋ ಮಾಡಿ. ನಾಳೆ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

    ಹೈಕೋರ್ಟ್ ನಲ್ಲಿ ಅರ್ಜಿ ರದ್ದಾದ ಬಳಿಕ ಸದಾಶಿವನಗರದ ಅವರ ಮನೆಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಶುಕ್ರವಾರ ಮಾಧ್ಯಮಗೋಷ್ಠಿ ಕರೆದು ಮಾತನಾಡುತ್ತೇನೆ ಎಂದರು. ಈ ವೇಳೆ ವಕೀಲರನ್ನು ಭೇಟಿ ಮಾಡಿದ್ರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಗುಡುಗಿದ ಅವರು, ನೀನು ಏನ್ ನನ್ನ ವಕೀಲ ಏನಪ್ಪ? ನಾಳೆ ಮಾತನಾಡುತ್ತೇನೆ ಬಿಡಿ ಎಂದು ಹೇಳಿದರು.

    ಬಳಿಕ ಡಿ.ಕೆ.ಶಿವಕುಮಾರ್ ಅವರು ಮನೆಗೆ ಬಂದ ನಾಲ್ವರು ಇಡಿ ಅಧಿಕಾರಿಗಳು ಮಾಜಿ ಸಚಿವರಿಗೆ ಮತ್ತೊಮ್ಮೆ ಸಮನ್ಸ್ ನೀಡಿದ್ದಾರೆ. ಹೀಗಾಗಿ ಸಮನ್ಸ್ ನೀಡಿದ ಕೆಲವೇ ನಿಮಿಷದಲ್ಲಿ ಮನೆಯಿಂದ ಫೈಲ್ ಹಿಡಿದು ಪತ್ನಿ ಹಾಗೂ ಮಗಳ ಜೊತೆಗೆ ಹೊರ ಬಂದಿದ್ದಾರೆ. ಈ ವೇಳೆಯೂ ಮಾಧ್ಯಮಗಳ ವಿರುದ್ಧ ಗುಡುಗಿದ ಮಾಜಿ ಸಚಿವರು, ದೆಹಲಿಗೆ ಬೇಕಾದರೂ ಹೋಗುತ್ತೇನೆ, ಎಲ್ಲಿಗೆ ಬೇಕಾದರೂ ವಿಚಾರಣೆಗೆ ಹೋಗುತ್ತೇನೆ. ಶುಕ್ರವಾರ ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತೇನೆ ಎಂದು ಮನೆಯಿಂದ ಹೊರಟು ಹೋದರು.

    ಡಿ.ಕೆ.ಶಿವಕುಮಾರ್ ಅವರು ಪತ್ನಿ ಮತ್ತು ಮಗಳ ಜೊತೆಗೆ ಸದಾಶಿವನಗರ ಮನೆಯಿಂದ ನೇರವಾಗಿ ರ‍್ಯಾಡಿಸನ್‌ ಬ್ಲೂ ಹೋಟೆಲ್‍ಗೆ ಆಗಮಿಸಿದ್ದಾರೆ. ಅಲ್ಲಿಯೇ ಇಂದು ಇದ್ದು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.