Tag: ಇಎಂಐ

  • ಬೆಂಗಳೂರು| ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲೇಟು

    ಬೆಂಗಳೂರು| ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲೇಟು

    ಬೆಂಗಳೂರು: ಲೋನ್ ರಿಕವರಿಗೆ (Loan Recovery) ಹೋದ ಬ್ಯಾಂಕ್ ಸಿಬ್ಬಂದಿಗೆ (Bank Staff) ಕಲ್ಲಿನಿಂದ ತಲೆಗೆ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ಚಂದನ್ ಕಲ್ಲೇಟು ತಿಂದ ಬ್ಯಾಂಕ್ ಸಿಬ್ಬಂದಿ. ರಮೇಶ್ ಎಂಬಾತ ಕಳೆದ ಎರಡು ತಿಂಗಳಿನಿಂದ ಇಎಂಐ ಕಟ್ಟಿರಲಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಕೊನೆಗೆ ಫೋನ್ ರಿಸಿವ್ ಮಾಡಿದ ರಮೇಶ್ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಬರುವಂತೆ ಸಿಬ್ಬಂದಿಗೆ ಹೇಳಿದ್ದ. ಬ್ಯಾಂಕ್ ಸಿಬ್ಬಂದಿ ಸ್ಥಳಕ್ಕೆ ಹೋದ ವೇಳೆ ಲೋನ್ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರಮೇಶ್ ಏಕಾಏಕಿ ಅಲ್ಲೇ ಇದ್ದ ಕಲ್ಲಿನಿಂದ ಬ್ಯಾಂಕ್ ಸಿಬ್ಬಂದಿ ಚಂದನ್ ಮೇಲೆ ಕಲ್ಲೂ ತೂರಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಸಾವು

    ಘಟನೆಯಿಂದ ಬ್ಯಾಂಕ್ ಸಿಬ್ಬಂದಿ ಚಂದನ್ ತಲೆಗೆ ಗಂಭೀರವಾದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ (Annapoorneshwari Nagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

  • ಲೋನ್ ಕೊಡದೇ 10 ತಿಂಗಳು 4.20 ಲಕ್ಷ EMI ಕಟ್ಟಿಸಿಕೊಂಡ ಕಂಪನಿ – ಫೈನಾನ್ಸ್ ಮುಂದೆ ದಂಪತಿ ಪ್ರತಿಭಟನೆ

    ಲೋನ್ ಕೊಡದೇ 10 ತಿಂಗಳು 4.20 ಲಕ್ಷ EMI ಕಟ್ಟಿಸಿಕೊಂಡ ಕಂಪನಿ – ಫೈನಾನ್ಸ್ ಮುಂದೆ ದಂಪತಿ ಪ್ರತಿಭಟನೆ

    ಹಾವೇರಿ: ಹೌಸಿಂಗ್ ಲೋನ್ ಕೊಡುವುದು ಲೇಟಾಗಿದ್ದಕ್ಕೆ ಫೈನಾನ್ಸ್ ಮುಂದೆ ದಂಪತಿ ಪ್ರತಿಭಟನೆ ಮಾಡಿದ ಘಟನೆ ಹಾವೇರಿ ನಗರದಲ್ಲಿರುವ ಹಿಂದೂಜಾ ಫೈನಾನ್ಸ್ ಮುಂದೆ ನಡೆದಿದೆ.

    ಬಾಗಿಲು ಮುಚ್ಚಲು ಬಿಡದೆ ಒಳಗೆ ಕುಳಿತು ಹಿಂದೂಜಾ ಫೈನಾನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿರ್ಮಲಾ ಶರಣಯ್ಯ ಮಹಂತಿಮಠ ಮಹಿಳೆಯಿಂದ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಫೈನಾನ್ಸ್ ವಿರುದ್ಧ ದೂರು ನೀಡಲಾಗಿದೆ.

    ಲೋನ್ ಕೊಡುವುದಾಗಿ ನಂಬಿಸಿ ಲೋನ್ ಕೊಡದೆ, 10 ತಿಂಗಳು ಇಎಂಐ ಕಟ್ಟಿಸಿಕೊಂಡಿದ್ದಾರೆ. ಇದುವರೆಗೆ 4.20 ಲಕ್ಷ ಹಣ ಇಎಂಐ ಕಟ್ಟಿದ್ದೇವೆ. ಆದರೂ, ಲೋನ್ ಕೊಟ್ಟಿಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಹಾವೇರಿ ಶಿವಾಜಿನಗರದ ಶ್ರೀಪಾದ ರೇವಣಕರ್‌ಗೆ ಸೇರಿದ ಮನೆಯನ್ನು 40 ಲಕ್ಷಕ್ಕೆ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದ ಪತ್ರ ನೀಡಿ ಸಾಲಕ್ಕೆ ಅರ್ಜಿ ಹಾಕಿದ್ದರು. ದಾಖಲೆ ಪರಿಶೀಲನೆ ಮಾಡಿ 37.43 ಲಕ್ಷ ಸಾಲ ಹೌಸ್ ಲೋನ್ ಮಂಜೂರು ಮಾಡಿ ಚೆಕ್ ಸಹ ಫೈನಾನ್ಸ್ ನೀಡಿತ್ತು. ಸಮಯಕ್ಕೆ ಸರಿಯಾಗಿ ಬ್ಯಾಂಕ್‌ಗೆ ಹೋಗಿ ಹಣ ಪಡೆಯದೇ ಇದ್ದಿದ್ದರಿಂದ, ಅವಧಿ ಮುಗಿದ ನಂತರ ಬ್ಯಾಂಕ್ ಗೆ ಹಣ ಪಡೆಯಲು ಹೋದಾಗ ರೀಪ್ರೇಸ್ ಮಾಡಿಕೊಂಡು ಬರಲು ಕೆನರಾ ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ. ಆದರೆ, ಫೈನಾನ್ಸ್ ಸಿಬ್ಬಂದಿ ಹೊಸ ಚೆಕ್ ಕೊಡಲು ಲೇಟ್ ಮಾಡಿದ್ದಕ್ಕೆ ಫೈನಾನ್ಸ್ ಮುಂದೆ ಪ್ರತಿಭಟನೆ ಮಾಡಿದ್ದಾರೆ, ಹಾವೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಎಸ್‌ಬಿಐ MCLR ಏರಿಕೆ – ದುಬಾರಿಯಾಗಲಿದೆ EMI- ಎಷ್ಟಿತ್ತು? ಎಷ್ಟು ಏರಿಕೆ?

    ಎಸ್‌ಬಿಐ MCLR ಏರಿಕೆ – ದುಬಾರಿಯಾಗಲಿದೆ EMI- ಎಷ್ಟಿತ್ತು? ಎಷ್ಟು ಏರಿಕೆ?

    ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ತನ್ನ ಮಾರ್ಜಿನಲ್ ಕಾಸ್ಟ್-ಆಧಾರಿತ ಸಾಲದ ದರವನ್ನು (MCLR) ಹೆಚ್ಚಳ ಮಾಡಿದೆ. ಇದರಿಂದಾಗಿ ಬ್ಯಾಂಕ್‌ನ ಸಾಲದ ಇಎಂಐ (EMI) ಏರಿಕೆಯಾಗಲಿದೆ.

    ಆಯ್ದು ಅವಧಿಗೆ ಅನುಗುಣವಾಗಿ 5-10 ಬೇಸಿಸ್‌ ಪಾಯಿಂಟ್ಸ್‌ ಹೆಚ್ಚಳ ಮಾಡಿದೆ. ಇದರಿಂದಾಗಿ ಗೃಹ ಸಾಲ, ವಾಹನ ಸಾಲ, ಗ್ರಾಹಕರ ಸಾಲ ಏರಿಕೆಯಾಗಲಿದೆ.

     

    ಎಸ್‌ಬಿಐ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ. ಆರ್‌ಬಿಐ (RBI) ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ರೆಪೋ ದರವನ್ನು ಏರಿಸದೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿತ್ತು.

    ಈಗಾಗಲೇ ಸಾಲ ಪಡೆದಿರುವ ಗ್ರಾಹಕರು ತಮ್ಮ ಮುಂದಿನ ಕಂತುಗಳನ್ನು ಹೆಚ್ಚಿನ ದರದಲ್ಲಿ ಪಾವತಿಸಬೇಕಾಗುತ್ತದೆ.

    ಹಿಂದೆ ಎಷ್ಟಿತ್ತು? ಎಷ್ಟು ಏರಿಕೆಯಾಗಲಿದೆ?

  • ಇಎಂಐ ಕಟ್ಟು ಎಂದಿದ್ದಕ್ಕೆ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಳ ಮೇಲೆ ಬಿಸಿ ಎಣ್ಣೆ ಎರಚಿದ

    ಇಎಂಐ ಕಟ್ಟು ಎಂದಿದ್ದಕ್ಕೆ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಳ ಮೇಲೆ ಬಿಸಿ ಎಣ್ಣೆ ಎರಚಿದ

    ಜೈಪುರ: ಇಎಂಐ (EMI) ಕಟ್ಟು ಎಂದು ಹೇಳಿದ ಫೈನಾನ್ಸ್ ಕಂಪನಿಯ ಇಬ್ಬರು ಉದ್ಯೋಗಿಗಳ ಮೇಲೆ ವ್ಯಕ್ತಿಯೊಬ್ಬ ಬಿಸಿ ಎಣ್ಣೆಯನ್ನು (Hot Oil) ಎರಚಿ ಪರಾರಿಯಾಗಿರುವ ಘಟನೆ ರಾಜಸ್ಥಾನದ (Rajasthan) ಜುಂಜುನು ಎಂಬಲ್ಲಿ ನಡೆದಿದೆ. ದಾಳಿಗೊಳಗಾದ ಇಬ್ಬರು ಉದ್ಯೋಗಿಗಳಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ವರದಿಗಳ ಪ್ರಕಾರ ಜುಂಜುನುವಿನ ರಾಝಿ ಸತಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಶಾಖೆಯ ಬಳಿ ಈ ಘಟನೆ ನಡೆದಿದೆ. ಆರೋಪಿ ವ್ಯಕ್ತಿ ಸುರೇಂದ್ರ ಸ್ವಾಮಿ ಫೈನಾನ್ಸ್ ಕಂಪನಿಯಲ್ಲಿ ವೈಯಕ್ತಿಕ ಸಾಲ (Loan) ಪಡೆದಿದ್ದು, ಇಎಂಐ ವಸೂಲಿಗಾಗಿ ಬಂದಿದ್ದ ಇಬ್ಬರು ನೌಕರರು ಕುಲದೀಪ್ ಹಾಗೂ ನವೀನ್ ಮೇಲೆ ಬಿಸಿ ಎಣ್ಣೆ ಎರಚಿದ್ದಾನೆ.

    ಆರೋಪಿಯು ವಾರ್ಡ್ ನಂ.44ರ ಖೈತಾನ್ ಕಾ ಮೊಹಲ್ಲಾದ ನಿವಾಸಿಯಾಗಿದ್ದು, ಕುಲದೀಪ್ ಮತ್ತು ನವೀನ್ ಇಬ್ಬರೂ ಇಎಂಐ ಕೇಳಲು ಸ್ವಾಮಿ ಮನೆಗೆ ಬಂದಿದ್ದರು. ಆದರೆ ಸ್ವಾಮಿ ಅವರನ್ನು ರಾಣಿ ಸತಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಬಳಿ ಭೇಟಿಯಾಗುವಂತೆ ಕರೆದಿದ್ದಾನೆ. ಇದನ್ನೂ ಓದಿ: ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ

    ಸ್ವಾಮಿ ಅವರನ್ನು ಭೇಟಿಯಾದ ಬಳಿಕ ಅವರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಈ ವೇಳೆ ಸಿಟ್ಟಾದ ಸ್ವಾಮಿ ಹತ್ತಿರದ ಅಂಗಡಿಯ ಬಾಣಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಜಗ್‌ನಲ್ಲಿ ತೆಗೆದುಕೊಂಡು ಅವರಿಬ್ಬರ ಮೇಲೆ ಎರಚಿದ್ದಾನೆ. ಬಳಿಕ ಸ್ವಾಮಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ದಾಳಿಯಿಂದಾಗಿ ತೀವ್ರವಾದ ಸುಟ್ಟ ಗಾಯಗಳಾಗಿ ಉದ್ಯೋಗಿಗಳಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಯ ಬಳಿಕ ಆರೋಪಿ ಸುರೇಂದ್ರ ಸ್ವಾಮಿ ತಲೆಮರೆಸಿಕೊಂಡಿದ್ದಾನೆ. ಕುಲದೀಪ್ ಅವರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನವೀನ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊತ್ವಾಲಿ ಪೊಲೀಸರು ಸುರೇಂದ್ರ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಿಂಡಿ ಪ್ಯಾಕೆಟ್‍ನಲ್ಲಿ 500 ರೂ. ನೋಟುಗಳು – ಕಿರಾಣಿ ಅಂಗಡಿಗಳಿಗೆ ಮುಗಿಬಿದ್ದ ಜನ

    Live Tv
    [brid partner=56869869 player=32851 video=960834 autoplay=true]

  • ಬೈಕ್ ಇಎಂಐ ಕಟ್ಟಲು ಹಣವಿಲ್ಲದೇ ಸರಗಳ್ಳತನ – ಆರೋಪಿಗಳು ಅಂದರ್

    ಬೈಕ್ ಇಎಂಐ ಕಟ್ಟಲು ಹಣವಿಲ್ಲದೇ ಸರಗಳ್ಳತನ – ಆರೋಪಿಗಳು ಅಂದರ್

    ತುಮಕೂರು: ಬೈಕ್ ಇಎಂಐ ಕಟ್ಟಲು ಹಣವಿಲ್ಲದೇ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.

    ಬಂಧಿತ ಆರೋಪಿಗಳು ಸೂರ್ಯ ಹಾಗೂ ಸಂದೀಪ್ ಇತ್ತೀಚೆಗೆ ಸ್ಪೋರ್ಟ್ಸ್ ಬೈಕೊಂದನ್ನು ಖರೀದಿಸಿದ್ದರು. ಆದರೆ ಇಎಂಐ ಕಟ್ಟಲು ಹಣವಿಲ್ಲದೇ ಸರಗಳ್ಳತನಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್

    ಸರಗಳ್ಳತನವನ್ನು ಗಮನಿಸಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 45 ಗ್ರಾಂ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಹುಳಿಯದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಪರೇಷನ್ ಗಂಗಾ ಯಶಸ್ಸಿಗೆ ಭಾರತದ ಜಾಗತಿಕ ಪ್ರಭಾವವೇ ಕಾರಣ: ಮೋದಿ

  • ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ – ಕೇಂದ್ರಕ್ಕೆ ಕೊನೆ ಅವಕಾಶ ನೀಡಿದ ಸುಪ್ರೀಂಕೋರ್ಟ್

    ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ – ಕೇಂದ್ರಕ್ಕೆ ಕೊನೆ ಅವಕಾಶ ನೀಡಿದ ಸುಪ್ರೀಂಕೋರ್ಟ್

    ನವದೆಹಲಿ: ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದ್ದು, ಇದು ಕೊನೆಯ ಅವಕಾಶ ಎಂದು ಹೇಳಿದೆ.

    ಇಂದು ವಿಚಾರಣೆ ಮುಂದುವರಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಇನ್ನೂ ಎರಡು ವಾರಗಳಲ್ಲಿ ಏನಾಗುತ್ತದೆ ಎಂದು ಕಾದುನೋಡಲು ನಾವು ಕೇಂದ್ರಕ್ಕೆ ಸಮಯ ನೀಡುತ್ತಿದ್ದೇವೆ. ಕೇಂದ್ರ ಹಾಗೂ ಆರ್‍ ಬಿಐ ಸೂಕ್ತ ಯೋಜನೆಯೊಂದಿಗೆ ಸಮಸ್ಯೆಯನ್ನು ಬಗೆಹರಿಸಲು ಇದೊಂದು ಕೊನೆಯ ಅವಕಾಶವಾಗಿದೆ ಎಂದು ಎಚ್ಚರಿಸಿದೆ.

    ಇಂದು ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈಗಾಗಲೇ ಎರಡರಿಂದ ಮೂರು ಸುತ್ತುಗಳ ಸಭೆಗಳನ್ನು ನಡೆಸಲಾಗಿದೆ. ಸಾಲ ಮರು ಪಾವತಿ ಅಂತಿಮ ದಿನಾಂಕದ ಬಗ್ಗೆ ಗೊಂದಲಗಳು ವ್ಯಕ್ತವಾಗಿದೆ. ಅದನ್ನು ಪರಿಶೀಲಿಸಲಾಗುತ್ತದೆ. ಇದಕ್ಕಾಗಿ ಎರಡು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

    ಮನವಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್, ಮುಂದಿನ ಹಂತಗಳಲ್ಲಿ ವಿಚಾರಣೆ ಮುಂದೂಡುವುದಿಲ್ಲ. ಕೇಂದ್ರ ಮತ್ತು ಆರ್ ಬಿಐ ಸಲಹೆ ಆಧರಿಸಿ ಸೂಕ್ತ ಆದೇಶವನ್ನು ನೀಡಲಿದ್ದೇವೆ ಎಂದು ಪೀಠ ಹೇಳಿದೆ.

    ಲಾಕ್‍ಡೌನ್ ಅವಧಿಯಲ್ಲಿ ಮುಂದೂಡಲ್ಪಟ್ಟ ಇಎಂಐಗಳ ಮೇಲಿನ ಬಡ್ಡಿಯ ಮೇಲಿನ ಬಡ್ಡಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಸಾಲ ಮರುಪಾವತಿಗೆ ಅಗಸ್ಟ್ 31 ಕ್ಕೆ ಆರ್‍ಬಿಐ ನೀಡಿದ್ದ ವಿನಾಯಿತಿ ಮುಕ್ತಾಯವಾಗಿದ್ದು, ಆರ್ಥಿಕ ಸಂಕಷ್ಟದ ನಡುವೆ ಸಾಲ ಮರು ಪಾವತಿ ಬಗ್ಗೆ ಕೋರ್ಟ್ ವಿಚಾರಣೆ ನಡೆಸುತ್ತಿದೆ.

  • ಯಾವೆಲ್ಲ ಸಾಲಕ್ಕೆ ಬ್ಯಾಂಕ್‍ಗಳಿಂದ ವಿನಾಯಿತಿ? ಇಎಂಐ ಮೇಲೆ ಬಡ್ಡಿ ಇರುತ್ತಾ?

    ಯಾವೆಲ್ಲ ಸಾಲಕ್ಕೆ ಬ್ಯಾಂಕ್‍ಗಳಿಂದ ವಿನಾಯಿತಿ? ಇಎಂಐ ಮೇಲೆ ಬಡ್ಡಿ ಇರುತ್ತಾ?

    ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ಮಟ್ಟಿಗೆ ಸಾಲದ ಕಂತು ಪಾವತಿಸುವುದಿಂದ ವಿನಾಯಿತಿ ಘೋಷಿಸಿ ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಅಧಿಕೃತ ಘೋಷಣೆ ಮಾಡಿವೆ.

    ಎಸ್‍ಬಿಐ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಯುಕೋ ಬ್ಯಾಂಕ್ ಸೇರಿ 16 ಬ್ಯಾಂಕ್‍ಗಳು ಮೇ 31ರವರೆಗೆ ಸಾಲಗಳ ಮೇಲಿನ ತಿಂಗಳ ಕಂತು ಪಾವತಿಯಿಂದ ವಿನಾಯಿತಿ ಘೋಷಿಸಿವೆ. ಈ ಮೂಲಕ ಶುಕ್ರವಾರವಷ್ಟೇ ಆರ್‌ಬಿಐ ನೀಡಿದ್ದ ಆದೇಶಗಳನ್ನು ಜಾರಿಗೊಳಿಸಿವೆ.

    ಕೊರೋನಾ ಲಾಕ್‍ಡೌನ್‍ನಿಂದ ಆರ್ಥಿಕ ಹಿಂಜರಿತ ಶುರುವಾಗುವ ಲಕ್ಷಣ ಕಂಡುಬರುತ್ತಿವೆ. ಹೀಗಾಗಿ ಕೆಲ ರಾಜ್ಯಗಳು ಸರ್ಕಾರಿ ನೌಕರರ ವೇತನ ಕಡಿತಗೊಳಿಸಲು ಮುಂದಾಗಿವೆ. ತೆಲಂಗಾಣದಲ್ಲಿ ಸರ್ಕಾರಿ ನೌಕರರು, ಜನಪ್ರತಿನಿಧಿಗಳ, ವೇತನವನ್ನು ಅರ್ಧಕ್ಕರ್ಧ ಕಡಿತ ಮಾಡಿದೆ. ಮಹಾರಾಷ್ಟ್ರದಲ್ಲೂ ಸರ್ಕಾರಿ ನೌಕರರ ಈ ತಿಂಗಳ ವೇತನ ಕಡಿತಕ್ಕೆ ಆದೇಶ ಹೊರಬಿದ್ದಿದೆ.

    ಯಾವೆಲ್ಲ ಸಾಲಗಳ ಪಾವತಿ ಮುಂದೂಡಿಕೆ?
    ಕೃಷಿ ಸಾಲ, ಬೆಳೆ ಸಾಲ, ವಾಹನ ಸಾಲ, ಗೃಹ ಸಾಲ, ವೈಯಕ್ತಿಕ ಸಾಲ, ಚಿಲ್ಲರೆ ಸಾಲ, ಆಭರಣ ಸಾಲ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಾಲ, ಕೆಲ ಬ್ಯಾಂಕ್‍ಗಳ ಕ್ರೆಡಿಟ್ ಕಾರ್ಡ್ ಕಂತಿನ ಪಾವತಿಗೂ ವಿನಾಯಿತಿ ಅನ್ವಯವಾಗುತ್ತದೆ.

    ಸಾಲ ಪಾವತಿ ಮುಂದೂಡಿಕೆ ಹೇಗೆ?
    3 ತಿಂಗಳು ಅಂದರೆ ಮೇ 31ರವರೆಗೆ ಸಾಲದ ಕಂತು ಕಟ್ಟಬೇಕಿಲ್ಲ. ಆದರೆ ಈ ಮೂರು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳ ಕಂತಿನ ಮೇಲೆ ಬಡ್ಡಿ ಅನ್ವಯ ಆಗುತ್ತದೆ. ಮೇ 31ರ ಬಳಿಕ ಕಂತು ಕಟ್ಟಲು ನಿರ್ಧರಿಸಿದ್ರೆ ಆಗ ಮೂರು ತಿಂಗಳ ಕಂತಿನ ಜೊತೆಗೆ ಬಡ್ಡಿಯನ್ನೂ ಒಟ್ಟಿಗೆ ಪಾವತಿಸಬೇಕಾಗುತ್ತದೆ. ಸಾಲ ಪಾವತಿ ವಿಳಂಬ ಕಾರಣಕ್ಕಾಗಿ ದಂಡಗಳನ್ನು ಹಾಕುವುದಿಲ್ಲ. ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ.

  • ಮಾರ್ಚ್‌ನಿಂದ ಮೂರು ತಿಂಗಳು ಇಎಂಐ ರಿಯಾಯಿತಿ

    ಮಾರ್ಚ್‌ನಿಂದ ಮೂರು ತಿಂಗಳು ಇಎಂಐ ರಿಯಾಯಿತಿ

    – ಸಾಲಗಾರರಿಗೆ ಬಿಗ್ ರಿಲೀಫ್ ಕೊಟ್ಟ ಆರ್‌ಬಿಐ

    ಮುಂಬೈ: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದ್ದರಿಂದ ಸಾಮಾನ್ಯ ಜನರ ಜೀವನ ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು 1.70 ಲಕ್ಷ ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಿದ್ದರು. ಈ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದೆ.

    ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಜನರ ಜೀವನ ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ದೇಶದಲ್ಲಿ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ರೆಪೋ ದರದಲ್ಲಿ ಶೇ. 0.75 ಕಡಿತಗೊಳಿಸಲಾಗಿದೆ. ಸಾಲದ ಅವಧಿಯ ಮರುಪಾವತಿಸಲು 3 ತಿಂಗಳ ಇಎಂಐ ಅನ್ನು ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದರು. ಕ್ರೆಡಿಟ್ ಕಾರ್ಡ್ ಹೊರತು ಪಡಿಸಿ ಎಲ್ಲ ಬ್ಯಾಂಕ್, ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲಕ್ಕೆ ಇದು ಅನ್ವಯವಾಗಲಿದೆ.

    ಶಕ್ತಿಕಾಂತ ದಾಸ್ ಘೋಷಣೆಯ 4 ಅಂಶಗಳು:
    ಟರ್ಮ್ ಸಾಲದಿಂದ ವಿನಾಯಿತಿ:
    ಎಲ್ಲಾ ಬ್ಯಾಂಕುಗಳ ನಿಗದಿತ ಅವಧಿಯ ಸಾಲದ ಕಂತು ಪಾವತಿಸುವುದರಿಂದ 3 ತಿಂಗಳ ವಿನಾಯಿತಿ ನೀಡಲಾಗಿದೆ. ಷೇರು ಮಾರುಕಟ್ಟೆಯ ಕುಸಿತದಿಂದ ಬ್ಯಾಂಕ್ ಠೇವಣಿಗಳು ಪರಿಣಾಮ ಬೀರುವುದಿಲ್ಲ, ಗ್ರಾಹಕರ ಹಣ ಸುರಕ್ಷಿತವಾಗಿರುತ್ತದೆ. ಇಎಂಐ ವಿನಾಯಿತಿ ಅಂದರೆ ಮನ್ನಾ ಅಲ್ಲ. ಮೂರು ತಿಂಗಳ ನಂತರ ಬಾಕಿ ಉಳಿಸಿಕೊಂಡ ಹಣವನ್ನು ನಿಗದಿತ ಕಂತುಗಳಲ್ಲಿ ಗ್ರಾಹಕರು ಪಾವತಿಸಬೇಕಾಗುತ್ತದೆ‌.

    ರೆಪೋ ದರ ಕಡಿಮೆ:
    ರೆಪೋ ದರವು ಈಗ ಶೇ.5.15ರಿಂದ ಶೇ.4.4ಕ್ಕೆ ಇಳಿದಿದೆ. ಇದು ಎಲ್ಲಾ ರೀತಿಯ ಸಾಲಗಳನ್ನು ಅಗ್ಗವಾಗಿಸುತ್ತದೆ. ವಿತ್ತೀಯ ನೀತಿ ಸಮಿತಿಯ 6 ಸದಸ್ಯರಲ್ಲಿ 4 ಮಂದಿ ದರ ಕಡಿತದ ಪರವಾಗಿ ಮತ ಚಲಾಯಿಸಿದ್ದಾರೆ. ಕೋವಿಡ್ -19 ಕಾರಣ, ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರಿದೆ. ಕೋವಿಡ್ -19 ರ ಪರಿಣಾಮವು ತಿಳಿಯುವುದಿಲ್ಲ. ಆದಾಗ್ಯೂ ಕಡಿಮೆ ಕಚ್ಚಾ ಬೆಲೆಗಳು ಸ್ವಲ್ಪ ಪರಿಹಾರವನ್ನು ನೀಡುತ್ತದೆ.

    ಸಿಆರ್‌ಆರ್‌ ಕೂಡ ಕಡಿಮೆ:
    ನಗದು ಮೀಸಲು ಅನುಪಾತ (ಸಿಆರ್‌ಆರ್‌) ಶೇ.1ರಿಂದ ಶೇ.3ಕ್ಕೆ ಇಳಿದಿದೆ. ಸಿಆರ್‍ಆರ್ ಕಡಿಮೆಯಾಗುವುದರೊಂದಿಗೆ, ಬ್ಯಾಂಕುಗಳು ಹೆಚ್ಚಿನ ಹಣವನ್ನು ಹೊಂದಿರುತ್ತವೆ. ಆರ್‌ಬಿಐ ಕೈಗೊಂಡ ಕ್ರಮಗಳು ವ್ಯವಸ್ಥೆಯಲ್ಲಿ 3.74 ಲಕ್ಷ ಕೋಟಿ ರೂ. ಸಿಗಲಿದ್ದು, ಎಲ್ಲಾ ಬ್ಯಾಂಕುಗಳು ನಿಗದಿತ ಅವಧಿಯ ಸಾಲದ ಕಂತು ಪಾವತಿಸುವುದರಿಂದ 3 ತಿಂಗಳ ವಿನಾಯಿತಿ ಸಿಗುತ್ತದೆ.

    ಸರ್ಕಾರ ಹಲವಾರು ಕ್ರಮಗಳು:
    ಸರ್ಕಾರದ ಎಲ್ಲಾ ನಿಯಮಗಳು ಮತ್ತು ಸಲಹೆಗಳನ್ನು ಅನುಸರಿಸಿದರೆ ನೀವು ಕೋವಿಡ್-19 ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಕೊರೊನಾ ವೈರಸ್ ಪರಿಣಾಮದಿಂದ ದೇಶದ ಆರ್ಥಿಕತೆಯನ್ನು ರಕ್ಷಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ವ್ಯವಸ್ಥೆಯಲ್ಲಿ ಹಣದ ಕೊರತೆಯಿಲ್ಲ. ಅಗತ್ಯವಿರುವವರಿಗೆ ಹಣವನ್ನು ಒದಗಿಸಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಂಪೂರ್ಣ ಗಮನ ಹರಿಸಬೇಕು ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

    1.70 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಅನ್ನು ಸರ್ಕಾರ ಗುರುವಾರ ಪ್ರಕಟಿಸಿದೆ. ಇದರಲ್ಲಿ ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಪರಿಹಾರ ಘೋಷಿಸಲಾಯಿತು. ಕೊರೊನಾ ವೈರಸ್‍ನಿಂದಾಗಿ ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಇದು ಆರ್ಥಿಕತೆ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತಿದೆ.

    ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.

  • ರೆಪೋ ದರ ಕಡಿತ – ಇಳಿಕೆಯಾಗಲಿದೆ ಇಎಂಐ

    ರೆಪೋ ದರ ಕಡಿತ – ಇಳಿಕೆಯಾಗಲಿದೆ ಇಎಂಐ

    ಮುಂಬೈ: ನಿರೀಕ್ಷೆಯಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ರೆಪೋ ದರವನ್ನು ಕಡಿತಗೊಳಿಸಿದೆ. ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ರೆಪೋ ದರದಲ್ಲಿ ಶೇ.25 ಮೂಲಾಂಕದಷ್ಟು ಕಡಿತಗೊಂಡಿದೆ. ರೆಪೋ ದರ ಕಡಿತಗೊಂಡ ಪರಿಣಾಮ ಬ್ಯಾಂಕಿಗೆ ಪಾವತಿಸುವ ಇಎಂಐ ಇಳಿಕೆಯಾಗಲಿದೆ.

    ಇದರಿಂದ ರೆಪೋ ದರ ಈ ಮೊದಲಿದ್ದ ಶೇ. 6.25 ರಿಂದ ಶೇ.6ಕ್ಕೆ ಇಳಿಕೆಯಾಗಿದ್ದು, ಮನೆ ಹಾಗೂ ಕಾರು ಖರೀದಿ ಮಾಡುವವರಿಗೆ ಸಹಾಯವಾಗಲಿದೆ. ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬಳಿಕ ಹೊಸದಾಗಿ ನೇಮಕಗೊಂಡಿರುವ ಶಕ್ತಿಕಾಂತ್‍ದಾಸ್ ಅವರ ನೇತೃತ್ವದಲ್ಲಿ ಫೆಬ್ರವರಿಯಲ್ಲಿ ನಡೆದ ಮೊದಲ ಎಂಪಿಸಿ ಸಭೆಯಲ್ಲಿ ರೆಪೋ ದರ ಶೇ.25 ಮೂಲಾಂಕ ಕಡಿತಗೊಂಡಿತ್ತು. 17 ತಿಂಗಳ ಬಳಿಕ ರೆಪೋ ದರವನ್ನು ಆರ್‌ಬಿಐ ಕಡಿತಗೊಳಿಸಿತ್ತು.

    ಆರ್‌ಬಿಐನ ಆರು ಸದಸ್ಯರ ಪಾಲಿಸಿ ಸಮಿತಿ ಮುಂದೆ ರೆಪೋ ದರ ಇಳಿಕೆ ಸಂಬಂಧಿಸಿದಂತೆ ಮಂಡನೆಯಾಗಿದ್ದ ಪ್ರಸ್ತಾವನೆಗೆ 4:2 ರಷ್ಟು ಮತ ಬಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರವೀಂದ್ರ ದೋಲಾಕಿಯ, ಪಾಮಿ ದುವಾ, ಮೈಕೆಲ್ ಪಾತ್ರ ಮತ್ತು ಗವರ್ನರ್ ಶಕ್ತಿಕಾಂತ್ ದಾಸ್ ಅವರು ನಿರ್ಧಾರರ ಪರ ಮತ ಹಾಕಿದರೆ, ಡೆಪ್ಯೂಟಿ ಗವರ್ನರ್ ವಿರಾಳ್ ಆಚಾರ್ಯ ಮತ್ತು ಚೇತನ್ ಘಾಟ್ಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಿದರು.

    2019-20ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.8-ಶೇ.7.1 ರಷ್ಟು ಇದ್ದರೆ, ಎರಡನೇ ತ್ರೈಮಾಸಿಕದಲ್ಲಿ ಶೇ.7.3- ಶೇ.7.4 ರಷ್ಟು ಪ್ರಗತಿ ಸಾಧಿಸಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ರೆಪೋ ದರ ಇಳಿಕೆಯಾದ್ದರಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವುದರಿಂದ ಮನೆ ಖರೀದಿ ಮತ್ತು ಸಣ್ಣ ಉದ್ಯಮಿಗಳಿಗೆ ಸಹಾಯವಾಗಲಿದೆ.

    ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.

    ರಿವರ್ಸ್ ರೆಪೋ : ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‌ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವಸ್ರ್ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

  • 2017ರ ಅಗಸ್ಟ್ ಬಳಿಕ ರೆಪೋ ದರ ಇಳಿಕೆ: ಕಡಿಮೆಯಾಗಲಿದೆ ಗೃಹ, ಕಾರು ಸಾಲದ ಹೊರೆ

    2017ರ ಅಗಸ್ಟ್ ಬಳಿಕ ರೆಪೋ ದರ ಇಳಿಕೆ: ಕಡಿಮೆಯಾಗಲಿದೆ ಗೃಹ, ಕಾರು ಸಾಲದ ಹೊರೆ

    ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 17 ತಿಂಗಳ ಬಳಿಕ ರೆಪೋ ದರವನ್ನು ಕಡಿತಗೊಳಿಸಿದೆ. ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ರೆಪೋ ದರದಲ್ಲಿ .25 ಮೂಲಾಂಕದಷ್ಟು ಕಡಿತ ಮಾಡಿದೆ.

    ಇದರಿಂದ ರೆಪೋ ದರ ಈ ಮೊದಲಿದ್ದ ಶೇ. 6.50 ರಿಂದ ಶೇ. 6.25ಕ್ಕೆ ಇಳಿಕೆಯಾಗಿದ್ದು, ಮನೆ ಹಾಗೂ ಕಾರು ಖರೀದಿ ಮಾಡುವವರಿಗೆ ಸಹಾಯವಾಗಲಿದೆ. ಗೃಹ ಸಾಲದ ಇಎಮ್‍ಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಯಿದೆ.

    ಈ ಹಿಂದೆ ನೇಮಕಗೊಂಡಿದ್ದ ರಘುರಾಂ ರಾಜನ್ ಅವರು ರೆಪೋ ದರವನ್ನು ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿರಲಿಲ್ಲ. ಈಗ ಹೊಸದಾಗಿ ನೇಮಕಗೊಂಡಿರುವ ಶಕ್ತಿಕಾಂತ್‍ದಾಸ್ ಅವರ ನೇತೃತ್ವದಲ್ಲಿ ನಡೆದ ಮೊದಲ ಎಂಪಿಸಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

    ಆರ್‌ಬಿಐನ ಆರು ಸದಸ್ಯರ ಪಾಲಿಸಿ ಸಮಿತಿ ಮುಂದೆ ರೆಪೋ ದರ ಇಳಿಕೆ ಸಂಬಂಧಿಸಿದಂತೆ ಮಂಡನೆಯಾಗಿದ್ದ ಪ್ರಸ್ತಾವನೆಗೆ 4:2 ರಷ್ಟು ಮತ ಬಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರವೀಂದ್ರ ದೋಲಾಕಿಯ, ಪಾಮಿ ದುವಾ, ಮೈಕೆಲ್ ಪಾತ್ರ ಮತ್ತು ಗವರ್ನರ್ ಶಕ್ತಿಕಾಂತ್ ದಾಸ್ ಅವರು ನಿರ್ಧಾರರ ಪರ ಮತ ಹಾಕಿದರೆ, ಡೆಪ್ಯೂಟಿ ಗವರ್ನರ್ ವಿರಾಳ್ ಆಚಾರ್ಯ ಮತ್ತು ಚೇತನ್ ಘಾಟ್ಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಿದರು.

    ರೆಪೋ ದರ ಇಳಿಕೆಯ ಬೆನ್ನಲ್ಲೇ ಹಣಕಾಸು ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿ, .25 ಮೂಲಾಂಕ ಇಳಿಕೆ ಮಾಡಿದ್ದರಿಂದ ದೇಶದ ಆರ್ಥಿಕತೆಗೆ ನೆರವಾಗಲಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವುದರಿಂದ ಮನೆ ಖರೀದಿ ಮತ್ತು ಸಣ್ಣ ಉದ್ಯಮಿಗಳಿಗೆ ಸಹಾಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

    ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.

    ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐ ಯಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv