Tag: ಇಟಲಿ

  • ದೇಶದಲ್ಲಿ 15 ಸಾವಿರ ದಾಟಿದ ಸೋಂಕಿತರ ಸಂಖ್ಯೆ- ಅಮೆರಿಕದಲ್ಲಿ ಒಂದೇ ದಿನ 4,600 ಸಾವು

    ದೇಶದಲ್ಲಿ 15 ಸಾವಿರ ದಾಟಿದ ಸೋಂಕಿತರ ಸಂಖ್ಯೆ- ಅಮೆರಿಕದಲ್ಲಿ ಒಂದೇ ದಿನ 4,600 ಸಾವು

    ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನ 1,300ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 15,232ಕ್ಕೆ ತಲುಪಿದೆ. ಈ ಪೈಕಿ ತಬ್ಲೀಘಿಗಳ ಪಾಲು 4,200ಕ್ಕೂ ಹೆಚ್ಚು. ಅಂದರೆ ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರು ತಬ್ಲಿಘಿಗಳು.

    ಕಳೆದ 24 ಗಂಟೆಗಳಲ್ಲಿ 43 ಮಂದಿ ಸಾವನ್ನಪ್ಪಿದ್ದು, ಒಟ್ಟು 505 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 3,648 ದಾಟಿದ್ದು, ಇಂದು 328 ಹೊಸ ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್‍ನಲ್ಲಿ ಒಂದೇ ದಿನ 277 ಮಂದಿಗೆ ಸೋಂಕು ವ್ಯಾಪಿಸಿದೆ. ಭಾರತೀಯ ನೌಕಾಪಡೆಯ 21 ಯೋಧರಿಗೆ ಸೋಂಕು ತಗುಲಿದೆ. ಉತ್ತರಾಖಂಡ್‍ನಲ್ಲಿ 9 ತಿಂಗಳ ಹಸುಗೂಸಿಗೆ ಸೋಂಕು ತಗುಲಿದೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ದೇಶಿಯ ವಿಮಾನ ಹಾರಾಟ ಮೇ 4ರಿಂದ ಆರಂಭವಾಗಲಿದೆ. ಜೂನ್ 1ರಿಂದ ವಿದೇಶಿ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಇನ್ನು ಏಪ್ರಿಲ್ 20ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದೆ.

    ಜಗತ್ತಿನಾದ್ಯಂತ ಕೊರೋನಾ ಸೋಂಕು ಪ್ರಮಾಣ ಶರವೇಗದಲ್ಲಿ ಹೆಚ್ಚಾಗುತ್ತಿದ್ದು, ಕೊರೊನಾಗೆ ಮೃತಪಟ್ಟವರ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ. 22.70 ಲಕ್ಷ ಮಂದಿಗೆ ಸೋಂಕು ವ್ಯಾಪಿಸಿದೆ. ಅಮೆರಿಕದಲ್ಲಿ ಸ್ಥಿತಿ ದಾರುಣವಾಗಿದೆ. ನಿನ್ನೆ ಒಂದೇ ದಿನ 4,600 ಮಂದಿ ಬಲಿ ಆಗಿದ್ದು, ಮೃತರ ಸಂಖ್ಯೆ 37 ಸಾವಿರ ದಾಟಿದೆ. ನ್ಯೂಯಾರ್ಕ್ ಒಂದರಲ್ಲೇ 17 ಸಾವಿರ ಮಂದಿ ಬಲಿ ಆಗಿದ್ದಾರೆ.

    ಸೋಂಕಿತರ ಸಂಖ್ಯೆ 7.10 ಲಕ್ಷ ದಾಟಿದೆ. ಈ ಪೈಕಿ ಶೇ.30ರಷ್ಟು ಮಂದಿ ಆಫ್ರಿಕನ್ ಅಮೆರಿಕನ್ನರು. ಸ್ಪೇನ್‍ನಲ್ಲಿ ಮೃತರ ಸಂಖ್ಯೆ 20 ಸಾವಿರ ದಾಟಿದೆ. ಇಟಲಿಯಲ್ಲಿ 23 ಸಾವಿರ, ಫ್ರಾನ್ಸ್‍ನಲ್ಲಿ 19 ಸಾವಿರ, ಬ್ರಿಟನ್‍ನಲ್ಲಿ ಹದಿನಾಲ್ಕೂವರೆ ಸಾವಿರ ಮಂದಿ ಬಲಿ ಆಗಿದ್ದಾರೆ. ಬ್ರಿಟನ್‍ನಲ್ಲಿ ಮೂರು ವಾರ ಲಾಕ್‍ಡೌನ್ ವಿಸ್ತರಿಸಲಾಗಿದೆ. ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ಹೊತ್ತಿಗೆ ಆಫ್ರಿಕಾ ಖಂಡದಲ್ಲಿ ಕನಿಷ್ಠ 3 ಲಕ್ಷ ಮಂದಿ ಸಾವನ್ನಪ್ಪಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಸ್ವೀಡನ್ ರಾಜಕುಮಾರಿ ಸೋಫಿಯಾ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತರ ಸೇವೆ ಮಾಡುತ್ತಿದ್ದಾರೆ. ಕೀನ್ಯಾದ ನೈರೂಬಿಯಲ್ಲಿ ಅಗತ್ಯ ವಸ್ತುಗಳ ಜೊತೆಗೆ ಬಡವರಿಗೆ ಮದ್ಯವನ್ನು ಪೂರೈಸಲಾಗುತ್ತಿದೆ.

  • ಇಂದು ಒಂದೇ ದಿನದಲ್ಲಿ 941 ಮಂದಿಗೆ ಸೋಂಕು, 37 ಜನರ ಸಾವು

    ಇಂದು ಒಂದೇ ದಿನದಲ್ಲಿ 941 ಮಂದಿಗೆ ಸೋಂಕು, 37 ಜನರ ಸಾವು

    – ಧಾರಾವಿಯಲ್ಲಿ 60 ವೈರಸ್ ಪೀಡಿತರು

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ತೀವ್ರತೆ ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್‍ನಲ್ಲಿ ಸೋಂಕಿನ ತೀವ್ರತೆ ಅಧಿಕವಾಗಿದೆ.

    ದೇಶದಲ್ಲಿ ಗುರುವಾರ ಒಂದೇ ದಿನದಲ್ಲಿ 941 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 13 ಸಾವಿರ ದಾಟಿದೆ. ಇಂದು 37 ಮಂದಿ ಸಾವನ್ನಪ್ಪಿದ್ದು, ಕೊರೊನಾಗೆ ಬಲಿಯಾದವರ ಸಂಖ್ಯೆ 430 ದಾಟಿದೆ. ಮುಂಬೈನ ಧಾರಾವಿಯಲ್ಲಿ ಸೋಂಕು ಹರಡುತ್ತಿರುವ ವೇಗ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇಂದು 11 ಮಂದಿಗೆ ಇಲ್ಲಿ ವೈರಸ್ ಹಬ್ಬಿದ್ದು, ಸೋಂಕಿತರ ಸಂಖ್ಯೆ 60 ದಾಟಿದೆ. 7 ಮಂದಿ ಕೇವಲ ಈ ಕೊಳಗೇರಿಯಲ್ಲಿಯೇ ಸಾವನ್ನಪ್ಪಿದ್ದಾರೆ.

    ಕೊರೊನಾದ ಮತ್ತೊಂದು ಡೇಂಜರ್ ಹಾಟ್‍ಸ್ಪಾಟ್ ಎಂದ್ರೆ ಮಧ್ಯಪ್ರದೇಶದ ಇಂದೋರ್. ಸೋಂಕು ತಗುಲಿದ 980 ಮಂದಿಯಲ್ಲಿ 550ಕ್ಕೂ ಹೆಚ್ಚು ಮಂದಿ ಇಂದೋರ್‌ಗೆ ಸೇರಿದವರಾಗಿದ್ದಾರೆ. ಇಲ್ಲಿ ಕೇವಲ ಬುಧವಾರ ಒಂದೇ ದಿನ 117 ಮಂದಿಗೆ ಸೋಂಕು ತಗುಲಿದೆ. ಮೃತ 53 ಮಂದಿ ಪೈಕಿ 37 ಮಂದಿ ಇದೇ ನಗರಕ್ಕೆ ಸೇರಿದವರಾಗಿದ್ದಾರೆ.

    ದೇಶದಲ್ಲಿ ಕೊರೊನಾ ಸಾವುಗಳು ಶೇಕಡಾ 3ರಷ್ಟಿದೆ. ಆದರೆ ಇಂದೋರ್ ನಲ್ಲಿ ಮಾತ್ರ ಡಬಲ್ ಇರುವುದು ಆತಂಕ ಮೂಡಿಸಿದೆ. ಕೇರಳದಲ್ಲಿ ಮಾತ್ರ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ. ಚೀನಾದಿಂದ ಭಾರತಕ್ಕೆ 6.5 ಲಕ್ಷ ಮೆಡಿಕಲ್ ಕಿಟ್, ವೈದ್ಯಕೀಯ ಸಾಮಾಗ್ರಿಯನ್ನು ಹೊತ್ತ ವಿಮಾನ ಬೀಜಿಂಗ್‍ನಿಂದ ದೆಹಲಿಗೆ ಹೊರಟಿದೆ. ಆದರೆ ಕಳೆದ ವಾರ ಭಾರತಕ್ಕೆ ಚೀನಾ ಕಳಿಸಿದ್ದ 1.70 ಲಕ್ಷ ಪಿಪಿಇ ಕಿಟ್‍ಗಳ ಪೈಕಿ ಶೇಕಡಾ 30ರಷ್ಟು ಕೆಲಸವೇ ಮಾಡುತ್ತಿಲ್ಲ. ಕಳಪೆಯಾಗಿವೆ ಎನ್ನಲಾಗಿದೆ. ಈ ಮಧ್ಯೆ, ಏಪ್ರಿಲ್ 20ರಿಂದ ಆನ್‍ಲೈನ್ ಶಾಪಿಂಗ್‍ಗೆ ಅವಕಾಶ ನೀಡಲಾಗಿದೆ.

    ಜಗತ್ತಿನಲ್ಲಿ ಕೊರೊನಾ:
    ವಿಶ್ವಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 21 ಲಕ್ಷ ದಾಟಿದೆ. 1.36 ಲಕ್ಷ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಕೊರೊನಾಗೆ ಬುಧವಾರ ಒಂದೇ ದಿನ 2,500ಕ್ಕೂ ಹೆಚ್ಚು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 29 ಸಾವಿರ ದಾಟಿದೆ. ಸ್ಪೇನ್‍ನಲ್ಲಿ ಮೃತರ ಸಂಖ್ಯೆ 20 ಸಾವಿರ ಸಮೀಪಿಸಿದೆ. ಇಟಲಿಯಲ್ಲಿ 22 ಸಾವಿರ ಮಂದಿ, ಫ್ರಾನ್ಸ್ ನಲ್ಲಿ 17 ಸಾವಿರ ಮಂದಿ, ಬ್ರಿಟನ್‍ನಲ್ಲಿ 13 ಸಾವಿರ ಮಂದಿ ಬಲಿಯಾಗಿದ್ದಾರೆ.

    ಇಟಲಿಯಲ್ಲಿ ಸಾವುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಚೀನಾದಲ್ಲಿ ಕೊರೊನಾಗಾಗಿಯೇ ನಿರ್ಮಿಸಲಾಗಿದ್ದ ಸಾವಿರ ಹಾಸಿಗೆಗಳ ಆಸ್ಪತ್ರೆ ಮುಚ್ಚಲಾಗಿದೆ. ಕೊರೊನಾದಿಂದ ಅತೀ ಹಿರಿಯ ಅಜ್ಜಿಯೊಬ್ಬರು ಚೇತರಿಸಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ 106 ವರ್ಷದ ವೃದ್ಧೆ ಬರ್ಮಿಂಗ್ ಹ್ಯಾಮ್ ಆಸ್ಪತ್ರೆಯಿಂದ 3 ವಾರದ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ.

  • ಕೊರೊನಾಗೆ ಅಮೆರಿಕದಲ್ಲಿ 23 ಸಾವಿರಕ್ಕೂ ಹೆಚ್ಚು ಮಂದಿ ಬಲಿ – ವಿಶ್ವವ್ಯಾಪಿ 20 ಲಕ್ಷದ ಗಡಿಯತ್ತ ಸೋಂಕಿತರ ಸಂಖ್ಯೆ

    ಕೊರೊನಾಗೆ ಅಮೆರಿಕದಲ್ಲಿ 23 ಸಾವಿರಕ್ಕೂ ಹೆಚ್ಚು ಮಂದಿ ಬಲಿ – ವಿಶ್ವವ್ಯಾಪಿ 20 ಲಕ್ಷದ ಗಡಿಯತ್ತ ಸೋಂಕಿತರ ಸಂಖ್ಯೆ

    ವಾಷಿಂಗ್ಟನ್: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 20 ಲಕ್ಷದ ಗಡಿ ತಲುಪಿದ್ದು, ಅಮೆರಿಕ ಮತ್ತು ಇಟಲಿಯಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣ ವರದಿಯಾಗಿದೆ. ಈ ಎರಡು ರಾಷ್ಟ್ರಗಳಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಜಗತ್ತಿನಾದ್ಯಂತ 19,25,853 ಮಂದಿಗೆ ಸೋಂಕು ತಗುಲಿದ್ದು, ಈವರೆಗೆ 1,19,719 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಹಾಗೆಯೇ 4,52,333 ಮಂದಿ ಗುಣಮುಖರಾಗಿದ್ದಾರೆ. ದಿನೇ ದಿನೇ ವಿಶ್ವದೆಲ್ಲೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ಅಟ್ಟಹಾಸಕ್ಕೆ ಬಲಿಷ್ಠ ರಾಷ್ಟ್ರಗಳೇ ತತ್ತರಿಸಿ ಹೋಗಿದೆ.

    ಅಮೆರಿಕದಲ್ಲಿ ಈವರೆಗೆ 23,644 ಮಂದಿಯನ್ನು ಕೊರೊನಾ ಬಲಿ ಪಡೆದಿದೆ. ಇತ್ತ ಇಟಲಿಯಲ್ಲಿ 20,465 ಮಂದಿ ಸೋಂಕಿನಿಂದ ಬಳಲಿ ಸಾವನ್ನಪ್ಪಿದ್ದಾರೆ. ಹಾಗೆಯೇ ಸ್ಪೇನ್‍ನಲ್ಲಿ 17,756 ಮಂದಿ ಮೃತಪಟ್ಟಿದ್ದು, ಫ್ರಾನ್ಸ್ ನಲ್ಲಿ 14,967 ಮಂದಿ ಕೊರೊನಾದಿಂದ ಅಸುನೀಗಿದ್ದಾರೆ.

    ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಈ ಮಹಾಮಾರಿ ವಿಶ್ವದೆಲ್ಲೆಡೆ ಹರಡಿದೆ. ಚೀನಾದಲ್ಲಿ ಸದ್ಯ ಕೊರೊನಾ ವೈರಸ್ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಅಮೆರಿಕದಲ್ಲಿ ವೇಗವಾಗಿ ಸೋಂಕು ಹರಡುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈವರೆಗೆ ಅಮೆರಿಕದಲ್ಲಿ 5,87,173 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 36,948 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಸ್ಪೇನ್‍ನಲ್ಲಿ 1,70,099 ಮಂದಿಗೆ ಸೋಂಕು ತಗುಲಿದ್ದು, 64,727 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇತ್ತ ಇಟಲಿಯಲ್ಲಿ 1,59,516 ಮಂದಿಗೆ ಸೋಂಕು ತಟ್ಟಿದ್ದು, 35,435 ಮಂದಿ ಗುಣವಾಗಿದ್ದಾರೆ. ಹಾಗೆಯೇ ಫ್ರಾನ್ಸ್ ನಲ್ಲಿ 1,36,779 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 27,718 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಇತ್ತ ಭಾರತದಲ್ಲಿ ಸೋಂಕಿತರ ಸಂಖ್ಯೆ 10,541ಕ್ಕೆ ಏರಿದ್ದು, 1,205 ಮಂದಿ ಕೊರೊನಾದಿಂದ ಗುಣವಾಗಿದ್ದಾರೆ. ಹಾಗೆಯೇ ಈವರೆಗೆ 358 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 8,978 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಮೇ 3ರವರೆಗೆ ಭಾರತದಲ್ಲಿ ಲಾಕ್‍ಡೌನ್ ಅನ್ನು ಮುಂದೂಡಲಾಗಿದೆ.

    ನೆರೆಯ ಪಾಕಿಸ್ತಾನದಲ್ಲಿ 5,716 ಮಂದಿಗೆ ಸೋಂಕು ತಗುಲಿದ್ದು, 1,378 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಪಾಕಿಸ್ತಾನದಲ್ಲಿ 96 ಮಂದಿ ಸಾವನ್ನಪ್ಪಿದ್ದಾರೆ.

  • ಇಟಲಿಯಲ್ಲಿದ್ದ ಮಂಗಳೂರಿನ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಖಾದರ್

    ಇಟಲಿಯಲ್ಲಿದ್ದ ಮಂಗಳೂರಿನ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಖಾದರ್

    ಮಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಬರಲಾಗದೇ ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಂಗಳೂರು ಮೂಲದ ಯುವತಿಯನ್ನು ಮಾಜಿ ಸಚಿವ ಯು.ಟಿ ಖಾದರ್, ತನ್ನ ಕಾರಿನಲ್ಲಿ ಮಂಗಳೂರಿಗೆ ಕರೆತಂದು ಯುವತಿ ಮನೆಗೆ ಸೇಫ್ ಆಗಿ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

    ಇಟಲಿಯಲ್ಲಿ ವಾಸವಾಗಿದ್ದ ಮಂಗಳೂರಿನ ಮೂಲದ ಶ್ರೀಮಧು ಇಟಲಿಯಿಂದ ಮಾ.22ರಂದು ಕೊನೆ ವಿಮಾನದಲ್ಲಿ ದೆಹಲಿ ತಲುಪಿದ್ದಳು. ಇಟಲಿಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ದೆಹಲಿಯಲ್ಲಿ ಕ್ವಾರಂಟೈನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮೊನ್ನೆ ರಾತ್ರಿ ದೆಹಲಿಯ ವಿಶೇಷ ಬಸ್ ಮೂಲಕ ಶ್ರೀಮಧು ಬೆಂಗಳೂರು ತಲುಪಿದ್ದಳು.

    ಬೆಂಗಳೂರು ತಲುಪಿದ ಶ್ರೀಮಧುಗೆ ಮಂಗಳೂರಿಗೆ ಬರಲು ಬಸ್ ಅಥವಾ ಯಾವುದೇ ವ್ಯವಸ್ಥೆ ಇರಲಿಲ್ಲ. ಮುಂದೇನು ಅಂತ ದಿಕ್ಕು ತೋಚದಂತಾಗಿದ್ದಳು. ನಂತರ ಮಾಜಿ ಸಚಿವ ಯು.ಟಿ ಖಾದರ್ ಅವರಿಗೆ ಮಾಹಿತಿ ನೀಡಿದ್ದು, ಯುವತಿಯ ಕಷ್ಟಕ್ಕೆ ಧಾವಿಸಿ ತನ್ನ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಕರೆ ತಂದು ಶ್ರೀಮಧು ಅವರ ಕುಳಾಯಿಯಲ್ಲಿ ಇರುವ ಮನೆಗೆ ಬಿಟ್ಟಿದ್ದಾರೆ. ಖಾದರ್ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ಕೊರೊನಾ ವಿರುದ್ಧ ಗೆದ್ದ ಎರಡು ತಿಂಗಳ ಹಸುಗೂಸು

    ಕೊರೊನಾ ವಿರುದ್ಧ ಗೆದ್ದ ಎರಡು ತಿಂಗಳ ಹಸುಗೂಸು

    ರೋಮ್: ಇಟಲಿಯಲ್ಲಿ ಅತ್ಯಂತ ಕಿರಿಯ ಕೊರೊನಾ ವೈರಸ್ ರೋಗಿ ಎಂದು ಗುರುತಿಸಿದ್ದ ಎರಡು ತಿಂಗಳ ಮಗುವೊಂದು ಸಂಪೂರ್ಣ ಗುಣಮುಖವಾಗಿದ್ದು ಸಾವಿನ ದವಡೆಯಿಂದ ಹೊರ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    ಈ ಮೊದಲು ತಾಯಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿತ್ತು. ಬಳಿಕ ಮಗುವಿನಲ್ಲೂ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮಾರ್ಚ್ 18ರಂದು ತಾಯಿ-ಮಗುವನ್ನು ದಕ್ಷಿಣ ನಗರದ ಬ್ಯಾರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣ ಇಟಲಿಯಲ್ಲಿ ಸಾಕಷ್ಟು ಆತಂಕವನ್ನು ಸೃಷಿ ಮಾಡಿತ್ತು. ಅತ್ಯಂತ ಕಿರಿಯ ರೋಗಿಯನ್ನು ಉಪಚರಿಸಿರುವ ವೈದ್ಯರು ಕೊರೊನಾದಿಂದ ಸಂಪೂರ್ಣ ಮುಕ್ತ ಮಾಡಿದ್ದಾರೆ.

    ಮಗು ಕೊರೊನಾ ಸೋಂಕಿನ ಸಂಪೂರ್ಣ ಗುಣ ಮುಖವಾಗಿದ್ದು, ತಾಪಮಾನ ಅಥವಾ ಜ್ವರದಿಂದ ಬಳಲುತ್ತಿಲ್ಲ. ಹೀಗಾಗಿ ತಾಯಿಯೊಂದಿಗೆ ಮಗುವನ್ನು ಡಿಸ್ಚಾರ್ಜ್ ಮಾಡಲಾಯಿತು ಎಂದು ವೈದ್ಯರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕೊರೊನಾಗೆ ಇಟಲಿಯಲ್ಲಿ ಈವರೆಗೂ 17,669 ಮಂದಿ ಸಾವನ್ನಪ್ಪಿದ್ದು, ಈ ಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚು ಎನ್ನಾಲಾಗಿದೆ. ಕಳೆದ ತಿಂಗಳು 969ರ ಗರಿಷ್ಠ ಮಟ್ಟದಿಂದ ದಿನನಿತ್ಯ ಸಾವಿನ ಸಂಖ್ಯೆ ಇಳಿಕೆ ಆಗಿತ್ತು. ಸದ್ಯ ಪ್ರಮಾಣದಲ್ಲಿ ನಿಧಾನವಾಗಿ ಇಳಿಕೆ ಕಂಡು ಬಂದಿದೆ.

  • ಇಂದು ರಾಜ್ಯಕ್ಕೆ ಬರಲಿದ್ದಾರೆ ಇಟಲಿ ಕನ್ನಡಿಗರು

    ಇಂದು ರಾಜ್ಯಕ್ಕೆ ಬರಲಿದ್ದಾರೆ ಇಟಲಿ ಕನ್ನಡಿಗರು

    ನವದೆಹಲಿ: ಕೊರೊನಾ ವೈರಸ್ ಹಾವಳಿಯಿಂದ ನಲುಗುತ್ತಿರುವ ಇಟಲಿಯಿಂದ ಭಾರತಕ್ಕೆ ಮರಳಿದ್ದ ಕನ್ನಡಿಗರು ಇಂದು ಬೆಂಗಳೂರಿಗೆ ಬರಲಿದ್ದಾರೆ.

    ಇಟಲಿಯಲ್ಲಿ ನೆಲೆಸಿದ್ದ ಕನ್ನಡಿಗರು ದೆಹಲಿಗೆ ಮರಳಿದ್ದರು. ಇವರನ್ನು ಮನೆಗೆ ಕಳುಹಿಸದೇ 25 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಕ್ವಾರಂಟೈನ್ ವೇಳೆ ಕೊರೊನಾ ಪರೀಕ್ಷೆ ನಡೆಸಿದ್ದು ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಮರಳಲಿದ್ದಾರೆ.

    ಕರ್ನಾಟಕ ಭವನ ನಿವಾಸಿ ಆಯುಕ್ತರ ನಿರ್ದೇಶನ ಮೇರೆಗೆ 17 ಮಂದಿ ಇಂದು ಸಂಜೆ ವಿಶೇಷ ಬಸ್ ಮೂಲಕ ಬೆಂಗಳೂರಿಗೆ ಹೊರಡಲಿದ್ದಾರೆ. 17 ಮಂದಿ ಕನ್ನಡಿಗರ ಜೊತೆಗೆ ತಮಿಳುನಾಡಿನ 14 ಮಂದಿಯೂ ಬರಲಿದ್ದಾರೆ.

    ಬಸ್ ಆರಂಭದಲ್ಲಿ ಬೆಂಗಳೂರಿಗೆ ಬರಲಿದ್ದು, ಬಳಿಕ ಚೆನ್ನೈಗೆ ತೆರಳಲಿದೆ. ಬೆಂಗಳೂರು ಮೂಲಕ ಸ್ವಗ್ರಾಮಗಳಿಗೆ ತೆರಳಲು ಇವರಿಗೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ರೋಮ್ ನಿಂದ ಆಗಮಿಸಿರುವ 13 ಮಂದಿಯ ಮತ್ತೊಂದು ಟೀಂ ಸದ್ಯ ಕ್ವಾರಂಟೈನ್ ನಲ್ಲಿದೆ.

    ಇಟಲಿಯಲ್ಲಿ 1.35 ಲಕ್ಷ ಮಂದಿಗೆ ಕೊರೊನಾ ಬಂದಿದ್ದು, 17 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 24 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.

  • ವಿಶ್ವವ್ಯಾಪಿ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ – ಅಮೆರಿಕದಲ್ಲಿ ಒಂದೇ ದಿನಕ್ಕೆ 1,169 ಮಂದಿ ಬಲಿ

    ವಿಶ್ವವ್ಯಾಪಿ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ – ಅಮೆರಿಕದಲ್ಲಿ ಒಂದೇ ದಿನಕ್ಕೆ 1,169 ಮಂದಿ ಬಲಿ

    ವಾಷಿಂಗ್ಟನ್: ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‍ಗೆ ಅಮೆರಿಕ ಕೂಡ ತತ್ತರಿಸಿ ಹೋಗಿದ್ದು, ಕಳೆದ 24 ಗಂಟೆಗಳಲ್ಲಿ 1,169 ಮಂದಿಯನ್ನು ಕೊರೊನಾ ವೈರಸ್ ಬಲಿ ಪಡೆದಿದೆ.

    ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಬಳಿಕ ವಿಶ್ವವ್ಯಾಪಿ ಹರಡಿತು. ಈ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದಕ್ಕೆ ಇಟಲಿಯಲ್ಲಿ ಹೆಚ್ಚಿನ ಸಾವು ಸಂಭವಿಸಿತ್ತು. ಆದರೆ ಈಗ ಚೀನಾ, ಇಟಲಿಯನ್ನು ಹಿಂದಿಕ್ಕಿ ಅತಿಹೆಚ್ಚಿನ ಪ್ರಮಾಣದಲ್ಲಿ ಸೋಂಕು ಅಮೆರಿಕದಲ್ಲಿ ಹರಡುತ್ತಿದೆ. ಈವರೆಗೆ ಅಮೆರಿಕದಲ್ಲಿ ಸುಮಾರು 2,26,374 ಜನರಿಗೆ ಕೊರೊನಾ ವೈರಸ್ ತಗುಲಿದ್ದು, 6,075 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲೂ ಕಳೆದ 24 ಗಂಟೆಗಳಲ್ಲಿ 1,169 ಮಂದಿ ಸಾವನ್ನಪ್ಪಿದ್ದು ರಾಷ್ಟ್ರದಲ್ಲಿ ಆತಂಕವನ್ನು ಹೆಚ್ಚಿಸಿದೆ.

    ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವದಂತಿ ಕೇಳಿ ಬಂದಿತ್ತು. ಈ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಟ್ರಂಪ್ ಅವರಿಗೆ ಸೋಂಕು ತಟ್ಟಿಲ್ಲ ಎಂಬುದು ದೃಢಪಟ್ಟಿತ್ತು. ಈಗ ಎರಡನೇ ಬಾರಿಗೆ ಟ್ರಂಪ್ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದು, ಈ ಬಾರಿಯೂ ವರದಿ ನೆಗೆಟಿವ್ ಬಂದಿದೆ.

    ವಿಶ್ವಾದ್ಯಂತ ರಣಕೇಕೆ ಹಾಕುತ್ತಿರುವ ಸೋಂಕಿಗೆ ಈವರೆಗೆ ಸುಮಾರು 10,16,330 ಮಂದಿ ತುತ್ತಾಗಿದ್ದಾರೆ. ಕೊರೊನಾ ವೈರಸ್‍ನಿಂದ 53,238 ಮಂದಿ ಸಾವನ್ನಪ್ಪಿದ್ದರೆ, 2,13,132 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

    ಇಟಲಿಯಲ್ಲಿ ಈವರೆಗೆ 1,15,242 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 13,919 ಮಂದಿ ಬಲಿಯಾಗಿದ್ದಾರೆ. ಇತ್ತ ಸ್ಪೇನ್‍ನಲ್ಲಿ 1,12,065 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 10,348 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ 81,620 ಮಂದಿಗೆ ಸೋಂಕು ತಟ್ಟಿದ್ದು, 3,322 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಭಾರತದಲ್ಲಿ 2,301 ಮಂದಿಗೆ ಕೊರೊನಾ ವೈರಸ್ ತಗುಲಿದ್ದು, 56 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಪಾಕಿಸ್ತಾನದಲ್ಲಿ 2,450 ಮಂದಿ ಸೋಂಕಿಗೆ ತುತ್ತಾಗಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ.

  • 345 ಬಲಿ, ಅಮೆರಿಕದಲ್ಲಿ 1 ಲಕ್ಷ ಗಡಿ ದಾಟಿತು ಕೊರೊನಾ ಪ್ರಕರಣ

    345 ಬಲಿ, ಅಮೆರಿಕದಲ್ಲಿ 1 ಲಕ್ಷ ಗಡಿ ದಾಟಿತು ಕೊರೊನಾ ಪ್ರಕರಣ

    ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿದ್ದು ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    ಕಳೆದ 24 ಗಂಟೆಯಲ್ಲಿ ಅಮೆರಿಕದಲ್ಲಿ 18 ಸಾವಿರ ಮಂದಿಗೆ ಕೊರೊನಾ ಬಂದಿದ್ದರೆ 345 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಅಮೆರಿಕದಲ್ಲಿ 1.04 ಲಕ್ಷ ಜನರಿಗೆ ಕೊರೊನಾ ಬಂದಿದೆ. ಈ ಪೈಕಿ 1,706 ಮಂದಿ ಕೊರೊನಾದಿಂದ ಮೃತಪಟ್ಟರೆ 2,465 ಮಂದಿ ಗುಣಮುಖರಾಗಿದ್ದಾರೆ.

    ಒಟ್ಟು ವಿಶ್ವದಲ್ಲಿ 5,96,852 ಮಂದಿಗೆ ಕೊರೊನಾ ಬಂದಿದ್ದು 27,352 ಮಂದಿ ಮೃತಪಟ್ಟಿದ್ದಾರೆ. ಸದ್ಯ ಈಗ 4.36ಲಕ್ಷ ಮಂದಿ ಕೊರೊನಾದಿಂದ ಬಳಲುತ್ತಿದ್ದು 1.33 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಇಟಲಿಯಲ್ಲಿ 969 ಮಂದಿ ಮೃತಪಟ್ಟರೆ, ಸ್ಪೇನ್‍ನಲ್ಲಿ 773 ಮಂದಿ ಮೃತರಾಗಿದ್ದಾರೆ.

    ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಅಮೆರಿಕ(1.04 ಲಕ್ಷ), ಇಟಲಿ(86,498), ಚೀನಾ(81,285), ಸ್ಪೇನ್ (65,718), ಜರ್ಮನಿ(50,871) ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿದೆ.

  • ಜಗತ್ತಿನಾದ್ಯಂತ 4.69 ಲಕ್ಷಕ್ಕೇರಿದ ಕೊರೊನಾ ಸೋಂಕು- 21 ಸಾವಿರ ಮಂದಿ ಬಲಿ

    ಜಗತ್ತಿನಾದ್ಯಂತ 4.69 ಲಕ್ಷಕ್ಕೇರಿದ ಕೊರೊನಾ ಸೋಂಕು- 21 ಸಾವಿರ ಮಂದಿ ಬಲಿ

    – ಇಟಲಿ, ಸ್ಪೇನ್, ಫ್ರಾನ್ಸ್, ಅಮೆರಿಕದಲ್ಲಿ ಸಾವಿನ ಟೆನ್ಷನ್

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಜಗತ್ತಿನಾದ್ಯಂತ 196 ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4.69 ಲಕ್ಷಕ್ಕೇರಿದೆ.

    ಕೊರೊನಾ ಭಾರತದಲ್ಲಿ ಈಗಾಗಲೇ 11 ಜನರನ್ನು ಬಲಿ ಪಡೆದಿದ್ದು, ವಿಶ್ವಾದ್ಯಂತ 21,185 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇಟಲಿಯಲ್ಲಿ ಬುಧವಾರ ಒಂದೇ ದಿನ 683 ಮಂದಿ ಬಲಿಯಾಗಿದ್ದಾರೆ. ಅಂದ್ರೆ ಇಟಲಿಯಲ್ಲಿ ಇಲ್ಲಿವರೆಗೆ 7,503 ಕೊರೊನಾ ಸೋಂಕಿತರು ಮಂದಿ ಸಾವನ್ನಪ್ಪಿದ್ದಾರೆ.

    ಸ್ಪೇನ್ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿದೆ. ಹೌದು, ಒಂದೇ ದಿನ ಸ್ಪೇನ್‍ನಲ್ಲಿ 656 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲದೆ ಫ್ರಾನ್ಸ್‍ನಲ್ಲಿ 231 ಜನರು ಹಾಗೂ ಅಮೆರಿಕದಲ್ಲಿ 155 ಮಂದಿ ಕೊರೊನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಏಪ್ರಿಲ್ 14ರವರೆಗೂ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ ಕೆಲವರು ಲಾಕ್‍ಡೌನ್ ಉಲ್ಲಂಘಿಸಿ ಉದ್ಧಟತನ ಮೆರೆಯುತ್ತಿದ್ದಾರೆ. ಹೀಗಾಗಿ ಕೊರೊನಾ ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸುತ್ತಿದೆ. ಭಾರತ ಲಾಕ್‍ಡೌನ್ ಮೊದಲ ದಿನವೇ 70 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 606ಕ್ಕೆ ಏರಿದೆ.

  • ನಮ್ಮ ಇಂಡಿಯಾ ಇನ್ನೊಂದು ಇಟಲಿಯಾಗೋದು ಬೇಡ – ಇಟಲಿಯಿಂದ ಕನ್ನಡತಿ ಮನವಿ

    ನಮ್ಮ ಇಂಡಿಯಾ ಇನ್ನೊಂದು ಇಟಲಿಯಾಗೋದು ಬೇಡ – ಇಟಲಿಯಿಂದ ಕನ್ನಡತಿ ಮನವಿ

    – ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗೋದು ಬೇಡ
    – ನಾನು ಭಾರತಕ್ಕೆ ಬರಲ್ಲ, ಬಂದ್ರೆ ಸೋಂಕು ಆಗಬಹುದು

    ರೋಮ್: ಲಾಕ್‍ಡೌನ್ ಪಾಲನೆ ಮಾಡಿ, ಇಲ್ಲದಿದ್ದರೆ ಅನಾಹುತ ಆಗಬಹುದು. ಇಟಲಿಯಲ್ಲೂ ಕೊರೊನಾ ಸೋಂಕು ಪತ್ತೆ ಆದ ಕೂಡಲೇ ಲಾಕ್‍ಡೌನ್ ಹೇರಿದರು. ಆದರೂ ಲಾಕ್‍ಡೌನ್ ಮೀರಿ ಜನ ಊರೆಲ್ಲ ಸುತ್ತಾಡಿದರು. ಈಗ ಲಾಕ್‍ಡೌನ್ ಮೀರಿದ್ದಕ್ಕೆ ಇಟಲಿಯಲ್ಲಿ ಸಾವು ಹೆಚ್ಚಾಯಿತು ಎಂದು ಇಟಲಿಯಿಂದ ಕನ್ನಡತಿ ಭಾರತೀಯರಿಗೆ ಸಂದೇಶ ರವಾನಿಸಿದ್ದಾರೆ.

    ಮೈಸೂರು ಮೂಲದ ಅನುಶ್ರೀ ಇಟಲಿಯಲ್ಲಿ ನೆಲೆಸಿದ್ದು, ಅಲ್ಲಿಂದಲೇ ವಿಡಿಯೋ ಮಾಡಿ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಈಗ ಇಟಲಿಯಿಂದ ಮಾತನಾಡುತ್ತಿದ್ದೇನೆ. ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಸಾವಿರಾರು ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅದರಲ್ಲಿ ಇಟಲಿ ಕೂಡ ಟಾಪ್ ಲಿಸ್ಟಲಿದೆ. ಇಟಲಿಯಲ್ಲೂ 6 ಸಾವಿರಕ್ಕೂ ಅಧಿಕ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

    ಮೊದಲಿಗೆ ಇಟಲಿಯ ಮಿಲನ್‍ನಲ್ಲಿ ಕೊರೊನಾ ವೈರಸ್ ಕಂಡು ಬಂದಿತ್ತು. ಕೊರೊನಾ ವೈರಸ್ ಪತ್ತೆಯಾದ ಒಂದೇ ವಾರಕ್ಕೆ ಇಟಲಿ ಸರ್ಕಾರ ಲಾಕ್‍ಡೌನ್ ಮಾಡಿತ್ತು. ಆದರೆ ಜನರು ಸರ್ಕಾರ ಮಾಡಿದ ನಿಯಮವನ್ನು ಪಾಲಿಸದೇ ಮನೆಯಿಂದ ಹೊರಗಡೆ ಓಡಾಡಲು ಶುರು ಮಾಡಿದರು. ಬೇರೆ ಬೇರೆ ಊರಿಗಳಿಗೆ ಓಡಾಡಲು ಶುರು ಮಾಡಿದರು. ಇದರಿಂದ ಇಡೀ ಇಟಲಿ ದೇಶಾದ್ಯಂತ ವೈರಸ್ ವ್ಯಾಪಿಸಿದ್ದು, ಈಗ ಇಟಲಿ ಸಂಪೂರ್ಣ ಲಾಕ್‍ಡೌನ್ ಆಗಿದೆ.

    ನಾನು ಫೆ.23ರಂದು ಕೊನೆಯ ಬಾರಿಗೆ ಆಫಿಸ್‍ಗೆ ಹೋಗಿದ್ದೆ. ಸುಮಾರು ಒಂದು ತಿಂಗಳಾಯಿತು. ನಾನು ಮನೆಯಲ್ಲಿಯೇ ಇದ್ದೇನೆ, ಹೊರಗಡೆ ಹೋಗಿಲ್ಲ. ಆದರೆ ನಮ್ಮ ಜೀವನ ಕಷ್ಟವಾಗಿಲ್ಲ. ಎರಡು ವಾರಕ್ಕೊಮ್ಮೆ ಮನೆಯಿಂದ ಒಬ್ಬರು ಮಾತ್ರ ಹೊರಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಮಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದರು.

    ಇಟಲಿಯಲ್ಲಿ ಎರಡನೇ ವಾರ ಕೊರೊನಾ ವೈರಸ್ ಇದ್ದಾಗ 245 ಪ್ರಕರಣ ಇತ್ತು. ಈಗ ಇದೇ ಪರಿಸ್ಥಿತಿಯಲ್ಲಿ ನಮ್ಮ ಭಾರತ ಕೂಡ ಇದೆ. ಭಾರತಕ್ಕೆ ಕೊರೊನಾ ವೈರಸ್ ಬಂದು 2 ವಾರ ಆಗಿದೆ. ಇಲ್ಲಿಯವರೆಗೂ 511 ಪಾಸಿಟಿವ್ ಪ್ರಕರಣ ಆಗಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಮನೆಯಲ್ಲಿರಿ. ಹೊರಗೆ ಬರಬೇಡಿ, ಎಲ್ಲೂ ಹೋಗಬೇಡಿ. ನಮ್ಮ ಭಾರತ ಇನ್ನೊಂದು ಇಟಲಿ ಆಗುವುದು ಬೇಡ. ಇಟಲಿ ಸಣ್ಣ ದೇಶ ಸುಮಾರು 6.5 ಕೋಟಿ ಜನಸಂಖ್ಯೆ ಇದೆ. ನಮ್ಮ ಕರ್ನಾಟಕದಷ್ಟೂ ಇಲ್ಲ. ನಮ್ಮ ಇಂಡಿಯಾದಲ್ಲಿ 1.3 ಬಿಲಿಯನ್ ಜನಸಂಖ್ಯೆ ಇದೆ. ದಯವಿಟ್ಟು ಯೋಚನೆ ಮಾಡಿ ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗುವುದು ಬೇಡ. ಸುಮ್ಮನೆ ಬೇರೆ ಕಡೆಗೆ ಪ್ರಯಾಣ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

    ನಾನು ಭಾರತಕ್ಕೆ ಬರಬಹುದು. ಯಾರೂ ಕೂಡ ಬರಬೇಡ ಎಂದು ಹೇಳಿಲ್ಲ. ನಾನು ಒಂದು ತಿಂಗಳಿಂದ ಮನೆಯಲ್ಲಿದ್ದೀನಿ. ಯಾವುದೇ ಕೊರೊನಾ ಲಕ್ಷಣ ನನಗಿಲ್ಲ. ನಾನು ಆರಾಮಾಗಿ ಪ್ರಯಾಣ ಮಾಡಬಹುದು. ಆದರೆ ಪ್ರಯಾಣ ಮಾಡುವಾಗ ಕೊರೊನಾ ವೈರಸ್ ಸೋಂಕು ಆಗಬಹುದು. ನಾನು ಬಂದು 14 ದಿನ ಕ್ವಾರಂಟೈನ್‌ನಲ್ಲಿ ಇರುವಾಗ ಇನ್ನೂ ನಾಲ್ವರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ನಾನು ಭಾರತಕ್ಕೆ ಬರುತ್ತಿಲ್ಲ. ಭಾರತದಲ್ಲಿ ಇನ್ನೂ ಹೆಚ್ಚಾಗಿ ಕೊರೊನಾ ವೈರಸ್ ಆಗುವುದು ಬೇಡ. ಯಾರೂ ಪ್ರಯಾಣ ಮಾಡಬೇಡಿ. ಮನೆಯಲ್ಲಿರಿ ಎಂದು ಅನುಶ್ರೀ ಮನವಿ ಮಾಡಿಕೊಂಡಿದ್ದಾರೆ.