Tag: ಇಜ್ಞಾನ

  • ಭೋಪಾಲ್‌ ವಿಜ್ಞಾನ ಹಬ್ಬದಲ್ಲಿ ಕನ್ನಡದ ಕಂಪು

    ಭೋಪಾಲ್‌ ವಿಜ್ಞಾನ ಹಬ್ಬದಲ್ಲಿ ಕನ್ನಡದ ಕಂಪು

    ಭೋಪಾಲ್: “‌ಸಾಮಾನ್ಯರಿಗೆ ವಿಜ್ಞಾನವನ್ನು ಯಶಸ್ವಿಯಾಗಿ ತಲುಪಿಸಬೇಕೆಂದರೆ ಅದು ಅವರ ತಾಯ್ನುಡಿಯಲ್ಲೇ (Mother Tongue) ಇರಬೇಕು,” ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಮಹಾನಿರ್ದೇಶಕಿ ಡಾ. ಎನ್. ಕಲೈ ಸೆಲ್ವಿ ಹೇಳಿದರು. ಇಂಡಿಯಾ ಇಂಟರ್ ನ್ಯಾಶನಲ್ ಸೈನ್ಸ್ ಫೆಸ್ಟಿವಲ್ (India International Science Festival ) ಅಂಗವಾಗಿ ಆಯೋಜಿಸಲಾಗಿದ್ದ ‘ವಿಜ್ಞಾನಿಕ’ ವಿಜ್ಞಾನ ಸಾಹಿತ್ಯ ಹಬ್ಬವನ್ನು (Science Literature Festival) ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

    ಈ ಕಾರ್ಯಕ್ರಮದ ಮೊದಲ ದಿನದಲ್ಲಿ ಕನ್ನಡ (Kannada) ವಿಜ್ಞಾನ ಸಾಹಿತ್ಯದ ಹಲವು ಆಯಾಮಗಳಿಗೆ ವೇದಿಕೆ ದೊರೆತದ್ದು ವಿಶೇಷ. ‘ಕುತೂಹಲಿ’ ಕಾರ್ಯಕ್ರಮದ ಅಂಗವಾಗಿ ವಿಜ್ಞಾನ್ ಪ್ರಸಾರ್ ಪ್ರಕಟಿಸಿರುವ ‘ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು’ (ಸಂ: ಟಿ. ಜಿ. ಶ್ರೀನಿಧಿ) ಹಾಗೂ ‘ಜಾಣಪ್ರಶ್ನೆ’ (ಲೇ: ಕೊಳ್ಳೇಗಾಲ ಶರ್ಮ) ಕೃತಿಗಳನ್ನು ಡಾ. ಕಲೈ ಸೆಲ್ವಿ ಲೋಕಾರ್ಪಣೆಗೊಳಿಸಿದರು. ವಿಜ್ಞಾನ ಭಾರತಿ ಅಧ್ಯಕ್ಷ ಡಾ. ಶೇಖರ್ ಮಾಂಡೆ, ಸೈನ್ಸ್ ರಿಪೋರ್ಟರ್ ಸಂಪಾದಕ ಹಸನ್ ಜಾವೇದ್ ಖಾನ್ ಉಪಸ್ಥಿತರಿದ್ದರು.

    ‘ನಮ್ಮ ಭಾಷೆ, ನಮ್ಮ ವಿಜ್ಞಾನ’ ಕುರಿತು ಆಯೋಜಿಸಲಾಗಿದ್ದ ಸಂವಾದದಲ್ಲಿ ಲೇಖಕ ಕೊಳ್ಳೇಗಾಲ ಶರ್ಮ ಭಾಗವಹಿಸಿ ಮಾತನಾಡಿದರು. “ವಿಜ್ಞಾನ ಸಂವಹನವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಪಾಡ್ಕಾಸ್ಟ್‌ನಂತಹ ಹೊಸ ವಿಧಾನಗಳನ್ನು ಬಳಸುವುದು ಅಗತ್ಯ. ಆದರೆ ಚಾಟ್ ಜಿಪಿಟಿಯಂತಹ ಆವಿಷ್ಕಾರಗಳಲ್ಲಿ ನಾವು ಭಾರತೀಯ ಭಾಷೆಗಳನ್ನೂ ಬಳಸುವಂತಾಗಲು ಹೆಚ್ಚುಹೆಚ್ಚು ಪಠ್ಯವೂ ಸೃಷ್ಟಿಯಾಗಬೇಕು,” ಎಂದು ಅವರು ಹೇಳಿದರು. ವಿಜ್ಞಾನ್ ಪ್ರಸಾರ್ ಮುಖ್ಯ ವಿಜ್ಞಾನಿ ಡಾ. ಟಿ. ವಿ. ವೆಂಕಟೇಶ್ವರನ್ ಸಂವಾದವನ್ನು ನಡೆಸಿಕೊಟ್ಟರು. ಇದನ್ನೂ ಓದಿ: 120 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್? – 6 ತಂಡಗಳ ಟೂರ್ನಿಗೆ ಐಸಿಸಿ ಪ್ರಸ್ತಾಪ

    ವಿಜ್ಞಾನ ಸಂವಹನದ ಹೊಸ ಸವಾಲು-ಸಾಧ್ಯತೆಗಳನ್ನು ಕುರಿತ ಗೋಷ್ಠಿಯಲ್ಲಿ ಇಜ್ಞಾನ (Ejnana) ಜಾಲಪತ್ರಿಕೆಯ ಟಿ. ಜಿ. ಶ್ರೀನಿಧಿ (TG Shrinidhi) ಹಾಗೂ ಜಿ. ಎಸ್. ಅಭಿಷೇಕ್ (GS Abhishek) ಭಾಗವಹಿಸಿದ್ದರು. ಭಾರತೀಯ ಭಾಷೆಗಳಲ್ಲಿ ವಿಜ್ಞಾನದ ಮಾಹಿತಿಯ ಕೊರತೆಯನ್ನು ಕಡಿಮೆ ಮಾಡಲು ತಂತ್ರಾಂಶ ಸಾಧನಗಳನ್ನು ಬಳಸುವ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಇಜ್ಞಾನ ಸಂಸ್ಥೆ ನಡೆಸಿದ ಪ್ರಯೋಗವನ್ನು ಪರಿಚಯಿಸಿದರು. ಇಜ್ಞಾನದ ಈ ಯೋಜನೆಯ ಅಂಗವಾಗಿ ಆವರ್ತ ಕೋಷ್ಟಕದ ಮೂಲವಸ್ತುಗಳನ್ನು ಕುರಿತ ಪುಸ್ತಕವೊಂದನ್ನು ಸರಳ ತಂತ್ರಾಂಶ ಸಾಧನಗಳ ಸಹಾಯದಿಂದಲೇ ರೂಪಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರ ಉದ್ಘಾಟನೆ – ‘ಬೆರಳ ತುದಿಯ ಬೆರಗು’ ಪುಸ್ತಕ ಲೋಕಾರ್ಪಣೆ

    ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರ ಉದ್ಘಾಟನೆ – ‘ಬೆರಳ ತುದಿಯ ಬೆರಗು’ ಪುಸ್ತಕ ಲೋಕಾರ್ಪಣೆ

    ಬೆಂಗಳೂರು: ಅಂತಾರಾಷ್ಟ್ರೀಯ ತಾಯ್ನುಡಿ ದಿನ- 2021ರ ಸಂದರ್ಭಕ್ಕೆ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ಶನಿವಾರದಂದು ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗಾಗಿ ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರವನ್ನು ನಡೆಯಲಿದೆ. ತಂತ್ರಜ್ಞಾನ ಜಗತ್ತನ್ನು ಕುರಿತು ಲೇಖಕ ಟಿ. ಜಿ. ಶ್ರೀನಿಧಿ ಬರೆದಿರುವ ‘ಬೆರಳ ತುದಿಯ ಬೆರಗು’ ಕೃತಿ ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ.

    ಸುರಾನಾ ಕಾಲೇಜಿನ ಕನ್ನಡ ವಿಭಾಗವು ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಕುರಿತ ಕಾರ್ಯಾಗಾರಗಳನ್ನು ಹಲವು ವರ್ಷಗಳಿಂದ ಆಯೋಜಿಸುತ್ತಿದ್ದು, ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದೆ. ಸಂಸ್ಥೆಯ ಟಿ. ಜಿ. ಶ್ರೀನಿಧಿ ಹಾಗೂ ಅಭಿಷೇಕ್ ಜಿ. ಎಸ್. ಅವರು ನಡೆಸಿಕೊಡಲಿರುವ ಈ ಕಾರ್ಯಾಗಾರವು ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳು, ಕನ್ನಡ ತಂತ್ರಾಂಶಗಳು, ಕನ್ನಡದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅವಕಾಶಗಳು ಸೇರಿದಂತೆ ಹಲವು ವಿಷಯಗಳ ಸ್ಥೂಲ ಪರಿಚಯ ಮಾಡಿಕೊಡಲಿದೆ.

    ಅಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುರಾನಾ ವಿದ್ಯಾಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟೀ ಡಾ. ಅರ್ಚನಾ ಸುರಾನಾ, ಪ್ರಾಂಶುಪಾಲರಾದ ಡಾ. ಭವಾನಿ ಎಂ. ಆರ್., ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವತ್ಸಲಾ ಮೋಹನ್, ಇಜ್ಞಾನ ಟ್ರಸ್ಟ್‌ನ ಟಿ. ಜಿ. ಶ್ರೀನಿಧಿ ಉಪಸ್ಥಿತರಿರಲಿದ್ದಾರೆ. ಲೋಕಾರ್ಪಣೆಯಾಗುತ್ತಿರುವ ‘ಬೆರಳ ತುದಿಯ ಬೆರಗು’ ಕೃತಿಯನ್ನು ವಿಕಾಸ ಪ್ರಕಾಶನ ಪ್ರಕಟಿಸಿದೆ.

  • ಹೊಸ ರೂಪದಲ್ಲಿ ಇಜ್ಞಾನ.ಕಾಂ

    ಹೊಸ ರೂಪದಲ್ಲಿ ಇಜ್ಞಾನ.ಕಾಂ

    –  ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ನೀಡುವ ಜಾಲತಾಣ  ಅನಾವರಣ
    – ಇಜ್ಞಾನ ಟ್ರಸ್ಟ್ ನಿರ್ವಹಿಸುತ್ತಿರುವ ಲಾಭಾಪೇಕ್ಷೆಯಿಲ್ಲದ ಜಾಲತಾಣ ಈಗ ಇನ್ನಷ್ಟು ವೈವಿಧ್ಯಮಯ

    ಮೈಸೂರು: ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿಯ ಪ್ರಕಟಣೆಗೆ ಹೆಸರುವಾಸಿಯಾಗಿರುವ  ejnana.com  ಜಾಲತಾಣದ ಹೊಸ ರೂಪ  ಲೋಕಾರ್ಪಣೆಯಾಗಿದೆ.

    ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ನಡೆಯುತ್ತಿರುವ ವಿಜ್ಞಾನ ಸಂವಹನ ಸಮಾವೇಶದ ಉದ್ಘಾಟನಾ ಸಮಾರಂಭದ ನಂತರ ಇಜ್ಞಾನ ಜಾಲತಾಣದ ಹೊಸ ಆವೃತ್ತಿಯನ್ನು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ ನಿರ್ದೇಶಕರಾದ ಡಾ. ಕೆ ಎಸ್ ಎಂ ಎಸ್ ರಾಘವರಾವ್, ಹಿರಿಯ ಪ್ರಧಾನ ವಿಜ್ಞಾನಿ ಎಎಸ್ ಕೆವಿಎಸ್ ಶರ್ಮ, ವಿಜ್ಞಾನ ಪ್ರಸಾರ್ ಪ್ರಮುಖ ವಿಜ್ಞಾನಿ ಡಾ. ಟಿ ವಿ ವೆಂಕಟೇಶ್ವರನ್   ಲೋಕಾರ್ಪಣೆಗೊಳಿಸಿದರು.

    2007ರಲ್ಲಿ ಪ್ರಾರಂಭವಾದ ಇಜ್ಞಾನ ಜಾಲತಾಣವು ವೈವಿಧ್ಯಮಯ ಮಾಹಿತಿಯ ನಿರಂತರ ಪ್ರಕಟಣೆಯಿಂದಾಗಿ ಕನ್ನಡದ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಉದ್ದೇಶದಿಂದ ಜಾಲತಾಣವನ್ನು ಇದೀಗ ಉನ್ನತೀಕರಿಸಲಾಗಿದ್ದು, ಹೊಸ ವಿನ್ಯಾಸದ ಜೊತೆಗೆ ಅನೇಕ ಹೊಸ ವಿಭಾಗಗಳನ್ನೂ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಸೆ.20, 21 ರಂದು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ

    ಹೊಸ ಸ್ವರೂಪದ ಜಾಲತಾಣದಲ್ಲಿ ಬೆಂಗಳೂರು ಮೂಲದ ಕ್ವಿನ್‍ಟೈಪ್ ಟೆಕ್ನಾಲಜೀಸ್ ಸಂಸ್ಥೆ ರೂಪಿಸಿರುವ ಡಿಜಿಟಲ್ ಪಬ್ಲಿಶಿಂಗ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಅದು ಇಜ್ಞಾನದ ಮಾಹಿತಿ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲಿದೆ. ಈ ತಂತ್ರಜ್ಞಾನವನ್ನು ಇಜ್ಞಾನ ಜಾಲತಾಣಕ್ಕೆ ಯಾವುದೇ ಶುಲ್ಕವಿಲ್ಲದೆ ಒದಗಿಸುವ ಮೂಲಕ ಕ್ವಿನ್‍ಟೈಪ್ ಸಂಸ್ಥೆ ಕನ್ನಡದಲ್ಲಿ ವಿಜ್ಞಾನ ಸಂವಹನವನ್ನು ಬಲಪಡಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.

    ಇಜ್ಞಾನ ಜಾಲತಾಣದ ಕುರಿತು:
    ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಇಜ್ಞಾನ ಜಾಲತಾಣವನ್ನು ನಿರ್ವಹಿಸುತ್ತಿದ್ದು, ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಜನರಿಗೆ ಸರಳವಾಗಿ ತಲುಪಿಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿದೆ. ತಂತ್ರಜ್ಞಾನ ಬರಹಗಾರ ಟಿ. ಜಿ. ಶ್ರೀನಿಧಿ ಈ ತಾಣದ ಸ್ಥಾಪಕ ಸಂಪಾದಕರಾಗಿದ್ದಾರೆ. 2017ರ ಇಂಡಿಯನ್ ಬ್ಲಾಗರ್ ಅವಾರ್ಡ್ಸ್‌ನಲ್ಲಿ ಇಜ್ಞಾನ ಜಾಲತಾಣಕ್ಕೆ ಅತ್ಯುತ್ತಮ ಕನ್ನಡ ಬ್ಲಾಗ್ ಎಂಬ ಗೌರವ ದೊರೆತಿದೆ.

  • ನಾವು ಅಪ್‍ಡೇಟ್ ಆಗಬೇಕು, ಇಲ್ಲದಿದ್ದರೆ ಹಿಂದೆ ಬೀಳುತ್ತೇವೆ: ತೇಜಸ್ವಿನಿ ಅನಂತ್‍ಕುಮಾರ್

    ನಾವು ಅಪ್‍ಡೇಟ್ ಆಗಬೇಕು, ಇಲ್ಲದಿದ್ದರೆ ಹಿಂದೆ ಬೀಳುತ್ತೇವೆ: ತೇಜಸ್ವಿನಿ ಅನಂತ್‍ಕುಮಾರ್

    ಬೆಂಗಳೂರು: ವಿಜ್ಞಾನ ಕ್ಷೇತ್ರ ಇಂದು ಬಹಳ ವೇಗದಲ್ಲಿ ಬೆಳೆಯುತ್ತಿದೆ. ಹೀಗಾಗಿ ನಾವು ಅಪ್‍ಡೇಟ್ ಆಗುತ್ತಲೇ ಇರಬೇಕು. ಇಲ್ಲದಿದ್ದರೆ ಹಿಂದೆ ಬೀಳಬೇಕಾಗುತ್ತದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಟಿ. ಜಿ. ಶ್ರೀನಿಧಿಯವರ ‘ಟೆಕ್ ಲೋಕದ ಹತ್ತು ಹೊಸ ಮುಖಗಳು’ ಮತ್ತು ರಂಗಸ್ವಾಮಿ ಮೂಕನಹಳ್ಳಿಯವರ ‘ವಿತ್ತಜಗತ್ತು: ತಿಳಿಯಬೇಕಾದ ವಿಷಯ ಹಲವು ಹತ್ತು’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

    ನಾನು ಎಂಜಿನಿಯರಿಗ್ ವಿದ್ಯಾರ್ಥಿನಿ. 1996ರಲ್ಲಿ ಪೇಜರ್ ಬಂದಾಗ ಆರಂಭದಲ್ಲಿ ಅದು ಏನು ಎನ್ನುವುದೇ ಗೊತ್ತಿರಲಿಲ್ಲ. ನಂತರ ಮೊಬೈಲ್ ಬಂತು. ಈಗ ಎಷ್ಟು ಮುಂದುವರಿದಿದೆ ಎಂದರೆ ಜೋಧ್‍ಪುರದಲ್ಲಿರುವ ಅಧಮ್ಯ ಚೇತನದಲ್ಲಿ ಹೇಗೆ ಕೆಲಸ ನಡೆಯುತ್ತಿದೆ ಎನ್ನುವುದು ಮೊಬೈಲಿನಲ್ಲೇ ತಿಳಿಯುತ್ತೇವೆ. ಆಹಾರ ಹೇಗೆ ತಯಾರಾಗುತ್ತದೆ. ಸರಿಯಾದ ಸ್ಥಳಕ್ಕೆ ಡ್ರೈವರ್ ಆಹಾರ ತಲುಪಿಸಿದ್ದಾನೋ ಇಲ್ಲವೋ ಎನ್ನುವುದು ಜಿಪಿಎಸ್ ಮೂಲಕ ಗೊತ್ತಾಗುತ್ತದೆ. ಇದಕ್ಕಾಗಿ ಮೊಬೈಲ್ ತಂತ್ರಜ್ಞಾನಕ್ಕೆ ದೊಡ್ಡ ಕ್ರೆಡಿಟ್ ನೀಡಬೇಕು ಎಂದರು.

    ಹಿಂದೆ ವಿದೇಶಕ್ಕೆ ಹೋದಾಗ ಭಾರತೀಯರನ್ನು ಏನೋ ಒಂದು ಥರ ನೋಡುತ್ತಿದ್ದರು. ಆದರೆ ಈಗ ಭಾರತ ಬದಲಾಗಿದೆ. ನೀವು ಭಾರತದವರೇ ಎಂದು ಕೇಳುವ ಮಟ್ಟಕ್ಕೆ ತಲುಪಿದ್ದೇವೆ. ಸರ್ಕಾರದ ಸಾಧನೆ ಸೇರಿದಂತೆ ಜಿಡಿಪಿಗೆ ಬೆಂಗಳೂರಿನ ಕೊಡುಗೆಯೂ ಇದೆ ಎಂದು ತೇಜಸ್ವಿನಿ ಅನಂತ್‍ಕುಮಾರ್ ತಿಳಿಸಿದರು.

    ನಮ್ಮ ಜೀವನದಲ್ಲಿ ಪ್ಲಾಸ್ಟಿಕ್ ಹೇಗೆಲ್ಲ ಬಳಕೆಯಾಗುತ್ತದೆ ಎನ್ನುವುದನ್ನು ವಿವರಿಸಿದ ಅವರು, ಬಹಳಷ್ಟು ಜನ ಹಾಲಿನ ಪ್ಯಾಕೆಟ್ ಎರಡು ಬದಿಯನ್ನು ಕತ್ತರಿಸುತ್ತಾರೆ. ಈ ರೀತಿ ಕತ್ತರಿಸದೇ ಒಂದು ಬದಿ ಮಾತ್ರ ಕತ್ತರಿಸಬೇಕು. ಈ ರೀತಿ ಕತ್ತರಿಸಿದಾಗ ಸಣ್ಣ ತುಂಡು ತ್ಯಾಜ್ಯವಾಗುವುದಿಲ್ಲ. ಈ ಮೂಲಕ ಪರಿಸರ ರಕ್ಷಣೆಯಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

    ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ವಸುಧೇಂದ್ರ ಮಾತನಾಡಿ, ಆಂಗ್ಲ ಮಾಧ್ಯಮದಲ್ಲಿ ಸಾಕಷ್ಟು ಪುಸ್ತಕಗಳು ಬರುತ್ತವೆ. ಆದರೆ ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನದ ಬಗ್ಗೆ ಬರೆಯುವವರು ಕಡಿಮೆ. ಆದರಲ್ಲೂ ಐಟಿ ಒಳಗಡೆ ಕನ್ನಡ ಬರುವುದೇ ವಿಶೇಷ. ಹೀಗಿರುವಾಗ ಶ್ರೀನಿಧಿ ಅವರು ಸರಳವಾಗಿ ಕನ್ನಡದಲ್ಲಿ ಮಾಹಿತಿಯನ್ನು ತಿಳಿಸುತ್ತಿರುವುದು ಶ್ಲಾಘನೀಯ ಎಂದರು.

    ಪುಸ್ತಕಗಳು ಪ್ರಕಟಗೊಂಡಾಗ ಒಂದು ಸಮಾಜ ಸುಶಿಕ್ಷಿತ ಸಮಾಜ ಎಂದು ಗುರುತಿಸಿಕೊಳ್ಳುತ್ತದೆ. ಅಲ್ಲಾವುದ್ದೀನ್ ಖಿಲ್ಜಿ ದಾಳಿಯಾದ ಸುಮಾರು 50 ವರ್ಷಗಳ ಕಾಲ ಕನ್ನಡದಲ್ಲಿ ಒಂದೇ ಒಂದು ಕೃತಿ ಪ್ರಕಟಗೊಂಡಿರಲಿಲ್ಲ. ನಂತರ ಪುಸ್ತಕ ಪ್ರಕಟಗೊಂಡಿದ್ದು ವಿಜಯನಗರ ಅರಸರ ಕಾಲದಲ್ಲಿ ಎನ್ನುವ ವಿಚಾರವನ್ನು ಹಂಚಿಕೊಂಡರು.

    ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎಐ) ಮುಂದೊಂದು ದಿನ ಆಳುವ ದಿನ ಬರಬಹುದು. ಎಐ ಸರಿಯಾಗಿ ಕೆಲಸ ಮಾಡಬೇಕಾದರೆ ಮನುಷ್ಯನ ಮೆದುಳು ಬಹಳ ಮುಖ್ಯಪಾತ್ರ ವಹಿಸುತ್ತದೆ. ಎಲ್ಲಕ್ಕಿಂತಲೂ ದೊಡ್ಡ ಕಂಪ್ಯೂಟರ್ ಎಂದರೆ ಅದು ಮನುಷ್ಯನ ಮೆದುಳು ಎಂದು ಅಭಿಪ್ರಾಯಪಟ್ಟರು.

    ಜೀವನದಲ್ಲಿ ಹಣ ಬಹಳ ಮುಖ್ಯ ಪಾತ್ರವವಹಿಸುತ್ತದೆ. ಆಸಕ್ತಿ ಇರುವವರು ಹೇಗೂ ಓದುತ್ತಾರೆ. ವಿತ್ತದ ಬಗ್ಗೆ ಆಸಕ್ತಿ ಇಲ್ಲ ಎಂದು ನಾವು ಈ ಕ್ಷೇತ್ರವನ್ನು ಕಡೆಗಣಿಸಬಾರದು. ಸರಸ್ವತಿಯನ್ನು ಪೂಜೆ ಮಾಡುವಾಗ ಲಕ್ಷ್ಮೀಯನ್ನು ಅಲಕ್ಷ್ಯ ಮಾಡುವಂತಿಲ್ಲ ಎಂದು ಹೇಳಿದರು.

    ಪುಸ್ತಕ ಬಿಡುಗಡೆ ಸಮಾರಂಭವನ್ನು ಇಜ್ಞಾನ ಫೇಸ್‍ಬುಕ್ ಪೇಜ್ ಲೈವ್ ಮಾಡಿದ್ದು, ಇಲ್ಲಿ ನೀಡಲಾಗಿದೆ. ಗಣ್ಯರ ಸಂಪೂರ್ಣ ಮಾತುಗಳನ್ನು ಕೇಳಬಹುದು.

  • ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನ.11ರಂದು ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮ

    ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನ.11ರಂದು ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮ

    ಬೆಂಗಳೂರು: ಕನ್ನಡದ ಮೊದಲ ವಿಜ್ಞಾನ ಪತ್ರಿಕೆ ‘ವಿಜ್ಞಾನ’ ಪ್ರಕಟವಾಗಿ ಇದೀಗ ನೂರು ವರ್ಷ ಸಂದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರವು ಇಜ್ಞಾನ ಟ್ರಸ್ಟ್ ಹಾಗೂ ಉದಯಭಾನು ಕಲಾಸಂಘದ ಸಹಯೋಗದೊಡನೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.

    ಈ ಕಾರ್ಯಕ್ರಮ ಬರುವ ನವೆಂಬರ್ 11ರಂದು ಬೆಳಿಗ್ಗೆ 10 ಗಂಟೆಯಿಂದ ಜಯನಗರದ ನ್ಯಾಶನಲ್ ಕಾಲೇಜು ಆವರಣದಲ್ಲಿರುವ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಕನ್ನಡದ ಮುದ್ರಣ ಮಾಧ್ಯಮ, ಟೀವಿ, ರೇಡಿಯೋ ಹಾಗೂ ಜಾಲತಾಣಗಳಲ್ಲಿ ವಿಜ್ಞಾನ ಸಂವಹನದ ಸ್ಥಿತಿ-ಗತಿಗಳನ್ನು ಕುರಿತು ಆಯಾ ಕ್ಷೇತ್ರದ ಪರಿಣತರೊಡನೆ ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಇರಲಿದೆ.

    ದಿವಂಗತ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು 1918ರಲ್ಲಿ ಪ್ರಾರಂಭಿಸಿದ್ದ ‘ವಿಜ್ಞಾನ’ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲೊಂದು ಮಹತ್ವದ ಮೈಲಿಗಲ್ಲು. ವಿಜ್ಞಾನ ಬರಹಗಳನ್ನು ಸಾಮಾನ್ಯ ಓದುಗರಿಗೂ ಪರಿಚಯಿಸಿದ ಈ ಅಪರೂಪದ ಪ್ರಯತ್ನದ ಕುರಿತು ಇದೇ ಸಂದರ್ಭದಲ್ಲಿ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಉಪನ್ಯಾಸ ನೀಡಲಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡ ನೆಲ-ಜಲ : ನಾಳಿನ ಅರಿವು ಕುರಿತು ಭಾನುವಾರ ವಿಚಾರ ಸಂಕಿರಣ

    ಕನ್ನಡ ನೆಲ-ಜಲ : ನಾಳಿನ ಅರಿವು ಕುರಿತು ಭಾನುವಾರ ವಿಚಾರ ಸಂಕಿರಣ

    ಬೆಂಗಳೂರು: ಯಾವ ವಿಷಯವನ್ನೇ ಆದರೂ ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ನಮಗೆ ದೊರಕುವ ಸಶಕ್ತ ಮಾಧ್ಯಮವೆಂದರೆ ಅದು ನಮ್ಮ ಮಾತೃಭಾಷೆ. ಸಾಹಿತ್ಯದಿಂದ ವಿಜ್ಞಾನದವರೆಗೆ ಎಲ್ಲ ಬಗೆಯ ತಿಳಿವಳಿಕೆಯೂ ಮಾತೃಭಾಷೆಯಲ್ಲೇ ದೊರೆಯುವಂತಾದರೆ ಅದು ನಿಜಕ್ಕೂ ಅತ್ಯಮೂಲ್ಯವಾದ ಕೊಡುಗೆಯಾಗಬಲ್ಲದು.

    ಬೇರೆಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡದಲ್ಲೇ ಒದಗಿಸುವ ತನ್ನ ಪ್ರಯತ್ನಗಳ ಮುಂದುವರಿಕೆಯಾಗಿ ಇಜ್ಞಾನ ಟ್ರಸ್ಟ್ ಜುಲೈ 29ರಂದು ‘ಕನ್ನಡ ನೆಲ-ಜಲ : ನಾಳಿನ ಅರಿವು’ ವಿಚಾರ ಸಂಕಿರಣವನ್ನು ಏರ್ಪಡಿಸಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯತಜ್ಞರು ಇಂದಿನ ಮಹತ್ವದ ವಿಷಯಗಳಾದ ಪರಿಸರ, ಇಂಧನ ಹಾಗೂ ಆಹಾರ ಕುರಿತು ಕನ್ನಡದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

    ವಿವಿಧ ವಿಷಯಗಳನ್ನು ಕುರಿತ ಶೈಕ್ಷಣಿಕ ಪುಸ್ತಕಗಳನ್ನು ಶಾಲಾ ಗ್ರಂಥಾಲಯಗಳಿಗೆ ನೀಡುವ ಇಜ್ಞಾನ ಟ್ರಸ್ಟ್ ಯೋಜನೆ ‘ಕಲಿಕೆಗೆ ಕೊಡುಗೆ’ಯ ಎರಡನೇ ವರ್ಷದ ಚಟುವಟಿಕೆಗಳನ್ನೂ ಈ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು. ಕಳೆದ ಬಾರಿ ಈ ಯೋಜನೆಯಡಿ ಕನ್ನಡ ಕಲಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು 150ಕ್ಕೂ ಹೆಚ್ಚು ಶಾಲೆಗಳಿಗೆ ನೀಡಿಲಾಗಿತ್ತು. ಅದೇ ರೀತಿ ಈ ಬಾರಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ವಿಜ್ಞಾನ – ತಂತ್ರಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ವಿವಿಧ ಕೃತಿಗಳನ್ನು ಒಂದು ನೂರಕ್ಕೂ ಹೆಚ್ಚು ಮಾಧ್ಯಮಿಕ ಹಾಗೂ ಪ್ರೌಢಶಾಲಾ ಗ್ರಂಥಾಲಯಗಳಿಗೆ ಕೊಡುಗೆಯಾಗಿ ನೀಡಲಾಗುವುದು.

    ಈ ಕಾರ್ಯಕ್ರಮವನ್ನು ನವಕರ್ನಾಟಕ ಪ್ರಕಾಶನ, ಭಾರತೀ ಪ್ರಕಾಶನ, ಹೆಮ್ಮರ ಪ್ರಕಾಶನ ಹಾಗೂ ಸಹಬಾಳ್ವೆ ಸಂಸ್ಥೆಗಳ ಸಹಯೋಗದಲ್ಲಿ ಇಜ್ಞಾನ ಟ್ರಸ್ಟ್ ಆಯೋಜಿಸಿದೆ. ನಿವೃತ್ತ ಪ್ರಾಂಶುಪಾಲ, ವಾಣಿಜ್ಯ ಶಾಸ್ತ್ರ ಲೇಖಕರಾಗಿರುವ ಡಾ. ಹೆಚ್. ಆರ್. ಅಪ್ಪಣ್ಣಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಪದ್ಮಾ ಶೇಖರ್ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.

    ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಗಣ್ಯರು
    ಜಲ ಮತ್ತು ಅರಣ್ಯ –  ಎಚ್. ಎನ್. ಎ. ಪ್ರಸಾದ್, ಪರಿಸರ ಸಂರಕ್ಷಣಾವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರು
    ಇಂಧನ – ವೈ. ಬಿ. ರಾಮಕೃಷ್ಣ, ಅಧ್ಯಕ್ಷರು, ರಾಷ್ಟ್ರೀಯ ಜೈವಿಕ ಇಂಧನ ಕೋಶ, ನವದೆಹಲಿ
    ಆಹಾರ – ಡಾ. ನಾ. ಸೋಮೇಶ್ವರ, ವೈದ್ಯರು ಹಾಗೂ ಖ್ಯಾತ ಲೇಖಕರು

    ಇಜ್ಞಾನ ಟ್ರಸ್ಟ್ ಕುರಿತು
    ಇಜ್ಞಾನ ಟ್ರಸ್ಟ್ ಒಂದು ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾಗಿದ್ದು ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಸಂಸ್ಥೆಯನ್ನು ಆಗಸ್ಟ್ 3, 2016ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ನೋಂದಾಯಿಸಲಾಯಿತು. ಸಾಮಾನ್ಯ ಜನರ ನಡುವೆ ವಿಜ್ಞಾನ-ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವುದು ಹಾಗೂ ಕನ್ನಡ ಭಾಷೆ – ಸಂಸ್ಕೃತಿಯ ಬೆಳವಣಿಗೆಗಾಗಿ ಶ್ರಮಿಸುವುದು ಇಜ್ಞಾನ ಟ್ರಸ್ಟ್ ನ ಧ್ಯೇಯ.

    ಕನ್ನಡದ ಪ್ರಮುಖ ವಿಜ್ಞಾನ-ತಂತ್ರಜ್ಞಾನ ಜಾಲತಾಣವಾದ ಇಜ್ಞಾನ ಡಾಟ್ ಕಾಮ್ ಅನ್ನು ಟಿ. ಜಿ. ಶ್ರೀನಿಧಿಯವರ ಸಂಪಾದಕತ್ವದಲ್ಲಿ ಇಜ್ಞಾನ ಟ್ರಸ್ಟ್ ನಿರ್ವಹಿಸುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಡನೆ ಕಳೆದ ವರ್ಷ (2017) ‘ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ’ವನ್ನು – ಪುಸ್ತಕ ಹಾಗೂ ಆನ್‍ಲೈನ್ ಎರಡೂ ರೂಪಗಳಲ್ಲಿ – ಪ್ರಕಟಿಸಿದ್ದು ಇಜ್ಞಾನ ಟ್ರಸ್ಟ್ ನ ಮಹತ್ವದ ಸಾಧನೆಗಳಲ್ಲೊಂದು. ವಿದ್ಯಾರ್ಥಿಗಳಿಗೆ ‘ಮಾಹಿತಿ ತಂತ್ರಜ್ಞಾನ ಹಾಗೂ ಕನ್ನಡ’ ಕುರಿತ ಕಾರ್ಯಾಗಾರಗಳನ್ನು ಆಯೋಜಿಸುವಲ್ಲೂ ಇಜ್ಞಾನ ಟ್ರಸ್ಟ್ ಸಕ್ರಿಯವಾಗಿದೆ. ಸುರಾನಾ ಕಾಲೇಜಿನ ಸಹಯೋಗದಲ್ಲಿ ಇದೇ ವಿಷಯ ಕುರಿತ ‘ನುಡಿಯ ನಾಳೆಗಳು’ ಎಂಬ ಪುಸ್ತಕವನ್ನೂ ಹೊರತರಲಾಗಿದೆ.

     

  • ಭಾನುವಾರ ಬೆಂಗಳೂರಿನಲ್ಲಿ ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ

    ಭಾನುವಾರ ಬೆಂಗಳೂರಿನಲ್ಲಿ ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ

    ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಮತ್ತು ಕನ್ನಡ ಭಾಷೆಯಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಕೆಲಸಗಳು ನಡೆದಿದ್ದು, ಇಂತಹ ಕೆಲಸಗಳನ್ನು ಎಲ್ಲರಿಗೂ ಪರಿಚಯಿಸುವ ‘ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ’ ಕಾರ್ಯಕ್ರಮ 2017ರ ಮಾರ್ಚ್ 5ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕಣಜ’ ಜ್ಞಾನಕೋಶ ಹಾಗೂ ಇಜ್ಞಾನ ಟ್ರಸ್ಟ್ ಜಂಟಿಯಾಗಿ ಆಯೋಜಿಸಿವೆ.

    ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಹಲವು ಚಟುವಟಿಕೆಗಳು ನಡೆಯುತ್ತಿವೆಯಾದರೂ ಅವುಗಳ ಪರಿಚಯ ಎಲ್ಲರಿಗೂ ಇರುವುದಿಲ್ಲ. ಈ ಕೊರತೆಯನ್ನು ಕೊಂಚಮಟ್ಟಿಗಾದರೂ ನಿವಾರಿಸುವ ಉದ್ದೇಶದಿಂದ ಈ ಪ್ರಾತಿನಿಧಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

    ಕನ್ನಡದ ಮಟ್ಟಿಗೆ ವಿಶಿಷ್ಟ ಎನ್ನಬಹುದಾದ ಈ ಪ್ರದರ್ಶನವನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಉದ್ಘಾಟಿಸಲಾಗುವುದು. ಮಧ್ಯಾಹ್ನ 2:30ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಕನ್ನಡದ ವಿವಿಧ ತಂತ್ರಾಂಶಗಳು, ಮೊಬೈಲ್ ಆಪ್‍ಗಳು, ಜಾಲತಾಣಗಳು ಹಾಗೂ ತಂತ್ರಜ್ಞ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

    ಈ ಪ್ರದರ್ಶನವನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರಲಿದ್ದು ಅವರು ಯಾವುದೇ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಪ್ರದರ್ಶನದ ಅವಧಿಯಲ್ಲೇ ಕನ್ನಡ ಮತ್ತು ತಂತ್ರಜ್ಞಾನ ಕುರಿತ ಭಾಷಣ-ಸಂವಾದ ಕಾರ್ಯಕ್ರಮಗಳೂ ನಡೆಯಲಿವೆ.

    ಆಯೋಜಕರ ಕುರಿತು:
    * ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿರುವ ‘ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶ ಪ್ರಪಂಚದ ಎಲ್ಲ ಪ್ರಕಾರಗಳ ಮಾಹಿತಿಯನ್ನೂ ಕನ್ನಡ ಭಾಷೆಯಲ್ಲಿ ಮುಕ್ತವಾಗಿ ಒದಗಿಸುವ ಉದ್ದೇಶ ಹೊಂದಿದೆ. ಪುಸ್ತಕ, ಪತ್ರಿಕೆ, ಲೇಖನಗಳು, ಅಂಕಣ ಬರಹ, ನಿಘಂಟು, ಚಿತ್ರಗಳು – ಹೀಗೆ ವಿವಿಧ ರೂಪಗಳ ಕನ್ನಡ ಮಾಹಿತಿಯನ್ನು ಈ ತಾಣ ಕನ್ನಡದ ಓದುಗರಿಗೆ ಒದಗಿಸುತ್ತಿದೆ.

    * ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ‘ಇಜ್ಞಾನ ಡಾಟ್ ಕಾಮ್’ ಜಾಲತಾಣವನ್ನು ನಿರ್ವಹಿಸುತ್ತಿದೆ. ಪುಸ್ತಕ, ಲೇಖನ, ಅಂಕಣಬರಹಗಳ ಮೂಲಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಮಾಹಿತಿಯನ್ನು 2007ರಿಂದ ಕನ್ನಡದ ಓದುಗರಿಗೆ ನೀಡುತ್ತ ಬಂದಿರುವ ಹೆಗ್ಗಳಿಕೆ ಈ ತಾಣದ್ದು. ಜಾಲತಾಣದ ಜೊತೆಗೆ ಮೊಬೈಲ್ ಆಪ್‍ಗಳ ಮೂಲಕವೂ ಈ ಮಾಹಿತಿ ಓದುಗರನ್ನು ತಲುಪುತ್ತಿದೆ.