Tag: ಇಟಲಿ

  • 162 ರಾಷ್ಟ್ರ, ಪ್ರಾಂತ್ಯಗಳಿಗೆ ಹರಡಿದ ಮಹಾಮಾರಿ ಕೊರೊನಾ – ಭಾರತದಲ್ಲಿ 114 ಮಂದಿಗೆ ಸೋಂಕು

    162 ರಾಷ್ಟ್ರ, ಪ್ರಾಂತ್ಯಗಳಿಗೆ ಹರಡಿದ ಮಹಾಮಾರಿ ಕೊರೊನಾ – ಭಾರತದಲ್ಲಿ 114 ಮಂದಿಗೆ ಸೋಂಕು

    ನವದೆಹಲಿ: ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 162 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗ ವಿಶ್ವದೆಲ್ಲೆಡೆ ಹರುಡುತ್ತಿದ್ದು ತನ್ನ ಕರಾಳತೆಯನ್ನು ಪ್ರದರ್ಶಿಸುತ್ತಿದೆ. ಈವರೆಗೆ ಸೋಂಕಿಗೆ 7,171 ಮಂದಿ ಬಲಿಯಾಗಿದ್ದಾರೆ.

    ಒಟ್ಟು 162 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 1,82,605 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,226 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 7,171 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 79,881 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ 95,546 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ 6,163 ಮಂದಿ ಸ್ಥಿತಿ ಚಿಂತಾಜನಕವಾಗಿದೆ.

    ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 129 ಮಂದಿ ತುತ್ತಾಗಿದ್ದು, 13 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 114 ಮಂದಿ ಕೊರೊನಾದಿಂದ ಬಳಳುತ್ತಿದ್ದಾರೆ. ಈಗಾಗಲೇ ಕೊರೊನಾಗೆ ಕರ್ನಾಟಕದ ಕಲಬುರ್ಗಿಯ ವೃದ್ಧರೊಬ್ಬರು ಹಾಗೂ ದೆಹಲಿಯ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಕರ್ನಾಟದಲ್ಲಿ ಒಟ್ಟು 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 39 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

    ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಈ ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿಯನ್ನು ದಾಟಿದೆ.

    1. ಚೀನಾ – ಈವರೆಗೆ ಕೊರೊನಾ ಸೋಂಕಿಗೆ 80,881 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 68,688 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,226 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 8,967 ಮಂದಿ ಕೊರೊನಾದಿಂದ ಬಳಲುತ್ತಿದ್ದು, 3,226 ರೋಗಿಗಳ ಸ್ಥಿತಿ ಗಂಭಿರವಾಗಿದೆ.

    2. ಇಟಲಿ – ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 27,980 ಮಂದಿ ತುತ್ತಾಗಿದ್ದು, ಅವರಲ್ಲಿ 2,749 ಮಂದಿ ಚೇತರಿಸಿಕೊಂಡಿದ್ದಾರೆ. 2158 ಮಂದಿ ಮೃತಪಟ್ಟಿದ್ದು, ಪ್ರಸ್ತುತ 23,073 ಮಂದಿ ಕೊರೊನಾದಿಂದ ಬಳಲುತ್ತಿದ್ದರೆ, 1,851 ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ.

    3. ಇರಾನ್ – 14,991 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 4,996 ಮಂದಿ ಸೊಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 9,142 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದು, 853 ಸೋಂಕಿತರು ಸಾವನ್ನಪ್ಪಿದ್ದಾರೆ.

    4. ಸ್ಪೇನ್ – 9,942 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ 530 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 9,070 ರೋಗಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 342 ಮಂದಿ ಬಲಿಯಾಗಿದ್ದಾರೆ.

    5. ದಕ್ಷಿಣ ಕೊರಿಯಾ – 8,320 ಮಂದಿಗೆ ಸೋಂಕು ತಗುಲಿತ್ತು. ಆದರೆ ಅವರಲ್ಲಿ 1,401 ರೋಗಿಗಳು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. 81 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಪ್ರಸ್ತುತ 6,838 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

    6. ಜರ್ಮನಿ – 7,272 ಮಂದಿಯಲ್ಲಿ ಕಾಣಿಕೊಂಡ ಕೊರೊನಾ ಸೋಂಕಿನಿಂದ 67 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸದ್ಯ 17 ಮಂದಿ ಬಲಿಯಾಗಿದ್ದು, ಪ್ರಸ್ತುತ 7,188 ರೋಗಿಗಳು ಕೊರೊನಾದಿಂದ ನರಳುತ್ತಿದ್ದಾರೆ.

    7. ಫ್ರಾನ್ಸ್ – 6,633 ಮಂದಿ ಕೊರೊನಾಗೆ ತುತ್ತಾಗಿದ್ದರು. ಅವರಲ್ಲಿ 12 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 6,473 ಮಂದಿ ಸೋಂಕಿನಿಂದ ಬಳಲುತ್ತಿದ್ದು, 148 ಮಂದಿ ಜೀವ ಕಳೆದುಕೊಂಡಿದ್ದಾರೆ.

    8. ಅಮೆರಿಕ – ಯುಎಸ್‍ಎನಲ್ಲಿ ಕೊರೊನಾಗೆ 91 ಮಂದಿ ಬಲಿಯಾಗಿದ್ದಾರೆ. 4,704 ಮಂದಿಯಲ್ಲಿ ಕಾಣಿಸಿಕೊಂಡ ಸೋಂಕಿನಿಂದ 74 ಮಂದಿ ಗುಣಮುಖರಾಗಿದ್ದಾರೆ. ಸದ್ಯ 4,539 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದಾರೆ.

    9. ಪಾಕಿಸ್ತಾನ – ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿಯೂ ಕೊರೊನಾ ವೈರಸ್ ಹರಡಿದೆ. ಈವರೆಗೆ 184 ಮಂದಿ ಸೋಂಕಿಗೆ ತುತ್ತಾಗಿದ್ದು, ಇಬ್ಬರು ಚೇತರಿಸಿಕೊಂಡಿದ್ದಾರೆ.

  • ಸಹೋದರಿ ಸಾವನ್ನಪ್ಪಿದ್ರೂ ಶವ ತೆಗೆದುಕೊಂಡು ಹೋಗಲು ಯಾರೂ ಇಲ್ಲ: ಯುವಕ ಕಣ್ಣೀರು

    ಸಹೋದರಿ ಸಾವನ್ನಪ್ಪಿದ್ರೂ ಶವ ತೆಗೆದುಕೊಂಡು ಹೋಗಲು ಯಾರೂ ಇಲ್ಲ: ಯುವಕ ಕಣ್ಣೀರು

    – ಎರಡು ದಿನಗಳಿಂದ ಶವದೊಂದಿಗೆ ಇದ್ದೇನೆ
    – ವೈದ್ಯರು, ಕೆಲಸಗಾರರು ಯಾರೂ ಸಹಾಯ ಮಾಡ್ತಿಲ್ಲ
    – ಫೇಸ್ಬುಕ್ ವಿಡಿಯೋ ಮೂಲಕ ಯುವಕ ಅಳಲು

    ರೋಮ್: ಕೊರೊನಾ ವೈರಸ್ ತಾಂಡವ ವಿಶ್ವಾದ್ಯಂತ ಜೋರಾಗಿದ್ದು, ಇಟಲಿಯಲ್ಲಿ ಸಂಪೂರ್ಣ ಬಂದ್ ಮಾಡಿದ್ದರೂ 1,441 ಜನ ಸಾವನ್ನಪ್ಪಿದ್ದಾರೆ. 21 ಸಾವಿರಕ್ಕೂ ಅಧಿಕ ಜನ ಸೋಂಕಿಗೊಳಗಾಗಿದ್ದಾರೆ. ಈ ಮಧ್ಯೆ ಯುವಕನೊಬ್ಬ ತನ್ನ ತಂಗಿ ಸಾವನ್ನಪ್ಪಿ ಎರಡು ದಿನ ಆಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಫೇಸ್ಬುಕ್‍ನಲ್ಲಿ ವಿಡಿಯೋ ಮಾಡಿದ್ದಾನೆ. ಆದರೆ ಇಟಲಿಯನ್ನು ಸಂಪೂರ್ಣ ಬಂದ್ ಮಾಡಿರುವ ಹಿನ್ನೆಲೆ ಶವ ತೆಗೆದುಕೊಂಡು ಹೋಗಲು ಸಹ ಯಾರೂ ಇಲ್ಲದಂತಾಗಿದೆ.

    ಇಟಲಿಯ ನೇಪಲ್ಸ್ ನ ದಕ್ಷಿಣ ನಗರದ ನಿವಾಸಿ ಲೂಕಾ ಫ್ರಾಂಜೀಸ್ ಈ ವಿಡಿಯೋ ಪೋಸ್ಟ್ ಮಾಡಿದ್ದು, ಫುಲ್ ವೈರಲ್ ಆಗಿದೆ. ‘ನನ್ನ ಸಹೋದರಿ ಕೊರೊನಾ ವೈರಸ್ ನಿಂದಾಗಿ ಮೃತಪಟ್ಟಿದ್ದಾಳೆ. ಕಳೆದೆರಡು ದಿನಗಳಿಂದ ಆಕೆಯ ಶವದೊಂದಿಗೆ ಮನೆಯಲ್ಲಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನು ಒಬ್ಬನೇ ಇರುವುದರಿಂದ ಆಕೆಯ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಟಲಿ ಸರ್ಕಾರದ ಅಧಿಕಾರಿಗಳು ಬಂದು ಆಕೆಯ ದೇಹವನ್ನು ಅಂತ್ಯಸಂಸ್ಕಾರ ಮಾಡಲು ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾನೆ.

    ಯುವಕನ ಸಹೋದರಿ ತೇರೆಸಾ ಫ್ರಾಂಜೀಸ್(47)ಳಲ್ಲಿ ಕಳೆದ ವಾರ ಕೊರೊನಾ ವೈರಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು. ನಂತರ ಅವಳ ಆರೋಗ್ಯ ಬಹುಬೇಗ ಹದಗೆಟ್ಟಿತು. ಹೀಗಾಗಿ ವೈದ್ಯಕೀಯ ಪರೀಕ್ಷೆ ಮಾಡಿಸುವುದಕ್ಕೂ ಮೊದಲೇ ತೀರಿಕೊಂಡಳು. ಅಲ್ಲದೆ ತೇರೆಸಾಗೆ ಮೂರ್ಛೆ ರೋಗ ಸಹ ಇತ್ತು. ಹೀಗಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಯುವಕ ತಿಳಿಸಿದ್ದಾರೆ.

    ಇಟಲಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದು, ಹೀಗಾಗಿ ಯಾರೂ ಹೊರಗೆ ಬರದಂತಹ ವಾತಾವರಣ ನಿರ್ಮಾಣವಾಗಿದೆ. ಕೆಲಸಗಾರರು ಹಾಗೂ ಆಸ್ಪತ್ರೆಯವರು ಸಹ ಶವವನ್ನು ತೆಗೆಯಲು ಮುಂದಾಗುತ್ತಿಲ್ಲ. ಹೀಗಾಗಿ ವಿಡಿಯೋ ಮೂಲಕ ಯುವಕ ತನ್ನ ಅಳಲು ತೋಡಿಕೊಂಡಿದ್ದಾನೆ. ಫಿಟ್ನೆಸ್ ತರಬೇತುದಾರನಾಗಿರುವ ಫ್ರಾಂಜೀಸ್ ತನ್ನ ಸಹೋದರಿಯ ದೇಹ ತನ್ನ ಹಿಂದಿರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾನೆ.

    ನಾವು ಹಾಳಾಗಿದ್ದೇವೆ, ಇಟಲಿ ನಮ್ಮನ್ನು ಕಡೆಗಣಿಸಿದೆ. ನಾವು ಒಟ್ಟಿಗೆ ದೃಢವಾಗಿರಬೇಕಿದೆ, ದಯವಿಟ್ಟು ಈ ವಿಡಿಯೋವನ್ನು ಎಲ್ಲೆಡೆ ಹಂಚಿಕೊಳ್ಳಿ ಎಂದು ಫ್ರಾಂಜೀಸ್ ಮನವಿ ಮಾಡಿದ್ದಾನೆ. ಅಂತಿಮವಾಗಿ 36 ಗಂಟೆಗಳ ನಂತರ ರಕ್ಷಣಾತ್ಮಕ ಬಟ್ಟೆ ಧರಿಸಿದ ಕೆಲಸಗಾರರು ಆಗಮಿಸಿ, ದೇಹವನ್ನು ನೇರವಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ಮಾಡಿದ್ದಾರೆ. ಈ ವೇಳೆ ಮನೆಯವರಾರೂ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿಲ್ಲ. ಏಕೆಂದರೆ ಅವರಿಗೂ ಸೋಂಕು ತಗುಲಬಹುದೆಂಬ ಭಯವಿತ್ತು.

    ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಈವರೆಗೆ 5 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 1.56 ಲಕ್ಷಕ್ಕೂ ಅಧಿಕ ಜನರಲ್ಲಿ ವೈರಸ್ ಕಾಣಿಸಿಕೊಂಡಿದೆ. ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಇಟಲಿ, ಡೆನ್ಮಾರ್ಕ್ ಹಾಗೂ ಕುವೈತ್ ಸಂಪೂರ್ಣ ಬಂದ್ ಮಾಡಲಾಗಿದೆ.

  • ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಶುಕ್ರವಾರ ಒಂದೇ ದಿನ 250 ಮಂದಿ ಬಲಿ

    ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಶುಕ್ರವಾರ ಒಂದೇ ದಿನ 250 ಮಂದಿ ಬಲಿ

    ರೋಮ್: ಇಟಲಿಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದ್ದು ಶುಕ್ರವಾರ ಒಂದೇ ದಿನ 250 ಮಂದಿ ಮೃತಪಟ್ಟಿದ್ದಾರೆ.

    ಯುರೋಪ್ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಕೊರೊನಾಗೆ ಇಟಲಿಯಲ್ಲಿ ಬಲಿಯಾಗುತ್ತಿದ್ದಾರೆ. ಸಾವಿನ ಸಂಖ್ಯೆ 1,266ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ ಶೇ.17 ಏರಿಕೆಯಾಗಿದ್ದು 15,113 ಇದ್ದ ಪೀಡಿತರ ಸಂಖ್ಯೆ ಈಗ 17,660ಕ್ಕೆ ತಲುಪಿದೆ.

    ಕೊರೊನಾ ಕೇಂದ್ರ ಸ್ಥಾನ ಈಗ ಯುರೋಪ್ ಆಗಿದೆ ಎಂದು ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಇಟಲಿಯಲ್ಲಿ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿದ್ದು ರೋಗಿಗಳು ಚಿಕಿತ್ಸೆ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

    ಆಹಾರ ಮತ್ತು ಫಾರ್ಮಸಿ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಿದ್ದು ಎಲ್ಲ ಹೋಟೆಲ್, ಬಾರ್ ಸೇರಿದಂತೆ ಎಲ್ಲ ಅಂಗಡಿಗಳು ಮಾರ್ಚ್ 25ರವರೆಗೆ ಮುಚ್ಚಬೇಕು ಎಂದು ಸರ್ಕಾರ ಆದೇಶಿಸಿದೆ. ಚೀನಾ ನಂತರ ಕೊರೊನಾಗೆ ಅತಿ ಹೆಚ್ಚು ಮಂದಿ ಇಟಲಿಯಲ್ಲಿ ಸಾವನ್ನಪ್ಪಿದ್ದಾರೆ.

    https://twitter.com/PrisonPlanet/status/1238233411808120833

  • 127 ರಾಷ್ಟ್ರ, ಪ್ರಾಂತ್ಯಗಳ ಮೇಲೆ ಕೊರೊನಾ ಕರಿ ನೆರಳು – ಸೋಂಕಿಗೆ ಬಲಿಯಾದವರೆಷ್ಟು? ಚೇತರಿಸಿಕೊಂಡವರೆಷ್ಟು?

    127 ರಾಷ್ಟ್ರ, ಪ್ರಾಂತ್ಯಗಳ ಮೇಲೆ ಕೊರೊನಾ ಕರಿ ನೆರಳು – ಸೋಂಕಿಗೆ ಬಲಿಯಾದವರೆಷ್ಟು? ಚೇತರಿಸಿಕೊಂಡವರೆಷ್ಟು?

    ನವದೆಹಲಿ: ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 127 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗ ವಿಶ್ವದೆಲ್ಲೆಡೆ ಹರುಡುತ್ತಿದ್ದು, ಈವರೆಗೆ 4,986 ಮಂದಿಯನ್ನು ಬಲಿಪಡೆದಿದೆ. ಹೀಗೆ ಎಲ್ಲೆಡೆ ತನ್ನ ಕರಿನೆರಳು ಬೀರುತ್ತಿರುವ ಕೊರೊನಾ ಜನರಲ್ಲಿ ಭಯ ಹುಟ್ಟಿಸಿದೆ.

    ಒಟ್ಟು 127 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 1,34,769 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,117 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 4,983 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 70,388 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ 59,398 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ 5,757 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಬೀ ಕೇರ್ ಫುಲ್: ಕೊರೊನಾ ಲಕ್ಷಣ ಏನು? ಹೇಗೆ ಹರಡುತ್ತದೆ? ಮುಂಜಾಗೃತ ಕ್ರಮ ಏನು?

    ಎಷ್ಟು ಸಾವು? ಎಷ್ಟು ಚೇತರಿಕೆ?
    ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಈ ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿಯನ್ನು ದಾಟಿದೆ.

    1. ಚೀನಾ – ಈವರೆಗೆ ಕೊರೊನಾ ಸೋಂಕಿಗೆ 80,814 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 64,118 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,117 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 13,519 ಮಂದಿ ಕೊರೊನಾದಿಂದ ಬಳಲುತ್ತಿದ್ದು, 4,020 ರೋಗಿಗಳ ಸ್ಥಿತಿ ಗಂಭಿರವಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್ – 1 ರಿಂದ 6ನೇ ತರಗತಿವರೆಗಿನ ಪರೀಕ್ಷೆ ರದ್ದು

    2. ಇಟಲಿ – ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 15,113 ಮಂದಿ ತುತ್ತಾಗಿದ್ದು, ಅವರಲ್ಲಿ 1,258 ಮಂದಿ ಚೇತರಿಸಿಕೊಂಡಿದ್ದಾರೆ. 1,016 ಮಂದಿ ಮೃತಪಟ್ಟಿದ್ದು, ಪ್ರಸ್ತುತ 12,839 ಮಂದಿ ಕೊರೊನಾದಿಂದ ಬಳಲುತ್ತಿದ್ದರೆ ಹಾಗೂ 1,153 ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ.

    3. ಇರಾನ್ – 10,075 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 3,276 ಮಂದಿ ಸೊಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 6,370 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದು, 429 ಸೋಂಕಿತರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ, ಚೀನಾದ ಹುಬೆ ಪ್ರಾಂತ್ಯದಲ್ಲಿ ಸಿಂಗಲ್ ಡಿಜಿಟ್‍ಗೆ ಕೊರೊನಾ ಕೇಸ್ ಇಳಿಕೆ

    4. ದಕ್ಷಿಣ ಕೊರಿಯಾ – 7,979 ಮಂದಿಗೆ ಸೋಂಕು ತಗುಲಿತ್ತು. ಆದರೆ ಅವರಲ್ಲಿ 510 ರೋಗಿಗಳು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. 67 ಮಂದಿ ಕೊರೊನಾಗೆ ಬಲಿಯಾಗಿದ್ದರೆ, 93 ಮಂದಿ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ. ಪ್ರಸ್ತುತ 7,402 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

    5. ಸ್ಪೇನ್ – 3,146 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ 189 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 2,871 ರೋಗಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 190 ಮಂದಿ ಸ್ಥಿತಿ ಗಂಭಿರವಾಗಿದೆ ಹಾಗೂ 86 ಮಂದಿ ಬಲಿಯಾಗಿದ್ದಾರೆ. ಇದನ್ನೂ ಓದಿ: ಡೆಡ್ಲಿ ಕೊರೊನಾಗೂ ‘ಎಣ್ಣೆ’ನೇ ಮದ್ದು- ಕೈಗೂ, ಹೊಟ್ಟೆಗೂ ಎಣ್ಣೆ ಬಿದ್ರೆ ಫುಲ್ ಸೇಫ್ ಅಂತೆ!

    6. ಫ್ರಾನ್ಸ್ – 2,876 ಮಂದಿ ಕೊರೊನಾಗೆ ತುತ್ತಾಗಿದ್ದರು. ಅವರಲ್ಲಿ 12 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 129 ರೋಗಿಗಳ ಸ್ಥಿತಿ ಗಂಭಿರವಾಗಿದೆ. ಸದ್ಯ 2,803 ಮಂದಿ ಸೋಂಕಿನಿಂದ ಬಳಲುತ್ತಿದ್ದು, 61 ಮಂದಿ ಜೀವ ಕಳೆದುಕೊಂಡಿದ್ದಾರೆ.

    7. ಜರ್ಮನಿ – 2,745 ಮಂದಿಯಲ್ಲಿ ಕಾಣಿಕೊಂಡ ಕೊರೊನಾ ಸೋಂಕಿನಿಂದ 25 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸದ್ಯ 6 ಮಂದಿ ಬಲಿಯಾಗಿದ್ದು, 9 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪ್ರಸ್ತುತ 2,714 ರೋಗಿಗಳು ಕೊರೊನಾದಿಂದ ಬಳಲುತ್ತಿದ್ದಾರೆ.

    8. ಅಮೆರಿಕ – ಯುಎಸ್‍ಎನಲ್ಲಿ ಕೊರೊನಾಗೆ 41 ಮಂದಿ ಬಲಿಯಾಗಿದ್ದಾರೆ. 1,762 ಮಂದಿಯಲ್ಲಿ ಕಾಣಿಸಿಕೊಂಡ ಸೋಂಕಿನಿಂದ 31 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1,690 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದರೆ, 10 ಮಂದಿ ಸ್ಥಿತಿ ಗಂಭಿರವಾಗಿದೆ.

    9. ಭಾರತ – ದೇಶಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 75 ಮಂದಿ ತುತ್ತಾಗಿದ್ದು, 4 ಮಂದಿ ಗುಣಮುಖರಾಗಿದ್ದಾರೆ. ಈಗಾಗಲೇ ಕೊರೊನಾಗೆ ಕರ್ನಾಟಕದ ಕಲಬುರ್ಗಿಯ ವೃದ್ಧರೊಬ್ಬರು ಬಲಿಯಾಗಿದ್ದಾರೆ.

    10. ಪಾಕಿಸ್ತಾನ – ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿಯೂ ಕೊರೊನಾ ವೈರಸ್ ಹರಡಿದೆ. ಈವರೆಗೆ 21 ಮಂದಿ ಸೋಂಕಿಗೆ ತುತ್ತಾಗಿದ್ದು, ಇಬ್ಬರು ಚೇತರಿಸಿಕೊಂಡಿದ್ದಾರೆ.

    ಇತ್ತ ಕೊರೊನಾ ಪೀಡಿತ ದೇಶಗಳಲ್ಲಿ ಇರುವ ಭಾರತೀಯರನ್ನು ರಾಷ್ಟ್ರಕ್ಕೆ ವಾಪಸ್ ಕರೆತರುವ ಕಾರ್ಯ ಕೂಡ ಭರದಿಂದ ನಡೆಯುತ್ತಿದ್ದು, ಹೀಗೆ ಭಾರತಕ್ಕೆ ಬಂದವರ ಮೇಲೆ ನಿಗಾವಹಿಸಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆಯನ್ನು ಕೂಡ ಘೋಷಿಸಲಾಗಿದೆ. ಹಾಗೆಯೇ ಐಟಿ ಕಂಪನಿಗಳ ಸಾಕಷ್ಟು ಮಂದಿ ಉದ್ಯೋಗಿಗಳು ಕೊರೊನಾ ಭೀತಿಯಿಂದ ‘ವರ್ಕ್ ಫ್ರಮ್ ಹೋಮ್’ ವ್ಯವಸ್ಥೆ ಮೊರೆಹೋಗುತ್ತಿದ್ದು, ಕಂಪನಿ, ಆಫೀಸ್, ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

  • ಚಂದನ್-ನಿವೇದಿತಾರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ – ಡಿಸಿಗೆ ಮನವಿ

    ಚಂದನ್-ನಿವೇದಿತಾರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ – ಡಿಸಿಗೆ ಮನವಿ

    ಮೈಸೂರು: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‍ಗೂ ಕೊರೊನಾ ಬಿಸಿ ತಟ್ಟುತ್ತಿದೆ. ಹನಿಮೂನ್ ಮುಗಿಸಿ ಮೈಸೂರಿಗೆ ಆಗಮಿಸುವ ನವದಂಪತಿಗಳಿಗೆ ಕಡ್ಡಾಯ ತಪಾಸಣೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾದ ಅಧ್ಯಕ್ಷ ರಫೀಕ್ ಅಲಿ ಮನವಿ ಸಲ್ಲಿಸಿದ್ದಾರೆ.

    ಮೈಸೂರಿನಲ್ಲಿ ಈವರೆಗೆ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ನಂತರ ಯೂರೋಪ್‍ಗೆ ಹನಿಮೂನ್ ಹೋಗಿದ್ದಾರೆ. ಹನಿಮೂನ್ ಮುಗಿಸಿ ಮೈಸೂರಿಗೆ ಆಗಮಿಸುವ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಎಂಬ ಕಾರಣದಿಂದ ಅವರನ್ನು ತಪಾಸಣೆ ಮಾಡದೇ ನಿರ್ಲಕ್ಷ್ಯಿಸಬಾರದು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಎಂದು ಮನವಿ ಮಾಡಲಾಗಿದೆ.

    ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅವರನ್ನು ತಪಾಸಣೆಗೆ ಒಳಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಚಂದನ್ ಶೆಟ್ಟಿ – ನಿವೇದಿತಾ ಗೌಡ ಮದುವೆ ನಂತರ ಯೂರೋಪ್‍ಗೆ ಪ್ರವಾಸ ಕೈಗೊಂಡಿದ್ದಾರೆ. ಯೂರೋಪ್‍ನ ಇಟಲಿಯಲ್ಲಿ ಈಗಾಗಲೇ ಶೇ.30 ರಷ್ಟು ಭಾಗ ಕೊರೊನಾ ಆವರಿಸಿದೆ. ಇದುವರೆಗೂ ಇಟಲಿಯಲ್ಲಿ 12,462 ಕೊರೊನಾ ಪಾಸಿಟಿವ್ ಕೇಸ್‍ಗಳು ಬೆಳಕಿಗೆ ಬಂದಿದ್ದು, 827 ಜನ ಮೃತಪಟ್ಟಿದ್ದಾರೆ.

  • ಇಟಲಿಯಿಂದ ಕನ್ನಡಿಗರನ್ನು ಕರೆತರಲು ಸ್ಪೆಷಲ್ ಫ್ಲೈಟ್ ವ್ಯವಸ್ಥೆ: ಅಶ್ವತ್ಥನಾರಾಯಣ

    ಇಟಲಿಯಿಂದ ಕನ್ನಡಿಗರನ್ನು ಕರೆತರಲು ಸ್ಪೆಷಲ್ ಫ್ಲೈಟ್ ವ್ಯವಸ್ಥೆ: ಅಶ್ವತ್ಥನಾರಾಯಣ

    ಬೆಂಗಳೂರು: ಇಟಲಿಯಲ್ಲಿ ರಾಜ್ಯಕ್ಕೆ ಮರಳಲಾಗದೇ ಸಿಕ್ಕಿಕೊಂಡಿರುವ ಕನ್ನಡಿಗರ ಕಷ್ಟಕ್ಕೆ ರಾಜ್ಯ ಸರ್ಕಾರ ಮಿಡಿದಿದೆ. ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಡ ಹಾಕಿ ಕಾರ್ಯಸಾಧನೆ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಇಟಲಿಗೆ ವಿಶೇಷ ವಿಮಾನ ಹೋಗುತ್ತಿದ್ದು ಶೀಘ್ರದಲ್ಲೇ ಕನ್ನಡಿಗರು ತವರಿಗೆ ಮರಳಲಿದ್ದಾರೆ.

    ಈ ಸಂಬಂಧ ವಿಧಾನಸೌಧದಲ್ಲಿ ಪಬ್ಲಿಕ್ ಟಿವಿ ಜೊತೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾತನಾಡಿ, ಇಟಲಿಯಲ್ಲಿ ಕನ್ನಡಿಗರ ಸಮಸ್ಯೆ ಗೊತ್ತಾದ ತಕ್ಷಣ ಕೇಂದ್ರದ ಗಮನಕ್ಕೆ ನಾವು ತಂದಿದ್ದೆವು. ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ವೈದ್ಯರು ಮತ್ತು ಅಧಿಕಾರಿಗಳ ತಂಡ ಇಟಲಿಗೆ ಹೋಗಿದೆ. ಇಟಲಿಯಲ್ಲಿರುವ ಕನ್ನಡಿಗರ ವೈದ್ಯಕೀಯ ತಪಾಸಣೆ ಕೂಡಾ ನಡೆಸಲಾಗುತ್ತಿದೆ ಎಂದರು. ಇದನ್ನು ಓದಿ: 154 ಮಂದಿ ಉದ್ಯೋಗಿಗಳಿರುವ ಕಚೇರಿಗೆ ಹಾಜರಾಗಿ ತೆರಳಿದ್ದ ಕೊರೊನಾ ಪೀಡಿತ

    ಇಟಲಿಯಿಂದ ಕನ್ನಡಿಗರನ್ನು ಕರೆತರಲು ವಿಶೇಷ ವಿಮಾನ ಹೋಗಿದೆ. ವಿಶೇಷ ವಿಮಾನದಲ್ಲಿ ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರಲಾಗುತ್ತದೆ. ಅವರ ಸಂಬಂಧಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಇದೇ ವೇಳೆ ಅಶ್ವತ್ಥನಾರಾಯಣ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಇದನ್ನು ಓದಿ: ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    ಇತರೇ ಕರೊನಾ ಪೀಡಿತ ದೇಶಗಳಿಗೂ ನಮ್ಮ ವೈದ್ಯ ಮತ್ತು ಅಧಿಕಾರಿಗಳ ತಂಡ ಕಳುಹಿಸಿ ಮಾಹಿತಿ ಪಡೆಯುವ ಕೆಲಸವನ್ನೂ ಮಾಡುತ್ತೇವೆ. ಎಲ್ಲೆಲ್ಲಿ ಕನ್ನಡಿಗರು ಇದ್ದಾರೋ ಅವರ ವೈದ್ಯಕೀಯ ತಪಾಸಣೆಗೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

  • ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    – ಪಬ್ಲಿಕ್ ಟಿವಿ ಜೊತೆ ನೋವು ತೋಡಿಕೊಂಡ ಪ್ರಯಾಣಿಕರು
    – ಕೊರೊನಾಗೆ ಇಟಲಿ ಬಂದ್
    – ಪ್ರತಿ ದಿನ ನಿಯಮ ಬದಲಾಗುತ್ತಿದೆ

    ರೋಮ್: ಕೊರೊನಾ ದಾಳಿಗೆ ಇಟಲಿ ಸಂಪೂರ್ಣ ಬಂದ್ ಆಗಿದ್ದು, ರೋಮ್ ಏರ್‌ಪೋರ್ಟ್‌ನಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ಪಬ್ಲಿಕ್ ಟಿವಿ ಜೊತೆ ಮಾತನಾಡುವ ಮೂಲಕ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

    ನಿರುಪಮಾ ಗೌಡ ಎಂಬವರು ಮಾತನಾಡಿ, “ನಾವೆಲ್ಲಾ ಇಲ್ಲಿ ಸಿಲುಚಿನಿ ಏರ್‌ಪೋರ್ಟ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ಭಾರತದಿಂದ ಫ್ಲೈಟ್ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದೇವೆ. ಯಾವಾಗ ಬರುತ್ತೆ ಎನ್ನುವ ಮಾಹಿತಿಯೇ ಇನ್ನು ಸಿಕ್ಕಿಲ್ಲ. ಬುಧವಾರ ಸಂಜೆಯಿಂದ ನಾವು ಕಾಯುತ್ತಿದ್ದೇವೆ. ನಾವು ಏರ್‍ ಇಂಡಿಯಾ ಫ್ಲೈಟ್ ಬುಕ್ ಮಾಡಿದ್ದೇವೆ. ಆದರೆ ಇದುವರೆಗೆ ಯಾವುದೇ ಅಪ್ಡೇಟ್ ಬಂದಿಲ್ಲ. ಚಿಕ್ಕಪುಟ್ಟ ದೇಶವಾದ ಶ್ರೀಲಂಕಾದವರನ್ನು ಹಾಗೂ ಬೇರೆ ದೇಶದವರನ್ನು ಕರೆಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ದೇಶದಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ನಾವು ಈವರೆಗೆ ಆರೋಗ್ಯವಾಗಿದ್ದೇವೆ. ಇನ್ನು 2 ದಿನ ಇಲ್ಲೇ ಇದ್ದರೆ ಆರೋಗ್ಯ ಸಮಸ್ಯೆ ಎದುರಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಮದನ್ ಗೌಡ ಎಂಬವರು,”ನಾನು ಸೋಮವಾರ ಫ್ಲೈಟ್ ಬುಕ್ ಮಾಡಿದ್ದೆ. ಏರ್ ಇಂಡಿಯಾ ವೆಬ್‍ಸೈಟ್‍ನಲ್ಲಿ ಯಾವುದೇ ದಾಖಲೆ ಕಡ್ಡಾಯ, ನೀವು ಕೊಡಲೇಬೇಕು ಎಂದು ಕೊಟ್ಟಿರಲಿಲ್ಲ. ನಾವು ರಾಯಭಾರ ಜೊತೆ ಮಾತನಾಡಿದ್ದೇವೆ. ಇಟಲಿಯಲ್ಲಿ ಹೊರಗಡೆ ಬರುವುದಕ್ಕೆ ಜನರು ಹೆದರುತ್ತಿದ್ದಾರೆ. ಇಟಲಿ ಸರ್ಕಾರ ತುಂಬಾ ಕಠಿಣವಾದ ರೂಲ್ಸ್ ತರುತ್ತಿದೆ. ಪ್ರತಿದಿನ ರೂಲ್ಸ್ ಚೇಂಜ್ ಆಗುತ್ತಿದೆ. ವಿಮಾನ ನಿಲ್ದಾಣದಲ್ಲಿ ತುಂಬಾ ರಿಸ್ಕ್ ಇದೆ. ಇಲ್ಲಿ ಫ್ಲೈಟ್ ಟೈಮ್ಮಿಂಗ್ ಚೇಂಜ್ ಮಾಡುತ್ತಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸೋಂಕು ಹರಡುವ ಸಾಧ್ಯತೆ ಜಾಸ್ತಿ ಇದೆ. ಹೊರಗಡನೇ ಹೋಗಬಾರದು ಎನ್ನುವ ಈ ಟೈಮಲ್ಲಿ ಏನೂ ಮಾಹಿತಿ ಕೊಡದೇ ಏರ್‌ಪೋರ್ಟ್‌ನಲ್ಲಿ ಕೂಡಿ ಹಾಕಿದ್ರೆ ಎಷ್ಟು ಜನರಿಗೆ ಸೋಂಕು ಹರಡಬಹುದು. ನೀವೇ ನಿಮ್ಮ ಪ್ರಜೆಗಳನ್ನು ರಿಸ್ಕ್ ಗೆ ಸಿಲುಕಿಸುತ್ತಿದ್ದೀರ. ಯಾರಿಗಾದರೂ ಸೋಂಕು ತಗುಲಿದರೆ ಇದಕ್ಕೆಲ್ಲಾ ನೇರ ಕಾರಣ ಭಾರತ ಸರ್ಕಾರ ಹಾಗೂ ಏರ್ ಇಂಡಿಯಾನೇ ಎಂದು ಆಕ್ರೋಶ ಹೊರಹಾಕಿದರು.

    ಇದೇ ವೇಳೆ ಮತ್ತೊಬ್ಬ ವ್ಯಕ್ತಿ,”ಏರ್ ಇಂಡಿಯಾ ವಿಮಾನದಲ್ಲಿ ನಮ್ಮನ್ನು ಕರೆದೊಯ್ದಿಲ್ಲ. ನಾವು ವಾರದ ಮುಂಚೆಯೇ ಟಿಕೆಟ್ ಬುಕ್ ಮಾಡಿದ್ದೀವಿ. ಆದರೆ ಇಲ್ಲಿ ಈಗ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕೆಂದು ಹೇಳುತ್ತಿದ್ದಾರೆ. ಸರ್ಟಿಫಿಕೇಟ್ ನೀಡಿದ ಮೇಲೆ ಪರಿಶೀಲಿಸಿ ನಿಮ್ಮ ಪ್ರಯಾಣವನ್ನು ರೀಶೆಡ್ಯೂಲ್ ಮಾಡುತ್ತೇವೆ ಎನ್ನುತ್ತಿದ್ದಾರೆ. ನಮಗೆ ಮಾಹಿತಿ ನೀಡಲೂ ಸಹ ಇಲ್ಲಿ ಯಾರೂ ಇಲ್ಲ. ನಾವು ಇಲ್ಲಿ ಸಿಲುಕಿಕೊಂಡಿದ್ದೇವೆ. ದಯವಿಟ್ಟು ನಮ್ಮನ್ನು ಇಲ್ಲಿಂದ ರಕ್ಷಿಸಬೇಕೆಂದು ಮನವಿ ಮಾಡುತ್ತೇನೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

     

     

     

     

     

     

     

     

    ಡಿಸಿಎಂ ಅಶ್ವಥ್ ನಾರಾಯಣ ತನ್ನ ಟ್ವಿಟ್ಟರಿನಲ್ಲಿ, ಇಟಲಿ ಸೇರಿದಂತೆ ಕೊರೊನಾ ಪೀಡಿತ ಹೊರದೇಶಗಳಲ್ಲಿರುವ ಕನ್ನಡಿಗರನ್ನು ಕರೆತರಲು ನಮ್ಮ ಸರ್ಕಾರ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ಜೊತೆಗೆ ಸಹಕರಿಸಿ ಕಾರ್ಯೋನ್ಮುಖವಾಗಿದೆ. ತಜ್ಞ ವೈದ್ಯರನ್ನು ಕರೆದುಕೊಂಡು ಹೋಗಿ ಅಲ್ಲಿಯೇ ತೀವ್ರ ತಪಾಸಣೆಗೆ ಒಳಪಡಿಸಿ ಸುರಕ್ಷತೆಯಿಂದ ಅವರನ್ನು ಇಲ್ಲಿಗೆ ವಾಪಸ್ ಕರೆತರಲಾಗುವುದು ಎಂದು ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ.

  • ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ – ವುಹಾನ್‍ನಲ್ಲಿ ವೈದ್ಯರ ಸಂಭ್ರಮ

    ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ – ವುಹಾನ್‍ನಲ್ಲಿ ವೈದ್ಯರ ಸಂಭ್ರಮ

    – ತಾತ್ಕಾಲಿಕವಾಗಿ ತೆರೆದಿದ್ದ ಆಸ್ಪತ್ರೆ ಬಂದ್
    – ಇಡೀ ಇಟಲಿ ದೇಶ ಸ್ತಬ್ಧ

    ಬೀಜಿಂಗ್/ ರೋಮ್: “ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ. ನಮ್ಮ ಪ್ರಯತ್ನಕ್ಕೆ ಜಯ ಸಿಕ್ಕಿದೆ”. ಹೀಗೆ ಹೇಳಿಕೊಂಡು ಚೀನಾದ ವೈದ್ಯರು ಸಂಭ್ರಮಿಸಿದ್ದಾರೆ.

    ಚೀನಾದಲ್ಲಿ ಕೋರೊನಾ ಆರ್ಭಟ ಸಂಪೂರ್ಣ ಕಡಿಮೆ ಆಗುತ್ತಿದೆ. ಕೊರೊನಾ ಕೇಂದ್ರ ಸ್ಥಳ ವುಹಾನ್ ನಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡ ಆಸ್ಪತ್ರೆಯನ್ನು ಇಂದು ಮುಚ್ಚಲಾಗಿದೆ. ಕಳೆದ 34 ದಿನಗಳಿಂದ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿತ್ತು. ಚೀನಾದ 21 ಮೆಡಿಕಲ್ ತಂಡದ ಜೊತೆಗೆ 6 ಸ್ಥಳಿಯ ಮೆಡಿಕಲ್ ಕಾಲೇಜಿನ ಸದಸ್ಯರು ಕೊರೊನಾ ಪೀಡಿತರಿಗೆ 24*7 ಚಿಕಿತ್ಸೆ ನೀಡುತ್ತಿದ್ದರು.

    ಈ ಆಸ್ಪತ್ರೆಗೆ ದಾಖಲಾಗಿದ್ದ ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಇನ್ನು ಕೆಲವರ ಆರೋಗ್ಯ ಚೇತರಿಕೆಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‍ವರ್ಕ್(ಸಿಜಿಟಿಎನ್) ವರದಿ ಮಾಡಿದೆ.  ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?

    ನನ್ನ ತಂದೆ ಬದುಕುತ್ತಾರೆ ಎಂಬ ಆಸೆಯನ್ನು ಕಳೆದುಕೊಂಡಿದ್ದೆ. ಆದರೆ ವೈದ್ಯರ ಶ್ರಮದಿಂದ ತಂದೆಯನ್ನು ನಾನು ಮತ್ತೆ ನೋಡುತ್ತಿದ್ದೇನೆ ಎಂದು ಯುವತಿಯೊಬ್ಬಳು ಪ್ರತಿಕ್ರಿಯೆ ನೀಡಿದ್ದಾಳೆ. ಚೀನಾದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದ್ದು, ಇಲ್ಲಿಯವರೆಗೆ ವಿಶ್ವದಲ್ಲಿ 4 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಒಟ್ಟು 4,011 ಮಂದಿ ಮೃತಪಟ್ಟಿದ್ದು ಸೋಮವಾರ ಒಂದೇ ದಿನ ಚೀನಾದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ 80,754 ಪ್ರಕರಣ ದಾಖಲಾಗಿದ್ದು 3,136 ಮಂದಿ ಮೃತಪಟ್ಟಿದ್ದಾರೆ.

    ಚೀನಾದ ನಂತರ ಇಟಲಿ(9,172 ಪ್ರಕರಣ, 463 ಸಾವು), ದಕ್ಷಿಣ ಕೊರಿಯಾ(7,513 ಪ್ರಕರಣ, 54 ಸಾವು), ಇರಾನ್(7,161 ಪ್ರಕರಣ, 237 ಸಾವು), ಫ್ರಾನ್ಸ್(1,412 ಪ್ರಕರಣ, 25 ಸಾವು) ಅತಿ ಹೆಚ್ಚು ಸಾವು, ಪ್ರಕರಣಗಳು ದಾಖಲಾಗಿದೆ.

    ಇಟಲಿಯಲ್ಲಿ ಕಳೆದ ತಿಂಗಳು ಚೀನಾದಲ್ಲಿ ಇದ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಇಟಲಿ ದೇಶ ಸ್ತಬ್ಧವಾಗಿದೆ. ಮೊದಲು ಎರಡೂ ನಗರಗಳಿಗಷ್ಟೇ ಇದ್ದ ನಿರ್ಬಂಧ ಈಗ ಇಡೀ ದೇಶಕ್ಕೆ ವಿಸ್ತರಿಸಲಾಗಿದೆ. ಒಟ್ಟು ಆರು ಕೋಟಿ ಮಂದಿ ಗೃಹಬಂಧನದಲ್ಲಿ ಇದ್ದಂತಾಗಿದೆ. ಇಟಲಿಯಲ್ಲಿ ಕೊರೋನಾಗೆ ಒಟ್ಟು 463 ಮಂದಿ ಬಲಿ ಆಗಿದ್ದು, ಮೃತರಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಿದೆ.

    ಇರಾನ್‍ನಲ್ಲಿ ಇವತ್ತು 54 ಮಂದಿ ಬಲಿ ಆಗಿದ್ದು, ಮೃತರ ಸಂಖ್ಯೆ 237ಕ್ಕೆ ಏರಿದೆ. ಕಳ್ಳಭಟ್ಟಿ ಕುಡಿದರೆ ಸೋಂಕು ಬರುವುದಿಲ್ಲ ಎನ್ನುವ ವದಂತಿ ನಂಬಿ, ಕಳ್ಳಭಟ್ಟಿ ಕುಡಿದು ಇರಾನ್‍ನಲ್ಲಿ 27ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್‍ನಲ್ಲಿ ಧರ್ಮಗುರುವೊಬ್ಬ ಮದ್ಯ ಸೇವಿಸಿ, ಕೊರೋನಾದಿಂದ ದೂರವಿರಿ ಎಂದು ಉಪನ್ಯಾಸ ನೀಡಿದ್ದಾನೆ. ಅದರಲ್ಲೂ ಮೆಕ್ಸಿಕೋದ ಕೊರೊನಾ ಬ್ರ್ಯಾಂಡ್ ಸೇವಿಸುವಂತೆ ಕರೆ ನೀಡಿದ್ದಾನೆ. ಇರಾನ್ ಜೈಲುಗಳಿಂದ 70 ಸಾವಿರಕ್ಕೂ ಹೆಚ್ಚು ಖೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ.

  • ಭಾರತದಲ್ಲಿ ಫಸ್ಟ್, ಕೊರೊನಾಗೆ ಎಚ್‍ಐವಿ ಡ್ರಗ್ಸ್ – ಇಟಲಿ ದಂಪತಿಯ ಆರೋಗ್ಯದಲ್ಲಿ ಭಾರೀ ಚೇತರಿಕೆ

    ಭಾರತದಲ್ಲಿ ಫಸ್ಟ್, ಕೊರೊನಾಗೆ ಎಚ್‍ಐವಿ ಡ್ರಗ್ಸ್ – ಇಟಲಿ ದಂಪತಿಯ ಆರೋಗ್ಯದಲ್ಲಿ ಭಾರೀ ಚೇತರಿಕೆ

    ಜೈಪುರ: ಕೊರೊನಾದಿಂದ ಬಳಲುತ್ತಿರುವ ಇಟಲಿ ದಂಪತಿಗೆ ಎಚ್‍ಐವಿ ನಿಯಂತ್ರಣಕ್ಕೆ ಬಳಕೆ ಮಾಡುವ ಎರಡು ಡ್ರಗ್ಸ್ ನೀಡಿದ್ದು ಆರೋಗ್ಯದಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ.

    ಭಾರತಕ್ಕೆ ಪ್ರವಾಸಕ್ಕೆ ಬಂದ ದಂಪತಿಗೆ ಜೈಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಪತಿಯ ಆರೋಗ್ಯ ಬಹಳ ಹದೆಗೆಟ್ಟಿತ್ತು. ಈ ಡ್ರಗ್ಸ್ ನೀಡಿದ ಬಳಿಕ ಆತನ ಆರೋಗ್ಯ ಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪತ್ನಿಯ ಆರೋಗ್ಯ ಬಹಳಷ್ಟು ಸುಧಾರಿಸಿದೆ.

    ಎಚ್‍ಐವಿಗೆ ನೀಡಲಾಗುವ ಲೋಪಿನವೀರ್ ಮತ್ತು ರಿಟೋನವೀರ್ ಡ್ರಗ್ಸ್ ಅನ್ನು ಇಟಲಿ ದಂಪತಿಗೆ ನೀಡಲಾಗುತ್ತಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರತಿಕ್ರಿಯಿಸಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಕೊರೊನಾ ಪೀಡಿತರಿಗೆ ಎರಡು ಎಚ್‍ಐವಿ ಡ್ರಗ್ಸ್ ನೀಡಲು ಅನುಮತಿ ನೀಡಿದೆ. ತುರ್ತು ಸಂದರ್ಭದಲ್ಲಿ ಕೊರೊನಾ ಪೀಡಿತರಿಗೆ ಈ ಡ್ರಗ್ಸ್ ನೀಡಲಾಗುತ್ತದೆ. ಜೈಪುರದಲ್ಲಿ ದಾಖಲಾಗಿರುವ ಇಬ್ಬರು ಇಟಲಿಯ ರೋಗಿಗಳಿಗೆ ಈ ಡ್ರಗ್ಸ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಆರೋಗ್ಯ ಅಧಿಕಾರಿಗಳು ಪ್ರತಿಕ್ರಿಯಿಸಿ, ಕೊರೊನಾ ಪೀಡಿತರಿಗೆ ಈ ಡ್ರಗ್ಸ್ ನೀಡುವುದು ಹೊಸದೆನಲ್ಲ. ಚೀನಾದಲ್ಲಿ ಈಗಾಗಲೇ ಬಳಕೆ ಮಾಡಲಾಗುತ್ತಿದೆ. ಈ ಡ್ರಗ್ಸ್ ನೀಡುವುದರಿಂದ ಕೆಲ ಸೈಡ್ ಎಫೆಕ್ಟ್ ಆಗುತ್ತದೆ. ಈಗಲೇ ಈ ಡ್ರಗ್ಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಬರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

    ಇಟಲಿ ದಂಪತಿಯ ಪೈಕಿ 69 ವರ್ಷದ ಪತಿಯ ಆರೋಗ್ಯ ಆಸ್ಪತ್ರೆಗೆ ದಾಖಲಾದಾಗ ಬಹಳ ಹದಗೆಟ್ಟಿತ್ತು. ಚಿಕಿತ್ಸೆಯ ನಂತರ ಆರೋಗ್ಯ ಸುಧಾರಣೆಯಾಗಿದ್ದು ಈಗ ಆ ವ್ಯಕ್ತಿ ಜ್ವರದಿಂದ ಬಳಲುತ್ತಿಲ್ಲ. ರಕ್ತದೊತ್ತಡ ಸಾಮಾನ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ಆತನನ್ನು ಡಿಸ್ಚಾರ್ಜ್ ಮಾಡಬಹುದು. ಆದರೆ ಪೂರ್ಣವಾಗಿ ಗುಣಮುಖನಾದ ಬಳಿಕ ಬಿಡುಗಡೆ ಮಾಡಲಾಗುವುದು. ಆತನ ಪತ್ನಿಯ ಆರೋಗ್ಯ ಗಮನಾರ್ಹವಾಗಿ ಚೇತರಿಕೆ ಕಂಡಿದೆ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

    ಎಚ್‍ಐವಿ ನಿಯಂತ್ರಿಸಲು ಬಳಸಲಾಗುತ್ತಿರುವ ಈ ಎರಡು ಡ್ರಗ್ಸ್ ಅನ್ನು ಎಲ್ಲ ಕೊರೊನಾ ಪೀಡಿತರಿಗೆ ನೀಡುವಂತಿಲ್ಲ. ಭಾರತದಲ್ಲಿ ಶೇ.70 ರಷ್ಟು ಎಚ್‍ಐವಿ ಪೀಡಿತರಿಗೆ ಮೊದಲ ಸಾಲಿನ ಔಷಧಿಗಳನ್ನು ನೀಡಲಾಗುತ್ತಿದೆ. ಭಾರತದಲ್ಲಿ ತಯಾರಾಗುವ ಈ ಎರಡನೇ ಸಾಲಿನ ಔಷಧಿಯನ್ನು ರಫ್ತು ಮಾಡಲಾಗುತ್ತದೆ. ವಿಶೇಷವಾಗಿ ಆಫ್ರಿಕಾ ದೇಶಗಳಿಗೆ ರಫ್ತು ಆಗುತ್ತದೆ. ಭಾರತದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಇರುವ ಸಂದರ್ಭದಲ್ಲಿ ಲೋಪಿನವೀರ್ ಮತ್ತು ರಿಟೋನವೀರ್ ಬಳಕೆ ಅನುಮತಿ ನೀಡಲಾಗಿದೆ. ಈ ಡ್ರಗ್ಸ್ ಬಳಕೆಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನಿಗದಿ ಮಾಡಲಾಗಿದೆ.

    ಕೊರೊನಾಗೆ ಇಲ್ಲಿಯವರೆಗೆ ಯಾರು ಔಷಧಿ ಕಂಡು ಹಿಡಿದಿಲ್ಲ. ವಿಶ್ವದ ಹಲವು ಪ್ರಯೋಗಾಲಯದಲ್ಲಿ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ ಗುಣವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವಿವಿಧ ದೇಶಗಳಲ್ಲಿ ಕೊರೊನಾ ಪೀಡಿತರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಡ್ರಗ್ಸ್ ನೀಡಲಾಗುತ್ತಿದೆ.

  • ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ – ಸೋಂಕು ಪೀಡಿತರ ಸಂಖ್ಯೆ 39 ಏರಿಕೆ

    ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ – ಸೋಂಕು ಪೀಡಿತರ ಸಂಖ್ಯೆ 39 ಏರಿಕೆ

    – ಆಸ್ಪತ್ರೆಗೆ ದಾಖಲಾಗಲು ಒಪ್ಪದ ಕುಟುಂಬ

    ತಿರುವಂತಪುರಂ: ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕಂಡು ಬಂದ ರಾಜ್ಯ ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

    ಕೊರೊನಾ ವೈರಸ್ ಪತ್ತೆಯಾಗಿರುವ ಕುಟುಂಬದವರು, ಪಥನಮತ್ತಟ್ಟ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಎಲ್ಲರನ್ನು ಪಥನಮತ್ತಟ್ಟ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಈ ಕುಟುಂಬದ ಮೂವರು ಇತ್ತೀಚೆಗೆ ಸಂಬಂಧಿಕರನ್ನು ಭೇಟಿ ಮಾಡಲು ಇಟಲಿಗೆ ಹೋಗಿ ಬಂದಿದ್ದು, ಅಲ್ಲಿಂದ ಇವರಿಗೆ ಸೋಂಕು ತಗಲುಲಿದೆ ಎಂದು ಹೇಳಲಾಗುತ್ತದೆ.

    ಇದರ ಬಗ್ಗೆ ಮಾಹಿತಿ ನೀಡಿರುವ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು, ಕೊರೊನಾ ವೈರಸ್‍ಗೆ ತುತ್ತಾಗಿರುವ ಕುಟುಂಬದವರು ತಮ್ಮ ಪ್ರಯಾಣದ ಇತಿಹಾಸದ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಹಾಗಾಗಿ ನಾವು ಅವರನ್ನು ಸ್ಕ್ರೀನಿಂಗ್ ಮಾಡಲು ಆಗಿಲ್ಲ. ಜೊತೆಗೆ ಅವರು ಮೊದಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿರಲಿಲ್ಲ. ನಂತರ ನಾವು ಅವರ ಮನವೊಲಿಸಿ ಆಸ್ಪತ್ರೆ ದಾಖಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: 1 ಲಕ್ಷ ದಾಟಿದ ಕೊರೊನಾ ಪ್ರಕರಣ – ಇದುವರೆಗೆ 3,412 ಸಾವು!

    ಈಗ ಸದ್ಯಕ್ಕೆ ಅವರನ್ನು ಪಥನಮತ್ತಟ್ಟ ಜೆನರಲ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುಟುಂಬದ ಮೂವರು ಇತ್ತೀಚೆಗೆ ಸಂಬಂಧಿಕರನ್ನು ಭೇಟಿ ಮಾಡಲು ಇಟಲಿಗೆ ಹೋಗಿ ಬಂದಿದ್ದರು. ಹೀಗಾಗಿ ಇವರಿಗೆ ಸೋಂಕು ತಗುಲಿದೆ. ಈಗ ನಾವು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕುಟುಂಬವನ್ನು ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಶೈಲಜಾ ಅವರು ಹೇಳಿದ್ದಾರೆ. ಇದನ್ನು ಓದಿ: ಕೊರೊನಾ ಆಯ್ತು, ಈಗ ಹೆಚ್1 ಎನ್1 ಭಯ- ಹಕ್ಕಿ ಜ್ವರದ ಲಕ್ಷಣಗಳೇನು?

    ಭಾರತದ ಮೊದಲ ಮೂರು ಕೊರೊನ ವೈರಸ್ ಪ್ರಕರಣಗಳು ಕೇರಳದಿಂದಲೇ ವರದಿಯಾಗಿದ್ದವು. ಮೂವರೂ ರೋಗಿಗಳು ಚೀನಾದ ವುಹಾನ್‍ನ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು. ಆದರೆ ಈಗ ಅವರು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

    ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಸೋಂಕು ತಡೆಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜೊತೆಗೆ ಸ್ವತಃ ಪ್ರಧಾನಿ ಮೋದಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರೋಗವು ಮತ್ತುಷ್ಟು ಹರಡುವ ಲಕ್ಷಣಗಳು ಕಂಡು ಬಂದರೆ ಅದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ. ಜೊತೆಗೆ ವೈರಸ್ ಹರಡದ ರೀತಿಯಲ್ಲಿ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.

    ಇಟಲಿಯಲ್ಲಿ ಸುಮಾರು 6,000 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 225 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ವೈರಸ್ ಕಂಡು ಬಂದಿರುವ ಇಟಲಿಯ ಉತ್ತರದ ಹೆಚ್ಚಿನ ಭಾಗಗಳನ್ನು ಇಟಾಲಿಯನ್ ಸರ್ಕಾರವು ಲಾಕ್ ಮಾಡಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಗರದಿಂದ ಕಾಣಿಸಿಕೊಂಡ ಕೊರೊನಾ ವೈರಸ್, ಈಗ ಸುಮಾರು 95ಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ಪ್ರಾಂತ್ಯಗಳಿಗೆ ಹರಡಿದೆ. 3,500ಕ್ಕೂ ಹೆಚ್ಚು ಜನರು ಸತ್ತಿದ್ದಾರೆ ಮತ್ತು ಒಂದು ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ.