ನವದೆಹಲಿ: ಐಎನ್‍ಎಕ್ಸ್ ಕಂಪನಿಯ ಮಾಲಕಿ, ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಮುಂಬೈ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ನೀಡಿದ ಒಂದು ಹೇಳಿಕೆಯಿಂದ ಮಾಜಿ ಗೃಹ ಸಚಿವ ಚಿದಂಬರಂ ಈಗ ಅರೆಸ್ಟ್ ಆಗಿದ್ದಾರೆ.
ಐಎನ್‍ಎಕ್ಸ್ ಪ್ರಕರಣದ ತನಿಖೆ ಸಂಬಂಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಇದ್ರಾಣಿ ಮುಖರ್ಜಿ 2006 ರಲ್ಲಿ ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಚಿದಂಬರಂ ಅವರನ್ನು ಭೇಟಿಯಾಗಿದ್ದ ವೇಳೆ ನಡೆದ ಮಾತುಕತೆ ವಿಚಾರವನ್ನು ತಿಳಿಸಿದ್ದರು. ಈ ಹೇಳಿಕೆಯನ್ನು ಪ್ರಕರಣದ ಮುಖ್ಯ ಸಾಕ್ಷಿಯನ್ನಾಗಿ ಪರಿಗಣಿಸಿ ಸಿಬಿಐ ಈಗ ಚಿದಂಬರಂ ಅವರನ್ನು ಬಂಧಿಸಿದೆ.
2018ರ ಫೆಬ್ರವರಿ 17ರ ವಿಚಾರಣೆ ಸಮಯದಲ್ಲಿ ದೆಹಲಿಯ ಹಯಾತ್ ಹೋಟೆಲಿನಲ್ಲಿ ಚಿದಂಬರಂ ಪುತ್ರ ಕಾರ್ತಿಯನ್ನು ಭೇಟಿಯಾಗಿದ್ದೆ. ಈ ಸಂದರ್ಭದಲ್ಲಿ ನಮ್ಮ ವ್ಯವಹಾರಕ್ಕಾಗಿ ಕಾರ್ತಿ 1 ದಶಲಕ್ಷ ಡಾಲರ್(7.17 ಕೋಟಿ ರೂ.) ಬೇಡಿಕೆ ಇಟ್ಟಿದ್ದರು ಎನ್ನುವ ಮತ್ತೊಂದು ವಿಚಾರವನ್ನು ಇಂದ್ರಾಣಿ ಮುಖರ್ಜಿ ತಿಳಿಸಿದ್ದರು.

ಸಿಬಿಐ ಆರೋಪ ಏನು?
ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಒಡೆತನದ ಐಎನ್‍ಎಕ್ಸ್ ಮೀಡಿಯಾಗೆ 2007ರ ಮಾರ್ಚ್ ತಿಂಗಳಿನಲ್ಲಿ ಮೂರು ಮಾರಿಷಸ್ ಕಂಪೆನಿಗಳಿಂದ ಸುಮಾರು 4.62 ಕೋಟಿ ರೂಪಾಯಿ ವಿದೇಶಿ ನೇರ ಬಂಡವಾಳ ಹರಿದುಬರಲು ಅಂದಿನ ಸರ್ಕಾರ ಅನುಮತಿ ನೀಡಿತ್ತು. ಸರ್ಕಾರ 4.62 ಕೋಟಿ ರೂ.ಗೆ ಅನುಮತಿ ನೀಡಿದ್ದರೆ 305 ಕೋಟಿ ರೂಪಾಯಿಗಳನ್ನು ಹೂಡಿಕೆಯಾಗಿ ವಿದೇಶದಿಂದ ತರಲಾಯಿತು. ಈ ಸಂದರ್ಭದಲ್ಲಿ ಡೌನ್ ಸ್ಟ್ರೀಮ್ ಇನ್ವೆಸ್ಟ್ ಮೆಂಟ್(ಭಾರತೀಯ ಕಂಪೆನಿ ಮತ್ತೊಂದು ಕಂಪೆನಿಯ ಮೇಲೆ ವಿದೇಶಿ ಹೂಡಿಕೆಯನ್ನು ಮಾಡುವುದು) ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿತ್ತು.
ಇಂದ್ರಾಣಿ ಮುಖರ್ಜಿಯ ಕಂಪನಿಗೆ ಈ ಸಂದರ್ಭದಲ್ಲಿ ಕಾರ್ತಿ ಮಾಲೀಕತ್ವದ ಅಡ್ವಾನ್ಸ್ಡ್ ಸ್ಟ್ರಟಜಿಕ್ ಕನಸ್ಟಲಿಂಗ್ ಪ್ರೈವೆಟ್ ಲಿಮಿಟೆಡ್(ಎಎಸ್‍ಸಿಪಿಎಲ್) ಕಂಪನಿಯಿಂದ ಹೂಡಿಕೆಯಾಗಿತ್ತು. ಕಾರ್ತಿ ಮತ್ತು ಇಂದ್ರಾಣಿ ಮಾತುಕತೆಯ ಫಲವಾಗಿ ಎಎಸ್‍ಸಿಪಿಎಲ್ ಮತ್ತು ಇದರ ಸಹಭಾಗಿತ್ವದಲ್ಲಿರುವ ಕಂಪನಿಗಳು ಸುಮಾರು 7 ಲಕ್ಷ ಡಾಲರ್(ಆಗಿನ ಮೌಲ್ಯ 3.10 ಕೋಟಿ ರೂ.) ಹೂಡಿಕೆಯಾಗಿತ್ತು. ನಂತರ ಈ ಹಣ ಮರುಪಾವತಿಯಾಗಿತ್ತು. ಇದಾದ ನಂತರ ವಿದೇಶಿ ಬಂಡವಾಳ ಉತ್ತೇಜನ ಮಂಡಳಿ(ಎಫ್‍ಐಪಿಬಿ) ಕೆಲ ಬದಲಾವಣೆ ಮಾಡಿ ಇಂದ್ರಾಣಿ ಕಂಪನಿಗೆ ಅನುಮತಿ ನೀಡಿತ್ತು ಎನ್ನುವುದು ಸಿಬಿಐ ಆರೋಪ.

ಸಿಬಿಐ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ನೀಡಿದ ಮಾಹಿತಿ ಪ್ರಕಾರ, ಎಫ್‍ಐಪಿಬಿ 4.62 ಕೋಟಿ ರೂ. ವಿದೇಶಿ ಹೂಡಿಕೆಗೆ ಅನುಮತಿ ನೀಡಿತ್ತು. ಆದರೆ ಚಿದಂಬರಂ ಮೂಲಕ ಕಾರ್ತಿಗೆ ಲಂಚ ನೀಡಿದ ಪರಿಣಾಮ 305 ಕೋಟಿ ರೂ. ವಿದೇಶಿ ಹಣ ಬಂದಿತ್ತು. ಅಷ್ಟೇ ಅಲ್ಲದೇ ಐಎನ್‍ಎಕ್ಸ್ ನ್ಯೂಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಶೇ.26 ರಷ್ಟು ಡೌನ್‍ಸ್ಟ್ರೀಮ್ ಇನ್ವೆಸ್ಟ್ ಮೆಂಟ್ ಮಾಡಲಾಯಿತು ಎಂದು ತಿಳಿಸಿದ್ದರು.
ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಲಂಚವಾಗಿ ಪಡೆದ ಹಣದಲ್ಲಿ ಕಾರ್ತಿ ಚಿದಂಬರಂ ಸ್ಪೇನ್ ದೇಶದಲ್ಲಿ ಟೆನ್ನಿಸ್ ಕ್ಲಬ್, ಇಂಗ್ಲೆಂಡಿನಲ್ಲಿ ಕಾಟೇಜ್, ಭಾರತ ಮತ್ತು ವಿದೇಶಗಳಲ್ಲಿ ಸುಮಾರು 54 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಆಸ್ತಿಗಳನ್ನು ಖರೀದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಬೆಳಕಿಗೆ ಬಂದಿದ್ದು ಹೇಗೆ?
2008 ರಲ್ಲಿ ಕೇಂದ್ರ ಹಣಕಾಸು ಇಲಾಖೆಯ ಹಣಕಾಸು ಗುಪ್ತಚರ ವಿಭಾಗಕ್ಕೆ ಐಎನ್‍ಎಕ್ಸ್ ಕಂಪನಿಯಲ್ಲಿ ಹೂಡಿದ ವಿದೇಶಿ ಹೂಡಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಬಂದಿದೆ. ಈ ಸಂದರ್ಭದಲ್ಲಿ ಮುಂಬೈ ಆದಾಯ ತೆರಿಗೆ ವಿಭಾಗ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ(ಇಡಿ) ವರ್ಗಾಯಿಸಿತ್ತು. 2010ರಲ್ಲಿ ಐಎನ್‍ಎಕ್ಸ್ ಮೀಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಅಡಿ ಪ್ರಕರಣ ದಾಖಲಿಸಿತ್ತು.
ಈ ಪ್ರಕರಣ ತನಿಖೆ ನಡೆಸುತ್ತಿದ್ದಾಗ ಐಎನ್‍ಎಕ್ಸ್ ಮೀಡಿಯಾದ ಕಂಪ್ಯೂಟರ್ ನಲ್ಲಿ ಲೆಕ್ಕ ಪರಿಶೋಧಕ ಭಾಸ್ಕರ್ ರಾಮನ್ ಹೆಸರಿನಲ್ಲಿದ್ದ ದಾಖಲೆಗಳು ಸಿಕ್ಕಿದೆ. ಈ ಭಾಸ್ಕರ್ ರಾಮನ್ ಯಾರು ಎನ್ನುವುದನ್ನು ಪತ್ತೆ ಹಚ್ಚಿದಾಗ ಈ ವ್ಯಕ್ತಿ ಕಾರ್ತಿ ಚಿದಂಬರಂ ಅವರ ಲೆಕ್ಕಪರಿಶೋಧಕ ಎನ್ನುವುದು ಇಡಿಗೆ ತಿಳಿಯಿತು. ಸಿಕ್ಕಿದ ಸಾಫ್ಟ್ ಕಾಪಿ ದಾಖಲೆಯಲ್ಲಿ ಐಎನ್‍ಎಕ್ಸ್ ಕಂಪನಿ ಮತ್ತು ಕಾರ್ತಿ ನಡುವಿನ ವ್ಯವಹಾರದ ಮಾಹಿತಿ, ವಿದೇಶಿ ಬಂಡವಾಳ ಉತ್ತೇಜನ ಮಂಡಳಿ ನೀಡಿದ ಅನುಮತಿ ವಿವರಗಳು ಲಭ್ಯವಾಗಿತ್ತು. ಇಡಿಗೆ ಸಿಕ್ಕಿದ ಈ ದಾಖಲೆಯನ್ನು ಆಧಾರವಾಗಿಟ್ಟುಕೊಂಡು ಸಿಬಿಐ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಕಾರ್ತಿ ವಿರುದ್ಧ 2017ರಲ್ಲಿ ಎಫ್‍ಐಆರ್ ದಾಖಲಿಸಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಕಾರ್ತಿ ಅವರನ್ನು ಕಳೆದ ಫೆಬ್ರವರಿಯಲ್ಲಿ ಬಂಧಿಸಿದ್ದರು. ನಂತರ ಕಾರ್ತಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು.